‘ಜಾನಪದ ದೇವರು ಜುಂಜಪ್ಪ’ ‘ಮೈಲಾರಲಿಂಗ ಮತ್ತು ಪರಿವಾರ ದೇವತೆಗಳು’ ಮೊದಲಾದ ಲೇಖನಗಳಲ್ಲಿ ಜುಂಜಪ್ಪನ ನಾಲ್ಕು ಕ್ಷೇತ್ರಗಳು ಉತ್ತರ ಕರ್ನಾಟಕದಲ್ಲಿರುವುದನ್ನು ನಾನು ಈಗಾಗಲೇ ವಿದ್ವಾಂಸರ ಗಮನಕ್ಕೆ ತಂದಿದ್ದೇನೆ. ಜುಂಜಪ್ಪ ಕಾಡುಗೊಲ್ಲರಿಗಷ್ಟೇಮೀಸಲಾದ ದೇವರಾಗಿರದೆ ಕುರುಬ, ಬೇಡ ಮೊದಲಾದ ಜನಾಂಗಗಳವರೂ ಅವನನ್ನು ಆರಾಧಿಸುವುದಿದೆ. ಹಿರೇಮೈಲಾರ, ದೇವರಗುಡ್ಡ (ರಾಣೇಬೆನ್ನೂರು) ಕಾರೀಮನಿ, ದೇವರ ಶೀಗೆಹಳ್ಳಿ (ಬೈಲಹೊಂಗಲ ತಾ.) ದೇವಾಲಯಗಳಲ್ಲಿ ಪ್ರಚಲಿತವಿರುವ ಮೂರ್ತಿ ಐತಿಹ್ಯ, ಪುರಾಣ, ಆಚರಣೆಗಳ ಮೂಲಕ ಇದನ್ನು ಮನಗಾಣಬಹುದು.

ಇದೀಗ ಆತನ ಇನ್ನೊಂದು ದೇವಾಲಯ ಗೋಕಾಕ ತಾಲೂಕಿನ ‘ಬಗರನಾಳ’ ಗ್ರಾಮದಲ್ಲಿರುವುದು ಕಂಡು ಬಂದಿದೆ. ದಿ. ಬೆಟಗೇರಿ ಕೃಷ್ಣಶರ್ಮರ ಊರು ಬೆಟಗೇರಿಯಿಂದ ಪೂರ್ವಕ್ಕೆ ಸು. ೬ ಕಿ.ಮೀ.ಕಾಲುದಾರಿಯಲ್ಲಿ ಹೋದರೆ ಬಗರನಾಳ ಗ್ರಾಮ ಸಿಕ್ಕುತ್ತದೆ. ಊರ ಪಶ್ಚಿಮ ಬದಿಯಲ್ಲಿ ಹಳ್ಳವೊಂದು ಹರಿದಿದ್ದು ಇದರ ಬಲಬದಿ (ಪಶ್ಚಿಮ) ಯಲ್ಲಿ ಪ್ರಾಚೀನ ಕಾಲದ ಒಂದೊಂದು ಅಂಕಣದ ಶಿಲಾದೇವಾಲಯಗಳಿವೆ. ಹಾಳಾದ ದೊಡ್ಡ ದೇವಾಲಯವೊಂದು ಮೊದಲು ಈ ಪರಿಸರದಲ್ಲಿದ್ದ ಹಾಗೆ ಕಾಣುತ್ತದೆ. ಈಗಲೂ ಈ ಪರಿಸರದಲ್ಲಿ ಶಿವಲಿಂಗವೊಂದಿದೆ.

ಈ ಪ್ರದೇಶದಿಂದ ಮುಂದುವರಿದು ಹಳ್ಳದಾಟಿ ಕಾಲುದಾರಿಯ ಮೂಲಕ ಊರಲ್ಲಿ ಪ್ರವೇಶಿಸಿದರೆ ದಾರಿಯ ಬಲಬದಿ, ಪೂರ್ವಾಭಿಮುಖವಾದ ದೊಡ್ಡದೊಂದು ಗದ್ದಿಗೆ ಸಿಗುತ್ತದೆ. ಇದರ ಮೇಲೆ ಯಾವುದೇ ಛಾವಣಿ ಅಥವಾ ಸೂರು ಇಲ್ಲ. ಗದ್ದಿಗೆಗೆ ಸುತ್ತ ಎತ್ತವಾದ ಕಟ್ಟೆಯಿದ್ದು ಆಕಾಶಕ್ಕೆ ತೆರೆದುಕೊಂಡಂತೆ ದೇವರ ಸ್ಥಾನವಿದೆ. ಇದರ ಮಧ್ಯದಲ್ಲಿ ಒಂದೆರಡು ಕಲ್ಲು ಗುಂಡುಗಳಿದ್ದು ಅದರಲ್ಲಿನ ಒಂದು ದೊಡ್ಡ ಗುಂಡನ್ನೇ ಜುಂಜಪ್ಪನೆಂದು ಕರೆಯುತ್ತಾರೆ. ಈ ಸ್ಥಾನದ ಸುತ್ತ ಹುಣುಸೆ, ಬೇವು ಮೊದಲಾದ ದೊಡ್ಡಮರಗಳಿವೆ.

ಇಲ್ಲಿ ಜುಂಜಪ್ಪನ ಪೂಜಾರಿಗಳು ಜಾತಿಯಿಂದ ಕ್ಷತ್ರಿಯರು ಎಂದರೆ ಆಡು ನುಡಿಯಲ್ಲಿ ‘ಛತ್ರಿಯರು’. ಪ್ರಸ್ತುತ ಜುಂಜಪ್ಪನ ನಿತ್ಯ ಪೂಜೆಯಲ್ಲಿ ಅಂಥ ವಿಶೇಷವೇನೂ ಇಲ್ಲವೆಂದು ಹೇಳುತ್ತಾರೆ. ನೀರಿನಿಂದ ತೊಳೆದು ಅರಿಷಿಣ ಕುಂಕುಮ, ವಿಭೂತಿ ಹೂ ಏರಿಸಿದರೆ ಮುಗಿಯಿತು. ಈಗ ಜಾತ್ರೆ – ಉತ್ಸವಗಳಾವವೂ ನಡೆಯುತ್ತಿಲ್ಲ. ಪ್ರತಿವರ್ಷ ಯುಗಾದಿ ಪಾಡ್ಯದಂದು ಕುಲದೇವರೆಂದು ನಡೆದುಕೊಳ್ಳುವ ಒಕ್ಕಲಿನವರು ‘ಸೇವಗೆ’ಯೇ ಮೊದಲಾದ ನೈವೇದ್ಯ, ಹಣ್ಣು ಕಾಯಿ, ಕರ್ಪುರಗಳನ್ನು ಸಲ್ಲಿಸುತ್ತಾರೆ. ಮನೆಯಲ್ಲಿ ಲಗ್ನ ಮೊದಲಾದ ವಿಶೇಷ ಕಾರ್ಯಕ್ರಮಗಳಿದ್ದಾಗಲೂ ಇದೇ ಬಗೆಯ ಸೇವೆ ಸಲ್ಲಿಸುವ ಪರಿಪಾಠವಿದೆ.

ಪೂಜಾರಿಗಳಿಗೆ ಮೊದಲು ಉಂಬಳಿಯ ಹೊಲವಿದ್ದುದಾಗಿ ತಿಳಿದು ಬರುತ್ತದೆ. ಸಮೀಪದ ಕೌಜಲಗಿ ದೇಸಾಯರು ಕ್ಷತ್ರಿಯರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನುಳಿದಂತೆ ವಿಶಿಷ್ಟ ಆಚರಣೆಗಳಾಗಲೀ ಐತಿಹ್ಯ – ವದಂತಿಗಳಾಗಲೀ ಈ ಜುಂಜಪ್ಪನ ಬಗ್ಗೆ ಇದ್ದುದು ಕಂಡು ಬರುವುದಿಲ್ಲ.