ತಿರುಪತಿಯ ತಿಮ್ಮಪ್ಪನ ಸ್ವರೂಪದ ಬಗ್ಗೆ ಬಹಳ ಹಿಂದಿನಿಂದಲೂ ವಿವಾದಗಳಿವೆ. ಈ ದೇವರು ಶೈವ ಸಂಪ್ರದಾಯದ ವೀರಭದ್ರ, ಸುಬ್ರಹ್ಮಣ್ಯ ಎಂದು ಮುಂತಾಗಿ ಕೆಲವರು ಹೇಳಿದರೆ, ಅವರು ವಿಷ್ಣುವೆಂದೂ ದೇವಿಯೆಂದೂ ಮತ್ತೆ ಕೆಲವರು ಹೇಳುತ್ತಾರೆ. ಈ ವಿವಾದ ಈಗೇನೂ ತೀವ್ರವಾಗಿಲ್ಲ. ಅದಕ್ಕೊಂದು ನಿಲುಗಡೆ ಪ್ರಾಪ್ತವಾದಂತೆ ಈಗ ಕಂಡುಬರುತ್ತಿದೆ. ಆದರೆ ಶ್ರೀವೈಷ್ಣವ ಸಂಪ್ರದಾಯದ ಗ್ರಂಥಗಳಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಂದಿರುವ ಉಲ್ಲೇಖಗಳನ್ನು ನೋಡಿದರೆ ಶ್ರೀ ರಾಮಾನುಜಾಚಾರ್ಯರ ಕಾಲದಲ್ಲಿ ಒಂದು ದೊಡ್ಡ ವಿವಾದ ಉಂಟಾದಂತೆ ಕಂಡುಬರುತ್ತದೆ. ಈ ವಿವಾದ ತರುವಾಯವೂ ಉಳಿದು ಬರಲು ಬಹುಶಃ ಮೂರ್ತಿಯ ರಚನೆಯಲ್ಲಿಯೇ ಅಸ್ಪಷ್ಟತೆಯಿರುವುದು ಒಂದು ಕಾರಣವಾದರೆ ಮೊದಲಿನಿಂದಲೂ ಈ ಮೂರ್ತಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸದೆ ಅದರ ಪೂರ್ಣನೋಟ ಸಾಧ್ಯವಾಗದಂತೆ ಅಲ್ಲಿನ ನಿಯಮಗಳನ್ನು ರೂಪಿಸಿವುದು ಮತ್ತೊಂದು ಕಾರಣವಾಗಿದೆ.ಈದೇವತೆಯಆರಾಧನೆನಮ್ಮ ದೇಶದ ಬಹುಭಾಗದಲ್ಲಿ ಹರಡಿದೆ. ಗುಜರಾತ, ಮಾರವಾಡಗಳವರೆಗೂ ಈ ದೇವರನ್ನು ತಮ್ಮ ಕುಲದೇವರೆಂದು ಪೂಜಿಸುವವರಿದ್ದಾರೆ. ದಕ್ಷಿಣ ಭಾರತದಲ್ಲಂತೂ ಸರಿಯೆ. ಉಚ್ಚವರ್ಗದ ಬ್ರಾಹ್ಮಣರಂತೆ ಕೆಳವರ್ಗದ ಶೂದ್ರರೂ ಬಹುಸಂಖ್ಯೆಯಲ್ಲಿ ಈ ದೇವರನ್ನು ಆರಾಧಿಸುತ್ತಾರೆ. ನಮ್ಮ ರಾಜ್ಯದ ಕರಾವಳಿ ಮತ್ತು ಘಟ್ಟದ ಪ್ರದೇಶದ ಹಾಲಕ್ಕಿಗಳು ಕೂಡ ಈ ದೇವರನ್ನು ತಮ್ಮ ಮನೆದೇವರೆಂದು ಭಾವಿಸುತ್ತಾರೆ. ಹೀಗಿರುವುದರಿಂದ ನಮ್ಮ ಕುತೂಹಲ ಈ ದೇವರನ್ನು ತಮ್ಮ ಮನೆದೇವರೆಂದು ಭಾವಿಸುತ್ತಾರೆ. ಹೀಗಿರುವುದರಿಂದ ನಮ್ಮ ಕುತೂಹಲ ಈ ದೇವರತ್ತ ತೀವ್ರವಾಗಿ ಹರಿಯುತ್ತದೆ.

ಈ ದೇವರ ಸ್ವರೂಪದ ವಿಷಯಕ್ಕೆ ಖಚಿತವಾದ ವಿವರಗಳು ಎಲ್ಲಿಯೂ ದೊರಕುವುದಿಲ್ಲ. ಸ್ವರೂಪ ವಿವರಗಳನ್ನು ಚರ್ಚಿಸುವ ಸಾಹಿತ್ಯ ತಕ್ಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದಾದರೂ ಅದರಿಂದ ದೇವರ ಸ್ವರೂಪದ ಸಮಸ್ಯೆ ಬಗೆ ಹರಿಯುವದಿಲ್ಲ.

ಕನ್ನಡದಲ್ಲಿ ತಿರುಮಲೆದೇವರನ್ನು ಕುರಿತ ಒಂದೆರಡು ಕೃತಿಗಳು ಪ್ರಕಟವಾಗಿವೆ. ಪ್ರೊ || ಎಸ್.ಕೆ. ರಾಮಚಂದ್ರರಾವ್ ಅವರು ಎರಡು ಬಾರಿ ಈ ವಿಷಯದ ಮೇಲೆ ಗ್ರಂಥ ರಚಿಸಿದ್ದಾರೆ. ‘ತಿರುಪತಿಯ ತಿರುಮಲೆ ದೇವರು’ ಎಂಬುದು ಅವರ ಮೊದಲ ಕೃತಿಯಾದರೆ, ‘ತಿರುಪತಿ ತಿಮ್ಮಪ್ಪ’ ಎಂಬುದು ಅವರ ಎರಡನೆಯ ಕೃತಿ. ಶ್ರೀ ಹಿ.ಚಿ.ಬೋರಲಿಂಗಯ್ಯ ಎಂಬುವರು ಬರೆದ ‘ದಾಸಪ್ಪ-ಜೋಗಪ್ಪ’ ಜಾನಪದೀಯ ಅಧ್ಯಯನದ ಇನ್ನೊಂದು ಕೃತಿ. ದರ ಪೂರ್ವಾರ್ಧದಲ್ಲಿ ದಾಸಪ್ಪನೆಂದು ಪ್ರಸಿದ್ಧನಾದ ನೈಷ್ಠಿಕ ಭಕ್ತವರ್ಗದ ಹಲವು ವಿವರಗಳು ಬಂದಿವೆ. ದಾಸಪ್ಪ ತಿರುಪತಿಯ ದೇವರಿಗೆ ತನ್ನನ್ನು ಅರ್ಪಿಸಿಕೊಂಡವನಾದುದರಿಂದ ಆತನ ಬಗೆಗೆ ಹೇಳಲಾದ ವಿವರಗಳಲ್ಲಿ ತಿರುಮಲೆ ದೇವರ ಬಗೆಗೂ ಹಲವಾರು ವಿಷಯಗಳು ಪರೋಕ್ಷವಾಗಿ ಉಕ್ತವಾಗಿವೆ.

ಮೇಲಿನ ಇಬ್ಬರು ವಿದ್ವಾಂಸರ ಕೃತಿಗಳನ್ನು ಮತ್ತು ತಿರುಮಲೆ ದೇವರ ಭಕ್ತರ ಕೆಲವು ಆಚರಣೆಗಳನ್ನು ಗಮನಕ್ಕೆ ತಂದುಕೊಂಡರೆ ದೊರೆಯುವ ವಿವರಗಳನ್ನು ಇಲ್ಲಿ ಕಲೆಹಾಕಿದೆ.

ನೀಲಗಿರಿಯ ಪೂರ್ವದ ಸೆರಗನ್ನು ತಾಕಿಕೊಂಡು ಚಿತ್ತೂರು ಜಿಲ್ಲೆಯಿಂದ ಸಾಗುವ ಪೂರ್ವಘಟ್ಟದ ಸಾಲು ಮೇಲೆ ಕರ್ನೂಲು ಜಿಲ್ಲೆಯನ್ನು ಹಾದು ಹೋಗುತ್ತದೆ. ಆ ಸಾಲಿನಲ್ಲಿಯೇ ದಕ್ಷಿಣದಲ್ಲಿ ತಿರುಮಲ ದೇವರು ಮತ್ತು ಕಾಳಹಸ್ತಿಗಳಿದ್ದರೆ ಮುಂದೆ ಅಹೋಬಲ ಮತ್ತು ಶ್ರೀ ಶೈಲಗಳು ಹತ್ತುತ್ತವೆ. ಚಿತ್ತೂರು ಜಿಲ್ಲೆಯ ದಕ್ಷಿಣದಲ್ಲಿ ತಿರುಮಲೆಯಿದ್ದರೆ ಕರ್ನೂಲು ಜಿ‌ಲ್ಲೆಯ ಉತ್ತರ ತುದಿಯಲ್ಲಿ ಶ್ರೀ ಶೈಲವಿದೆ. ಈ ನಾಲ್ಕೂದೇವಾಲಯಗಳು ಬಹು ಪುರಾತನ ಕಾಲದಿಂದ ಪ್ರಸಿದ್ಧವಾಗಿವೆ. ಇವುಗಳಲ್ಲಿ ತಿರುಪತಿ ದೇವರ ಸಂಬಂಧವಾಗಿ ಬಹಳ ಹಿಂದಿನಿಂದ ಶಾಸನ ಮತ್ತು ಸಾಹಿತ್ಯದಲ್ಲಿ ಉಲ್ಲೇಖಗಳು ಕಂಡುಬರುತ್ತವೆ.

ಮೇಲೆಹೇಳಿದಂತೆ ಚಿತ್ತೂರು ಜಿಲ್ಲೆಯ ಘಟ್ಟದ ಸಾಲಿನಲ್ಲಿ ಏಳು ಬೆಟ್ಟಗಳ ಒಂದು ಸಮುದಾಯವಿದೆ. ಇದನ್ನು ತೆಲುಗು ಜಾನಪದರು ‘ಏಡು ಕೊಂಡಲು’ ಎಂದು ಹೇಳಿದರೆ, ಸಂಸ್ಕೃತ ಪುರಾಣ ಪರಂಪರೆಯನ್ನು ನಚ್ಚಿಕೊಂಡ ಜನ ‘ಶೇಷಗಿರಿ’ ಎಂದು ಹೇಳುತ್ತಾರೆ. ಎಂದರೆ ಈ ಸಮುದಾಯವನ್ನು ಉದ್ದಕ್ಕೆ ಮಲಗಿರುವ ಹಾವಿನ ಆಕಾರದಲ್ಲಿ ಅವರು ಕಲ್ಪಿಸಿಕೊಂಡಿದ್ದಾರೆ. ಈ ಏಳು ಬೆಟ್ಟಗಳು ಅಥವಾ ಒಂದೇ ಬೆಟ್ಟ ಸಾಲಿನ ಏಳು ಶಿಖರಗಳಲ್ಲಿ ವೆಂಕಟ/ವೆಂಗಡ ಎಂಬ ಶಿಖರದ ಸಮೀಪವಿರು ವಿಶಾಲ ತಗ್ಗಿನಲ್ಲಿ ಪ್ರಸ್ತುತ ದೇವಾಲಯವಿದೆ. ಇದರಿಂದಾಗಿ ದೇವರಿಗೆ ವೇಂಗಡಮುಡೈ ಯಾನ್, ವೇಂಕಟಪತಿ, ವೇಂಗಳನಾಥ ಎಂದರೆ ವೇಂಗಡದ ಒಡೆಯ ಎಂಬ ಹೆಸರು ಬಂದಿದೆ.

ತಿಮ್ಮಪ್ಪನ ಮೂಲದೇವಸ್ಥಾನವಿರುವ ಕಂದರದಿಂದ ಕೆಳಗೆ ತಿರುಪತಿ ಊರು ಇರುವವರೆಗೆ ಮತ್ತು ಊರಲ್ಲಿ ಹಲವಾರು ದೇವಾಲಯಗಳು ನಿರ್ಮಾಣವಾಗಿವೆ. ಕಾಲಾಂತರದಲ್ಲ ವೈಷ್ಣವ, ಶ್ರೀವೈಷ್ಣವ ಪರವಾದ ದೇವರುಗಳು ಇಲ್ಲೆಲ್ಲ ತುಂಬಿಕೊಂಡು ಬಿಟ್ಟಿವೆ. ಮುಖ್ಯದೇವರ ಪತ್ನಿ ಎನಿಸಿಕೊಳ್ಳುವ ಅಲಮೇಲು ಮಂಗಮ್ಮನಿಗೊಂದು ಪ್ರತ್ಯೇಕ ದೇವಾಲಯವಿರುವುದೂ ಇಲ್ಲಿಯೆ. ಆದರೆ ಮುಖ್ಯ ದೇವಾಲಯದಲ್ಲಿರುವುದು ಏಕೈಕ ಮೂರ್ತಿ. ಇದನ್ನು ಮೂಲವರ್ ಅಥವಾ ಮೂಲದೇವರು ಎಂದು ಹೇಳುತ್ತಾರೆ. ಇದರ ಒಳವಲಯದಲ್ಲಿ ಇತರ ದೇವರುಗಳಿಲ್ಲ. ಗರ್ಭಗುಡಿ ಮತ್ತು ಶಯನ ಮಂಟಪಗಳ ಹೊರಗಡೆ ವಿಷ್ವಕ್ಷೇನ, ನರಸಿಂಹ, ರಾಮ, ರಾಮಾ ನುಜ ಸನ್ನಿಧಿ ಮುಂತಾದ ದೇವರುಗಳು ನೆಲಸಿವೆ. ಎಂತಲೆ ತಿರುಮಲೆಯ ದೇವಸ್ಥಾನವನ್ನು ‘ಏಕಮೂರ್ತಿ ದೇವಾಲಯ’ ಎಂದು ಕರೆಯವುದು.

ಪ್ರಸ್ತುತ ಮೂಲ ಮೂರ್ತಿಯೇ ಎಲ್ಲೆಡೆ ಖ್ಯಾತವಾಗಿದ್ದು ಲಕ್ಷಾಂತರ ಭಕ್ತರು ವರ್ಷದ ಹನ್ನೆರಡೂ ತಿಂಗಳು ಇದನ್ನು ದರ್ಶಿಸಲು ಹೋಗುತ್ತಾರೆ. ಆದರೆ ಈಗಾಗಲೇ ಹೇಳಿದಂತೆ ಅವರಿಗೆ ಈ ದೇವರ ಪೂರ್ಣದರ್ಶನವಾಗುವುದು ಮಾತ್ರ ಸಾಧ್ಯವಿಲ್ಲ. ಭಕ್ತರು ದೂರದಿಂದ, ಮಣಗಟ್ಟಲೆ ಬಂಗಾರ, ಬೆಳ್ಳಿ, ವಜ್ರವೈಢೂರ್ಯಾದಿಗಳಿಂದ ಮುಚ್ಚಿರುವ ಸ್ಥಿತಿಯಲ್ಲಿಯೇ ನೋಡಿ ತೃಪ್ತರಾಗಬೇಕು. ಬೇರೆ ಉಪಾಯವೇ ಇಲ್ಲ.

ಪ್ರಯಾಸಪಟ್ಟು ಕಲೆಹಾಕಿದ ಕೆಲವು ವಿವರಗಳನ್ನು ಪ್ರೊ || ರಾಮಚಂದ್ರ ರಾಯರು ಕೊಟ್ಟಿದ್ದಾರೆ. ಅವರ ಪ್ರಕಾರ ದೂರದಿಂದ ನೋಡಲು ಮೂರ್ತಿ ಕಪ್ಪಾಗಿದೆ. ಆದರೆ ಅದು ಕಲ್ಲಿನಿಂದ ಮಾಡಿದ್ದೋ ಅಥವಾ ಕಟ್ಟಿಗೆಯಿಂದ ಮಾಡಿದ್ದೋ ತಿಳಿಯುವಂತಿಲ್ಲ. (ಮೂರ್ತಿಶಿಲ್ಪಕ್ಕೆ ಮೃತ್ತಿಕೆ, ಲೆಪ್ಪಗಳನ್ನು ಬಳಸಿರಬಹುದಾದ ಸಾಧ್ಯತೆಯನ್ನೂ ಇಲ್ಲಿ ಪರಿಗಣಿಸಬೇಕು). ಬೆನ್ನು ಮತ್ತು ಭುಜದ ಮೇಲೆ ಕೂಡಲು ಇಳಿಬಿದ್ದಂತೆ ಗೆರೆಗಳಿವೆಯಂತೆ. ಚತುರ್ಭುಜಗಳ ಪೈಕಿ ಹಿಂದಿನ ಕೈಗಳಲ್ಲಿ ಈಗ ಚಕ್ರ ಮತ್ತು ಶಂಕಗಳಿವೆ. ಆದರೆ ಇವು ಮೂಲಶಿಲ್ಪಕ್ಕೆ ಸೇರಿದ್ದಲ್ಲ. ಇವನ್ನು ರಾಮಾನುಜಾಚಾರ್ಯರು ಅನಂತರ ತೊಡಿಸಿದಂತೆಲ ಇವು ಬಂಗಾರದಿಂದ ಮಾಡಿದವು. ಇನ್ನೊಂದು ಜೋಡಿ ಕೈಯಲ್ಲಿ ಒಂದು ವರದ ಹಸ್ತವಾಗಿದ್ದರೆ ಮತ್ತೊಂದು ಕಟ್ಯವಲಂಬಿತವಾಗಿದೆ. ಕಟ್ಯವಲಂಬಿತವಾಗಿದ್ದರೂ ಪ್ರಸ್ತುತ ಕೈ ಮತ್ತು ಸೊಂಟಗಳ ನಡುವೆ ತುಸು ಹೆಚ್ಚಿನ ಅಂತರ ಉಳಿದುಕೊಂಡಿದೆ. ದೇವರ ಮೈಮೇಲೆ ಲಕ್ಷ್ಮಿ ಅಥವಾ ಅಲುಮೇಲು ಮಂಗಮ್ಮನ ಪದಕವನ್ನು ತೊಡಿಸುವ ಪದ್ಧತಿ ಬೆಳೆದು ಬಂದಿದೆ. ಈ ಪದ್ಧತಿಯನ್ನು ಪ್ರಾರಂಭಿಸಿದವರೂ ಶ್ರೀ ರಾಮಾನುಜಾಚಾರ್ಯರೇ. (ಎಂತಲೆ ಆಚಾರ್ಯರು ದೇವರಿಗೆ ಮಾವನೂ ಆಚಾರ್ಯರೂ ಆದರೆಂದು ಶ್ರೀ ವೈಷ್ಣವರು ನಂಬುತ್ತಾರೆ). ಮೇಲ್ಗಡೆ ಬಂಗಾರದ ಪಾದಗಳನ್ನು ಯಾವತ್ತೂ ಅಳವಡಿಸಿದ್ದು ಕಂಡುಬರುತ್ತದೆ. ಒಳಗೇನಿದೆಯೋ ಗೊತ್ತಿಲ್ಲ. ಕರ್ಪೂರ ಮತ್ತು ಕಸ್ತೂರಿಗಳಿಂದ ಕೂಡಿದ ಊರ್ಧ್ವ ಪುಂಡ್ರವನ್ನು ಮೂಗಿನ ಬಹುಭಾಗ ಸಹಿತವಾಗಿ ಕಣ್ಣು ಮತ್ತು ಹುಬ್ಬುಗಳು ಪೂರ್ಣ ಮುಚ್ಚುವಂತೆ ಬಳೆದಿರುತ್ತಾರೆ. ಇದರಿಂದಾಗಿ ಶುಕ್ರವಾರದ ಹೊರತು ದೇವರ ಕಣ್ಣು ಮತ್ತು ಹುಬ್ಬುಗಳ ದರ್ಶನ ಸಾಧ್ಯವಿಲ್ಲ. ಶುಕ್ರವಾರದ ದರ್ಶನದಲ್ಲಿಯೂ ಎಲ್ಲವನ್ನು ದೂರದಿಂದ ಗ್ರಹಿಸುವ ಸಂಭವ ಬಹಳ ಕಡಿಮೆ. ಹಲವು ಬಾರಿ ನೋಡಿದವರು ಹುಬ್ಬು ಮತ್ತು ಕಣ್ಣುಗಳು ನೋಡಲು ಉಗ್ರವಾಗಿವೆ ಎಂದು ಹೇಳುತ್ತಾರೆ. ಎಂತಲೆ ದೇವರ ಸಹಸ್ರನಾಮದಲ್ಲಿ ‘ವಿರೂಪಾಕ್ಷ’ ಎಂಬ ಹೆಸರು ಬಂದಿದೆಯಂತೆ.

ದೇವರ ಮೂರ್ತಿಸ್ವರೂಪವನ್ನು ಕುರಿತಾದ ಮಾತುಗಳು ಹಲವು ಪುರಾಣಗಳಲ್ಲಿವೆ. ತೊಂಡಮಾನ ಚಕ್ರವರ್ತಿಗೆ ಪ್ರಸನ್ನವಾದ ದೇವರು ಅವನು ಯುದ್ಧಕ್ಕೆ ಹೊರಟಾಗ ಅವನಿಗೆ ತನ್ನ ಶಂಖ-ಚಕ್ರಗಳನ್ನಿತ್ತು ತಾನು ಬರಿಗೈಯಲ್ಲಿ ನಿಂತಿದ್ದಾನೆ ಎಂದು ಬ್ರಹ್ಮಾಂಡ, ಸ್ಕಂದ ಮತ್ತು ಬ್ರಹ್ಮವೈವರ್ತ ಪುರಾಣಗಳು ಹೇಳುತ್ತವೆ. ಎಂದರೆ ಈ ಪುರಾಣಗಳ ಅಭಿಪ್ರಾಯದಲ್ಲಿ ದೈವದ ಕೈಯಲ್ಲಿರಬೇಕಾಗಿದ್ದ ಲಾಂಛನಗಳು ಇರಲಿಲ್ಲವೆಂದಾಗುತ್ತದೆ. ಮೂರು ಪುರಾಣಗಳ ಈ ಮಾತು ಹೆಚ್ಚು ಗಮನಾರ್ಹವಾಗಿದೆ. ವಾಮನಪುರಾಣವು ಈತ ಶಂಖ, ಚಕ್ರ, ಧನುರ್ಬಾಣಪಾಣಿ ಎಂದು ಹೇಳುತ್ತದೆ. ಸ್ಕಂದಪುರಾಣದಲ್ಲಿಯೇ ಅಸಿ, ಗದೆ. ಚಾಪ ಮತ್ತು ತೋಮರಗಳು ಇವನ ಆಯುಧಗಳೆಂಬ ಇನ್ನೊಂದು ಹೇಳಿಕೆಯಿದೆ. ದೇವರ ಕೈಗಳಲ್ಲಿ ಶರ-ಚಾಪ, ಖಡ್ಗ, ಕುಂತ ಮತ್ತು ಕೊಡಲಿ ಇವೆಯೆಂದು ಸಾತ್ತ್ವತ ಸಂಹಿತೆ ಹೇಳುತ್ತದೆ. ಪ್ರಾಚೀನ ಆಳ್ವಾರರಲ್ಲಿ ಒಬ್ಬರಾದ ಪೇಯಾಳ್ವಾರರು, ಇಳಿಬಿದ್ದ ಜಡೆ, ನೀಳವಾದ ಮುಡಿ, ಕೈಯಲ್ಲಿಕೊಡಲಿ ಮತ್ತು ಚಕ್ರಗಳಿವೆ ಎಂದಿದ್ದಾರೆ. ಇವೆಲ್ಲ ತುಂಬಾ ಪ್ರಾಚೀನವಾದ ಹೇಳಿಕೆಗಳು. ಹಾಗಿದ್ದ ಮೇಲೆ ಮೇಲಿನ ಪುರಾಣಗಳಲ್ಲಿ ಯಾವುದೆ ಹೇಳಿಕೆ ಸತ್ಯ? ಇವನ್ನು ನಂಬಿದರೆ ಭಕ್ತರಷ್ಟೇ ಅಲ್ಲದೆ ಸಂಶೋಧಕರೂ ದಿಕ್ಕು ತಪ್ಪುವುದು ಮಾತ್ರ ಸತ್ಯ.

ನಮ್ಮ ಜಾನಪದರಲ್ಲಿ ಈ ದೇವರಿಗೆ ತಾಯಿಯೊಬ್ಬಳು ಇರುವಳೆಂಬ ನಂಬಿಕೆಯಿದೆ. ತಿರುಮಲೆಯ ದೇವಾಲಯದ ಅಡಿಗೆ ಮನೆಯಲ್ಲಿ ‘ವಕುಳಾದೇವಿ’ ಎಂಬ ದೇವಿಯ ಮೂರ್ತಿಯನ್ನಿಟ್ಟು ಅವಳ ಸನ್ನಿಧಿಯಲ್ಲಿಯೇ ದೇವರ ನೈವೇದ್ಯಾದಿಗಳನ್ನು ಸಿದ್ಧಗೊಳಿಸುತ್ತಾರೆ. ಅಲ್ಲಿನ ಸ್ಥಳ ಪುರಾಣದಂತೆ ಇವಳು ಅಲ್ಲಿರುವ ಮೂಲ ವರಾಹ ಸ್ವಾಮಿಯ ಅಡಿಗೆಯವಳು. ಆ ಆದಿ ವರಾಹವೇ ಅವಳನ್ನು ಶ್ರೀನಿವಾಸನಿಗೆ ಅಡಿಗೆ ಮಾಡಲೆಂದು ಕಳುಹಿಸಿದನೆಂದು ಹೇಳುತ್ತಾರೆ.

ವೇಂಗಡ ದೇವರ ಪತ್ನಿಯಾದ ಅಲುವೇಲು ಮಂಗಮ್ಮನನ್ನು ಅಲರ್-ಮೇಲ್-ಮಂಗೈ ಎಂದು ತಮಿಳಿನಲ್ಲಿ ಮತ್ತು ಪದ್ಮಾವತಿ ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ. ಈ ಮೊದಲು ಹೇಳಿದಂತೆ ಇವಳಿಗೆ ಮೂಲ ದೇವಾಲಯದಲ್ಲಿ ಯಾವ ಸ್ಥಾನವೂ ಇಲ್ಲ. ನಿತ್ಯ-ನೈಮಿತ್ಯಕ ಪೂಜೆಗಳಲ್ಲಿ ಹೇಳಿಕೊಳ್ಳುವಂಥ ಪಾಲು ದೊರೆಯುವುದಿಲ್ಲ. ನಿತ್ಯ ನಡೆಯುವ ದೇವರ ಶಯನೋತ್ಸವದಲ್ಲಿ ದೇವರು ಮಲಗುವುದು ಈ ಪದ್ಮಾವತೀ ಸಮೇತನಾಗಿ ಅಲ್ಲ; ಕೇವಲ ತಾನೊಬ್ಬನೇ. ಇದರಿಂದ ವೇಂಕಟನಿಗೂ ಪದ್ಮಾವತಿಗೂ ನೈಜ ಸಂಬಂಧವಿಲ್ಲವೆಂದಾಯಿತು. ಮಂಗಮ್ಮ ಎಂದಿರುವ ಜಾನಪದ ಹೆಸರನ್ನು ಪೂರಾಣಗಳು ಪದ್ಮಾವತಿ ಎಂದು ಸಂಸ್ಕೃತೀಕರಿಸಿವೆಯೆಂಬುದು ಸ್ಪಷ್ಟ.

ಪೂಜಾವಿಧಿಗಳಲ್ಲಿ ಕೂಡ ಹಲವಾರು ವಿರೋಧಾಭಾಸಗಳಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಪರಂಪರೆಯಿಂದ ಬಂದ ತೆಲಗು ಮೂಲದ ವೈಖಾನಸ ಪೂಜಾರಿಗಳ ಹೊರತು ಇತರರಿಗೆ ಅಲ್ಲಿ ಅವಕಾಶವಿಲ್ಲ. ದೇವರು ವಿಷ್ಣುವೆಂಬ ತಿಳುವಳಿಕೆಯಿದ್ದರೂ ಬಿಲ್ವಪತ್ರಿಯಿಂದ ಪೂಜೆ ನಡೆಯುತ್ತದೆ. ಪುನುಗಿನ ಬೆಕ್ಕಿನ ಕೊಬ್ಬಿನಿಂದ ದೇವರ ಮುಖ, ಮೈ ಕೈ ಮತ್ತು ಕಾಲುಗಳಿಗೆ ತಿಕ್ಕುವ ಪದ್ಧತಿಯಿದೆ. ಶುಕ್ರವಾರ ದೇವರನ್ನು ಸ್ತ್ರೀ ದೇವತೆಯಂತೆ ಅಲಂಕರಿಸಿ ಉತ್ಸವ ನಡೆಸುವ ವಿಶೇಷ ಮರ್ಯಾದೆ ಕೂಡ ಇದೆ. ಮುಂಚೆ ದೇವರ ಮುಖದ ಮೇಲೆ ಅರ್ಧಚಂದ್ರಾಕೃತಿಯ ನಾಮ ಹಚ್ಚುವ ಪದ್ಧತಿ ಬದಲಾಗಿ ಈಗ ಊರ್ಧ್ವ ಪುಂಡ್ರ ಹೆಚ್ಚುವ ರೂಢಿ ಬಂದಿದೆ. ಇದು ಊರ್ಧ್ವಪುಂಡ್ರವೆಂದರೂ ಶ್ರೀ ವೈಷ್ಣವರ ನಾಮವಲ್ಲ. (ನಮ್ಮ ಕಡೆಯ ಕೆಲವು ಜನ ಈ ದೇವರ ಒಕ್ಕಲಿನವರು ಮನೆಯಲ್ಲಿ ಲಗ್ನವಿದ್ದಾಗ ಗುಗ್ಗುಳ ಸೇವೆ ಸಲ್ಲಿಸುವುದಿದೆ).

ಈ ದೇವರನ್ನು ಕುರಿತು ನಮ್ಮ ಜಾನಪದರು ಇಟ್ಟುಕೊಂಡಿರುವ ನಡವಳಿಕೆಗಳಿಂದ ಕೆಲವು ಸ್ವಾರಸ್ಯಕರ ಅಂಶಗಳು ಹೊರಪಡುತ್ತವೆ. ತಮ್ಮ ಪರಂಪರಾಗತವಾದ ಕ್ರಮದಂತೆ ತಿರುಪತಿಯ ಯಾತ್ರೆ ಮಾಡುವ ದಾಸಪ್ಪಗಳು ಮತ್ತು ಇತರ ಭಕ್ತರು ಯಾತ್ರೆ ಹೊರಡುವ ಮುಂಚೆ ಆಯಾ ಊರುಗಳಲ್ಲಿ ಕೆಲವು ನಿಯಮಿತ ಆಚರಣೆಗಳನ್ನು ಜರುಗಿಸುತ್ತಾರೆ. ಅವುಗಳಲ್ಲಿ ‘ಮಣೇವು ಹಾಕುವುದೂ’ ಒಂದು. ಈ ಸಂದರ್ಭದಲ್ಲಿ ತಿನ್ನಬೇಕಾದ ಆಹಾರ ಪದಾರ್ಥಗಳನ್ನು ಒಂದು ಬಟ್ಟೆಯ ಮೇಲೆ ಕೂಡುಹಾಕಿ ದಾಸಪ್ಪಗಳು ಅದರ ಸುತ್ತ ಕಪಿಗಳಂತೆ ಕುಪ್ಪಳಿಸುತ್ತ, ಜಿಗಿಯುತ್ತ, ಕೈಯಿಂದ ಮುಟ್ಟದೆ ಬಾಯಿಹಾಕಿ ತಿಂದು ಮುಗಿಸುತ್ತಾರಂತೆ. ಯಾತ್ರೆ ಹೊರಟ ಮೇಲೆ ಮುಳುಬಾಗಿಲಿನವರೆಗೆ ಹೋಗಿ ಅಲ್ಲಿರುವ ಹನುಮಂತದೇವರ ದೇವಾಲಯದಲ್ಲಿ ತಪ್ಪದೆ ಪೂಜಾವಿಧಿಗಳನ್ನು ಸಲ್ಲಿಸುತ್ತಾರೆ. ದೇವರ ಹೆಸರು ಹಿಡಿದು ಘೋಷಿಸುವಾಗ ‘ಮುಳುಬಾಗಲ ಮುಕ್ಕಪ್ರಾಣಿ ನಿನ್ನ ಗೋವಿಂದಾ’ ಎಂದು ಅಲ್ಲಿ ಹನುಮಂತ ದೇವರಿಗೂ ಭಕ್ತಿಸಲ್ಲಿಸುತ್ತಾರೆ. ಕೆಲವು ದಾಸಯ್ಯಗಳು ಭಿಕ್ಷೆ ಬೇಡುತ್ತ ಮುಳಬಾಗಿಲಿಗೆ ಬಂದು ದೇವರ ದರ್ಶನದೊಂದಿಗೆ ಭಿಕ್ಷೆ ಬೇಡುವುದನ್ನು ನಿಲ್ಲಿಸಿ ಬಿಡುವರಂತೆ. ಇದರಿಂದ ಈ ಹನುಮಂತ ದೇವರಿಗೆ ಈ ಸಂಪ್ರದಾಯದಲ್ಲಿ ಏನೋ ಮಹತ್ವವಿರುವ ಅಂಶ ಸ್ಪಷ್ಟವಾಗುತ್ತದೆ.

ತಿರುಪತಿಯ ಬೆಟ್ಟದಲ್ಲಿ ಇವರು ನಡೆಸುವ ಹಲವಾರು ಆಚರಣೆಗಳಲ್ಲಿ ಕಪಿಗಳಿಗೆ ಕಜ್ಜಾಯ ತಿನ್ನಿಸುವುದೂ ಒಂದು. ಯಾತ್ರಿಕರು ಊರಿಂದ ಹೊರಡುವಾಗ ದೇವರ ಹೆಸರಿನಿಂದ ಮೊದಲೆ ಈ ಕಜ್ಜಾಯಗಳನ್ನು ಮಾಡಿಕೊಂಡಿರುತ್ತಾರೆ (ಇದನ್ನು ತಯಾರಿಸಲು ಹಸೀ ಅಕ್ಕಿಹಿಟ್ಟು, ಕಡಲೇಬೀಜ, ಎಳ್ಳು, ಎಣ್ಣೆ ಅಥವಾ ತುಪ್ಪ, ಬೆಲ್ಲ ಮುಂತಾದ ಸಾಮಗ್ರಿ ಬಳಸಿರುತ್ತಾರೆ). ಗೋವಿಂದರಾಜಪುರ ಅಥವಾ ಕೆಳ ತಿರುಪತಿಯಿಂದ ಬೆಟ್ಟ ಏರುವಾಗ ದೊರೆಯುವ ಕಪಿಗಳಿಗೇ ಇವನ್ನು ತಿನ್ನಿಸಬೇಕೆಂಬುದು ಇವರ ನಂಬಿಕೆ. ಇದೇ ರೀತಿ ಬೇಡಿಕೊಂಡ ಹರಕೆಯಂತೆ ಅಥವಾ ಮುಡಿಪಾಗಿ ಕಟ್ಟಿಟ್ಟ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕದೇ ಯಾರಾದರು ಅದನ್ನು ತಿರುಗಿ ತರುತ್ತಿದ್ದರೆ ಅಂಥವರನ್ನು ಕಪಿಗಳು ಅಡ್ಡಗಟ್ಟಿ ಕಾಡುತ್ತವಂತೆ. ಉತ್ತರ ಕರ್ನಾಟಕದಲ್ಲಿ ಈ ನಂಬಿಕೆ ಪ್ರಚುರವಾಗಿದೆ.

ಉತ್ತರ ದೇಶಿಯರು ಈ ದೇವರನ್ನು ‘ಬಾಲಾಜಿ’ ಎಂದು ಕರೆಯುವ ಸಂಗತಿ ಎಲ್ಲರಿಗೂ ಗೊತ್ತು. ಬಾಲಾಜಿ ಎಂದರೆ ಕ್ಷುದ್ರದೇವತೆ, ಗ್ರಾಮದೇವತೆ, ಯಕ್ಷ ಎಂದು ಅರ್ಥವಂತೆ. ಈ ಅರ್ಥದಲ್ಲಿ ಅವರು ಹನುಮಂತನನ್ನೂ ಕರೆಯುವರೆಂದು ಪ್ರೊ || ರಾಮಚಂದ್ರರಾಯರು ತಿಳಿಸಿದ್ದಾರೆ.

ಇವೆಲ್ಲಕ್ಕಿಂತ ಮಹತ್ವದ ಅಂಶವೊಂದಿದೆ. ತಿಮ್ಮಪ್ಪನ ಭಕ್ತರಾದ ದಾಸಯ್ಯಗಳು ನಿತ್ಯ ಪೂಜೆಗಾಗಿ ತಮ್ಮಲ್ಲಿಟ್ಟುಕೊಂಡಿರುವ ವಸ್ತುಗಳಲ್ಲಿ ‘ಪಿರುಮಾಳು’ ಎಂಬ ಹೆಸರಿನ ಹಿತ್ತಾಳೆಯ ಹನುಮಂತನ ಮೂರ್ತಿಯೂ ಒಂದು. ಎಂದರೆ ಇವರು ಪೂಜಿಸುತ್ತ ಬಂದ ತಿಮ್ಮಪ್ಪನೆ ಪ್ರತಿರೂಪ ಅಥವಾ ಪರಂಪರಾಗತ ರೂಪ ಹನುಮಂತನೇ ಎಂದಂತಾಯಿತು. ಇದರಿಂದ ತಿರುಮಲೆಯ ದೇವರೆಂದರೆ ಮಾರುತಿಯೇ ಎಂದು ಹೇಳಬೇಕಾಗುತ್ತದೆ. ಈ ಮಾತನ್ನು ಸಮರ್ಥಿಸುವ ಕನ್ನಡ ದಾಸರ ಪದಗಳು ಕೂಡ ದೊರೆಯುತ್ತವೆ. ಉದಾಹರಣೆಗೆ, ಪುರಂದರದಾಸರ ಪದ್ಯವೊಂದು ಮುಂದಿನಂತಿದೆ:

ಸುಣ್ಣವ ತಿಂದ ತಿಮ್ಮಣ್ಣನಂದದಿ ಬೆದರಿ
ಟಣ್ಣು ಪಣ್ಣನೆ ಕುಣಿ ಕುಣಿದಾಡಿ
ದೊಣ್ಣೆ ಪೆಟ್ಟಿಗೆ ನೀ ಗುರಿಯಾದೆಯಲ್ಲೋ
(ಸುಧಾ, ೨೯-೧೨-೧೯೮೬, ಪು.೨೩)

ಇದರಿಂದ ಮಂಗನನ್ನು ತಿಮ್ಮಪ್ಪನೆಂದು ಕರೆಯುವ ಪರಂಪರೆ ತುಂಬ ಹಳೆಯದೆಂದು ಸಾಬೀತಾಗುತ್ತದೆ. ತಿರುಮಲೆ ದೇವರ ಪ್ರತೀಕವೆಂದು ಕಪಿಯನ್ನು ಪೂಜಿಸುವುದು ಮುಂಚಿನಿಂದಲೂ ಇದ್ದಿತೆಂದು ಇದರಿಂದ ತಿಳಿಯಬಹುದಾಗಿದೆ. ತಿಮ್ಮಪ್ಪನ ವಾರ ಮತ್ತು ಮಾರುತಿಯ ವಾರ ಕೂಡ ಒಂದೇ, ಅದು ಶನಿವಾರವಾಗಿದೆ.

ನಮ್ಮ ಜಾನಪದರಲ್ಲಿ ಹಲವಾರು ದೇವರುಗಳ ಪ್ರತೀಕವಾಗಿ ಒಂದೊಂದು ಪ್ರಾಣಿ ಅಥವಾ ಮರ ರೂಢಿಯಲ್ಲಿದೆ. ಮೈಲಾರ ದೇವರ ಪ್ರಮುಖ ಪ್ರಾಣಿ ನಾಯಿ, ನಾರಾಯಣನ ಪ್ರತೀಕವಾಗಿ ಅರಳೆಮರ, ಪಾರ್ವತಿಗೆ ಆಲದಮರ, ಪದ್ಮಾವತಿ (ಜೈನ)ಯ ಸನ್ನಿಧಿಯಲ್ಲಿ ಲಕ್ಕೀಮರ, ಜ್ಯೋತಿಬಾ ರವಳೋಬಾ, ಧರಿ ಮೈಲಾರ ಲಿಂಗ ಮುಂತಾದವರ ಪ್ರತೀಕವಾಗಿ ಕುದುರೆ, ಇವು ಕಂಡುಬರುತ್ತವೆ. ಸರ್ಪ ಸುಬ್ರಹ್ಮಣ್ಯನ ಪ್ರತೀಕವಾಗಿರುವುದು ಬಹಳಷ್ಟು ಜನಕ್ಕೆ ಗೊತ್ತಿದೆ.

ಮೇಲಿನಂತಹ ದೇವರ ಪ್ರತೀಕವಾಗಿರುವ ಪ್ರಾಣಿ ಅಥವಾ ಮರಗಳ ಸುತ್ತ ಹಲವಾರು ನಂಬಿಕೆಗಳು ಹುಟ್ಟಿಕೊಂಡು ನಾನಾ ಪ್ರಕಾರದ ಆಚರಣೆಗಳಿಗೆ ದಾರಿ ಮಾಡಿಕೊಡಬಹುದಾಗಿದೆ. ಅಂಥ ಆಚರಣೆಗಳು ಆಯಾ ಸಂಕೇತದ ಜೊತೆಗೆ ನಿಕಟವಾದ ಸಂಬಂಧ ಕಲ್ಪಿಸಿಕೊಳ್ಳುವುದು ಅನಿವಾರ್ಯ. ಪ್ರಸ್ತುತ ನಮ್ಮ ಜಾನಪದರಲ್ಲಿ ಕಂಡುಬರುವ ಪ್ರಾಣಿ ಸಂಕೇತಗಳಲ್ಲಿ ಮತ್ತು ಅವುಗಳ ಸುತ್ತಲಿನ ಆಚರಣೆಗಳಲ್ಲಿ ಅಂಥ ಸಂಬಂಧಗಳನ್ನು ಗುರುತಿಸುವುದು ಹೆಚ್ಚಿನ ಸಂದರ್ಭಗಳಲ್ಲಿ ಸುಲಭ ಸಾಧ್ಯವಾಗಿರುತ್ತದೆ. ನಾಯಿಯ ಸಂಕೇತ ಪ್ರಧಾನವಾಗಿರುವಲ್ಲಿ ನಾಯಿಯಂತೆ ಬೊಗುಳುವುದು, ಕುದುರೆಯ ಸಂದರ್ಭದಲ್ಲಿ ಕುದುರೆಯಂತೆ ಕುಣಯುವುದು, ಹಾವು ಸಂಕೇತವಾಗಿದ್ದಲ್ಲಿ ಅದರಂತೆ ಕುಣಿಯುವ, ಬುಸುಗುಡುವ ಆಚರಣೆ ನಡೆದು ಬಂದಿರಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ (ಕಂಬಳ ಮತ್ತು) ನಾಗಮಂಡಲ ನೃತ್ಯಗಳು ಬಹುಶಃ ಹಾವಿನ ಅರ್ಥಾತ್ ಸುಬ್ರಹ್ಮಣ್ಯನ ಪ್ರೀತ್ಯರ್ಥವಾಗಿ ನಡೆಯುವ ಆಚರಣೆಗಳು. ಇವುಗಳ ಸಾಲಿಗೆ ಸೇರತಕ್ಕ ಇನ್ನೊಂದು (ಪ್ರಾಣಿ) ಸಂಕೇತ ಮತ್ತು ಆಚರಣೆಯೆಂದರೆ ಕಪಿಯದು.

ಕಪಿ ನಮ್ಮಲ್ಲಿ ಮಾರುತಿ, ಹನುಮಾನ್, ಆಂಜನೇಯ, ರಾಮಾದಸ ಇತ್ಯಾದಿ ಹೆಸರುಗಳಿಂದ ಪೂಜೆಗೊಳ್ಳುತ್ತಿರುವ ಪ್ರಬಲವಾದ ಒಂದು ಟೋಟೆಮ್ (Totem) ಆಗಿದೆ. ಹಳ್ಳಿಹಳ್ಳಿಗೂ ನಮ್ಮಲ್ಲಿ ಹನುಮಂತನ ಗುಡಿಗಳಿವೆ. ರಾಮಾಯಣ ಕಥೆಯ ಪ್ರಕಾರ ಹನುಮಂತ ರಾಮನ ಬಂಟನೆಂದು ತಿಳಿಯಲಾಗುತ್ತದಾದರೂ ವಾಸ್ತವವಾಗಿ ನಮ್ಮಲ್ಲಿ ರಾಮನ ಪೂಜೆ ಇಲ್ಲವೇ ಇಲ್ಲ. ರಾಮನು ಮುಖ್ಯ ದೇವರಾಗಿ ಪೂಜೆಗೊಳ್ಳುತ್ತಿದ್ದ ಒಂದು ಧಾಮ ಅಥವಾ ಕ್ಷೇತ್ರ ಪ್ರಾಚೀನ ಕಾಲದಲ್ಲಿ ನಮ್ಮಕಣ್ಣಿಗೆ ಬೀಳುವುದಿಲ್ಲ. ಇದು ಆಶ್ಚರ್ಯದ ಸಂಗತಿಯಲ್ಲವೇ?

ರಾಮಾಯಣದ ಕಥೆಯ ಪ್ರಕಾರ ಹನುಮಂತ ದಕ್ಷಿಣದವನೆಂಬ ಅಂಶ ಸ್ಪಷ್ಟವಾಗಿದೆ. ಕಿಷ್ಕಿಂಧೆಯಲ್ಲಿ ಕೋತಿಗಳ ಒಂದು ರಾಜ್ಯವೇ ಇತ್ತೆಂದು ಆ ಮಹಾಕಾವ್ಯ ಹೇಳುತ್ತದೆ. ಮೂಲದಲ್ಲಿದ್ದ ಒಂದು ಕಥಾ ಪರಂಪರೆಯನ್ನು ರಾಮಾಯಣ ತನ್ನ ಉದ್ದೇಶಕ್ಕೆ ತಕ್ಕಂತೆ ಬದಲಾಯಿಸಿಕೊಂಡು ತನ್ನಲ್ಲಿ ಅಳವಡಿಸಿಕೊಂಡಿರುವಂತೆ ಕಾಣುತ್ತದೆ. ಪ್ರಸ್ತುತ ಕಾವ್ಯವೇ ಎಲ್ಲೆಡೆ ಪ್ರಚಾರಕ್ಕೆ ಬಂದುದರಿಂದ ರಾಮ ಪ್ರಥಮ ವರ್ಗದ ದೇವರಾದ. ಹನುಮಂತ ಅವನ ಸೇವಕನೆನಿಸಿ ದ್ವಿತೀಯ ವರ್ಗದ ದೇವರಾದ. ದಕ್ಷಿಣದ ಜನಪದರು ಮಾತ್ರ ತಮ್ಮ ಹಳೆಯ ಆಚಾರಗಳನ್ನು ಬಿಟ್ಟು ಕೊಡಲಾರದೆ ಹನುಮಂತನ ಪರವಾದ ಆಚಾರಗಳನ್ನು ಈ ವರೆಗೂ ಉಳಿಸಿಕೊಂಡು ಬಂದರು. ಅದರ ಫಲವೇ ಇಂದಿನ ನಮ್ಮ ದಾಸಪ್ಪಗಳು ಅಥವಾ ಜಾನಪದ ದಾಸ ಪರಂಪರೆ.

ತಿರುಮಲೆ ದೇವರ ಮೂರ್ತಿ ಲಕ್ಷಣದಲ್ಲಿ ಮಾರುತಿಯನ್ನು ಹೋಲುವ ಅಂಶಗಳು ಈಗ ಯಾವವೂ ಉಳಿದಿಲ್ಲವೆಂದು ಕಾಣುತ್ತದೆ. ಮೂಲದಲ್ಲಿ ತಿರುಮಲೆ ದೇವರು ಮತ್ತು ಮಾರುತಿಯ ಸಂಪ್ರದಾಯಗಳು ಬೇರೆ ಬೇರೆಯಾಗಿದ್ದು ಯಾವುದೋ ಕಾರಣಕ್ಕೆ ಇವೆರಡು ಮಿಶ್ರಗೊಂಡವೆಂದು ಊಹಿಸಲು ಶಕ್ಯವಿದೆ. ಆದರೆ ಈ ರೀತಿಯ ಊಹೆಗೆ ಪ್ರಬರ ಆಧಾರಗಳು ಲಭ್ಯವಿಲ್ಲ.

ಕೊನೆಯದಾಗಿ, ನಮ್ಮ ಹರಿದಾಸರಲ್ಲಿ ತಿರುಪತಿ ತಿಮ್ಮಪ್ಪನ ಬಗ್ಗೆ ಮತ್ತು ಮಾರುತಿಯ ಬಗ್ಗೆ ವಿಶೇಷ ಮಹತ್ವವಿರುವುದನ್ನು ಕಾಣಬಹುದು. ಶ್ರೀವೈಷ್ಣವರಲ್ಲಿ ಲಕ್ಷ್ಮೀಗಿರುವಂತೆ – ಇವರ ಸಂಪ್ರದಾಯದಲ್ಲಿ ಆ ಸ್ಥಾನ ಮಾರುತಿಗೆ ಸಂದಿದೆ. ಈ ಹರಿದಾಸರಲ್ಲಿ ಬಹಳಷ್ಟು ಜನ ರಾಯಚೂರು, ಕಲಬುರ್ಗಿ ಮತ್ತು ಕೋಲಾರ ಜಿಲ್ಲೆಯ ಪ್ರದೇಶ, ಎಂದರೆ ಆಂಧ್ರದ ಗಡಿ ಪ್ರದೇಶದಿಂದ ಬಂದವರಾಗಿದ್ದಾರೆ. ಇವೆಲ್ಲ ಇನ್ನೂ ಆಳವಾಗಿ ಸಂಶೋಧನೆಗೊಳ್ಳಬೇಕಾದ ವಿಷಯಗಳು.