ಕರ್ನಾಟಕದ ಪ್ರಾಚೀನ ಶಾಸನ ಪ್ರಕಾರಗಳಲ್ಲಿ ಗೋಸಾಸ ಅಥವಾ ಗೋಸಹಸ್ರ ದಾನಗಳದ್ದು ಒಂದು ಪ್ರತ್ಯೇಕ ವರ್ಗವೆಂಬುದು ಈಗ ವಿದ್ವಾಂಸರಿಂದ ಒಪ್ಪಿತವಾದ ಅಂಶ. ಈ ಪ್ರಕಾರದ ಶಾಸನಗಳನ್ನು ಪಟ್ಟಿ ಮಾಡಿರುವ ಡಾ || ಎಂ. ಎಂ. ಕಲಬುರ್ಗಿ ಅವರು ಈವರೆಗೆ ಲಿಪಿ ಸಹಿತವಾದ ನಿಶ್ಚಿತ ಗೋಸಾಸಗಳ ಸಂಖ್ಯೆ ೨೯ ಎಂದು ಒಂದು ಕಡೆ ತಿಳಿಸಿದ್ದಾರೆ. (ಮಾರ್ಗ-೨, ಪು.೧೨). ಎಂದರೆ ದಾನಸ್ಮಾರಕಗಳಾದ ಈ ಗೋಸಾಸಗಲ್ಲುಗಳು ಲಿಪಿರಹಿತವಾಗಿಯೂ ಇರಬಲ್ಲುವಾಗಿವೆ. ಈ ರೀತಿ ಎರಡೂ ವಿಧದಲ್ಲಿ ನಿಲ್ಲಿಸಿದ ಗೋಸಾಸಗಳು ಕರ್ನಾಟಕದ ಕೆಲವೇ ಪ್ರದೇಶಗಳಲ್ಲಿ ಲಭ್ಯವಾಗಿವೆ.

ಈ ಗೋಸಾಸಗಳ ಹಲವಾರು ವೈಶಿಷ್ಟ್ಯಗಳಲ್ಲಿ ಅವನ್ನು ಒಂದೇ ಕಡೆಗೆ ಗುಂಪು ಗುಂಪಾಗಿ ನಿಲ್ಲಿಸಿರುವುದೂ ಒಂದು. ಹೀಗೆ ಶಿರಸಿ ತಾಲೂಕಿನ ಎಸಳೆ ಮತ್ತು ಹುಸ್ನಿ ಗ್ರಾಮಗಳಲ್ಲಿ ೧೫ ರಂತೆ ಗೋಸಾಸ ಸ್ತಂಭಗಳಿರುವುದು ಈಗಾಗಲೇ ಪತ್ತೆಯಾಗಿದೆ. ಇದೇ ರೀತಿ ಒಂದೇ ಕಡೆ ಹೆಚ್ಚು ಸಂಖ್ಯೆಯ ಗೋಸಾಸಗಳನ್ನು ನಿಲ್ಲಿಸಿರುವ ಸಂಗತಿ ಇತ್ತೀಚೆಗೆ ನಾಗರಖಂಡ ಪ್ರದೇಶದಲ್ಲಿ ಣಾವು ಕೈಕೊಂಡ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಶಿಕಾರಿಪುರ ತಾಲೂಕಿನ ಮಲ್ಲೇನಹಳ್ಳಿ ಮತ್ತು ಮುತ್ತಳ್ಳಿಗಳೇ ಈ ವಿಶೇಷತೆಯನ್ನುಳ್ಳ ಊರುಗಳು. ಇವೆರಡರಲ್ಲಿ ಮೂವತ್ತರಂತೆ ಎರಡು ಗುಂಪುಗಳಲ್ಲಿ ಇವು ಕಂಡುಬಂದಿವೆ. ಇದಲ್ಲದೆ ಭಾರಂಗಿಯಲ್ಲಿ ೧೫, ಕರಿನೆಲ್ಲಿಯಲ್ಲಿ ಒಟ್ಟು ೧೯, ಮತ್ತೀ ಹಳ್ಳಿ, ಬಂದಳಿಕೆ, ಚಿಕ್ಕೊಣತಿ, ಕಿರವಾಡಿ, ಮತ್ತು ಬೆಟ್ಟಗೆರೂರುಗಳಲ್ಲಿ ಒಂದೊಂದು ತಿಳುವಳ್ಳಿಯಲ್ಲಿ ೨ ಹಾಗೂ ಸಾತೇನಹಳ್ಳಿಯಲ್ಲಿ ೩- ಈ ರೀತಿ ಹಲವಾರು ಗೋಸಾಸ ಗಲ್ಲುಗಳು ಕಂಡುಬಂದಿವೆ. ಇವುಗಳಲ್ಲಿ ಹೆಚ್ಚಿನವು ಅಲಿಖಿತವಾಗಿದ್ದು ಒಟ್ಟು ೧೪ ರಲ್ಲಿ ಲಿಪಿ ಕಂಡುಬಂದಿವೆ. ಇವುಗಳ ಇನ್ನಿತರ ಕೆಲವು ವಿವರಗಳನ್ನು ಈಗಾಗಲೇ ಬೇರೊಂದೆಡೆಯಲ್ಲಿ ಕೊಡಲಾಗಿದೆ.

[1] ಪ್ರಸ್ತುತ ಇನ್ನಷ್ಟು ಅನುಕೂಲಕರ ವಿವರಗಳನ್ನು ಇಲ್ಲಿ ಕೊಡಲಾಗುವುದು.

ಇವುಗಳಲ್ಲಿ ಕಾಲದೃಷ್ಟಿಯಿಂದ ಅತ್ಯಂತ ಪ್ರಾಚೀನವಾದುದೆಂದು ನಿರ್ದಿಷ್ಟವಾಗಿ ಹೇಳಬಹುದಾದ ಲಿಖಿತ ಗೋಸಾಸವನ್ನೊಳಗೊಂಡ ಸಮುದಾಯ ಶಿವಮೊಗ್ಗ ಜಿಲ್ಲಾ ಶಿಕಾರಿಪುರ ತಾಲೂಕಿನ ಮಲ್ಲೇನಹಳ್ಳಿಯದು. ಇಲ್ಲಿಯ ಶಿವಾಲಿ ಹಕ್ಕಲಿನಲ್ಲಿ ಮೂವತ್ತು ಗೋಸಾಸಗಳ ಸಮುದಾಯವಿದೆ. ಇವುಗಳಲ್ಲೊಂದು ಲಿಪಿ ಸಹಿತವಾಗಿದ್ದು ಬಾದಾಮಿ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಕೀರ್ತಿವರ್ಮನ ಕಾಲದ್ದು. ಆತನ ಅಧಿಕಾರಿಯಾಗಿ ಬನವಾಸಿ-೧೨೦೦೦ ಪ್ರಾಂತವನ್ನು ದೋಸಿಯರ ಆಳುತ್ತಿದ್ದನೆಂದು ಅದರಲ್ಲಿ (ನಂ.೧) ಹೇಳಿದೆ. ಈ ಸ್ಥಾನದಲ್ಲಿರುವ, ನಂ.೨ ಮತ್ತು ೩ನೆಯ ಶಾಸನಗಳಲ್ಲಿ ಬನವಾಸಿ ಪ್ರಾಂತವನ್ನು ಮಾರಕ್ಕೆಯರಸ ಆಳುತ್ತಿದ್ದಾಗ ಕೆಸುಗೆಲ್ಲರ ಸಿರಿಯಮ್ಮನ್ ಊರಾಳುತಿದ್ದನೆಂದಿದೆ. ಈ ಶಾಸನೋಕ್ತ ಮಾರಕ್ಕೆಯರಸ ಬನವಾಸಿ ನಾಡಿನ ಮಂಡಲೇಶ್ವರನಾಗಿದ್ದು ಸೇನಾವರ ಅಥವಾ ಸೇನವಾರ ಮನೆತನದವನೆಂಬ ಅಂಶ ಮುಂದಿನ ಶಾಸನಗಳಲ್ಲಿ ಬಂದಿರುವುದನ್ನು ನೋಡುತ್ತೇವೆ. ಸದ್ಯ ಇಲ್ಲಿನ ಕೆಸುಗೆಲ್ಲ ಎಂಬ ವಂಶ ನಾಮವನನ್ನು ಕುರಿತು ಒಂದೆರಡು ಮಾತು ಹೇಳಬಹುದಾಗಿದೆ.

ಕೆಲ್ಲಮತ್ತು ಅದರ ಪರ್ಯಾಯದ ಹಲವಾರು ವಂಶನಾಮಗಳು ಕರ್ನಾಟಕದ ಹಲವಾರು ಶಾಸನಗಳಲ್ಲಿ ಕಾಣಿಸಿಕೊಂಡಿವೆ. ೬ನೆಯ ಶ. ದ. ಹೊನ್ನಾವರ ಶಾಸನದಲ್ಲಿ ಕೈಕೇಯ ದೊರೆ ಚಿತ್ರಸೇನನು ತನ್ನನ್ನು ಕೆಲ್ಲ, ಮಹಾಕೆಲ್ಲ ಎಂದು ಕರೆದುಕೊಂಡಿದ್ದಾನೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಉದಯಾವರ ಮೊದಲಾದೆಡೆಗಳಲ್ಲಿ ಕಂಡು ಬರುವ ಆಳುಪರ ಪ್ರಾಚೀನ ಶಾಸನಗಳಲ್ಲಿ ಅವರನ್ನು ಅರಕೆಲ್ಲರೆಂದು ಕರೆದರೆ.[2] ಅದೇ ರೀತಿ ಮುರಸಕೆಲ್ಲ, ಭಟಾರಿಕೆಲ್ಲ ಮುಂತಾದುವು ಈ ವರ್ಗಕ್ಕೆ ಸೇರುವ ಹೆಸರುಗಳು. ‘ಸಿಯಗೆಲ್ಲ’ ಎಂಬುದು ತುಮಕೂರು ತಾಲೂಕಿನ ೮ನೆಯ ಶತಮಾನದ ಹಲವಾರು ಶಾಸನಗಳಲ್ಲಿ (E C XII, ತುಮಕೂರು ೮೬, ೮೮, ೯೧, ೯೫, ೯೬ ಇತ್ಯಾದಿ) ಕಂಡುಬರುತ್ತದೆ. ಎಂದರೆ ಈ ಕೆಲ್ಲ ವಂಶದ ಜನರು ಪ್ರಾಚೀನ ಕರ್ನಾಟಕದ, ಉ.ಕ., ದ.ಕ., ತುಮಕೂರು, ಶಿವಮೊಗ್ಗ ಮುಂತಾದೆಡೆಗಳಲ್ಲಿ ನಾಡಿನ, ಊರ, ವಿಭಾಗಗಳ ಅಧಿಕಾರಿಯಾಗಿ ಆಳುತ್ತಿದ್ದರೆಂದು ತಿಳಿಯಬಹುದಾಗಿದೆ. ಪ್ರಸ್ತುತ ಕೆಸುಗೆಲ್ಲರು ನಾಗರಖಂಡದಲ್ಲಿ ನೆಲೆಯೂರಿದ್ದರೆಂದು ಈ ಮಲ್ಲೇನಹಳ್ಳಿಯ ಶಾಸನಗಳು ಸೂಚಿಸುತ್ತವೆ. ಇಲ್ಲಿನ ಒಂದೆರಡು ಶಾಸನಗಳಲ್ಲಿ ಬಿ(ವಿ)ಚ್ಚರ ವಂಶದ ದೇವಮ್ಮನ್ ಪೂಡಳರೂಪ ಮತ್ತು ಬುದ್ಧ ಪೂಡಳ ರೂಪ ಎಂಬ ವ್ಯಕ್ತಿಗಳ ಹೆಸರುಗಳು ಕಂಡುಬರುತ್ತವೆ.

ಹಿಂದೆ ಹೇಳಿದ ಮೂರಕ್ಕೆಯರಸನ ಹೆಸರಿನ ನೇರ ಉಲ್ಲೇಖವಿಲ್ಲದಿದ್ದರೂ ಮಲ್ಲೇನಹಳ್ಳಿಯ ಇನ್ನೆರಡು ಶಾಸನಗಳು ಕೂಡ ಅವನ ಕಾಲಾವಧಿಯವೇ ಆಗಿವೆ. ಇದೇ ರೀತಿ ಮುತ್ತಳ್ಳಿಯಲ್ಲಿಯ ಐದು ಗೋಸಾಸಗಳು ಲಿಪಿಸಹಿತವಾಗಿದ್ದು ಎಲ್ಲವೂ ಬನವಾಸಿಯ ಈ ಮಾರಕ್ಕೆಯರಸನ ಕಾಲದವೇ. ಆದರೆ ಇವನ ಹೆಸರನ್ನು ಒಂದು ಮತ್ತು ಎರಡನೆಯ ಶಾಸನಗಳು ನೇರವಾಗಿ ಉಲ್ಲೇಖಿಸಿದ್ದರೆ ಮೂರು ಮತ್ತು ನಾಲ್ಕನೆಯ ಶಾಸನಗಳು ಆತನ ಬಿರುದನ್ನು ಮಾತ್ರ ಉಲ್ಲೇಖಿಸಿವೆ. ಪ್ರಸ್ತುತ ಈ ಬಿರುದುಗಳು ತುಂಬ ಗಮನಾರ್ಹವಾಗಿವೆಯೆಂಬುದನ್ನು ಎತ್ತಿ ಹೇಳಬೇಕಾಗಿದೆ. ೩ನೆಯ ಶಾಸನದಲ್ಲಿ ‘ಶ್ರೀ ಪೃಥುವೀವಲ್ಲಭ ಸೇನಾವರಸರ್’ ಎಂದಿದ್ದರೆ ನಾಲ್ಕನೆಯದರಲ್ಲಿ ‘ಸ್ವಸ್ತ್ಯಕಾಲವರ್ಷ ಶ್ರೀ ಫೃಥ್ವೀವಲ್ಲಭ ಸೇನಾವರಸರ್’ ಎಂಬ ರೂಪದಲ್ಲಿ ಕಂಡುಬರುತ್ತದೆ. ಇಲ್ಲಿ ‘ಮಂಡಲೇಶ್ವರ’ ಆದವನ್ನು ‘ಪೃಥ್ವೀವಲ್ಲಭ’ ಎಂದಿರುವುದು ಅಸಾಧಾರಣ ಸಂಗತಿ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಇದು ಚಕ್ರವರ್ತಿಗಳಿಗೆ ಸಲ್ಲುವ ಬಿರುದು. ಇವೆರಡರಲ್ಲೂ ಧ್ರುವನ ಹೆಸರನ್ನು ಚಕ್ರವರ್ತಿಯ ಸ್ಥಾನದಲ್ಲಿ ಹೇಳಿರುವುದನ್ನು ಕೂಡ ಇಲ್ಲಿಗಮನಿಸಬಹುದು. ಮುಂದುವರಿದಾಗ ಕಾಣುವ ಇನ್ನೂ ಅಸಾಧಾರಣ ಸಂಗತಿಯೆಂದರೆ ಇಲ್ಲಿನ ೫ನೆಯ ಶಾಸನದಲ್ಲಿ ಚಕ್ರವರ್ತಿಯಾದ ೧ನೆಯ ಕೃಷ್ಣ ಮತ್ತು ಮಾರಕ್ಕೆಯರಸ ಇಬ್ಬರಿಗೂ ‘ಅಕಾಲವರ್ಷ ಶ್ರೀ ಪೃಥ್ವೀವಲ್ಲಭ’ ಎಂಬ ಬಿರುದು ಕೊಡಲ್ಪಟ್ಟಿರುವುದು. ಎಂದರೆ ಈ ಬಿರುದು ಮಾರಕ್ಕೆಯರಸನಿಗೆ ರಾಷ್ಟ್ರಕೂಟ ಶಕ್ತಿಯನ್ನು ಸಾಮ್ರಾಜ್ಯ ಶಕ್ತಿಯಾಗಿ ಬೆಳೆಸುವಲ್ಲಿ ಮುಖ್ಯ ಪಾತ್ರವಹಿಸಿದ್ದಕ್ಕಾಗಿ ಸ್ವತಃ ೧ನೆಯ ಕೃಷ್ನನೇ ಅವನಿಗೆ ಇತ್ತಿದ್ದನೆಂದು ಊಹಿಸಬೇಕಾಗಿದೆ. ಹೀಗೆ ಸೇನಾವರ ದೊರೆ ಮಾರಕ್ಕೆಯರಸ, ಬನವಾಸಿ ಪ್ರಂತ್ಯವನ್ನು, ರಾಷ್ಟ್ರಕೂಟ ಒಂದನೆಯ ಕೃಷ್ಣನ ಕಾಲದಲ್ಲಿ ಆತನ ಸಾಮಂತನಾಗಿದ್ದರೂ ಚಕ್ರವರ್ತಿಯೊಬ್ಬನ ಜರ್ಬಿನಿಂದ ಆಳುತ್ತಿದ್ದನೆಂದು ಕಂಡುಬರುತ್ತದೆ. ಇದೇ ರೀತಿ ಬೆಟ್ಟಗೆರೂರ ಶಾಸನವೂ ಈತನ ಕಾಲಾವಧಿಯಲ್ಲಿಯೇ ಹುಟ್ಟಿದ್ದೆಂದು ಹೇಳಲು, ಅದರಲ್ಲಿನ “……ರಕ್ಕೆಯ ರಸರ್ ತಮ್ಮ” ಉಲ್ಲೇಖ ಆಧಾರವಾಗಿದೆ. ಈ ರೀತಿ ಮಾರಕ್ಕೆಯರಸ ಒಂದನೆಯ ಕೃಷ್ಣನ ಕಾಲದಿಂದ ಇಮ್ಮಡಿ ಗೋವಿಂದ ಮತ್ತು ಧಾರಾವರ್ಷ ಧ್ರುವನ ಕಾಲಾವಧಿಗಳಲ್ಲಿ ಬನವಾಸಿ ಮಂಡಲವನ್ನು ಆಳುತ್ತಿದ್ದನೆಂದು ತಿಳಿದುಬರುತ್ತದೆ.

ಈ ಶಾಸನಗಳಲ್ಲಿ ಮುತ್ತಳ್ಳಿಯ ಐದನೆಯ ಶಾಸನ ರಾಷ್ಟ್ರಕೂಟ ದೊರೆ ಒಂದನೆಯ ಕೃಷ್ಣನ ನೇರ ಬಿರುದು ಹೇಳಿರುವುದರಿಂದ ಆತನ (ಕಾಲದ) ದಾಖಲೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಒಟ್ಟು ಅವನ ಕಾಲದ ಶಾಸನಗಳೇ ಕಡಿಮೆ ಇರುವುವಲ್ಲದೆ ಆತನ ಕಾಲದ ಕನ್ನಡ ಶಾಸನಗಳ ಸಂಖ್ಯೆ ಇನ್ನೂ ಕಡಿಮೆ ಎಂಬುದು ಈಗಾಗಲೇ ತಿಳಿದ ಸಂಗತಿ. ಧಾರವಾಡ ಜಿಲ್ಲೆಯ ಹತ್ತಿಮತ್ತೂರಿನ ಕನ್ನಡ ಶಾಸನ ಇಲ್ಲಿ ಸ್ವರಣಾರ್ಹವಾದುದು.

ಈ ಶಾಸನಗಳನ್ನು ಕುರಿತಂತೆ ಗಮನಿಸಬೇಕಾದ ಇನ್ನೂ ಒಂದೆರಡು ಅಂಶಗಳಿವೆ. ಮೊದಲನೆಯದಾಗಿ ಇವುಗಳ ಭಾಷೆ. ಎಂದರೆ, ಈ ಎಲ್ಲಾ ಶಾಸನಗಳು ಕನ್ನಡದಲ್ಲಿಯೇ ಇರುವುದೊಂದು ವಿಶೇಷ. ದೊಡ್ಡ ವಿದ್ವಾಂಸರಿಗೆ, ಆಚಾರ್ಯರಿಗೆ ಕೊಡ ಬೇಕಾಗಿದ್ದ ಇಂಥ ದಾನ ಸಂಬಂಧಿ ಲೇಖಗಳು ಸಂಸ್ಕೃತದಲ್ಲಿ ಏಕಿಲ್ಲ? ಎನ್ನುವರು ವಿಚಾರಣೀಯವಾದ ಸಂಗತಿ. ಅದೇ ರೀತಿ ಈ ಶಾಸನ-ದಾನಗಳ ಪ್ರತಿಗ್ರಹಿಗಳು ಬ್ರಾಹ್ಮಣರಾಗಿರದೆ ಜೈನಾಚಾರ್ಯರಾಗಿರುವಂತೆ ಕಾಣುತ್ತದೆ. ಮುತ್ತಳ್ಳಿಯ ಐದನೆಯ ಶಾಸನ ಆದಿತ್ಯಸೇನ ಪಂಡಿತನ ಹೆಸರು ಹೇಳಿದ್ದರೆ, ನಾಲ್ಕನೆಯದು ದೇವೇಂದ್ರ ಸೇನ ಪಂಡಿತನ ಹೆಸರು ಹೇಳಿದೆ. ಇವೆರಡೂ ಜೈನ ಹೆಸರುಗಳು. ಬಹುಶಃ ಯಜ್ಞ ಅಥವಾ ಇಷ್ಟಿಗಳನ್ನು ಆಚರಿಸಿ ಅದರ ಸ್ಮಾರಕವಾಗಿ ಯೂಪಸ್ತಂಭ ನಿಲ್ಲಿಸುವ ವೈದಿಕ ಪರಂಪರೆಗೆ ಪ್ರತಿಯಾಗಿ ಇಂಥ ದೊಡ್ಡದಾನ ಮಾಡಿ ಸ್ತಂಭ ಅಥವಾ ಮೇಂಟಿಗಳನ್ನು ನಿಲ್ಲಿಸುವ ಕ್ರಮಗಳನ್ನು ಜೈನಧರ್ಮೀಯರು (ಅಥವಾ ಅವೈದಿಕರು) ಪುರಸ್ಕರಿಸಿರುವಂತೆ ಕಾಣುತ್ತದೆ.

ಹೊಸ ಗೋಸಾಸಗಳ ಶಾಸನ ಪಾಠಗಳು

ಸಂಕೇತಗಳು: ಚಕ್ರ ಚಕ್ರವರ್ತಿ
  ಬಾ.ಚಾ ಬಾದಾಮಿ ಚಾಲುಕ್ಯ
  ರಾ. ರಾಷ್ಟ್ರಕೂಟ
  ಜಿ. ಜಿಲ್ಲಾ
  ತಾ. ತಾಲೂಕು

ಮಲ್ಲೇನಹಳ್ಳಿ ಶಿವಾಲಿ ಹಕ್ಕಲಿನಲ್ಲಿರುವ ಗೋಸಾಸಗಳು
(ಶಿವಮೊಗ್ಗ ಜಿ., ಶಿಕಾರಿಪುರ ತಾ.)

ಚಕ್ರ – ಬಾ. ಚಾ. ಕೀರ್ತಿವರ್ಮ
ಕಾಲ ಕ್ರಿ. ಶ. ೭೫೦

೧. ಸ್ವಸ್ತಿ ಕೀರ್ತಿವರ್ಮನ್ ಪೃಥು

೨. ವೀ ರಾಜ್ಯಂಗೆಯ್ಯೆ ಶ್ರೀ ದೋಸಿಯ

೩. ರರ್ನ್ಬನವಾಸಿ ಪನ್ನಿಚ್ಛಾಸಿರ

೪. ಮಲ್ಪರಿಪಾಲಿಸೆ ವಿಚ್ಚರಾ

೫. ದೇವಮನ್ ಪೊಡಳರೂಪ ಪ

೬. [ರ]ಲು ವೀಳ ಮತರು ಗೋಸಾಸ

೭. ಮು[೦] ಆ[ಪಿಡಿರಹಿವ?] ಗೀಸು ಕಾದ[೦]

ಚಕ್ರ-ರಾ. ೧ನೆಯ ಕೃಷ್ಣ
ಕಾಲ ಕ್ರಿ.ಶ. ಸು. ೭೬೦

೧. ಸ್ವಸ್ತಿ ಶ್ರೀ ಮಾರಕ್ಕೆಯರಸರ್ನ್ನಾಡಾಳೆ ಕೆಸುಗೆಲ್ಲರ ಸಿರಿಯಮ್ಮನ್

೨. ಊರಾಳೆ ಮಾದೇಱರ ಅಲಮಾರನ್ನಾಳ್ಗೆಯೆ ಬಿಚ್ಚರ [ಪೊ. ದನ್]……

ಚಕ್ರ-ರಾ. ೧ನೆಯ ಕೃಷ್ಣ
ಕಾಲ ಕ್ರಿ.ಶ. ಸು. ೭೬೦

೧. ಸ್ವಸ್ತಿ ಮಾರಕ್ಕರಸರ್ ನೆಲನಾಳೆ ಕೆಸುಗೆಲ್ಲರ

೨. ಸಿರಿಯಮ್ಮನ್ ಊರಾಳೆ ಮಾದೇಱರ ಅಲಮಾರ ನಾಡ್ಗೆಯೆ

೩. (ಮುಂದಿನ ಭಾಗ ನೆಲದಲ್ಲಿ ಹೂತಿದೆ)

ಚಕ್ರ-ರಾ. ೧ನೆಯ ಕೃಷ್ಣ
ಕಾಲ- ಕ್ರಿ.ಶ.ಸು.೭೬೦

೧. ಬಿಚ್ಚರಾ ಬುದ್ಧ ಪೂಡರೊಪಾಳೆ [ಆ]

೨. ದನಮುಂ ವೀಳಮತ್ತಲುಂ

೩. ಗೋಸಾಸಮುಂ ಕೊಟ್ಟಾನ್

ಚಕ್ರ-ರಾ. ೧ನೆಯ ಕೃಷ್ಣ
ಕಾಲ- ಕ್ರಿ.ಶ.ಸು.೭೬೦

೧. ಸ್ವಸ್ತಿ ಶ್ರೀ ಪೃಥ್ವೀ….

೨. ರ್ಬನವಾಸಿ ಪನ್ನಿರ್ಚ್ಛಾಸಿರಮಾಳೆ ಬಿಚ್ಚಿರಾಂ ವಸ [ವಂಸ]

೩. ಪೂಡರೂಪಾಳೆ ಮುತ್ತಲೂರಾ ಪಲು

೪. x [ಮಗಿಂಕಾ] ಕೆಱೆಯುಂ ಕಟ್ಟಿಸಿ

೫. ……………………………….. ರಾ

೬. ಕೊಟ್ಟೊ ಇದಾನ್ ಕಾದೊಙ್ಗೆ ಅಸ್ವಮೇಧ ಫಲ ಇದ

೭. ಅೞಿದೋನ್ ಪಞ್ಚಮಹಾಪಾತಕಂ

ಮುತ್ತಳ್ಳಿ ಜೇನುಮರಡಿಯ ಗೋಸಾಸಗಳು

ಚಕ್ರ-ರಾ. ೧ನೆಯ ಕೃಷ್ಣ
ಕಾಲ- ಕ್ರಿ.ಶ.ಸು.೭೬೦

೧. ಸ್ವಸ್ತಿ ಶ್ರೀ ಮಾರೆಕ್ಕೆಯರಸನ್‌ನಾಡಾಳೆ

೨. …………………………………….

ಚಕ್ರ-ರಾ. ಧ್ರುವ
ಕಾಲ- ಕ್ರಿ.ಶ.ಸು.೭೭೦

೧. ಶ್ರೀ ಮಾರಕ್ಕೆವ[ರಸೆ]

೨. ನಾಡಾಳೆ

೩. ಪಸುಗೂರಾ

೪. ಬಿಟ್ಟುದು ಅಂ*ಗ

೫. ಜನಾ ಕೀರ್ತ್ತನಂ

ಚಕ್ರ-ರಾ. ಧ್ರುವ
ಕಾಲ- ಕ್ರಿ.ಶ.ಸು.೭೭೦

೧. ಸ್ವಸ್ತಿಧಾರಾವರ್ಷ ಶ್ರೀ ಪೃಥುವೀ[ವ] . . . . . . .
ಹಾರಾಜಾಧಿರಾಜ ಪರಮೇಶ್ವರ ಭ . . . . . . . . . .

೨. ರಂ. ಭೂಮಿಯನಾ ಸಮುದ್ರಾನ[_] ಮಾಳೆ…..
ವರ್ಷ ಶ್ರೀ ಪೃಥುವೀವಲಭ ಸೇನಾವ

೩. ರ್ಸ್ಸರ್ಬ್ಬನವಾಸಿ ನಾಡಾಳೆಊರಾ
ಗಳೊಳೆಸನ್ದಿಗರಾಮಾರಿದಾ
ಮೇಲ್ಗಡೆ ಬರೆದುದು:

೧. ಸ. ನಮಗ[೦] ಬಿಣ್ಡಿಗೋ
೨. ಸಾಸಿಯ ಮೇಣ್ಟಿ

ಚಕ್ರ-ರಾ. ಧ್ರುವ
ಕಾಲ- ಕ್ರಿ.ಶ.೭೬೦-೭೯೦ರ ಮಧ್ಯ

೧. ಸ್ವಸ್ತಿಧಾರಾವರ್ಷ ಶ್ರೀ ಪೃಥು[ವೀ]ವಲ್ಲಭ
ಹಾರಾಜಾಧಿರಾಜ ಪರಮೇ[ಶ್ವರ] ಭಟಾರ . . . . . .

೨. ರಾಸಮುದ್ರಾನ್ತಮಾಳೆ ಸ್ವಸ್ತ್ಯಕಾಲವರ್ಷ
ಶ್ರೀ ಪೃ[ಥ್ವೀ]ವಲ್ಲಭ ಸೇನಾವರಸರ್ ಬನವಾಸಿ ನಾ . . . . . . . . .

೩. ಕುನ್ದಮುಗೆಯಾ ದೇವೇನ್ದ್ರಸೇನ ಪಣ್ಡಿತರಾಳೆ ಗುಡ್ಡಸೇ [ಗರಾಸ]

ಕೆಳಭಾಗ:

೪. ಗೋಸಾಹಸ್ತ್ರಮಿೞ್ದು ಪದಾ [ದ] ಲ್ದಾನ [೦] ಗೊ

೫. ಟ್ಟು ನಿಱಿಸಿದ ಮೇಣ್ಟಿ ಕರಗೆಯ ಮಾ

೬. ಚೋವಜನ ಮಾಡಿದ ಮೇಣ್ಟಿ

೧೦

ಚಕ್ರ-ರಾ. ಧ್ರುವ
ಕಾಲ- ಕ್ರಿ.ಶ. ೭೬೦ ರಿಂದ ೭೯೦ರ ಮಧ್ಯೆ

೧. ಸ್ವಸ್ತಿಧಾರಾವರ್ಷ ಶ್ರೀ ಪೃಥುವೀವಲ್ಲಭ ಹಾರಾಜಾಧಿರಾಜ ಪ

೨. ರಮೇಶ್ವರ ಭಟರಾ ಪೃಥುವಿಯಾನ್ನೇಕಚ್ಛತ್ರಚಾಯೆಯಿನ್ಪರಿಪಾ

೩. ಲಿಸೆ ಅಕಾಲವರ್ಷ ಶ್ರೀ ಪೃಥುವೀವಲ್ಲಭ ಸೇನಾವರ ಮಾರಕ್ಕೆ ಅರಸರ್ಬನ

೪. ವಾಸಿ ಪನ್ನಿಚ್ಛಾಸಿರಮಾನಾಳೆ ಆದಿತ್ಯಸೇನ ಪಂಡಿತರ್‌ಕನ್ದಮುಗೆ ಆಳೆಸ . . . . ..

೫. ಲಿ ಗಾರಾ ಬಿಟ್ಟೆಯಂ ಪೂಣ್ದನ್ದುದಾ ಕೊಟ್ಟು
x x x. ದ x ಣ್ಟಿ ಪೃಥಿವೀ ಆ x x x x

೧೧

ಬೆಟಗೇರೂರ ಗೋಸಾಸ
(ಧಾರವಾಡ ಜಿ., ಹಿರೇಕೆರೂರು ತಾ.)

ಚಕ್ರ-ರಾ. ಧ್ರುವ
ಕಾಲ- ಕ್ರಿ.ಶ. ಸು. ೭೭೦

ದೊರೆತ ಸ್ಥಳ- ಬೆಟಗೇರೂರು ದ್ಯಾವಣ್ಣನವರ ಮನೆ ಹತ್ತಿರ

೧. ಸ್ವಸ್ತಿ ಶ್ರೀ [ಅ]. ಣ ೞ್ತಿರಾ . . . . . . . . . .

೨. x ಕೊಟ್ಟು ಬೆದ್ದಲು [ಮ] . . .ರ್ಗ್ಗಾ

೩. x x x . . . . . .ರೆಕ್ಕೆಯರರ್ಸ್ತ*[ಮ್ಮ]

೪. . . . . . . . . . . . . . . . .ನು . . . . . . . .ಹೊ[ನಸ]

೫. ಶ್ರೀಯ

೬. ವನ್ದು ಮಾಡಿದೋರ್

ಕಿರವಾಡಿ ಗೋಸಾಸ

೧೨

ಚಕ್ರ. ರಾ. ೩ನೆಯ ಗೋವಿಂದ?
ಕಾಲ-ಕ್ರಿ.ಶ. ಸು. ೮೦೦

ದೊರೆತ ಸ್ಥಳ- ಕಿರವಾಡಿ ಕೆರೆ ಕೋಡಿಯಲ್ಲಿ

೧. ಸ್ವಸ್ತಿಶ್ರೀ . . . . . . . .

೨. ರಿ. ಯಾ ಪ್ರಿಥ್ವಿ [ರಾ]ಜ್ಯ

೩. ಸಾಸಿರಾ ಮೇಣ್ಟಿ

೪. . . . . . . . . . . . .
(ಇಲ್ಲಿಯ ಎಲ್ಲ ಪಂಕ್ತಿಗಳೂ ಅರ್ಧದಷ್ಟು ಮಾತ್ರ ಇವೆ.)

ಬಂದಳಿಕೆ ಗೋಸಾಸ

೧೩

ಚಕ್ರ.-?

ದೊರೆತ ಸ್ಥಳ-ಅರಮನೆ ಅವಶೇಷಗಳ ಸಮೀಪದಲ್ಲಿ

೧. ಸ್ವಸ್ತಿಶ್ರೀ.

೨. ಅಚರೆಯ ರಾ.

೩. ಬಾದು ದೊರ.

೪. . . . . . . . . . . . . .

[ಈ ಶಾಸನದ.. .. ರೆಕ್ಕೆಯರಸರ್ ಎಂದರೆಮಾರಕ್ಕೆಯರಸಎಂಬುದು ಮತ್ತು ಈತ ರಾ. ಧ್ರುವನ ಕಾಲದಲ್ಲಿ ಬನವಾಸಿ ಮಂಡಳವನ್ನು ಆಳುತ್ತಿದ್ದುದು ಸ್ಪಷ್ಟವಿದೆ.]

೫. ಮತ್ತಲು ಕೊಟ . . . . . .

೬. . . . . . . . . . . . . . . . . .

೭. . . . . . . . . . .ಯನ್ಯಣ್ಡ.

ಚಿಕ್ಕೊಣತಿ ಗೋಸಾಸ

೪೧

ಕಾಲ-?
ಚಕ್ರ-?

ಕಾಲುವೆಯಲ್ಲಿ ಬಿದ್ದಿರುವ ಕಲ್ಲು

ಇದರಲ್ಲಿ ಕೇವಲ ಮೂರು ಪಾದಗಳಿದ್ದು ಅವುಗಳಲ್ಲಿ “ಗೋಸಾಸ” ಎಂಬುದು ಮಾತ್ರ ಸ್ಪಷ್ಟವಾಗಿದೆ.

 

*ಡಾ. ಭೋಜರಾಜ ಪಾಟೀಲರೊಡನೆ.

[1]ಮುಂದಿನ ಲೇಖನವನ್ನು ನೋಡಿ.

[2]ಹಲ್ಮಿಡಿ ಶಾಸನದ ಸರಕ್ಕೆಲ್ಲ ಎಂಬುದು ಒಂದು ವಂಶನಾಮವೆಂಬುದನ್ನೂ ಅದರ ಇನ್ನೊಂದು ಪರ್ಯಾಯವೇ ಈ ಅರಕೆಲ್ಲ ಎಂಬುದೆಂದೂ ಈಗಾಗಲೇ ‘ಪ್ರಾಚೀನ ಕನ್ನಡ ಶಾಸನಗಳ ಭಾಷಿಕ ಅಧ್ಯಯನ’ ಮುಂತಾದ ಕಡೆ ತೋರಿಸಿ ಕೊಡಲಾಗಿದೆ.

*ಈ ಅಕ್ಷರವನ್ನು ಸಾಲಿನ ಮೇಲ್ಗಡೆ ಕೊರೆದಿದೆ.