ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಗುರಿ ‘ಕನ್ನಡ ಸಂಸ್ಕೃತಿ’ ಯ ಶೋಧ, ವಿಮರ್ಶೆ ಮತ್ತು ಪ್ರಸಾರ. ಅಂತಿಮ ಗುರಿ ಸುತ್ತಿಲಿನ ಸಂಸ್ಕೃತಿಗಳ ವಿವೇಕಪೂರ್ಣ ವಿನಿಯೋಗ. ಆದಿಕವಿ ಪಂಪ, ಸಾಹಿತ್ಯಕ್ಕೆ ಅನ್ವಯಿಸಿ ಹೇಳಿರುವ ‘ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು’ ಎಂಬ ಮಾತು ಪರ್ಯಾಯವಾಗಿ ಇದನ್ನೇ ಧ್ವನಿಸುತ್ತದೆ. ಪರ‍್ಯಾಯವಾಗಿ ಇದನ್ನೇ ಧ್ವನಿಸುತ್ತದೆ.

ಮೂಲತಃ ಸಮಾಜವೊಂದು ಸ್ವ-ರೂಪ, ಸ್ವ-ಭಾವ ವಿಶಿಷ್ಟವಾಗಿರುತ್ತದೆ. ಹೀಗಿದ್ದೂ ಅದು ತನ್ನಷ್ಟಕ್ಕೆ ತಾನು ಪ್ರತ್ಯೆಕವಾಗಿ ನಿಲ್ಲದೆ, ಅನ್ಯಸಂಸ್ಕೃತಿಗಳನ್ನು ಸ್ವೀಕರಿಸುತ್ತ, ನಿರಾಕರಿಸುತ್ತ ಒಮ್ಮೊಮ್ಮೆ ತಿರಸ್ಕರಿಸುತ್ತ ಮುಂದುವರಿಯುತ್ತದೆ. ಪ್ರಧಾನವಾಗಿ ಆರ್ಯ-ಆಂಗ್ಲ ಸಂಸ್ಕೃತಿಗಳನ್ನು ಜೀರ್ಣಿಸಿಕೊಳ್ಳುತ್ತ ಬಂದ ಕನ್ನಡ ಸಮಾಜ, ಉದ್ದಕ್ಕೂ ದ್ವಿಭಾಷಾ ಸಂದರ್ಭದಲ್ಲಿ ಬದುಕುಮಾಡಿದೆ. ಹಿಂದಿನದು ಕನ್ನಡ-ಸಂಸ್ಕೃತ ದ್ವಿಭಾಷಾ ಸಂದರ್ಭ, ಇಂದಿನದು ಕನ್ನಡ-ಇಂಗ್ಲಿಷ್‌ ದ್ವಿಭಾಷಾ ಸಂದರ್ಭ. ಗ್ರಂಥಸ್ಥ ಭಾಷೆಯಾದ ಸಂಸ್ಕೃತಕ್ಕಿಂತ ಜೀವಂತ ಭಾಷೆಯಾದ ಇಂಗ್ಲಿಷ್‌ ಬೆಳಕಾಗುತ್ತಲೇ ಬೆಂಕಿಯಾಗಬಹುದೇ? ಎಂಬ ಭಯ ನಮ್ಮಲ್ಲಿ ಹುಟ್ಟಿಸಿದೆ. ಹೆಚ್ಚಿನದಾಗಿ ಆಂಗ್ಲ ಜೀವನಶೈಲಿ ನಮ್ಮ ಜೀವನಾಡಿಗಳನ್ನು ದಿನೇ ದಿನೇ ನಿಯಂತ್ರಿಸತೊಡಗಿ, ಒಂದು ಬಗೆಯ ಅತಿರೇಕ ಸೃಷ್ಟಿಯಾಗುತ್ತಲಿದೆ.

ಗಾಂಧೀಜಿಯವರು ಈ ಅತಿರೇಕವನ್ನು ಬಹಳ ಹಿಂದೆಯೇ ಊಹಿಸಿ, ‘ಸ್ವದೇಶೀ ಚಳುವಳಿ’ಯನ್ನು ಕೈಗೆತ್ತಿಕೊಂಡಿದ್ದರು. ಈ ಮತ್ತು ಇಂಥ ದೇಶೀ ಚಿಂತನೆಗಳ ಆದರ್ಶದಲ್ಲಿ ಕನ್ನಡ ವಿಶ್ವವಿದ್ಯಾಲಯ ಮೊದಲು ಮಾಡಬೇಕಾದ ಕೆಲಸವೆಂದರೆ ವಿಸ್ಮೃತಿಯ ಸಾಗರದಲ್ಲಿ ಮುಳುಗಿಹೋಗಿರುವ ನಮ್ಮ ಪಾರಂಪರಿಕ ಕ್ರಿಯೆ. ಪ್ರಕ್ರಿಯೆ ರೂಪದ ‘ಸ್ವದೇಶೀ ಸತ್ಯಗಳನ್ನು’ ಶೋಧಿಸುವುದು; ಬಳಿಕ ಅಲ್ಲಿ ಸೇರಿಕೊಂಡಿರುವ ದೋಷಗಳನ್ನು ದೂರ ಸರಿಸಿ ಗುಣಾಂಶಗಳನ್ನು ಗುರುತಿಸುವುದು; ಜೊತೆಗೆ ಪೂರ್ಣ ಬದುಕಿಗೆ ಅವಶ್ಯವಿರುವ ಕೊರತೆಗಳನ್ನು ಅನ್ಯಸಂಸ್ಕೃತಿಯಿಂದ ಎಚ್ಚರವಹಿಸಿ ತುಂಬಿಕೊಳ್ಳುವುದು. ಒಟ್ಟಾರೆ ಅನ್ಯಸಂಸ್ಕೃತಿಗಳ ಸಹಯೋಗದಲ್ಲಿಯೂ ‘ಕನ್ನಡವು ಕನ್ನಡದ ಕನ್ನಡಿಸುತಿರಬೇಕು’ ಎಂಬಂತೆ ನಾವು ಕನ್ನಡವನ್ನು ಬದುಕಿಸಬೇಕಾಗಿದೆ, ಬೆಳೆಸಬೇಕಾಗಿದೆ. ಹಾಗೆ ಮಾಡಿದಾಗ ಮಾತ್ರ ಕನ್ನಡತ್ವನ್ನು ನಾಶ ಮಾಡಿಕೊಂಡು ಜಾಗತಿಕವಾಗುವುದು ತಪ್ಪಿ, ಕನ್ನಡವೂ ಜಾಗತಿಕವಾಗುತ್ತದೆ. ಜಾಗತಿಕವಾಗುವುದೆಂದರೆ ಸ್ಥಾನಿಕದ ನಿರಾಕರಣೆಯಲ್ಲವೆಂಬ ಸತ್ಯ ಸ್ಥಾಪನೆಗೊಳ್ಳುತ್ತದೆ.

ಹೆಗಲ ಮೇಲೆ ಈ ಹೊಣೆಯನ್ನು ಹೊತ್ತು, ಅಸ್ತಿತ್ವಕ್ಕೆ ಬಂದಿರುವ ಕನ್ನಡ ವಿಶ್ವವಿದ್ಯಾಲಯ ಪೂರೈಸಬೇಕಾದ ಇನ್ನೊಂದು ಕೆಲಸವೆಂದರೆ ‘ಎಲ್ಲ ರಸ್ತೆಗಳು ರೋಮ್‌ದ ಕಡೆಗೆ’ ಎಂಬಂತೆ ಕನ್ನಡದ ಎಲ್ಲ ಹಾದಿಗಳು ಹಂಪಿಯ ಕಡೆಗೆ ಕೇಂದ್ರೀಕರಣಗೊಳ್ಳುವ ಮತ್ತು ಇಲ್ಲಿಂದಲೇ ಜಗತ್ತಿನ ಅಂಚಿನತ್ತ ವಿಕೇಂದ್ರೀಕರಣಗೊಳ್ಳುವ ವಾತಾವರಣವನ್ನು ನಿರ್ಮಾಣಮಾಡುವುದು. ಈ ರೀತಿ ಐತಿಹಾಸಿಕ ಪರಂಪರೆ ಮತ್ತು ಭೌಗೋಳಿಕ ಪರಿಸರಗಳಲ್ಲಿ ಶ್ರಮಿಸಬೇಕಾಗಿರುವ ಕನ್ನಡ ವಿಶ್ವವಿದ್ಯಾಲಯ ‘ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಪ್ರಜ್ಞೆ ಕನ್ನಡಿಗರಲ್ಲಿ ಜಾಗೃತವಾಗಿರುವಂತೆಯೂ ನೋಡಿಕೊಳ್ಳಬೇಕಾಗಿದೆ.

ಈ ನೆಲೆಗಳಲ್ಲಿ ಸೃಷ್ಟಿಯಾಗುವ ತನ್ನ ಶೋಧನೆಗಳನ್ನು, ಚಿಂತನೆಗಳನ್ನು ದಾಖಲಿಸಬೇಕೆನ್ನುವ ಮತ್ತು ಸಂವಹನಗೊಳಿಸಬೇಕೆನ್ನುವ ಕನ್ನಡ ವಿಶ್ವವಿದ್ಯಾಲಯ ಯೋಗ್ಯ ಪ್ರಸಾರಮಾಧ್ಯಮಗಳನ್ನು ಅವಲಂಬಿಸಬೇಕಾಗುತ್ತದೆ. ಈ ಮೇರೆಗೆ ಈ ಸಂಸ್ಥೆಯ ಪ್ರಸಾರಾಂಗ ಶ್ರವ್ಯ, ದೃಶ್ಯ, ವಾಚನ ಸಾಮಗ್ರಿಯ ಉತ್ಪಾದನೆ-ವಿತರಣೆ ಇತ್ಯಾದಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಇವುಗಳಲ್ಲಿ ವಾಚನ ಸಾಮಗ್ರಿಯಾಗಿರುವ ಪುಸ್ತಕಗಳಿಗೆ ಹೆಚ್ಚಿನ ಮಹತ್ವವಿದೆ. ಆಂತರಿಕ ಸತ್ವ, ಬಾಹ್ಯ ಸೌಂದರ್ಯಗಳಿಂದ ಕೂಡಿರುವ ವಿಶಿಷ್ಟ ‘ಪುಸ್ತಕ ಸಂಸ್ಕೃತಿ’ ಯನ್ನು ಅಸ್ತಿತ್ವಕ್ಕೆ ತರುತ್ತಲಿರುವ ಪ್ರಸಾರಾಂಗದ ಇತ್ತೀಚಿನ ಮಹತ್ವದ ಕೃತಿಯಾಗಿದೆ, ‘ನೇಗಿನಹಾಳ ಪ್ರಬಂಧಗಳು.’

ಡಾ || ಎಂ. ಬಿ. ನೇಗಿನಹಾಳ ಅವರು ನಮ್ಮ ಕಾಲದ ಮಹತ್ವದ ಸಂಸ್ಕೃತಿ ಶೋಧಕರು. ಭಾಷಿಕ, ಜಾನಾಂಗಿಕ, ಜಾನಪದ ಹೀಗೆ ಹತ್ತು ಹಲವು ನೆಲೆಗಳಲ್ಲಿ ಅವರ ಅಧ್ಯಯನ ಇಲ್ಲಿಸಾಗಿದೆ. ಇಲ್ಲಿಯ ಅನೇಕ ಸಂಗತಿಗಳು ಕನ್ನಡ ಸಂದರ್ಭದಲ್ಲಿ ಮೊದಲ ಬಾರಿಗೆ ಚರ್ಚಿತವಾಗಿವೆ. ಡಾ || ನೇಗಿನಹಾಳ ವ್ಯಾಪಕವಾದ ಓದನ್ನು, ಚಿಕಿತ್ಸಕ ಮನೋಧರ್ಮವನ್ನು ಇಲ್ಲಿನ ಬರಹಗಳಲ್ಲಿ ಗುರುತಿಸಬಹುದು. ಒಟ್ಟಿನಲ್ಲಿ ‘ನೇಗಿನಹಾಳ ಪ್ರಬಂಧಗಳು’ ಕನ್ನಡ ವಿಶ್ವವಿದ್ಯಾಲಯದ ಹೆಮ್ಮೆಯ ಪ್ರಕಟಣೆಯಾಗಿದೆ.

ಡಾ || ಎಂ. ಎಂ. ಕಲಬುರ್ಗಿ
ಕುಲಪತಿಗಳು