ಪದ, ಪಾಡು, ಪಾಡುಗಬ್ಬ, ಬಾಜನೆಗಬ್ಬ ಇತ್ಯಾದಿ ಹೆಸರುಗಳಿಂದ ಹಾಡಿನ ಸಾಹಿತ್ಯ ನಮಲ್ಲಿ ಬಹುಹಿಂದಿನಿಂದಲ್ಲೇ ನಡೆದು ಬಂದಿದೆ. ‘ತತ್ವಪದ’ ಎಂದು ಈಗ ಪ್ರಾಚೀನ ಕನ್ನಡದಲ್ಲಿ ಕೂಡ ಸಮೃದ್ಧವಾಗಿತ್ತೆಂದು ತೋರುತ್ತದೆ. ಆದರೆ ಈಗ ಅದರ ಬಹುಭಾಗ ನಮ್ಮ ಕೈಗೆ ಎಟುಕದೆ ನಿಂತಿದ್ದು ಸ್ವರವಚನವೆಂದು ಹೆಸರಾದ ವೀರಶೈವ ಪದ ಹಾಡುಗಳ ರಾಶಿ ಮಾತ್ರ ನಮ್ಮ ವರೆಗೆ ಉಳಿದು ಬಂದಿದೆ. ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಕ್ರಾಂತಿಯೆಸಗಿದ ಶಿವಶರಣರೇ ಇವುಗಳ ಕರ್ತೃಗಳು. ಸಕಲೇಶ ಮಾದರಸ ಅಥವಾ ಜೇಡರದಾಸಿಮಯ್ಯರು ಈ ಸಾಹಿತ್ಯ ಪ್ರಕಾರದಲ್ಲಿ ಕೃತಿರಚಿಸಿದ ಆದ್ಯರೆಂದು ತಿಳಿದು ಬಂದಿದೆ.

ಕೆಲವು ಜನ ವಿದ್ವಾಂಸರು ಬಸವಾದಿ ಪ್ರಮಥರ ಕಾಲಾವಧಿಯಲ್ಲಿ ಈ ಸ್ವರ ವಚನಗಳು ಹುಟ್ಟಿಲ್ಲವೆಂದೂ ತರುವಾಯ ೧೪, ೧೫ನೆಯ ಶತಮಾನಗಳ ವೀರಶೈವ ಸಂಕಲನಕಾರರು ಪ್ರಾಚೀನರ ಅಂಕಿತಗಳಲ್ಲಿ ಇವನ್ನು ರಚಿಸಿ ಅಭಾಸವುಂಟು ಮಾಡಿದರೆಂದೂ ಭಾವಿಸುತ್ತಾರೆ. ಜಾನಪದೀಯವಾದ ಭಾಷೆ ಮತ್ತು ಆಧ್ಯಾತ್ಮಿಕ ಆಶಯಗಳನ್ನೊಳಗೊಂಡ ಹಾಡುಗಳನ್ನು ರಚಿಸುವ ಪರಂಪರೆ ಯಾವ ಕಾಲಕ್ಕೂ ಇದ್ದದ್ದೆ. ಎಲ್ಲ ಕಾಲದೇಶಗಳಿಗೆ ಸಹಜವಾದ ಇಂಥ ಪ್ರವೃತ್ತಿ ಪ್ರಾಚೀನ ಕರ್ನಾಟಕದಲ್ಲಿ ಇದ್ದುದು ಅಸಂಭವವೇನೂ ಅಲ್ಲ.

ಹನ್ನೆರಡೆನಯ ಶತಮಾನದ ಹಿಂದಿನ ರಚನೆಗಳು ದೊರೆಯುತ್ತಿಲ್ಲವಾದರೂ ಬಸವಾದಿ ಶರಣರ ಕಾಲದಿಂದ ಇವು ಪರಂಪರೆಯಾಗಿ ರಚೆನಗೊಳ್ಳುತ್ತ ಬಂದಿವೆ. ೧೪-೧೫ನೆಯ ಶತಮಾನಗಳಲ್ಲಿ ವಚನರಚನೆ ಹಿಂದೆ ಬಿದ್ದು ಈ ಹಾಡುಗಳ ರಚನೆಯೇ ಮೇಲುಗೈ ಪಡೆದಿದೆ. ವೀರಶೈವೇತರರೂ ಇದರ ಪ್ರಭಾವಕ್ಕೆ ಪಕ್ಕಾದರು. ದ್ವೈತ ಸಂಪ್ರದಾಯದ ದಾಸರು ಈ ಪ್ರಕಾರದಲ್ಲಿ ಕೃತಿ ರಚನೆಗೆ ಕೈಹಾಕಿ ಒಂದು ಪವಾಡವನ್ನೇ ಸಾಧಿಸಿದರು. ಪುರಂದರದಾಸ. ಕನಕದಾಸರಂತಹ ಹಲವುಜನ ವಾಗ್ಗೇಯಕಾರರು ಮೂಡಿಬಂದು ಬಹುಜನಪ್ರಿಯವಾದ ಈ ಪ್ರಕಾರದ ಹಾಡುಗಳನ್ನು ರಚಿಸಿದ್ದಲ್ಲದೆ ಅವುಗಳ ಮುಖಾಂತರ ಕರ್ನಾಟಕ ಸಂಗೀತಕ್ಕೆ ಅಪೂರ್ವ ಕಾಣಿಕೆ ಸಲ್ಲಿಸಿದ್ದರು. ಒಟ್ಟು ದಕ್ಷಿಣ ಭಾರತೀಯ ಮಟ್ಟದಲ್ಲಿ ಭಕ್ತಿ ಸಂಗೀತದ ಪ್ರಸಾರ ಮಾಡಿದ್ದಲ್ಲದೆ ಕರ್ನಾಟಕದ ಜನ ಸಾಮಾನ್ಯರ ಹೃದಯಗಳನ್ನು ತಣಿಸಿದರು. ವಚನ ಚಳುವಳಿಯಂತೆ ಜನಸಮ್ಮುಖವಾದ ಈ ಪ್ರಕಾರವನ್ನು ಇನ್ನೊಂದು ಚಳುವಳಿಯ ದೊಡ್ಡ ಘಟ್ಟಕ್ಕೇರಿಸಿದರು.

ಹೀಗೆ ಮಾಧ್ವ ಮತ್ತು ವೀರಶೈವ ಹಾಡುಗಳ ಪರಂಪರೆ ಕರ್ನಾಟಕದ ಎಲ್ಲ ವರ್ಗದ ಜನರನ್ನು ಆಕರ್ಷಿಸ ತೊಡಗಿದಂತೆ, ಜೈನ ಕವಿಗಳೂ ಹಾಡು ರಚಿಸುವತ್ತ ಒಲವು ತೋರಿದರು. ಮಹಾಕಾವಯ ಮತ್ತು ಶತಕಗಳನ್ನು ಬರೆದ ರತ್ನಾಕರ ವರ್ಣಿ ಹಾಡುಗಳನ್ನೂ ರಚಿಸದ್ದು ಈ ಮಾತಿಗೆ ನಿದರ್ಶನ.

ಈ ಮೂರು ವರ್ಗದವರ ಮತ ಪ್ರಧಾನ ಹಾಡಿನ ಸಾಹಿತ್ಯವಲ್ಲದೆ ಮತಾತೀತವಾದ ಒಂದು ಪರಂಪರೆಯೂ ನಮ್ಮಲ್ಲಿ ಬಹುಹಿಂದನಿಂದಲೇ ಸಾಗಿ ಬಂದಿದೆ. ನಿಷ್ಠೆಯಿಂದ ಯಾವೊಂದು ಮತ ತತ್ವಗಳಿಗೆ ಒತ್ತುಕೊಡದೆ ಸಾಮಾನ್ಯವಾದ ಲೋಕನೀತಿ, ಪರಿಶುದ್ಧ ಜೀವನ, ಸಂಸಾರಭೋಗ ನಿಸ್ಸಾರತೆ, ಪಾರಲೊಕಿಕತೆಯ ಪ್ರತಿಪಾದನೆ. ಮೊದಲಾದ ಸಾರ್ವತ್ರಿಕ ವಿಷಯಗಳನ್ನು ವಸ್ತುವನ್ನಾಗಿ ಮಾಡಿಕೊಂಡು ಅನೇಕರು ಹಾಡುಗಳನ್ನು ರಚಿಸುತ್ತ ಬಂದಿದ್ದಾರೆ. ಇಂಥವರಲ್ಲಿ ಕೆಲಮೊಮ್ಮೆ, ದ್ವೈತ-ಅದ್ವೈತ ತತ್ವಗಳು ಆಗೀಗ ಹಣಿಕಿಕ್ಕಿರಬಹುದು. ಆದರೆ ಯಾವುದೊಂದು ನಿಶ್ಚಿತ ಮತ ಪ್ರಕ್ರಿಯೆ ಇವರಲ್ಲಿ ಖಚಿತವಾಗಿ ಕಾಣಬರುದು.

ಇಂಥ ಉದಾರ ದೃಷ್ಟಿ ಕೋನದ ಸಾಹಿತ್ಯ ಕಳೆದ ಹೋಗುವ ಸಾಧ್ಯತೆಯೇ ಹೆಚ್ಚು. ಜಾನಪದೀಯ ನೆಲೆಯಲ್ಲಿ ಹುಟ್ಟಿರುವ ಸಾಹಿತ್ಯ ಸಾಮಾನ್ಯವಾಗಿ ಎದುರಿಸಬೇಕಾದ ಸ್ಥಿತಿಯಿದು. ಆದರೂ ಕರ್ನಾಟಕದಲ್ಲಿ ನಿಜಗುಣಶಿವಯೋಗಿ, ಷಣ್ಮುಖ ಶಿವಯೋಗಿ, ಸರ್ಪಭೂಷಣ ಶಿವಯೋಗಿಗಳಂತಹ ಮಹನೀಯರಲ್ಲಿ ಇಂಥ ಉದಾರ ಧೋರಣೆಯ ಗುರುತಗಳನ್ನು ಕಾಣಬಹುದು. ಈ ಮೂವರಲ್ಲಿ ವೀರಶೈವ ತತ್ವ ಪ್ರತಿಪಾದನೆ ವಿಶೇಷವೆನ್ನುವಂತೆ ಕಂಡುಬಂದರೂ ಶುದ್ಧ ಅದ್ವೈತ ಪರ ಅಥವಾ ಮತಾತೀತವಾದ ಸಾಧಾರಣ ವಿಚಾರಗಳು ಮೇಲುಗೈ ಪಡೆದಿರುವುದನ್ನು ಸುಲಭವಾಗಿ ಗುರುತಿಸಬಹುದು. ಶಿ.ಶಿ. ಬಸವನಾಳರು ಮೈಲಾರದ ಬಸವಲಿಂಗ ಶರಣರ ಹಾಡಿನ ಸಂಗ್ರಹದ ಪ್ರಸ್ತಾವಣೆಯಲ್ಲಿ ಈ ಸಂಗತಿಯನ್ನು ಮನಗಂಡೆ, ಮೈಲಾರದ ಬಸವಲಿಂಗ ಶರಣರಲ್ಲಿ ಮಾತ್ರ ಶುದ್ಧ ವೀರಶೈವ ತತ್ವಗಳ ಪ್ರತಿಪಾದನೆ ಇದೆ ಎಂದು ವ್ಯಾಖ್ಯಾನಿಸಿದ್ದಾರೆ.

ಈ ಪ್ರಕಾರದ ಕವಿಗಳ ಬಹಳಷ್ಟು ಹೆಸರುಗಳು ದೊರೆಯುವುದು ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಈ ಅವಧಿ ಕರ್ನಾಟಕದ ಮಟ್ಟಿಗೆ ನಿರಾಶಾದಾಯಕವಾದ ಅಂಧಕಾರಯುಗ. ಈ ಅಂಧಕಾರದಲ್ಲಿ ಆತ್ಮ ಪ್ರತ್ಯಯದ ಈ ಜ್ಞಾನ ಜ್ಯೋತಿ ಬೆಳಗಿಸಿದ ಅನೇಕರು ಆಗಿ ಹೋಗಿದ್ದಾರೆ. ಹಲವರ ಹೆಸರುಗಳು ಮತ್ತು ಅವರ ಕೃತಿಗಳು ಇಂದು ಕಳೆದು ಹೋಗಿರುವ ಸಂಭಾವ್ಯತೆಯೂ ಉಂಟು, ಈ ಪ್ರಕಾರದ ಸಂಗ್ರಹ-ಸಂಶೋಧನೆಯ ಕಾರ್ಯ ಇದೀಗ ಆರಂಭವಾಗಿದೆ.

ಹಿಂದಿನ ಶತಮಾನ ಮತ್ತು ಈ ಶತಮಾನದ ಈ ಕವಿಗಳಲ್ಲಿ ತುಂಬ ಜನಪ್ರಿಯರಾದವರೆಂದರೆ ಶಿಶುನಾಳ ಶರೀಫರು. ಇವರ ಬಹಷ್ಟು ಹಾಡುಗಳು ಈಗ ಮುದ್ರಣಗೊಂಡು ಅಧ್ಯಯನಕ್ಕೆ ಲಭ್ಯವಾಗಿವೆ. ಉದಾರವಾದ ಆಧ್ಯಾತ್ಮಿಕ ತತ್ವಗಳ ಹೊಳಪನ್ನು ಇವರಲ್ಲಿ ಕಾಣಬಹುದು. ವೀರಶೈವದ ಪ್ರಭಾವ ಇವರ ಮೇಲೆ ಆಗಿರುವಂತೆ ಕಂಡುಬಂದರೂ ಅದ್ವೈತವೇ ಇವರ ನಿಜವಾದ ನಿಲವು. ಶಾಕ್ತ ಪರಂಪರೆಯವರಾದುದರಿಂದ ಇವರ ಹಾಡುಗಳಲ್ಲಿ ಸಂಧಾಭಾಷೆಯ ಛಾಯೆ ಸ್ಪಷ್ಟವಾಗಿದೆ. ಇವರಂಥ ಬೆಡಗಿನ ಭಾಷೆ ಇತರ ತತ್ವಪದಕಾರರಲ್ಲಿ ಅಷ್ಟು ಮುಖ್ಯವಾಗಿ ಕಂಡು ಬರುವುದಿಲ್ಲ. ಇವರ ಹಾಡುಗಳನ್ನು ಅರ್ಥೈಸುವುದು ಕೊಂಚ ಕಷ್ಟದ ಕೆಲಸವೇ. ವಿಮರ್ಶಕರು ಶರೀಫರ ಹಾಡುಗಳಲ್ಲಿ ಆಧ್ಯಾತ್ಮಿಕ ಪ್ರತಿಮಾ ವಿಧಾನವನ್ನು ಗುರುತಿಸಿದ್ದಾರೆ.

ಶರೀಫರಂತೆ ಈ ಅವಧಿಯ ಉತ್ತರ ಕರ್ನಾಟಕದಲ್ಲಿ ಅನೇಕ ಹಾಡುಗಾರರು ಕಂಡುಬಂದಿದ್ದಾರೆ. ಬೆಳಗಾವಿ ಜಿಲ್ಲೆ ಈ ಮಾತಿಗೆ ಹೊರತಾಗಿಲ್ಲ. ಈಗಾಗಲೇ ಬೆಳಗಾವಿಯ ದ್ವಾರಪಾಲ ಮತ್ತು ಬಾಳೆಕುಂದರಗಿಯ ಪಂತರ (ಕನ್ನಡ ಮತ್ತು ಮರಾಠಿ) ಹಾಡುಗಳು ಮುದ್ರಣಗೊಂಡಿವೆ. ಡಾ ಎಂ. ಎಸ್‌. ಲಠ್ಠೆ ಅವರು ‘ಜನಪದ ಕವಿ ಚರಿತ್ರೆ’ ಎಂಬ ಹೆಸರಿನಡಿ ಕರ್ನಾಟಕ ಭಾರತಿ ಪತ್ರಿಕೆಯ ೮-೪ ರಿಂದ ೧೦-೪ ರ ವರೆಗಿನ ಸಂಚಿಕೆಗಳಲ್ಲಿ ಹಲವಾರು ಕವಿಗಳನ್ನು ಪರಿಚಯಿಸಿದ್ದಾರೆ. ಅವರಲ್ಲಿ ಹಲವರು ದೊಡ್ಡಾಟ, ಸಣ್ಣಾಟ, ಲಾವಣಿ, ಗೀಗಿ, ಡೊಳ್ಳಿನ ಹಾಡುಗಳು ಜತೆಗೆ ತತ್ವಪದಗಳನ್ನೂ ರಚಿಸಿದ್ದು ಕಂಡುಬರುತ್ತದೆ. ಗೋಕಾವಿ ಮಲ್ಲೇಶಪ್ಪ ಜಿನಗಾರ ಸಾಬಣ್ಣ, ಲಕ್ಷ್ಮಣ, ರಾಮಣ್ಣ ಮುರಗೋಡ ರಾಣಾ, ಬೆಲ್ಲದ ಬಾಗೆವಾಡಿಯ ಬಾಳಗೋಪಾಳ, ಕಾದರೊಳ್ಳಿಯ ನೀಲಕಂಠಪ್ಪ, ಹುಲಕುಂದದ ಶಿವಲಿಂಗ, ಭೀಮಕವಿ ಮೊದಲಾದವರಲ್ಲಿ ಹೆಚ್ಚಿನವರು ತತ್ವಪದಗಳನ್ನೂ ರಚಿಸಿದ್ದಾರೆ. ಇವರಲ್ಲಿ ದ್ವಾರಪಾಲಕವಿ ಜೈನ. ಬಾಳೆಕುಂದರಗಿಯ ಪಂತರು ದತ್ತ ಸಂಪ್ರದಾಯದ ಅದ್ವೈಇಗಳು. ಇನ್ನಿತರರಲ್ಲಿ ಕೆಲವರು ಮೇಲು ನೋಟಕ್ಕೆ ವೀರಶೈವರೆಂದು ಕಂಡು ಬಂದರೂ ಬಹುತೇಕ ಕವಿಗಳು ಮತವಲಯವನ್ನು ಮೀರಿನಿಂತವರು. ಇಂಥವರಲ್ಲಿ ಅಲಭೈರಿ ಪ್ರಮುಖರು. ಹುಟ್ಟಿನಿಂದ ಜೈನರಾಗಿದ್ದರೂ ಪರಂಪರೆಯಿಂದ ಅದ್ವೈತ ಸಂಪ್ರದಾಯದವರಾಗಿ ಅವರ ಜೀವನ ಕಾಲಗಳ ಬಗ್ಗೆ ಲಭ್ಯವಿರುವ ಸರಗತಿಗಳನ್ನು ಇಲ್ಲಿ ತಕ್ಕಷ್ಟು ವಿವರಗಳೊಂದಿಗೆ ನೋಡಬಹುದು:

ಅಲಭೈರಿಯವರ ಜನನ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿ ೧೮೮೫ರಲ್ಲಿ ಆಯಿತು. ತಂದೆ ಧರೇಗೌಂಡ, ತಾಯಿ ರಾಯವ್ವ.

ಧರಿಗೊಂಡವರಿಗೆ ಆಧ್ಯಾತ್ಮಕದ ಕಡೆಗೆ ಒಲವು ಹೆಚ್ಚು. ಹಾರೂಗೇರಿಯಲ್ಲಿ ಒಂದು ಅಧ್ಯಾತ್ಮ ಸಂಘವನ್ನೇ ಕಟ್ಟಿಕೊಂಡಿದ್ದರು. ಶ್ರೀ ಪಾವಡೆಪ್ಪ ಪತ್ತಾರ, ಶಂಕ್ರೆಪ್ಪಾ ಪತ್ತಾರ, ಕಾಳಪ್ಪ ಪತ್ತಾರ, ವೀರಚಂದಶಹಾ, ಲಕ್ಷ್ಮಣ ಕರಾಡಿ, ರಾಯಪ್ಪ ಪಂಡಿತ (ಉಪಧ್ಯಾಯ) ಪಾವಡೆಪ್ಪ ತಮದಡ್ಡಿ, ಹೀಗೆ ಅನೇಕರು ಕೂಡಿಕೊಂಡು ದಿನಿತ್ಯ ಸಂಜೆಯ ಮುಂದೆ ಅಧ್ಯಾತ್ಮ ಚರ್ಚೆ ನಡೆಸುತ್ತಿದ್ದರು.

ಧರಿಗೊಂಡು ರಾಯಗೊಂಡ ಸುಬ್ಬಣ್ಣವರಿಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳು. ಒಂದನೆಯವನು ಅಲ್ಲಪ್ಪ, ತರುವಾಯದವರು ಲಕ್ಷ್ಮೀದೇವಿ ಮತ್ತು ರಾಜಮತಿ.

ಕೊನೆಯ ಮಗಳಾದ ರಾಜಮತಿ ಜನಿಸಿದ ನಂತರ ರಾಯವ್ವ ಇಹಲೋಕವನ್ನು ತ್ಯಜಿಸಿದಳು, ರಾಯಪ್ಪನ ಮೇಲೆ ಸಂಸಾರದ ಸಂಪೂರ್ಣ ಹೊರೆ ಬಿದ್ದಿತು. ಮತ್ತೊಬ್ಬಳನ್ನು ಮಾಡಿಕೊಳ್ಳುವ ಯೋಚನೆ ಮಾಡಲಿಲ್ಲ. ಇದಕ್ಕೆ ಅವರ ಅಧ್ಯಾತ್ಮಶಕ್ತಿಯೇ ಕಾರಣ.

ಧರೆಪ್ಪ ಶಿಲ್ಪಕಾರ್ಯವನ್ನು ಮಾಡುತ್ತಿದ್ದನು. ಆಗಿನ ಕಾಲದಲ್ಲಿ ಶಿಲ್ಪಶಾಸ್ತ್ರದ ಕೋವಿದನೆಂಬ ಬಿರುದನ್ನೂ ಜನರು ದಯಪಾಲಿಸಿದ್ದರು. ಅನೇಕರು ತಮ್ಮ ಮನೆಯ ನಕ್ಷೆಗಾಗಿ ದೂರದಿಂದ ಬರುತ್ತಿದ್ದರಂತೆ. ಧರೆಪ್ಪನು ನಕಾಶಮಾಡಿಕೊವುದಲ್ಲದೆ, ಸ್ವತಃ ಕಟ್ಟುವ ಹಾಗೂ ಕಲ್ಲು ಒಡೆಯುವ ಕಾರ್ಯವನ್ನು ಮಾಡುತ್ತಿದ್ದ.

ದೇವರ ಮೂರ್ತಿಗಳನ್ನು ಬಹು ಸುಂದರವಾಗಿ ಕೆತ್ತಿಕೊಡುತ್ತಿದ್ದನೆಂದು ಈ ಭಾಗದ ಜನ ಈಗಲೂ ಹೇಳುತ್ತಾರೆ. ಧರೆಪ್ಪನು ಹೆಚ್ಚಾಗಿ ಮೌನವಿರುತ್ತಿದ್ದನಂತೆ. ಇವನಲ್ಲಿರುವ ಆತ್ಮಜ್ಞಾನ ಕಂಡು ಅನೇಕರು ಬರುತ್ತಿದ್ದರು ಅಲ್ಲದೆ ಮನೆಯ ಮುಂದೆ ಗುಂಪು ಗುಂಪಾಗಿ ಜನ ನೆರೆಯುತ್ತಿದ್ದರಂತೆ. ಆದರೂ ಹೆಚ್ಚು ಕಾಲ ಮೌನತಾಳಿ ಮಿತವಾಗಿ ಮಾತನಾಡುತ್ತಿದ್ದರು. ಅವರೂ ಅನುಭಾವಿ ಕವಿಗಳಾಗಿದ್ದರು.

ಪದ:

ಆಗದು ಹೋಗೂದು ಭೋಗದ ಫಲವಿದು ತ್ಯಾಗಮಾಡಲಾಕ ಭಾಗಿಲ್ಲಾ
ಯೋಗಿ ಮುನೀಶ್ವರ ದೇವ ದೈತ್ಯರು ಉಂಡತೀರಿಸ್ಯಾರವರೆಲ್ಲಾ
|| ಪಲ್ಲ ||

ಹರಿಯು ಹತ್ತವತಾರ ತೊಗೊಳ್ಳುವ ಬಂತ ಪ್ರಸಂಗ ಸುತ್ಯಾಡುವದಾ
ಮತ್ತೆ ಬ್ರಹ್ಮನ ನಡುತೆಲಿ ಕಡದೀತ ಅವನ ಹಣೆಯಲ್ಲಿ ಯಾಂವ ಬರದಾ
|| ||

ಚಂದ್ರಗೆ ಕುಂದಹತ್ತಿ ಅಂಗ ಕಡಮಿಬಿತ್ತ ದಿನದಿನಕ್ಕೆಚ್ಚುಕಮ್ಮಿ ಆಗುವದಾ
ಸೂರ್ಯ ಅವನಿಯ ತಿರಗುದಬಂತ ಹಗಲು ಇರುಳ ಸುತ್ಯಾಡುವುದಾ
|| ||

ಇಂದ್ರನ ಮೈಯಲ್ಲಾ ಭಗಿಂದ್ರ ಆದವು ಸಂದ ಸಂದಿಗೆ ಸೋರುವದಾ
ಬಾದರಾಯಣನವಾದದ ಒಳಗೆ ಎರಡು ತೋಳ ಬಿದ್ದಾವಕಡದಾ
|| ||

ಜಾಲ:

ಕೂರ್ಮಜಗಜೆ ಪಾತಳಾ ಪಾಟ್ಲೆಶ್ವರರಾ ಬ್ರಹ್ಮನ್ಹಿಡದ ಹರಿಹರಾ
ಮಹಾದೇವಾದಿ ದೇವಗ ಸುದ್ದಾ –ಮೀರಲಾಗದು ಪ್ರಾರಬ್ಧಾ

ಕೂಡನುಡಿ:

ಕಾಲಕ ಸರಿಯಾಗಿ ಕಾರ್ಯ ಆಗತವಾವ ಯಾರ್ಯಾರಿಗೂ ಅದು ತಪ್ಪಲಿಲ್ಲಾ
ಯೋಗಿ ಮುನೀಶ್ವರ ದೇವ ದೈತ್ಯರು ಉಂಡ ತೀರಿಶ್ಯಾರವೆಲ್ಲಾ
ಏಳುಧರಣಿ ಭೂಪ ಹರಿಶ್ಚಂದ್ರರಾಯನ ಹೊಲೆಯರ ಮನೆಯೊಳು ನಿಲ್ಲಿಸಿತ್ತು
ವೇಳೆ ಹೊತ್ತಗ್ಯಾರಿಲ್ಲ ಕೃಷ್ಣಗೆ ಬೇಡನ ಕಯ್ಯೊಳು ಮರಣಾತು
|| ||

ದಕ್ಷಬ್ರಹ್ಮನ ದತ್ತದಾಗ ಇತ್ತತಲೆಯ ಹೊಡಿಸಿಕೊಂಡ ಮರಣಾತು
ದುಷ್ಟ ರಾವಣಾ ಕಷ್ಟಪಟ್ಟಫಲಾ ಕೊಟ್ಟಂಥಾದ್ದೆಲ್ಲಾ ನಷ್ಟಾತು
|| ||
ರಾಮಲಕ್ಷ್ಮಣ ವನವಾಸಕ್ಹೊಗುವಾ ದಶರಥರಾಯ ನೋಡ್ಯಾನನಿಂತು
ನೋಡಿ ಘಾಬರ್ಯಾಗಿ ಮಡದ ಮ್ಯಾಲಿಂದತೆಳಗೆ ಬಿದ್ದಹೋದಾನ ಸತ್ತು

ಜಾಲ:

ಪರಾಕ್ರಮಿ ಪಂಚಪಾಂಡುರವರಾ ಅದನಮೀರಿಲ್ಲವರು ಹಣಿಬಾರಾ
ನಹಷನಳಾಚಕ್ರವತಿಧೀರಾ ಭಾಳತಾಳ್ಯಾರ ಉಪ್ಪದರಾ
ವಶಿಷ್ಠ ಮಹಾ ಮುನೀಶ್ವರಾ ಸುಖಭೋಗಸ್ಯಾರ ಇವರಾ

ಕೂಡನುಡಿ:

ಯಮರಾಜನೆದಿಮ್ಯಾಲ ಘಾಯವಾದದ್ದು ಏನು ಮಾಡಿದರೂ ಹೋಗಲ್ಲ
ಯೋಗಿಮುನೀಶ್ವರ ದೇವದೈತ್ಯರು ಉಂಡು ತೀರಿಸ್ಯಾರವರೆಲ್ಲಾ
|||

ಕೇಳ್ರಿ ಸಗರ ಕುಲಕಾರ್ತಿವೀರ್ಯಗ ಸಕಲೈಶ್ವರ್ಯ ಮತ್ತು ಸಂಪತ್ತಾ
ವ್ಯಾಳೆ ಬಂದಿತು ಅರವತ್ತಸಾವಿರ ಮಕ್ಕಳೆಲ್ಲಾ ಹೋದಾವಸತ್ತಾ
|| ||

ಸನಕನ ಅನುಜನ ಸನತ್ಕುಮಾರನ ದಾನದ ಫಲ ಆದೀತವ್ಯರ್ಥ
ಒಂಟಿಯ ಜನ್ಮಾ ಬಂದಿತಾ ಅವನಿಗೆ ತಪ್ಪಲಿಲ್ಲ ಪೂರ್ವದ ಗಣಿತಾ
|| ||

ಅಗ್ನಿಪುರುಷಗ ಏಳುನಾಲಿಗಿದ್ದು ಉಗ್ರದಿಂದ ಆದಾನತಪ್ತಾ
ಕಾಳ ಒದಗಲು ಏಳುನಾಲಿಗೆಗಳು ಹಾಳಾಗಿ ಹೋದಾವ ವಿಪರೀತಾ
|| ||

ಜಾಲ:

ರೂಪದಲ್ಲಿ ಚಲುವ ಕಾಮಸುದ್ದಾ ಸುಟ್ಟಭಸ್ಮನಾಗಿಬಿದ್ದಾ
ನಾಯಿ ಆಗಿ ಬೊಗಳ್ಯಾವ ನಾಲ್ಕುವೇದಾ ದುರುದುಮ್ಮಿ ಅರಸಮರದಾ

ಕೂಡನುಡಿ:

ನಳಾನೀಳಾ ಅಂಗದ ರಾಮರದು ಆಗುವದಕೇದ್ಯಾರ ಬಳಸಲಿಲ್ಲಾ
ಯೋಗಿಮುನೀಶ್ವರ ದೇವ ದೈತ್ಯರು ಉಂಡು ತೀರಿಸ್ಯಾರವರೆಲ್ಲಾ
||

ಪೂರ್ವಜನ್ಮದಿದು ಕರ್ಮದ ಫಲವು ಪಾಪರೂಪದ ವಿಧಿಮೂಲಾ
ಮೂಲಾ ತಿಳಿದಾಂವಗ ಮೋಕ್ಷನಾದೀತು ಶಿಕ್ಷೇದ ಬಾಧೆ ಅಂವಗಿಲ್ಲಾ
|| ||

ವಿಧಿ ಎಂಬುದು ಮಾಯಾ ಸ್ವರೂಪಾ ಮಾಯೆ ಅಂಬುದಿತು ಮೊದಲಿಲ್ಲಾ ಇಲ್ಲವೆಂಬುದುವುದು ಅರ್ಥವಾದಮ್ಯಾಲ ಬಲ್ಲ ಮಹಾತ್ಮಗ ಅದಬೈಲಾ || ||
ವರ್ತ್ತಮಾನ ಈ ಶರೀರ ಸಂಬಂಧ ಯಾರಪ್ಪಗ ಅದು ಬಿಟ್ಟಲ್ಲಾ
|| ||

ಜಾಲ:

ಗುರುಪಂಡಿತ ಹೇಳುವನು ಹಿಂಗಾ ಪ್ರಪಂಚ ಸ್ವಪ್ನದ ಹಂಗಾ
ಒಮ್ಮೆ ದೇಹಬಿದ್ದ ಹೋದ ಮ್ಯಾಗಾ ಆಗತೀರತದರ ಭೋಗಾ

ಕೂಡನುಡಿ:

ಹಾರುಗೇರಿ ಧರಿಗೊಳಿ ಕವಿಯ ಕಟ್ಟಿ ಹೇಳ್ಯಾನ ಯಾರ್ಯಾರಿಗೂ ತಪ್ಪಲ್ಲಾ
ಯೋಗಿ ಮುನೀಶ್ವರದ ದೇವ ದೈತ್ಯರು ಉಂಡ ತೀರಿಸ್ಯಾರವರೆಲ್ಲಾ
|| ||

ಈ ಪದ್ಯದ ಮೇಲಿಂದ ಅವರ ಅನುಭವದ ಆಳ ಎಷ್ಟಿತ್ತೆಂಬುದು ತಂತಾನೆ ವ್ಯಕ್ತವಾಗುತ್ತದೆ. ಧರೆಯಪ್ಪನದು ಮಕ್ಕಳ ಪಾಲನೆ ಪೋಷಣೆಯೊಂದಿಗೆ ಎಷ್ಟೇ ಗರಿಷ್ಠ ಸಂಬಂಧವಿದ್ದರೂ ಗೋಷ್ಠಿಗಳಲ್ಲಿ ಅನುಭಾವದ ಚರ್ಚೆ ಎಂದಿನಂತೆ ಸಾಗುತ್ತಿರುತ್ತಿತ್ತು.

ತಂದೆಯ ದೈನಂದಿನ ಕಾರ್ಯಗಳಿಗೆ ಅಲಭೈರವಿಯ ಸ್ವಲ್ಪೂ ಸಹಾಯ ಮಾಡುತ್ತಿರಲಿಲ್ಲ, ಮುಂಜಾನೆ ಎದ್ದು ಹೊರಗೆ ಹೋಗಿಬಿಟ್ಟರೆ ತೀರಿತು, ಮಧ್ಯಾಹ್ನ ಮನೆಗೆ ಬಂದು ತಂಗಿಯನ್ನು ಅಂಜಿಸಿ ಊಟಮಾಡಿ ಹೋಗುತ್ತಿದ್ದನು. ತಂಗಿಯರಿಬ್ಬರಿಗೂ ತಂದೆಯ ಮುಂದೆ ಏನಾದರೂ ಹೇಳಿದರೆ ಕೆರೆಯಲ್ಲಿ ಮುಳುಗಿಸುತ್ತೇನೆಂದು ಅಂಜಿಕೆ ಹಾಕುತ್ತಿದ್ದನು.

ಮಗನ ವಿಚಾರ ತಂದೆಗೆ ತಿಳಿಯದೇ ಹೋಗಲಿಲ್ಲ. ಆದರೆ ಮಾಡುವದೇನು ತಾಯಿ ಇಲ್ಲದ ತಬ್ಬಲಲಿ ಎಂದು ನಾನೇ ಇವನಿಗೆ ಸಲುಗೆ ಕೊಟ್ಟದ್ದು ತಪ್ಪೆಂದು ತಿಳಿದುಕೊಂಡು ಒಂದು ದಿನ ಮಗನನ್ನು ಕರೆದು “ಇಂದಿನಿಂದ ನೀನು ನನ್ನ ಸಂಗಡ ಉದ್ಯೋಗಕ್ಕೆ ನಡೆ, ಹಂತ ಹಂತವಾಗಿ ಶಿಲ್ಪವಿದ್ಯೆಯನ್ನು ಕಲಿತಕೊ” ಎನ್ನಲು ತಂದೆಯವರ ಅಂಜಿಕೆಯಿಂದ ಅಲ್ಲಪ್ಪನು ಹೂಂ ಗುಟ್ಟಿದನು.

ತಂದೆಯ ಸಂಗಡ ಹೋಗಿ ಅಲ್ಲಿ ನಿಂತಹಾಗೆ ಮಾಡಿ ನೋಡುವಷ್ಟರಲ್ಲಿ ಮಾಯವಾಗಿಬಿಡುತ್ತಿದ್ದನು. ಮುಂದೆ ಸಾಕಾಗುವಷ್ಟು ತಿರುಗಾಡಿ ಮನೆಗೆ ಬಂದರೆ ಬಂದ; ಇಲ್ಲದಿದ್ದರೆ ಗುಡಿ ಗುಂಡಾರಗಳಲ್ಲಿ ಮಲಗಿ ಬಿಡುತ್ತಿದ್ದ. ಹೆಚ್ಚಾಗಿ ತಮ್ಮ ಮನೆಯ ಹತ್ತಿರ ಮಲ್ಲಾರ ಬಾಪೂಜಿ ಕುಲಕರ್ಣಿ ಎಂಬುವವರ ಬಾಗಿಲಿಲ್ಲದ ಪಡಸಾಲೆಯಲ್ಲಿ ರಾತ್ರಿ ಮಲಗಿ ಕೊಳ್ಳುತ್ತಿದ್ದನು.

ಸದರೀ ಕುಲಕರ್ಣಿ ಅವರ ಮನೆಯಲ್ಲಿ ಬಡಬ್ಯಾಕುಡದ ಕಟ್ಟಿ ಮನೆತನದ ಶ್ರೀನಿವಾಸಾಚಾರ್ಯರ ಮಗ ಪಾಂಡುರಂಗರೆಂಬವರು ತಮ್ಮ ಊರಲ್ಲಿ ಶಾಲೆಯಿಲ್ಲದ ಮೂಲಕ ಹಾರೂಗೇರಿ ಶಾಲೆಯಲ್ಲಿ ಕಲಿತು, ರಾತ್ರಿ ಆ ಪಡಸಾಲೆಯಲ್ಲಿಯೇ ಇದ್ದು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಇವರ ಸಂಗಡ ಇನ್ನೂ ಐದಾರು ಹುಡುಗರು ಇರುತ್ತಿದ್ದರು, ಒಮ್ಮೊಮ್ಮೆ ಅಲ್ಲಪನ್ನು ಅ ಪಡಸಾಲೆಯಲ್ಲಿ ಮಲಗಲು ಹೋದಾಗ ಆ ವಿದ್ಯಾರ್ಥಿಗಳು ನೋಡಿ ಸುಮ್ಮನಾಗುತ್ತಿದ್ದರು.

ಮುಂದೆ ಅಲ್ಲಪ್ಪನಿಗೆ ಈ ಪಡಸಾಲೆಯೇ ರಾತ್ರಿಯ ಆಸ್ಥಾನವಾಯಿತು, ಬರಬುರತ್ತಾ ಪಾಂಡರಂಗರು ನಮ್ಮ ಹತ್ತಿರ ಬಂದು ಮಲಗಿಕೊಳ್ಳುವುದರಲ್ಲೇ ನಿದೆ? ನೀನು ನಮ್ಮ ಕೂಡ ಅಭ್ಯಾಸಮಾಡು ಎಂದು ಪೀಡಿಸಲು ಮನಸಿಲ್ಲದೆ ಮನಸ್ಸಿನಿಂದ ಒಪ್ಪಿಕೊಂಡು ಹಾಗೂ ಹೀಗೂ ಮಾಡಿ ಮೂಲಾಕ್ಷರ ಕಲಿತನು. ಅನಂತರ ಪಾಂಡರಂಗರು ‘ನಾಳೆಯಿಂದ ನೀನೂ ಶಾಲೆಗೆ ಬಾ’ ಎಂದು ಒತ್ತಾಯ ಮಾಡ ಹತ್ತಿದರು, ಅಲ್ಲಪ್ಪ ಒಪ್ಪಲೇ ಇಲ್ಲ. ಕೊನೆಗೂ ಶಾಲೆಯ ಕಟ್ಟಿಯನ್ನೇ ಹತ್ತಲಿಲ್ಲ.

ಬರಬರುತ್ತ ಅಲ್ಲಪ್ಪನವರು ಪಾಂಡುರಂಗರ ಪ್ರೇರಣೆಯಿಂದ ಕನ್ನಡ, ಮರಾಠಿ, ಮೋಡಿಲಿಪಿಗಳನ್ನು ಕಲಿತು ಬರೆದೋದುವುದರಲ್ಲಿ ತಲ್ಲೀನಾಗಹತ್ತಿದನು. ಶ್ರೀ ಪಾಂಡುರಂಗನು ಇವನ ವಿದ್ವತ್ತು ಕಂಡು ಮಾರುಹೋದರು. ಹೀಗೆ ಅಲ್ಲಪ್ಪನವರ ಲೌಕಿಕ ಶಿಕ್ಷಣದ ಗುರುಗಳೆಂದರೆ ಶ್ರೀ ಪಾಂಡುರಂಗ ಶ್ರೀನಿವಾಸಾಚಾರ್ಯ ಕಟ್ಟಿಯವರು.

ಆಟಗಳ ಬರವಣಿಗೆ

ಅಲ್ಲಪ್ಪ ಹಾರೂಗೇರಿ ಸುತ್ತಮುತ್ತಲಿನ ಹಳ್ಳಿಗಳ ದೊಡ್ಡಾಟ ಆಡುವುದರಲ್ಲಿ ಬಹಳ ಪ್ರಸಿದ್ಧರಾಗಿದ್ದರು. ಪ್ರತಿವರ್ಷ ಅನೇಕ ಆಟಗಳನ್ನು ಆಡುತ್ತಿದ್ದರು. ಅಲ್ಲಿ ಅಲಭೈರವಿ ಹಾಜರಿರುತ್ತಿದ್ದರು.

ಹಾರೂಗೇರಿ ಸಮೀಪ ಹಿಡಕಲದಲ್ಲಿ ಶ್ರೀ ಮಾಲಗಾರ ಕಲ್ಲಪ್ಪನ ಆಟ ಮತ್ತು ಸಪ್ತಸಾಗರ ಪಿಂಜಾರ ಗುಡುಸಾಹೇಬನ ಆಟಗಳು ಬಹಳ ಪ್ರಸಿದ್ಧಿಪಡೆದಿದ್ದವು. ಈ ಆಟಗಳನ್ನು ಎಲ್ಲೇ ಆಡಲಿ ಅಲ್ಲಿ ಅಲಭೈರಿ ಹಾಗೂ ಮಿತ್ರರು ಬಂದೇ ಬರುತ್ತಿದ್ದರು. ಮುಂದೆ ಅಲಭೈರಿ ತಲೆಯಲ್ಲಿ ನಾವೂ ಈ ದೊಡ್ಡಾಟದ ತಂಡ ಕಟ್ಟಿ ಆಟ ಆಡಿಸಬೇಕು ಎಂಬ ವಿಚಾರ ಬರತೊಡಗಿತು. ಅಲ್ಲದೆ ಈಗಿನ ಪಾರಿಜಾತಗಳಿಗಿಂತ ಬಹು ಸುಂದರ ಆಟಗಳನ್ನು ಬರೆಯಲು ಸಾಧ್ಯವೆಂದು ತಿಳಿದು ಆ ರೀತಿ ಮಾಡಿಯೇಬಿಟ್ಟರು.

ಬಯಲಾಟ ತಂಡ:

ವೀರಭದ್ರಪ್ಪ ಕಂಬಾರ ಮತ್ತು ಸತ್ಯಪ್ಪ ಬಡಿಗೇರ ಇವರ ನೇತೃತ್ವದಲ್ಲಿ ತಂಡ ಆಯ್ಕೆ ಮಾಡಿದರು. ಕಥಾವಸ್ತು ಹಾಗೂ ಹಾಡುಗಳನ್ನು ಮಾಡಿಕೊಡುವ ಜವಾಬ್ದಾರಿ ಅಲ್ಲಪ್ಪ ವಹಿಸಿಕೊಂಡನು. ಪ್ರಪ್ರಥಮವಾಗಿ “ಶಿವಪಾರಿಜಾತ” ಬರೆದು ಆಡಿಸಿ ಬಿಟ್ಟರು. ಕೆಲವೇ ದಿನಗಳಲ್ಲಿ ಈ ಆಟ ಪ್ರಸಿದ್ಧಿ ಪಡೆಯಿತು. ಮೊದಲಿನ ಕಂಪನಿಗಳ ಆಟದವರಿಗೆ ಚಿಂತೆಯಾಯಿತು.

ಅವರು ಬಂದು ಅಲ್ಲಭೈರಿ ಅವರನ್ನು ಭೇಟಿಯಾಗಿ ಸಂಭಾಷಣೆ, ಪದ್ಯ ಬರೆಯಿಸಿಕೊಂಡು ಆಡಹತ್ತಿದರು. ಹೀಗಾಗಿ ರಾಯಬಾಗ, ಗೋಕಾಕ, ಅಥಣಿ, ಜಮಖಂಡಿ ಭಾಗಗಳಲ್ಲಿ ಅಲ್ಲಪ್ಪನ ದೊಡ್ಡಾಟಗಳೆಂದು ಅರ್ಥಾತ್‌ ಬಯಲಾಟಗಳೆಂದು ಪ್ರಸಿದ್ಧಿ ಪಡೆದವು. ಅಲ್ಲಪ್ಪನ ಸಂಭಾಷಣೆಗಳೆಂದೆ ಈ ಭಾಗದಲ್ಲಿ ಸುಪ್ರಸಿದ್ಧವಾದವು.

ಈ ಪ್ರಚಾರದಿಂದ ಲಾವಣಿ, ಭಜನೆ, ರಿವಾಯತ ಇತ್ಯಾದಿ ಹಾಡುವವರ ತಂಡಗಳು ಶ್ರೀ ಅಲಭೈರಿ ಅವರ ಮುಂದೆ ಸಾಲುಸಾಲಾಗಿ ನಿಲ್ಲಹತ್ತಿದವು. ಅಲ್ಲಪ್ಪನು ಪ್ರಾಯಕ್ಕೆ ಬರುವುದರೊಳಗಾಗಿ ರಿವಾಯತ; ಶಿವಭಜನೆ, ಅಭಂಗ, ಶಾಹಿರಿಕಿ, ಲಾವಣಿ, ಡೊಳ್ಳಿನ ಹಾಡು ಹೀಗೆ ಎಲ್ಲ ಪ್ರಕಾರದಲ್ಲಿಯೂ ಅನುಭವಪೂರಿತವಾದ ಹಾಡುಗಳನ್ನು ಕೂತ ಕೂತಲ್ಲೇ ನಿಂತ ನಿಂತಲ್ಲೇ ಹೇಳುತ್ತಿದ್ದನು, ಆದ್ದರಿಂದ ಈ ಭಾಗದ ಜನರೆಲ್ಲಾ ‘ಅಲ್ಲಪ್ಪನ ನಾಲಿಗೆಯ ಮ್ಯಾಗ ಸರಸ್ವತಿ ಕುಂತಾಳ ಎಂದು ಹಾಡಿ ಹರಸುತ್ತಿದ್ದರು. ತಂದೆ, ತಂಗಿಯರು ಈತನ ಆಶೆಯನ್ನೇ ಬಿಟ್ಟು ಬಿಟ್ಟರೆಂದು ಹೇಳಿದರೆ ತಪ್ಪಾಗದು. ಇಷ್ಟರಲ್ಲಿ ಈ ಕಲಾಕಾರರು ಅಲ್ಲಪ್ಪನಿಗೆ ಕುಡಿಯುವ ಸೇದವ ಚಟಗಳನ್ನು ಅಂಟಿಸಿಬಿಟ್ಟಿದ್ದರು. ತಮ್ಮ ಹಾಡುಗಳನ್ನು ಬರೆಯಿಸಿಕೊಳ್ಳುವುದಕ್ಕಾಗಿ ಬರುವವರುದಾರು, ಗಾಂಜಾ ತಂದು ಕೊಡಹತ್ತಿದರು.

ಮಠದ ಮಮತೆ

ಗುಜರಾತ ದೇಶದ ಗುಲಾಬದಾಸ ಬುವಾ ಎಂಬ ಒಬ್ಬ ಸಾಧುಗಳು ಹಾರೂಗೇರಿಯ ‘ವಗ್ಗರ ಮಠ’ ದಲ್ಲಿ ವಾಸ್ತವ್ಯ ಹೂಡಿದ್ದರು. ಅವರು ದಿನಂಪ್ರತಿ ಬೇವಿನ ರಸವನ್ನೇ ಕುಡಿಯುತ್ತ ಯಾವಾಗಲಾದರೊಮ್ಮೆ ಹಾಲು ತೆಗೆದುಕೊಳ್ಳುತ್ತಿದ್ದರು. ಆಗ ಊರಲ್ಲಿ ಮಠವೆಂದರೆ ವಗ್ಗರ ಮಠ ಒಂದೇ. ಅಲ್ಲಿ ವ್ಯಸನೀಕರದೇ ಸಮ್ಮಿಲ್ಲನ. ಈ ಮಠಕ್ಕೆ ಹೋಗಿ ಬರುವ ಭಕ್ತರಲ್ಲಿ ಅಲ್ಲಪ್ಪ ಒಬ್ಬ.

ಮಠದ ಸದಸ್ಯರಿಗೆ ಗುಲಾಬದಾಸರು ಗುರುಗಳು ಹೌದು, ಆದರೆ ಬೋಧೆ ಕೊಟ್ಟು ದೀಕ್ಷಾವಹಸಿದ ಯಾವ ಶಿಷ್ಯರೂ ಅವರಿಗೆ ಇದ್ದಂತೆ ತೋರುವುದಿಲ್ಲ.

ಗುಲಾಬದಾಸ ಸಾಧುಗಳ ಪ್ರಮಾಣಬದ್ದ ದೇಹ, ದೇಹಕ್ಕೆ ಒಪ್ಪುವ ಮೈ ಬಣ್ಣ, ಜಟಾಜೂಟಗಳು, ಮನಮೋಹಕರೂಪ, ನೀಳೆತ್ತರ, ನೋಡಿದವರನ್ನು ತನ್ನತ್ತ ಆಕರ್ಷಿಸುವ ಪ್ರತಿಭೆ ಆತನಲ್ಲಿದ್ದವು. ಇನ್ನೊಂದು ವೈಶಿಷ್ಟ್ಯವೆಂದರೆ ಆತನು ತನ್ನ ಶಿಶ್ನಕ್ಕೆ ಉಕ್ಕಿನ ಬಳೆಯನ್ನು ಮಧ್ಯದಲ್ಲಿ ಚುಚ್ಚಿಕೊಂಡು, ಆ ಬಳೆಗೆ ಸಣ್ಣ ಕಬ್ಬಿಣ ಸರಪಣೆಯನ್ನು ತೊಡಕಿಸಿ ಸೊಂಟಕ್ಕೆ ಸುತ್ತಿಕೊಂಡಿರುತ್ತಿದ್ದನಂತೆ. ಈ ದೃಶ್ಯವನ್ನು ಕಂಡ ಆಗಿನ ಮುಗ್ಧ ಜನರಲ್ಲಿ ಭಕ್ತಿ ಗೌರವಗಳು ಸಹಜವಾಗಿ ಹುಟ್ಟಿಕೊಂಡವು.

ಊರಿನ ಪ್ರಮುಖರು ಸಾಧುಗಳಿಗೆ ಅನ್ನ ಸ್ವೀಕರಿಸಲು ಕೇಳಿಕೊಂಡಾಗ ಆತನು ಹಾರೂಗೇರಿಯಲ್ಲಿ ದೊಡ್ಡ ಪ್ರಮಾಣದ ಸಪ್ತಾಹ ಅನ್ನಸಂತರ್ಪಣೆ ಮಾಡಿಸಿದರೆ ತಾವು ಅನ್ನ ಸ್ವೀಕರಿಸಲು ಒಪ್ಪುವೆವೆಂದು ಹೇಳಿದನು. ಹಾಗೆ ಹೇಳುವುದೇ ತಡ ಊರಿನ ಪ್ರಮುಖರು ಕೂಡಿ ಹಿಂದೆಂದೂ ಕಾಣಲಾರದಂತಹ ಸಪ್ತಾಹ ನಡೆದು ಜನರಿಗೆ ಭಾರಿ ಅನ್ನ ಸಂತರ್ಪಣೆಯಾಯಿತು.

ಈ ಸಪ್ತಾಹಕ್ಕೆ ಶ್ರೀ ಜಡಿಸಿದ್ಧಯೋಗೀಂದ್ರ ಕರಕಮಲ ಸಂಜಾತರಾದ ಶ್ರೀ ಸ್ವಾಮಿ ಶಂಕರಾನಂದ ಪರಮಹಂಸರು ಆಗಮಿಸಿದ್ದರು.

ಇಲ್ಲಿ ಮುಖ್ಯವಾಗಿ ಅಲ್ಲಪ್ಪನವರು ಶ್ರೀ ಗುಲಾಬದಾಸ ಬುವಾಗಳ ಸಂಗದಲ್ಲಿದ್ದರೂ ಕೂಡ ಅವರಿಂದ ದೀಕ್ಷೆ ತೆಗೆದುಕೊಂಡಿಲ್ಲ ಎಂಬ ಮಾತು ಸುಸ್ಪಷ್ಟವಾಗಿ ತೋರುತ್ತದೆ. ಯಾಕೆಂದರೆ ಒಮ್ಮೆ ಗುರುವೆಂದು ನಂಬಿ ಶರಣುಹೋಗಿ ಅವರಿಂದ ದೀಕ್ಷೆ ಪಡೆದ ನಂತರ ಮತ್ತೊಮ್ಮೆ ಮತ್ತೊಬ್ಬರಿಂದ ದೀಕ್ಷೆ ಸಲ್ಲದು. ಈ ಪ್ರಕಾರ ವೇದಾಂತ ಶಾಸ್ತ್ರದಲ್ಲಿ ಕಟ್ಟಾನಿಯಮವಿರುತ್ತದೆ. ಪ್ರಸ್ತುತ ವಿಷಯದಲ್ಲಿ ಅಲ್ಲಪ್ಪನ ವರಿಗೆ ದೀಕ್ಷೆಕೊಟ್ಟ ಗುರುವೆಂದರೆ ಚೆನ್ನವೃಷಭೇಂದ್ರ ಸ್ವಾಮಿಗಳು. ಇಲ್ಲಿ ಕೆಲವು ಹಾಡುಗಳನ್ನು ನೋಡಬಹುದಾಗಿದೆ:

ಗುರು ಪರಂಪರೆ

೧. ಬಂದಷ್ಟು ಹೇಳುವೆನಾ ಬಾರದ್ದು ಕೇಳುವೆ ಮಾಡಿ ಶರಣಾ || ||
ನಾನೇ ಅಂಬುವ ಅಹಂಕಾರ ನೀಗಿ ಗುರುವಿನಲ್ಲೇ ಬೆರೆಸಿದಂಥವರುಮನಾ

ಆರು ಮೂರು ಅಳಿದವರು ವೈರಿಗುಣಾ ಅವರಿಗೆ ಮಾಡುವೆ ನಮನಾ
ಸಾಷ್ಟಾಂಗದಿಂದ ಹಾಕಿ ಶರಣಾ ದುಷ್ಟರಿಗಾಗಿ ಉದಾಸೀನಾ
ಹಾರೂಗೇರಿ ಠಿಕಾಣಾ ಗುಲಾಬದಾಸ ಗುರುವಿನಾ

(ಹೀಗೆ ಸಾಗುತ್ತಾ ಕೊನೆಯ ನುಡಿಯನ್ನು)…………….

ಮೀರದೇ ನಾವು ಇರುವದು ಆತನ ವಚನಾ
ಅವರನ ಕೇಳಿ ಮಾಡುದು ಕವಿ ರಚನಾ
ಅಪ್ಪಾಗೌಡನ ಅನುಕೂಲ ಅದರ ಪೂರ್ಣ ಅಲಭೈರವನ ಮಾತು ಬಹಳೆ ಹಸನಾ ಕರೆನಮಂದಾದವಾದ ಹಾಕವನಾ-
ಸಮಜೂತ ಹೇಳಿ ಕಳಿಸಿದರೊ ಕಾದ ಮಾನಾ

ಹಾಡು

೨. ದುಷ್ಟನೀತಿ ದುರುಳರ ನಡೆ ಖೊಟ್ಟಿ ಉಪರಾಟಿ ಎಂದೆಂದೂ ಬ್ಯಾಡೊ ಭೇಟಿ
………………………
………………………
ಎಷ್ಟು ಹೇಳಲಿ ದುಷ್ಟರದು ಭವಿ ಲೀಲಾ ಅನಗಾಲಾ
ವರಣಿಸಲಳವಲ್ಲಾ/ದುಷ್ಟನೀತಿ……
ಗುಲಾಬದಾಶ ಗುರುವಿನ ಕೀಲಿ ಅಲಭೈರಿ ಕಯ್ಯಾದ ಮ್ಯಾಲಿ
ವಾಗಬ್ರಹ್ಮಿ ಆಗಿ ಖಾಲಿ ತಿನಬ್ಯಾಡೊ ಯಮಜೋಲಿ
ನಡಿನುಡಿ ಕೆಟ್ಟು ಪ್ಯಾಲಿ ಬಿಟಕೊಡೋ ತಗಲಿ ಬಿಗಲಿ
ಹಾರೂಗೇರಿ ಗ್ರಾಮದಲ್ಲಿ ಮಾರುತಿ ನೆನದಾನಲ್ಲಿ
ಆತನ ಸ್ಮರಿಸೋ ಭವಮಾನಲೆ ಹರಿಸೊ ದುಷ್ಟ ನೀತಿ.

೩. ಮಗದೊಂದು ಹಾಡಿನಲ್ಲಿ

ನಾಡೊಳಗ ನಡಿತ ಚಳವಳಾ ತಿಳಿರಿ ಈ ಕಳಾ ಎಬಿಸಿದರು ಕೀಳಾ
ದೇವರೇಳು ಮಂದಿ ಆತೊ ಬಹಳಾ ಅಲ್ಲಲ್ಲಿಗೆ ಮಾಡುರೊ ಮ್ಯಾಳಾ
ಸದಖೊಟ್ಟಿಗುಣದವರು ಬೆಳಸ್ಹೇಳುವರೋ ಸುಳ್ಳಾ
(ಇದೇ ಪದದ ಕೊನೆಯ ಐದನೆಯ ಚೌಕದಲ್ಲಿ)
ಊರುರಿಗೆ ಎಷ್ಟೋ ಜನರು ಹಿಂಗ ಮನಸಿಗೆ ಬಂದಾಂಗ ಕುಣಿಯವರು ಇಲ್ಲ
ಅಕಲಾ ಮಾರ್ಗಬಿಟ್ಟು ಕೆಟ್ಟ ಹೋದಾರ ಸಕಲಾ ಮೂರ್ಖರ ಕಷ್ಟಕಳವಿಲ್ಲಾ
ಮಹಾನರಕ ಹೊಂದುವರು ಪಾಪದ ಅಳತಿ ಏನಬಲ್ಲಾ
ಇದರೊಳಗ ದೇವಗುರುಹೆಚ್ಚ ಆತನಿಗೆ ಮೆಚ್ಚ ತಿಳಿಯೊ ಗುರುಲೀಲಾ
ಗಟ್ಟಿಮುಟ್ಟಾ ಹಿಡಿಯೊ ಪಾದಕಮಲಾ ವಾಕ್ಯದಲ್ಲಿ ಇಟ್ಟು ಹಂಬಲಾ
ಸಂಸಾರರಣ್ಯದಹಿಸಿ ಮುಕ್ತಿಕೊಡುವ ಭೂಪಾಲಾ
ಒಂದು ನಿಮಿಷ ಬ್ರಹ್ಮ ಚಿಂತನಾ ಮಾಡುವಂಥಾಧಮನಾ ಆದರೆ ಅದು
ಮೇಲಾ ಅವನಿರುವಸ್ಥಳವು ಸರವೆಲ್ಲಾ ಕ್ಷೇತ್ರ ಅನಸಿಕೊಂತ ಅನಗಾಲಾ
ಸೋಹಂಭಾವದಿಂದೆ ವರ್ತಿಸಿ ಆಡುವನು ಲೀಲಾ..

ಚಾಲ:

ಗುರುವೆಂದು ಭಾವಿಸಿ ಪೂಜಿಸಿ ಅಳಿಯೊ ಮುಮ್ಮಲಾ ಕುಲಚಲಾ
ಚಿನ್ಮಯ ಚನ್ನಮನಹೊಂದಿರದಾವಾಗ ಬತ್ತ ಅಕಲಾ-ಬೋಲಬಲಾ
ಹಾರೂಗೇರಿ ಗ್ರಾಮ ಪ್ರಾಣೀಶ ಇರುವಂಥಾ ಸ್ಥಳಾ-ರಂಗಲಾಲಾ
ಗುಲಾಬದಾಸ ಮಹಾರಾಜನ ಅನಕೂಲಾ ಪ್ರಸನ್ನಾಗಿ ಕೊಟ್ಟನ ಮಗ ಫಲಾ
ಅಲಬೈರಿಯು ಸಾರಿದ ಸಣ್ಣ ಬಾಲ

ಕೂಡನುಡಿ:

ನಿಮ್ಮೊಳಗ ನೀವು ಅರಿಯಬೇಕ ಒಳಹೊರಗಪಾಕ ಆಗಿ ಜಳಜಳಾ
ಸ್ವಯಮ್‌ ಪ್ರಕಾಶದಲ್ಲಿ ನಿರ್ಮಳಾ ದುಷ್ಟರಿಗೆ ನಂಬಿದವರು ದುರಳಾ
ಸದಖೊಟ್ಟಿ ಗುಣದವರು ಬೆಳಸ್ವೇಳುವರೆಲ್ಲಾ ಸುಳ್ಳಾ

ಹಿಂದನವರೆಡು ಪದ್ಯಗಳ ರಚನೆಯ ಕಾಲದಲ್ಲಿ ವ್ಯಸನಕ್ಕೋಸುಗ ವಗ್ಗರ ಮಠಕ್ಕೆ ಹೋಗುತ್ತಿರಬಹುದು. ಅಲ್ಲಿರುವ ಸಾಧು ಸತ್ಪುರುಷರಿಗೆ ಭಯ ಭಕ್ತಿಯಿಂದ ನಡೆದುಕೊಳ್ಳು ಪರಿಪಾಠದಂತೆ, ಪದ್ಯದ ಕೊನೆಯ ದೀಕ್ಷೆ ತೆಗೆದುಕೊಂಡಿಲ್ಲವೆಂಬುದಕ್ಕೆ ಕಡೆಯ ಪದ್ಯದಿಂದ ವ್ಯಕ್ತವಾಗುವುದು. ಹೇಗೆಂದರೆ “ಚಿನ್ಮಯ ಚನ್ನಮನಹೊಂದಿದಾಗ ಬತ್ತ ಅಕಲಾ-ಬೊಲ್‌ಬಲಾ” ಇದಕ್ಕೆ ಹೊಣೆಯಾರೆಂದರೆ “ಗುಲಾಬದಾಸ ಮಹಾರಾಜನ ಅನಕೂಲಾ ಪ್ರಸನ್ನಾಗಿಕೊಟ್ಟ ನಮಗೆ ಫಲಾ” ಅಂದರೆ ಗುಲಾಬದಾಸ ಬುವಾನಿಂದ ಪ್ರೇರಿತ ನಾದಾಗಲೇ ಚನ್ನವೃಷಭೇಂದ್ರ ಗುರುಗಳ ಸಾನಿಧ್ಯಹೊಂದುವ ಫಲ ದೊರೆಯಿತು ಎಂದ ಹಾಗಾಗುತ್ತದೆ.

ಚೆನ್ನ ವೃಷಭೇಂದ್ರಸ್ವಾಮಿಗಳಿಂದ ಗುರುಕರುಣೆ

ಅಲಭೈರವಿ ಹುಟ್ಟಿನಿಂದ ಜೈನ ಆದರ ಅದ್ವೈತ ಸಿದ್ಧಾಂತ ಕಡೆಗೆ ಒಲೆದವರು. ಇವರ ಗುರುಗಳಲ್ಲಿ ಒಬ್ಬರಾದ ಶ್ರೀ ಚೆನ್ನವೃಷಭೇಂದ್ರರು ಅದ್ವೈತಿಗಳು. ಈ ಚನ್ನವೃಷಭೇಂದ್ರು ಕೂಡ ಲೀಲಾಮೂರ್ತಿಗಳಾಗಿದ್ದರೆಂದು ತಿಳಿದುಬರುತ್ತದೆ. ಚೆನ್ನವೃಷಭೇಂದ್ರು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದ್ಯಾವನ ಕೊಂಡದವರು. ಇವರ ಗುರುಗಳು ಬೂದನಗುಡ್ಡದ ‘ಭೂತನಾಥ’ರೆಂಬ ಅವಧೂತರೆಂದು ತಿಳಿದುಬರುತ್ತದೆ. ಈ ಅವಧೂತರ ಬಗ್ಗೆ ಹೆಚ್ಚಿನ ವಿವರ ತಿಳಿದು ಬುರುವುದಿಲ್ಲ.

ಗುಲಾಬಸಾಬ ಬುವಾನ ಸಂಪರ್ಕ ಆತನಿಂದ ಆಧ್ಯಾತ್ಮಿಕ ಪ್ರೇಣೆ ಮುಂದೆ ಸಮರ್ಥರಾದ ಚನ್ನವೃಷಭೇಂದ್ರ ಲೀಲಾಮೂರ್ತಿಗಳಿಂದ ಗುರುದೀಕ್ಷೆ. ಈ ಪೌರ್ವಾ ಪರ್ಯವನ್ನು ಒಪ್ಪಬಹುದು.

ಈ ಗುರುವಿನ ಪೂರ್ವದಲ್ಲಿಯೇ ಆಲಭೈರವಿ ದೊಡ್ಡಾಟಗಳ ಹಾಗೂ ಅನುಭಾವ ಹಾಡುಗಳ ರಚನೆ ಪ್ರಾರಂಭವಾಗಿತ್ತು.

ಚನ್ನವೃಷಭೇಂದ್ರ ಸ್ವಾಮಿಗಳು ಈಗಾಗಲೇ ಹಾರೂಗೇರಿಗೆ ಬಂದು ಪತ್ತಾರ ಮನೆಯಲ್ಲಿ ಉಳಿದು ಆಧ್ಯಾತ್ಮ ಚರ್ಚೆ ಪ್ರಾರಂಭಿಸಿದ್ದರು. ಈಗಾಗಲೇ ಗುಲಾಬದಾಸ ಬುವಾ ಅವರ ಮಠದಲ್ಲಿ ನಡಿಯುತ್ತಿದ್ದ ವ್ಯವಹಾರದಿಂದ ಕೆಲವರು ಬೇಸತ್ತು ಈ ಮಹಾ ಲೀಲಾಮೂರ್ತಿ ಆಧ್ಯಾತ್ಮದ ಮೇರು ಪರ್ವತ ಚನ್ನವೈಷಭೇಂದ್ರ ಮಹಾರಾಜರ ಕಡೆಗೆ ಬರಹತ್ತಿದರು. ಇದನ್ನು ಸಹಿಸದ ಕೆಲವರು (ವಗ್ಗರ ಮಠದಲ್ಲಿರುವವರು) ಚನ್ನವೃಷಭೇಂದ್ರ ಸ್ವಾಮಿಗಳ ಅಲ್ಲಪ್ಪನಿಗೆ ಅವರನ್ನು. ಹಾರೂಗೇರಿಯಿಂದ ಹೊರಹಾಕುವ ಉದ್ದೇಶದಿಂದ ಅಲ್ಲಪ್ಪನಿಗೆ ಗಂಟುಬಿದ್ದು ವಿಡಂಬನಾತ್ಮಕವಾಗಿ ಒಂದು ಪದವನ್ನು ತಯಾರ ಮಾಡಿಸಿಕೊಂಡು ಊರಲ್ಲಿ ಹಾಡುತ್ತ ತಿರುಗಾಡಹತ್ತಿದರು.

ಈ ಹಾಡು ಸ್ವಲ್ಪ ದಿನಗಳಲ್ಲಿ ಚನ್ನವೃಷಭೇಂದ್ರು ಕರ್ಣಕ್ಕೂ ಮುಟ್ಟಿತು. ಆಗ ಶಿಷ್ಯರು ಅಸಮಾಧಾನದಿಂದ ಕುಳಿತಿದ್ದನ್ನು ಗುರುಗಳು ನೋಡಿ “ಹಂದಿಗಳಿದ್ದರೆ ಊರಿನ ಹೊಸಲು ತಿಂದು ಊರ ಸ್ವಚ್ಛ ಮಾಡುತ್ತವೆ. ಇದರ ಹೊರತು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಇಂತಹ ಹಂದಿಗಳನ್ನು ಊರಲ್ಲಿ ನಿರ್ಮಾಣ ಮಾಡಿಬಿಡುವ ಕೊರವನಿಗೆ ಬುದ್ದಿಕಲಿಸಬೇಕೆಂದು ಹೇಳಿದರು.

ಆಗ ಭಕ್ತನು ಆ ಕೊರವನಿಗೆ ಏನು ಮಾಡುವೀರಿ ಎಂದು ಕೇಳಲು ಗುರುಗಳು: “ಅಯ್ಯಾ ಊರ ಹೊಲಸು ತಿಂದು ತಾನೂ ಮಲಿನಗೊಂಡು ನೋಡುವವರ ಮನವನ್ನು ಮಲಿನಗೊಳಿಸುವ ಹಂದಿಗಳನ್ನು ಬಿಟ್ಟು, ಹೊಲಸುರೊಜ್ಜಿನ ಸ್ನೇಹವಿಲ್ಲದ ದವಸಧಾನ್ಯಗಳನ್ನು ತಿಂದು ಉತ್ತಮಮಾಂಸ ನೀಡುವ ಬಿಳಿ ಹಂದಿಗಳನ್ನು ಸಾಕು. ಪರರಿಗೆ ಉಪದ್ರವ ಕೊಡುವುದೂ ನಿಲ್ಲುತ್ತದೆ ಹಾಗೂ ನಿನ್ನ ಜೀವನವೂ ಸಾಗುತ್ತದೆಂದು ತಾಕೀತು ಮಾಡುತ್ತೇನೆ. ನೀವು ಮಾತ್ರ ಆ ಕೊರವ ಭಡವೆ ಮಗನನ್ನು ಹಿಡಿದು ತನ್ನಿರಿ” ಎಂದರು. ಯಾರೂ ಏನೂ ಮಾತಾಡದೆ ಮೌನ ಧರಿಸಿದರು.

ಮುಂದೆ ಕೆಲವು ದಿನಗಳು ಹೋಗುವುದರೊಳಗಾಗಿ ಒಂದು ದಿನ ಗುರುಗಳು ಇಳಿಹೊತ್ತಿನಲ್ಲಿ ತಿರುಗಾಡಲಿಕ್ಕೆಂದು ಶ್ರೀ ಅಚ್ಚಪ್ಪಾ ಧರಮಟ್ಟಿಯವರ ಮರಡಿಯ ಕಡೆಗೆ ಹೋಗಿದ್ದರು. ಅವರ ಸಂಗಡ ನಾಲ್ಕೈದು ಜನ ಭಕ್ತರಿದ್ದರು. ವಾಯುವಿಹಾರ ಮುಗಿಯಿಸಿ ಊರ ಕಡೆಗೆ ಹಿಂದಿರುಗುತ್ತಿರುವಾಗ ಊರ ಹೊರಗಿನ ಕರೆಯೆ ಬದಿಯ ರಸ್ತೆಯಿಂದ ಅಲ್ಲಪ್ಪನವರು ಹಾಗೂ ನಾಲ್ಕಾರು ಮಿತ್ರರು ಅಂದರೆ ಪದಮಾಡಿಸಿ ಕೊಳ್ಳುವವರೂ ಸೇರಿ ಶ್ರೀಕರಿಸಿದ್ಧೇಶ್ವರ ಗುಡಿಯ ಕಡೆಗೆ ನಡೆದಿದ್ದರು. ಇವರನ್ನು ದೂರದಿಂದಲೇ ಕಂಡ ಗುರುಗಳ ಸಂಗಡ ಇದ್ದ ಭಕ್ತರು ‘ಯಪ್ಪಾ ಮೊನ್ನೆ ನೀವು ಕೇಳಿದ ಕೊರವ ಅಲ್ಲಿ ನಡೆದಿದ್ದಾನೆ. ನೋಡಿರೆಂದನು. ಆಗ ಶ್ರೀಗಳು ‘ಎಲ್ಲಿರುವನೋ? ಅವರಲ್ಲಿ ಆತನ ಗುರುತ ಹೇಳು’ ಅನ್ನಲು ಭಕ್ತನು ಗುರುತ ಹೆಳಿದನು. ಕೂಡಲೇ ಸ್ವಾಮಿಗಳು ಭಗವಾ ಸೊಂಟದವರೆಗೆ ಎತ್ತಿ ಹಿಡಿದು ಓಡುತ್ತ ಸಮೀಪಕ್ಕೆ ಹೋಗಿ ಡುರ್‌ರ್‌ರ್‌ರ್‌ “ಅಲಕ್‌” ಎನ್ನಲು ಅಲಭೈರವಿಯ ಸಂಗಡ ಇದ್ದವರೆಲ್ಲಾ ಓಡಿ ಹೋದರು. ಯಾಕೆಂದರೆ ಶ್ರೀಗಳು ಬಡಿಯುವ ಸಾಧುಗಳೆಂದು ಹಾರೂಗೇರಿಯಲ್ಲಿ ಸುದ್ದಿ ಹಬ್ಬಿತ್ತು. ಅಲ್ಲಪ್ಪನು ಗಾಬರಿಯಾಗಿ ಓಡಲು ಬಾರದೆ ಅಂಜಿ ನೆಲಕ್ಕೆ ಕುಪ್ಪಳಿಸಿದನು. ಚನ್ನವೃಷಭೇಂದ್ರ ಸ್ವಾಮಿಗಳು ಬಂದವರೇ ಆತನ ಮೇಲೆ ಕುಳಿತು ಕುಸ್ತಿಯ ಪಟುಗಳಂತೆ ಸವಾರಿ ಹಾಕಿದರು. ಅಲ್ಲಪ್ಪನವರೊಡನೆ ಇದ್ದವರು ಬಡಿಗೆಯ ಸಾಧು ಅಲ್ಲಪ್ಪ ಅವರನ್ನು ಬಡಿಯುವುದನ್ನು ದೂರು ನಿಂತು ನೋಡುತ್ತಿದ್ದರು. ಸ್ವಾಮಿಗಳ ಹತ್ತಿರ ಬಂದು ಬಿಡಿಸುವ ಧೈರ್ಯ ಒಬ್ಬರಿಗೂ ಇಲ್ಲ. ಆದರೆ ಲಚ್ಚಪ್ಪ ಧರ್ಮಟ್ಟಿ ಅಂಬುವನು ಧೈರ್ಯಮಾಡಿ “ಅವರ ತಂದೆಗೆ, ಒಬ್ಬನೇ ಮಗನು, ಪಾಪ ಅವವನನ್ನು ಕ್ಷಮಿಸಿ ಬಿಡಿರೆಂದು” ಕೈ ಮುಗಿದು ಬೇಡಿಕೊಳ್ಳಲು “ಅವನನ್ನು ನಾನೇನೂ ಮಾಡುವುದಿಲ್ಲಾ ಆತನ ಒಳಗಿದ್ದ ಹೊಲಸನ್ನು ಮಾತ್ರ ಕಕ್ಕಿಸಿ ಶುದ್ಧಬದ್ಧನನ್ನಾಗಿ ಮಾಡುತ್ತೇನೆ” ನೋಡು ಎನ್ನುತ್ತ ಎರಡು ಮೂರು ಸಾರೆ ಡುರುಕಿ ಹೊಡೆದು ಬಡಿದು ಎದ್ದು ನಡೆದರು. ಕೆಳಗೆ ಬಿದ್ದ ಅಲ್ಲಪ್ಪನು ಸಾವರಿಸಿಕೊಂಡು ಎದ್ದು ನಿಶ್ಚಿಂತನಾಗಿ ಸ್ವಾಮಿಗಳ ಬೆನ್ನು ಹತ್ತಿನಡೆದನು. ಆಗ ಗುರುಗಳ ಸಂಗಡಿದ್ದ ಭಕ್ತರು ‘ಎ ಹುಚ್ಚಾ ಮತ್ತೇಕೆ ಬೆನ್ನ ಹತ್ತಿರುವಿ ಏನೋ ನಿನ್ನ ಪುಣ್ಯಜೋರೈತಿ. ಜೀವದಿಂದ ಉಳಿದಿರುವಿ ಅದೇ ನಿನ್ನ ಪುಣ್ಯ’ ಅನ್ನಲು ಅಲ್ಲಪ್ಪನು “ಜೀವ ಭಾವದಿಂದ ಉಳಿಯಬಾರದೆಂದೇ ಬೆನ್ನು ಹತ್ತಿರುವೆ” ಅನ್ನುತ್ತ ಶ್ರೀಗಳ ಹಿಂದೆ ನಡೆದನು. ನೇರವಾಗಿ ಶ್ರೀಗಳು ಶಾಸ್ತ್ರ ಹೇಳುತ್ತಿರುವ ಪತ್ತಾರ ಪಾವಡೆಪ್ಪನ ಮನೆಗೆ ಬಂದರು. ಒಳಗಿದ್ದ ಭಕ್ತರು ಗುರುಗಳು ಕೈಕಾಲು ತೊಳೆಯಲು ನೀರು ತಂದರು. ಆಗ ಗುರುಗಳು ನಿಂತಿದ್ದರು. ‘ನೀರು ತಗೊಳ್ಳಲೆ ಭಡವೆ ಮಗನೆ’ ಒಳಗಿನ ಹೊಲಸು ನಾನು ತೊಳೆದಿದ್ದೇನೆ, ಮೇಲಿನ ಹೊಲಸು ನೀನು ತೊಳೆದು ಕೊ’ ಎಂದರು.

ಅಲ್ಲಪ್ಪನವರು ತಂಬಿಗೆ ತಕ್ಕೊಂಡು ಹರುಬರಕಾಗಿ ಕೈಕಾಲು ಮುಖ ತೊಳೆದು ಕೊಂಡದ್ದನ್ನು ನೋಡಿದ ಶ್ರೀಗಳು ‘ಇದೇನೋ? ಬೇಬಿಟ್ಟಿ ಕೆಲಸದಂತೆ ತೊಳೆದು ಕೊಂಡ ಬಿಟ್ಟಿ’ ಎನ್ನಲು ‘ಅಹುದು ಗುರುವೇ ಇದರ ಮೋಹ ಅಳಿದಾಗಲ್ಲವೆ ಸಿದ್ಧ ವಸ್ತುವಿನ ಪರಿಚಯವಾಗುವದು’ ಎಂದನು. ‘ತಥಾಸ್ತು ಹಾಗೇ ಆಗಲಿ’ ಎಂದರು ಗುರುಗಳು.

ಗುರುಗಳು ಮುಖ ತೊಳೆದುಕೊಂಡು ಸಿಂಹಾಸನದ ಮೇಲೆ ಕುಳಿತುಕೊಂಡರು.

ಆಗ ಭಕ್ತರೆಲ್ಲ ಮುಂದೆ ಸಾಲಾಗಿ ಕುಳಿತುಕೊಂಡರು. ಅಲ್ಲಪ್ಪನನ್ನು ಶ್ರೀಗುರು ಕರೆದು ಭಸ್ಮಿಭೂತನಾಗಿ ಪೂಜೆ ಮಾಡೆಂದು ಆಜ್ಞಾಪಿಸಿದರು. ಕೂಡಲೇ ಅಲ್ಲಪ್ಪನು ಶ್ರೀಗಳ ಪಾದ ಪೂಜೆ ಮಾಡಿದನು.

ಹೃದಯದಿಂದ ನಮಸ್ಕರಿಸಲು ಅಲ್ಲಪ್ಪನವರನ್ನು ಶ್ರೀಗಳು ತಮ್ಮ ವರದ ಹಸ್ತವನ್ನು ಶಿರದ ಮೇಲಿಟ್ಟು ಕರ್ಣದಲ್ಲಿ ಬೀಜ ಮಂತ್ರವನ್ನುಸುರಿದರು. ಬಳಿಕ ಅಲ್ಲಪ್ಪನವರು ಹಿಂದೆ ಸರಿದು ಮೋಕ್ಷಾಪೇಕ್ಷಿಗಳ ಸಾಲಿನಲ್ಲಿ ಕುಳಿತುಕೊಂಡರು. ಗುರುಗಳು ಶಾಸ್ತ್ರ ಹೇಳಿ ಎಲ್ಲರನ್ನೂ ಆಶೀರ್ವದಿಸಿದರು. ಕೆಲವು ಭಕ್ತರು ಅಲ್ಲಿಯೇ ಕುಳಿತುಕೊಂಡರು, ಅವರಲ್ಲಿ ಅಲ್ಲಪ್ಪನೂ ಒಬ್ಬನು. ಇದ್ದವರಲೊಬ್ಬನು ‘ಅಲ್ಲಪ್ಪಾ ನಿನಗೇನಾದರೂ ಶಾಸ್ತ್ರ ತಿಳಿಯಿತೆ’ ಎಂದು ಕೇಳಿದನು.ತಿಳಿಯಿತು. ಎಂದು ಅಲ್ಲಪ್ಪನು ಗೋಣು ಅಲ್ಲಾಡಿಸಿದನು. ಅದನ್ನು ಕಂಡ ಶ್ರೀಗಳು “ನಿನಗೇನು ತಿಳಿಯಿತೊ ಮಗನೆ ಬೊಗಳು” ಎಂದರು. ಆಗ ಅಲ್ಲಪ್ಪನವರು ಎದ್ದು ನಿಂತು”

ಪರಶಿವನೆ ಧರೆಗೆ ತಾನೆ ಧರಿಸಿದ
ನರರೊಳು ವರಸಾಧುರೂಪವಾ
|| ಪಲ್ಲ ||

ವಿರತಿಯಮಾರ್ಗವ ನಿರುತದಿ ಬೋಧಿಸಿ
ಕರುಣಾಕರನು ಭರದಿಂ ಪೊರೆವಾ
|| ||

ಶುಕಸನಕಾದಿಕ ಅಖ್ಖಿಲ ಸಾಧುಗಳ
ನಿಕರಕಧಿಕವ ಪ್ರಕಟಾಂಶಿಕರು
|| ||

ಘನವಾದ ಸದ್ಗುರುವಿನ ಅವತಾರಕೆ
ಚೆನ್ನವೃಷಭತಾ ಅನಘನೆನಿಪ
|| ||

ಎಂದು ಹಾಡುತ್ತಾ ಗುರುಗಳ ಪಾದಾರವಿಂದಗಳಲ್ಲಿ ಭಕ್ತಿಪೂರ್ವಕವಾಗಿ ಪ್ರಣಾಮಿಸಲು ಆಗ ಈತನ ಕೈಹಿಡಿದು ನಿಲ್ಲಿಸಿ “ಕೊರವನ ನೋಡಿದರಾ, ನೀವೆಲ್ಲರು ಕೊರವನ ನೊಡಿದಿರಾ, ಕೊರವನ ನೋಡಿರಿ, ಗರಡಿಸಾಧಕರೆಲ್ಲಾ, ಮರವೆ ಆತನ ಹರಿದು, ಪರಿಶೋಭಿಪ ಧೀರ, ಕೊರವನ ನೋಡಿದಿರಾ”, ಎಂದು ರಾಗಾಲಾಪ ಮಾಡುತ್ತ ಗಹಗಹಿಸಿ ನಗುತ್ತ ಅಪ್ಪಿಕೊಂಡು ಮುದ್ದಾಡಿದರು.

ಶ್ರೀಗಳ ಅಂತಃಕರಣದ ಕೃಪಾದೃಷ್ಟಿಕಾಲ ಅಲ್ಲಪ್ಪನವರಿಗೆ ಒದಗಿತೆಂದೇ ಅವರೆಲ್ಲ ಭಾವಿಸಿದರು. ಮುಂದೆ ಅಲ್ಲಪ್ಪನವರು ವಗ್ಗರ ಮಠದ ಸಂಬಂಧ ಕಡಿಮೆಮಾಡಿ, ಶ್ರೀಗಳ ಬಿಡಾರದಲ್ಲಿಯೇ ಇರಹತ್ತಿದ್ದರು. ಶಾಸ್ತ್ರ ಮುಗಿದ ನಂತರ ಎಲ್ಲರೂ ಎದ್ದು ಹೋದ ಮೇಲೆ ಅಲ್ಲಪ್ಪನು ಗುರುಗಳ ಸಂಗಡ ಅನೇಕ ಚರ್ಚೆ ಮಾಡುತ್ತಿದ್ದನು. ಕೆಲವು ಸಲ ಹಾಡಿನಲ್ಲಿಯೇ ಪ್ರಶ್ನೆ ಮಾಡುತ್ತಾ ಸಾಗಿದಂತೆ ಗುರುಗಳು ಸಮಾಧಿ ಹತ್ತಿದವರಂತೆ ಬ್ರಹ್ಮಾನಂದದಲ್ಲಿ ತಲ್ಲೀನರಾಗಿಬಿಡುತ್ತಿದ್ದರು. ಈ ದೃಶ್ಯ ನೋಡಿದವರು ಮೊನ್ನೆಯವರೆಗೂ ಇದ್ದರು.

ಹಾರೂಗೇರಿಯಲ್ಲಿಯ ಪ್ರಭಾವೀ ಸಾಧುಗಳೆನಿಸಿದ ಶ್ರೀ ಗುಲಾಬದಾಸ ಬುವಾರ ವಿಷಯ ಚನ್ನವೃಷಭೇಂದ್ರ ಸ್ವಾಮಿಗಳಿಗೆ ಸಂಪೂರ್ಣ ತಿಳಿಯಿತು. ಆಗ ಶ್ರೀಗಳು ಆ ಸಾಧುವಿನ ಬಗ್ಗೆ ಕನಿಕರಿಸಿ ಕೂಡಿದ ಜನರ ಮುಂದೆ ಕೆಲವು ನುಡಿಗಳನ್ನಾಡಿದರು-ಆ ಸಾಧುವಿನ ಬಗ್ಗೆ ನೀವೇನು ಹೇಳುವಿರಿ? ಮುಗದಾಣಹಾಕ ಬೇಕಾದ್ದು ಮನಕ್ಕೆ ಆ ನಿರ್ಜೀವ ಶಿಶ್ನಕ್ಕಲ್ಲಾ. ಕಾಮವನ್ನು ಮನಸಿಜ ಎಂದು ಸಂಬೋಧಿಸಿದ್ದುಂಟು. ಕಾಮಜನಿಸಿವುದು ಮನದಲ್ಲಿಯೇ ಹೊರತಾಗಿ ಜಡ ಇಂದ್ರಿಯಗಳಲ್ಲಿ ಜನಿಸುವುದಿಲ್ಲ. ಮನದಲ್ಲಿ ಕೊನರಿದ ಕಾಮ ಜಡ ಇಂದ್ರಿಯಗಳಲ್ಲಿ ಪ್ರವೇಶಿಸಿ ಅವುಗಳನ್ನು ಚೇಷ್ಟಿಸುವುದು. ಮನವಿಲ್ಲದಿದ್ದಲ್ಲಿ ಇಂದ್ರಿಯಗಳು ಇದ್ದರೂ ನಿರ್ಜೀವಸ್ಥಿತಿಯಲ್ಲಿರುತ್ತವೆ. ಇಂದ್ರಿಯಗಳನ್ನು ನಿರ್ಜೀವ ಸ್ಥಿತಿಯಲ್ಲಿಡಬೇಕಾದರೆ, ಮನಕ್ಕೂ ಅವಕ್ಕೂ ಸಂಬಂಧ ಬರದಂತೆ ಎಚ್ಚರವಿರುವುದುಲೇಸು. ಹೊರತಾಗಿ ಅವುಗಳನ್ನು ಚುಚ್ಚಿಕೊಚ್ಚುವದರಿಂದ ಯಾವ ಪುರುಷಾರ್ಥವೂ ಸಾಧಿಸಲಾರದು. ಇದು ಜನರಿಂದ ಮೆಚ್ಚುಗೆ ಪಡೆಯುವ ಹುಚ್ಚರಾಟ. ಇಂಥದಕ್ಕೆ ನಾನೆಂದೂ ಮೆಚ್ಚುವದಿಲ್ಲಾ ‘ಕಾಮ ಜನಿಸುವ ಮನದಲ್ಲಿ ಕಾಮಾರಿಯಾದ ಶಿವನನ್ನು ನೆಲೆಗೊಳಿಸಿ ಕಾಮವನ್ನು ಮನದಲ್ಲಿಯೇ ಸುಟ್ಟುತೀರಬೇಕು’ ಎಂದು ಖಡಾಖಂಡಿತವಾಗಿ ನುಡಿದುಬಿಟ್ಟರು.

ಮುಂದೆ ಕೆಲವು ದಿನಗಳಲ್ಲಿ ಶ್ರೀಗಳ ಮಾತು ಸತ್ಯವಾಯಿತು. ಶ್ರೀ ಗುಲಾಬದಾಸ ಸಾಧುವಿನ ಹಟಯೋಗ ಕ್ರಮೇಣ ಕಡಿಮೆಮಾಡಿ ಬತ್ತಲೆ ತಿರುಗಾಡುತ್ತಿದ್ದ ಬುವಾ ಭಗವಾ ಹಾಕಿಕೊಂಡನು. ವಗ್ಗರ ಮಠಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಯಿತು. ಕಡೆಗೊಂದುದಿನ ಆ ಸಾಧು ಹಾರೂಗೇರಿಯಿಂದಲೂ ದೂರ ಅನಂತದೂರ ಎಲ್ಲಿಯೇ ಮಾಯವಾಗಿಬಿಟ್ಟರು.

ಚನ್ನವೃಷಭೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡ ನಂತರ ಅಲ್ಲಪ್ಪನು ಪರೆಬಿಟ್ಟ ಹಾವಿನಂತೆ ಹರಿದಾಡಹತ್ತಿದರು. ಇವರ ಸಂಗಡ ಯಾವಾಗಲೂ ಜನರ ಗುಂಪು ಇದ್ದೇ ಇರುತ್ತಿತ್ತು. ಸುತ್ತಲಿನ ಗ್ರಾಮದ ಮುಖಂಡರು ಕರೆದುಕೊಂಡು ಹೋಗಿ ಶಾಸ್ತ್ರ ಹೇಳಿಸಹತ್ತಿದರು. ಕೆಲವರು ಇವರನ್ನೇ ಗುರುಗಳೆಂದು ಸ್ವೀಕರಿಸಿದರು.

ಅದಕ್ಕೆ ಅಲ್ಲಪ್ಪನವರು ಸ್ವಲ್ಪವೂ ಸಿಟ್ಟಿಗೇಳದೇ ಆ ಮಿತ್ರರಿಗೆ ಅನುವಿನಿಂದ ತಿಳಿಸಿ ಹೇಳುತ್ತ ಅವರಿಂದಲೇ ಈ ಪದ್ಯವನ್ನು ಅನ್ನಲಿಕ್ಕೆ ಹಚ್ಚಿದನು.

ಪಾವನಾತ್ಮರು ಶಿವನ ಭಜಿಪರು
ಭುವನದೊಳಗೆ ಪಾವನಾತ್ಮರು ಶಿವನಭಜಿಪರು
|| ಪಲ್ಲ ||

ದೇವಾಂಶಿಕರು ಜೀವನ್ಮುಕ್ತರು
ಕೇವಲ ಆನಂದ ಭಾವ ಭರಿತರು
|| ಅನುಪಲ್ಲವಿ ||

ಭುವಿಯೊಳು ಎಲ್ಲ ಜೀವಿಗಳಿಗೆ
ದೇವಭಕ್ತಿ ಪ್ರಭಾವವ ತೋರಿಸಿ
ಸೇವಾನ್ವಿತರಿಗೆ ತಾವಾತ್ಕಾಲಕೆ
ಈಯ್ವ ಮೋಕ್ಷವು ಭಾವಿಸಲನುಪಮ
|| ||

ಸಂಗಮಾಡಲು ಪಿಂಗದಮಲ
ಸಂಗಮೇಶ್ವರ ಲಿಂಗಬೋದಿಸಿ
ಮಂಗಲಮಹಿಮಾಂಗನೊಳು
ಭಂಗಿಸುತಿಹ ತುಂಗ ಪ್ರಮಥರು
|| ||

ದೃಷ್ಟಿ ಮಾತ್ರದಿಂದ ಭ್ರಷ್ಟಭವಿಗಳ
ಕಷ್ಟ ಕರ್ಮವ ನಷ್ಟಗೊಳಿಸುತ
ಅಷ್ಟಾವರಣಕೆ ಇಷ್ಟಮಾಡಲೆ
ಶ್ರೇಷ್ಠ ಹರಗಿರಿಗೆ ಮುಟ್ಟಿದಮರರು
|| ||

“ಏನೋ ಅಲ್ಲಪ್ಪಾ ಗುರುಗಳು ಹೇಳಿದ್ದು ನಮಗೇನೂ ತಿಳಿಯಲೊಲ್ಲದು, ಅವರು ಹೇಳುವಾಗ ನಿದ್ದೆ ಬರುತ್ತದೆ ನಾವೇನು ಅಲ್ಲಿ ಬರುವುದಿಲ್ಲಾ” ಅನ್ನುತ್ತ ತಪ್ಪಿಸಹತ್ತಿದರು. ಆಗ ಅಲ್ಲಪ್ಪನವರು ತೆಪ್ಪಗೆ ಕೂಡ್ರದೆ ಇನ್ನುಳಿದವರಿಗೆ ತಿಳಿಹೇಳಿ ಪದ್ಯವನ್ನು ಕಟ್ಟಿದರು.

ಪದ

ಹ್ಯಾಂಗ ತಿಳಿದಿತಿಂವಗೆ ಅನುಭಾವಾ
ಹ್ಯಾಂಗ ತಿಳಿದಿತಿಂವಗೆ ಅನುಭಾವಾ
|| ಪಲ್ಲ ||

ರಾಗಭೋಗವನು – ನೀಗದೆ ಸುಗುಣದಿ
ಬಗೆಯದೆ ಯೋಗಿಸಂಗ ತ್ಯಾಗ ಮಾಡುವಾ
|| ||

ಪಾಪರೂಪ ಭವ ತಾಪದಿ ಕೋಪದಿ
ಆಪತ್ತರಿಯದೆ ಭ್ರಮಿಸಿ ತಪ್ಪಿಕೆಡುವಾ
|| ||

ಹಿಂದುದೇಶದೊಳ-ಛಂದುಳ್ಳ ಹಾರೂಗೇರಿ
ಸುಂದರದೇವರಕೊಂಡ ಕಂದನಾಗದೆ
|| |

ಪದ

ಸತ್ಯರ ಸಂಗವು ಮಾಡೊ
ಮಿಥ್ಯಮಾಯಾ ಪ್ರಪಂಚದಭಿಮಾನ ದೂಡಿದಂಥಾ ಸತ್ಯ
|| ಪಲ್ಲ ||

ಶ್ರುತಿ ಶಾಸ್ತ್ರಗಮದೊಳು ಪ್ರತಿಪಾದನವ ಮಾಡಿ
ಅತಿಶಯದ ಪರೋಕ್ಷ ಸ್ಥಿತಿಯನು ಹೊಂದಿದಂಥ
|| ||

ವರವೈರಾಗ್ಯದಿಂದೆ ಚರಿಸುವ ಧರೆಯೊಳು
ಪರತರಪರಿಪೂರ್ಣ ಸ್ಥಿರ ಮುಕ್ತಿ ಹೊಂದಿದಂಥ
|| ||

ನಾನತ್ವದಲ್ಲದೊಂದೇ ಜ್ಞಾನ ಸೌಭಾಗ್ಯಸೇರಿ
ಘನವಾದ ಹಾರೂಗೇರಿ ಚನ್ನನ ಹೊಂದಿದಂಥಾ
|| ||

ಪದ

ಅರುವೆಕಾರಣವೊ – ಗುರುಭಕ್ತರಿಗೆ ಅರುವೆಕಾರಣವೊ || ಪಲ್ಲ ||
ಅರುವಿನ ಅರಿವು ಅರಿಯಲು ಸಾಧನ
ದಿರವಾಗಿರಬೇಕನುದಿನ ಕಾರಣ
ಕರಣತ್ರಯದೋಷ ಅಳಿದು ಸದಾಘನ
ಪರಮವಿರತಿಯೊಳು ವರಶಿಷ್ಯ ಲಕ್ಷಣ
|| ||

ಅಂತರಂಗದಕ್ಷ ಸಾಧನ ಮೂಲಾ
ಅಂತಃಕರಣ ಶುದ್ಧವಾಗಲೇ ಇಲ್ಲಾ
ಇಂಥವ ಗುರುಪುತ್ರನಾಗಲು ಸಲ್ಲಾ
ಸಂತೋಷಾದವನಿಗೆ ಸವನಿಸಲಿಲ್ಲಾ
|| ||

ರಜ ತಮಗುಣದೊಳು ಕುದಿಯುವಮೂಲ
ಕುಜನರಿಗೆಲ್ಲಿಹ ಅನುಭವತರ್ಕ
ನಿಜವಾದ ಹರಗಿರಿಯ ಸುಜನ ಸಂಪರ್ಕ
ಭಜಿಸಿದನು ಅಲಭೈರಿಯು ಚಂದ್ರಾರ್ಕಾ
|| ||

ಏನೆಬೇಕ ಏನಬೇಕ ಏನಬೇಡ ಈ
ಮಾನವಜನ್ಮಕ ಏನಬೇಕ
ಸ್ವಾನುಭಾವದಿ ಬ್ರಾಹ್ಮ ಜ್ಞಾನ ತಿಳಿಯಲು
ಮಾನಿಷ್ವಾದ ಶ್ರುತಿ ಗುರುಬೇಕು
ಮೊದಲಿಗೆ ಮೋಕ್ಷದ ಇಚ್ಛಾಬೇಕು
ಅದರೊಳು ದೃಢ ನಂಬುಗೆ ಬೇಕು
ಸದಮಲ ಸಾಧುರ ಎದುರಿಸಬೇಕು
|| ||

ಅಧಮರ ಸಂಗ ಪೂರ್ಣ ಬಿಡಬೇಕು
ಶಾಸ್ತ್ರೋಕ್ತ ಸಂಸಾರ ಮಾಡಬೇಕು
ಅಶಾಸ್ತ್ರೇಯ ಸಂಸಾರ ಬಿಡಬೇಕು
ಪಾತ್ರ ಅಪಾತ್ರದ ಮರ್ಮವನ್ನು
ಜ್ಞಾನ ನೇತ್ರದಿಂದ ಪೂರ್ಣ ತಿಳಿಬೇಕು
|| ||

ನೀವೆಲ್ಲರೂ ಸಾಧನ ಸಂಪನ್ನಾರಾಗಿ ಉತ್ತಮಾಧಿಕಾರಿಗಳ ಸಾಲಿನಲ್ಲಿ ಕುಳಿತು ಬ್ರಾಹ್ಮಜ್ಞಾನವನ್ನು ಸಂಪಾದಿಸಬೇಕಾದರೆ

ಪದ

ಮಾಡೊ ಮಾಡೊ ಮಾಡಪ್ಪಾ ಶಿವಧ್ಯಾನ
ಮಾಡೊ ಮಾಡೊ ಮಾಡಪ್ಪಾ ಗುರು ಧ್ಯಾನಾ
|| ಪಲ್ಲ ||

ಮಾಡಿದನರರಿಗಾಗುವುದು ಬಹುಮಾನಾ
ಮಾಡೊ ಮಾಡೊ ಮಾಡಪ್ಪಾ ಗುರುಧ್ಯಾನಾ
|| ಪಲ್ಲ ||

ಅವರಿವರೆಂಬುವ ಭೇದವನುಳಿದು
ಶಿವಶರಣರ ಮಹಾ ಮಹಿಮೆ ತಿಳಿದು
ಭವ ಮರಣದ ಭೀತಿಯನರೆಗಳೆದು
ತವಕದಿ ಮನಸ್ಸಿನ ಮೈಲಿಗೆ ತೊಳೆದು
|| ||

ಜಡವಳಿ ಜನಗಳ ಸಂಗವು ಮಾಡಿ
ಕೆಡುವದುಚಿತವೆ ಸಂಶಯಕೂಡಿ
ಬಿಡು ಬಿಡು ಅದರಿಂದಾಗುವ ಹೇಡಿ
ಒಡಲೊಳಗಾರುವ ಗರ್ವವು ದೂಡಿ
|| ||

ಪದ

ಶಿವಯೋಗಿವರಾ ಭವದುಃ ಖಹರಾ || ಪಲ್ಲ ||
ಅತಿಶಯ ಪಾಪಾತ್ಮ ಪತಿತರುನಾವೆಂದು
ಮತಿಯೊಳು ಹಿತದೋರಿ ಯತಿರಾಯಾ ರಕ್ಷಿಸೋ
|| ||

ಕ್ರಮತಪ್ಪಿ ಕಡುಕಷ್ಟವೆಮಗಾದಕಾರಣ
ಭ್ರಮಗೊಂಡು ಎಂದೆವು ಮಮಕರಿಸಿ ಪಾಲಿಸೊ
|| ||

ಭವನಾದ ಹಾರೂಗೇರಿ ಅನುಭವನು ನೋಡಿ
ವನಜಾಕ್ಷ ವೃಷಭೇಶಾ ಅನುಮಾನಿಸದದ್ಧರಿಸೋ
|| ||

ಪದ

ಬಿಡು ಭ್ರಾಂತಿ ಸಂಸಾರದಭಿಮಾನ
ನೋಡೊ ಮನುಜಾ ನಿನ್ನಾತ್ಮನ ಸ್ತಾನಾ
|| ಪಲ್ಲ ||

ಬೋಧದ ಭ್ರಮೆಯೊಳ ಗಾಗ ಬಿಡು ದುಃಖದಿ
ಸಾಗರದೊಳುಬಿದ್ದು ರಾಗ ಭೋಗ ತ್ಯಾಗ
ಮಾಡಿ ನೋಡೋ ನಿನ್ನಾತ್ಮನ ಸ್ಥಾನಾ
|| ||

ಸತಿಸುತ ಬಾಂಧವ ಸತತದಿ ನಂಬುತ
ಪತಿತನು ಅಗಿಜನ್ಮ ತರ್ಕ ವ್ಯರ್ಥ ಘಾತ
ನೋಡೊ ಮನುಜಾ ನಿನ್ನಾತ್ಮನ ಸ್ಥಾನಾ
|| ||

ಒಡನೆಯ ಸದ್ಗುರು ಪಡೆಯನ ನಂಬುತ
ಗಡ ಹಾರೂಗೇರಿಯೊಳು ಕೂಡಿ ಅಡಿ ಮಾಡಿ
ನೋಡೋ ಮನುಜಾ ನಿನ್ನಾತ್ಮನ ಸ್ಥಾನಾ
|| ||

ಈ ರೀತಿ ‘ಅಲಭೈರವಿ’/ಅಲಭೈರವ ಮಹಾಜ್ಞಾನಿಯಾಗಿ ಅಸಾಧಾರಣನಾದ ಆಶುಕವಿಯಾಗಿ ಇಹಪರಗಳೆರಡನ್ನು ಸಾಧಿಸಿದ ತತ್ವಪದಕಾರರೆನಿಸಿದರು.

ಬರಬರುತ್ತ ಮೊದಲಿನ ಅಲ್ಲಪ್ಪನೆಂಬ ನಾನು ಅಡಗಿ ಗುರುಗಳು ಪ್ರೀತಿಯಿಂದ ಕರೆಯುತ್ತಿದ್ದ ಅಲಭೈರಿ, ಅಲಭೈರವ ಎಂಬ ಹೆಸರೇ ರೂಢಿಯಾಗಿ ಬಿಟ್ಟಿತು.

ಹೀಗೆ ಭೋಗದಿಂದ ತ್ಯಾಗದ ದಾರಿಹಿಡಿದು ಸಮರ್ಥಗುರುವಿನ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕೋನ್ನತಿಯ ತುತ್ತತುದಿ ತಲುಪಿದ ಅಲಭೈರಿ ಕವಿ ೨೧-೬-೧೯೪೨ರಂದು ಇಹಲೋಕದಿಂದ ಮುಕ್ತರಾದರು.

ಶ್ರೀಚೆನ್ನವೃಷಭೇಂದ್ರರು: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದ್ಯಾವನಕೊಂಡ ಎಂಬ ಮಲೆನಾಡಿನ ಹಳ್ಳಿ. ಆ ಹಳ್ಳಿಗೆ ಜಂಗಮವಂಶದ ಸಾಹೇಬ ಗೌಡರೆಂಬವರು ಪಾಟೀಲರು. ಅವರಿಗೆ ಅನುರೂಪಳಾದ ಗುಣವತಿ ಪತ್ನಿ ಗುರವ್ವನವರು. ಈ ಪುಣ್ಯ ಜೀವಿಗಳ ಉದರದಿಂದ ಶಾಲಿವಾಹನ ಶಕೆ ೧೭೭೦ ಚಿತ್ರ ಭಾನು ಸಂವತ್ಸರ ಆಷಾಢ ಮಾಸ ಶುಕ್ಲ ಪಕ್ಷ ಸಪ್ತಮಿ ಗುರುವಾರ ರೇವತಿ ನಕ್ಷತ್ರದಂದು ಶ್ರೀ ಚೆನ್ನಬಸವೇಶ್ವರ ಜನನವಾಯಿತು.

ಹುಟ್ಟಿನಿಂದಲೇ ಆಧ್ಯಾತ್ಮದತ್ತ ಒಲವು ಸಹಜವಾಗಿದ್ದ ಚೆನ್ನಬಸವರು ಸಾಧನೆಯ ಮಾರ್ಗದಲಿ ನಡೆಯತೊಡಗಿದರು. ಅವರಿಗೆ ಬೂದನಗುಡ್ಡದ ಅವಧೂತ ಭೂತನಾಥರ ಸಾನ್ನಿಧೃ ದೊರಕಿತು.

ಬೂದನಗುಡ್ಡದ ಭೂತನಾಥ ಗುರುಗಳಿಂದ ಅನುಗ್ರಹ ಪಡೆದುಕೊಂಡು ಚನ್ನಬಸವರು ಹುಟ್ಟಿದ ಮನೆಯಲ್ಲಿ ಹೆಚ್ಚು ಕಾಲನಿಲ್ಲದೆ ದೇಶ ಸಂಚಾರ ಮಾಡುತ್ತ ಉಳವಿ ಕ್ಷೇತ್ರದಲ್ಲಿ ಕೆಲ ದಿನವಿದ್ದು ಅಲ್ಲಿಯ ಶರಣರ ಸಂಗದಿಂದ ನಿರಾಭಾರಿ ಜಂಗಮನಾಗಿ ಹೊರಬಿದ್ದರು.

ಇವರನ್ನ ಉಳುವಿಯಲ್ಲಿ ಗುರುತಿಳಿಸಿದ ಸೋದರತ್ತೆ ಇವರನ್ನು ಕರೆದುಕೊಂಡು ದ್ಯಾವನಕೊಂಡಕ್ಕೆ ಬಂದು ತಂದೆತಾಯಿಗಳಿಗೆ ಒಪ್ಪಿಸಿದಳು. ಶ್ರೀ ಚನ್ನವೃಷಭರು ವೈರಾಗ್ಯದಲ್ಲಿ ಗಟ್ಟಿಕೊಂಡಿದ್ದರಿಂದ ಲಗ್ನಕ್ಕೆ ಒಪ್ಪದೆ ಕೇವಲ ತಾನಾಯ್ತು ತನ್ನ ಶಾಸ್ತ್ರ ಚಿಂತನೆಯಾಯ್ತು ಎಂದು ಕಾಲ ಕಳೆಯುತ್ತಿರುವಾಗ ತಂದೆ-ತಾಯಿಗಳು ತೀರಿಕೊಂಡರು. ಇವರ ಹಿರಿಯ ಅಣ್ಣ ಈಶ್ವರಗೌಡನ ಕೊಲೆಯಾಯಿತು. ಇದರ ಅಪವಾದವನ್ನು ವೃಷಭರ ಮೇಲೆ ಅಣ್ಣನ ಹೆಂಡ್ತಿ ಹೊರಸಿದಳು. ಆ ಪ್ರಕಾರ ಇವರನ್ನು ಕೈದಿಯನ್ನಾಗಿ ಕಲಘಟಗಿಗೆ ತೆಗೆದುಕೊಂಡು ಹೋದರು. ಕಲಘಟಗಿ ಕೋರ್ಟಿನಲ್ಲಿ ದಾವೆ ನಡೆದು ಇವರು ತಪ್ಪಿತಸ್ಥನಲ್ಲವೆಂದು ತೀರ್ಮಾನವಾಗಿ ಕೊನೆಗೆ ಬಿಡುಗಡೆ ಹೊಂದಿದರು. ಊರಿಗೆ ಬಂದ ತಕ್ಷಣವೇ ತಮ್ಮ ಪಾಲಿಗೆ ಬಂದ ಆಸ್ತಿ; ದವಸ ಧಾನ್ಯ ಪಾತ್ರೆ ಪಡಗಗಳನ್ನು ಬಡವರನ್ನು ಕರೆದು ದಾನಮಾಡಿ ಬೂದನ ಗುಡ್ಡದ ಭೂತನಾಥನ ಆಶ್ರಮಕ್ಕೆ ಹೋದರು. ಅಲ್ಲಿ ಅಖಂಡ ಸ್ವರೂಪದ ಅನುಷ್ಠಾನಮಾಡಿ ತನ್ನ ತಾ ಸಂಪೂರ್ಣ ಅರಿತುಕೊಂಡು ಪಂಚಭೂತಗಳ ಹಂಚಿಕೆಯಿಂದಾದ ಪಂಚಭೂತಾತ್ಮಕ ಗುಣದೋಷಗಳನ್ನು ತಿಳಿದು ಸಂಪೂರ್ಣ ಅರುಹಿನ ಜನ್ಮ ಜಾಗೃತಿ ಮಾಡಿಕೊಂಡರು. ನಿರ್ವಿಕಲ್ಪಸಮಾಧಿಯಲ್ಲಿಯೇ ಇರಹತ್ತಿದರು. ಬಂದ ಜನರಿಗೆ ನಾನು ಈಗ ಪೂರ್ಣ ಮಹಾಲಿಂಗವಾದನೆಂದು ಹೇಳುತ್ತಿದ್ದರು.

ಹೀಗೆ ಎಡೆಬಿಡದೆ ಮೂರು ವರ್ಷಗಳ ಕಾಲ ಬೂದನಗುಡ್ಡದ ಎಂಟೆತ್ತಿನ ಕೊಳ್ಳದ ಗುಹೆಯಲ್ಲಿದ್ದು ಅನುಷ್ಠಾನ ಮಾಡಿಕೊಂಡು ಗವಿಯಿಂದ ಹೊರಬಿದ್ದರು.

ಇನ್ನೊಂದು ಘಟನೆ: ಆಸ್ತಿ ಹಾಗೂ ಮನೆಯಲ್ಲಿಯ ಸಾಮಾನುಗಳನ್ನು ದಾನಮಾಡಿ ಬರುವಾಗ ಮನೆಗೆ ಬೆಂಕಿಇಟ್ಟು ಬಂದಿದ್ದರು. ಕೂಡಿದ ಜನರ ಗದ್ದಲದಲ್ಲಿ ಓರ್ವ ಮುದುಕಿ ಬೆಂಕಿಯಲ್ಲಿ ಹೇಗೋ ಸಿಕ್ಕು ಸತ್ತಿದ್ದಳು. ಈ ಅಪರಾಧವನ್ನು ಪೋಲಿಸರು ಶ್ರೀಗಳ ಮೇಲೆ ಹೊರಿಸಿ ನ್ಯಾಯಾಲಯಕ್ಕೆ ಅಟ್ಟಿದರು. ನ್ಯಾಯಾಧೀಶರು ಈತನ ಇರುವಿಕೆಯನ್ನು ಕಂಡು ಈತನಿಗೆ ಬುದ್ಧಿಭ್ರಮಿತನಾಗಿದ್ದಾನೆಂದು ಬಗೆದು ಮಹಾರಾಷ್ಟ್ರದಲ್ಲಿಯ ರತ್ನಾಗಿರಿಯ ಹುಚ್ಚರ ಆಸ್ಪತ್ರೆಗೆ ಸೇರಿಸಬೇಕೆಂದು ನಿರ್ಣಯಕೊಟ್ಟರು.

ಆಗ ರತ್ನಾಗಿರಿಯ ಹುಚ್ಚರ ಆಸ್ಪತ್ರೆಯಲ್ಲಿ ಡಾ. ಕಾಳೆಯವರು ಇದ್ದರು. ಇವರಲ್ಲಿರುವ ಪ್ರಕಾಂಡ ಪಾಂಡಿತ್ಯ, ಯೋಗ, ಅನುಷ್ಠಾನ ಕಂಡು ಇವರು ಹುಚ್ಚರಲ್ಲ, ಲೌಕಿಕ ಕಣ್ಣಿಗೆ ಹುಚ್ಚರಾಗಿ ಕಂಡರೂ ಮಹಾಜ್ಞಾನಿಗಳೆಂದು ತಿಳಿದು ಇವರಿಂದ ಜ್ಞಾನೋಪದೇಶ ಮಾಡಿಕೊಂಡರು. ಸರಕಾರದಿಂದ ಬಿಡುಗಡೆಯನ್ನು ಮಾಡಿಸಿ ತಮ್ಮಲ್ಲಿಯೇ ಇರುವಂತೆ ಬಿನ್ನವಿಸಿಕೊಂಡರು. ದಿನನಿತ್ಯ ಶಿಸ್ತು, ಯೋಗ ಕೇಳಿ ತಿಳಿದುಕೊಂಡರು.

ಒಂದು ದಿನ ಪ್ರವಚನ ಹೇಳುತ್ತಾ ಹೇಳುತ್ತಾ, ಆತ್ಮಸ್ವರೂಪಿಗಳಿರಾ ಯುದ್‌ಭಾವಂ ತದ್‌ ಭವತಿ, ಅಂದರೆ ಭಾವದಂತೆ ದೇವರು. ನೀವು ನನ್ನಲ್ಲಿ ದೈವತ್ವವನ್ನು ಭಾವಿಸಿದ್ದೀರಿ. ಅಂದರೆ ನಿಮ್ಮ ಭಾವವನ್ನು ನೀವೇ ಪೂಜಿಸುತ್ತಿರುವಿರಿ. ನಿಮ್ಮ ನಿಮ್ಮ ಭಾವದಂತೆ ಪ್ರತಿಫಲ ಸಿಕ್ಕೇ ತೀರುತ್ತಿದೆಂದು ನೀವು ತೀರುತ್ತಿದೆಂದು ನೀವು ನಂಬಿ ಪೂಜಿಸುತ್ತಿರುವ ‘ನಾ’ ನೆಂಬ ದೇಹ ಶಾಶ್ವತವಲ್ಲ. ಶಾಶ್ವತವಾದೆ ವಸ್ತುವನ್ನು ಹುಡುಕಿ ಪಡೆಯಿರಿ. ಆಗು ನೀವೂ ಶಾಶ್ವತವಾಗಿ ಉಳಿದು ಆನಂದವನ್ನು ಅನುಭವಿಸುವಿರಿ.‍ಡುರ್‌ರ್‌ರ್‌ರ ಆಲಕ್ ನಿರಂಜನ ಎಂದು ಡುರಿಕೆಯನ್ನು ಹೊಡೆದು ವೇದಿಕಯಿಂದಿಳಿದು ದಡೆದಡನೆ ಕಾಡಿನತ್ತ ಓಡಹತ್ತಿದ್ದರು. ಜನರು ಅಪ್ಪಾ ಅಪ್ಪಾ ಅಪ್ಪಾ ಎನ್ನುತ್ತ ಬೆನ್ನುಹತ್ತಿದರು. ಶ್ರೀಗಳು ಹಿಂದಕ್ಕೆ ಸಹನೋಡದೆ ಓಡಿ ಕಾಡಿನಲ್ಲಿ ಕಣ್ಣರೆಯಾದರು.

ಮುಂದೆ ಎಲ್ಲಿಗೆ ಹೋದರು, ಏನು ಮಾಡಿದರೆಂಬುದು ತಿಳಿದುಬರುವುದಿಲ್ಲ. ಕೆಲಕಾಲದ ನಂತರ ಬೆಳಗಾವಿಯಲ್ಲಿ ಕಾಣಿಸಿಕೊಂಡರು. ಅರಟಾಳ ರುದ್ರಗೌಡರು ಇವರನ್ನು ಕರೆದುಕೊಂಡು ಬಂಗಲೆಗೆ ಹೋದರು. ಇವರಿಂದ ಶಿಷ್ಯತ್ವವನ್ನು ಸ್ವೀಕರಿಸಿ ಅದ್ದೈತ ತತ್ವಗಳನ್ನು ಅರಗಿಸಿಕೊಂಡರು.

ಮುಂದೆ ಶ್ರೀಗಳು ಬಾಳೇಕುಂದ್ರಿ ಅವಧೂತದತ್ತೋಪಂತರ ಸಹವಾಸದಲ್ಲಿ ಎಂಟತ್ತುವರುಷ ಇದ್ದರೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಹುಬ್ಬಳ್ಳಿ ಸಿದ್ಧಾರೂಢರ ಮತ್ತು ಜಡಿಸಿದ್ಧರ ಹತ್ತಿರ ಕೆಲವು ದಿವಸ ಇದ್ದು ಮುಂದೆ ಮನಬಂದಂತೆ ತಿರುಗುತ್ತಾ ಸಾಗಿದರು.

ಶ್ರೀಗಳು ಸಂಚಾರ ಮಾಡುತ್ತ ನೇಸರಗಿ, ಬೈಲಹೊಂಗಲ, ಇಂಚಲ, ಪಟ್ಟಿಹಾಳ; ಸಂಪಗಾಂವಿ ಮದನಭಾವಿ, ಮುರುಕಿಬಾವಿ, ಭಾವಿಹಾಳ, ಹಣ್ಣಿಕೇರಿ, ಸೋಮನಟ್ಟಿ, ಎಂ.ಕೆ. ಹುಬ್ಬಳ್ಳಿ, ಎರಗೊಪ್ಪ, ಹೊಸೂರ, ದಾಸ್ತಿಕೊಪ್ಪ, ಸತ್ತಿ, ಶೇಗುಣಿಪಿಸಿ, ಮುನವಳ್ಳಿ, ಚಚಡಿ, ಎಬರಟ್ಟಿ, ತೇರದಾಳ ಹೀಗೆ ಹಳ್ಳಿಗಳಿಗೆ ಹೋಗಿ ಶಾಸ್ತ್ರ ಹೇಳಿ ಜನರಿಗೆ ಮೋಕ್ಷಮಾರ್ಗ ತೋರುತ್ತ ಸಾಗಿದರು. ಹಾಗೇ ಹಾರೂಗೇರಿಗೆ ಬಂದರು.

ಬಡ ಹಾರೂಗೇರಿಯ ಸೌಭಾಗ್ಯ ತೆರೆಯಿತು. ಶ್ರೀ ಸದ್ಗುರು ಚನ್ನವೃಷಭೇಂದ್ರ ಸ್ವಾಮಿಗಳನ್ನು ಗುರುತಿಸಿ ಹಾರೂಗೇರಿಯ ಮೋಕ್ಷಾಪೇಕ್ಷಿಗಳು, ವೃಷಭೇಂದ್ರ ಸ್ವಾಮಿಗಳನ್ನು ಹಾರೂಗೇರಿಯಲ್ಲಿ ನಿಲ್ಲವಂತೆ ಮಾಡಿದರು.

ಚನ್ನವೃಷಭರು ಹಾರೂಗೇರಿಯಲ್ಲಿದ್ದ ಸುದ್ದಿ ಎಲ್ಲ ಕಡೆಗೂ ಹಬ್ಬಿ ಹುಬ್ಬಳ್ಳಿಯ ಸಿದ್ಧಾರೂಢರು, ಜಡಿಸಿದ್ಧಸ್ವಾಮಿಗಳು, ಬಾಳೇಕುಂದ್ರಿ ದತ್ತೋಪಂತರು, ಇಂಚಲದ ರೇವಯ್ಯಾ ಸ್ವಾಮಿ, ತಮಿಳುನಾಡಿನ ಜಕ್ಕಪ್ಪಯ್ಯ ಸ್ವಾಮಿಗಳು, ಮುರಕೀಭಾವಿಯ ನಿರ್ವಾಣೆಪ್ಪರು, ಗರಗದ ಮಡಿವಾಳಪ್ಪನವರು, ತವಗದ ಬಾಳಯ್ಯನವರು, ಇಂಗಳಗಾವಿಯ ಸಂಗಯ್ಯ ಸ್ವಾಮಿಗಳು ಕುಳ್ಳೂರ ಅಜ್ಜ, ಚುಳುಕೆಪ್ಪ, ರಾಮಲಿಂಗಮರಿ ಮುಂತಾದ ಮಹಾನುಭಾವರು ಬರುತ್ತಿದ್ದು ಶಾಸ್ತ್ರ ಲೀಲಾ ವಿನೋದಗಳನ್ನಾಡುತ್ತಿದ್ದರೆಂದು ಇಂದಿಗೂ ಕರ್ಣಾಕರ್ಣಕೆಯಾದಿ ಕೇಳಬರುತ್ತದೆ.

ಶ್ರೀ ಚೆನ್ನವೃಷಭೇಂದ್ರರು ಅಲಭೈರಿಯನ್ನು ತಮ್ಮ ಪರಮಶಿಷ್ಯನನ್ನಾಗಿ ಸ್ವೀಕರಿಸಿದರು. ಸಂಚಾರದಿಂದ ಮರಳಿ ಹಾರೂಗೇರಿಗೆ ಬಂದ ಕೂಡಲೆ ಅಲ್ಲಪ್ಪನನ್ನು ಕರೆಯಿಸಿ ಚರ್ಚೆ ಪ್ರಾರಂಭಿಸುತ್ತಿದ್ದರು.

ಅಲಭೈರಿ ಪ್ರಪಂಚದ ಸಂಬಂಧಗಳನ್ನು ದೂರದೂರ ಮಾಡುತ್ತ ಹಾಡು, ಭಜನೆಗಳನ್ನು ರಚಿಸಿ ಹಾಡುತ್ತ, ಹಾಡಿಸುತ್ತ ಆಧ್ಯಾತ್ಮಿಕ ಚಿಂತನೆಯಲ್ಲಿ ಮೈಮರೆಯ ತೊಡಗಿದರು. ಚನ್ನವೃಷಭೇಂದ್ರ ಸ್ವಾಮಿಗಳು ಒಮ್ಮೆ ಕೂಡಿದ ಭಕ್ತರಿಗೆಲ್ಲ ಅಲಭೈರಿಯ ಸಾಮರ್ಥ್ಯ ಕುರಿತು ಅಭಿಮಾನದಿಂದ ಹೇಳಿದರು: “ಅಲ್ಲಪ್ಪ ಶಾಸ್ತ್ರದ ಪ್ರಬಲ ಶಕ್ತಿ; ಅನುಭಾವದ ಗೂಳಿ ಇದನ್ನು ನಿರ್ಬಂಧಿಸಬಲ್ಲ ಶಕ್ತಿ ಯಾರಿಗೂ ಇಲ್ಲ.” ಈ ರೀತಿ ಅಲಭೈರಿಗೆ ತಮ್ಮ ಕರುಣೆಯನ್ನು ಧಾರೆಯೆರೆದು ತಾವು ೧೯೩೨ ರಲ್ಲಿ ಬೈಲಹೊಂಗಲ ತಾಲೂಕು ಭಾವಿಹಾಳದಲ್ಲಿ ಪಂಚ ಭೂತಾತ್ಮಕವಾದ ಕ್ಲೇಶ ಕಾಯವನ್ನು ತೊರೆದು ವ್ಯೋಮಕಾಯರಾಗಿ ಸಮಾಧಿಸ್ಥರಾದರು.

ಈ ವರೆಗೆ ನೋಡಿದಂತೆ ಅಲ್ಲಪ್ಪ ಅಥವಾ ಅಲಭೈರಿ ಕವಿಯ ಸಾಧನೆಯಲ್ಲಿ ಅವರೊಂದಿಗೆ ಅವರ ತಂದೆ ಧರಿಗೌಡರು ಮತ್ತು ಶ್ರೀಚನ್ನಬಸವ ಅಥವಾ ಚನ್ನವೃಷಭೇಂದ್ರ ಪ್ರಭಾವ ಮುದ್ರೆಯಿರುವುದು ಸ್ಪಷ್ಟ. ಎಂದರೆ ಈ ಮೂವರ ವಿಚಾರಧಾರೆಗಳ ಮುಪ್ಪುರಿ ಇಲ್ಲಿನ ಪದ್ಯಗಳಲ್ಲಿ ಹುರಿಗೊಂಡಿರುವ ಅಂಶ ಗಮನಾರ್ಹವಾಗಿದೆ.

ಧರಿಗೌಡನು ಮನೆತನದ ಪರಂಪರೆಯಿಂದ ಜೈನರಾಗಿದ್ದರೂ ಅದ್ವೈತ-ವೇದಾಂತವನ್ನು ನಂಬುವವರಾಗಿದ್ದದು ಅವರು ರಚಿಸಿದ ಲಾವಣಿಯಿಂದ ಖಚಿತವಾಗಿದೆ. ಹಾಗೆ ತಮ್ಮ ಪರಂಪರೆಯನ್ನು ಮೀರಿ ಬೇರೊಂದು ಪರಂಪರೆಯನ್ನು ಆತ್ಮಸಾತ್ ಮಾಡಿಕೊಳ್ಳಲು ಕಾರಣವೇನೋ ತಿಳಿಯದು. ಪ್ರಾಪಂಚಿಕರಾಗಿದ್ದೂ ಇಂಥ ವೇದಾಂತ ತತ್ವಗಳನ್ನು ತಮ್ಮ ಐಹಿಕ ಜೀವನದಲ್ಲಿ ಶ್ರದ್ಧೆಯಿಂದ ಅಳವಡಿಸಿ ಕೊಂಡದ್ದು ಸಾಮಾನ್ಯ ಸಂಗತಿಯೇನು ಅಲ್ಲ. ತಂದೆಯ ಈ ಅದ್ವೈತ ವೇದಾಂತದ ಪ್ರಭಾವ ಅಲಭೈರಿಯ ಮೇಲೆ ಸಹಜವಾಗಿಯೆ ಬಿದ್ದಿದೆ. ಅದರೊಡನೆ ಶ್ರೀಚನ್ನವೃಷಭೇಂದ್ರರಂಥ ಅದ್ವೈತ ಅವಧೂತರ ಕೃಪೆಯಿಂದಾಗಿ ಕವಿ ಅಲಭೈರಿ ಆ ಸಿದ್ಧಾಂತದ ದಾರಿಯಲ್ಲಿ ಬಹದೂರ ಕ್ರಮಿಸಿ ತಾವೂ ಕೂಡ ಸಿದ್ಧಿ ಪಡೆದಿದ್ದಾರೆ. ಜತೆಗೆ ಅಂದು ಕರ್ನಾಟಕದಲ್ಲಿ ಹೆಸರಾಂತ ಸತ್ಪುರುಷರೆನಿಸಿದ್ಧ (ಗರಗ) ಮಡಿವಾಳೇಶ್ವರರು. ಜಡಿಸಿದ್ಧೇಶ್ವರರು ಬಾಳೆಕುಂದರಗಿಯ ಪಂತರು ಹುಬ್ಬಳ್ಳಿ ಸಿದ್ಧಾರೂಢರು ಇವರೇ ಮೊದಲಾದ ಗಣ್ಯರ ಸಂಪರ್ಕ ಕೂಡ ಅವರಿಗೆ ಒದಗಿ ಬಂದಿದೆ. ಅವರು ಜನಸಾಮಾನ್ಯರನ್ನು ಕೂಡ ನಿಕಟತೆಯಿಂದ ಕಂಡಿದ್ದರು. ಅವರ ಇಹ ಜೀವನದ ಆಗ-ಹೋಗುಗಳನ್ನು ಬಹು ಸೂಕ್ಷ್ಮವಾಗಿ ನಿರೀಕ್ಷಿಸಿದವರಾಗಿದ್ದು ತಮ್ಮ ದಿನ ನಿತ್ಯದ ಪ್ರಾಪಂಚಿಕವನ್ನು ಯೋಗಿಯೊಬ್ಬನ ದೃಷ್ಟಿಯಿಂದ ಪರಿಭಾವಿಸುತ್ತಿದ್ದರು. ನಿಸರ್ಗ ದತ್ತವಾಗಿದ್ದ ಅವರ ಕಾವ್ಯ ಪ್ರತಿಭೆಗೆ ಪ್ರಪಂಚ-ಆಧ್ಯಾತ್ಮಗಳೆರಡೂ ದೊಡ್ಡ ಪರಿಕರವಾಗಿ, ದೊರೆತು ಆ ಶಕ್ತಿಯನ್ನು ಬೆಳಸಿದೆ.

ಮನೆತನದ ಪರಂಪರೆಯಲ್ಲಿಯೇ ಧಾರ್ಮಿಕ ವೈಶಾಲ್ಯ ಸಹಜವಾಗಿದ್ದುದರಿಂದ ಅಲಭೈರಿಯವರಲ್ಲಿ ಕೂಡ ಆ ವೈಶಾಲ್ಯ ಇನ್ನು ಹೆಚ್ಚು ವ್ಯಾಪ್ತಿ ಪಡೆದುಕೊಂಡದ್ದು ಕಂಡುಬರುತ್ತದೆ. ಜೈನ ತತ್ವಗಳ ಛಾಯೆಯನ್ನು ಅವರ ಅನೇಕ ಪದಗಳಲ್ಲಿ ಗುರುತಿಸಬಹುದು. ಚಿನಭ್ತಾ ಗೀತೆಗಳ ಒಂದು ಸಂಗ್ರಹವಾಗುವಷ್ಟು ಅಂಥ ಪದ್ಯಗಳು ಇದ್ದು ಅವು ಈಗಾಗಲೆ ಪ್ರಕಟವಾಗಿರುವುದಾಗಿ ತಿಳಿದು ಬರುತ್ತದೆ. ಹಲವಡೆಗಳಲ್ಲಿ ವೀರಶೈವದ ಪರಿಭಾಷೆಯನ್ನು ಅವರುಉ ಬಳಸಿದ್ದಾರೆ. ಮಲತ್ರಯ, ಶರಣ ಮೊದಲಾದ ಪಾರಿಭಾಷಿಕಗಳು ಅವರ ಹಾಡುಗಳಲ್ಲಿ ಹಲವೆಡೆ ಕಂಡುಬರುತ್ತವೆ. ಆದರೆ ಅವರ ಗುರುಗಳಾದ ಶ್ರೀಚನ್ನವೃಷಭೇಂದ್ರರು ಭೂತನಾಥರೆಂಬ ಅವಧೂತರ ಶಿಷ್ಯತ್ವವಹಿಸಿದ್ದರೆಂದು ತಿಳಿಯುವುದರಿಂದ ಇವರದು ಅವಧೂತ ಸಂಪ್ರದಾಯವೆಂಬುದು ಸ್ಪಷ್ಟ. ಅವಧೂತ ಪರಂಪರೆ ಮೂಲತಃ ನಾಥ ಸಂಪ್ರದಾಯಕ್ಕೆ ಸಂಬಂಧಪಟ್ಟ ತುಂಬ ಹಳೆಯ ಆಧ್ಯಾತ್ಮಶಾಖೆ. ಇದರ ಮೂಲ ಪ್ರವರ್ತಕ ‘ದತ್ತಾತ್ರೇಯ’ ನೆಂಬುದು ಪರಂಪರೆಯ ನಂಬುಗೆ. ಇದು ಶಿವಾಧಿಕ್ಯವನ್ನು ಸಾರುವುದಾದರೂ ಇತರ ಹಿಂದೂ ದೈವತಗಳಾದ ವಿಷ್ಣು, ಶಕ್ತಿ, ಗಣಪತಿ ಮಾರುತಿ ಮೊದಲಾದವರನ್ನು ಭಜಿಸಲು ಇದರ ಅಭ್ಯಂತರವಿಲ್ಲ. ಯೋಗಶಾಸ್ತ್ರ ಇದರ ಮುಖ್ಯವಾದ ಸಾಧನಾ ಮಾರ್ಗ. ಅದರಲ್ಲೂ ವಿಶೇಷವಾಗಿ ಹಠಯೋಗವನ್ನು ಈ ಪರಂಪರೆ ಈಗಲೂ ಉಳಿಸಿಕೊಂಡು ಬಂದಿದೆ. ಕರ್ನಾಟಕದಲ್ಲಿ ಮುಂಚೆ ಪ್ರಚಲಿತವಿದ್ದ ಕಾಳಾಮುಖರ ಪ್ರಭಾವವೂ ಇದರ ಮೇಲೆ ಆಗಿರುವ ಹಾಗೆ ಕಾಣುತ್ತದೆ. ಆದಿನಾಥ ಶಿವನಿಂದ ಪ್ರವರ್ತಿತವಾಗಿ ದತ್ತಾತ್ರೇಯ, ಮಚ್ಛೇಂದ್ರ ಗೋರಕ್ಷ ಮೊದಲಾದ ಮಹಾಸಿದ್ಧರಿಂದ ಪ್ರಸಾರಗೊಳ್ಳುತ್ತ ಇದು ಸಿದ್ಧಸಂಪ್ರದಾಯ, ನಾಥ ಸಂಪ್ರದಾಯ, ಅವಧೂತ ಮಾರ್ಗ ಇತ್ಯಾದಿಯಾಗಿ ಹೆಸರಾಗಿದೆ. ಕರ್ನಾಟಕದ ಉತ್ತರ ಭಾಗದಲ್ಲಿ ಪ್ರಚಲಿತವಾಗಿರುವ ಇಂಚಗೇರಿ ಸಂಪ್ರದಾಯ ಕೂಡ ಇದರದೊಂದು ಶಾಖೆಯೇ ಮಹಾರಾಷ್ಟ್ರದಲ್ಲಿ ಇದು ಹಲವು ಶಾಖೆಗಳಾಗಿ ಒಡೆದು ಈಗಲೂ ಜನಸಾಮಾನ್ಯರ ಪಾತಳಿಯಲ್ಲಿ ಜಾಗೃತ ಸಂಪ್ರದಾಯವೆನಿಸಿದೆ. ಕರ್ನಾಟಕದ ಪಶ್ಚಿಮ ಘಟ್ಟದ ಸಾಲುಗಳ ಹಂಡಿಬಡಗನಾಥ, ಸ್ವಾದಿ, ಕದರಿ ಮೊದಲಾದ ಸ್ಥಳಗಳು ಈ ಪಂಗಡದ ಪ್ರಸಿದ್ಧ ಕೇಂದ್ರಗಳು.

ಇದುವರೆಗೆ ನೋಡಿದಂತೆ ಅಲಭೈರಿಯವರು ಅದ್ವೈತ ಪರತತ್ವಗಳನ್ನು ಬರೆದುದಲ್ಲದೆ ತಮ್ಮ ಸಹಜ ಸ್ವಭಾವಕ್ಕನುಸರಿಸಿ ಇತರ ದೇವತೆಗಳಾದ ಪಂಡರಪುರ ವಿಠೋಬಾ, ಸವದತ್ತಿಯ ಎಲ್ಲಮ್ಮಾ, ಗಣಪತಿ ಮೊದಲಾದ ದೈವಗಳ ಸ್ತುತಿ ಮಾಡಿದ್ದಾರೆ. ಮುಸಲ್ಮಾನರಂತೆ. ಅಲ್ಲಾನ ಸ್ತುತಿ ಕೂಡ ಅವರ ಹಾಡುಗಳಲ್ಲಿ ಕಂಡುಬಂದಿದೆ. ಅನೇಕ ಹಾಡುಗಳಲ್ಲಿ ಉರ್ದು-ದಖನಿ ಮತ್ತು ಮರಾಠಿ ಭಾಷೆಗಳ ದಟ್ಟ ಪ್ರಭಾವ ಕಾಣಬರುತ್ತದೆ. ಹೀಗೆ ಅಲಭೈರಿಯವರು ರಚಿಸಿದ ತತ್ವ ಪದಗಳಲ್ಲಿ ಸರ್ವಧರ್ಮ ಸಮನ್ವಯದ ಎಲ್ಲ ಅಂಶಗಳು ಪ್ರಕಟಗೊಂಡಿವೆ.

ಅಲಭೈರಿ ತತ್ವಪದಗಳಲ್ಲದೆ ರಿವಾಯತ್‌, ಲಾವಣಿ, ಗೀಗಿ (ಮರಾಠಿಯ ಓವಿ ಛಂದಸಿನಲ್ಲಿ ರಚಿಸಿದ ಕನ್ನಡ) ಅಭಂಗಗಳು ಮತ್ತು ಶಾಹೀರಕಿ (ಜೀಜೀ) ಪದಗಳು ಮೊದಲಾಗಿ ಹಲವು ಪ್ರಕಾರದ ಸಾಹಿತ್ಯ ರಚನೆ ಮಾಡಿದ್ದಾಗಿ ತಿಳಿದು ಬರುತ್ತದೆ. ಅವೆಲ್ಲ ಇಂದು ದೊರೆಯುವುದು ಕಷ್ಟವಾಗಿದೆ. ಬೈಲಾಟಗಳನ್ನು ಕೂಡ ರಚಿಸಿ ತಾವು ಸ್ವತಃ ಆಡಿದ್ದಲ್ಲದೆ ಬೇರೆಯವರಿಂದಲೂ ಅವನ್ನು ಆಡಿಸುತ್ತಿದ್ದರಂತೆ. ವೈರಾಗ್ಯ ವಿಜಯ, ವಿಧಿಲಿಖಿತ ಲೀಲೆ, ಕಮಲಾಕರ, ಶಂಕರರಂಭಾ ಸಂಹಾರ, ರಾಧಾನಾಜ್ಯ ಕಲ್ಲನಾಟ್ಯ (?) ಎಂಬ ಸುಮಾರು ಆರು ಬೈಲಾಟಗಳನ್ನು ಕನ್ನಡದಲ್ಲಿ ರಚಿಸಿದ್ದು ತಿಳಿದುಬಂದಿದೆ. ತೆಲುಗಿನಲ್ಲಿ ಕೂಡ ಒಂದು ಬೈಲಾಟ ಬರೆದಿರುವುದಾಗಿ ಹೇಳುತ್ತಾರೆ. ಹೀಗೆ ವೈವಿಧ್ಯಪೂರ್ಣ ಸಾಹಿತ್ಯ ಸೃಷ್ಟಿಸಿದ ಅವಧೂತ ಅದ್ವೈತಿ ಅಲಭೈರಿ ಅವರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.*

—-

ಈ ಲೇಖನ ರಚಿಸುವಲ್ಲಿ ಪ್ರೋ. ಎಸ್‌. ಬಿ. ಉತ್ನಾಳ ಅಥಣಿ ಮತ್ತು ಶ್ರೀಸುಬ್ಬಣ್ಣನವರ ಹಾರೂಗೇರಿ ಇವರ ಸಹಾಯವನ್ನು ಸ್ಮರಿಸುತ್ತೇವೆ.