ಜುಂಜಪ್ಪ ಅಥವಾ ಜುಂಜಯ್ಯ ಒಬ್ಬ ಜಾನಪದ ದೇವರೆಂದು ವಿದ್ವಾಂಸರು ಈಗಾಗಲೇ ಗುರುತಿಸಿದ್ದಾರೆ. ಕಾಡುಗೊಲ್ಲರ ಆರಾಧ್ಯ ದೈವವಾದ ಈತನ ಬಗ್ಗೆ ಡಾ.ಜೀ.ಶಂ. ಪರಮಶಿವಯ್ಯನವರು ತಮ್ಮ ಪಿಎಚ್‌ಡಿ. ಪ್ರಬಂಧದಲ್ಲಿ ಹಲವಾರು ಸಂಗತಿಗಳನ್ನು ಸಂಗ್ರಹಿಸಿದ್ದಾರೆ.[1] ಜುಂಜಪ್ಪನನ್ನು ಕುರಿತ ಆರಾಧನೆ ಕರ್ನಾಟಕದ ಚಿತ್ರದುರ್ಗ, ತುಮಕೂರ ಮತ್ತು ಬೆಂಗಳೂರು ಜಿಲ್ಲೆಗಳ ಪ್ರದೇಶಗಳಲ್ಲಿ ಹಾಗೂ ಆಂಧ್ರದ ಗಡಿ ಪ್ರದೇಶವಾದ ಅನಂತಪುರ ಜಿಲ್ಲೆಯ ಪ್ರದೇಶದಲ್ಲಿ ಪ್ರಚಲಿತವಿರುವುದಾಗಿಯೂ ಸಿರಾ ತಾಲೂಕಿನ ಬೇವಿನಹಳ್ಳಿ ಮತ್ತು ಗುಬ್ಬಿ ತಾಲೂಕಿನ ಹಾಗಲವಾಡಿ ಮುಂತಾದೆಡೆಗಳಲ್ಲಿ ಅವನ ಪೂಜಾ ಸ್ಥಾನಗಳಿರುವುದಾಗಿ ತಿಳಿದುಬರುತ್ತದೆ.[2] ಆದರೆ ಜುಂಜಪ್ಪ ಎಂಬ ಹೆಸರಿನ ದೇವರ ಆರಾಧನೆ ಮೇಲ್ಕಾಣಿಸಿದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರದೆ ಅದು ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಪ್ರಚಲಿತವಾಗಿರುವುದು ಕಂಡು ಬರುತ್ತದೆ.

ಈಗಾಗಲೇ ನನ್ನ ಒಂದು ಲೇಖನದಲ್ಲಿ ಪ್ರಸ್ತಾಪಿಸಿರುವಂತೆ ಜುಂಜಪ್ಪ ಮೈಲಾರಲಿಂಗ ಮತ್ತು ಗಂಗಿ ಮಾಳಮ್ಮ ಇವರ ಹಿರಿಯ ಮಗ ಎಂದು ಮೈಲಾರ ದೇವರ ಸಂಪ್ರದಾಯದ ನಂಬಿಕೆಯಾಗಿದೆ.[3]ಅವನಿಗೊಬ್ಬ ತಮ್ಮ ಇರುವುದಾಗಿ ಪ್ರಸ್ತುತ ಸಂಪ್ರದಾಯದ ಕಲ್ಪನೆಯಾಗಿದ್ದು ಅವನ ಹೆಸರು ಚಿಕ್ಕಯ್ಯನೆಂದಿದೆ. ಮೈಲಾರ ದೇವರ ಸಂಪ್ರದಾಯದಲ್ಲಿ ಜುಂಜಯ್ಯನನ್ನು ಕೆಲವೊಮ್ಮೆ ದೊಡ್ಡಯ್ಯನೆಂದೂ ಕರೆಯಲಾಗುತ್ತದೆ. ಹಿರೇಮೈಲಾರ (ಹೂವಿನ ಹಡಗಲಿ ತಾಲ್ಲೂಕು) ಮತ್ತು ದೇವರಗುಡ್ಡ ರಾಣೆಬೆನ್ನೂರು ತಾಲೂಕುಗಳಲ್ಲಿ ಜುಂಜಪ್ಪನ ಪ್ರತ್ಯೇಕ ಮೂರ್ತಿಗಳಿವೆ. ಹಿರೇಮೈಲಾರದಲ್ಲಿ ಜುಂಜಪ್ಪನಿಗೆ ಹಳೆಯದು ಮತ್ತು ಹೊಸದು ಎಂದು ಕರೆಯಲಾಗುವ ಎರಡು ಚಿಕ್ಕ ಪ್ರಮಾಣದ ಪ್ರತ್ಯೇಕ ಗುಡಿಗಳಿವೆ. ದೇವರಗುಡ್ಡದಲ್ಲಿ ಮುಖ್ಯ ದೇವಾಲಯದ ಸುಕನಾಸಿಯ ಎಡಭಾಗದಲ್ಲಿ ಜುಂಜಯ್ಯನ ಸ್ಥಾನವಿದೆ. ಆದರೆ ಈಗ ಅದರಲ್ಲಿ ಗಣಪತಿಯ ಮೂರ್ತಿ ಸ್ಥಾಪಿಸಿದ್ದು ಕಂಡುಬರುತ್ತದೆ. ಈ ಗಣಪತಿಯನ್ನೇ ಅಲ್ಲಿನ ಜನರು ಜುಂಜಪ್ಪನೆಂದು ಕರೆಯುತ್ತಾರೆ. ಇದೇ ರೀತಿ ಕಾರೀಮನಿ(ಸವದತ್ತಿ ತಾಲೂಕು) ದೇವಾಲಯದಲ್ಲಿಯೂ ಚಿಕ್ಕಯ್ಯ ಮತ್ತು ಜುಂಜಯ್ಯನ ಅಸ್ಪಷ್ಟ ಆದರೆ ಪ್ರತ್ಯೇಕ ಮೂರ್ತಿಗಳಿವೆ. ಪ್ರತ್ಯೇಕ ಜಾಗವಿದ್ದರೂ ಅಲ್ಲಿ ಅವರಿಗಾಗಿ ಪ್ರತ್ಯೇಕ ಗುಡಿಗಳಿಲ್ಲ.

ಮೇಲೆ ಹೇಳಿದ ಮೈಲಾರ ದೇವಾಲಯದಲ್ಲಿನ ಮೂರ್ತಿಗಳಲ್ಲದೆ ಬೆಳಗಾವಿ ಜಿಲ್ಲೆಯ ಬೈಲ ಹೊಂಗಲ ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಜುಂಜಪ್ಪನ ಒಂದು ಸ್ವತಂತ್ರ ದೇವಾಲಯವಿದೆ. ಪ್ರಸ್ತುತ ಗ್ರಾಮ, ಸಂತೆಯ ಶೀಗೆಯಹಳ್ಳಿ ಮತ್ತು ದೇವರ ಶೀಗೆಯಹಳ್ಳಿ ಎಂದು ಎರಡು ಭಾಗಗಳಲ್ಲಿ ಹಂಚಿ ಹೋಗಿದ್ದು ಜುಂಜಪ್ಪನ ದೇವಾಲಯ ದೇವರ ಶೀಗೆಹಳ್ಳಿಯ ಭಾಗದಲ್ಲಿದೆ. ಊರಿನ ಈ ಭಾಗವೇ ಪ್ರಾಚೀನವಾಗಿದೆ. ಇದರ ಮಧ್ಯದಲ್ಲಿರುವ ಪಾಳು ದೇವಾಲಯ ಮತ್ತು ಅದರ ಸುತ್ತಲೂ ಹರಡಿರುವ ವೀರಗಲ್ಲು – ಮಾಸ್ತಿಕಲ್ಲುಗಳು ಗಮನಾರ್ಹವಾಗಿವೆ. ಪ್ರಸ್ತುತ ವಾಸ್ತುಗಳ ಪರಿಸರದಲ್ಲಿಯೇ ಜುಂಜಪ್ಪನ ಗುಡಿಯಿದೆ. ಈ ದೇವಾಲಯವೆಂದರೆ ಒಂದಂಕಣದ ಶಿಲಾಮಂಟಪ ಮಾತ್ರ. ಅದರ ಮೇಲೆ ಸಾಧಾರಣ ಮನೆಯಂತೆ ಸ್ವಲ್ಪ ವಿಸ್ತಾರವಾದ ಹಂಚಿನ ಛಾವಣಿಯಿದೆ. ಈ ಮಂಟಪವನ್ನು ನಾಲ್ಕೂ ಕಡೆಯಿಂದ ಮುಚ್ಚುವಂತೆ ಗೋಡೆ ಕಟ್ಟಲಾಗಿದ್ದು ದಕ್ಷಿಣ ಬದಿಯಲ್ಲಿ ಮಾತ್ರ ಬಾಗಿಲು ಕೂಡಿಸಲಾಗಿದೆ. ಇದರ ಒಳಗಡೆಯಿರುವ ಒಂದು ಚಿಕ್ಕ ಹುತ್ತದಲ್ಲಿ ಉದ್ಭವವಾಗಿರುವ ಶಿಲೆಯೊಂದು ಎದ್ದ ಕಾಣುತ್ತದೆ. ಈ ಶಿಲೆ ಅಥವಾ ಲಿಂಗವನ್ನೇ ಜುಂಜಪ್ಪ ಎಂದು ಕರೆಯಲಾಗುತ್ತದೆ. ಈ ಉದ್ಭವ ಮೂರ್ತಿಯ ಮುಂದುಗಡೆ ಜುಂಜಪ್ಪನ ಪಂಚಲೋಹದ ಉತ್ಸವ ಮೂರ್ತಿಯೊಂದು ಯಾವತ್ತೂ ಇಡಲ್ಪಟ್ಟಿರುತ್ತದೆ. ಈ ಪಂಚಲೋಹದ ಮೂರ್ತಿ ಅಶ್ವಾರೋಹಿಯಾದ ಮಾನವಾಕೃತಿಯಲ್ಲಿದ್ದು ಒಂದು ಕೈಯಲ್ಲಿ ಕತ್ತಿ ಮತ್ತು ಇನ್ನೊಂದರಲ್ಲಿ ಗುರಾಣಿ ಹಿಡಿದದ್ದಾಗಿದೆ. ಬದಿಯಲ್ಲಿ ಇದಕ್ಕೆ ಎರಡು ಕೊಡೆಗಳನ್ನು ಸಿಕ್ಕಿಸಲಾಗಿದೆ.[4]

ಹಿರೇಮೈಲಾರದಲ್ಲಿರುವ ಎರಡೂ ಗುಡಿಗಳಲ್ಲಿ ಶಿಲಾಪೀಠದ ಮೇಲೆ ಜುಂಜಪ್ಪನ ಶಿರಸ್ಸನ್ನು ಮಾತರ ಸ್ಥಾಪಿಸಿದ್ದು ಕಂಡುಬರುತ್ತದೆ. ಸದ್ಯ ಪೂಜೆಗೊಳ್ಳುತ್ತಿರುವ ಮೂರ್ತಿಯ ತಲೆಯ ಮೇಲೆ ಕಿರೀಟಾದಿ ಆಭರಣಗಳಿವೆ. ಹಳೆಯ ಮೂರ್ತಿಯ ತಲೆಯ ಮೇಲೆ ಕಿರೀಟಾದಿಗಳಿಲ್ಲ. ಕಾರೀಮನಿಯ ಮೂರ್ತಿ ಹಿರೇ ಮೈಲಾರದಲ್ಲಿರುವ ಹಳೆಯ ಮೂರ್ತಿ ಶಿಲ್ಪವನ್ನೇ ಹೆಚ್ಚಾಗಿ ಹೋಲುತ್ತದೆ.

ಈ ಮೊದಲು ಹೇಳಿದಂತೆ ದೇವರ ಶೀಗೆಹಳ್ಳಿಯಲ್ಲಿ ಜುಂಜಪ್ಪನ ಪ್ರತೀಕವಾಗಿ ಮಾನವಾಕಾರದ ದ್ವಿಭುಜ ಮೂರ್ತಿ ಮತ್ತು ಹುತ್ತದಲ್ಲಿರುವ ಪ್ರತೀಕಾತ್ಮಕ ಲಿಂಗವಾಗಿರುವುದನ್ನು ಇಲ್ಲಿ ಗಮನಿಸಬೇಕು. ಬೇವಿನಹಳ್ಳಿ ಮತ್ತು ಹುತ್ತದಲ್ಲಿರುವ ಪ್ರತೀಕಾತ್ಮಕ ಲಿಂಗವಾಗಿರುವುದನ್ನು ಇಲ್ಲಿ ಗಮನಿಸಬೇಕು. ಬೇವಿನಹಳ್ಳಿ ಮತ್ತು ಹಾಗಲವಾಡಿಗಳಲ್ಲಿ ಜುಂಜಪ್ಪನ ಮೂರ್ತಿ ಅಥವಾ ಲಿಂಗವಿರದೆ ಕೇವಲ ಗುಬ್ಬಗಳು ಮಾತ್ರ ಇವೆ. ಮತ್ತು ಅವುಗಳಲ್ಲಿ ಬಟ್ಟೆ ಖಡ್ಗ ಮುಂತಾದ ಪ್ರತೀಕಗಳು ಪೂಜೆಗೊಳ್ಳುತ್ತವೆ.[5] ದೇವರ ಗುಡ್ಡದಲ್ಲಿನ ಜುಂಜಪ್ಪನಲ್ಲಿ ಮಾತ್ರ ಹೆಚ್ಚಿನ ವ್ಯತ್ಯಾಸವಿದೆ. ಅಲ್ಲಿ ಜುಂಜಪ್ಪನೆಂದರೆ ಗಣಪತಿಯೆಂದು ಭಾವಿಸಿರುವುದು ಸ್ವತಂತ್ರವಾದ ಪರಿವರ್ತನೆಯಾಗಿದೆ.

ಮೈಲಾರದೇವರ ಸಂಪ್ರದಾಯ ಈಗ ಯಾವ ಒಂದು ಜಾತಿ, ಅಥವಾ ಬುಡ ಕಟ್ಟಿಗೆ ಸೀಮಿತವಾಗಿಲ್ಲ. ಬ್ರಾಹ್ಮಣರಾದಿಯಾಗಿ ಅಂತ್ಯಜ ಕಡೆಯಾಗಿ ಎಲ್ಲರೂ ಆ ದೇವರ ಒಕ್ಕಲಗಳೆಂದು ನಡೆದುಕೊಳ್ಳುತ್ತಾರೆ. ಆದರೂ ಆ ಸಂಪ್ರದಾಯದಲ್ಲಿ ಕುರುಬ, ಗೌಳಿ-ಗೊಲ್ಲ, ಬೇಡ ಮತ್ತು ಬೆಸ್ತ ಜನಾಂಗಗಳು ತಮ್ಮನ್ನು ವಿಶೇಷವಾಗಿ ತೊಡಗಿಸಿಕೊಂಡಿವೆ. ದೇವರ ಶೀಗೆಯ ಹಳ್ಳಿಯಲ್ಲಿ ಪೂಜಾರಿಗಳು ಬೇಡರಾಗಿದ್ದು ದೇವಾಲಯದ ಒಳಅಂಕಣದಲ್ಲಿ ಅವರು ಮಾತ್ರ, ಹೋಗುತ್ತಾರೆ. ಹೆಂಗಸರು ಒಳಭಾಗದಲ್ಲಿ ಪ್ರವೇಶಿಸುವಂತಿಲ್ಲ. ಇತರ ಜಾತಿಯವರು ತಮ್ಮ ಸೇವೆಯನ್ನು ಹೊರಗಿನಿಂದಲೇ ಪೂರೈಸುತ್ತಾರೆ. ಅಲ್ಲಿ ಪ್ರತ್ಯೇಕವಾದ ಆಚರಣೆಗಳು ಯಾವವೂ ಕಂಡುಬರುವುದಿಲ್ಲ. ದಸರೆಯೆಂದು ದೇವರು ಪಲ್ಲಕ್ಕಿಯಲ್ಲಿ ಕುಳಿತು ಮಲಪ್ರಭಾ ನದಿಗೆ ಹೋಗಿ ಸ್ನಾನ ಮಾಡಿ ಬರುತ್ತಾನೆ. ಇತರ ದೇವರುಗಳಂತೆ ಜುಂಜಪ್ಪ ಕೂಡ ಅಂದು ಬನ್ನಿ ಮುಡಿಯುತ್ತಾನೆ. ಇನ್ನುಳಿದಂತೆ ಯಾವಾಗ ಬೇಕಾದಾಗ ಅವನಿಗೆ ಪಲ್ಲಕ್ಕಿ ಸೇವೆ ನಡೆಸಬಹುದು. ದೇವರಿಗೆ ಹೂರಣದ ಅಡಿಗೆ ಸಲ್ಲುತ್ತದೆ. ಊರ ಜನ ತಮ್ಮ ಮನೆಗಳಲ್ಲಿ ಯಾವುದೇ ಮಂಗಲ ಕಾರ್ಯ ನಡೆಯುವುದಿದ್ದರೆ ಜುಂಜಪ್ಪನಿಗೆ ಮೊದಲು ಪೂಜೆ ಸಲ್ಲಿಸುತ್ತಾರೆ. ದೇವಾಲಯದ ಸುತ್ತಮುತ್ತ ಕಟ್ಟಿನಿಟ್ಟಾದ ಮಡಿಯನ್ನು ಪಾಲಿಸಬೇಕಾಗುತ್ತದೆ. ಇಷ್ಟನ್ನು ಬಿಟ್ಟರೆ ಹೆಚ್ಚಿನ ಆರಾಧನೆ – ಆಚರಣೆಗಳು ಕಂಡುಬರುವುದಿಲ್ಲ. ಈ ದೇವಸ್ಥಾನಕ್ಕೆ ಸಂಬಂಧಪಟ್ಟ ಸು.೧೦೦ ಎಕರೆಗಳಷ್ಟು ಉಂಬಳಿಯಿದ್ದು ಅದು ಈಗಲೂ ಊರ್ಜಿತದಲ್ಲಿದೆ.

ಮೈಲಾರ ದೇವರ ಸಂಪ್ರದಾಯದಲ್ಲಿಜುಂಜಪ್ಪ ಒಬ್ಬ ಉಪದೇವತೆ. ಆದ್ದರಿಂದ ಮೈಲಾಲಿಂಗನ ಭಕ್ತರು ಜುಂಜಪ್ಪನಿಗೆ ಹೆಚ್ಚಿನ ಪ್ರಾಧಾನ್ಯವೀಯದಿರುವುದು ಸ್ವಾಭಾವಿಕ. ಮೈಲಾರದೇವರ ಶಿಷ್ಯ ಅಥವಾ ಜಾನಪದ ಪುರಾಣದಲ್ಲಿ ಕೂಡ ಈತನಿಗೆ ಅಂಥ ಮಹತ್ವದ ಪಾತ್ರವೇನೂ ಇಲ್ಲ. ಆ ದೇವರ ಸಂಸ್ಕೃತ ಪುರಾಣ ‘ಮೈಲಾರಿ’ ಯಲ್ಲಿ ಶಿವನ ಜೊತೆಗೆ ಷಣ್ಮುಖ ಮತ್ತು ಗಣಪತಿಯರು ಯುದ್ಧಕ್ಕೆ ಹೋಗಿ ರಾಕ್ಷಸ ಸಹೋದರರೊಂದಿಗೆ ಹೋರಾಡಿದರೆಂದು ಹೇಳಿದೆಯಷ್ಟೇ. ಆದರೆ ಅವನಿಗೇ ವಿಶಿಷ್ಟವಾದ ಆರಾಧನಾ ವಿಧಿಯೊಂದು ಪ್ರತ್ಯೇಕ ಆಚರಣೆಯಲ್ಲಿದೆ. ತಮ್ಮ ಮನೆಗಳಲ್ಲಿ ಲಗ್ನ ಮುಂತಾದ ವಿಶೇಷ ಸಂದರ್ಭಗಳಿದ್ದಾಗ ಚಿಕ್ಕಯ್ಯ-ಜುಂಜಯ್ಯರ ಆರಾಧನೆ ಕೈಕೊಳ್ಳುವುದು ಮೈಲಾರದೇವರ ಭಕ್ತರ ಸಮುದಾಯದಲ್ಲಿ ಪ್ರಚಲಿತವಾಗಿದೆ. ಕೆಲವೊಮ್ಮೆ ವಿಶೇಷ ಕಷ್ಟವೊದಗಿದಾಗ ಈ ಪೂಜೆ ಮಾಡುವುದಾಗಿ ಹರಕೆ ಹೊರುತ್ತಾರೆ. ಅದು ಕೈಗೂಡಿದರೂ ಆ ಆರಾಧನೆ ಕೈಕೊಳ್ಳುತ್ತಾರೆ. ಇದನ್ನು “ಚಿಕ್ಕಯ್ಯ-ಜುಂಜಯ್ಯರಿಗೆ ಮಾಡುವುದು” ಎಂದು ಕರೆಯಲಾಗುತ್ತದೆ. ಇದು ಎರಡು ದಿನಗಳ ಕಾರ್ಯಕ್ರಮ. ಮೊದಲ ದಿನದ ಪೂಜೆ ಚಿಕ್ಕಯ್ಯನ ಹೆಸರಿನಿಂದ ನಡೆದರೆ ಎರಡನೆಯ ದಿನದ್ದು ಜುಂಜಯ್ಯನದು. ನೈವೇದ್ಯದಲ್ಲಿ ಮೊಸರನ್ನ, ಹೂರಣ ಗಡಬು, ಮಂಗರೊಳ್ಳಿ ಚಟ್ಣಿ, ಹಸಿರು ಉಳ್ಳೇಗಡ್ಡಿ, ಬಳ್ಳೊಳ್ಳಿ, ಬದನೆಯ ಕಾಯಿ ಮತ್ತು ಉಪ್ಪು ಈ ಪದಾರ್ಥಗಳು ಪ್ರಧಾನವಾಗಿರುತ್ತವೆ. ಚಿಕ್ಕಯ್ಯ-ಜುಂಜಯ್ಯರ-ಎಂದರೆ-ಷಣ್ಮುಖ-ಗಣಪತಿಯರ ಮೂರ್ತಿಗಳನ್ನು, ಜತೆಗೆ ಮೈಲಾರದೇವರ ಮೂರ್ತಿ ಮತ್ತು ಶಿವಲಿಂಗಗಳನ್ನು ಪೂಜಿಸಲಾಗುತ್ತದೆ. ಇದು ಶಾಕಾಹಾರಿಗಳ ವಿಧಾನ. ಮಾಂಸಾಹಾರಿಗಳು ಮಾತ್ರ ಚಿಕ್ಕಯ್ಯ-ಜುಂಜಯ್ಯರ ಪ್ರತ್ಯೇಕ ಪ್ರತೀಕಗಳನ್ನು ನಿರ್ಮಿಸಿ ಪೂಜಿಸುತ್ತಾರೆ. ಎರಡು ಮಣ್ಣಿನ ಹೊಸ ಕೊಡಗಳನ್ನಾಗಲೀ ಕಬ್ಬಿನ ಗಳುಗಳನ್ನಾಗಲೀ ನಿಲ್ಲಿಸಿ ಅವುಗಳಿಗೆ ಬಟ್ಟೆ-ಬರೆ, ಆಭರಣ ಮತ್ತು ಇತರ ಅಲಂಕಾರಗಳಿಂದ ಮಾನವಾಕಾರ ಕೊಟ್ಟು ಪೂಜಿಸುತ್ತಾರೆ. ಮೈಲಾರದೇವರ ಮೂರ್ತಿಗೆ ಪ್ರತ್ಯೇಕವಾಗಿ ಮಂಗರೊಳ್ಳಿಚಟ್ನಿ,[6] ‘ಮೊಸರನ್ನ, ಸಿಹಿಯನ್ನು, ಹೂರಣಗಡಬು. ಮುಂತಾದ ನೈವೇದ್ಯ ಅರ್ಪಿಸಿದರೆ ಚಿಕ್ಕಯ್ಯ-ಜುಂಜಯ್ಯರಿಗೆ ಸ್ವಲ್ಪ ರೂಪದಲ್ಲಿ ಎರಡು ಟಗರುಗಳ ಬಲಿ ಅರ್ಪಿಸುತ್ತಾರೆ. ರಾತ್ರಿಯಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಮತ್ತು ಮರುದಿನ ಹಗಲಿನಲ್ಲಿ ಗೊರವ-ಗೊರವಿಯರ ಮೈಲಾರಲಿಂಗನ ಪದಗಳನ್ನು ಹಾಡುವುದು, ಗೊರವಟಿಗೆ ಯಾಡುವುದು, ಜಗಳದ ಸೇವೆ, ಕುದುರೆ ಕುಣಿತ, ಪವಾಡ, ಕಾಯ್-ಕೋಲು, ದೀವಟಿಗೆ ಸೇವೆ – ಮುಂತಾದ ಕಾರ್ಯಕ್ರಮಗಳನ್ನು ಜರುಗಿಸುತ್ತಾರೆ.

ದಕ್ಷಿಣ ಕರ್ನಾಟಕದಲ್ಲಿ ಹಾವು, ಚೇಳು, ಮಂಡರಗಪ್ಪೆಗಳು ಕಚ್ಚುವುದಕ್ಕೆ ನಿದಾನವಾಗಿ ಜುಂಜಪ್ಪನಿಗೆ ಹರಕೆ ಹೊರುವುದು.[7] ಕಾಣಿಕೆ ಸಲ್ಲಿಸುವುದು, ಎಂದರೆ ಹಾವು-ಚೇಳುಗಳು ಅವನ ಪ್ರತೀಕಗಳೆಂದು ಭಾವಿಸುವುದು, ಅವನಿಗಾಗಿ ಪ್ರತ್ಯೇಕ ಜಾತ್ರೆ ನೆರವೇರಿಸುವುದು ಇತ್ಯಾದಿ ಕಂಡು ಬರುತ್ತವೆ. ಜೊತೆಗೆ ಅವನಿಗೆ ಪ್ರತ್ಯೇಕವಾದ ಜಾನಪದ ಪುರಾಣವಿರುವುದು ಕಂಡುಬರುತ್ತದೆ. ಇವೆಲ್ಲ ಉತ್ತರದಲ್ಲಿ ಇಲ್ಲ.

ಒಟ್ಟಿನಲ್ಲಿ ದಕ್ಷಿಣದಲ್ಲಿರುವ ಜುಂಜಪ್ಪನ ಸಂಪ್ರದಾಯಕ್ಕೂ ಉತ್ತರದ ಸಂಪ್ರದಾಯಕ್ಕೂ ವ್ಯತ್ಯಾಸಗಳಿರುವುದನ್ನು ಗಮನಿಸಬಹುದಾಗಿದೆ. ದಕ್ಷಿಣದಲ್ಲಿ ಜುಂಜಪ್ಪನ ಪೂಜಾಸ್ಥಳಗಳಿದ್ದರೂ ಅಲ್ಲೆಲ್ಲಿಯೂ ಅವನಿಗಾಗಿ ಕಟ್ಟಿಸಿದ ದೇವಾಲಯ ಅಥವಾ ಮೂರ್ತಿಗಳು ಈಗ ಕಂಡು ಬರುವುದಿಲ್ಲ ಉತ್ತರದಲ್ಲಿ ಪ್ರತ್ಯೇಕ ಮೂರ್ತಿಗಳೂ ದೇವಾಲಯಗಳೂ ಇವೆ. ದಕ್ಷಿಣದಲ್ಲಿ ಆತನನ್ನು ಹುತ್ತಿನಲ್ಲಿರುವ ಲಿಂಗರೂಪದಲ್ಲಿ ಕಲ್ಪಿಸಲೂ ಶಕ್ಯವಿಲ್ಲ. ದೇವರಶೀಗೆಹಳ್ಳಿಯಲ್ಲಿ ಅಂಥ ಒಂದು ಪ್ರತೀಕವಿದೆ. ಕಾಡುಗೊಲ್ಲರಲ್ಲಿ ಜುಂಜಪ್ಪನೊಂದಿಗೆ ಹುತ್ತಿನ ಸಂಪರ್ಕ ಕಲ್ಪಿಸುವ ಕಥೆ ಪ್ರಚಲಿತವಿದೆ. ಚೇಳೂರ ರಂಗವನ್ನು ಸೋಲಿಸುವ ಪ್ರಸಂಗದಲ್ಲಿ ಜುಂಜಪ್ಪ ತಾಯಿಯ ಮೇಲೆ ಕೋಪಗೊಂಡು ಮಲಗಿದಾಗ ಅವನ ಮೇಲೆ ಮೂರಾಳುದ್ದ ಮೂಗುಹುತ್ತ ಬೆಳೆಯಿತು.[8]ಈಗಲೂ ಜಾತ್ರೆಯಲ್ಲಿ ಕಾಡುಗೊಲ್ಲರು ಹುತ್ತವನ್ನು ಪೂಜಿಸುವ ಪರಿಪಾಠವಿದೆ.[9]

ಮಂಡ್ಯಜಿಲ್ಲೆಯ ನಾಗಮಂಗಲ ತಾಲೂಕಿನ ಪ್ರಸಿದ್ಧಕ್ಷೇತ್ರ ಆದಿ ಚುಂಚನಗಿರಿಯಲ್ಲಿರುವ ಭೈರವ ಹುತ್ತಿನಲ್ಲಿಯೇ ಇದ್ದಾನೆಂದು ಜಾನಪದರು ನಂಬುತ್ತಾರೆ.[10] ಭೈರವರೂಪಿ ಶಿವನು ಚುಂಚನೆಂಬ ರಾಕ್ಷಸನನ್ನು ಅಲ್ಲಿ ನಿಗ್ರಹಿಸಿದನೆಂದು ಹೇಳಲಾಗುವ ಸ್ಥಳ ಪುರಾಣ ಈಗೇನೋ ಅಲ್ಲಿ ಪ್ರಚಲಿತವಾಗಿದೆ. ಚುಂಚನ ಕಟ್ಟೆ ಎಂಬ ಇನ್ನೊಂದು ಕ್ಷೇತ್ರ ಮೈಸೂರು ಜಿಲ್ಲೆಯಲ್ಲಿದೆ. ಚುಂಚನೂರು ಎಂಬ ಗ್ರಾಮ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿದೆ. ಇಲ್ಲೆಲ್ಲ ಇರುವ ಚುಂಚ ಎಂಬ ಶಬ್ದ ಜುಂಜು ಎಂಬುದರ ಬೇರೊಂದು ರೂಪವೆಂಬುದು ಸ್ಪಷ್ಟ. ಆದ್ದರಿಂದ ಆದಿಚುಂಚನಗಿರಿ ಮುಂಚೆ ಜುಂಜಪ್ಪ ಅಥವಾ ಚುಂಚನ ಕ್ಷೇತ್ರವೇ ಆಗಿರಬೇಕು. ಹುತ್ತಿನಲ್ಲಿರುವ ಲಿಂಗದ ಪೂಜೆ ಈ ಕ್ಷೇತ್ರದಲ್ಲಿ ಈಗ ಇದೆಯೋ ಇಲ್ಲವೋ ನಮಗೆ ತಿಳಿಯದು. ಆದರೆ –

ವುತ್ತದ ಭೈರುವನ ಸತ್ಯ ನೋಡೋಣ ಬನ್ನಿ
ಉತ್ತಮರ ಮನೆಯ ಅಸುಬಂದು | ಬೈರುವನ
ವುತ್ತಕ್ಕೆ ಆಲ ಕರೆದಾವು ||[11]

ಎಂದಿರುವ ಜಾನಪದ ಪದ್ಯ ಅಲ್ಲಿನ ದೇವರು ಮುಂಚೆ ಹುತ್ತಿನಲ್ಲಿಯೇ ಇದ್ದನೆಂದು ಹೇಳುತ್ತದೆ.

ಹುತ್ತಿನಲ್ಲಿರುವ ಲಿಂಗ ಅಥವಾ ಸ್ವಯಂಭೂಶಿಲೆ, ದೇವರೆಂದು ಪೂಜೆಗೊಳುವ ಮೇಲಿನ ಉದಾಹರಣೆಗಳಲ್ಲದೆ, ಇನ್ನೂ ಕೆಲವಡೆಗಳಲ್ಲಿರುವುದನ್ನು ಕಾಣುತ್ತೇವೆ. ಹಿರೇಮೈಲಾರ, ದೇವರ ಗುಡ್ಡ ಮತ್ತು ಕಾರೀಮನಿಗಳಲ್ಲಿ ದೇವರು ಹುತ್ತಿನ ಒಳಗಡೆ ಸ್ವಯಂಭೂ ಲಿಂಗ ರೂಪದಲ್ಲಿ ಅವತರಿಸದನೆಂಬ ನಂಬಿಕೆ ಪರಂಪರೆಯಿಂದ ನಡೆದು ಬಂದಿದೆ. ಹಿರೇಮೈಲಾರದಲ್ಲಿ ಸದ್ಯ ಇರುವ ಮಣ್ಣಿನ ಮೂರ್ತಿ ಶಿವಲಿಂಗದ ಮೇಲಿದ್ದ ಹುತ್ತಿನಿಂದಲೇ ಮಾಡಿದ್ದೆಂದು ಹೇಳಲಾಗುತ್ತದೆ. ಕುಕ್ಕೆಯಲ್ಲಿರುವ ಸುಬ್ರಹ್ಮಣ್ಯ ಹುತ್ತಿನಲ್ಲಿರುವ ಲಿಂಗರೂಪಿಯೇ. ನಂಬಿಯಣ್ಣನು ತಿರುವಾರಿವೂನಲ್ಲಿದ್ದ ಹುತ್ತಿನೊಳಗಿದ್ದ ಲಿಂಗರೂಪಿ ಶಿವನನ್ನು ಪೂಜಿಸಿದನೆಂದು ಪೆರಿಯ ಪುರಾಣ ಹೇಳುತ್ತದೆ.[12]

ಮೇಲಿನ ಉದಾಹರಣೆಗಳಲ್ಲಿ ಸುಬ್ರಹ್ಮಣ್ಯ ಅಥವಾ ಸ್ಕಂದಶಿವ, ಜಾನಪದ ದೇವರು ಜುಂಜಪ್ಪ, ಶಿವನೆಂದೇ ತಿಳಿಯಲಾಗುವ ಮೈಲಾರದೇವರು ಮತ್ತು ಆದಿ ಚುಂಚನಗಿರಿಯ ಭೈರವ ಈ ಮೊದಲಾದ ಶೈವ ಪರಂಪರೆಯ ದೇವರುಗಳು ಹುತ್ತಿನಲ್ಲಿನ ಲಿಂಗರೂಪದ ಪೂಜೆ ನಡೆಯುತ್ತಿದ್ದುದನ್ನು ಸ್ಪಷ್ಟಪಡಿಸುತ್ತವೆ. ಇಲ್ಲಿ ಇಂಥವೆ ಇನ್ನೂ ಕೆಲವು ಉದಾಹರಣೆಗಳನ್ನು ಈ ಮಾಲಿಕೆಗೆ ಸೇರಿಸಬಹುದು. ತಿರುಪತಿಯ ತಿಮ್ಮಪ್ಪ ಮೂಲತಃ ಹುತ್ತಿನಲ್ಲಿಯೇ ಇದ್ದನೆಂದು ಅಲ್ಲಿನ ಸ್ಥಳ ಪುರಾಣ ಹೇಳುತ್ತದೆ.[13] ಕೃಷ್ಣರಾಜ ಪೇಟೆಯ ತಾಲೂಕಿನ ಸಂತೆಬಾಚನಹಳ್ಳಿಯ ಸಮೀಪ ಚಿಕ್ಕಕೆರೆ ಎಂದು ಹೇಳಲಾಗುವ ಕೆರೆಯ ಮಗ್ಗಲಲ್ಲಿ ‘ಒಳಗೆರೆ ದೇವಮ್ಮ’ ಎಂಬ ದೇವಿಯ ಮೂರ್ತಿ ನೆಲದಲ್ಲಿ ಇಳಿದು ಹೋಗಿ ಆ ಸ್ಥಳದಲ್ಲಿ ಹುತ್ತ ಕಾಣಿಸಿಕೊಂಡಿತೆಂದು ಅಲ್ಲಿನ ಐತಿಹ್ಯ ಹೇಳುತ್ತದೆ.[14] ಈ ಐತಿಹ್ಯ ವಾಸ್ತವ ಸಂಗತಿಯನ್ನು ತಿರುವು ಮುರುವು ಮಾಡಿದೆ. ಮೂಲತಃ ಆ ದೇವಾಲಯದಲ್ಲಿ ದೇವಿಯ ಪ್ರತೀಕವಾಗಿ ಹುತ್ತ ಅಥವಾ ಹುತ್ತಿನೊಳಗಿದ್ದ ಲಿಂಗವೇ ಪೂಜೆಗೊಳ್ಳುತ್ತಿತ್ತೆಂದು ಊಹಿಸಬಹುದಾಗಿದೆ.

ಹೀಗೆ ಹಿಂದೂ ಶಿಷ್ಟ ದೇವರುಗಳಾದ ಶಿವ, ಸ್ಕಂದ, ಭೈರವ, ವಿಷ್ಣು ಇವರೆಲ್ಲ ಹುತ್ತಿನಲ್ಲಿನ ಲಿಂಗರೂಪದಲ್ಲಿ ಪೂಜೆಗೊಳ್ಳುತ್ತಿದ್ದರೆಂದು ಹೇಳಬೇಕಾಗಿದೆ. ಅದೇ ರೀತಿ ಜಾನಪದ ದೇವರಾದ ಜಂಪಪ್ಪ, ಮೈಲಾರಲಿಂಗ, ದೇವಿ ಅಥವಾ ಶಕ್ತಿಯರು ಈ ಸ್ವರೂಪದಲ್ಲಿಯೇ ಪೂಜೆಗೊಳ್ಳುತ್ತಿದ್ದರೆಂದು ತಿಳಿಯುವಲ್ಲಿ ಯಾವ ಬಾಧಕವೂ ಕಂಡು ಬರುವುದಿಲ್ಲ.

ಹುತ್ತ ಅಥವಾ ಸರ್ಪವನ್ನು ನಾಗರಪಂಚಮಿಯಲ್ಲಿ ಪೂಜಿಸುವ ರೂಢಿ ಪ್ರಸಿದ್ದವೇ. ಜುಂಜಪ್ಪ ಕೂಡ ಸರ್ಪರೂಪಿ ಎಂದೇ ಭಾವಿಸಲಾಗುತ್ತದೆ. ಅವನ ಪ್ರತೀಕವಾಗಿ ಹಿತ್ತಾಳೆಯ ಸರ್ಪವನ್ನು ಹೊತ್ತು ಅಡ್ಡಾಡುವ ಕಾಡುಗೊಲ್ಲರು ಉಂಟು. ಸುಬ್ರಹ್ಮಣ್ಯನ ಇನ್ನೊಂದು ಪ್ರತೀಕ ಸರ್ಪವೇ ಎಂಬುದು ಕುಕ್ಕೆಯಲ್ಲಿನ ಸ್ಥಳ ಪುರಾಣ, ನಂಬಿಕೆ ಮತ್ತು ಆಚರಣೆಗಳಿಂದ ವ್ಯಕ್ತವಾಗುತ್ತದೆ. ಕಾಡುಗೊಲ್ಲರ ಜುಂಜಪ್ಪ ವಿಷನಿವಾರಕರ ದೇವರೆಂಬುದನ್ನು ಈಗಾಗಲೇ ನೋಡಿದ್ದೇವೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಜುಂಜಪ್ಪ ಕೇವಲ ದಕ್ಷಿಣ ಕರ್ನಾಟ    ಕಕ್ಕೆ ಸೀಮಿತವಾಗಿಲ್ಲ. ಆತನ ಪ್ರತೀಕ ಹಾವು ಮಾತ್ರವಾಗಿರದೆ ಹುತ್ತದಲ್ಲಿನ ಲಿಂಗವೂ ಅವನನ್ನು ಪ್ರತಿನಿಧಿಸುತ್ತದೆ. ಕೇವಲ ಕಾಡುಗೊಲ್ಲರಿಗಷ್ಟೇ ಅವನು ದೇವರಲ್ಲ. ಇತರರಲ್ಲೂ ಅವನ ಪೂಜೆ ಒಂದು ಕಾಲಕ್ಕೆ ವ್ಯಾಪಕವಾಗಿ ಇತ್ತು. ಆದ್ದರಿಂದ ಕಾಡುಗೊಲ್ಲರ ಸಾಂಸ್ಕೃತಿಕ ವೀರನೆಂದು ನಿರ್ಧರಿಸಿ ಬಿಡುವುದು ಅವೈಜ್ಞಾನಿಕವೆನಿಸುತ್ತದೆ. ಶಿಷ್ಟರ ದೇವರಾದ ಸುಬ್ರಹ್ಮಣ್ಯ ಅಥವಾ ಸ್ಕಂದ ಆತನ ತೀರ ಹತ್ತಿರದ ಸಂಬಂಧಿ. ಅಥವಾ ಅವನ ಅಪರಾವತಾರ, ಆದಿಚುಂಚನಗಿರಿ ಮತ್ತು ಚುಂಚನ ಕೋಟೆಗಳು ಒಂದು ಕಾಲದಲ್ಲಿ ಜುಂಜಪ್ಪನ ಕ್ಷೇತ್ರಗಳಾಗಿರುವ ಸಂಭವನೀಯತೆ ತುಂಬ ಇದೆ.

ಕ್ರಿ.ಶ. ೧೧ನೆಯ ಶತಮಾನದ ಒಂದು ಶಾಸನದಲ್ಲಿ ಜುಂಜಲದೇವಿ ಎಂಬ ವ್ಯಕ್ತಿಯ ಹೆಸರಿದೆ.[15] ಇಲ್ಲಿ ಜುಂಜ ಎಂಬುದು ವ್ಯಕ್ತಿವಾಚಕವಿದ್ದು ಅದಕ್ಕೆ – ಸ್ವಾರ್ಥದ ‘ಲ’ ಪ್ರತ್ಯಯ ಸೇರಿದೆ. ಚುಂಚನಹಳ್ಳಿ ಎಂಬ ಊರಿನ ಉಲ್ಲೇಖ ಕ್ರಿ.ಶ.೧೨೦೫ನೆಯ ವರ್ಷದ ಶಾಸನದಲ್ಲಿದೆ. ಸು. ಹತ್ತನೆಯ ಶತಮಾನದ ಶಾಸನದಲ್ಲಿಯೇ ಚುಂಚನಗಿರಿಗೆ ಚುಂಚನ ಕೋಟೆ ಎಂದು ಹೆಸರಿದ್ದ ಉಲ್ಲೇಖವಿದೆಯೆಂತೆ.[16] ಜುಂಜುವೀರಭದ್ರೇಶ್ವರ ಎಂಬ ಹೆಸರಿನ ಶರಣನೊಬ್ಬ ಇದ್ದನೆಂದು ಲಕ್ಕಣ್ಣ ದಂಡೇಶ ತಿಳಿಸುತ್ತಾರೆ.[17] ಹದಿನೆಂಟನೆಯ ಶತಮಾನವೆಂದು ಗ್ರಹಿಸಲಾದ ಎರಡು ತಾಮ್ರ ಶಾಸನಗಳಲ್ಲಿ ಚುಂಚೇಗೌಡ ಮತ್ತು ಜುಂಜೇಗೌಡ ಎಂಬ ವ್ಯಕ್ತಿ ವಾಚಕ ಕಂಡು ಬರುತ್ತದೆ.[18] ಇವೆರಡು ಶಾಸನಗಳು ಒಂದೇ ಮೂಲ ಮತ್ತು ಒಂದೇ ಕಾಲದವಾಗಿದ್ದು ಇವುಗಳಲ್ಲಿನ ಪ್ರಸ್ತುತ ವ್ಯಕ್ತಿ ಕೂಡ ಒಬ್ಬನೇ. ಆದ್ದರಿಂದ ಚುಂಚ ಮತ್ತು ಜುಂಜ ಶಬ್ದಗಳು ಪರ್ಯಾಯ ರೂಪಗಳೆಂದು ತಿಳಿಯಲಡ್ಡಿಯಿಲ್ಲ.

ಚುಂಚ ಅಥವಾ ಜುಂಜ ಎಂದರೆ ಚಿಕ್ಕ,ಕಿರಿಯ ಎಂಬ ಅರ್ಥವಿರುವುದನ್ನು ಕಿಟ್ಟೆಲ್ ಕೋಶದಿಂದ ಅರಿಯಬಹುದಾಗಿದೆ.

 

[1]ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು. ಪುಟ- ೧೯. ಮುಂ.

[2]ತೀ.ನಂ ಶಂಕರನಾರಾಯಣ-ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು. ಪು-೩೩

[3]ಮೈಲಾರಲಿಂಗ ಮತ್ತು ಪರಿವಾರದೇವತೆಗಳು ಪು.೧೧೪

[4]ಜುಂಜಪ್ಪನ ಇನ್ನೊಂದು ಮೂರ್ತಿ ಕೊಪ್ಪಳ ತಾಲೂಕಿನ ವದ್ನಾಳ ಗ್ರಾಮದಲ್ಲಿರುವುದಾಗಿ ತಿಳಿದು ಬಂದಿದೆ.

[5]ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು. ಪು-೧೩೦

[6]ಇದು ಒಂದು ರೀತಿಯಬಳ್ಳಿ. ಇದರ ಎಲೆಗಳು ಹುಳಿಯಾಗಿರುತ್ತವೆ. ಖಗೇಂದ್ರಮಣಿ ದರ್ಪಣಿದಲ್ಲಿ ‘ಮಂಗರವಳ್ಳಿ’ ಎಂಬ ಸಸ್ಯದ ಹೆಸರಿದೆ. ಪ್ರಸ್ತುತ ಬಳ್ಳಿಯೇ ಮಂಗರೊಳ್ಳಿ.

[7]ಡಾ || ಜೀ.ಶಂ.ಪರಮಶಿವಯ್ಯ-ಮೇದರಕಲ್ಲು. ಪು. ೭೩-೭೪.

[8]ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು. ಪು-೭೧

[9]ಅದೇ-ಪು-೧೨೧

[10]ಆದಿ ಚುಂಚನಗಿರಿ. ಪುಟ-೧೩

[11]ಅದೇ-

[12]ಪೆರಿಯ ಪುರಾಣ ಸಂ, ೧ ಪುಟ-೧೩೭

[13]ತಿರುಪತಿ ತಿಮ್ಮಪ್ಪ. (ಪ್ರೊ.ಎಸ್.ರಾಮಚಂದ್ರರಾವ್)

[14]ಜಾನಪದ ಜಗತ್ತು. ಸಂಪುಟ-೩-ಸಂಚಿಕೆ. ೩-೪ಪು-೨೯-೩೧

[15] E.C.I. ಯಡತೊರೆ-೬೨ (೫೭) ೨೧ನೆಯ ಸಾಲು. ೩೩-೩೪.

[16]ಆದಿಚುಂಚನಗಿರಿ-ಪುಟ-೧೦

[17]ಶಿವತತ್ವ ಚಿಂತಾಮಣಿ, ಪುಟ-೪೨೭. ಪದ್ಯ ೧೯೧

[18]ಡಾ.ಎಂ.ಎಂ.ಕಲಬುರ್ಗಿ, ಶಾಸನಗಳಲ್ಲಿ ಶಿವಶರಣರು, ಪು.೧೩೫-೧೩೮.