ಪಾತರದವರು, ಪಾತರವಾಟಿಯವರು, ಪಾತ್ರೋಟಿಯವರು ಎಂದು ಕರೆಯಲ್ಪಡುವ ಒಂದು ಬುಡಕಟ್ಟು ಈಗ ಬೆಳಗಾವಿಯ ಆಸುಪಾಸಿನಲ್ಲಿ ಮತ್ತು ಈ ಜಿಲ್ಲೆಯ ಇತರೆಡೆಗಳಲ್ಲಿ ತೀರ ಅಲ್ಪಸಂಖ್ಯಾತರಾಗಿ ಕಂಡುಬರುತ್ತಾರೆ. ಈಗ ಇವರನಲ್ಲಿನ ಹೆಚ್ಚಿನ ಮನೆತನಗಳ ಅಡ್ಡ ಹೆಸರು ಪಾತ್ರೋಟಿ ಅಥವಾ ಪಾತ್ರೋಟ ಎಂದಿದೆ. ದಾಖಲೆಗಳಲ್ಲಿ ಇವರು ತಮ್ಮನ್ನು ಪಾತ್ರೋಟಿ ಪಾತ್ರೋಟ ಎಂದು ನಮೂದಿಸಿ ಕೊಂಡಿರುವರಾದರೂ ಇತರರು ಇವರನ್ನು ಬೇರೆ ಬೇರೆ ಹೆಸರುಗಳಿಂದ ಗುರುತಿಸುತ್ತಾರೆ. ಉದಾಹರಣೆಗೆ ನಾವಲಗಟ್ಟಿಯಲ್ಲಿ ಇವರನ್ನು ಕೊರವರೆಂದು ಗುರುತಿಸುತ್ತಾರೆ. ಉದಾಹರಣೆಗೆ ನಾವಲಗಟ್ಟಿಯಲ್ಲಿ ಇವರನ್ನು ಕೊರವರೆಂದು ಹೇಳಿದರೆ ಅಲತಿಗೆ (ಬೆಳಗಾವಿ ತಾಲೂಕು)ಯಲ್ಲಿ ಉಪ್ಪಾರರೆಂದು ಕರೆಯುತ್ತಾರೆ. ಕೊಣ್ಣುರು, ಗೋಕಾಕ ಮೊದಲಾದವುಗಳಲ್ಲಿ ಗಾಡಿ ವಡ್ಡರು, ಬಂಡಿ ವಡ್ಡರು, ಗಿರಣಿ ವಡ್ಡರು, ಗಿರಣಿ ವಡ್ಡರು, ಕಬ್ಬೇರು ಎಂದು ಮುಂತಾಗಿ ಇವರನ್ನು ಗುರುತಿಸುವ ಪ್ರಯತ್ನ ಕಂಡು ಬರುತ್ತದೆ. ಒಂದಿಷ್ಟು ಬೆದಕಿ ಕೇಳಿದಾಗ ಗಂಟಿಚವಡಿ ಅಥವಾ ಘಂಟಿಚೋಡಿ ಎಂಬ (ಜಾತಿಯ) ಹೆಸರನ್ನೂ ಹೇಳುತ್ತಾರೆ. ಸ್ವಲ್ಪ ಹಿಂದಿನ ದಿನಗಳಲ್ಲಿ ಬಹು ಜನರು ಇವರನ್ನು ‘ಗಂಟಿ ಚವಡಿ’ ಅಥವಾ ಗಂಟಿ ಚೋರಿ ಎಂದು ಗುರುತಿಸುವುದೇ ಸಾಮಾನ್ಯವಾಗಿರುತ್ತದೆಂದು ತಿಳಿದುಬರುತ್ತದೆ.

ಆದರೆ ಮೇಲೆ ತಿಳಿಸಿದ ಕೆಲವು ಜಾತಿಗಳಿಂದ ಇವರನ್ನು ಪ್ರತ್ಯೇಕಿಸುವುದು ಅನಿವಾರ್ಯವಾಗಿದೆ. ಕೊರವರು ಮಾಡುವ ಬುಟ್ಟಿ, ಚಾಪಿ ಹೆಣೆಯುವುದು, ಮದಿಯ ಕಸಬರಿಗೆ, ನುಲಿ, ನುಲಿಯ ನೆಲವು ಮುಂತಾದ ಕೆಲಸಗಳನ್ನು ಇವರು ಮಾಡುವುದಿಲ್ಲ. ಅಲ್ಲದೆ ಕೊರವರ ಭಾಷೆಯೇ ಬೇರೆ, ಇವರ ಭಾಷೆಯೇ ಬೇರೆ. ಪಾತ್ರೋಟಿಯವರು ಬೆಳಗಾವಿ ಜಿಲ್ಲೆಯ ಎಲ್ಲೆಡೆ ಕನ್ನಡವನ್ನೆ ಮನೆಮಾತು ಮಾಡಿ ಕೊಂಡಿದ್ದಾರೆ. ಉಪ್ಪಾರರು ಮನೆಕಟ್ಟುವ ಕಾರ್ಯ ಮಾಡುವವರು. ಪೂರ್ವದಲ್ಲಿ ಉಪ್ಪು ತಯಾರಿಸಿ ಅಥವಾ ಆಮುದುಮಾಡಿ ಮಾರಾಟ ಮಾಡುತ್ತಿದ್ದರೆಂದೂ ಅವರ ಬಗ್ಗೆ ಹೇಳುತ್ತಾರೆ. ಎಂದರೆ ಇವರು ಉಪ್ಪಾರರಲ್ಲವೆಂಬುದು ಸ್ಪಷ್ಟವಾಗುತ್ತದೆ. ಇಂಥ ಉದ್ಯೋಗಗಳನ್ನು ಪಾತ್ರೋಟಿಯವರು ಕುಲಕಸಬಾಗಿ ಮಾಡುತ್ತಿದ್ದರೆಂದು ಹೇಳಲು ಬರುವುದಿಲ್ಲ. ಇದೇ ಮಾತು ವಡ್ಡರನ್ನು ಕುರಿತೂ ಹೇಳಬಹುದು. ವಡ್ಡರು ಇವರಿಂದ ಭಿನ್ನರು ಎಂಬುದು ಸ್ಪಷ್ಟ.

ಕೆಲವು ಜನ ಮರಾಠಿ ವಿದ್ವಾಂಸರು ‘ಕಲಾವಂತ’ ಎಂಬು ಒಂದು ಜನಾಂಗವನ್ನು ಉಲ್ಲೇಖಿಸುತ್ತಾರೆ. ಅವರ ಪ್ರಕಾರ ಗೋವಾ ಪ್ರದೇಶ, ಉತ್ತರ ಕನ್ನಡ ಜಿಲ್ಲೆ, ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಮತ್ತು ದಕ್ಷಿಣ ಮಹಾರಾಷ್ಟ್ರ ಪ್ರದೇಶಗಳಲ್ಲಿ ‘ಕಲಾವಂತ’ ಜನಾಂಗದವರು ವಾಸಿಸುತ್ತಾರೆ. ಇವರನ್ನು ಬಾಂದೋಡಕರ, ಕಾಕೋಡಕರ, ಶಿರೋಡಕರ, ಮಂಗೇಶಕರ ಇತ್ಯಾದಿ ಅಡ್ಡ ಹೆಸರುಗಳಿಂದ ಗುರುತಿಸಲಾಗುತ್ತದೆ. ಇವರಲ್ಲಿ ಗೋವೆಯವರು. ಮಹಾರಾಷ್ಟ್ರದವರು, ಕರ್ನಾಟಕದವರು – ಇವರಲ್ಲಿಯೇ ಮತ್ತೆ ಉತ್ತರ ಕನ್ನಡದವರು ಮತ್ತು ತೇಲಂಗರು ಎಂಬ ಒಳಪಂಗಡಗಳಿರುವುದಾಗಿ ತಿಳಿದು ಬರುತ್ತದೆ. ಆದರೆ ಈ ಕಲಾವಂತರನ್ನು ಪ್ರಸ್ತುತ ಪಾತ್ರೋಟಿಯವರೊಂದಿಗೆ ಸಮೀಕರಿಸಿಸುವುದು ಕೂಡ ಅಸಾಧ್ಯವೆನಿಸಿದೆ. ಕಾರಣವೆಂದರೆ ಕಲಾವಂತರ ಆಚರಣೆಗಳಿಗೂ ಇವರ ಆಚರಣೆಗಳಿಗೂ ತುಂಬ ವ್ಯತ್ಯಾಸಗಳಿವೆ. ಕಲಾವಂತರಲ್ಲಿ ಒಂದು ಹೆಣ್ಣನ್ನು ಇನ್ನೊಂದು ಹೆಣ್ಣಿನೊಂದಿಗೆ ಲಗ್ನ ಮಾಡುವುದು ಷಣ್ಮುಖನನ್ನು ಮುಖ್ಯ ದೇವರೆಂದು ಆರಾಧಿಸುವುದು. ಬಹುಜನರಲ್ಲಿ ಇಂಡೋ-ಆರ್ಯನ್ ಮೂಲದ ಭಾಷೆಯ ವ್ಯವಹಾರದಲ್ಲಿರುವುದು ಮುಂತಾದ ಸಂಗತಿಗಳನ್ನು ನೋಡಿದರೆ ಮರಾಠಿ ವಿದ್ವಾಂಸರು ಹೇಳಿರುವ ಕಲಾವಂತರಿಗೂ ಈ ಪಾತ್ರೋಟಿ ಯವರಿಗೂ ಬಹಳ ವ್ಯತ್ಯಾಸಗಳಿರುವುದು ಸ್ಪಷ್ಟವಾಗುತ್ತವೆ.

ಇಲ್ಲಿ ಇನ್ನೊಂದು ಸಂಗತಿಯನ್ನು ಸ್ಪಷ್ಟಪಡಿಸುವುದು ಅವಶ್ಯಕವೆಂದು ಕಾಣುತ್ತದೆ. ಮಹಾರಾಷ್ಟ್ರದಲ್ಲಿ ಈಗಲೂ ವಿಶೇಷ ಪ್ರಚಲಿತವಿರುವ ಜಲಸಾ ಅಥವಾ ತಮಾಶಾದವರನ್ನು ಪಾತ್ರೋಟಿಯವರಿಂದ ಪ್ರತ್ಯೇಕವಾಗಿಸುವುದು ಅನಿವಾರ್ಯ. ಇವರು ಜಲಸಾ ಅಥವಾ ತಮಾಶಾಗಳನ್ನು ಪ್ರವೇಶಿಸಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ಕಲಾವಂತರು ಅಲ್ಲವೆಂದೇ ನಿರ್ಣಯಿಸಬೇಕಾಗುತ್ತದೆ.

ಮುಂಬೈ ಕರ್ನಾಟಕದ ಗೆಜೆಟಿಯರನಲ್ಲಿ ಗಂಟಿಚವಡಿಯವರು ಕೊರವರ ಒಂದು ಉಪಪಂಗಡವೆಂದು ಹೇಳಲಾಗುತ್ತದೆ. ಪಾತ್ರೋಟಿಯವರನ್ನು ಕೊರವರೆಂದು ಕರೆಯುವ ರೂಢಿ ಕೆಲವೆಡೆ ಇರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇವರ ಜಾತಿ ಮೂಲದ ಬಗ್ಗೆ ಯಾವುದೇ ದಂತಕಥೆ ಅಥವಾ ಐತಿಹ್ಯ ಇರುವ ಸಂಗತಿ ಕಂಡುಬರುವುದಿಲ್ಲ. ಅಂಥದು ಯಾವುದೂ ತಮಗೆ ಗೊತ್ತಿಲ್ಲವೆಂದೇ ಇವರು ಹೇಳುತ್ತಾರೆ.

ಊರಮೇಲೆ ಸಂಚರಿಸುವುದು ಸಂತೆಗಳಲ್ಲ ಸೇರಿಕೊಂಡು ಪ್ರಾಮಾಣಿಕವಲ್ಲದ ರೀತಿಯಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡುವುದು ಮುಂತಾದ ಅಂಶಗಳು ಈಗ ಇವರಲ್ಲಿ ಕಂಡು ಬರುತ್ತಿಲ್ಲ. ಒಂದೇ ಕಡೆ ನೆಲೆ ನಿಂತು ಕೂಲಿನಾಲಿ ಮಾಡುವುದು ಈಗ ಹೆಚ್ಚಾಗಿ ಕಂಡು ಬರುತ್ತದೆ.

ತಮ್ಮ ಅಡ್ಡ ಹೆಸರಿಗೆ ತಕ್ಕಂತೆ ಈಗ ಪಾತರದ ಕೆಲಸಗಳನ್ನು ತಮ್ಮ ಜೀವನೋ ಪಾಯವಾಗಿ ಮಾಡಿಕೊಂಡಿರುವವರು ಮುಖ್ಯವಾಗಿ ಎರಡು ಊರುಗಳಲ್ಲಿ ಕಾಣಬರುತ್ತಾರೆ. ಬೈಲಹೊಂಗಲ ತಾಲೂಕಿನ ನಾಮಗಟ್ಟಿಯಲ್ಲಿ ಮತ್ತು ಬೆಳಗಾವಿ ಸಮೀಪದ ಅಲತಿಗೆಯಲ್ಲಿ ಇವರ ಮನೆಗಳು ಈ ವೃತ್ತಿಯಲ್ಲಿ ನಿರತವಾಗಿವೆ.

ಇವರಲ್ಲಿ ಹುಟ್ಟಿದ ೫ ದಿನಗಳಿಗೆ ಐದೇಶಿ, ಸೆಟ್ಟೆವ್ವನ ಪೂಜೆ, ಗಂಗಾಪೂಜೆ, ಗುಗ್ಗರಿ ಹಾಕುವುದು, ೧೩ನೆಯ ದಿನಕ್ಕೆ ಹೆಸರಿಡುವುದು, ಜವಳ, ಕಿವಿ ಚುಚ್ಚುವುದು, ಹೆಣ್ಣು ಮಕ್ಕಳಿಗೆ ಹಚ್ಚೆ ಹಾಕುವುದು ಮುಂತಾದ ಆಚರಣೆಗಳು ಇವರಲ್ಲಿ ಇತರರಂತೆ ಸಾಮಾನ್ಯವಾಗಿವೆ.

ಮೈನೈರೆದಾಗ ಮಕರ ಕಟ್ಟಿ ೧೧ ದಿನ ಅಥವಾ ೧೫ ದಿನಗಳವರೆಗೆ ತಮ್ಮ ಶಕ್ತ್ಯಾನು ಸಾರ ಸೋಬಾನ ಮಾಡುತ್ತಾರೆ. ಆರತಿಯ ಸಮಯದಲ್ಲಿ ಸೋದರಮಾವ ಅಥವಾ ಮಾವನಾಗುವ ವ್ಯಕ್ತಿಯನ್ನು ಜತೆಯಲ್ಲಿ ಕೂಡಿಸುವ ಪರಿಪಾಠವಿದೆ.

ಇವರ ಹೆಣ್ಣುಮಕ್ಕಳ ಲಗ್ನದಲ್ಲಿ ಈಗ ವಿಶಿಷ್ಟ ಆಚರಣೆ ರೂಢಿಯಲ್ಲಿದೆ. ಅವರನ್ನು ಹನುಮಂತದೇವ ಜೊತೆಗೆ ಲಗ್ನ ಮಾಡುವುದು ಸಾಮಾನ್ಯ ಇದಕ್ಕೂ ಸ್ವಲ್ಪ ಮುಂಚೆ ಹನುಮಂತ ದೇವರ ಬದಿಯಲ್ಲಿ ಕುಳಿತುಕೊಂಡು ಸೋದರಮಾವನ ಜೊತೆಗೆ ಲಗ್ನ ಮಾಡಲಾಗುತ್ತಿತ್ತು. ಲಗ್ನ ಮಾಡುವಾಗ ಇತರರ ಲಗ್ನದಂತೆ ಎಲ್ಲ ಆಚರಣೆಗಳನ್ನು ನೆರವೇರಿಸಲಾಗುತ್ತದೆ. ಮನೆ ದೇವರ ಪೂಜೆ, ಅರಿಸಿನ ಹಚ್ಚುವುದು, ಐರಾಣೆ ತರುವುದು, ಸುರಿಗೆ ಸುತ್ತುವುದು. ಧಾರೆಯ ನೀರು ಎರೆಯುವುದು, ತಾಳಿ ಕಟ್ಟುವುದು, ಅಕ್ಕಿಯ ಕಾಳು ಹಾಕುವುದು ಮೊದಲಾದ ಎಲ್ಲ ಕಾರ್ಯಕ್ರಮ ನಡೆಯುತ್ತವೆ. ಆದರೆ ವರನಾಗುವವನು ಲಗ್ನದಲ್ಲಿ ಯಾವುದೇತರದ ಖರ್ಚಿಗೆ ಹೊಣೆಗಾರನಲ್ಲ. ಅದೆಲ್ಲವೂ ಹೆಣ್ಣಿನವರದು. ವರನ ಬಟ್ಟೆ ಬರೆ, ಬಂಗಾರ, ಊಟೋಪಚಾರ, ಮೊದಲಾದವುಗಳನ್ನು ಹೆಣ್ಣಿನ ಮನೆಯವರೇ ವಹಿಸಬೇಕು. ಈ ಸೋದರಮಾವ ಹೆಸರಿಗೆ ಮಾತ್ರ ವರ. ಅಂದಿನ ವಿಧಿಯಾಗಿ ಮಾತ್ರ ಅವಳ ಗಂಡ. ತರುವಾಯದಲ್ಲಿ ಅವಳಿಗೂ ಅವನಿಗೂ ಯಾವುದೇ ತರದ ಸಂಬಂಧ, ಹೊಣೆಗಾರಿಕೆ ಇಲ್ಲ. ಇತ್ತೀಚೆಗೆ ವರನನ್ನು ಕರೆತರುವ ಬದಲು ಕೇವಲ ಹನುಮಂತ ದೇವರ ಜೊತೆಗೆಯೇ ಲಗ್ನಮಾಡುವುದು ಶ್ರೇಯಸ್ಕರವೆಂದು ಭಾವಿಸಲಾಗುತ್ತಿದೆ. ಆದ್ದರಿಂದ ಹನುಮಂತದೇವರ ಜೊತೆಗೆ ವರ ನನ್ನು ಕೂಡಿಸುವ ಪರಿಪಾಠ ಹಿಂದೆ ಬೀಳುತ್ತಿದೆ. ಲಗ್ನದಲ್ಲಿ ವೀರಶೈವ ಜಂಗಮರು ಪೌರೋಹಿತ್ಯ ವಹಿಸುತ್ತಾರೆ.

ಹೀಗೆ ಲಗ್ನವಾದ ಮೇಲೆ ಅವರು ಪಾತ್ರದ ಕೆಲಸಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ. ಇತ್ತೀಚೆಗೆ ಇಂಥ ಲಗ್ನಗಳು ಕಡಿಮೆಯಾಗುತ್ತಿವೆ. ಎಂದರೆ ಪಾತ್ರದ ಕೆಲಸಕ್ಕೆ ತಮ್ಮಹೆಣ್ಣುಮಕ್ಕಳನ್ನು ಹಚ್ಚಬಾರದೆಂಬ ತಿಳುವಳಿಕೆ ಮೂಡಹತ್ತಿದೆ. ಇತರ ಕೆಳಜಾತಿಗಳವರು ಇಂಥ ಕಾರ್ಯಕ್ಕೆ ಈಗ ಮುಂದೆ ಬರುತ್ತಿದ್ದಾರೆಂದು ಹೇಳುತ್ತಾರೆ.

ಮರಣ ಸಮಯದಲ್ಲಿ ಪಾತ್ರದವಳು ತನ್ನ ಹೊಟ್ಟೆಯಿಂದ ಹುಟ್ಟಿದ ಹೆಣ್ಣು ಮಗಳಿಗೆ ಆ ಅಧಿಕಾರ ಕೊಟ್ಟು ಹೋಗುತ್ತಾಳೆ. ಎಂದರೆ ಮೃತರ ಕರ್ಮಗಳ ಸಮಯದಲ್ಲಿ ಹೆಣ ಹೂಳುವ ಮುಂಚೆ ಮೃತಳ ಹಸ್ತವನ್ನು ಮಗಳ ತಲೆಯ ಮೇಲೆ ಇಡಲಾಗುತ್ತದೆ. ಮೃತಳಾದ ವ್ಯಕ್ತಿಗೆ ಮೂರು ಕೂಳು ಇಡುವುದು ಅಥವಾ ಶ್ರಾದ್ಧ ಕರ್ಮ ಮಾಡುವುದು ಇವರಲ್ಲಿ ರೂಢಿಯಲ್ಲಿದೆ.

ತೀರ ಇತ್ತೀಚೆಗೆ ಇವರಲ್ಲಿ ಪ್ರತಿಯೊಂದು ಹೆಣ್ಣಿಗೂ ತಮ್ಮ ಜಾತಿಯಲ್ಲಿಯೇ ಗಂಡು ಗೊತ್ತುಮಾಡಿ ಲಗ್ನಮಾಡಿ ಕೊಡುವ ರೂಢಿ ಪ್ರಬಲಿಸುತ್ತದೆ. ಅಂಥ ಪ್ರಸಂಗದಲ್ಲಿ ಇವರಲ್ಲಿ ಬೆಡಗು ನೋಡುವ ಸಂಪ್ರದಾಯವಿದೆಯಂತೆ. ಕೂಂಚಿ-ಕೊಟ್ರು ಮತ್ತು ಗೊಲ್ಲೆಕೋರರು ಎಂಬ ಎರಡು ಬೆಡಗುಗಳ ಹೆಸರು ಮಾತ್ರ ನಮಗೆ ತಿಳಿದು ಬಂದವು. ಇನ್ನೂ ಹೆಚ್ಚಿನ ಬೆಡಗುಗಳು ಇವರಲ್ಲಿ ಇರುವ ಸಾಧ್ಯತೆಯಿದೆ. ತಮ್ಮಲ್ಲಿ ಬೆಡಗುಗಳೇ ಇಲ್ಲವೆನ್ನುವ ರೀತಿಯಲ್ಲಿ ಹೇಳುತ್ತಾರೆ.

ಒಟ್ಟಿನಲ್ಲಿ ಇವರ ಹೆಣ್ಣುಮಕ್ಕಳ ಲಗ್ನದಲ್ಲಿ ನಾಲ್ಕು ಹಂತದ ಬದಲಾವಣೆಗಳನ್ನು ಗುರುತಿಸಬಹುದು. ಸೋದರಮಾವನ ಜತೆ ಲಗ್ನ ಮಾಡುವುದು ಒಂದನೆಯದು. ಹನುಮಂತದೇವರ ಜತೆ ಮಾಡುವುದು ಎರಡನೆಯದು. ಸೋದರಮಾವ ಮತ್ತು ಹನುಮಂತದೇವರಿಗೆ ಸಂಯುಕ್ತವಾಗಿ ಮಾಡುವುದು ಮೂರನೆಯದು. ಈ ಮೂರನ್ನು ಬಿಟ್ಟು ಸಭ್ಯ ಜನಾಂಗಗಳಂತೆ ವರನೋಡಿ ಹೆಣ್ಣು ಕೊಡುವುದು ನಾಲ್ಕನೆಯದು.

ಇವರಲ್ಲಿ ಹನುಮಂತ ದೇವರಿಗೆ ನಡೆದುಕೊಳ್ಳುವುದು ವಿಶೇಷ. ಪಾತರದ ಉದ್ಯೋಗವನ್ನು ಮಾಡದಿರುವ ಮನೆತನಗಳೂ ಹನುಮಂತದೇವರನ್ನು ವಿಶೇಷ ಭಕ್ತಿಯಿಂದ ಕಾಣುತ್ತಾರೆ. ಬೆಳಗಾಂವಿ ಜಿಲ್ಹೆಯಲ್ಲಿ ಈ ಸಮಾಜದ ಬಹಳಷ್ಟು ಮನೆತನಗಳಿವೆ. ಗೋಕಾಕ ತಾಲೂಕಿನ ಕಲ್ಲೊಳ್ಳಿಯ ಹನುಮಂತ ದೇವರು ಕುಲದೇವರಾಗಿದ್ದಾನೆ. ಈ ಹನುಮಂತ ದೇವರ ತರುವಾಯದ ಸ್ಥಾನ ಸವದತ್ತಿಯ ಎಲ್ಲಮ್ಮನಿಗೆ ಸಲ್ಲುತ್ತದೆ. ಬಹಳ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಕನಿಷ್ಟ ವರ್ಷಕ್ಕೆ ಒಂದು ಸಲವಾದರೂ ಎಲ್ಲಮ್ಮನ ಗುಡ್ಡಕ್ಕೆ ಹೋಗಿ ಹಡ್ಡಲಿಗೆ ತುಂಬಿಸಿ ಬೇರೆ ಹರಕೆಯೇನಾದರೂ ಇದ್ದರೆ ಅದನ್ನು ಪೂರೈಸಿ ಬರುತ್ತಾರೆ. ಈ ಇಬ್ಬರೂ ದೇವರಲ್ಲದೇ ಸ್ಥಾನಿಕವಾಗಿ ಪ್ರಸಿದ್ಧವಿರುವ ದುರ್ಗವ್ವ, ಕರೆವ್ವ, ಲಗಮವ್ವ ಅಥವಾ ಲಕ್ಷ್ಮಿ ಮುಂತಾದ ದೇವರುಗಳನ್ನು ಮನ್ನಿಸುತ್ತಾರೆ. ಕೆಲವು ಮನೆತನಗಳವರು ಲಗಮವ್ವ ಅಥವಾ ಲಕ್ಷ್ಮಿ ಮುಂತಾದ ದೇವರುಗಳನ್ನು ಮನ್ನಿಸುತ್ತಾರೆ. ಕೆಲವು ಮನೆತನಗಳವರು ಲಗಮವ್ವ ಅಥವಾ ಲಕ್ಷ್ಮಿ ಮುಂತಾದ ದೇವರುಗಳನ್ನು ಮನ್ನಿಸುತ್ತಾರೆ. ಇದಲ್ಲದೆ ಬಡಕುಂದ್ರಿಯ ಹೊಳೆವ್ವನಿಗೆ ಹೆಚ್ಚಿನ ಜನರು ನಡೆದುಕೊಳ್ಳುವುದು ಉಂಟು. ಬಡಕುಂದ್ರಿಯ ಹೊಳೆವ್ವ, ಕೊಣ್ಣೂರಿನ ಕೆಂಪಯ್ಯಸ್ವಾಮಿ, ತವಗದ ಬಾಳಯ್ಯನವರು, ಕುರಣಗಿಯ ಗಂಗಬಾಯಿ ಇವರಿಗೂ ವಿಶೇಷ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಈಗಲೂ ತಮ್ಮ ಭಕ್ತಿಯ ದ್ಯೋತಕವಾಗಿ ಈ ಸ್ಥಳಗಳಲ್ಲಿ ನಡೆಯುವ ಜಾತ್ರೆಗಳಿಗೆ ಹೋಗಿ ಒಂದೊಂದು ಆಟವನ್ನು ಆಡಿಬರುವ ಸಂಪ್ರದಾಯವನ್ನಿಟ್ಟುಕೊಂಡಿದ್ದಾರೆ. ಪ್ರತಿಸಲ ಆಟ ಪ್ರಾರಂಭಗೊಳಿಸುವ ಮುನ್ನ ಗಣಪತಿಯ ಜೊತೆಗೆ ಅಂಕಲಗಿಯ ಅಡಿವೆಪ್ಪ, ಕಾದ್ರೊಳ್ಳಿಯ ಅದ್ರಶ್ಯಪ ಇವರ ಫೋಟೋ ಪೂಜೆ ಮಾಡಿಯೇ ಅಟ್ಟ ಹತ್ತುತ್ತಾರಂತೆ.

ಈಗ ಇವರು ಆಡುವ ಆಟಗಳಲ್ಲಿ ಶ್ರೀ ಕೃಷ್ಣ ಪಾರಿಜಾತ, ರಾಧಾನಾಟ ಮತ್ತು ಸಂಗ್ಯಾಬಾಳ್ಯಾ ಇವು ಪ್ರಮುಖವಾದು. ಇವುಗಳಲ್ಲದೆ ರೂಪಸೇನ, ಧರ್ಮದೇವತೆ, ಬಲವಂತ-ಬಸವಂತ, ಕಡ್ಲೀಮಟ್ಟಿ ಕಾಶೀಬಾಯಿ ಮುಂತಾದ ಹಳೆಗಾಲದ ಪ್ರಸಿದ್ಧ ಆಟಗಳನ್ನು ಆಡುತ್ತಾರೆ. ಕೆಲವೊಮ್ಮೆ ವಿಶೇಷ ಆಹ್ವಾನ ಬಂದರೆ ದೊಡ್ಡಾಟದಲ್ಲಿನ ಸ್ತ್ರೀ ಪಾತ್ರಗಳಿಗೂ ನಾಟಕದಲ್ಲಿನ ಪಾತ್ರಗಳಿಗೂ ಹೋಗುವದುಂಟು. ಆದರೆ ಇವನ್ನು ಇವರು ಅಷ್ಟಾಗಿ ಮೆಚ್ಚುವದಿಲ್ಲ.

ಈಗ ಅಲತಿಗೆಯ ಯಮನವ್ವ, ಪ್ರೇಮಲಾ, ಶಾಂತವ್ವ, ಕಮಲವ್ವ ಮತ್ತು ಸಕ್ರೆವ್ವ ಹಾಗೂ ನಾವಲಗಟ್ಟಿಯ ಶಾಂತವ್ವ, ಲಲಿತಾ, ಕಮಲವ್ವ ಇವರು ಪ್ರಸಿದ್ಧರಾಗಿದ್ದಾರೆ ‘ಶ್ರೀ ಲಕ್ಷ್ಮಿ ನಾಟಕ ಮಂಡಳಿ’ ಎಂಬ ಹೆಸರಿನಲ್ಲಿ ಹೆಣ್ಣು ಮಕ್ಕಳು ಸಂಗ್ಯಾ-ಬಾಳ್ಯಾ ಮುಂತಾದ ಸಟ್ಟಾಟ – ನಾಟಕಗಳಲ್ಲಿ ಎಲ್ಲ ಪಾತ್ರಗಳನ್ನೂ ನಿರ್ವಹಿಸುವವರಾಗಿದ್ದಾರೆ.

ಈಗ ಇವರ ಮಾತೃಭಾಷೆ ಕನ್ನಡವೇ ಆಗಿರುವದು ಎಲ್ಲೆಡೆ ಕಂಡುಬರುತ್ತಿದೆ. ಆದರೆ ಕನ್ನಡವು ಇವರ ಮೂಲದ ಭಾಷೆ ಆಗಿಲಾರದೆಂಬುದು ನನ್ನ ಗುಮಾನಿ. ಅವರ ಮೂಲದ ಭಾಷೆ ತೆಲಗು ಆಗಿರುವ ಸಾಧ್ಯತೆಯಿದೆ. ಆದರೆ ಅದನ್ನು ಖಚಿತವಾಗಿ ಹೇಳುವುದು ಕಷ್ಟ. ಇಂಡೋ ಆರ್ಯನ್ ಮೂಲದ್ದಾಗಿರಬಹುದೆಂಬುದು. ಈ ಊಹೆಯನ್ನು ಸಧ್ಯದಲ್ಲಿ ಇಟ್ಟುಕೊಳ್ಳಬೇಕಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯಾಗಬೇಕು. ಇವರು ಈಗ ವ್ಯಾಪಿಸಿರುವ ಪ್ರದೇಶವನ್ನು ನೋಡಿದರೆ ಇವರು ಮೂಲತಃ ದ್ರಾವಿಡರು ಅಹುದೋ ಅಲ್ಲವೊ ಹೇಳುವುದು ಕಷ್ಟ.

ಈಗ ತಿಳಿದಿರುವಂತೆ ಬೆಳಗಾಂವಿ ಸಮೀಪದ ಅಲತಗಿಯಲ್ಲಿ ಇವರ ಸುಮಾರು ನೂರು ಮನೆತನಗಳು ಇದ್ದವೆಂದು ಗೊತ್ತಾಗುತ್ತದೆ. ಬೈಲಹೊಂಗಲ ತಾಲೂಕಿನ ನಾವಲಗಟ್ಟಿಯಲ್ಲಿ ಐವತ್ತರಷ್ಟು ಮನೆತನಗಳಿವೆ. ಇವೆರಡು ಊರುಗಳ ಜನ ಮೂಲತಃ ಬೆಳಗಾಂವ ತಾಲೂಕಿನ ಚೆನ್ನ ಹೊಸರು ಗ್ರಾಮದವರು ಎಂದು ತಿಳಿದುಬರುತ್ತದೆ. ಇವಲ್ಲದೆ ಖಾನಾಪುರ ತಾಲೂಕಿನ ಮುಗಳಿಹಾಳ, ಗೋಕಾಕ ತಾಲೂಕಿನ ಕೊಣ್ಣೂರು ಮತ್ತು ಗೋಕಾಕ, ಹುಕ್ಕೇರಿ ತಾಲೂಕಿನ ಯರಗಟ್ಟಿ, ಯುಮಕನ ಮರಡಿ, ರಾಯಬಾಗ ತಾಲೂಕಿನ ಕಡಕಬಾಂವಿ, ಭಂಡವಾಡ ಮತ್ತು ದ್ಯಾಪರಟ್ಟಿ, ನಿಪ್ಪಾಣಿ ಸಮೀಪದ ಎಕ್ಸಂಬಗೆ (ವಿಜಾಪೂರ) ಹಂಸನೂರ, ಮಹಾಲಿಂಗ ಪೂರ, ಸಾಂಗ್ಲಿ, ಮಿರಜ, ಪುಣೆ ಮತ್ತು ಮುಂಬೈಗಳಲ್ಲಿ ಇವರ ಜನವಸತಿ ಇರುವುದು ತಿಳಿದುಬರುತ್ತದೆ. ಇದಲ್ಲದೆ ಧಾರವಾಡ, ಹುಬ್ಬಳ್ಳಿ ದಾಂಡೇಲಿ, ಬಾಗಲಕೋಟಿ ಮುಂತಾದ ಊರುಗಳಲ್ಲಿಯೂ ಇವರ ಕುಟುಂಬಗಳು ನೆಲೆಸಿವೆ. ಒಟ್ಟಿನಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರಗಳಲ್ಲಿ ಸದ್ಯ ಇವರು ಚದುರಿದಂತೆ ನೆಲೆಸಿದ್ದಾರೆಂದು ಹೇಳಬಹುದು.

ಗಂಟಿಚೋಟಿ ಅಥವಾ ಪಾತ್ರೋಟಿ ಎಂಬ ಶಬ್ದಗಳು ಕನ್ನಡ ಅಥವಾ ಸಂಸ್ಕೃತದ ಯಾವ ಕೋಶಗಳಲ್ಲಿಯೂ ಕಂಡು ಬರುವುದಿಲ್ಲ. ಮುಂಬೈ ಕರ್ನಾಟಕದ ಗೆಝೆಟಿಯರನ ಕನ್ನಡ ಆವೃತ್ತಿಯಲ್ಲಿ ಗಂಟಿಚೇಡಿ ಎಂಬ ಜಾತಿಯನ್ನು ನಮೂದಿಸಿದೆ. ಅದೇ ರೀತಿ ಶಿಶುನಾಳ ಷರೀಪ ಸಾಹೇಬರ ತತ್ವ ಪದವೊಂದರಲ್ಲಿ ಈ ಶಬ್ದ ಪ್ರಯೋಗವಿದೆ. ಇದನ್ನೆ ಕ.ಸಾ.ಪ.ದ.ಕನ್ನಡ-ಕನ್ನಡ ಕೋಶ ಉಲ್ಲೇಖಿಸಿದೆ. ಇತರತ್ರ ಎಲ್ಲಿಯೂ ಈ ಶಬ್ದ ಕಂಡುಬರುವುದಿಲ್ಲ. ವೋಲ್ಸವರ್ಥನ ಮರಾಠಿ ಕೋಶದಲ್ಲಿ ಗಠ್ಠೀಚೋರ ಮತ್ತು ಗಠ್ಠೀಜೋಡ ಎಂಬ ಶಬ್ದಗಳನ್ನು ತೋರಿಸಿದ್ದು ಇವು ಅರಬ್ಬೀ ಮೂಲದ ಹಿಂದೂಸ್ತಾನಿ ಪ್ರಯೋಗಗಳೆಂದೂ ಕೊಂಕಣ ಪ್ರದೇಶದಲ್ಲಿ ಇವು ಅರಬ್ಬೀ ಮೂಲದ ಹಿಂದೂಸ್ತಾನಿ ಪ್ರಯೋಗಗಳೆಂದೂ ಕೊಂಕಣ ಪ್ರದೇಶದಲ್ಲಿ ಇವು ಜನರ ಆಡುಭಾಷೆಯಲ್ಲಿವೆಯೆಂದೂ ಹೇಳಲಾಗಿದೆ. ಇವುಗಳನ್ನು ಪರೀಶೀಲಿಸಿದರೆ ವಸ್ತು ಒಡವೆಗಳನ್ನು ಚಾಣಾಕ್ಷತನದಿಂದ ಕದ್ದು ಓಡಿ ಹೋಗುವವ ಎಂದು. ಎರಡನೆಯದರ ಅರ್ಥ ಜಿಪುಣ ‘ಹಣ ಸಂಗ್ರಹಿಸಿ ಮುಚ್ಚಿಡುವವ’ ಎಂದು. ಎಂದರೆ ಇದರ ನಿಷ್ಪತ್ತಿಯನ್ನು ಹೇಳುವುದು ತುಂಬಾ ಕಠಿಣ. ಪಾತ್ರೋಟಿ ಅಥವಾ ಪಾತ್ರೋಟ ಎಂಬ ಶಬ್ದವು ಎಲ್ಲಿಯೂ ಉಲ್ಲೇಖಗೊಂಡಿಲ್ಲ. ಇದರ ಉತ್ಪತ್ತಿ ಅಷ್ಟೇನೂ ತೊಡಕಿನದಾಗಿಲ್ಲ. ಸಂಸ್ಕೃತದ ಪಾತ್ರ ಎಂಬುದೇ ಕನ್ನಡದಲ್ಲಿ ಪಾತರ ಎಂದಾಗುತ್ತದೆ. ಇದಕ್ಕೆ ಪಾತರದ ಉದ್ಯೋಗದ ಮಾಡುವವರು ಎಂಬ ಅರ್ಥದ ವಟಿ, ವಾಟಿ ಎಂಬ ಪ್ರತ್ಯಯ ಸೇರುವದರಿಂದ ಪಾತರವಾಟಿ ಅಥವಾ ಪಾತ್ರೋಟಿ, ಪಾತ್ರೋಟ ಎಂಬ ರೂಪಗಳು ಸಿದ್ಧಿಸಬಹುದಾಗಿದೆ. ಈಗ ಇವರ ಮನೆತನದ ಅಡ್ಡ ಹೆಸರುಗಳಲ್ಲಿ ಇವೇ ಹೆಚ್ಚಾಗಿ ಕಂಡು ಬರುತ್ತವೆ.

ಇವರ ಪಾರಂಪರಿಕ ಉದ್ಯೋಗವಾದ ಪಾತರದ ಕಾರ್ಯ ಬಹಳ ತೀವ್ರವಾಗಿ ನಶಿಸುತ್ತಿದೆ. ಹೆಣ್ಣು ಮಕ್ಕಳನ್ನು ಲಗ್ನ ಮಾಡಿಕೊಡುತ್ತಿರುವುದೇ ಹೆಚ್ಚಾಗಿ ಕಂಡು ಬರುತ್ತದೆ. ಗಿರಣಿ ಮತ್ತು ಕಾರ್ಖಾನೆಗಳಲ್ಲಿ ಉದ್ಯೋಗ ದೊರಕಿಸಿಕೊಂಡು ತಮ್ಮ ಜೀವನದಲ್ಲಿ ತೀವ್ರತರ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಹಳಷ್ಟು ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಹಲಕೆಲವರು ಸರಕಾರಿ ನೌಕರಿಗಳಲ್ಲಿಯೂ ಕೂಡ ಸೇರಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇವರು ಸುಧಾರಿಸುವ ಲಕ್ಷಣಗಳಿವೆ.

ಪಾತ್ರೋಟಿ ಅಥವಾ ಗಂಟಿಚಾವಡಿಯವರನ್ನು ಕುರಿತು ಈ ಲೇಖನವನ್ನು ಮುಗಿಸುವ ಮುನ್ನ ಇನ್ನೊಂದು ಅಂಶವನ್ನು ಸೂಚಿಸಬೇಕೆಂದು ತೋರುತ್ತದೆ. ಈ ಜನರ ಮೂಲದ ಜಾತಿ ಯಾವುದು ಎಂದು ನಾವು ನಿರ್ಧರಿಸಿ ಹೇಳುಲಾಗದ ಸ್ಥಿತಿಯಲ್ಲಿ ಇಂದು ಇದ್ದೇವೆ. ಇಂಥ ಅನಿಶ್ಚಿತ ಸ್ಥಿತಿ ನಮ್ಮಲ್ಲಿರುವ ಕೆಲವಾದರೂ ಬುಡಕಟ್ಟುಗಳಲ್ಲಿ ಈಗಲೂ ಇದೆ ಎಂಬುದು ಜಾತಿವ್ಯವಸ್ಥೆಗೆ ಪ್ರಖ್ಯಾತವಾಗಿರುವ ಭಾರತದಲ್ಲಿ ತುಂಬ ಸೋಜಿಗದ ಸಂಗತಿ.