ಕನ್ನಡದ ಪ್ರಥಮ ಕವಿಚಕ್ರವರ್ತಿ ಪೊನ್ನನ “ಪೊನ್ನನ ಭುವನೈಕರಾಮಾಭ್ಯುದಯ”ವನ್ನು ಕಳೆದುಕೊಂಡ ನಮಗೆ ಕಾವ್ಯಾಲೋಕನ, ಶಬ್ದಮಣಿದರ್ಪಣಗಳಲ್ಲಿ ತೋರಿ ಬರುವ ಅದರ ಒಂದೆರಡು ಇಡಿ ಪದ್ಯ ಹಾಗೂ ಕೆಲವು ಪದ್ಯಖಂಡಗಳು ಮಾತ್ರ ನಮ್ಮ ಕೈಯಲ್ಲಿ ಉಳಿದಿವೆ. ನಮ್ಮ ಹಿರಿಯರ ಮಹತ್ವದ ಕಾಗದಪತ್ರವೊಂದರ ಕೆಲವು ತುಣುಕುಗಳನ್ನು ಮುಂದಿಟ್ಟುಕೊಂಡು ಒಂದು ದೊಡ್ಡ ಆಸ್ತಿಯ ವಿವರಗಳನ್ನು ಕಲ್ಪಿಸಿಕೊಳ್ಳುವವರಂತೆ ನಮ್ಮ ಇಂದಿನ ಸ್ಥಿತಿಯಾಗಿದೆ.

ಭುವನೈಕರಾಮಾ ಭ್ಯುದಯ ಕುರಿತ ಹಲವು ಪ್ರಶ್ನೆಗಳಲ್ಲಿ ಕಥಾನಾಯಕ, ಕಾವ್ಯರೀತಿ, ಮತ್ತು ವಸ್ತುವನ್ನು ಕುರಿತವು ಪ್ರಮುಖವೆನಿಸಿವೆ.

ಅದರ ನಾಯಕ ಬನವಾಸಿಯ ಶಂಕರಗಂಡನೆಂದು ಡಾ. ಡಿ.ಎಲ್‌. ನರಸಿಂಹಾಚಾರ್ಯರು ಅಭಿಪ್ರಾಯಪಟ್ಟರು. ತರುವಾಯ ಡಾ. ಬೇಂದ್ರೆಯವರು ಮೇಲಿನ ಅಭಿಪ್ರಾಯವನ್ನು ಅಲ್ಲಗಳೆದು ರಾಷ್ಟ್ರಕೂಟ ಮೂರನೆಯ ಕೃಷ್ಣನು ಅದರ ನಾಯಕನಿರಬೇಕೆಂಬ ಊಹೆ ಮಾಡಿದರು.[1] ಕ್ರಿ.ಶ. ೯೩೩ರಲ್ಲಿ ರಾಷ್ಟ್ರಕೂಟ ನಾಲ್ಕನೆಯ ಗೋವಿಂದ ಅಥವಾ ಗೊಜ್ಜಿಗನನ್ನು ಪಟ್ಟದಿಂದ ತಳ್ಳಿ ತನ್ನ ಸೋದರ ಮಾವನಾದ ಅಮೋಘವರ್ಷ ಬದ್ದೆಗನನ್ನು ಪಟ್ಟಕ್ಕೆ ಕೂಡ್ರಿಸಿದ ಎರಡನೆಯ ಅರಿಕೇಸರಿಯ ಸಾಹಸಸಂದರ್ಭವನ್ನು ಪಂಪನು ತನ್ನ ವಿಕ್ರಮಾರ್ಜುನವಿಜಯಕ್ಕೆ ಹಿನ್ನೆಲೆಯಾಗಿಟ್ಟುಕೊಂಡಿರುವನು. ಅದೇ ರೀತಿ ಮೂರನೆಯ ಕೃಷ್ಣನು ತಕ್ಕೋಲ ಕಾಳಗದಲ್ಲಿ ಚೋಳರಾಜಾದಿತ್ಯನನ್ನು ಕೊಂದ ಸಂದರ್ಭವನ್ನು ಪೊನ್ನನ್ನು ಹಿನ್ನೆಲೆಯಾಗಿಟ್ಟುಕೊಂಡು ತನ್ನ ಭುವನೈಕರಾಮಾಭ್ಯುದಯವನ್ನು ರಚಿಸಿರಬೇಕೆಂಬ ಸಂಗತಿಯ ಊಹಿಸಲ್ಪಟ್ಟಿತು. ಇಲ್ಲಿ ಪ್ರಥಮವಾಗಿ ಗಮನಿಸತಕ್ಕ ಸಂಗತಿಯೆಂದರೆ ಚೋಳ ರಾಜಾದಿತ್ಯನನ್ನು ಕೊಂದವನು ರಾಷ್ಟ್ರಕೂಟ ಮೂರನೆಯ ಕೃಷ್ಣನಲ್ಲ, ಗಂಗಬೂತುಗನು. “ಕನ್ನರ ದೇವಂ ಚೋಳನಂ ಕಾದುವಂದು ಬೂತುಗಂ ರಾಜಾದಿತ್ಯನಂ ಬಿಸುಗೆಯೆ ಕಳನಾಗಿ ಸುರಿಱೆದು ಕಾದಿಕೊಂದು” ಎಂದು ಆತಕೂರ ಶಾಸನದ ಸ್ಪಷ್ಟೋಕ್ತಿಯಿರುವಾಗ ರಾಜಾದಿತ್ಯನನ್ನು ಕನ್ನರನು ಕೊಂದನೆನ್ನುವುದು ಉಚಿತವಲ್ಲ. ಆತಕೂರ ಶಾಸನಕ್ಕೆ ವಸ್ತುವಾದವನು, ಕದನೈಕಶೂದ್ರಕ, ಸಗರ ತ್ರಿಣೇತ್ರ ಎಂಬ ಬಿರುದುಗಳುಳ್ಳ ಮಣಲರತನಾದುದರಿಂದ ಶಾಸನದಲ್ಲಿ ಆತನ ಸ್ತುತಿಯು ವಿಶೇಷವಾಗಿ ಬರುವುದು ಸ್ವಾಭಾವಿಕವಾಗಿದೆ. ಆದುದರಿಂದ ಪ್ರಸ್ತುತ ಶಾಸನದಲ್ಲಿಯ “ಉಱದಿದಿರಾನ್ತ ಚೋಱಚತುರಂಗಬಲಂಗಳನಟ್ಟಿ…………… ಮೆಚ್ಚದೊರಾರ್‌ಸಗರತ್ರಿಣೇತ್ರನಂ” ಮತ್ತು “ನರಪತಿ ಬೆನ್ನೊಳಿೞ್ದೊದನ್……..ಬಿರಿಯೇಪಾಯಿದಂ ಕದನೈಕಶೂದ್ರಕಂ” ಎಂಬ ಸ್ತುತಿರೂಪದ ಈ ಎರಡು ಪದ್ಯಗಳನ್ನು ಬೇರೆಯವರಿಗೆ ಆರೋಪಿಸುವುದು ಯೋಗ್ಯವಲ್ಲ. ಇಷ್ಟಾದರೂ ಚಕ್ರವರ್ತಿಯೆಂಬ ನೆವದಿಂದ ತಕ್ಕೋಲವಿಜಯವನ್ನು ರಾಷ್ಟ್ರಕೂಟ ಕನ್ನರನಿಗೆ ಒಟ್ಟಿನಲ್ಲಿ ಆರೋಪಿಸಿ ಒಂದು ಕಾವ್ಯವನ್ನು ಕವಿಯೊಬ್ಬನು ರಚಿಸಿದ್ದರೆ ಅದು ತೀರ ಅವಾಸ್ತವವೆನ್ನುವಂತಿಲ್ಲ. ಆದುದರಿಂದ ಈ ಕೃತಿನಾಯಕನ ವಿಷಯದಲ್ಲಿ ದ್ವಂದ್ವಭಾವ ಮೂಡುತ್ತದೆ.

ಶಂಕರಗಂಡನು ಕಾವ್ಯನಾಯಕನಾಗಿರಬೇಕೆಂದು ಶ್ರೀ ಡಿ. ಎಲ್. ನರಸಿಂಹಾಚಾರ್ಯರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ನಿರಾಕರಿಸಿದ ಶ್ರೀ ಬೇಂದ್ರೆಯವರು “ಚಕ್ರವರ್ತಿಯಿಂದ ಕವಿಚಕ್ರವರ್ತಿಯೆಂದು ಬಿರುದು ಪಡೆಯ ಬೇಕಾದರೆ ಅವನನ್ನೆ ಕುರಿತು ಕಾವ್ಯವನ್ನು ಬರೆದಿರಬೇಕು; ಅವನ ಸಾಮಂತನನ್ನು ಕುರಿತಲ್ಲ” ಎಂಬ ತರ್ಕವನ್ನು ಮುಂದೊಡ್ಡಿದ್ದಾರೆ. ಆದರೆ ಇದೊಂದು ಸರ್ವ ಸಾಮಾನ್ಯವಾದ ನಿಯಮವೆಂದು ಹೇಳಲು ಆಧಾರವಿಲ್ಲ. ಪೊನ್ನನಿಗೆ ಭುವನೈಕರಾಮಾಭ್ಯುದಯ ಬರೆದ ಕಾರಣ ಕವಿಚಕ್ರವರ್ತಿ ಎಂಬ ಬಿರುದು ದೊರೆತಿದೆಯೆಂದು ಹೇಳುವುದಕ್ಕೆ ಇಲ್ಲಿಯವರೆಗೆ ನಮಗೆ ಯಾವ ಪ್ರಮಾಣವೂ ದೊರೆತಿಲ್ಲ. ಅಲ್ಲದೆ ಚಕ್ರವರ್ತಿಯಿಂದ ಕವಿಚಕ್ರವರ್ತಿಯೆಂದು ಬಿರುದು ಪಡೆಯಲು ಆತನನ್ನು ಕುರಿತು ಒಂದು ಕಾವ್ಯವನ್ನು ಬರೆಯಲೇಬೇಕೆಂಬ ನಿಯಮವೂ ಇಲ್ಲ. ಈ ಮಾತಿಗೆ ಉದಾಹರಣೆಯಾಗಿ ಜನ್ನನನ್ನು ಹೆಸರಿಸಬಹುದು.[2] ಕವಿಚಕ್ರವರ್ತಿಯಾದ ಜನ್ನನ್ನು ಬಲ್ಲಾಳನನ್ನು ಕುರಿತು ಕಾವ್ಯವನ್ನು ಬರೆದಿಲ್ಲ. ಆತನು ಬರೆದುದು ಜೈನಧರ್ಮಕ್ಕೆ ಸಂಬಂಧಪಟ್ಟ ಎರಡು ಮತೀಯ ಕಾವ್ಯಗಳನ್ನು. ಜನ್ನನು ಬಲ್ಲಾಳನನ್ನು ಕುರಿತು ಬೇರೆ ಕಾವ್ಯ ಬರೆದಿರಬಹುದೆಂದು ತರ್ಕಿಸುವುದು ಈಗಿನ ಸ್ಥಿತಿಯಲ್ಲಿ ದೂರದ ಮಾತಾಗುತ್ತದೆ.[3]

ಶಂಕರಗಂಡನಿಗೆ ‘ಭುವನೈಕರಾಮ’ನೆಂಬ ಬಿರುದು ಇರುವ ಬಗೆಗೆ ಸಂಶಯಾತೀತವಾದ ಶಾಸನಾಧಾರವಿದೆ.[4] ಈ ರೀತಿ ೩ನೆಯ ಕೃಷ್ಣನಿಗೆ ಇತ್ತೆಂದು ಹೇಳುವ ಶಾಸನಗಳು ಈವರೆಗೆ ಹೊರಬಂದಿಲ್ಲ. ಈಚೆಗೆ ಭುವನೈಕರಾಮನೆಂಬ ಬಿರುದು ೩ನೆಯ ಕೃಷ್ಣನಿಗೆ ಇದ್ದುದಾಗಿ ಪುಷ್ಪದಂತನ ಮಹಾಪುರಾಣದಿಂದ ತಿಳಿದುಬಂದಿದೆ.[5] “ಭುವಣೇಕ್ಕರಾಮುರಾಯಾಹಿರಾವು…………” ಎಂದರೆ ಭುವನೈಕರಾಮ ರಾಜಾಧಿರಾಜ ಎಂದು ಸ್ಪಷ್ಟವಾಗಿ ಪುಷ್ಪದಂತನು ೩ನೇ ಕೃಷ್ಣನನ್ನು ಕರೆದಿದ್ದಾನೆ. ಅಂದರೆ ಭುವನೈಕರಾಮನೆಂಬ ಬಿರುದು ಚಕ್ರವರ್ತಿಗೂ ಆತನ ಸಾಮಂತನಿಗೂ ಏಕಕಾಲದಲ್ಲಿ ಇದ್ದಂತಾಯಿತು. ಇನ್ನೊಂದು ಸಂಗತಿಯೆಂದರೆ ಚೋಳರಾಜಾದಿತ್ಯನ ಶಿರವನ್ನು ೩ನೆಯ ಕೃಷ್ಣನು ಕತ್ತರಿಸಿದನೆಯ ಅದೇ ಪದ್ಯದಲ್ಲಿ ಪುಷ್ಪದಂತನು ಹೇಳುತ್ತಾನೆ. ಈ ಸಂಗತಿ ಸತ್ಯ ಘಟನೆಯ ವಿಪರ್ಯಾಸವೆಂಬುದು ಆತಕೂರ ಶಾಸನದಿಂದ ಸ್ಪಷ್ಟವಾಗುತ್ತದೆ. ಹಾಗಾದರೆ ಭುವನೈಕರಾಮನೆಂಬ ಬಿರುದು ಇದ್ದುದು ಯಾರಿಗೆ? ಶಂಕರಗಂಡನಿಗೊ? ೩ನೆಯ ಕೃಷ್ಣನಿಗೊ? ಇದು ಬಹು ಜಟಿಲವಾದ ಪ್ರಶ್ನೆ. ಅದು ಇಬ್ಬರಿಗೂ ಇದ್ದೆ ಬಗ್ಗೆ ನಿಖರವಾದ ಆಧಾರಗಳು ದೊರೆತಿರುವದರಿಂದ ನಿರ್ಣಯವು ಸುಲಭವಾಗುತ್ತಿಲ್ಲ.

ಶಬ್ದಮಣಿದರ್ಪಣ ಕಾವ್ಯಾಲೋಕನಗಳಲ್ಲಿ ಭುವನೈಕರಾಮನೆಂಬ ಅಂಕಿತವುಳ್ಳ ಪದ್ಯ ಹಾಗೂ ಪದ್ಯಖಂಡಗಳು ಒಟ್ಟು ನಾಲ್ಕು.[6] ಅವುಗಳಲ್ಲಿ ಶಬ್ದಮಣಿದರ್ಪಣದ ೧೬೭ನೆಯ ಸೂತ್ರಕ್ಕೆ ಉದಾಹರಣೆಯಾಗಿರುವ ಪದ್ಯವು ಹೀಗಿದೆ—

ಉದಯಾಸ್ತೋನ್ನತ ಶೈಲಸೇತು ಹಿಮವತ್ಕುತ್ಕೀಲ ಪರ್ಯಂತ ಸಂ
ಪದೆಯಂ ವಾರ್ಧಿರತ್ತರಂಗನಿನದತ್ಕಾಂಚೀಕಳಾಪಾಂಚಿತಾ
ಸ್ಪದೆಯಂ ಸಾಧಿಸಿ ಕಬ್ಬಿಗಂಗೆ ನೆಲನಂ ನಿರ್ವ್ಯಾಜದಿಂದಂ ನಿಮಿ
ರ್ಚಿದ ಗೆಲ್ಲಂ ಭುವನೈಕರಾಮ ಮಹಿಪಂಗಕ್ಕುಂ ಪೆಱರ್ಗಕ್ಕುಮೇ
||

ಇದೆ ಪದ್ಯವು ಕಾವ್ಯಾಲೋಕನದ ೧೭೬ನೆಯ ಉದಾಹರಣಪದ್ಯವಾಗಿದೆ. ‘ಸಮಸ್ತ ಭರತಖಂಡವನ್ನು ಸಾಧಿಸಿ ಕಬ್ಬಿಗನಿಗೆ ಒಪ್ಪಿಸಿದ ಗೆಲವು ಭುವನೈಕ ರಾಮನೃಪನ ಹೊರತು ಬೇರೆಯವರಿಗಲ್ಲ’ ಎಂದು ಅದರ ಅಭಿಪ್ರಾಯವನ್ನು ಕ್ರೋಢೀಕರಿಸಬಹುದು. [7]

ಅಂದರೆ ಭುವನೈಕರಾಮನು ಯುದ್ಧದಲ್ಲಿ ಗೆದ್ದ ಸಮಸ್ತ ವಸುಂಧರೆಯನ್ನು “ಕಬ್ಬಿಗ”ನಿಗೆ ಕೊಟ್ಟನೆಂದು ಅರ್ಥವೆ? ಇದು ಆಭಾಸ; ಭುವನೈಕರಾಮನು ಅಖಂಡ ಭರತಖಂಡವನ್ನು ಗೆದ್ದು ತರುವಾಯ ಕವಿಯೊಬ್ಬನಿಗೆ ಕೆಲವು ಭೂಮಿಯನ್ನು ಉಂಬಳಿಯಾಗಿ ಕೊಟ್ಟನೆಂದು ಅರ್ಥವೇ? ಹೀಗೆ ಅರ್ಥ ಹೊರಡಲು ಅಲ್ಲಿ ಅವಕಾಶವಿಲ್ಲ. ಈ ಪದ್ಯಕ್ಕೆ “ಉದಯಾಸ್ತೋನ್ನತ ಶೈಲಸೇತು ಹಿಮವತ್ಕುತ್ಕೀಲ ಪರ್ಯಂತ ಸಂಪದೆಯಂ………….. ನೆಲನಂ ಸಾಧಿಸಿ ಕಬ್ಬಿಗಂಗೆ ನಿರ್ವ್ಯಾಜದಿಂದಂ ನಿಮಿರ್ಚಿದ ಗೆಲ್ಲಂ ಭುವನೈಕರಾಮ ಮಹಿಪಂಗಕ್ಕುಂ ಪೆರರ್ಗಕ್ಕುಮೇ” ಎಂದು ಅನ್ವಯ ಜೋಡಿಸಬೇಕು. ಆಗ ಒಬ್ಬ ಚಕ್ರವರ್ತಿಗೆ ಭುವನೈಕರಾಮನು ನೆಲವನ್ನು ಗೆದ್ದು ಒಪ್ಪಿಸಿದನೆಂದು ಅರ್ಥವಾಗುತ್ತದೆ. ಆದುದರಿಂದ ಈ ಪದ್ಯವು ಸೂಚಿಸುವ “ಕಬ್ಬಿಗ” ಪದಕ್ಕೆ ಚಕ್ರವರ್ತಿಯೆಂದೇ ಅರ್ಥ ಹೇಳಬೇಕು. ರಾಷ್ಟ್ರಕೂಟ ಕೃಷ್ಣನಿಗೆ ಕನ್ನರ ಮತ್ತು ಕಚ್ಚೆಗ ಎಂಬ ಪರ್ಯಾಯನಾಮಗಳಿವೆ; ಕಬ್ಬಿಗ ಎಂಬ ಹೆಸರಾಗಲೀ ಬಿರುದಾಗಲೀ ಇಲ್ಲ; ಅದು ಬಿರುದಾಗಬೇಕೂ ಇಲ್ಲ. ಅದು ಬಿರುದಾಗಬೇಕೂ ಇಲ್ಲ. ಅದಕ್ಕಾಗಿ ಕಬ್ಬಿಗ ಎಂಬುದು ‘ಕಚ್ಚೆಗ’ ಎಂಬುದರಿಂದ ಹುಟ್ಟಿದ ದುಷ್ಟಪಾಠವಾಗಿರಬಹುದು. ಇದಕ್ಕೆ ಲಿಪಿಕಾರರರ ಹಸ್ತದೋಷ ಕಾರಣವಾಗಿರಬೇಕು. ಪ್ರಾಚೀನ ಕನ್ನಡಲಿಪಿಯಲ್ಲಿ ‘ಬ’ ಮತ್ತು ‘ಚ’ ವರ್ಣಗಳಲ್ಲಿಯ ಅಂತರವು ಅನೇಕ ವೇಳೆ ಲಿಪಿತಜ್ಞರಿಗೇ ಗೊತ್ತಾಗುವದಿಲ್ಲ. ಪಂಪಭಾರತದ ‘ಬಚ್ಚೆಸಾಸಿರ’ ಎಂಬ ಪದವು ಮೂಲದಲ್ಲಿ ಸಬ್ಬಿಸಾಸಿರ ಅಥವಾ ಚಬ್ಬಿಸಾಸಿರ ಎಂದಿರಬೇಕೆಂಬ ವಿದ್ವಾಂಸರ ಊಹೆಯು ಇಂದು ಸತ್ಯವಾಗಿ ಪರಿಣಮಿಸಿದೆ. [8] ಅದೇ ರೀತಿ ಇಲ್ಲಿಯ ಕಬ್ಬಿಗ ಪದದಲ್ಲಿಯ “ಬ್ಬಿ” ವರ್ಣವು ಮೂಲದಲ್ಲಿ “ಚ್ಚಿ” ಅಥವಾ “ಚ್ಚೆ” ಇರಬೇಕು. ಕನ್ನಡಲಿಪಿಯಲ್ಲಿ ಈ ಅಕ್ಷರದ ಸ್ಥಿತ್ಯಂತರಕಾಲದ ಲಿಪಿಕಾರರು ಅದನ್ನು “ಬ್ಬಿ” ಎಂದು ಮಾರ್ಪಡಿಸಿರಲು ಸಾಕು. ಆದುದರಿಂದ ಪ್ರಸ್ತುತ ಪದ್ಯದ್ಲಲಿ ಬರುವ “ಕಬ್ಬಿಗ” (ಕಚ್ಚೆಗ) ನೆಂದರೆ ಸಾಮಾನ್ಯ ಕವಿಯಾಗಿರದೆ ರಾಷ್ಟ್ರಕೂಟ ಚಕ್ರವರ್ತಿಯಾದ ೩ನೆಯ ಕೃಷ್ಣನಾಗಿರಬೇಕು; ‘ಭುವನೈಕರಾಮ’ ನೆಂದು ಬಿರುದಿರುವವನು ಆತನ ಸಾಮಂತನಾದ ಶಂಕರಗಂಡನಾಗಿರಬೇಕು.

ಇದೇ ಸಂದರ್ಭದಲ್ಲಿ ಕಾವ್ಯಾವಲೋಕನದ ೬೨೦ನೆಯ ಪದ್ಯವನ್ನು ನೋಡಬಹುದು.

ಅವಿಹಿತವೇಗಮೇಳ್ಗೆಯ ಜವಂ ವೃಣಮಕ್ಷತಕಾಯಮೆತ್ತಿ ಕ[9]
ಟ್ಟುವ ಮದಮುಣ್ಮಿಸೋರ್ವ ಸೊನೆ ಬೀಳ್ವ ಗಜಧ್ವಜಮಂಬರಕ್ಕೆ ನಿ
ಕ್ಕುವ ಜಯಕೇತು ಸಂದೆಯದೆ (ದ?) ದಂದುಗಮಂ ಕಿಡಿಸಿತ್ತು ಮುಂದಣೋ
ಡುವ ರಿಪುದಂತಿಗಂ ಪೆರಗಣಟ್ಟುವ ರಟ್ಟರಮೇರು ದಂತಿಗಂ
||

ಈ ಪದ್ಯದ ಅರ್ಥ ಏನಿದ್ದರೂ “ರಟ್ಟರಮೇರುದಂತಿ” ಎಂಬ ಒಂದು ಆನೆಯನ್ನು ಇದು ಉಲ್ಲೇಖಿಸುತ್ತದೆ. ರಟ್ಟರಮೇರುವೆಂಬುದು ರಾಷ್ಟ್ರಕೂಟ ಮೂರನೆಯ ಕೃಷ್ಣನ (ಪಟ್ಟದ) ಆನೆಯಾಗಿರಬಹುದೆಂದು ವಿದ್ವಾಂಸರ ಊಹೆ. ಆದರೆ ಬೆಟಗೇರಿಯ ಶಾಸನದಲ್ಲಿ ಶಂಕರಗಂಡನ ಕೆಲವು ಬಿರುದುಗಳಲ್ಲಿ “ರಟ್ಟರ [ಮೇರು]” ಎಂಬುದೊಂದು ಉಂಟು, ಇಲ್ಲಿ “ರಟ್ಟರಮೇರುದಂತಿ” ಎಂದರೆ ರಟ್ಟರ ಮೇರುವಿನ ದಂತಿ ಎಂದು ಹೊಸ ಅರ್ಥವನ್ನು ಹೇಳಬೇಕಾಗುತ್ತದೆ. ಹೀಗಾಗಿ ಈ ಪದ್ಯದಲ್ಲಿ ಬರುವ ‘ರಟ್ಟರ ಮೇರು’ ಶಂಕರಗಂಡನೆಂದೆ ತಿಳಿಯಬಹುದು. ಇದು ಭುವನೈಕರಾಮಾಭ್ಯುದಯದಿಂದ ಎತ್ತಿದ ಪದ್ಯವಾಗಿದ್ದ ಪಕ್ಷದಲ್ಲಿ ಅದರ ನಾಯಕನು ಶಂಕರಗಂಡನೆಂದೇ ಹೇಳಬೇಕಾಗುತ್ತದೆ.

ಕಾವ್ಯಾವಲೋಕನದಲ್ಲಿ ರಾಮಾಯಣ, ಭಾರತ, ಭಾಗವತ ಮುಂತಾದ ಪುರಾಣಕಾವ್ಯಗಳಿಂದ ಎತ್ತಿದುವೆಂದು ತೋರುವ ಪದ್ಯಗಳಿದ್ದಂತೆ ಶುದ್ಧ ಐತಿಹಾಸಿಕ ಕಾವ್ಯದಿಂದ ಎತ್ತಿಕೊಂಡವೆಂದು ಹೇಳಬಹುದಾದ ಪದ್ಯಗಳೂ ಇವೆ. ಉದಾಹರಣೆಗೆ ೬೮, ೩೨೧, ೬೪೪, ೬೫೭, ೮೦೩, ೮೩೫, ೮೬೩ ಮುಂತಾದ ಪದ್ಯಗಳನ್ನು ನೋಡಬಹುದು. ಇವುಗಳಲ್ಲಿ ೬೮ನೆಯ ಪದ್ಯವು ಮಹತ್ವದ್ದು.

[10]ಬಲ್ವೆಣನುರ್ಚಿ ಕೋಡೊಳಿರೆ ನೆತ್ತರುರೋಮಣಿಯಿಂ ನೆಲಕ್ಕೆ ಬಾ
ನಲ್ವರಿವೆನ್ನಗಂ ಪ್ರಹತದಿಂದಿರದೆತ್ತಿದೊಡಗ್ರಹಸ್ತದೊಳ್
ನೆಲ್ವ ಪೆಣಕ್ಕೆ ಪರ್ದೆರಗೆ
[11] ವೈರಿಯ ನಾಲ್ಕು ಬಲಕ್ಕವೊಂದೆ ಬಂ
ಬಲ್ವರಿಯುತ್ತುಮಿರ್ದುದು ಜಯದ್ವಿರದಂ ಜಯಸಿಂಗಭೂಪನಾ
||

ಈ ಪದ್ಯದ ಕೊನೆಯ ಪಾದದ “ಜಯಸಿಂಗಭೂಪನಾ” ಎಂಬುದಕ್ಕೆ ಕಾವ್ಯಾವಲೋಕನದ ಇ ಮತ್ತು ಗ ಪ್ರತಿಗಳಲ್ಲಿ ‘ಜಯಧೀರಭೂಪನಾ’ ಎಂದು ಪಾಠಾಂತರವಿದೆ. ಕಾವ್ಯಾವಲೋಕನದ ಕರ್ತೃ ನಾಗವರ್ಮನು ಚಾಲುಕ್ಯ ಜಗದೇಕ ಮಲ್ಲನಲ್ಲಿ (೨ನೇ ಜಯಸಿಂಹನಲ್ಲಿ) ಕಟಕೋಪಾಧ್ಯಾಯನಾಗಿದ್ದನೆಂದು ಜನ್ನನು ಹೇಳಿರುವುದು ಸರ್ವವಿದಿತವಾದ ಸಂಗತಿ. (ಜನ್ನನ ಈ ಹೇಳಿಕೆಯ ಮೇಲೆ ಪಂಡಿತರು ನಾಗವರ್ಮನ ಕಾಲವನ್ನು ನಿರ್ಧರಿಸಿರುವುದು.) ಆದುದರಿಂದ ಮೇಲುನೋಟಕ್ಕೆ “ಜಯಸಿಂಗ” ಎಂಬ ಪಾಠವೇ ಯೋಗ್ಯವೆಂದು ಇಲ್ಲಿ ತೋರಬಹುದು. ಅಂದರೆ ನಾಗವರ್ಮನು ಈ ಪದ್ಯವನ್ನು ಜಯಸಿಂಹನ ಸ್ತುತಿರೂಪವಾಗಿ ರಚಿಸಿ ತನ್ನ ಗ್ರಂಥದಲ್ಲಿ ಸೇರಿಸಿಬಹುದೆಂದು ಎನ್ನಿಸಬಹುದು. ಆದರೆ ಈ ಅಭಿಪ್ರಾಯ ಯೋಗ್ಯವಲ್ಲ. “ಜಯಧೀರ” ಎಂಬುದು ತೀರ ಅಪರೂಪವಾದ ಪದ. ಅದನ್ನು ಸಾಮಾನ್ಯ ಲಿಪಿಕಾರರರು ಕಲ್ಪಿಸಿ ಪ್ರಕ್ಷೇಪಮಾಡಲಾರರು. ‘ಜಯಧೀರ’ ಎಂಬುದನ್ನು ಸಾಮಾನ್ಯ ಲಿಪಿಕಾರರು ತಿದ್ದಿ ‘ಜಯಸಿಂಗ’ ಎಂದು ಮಾರ್ಪಡಿಸುವುದು ಎಷ್ಟು ಸುಲಭವೂ ಅಷ್ಟೆ. “ಜಯಸಿಂಗ” ಎಂಬುದನ್ನು ತಿದ್ದಿ ‘ಜಯಧೀರ’ ಎಂದು ಮಾರ್ಪಡಿಸುವುದು ದುರ್ಲಭ. ಆದುದರಿಂದ ಇಲ್ಲಿ ಜಯಧೀರವೆಂಬುದು ಅಪರೂಪ ಪದ. ಗ್ರಂಥಸಂಪಾದ ನಾಶಾಸ್ತ್ರದ ದೃಷ್ಟಿಯಿಂದ ಇಂಥ ಅಪರೂಪದ ಪಾಠಗಳನ್ನೇ ಕವಿಯ ಮೂಲಪಾಠಗಳೆಂದು ಸ್ವೀಕರಿಸಬೇಕಾಗುತ್ತದೆ.

ಶಂಕರಗಂಡನಿಗೆ ಭುವನೈಕರಾಮ, ಅಭಿಮಾನಧವಳ, ರಾಜಭೂರಿಶ್ರವ, ವಿದ್ವಿಷ್ಟನಾರಾಯಣ, ರಟ್ಟರ [ಮೇರು], ಸತ್ಯಾರ್ಣವ, ಧರ್ಮರತ್ನಾಕರ ಮೊದಲಾದವುಗಳ ಜೊತೆಗೆ “ಜಯಧೀರ” ಎಂಬುದೂ ಒಂದು ಬಿರುದಿರುವ ಸಂಗತಿ ಬೆಟಗೇರಿಯ ಅದೇ ಶಾಸನದಿಂದ ತಿಳಿದುಬರುತ್ತದೆ. ಅಲ್ಲದೆ ಶಂಕರ ಗಂಡರಸನು ಕೊಪ್ಪಳದಲ್ಲಿ ಮಾಡಿಸಿದ್ದು ತನ್ನ ಹೆಸರಿನ “ಜಯಧೀರ ಜಿನಾಲಯ”ವನ್ನು ಅನೇಕ ಬಿರುದುಗಳನ್ನು ಬಿಟ್ಟು “ಜಯಧೀರ” ಎಂಬುದನ್ನು ಎತ್ತಿಕೊಂಡ ಕಾರಣ ಅದು ಶಂಕರಗಂಡನ ಪ್ರಮುಖ ಬಿರುದಾಗಿರಬೇಕೆಂದು ಊಹಿಸಬಹುದು. ಆದುದರಿಂದ ಮೇಲಿನ ಪದ್ಯವೂ ಶಂಕರಗಂಡನನ್ನು ಕುರಿತಿದೆಯೆಂದು ಹೇಳಲು ಏನೂ ಬಾಧೆ ಕಾಣದು. ಈ ಪದ್ಯದಲ್ಲಿಯೂ (ಕಾ. ಲೋ. ಪದ್ಯ. ೬೮), ದರ್ಪಣದ ೧೩೦, ೧೮೩, ೧೮೪ ಈ ಸೂತ್ರಗಳಿಗೆ ಕೊಟ್ಟ ಉದಾಹರಣೆಯ ತುಂಡುಗಳಲ್ಲಿಯೂ ಗಜಯುದ್ಧದ ವರ್ಣನೆಯಿರುವುದು ನೇರವಾಗಿ ಒಂದೇ ಕಾವ್ಯ ಹಾಗೂ ಒಬ್ಬನೇ ಕಾವ್ಯನಾಯಕನನ್ನು ಸೂಚಿಸುವದಿಲ್ಲವೆ?

ಮೇಲೆ ಸೂಚಿಸಿದ ಕಾವ್ಯಾವಲೋಕನ, ಶಬ್ದಮಣಿದರ್ಪಣದಲ್ಲಿಯ ಉದಾಹರಣೆಗಳು ಭುವನೈಕರಾಮಾಭ್ಯುದಯಕ್ಕೆ ಸಂಬಂಧಿಸಿದುವಾಗಿರಬೇಕು ಎಂದು ಪಂಡಿತರ ಊಹೆಯಷ್ಟೆ. ಗಜಯುದ್ಧ ಮುಖ್ಯವಾದ ಭುವನೈಕರಾಮಾಭ್ಯುದಯವು ರಾಮಾಯಣದೊಂದಿಗೆ ತಗುಳ್ಚಿದ ಕಾವ್ಯವೆಂದು ಮತ್ತೊಂದು ಊಹೆ. ಆದರೆ ರಾಮಾಯಣದಲ್ಲಿ ಗಜಯುದ್ಧದ ಪ್ರಸ್ತಾಪಕ್ಕೆ ಅವಕಾಶ ತೀರ ಕಡಿಮೆ; ಹಾಗೂ ನಾಯಕನಾದ ರಾಮನು ಯಾವುದೇ ವಾಹನವನ್ನು ಏರದೆ ನೆಲದ ಮೇಲೆ ನಿಂತು ಯುದ್ಧ ಮಾಡಿದನೆಂದು ಪರಂಪರೆ ಬೇರೆ ಉಂಟು, ಅದಕ್ಕಾಗಿ ಇದು ರಾಮಾಯಣದೊಂದಿಗೆ ತಗುಳ್ಚಿ ಹೇಳಿದ ಕಾವ್ಯವಾಗಿರದೆ ಶುದ್ಧ ಚಾರಿತ್ರಿಕ ಕಾವ್ಯವಾಗಿರುವ ಸಂಭವವಿದೆ.

ಶಂಕರಗಂಡ ಹಾಗೂ ಪೊನ್ನರು ಜೈನರಾಗಿರುವದರಿಂದ ಈ ರೀತಿಯ (ಅದು ಶುದ್ಧ ಲೌಕಿಕವಿರಲಿ ಅಥವಾ ಪುರಾಣಪುರುಷನೊಬ್ಬನೊಡನೆ ಹೋಲಿಸಿ ರಚಿಸಿದ ಐತಿಹಾಸಿಕ ಧ್ವನಿಯುಳ್ಳದ್ದಿರಲಿ) ಲೌಕಿಕ ಕಾವ್ಯವನ್ನು ಬರೆಯಲು ಶಕ್ಯವೇ? ಎಂಬುದೊಂದು ಪ್ರಶ್ನೆ. ಈ ಬಗೆಯ ಉದಾಹರಣೆಗಳು ಅಪರೂಪ. ಆದರೆ ಗಂಗರಾಜನಾದ ಎರೆಯಪ್ಪನು ಜೈನ; ಆತನನ್ನು ಕುರಿತು ಜೈನನೆಂದು ಗ್ರಹಿಕೆಯಿರುವ ೧ನೆಯ ಗುಣವರ್ಮನು “ಶೂದ್ರಕ” ವೆಂಬ ಲೌಕಿಕ ಕಾವ್ಯವನ್ನೆ ಬರೆದಿರುವನಲ್ಲ? ಪರಾಕ್ರಮಿಗಳಾದ ಅರಸರು ಯಾವ ಮತದವರೆ ಇರಲಿ; ಅವರಲ್ಲಿ ಮಾನವ ಸಹಜವಾದ ಕೀರ್ತಿಕಾಮನೆಯು ಇರತಕ್ಕುದೆ. ಅದಕ್ಕಾಗಿ ಶಂಕರಗಂಡನು ಜೈನನಾದರೂ ಲೌಕಿಕವಾದ ಭುವನೈಕರಾಮಾಭ್ಯುದಯವನ್ನು ಬರೆಸಿರಬಹುದು.

ಒಟ್ಟಿನ ಮೇಲೆ ಪೊನ್ನನೇ ಹೇಳಿಂದತೆ ಭುವನೈಕರಾಮಾಭ್ಯುದಯವು ಲೌಕಿಕ ಕಾವ್ಯವೆಂಬುದು ನಿಜ. ಬೆಟಗೇರಿಯ ಶಾಸನ, ಕಾವ್ಯವಲೋಕನದ ೬೮ನೆಯ ಪದ್ಯ ಸೂಚಿಸುವ :ಜಯಧೀರ” ಎಂಬ ಬಿರುದು, ದರ್ಪಣದ ೧೬೭ನೆಯ ಸೂತ್ರದ ಉದಾಹರಣೆಯಲ್ಲಿ “ಕಬ್ಬಿ (ಕಚ್ಚೆ)ಗ” ಎಂಬ ಹೆಸರು. ಬೆಟಗೇರಿಯ ಶಾಸನ ಹಾಗೂ ಕಾವ್ಯಾವಲೋಕನದ ೬೨೦ನೆಯ ಪದ್ಯಗಳಲ್ಲಿಯ ರಟ್ಟರಮೇರು, ಮತ್ತು ಅದೇ ಬೆಟಗೇರಿಯ ಶಾಸನದಲ್ಲಿ ಬರುವ ಭುವನೈಕರಾಮನೆಂಬ ಬಿರುದು ಇವೆಲ್ಲ ಸಂಗತಿಗಳು ಕಾವ್ಯನಾಯಕನು ಶಂಕರಗಂಡನಾಗಿರಬೇಕೆಂಬ ಊಹೆಗೆ ಬಲವಾದ ಆಧಾರಗಳಾಗುತ್ತವೆ. ಮೂರನೆಯ ಕೃಷ್ಣನು ನಾಯಕನಾಗಿರಬೇಕೆಂಬ ಮಾತಿಗೆ ಪುಷ್ಪದಂತನ ಹೇಳಿಕೆಯನ್ನು ಬಿಟ್ಟರೆ ಬೇರೆ ಆಧಾರಗಳಿಲ್ಲ. ಈಗಾಗಲೇ ನೋಡಿದಂತೆ ಚೋಳರಾಜಾದಿತ್ಯನ ಶಿರವನ್ನು ಕತ್ತರಿಸಿದವನು ರಾಷ್ಟ್ರಕೂಟ ೩ನೆಯ ಕೃಷ್ಣನೆಂದು ಹೇಳಿದ್ದು ಆಸ್ಥಾನ ಕವಿ (ಪುಷ್ಪದಂತ) ಮಾಡಿದ ಅತಿಸ್ತುತಿಯೆಂದು ಆತಕೂರ ಶಾಸನದಿಂದ ಗೊತ್ತಾಗುತ್ತದೆ. ಅದಕ್ಕಾಗಿ ಭುವನೈಕರಾಮಾಭ್ಯುದಯದ ಕಥಾನಾಯಕ ಶಂಕರಗಂಡನೆಂದು ಭಾವಿಸುವುದು ಸತ್ಯಕ್ಕೆ ಹೆಚ್ಚು ಸಮೀಪವಾಗಿದೆ.

 

*ಈ ಲೇಖನವನ್ನು ಸಿದ್ಧಗೊಳಿಸುವಲ್ಲಿ ಗುರುಗಳಾದ ಪ್ರೊ. ಎಂ. ಎಂ. ಕಲಬುರ್ಗಿ, ಅವರು ಹಲವಾರು ರೀತಿಯಿಂದ ಸಲಹೆ ಸೂಚನೆಗಳನ್ನಿತ್ತು ಪ್ರೋತ್ಸಾಹಿಸಿದ್ದಾರೆ. ಅವರಿಗೆ ನನ್ನ ನೆನಕೆಗಳು ಸಲ್ಲುತ್ತವೆ.

[1]ಪ್ರಬುದ್ಧ ಕರ್ಣಾಟಕ, ಸಂಪುಟ-೧೫, ಸಂಚಿಕೆ ೨ ಮತ್ತು ೪.

[2]ಯಶೋಧರಚರಿತೆ, ೧ನೆಯ ಅವತಾರ, ಪ-೨೧.

[3]ಜನ್ನನ ಯಶೋಧರಚರಿತೆಯಲ್ಲಿ ಲೌಕಿಕ ಕಾವ್ಯಗಳಲ್ಲಿರುವಂತೆ ಬಲ್ಲಾಳದ ವಂಶದ ವಿವರವಾದ ವರ್ಣನೆಯು ಬಂದಿರುವುದನ್ನು ನೋಡಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ. ಆತನು ಕವಿಚಕ್ರವರ್ತಿ ಬಿರುದಿಗಾಗಿ ಬಲ್ಲಾಳನನ್ನು ಕುರಿತು ಒಂದು ಕಾವ್ಯವನ್ನು ಬರೆದಿದ್ದ ಪಕ್ಷದಲ್ಲಿ ಮತೀಯ ಕಾವ್ಯವಾದ ಯಶೋಧರಚರಿತೆಯಲ್ಲಿ ಅದು ಸೇರಿಸಲ್ಪಡುತ್ತಲಿರಲಿಲ್ಲ.

[4]ಪ್ರಾಚೀನ ಕರ್ನಾಟಕ, ಸಂ. ೧, ಸಂ.೨. 5

[5]ಕಾವ್ಯವ್ಯಾಸಂಗ, ಪು. ೧೧೭-೧೮-ಶ್ರೀ ಎಲ್‌. ಆರ್‌. ಹೆಗಡೆ ಹಾಗೂ “ಕರ್ಣಾಟಕ ಕವಿಚರಿತೆ”, ಸಂಪುಟ ೧, ಪರಿಶಿಷ್ಟ.

[6]ಶಬ್ದಮಣಿದರ್ಪಣದ ೧೩೦, ೧೬೭, ೧೮೩, ೧೮೪ ಈ ಸೂತ್ರಗಳ ಉದಾಹರಣೆಗಳು (ಸಂ. ಡಿ. ಎಲ್‌. ಎನ್‌. ೧೯೬೮).

[7]“ನೆಲನೆಂಬೀ ನಪುಂಸಕಮಂ ಬಿಟ್ಟು ಧರಾವನಿತೆಯೆಂದು ಯೋಜಿಸಿಕೊಳ್ವುದು” ಎಂದು ದರ್ಪಣದಲ್ಲಿಯ ಟೀಕೆಯ ನನ್ನ ಅರ್ಥವಿವರಣೆಯನ್ನು ಸಮರ್ಥಿಸುತ್ತದೆ.

[8]ಪಂಪಮಹಾಕವಿ ಗ್ರಂಥದ ಪು. ೧೩೨ರ ಅಡಿಟಿಪ್ಪಣೆ ಹಾಗೂ ಪಂಪಭಾರತದ ಅಶ್ವಾಸ ೧೪, ಪದ್ಯ ೫೬.

[9]ಕಾವ್ಯಾಲೋಕನದ ೬೧೮ ಹಾಗೂ ೬೧೯ ಪದ್ಯಗಳು ‘ಪರಿವೃತ್ತಿ’ ಹಾಗೂ ಯಥಕ್ರಮ (ಯಥಾಸಂಖ್ಯೆ) ಎಂಬ ಅಲಂಕಾರಗಳಿಗೆ ಲಕ್ಷ್ಯಗಳಾಗಿದ್ದು ೬೨೦ನೆಯ ಪದ್ಯವು ಈ ಎರಡೂ ಅಲಂಕಾರಗಳ ಮಿಶ್ರೋದಾಹರಣೆಯಾಗಿರುವಂತೆ ಕಾಣುತ್ತದೆ. ಅದಕ್ಕೆ ಕಾವ್ಯಾಲೋಕನದ ಅಡಿಟಿಪ್ಪಣೆಯಲ್ಲಿ ಕೊಟ್ಟಿರುವ ‘ಚ’ ಪ್ರತಿಯ “ಯೆರಡಱೊಳಂ ಬಹುಳ ನಿಬಂಧ ಸಮುಚಿತಕ್ಕೆ” ಎಂಎಎಎಎಂಬ ಮಾತು ಇದೇ ಅರ್ಥವನ್ನು ಹೇಳುವಂತೆ ಕಾಣುತ್ತದೆ.

[10]ಈ ಪದ್ಯವು ಪ್ರಭಾವವು ಕೆಳಗಿನ ಪದ್ಯದ ಮೇಲೆ ಆದದ್ದು ಸ್ಪಷ್ಟವಾಗಿದೆ.

ಒಂದೆರಡಟ್ಟೆ ಕೋಡಮೊನೆಯೊಳ್ತಿರುಗುತ್ತಿರೆ ಬಲ್ವೆಣಂ ಮರು
ಳ್ದೊಂದೆರಡಗ್ರಹಸ್ತದೊಳಗುರ್ವಿಸೆ ಮೋದಿದ ತಾಳವಟ್ಟದೊ
ಳ್ಬಂದ ಪೆಣಂ ಪೆಡಂ ಮಗುಳೆ ಕಣ್ಗೆಸೆಗುಂ ಜವನೇರಿದೊಂದು ಜ
ಕ್ಕಂದೊಳದಂತೆ ಸೇವುಣ ಘರಟ್ಟನ ವೀರವಿಳಾಸ ಸಿಂಧುರಂ | |
ಜನ್ನನ ಅಮೃತಾಪುರಶಾಸನ, E.C.VI, T K. NO. 45

[11]ದರ್ಪಣದ ೧೩ನೆಯ ಸೂತ್ರದ ಉದಾಹರಣೆ: “ಆನೆಯ ಮೇಲೆಯುಂ ಆಳ ಮೇಲೆಯುಂ ಕುದುರೆಯ ಮೇಲೆಯುಂ ಪರಿದುದೊಂದು ಗಜಂ ಭುವನೈಕರಾಮನಾ” ಇದಕ್ಕೂ ಮೇಲಿನದಕ್ಕೂ ಸಾಮ್ಯವು ಎದ್ದುಕಾಣುವಂತಿದೆ.