ಸಂಗೊಳ್ಳಿರಾಯಣ್ಣನನ್ನು ಕುರಿತಿರುವ ದಾಖಲೆಗಳ ಸಮಗ್ರ ಅಧ್ಯಯನ ಈವರೆಗೆ ನಡೆದಿಲ್ಲ. ಅಂದಿನ ಕಂಪನಿ ಸರಕಾರದ ಅಧಿಕಾರಿಗಳು ನಡೆಸಿರುವ ಪತ್ರ ವ್ಯವಹಾರ ಈ ದಿಶೆಯಲ್ಲಿ ಆಧಾರಭೂತವಾದ ದಾಖಲೆ ಎಂದು ಪರಿಗಣಿತವಾಗಿದೆ. ಇದರಂತೆ ಕಿತ್ತೂರಿನ ಬಂಡಾಯವನ್ನು ಕುರಿತು ರಚಿತವಾದ ಜಾನಪದ ಸಾಹಿತ್ಯವನ್ನೂ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಆದರೆ ಈ ಮೂಲಗಳನ್ನು ಸಮಗ್ರವಾಗಿ ಬಳಸಿಕೊಂಡು ಆ ಕಾಲಾವಧಿಯ ಚಾರಿತ್ರಿಕ ವಿವರಗಳನ್ನು ನಿರ್ದಿಷ್ಟಗೊಳಿಸಿ ಹೇಳುವ ಪ್ರಯತ್ನ ಇನ್ನೂ ನಡೆಯಬೇಕಾಗಿದೆ.

ಜಾನಪದವೆಂದರೆ ಬಹುಜನರ ತಿಳುವಳಿಕೆಯಲ್ಲಿ ಜಾನಪದ ಸಾಹಿತ್ಯ ಮಾತ್ರ. ಆದರೆ ಒಟ್ಟು ಜಾನಪದ ಅಧ್ಯಯನದ ಒಂದು ಮುಖ್ಯ ಅಂಗವಾಗಿ ಜಾನಪದ ಸಾಹಿತ್ಯವನ್ನು ಪರಿಗಣಿಸಬೇಕಾಗುತ್ತದೆ. ಇದು ಮೌಖಿಕವಾಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಇದರ ಜೊತೆಗೆ ಜಾನಪದೀಯ ಅಧ್ಯಯನಕ್ಕೆ ಒಳಪಡಬೇಕಾದ ಇನ್ನೂ ಕೆಲವು ಅಂಶಗಳಿವೆ. ಅವುಗಳನ್ನು ಪರಿಶೀಲಿಸಬೇಕಾದದ್ದು ತುಂಬ ಮುಖ್ಯವಾದ ಕಾರ್ಯ. ಉದಾಹರಣೆಗೆ ಜಾನಪದದಲ್ಲಿ ಐತಿಹ್ಯಗಳ ಅಧ್ಯಯನಕ್ಕೆ ವಿಶೇಷ ಮಹತ್ವವಿದೆ. ಪ್ರಸ್ತುತ ರಾಯಣ್ಣನನ್ನು ಕುರಿತ ಇಂಥ ಅಸಂಖ್ಯ ಐತಿಹ್ಯಗಳು ಬೆಳಗಾಂವಿ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಈಗಲೂ ಲಭ್ಯವಿವೆ. ಈ ಐತಿಹ್ಯಗಳನ್ನು ನಾವು ವದಂತಿಗಳೆಂದೂ ಗುರುತಿಸಬಹುದು. ಇಂಥ ಐತಿಹ್ಯ ವದಂತಿಗಳು ಅನೇಕ ವೇಳೆ ಐತಿಹಾಸಿಕ ಸತ್ಯಗಳೇ ಆಗಿರುತ್ತವೆ. ಆದ್ದರಿಂದ ರಾಯಣ್ಣನಿಗೆ ಸಂಬಂಧಪಟ್ಟ ಇಂಥ ಐತಿಹ್ಯ ವದಂತಿಗಳನ್ನು ತುಂಬ ಪ್ರಯೋಜನಕಾರಿಯಾಗಿ ಇತಿಹಾಸ ರಚನೆಯಲ್ಲಿ ಬಳಸಿಕೊಳ್ಳ ಬಹುದು.

ರಾಯಣ್ಣನನ್ನು ಕುರಿತಿರುವ ಐತಿಹ್ಯಗಳನ್ನು ಕೆಲವು ಮುಖ್ಯ ಪ್ರಕಾರಗಳಲ್ಲಿ ವರ್ಗೀಕರಿಸಬಹುದಾಗಿದೆ.

೧) ರಾಯಣ್ಣನನ್ನು ದೇವರೆಂದು ಪೂಜಿಸುತ್ತಿರುವ ಸ್ಥಳಗಳಲ್ಲಿ ಪ್ರಚಲಿತವಿರುವ ಐತಿಹ್ಯಗಳು.

೨) ರಾಯಣ್ಣನು ಪೂಜಿಸುತ್ತಿದ್ದ ಅಥವಾ ಭಕ್ತಿ ಗೌರವದಿಂದ ಸೇವಿಸುತ್ತಿದ್ದ ದೇವರುಗಳು ಮತ್ತು ಅಲ್ಲಿ ಪ್ರಚಲಿತವಿರುವ ಐತಿಹ್ಯಗಳು.

೩) ರಾಯಣ್ಣನು ವೈಯಕ್ತಿಕ ಕಾರ್ಯ ಚಟುವಟಿಕೆಗಳು ಸಂಬಂಧಪಟ್ಟ ಐತಿಹ್ಯಗಳು. ಮೇಲೆ ತಿಳಿಸಿರುವಂತೆ ರಾಯಣ್ಣನನ್ನೇ ದೈವೀಕರಿಸಿ ಪೂಜಿಸುವ ಸ್ಥಾನಗಳು ಈಗಲೂ ನೋಡ ಸಿಗುತ್ತವೆ. ಅವುಗಳಲ್ಲಿ ಖಾನಾಪುರ ತಾಲೂಕಿನ ಆತನ ಸಮಾಧಿ ಸ್ಥಳ ತುಂಬ ಪ್ರಸಿದ್ಧವಾದುದು. ಅದೇ ರೀತಿ ಆತನ ಹುಟ್ಟೂರಾದ ಸಂಗೊಳ್ಳಿಯಲ್ಲೂ ಆತನನ್ನು ಪೂಜಿಸುವ ಒಂದು ಗುಡಿ ಈಗಲೂ ಇದೆ. ಇಲ್ಲಿ ರಾಯಣ್ಣ ಅಂಗಸಾಧನೆಗೆ ನಿತ್ಯ ಬಳಸುತ್ತಿದ್ದನೆಂದು ಹೇಳುವ ಕಟ್ಟಿಗೆಯ ಲೋಡು ಮೊದಲಾದ ಸಲ-ಕರಣೆಗಳನ್ನಿಡಲಾಗಿದೆ. ಅನ್ವೇಷಿಸಿದರೆ ಇನ್ನೂ ಇಂಥ ಬೇರೆ ಸ್ಥಳಗಳು ಪತ್ತೆಯಾಗಬಹುದು.

ಇದರಂತೆ ರಾಯಣ್ಣ ಸ್ವಂತಕ್ಕೆ ತುಂಬ ಭಕ್ತಿಯಿಂದ ಕಾಣುತ್ತಿದ್ದನೆಂದು ಹೇಳಲಾಗುವ ದೇವರುಗಳು ಮತ್ತು ದೇವಾಲಯಗಳು ಸಂಗೊಳ್ಳಿ, ಕಿತ್ತೂರು, ಕಕ್ಕೇರಿ (ಖಾನಾಪುರ ತಾಲೂಕು) ಸಂಶೇರಗಡ (ಖಾನಾಪುರತಾಲೂಕು) ಖನಗಾಂವಿ (ಗೋಕಾಕ ತಾಲೂಕು) ಮೊದಲಾದ ಊರುಗಳಲ್ಲಿ ಇವೆ. ವಿಶೇಷವಾಗಿ ರಾಯಣ್ಣ ಕಕ್ಕೇರಿಯಲ್ಲಿರುವ ಬಿಷ್ಟವ್ವ/ಕರವ್ವನ ನಿತ್ಯದರ್ಶನ ಪಡೆಯುತ್ತಿದ್ದನೆಂದೂ ಅವನ ಮೇಲೆ ಅವಳ ಅನುಗ್ರಹ ವಿಶೇಷವಾಗಿತ್ತೆಂದೂ ಕಕ್ಕೇರಿಯ ಜನ ಈಗಲೂ ನೆನಿಪಿಸಿಕೊಳ್ಳುತ್ತಾರೆ. ಅಂತ್ಯಸಮಯದಲ್ಲಿ ದೇವಿಯ ದರ್ಶನ ಪಡೆಯದೇ ರಾಯಣ್ಣ ಕಾರ್ಯಾಚರಣೆಗೆ ಹೋದದರಿಂದಲೇ ಆತನನ್ನು ಸೆರೆಹಿಡಲಾಯಿತೆಂದು ಅಲ್ಲಿನ ಜನ ನಂಬುತ್ತಾರೆ. ಇದೇ ರೀತಿ ಖನಗಾಂವಿ (ಗೋಕಾಕ) ಯಲ್ಲಿರುವ ಕನ್ನಮ್ಮನೆಂಬ ಗ್ರಾಮದೇವರಿಗೂ ಆತ ನಡೆದುಕೊಳ್ಳುತ್ತಿದ್ದನಂತೆ. ಇಬ್ಬರೂ ದೇವರುಗಳ ಹೆಸರುಗಳು ಒಂದು ಜಾನಪದ ಹಾಡಿನಲ್ಲಿ ಮುಂದಿನಂತೆ ಗೋಚರಿಸುತ್ತದೆ.

ಕಕ್ಕೇರಿ ಬಿಷ್ಬವ್ವ ಖನಗಾಂವಿ ಕನ್ನವ್ವ
ಕರುಣಿ ಇರಲವ್ವ ರಾಯಣ್ಣನ ಮ್ಯಾಲ
|| ನೀಲ ||
ಬಂಗರದ ಗೋಲ-ನೀಲ
||[1]

ರಾಯಣ್ಣನ ಸಂಗಡಿಗರ ಸಂಬಂಧದಲ್ಲಿಯೂ ಹಲವಾರು ಐತಿಹ್ಯಗಳು ದೊರೆಯುತ್ತವೆ. ರಾಯಣ್ಣನ ಜೊತೆಗೆ ಮೊದಲಿನಿಂದಲೂ ಹೋರಾಟದಲ್ಲಿ ಭಾಗವಹಿಸುತ್ತ ಬಂದ ಚನ್ನಬಸವ ಅಥವಾ ಚನ್ನಬಸಪ್ಪ ಎಂಬ ವೀರನ ಬಗೆಗಾಗಲಿ ಗಜವೀರನೆಂಬ ವನ ಬಗೆಗಾಗಲೀ ಇತಿಹಾಸ ಸಂಶೋಧಕರ ಗಮನ ಈವರೆಗೂ ಹರಿದಿಲ್ಲ. ಇವರ ಬಗ್ಗೆ ಇವರ ಊರು ಕೇರಿಗಳ ಬಗ್ಗೆ ವಿವರಗಳನ್ನು ಸಂಗ್ರಹಿಸುವುದು ತುಂಬಾ ಅವಶ್ಯಕ.

ಜಾನಪದ ಹಾಡುಗಳಲ್ಲಿ ಚನ್ನಬಸಪ್ಪ ಮತ್ತು ಜಗವೀರರ ಹೆಸರುಗಳು ಮೇಲಿಂದ ಮೇಲೆ ಕಂಡುಬರುತ್ತವೆ. ಬ್ರಿಟಿಶ ದಾಖಲೆಗಳಲ್ಲಿ ಚನ್ನಬಸಪ್ಪನ ಊರು ‘ಮಂಟಗುತ್ತಿ’ ಎಂದು ಉಲ್ಲೇಖಿಸಲಾಗಿದೆ. ಆದರೆ ಮಂಟಗುತ್ತಿ ಎಂಬ ಊರು ಇಡೀ ಬೆಳಗಾಂವಿ ಜಿಲ್ಲೆಯಲ್ಲಿಯೇ ಇಲ್ಲ.

ಹುಕ್ಕೇರಿ ತಾಲೂಕಿನ ಪಶ್ಚಿಮ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ನಾಲ್ಕಕ್ಕೆ ಹೊಂದಿಕೊಂಡಂತೆ ಮಣಗುತ್ತಿ ಎಂಬ ಊರಿದೆ. ಚನ್ನಬಸಪ್ಪ ಇದೇ ಊರಿನವನಾಗಿರಬೇಕು. ಅದರಂತೆ ಗಜವೀರನೆಂಬವನು ಹಬಸಿ (ನಿಗ್ರೋ) ಜಾತಿಯವನೆಂದೂ, ಗೋಧಳ್ಳಿ (ಖಾನಾಪುರ ತಾಲೂಕ) ಎಂಬ ಹಳ್ಳಿಯವನೆಂದೂ ಜಾನಪದ ಹಾಡುಗಳಲ್ಲಿ ಉಲ್ಲೇಖಗಳಿವೆ. ಇದಲ್ಲದೆ ಗೋಧಳ್ಳಿ ಕೆರೆಯಲ್ಲಿಯೇ ಬ್ರಿಟಿಷರ ಸೈನ್ಯಕ್ಕೂ ಈ ಬಂಡಾಯಗಾರರಿಗೂ ಯುದ್ಧವೊಂದು ಘಟಿಸಿತೆಂದು ಜಾನಪದ ಹಾಡುಗಳಲ್ಲಿ ಹೇಳಲಾಗಿದೆ.[2]ಮಣಗುತ್ತಿ ಮತ್ತು ಗೋಧಳ್ಳಿಗಳಲ್ಲಿ ದೊರೆಯುವ ಐತಿಹ್ಯಗಳನ್ನು ಸಂಗ್ರಹಿಸಿದಲ್ಲಿ ಅಪೂರ್ವ ವಿಷಯಗಳು ತಿಳಿದು ಬರಬಹುದಾಗಿದೆ.

ಐತಿಹ್ಯಗಳ ಹಿನ್ನೆಲೆಯಲ್ಲಿ ಬೀಡಿ, ಕಕ್ಕೇರಿ, ನಂದಗಡ, ಹಲಸಿಗೆ ಶಂಶೇರಗಡ ತೋಲಗಿ (ಎಲ್ಲವೂ ಖಾನಾಪುರ ತಾಲೂಕು), ಕಿತ್ತೂರ, ಕೋದಾನಪುರ, ಸಂಗೊಳ್ಳಿ, ನಂದಿಹಳ್ಳಿ, ಜಕ್ಕನಾಯಕಕೊಪ್ಪ, ಬೈಲಹೊಂಗಲ, ಸಂಪಗಾಂವಿ, ದೇಶನೂರು, ಸುತಗಟ್ಟಿ, ಹೊಗರ್ತಿ, ಕೌಲಗುಡ್ಡ ಕರಡೀಗುಡ್ಡ (ಎಲ್ಲವೂ ಬೈಲಹೊಂಗಲ ತಾಲೂಕು), ತಲ್ಲೂರು, ಬಡಚಿ, ಗೊರವನಕೊಳ್ಳ, ಮುರಗೋಡ, ಗುರ್ಲ ಹೊಸೂರು (ಸವದತ್ತಿ ತಾಲೂಕು), ವಂಟಮೂರಿ, ಚಿಕ್ಕದಿನ್ನಿ (ಬೆಳಗಾವಿ ತಾಲೂಕು) ಈ ಮೊದಲಾದ ಊರುಗಳಲ್ಲಿ ರಾಯಣ್ಣ ಮೊದಲಾದ ವೀರರನ್ನು ಕುರಿತ ಐತಿಹ್ಯಗಳನ್ನು ಸಂಗ್ರಹಿಸುವ ಕಾರ್ಯ ನಡೆಯಬೇಕು.

ಮೇಲೆ ತಿಳಿಸಿದ ಊರುಗಳಲ್ಲಿ ಹಲವಾರು ಐತಿಹ್ಯಗಳ ಜೊತೆಗೆ ಇನ್ನೂ ಬಯಲಿಗೆ ಬರದಿರುವ ಜಾನಪದ ಸಾಹಿತ್ಯವೂ ದೊರೆಯಬಹುದಾಗಿದೆ.

ಈಗ ಪ್ರಕಟವಾಗಿರುವ ಜಾನಪದ ಸಾಹಿತ್ಯವನ್ನು ವಿಶ್ಲೇಷಿಸಿದರೆ ರಾಯಣ್ಣನ ವ್ಯಕ್ತಿತ್ವ ಕುರಿತಂತೆ ಹಲವು ಸಂಗತಿಗಳು ತಿಳಿದುಬರುತ್ತವೆ. ಆತನ ವ್ಯಕ್ತಿತ್ವದ ಹಲವು ವಿವರಗಳನು ಅತ್ಯಾಕರ್ಷವಾಗಿವೆ. ಆತನೊಬ್ಬ ಆಜಾನುಬಾಹು ವ್ಯಕ್ತಿಯಾಗಿದ್ದು ತುಂಬಾ ಬಲಶಾಲಿಯಾಗಿದ್ದ. ಜೊತೆಗೆ ಕುಸ್ತಿ ಪಟುವೂ ಆಗಿದ್ದನೆಂದು ತಿಳಿದು ಬರುತ್ತದೆ. ಸಂಗೊಳ್ಳಿಯಲ್ಲಿನ ಆತನ ಗುಡಿಯಲ್ಲಿ ಇಟ್ಟಿರುವ ಕಟ್ಟಿಗೆಯ ದೊಡ್ಡ ಲೋಡನ್ನು ನೋಡಿದರೆ ಈ ಮಾತು ಮನವರಿಕೆಯಾಗುತ್ತದೆ. ಸಾಮಾನ್ಯ ಶಕ್ತಿಯ ಪೈಲ್ವಾನನೊಬ್ಬ ಅದನ್ನು ಎತ್ತಿ ತಿರುವಿ ಶಾರೀರಿಕ ಸಾಧನ ಮಾಡುವುದು ಅಸಾಧ್ಯವೆಂದೇ ಹೇಳಬಹುದು. ಅದಲ್ಲದೆ ಆತನ ಮೈಬಣ್ಣ ಬಾಳೆಯ ಸುಳಿಯಂತೆ ಇತ್ತೆಂದು ಒಬ್ಬ ಜಾನಪದ ಕವಿ ಹೇಳುತ್ತಾನೆ.[3]ತಲೆಗೆ ಮುರಿಗಿ-ಮುಂಡಾಸ, ಮಯಗೆ ಕಸೆ ಅಂಗಿ, ಕೆಳಗೆ ಗುಳಿಗಿ ಚೊಣ್ಣ ತೊಟ್ಟು ಬೆನ್ನಿಗೆ ಡಾಲು ಕಟ್ಟಿಕೊಂಡು ಕೈಯಲ್ಲಿ ಕತ್ತಿ ಹಿಡಿದು ಯಾವತ್ತೂ ವೀರ ಯೋಧನಂತೆ ಸಂಚರಿಸುತ್ತಿದ್ದನಂತೆ. ಕೆಲವೆಡೆ ರಾಯಣ್ಣ ಕೈಯಲ್ಲಿ ಕತ್ತಿ ಹಿಡಿಯುತ್ತಿದ್ದನೆಂದು ವರ್ಣಿಸಿದರೆ ಮತ್ತೆ ಕೆಲವು ಸಲ ಅದನ್ನಾತ ಬೆಲ್ಟಿನಂತೆ ತನ್ನ ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದನೆಂದು ಹೇಳಲಾಗುತ್ತದೆ. ಎಂದರೆ ಅವನ ಕತ್ತಿ ತುಂಬ ತಿಳುವಾಗಿಯೂ ಸೂಕ್ಷ್ಮವಾಗಿಯೂ ಇದ್ದು ನಡಕ್ಕೆ ಪಟ್ಟಿಯಂತೆ ಸುತ್ತಿಕೊಳ್ಳಹುದಾದಷ್ಟು ನಾಜೂಕಿನದಾಗಿತ್ತೆಂದು ಜಾನಪದರು ಹೇಳುತ್ತಾರೆ. ಅವನ ಈ ಕತ್ತಿ ಸವದತ್ತಿ ತಾಲೂಕಿನ ಗೊರವನಕೊಳ್ಳದ ನಾಯಕರ ಮನೆತನದವರು (ಇವರು ಈಗಿನ ಕಾಲದ ಬಹು ದೊಡ್ಡ ಊಳಿಗಮಾನ್ಯ ಮನೆತನದವರಾಗಿದ್ದರು.) ಕೊಟ್ಟದ್ದೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಇದು ಒಂದು ಅಸಾಮಾನ್ಯವಾದ ದಿವ್ಯ ಖಡ್ಗವಾಗಿದ್ದುದರಿಂದ ರಾಯಣ್ಣ ಎಂದೂ ಸೋಲುತ್ತಿರಲಿಲ್ಲ ಎಂಬ ನಂಬಿಕೆ ಜಾಣಪದದಲ್ಲಿ ಬೇರೂರಿದೆ.

ಸಂಗೊಳ್ಳಿರಾಯಣ್ಣ ಮಂಗ್ಯಾನ ಕುಲದಾವ
ಟೊಂಗಿ ಟೊಂಗೀಗಿ ಜಿಗದಾನ
||

ಲಾಗ ಹಾಕುವಾಗ ರಾಯಣ್ಣ ಹಿಂಬದಿಯಿಂದ ಹನ್ನೆರಡು ಅಕ್ಕಡಿ, ಮುಂಬದಿ ಹನ್ನೆರಡು ಅಕ್ಕಡಿ ಹಾರುತ್ತಿದ್ದನಂತೆ – ಒಂದು ಅಕ್ಕಡಿ ಎಂದರೆ ಸುಮಾರು ಆಡು ಅಡಿ. ಮುಷ್ಟಿಯುದ್ಧ (ಕುಸ್ತಿ)ದಲ್ಲೂ ಆತನನ್ನು ಸೋಲಿಸುವವರಿರಲಿಲ್ಲ. ಇದರಿಂದ ಆತ ಪ್ರಚಂಡವಾದ ದೈಹಿಕ ಸಾಮರ್ಥ್ಯ ಪಡೆದಿದ್ದನೆಂಬುದು ಸ್ಪಷ್ಟವಾಗುತ್ತದೆ. ಮಲಪ್ರಭಾ ತೀರದ ಜನರ ದೇಹ ಲಕ್ಷಣಗಳೆಲ್ಲ ಆತನಲ್ಲಿ ಸಮಾವೇಶಗೊಂಡಿದ್ದವೆಂದು ತಿಳಿಯಬಹುದು.

೧೮೨೪ರ ಯುದ್ಧದಲ್ಲಿ ಸೆರೆಸಿಕ್ಕು ಬಿಡುಗಡೆಯಾದ ತರುವಾಯ ೧೮೨೯ರ ವರೆಗೆ ಆತ ನಡೆಸಿರಬಹುದಾದ ಚಟುವಟಿಕೆಗಳ ಬಗ್ಗೆ ಜಾನಪದ ಮಟ್ಟದಲ್ಲಾಗಲೀ ಬ್ರಿಟಿಷರ ದಾಖಲೆಗಳಲ್ಲಾಗಲೀ ಯಾವ ವಿವರಗಳೂ ದೊರೆಯುವುದಿಲ್ಲ. ಕು‌ಲಕರ್ಣಿ ಬಾಳಪ್ಪನೊಂದಿಗೆ ಉಂಟಾದ ಜಗಳದಿಂ‌ದಲೇ ಆತನ ಚಟುವಟಿಕೆಗಳು ಜನರ ಗಮನ ಸೆಳೆಯ ತೊಡಗುತ್ತವೆ. ಆ ಘಟನೆಯನ್ನೂ ಅನಂತರದ ಹಲವು ವಿವರಗಳನ್ನೂ ಜಾನಪದ ಮೂಲಗಳು ನಮಗೆ ಪರಿಚಯಿಸುತ್ತವೆ. ಒಂದು ಹಾಡಿನಲ್ಲಿ ಆತನ ಜತೆಗಾರ ಚೆನ್ನಬಸಪ್ಪ ಮತ್ತು ಸುತ್ತಲಿನ ಊರುಗಳು ವೀರರು ಸೇರಿಕೊಂಡು ಬಂಡಾಯದ ಸಿದ್ಧತೆಗೆ ತೊಡಗಿದುದರ ಸೂಚನೆಯಿದೆ. ಇದಕ್ಕಾಗಿ ಅವರು ಚೆನ್ನಮ್ಮನ ಒಪ್ಪಿಗೆ ಪಡೆಯಬೇಕಾದುದು ತುಂಬ ಮುಖ್ಯವಾಗಿದ್ದುದರಿಂದ ಸಾರುವ ಅಯ್ಯನವರ ವೇಷ ಕಟ್ಟಿಕೊಂಡು ಬೈಲಹೊಂಗಲಕ್ಕೆ ಹೋಗಿ ಜೈಲಿನಲ್ಲಿದ್ದ ಚೆನ್ನಮ್ಮನನ್ನು ಕಂಡುಬಂದರೆಂದು ಜಾನಪದ ಮೂಲ ಹೇಳುತ್ತವೆ.[4]

ಹೀಗೆ ಚೆನ್ನಮ್ಮನ ಒಪ್ಪಿಗೆ ದೊರೆತ ಮೇಲೆ ರಾಯಣ್ಣ ಕೈಕೊಂಡ ಮೊದಲ ಕೆಲಸವೆಂದರೆ ಹಲವು ಜನ ಸಂಸ್ಥಾನಿಕರು ಮತ್ತು ದೇಸಾಯಿಗಳಿಂದ ಸೈನಿಕ ಸಹಾಯ ಕೇಳಲು ಸಂಚಾರ ಕೈಗೊಂಡದ್ದು. ಇವರಲ್ಲಿ ಕೊಲ್ಲಾಪುರದ ಛತ್ರಪತಿ ಮೊದಲಾದವರೂ ಸೇರಿರಬೇಕು. ಆದರೆ ಈ ವಿಷಯಕ್ಕೆ ಖಚಿತ ಉಲ್ಲೇಖಗಳಿಲ್ಲ. ಸಾಂಗಲಿ, ತಾಸಗಾಂವ ಮೊದಲಾದ ಪಟವರ್ಧನ ಮನೆತನಗಳವರು ಕಿತ್ತೂರಿನ ಬಗ್ಗೆ ಸಹಾನುಭೂತಿ ಉಳ್ಳವರಾಗಿರಲಿಲ್ಲ. ಆದರೆ ಚಿಕ್ಕದಿನ್ನೆ, ಡಂಬಳ. ಮುಂಡರಗಿ ಭಾಗಗಳಲ್ಲಿ ಸಹಾಯ ದೊರೆಬಹುದೆಂಬ ಆಶೆಯಿತ್ತು. ವಿಶೇಷವಾಗಿ ಚಿಕ್ಕದಿನ್ನೆ ಬೇಡರ ಒಂದು ಚಿಕ್ಕ ಸಂಸ್ಥಾನವಾಗಿದ್ದು ಅಲ್ಲಿನವರ ಸೈನ್ಯ ರಾಯಣ್ಣನ ಜತೆ ಗೂಡಿದ್ದ ಬಗ್ಗೆ ನಿಶ್ಚಿತ ಪುರಾವೆಯಿದೆ.[5] ಆದರೆ ಜಾನಪದ ಹಾಡುಗಳಲ್ಲಿ ಇವರ ಉಲ್ಲೇಖ ಬಂದಿಲ್ಲ. ಅದೇ ರೀತಿ ಡಂಬಳ ಮುಂಡರಗಿಯವರ ಬಗೆಗೂ ರಾಯಣ್ಣ ಆಶಾಭಾವನೆ ಹೊಂದಿದ್ದಂತೆ ಕಾಣುತ್ತದೆ. ಜಮಖಂಡಿ ಮತ್ತು ಮುಧೋಳ ಸಂಸ್ಥಾನಗಳಿಗೆ ರಾಯಣ್ಣ ಭೆಟ್ಟಿಯಿತ್ತಿರುವ ಸಾಧ್ಯತೆ ಕೂಡ ಇದೆ. ಜಾನಪದ ಹಾಡಿನಲ್ಲಿ ಈ ಚಿಕ್ಕ ರಾಜ್ಯಗಳ ಉಲ್ಲೇಖವೂ ಇದೆ.[6]

ರಾಯಣ್ಣನ ಹಲವು ಜನ ಸಹಚಾರಿಗಳ ಹೆಸರುಗಳು ಜಾನಪದ ಹಾಡುಗಳಲ್ಲಿವೆ. ಬಿಚ್ಚಗತ್ತಿ ಚೆನ್ನಬಸಪ್ಪ ಮತ್ತು ಗಜವೀರನೆಂಬವರು ಅವರಲ್ಲಿ ತುಂಬ ಪ್ರಮುಖರು. ಚೆನ್ನಬಸಪ್ಪ ಮಂಟಗುತ್ತಿಯವನೆಂದು ರಾಯಣ್ಣ ನೀಡಿದ ಒಪ್ಪಿಗೆ ಪತ್ರದಲ್ಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ಹೆಸರಿನ ಯಾವ ಊರೂ ಕಂಡುಬಾರದು. ‘ಮಣಗುತ್ತಿ’ ಎಂಬ ಊರು ಮಾತ್ರ ಹುಕ್ಕೇರಿ ತಾಲೂಕಿನಲ್ಲಿ (ರಾಷ್ಟ್ರೀಯ ಹೆದ್ದಾರಿ ನಾಲ್ಕು ಸಮೀಪ) ಬೆಳಗಾವಿಯ ಉತ್ತರಕ್ಕೆ ಸು. ೩೦ ಕಿ.ಮೀಗಳ ಅಂತರದಲ್ಲಿ ಕಂಡು ಬರುತ್ತದೆ. ಚೆನ್ನಬಸಪ್ಪ ಬಹುಶಃ ಅಲ್ಲಿಯವನು. ಅದೇ ‘ಗಜವೀರ’ ನೆಂಬವನು ಗೋದಳ್ಳಿಯವನೆಂದು ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ಇದು ಖಾನಾಪುರ ತಾಲೂಕಿನ ಒಂದು ಹಳ್ಳಿ. ರಾಯಣ್ಣನ ಹೇಳಿಕೆಯಲ್ಲಿರುವ ‘ಗಜಬಾಹಬಸಿ’ ಎಂಬವನು ಇವನೇ ಈತ ಹಬಸಿ (ನಿಗ್ರೋ) ಜನಾಂಗದವನಾಗಿದ್ದು ಪ್ರಚಂಡ ದೈಹಿಕ ಬಲವುಳ್ಳನ ನಾಗಿದ್ದನೆಂದು ತಿಳಿದುಬರುತ್ತದೆ. ಇದೇ ರೀತಿ ಬೆಳವಡಿಯ ವಡ್ಡರ ಎಲ್ಲಣ್ಣ ಕರಡಿಗುದ್ದಿ (ಬೆಳಗಾವಿ ಸಮೀಪ)ಯ ಬಾಳಣ್ಣಾ. ದೊಡ್ಡಕಿಲಿಯವ ಭೀಮ, ಹೊಟ್ಟೆಯ ಸೋಮ ಮೊದಲಾದ ವೀರರು ರಾಯಣ್ಣನನ್ನು ಸೇರಿದರೆಂದು ಜಾನಪದ ಮೂಲಗಳು ಹೇಳುತ್ತವೆ.

ಬಿಚ್ಚಗತ್ತಿ ಚೆನ್ನಬಸಪ್ಪನೊಂದಿಗೆ ರಾಯಣ್ಣ ಸಮಾಲೋಚನೆ ಮಾಡಿದ ತರುವಾಯ ಈತ ಮಾಡಿದ ಮೊದಲ ಕೆಲಸವೆಂದರೆ ಶಿವನಗುತ್ತಿಯ ಪುಂಡ ಭರಮನನ್ನು ಕೊಂದದ್ದು. ಈತ ಸುರಪುರದ ಅರಸರ ಸೈನ್ಯದಲ್ಲಿದ್ದವನೆಂದು ತಿಳಿದು ಬರುತ್ತದೆ. ಜಾನಪದ ಹಾಡುಗಳಲ್ಲಿ ಹಲವು ಕಡೆಗೆ ಸುರಪುರದ ಬದಲು ಶಿವನಗುತ್ತಿಯ ಉಲ್ಲೇಖ ಬಂದಿದೆ. ಬಹುಶಃ ಸುರಪುರ ಸಂಸ್ಥಾನದವರ ಒಂದು ಊರು ಶಿವನಗುತ್ತಿಯಾಗಿದ್ದು ಭರಮನಾಯಕನೊಂದಿಗೆ ಪ್ರತ್ಯಕ್ಷಹೋರಾಟ ನಡೆದು ಶಿವನಗುತ್ತಿಯಲ್ಲಿಯೇ ಎಂದು ಕಾಣುತ್ತದೆ. ಸಂಗೊಳ್ಳಿ ರಾಯಣ್ಣನ ನಾಟಕದಲ್ಲಿಯೂ ಒಂದು ಅಪ್ರಕಟಿತ ಜಾನಪದ ಹಾಡಿನಲ್ಲಿಯೂ ಭರಮನ ಹೆಸರು ಬಂದಿದ್ದು ಫ್ಲೀಟರ ಲಾವಣಿಯಲ್ಲಿ ಸುರಪುರ ಅರಸರ ಉಲ್ಲೇಖವಿದೆ. ಈರಾಜ ರಾಯಣ್ಣನಿಗೆ ೩೦೦ ಸೈನಿಕರ ದಂಡುಕೊಟ್ಟನಂತೆ. ಸೈನ್ಯವನ್ನು ರಾಯಣ್ಣ ‘ಗಿಡ’ದಲ್ಲಿ ಇಟ್ಟು ಅದಕ್ಕೆ ಹಬಸಿ ಜನರನ್ನು ಕಾವಲು ಇರಿಸಿದನೆಂದು ಲಾವಣಿಯಲ್ಲಿ ಬಂದಿದೆ. ಇದು ಬಹುಶಃ ‘ಗಡ’ದಲ್ಲಿ ಎಂದಿರಬೇಕು ‘ಗಡ’ವೆಂದರೆ ಶಮಸೇರಗಡ ಅಥವಾ ನಂದಗಡ ಇವೆರಡೂ ಖಾನಾಪೂರ ತಾಲೂಕಿನ ಗುಡ್ಡಗಾಡು ಪ್ರದೇಶದ ಸುಭದ್ರ ಸ್ಥಳಗಳು. ಶಮಶೇರ ಗಡವು ರಾಯಣ್ಣನ ಪ್ರಮುಖ ನೆಲೆಯಾಗಿದ್ದುದರಿಂದ ಈ ‘ಗಡ’ದಲ್ಲಿಯೇ ಸೈನ್ಯವನ್ನಿಟ್ಟು ಕೊಂಡಿದ್ದು ಹೆಚ್ಚು ಸಂಭವನೀಯ.

ಹೀಗೆ ಸೈನ್ಯ ಸಂಗ್ರಹವಾದ ಕೂಡಲೇ ಬಂಡಾಯಗಾರರು ಮಾಸ್ತಮರಡಿಯಲ್ಲಿದ್ದ ದತ್ತು ಮಗನಾದ ಸವಾಯಿ ಮಲ್ಲಸರ್ಜನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆತನನ್ನು ಗೋಕಾಕ ತಾಲೂಕಿನ ಒಂದು ಗುಪ್ತ ಸ್ಥಳದಲ್ಲಿರಿಸಿದರು. ತರುವಾಯ ಬಂಡಾಯ ಪ್ರಾರಂಭವಾಯಿತು.

ಫ್ಲೀಟರ ಲಾವಣಿಯಲ್ಲಿ ಸವಾಯಿ ಮಲ್ಲಸರ್ಜನ ಉಲ್ಲೇಖವಿಲ್ಲ. ಬದಲು ಶಮಶೇರಗಡವನ್ನು ವಶಪಡಿಸಿಕೊಂಡ ಸಂಗತಿ ಬಂದಿದೆ. ಅದಾದ ಮೇಲೆ ಖಾನಾಪುರ ಮತ್ತು ಬೀಡಿಗಳ ಮೇಲೆ ದಾಳಿ ಮಾಡಿದರು. ಬೀಡಿಯಲ್ಲಿದ್ದ ತಾಲೂಕಾ ಕಚೇರಿಯನ್ನು ಸುಟ್ಟು ಖಜಾನೆಯ ಲೂಟಿಮಾಡಿದರು. ಖಾನಾಪುರ ತಾಲೂಕಿನ ಪೂರ್ವದ ಹಳ್ಳಿಗಳು ಮತ್ತು ಬೈಲಹೊಂಗಲ ತಾಲೂಕಿನಲ್ಲಿರುವ ಮಲಪ್ರಭಾನದಿ ದಕ್ಷಿಣದ ಬಹುತೇಕ ಎಲ್ಲ ಊರುಗಳಲ್ಲಿ ಲೂಟಿಮಾಡಿದರು.

ಈ ಘಟನಾವಳಿಯನ್ನು ನಿರೀಕ್ಷಿಸಿ ಚಕೀತರಾದ ಬ್ರಿಟೀಷರು ರಾಯಣ್ಣನನ್ನು ಹಿಡಿಯಲು ಸಂಪಗಾವಿಯ ಮಾಮಲೇದಾರನಿಗೆ ಆಜ್ಞೆ ಮಾಡಿದರು. ಅವರು ಸನ್ನದ್ಧರಾಗಿ ರಾಯಣ್ಣನನ್ನು ಬೆಂಬತ್ತುವಷ್ಟರಲ್ಲಿ ಇವರು ಹಳಿಯಾಳ (ಉ.ಕ.ಜಿಲ್ಲೆ) ಪಟ್ಟಣವನ್ನು ಸುಲಿದರು. ಅಲ್ಲಿಂದ ಪುನಃ ಬೆಳಗಾವಿ ಜಿಲ್ಲೆಯಲ್ಲಿ ಪ್ರವೇಶಿಸಿದರು. ಇವೆಲ್ಲ ಸಂಗತಿಗಳು ಲಾವಣಿಯಲ್ಲಿ ಬಂದಿವೆ.[7] ಇದರೊಂದಿಗೆ ಬಂಡುಗಾರರ ಸಂಖ್ಯೆ ವಿಪರೀತ ಹೆಚ್ಚಾಗಿ ಬ್ರಿಟೀಷರಿಗೆ ದೊಡ್ಡ ತಲೆನೋವು ಪ್ರಾರಂಭವಾಯಿತು. ಮುಂಬೈಯಿಂದ ೫೦೦ ಜನ ಬ್ರಿಟಿಶ್ ಸೈನ್ಯ ಮತ್ತು ೩೦೦ ಜನ ದೇಶೀ ಸೈನ್ಯವನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಯಿತೆಂದು ಲಾವಣಿಕಾರ ಹೇಳಿದ್ದಾನೆ.

ಹಳಿಯಾಳದ ಘಟನೆಯ ತರುವಾಯ ರಾಯಣ್ಣನಪಡೆ ಖಾನಾಪುರ ತಾಲೂಕಿನ ಬಾಳಗುಂದದ ಗುಡ್ಡಕ್ಕೆ ಬಂತು. ಬ್ರಿಟೀಶರ ಸೈನ್ಯ ಅವರನ್ನು ಹಿಡಿಯಲು ಬೆನ್ನಟ್ಟಿದ್ದ ಸಂಗತಿ ರಾಯಣ್ಣನ ಗಮನಕ್ಕೆ ಬಂದುದರಿಂದ ರಾಯಣ್ಣ ಅಲ್ಲೊಂದು ತಂತ್ರ ಮಾಡಿದ. ಮೊದಲು ಅಲ್ಲಿ ಅವರು ಫರಾಳ (ಉಪಹಾರ) ಮಾಡಿ, ಅನಂತರ ಆ ಪ್ರದೇಶದ ಗಿಡಗಂಟೆಗಳನ್ನು ಸವರಿ ಅವುಗಳ ತುದಿಗೆ ಬಟ್ಟೆ ಸುತ್ತಿ ಬೆಂಕಿ ಹಚ್ಚಿದರು. ಬ್ರಿಟಿಶ್ ಸೈನ್ಯ ಅದನ್ನು ದೂರದಿಂದ ನೋಡಿ ರಾಯಣ್ಣನ ದಳ ಅಲ್ಲಿ ಅಡಿಗೆ ಮಾಡುತ್ತಿದೆಯೆಂದು ಭ್ರಮಿಸಿತು ಹಾಗೂ ಅದನ್ನು ಸುತ್ತುವರಿದು ಮನಬಂದಂತೆ ಗುಂಡು ಹಾರಿಸಿತು. ಅವರ ಗುಂಡುಗಳೆಲ್ಲ ತೀರಿಹೋಗಿ ಗುಂಡಿನ ಸದ್ದು ನಿಂತುದೇ ತಡ, ಮರೆಯಲ್ಲಿದ್ದ ರಾಯಣ್ಣನ ಕಡೆಯವರು ಒಮ್ಮೆಲೆ ಅವರ ಮೇಲೆ ಏರಿಹೋಗಿ ಮನಬಂದಂತೆ ಅವರನ್ನು ತುಂಡರಿಸಿದರು. ಅವರಲ್ಲಿ ಒಬ್ಬನೂ ಜೀವ ಸಹಿತ ಉಳಿಯಲಿಲ್ಲೆಂದು ಲಾವಣಿಕಾರ ಹಾಡಿದ್ದಾನೆ.

ಇದಾದ ಮೇಲೆ ರಾಯಣ್ಣನನ್ನು ಹಿಡಿಯಲು ಎರಡನೆಯ ಪ್ರಯತ್ನ ನಡೆಯಿತು. ರಾಯಣ್ಣನ ದಂಡು ಖಾನಾಪುರ ತಾಲೂಕಿನ ಹಡಗಲಿ, ಬೈಲಹೊಂಗಲ ತಾಲೂಕಿನ ಜಕ್ಕನಾಯಕನಕೊಪ್ಪ ಮೊದಲಾದೆಡೆ ದಾಳಿ ಮಾಡಿದ್ದು ಬ್ರಿಟೀಶ ಅಧಿಕಾರಿಗಳ ಗಮನಕ್ಕೆ ಬಂದುದರಿಂದ ಅವರ ಸೈನ್ಯದ ಒಂದು ಭಾಗ ನಂದಗಡದ ಸಮೀಪ ಉಳಿದು ಇನ್ನೊಂದು ಸಂಪಗಾವಿಯತ್ತ ಹೊರಟುಬಂದು ಬೆಣ್ಣೆಹಳ್ಳದಲ್ಲಿ ಹೊಂಚು ಕಾಯುತ್ತಿತ್ತು. ಆದರೆ ಚತುರ ರಾಯಣ್ಣ ಇವರಿಗೆ ತಿಳಿಯದಂತೆ ಬೇರೊಂದು ಮಾರ್ಗದಿಂದ ಸಂಪಗಾವಿಯನ್ನು ಮೊದಲೇ ಪ್ರವೇಶಿಸಿ ಸಾಕಷ್ಟು ಹಾನಿ ಮಾಡಿದ್ದಲ್ಲದೆ ಅಲ್ಲಿನ ಕಚೇರಿ, ಮಾಮಲೇದಾರನ ಮನೆಮಾರುಗಳನ್ನು ಸುಟ್ಟು ಸೊರೆಗೊಳ್ಳುತೊಡಗಿದ. ಇದರಿಂದಾಗಿ ಸಂಪಗಾವಿಯಲ್ಲಿ ಹಾಹಾಕಾರವೆದ್ದು ಬೆಣ್ಣೆಹಳ್ಳದಲ್ಲಿ ಅಡಗಿದ್ದ ಬ್ರಿಟಿಶ್ ಪರ ಸೈನ್ಯ ಸಂಪಗಾವಿಗೆ ಧಾವಿಸಿತು. ಅದಾಗಲೇ ಸಂಪಗಾವಿಯಿಂದ ಹೊರಬಿದ್ದ ರಾಯಣ್ಣನ ಸೈನ್ಯವನ್ನು ಊರ ಉತ್ತರದಲ್ಲಿರುವ ಕೆರೆಯ ಬೈಲಿನಲ್ಲಿ ಎದುರುಗೊಂಡಿತು. ಕೈಕೈ ಹತ್ತಿದ ಈ ಯುದ್ಧದಲ್ಲಿ ಹಲವು ಜನ ಕ್ರಾಂತಿಕಾರರು ಕೊಲ್ಲಲ್ಪಟ್ಟರೆಂದು ಜಾನಪದ ಹಾಡು ತಿಳಿಸುತ್ತದೆ. ರಾಯಣ್ಣ ಇಲ್ಲಿಂದ ದೇಶನೂರಗುಡ್ಡಕ್ಕೆ ಪರಾರಿಯಾಗಿ ಹೋಗಿ ಅಲ್ಲಿಂದ ಎರಡು ತುಂಡಾಗಿ ಒಂದು ಮರಕಟ್ಟಿ ಸುತಗಟ್ಟಿ (ಬೈಲಹೊಂಗಲ ತಾ.) ಮೊದಲಾದ ಊರುಗಳನ್ನು ಲೂಟಿ ಮಾಡುತ್ತ ಶಮಶೇರಗಡ ಪ್ರದೇಶದತ್ತ ಹೋದರೆ ಇನ್ನೊಂದು ಸಂಗೊಳ್ಳಿಗೆ ಹೋಗಿ ತರುವಾಯ ಕಿತ್ತೂರಿನತ್ತ ಹೋಯಿತು. ಕಿತ್ತೂರಿಗೆ ಹೋಗಿ (೧೮೩೦. ಜನೇವರಿ ೧೪) ಗುರುಸಿದ್ಧೇಶ್ವರನ ದರ್ಶನ ಪಡೆದು, ಸಮೀಪದ ಕಬ್ಬಿನ ಹೊಲದಲ್ಲಿ ಕಬ್ಬಿಣ ಹಾಲು ಕುಡಿದು, ತಿನ್ನಲು ಕಬ್ಬು ತೆಗೆದುಕೊಂಡು ಗುಡ್ಡದಲ್ಲಿ ಮರೆಯಾಯಿತು.

ಇದಾದ ಮೇಲೆ ರಾಯಣ್ಣ ಹಳಿಯಾಳದ ಮೇಲೆ ಮತ್ತೆ ದಾಳಿ ಮಾಡಿದನೆಂದು ಫ್ಲೀಟರು ಸಂಗ್ರಹಿಸಿದ ಲಾವಣಿಯಲ್ಲಿ ಬಂದಿದೆ. (೯ನೆಯ ನುಡಿ) ಎರಡನೆಯ ಬಾರಿ ಹಳಿಯಾಳದ ಲೂಟಿಗೆ ಒಂದು ವಿಶೇಷಕಾರಣ ಒದಗಿಬಂತೆಂದು ನಾಟಕದಲ್ಲಿ ಬಂದಿದೆ. ಈ ಭಾಗದಲ್ಲಿ ರಾಯಣ್ಣ ಅಡಗಿದ್ದು ಬ್ರಿಟಿಷರ ಕೈಗೆ ಸಿಗದೆ ತಳ್ಳಿ ಮಾಡುತ್ತಿದ್ದದ್ದರಿಂದ ಸರಕಾರ ಆತನನ್ನು ಹಿಡಿದು ಕೊಟ್ಟವರಿಗೆ ೫೦೦ ರೂ (೨೦೦ ಎಂದೂ ಹೇಳಿಕೆಯಿದೆ) ಬಹುಮಾನ ಕೊಡುವುದಾಗಿ ಸಾರಿ ಅದರ ಕರಪತ್ರಗಳನ್ನು ಹಳಿಯಾಳ ಸಂತೆಯಲ್ಲಿ ಹಚ್ಚಿಸಿತ್ತು. ಅದಕ್ಕೆ ಪ್ರತಿಕ್ರಮವಾಗಿ ರಾಯಣ್ಣ ಹಳಿಯಾಳದ ಮೇಲೆ ಈ ಎರಡನೆಯ ದಾಳಿ ಮಾಡಬೇಕಾಗಿ ಬಂತು. ಈ ಸಂದರ್ಭದಲ್ಲಿ ರಾಯಣ್ಣನ ತೊಡೆಗೆ ಗುಂಡು ಬಡಿಯಿತು. ಇದು ತೀವ್ರ ಸ್ವರೂಪದ್ದಾಗಿದ್ದರಿಂದ ರಾಯಣ್ಣ ಹಂಡಿಬಡಗನಾಥನ ಗುಡ್ಡದಲ್ಲಿ (ಅಲ್ಲಿನ ಸಾಧುಗಳಿಂದ) ದಿವ್ಯೌಷಧ ಪಡೆದು ತೀವ್ರ ಗುಣಮುಖನಾದನೆಂದು ಜಾನಪದ ಮೂಲ ಹೇಳುತ್ತದೆ. ಎಂದರೆ ಬ್ರಿಟೀಶರೊಡನೆ ಆದ ಮೂರನೆಯ ಮುಖಾಮುಖಿ ಇದು ಎಂದು ಹೇಳಬಹುದು.

ಇದಾದ ಮೇಲೆ ರಾಯಣ್ಣ ಸಾಧಿಸಿದ ಇನ್ನೊಂದು ದೊಡ್ಡ ಕೆಲಸವೆಂದರೆ ಗೋದಳ್ಳಿಯ ಕೆರೆಯಲ್ಲಿ ಬೀಡು ಬಿಟ್ಟಿದ್ದ ಸರಕಾರಿ ಸೈನ್ಯವನ್ನು ಮೋಸಗೊಳಿಸಿದ್ದು. ಸೈನ್ಯ ಕೆರೆಯಲ್ಲಿ ಬೀಡು ಬಿಟ್ಟು ಊಟಮಾಡಿ ವಿಶ್ರಾಂತಿ ಪಡೆಯುತ್ತಿತ್ತು. ಆಗ ರಾಯಣ್ಣ ಮತ್ತು ಆಯ್ದ ಕೆಲಸಂಗಡಿಗರು (ಬ್ರಿಟೀಶರ) ಕುದುರೆಗಳಿಗೆ ಹುಲ್ಲು ಮಾರುವವರಂತೆ ವೇಷ ತೊಟ್ಟು ಹುಲ್ಲು ಹೊರೆ ಹೊತ್ತು ಹೋದರು. ಕೆಲವರು ಹುಲ್ಲು ಮಾರುವ ನಾಟಕ ಮಾಡುತ್ತಿದ್ದಂತೆ ಉಳಿದವರು ಬ್ರಿಟೀಶರ ಕಣ್ಣು ತಪ್ಪಿಸಿ ಅವರ ಶಸ್ತ್ರಾಸ್ತ್ರಗಳನ್ನು ಸಮೀಪದ ಬಾವಿಯಲ್ಲಿ ಎಸೆದು ಬಿಟ್ಟರು. ಕೂಡಲೆ ಮರೆಯಲ್ಲಿದ್ದವರು ಏರಿಬಂದು ಬ್ರಿಟೀಶ್ ಸೈನ್ಯದಲ್ಲಿ ಕೈಗೆ ಸಿಕ್ಕವರನ್ನೆಲ್ಲ ತುಂಡರಿಸಿ ಚೆಲ್ಲಿದರು.

ಇದರಿಂದ ಕಂಗಾಲಾದ ಬ್ರಿಟೀಶರು ಮೋಸದ ಹೊರತು ರಾಯಣ್ಣರನ್ನು ಹಿಡಿಯಲಾಗುವುದಿಲ್ಲವೆಂದು ಮನಗಂಡರು. ಸಂಪಗಾವಿಯ ಮಾಮಲೇದಾರ ಕೃಷ್ಣರಾಯನ ಮುಖಾಂತರ ದೊಡ್ಡ ಕಾರಸ್ಥಾನ ನಿಯೋಜಿಸಿದರು ಖೋದಾನಪುರ ಅಣಿಗೊಳಿಸಿದರು. ೩೦೦ ಸೈನ್ಯದೊಂದಿಗೆ ಬಂಡಾಯಗಾರರನ್ನು ಸೇರಿದ ಇವರು ಡೋರಿಹಳ್ಳದಲ್ಲಿನ ‘ಡವಗಿ ಮಡು’ ಎಂಬಲ್ಲಿ ಸ್ನಾನ ಮಾಡಿ ಬಟ್ಟೆ ಹಾಕಿಕೊಳ್ಳುತ್ತಿದ್ದ ರಾಯಣ್ಣನನ್ನು ಸೆರೆ ಹಿಡಿದರು. ಈ ದುರಂತ ನಡೆದುದು ‘ಬೂದ್ಯಾಳ’ ಬುಗಡೊಳ್ಳಿ’ ಎಂಬ ಹೆಸರಿನ ಊರುಗಳಲ್ಲಿ ಎಂದು ಜಾನಪದ ಹಾಡುಗಳಲ್ಲಿ ತಪ್ಪಾಗಿ ಸೂಚಿತವಾಗಿವೆ.

ರಾಯಣ್ಣನ ಸಮೀಪ ಸಂಬಂಧಿಯಾದ ಲಕ್ಕಪ್ಪ ಪಡದಪ್ಪನವರ ಎಂಬ ಹಳಬರಾಯಣ್ಣನ ಬೆನ್ನು ಹತ್ತಿ ಹಳ್ಳಕ್ಕೆ ಹೋದ. ಆತನ ನಚ್ಚಿನ ಬಂಟರಾರೂ ಇಲ್ಲದ್ದನ್ನು ನೋಡಿ ಈ ಲಕ್ಯಾ ರಾಯಣ್ಣ ಸ್ನಾನಮಾಡಿ ಎದ್ದು ಬಂದು ತನ್ನ ಚಣ್ಣ ಬದಲಿಸಲು ಮುಂದೆ ಬಗ್ಗಿ ಕೊಂಡ, ಇದನ್ನು ಕಂಡು ಮಿಂಚಿನ ವೇಗದಲ್ಲಿ ಆ ಮೋಸಗಾರ ಲಕ್ಯಾ ಅವನ ಮೇಲೆ ಕಂಬಳಿಯ ಗೂಡೆಯನ್ನು ಬೀಸಿ ಮೀನ ಹಿಡಿದಂತೆ ಗಟ್ಟಿಯಾಗಿ ಹಿಡಿದು ದೊಡ್ಡದನಿ ಮಾಡಿ ಇತರರನ್ನು ಸಹಾಯಕ್ಕೆ ಕರೆದ, ಮರೆಯಲ್ಲಿದ್ದವರು ಓಡಿ ಬಂದು ರಾಯಣ್ಣನಿಗೆ ಮುಗಿಬಿದ್ದು ಕೈಕಾಲು ಕಟ್ಟಿ ಹಾಕಿದರು. ಅಷ್ಟರಲ್ಲಿ ಆತನ ಕತ್ತಿಯನ್ನು ಒಬ್ಬ ಮೋಸಗಾರ ನೀರಿನ ಮಡುವಿನಲ್ಲಿ ಎಸೆದು ಬಿಟ್ಟಿದ್ದ.

ಇದಾದ ಮೇಲೆ ರಾಯಣ್ಣನನ್ನು ಹೊರಸಿಗೆ ಬಿಗಿದು ಮೊದಲು ಧಾರವಾಡಕ್ಕೂ ತರುವಾಯ (ಬೆಳಗಾವಿ ಮತ್ತು) ನಂದಗಡಕ್ಕೂ ಒಯ್ದು ಅಲ್ಲಿ ಗಲ್ಲಿಗೇರಿಸಿದರು. ಅವನ ಮರಣಾನಂತರ ಆತನೊಬ್ಬ ಕಾರಣಿಕ ಪುರುಷನೆನಿಸಿ ಜನತೆಯಿಂದ ಪೂಜೆ ಗೊಳ್ಳತೊಡಗಿದ. ಆತನ ಜೀವದ ಗೆಳೆಯ ಚೆನ್ನಬಸು ಸಾಧುವಿನ ವೇಷದಲ್ಲಿ ಬಂದು ದಿನನಿತ್ಯ ಅವನ ಸಮಾಧಿಯನ್ನು ಪೂಜಿಸುತ್ತಿದ್ದ. ಗಜವೀರ ತಾನೇ ಗುಂಡು ಹೊಡೆದುಕೊಂಡು ಸತ್ತ ಅನೇಕ ಜನ ವೀರರು ಬ್ರಿಟೀಶರ ಕಣ್ಣು ತಪ್ಪಿಸಿ ಮಾಯವಾದರು. ಕೆಲವರು ಮಾತ್ರ ಅವರ ಕೈಗೆ ಸಿಕ್ಕರು. ಅವರಲ್ಲಿ ಇತರ ೫ ಜನಕ್ಕೆ ಮಾತ್ರ ರಾಯಣ್ಣನಂತೆ ಮರಣದಂಡನೆಯ ಶಿಕ್ಷೆ ವಿಧಿಸಿ ಇನ್ನುಳಿದ ಆರು ಜನರನ್ನು ಕರಿನೀರಿನ ಶಿಕ್ಷೆಗೆ ಗುರಿಪಡಿಸಿದರು. ಚಾಣಾಕ್ಷರಾದ ಬ್ರಿಟೀಶರು ಕಿತ್ತೂರಿನ ಯುದ್ಧ ಕಾಲದಲ್ಲಿ ಹೋರಾಟಗಾರರನ್ನು ಬೆನ್ನಟ್ಟಿ ಬೇಟೆಯಾಡಿದಂತೆ ಈ ಸಲ ಮಾಡಲಿಲ್ಲ. ಮೂರು ಸಾವಿರವನ್ನು ಮಿಕ್ಕಿದ್ದ ಅವನ ಅನುಯಾಯಿಗಳು ತಪ್ಪಿಸಿಕೊಂಡು ಹೋಗಲು ಅವಕಾಶವಿತ್ತರು. ಅವರಲ್ಲಿ ಕೆಲವರಾದರೂ ೧೮೩೭ ರ ವರೆಗೆ ಈ ಭಾಗಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದು ಸವಾಯಿಮಲ್ಲಸರ್ಜನು ಹೂಡಿದ ತರುವಾಯದ ಬಂಡಾಯದಲ್ಲಿ ಪಾಲುಗೊಂಡಿರಬೇಕೆಂದು ಭಾವಿಸಬಹುದು.

 

[1]ಅಪ್ರಕಟಿತ

[2]ಬೆಳಗಾಂ ಜಿಲ್ಲೆಯ ಲಾವಣಿಗಳು ಸಂ.ಟಿ.ಎಸ್.ರಾಜಪ್ಪ. ಪು. ೬

[3]ಧಾರವಾಡ ಜಿಲ್ಲೆಯ ಲಾವಣಿ- ಸಂ.ಟಿ.ಎಸ್.ರಾಜಪ್ಪ. ಪು.೪

[4]ಬೆಳಗಾಂ ಜಿಲ್ಲೆಯ ಲಾವಣಿಗಳು ಪು.೮ I-P.

[5] Tribes and Castes of Bornbay-Vol -l- 80. (R.E. Enthovan-1880)

[6]ಧಾರವಾಡ ಜಿಲ್ಲೆಯ ಲಾವಣಿಗಳು- ಪು. ೮-೯

[7]ಫ್ಲೀಟರು ಸಂಗ್ರಹಿಸಿದ ಲಾವಣಿ/ಜಾನಪದದಲ್ಲಿ ಕಿತ್ತೂರು. ಪು. ೪೩.