ಹಲ್ಮಿಡಿ ಶಾಸನದಲ್ಲಿ ಕದಂಬ, ಆಳುಪ, ಭಟಾರಿ, ಸರಕ್ಕೆಲ್ಲ, ಕೇಕಯ, ಪಲ್ಲವ, ಸೇಂದ್ರಕ ಮತ್ತು ಬಾಣ ಎಂಬ ಎಂಟು ವಂಶನಾಮಗಳು ಉಲ್ಲೇಖಗೊಂಡಿವೆ. ಇವಲ್ಲದೆ ‘ಕರ ಭೋರ’ ಎಂಬುದೂ ವಂಶನಾಮವಾಗಿರುವ ಸಾಧ್ಯತೆಯಿದೆ. ಇವುಗಳಲ್ಲಿ ಭಟಾರಿ ಮತ್ತು ಸರಕ್ಕೆಲ್ಲ ವಂಶಗಳ ಬಗ್ಗೆ ಹೆಚ್ಚಿನ ಸಂಗತಿಗಳು ತಿಳಿದುಬಂದಿಲ್ಲ. ವಿದ್ವಾಂಸರು ಈ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ. ಹಲ್ಮಿಡಿ ಶಾಸನೋಕ್ತ ಪಶುಪತಿ. ಭಟಾರಿ ವಂಶದವನು. ಅವನ ತಾಯಿ ಕದಂಬ ಕುಲದವಳು. ಮತ್ತು ಅವನು ಹತ್ತು ಮಂಡಲಗಳಿಗೆ ಅಧಿಪತಿಯಾಗಿದ್ದವನು ಎಂಬ ಮಾಹಿತಿ ತಾಳಗುಂದದ ಪ್ರಣವೇಶ್ವರ ದೇವಾಲಯದ ಬಾಗಿಲ ತೋಳಿನ ಮೇಲೆ ಬರೆದ ಸಂಸ್ಕೃತ ಶಾಸನದಲ್ಲಿ ದೊರಕುತ್ತದೆ.[1] ಹಲ್ಮಿಡಿ ಶಾಸನದ ವೀರ ವಿಜಅರಸ ಭಟಾರಿ ವಂಶದವನೆಂದು ಹೇಳುವುದರ ಜತೆಗೆ ಅವನು ಸರಕ್ಕೆಲ್ಲನೆಂದೂ ಹೇಳಿದೆ. ಎಂದರೆ ಸರಕ್ಕೆಲ್ಲ ಎಂಬ ಕೆಲ್ಲ ಜನಾಂಗದ ಪ್ರಭೇದ ವೊಂದರ ಹೆಸರು ಇಲ್ಲಿ ಬಂದಿದೆ.

ಇದೇ ರೀತಿಯ ಉಲ್ಲೇಖಗಳು ಐದನೆಯ ಶತಮಾನದ ಇನ್ನೂ ಕೆಲವು ಶಾಸನಗಳಲ್ಲಿವೆ. ಹೊನ್ನಾವರ ತಾಮ್ರಶಾಸನ[2]ಕೆಲ್ಲಚಿತ್ರಸೇನ ಎಂಬ ಅರಸನನ್ನು ಹೆಸರಿಸಿದೆ. ಅವನನ್ನು ಮಹಾಕೆಲ್ಲನೆಂದೂ ಕೇಕಯವಂಶದವನೆಂದೂ ಅದೇ ಶಾಸನ ಮಾಹಿತಿ ಒದಗಿಸುತ್ತದೆ, ಇದರಿಂದ ಕೆಲ್ಲರು ಕೇಕಯರೆಂಬ ಪೌರಾಣಿಕ ವಂಶದ ಸಂಬಂಧವನ್ನು ಹೇಳಿಕೊಳ್ಳುತ್ತಿದ್ದರೆಂಬುದು ಸ್ಪಷ್ಟಪಡುತ್ತದೆ. ಹಾಗೂ ಕೆಲ್ಲವೆಂಬ ಜನಾಂಗವೇ ಪ್ರಾಚೀನ ಕರ್ನಾಟಕದಲ್ಲಿದ್ದು ಅವರಲ್ಲಿ ಕೆಲ್ಲ, ಮಹಾಕೆಲ್ಲ, ಮತ್ತು ಸರಕ್ಕೆಲ್ಲ ಎಂಬ ಪರ್ಯಾಯಗಳಿದ್ದವೆಂಬುದು ಹಲ್ಮಿಡಿ ಮತ್ತು ಹೊನ್ನಾವರ ಶಾಸನಗಳಿಂದ ಖಚಿತವಾಗುತ್ತದೆ. ಅದೇ ರೀತಿ ಖಾನಾಪೂರ ತಾಲೂಕಿನ (ಬೆಳಗಾವಿ ಜಿ.) ಕಾಪೋಲಿ ಗ್ರಾಮದಲ್ಲಿ ದೊರೆತ ಭೋಜ ಅಸಂಕಿತವರ್ಮನ ಶಾಸನದಲ್ಲಿ ರಾಜನ ಅಧಿಕಾರಿಗಳು ಆ ಮುಂಚೆ ಸೊಲ್ಲಂದೂರು-೭೦ ರಲ್ಲಿನ ಒಂದು ಹಳ್ಳಿಯನ್ನು ಏಲ (ಎಳ) ಕೆಲ್ಲನೆಂಬ ಕೈಕೇಯ ದೊರೆ ಬಿಟ್ಟಿದ್ದ ದತ್ತಿಯನ್ನು ಪುನರ್ದತ್ತಗೊಳಿಸಿದರೆಂದು ಹೇಳುತ್ತದೆ. ಇದೇ ಕಾಲಾವಧಿ ಎಂದರೆ ಐದನೆಯ ಶತಮಾನಕ್ಕೆ ಸೇರುವ ಬೆಂಡಿಗಾನಹಳ್ಳಿಯ ಒಂದು ಶಾಸನ[3]ದಲ್ಲಿ ಮುರಸಕೆಲ್ಲನೆಂಬ ದೊರೆಯ ಹೆಸರು ಇದೆ. ಎಂದರೆ ಐದನೆಯ ಶತಮಾನದ ಕಾಲಕ್ಕಾಗಲೇ ಕೆಲ್ಲ, ಮಹಾಕೆಲ್ಲ ಸರಕ್ಕೆಲ್ಲ, ಎಳಕೆಲ್ಲ ಮುರಸಕೆಲ್ಲ ಎಂಬ ಮನೆತನಗಳು ಇದ್ದುದು ಇದರಿಂದ ಖಚಿತಪಡುತ್ತದೆಯಲ್ಲದೆ ಇವರು ತಮ್ಮನ್ನು ಪುರಾಣ ಪ್ರಸಿದ್ಧ ಕೇಕಯ ವಂಶಕ್ಕೆ ಸಂಬಂಧ ಪಟ್ಟವರೆಂದು ಹೇಳಿಕೊಳ್ಳುತ್ತಿದ್ದರೆಂದು ತಿಳಿಯಬಹುದಾಗಿದೆ.

ಮುಂದಿನ ಕಾಲಾವಧಿಯಲ್ಲಿ ಇವರ ಉಲ್ಲೇಖಗಳು ಹೆಚ್ಚುತ್ತ ಹೋಗುತ್ತವೆ, ಕದಂಬದೊರೆ ಕೃಷ್ಣವರ್ಮನ ಹಾಗೂ ವಿಷ್ಣುವರ್ಮನ ತಾಯಿ ಹಾಗೂ ಮೃಗೇಶ ವರ್ಮನ ಹೆಂಡತಿ ಮತ್ತು ರವಿವರ್ಮನ ತಾಯಿ ಪ್ರಭಾವತಿ, ಇವರು ಕೇಕಯ ವಂಶದವರೆಂಬ ಅಂಶ ಶಿವಳ್ಳಿ,[4] ಗುಡ್ಣಾಪುರ,[5] ಬನ್ನಹಳ್ಳಿ,[6] ತಾಳಗುಂದ[7]ಮೊದಲಾದ ಶಾಸನಗಳಲ್ಲಿ ಉಕ್ತವಾಗಿದೆ. ಹಿರೇಗುತ್ತಿಯ ಭೋಜ ವಂಶದವರ (ಅಸಂಕಿತ ವರ್ಮ) ತಾಮ್ರಪಟದಲ್ಲಿ ನಂದಿಪಲ್ಲಿಯ ಕೈಕಯಾನ್ವಯಕ್ಕೆ ಸೇರಿದ್ದ ಕೊತ್ತಿ ಪೆಗ್ಗಿಲಿ ಎಂಬ ರಾಜನ ಹೆಸರಿದೆ.

ಕ್ರಿ.ಶ. ೮ನೆಯ ಶತಮಾನದ ಶಾಸನಗಳಲ್ಲಿ ಕೆಲ್ಲರ ಬಹಳಷ್ಟು ಉಲ್ಲೇಖಗಳಿವೆ. ಕೆಕ್ಕಾರ ಗ್ರಾಮದ ಶಾಸನದಲ್ಲಿ ಉಕ್ತನಾದ ಅಣ್ಣಿಯರಸನು ಕೇಕಯ ವಂಶದವನಾಗಿದ್ದು ಪಯೆಗುಂಡಪುರವರೇಶ್ವನೆಂದಿದೆ. ಈ ಪಯೆಗೊಂಡ ಪುರವೆಂದರೆ ಹೈವೆ ಅಥವಾ ಹೈಗುಂದವೇ.

ಪ್ರಸಿದ್ಧ ದೊರೆ ಗಂಗ ಶ್ರೀ ಪುರುಷನ ಕಾಲದಲ್ಲಿ ರಾಷ್ಟ್ರಕೂಟ ಒಂದನೆಯ ಕೃಷ್ಣನ ಸಂಗಡ ನಡೆದ ಘೋರ ಯುದ್ಧಗಳಲ್ಲಿ ಸಿಯಗೆಲ್ಲರೆಂಬ ಮನೆತನದವರು ಬೆಂಗಳೂರು, ತುಮಕೂರು ಭಾಗದಲ್ಲಿ ಆಳುತ್ತಿದ್ದು ಶ್ರೀ ಪುರುಷನ ಪರವಾಗಿ ಹೋರಾಡಿದರು. ಬಾಗೆಯೂರು ಪಿಂಚನೂರು ಮೊದಲಾದೆಡೆಗಳಲ್ಲಿ ಎರಡೂ ಪಕ್ಷದವರಿಗೆ ಘೋರ ಯುದ್ಧಗಳಾದವು. ತುಮುಕೂರು ೮೬ ನೆಯ ಶಿಲಾಲಿಪಿ, ಸಿಯಗೆಲ್ಲರು ಮಱುಗರೆ ನಾಡು ಮುನ್ನೂರನ್ನು ಆಳುತ್ತಿದ್ದು ಅವರ ಅಧೀನನಾಗಿದ್ದ ಮೂರು ಕೊಡೆ ಅಣ್ಣಿಯರನು ಪಿಂಚನೂರ ಕಾಳಗದಲ್ಲಿ ಹೋರಾಡಿ ಮಡಿದನೆಂದು ಹೇಳುತ್ತದೆ. ಅದೇ ತುಮ ೮೭.ರಲ್ಲಿ ಪುಲಿಯೇರ ಸಿಯಗೆಲ್ಲ ಕನ್ನರಸರೊಂದಿಗಿನ ಯುದ್ದದಲ್ಲಿ ಹೋರಾಡಿ ಸತ್ತ ವಿಷಯ ಬಂದಿದೆ. ತುಮ-೮೮ ರಲ್ಲಿ ಒಬ್ಬ ಸಿಯಗೆಲ್ಲ ದೊರೆ ಮಱುಗಱೆ ೩೦೦ ಪ್ರದೇಶವನ್ನಾಳುತ್ತಿದ್ದನೆಂದಿವೆ. ತುಮ-೮೯, ೯೦, ೯೧, ೯೩, ೯೪, ೯೫, ೯೬, ಮತ್ತು ೯೯ ನೆಯ ಶಾಸನಗಳಲ್ಲಿಯೂ ಸಿಯಗೆಲ್ಲ ರಾಜರ ಹೆಸರುಗಳಿವೆ. ೯೧ ರಲ್ಲಿ ಶಿವಮಾರಸಿಯಗೆಲ್ಲರೆಂಬ ದೊರೆಗಳ ಹೆಸರೂ ೯೫ರಲ್ಲಿ ಕೆಸು ಮಣ್ಣುವಾಡಾಳುತ್ತಿದ್ದ ಒಬ್ಬ ಸಿಯಗೆಲ್ಲನ ಹೆಸರೂ ಬಂದಿವೆ.

ಮೇಲೆ ತಿಳಿಸಿದ ಸಿಯಗೆಲ್ಲರ ಮಾಂಡಲಿಕ-ಸಾಮಂತ ದರ್ಜೆಯವರು. ಮಲ್ಲೇನಹಳ್ಳಿ (ಶಿಕಾರಿಪುರ)ಯ ಎರಡು ಗೋಸಾಸಗಳಲ್ಲಿ[8] (ಕ್ರಿ.ಶ.ಸು. ೭೬೦-೭೯೦) ಕೆಸುಗೆಲ್ಲರ ಸಿರಿಯಮ್ಮನು ಊರಾಳುತ್ತಿದ್ದನೆಂದಿದೆ. ಎಂದರೆ ಈ ಸಿರಿಯಮ್ಮ ಕೇವಲ ಒಂದು ಗ್ರಾಮದ ಅಧಿಕಾರಿ.

೯ನೆಯ ಶತಮಾನದ ಉದಯಾವರದ ಎರಡು ಶಾಸನಗಳು ಇಲ್ಲಿ ಉಲ್ಲೇಖನೀಯವಾಗಿವೆ.[9]”ಸ್ವಸ್ತಿ ಶ್ರೀ ಪೃಥುವೀ ಸಾಗರ ಶ್ರೀ ಮದಾಳುಪೇಂದ್ರ ಸೋಮ ವಂಶೋದ್ಭವ ಉದಯಾದಿತ್ಯ ಉತ್ತಮ ಪಾಂಡ್ಯ ಆಳುವರಸರ್” ಎಂದು ಮತ್ತು “ಶ್ರೀ ವಿಜಯಾದಿತ್ಯನ್ ಆಳುಪೇಂದ್ರ ಪರಮೇಶ್ವರ ಅಧಿರಾಜನ್ ಉತ್ತಮ ಪಾಂಡ್ಯನ್ ಸೋಮವಂಶೋದ್ಭವನ್ ಆಳುವರಸರ್ ಅರಕೆಲ್ಲರಾ ನಾಡು ಮುದಿಮೆಯುಳ್” ಮುಂತಾಗಿ ಆಳುಪ ದೊರೆಗಳನ್ನು ಇವು ಹೋಗಳಿವೆ. ಇಲ್ಲಿ ಆಳುಪ ದೊರೆಗಳು ಸೋಮವಂಶದವರೂ ಆಳುಫರೂ ಪಾಂಡ್ಯರೂ ಎಂದು ವಂಶನಾಮಗಳನ್ನು ಹೇಳಿಕೊಂಡಿದ್ದು ಎರಡನೆಯ ಶಾಸನದಲ್ಲಿ ಅರಕೆಲ್ಲರು ಎಂಬ ಇನ್ನೊಂದು ವಂಶನಾಮವನ್ನು ಹೆಚ್ಚಾಗಿ ಹೇಳಿಕೊಂಡಿದ್ದು ಕಂಡುಬರುತ್ತದೆ. ಎಂದರೆ ಆಳುಪರು ಕೆಲ್ಲ ಜನಾಂಗದ ಒಂದು ಪಂಗಡವಾದ ಅರಕೆಲ್ಲ ಮನೆತನದವರು. ಮೂಲ ದ್ರಾವಿಡದ ಶಬ್ದಾದಿ ತಾಲವ್ಯ ವ್ಯಂಜನವು ತರುವಾಯ ಕಾಲದ ಕನ್ನಡ ಮೊದಲಾದ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಲೋಪಿಸುವುದರಿಂದ ಹಲ್ಮಿಡಿ ಶಾಸನೋಕ್ತ ಸರಕ್ಕೆಲ್ಲ ಪದವೇ ಇಲ್ಲಿ ಅರಕೆಲ್ಲ ಎಂದಾಗಿದೆಯೆಂದು ಹೇಳಬಹುದು.

ಹತ್ತನೆಯ ಶತಮಾನದಲ್ಲೂ ಕೆಲ್ಲರ ಮನೆತನಗಳು ಶಾಸನೋಕ್ತವಾಗಿವೆ. ಮದ್ದಗಿರಿ ತಾಲೂಕಿನ ರಾಮಪುರ ತುಮ -೩೮ ಗ್ರಾಮದಲ್ಲಿನ ಕ್ರಿ.ಶ. ೯೪೩ ರ ಒಂದು ಶಾಸನ ನೊೞಂಬ ಮತ್ತು ಸಿಯಗೆಲ್ಲರ ನಡುವೆ ನಡೆದ ಯುದ್ಧವನ್ನು ಉಲ್ಲೇಖಿಸುತ್ತದೆ. “ಸ್ವಸ್ತಿ ಶ್ರೀ ಸಿಯಗೆಲ್ಲರಾಶರ ಆಳು, ರಣಕೇತುಗಳ ಮಗನ್ ದೇವೆಯನೆ ಮ್ಬೋನ್ ನೊೞಮ್ಬನ್ತಗಳೂರ ಕೋಟ್ಟೆ, ಕೊಣ್ಡನ್ದು ಸತ್ತಾನ್ !” ಸಿಯಗೆಲ್ಲ ಅರಸನ ಪರವಾಗಿ ದೇವೆಯನು ಹೋರಾಡಿ ಸತ್ತನೆಂಬುದು ಶಾಸನದ ಆಶಯ. ಇದೇ ಶತ ಮಾನಕ್ಕೆ ಸೇರುವ ಮರಳೆ ಮತ್ತು ಮರಳೆ ಹೊಸಹಳ್ಳಿಗಳ ಶಾಸನಗಳಲ್ಲಿ[10]ಅರಕೆಲ್ಲ ವಂಶದವರ ಉಲ್ಲೇಖಗಳಿವೆ. ಅರಕೆಲ್ಲನ ಬೆಸದಲ್ಲಿ ಕೆಲ್ಲಗಾವುಣ್ಣ ಕಾದಿಸತ್ತನು. ಅರ ಕೆಲ್ಲನ ಮಮ್ಮಪೊಯ್ಸಳ ಮಾರುಗನೂರ ಯುದ್ಧದಲ್ಲಿ ತೀರಿಹೋದ. ಮರಳೆ ಹೊಸ ಹಳ್ಳಿಯ ಈ ಶಾಸನದ ಭಾಷೆ ಸ್ಪಷ್ಟವಾಗಿಲ್ಲ. ಪೊಯ್ಸಳ ಮಾರುಗನು ಅರಕೆಲ್ಲನ ಮೊಮ್ಮಗನೆಂದರೆ ಮಗನ ಮಗನೊ ಮಗಳ ಮಗನೋ ಖಚಿತವಾಗುವುದಿಲ್ಲ. ಆದ್ದರಿಂದ ಅರಕೆಲ್ಲರೊಂದಿಗೆ ಹೊಯ್ಸಳರನ್ನು ಜೊತೆಗೂಡಿಸುವುದು ಸೂಕ್ತವೆನಿಸಲಾರದು.

ಹೀಗೆ ಕ್ರಿ.ಶ.೫ ನೆಯ ಶತಮಾನದಿಂದ ೧೦ನೆಯ ಶತಮಾನದವರೆಗೂ ಈ ಕೆಲ್ಲ ಜನಾಂಗದವರು ಕರ್ನಾಟಕದ ಶಾಸನಗಳಲ್ಲಿ ಕಂಡು ಬರುತ್ತಾರೆ. ಹಲ್ಮಿಡಿ ಶಾಸನೋಕ್ತ ವಿಜ ಅರಸನು ಸರಕ್ಕೆಲ್ಲನು. ಹೊನ್ನಾವರ ಶಾಸನೋಕ್ತ ಚಿತ್ರಸೇನನು ಕೆಲ್ಲ ಅಥವಾ ಮಹಾಕೆಲ್ಲ ಮನೆತನಕ್ಕೆ ಸೇರಿದವನು, ಮಲ್ಲೇನಹಳ್ಳಿ ಶಾಸನೋಕ್ತ ಸಿರಿ ಯಮ್ಮನದು ಕೆಸುಗೆಲ್ಲರ ಮನೆತನ. ಪಿಂಚನೂರ ಯುದ್ಧದಲ್ಲಿ ಸತ್ತ ಸಿಯಗೆಲ್ಲ ಮನೆತನದ ಅರಸನ ಹೆಸರು ಪುಲಿಯೇರ ಸಿಯಗೆಲ್ಲನೆಂದು. ಅದೇ ರೀತಿ ಬೆಂಡಿಗಾನ ಹಳ್ಳಿ ಶಾಸನೋಕ್ತ ಮುರಸಕೆಲ್ಲ ಮತ್ತು ಕಾಪೋಲಿ ಶಾಸನೋಕ್ತ ಎಳಕೆಲ್ಲ ಮನೆತನಗಳನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಮೇಲೆ ತಿಳಿಸಿದ ಕೆಲವು ಶಾಸನಗಳಲ್ಲಿ ಅವರ ವಂಶನಾಮಗಳು ಮಾತ್ರ ಇದ್ದರೆ ಮತ್ತೆ ಕೆಲವು ಶಾಸನಗಳಲ್ಲಿ ವಂಶನಾಮಗಳ ಜತೆಗೆ ಅವರ ಹೆಸರುಗಳೂ ಉಕ್ತವಾಗಿವೆ. ಆದ್ದರಿಂದ ಸಿಯಗೆಲ್ಲ ಅರಕೆಲ್ಲ ಮೊದಲಾದುವು ವ್ಯಕ್ತಿನಾಮಗಳಲ್ಲ ವೆಂಬುದು ಸ್ಪಷ್ಟವಾಗುತ್ತದೆ.

ಕಾಲದ ದೃಷ್ಟಿ ಕ್ರಿ.ಶ. ಐದನೆಯ ಶತಮಾನದಿಂದ ಹತ್ತನೆಯ ಶತಮಾನದ ವರೆಗೆ ಈ ವಂಶದವರ ಉಲ್ಲೇಖಗಳಿವೆ. ಐದನೆಯ ಶತಮಾನದ ಸರಕ್ಕೆಲ್ಲರು ಕದಂಬರ ಅಧೀನರಾಗಿದ್ದರೆಂದು ಹೇಳಬಹುದಾದರೆ ಮಹಾಕೆಲ್ಲ ಚಿತ್ರಸೇನ ಎಳಕೆಲ್ಲರು ಮತ್ತು ಮುರಸಕೆಲ್ಲರು ತಾತ್ಪೂರ್ತಿಕ ಸ್ವತಂತ್ರರಾಗಿ ರಾಜ್ಯವಾಳಿದಂತೆ ಕಾಣುತ್ತದೆ. ಗಂಗ ಶ್ರೀ ಪುರುಷನ ಆಧೀನದಲ್ಲಿ ತುಮಕೂರು – ಬೆಂಗಳೂರು ಪ್ರದೇಶಗಳಲ್ಲಿ ಆಳುತ್ತಿದ್ದ ಸಿಯಗೆಲ್ಲರು ಕೆಸುಮಣ್ಣುನಾಡು ಮತ್ತು ಮಱುಗೞೆ -೩೦೦ ಪ್ರದೇಶಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿದ್ದ ಎರಡು ಪ್ರತ್ಯೇಕ ಮನೆತನಗಳಿಗೆ ಸೇರಿದವರು.

ಹೊನ್ನಾವರ ಮತ್ತು ಕಾಪೋಲಿ ತಾಮ್ರಪಟಗಳಲ್ಲಿ ಇವರು ತಮ್ಮನ್ನು ಕೆಲ್ಲವಂಶದ ಜತೆಗೆ ಕೇಕಯ ವಂಶದ ಸಂಬಂಧವನ್ನೂ ಹೇಳಿಕೊಂಡಿರುವುದರಿಂದ ಅಣಜಿಯ ನಣಾಕ್ಕಸ ಪಲ್ಲವ ಶಾಸನೋಕ್ತ ಶಿವನಂದವರ್ಮ, ಮೃಗೇಶವರ್ಮನ ಹೆಂಡತಿ ಪ್ರಭಾವತಿ ಹೆಸರು ತಿಳಿಯದೆ ಇರುವ ಕೃಷ್ಣವರ್ಮನ ಹೆಂಡತಿ ಇವರೆಲ್ಲರೂ ಕೈಕೇಯ | ಕೇಕಯ ವಂಶೀಯರು, ಅತವವ ಕೆಲ್ಲ ಮನೆತನದವರು, ಇದೇ ರೀತಿ ಹಿರೇಗುತ್ತಿಯ ಭೋಜ ಅಸಂಕಿತವರ್ಮನ ಶಾಸನೋಕ್ತ. ‘ಕೊತ್ತಿಪೆಗ್ಗಿಲಿ’ ಕೂಡ ಕೇಕಯನೇ.

ಹಲ್ಮಿಡಿ ಶಾಸನದಲ್ಲಿ ವಿವರಿಸಬೇಕಾದ ಇನ್ನೂ ಕೆಲವು ಸಂಗತಿಗಳಿವೆ. ಅದರಲ್ಲಿ ಸರಕ್ಕೆಲ್ಲನೂ ಭಟಾರಿಯೂ ಆಗಿದ್ದ ವಿಜ ಅರಸನು ಕೇಕಯ ಪಲ್ಲವರನ್ನು ಕಾದಿ ಗೆದ್ದನೆಂದಿದೆ. ಐದನೆಯ ಶತಮಾನದ ಕಾಲಕ್ಕಾಗಲೆ ಈ ವಂಶದಲ್ಲಿ ಹಲವಾರು ಪಂಗಡಗಳಾಗಿದ್ದು ಕೆಲವರು ಕದಂಬರ ಪರವಾಗಿಯೂ ಇನ್ನು ಕೆಲವರು ಪಲ್ಲವರ ಪರವಾಗಿಯೂ ಇದ್ದುದು ಅಸಂಭವೇನು ಅಲ್ಲ. ಆದಿ ಚಾಲುಕ್ಯ ದೊರೆ ಮಂಗಲೇಶನು ಚಾಲುಕ್ಯ ವಂಶದವನೇ ಆದ ಸ್ವಾಮಿರಾಜನನ್ನು ಕೊಂದನೆಂದು ನೆರೂರು ಗ್ರಾಮ ಶಾಸನದಲ್ಲಿ ಹೇಳಿದೆ. ಇಂಥ ಉದಾಹರಣೆಗಳು ಇತಿಹಾಸದಲ್ಲಿ ಬೇಕಾದಷ್ಟಿವೆ. ಇದಲ್ಲದೆ ಹಲ್ಮಿಡಿ ಶಾಸನದಲ್ಲಿಯೇ ಉಕ್ತನಾಗಿರುವ ಭಟಾರಿ ವಂಶದ ಪಶುಪತಿ ಎಂಬ ಮಂಡಲೇಶ್ವರನು ತಾನು ಭಟಾರಿ ವಂಶದೋನ್ ಅಳುಕದಂಬನ್’ ಎಂದರೆ ಭಟಾರಿ, ಆಳುಪ ಮತ್ತು ಕದಂಬ ಈ ಮೂರು ವಂಶಗಳಿಗೆ ಸಂಬಂಧಪಟ್ಟವನೆಂದು ಹೇಳಿಕೊಂಡಿದ್ದಾನೆ. ಉದಯಾವರದ ಶಾಸನವೊಂದು ಹೇಳುವಂತೆ ಆಳುಪರು ಅರಕೆಲ್ಲರೂ ಆಗಿದ್ದ ಸಂಗತಿಯನ್ನು ಈಗಾಗಲೇ ನೋಡಿದ್ದೇವೆ.

ಈ ಕೆಲ್ಲರು ಪ್ರಾಚೀನ ಕರ್ನಾಟಕದ ಒಂದು ಪ್ರಭಾವಿ ಜನಾಂಗವಾಗಿದ್ದು ಸು.ಐದುನೂರು ವರ್ಷಗಳ ಕಾಲ ಮಾಂಡಲಿಕ, ಸಾಮಂತ, ಊರಗೌಡ ಇತ್ಯಾದಿಯಾಗಿ ಚರಿತ್ರೆಯಲ್ಲಿ ಕಂಡುಬರುತ್ತಾರೆ. ಅಂದಿನ ಪ್ರಮುಖ ರಾಜ ಮನೆತನಗಳಾದ ಕದಂಬ, ಆಳುಪ, ಗಂಗ, ಇಕ್ಷ್ವಾಕು, ಸೇಂದ್ರಕ, ಬಾಣ, ಭೋಜ ಮೊದಲಾದ ರಾಜ ಮನೆತನಗಳೊಂದಿಗೆ ಮೈತ್ರಿಯುತ ಸಂಬಂಧವನ್ನೂ ರಾಷ್ಟ್ರಕೂಟ, ಪಲ್ಲವ, ನೊೞಂಬ ಮೊದಲಾದವರೊಂದಿಗೆ ಪ್ರಸಂಗಾನುಸಾರ ವೈರವನ್ನು ಹೊಂದಿದ್ದ. ಇವರು ಕರ್ನಾಟಕದ ಬೆಳಗಾವಿ, ಉತ್ತರಕನ್ನಡ, (ಧಾರವಾಡ) ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು (ಬೆಂಗಳೂರು) ಮತ್ತು ಹಾಸನ-ದಕ್ಷಿಣ, ಕನ್ನಡ, ಇವಿಷ್ಟು ಪ್ರದೇಶಗಳಲ್ಲಿ ಕಂಡು ಬಂದಿದ್ದಾರೆ.

ರಾಮಾಯಣ, ಮಹಾಭಾರತ, ಭಾಗವತ, ವಾಯುಪುರಾಣ ಮೊದಲಾದ ಪ್ರಾಚೀನ ಸಂಸ್ಕೃತ ಕೃತಿಗಳಲ್ಲಿ ಕೇಕಯ/ಕೈಕೇಯರ ಉಲ್ಲೇಖಗಳಿರುವುದಾಗಿ ತಿಳಿದು ಬರುತ್ತದೆ. ರಾಮಾಯಣ ಕಾಲದ ಅಶ್ವಪತಿ ಕೇಕಯ ದೊರೆಯಾಗಿದ್ದು ದಶರಥನ ಹೆಂಡತಿ ಕೈಕೇಯಿ ಅವನ ಮಗಳು. ಕೃಷ್ಣನ ಒಬ್ಬ ಹೆಂಡತಿ ಭದ್ರೆ, ವಿರಾಟನ ಹೆಂಡತಿ ಸುದೇಷ್ಣೆ ಅವಳ ತಮ್ಮ ರೇಚಕ ಮೊದಲಾದವರು ಕೇಕಯದೇಶದವರು. ಗೋಮಂತವೆಂಬ ಕೋಟೆಯ ಮುತ್ತಿಗೆಯಲ್ಲಿ ಮೊದಲು ಜರಾಸಂಧನ ಪಕ್ಷದಲ್ಲಿದ್ದು ತರುವಾಯ ಕೃಷ್ಣನ ಮತ್ತು ಪಾಂಡವರ ಪಕ್ಷವಹಿಸಿದ ಈ ಕೇಕಯರು ತಮ್ಮ ಮೂಲ ನೆಲೆ ಕೇಕಯ ದೇಶದಿಂದ ಯದುಗಳ ದೇಶಕ್ಕೆ ವಲಸೆ ಹೋದರೆಂದು ಭಾಗವತ ಹೇಳುತ್ತದೆ. ಶಿಬಿ ಚಕ್ರವರ್ತಿಯ ಮಗ ಧೃಷ್ಟಕೇತು ಅಥವಾ ಕೇಕಯನಿಂದಾಗಿ ಇವರ ದೇಶಕ್ಕೆ ಕೇಕಯ ದೇಶವೆಂದು ಹೆಸರಾಯಿತಂತೆ. ಈ ಕೇಕಯ ದೇಶ ವಿಪಾಶಾ ಮತ್ತು ಶತದೃ ನದಿಗಳ (ಈಗಿನ ಬಿಯಾಸ್ ಮತ್ತು ಸತಲಜ್ ನದಿಗಳ) ನಡುವಿನ ಪ್ರದೇಶದ್ದು.

ಆದರೆ ಇತಿಹಾಸಕಾಲದ ಯಾವ ಶಾಸನಗಳಲ್ಲೂ ಇವರು ಕರ್ನಾಟಕದ ಹೊರಗೆ ಕಂಡು ಬಂದಿಲ್ಲ. ಕಾರಣ ಪೌರಾಣಿಕ ಕಾಲದ ಕೇಕಯರೊಂದಿಗೆ ಇವರ ಸಂಬಂಧವನ್ನು ನಿರ್ಧರಿಸಿ ಹೇಳುವುದು ಕಷ್ಟಸಾಧ್ಯ. ಕೆಲ್ಲ ಎಂಬ ಪದ ಕನ್ನಡದಲ್ಲಿ ಮಾತ್ರ ಇದ್ದು ಇತರ ದ್ರಾವಿಡ ಭಾಷೆಗಳಲ್ಲಿ ಇದಕ್ಕೆ ಪರ್ಯಾಯ ರೂಪಗಳಾವವೂ ಇಲ್ಲ. ಇದರ ಅರ್ಥವೂ ಏನೆಂದು ತಿಳಿಯದು. ಒಟ್ಟಿನಲ್ಲಿ ಪ್ರಾಚೀನ ಕರ್ನಾಟಕದ ಒಂದು ಪ್ರಬಲ ಜನಾಂಗವಿದಾಗಿದ್ದು ಚರಿತ್ರೆಯಲ್ಲಿ ಮಹತ್ವ ಪೂರ್ಣ ಪಾತ್ರವಹಿಸಿ ಹನ್ನೆರಡನೆಯ ಶತಮಾನದಿಂದ ಕಣ್ಮರೆಯಾಯಿತೆಂದು ಹೇಳ ಬಹುದಾಗಿದೆ.

 

[1] M.A.R. 1911 P-137

[2] E.I. XXXVII-P.31. ಈ ಚಿತ್ರಸೇನ ವಿಜಯಾಂಬು ದ್ವೀಪದಲ್ಲಿ ಆಳುತ್ತಿದ್ದನೆಂದು ಶಾಸನ ಹೇಳುತ್ತದೆ.

[3]ಎಂ.ಎ.ಆರ್. ೧೯೧೫ ಪು. ೩೯

[4] a corpus of Kadamba Inscriptions

[5]ಅದೇ

[6] E.I.Vol VI- p. 18

[7] M.A.R. 1910-11-P. 35.

[8] ‘ಸತ್ಯ ಶುದ್ಧ ಕಾಯಕ ೩-೩/೪

[9] EI -XI P.21 ಮತ್ತು 23

[10]ಕರ್ನಾಟಕ ಇತಿಹಾಸ ಅಕಾಡಮಿ (ಇತಿಹಾಸ ದರ್ಶನ ಸಂ ೧೧ ಪು ೨೨೨)