ಪಂಪಭಾರತದಲ್ಲಿ ಹರಡಿರುವ ಸಾಂಸ್ಕೃತಿಕ ಅಂಶಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿನ ಸಾಂಸ್ಕೃತಿಕ ಅಂಶಗಳಿಗೆ ವಿಶೇಷ ಗಮನವಿತ್ತು. ಅಧ್ಯಯನ ಕೈಕೊಳ್ಳಬೇಕಾದ ಅವಶ್ಯಕತೆ ತುಂಬಾ ಇದೆ. ಅದರಲ್ಲಿನ ಹಲವಾರು ಅಂಶಗಳನ್ನು ಕುರಿತು ವಿದ್ವಾಂಸರು ಆಗೀಗ ಚರ್ಚಿಸುತ್ತ ಬಂದಿದ್ದಾರೆ.

ಮಹಾಕವಿ ಪಂಪ ಮಾಡಿಕೊಂಡ ಬದಲಾವಣೆಗಳು ಕೂಡ ಅಪಾರ. ಅಂಥ ಬದಲಾವಣೆಗಳನ್ನು ಕುರಿತಂತೆಯೂ ತಕ್ಕಷ್ಟು ಚರ್ಚೆ ನಡೆಯುತ್ತ ಬಂದಿದೆ. ವ್ಯಾಸ ಭಾರತದಲ್ಲಿ ಧರ್ಮದೇವತೆಯಾದ ಯಮ ದ್ವೈತವನದಲ್ಲಿದ್ದ ಬ್ರಾಹ್ಮಣನ ಆರಣಿಯನ್ನು ಜಿಂಕೆಯ ರೂಪದಲ್ಲಿ ಬಂದು ಅಪಹರಿಸಿಕೊಂಡು ಹೋಗುತ್ತಾನೆ. ತರುವಾಯದಲ್ಲಿ ಅಟ್ಟಿಸಿಕೊಂಡು ಬಂದ ನಾಲ್ವರು ಪಾಂಡವರನ್ನು ಕೊಳದ ಬಳಿಯಲ್ಲಿ ನಿಶ್ಚೇಷ್ಟಿತಗೊಳಿಸಿ ಕೆಡುವುತ್ತಾನೆ. ಏಕಪಾದದ ಮೇಲೆ ನಿಂತ ಹಂಸರೂಪೀ ಯಕ್ಷನಾಗಿ ಯುಧಿಷ್ಠಿರನಿಂದ ಧಾರ್ಮಿಕಾಧಾತ್ಮಿಕಾದಿ ಸಮಸ್ಯೆಗಳಿಗೆ ಉತ್ತರ ಹೇಳಿಸಿಕೊಂಡು ಸಂಪ್ರೀತನಾಗಿ ಪಾಂಡವರನ್ನು ಬದುಕಿಸುತ್ತಾನೆ.

ಪಂಪಭಾರತದಲ್ಲಿ ಈ ಸನ್ನಿವೇಶ ತೀವ್ರತರವಾಗಿ ಬದಲಾಯಿಸಲ್ಪಟ್ಟಿದೆ. ಅಲ್ಲಿನ ಜಿಂಕೆಯ ಬದಲು ಇಲ್ಲಿ ಮದ್ದಾನೆ ಆರಣಿಯನ್ನು ಅಪಹರಿಸುತ್ತದೆ. ಅಲ್ಲಿನ ಧರ್ಮದೇವತೆ ಯಮ ಇಲ್ಲಿ ಒಂದು ‘ದಿವ್ಯ’ವಾಗಿದೆ. ‘ಅದಱ ಬೆಸಗೊಂಡದರ್ಕೆಲ್ಲಂ ಮಱುಮಾತು ಗುಡುವುದುಂ’ ಎಂದಿಷ್ಟೇ ಹೇಳಿ ಯಕ್ಷಪ್ರಶ್ನೆಯ ಭಾಗವನ್ನು ಸಾರಾಸಗಟಾಗಿ ವರ್ಜಿಸಿಬಿಟ್ಟಿದ್ದಾನೆ ಪಂಪ. ಕನಕ ಎಂಬ ಪುರೋಹಿತ ಎಸಗಿದ ಬೇಳ್ವೆ ಮತ್ತು ಅದರಲ್ಲಿ ಹುಟ್ಟಿದ ಕೀರ್ತಿಕೆಯೆಂಬ ಉಗ್ರದೇವತೆಯ ಪ್ರಸ್ತಾಪ ಮೂಲದಲ್ಲಿಲ್ಲ. ಇಲ್ಲಿನ ಆಭಿಚಾರದ ಕಲ್ಪನೆಯನ್ನು ಪಂಪನೇ ಸೇರಿಸಿದ್ದಾನೆ.[1]

ಕೃತ್ಯಾ (ಅಥವಾ ಕೃತ್ತಿಕಾ) ಎಂಬ ಆಭಿಚಾರಿಣಿ ದೇವತೆಯ ಕಥೆ ವ್ಯಾಸ ಭಾರತದಲ್ಲಿ ಎರಡು ಮೂಡು ಕಡೆ ಬಂದಿದೆ. ಮುಖ್ಯವಾಗಿ ಘೋಷಯಾತ್ರೆಯ ಅವಮಾನದಿಂದ ಬೆಂದ ದುರ್ಯೋಧನ ಪ್ರಾಯೋಪವೇಶಕ್ಕೆ ಸಿದ್ಧನಾದಾಗ ಈ ಕಥೆ ಅಲ್ಲಿ ಬಂದಿದೆ. ಆ ಮಾರ್ಗದಿಂದ ದುರ್ಯೋಧನನನ್ನು ಪರಾಙ್ಮಖಗೊಳಿಸುವುದಕ್ಕಾಗಿ ಅವನ ಪಕ್ಷಪಾತಿಗಳಾದ ರಾಕ್ಷಸರು ಈ ಕೃತ್ಯೆಯನ್ನು ಸೃಷ್ಟಿಸುತ್ತಾರೆ. ಅದರ ವಿವರಗಳನ್ನು ಇಲ್ಲಿ ಅಪ್ರಸ್ತುತ. ಶ್ರೀ.ನ.ಸುಬ್ರಹ್ಮಣ್ಯಂ ಅವರ ಲೇಖನವೊಂದರಲ್ಲಿ (ಪ್ರ.ಕ.೪೪-೪) ಅದರ ಕೆಲವು ವಿವರಗಳನ್ನು ಕಾಣಬಹುದು.

ಪಂಪ ಕೀರ್ತಿಕೆಯ ಸನ್ನಿವೇಶವನ್ನು ಕಲ್ಪಿಸುವಾಗ ಮೇಲೆ ಹೇಳಿದ ಕೃತ್ಯೆಯ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡಿರಬಹುದೆಂಬ ಮಾತನ್ನು ಕೆಲಮಟ್ಟಿಗೆ ಒಪ್ಪಬಹುದು. ಆದರ ಕೃತ್ಯಾ ಎಂಬ ರೂಪವನ್ನು ಬಿಟ್ಟು ಕೀರ್ತಿಗೆ ಎಂಬ ರೂಪವನ್ನೇಕೆ ತಂದುಕೊಂಡ? ಈ ಸಮಸ್ಯೆಗೆ ಸರಿಯಾದ ಉತ್ತರ ಹೇಳಬೇಕಾಗುತ್ತದೆ. ಅದಕ್ಕೆ ಕೃತ್ಯಾ ಎಂಬ ಪೌರಾಣಿಕ ರೂಪವೊಂದೇ ಸಾಕಾಗುವುದಿಲ್ಲ. ಪಂಪ ಸ್ವೇಚ್ಛಾವೃತ್ತಿಯಿಂದ ಈ ರೂಪ ಕಲ್ಪಿಸಿದ್ದಾನೆಂದು ಹೇಳಿ ಆತನಿಗೆ ಹೊಣೆಗೇಡಿತನವನ್ನು ಆರೋಪಿಸಿ ಬಿಡ ಬಹುದು. ಆದರೆ ಹೀಗೆ ಮಾಡುವುದು ಉಚಿತವಲ್ಲವೆಂಬುದು ನಮ್ಮ ಅಭಿಪ್ರಾಯ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡತಿಗ್ರಾಮದ ಶಾಸನವೊಂದು ಈ ನಮ್ಮ ಅಭಿಪ್ರಾಯಕ್ಕೆ ಆಧಾರವಾಗಿದೆ. ಅದರ ಪಾಠ ಕೆಳಗಿನಂತಿದೆ.

ಸ್ವಸ್ತಿ ಶ್ರೀಮತು ಯಾದವ ನಾರಾಯಣಂ ಭುಜಬಳ ಪ್ರೌಢಪ್ರತಾಪ ಚಕ್ರವರ್ತಿ-ಶ್ರೀವೀರ
ರಾಮಚಂದ್ರದೇವನ ವಿಜಯ ರಾಜ್ಯೋದಯದ ೧೨ ಚಿತ್ರಭಾನು ಸಂವತ್ಸರದ ವಯಿಶಾ
ಖ ಬಹುಳ ೨.ಆ. ಪಂಚಮಹಾಸಾಮಂತಂ ವೀರಲಕ್ಷ್ಮೀಕಾಂತಂ ಕೀರ್ತಿಕಾದೇವಿಯ
ಲಬ್ಧವರಪ್ರಸಾದ….ಪಾಸಾದ ಮ್ರಿಗಮದಾಮೋದ ಹಯವತ್ಸರಾ
ಜಂ ಗಣಿಕಾಮನೋಜಂ ರಯ್ಯ ಬಳಸಾಧಕಂ ವರ್ಯ್ಯ ಬಳಜಳಧಿ ಬಡವಾನಳಂ ಕೋಟ
ಕಾಳಾನಳಂ ಕೌತ್ಸವ ವಂಸೋದ್ಭವಂ ಮಾವನಂಕಕಾಱ ವುಭಯಗೋತ್ರ
……ಶ್ರೀಮ…….ಬಯಿರರ್ಸದೇವನ ಬಸವದೇವನ……
…….ಮಂಬನಾಡ ಹಚುಕಾದಿ…..ಆದಿ….ವೆಸನ
(SII-IX-i-No-೩೮೧).

ಕ್ರಿ.ಶ. ೧೨೮೨ರ ಮೇಲ್ಕಾಣಿಸಿದ ಶಾಸನದಲ್ಲಿ ಕೌತ್ಸವವಂಶದ ಪಂಚಮಹಾ (ಶಬ್ದ) ಸಾಮಂತನೊಬ್ಬನ ಉಲ್ಲೇಖ ಬಂದಿದೆ. ಈತನ ಹೆಸರು ಬಹುಶಃ ಬಯಿರ ರಸದೇವ. ತನ್ನನ್ನು ಈತ ಕೀರ್ತಿಕಾದೇವಿ ಲಬ್ಧ ವರಪ್ರಸಾದ ಎಂದು ಕರೆದುಕೊಂಡಿದ್ದಾನೆ. ಇದರಿಂದ ಕೀರ್ತಿಕೆ ಎಂಬ ದೇವಿ ಬಳ್ಳಾರಿ ಜಿಲ್ಲೆಯ ಆ ಭಾಗದಲ್ಲಿ ಆ ಕಾಲಕ್ಕೆ ತಕ್ಕಷ್ಟು ಪ್ರಸಿದ್ಧಲಾಗಿದ್ದಳೆಂದು ಖಚಿಪಡುತ್ತದೆ. ಈ ದೇವಿಯ ಉಲ್ಲೇಖ ಇತರತ್ರ ಬಂದಂತಿಲ್ಲ.

ಶಾಸನದ ಕೀರ್ತಿಕಾದೇವಿ ಎಂಬ ರೂಪ ಪಂಪಭಾರತದ ಕೀರ್ತಿಗೆ ಎಂಬುದಕ್ಕೆ ಭಾಷಿಕವಾಗಿ ನೇರ ಸಂಬಂಧ ಪಡೆದಿದೆ. ಪ್ರಾಚೀನ ಜೈನ ಲೇಖಕರು ಹಿಂದೂ ದೇವತೆಗಳನ್ನು ತಮ್ಮ ಉದ್ಧೇಶಕ್ಕೆ ತಕ್ಕಂತೆ ಬದಲಾಯಿಸಿ ತಮ್ಮ ಕೃತಿಗಳಲ್ಲಿ ಸೇರಿಸುವುದು ತೀರ ಸಾಮಾನ್ಯವಾಗಿತ್ತು. ಸೌಮ್ಯರಾದ ಮತ್ತು ಬಹುಜನರ ಗೌರವಕ್ಕೆ ಪಾತ್ರರಾದ ರಾಮನಂಥನವರಿಗೆ ಅವರ ಕೃತಿಗಳಲ್ಲಿ ಉಚ್ಚಸ್ಥಾನ ಪ್ರಾಪ್ತವಾಗಿದ್ದರೆ ಕೃಷ್ಣ ಮತ್ತು ಪರಶುರಾಮನಂಥವರಿಗೆ ಅಂಥ ಸ್ಥಾನ ದೊರಕಿಲ್ಲ. ವಡ್ಡಾರಾಧನೆಯ ಕಾರ್ತಿಕ ಋಷಿಕಥೆಯ ಕಾರ್ತಿಕಋಷಿ ಮುಂಚಿನಿಂದ ಸೊಂಡೂರಿನಲ್ಲಿ ಪ್ರಸಿದ್ಧವಿರುವ ಕುಮಾರಸ್ವಾಮಿಯೇ. ಶಿವಕೋಟಿ ಈ ಕಥೆಯನ್ನು ಬಹು ಜಾಣ್ಮೆಯಿಂದ ಹೆಣದಿದ್ದಾನೆ. ಬ್ರಹ್ಮಶಿವನ ಸಮಯ ಪರೀಕ್ಷೆಯಲ್ಲಿ ಇಂಥ ಬದಲಾವಣೆ ಉದಾಹರಣೆಗಳು ಬೇಕಾದಷ್ಟಿವೆ. ಅವನ ಅಭಿಪ್ರಾಯದಲ್ಲಿ ಶ್ರೀಶೈಲದ ಮಲ್ಲಿಕಾರ್ಜುನ, ಲಕ್ಷ್ಮೇಶ್ವರದ ಸೋಮೇಶ್ವರ, ಕೊಲ್ಲಾಪುರದ ಮಹಾಲಕ್ಷ್ಮೀ ಇವರೆಲ್ಲ ಜೈನ ಪರರೇ. ಕೆಲವೊಂದು ಪ್ರಾಚೀನ ಹಿಂದೂ ಪರಂಪರೆಯ ದೇವರುಗಳನ್ನು ಅವರು ಛೇಡಿಸಿದ್ದೂ ಉಂಟು. ನಯಸೇನ ತನ್ನ ಧರ್ಮಾಮೃತದಲ್ಲಿ ಕಂಚಿಯ ಕಾಮಕೋಟಿ, ಕೊಳ್ಳಿ ಪಾಕೆಯ ಭೂತಕೋಟಿ ಇವರನ್ನು ಜೋಡೆಯರೆಂದು ಕರೆದುಬಿಟ್ಟಿದ್ದಾನೆ. ಅಂದು ಬಹುಜನಪ್ರಿಯನಾಗಿದ್ದ ಮೈಲಾರದೇವರನ್ನು ಬ್ರಹ್ಮಶಿವ ‘ಜೈನನೇ ಕೆಟ್ಟು ಮೈಲಾರ ನಾದ’ ಎಂದು ಹೇಳಿಕೊಂಡಿದ್ದಾನೆ. ಇಂಥ ಭಾವನೆಗಳು (ಕರ್ನಾಟಕದ) ಜೈನ ಲೇಖಕರಲ್ಲಿ ಸರ್ವೇಸಾಧಾರಣವಾಗಿದ್ದವೆಂದು ಈ ಉದಾಹರಣೆ ತೋರಿಸಿಕೊಡುತ್ತವೆ. ಕಾರಣ ಒಂದು ಭಾಗದಲ್ಲಿ ಅಂದು ತಕ್ಕಷ್ಟು ಪ್ರಸಿದ್ಧಳಾಗಿದ್ದ ಕೀರ್ತಿಕೆಯನ್ನು ಆಭಿಚಾರದ ದೇವತೆಯಾಗಿ ಪಂಪ ಹೊಂದಿಸಿಕೊಂಡಿದ್ದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. ಕಾರಣ ಕೀರ್ತಿಗೆಯ ಸೃಷ್ಟಿಗೆ ಪ್ರಸ್ತುತ ಕಡತಿಶಾಸನೋಕ್ತ ಕೀರ್ತಿಕಾ ದೇವಿಯೂ ಮುಖ್ಯ ಪ್ರೇರಣೆ ನೀಡಿರುವ ಸಾಧ್ಯ ತುಂಬಾ ಇದೆ.

ಹೀಗಾಗಿ ಶ್ರೀ ನ.ಸುಬ್ರಹ್ಮಣ್ಯ ಮತ್ತು ಡಾ.ಡಿ.ಎಲ್.ಎನ್. (ಪಂಪ ಭಾರತ ದೀಪಿಕೆ) ಕೃತ್ಯಾ ಅಥವಾ ಕೃತ್ತಿಕಾ ರೂಪದಿಂದ ಕೀರ್ತಿಗೆ ಎಂಬ ರೂಪ ನಿಷ್ಪನ್ನಗೊಳಿಸಿರುವುದು ನಿದಾಧಾರ ಸಮೀಕರಣವಾಗುತ್ತದೆ. ಕೃತ್ಯಾ ರೂಪ ದಲ್ಲಿನ ಮೊದಲ ಸ್ವರ ಹ್ರಸ್ವವಾಗಿದೆ. ಅದರ ಮುಂದೆ (ವಿಜಾತೀಯ) ದ್ವಿತ್ವಾಕ್ಷರ ಬಂದಿದೆ. ಕೀರ್ತಿಕೆ ಎಂಬುದರಲ್ಲಿ ಮೊದಲ ಸ್ವರ ದೀರ್ಘವಿದ್ದು ತರುವಾಯ ದ್ವಿತ್ವ ಬಂದಿದೆ. ತದ್ಭವೀಕರಣದಲ್ಲಿ ಇಂಥ ಧ್ವನಿ ವ್ಯತ್ಯಾಸ ಅಸಾಧ್ಯ. ಸಂಸ್ಕೃತದಿಂದ ಬರುವ ವಿಜಾತಿ ದ್ವಿತ್ವಗಳು ಕನ್ನಡದಲ್ಲಿ ಸರಳಗೊಂಡು ದ್ವಿತ್ವ ಲೋಪವೋ ಸಜಾತೀಯ ದ್ವಿತ್ವಗಳೋ ಆಗಿ ಪರಿವರ್ತಿಸುತ್ತವೆ. ಅವುಗಳ ಹಿಂದಿನ ಸ್ವರ ದೀಘವಾಗಿದ್ದರೆ ಅದು ಹ್ರಸ್ವವಾಗಿ ಮಾರ್ಪಡುತ್ತದೆ. ಅಥವಾ ದ್ವಿತ್ವವೇ ಲೋಪಗೊಳ್ಳುತ್ತದೆ. ಅಂದರೆ ದೀರ್ಘಸ್ವರ ಮತ್ತು ಅದರ ಪರದಲ್ಲಿನ ದ್ವಿತ್ವ ಇವುಗಳಲ್ಲಿ ಯಾವುದಾದರೂ ಒಂದು ಮಾತ್ರ ಉಳಿದುಕೊಳ್ಳುತ್ತದೆ. ಆದ್ದರಿಂದ ಕೃತ್ಯಾ > ಕೀರ್ತಿಗೆಯಾಗಿ ಮಾರ್ಪಟ್ಟಿದೆ ಎಂದು ಭಾಷಾವೈಜ್ಞಾನಿಕವಾಗಿ ಸಾಧಿಸಿ ತೋರಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ನಿಷ್ಪತ್ತಿಯನ್ನು ತ್ಯಜಿಸಬೇಕಾಗುತ್ತದೆ. ಎಂದರೆ ಕಡತಿಶಾಸನೋಕ್ತ ಕೀರ್ತಿಕೆ ಮತ್ತು ಪಂಪಭಾರತದ ಕೀರ್ತಿಗೆಯರು ನೇರ ಸಂಬಂಧ ಪಡೆದಿದ್ದಾರೆಂಬ ಅಂಶ ಹೆಚ್ಚು ಸಮರ್ಥನೀಯವೆನಿಸುತ್ತದೆ.

 

[1]ಇದರಲ್ಲಿ ಅರಿಕೇಸರಿ ಸಂಬಂಧಿಯಾದ ಐತಿಹಾಸಿಕ ಘಟನೆಯೇನಾದರೂ ಹುದುಗಿರಬಹುದೇ?