ದಿ.ಡಿ.ಎಲ್‌. ನರಸಿಂಹಾಚಾರ್ಯರು ಈ ಪದವು ಪಂಪಭಾರತದ ಪದ್ಯ ೨-೯೦ ಹಾಗೂ ೯-೩೯ರಲ್ಲಿ ಉಪಯೋಗಿಸಲ್ಪಟ್ಟಿರುವುದನ್ನು ಗುರುತಿಸಿದ್ದಾರೆ. ಶಾಸನ ಅಥವಾ ಕಾವ್ಯಗಳಲ್ಲಿ ಈ ಪದ ಬಳಕೆಯಾಗಿರುವುದು ತೀರ ಅಪರೂಪ. ಇದರ ಅರ್ಥವಂತೂ ಪಂಪಭಾರತದ ಲಿಪಿಕಾರರಿಗೆ ಕತ್ತಲೆಯೊಳಗಿನ ಕಾಡಿಗೆ ಕಣ. ಆದುದರಿಂದ ಅವರು ತಮ್ಮ ಬುದ್ಧಿಗನುಸಾರವಾಗಿ ಈ ಪದ್ಯಗಳಿಗೆ ಅರ್ಥ ಹಚ್ಚಿ ಅವನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಆದರೂ ಅವರು ‘ಡಂಗ’ ಪದವನ್ನು ವ್ಯತ್ಯಸ್ತಗೊಳಿಸಿಲ್ಲ. ಇದು ಲಕ್ಷಿಸತಕ್ಕ ಸಂಗತಿ.

ಪೇಶಾವರದ ವಸ್ತುಸಂಗ್ರಹಾಲಯದಲ್ಲಿರುವ ಸಂಸ್ಕೃತ ಶಾಸನವೊಂದರಲ್ಲಿ (ಕಾಲ. ಕ್ರಿ.ಶ. ೧೪೬೧) ದ್ರಂಗವೆಂಬ ಪದ ಬಳಕೆಯಾಗಿದೆ. ಈ ಪದ್ಯ ಸ್ವೀನ, ಮಾಕ್‌ಡೊನೆಲ್‌ ಮುಂತಾದ ವಿದ್ವಾಂಸರು ಠಾಣ್ಯ, ಸುಂಕದಕಟ್ಟೆ ಎಂಬ ಅರ್ಥವನ್ನು ಹೇಳುತ್ತಾರಂತೆ. ಈ ವಿದ್ವಾಂಸರಿಗೆ ಹೇಮಚಂದ್ರಾಚಾರ್ಯನು (ಕ್ರಿ.ಶ. ೧೨ನೆಯ ಶತಮಾನ) ಈ ಪದಕ್ಕೆ ಹೇಳುವ ಪುರಿ, ನಗರವೆಂಬ ಅರ್ಥವಿವರಣೆಯೆ ಆಧಾರ. ಶ್ರೀ ದೊಲನರು ಪ್ರಸ್ತುತ ಶಾಸನದ ‘ದ್ರಂಗ’ ವೆಂಬುದನ್ನೂ ಪಂಪಭಾರತದ ‘ಡಂಗ’ ವನ್ನೂ ಸಮೀಕರಿಸಿದ್ದಾರೆ (ಶಬ್ದವಿಹಾರಪು. ೭೧. ಹಾಗೂ Indian Antiquiry X.P. 79 and 80). ಆದರೆ ದ್ರಂಗ ಪದಕ್ಕಾಗಲೀ ಶಾಸನದಲ್ಲಿ ಅದು ಬರುವ ಸಾಲಿಗಾಗಲೀ ಖಚಿತವಾದ ಅರ್ಥ ಹೊರಡಿಸುವುದು ಅಸಾಧ್ಯವೆಂದು ಆ ಶಾಸನದ ಸಂಪಾದಕರಾದ ಶ್ರೀ ಸ್ಟೆನ್‌ಕೋನೋ ಅವರೇ ಒಪ್ಪಿಕೊಂಡಿದ್ದಾರೆ.

ಮೇಲಿನ ವಿವರಣೆಯಿಂದ ಪಂಪನ ಡಂಗ ಪದವೇ ಪ್ರಾಚೀನ; ದ್ರಂಗವೆಂಬುದು ಅನಂತರದ್ದು ಎಂಬುದು ನಿಚ್ಚಳ. ಆದುದರಿಂದ ದ್ರಂಗದಿಂದ ಡಂಗವು ಹುಟ್ಟಿದೆಯೆಂದು ಹೇಳಲು ಆಧಾರವಿಲ್ಲವೆಂಬುದು ಖಚಿತಪಡುತ್ತದೆ. ‘ಡಂಗ ಹಾಕು’ ಎಂಬ ಪ್ರಚಲಿತ ಪಡೆನುಡಿಗೂ ಪಂಪಭಾರತದ ‘ಡಂಗ’ ಪದಕ್ಕೂ ಅವರು ಕಲ್ಪಿಸಿದ ಸಂಬಂಧವೂ ಇದರಿಂದ ಖಿಲವಾಗುತ್ತದೆ. ಒಂದು ವೇಳೆ ಠಾಣ್ಯ, ಸುಂಕದ ಕಟಟೆ ಎಂಬರ್ಥದ ದ್ರಂಗ ಪದಕ್ಕೂ ಈ ದೇಶೀಯ ಪಡೆನುಡಿಗೂ ಸಂಬಂಧವಿದ್ದರೂ ಇದ್ದೀತು.

ಇತ್ತೀಚೆಗೆ ಬೆಳಕು ಕಂಡಿರುವ ‘ನಾಂದೇಡ ಜಿಲ್ಲೆಯ ಶಾಸನಗಳು’ (Inscription from Nanded District P. 8 and 9) ಎಂಬ ಸಂಗ್ರಹದಲ್ಲಿ ತಡಖೇಲ ಎಂಬ ಊರಿನ ಚಾಲುಕ್ಯ ೧ನೆಯ ಸೋಮೇಶ್ವರನ ಕಾಲದ ಶಾಸನವೊಂದು ಪ್ರಕಟವಾಗಿದೆ. ಶಾಸನ ಸಮಿತಿ ೧೦೪೭ A.D. ಪ್ರಸ್ತುತ ಶಾಸನದಿಂದ ಸೋಮೇಶ್ವರ ರನ ದಂಡನಾಯಕ ನಾಗವರ್ಮನು ಮಹಾಪ್ರತಾಪಶಾಲಿಯಾಗಿದ್ದಂತೆ ತಿಳಿದು ಬರುತ್ತದೆ. ಅವನ ವಿಜಯಗಳನ್ನು ಸಾರುವ ಶಾಸನದ ಪದ್ಯವೊಂದು ಹೀಗಿದೆ-

ಅದಟರೆವೆಂದು ಬೀಗಿ ಬೆಸದಿರ್ಪ್ಪನಿತಲ್ಲದೆ ಪೂಣ್ದು ಪೋಗಿ ಡಂ |
ಗದಸವಲಕ್ಕವಿಂಜದ ವರಳಾದ ಲಂಜಿಯ ಚಕ್ರಗೊಟ್ಟದ ||
ಗ್ಗದನೃಪರಂ ಪಳಂಚಲೆದು ವೀರಶಿಖಾಮಣಿ ನಾಗವರ್ಮನಂ
ದದೆ ನೆಲನಂ ನಿಮಿರ್ಚ್ಚದವರಾರ್ಗ್ಗಳ ಚಕ್ರಿಯ ದಂಡನಾಯಕರು ||

ದಂಡನಾಯಕ ನಾಗವರ್ಮನು ಡಂಗ, ಸವಲಕ್ಕೆವಿಂಜ, ವರಾಳ, ಲಂಜಿ, ಚಕ್ರಗೊಟ್ಟ ಮುಂತಾದವುಗಳ ರಾಜರನ್ನು ಸೋಲಿಸಿ ಚಕ್ರಿಗೆ ನೆಲವನ್ನು ನಿಮಿರ್ಚಿದನೆಂದು ಇಲ್ಲಿ ಹೇಳಿದೆ. ಆದುದರಿಂದ ಇಲ್ಲಿ ಡಂಗವೆಂದರೆ ಸುಂಕದ ಕಟ್ಟೆ, ಠಾಣ್ಯ ಮುಂತಾದ ಅರ್ಥಗಳು ಸರ್ವಥಾ ಹೊಂದುವದಿಲ್ಲ. ಅದು ಒಂದು ಊರು ಅಥವಾ ಪ್ರದೇಶದ ಹೆಸರೆಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪಂಪನ ಎರಡು ಪದಗಳನ್ನು ನೋಡಬಹುದು.

ಮಲೆತಲೆದೋಱದೆಂದುದನ ಕೊಟ್ಟುದು ಡಂಗುವಡಂಗಿ ಬಂದೊಡೊ
ಕ್ಕಲಿಗವೆಸರ್ಗ್ಗೆ ಪೂಣ್ದುದು ಕುಱುಂಬು ತಱುಂಬದೆ ಮಿಕ್ಕ ಶತ್ರುಮಂ
ಡಲಿಕರೆ ಮಿತ್ರಮಂಡಲಿಕರಾದರನಾಕುಳ ಮಿಂದುನಾಳೆ ಮಾ |
ರ್ಮಲೆದರನಿಕ್ಕಿ ನಮ್ಮನೆಱೆದಿಕ್ಕುಗುಮೀನೆಲೆಯಿಂ ಗುಣಾರ್ಣವಂ ||

ಈ ಪದ್ಯದ ಪಾಠದೋಷವನ್ನು ಶ್ರೀ ದೊಲನರು ಈ ರೀತಿ ತಿದ್ದಿದ್ದಾರೆ-

ಮಲೆತಲೆದೋಱದೆಂದುದನೆ ಕೊಟ್ಟು [ದು] ಡಂಗಮಡಂಗಿ-ಬಂ [ದುದೊ]
ಕ್ಕಲಿಗವೆಸರ್ಗೆಪೂಣ್ದುದು ಕುಱುಂಬು…………….”

ಇಲ್ಲಿಯ ಊಹಾಪಾಠವೇನೋ ಪೂರ್ಣಸರಿಯಾಗಿದೆ. ಆದರೆ ಅದಕ್ಕೆ ಕಲ್ಪಿಸಿದ ಅರ್ಥ ತಪ್ಪಾಗಿದೆ. ಮಲೆ ಹಾಗೂ ಕುಱುಂಬವೆಂಬ ಎರಡು ಪ್ರದೇಶಗಳ ನಡುವೆ ಡಂಗವೆಂಬ ಹೆಸರಿನ ಮತ್ತೊಂದು ಪ್ರದೇಶ (ರಾಜ್ಯ) ವನ್ನೆ ಕವಿ ಹೆಸರೆತ್ತಿ ಹೇಳುತ್ತಿದ್ದಾನೆಂಬುದು ಇಲ್ಲಿ ಸ್ಪಷ್ಟವಾಗಿದೆ.

ಪೊಂಗುವ ಮಲೆಪರ ಮಲೆಗಳ
ಡಂಗಂ [ಕ] ಣ್ಮಲೆವ ಮಲೆವ ಮಂಡಲಂಗಳ್‌ ಪ್ರತ್ಯಂ
||
ತಂಗಳೆನಲೊಳವೆ ಪಾಂಡವ
ರಂಗೆಡೆಗೊಳೆ ನಿನಗೆ ಕುರುಕುಲಾಂಬರ ಭಾನೂ
|| ೯-೩೯

ಇದು ದೂತ್ಯ ಪ್ರಸಂಗದಲ್ಲಿ ಕೃಷ್ಣನು ದುರ್ಯೋಧನನಿಗೆ ತಿಳಿಹೇಳಿದ ಮಾತು. ಮೇಲಿನ ಪದ್ಯ ೨-೯೦ ರಲ್ಲಿಯಂತೆಯ ಮಲೆಪರ ಮಲೆಗಳ ಜೊತೆಗೆ ಬಂದಿರುವುದರಿಂದ ಇಲ್ಲಿಯೂ ಡಂಗವಂದರೆ ಒಂದು ಪ್ರದೇಶವೆಂದು ಖಚಿತವಾಗುತ್ತದೆ. ಇಷ್ಟನು ನಿರ್ಧರಿಸಿದ ಮೇಲೆ ಈ ಪದ್ಯಕ್ಕೆ ಶ್ರೀ ದೊಲನರು ಸೂಚಿಸಿಸುವ (ಕಾವ್ಯದ ಅಡಿ ಟಿಪ್ಪಣೆಯ ‘ಗ’ ಪ್ರತಿಯ), ಪಾಠಾಂತರದ ಬಗೆಗೆ ಚರ್ಚಿಸಬಹುದು.

ಪೊಂಗುವ ಮಲೆಪರ ಮಲೆಗಳ
ಡಂಗಂ [ಕ] ಣ್ಮಲೆವ ಮಂಡಲಂಗಳ್‌ ಪ್ರತ್ಯಂ
||
ತಂಗಳೆನಲೊಳವೆ…..
||

ಇಲ್ಲಿ ಅವರು ಗ ಪ್ರತಿಯ ‘ಗಳ್ಮ’ ವನ್ನು ‘[ಕ]ಣ್ಮ’ ವೆಂಬುದಕ್ಕೆ ಬದಲಾಗಿ ಸ್ವೀಕರಿಸಲು ಸೂಚಿಸಿದ್ದಾರೆ. ಅದರಿಂದ ‘ಡಂಗ’ಗಳ ಎಂಬ ಪಾಠವುಂಟಾಗುತ್ತದೆ. “ಮಲೆಪರ ಮಲೆಗಳ ಡಂಗಂಗಳ್‌ ಮಲೆವ ಮಂಡಲಂಗಳ್ ಪ್ರತ್ಯಂತಂಗಳ್ ಎನಲೊಳವೆ” ಎಂಬುದರಿಂದ “ನೆರೆಹೊರೆಯ ಪರ್ವತರಾಜರ ಡಂಗಗಳೆಲ್ಲ ಕೌರವನಿಗೆ ಅಧೀನವಾಗಿ ಅವನನ್ನು ಕರಗ್ರಾಹಿಯನ್ನಾಗಿ ಮಾಡಿ ರಾಜ ಎನ್ನಿಸುತ್ತವೆ” ಎಂಬ ಭಾವಾರ್ಥವನ್ನು ಹೊರಡಿಸಲು ಪ್ರಯತ್ನಿಸಿದ್ದಾರೆ. (ಅವರ ವಿವರಣೆಯಿಂದ ಈ ಪದ್ಯಕ್ಕೆ ಸರಿಯಾದ ಅರ್ಥ ಕಲ್ಪನೆ ಬಹು ಕಷ್ಟವೆಂಬುದು ವೇದ್ಯವಾಗುತ್ತದೆ). ಡಂಗವೆಂಬುದು ಮೇಲ್ಕಾಣಿಸಿದ ಶಾಸನದಲ್ಲಿಯೂ ಪಂಪಭಾರತದಲ್ಲಿ ಪದ್ಯ ೨-೯೦ರಲ್ಲಿಯೂ ಏಕವಚನದಲ್ಲಿಯೇ ಪ್ರಯುಕ್ತವಾಗಿರುವದನ್ನು ಗಮನಿಸಿದರೆ ‘ಡಂಗಂಗಳ್‌’ ಎಂಬ ಬಹುವಚನವನ್ನು ತ್ಯಜಿಸಲೇಬೇಕಾಗುತ್ತದೆ. ಅಂತೆಯೆ ಶ್ರೀ ದೊಲನರು ಇಲ್ಲಿ ಸೂಚಿಸಿದ ಪಾಠವೂ ಸ್ವೀಕಾರಾರ್ಹವಾಗುವದಿಲ್ಲ ಪಂಪಭಾರತದ ಸಂಪಾದಕರು ಊಹಿಸಿರುವ ಡಂಗಂ [ಕ] ಣ್ಮಲೆವ ಮಂಡಲಂಗಳ್‌, ಹೆಚ್ಚು ಸಮರ್ಪಕವಾಗಿದೆ. ಕಣ್ಮಲೆವ ಮಂಡಲಂಗಳ್ ಎಂಬುದು ಪ್ರಥಮಾವಿಭ್ತ್ಯಂತ ವಿರುವುದರಿಂದ ಡಂಗಂ ಎಂಬುದೂ ಸಮರ್ಥನೀಯ.

ಇಷ್ಟಾದರೂ ಈ ಪದ್ಯವ ಪ್ರಥಮ ಪಾದದಲ್ಲಿ ಪಾಠದೋಷವು ಉಳಿದೇ ಉಳಿಯುತ್ತದೆ. ಪಂಪಭಾರತದ ಸಂಪಾದಕರು ‘ಅಡಂಗಂ’ ಎಂಬ ಪದವನ್ನು ಕಲ್ಪಿಸಿರುವುದರಿಂದ (ಇದು ಮೂಲ ಲಿಪಿಕಾರರ ಕಲ್ಪನೆಯೂ ಅಹುದು. “ಪೊಂಗುವ ಮಲೆಪರ ಮಲೆಗಳ ಅಡಂಗಂ” ಎಂಬ ಅನಾವಶ್ಯಕವಾದ ಅನ್ವಯ ತನ್ನ ಜಿರಾಫೆ ಮುಖವನ್ನು ಮುಂದೆ ಚಾಚುತ್ತದೆ. ಮಲೆಪರ ಮಲೆಗಳು ಎಂಬ ಪ್ರತ್ಯೇಕವಾದ ಪ್ರದೇಶ ವಾಚಕ ಪದವು ಡಂಗವೆಂದು ಮತ್ತೊಂದು ಪ್ರದೇಶವಾಚಕಪದಕ್ಕೆ ವಿಶೇಷಣವಾಗಿ ತನ್ನ ಅಸ್ತಿತ್ವವನ್ನೇ ಮರೆಮಾಡುತ್ತದೆ. ಕವಿಗೆ ಇಲ್ಲಿ ಮಲೆಗಳು ಹಾಗೂ ಡಂಗ ಎಂಬ ಎರಡೂ ಪ್ರದೇಶಗಳು ವಿವಕ್ಷಿತವಾಗಿರುವದರಿಂದ ಪದ್ಯದಲ್ಲಿ ಎರಡಕ್ಕೂ ಸಮಾನ ಅವಕಾಶವಿರುವುದು ಅವಶ್ಯಕ. ಆದುದರಿಂದ ಈ ಪದ್ಯವನ್ನು ಬೇರೂಂದು ಅಲ್ಪವಾದ ಊಹಾ ಪಾಠಕ್ಕೆ ಒಳಪಡಿಸುವ ಧೈರ್ಯಮಾಡಲಾಗಿದೆ.

ಪೊಂಗುವ ಮಲೆಪರ ಮಲೆಗ [ಳ್]
ಡಂಗಂ [ಕ]ಣ್ಮ ಲೆವ ಮಂಡಲಂಗಳ್‌ ಪ್ರತ್ಯಂ ||
ತಂಗಳೆನಲೊಳವೆ ಪಾಂಡವ
ರಂಗೆಡೆಗೊಳೆ ನಿನಗೆ ಕುರು ಕುಲಾಂಬರ ಭಾನೂ ||

ಪಂಪಭಾರತದ ಲಿಪಿಕಾರರು ಡಂಗಪದವು ಅರ್ಥವಾಗದೆ ಅದನ್ನು ‘ಅಡಂಗಂ’ ಎಂದು ಮಾರ್ಪಡಿಸಿದ್ದಾರೆ. ಅದಕ್ಕೆ ಸಹಾಯಕವಾಗಿ ‘ಮಲೆಗಳ್‌’ ಎಂಬುದನ್ನು ‘ಮಲೆಗಳ’ ಎಂದು ಸುಲಭವಾಗಿ ತಿದ್ದಿಬಿಟ್ಟಿದ್ದಾರೆ. ಈಗ ಈ ಪದ್ಯದ ಅರ್ಥಕ್ಕೆ ಯಾವ ತೊಡಕೊ ಉಳಿಯದು.

ಇಷ್ಟನ್ನು ಚರ್ಚಿಸಿದ ಮೇಲೆ ಡಂಗವೆಂಬುದು ಇರುವುದು ಎಲ್ಲಿ? ಅದು ಊರಿನ ಹೆಸರೊ ಪ್ರದೇಶದ ಹೆಸರೊ ಎಂಬ ಕುತೂಹಲವುಂಟಾಗುವದು ಸ್ವಾಭಾವಿಕ. ಮೇಲೆ ಸೂಚಿಸಿದ ಶಾಸನದ ಸಂಪಾದಕರು ಡಂಗವನ್ನು ಹೊರತುಪಡಿಸಿ ಆ ಪದ್ಯದಲ್ಲಿ ಬರುವ ಸವಲಕ್ಕವಿಂಜ ವರಾಳ ಮೊದಲಾದವುಗಳ ಸ್ಥಾನ ನಿರ್ದೇಶನ ಮಾಡಿದ್ದಾರೆ. ಸವಲಕ್ಕವಿಂಜ ಅಥವಾ ಸಪಾದಲಕ್ಷ ವಿಂದ್ಯವೆಂದರೆ ವಿಂಧ್ಯಾದ್ರಿಯ ದಕ್ಷಿಣ ಪ್ರದೇಶ. ವರಾಳ ಅಥವಾ ವರ್ಧಾತಟವೆಂದರೆ ಈಗಿನ ವಿದರ್ಭದೇಶ; ಲಂಜಿಯು ಇಂದಿನ ಮಧ್ಯಪ್ರದೇಶದ ಬಾಲಾಘಾಟ ಜಿಲ್ಲೆಯ ಲಂಜಿಯೆಂಬ ಊರು. ಚಕ್ರಗೊಟ್ಟ ಅಥವಾ ಚಕ್ರಕೂಟವೆಂಬುದು ಇಂದಿನ ಓಡಿಸ್ಸಾ ರಾಜ್ಯದ ಬಸ್ತಾರ ಜಿಲ್ಲೆಯಲ್ಲಿ ಇರುವ ಊರು’ (Incriptions from Nanded District p. XX III) ಇವೆಲ್ಲ ಮಧ್ಯ ಭಾರತದಲ್ಲಿ ಇರುವುದರಿಂದ ಡಂಗವೂ ಅದೇ ಕಡೆಗೆ ಇರಬೇಕು. ವೇಮುಲವಾಡ ಅಥವಾ ಬೋಧನದಲ್ಲಿ ರಾಜ್ಯವಾಳಿದ ೨ ನೆಯ ಅರಿಕೇಸರಿಯಿಂದ ಡಂಗವು ‘ಅಡಂಗಿ’ ಸಲ್ಪಟ್ಟಿತೆಂದು ಪಂಪನೇ ಹೇಳಿರುವನು. (ಮಲೆಪರು ಹಾಗೂ ಡಂಗಗಳನ್ನು ಪದ್ಯ ೯-೩೯ ರಲ್ಲಿ ಉಲ್ಲೇಖಿಸಿಯಾದ ಮೇಲೆ ಪದ್ಯ ೯-೪೦ ರಲ್ಲಿ ಮಾಳವವನ್ನೂ ಪಂಪ ಹೆಸರಿಸಿದ್ದಾನೆ). ಇಷ್ಟೆಲ್ಲ ಮೇಲಿನ ಊಹೆಗೆ ಉಪಷ್ಟಂಭಕವಾಗಿವೆ.

ಇಷ್ಟರಿಂದ ಸುಳುಹು ದೊರೆತಂತಾಯಿತು. ಡಂಗವೆಂದರೆ ನಿಕರವಾಗಿ ಯಾವುದೆಂಬುದನ್ನು ಭಾರತೀಯ ಶಾಸನಗಳನ್ನು ವಿವರವಾಗಿ ಅಭ್ಯಸಿಸಿದ ಬುದ್ಧಿಯೊಡೆಯರು ಬೆರಳಿಟ್ಟು ಹೇಳುವರೆಂದು ಹಾರೈಸುತ್ತೇನೆ.