ಮೂಲ ದ್ರಾವಿಡ ಭಾಷೆ ಪ್ರಾದೇಶಿಕ ಗುಂಪುಗಳಾಗಿ ಒಡೆಯುತ್ತ ಬಂದು ಅದರಲ್ಲಿ ದಕ್ಷಿಣದ್ರಾವಿಡವೆಂಬ ಪ್ರಧಾನಶಾಖೆ ಮೊದಲು ಪ್ರತ್ಯೇಕಗೊಂಡಿತು. ಕಾಲಾಂತರದಲ್ಲಿ ಈ ಮೂಲ ದಕ್ಷಿಣ ದ್ರಾವಿಡ ಭಾಷೆ ಕೂಡ ಸ್ಥಿತ್ಯಂತರ ಹೊಂದಿ ಅದರಿಂದ ತಮಿಳು-ಕನ್ನಡ ಶಾಖೆಗಳು ಪ್ರತ್ಯೇಕಗೊಂಡವು. ಹೀಗೆ ಕನ್ನಡವು ತನ್ನ ಸ್ವತಂತ್ರ ಅಸ್ತಿತ್ವ ಪಡೆದುಕೊಂಡದ್ದು ಕ್ರಿ.ಶ. ಪೂ.ಸು. ೫ನೆಯ ಶತಮಾನವೆಂದು ವಿದ್ವಾಂಸರು ಊಹಿಸುತ್ತಾರೆ.[1]

ದಕ್ಷಿಣ ದ್ರಾವಿಡದಿಂದ ಕನ್ನಡವು ಪ್ರತ್ಯೇಕಗೊಂಡು ತನ್ನ ಸ್ವತಂತ್ರ ಸ್ವರೂಪ ಪಡೆಯುವಲ್ಲಿ ಪ್ರಾದೇಶಿಕತೆಯ ಜೊತೆಗೆ ಆರ್ಯಮೂಲದ ಬೌದ್ಧ-ಜೈನ ಧರ್ಮಗಳ ಪ್ರಭಾವ ಮತ್ತು ನಂದ-ಮೌರ್ಯರ ಆಳ್ವಿಕೆಗಳು ಕೂಡ ಕಾರಣೀಭೂತವಾಗಿವೆ. ಮೌರ್ಯರು ಇಡೀ ಉತ್ತರ ಕರ್ನಾಟಕವನ್ನು ತಮ್ಮ ಅಧೀನಕ್ಕೆ ಒಳಪಡಿಸಿ ಆಡಳಿತಾತ್ಮಕವಾಗಿ ಅಷ್ಟೇ ಅಲ್ಲದೇ ಧಾರ್ಮಿಕವಾಗಿ ಕೂಡ ಪ್ರಭಾವ ಬೀರಿದರು. ಈವರೆಗೆ ಅಶೋಕ ಚಕ್ರವರ್ತಿಯ ಹದಿನಾಲ್ಕು ಶಾಸನಗಳು ಕರ್ನಾಟಕದಲ್ಲಿ ಸಿಕ್ಕಿವೆ. ಇತ್ತೀಚೆಗೆ ಸನ್ನತಿಯಲ್ಲಿ ದೊರೆತ ನಾಲ್ಕು ಅಶೋಕ ಲಿಪಿಗಳಲ್ಲಿ ಎರಡು ಓಡಿಸಾದ ಧೌಲಿ-ಜೌಗಡಾ ಹೊರತು ಇತರತ್ರ ದೊರೆಯದ ಪ್ರತ್ಯೇಕ ಪಾಠವುಳ್ಳವಾಗಿವೆ. ಎಂದರೆ ಅಶೋಕ ಈ ಭಾಗದ ಜನತೆಯ ಸಾಮಾಜಿಕ-ಧಾರ್ಮಿಕ ವಿಚಾರಗಳ ಬಗ್ಗೆ ಸಾಕಷ್ಟು ಆಸ್ಥೆ ವಹಿಸಿದ್ದನೆಂಬುದು ಅವುಗಳಿಂದ ಸ್ಪಷ್ಟವಾಗುತ್ತದೆ.[2] ಸುವರ್ಣಗಿರಿ ಮತ್ತು ಇಸಿಲ ಎಂಬ ಆಡಳಿತ ಕೇಂದ್ರಗಳ ಮೂಲಕ ಅವನು ಕರ್ನಾಟಕದ ರಾಜಕೀಯ, ಧಾರ್ಮಿಕ ಮತ್ತು ಆಡಳಿತ ವಿಷಯಗಳನ್ನು ನಿಯಂತ್ರಿಸುತ್ತಿದ್ದೆನೆಂದು ತಿಳಿಯಬಹುದು. ಇದರಿಂದ ಕನ್ನಡವು ಸಾವಕಾಶವಾಗಿ ಪ್ರತ್ಯೇಕಗೊಳ್ಳತೊಡಗಿ ಕ್ರಿ.ಶ.ದ ಪ್ರಾರಂಭದ ಹೊತ್ತಿಗೆ ಎಂದರ ಸಾತವಾಹನರ ಆಳ್ವಿಕೆಯಲ್ಲಿ ಅದೊಂದು, ಪ್ರತ್ಯೇಕ ಹಾಗೂ ವಿಸ್ತೃತ, ಜನಪದವಾಗಿ ರೂಪಗೊಳ್ಳ ತೊಡಗಿತು. ಈ ಊಹೆಯನ್ನು ಸಿದ್ಧಪಡಿಸುವಲ್ಲಿ ಕರ್ನಾಟಕದಲ್ಲಿ ದೊರೆಯುವ ಪ್ರಾಕೃತ ಶಾಸನಗಳು, ಸಂಸ್ಕೃತ ಪ್ರಾಕೃತ ಕೃತಿಗಳಲ್ಲಿನ ಉಲ್ಲೇಖಗಳು ಮತ್ತು ವಿದೇಶಿ ಪ್ರವಾಸಿಗರ ಬರಹಗಳು ಮುಖ್ಯ ಆಧಾರಗಳಾಗಿವೆ.

ದ್ರಾವಿಡ ಭಾಷೆಗಳು ದಕ್ಷಿಣದಲ್ಲಿ ಬಹುಹಿಂದಿನಿಂದಲೇ ಪ್ರಚಲಿತವಾಗಿದ್ದರೂ ಅವುಗಳು ಬರಹ ರೂಪಕ್ಕೆ ಇಳಿದದ್ದು ಕ್ರಿ.ಶ. ದ ತರುವಾಯವೇ, ಈ ಮೊದಲು ಹೇಳಿದಂತೆ ಪ್ರಾಕೃತ ಶಾಸನಗಳೇ ಈ ಭಾಗದಲ್ಲಿ ಕಂಡು ಬರುವ ಮೊದಲ ದಾಖಲೆಗಳು. ಈಗಾಗಲೇ ಹೇಳಿರುವಂತೆ ರಾಯಚೂರು ಜಿಲ್ಲೆಯ ಮಸ್ಕಿ, ಕೊಪ್ಪಳದ ಗವೀಮಠ ಮತ್ತು ಪಾಲ್ಕಿಗುಂಡು, ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ, ಬ್ರಹ್ಮಗಿರಿ ಮತ್ತು ಜಟಿಂಗರಾಮೇಶ್ವರ, ನಿಟ್ಟೂರು ಮತ್ತು ಉದಗೋಳ (ಬಳ್ಳಾರಿ ಜಿಲ್ಲೆ) ಗುಲಬರ್ಗಾ ಜಿಲ್ಲೆಯ ಸನ್ನತಿ, ಈ ಊರುಗಳಲ್ಲಿ ಒಟ್ಟು ಹದಿನಾಲ್ಕು ಅಶೋಕನ ಶಾಸನಗಳು ದೊರೆತಿವೆ. ಅನಂತರ ಕ್ರಿ.ಶ. ಪೂ.ಸು. ಒಂದನೆಯ ಶತಮಾನಕ್ಕೆ ಸೇರುವ (ಬೆಳಗಾವಿಯ ಮಾಧವಪೂರ-ವಡಗಾವಿ ಪ್ರದೇಶದಲ್ಲಿ) ಒಂದು ಶಾಸನ ಸಿಕ್ಕಿದೆ. ಮಳವಳ್ಳಯಲ್ಲಿ ಚುಟು ಶಾಸನ ದೊರೆತಿದೆ. ಬನವಾಸಿ ಮ್ಯಾಕದೋನಿ, ಸನ್ನತಿಗಳಲ್ಲಿ ಹಲವಾರು ಸಾತವಾಹನ ಶಾಸನಗಳು ಲಭ್ಯವಾಗಿವೆ. ಹಿರೇಹಡಗಲಿಯ ಪಲ್ಲವರ ತಾಮ್ರಪಟ ಅನಂತರಕಾಲದ್ದು. ಇದಲ್ಲದೆ, ಬೆಳವಾಡಗಿ, ಹುಮನಾಬಾದ, ಚಿಕ್ಕಸಿಂದಗಿ, ವಾಸನ (ಧಾರವಾಡ ಜಿ.) ಹಂಪಿ, ಚಿತ್ರದುರ್ಗ (ಚಂದ್ರವಳ್ಳಿ) ಹುರುಸುಗುಂದಿ, ಹಿರೇಮಗಳೂರು, ಮಳವಳ್ಳಿ ಮೊದಲಾದ ಊರುಗಳಲ್ಲಿ ದೊರೆತಿರುವ ಶಾಸನಗಳನ್ನು ಒಟ್ಟಾಗಿ ಸೇರಿಸಿದರೆ ಸುಮಾರು ಒಂದು ನೂರ ಅಯ್ದರಷ್ಟು ಸಣ್ಣ-ದೊಡ್ಡ ಪ್ರಾಕೃತ ಬರಹಗಳು ನಮ್ಮ ಅಧ್ಯಯನಕ್ಕೆ ಲಭ್ಯವಾಗಿದೆ. ಇವೆಲ್ಲ ಶಾಸನಗಳನ್ನು ಬನವಾಸಿ-ಮಳವಳ್ಳಿ, ಸನ್ನತಿ, ಕೊಪ್ಪಳ, ಮತ್ತು ಚಿತ್ರದುರ್ಗ ಪ್ರದೇಶವೆಂದು ನಾಲ್ಕು ಗುಂಪುಗಳಲ್ಲಿ ಸಾಧಾರಣವಾಗಿ ವಿಂಗಡಿಸಿಕೊಳ್ಳಬಹುದು.

ಭಾಷಿಕವಾಗಿ ಈ ಪ್ರಾಕೃತ ಬರಹಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಮೊದಲು ಪ್ರಯತ್ನಿಸಿದವರು ಡಾ. ಎಂ. ಎ. ಮೆಹಂದಳೆ, ಅವರು ತಮ್ಮ ಪ್ರಬಂಧದಲ್ಲಿ ಇವುಗಳನ್ನು ಪಶ್ಚಿಮಗುಂಪು, ದಕ್ಷಿಣಗುಂಪು, ಮಧ್ಯ ಪೂರ್ವಗುಂಪು ಇತ್ಯಾದಿಯಾಗಿ ವರ್ಗೀಕರಿಸಿಕೊಂಡು ಅದರಲ್ಲಿ ಕರ್ನಾಟಕದಲ್ಲಿನ ಬನವಾಸಿಯ ಶಾಸನಗಳನ್ನು ಪಶ್ಚಿಮಗುಂಪಿನಲ್ಲೂ ಪೂರ್ವದ ಶಾಸನಗಳನ್ನು (ಮ್ಯಾಕದೋನಿ ಮು.) ದಕ್ಷಿಣ ಗುಂಪುಗಳಲ್ಲೂ ಸೇರಿಸಿದರು. ಆದರೆ ಅವರು ತಮ್ಮ ಪ್ರಬಂಧದಲ್ಲಿ ಅಧ್ಯಯನಕ್ಕೆ ಒಳಪಡಿಸಿದ ಕರ್ನಾಟಕದ (ಅನಂತರದ) ಪ್ರಾಕೃತ ಶಾಸನಗಳು ಆರು ಮಾತ್ರ. ಇಂಡೋ-ಯುರೋಪಿಯನ್‌ ಮತ್ತು ಇಂಡೋ-ಆರ್ಯನ್ ಭಾಷಾವಿಜ್ಞಾನದ ದೃಷ್ಟಿಯಿಂದ ಈ ಶಾಸನಗಳಿಗೆ ಇರುವ ಮಹತ್ವ ಅಷ್ಟಿಷ್ಟಲ್ಲ.

ಇಂಡೋ-ಆರ್ಯನ್ ಭಾಷೆಗಳ ಚರಿತ್ರೆಯನ್ನು ವೇಧ ಸಂಹಿತಗಳ ಘಟ್ಟ, ರಾಮಾಯಣ-ಮಹಾಭಾರತ ಕಾವ್ಯಗಳ ಘಟ್ಟ. ಬೌದ್ಧ ಧರ್ಮಗ್ರಂಥಗಳ ಪಾಲಿ ಭಾಷೆಯ ಘಟ್ಟ, ತರುವಾಯದ ಅಶೋಕನ ಶಾಸನಗಳು ಮತ್ತು ಕ್ರಿ.ಶ. ದ ಆರಂಭದ ಘಟ್ಟ ಎಂದು ವಿಂಗಡಿಸಿಕೊಳ್ಳಬಹುದು. ಅಶೋಕನ ಶಾಸನಗಳ ಪೂರ್ವ ಮತ್ತು, ವೇದಸಾಹಿತ್ಯದ ಅನಂತರದ ಕಾಲಾವಧಿಯಲ್ಲಿ ಜೈನ ಧರ್ಮದ ಆರ್ಷ ಸಾಹಿತ್ಯ ಎಂದರೆ ಮಹಾವೀರನ ಉಪದೇಶಗಳು ಕೂಡ ವಿಭಿನ್ನ ಭಾಷೆಯ ಹಂತವನ್ನು ತೋರ್ಪಡಿಸುತ್ತವೆಂದು ವಿದ್ವಾಂಸರು ಹೇಳುವರು. ಆದರೂ ಒಟ್ಟಾರೆಯಾಗಿ ಬುದ್ಧ-ಮಹಾವೀರರ ಉಪದೇಶಗಳ ಭಾಷೆ ಮತ್ತು ಪಾಳಿಗಳು ವೈದಿಕ ಸಂಸ್ಕೃತಕ್ಕೆ ಹೆಚ್ಚು ನಿಕಟವಾಗಿರುವುದರಿಂದ ಪ್ರಸ್ತುತ ಕಾಲಾವಧಿಯನ್ನು ಒಂದೇ ಘಟ್ಟವೆಂದು ತಿಳಿಯಬೇಕು.

ಅಶೋಕನ ಶಾಸನಗಳ ಭಾಷೆಯಲ್ಲಿಯೇ ಹಲವಾರು ಪ್ರಾಂತಭೇದಗಳು ಗೋಚರಿಸುತ್ತವೆ. ಭಾರತದ ಉತ್ತರ-ಪಶ್ಚಿಮ ಮತ್ತು ಅಫಘಾನಿಸ್ತಾನದ ಶಾಸನಗಳು, ಗಿರಿನಾರ ಪ್ರದೇಶದ ಶಾಸನಗಳು, ದಕ್ಷಿಣದ ಶಾಸನಗಳು ಇತ್ಯಾದಿಯಾಗಿ ಅವುಗಳ ಭೇದಗಳನ್ನು ವಿದ್ವಾಂಸರು ಈಗಾಗಲೇ ಸೂಚಿಸಿದ್ದಾರೆ.[3] ಅಷ್ಟೇ ಏಕೆ ಕರ್ನಾಟಕದಲ್ಲಿನ ಅವನ ಶಾಸನಗಳಲ್ಲಿಯೇ ಭೇದಗಳನ್ನು ತೋರಿಸಬಹುದು. ಕೊಪ್ಪಳ, ಗವಿಮಠ ಶಾಸನದಲ್ಲಿ ‘ದೇವಾಣಂ ಪಿಯೇಆಹ’ ‘ಮಾಣುಸೇ ಹಿ’ ಎಂದಿದ್ದರೆ. ಉದಗೋಳ ಮತ್ತು ಮಸ್ಕಿಯ ಶಾಸನಗಳಲ್ಲಿ ಕ್ರಮವಾಗಿ ‘ರಾಜಾ ಅಸೋಕೋ ದೇವಾನಂ ಪಿಯೇ’, ಮತ್ತು ‘ದೇವಾನಂ. ಪಿಯಸ, ಅಸೋಕಸ’ ಎಂಬ ಪಾಠಾಂತರಗಳು ಕಂಡು ಬರುತ್ತವೆ. ಕೊಪ್ಪಳ-ಗವಿಮಠ ಶಾಸನದಲ್ಲಿ ನಕಾರ ಮೂರ್ಧನ್ಯವಾಗಿದ್ದರೆ ಉದಗೋಳ ಮತ್ತು ಮಸ್ಕಿಯ ಶಾಸನಗಳಲ್ಲಿ ಅದು ತಾಲವ್ಯವಾಗಿಯೇ ಇದೆ. ಇಂಥ ತೊಡಕುಗಳು ಕರ್ನಾಟಕದ ಇನ್ನಿತರ ಪ್ರಾಕೃತ ಶಾಸನ ಭಾಷೆಯಲ್ಲಿಯೂ ಕಂಡು ಬರುತ್ತವೆ. ಅದಲ್ಲದೆ ಈ ಶಾಸನಗಳ ಭಾಷೆಯನ್ನು ಗ್ರಾಂಥಿಕ ಪ್ರಾಕೃತಗಳಾದ ಮಹಾರಾಷ್ಟ್ರೀ, ಶೌರಸೇನಿ, ಅರ್ಧಮಾಗಧಿ, ಪೈಶಾಚಿ ಇತ್ಯಾದಿಯಾಗಿ ನೋಡುವುದೂ ಶಕ್ಯವಿಲ್ಲ. ‘ಗುಹಾ ಶಾಸನಗಳ ಉಪಭಾಷೆ’ (Lena Dialect) ಎಂದು ವಿದ್ವಾಂಸರು ಇದನ್ನು ಒಟ್ಟಾರೆಯಾಗಿ ಹೆಸರಿಸುತ್ತಾರೆ. ಇಲ್ಲಿ ಅವುಗಳನ್ನು ಕುರಿತು ಸ್ಥೂಲವಾದ ಕೆಲವು ಸಂಗತಿಗಳನ್ನು ಮಾತ್ರ ನೋಡಬಹುದು.

ಸ್ವರಗಳಲ್ಲಿ ಋ. ೠ ಇ ಞ ಐ ಔ ಗಳು ಕಂಡುಬರುವುದಿಲ್ಲ. ಶಷಸಗಳಲ್ಲಿ ಸಕಾರವೊಂದೇ ಕಂಡುಬರುತ್ತದೆ. (ಉದಾ: ವಸಾನಿ) ಮಹಾಪ್ರಾಣಗಳು ಅನೇಕ ವೇಳೆ ಅಲ್ಪಪ್ರಾಣಗಳಾಗಿ ಪರಿವರ್ತಿತವಾಗುತ್ತವೆ. (ಭಕ್ತಿ > ಪಕಿತಿ) ಹಕಾರ ಶೂನ್ಯಗೊಳ್ಳುತ್ತದೆ. ವಿಸರ್ಗ-ಈ ಶಾಸನಗಳಲ್ಲಿ ಲೋಪಿಸಿದ್ದು ಸಾಮಾನ್ಯ. ಅನೇಕ ವೇಳೆ ಅನುಸ್ವಾರವು ಲೋಪಿಸುವುದು ಅಥವಾ ವರ್ಗ ಪಂಚಮವಾಗಿ ಬದಲಾಯಿಸುವುದು ಕಂಡು ಬರುತ್ತದೆ. ಶಬ್ದಾದಿ ದ್ವಿತ್ವಗಳು ಲೋಪಿಸುವುದೂ ಶಾಸನಗಳಲ್ಲಿ ವಿಪುಲವಾಗಿದೆ. ಕೆಲವೆಡೆ ಶಬ್ದಾದಿ ಮತ್ತು ಮಧ್ಯದಲ್ಲಿ ಘೋಷ ವ್ಯಂಜನಗಳು ಅಘೋಷವಾಗಿ ಮಾರ್ಪಡುತ್ತವೆ. ಅಶೋಕನ ಶಾಸನಗಳಲ್ಲಿಯೇ ‘ಪೋರಾಣ ಪಕಿತಿ’ (ಪೌರಾಣ ಭಕ್ತಿ) ಎಂಬ ಪ್ರಯೋಗವಿದೆ. ತ್ಯ, ತ್ಸ್‌, ಗಳು ಚ್, ಛ್‌ ಎಂದೂ ದ್ಯ್, ದ್ಯ್‌ ಗಳು ಜ್‌, ರಝ್, ಎಂದೂ ಬದಲಾಗುತ್ತವೆ. ಮೂರು-ನಾಲ್ಕನೆಯ ಶತಮಾನದ ಶಾಸನಗಳಲ್ಲಿ ಪದಮಧ್ಯ ಸ್ಪರ್ಶ ವ್ಯಂಜನಗಳು ಶೂನ್ಯಗೊಳ್ಳುತ್ತವೆ. ‘ಛಾ ಆ ಪಡಿಮೆ’ (ಬನವಾಸಿ) ಎಂಬಂಥ ಪ್ರಯೋಗಗಳನ್ನು ಈ ಮಾತಿಗೆ ಉದಾಹರಣೆಯಾಗಿ ನೋಡಬಹುದು. ದ್ವಿವಚನ ಶಾಸನಗಳಲ್ಲಿ ಕಂಡುಬರುವುದಿಲ್ಲ. ಅನೇಕ ವೇಳೆ ಷಷ್ಟಿಯ ಬದಲು ಚತುರ್ಥಿ ಪ್ರಯೋಗ ಕಂಡುಬರುತ್ತದೆ. ಭೂತಕಾಲದ ಒಂದೆರಡು ರೂಪಗಳು ಮಾತ್ರ ಕ್ವಚಿತ್ತಾಗಿ ಶಾಸನಗಳಲ್ಲಿ ತೋರುತ್ತವೆ.

ಮೇಲೆ ವಿವರಿಸಿದಂತೆ-ಪ್ರಾಕೃತ ಲಿಪಿಗಳಲ್ಲಿ ಕಂಡುಬರುವ ಭಾಷಾ ವೈಲಕ್ಷಣ್ಯಗಳಿಂದಾಗಿ ಸಂಸ್ಕೃತದಿಂದ ಪ್ರಾಕೃತವು ಅದಾಗಲೇ ಬಹುದೂರ ಸರಿದಿದ್ದುದು ವ್ಯಕ್ತವಾಗುತ್ತದೆ. ಪ್ರಸ್ತುತ ವೈಲಕ್ಷಣ್ಯಗಳು ಕರ್ನಾಟಕದ ಶಾಸನಗಳಲ್ಲಿಯೂ ಗೋಚರಿಸಿವೆ. ಇಲ್ಲಿ ಎತ್ತಿ ಹೇಳಬೇಕಾದ ಸಂಗತಿ ಎಂದರೆ ಮೇಲೆ ತೋರಿಸಿದ ವೈಶಿಷ್ಟ್ಯಗಳು ದ್ರಾವಿಡ ಭಾಷೆಯ ಲಕ್ಷಣಗಳಿಗೆ ತೀರಹತ್ತಿರವಾಗಿರುವುದು.

ಭಕ್ತಿ>ಪಕಿತಿ ಎಂದಾಗಿರುವಲ್ಲಿ ಮೂಲಪದಾದಿಯ ಘೋಷ ಭ. ಅಘೋಷ ಪಕಾರವಾಗಿರುವುದಂತೂ ಶುದ್ಧ ದ್ರಾವಿಡ ಪ್ರಕ್ರಿಯೆ. ಪೈಶಾಚಿ ಪ್ರಾಕೃತದಲ್ಲಿ ಇಂದೊಂದು ಪ್ರಮುಖ ಲಕ್ಷಣವೆನಿಸಿದೆ.* “ಮಹಾ ಪ್ರಾಣಗಳು ಮೂಲತಃ ದ್ರಾವಿಡ ಭಾಷೆಯಲ್ಲಿ ಇರಲಿಲ್ಲವಾದರೂ ಕನ್ನಡ, ತೆಲುಗು ಮಲೆಯಾಳಿ ಮತ್ತು ಉತ್ತರ ದ್ರಾವಿಡದ ಬ್ರಾಹೂಇ ಕುಡುಖ್‌ ಮತ್ತು ಮಲ್ತೋ ಭಾಷೆಗಳಲ್ಲಿ ಮಹಾಪ್ರಾಣಗಳು ಸೇರಿಕೊಳ್ಳಲು ಪ್ರಾಕೃತಭಾಷೆಗಳೇ ಕಾರಣ. ಮೂಲ ಸಂಸ್ಕೃತ ಬದಲಾಯಿಸಿ ಪ್ರಾಕೃತಭಾಷೆಯಾಗುವಲ್ಲಿ ದ್ರಾವಿಡ ಭಾಷೆಗಳ ಪ್ರಭಾವ ಇರುವಂತೆ ದ್ರಾವಿಡ ಭಾಷೆಗಳಲ್ಲಿ ಪ್ರಾಂತ-ಪ್ರದೇಶ ಭೇದಗಳುಂಟಾಗಲು ಪ್ರಾಕೃತ ಪ್ರಭೇದಗಳು ತಕ್ಕಷ್ಟು ಪ್ರಭಾವ ಬೀರಿವೆ. ಕೆಲವೊಮ್ಮೆ ದ್ರಾವಿಡ ಭಾಷೆಗಳೆಂದರೆ ಅವೂ ಪ್ರಾಕೃತದ ಭೇದಗಳೇ ಎಂಬ ಭ್ರಮೆ ಕೂಡ ಕೆಲವರಿಗೆ ಉಂಟಾಗಿದೆ. ಬಾದಾಮಿಯ ಶಾಸನವೊಂದು ಮೇರೆಗಳನ್ನು ಹೇಳುವಾಗ ಬಳಸುವ ಕನ್ನಡ ಭಾಷೆಯನ್ನು ಪ್ರಾಕೃತವೆಂದು ಕರೆದಿದೆ.[4]

ಇಂಥ ಪರಿಸ್ಥಿತಿಯ ನಿರ್ಮಾಣದ ಹಿನ್ನೆಲೆಯಲ್ಲಿ ಜನಾಂಗಿಕ, ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಸಮ್ಮಿಲನವು ಒಂದು ದೊಡ್ಡ ಕಾರಣ. ಬರುಬರುತ್ತ ವೈದಿಕರು ಕೂಡ ಪ್ರಾಕೃತ ಮತ್ತು ದ್ರಾವಿಡ ಭಾಷೆಗಳನ್ನು ಬಳಸತೊಡಗಿರದರು. ಹಿರೇಹಗಲಿಯ ಪಲ್ಲವ ತಾಮ್ರ ಪಟ ಮತ್ತು ಹಲ್ಮಿಡಿ ಶಾಸನಗಳಂಥ ಪ್ರಾಚೀನ ಬರಹಗಳನ್ನು ನಾವು ಲಕ್ಷಿಸಬಹುದು. ಜೈನರು ಪ್ರಾಕೃತಕ್ಕಿಂತ ಹೆಚ್ಚಾಗಿ ಕನ್ನಡವನ್ನು ತಮ್ಮ ಧಾರ್ಮಿಕ ಕೃತಿಗಳಿಗೆ ಬಳಸಿದರು. ಪ್ರಾಕೃತ ಭಾಷೆಯಂತೆ ಸಂಸ್ಕೃತವನ್ನೂ ಅವರು ಮರೆಯಲಿಲ್ಲ. ಬೌದ್ಧರು ಕನ್ನಡದಲ್ಲಿ ಕೃತಿರಚಿಸಿದ್ದು ಕಂಡುಬಂದಿಲ್ಲವಾದರೂ ಸನ್ನತಿಯ ವಿಹಾರಗಳಲ್ಲಿಯೂ ಇತರತ್ರವೂ ಅವರು ಪ್ರಾಕೃತ ಬಳಸಿದಿದ್ದಾರೆ. ಡಂಬಳದ ಬೌದ್ಧ ಶಾಸನ ಕನ್ನಡದಲ್ಲಿದೆ.

ಇನ್ನು ಮೌರ್ಯರ ತರುವಾಯ ಕರ್ನಾಟಕದ ಭಾಗಗಳಲ್ಲಿ ಅಧಿಕಾರಕ್ಕೆ ಬಂದ ಸಾತವಾಹನರು ಹಿಂದೂ ಮತ್ತು ಬೌದ್ಧ ಮತಗಳಿಗೆ ಆಶ್ರಯವೀಯುವುದರ ಜೊತೆಗೆ ಪ್ರಾಕೃತವನ್ನೇ ಅವರು ತಮ್ಮ ರಾಜಭಾಷೆ ಮಾಡಿಕೊಂಡರು; ಅವರ ಅನುವರ್ತಿಗಳಾದ ಚುಟುಗಳು ಅದನ್ನೇ ಮುಂದುವರೆಸಿದರು. ತರುವಾಯ ಬಂದ ಕದಂಬ, ಗಂಗ, ಚಾಳುಕ್ಯ, ರಾಷ್ಟ್ರಕೂಟ ಮನೆತನಗಳವರೂ ಸೇಂದ್ರಕ, ಸಾಂತರ, ಸೇನವಾರ, ಪುನ್ನಾಟ, ಬಾಣ ಮೊದಲಾದ ಸಾಮಂತ ವರ್ಗದವರೂ ಪ್ರಾಕೃತದಿಂದ ಬದಲಾಯಿಸಿ ಕನ್ನಡ ಮತ್ತು ಸಂಸ್ಕೃತಗಳನ್ನು ತಮ್ಮ ಆಡಳಿತದಲ್ಲಿ ಬಳಸಿದರು. ಮೊದಮೊದಲು ಕದಂಬರು ಪ್ರಾಕೃತವನ್ನು ಬಳಸಿದರೂ ತರುವಾಯ ಅದನ್ನು ದೂರಮಾಡಿ ಕನ್ನಡ ಮತ್ತು ಸಂಸ್ಕೃತಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಿದರು. ಅವರ ಕಾಲಾವಧಿಯಲ್ಲಿ ಕನಿಷ್ಠ ನಾಲ್ಕು ಕೆಲಗುಂದ್ಲಿ ಶಾಸನ, ಅಜವರ್ಮನ (ಇಮ್ಮಡಿ ಕೃಷ್ಣವರ್ಮನ ಮಗ)ನ ಕಂಪ್ಲಿಶಾಸನ[5] ಮತ್ತು ಭೋಗಿವರ್ಮನ ತಗರೆಯ ತಾಮ್ರಪಟದ ಅಂತ್ಯದ ಆಯ್ದ ಸಾಲುಗಳ ಬರಹ. ಇವು ಕನ್ನಡದಲ್ಲಿವೆ. ಕನ್ನಡವನ್ನು ದ್ವಿತೀಯ ರಾಜ್ಯಭಾಷೆಯಾಗಿ ಬಳಕೆಗೆ ತಂದದ್ದು ಕದಂಬ ಮನೆತನದ ಹೆಮ್ಮೆಯ ವಿಷಯ, ಹೀಗೆ ಕುಂತಲೇಶ್ವರರೆಂದು ಅವರನ್ನು ಕರೆದುದನ್ನು ಸಾರ್ಥಕಗೊಳಿಸಿದ ಮನೆತನ ಕದಂಬರದು. ಇವರು ಅಚ್ಚ ಕನ್ನಡಿಗರಾಗಿದ್ದು ಇದೇ ನೆಲದಲ್ಲಿ ಹುಟ್ಟಿ ಬೆಳೆದವರು ತರುವಾಯ ಬಾದಾಮಿ ಚಾಲುಕ್ಯರು ಮತ್ತು ರಾಷ್ಟ್ರಕೂಟರು ಕನ್ನಡದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡವನ್ನು ಪ್ರಯೋಗಿಸಿದರು. ರಾಷ್ಟ್ರಕೂಟರು ತಾಮ್ರಪಟಕ್ಕೂ ಕನ್ನಡವನ್ನು ಬಳಸಿದ್ದೊಂದು ವಿಶೇಷ ಸಂಗತಿಯೇ ಸೈ. ಗುಜರಾತದಲ್ಲಿ ದೊರೆತ ತಾಮ್ರ ಪಟಗಳಲ್ಲಿ ರಾಷ್ಟ್ರಕೂಟರು ಅಂದಿನ ಕನ್ನಡ ಲಿಪಿಯಲ್ಲಿ ತಮ್ಮ ಅಂಕಿತ ಹಾಕುತ್ತಿದ್ದ ಸಂಗತಿಯನ್ನು ಡಾ. ಅಳ್ತೇಕರ ಎತ್ತಿತೋರಿಸಿದ್ದಾರೆ.

ಹೀಗೆ ರಾಜಕೀಯವು ಕನ್ನಡ ಭಾಷೆ, ಕರ್ನಾಟಕತ್ವದ ಬೆಳವಣಿಗೆಗೆ ಪ್ರಧಾನ ಶಕ್ತಿಯಾಗಿ ವರ್ತಿಸಿರುವಂತೆ ಧರ್ಮಗಳು ಈ ದಿಸೆಯಲ್ಲಿ ತಮ್ಮ ಅಚ್ಚಳಿಯದ ಪ್ರಭಾವ ಬೀರಿವೆ ಎಂಬುದನ್ನು ಈಗಾಗಲೇ ಹೇಳಿದೆ. ಮೌರ್ಯ-ಸಾತವಾಹನರ ಕಾಲದ ಬೌದ್ಧಧರ್ಮ ಕರ್ನಾಟಕದಲ್ಲಿ ಹಲವು ನೆಲೆಗಳನ್ನು ಸ್ಥಾಪಿಸಿತ್ತು. ಅವುಗಳಲ್ಲಿ ಸನ್ನತಿ ತುಂಬ ಮುಖ್ಯವಾದುದು. ಸನ್ನತಿ ಮತ್ತು ಅದರ ಪರಿಸರದಲ್ಲಿ ಈಗ ಸು. ೭೭ ರಷ್ಟು ಪ್ರಾಕೃತ ಶಾಸನಗಳು ಸಿಕ್ಕಿವೆ. ಬೌದ್ಧರಿಗಿಂತ ಜೈನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಲವಾರು ರಾಜಮನೆತನಗಳನ್ನು ಮತಾಂತರಸಿದರು. ಹಾಗೂ ಕೊಪ್ಪಳ, ಹಲಸಿಗೆ, ಬನವಾಸಿ, ಶ್ರವಣಬೆಳ್ಗೊಳ, ಲಕ್ಷ್ಮೇಶ್ವರ, ಬಸ್ತಿಪೂರ ಮೊದಲಾದಡೆಗಳಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿದರು. ಹಲವು ಜನ ಜೈನಾಚಾರ್ಯರು ಕನ್ನಡ, ಪ್ರಾಕೃತ ಮತ್ತು ಸಂಸ್ಕೃತಗಳಲ್ಲಿ ಕೃತಿ ರಚನೆ ಮಾಡಿದರು. ಇದರಿಂದಾಗಿ ಕನ್ನಡ ಭಾಷೆ-ಸಾಹಿತ್ಯಗಳು ವಿಕಾಸಗೊಳ್ಳಲು ಅಪಾರ ಸಹಾಯವುಂಟಾಯಿತು. ಇಂತು ನಮ್ಮ ನಾಡಿಗೆ ಮಹತ್ತರವಾದ ಸಂಸ್ಕೃತಿ ಸಂಪದವನ್ನು ತಂದ ಹಿರಿಮೆ ಪ್ರಾಕೃತದ್ದೆ. ಈ ದೃಷ್ಟಿಯಿಂದ ಪ್ರಾಕೃತ ಸಾಹಿತ್ಯ ಮತ್ತು ಶಾಸನಗಳನ್ನು ಅಧ್ಯಯನ ಮಾಡಬೇಕಾದುದು ಬಹಳಷ್ಟು ಇದೆ. ಕರ್ನಾಟಕತ್ವದ ವಿಕಾಸದಲ್ಲಿ ಪ್ರಾಕೃತವು ನೀಡಿದ ಕೊಡುಗೆಯನ್ನು ನಿಖರವಾಗಿ ಗುರುತಿಸುವಲ್ಲಿ ನಮ್ಮ ವಿದ್ವಾಂಸರು ಇನ್ನೂ ಕಾರ್ಯ ಪ್ರವರ್ತಗೊಳ್ಳಬೇಕಿದೆ.

ಮೇಲೆ ವಿವರಿಸಿದಂತೆ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳ ಹಿನ್ನಲೆಯಲ್ಲಿ ಕನ್ನಡ ಸಂಸ್ಕೃತಿ ವಿಕಾಸಗೊಂಡ ಬಗೆಯನ್ನು ಗುರುತಿಸಿಕೊಳ್ಳಲು ಶಾಸನ ಮತ್ತು ಸಾಹಿತ್ಯಗಳ ಜತೆಗೆ ಕೊಂಚ ವಿದೇಶೀ ಬರಹಗಳೂ ಸಹಾಯ ನೀಡುತ್ತವೆ. ಇವೆಲ್ಲವನ್ನಿಲ್ಲಿ ಒಂದಿಷ್ಟು ವಿವರವಾಗಿ ಪರಿಶೀಲಿಸಬಹುದು:

ಅಶೋಕನ ಬ್ರಹ್ಮಗಿರಿ ಮತ್ತು ಸಿದ್ಧಾಪುರ……………. ಶಾಸನಗಳಲ್ಲಿ ‘ಇಸಿಲ’ ಎಂಬ ಸ್ಥಳವಾಚಕವಿದ್ದು ಅದು ಕನ್ನಡ ಮೂಲದ ಪದವೆಂದು ಡಾ. ಡಿ. ಎಲ್‌. ನರಸಿಂಹಾಚಾರರು ಹೇಳಿದ್ದಾರೆ.[6] ಇದರಲ್ಲಿನ ಇಲ್‌ | ಇಲ ಎಂಬುದು ಸ್ಥಳವಾಚಕಗಳಲ್ಲಿ ಕಂಡುಬರುವ ಒಂದು ವಾರ್ಗಿಕ ರೂಪ. ಆದರೆ ಇಸ್‌ ಎಂದರೆ ಏನೆಂದು ಹೇಳುವುದು ಕಷ್ಟ. ಅವರೇ ಹೇಳುವಂತೆ ಇದು ಎಯಿಲ್, ಎಸಿಲ್ ಎಂಬ ಮೂಲರೂಪದಲ್ಲಿದ್ದಿರಬಹುದು.

ತರುವಾಯದ ಮಾಧವಪುರ ವಡಗಾವಿ (ಬೆಳಗಾವಿ) ಶಾಸನದಲ್ಲಿ ಕಂಡು ಬರುವ ‘(ಸ) ಣಾಟಪತಿಸ’ ಎಂಬ ಪ್ರಯೋಗ ಕಂಡು ಬರುತ್ತದೆ. ಇಲ್ಲಿ ‘ಣಾಟ ಪತಿ’ ಎಂಬ ಪ್ರಾತಿಪದಿಕಕ್ಕೆ ‘ಸ’ ಎಂಬ ಷಷ್ಠಿ ವಿಭಕ್ತಿ ಪ್ರತ್ಯಯ ಸೇರಿದೆ. ಪ್ರಾಕೃತ ಶಾಸನಗಳಲ್ಲಿ ನಕಾರಕ್ಕೆ ಬದಲು ಣಕಾರ ಬರುವುದು ಅಪರೂಪವೇನಲ್ಲ. ಆದುದರಿಂದ ಇದು ‘ನಾಟಪತಿ’ ಎಂಬ ಅರಿಸಮಾಸ. ‘ನಾಟ’ ಎಂದರೆ ‘ನಾಡು’ ಎಂಬುದರ ಪ್ರಾಚೀನ ರೂಪ. ಪುನ್ನಾಟ, ಕರ್ನಾಟಕ ಎಂಬ ರೂಪಗಳಲ್ಲಿಯೂ ‘ನಾಟ’ ಎಂಬುದು ಉತ್ತರಪದವಾಗಿರುವುದನ್ನು ನೋಡಬಹುದು. ಆದುದರಿಂದ ಕನ್ನಡ ಭಾಷೆಯ ನಿರ್ದಿಷ್ಟಪದವೆಂದು ಇದನ್ನು ಸ್ವೀಕರಿಸಬಹುದು.

ಸಾತವಾಹನ ರಾಜರುಗಳಲ್ಲಿ ಪುಳುಮಾಯಿ ಮತ್ತು ವಿಳಿವಾಯಕುರ ಎಂಬೆರಡು ಹೆಸರುಗಳು ಕಂಡುಬರುತ್ತವೆ. ಇವುಗಳಿಗೆ ಪ್ರಾಕೃತದಿಂದ ವ್ಯತ್ಪತ್ತಿಹೇಳುವುದು ಸಾಧ್ಯವಿಲ್ಲ. ಇವುಗಳಲ್ಲಿ ಪುಳುಮಾಯಿ | ವಿ ಎಂಬುದರ ಪೂರ್ವಪದ ಪುಳುಮ ಎಂದೂ ಉತ್ತರ ಪದ ಅಯ್‌>ಅಯಿ/ಆಯ್‌>ಆಯಿ ಎಂದಿರುವಂತಿದೆ. ಪುಳುಮ | ಪುಡುಮ ಎಂದರೆ ‘ಕಿರಿಯ’ ಎಂದು ಹೇಳಬಹುದು. ವಿಳಿವಾಯ್‌ ಎಂದರೆ ಬಿಳಿ ಬಾಯ್‌ (ಶ್ವೇತಮುಖ) ಎಂಬ ಪೂರ್ವಪದವಿರುವಂತೆ ತೋರುತ್ತದೆ ‘ಕುರ’ ಎಂಬ ಇದರ ಉತ್ತರ ಪದವನ್ನು ವಿವರಿಸುವುದು ಕಠಿಣ.

ಸನ್ನತಿಯ ಶಾಸನಗಳಲ್ಲಿ ಮೂಡಾಣ ಮುನಾಳಿ ಬಲಿವದಾರ ಎಂಬ ಸ್ಥಳವಾಚಕಗಳು ಕಂಡುಬರುತ್ತವೆ. ಮೂಡಾಣ ಎಂಬುದು ‘ಮೂಡಣ’ ಎಂದಿರುವ ದಿಗ್ವಾಚಿಯ ಪೂರ್ವರೂಪ. ಅದೇ ರೀತಿ ಮುನಾಳಿ ಎಂಬುದು ಮುನ್+ಪಳ್ಳಿ ಎಂಬುದರಿಂದ ರೂಪಗೊಂಡದು. ‘ಬಲಿವದಾರ’ ಎಂಬುದು ಕನ್ನಡ ಮೂಲದ್ದೆಂದು ಹೇಳಬಹುದಾದರೂ ನಿರುಕ್ತಿ ಹೇಳುವುದು ಕಷ್ಟ. ಅದೇ ಶಾಸನಗಳಲ್ಲಿ ಕಂಡುಬರುವ ಸೇನಣ್ಹ ನಗಿಪ ಮತ್ತು ಸಂಕಪ ಎಂಬ ವ್ಯಕ್ತಿ ವಾಚಕಗಳೂ ಕನ್ನಡ ಮೂಲದವಾಗಿರುವ ಸಾಧ್ಯತೆಯಿದೆ. [7]

ಮಳವಳ್ಳಿಯ ಶಾಸನಗಳಲ್ಲಿ ಆ ಊರನ್ನು ಮಟಟಪಟ್ಟಿ ಎಂದು ಕರೆಯಲಾಗಿದೆ. ಕ್ರಿ.ಶ. ಎರಡನೆಯ ಶತಮಾನದ ಚುಟುಶಾಸನದಲ್ಲಿಯೇ ಮಟ್ಟಪಟ್ಟಿಯ ಉಲ್ಲೇಖ ಬಂದಿದೆ. ಪಟ್ಟಿ ಈಗಲೂ ಕರ್ನಾಟಕದ ಸ್ಥಳವಾಚಕಗಳಲ್ಲಿ ಕಂಡುಬರುವ ಹೆಚ್ಚು ಪ್ರಸಾರದಲ್ಲಿರುವ ವಾರ್ಗಿಕ ರೂಪ ಪಡು ಧಾತುವಿನಿಂದ ‘ನಿಷ್ಪನ್ನವಾದುದು ಮಟ್ಟ ಎಂದರೆ ಸಮತಟ್ಟಾದ ಎಂದು ಈಗಿರುವ ಅರ್ಥವನ್ನೇ ಹೊಂದಿರುವಂಥದು. ಅದೇ ರೀತಿ ಈ ಶಾಸನದಲ್ಲಿ ಕಂಡುಬರುವ “ಕೊಂಡಮಾನ” ಎಂಬ ವ್ಯಕ್ತಿಯ ಹೆಸರೂ ಕನ್ನಡ ಮೂಲದ್ದು. ಕೊಂಡ-ಅಮ್ಮನ್‌ (ಅಮ್ಮಾನ್‌) ಎಂದು ಇದನ್ನು ಬಿಡಿಸಬಹುದು. ಈ ಚುಟು ಶಾಸನದ ಕೆಳಗಡೆ ಬರೆಯಲ್ಪಟ್ಟ ಕದಂಬ ಶಾಸನದಲ್ಲೂ ಮಟ್ಟಪಟ್ಟಿ, ಕೊಂಡಮಾನ ಎಂಬ ಪದಗಳ ಉಲ್ಲೇಖವಿರುವುದರ ಜೊತೆಗೆ ಬೇರೆ ಹನ್ನೆರಡು ಸ್ಥಳವಾಚಕಗಳು ಕಂಡು ಬರುತ್ತವೆ. ವೆಟ್ಟಕ್ಕಿ, ವೇಗೂರಂ, ಮರಿಯಸಾ (ಸೆ) ಕೊಂಗಿನಗರ ಸೋಮಪಟ್ಟಿ ಎಕ್ಕಟ್ಟಾ(ದ್ಧಾ)ಹಾರ, ಕುಂದತಪುಕಂ, ಕೋಣತಪುಕ ಕುನ್ದ ಮುಚ್ಚುಂಡಿ ಅಪರ ಮುಚ್ಚುಂಡಿ ಕಪ್ಪೆನ್ನಲಾ ಕರಿಪೆಂದೂಲ ಈ ಗ್ರಾಮನಾಮಗಳಲ್ಲಿ ವೇಗೂರವೆಂಬುದುರ ಅರ್ಥವಿವರಿಸಲು ಕಷ್ಟ ಪಡಬೇಕಿಲ್ಲ. ಕುಂದತ ಪುಕ, ಕೋಣತಪುಕ ಇವೆರಡು ಹೆಸರುಗಳಲ್ಲಿ ‘ಪುಕವು ಪುರ’ ಎಂಬುದನ್ನು ಬರೆಯುವಲ್ಲಿ ಆಗಿರುವ ತಪ್ಪೆಂದು ಕಾಣುತ್ತದೆ. ಕುಂದ ಎಂದರೆ ಗುಡ್ಡವೆಂದು ಅರ್ಥ ಕೋಣ ಎಂಬುದು ಈಗಲೂ ಬಳಕೆಯಲ್ಲಿರುವ ಪದ. ಇನ್ನುಳಿದ ಹೆಸರುಗಳಲ್ಲಿ ಸೋಮಪಟ್ಟಿ ಎಂಬುದು ಅರಿಸಮಾಸವಾಗಿದ್ದು ಎಕ್ಕದ್ಧಾಹಾರ ಎಂಬುದು ಸ್ವೀಕೃತಪದ. ಉಳಿದವುಗಳೂ ಕನ್ನಡ ಮೂಲದವಾದರೂ ಅರ್ಥವಿವರಣೆಗೆ ಹೆಚ್ಚಿನ ಶ್ರಮ ಪಡಬೇಕಾಗುತ್ತದೆ., ಒಟ್ಟಿನಲ್ಲಿ ವೆಟ್ಟ, ಊರ, ಮಟ್ಟ-ಪಟ್ಟಿ, ಕುನ್ದ (=ಕುನ್ಱ)ಕೋಣ ಕರಿ ಇವಿಷ್ಟು ಕನ್ನಡ ಪ್ರಕೃತಿಗಳು ಇಲ್ಲಿರುವುದು ಸ್ಪಷ್ಟ. ಹಿರೇಹಡಗಲಿಯ ಪಲ್ಲವ ಶಾಸನದಲ್ಲಿ ಆಪಿಟ್ಟಿ ಎಂಬ ಗ್ರಾಮನಾಮವಿದೆ. ಚಂದ್ರವಳ್ಳಿ ಶಾಸನದಲ್ಲಿ ‘ಪುನ್ನಾಟ’ ರಾಜ್ಯದ ಉಲ್ಲೇಖವಿದೆ. ಬೆಳ್ವಾಡಗಿ, ಶಾಸನದಲ್ಲಿನ ‘ಕಲಕ’ ಎಂಬ ವ್ಯಕ್ತಿವಾಚಕದಲ್ಲಿ ಕನ್ನಡದ ಪ್ರಕೃತಿ ‘ಕಲ್’ ಎಂಬುದಿದೆ. ‘ವೇಗೂರ’ ಪದದಲ್ಲಿನ ಮಧ್ಯ-ಗ-ಕುನ್ದ ದಲ್ಲಿನ ದಂತ್ಯ-ದ- ಮೂಡಾಣದಲ್ಲಿನ-ಡ- ಇಂಥ ಘೋಷ ಸ್ಪರ್ಶಗಳಿಗೆ ತಮಿಳಿನಲ್ಲಿ ಪ್ರತ್ಯೇಕವಾದ ಲಿಪಿ ಸಂಕೇತಗಳಿಲ್ಲ. ಆದ್ದರಿಂದ ಇವೆಲ್ಲ ಕನ್ನಡದ ಅಸ್ತಿತ್ವವನ್ನು ಸಿದ್ಧಪಡಿಸುವ ನಿಸ್ಸಂದಿಗ್ಧ ಪುರಾವೆಗಳು.

ಕ್ರಿ.ಶ. ಸು. ೨ನೆಯ ಶತಮಾನದ ಅವಧಿಯಲ್ಲಿಯೇ ಕರ್ನಾಟಕದ ವಾಣಿಜ್ಯ-ವ್ಯಾಪಾರ ಸಂಬಂಧಗಳು ಪ್ರಾಚೀನ ಗ್ರೀಸಿನೊಂದಿಗೆ ಸಂಬಂಧಪಡೆದಿದ್ದವು. ಆದ್ದರಿಂದ ವಿದೇಶಿಯರು ಅಂದಿನ ಕರ್ನಾಟಕದ ಹಲವು ಪ್ರದೇಶಗಳನ್ನು ಅರಿತವರಾಗಿದ್ದರು. ಎಂತಲೆ ಗ್ರೀಕ ಭೋಗೋಲಜ್ಞನಾದ ಟಾಲೆಮಿ ‘ನೆಲ್ಕುಂದ’. ಹಿಪ್ಪೋಕುರ, ಬಲ್ತಿ ಪಟ್ಟಣ, ಬೈಜಂತಿಯನ್, ನಿತ್ರಾ, ತಗರ ಬೈಥನ, ನಗರೂರಿಸ್‌, ಇಂಡೆ, ಸಿರಿಮಲಗ, ಕಲ್ಲಿಗೇರಿಸ್‌ ಮೊದೊಗಲ, ಪತಿರ್ಗಲ, ಬನೌಸಿ, ಒಲೊ ಖೊಯಿರ, ಪಸಗೆ ಮಾಸ್ತನೂರ, ಕೊರೆಲ್ಲೂರ ಪೊನ್ನಟ, ಕರೂರ, ಅರೆಂಬೂರ ಬೆದರಿಸ್‌ ಮೊದಲಾದ ಪ್ರಾಚೀನ ಕರ್ನಾಟಕದ ಊರು | ಪ್ರದೇಶಗಳ ಹೆಸರು ಹೇಳಿದ್ದಾನೆ. ಇವುಗಳಲ್ಲಿ ಬಲ್ತಿ ಪಟ್ಣ=ಬಲದೇವ ಪಟ್ಟಣ. ಬೈಜಂತಿಯನ್‌=ವೈಜಯಂತಿ, ನಿತ್ರಾ=ನೇತ್ರಾ(ವತಿ) ನದಿ ಪ್ರದೇಶ. ತಗರ=ಪ್ರಾಚೀನ ಶಿಲಾಹಾರರ ಮೂಲ ಪಟ್ಟಣ) ತೇರ. ಬೈಥನ=ಪೈಠಣ, ಇಂಡೇ=ಇಂಡಿ (ವಿಜಾಪುರ ಜಿ.) ಸಿರಿಮಲಗ=ಚಿಮ್ಮಲಗಿ, ಮೊದೊಗಲ=ಮುದುಗಲ್ಲು, ಪೆತಿರ್ಗಲ=ಪಟ್ಟದಕಲ್ಲು, ಬನೌಸಿ-ಬನವಾಸಿ, ಒಲೋಖೊಯಿರ-ಆಳುವಖೇಡ, ಪಸಗೆ-ಪಲಸಿಗೆ, ಪೊನ್ನಟ=ಪುನ್ನಾಟ ಎಂದು ವಿದ್ವಾಂಸರು ಕರ್ನಾಟಕದಲ್ಲಿನ ಇಂದಿನ ಪರಿಚಯದ ಊರು | ಪ್ರದೇಶಗಳನ್ನು ಗುರುತಿಸಿದ್ದಾರೆ. ಪಟ್ಟದಕಲ್ಲು ಮತ್ತು ಬಲದೇವ ಪಟ್ಟಣಗಳ ಹೊರತು ಇತರ ಸಮೀಕರಣಗಳನ್ನು ಸುಲಭವಾಗಿ ಒಪ್ಪಬಹುದು. ಹಿಪ್ಪೊ ಕುರವು ಯಾವ ಪ್ರದೇಶವೆಂದು ಇನ್ನೂ ನಿರ್ಧಾರವಾಗಿಲ್ಲ. ಕೊರೆಲ್ಲೂರ, ಕರೂರ, ಅರೆಂಬೂರ ಇವುಗಳನ್ನು ನಿರ್ದಿಷ್ಟವಾಗಿ ಸೂಚಿಸಿದಿದ್ದರೂ ಇವೆಲ್ಲ ಕನ್ನಡ ಮೂಲದ ಊರ ಹೆಸರುಗಳೆಂದು ಧಾರಾಳವಾಗಿ ಹೇಳಬಹುದು. ಬೆದರಿಸ್‌ ಎಂದರೆ ಬಿದರೆ ಎಂದು ಈ ಹೆಸರಿನ ಹಲವು ಊರುಗಳು ಉತ್ತರ ಕರ್ನಾಟಕದಲ್ಲಿವೆ. ಸುಮಾರು ಇದೇ ಅವಧಿಯ ಎರಿಥ್ರಿಯನ್ ಸಮುದ್ರ ಪ್ರವಾಸಿಯ ದಿನಚರಿ ಪೆರಪ್ಲಸ್‌ ಎಂಬುದರಲ್ಲಿ ಮಸಾಲೆ ಸಾಮಾನುಗಳಿಗೆ ಪ್ರಸಿದ್ಧಿ ಹೊಂದಿದ್ದ ಬರಕೆ ಸಮೀಪದ ನೆಲ್ಕುಂದ ಎಂಬ ಬಂದರು ಪಟ್ಟಣ ಉಲ್ಲೇಖಗೊಂಡಿದೆ. ಬರಕೆ ಎಂದರೆ ಇಂದಿನ ಬಾರಕೂರ ಆಗಿದ್ದು ಅದರ ಸಮೀಪದಲ್ಲಿದ್ದ ಬಂದರು ಪಟ್ಟಣ ನೆಲ್ಕುಂದವಾಗಿರಬಹುದು.

ಅಕ್ಸಿರಿಯಾಂಕಿಸದಲ್ಲಿ ದೊರೆತ ಗ್ರೀಕ ಪ್ರಹಸನದಲ್ಲಿ ಕನ್ನಡ ಮಾತುಗಳಿವೆಯೆಂದು ಹಲವು ವಿದ್ವಾಸಂರು ಅಭಿಪ್ರಾಯ ಪಟ್ಟಿದ್ದಾರೆ. ಈ ಮಾತುಗಳು ಧ್ವನಿಮಾ ಆಕೃತಿಮಾತ್ಮಕವಾಗಿ ಕನ್ನಡ ಭಾಷೆಯವೆಂದು ಹೇಳುವುದು ಕಷ್ಟ. ಆದರೆ ‘ಮಲ್ಪಿನಾಯಕ’ ಎಂದಿರುವ ಪ್ರಯೋಗದಲ್ಲಿ ಮಲ್ಪಿ ಮಲ್ಪೆ ಬಂದರಿನ ಉಲ್ಲೇಖ ಇರುವದನ್ನು ಗುರುತಿಸಬಹುದು. ಅಂತೂ ಈ ಮೂವರೂ ವಿದೇಶ ಬರಹಗಾರರಿಂದ ವಿಶೇಷವಾಗಿ ಟಾಲೆಮಿಯಿಂದ ಕರ್ನಾಟಕದ ಹಲವು ಸ್ಥಳವಾಚಕಗಳು ಪರಿಚಯ ನಮಗಾಗುತ್ತದೆ.

ಟಾಲೆಮಿ ಹೇಳಿರುವ ಸ್ಥಳ, ಪ್ರದೇಶಗಳಲ್ಲಿ ಆಳುವ ಖೇಡ, ಪುನ್ನಾಟ, ಹಿಪ್ಪೊಕುರ, ತಗರ ಇವು ಅಂದಿನ ಚಿಕ್ಕ ದೊಡ್ಡ ರಾಜ್ಯಗಳು. ಪೈಠಣ, ಬನವಾಸಿ, ವೈಜಯಂತಿ, ಬಾದಾಮಿಗಳು ಪ್ರಾಂತೀಯ ಕೇಂದ್ರಗಳು. ಬಹುಶಃ ಇಂಡಿ, ಮುದಗಲ್‌, ಮಲ್ಪೆ ಮೊದಲಾದ ಊರುಗಳು ಅಂದಿನ ತುಂಡರಸರ ಕೇಂದ್ರ ಪಟ್ಟಣಗಳು. [8]

ಮಹಾಭಾರತದಲ್ಲಿ ವನವಾಸಿಕಾ ಮಹಿಷಿಕ ಮತ್ತು ಕರ್ನಾಟಕಕ್ಕೆ ಪರ್ಯಾಯವಾಗಿ ‘ಕುಂತಲ’ ಶಬ್ದಗಳ ಪ್ರಯೋಗವಿದೆ.[9]ವಿದ್ವಾಂಸರು ಇವನ್ನು ಕುರಿತಂತೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಮಹಾಭಾರತದ ಪರಿಷ್ಕೃತ ಆವೃತ್ತಿಯಲ್ಲಿ ಪುಣೆಯ ಭಂಡಾರಕರ ಪ್ರಾಚ್ಯ ವಿದ್ಯಾಸಂಸ್ಥೆಯ ಪಂಡಿತರು ‘ಕರ್ನಾಟಕ’ವೆಂಬುದರ ಬದಲು ‘ಕುಂತಲ’ವೆಂಬ ಪಾಠಾಂತರವನ್ನಿಟ್ಟುಕೊಂಡಿದ್ದಾರೆ. ಆದರೆ ಈ ಮಹಾಕಾವ್ಯದ ಹಲವು ಪಾಠಗಳಲ್ಲಿ ಕರ್ನಾಟಕ ಕರ್ಣಾಟಕ ಪದ ಪ್ರಯೋಗವಿದೆ. ಅದರ ಮುಂಬೈ ಆವೃತ್ತಿಯಲ್ಲಿ ‘ಕರ್ಣಾಟ್ಟ’ ಎಂಬ ಟಕಾರದಿತ್ವವುಳ್ಳ ಪ್ರಯೋಗವಿದೆ. ಎಂದು ಸೊರೆನಸನ್‌ ತಿಳಿಸುತ್ತಾರೆ.[10] ನಮ್ಮ ನಾಡಿನ ಹೆಸರಾಗಿ ‘ಕರ್ಣಾಟ್ಟ’ ಎಂಬ ರೂಪ ಬೇರಾವ ಗ್ರಂಥದಲ್ಲಾಗಲಿ ಶಾಸನಗಳಲ್ಲಾಗಲಿ ಎಲ್ಲಿಯೂ ಕಂಡುಬರುವುದಿಲ್ಲ. ಅಷ್ಟೆ ಅಲ್ಲ, ಕನ್ನಡ ವಿದ್ವಾಂಸರೇ ಈ ಶಬ್ದವನ್ನು ಕಂಡು ಕೇಳಿ ಅರಿಯರು. ದೀರ್ಘಸ್ವರಕ್ಕೆ ಪರದ ಸಜಾತೀಯ ದ್ವಿತ್ವಗಳಿರುವುದು ಕ್ರಿ.ಶ. ೧ನೆಯ ಶತಮಾನದ ಕನ್ನಡದ ವೈಶಿಷ್ಟ್ಯ.

೩ನೆಯ ಶತಮಾನದ ವಾತ್ಸಾಯನನ ಕಾಮಸೂತ್ರಗಳಲ್ಲಿ ವನವಾಸಿಕಾ ಮತ್ತು ಕುಂತಲದಸಾಕರ್ಣಿಗಳ ಉಲ್ಲೇಖ ಬಂದಿದೆ. ಕ್ರಿ.ಶ. ಸು. ೬ನೆಯ ಶತಮಾನದ ಬೃಹತ್ ಸಂಹಿತೆಯಲ್ಲಿ ವರಾಹವಿಹಿರ ಕಂಕಣ, ತೆಂಕಣ, ವನವಾಸಿ, ಫಣಿಕಾರ, ಕೊಂಕಣ, ಕರ್ಣಾಟ, ಮಹಾಟವಿ, ಕೊಲ್ಲಗಿರಿ, ಕಾವೇರ್ಯ, ಋಷ್ಯಮೂಕ, ವೆಲ್ಲೂರ ಪಿಶಿಕ, ಋಷಿಕ, ಆರ್ಯಕ, ಬಲದೇವಪಟ್ಟಣ, ದಂಡಕಾವನ, ಕುಂತಲ, ಕುಂಜರದಾರಿ, ಇಷ್ಟಿಕ, ಗೋಮತಿ ಮೊದಲ ಪ್ರದೇಶಗಳ ಹೆಸರು ಹೇಳಿದ್ದಾನೆ. ವನವಾಸಿ, ಕೊಂಕಣ, (ಕರ್ಣಾಟಕ) ಕಾವೇರ್ಯ ಬಲದೇವ ಪಟ್ಟಣ ಮತ್ತು ಕುಂತಲಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳು. ಪ್ರಾಚೀನ ತಮಿಳು ಕೃತಿಯಾದ ಅಹನಾನೂರಿನಲ್ಲಿ ನೆಡುಂಚೆಳಿಯನ್‌ ಎಂಬ ರಾಜ ಉರುಮೈಯೂರು (ಮೈಸೂರು) ಒಡೆಯನನ್ನು ಸೋಲಿಸಿದ ನೆಂದಿದೆ.[11]ತರುವಾಯದ ಶಿಲಪ್ಪದಿಗಾರಂ ಮಹಾಕಾವ್ಯದಲ್ಲಿ ಗಂಗರು. ಕದಂಬರು ಮತ್ತು ಕೊಡುಂಕರುನಾಡುಗರ್‌ (ದುಷ್ಟ ಕರ್ನಾಟಕರು)ಗಳನ್ನು ಹೆಸರಿಸಿದೆ.[12] ಇಲ್ಲಿ ತಮಿಳರಿಗೆ ಬದ್ಧ ದ್ವೇಷಿಗಳಾಗಿದ್ದ ವಾತಾಪಿ ಚಾಲುಕ್ಯರನ್ನೆ ಕೊಡುಂಕರುನಾಡುಗರ್ ಎಂದು ಹೆಸರಿಸಿದೆ. ಪಾಂಡ್ಯದೊರೆ ಶೆಡೈಯನ್ ಪರಾಂತಕನ ವೇಳ್ವಿಕುಡಿ ಶಾಸನ (ಕ್ರಿ.ಶ. ೭೭೦) ಶಾಸನ ‘ಮಧುರ ಕರುನಾಡುಗನ್’ ಎಂಬ ಕನ್ನಡ ದೊರೆಯೊಬ್ಬನನ್ನು ಹೆಸರಿಸಿದೆ. ಶೂದ್ರಕನ ಮೃಚ್ಛಕಟಕದಲ್ಲಿ ‘ಕಣ್ಣಾಡಲಹ ಪ್ರಯೋಗ’ದ ಉಲ್ಲೇಖವಿದೆ. ಮೃಚ್ಛಕಟಕದ ಕಾಲ ಕ್ರಿ.ಶ. ಸು. ೩-೪ನೆಯ ಶತಮಾನ.

ಕ್ರಿ.ಶ. ಸು. ೧-೨ನೆಯ ಶತಮಾನ (ನಾಲ್ಕನೆಯ ಶತಮಾನ) ದವನಾದ ಸಾತವಾಹನದೊರೆ ಹಾಲನು ತನ್ನ ಗಾಥಾ ಸಪ್ತಶತಿಯಲ್ಲಿ ಪೊಟ್ಟ, ತುಪ್ಪ ತೀರ್, ಪೆಟ್ಟು ಮೊದಲಾದ ಕನ್ನಡ ಶಬ್ದಗಳನ್ನು ಪ್ರಯೋಗಿಸಿದ್ದಾನೆಂದು ಗೋವಿಂದ ಪೈ ತೋರಿಸಿಕೊಟ್ಟಿದ್ದಾರೆ. ಹೀಗೆ ಯಾವ ನಿಟ್ಟಿನಿಂದ ನೋಡಿದರೂ ಕ್ರಿ.ಶ. ೨ನೆಯ ಶತಮಾನದ ಹೊತ್ತಿಗೆ ಕನ್ನಡ ಭಾಷೆ ಮತ್ತು ಕರ್ನಾಟಕಗಳು ಸ್ವತಂತ್ರ ಅಸ್ತಿತ್ವ ಪಡೆದಿದ್ದವೆಂದು ಧಾರಾಳವಾಗಿ ಹೇಳಬಹುದಾಗಿದೆ.

ಬನವಾಸಿಯೇ ಬಹುಶಃ ಪ್ರಾಚೀನ ಕನ್ನಡ ಸಂಸ್ಕೃತಿಯ ಕೇಂದ್ರ ಪಟ್ಟಣ. ಆರ್ಯಭಾಷೆಗಳ ಪ್ರಾಬಲ್ಯದಿಂದಾಗಿ ಪೈಠಣವು ಸಾವಕಾಶವಾಗಿ ತನ್ನ ಕನ್ನಡತನವನ್ನು ಕಳೆದುಕೊಳ್ಳುತ್ತ ನಡೆಯಿತು. ಅದರ ಸ್ಥಾನವನ್ನು ಸಾತವಾಹನ ಸಾಮ್ರಾಜ್ಯದ ಪ್ರಾಂತೀಯ ರಾಜಧಾನಿಯಾಗಿ ಬನವಾಸಿ ವಿಕಾಸಹೊಂದತೊಡಗಿತು. ಬನವಾಸಿಯಲ್ಲಿ ಈಗ ಚುಟುಪೂರ್ವದ ಎಂದರೆ ಸಾತವಾಹನಕಾಲದ ಪ್ರಾಕೃತಬರಹವೊಂದು ದೊರೆತಿದ್ದು ಅದರಲ್ಲಿ ಆ ಮನೆತನದ ರಾಣಿಯೊಬ್ಬಳ ಸಮಾಧಿಯನ್ನು (ಛಾಯಾಪ್ರತಿಮೆ) ಉಲ್ಲೇಖಿಸಿದೆ. ನಾಗಾರ್ಜುನ ಕೊಂಡದ ಇನ್ನೊಂದು ಪ್ರಾಕೃತ ಬರಹ ವೈಜಯಂತಿಯ ದೊರೆ (ಚುಟು | ಸಾತವಾಹನ)ಯ ರಾಣಿಯಾದ ‘ಕೊದಬಾಲಸಿರಿ’ ಎಂಬವಳು ಬೌದ್ಧ ಚೈತ್ಯವೊಂದನ್ನು ಕಟ್ಟಿಸಿದಳೆಂದು ಹೇಳುತ್ತದೆ. ಬನವಾಸಿಯ ವ್ಯಾಪಾರಿ ಭೂತಪಾಲನು ಕಾರ್ಲೆಯ ಚೈತ್ಯವನ್ನು ನಿರ್ಮಿಸಿದ. ಬೌದ್ಧಧರ್ಮವನ್ನು ಪ್ರಚಾರ ಪಡಿಸಿ ಈ ಭಾಗದಲ್ಲಿ ಹಲವಾರು ಸಂಘಾರಾಮಗಳನ್ನು ನಿರ್ಮಿಸಿದ ಇವೆಲ್ಲ ರಕ್ಖಿತನೆಂಬ ಭಿಕ್ಷು ಬನವಾಸಿಯನ್ನು ತನ್ನ ಕೇಂದ್ರವಾಗಿ ಮಾಡಿಕೊಂಡಿದ್ದನು. ಇವೆಲ್ಲ ಸಾಕ್ಷ್ಯಾಧಾರಗಳಿಂದ ಟಾಲೆಮಿ ಉಲ್ಲೇಖಿಸಿರುವಂತೆ ಬನವಾಸಿ ಅಶೋಕನ ಕಾಲದಿಂದಲೂ ಕರ್ನಾಟಕದ ದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿದ್ದುದು ಸ್ಪಷ್ಟಪಡುತ್ತದೆ. ಕ್ರಿ.ಶ. ದ ಪ್ರಾರಂಭಕ್ಕಾಗಲೇ ಈ ಪಟ್ಟಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವೆತ್ತಿದ್ದು ಬೆರಗುಗೊಳಿಸುವ ಸಂಗತಿ.

ಸನ್ನತಿಯ ಶಾಸನಗಳನ್ನು ಕುರಿತು ಈಗಾಗಲೇ ಉಲ್ಲೇಖಿಸಿದೆ. ಸು. ೭೭ರಷ್ಟು ಪ್ರಾಕೃತ ಬರಹಗಳು (ಅವುಗಳಲ್ಲಿ ನಾಲ್ಕು ಅಶೋಕನ ಶಾಸನಗಳು). ಅಲ್ಲಿ ದೊರೆತ ಎರಡು ಮೂರು ಬೌದ್ಧ ವಿಹಾರಾವಶೇಷಗಳು ಮೊದಲಾದ ಪ್ರಾಕ್ತನ ವಾಸ್ತುಗಳಿಂದ ಸನ್ನತಿಯು ಪ್ರಸಿದ್ಧ ಕೇಂದ್ರವಾಗಿದ್ದರೂ ಅಲ್ಲಿ ಕನ್ನಡ ವಿಕಾಸ ಗೊಳ್ಳಲಿಲ್ಲವೆಂದು ಕಾಣುತ್ತದೆ.

ಸುವರ್ಣಗಿರಿ | ಇಸಿಲ ಮತ್ತು ಬಾದಾಮಿ | ಐಹೊಳೆಗಳು ಪ್ರಾಚೀನ ಬೌದ್ಧ ಕೇಂದ್ರಗಳಾಗಿದ್ದಂತೆ ಹಲಸಿಗೆ, ಕೊಪ್ಪಳ, ಶ್ರವಣಬೆಳ್ಗೊಳ ನರಸಿಂಹರಾಜಪುರಂ, ಮೈಸೂರು ಜಿಲ್ಲೆಯ ಬಸ್ತಿಪುರ, ಪುಲಿಗೆರೆ ಮೊದಲಾದವು ಜೈನಕೇಂದ್ರಗಳಾಗಿದ್ದವು. ಹಲಸಿಗೆಯ ತಾಮ್ರಪಟ್ಟಗಳಲ್ಲಿ ನಿರ್ಗ್ರಂಥ-ದಿಗಂಬರು ಶ್ವೇತಪಟ (ಶ್ವೇತಾಂಬರ) ಅಹರಿಷ್ಟಿ ಕೂರ್ಚಕ, ಮತ್ತು ಯಾಪನೀಯ ಜೈನ ಪಂಗಡಗಳ ಉಲ್ಲೇಖ ಬಂದಿದೆ. ಇದರಿಂದ ಹಲಸಿಗೆ ಕ್ರಿ.ಶ. ಅಯ್ದನೆಯ ಶತಮಾನದಷ್ಟೊತ್ತಿಗೆ ಪ್ರಸಿದ್ಧ ಜೈನಕೇಂದ್ರವಾಗಿದ್ದು ಸ್ಪಷ್ಟಪಡುತ್ತದೆ. (ಕರ್ನಾಟಕ ಮೂಲದ?) ಯಾಪನೀಯರು ಕ್ರಿ.ಶ. ಆರಂಭಕ್ಕಾಗಲೇ ಶೌರಸೇನಿಯಲ್ಲಿ ಗ್ರಂಥಗಳನ್ನು ರಚಿಸಿ ದಿಗಂಬರರಿಗೂ ಅನುಕರಣೀಯರಾಗಿದ್ದರು. ಕೊಪ್ಪಳದಲ್ಲಿನ ಜೈನಾವಶೇಷಗಳು ಇಂದು ಬಹಳಷ್ಟು ಹಾಳಾಗಿದ್ದರೂ ಜೈನ ಪರಂಪರೆಯಲ್ಲಿಯೇ ಅದನ್ನು ಆದಿತೀರ್ಥವೆಂದು ಕರೆಯಲಾಗಿದೆ. ಬಹುಶಃ ಇದು ಯಾಪನೀಯ ಕೇಂದ್ರವಾಗಿರುವಂತೆ ಕಾಣುತ್ತದೆ. ಶ್ರವಣಬೆಳ್ಗೊಳವೂ ಕ್ರಿ.ಶ. ಐಯ್ದನೆಯ ಶತಮಾನಕ್ಕಾಗಿಲೇ ಅಸ್ತಿತ್ವದಲ್ಲಿತ್ತು. ಪರಂಪರೆಯಂತೆ ಮೌರ್ಯ ಸಾಮ್ರಾಟ ಚಂದ್ರಗುಪ್ತ ಮತ್ತು ಅವನ ಗುರು ಭದ್ರಬಾಹು ಅದರ ಅಸ್ತಿಭಾರ ಹಾಕಿದರು. ಆರನೆಯ ಶತಮಾನದಲ್ಲಿ ಅಯ್ ಹೊಳೆ-ಬಾದಾಮಿಗಳು, ಏಳನೆಯ ಶತಮಾನಕ್ಕೆ ಪುಲಿಗೆರೆ, ಬಸ್ತಿಪುರ (ಕೊಳ್ಳೆಗಾಲ) ನರಸಿಂಹರಾಜಪುರ ಮೊದಲಾದುವು ಪ್ರಖ್ಯಾತ ಜೈನ ಕೇಂದ್ರಗಳಾಗಿ ಅದರ ಬೆಳವಣಿಗೆಯನ್ನು ಮುಂದುವರಿಸಿದವು. ಈ ಸಾಲಿಗೆ ಮೈಸೂರು ಜಿಲ್ಲೆಯ ಪುನ್ನಾಟ, ಅದರ ರಾಜಧಾನಿ ಕೀರ್ತಿಪುರಗಳನ್ನು ಸೇರಿಸಬೇಕು. ಪುನ್ನಾಟ ಸಂಘವೆಂಬ ದಿನಂಬರ ಜೈನ ಸಂಘವೇ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿದ್ದುದು ಗಮನಾರ್ಹ. ಬನವಾಸಿಯಲ್ಲಿ ಕೂಡ ಕದಂಬ ರವಿವರ್ಮನ ಕಾಲದಲ್ಲಿ ಜೈನ ಧರ್ಮ ತುಂಬ ಜನಪ್ರಿಯವಾಗಿತ್ತು. ಇವುಗಳ ಪೈಕಿ ಶ್ರವಣಬೆಳ್ಗೊಳದಲ್ಲಿ ಕ್ರಿ.ಶ. ಏಳನೆಯ ಶತಮಾನದಷ್ಟೊತ್ತಿಗೆ ಕನ್ನಡವು ಪದ್ಯ ರಚನೆಗೆ ಹದಗೊಂಡಿತ್ತು. ಅಲ್ಲಿನ ಹಲವಾರು ಉತ್ತಮ ಪದ್ಯ ಶಾಸನಗಳು ಆಧುನಿಕ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿವೆ. ಇಲ್ಲಿ ಹಲವು ಜನ ಕವಿಗಳು ಆಗಿಹೋಗಿದ್ದಾರೆ. ಬಸ್ತಿಪುರದ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ಅಕಳಂಕನು ಯಾಪನೀಯನಾಗಿರುವ ಸಾಧ್ಯತೆಯಿದೆ. ಕವಿಚಕ್ರವರ್ತಿ ರನ್ನನಿಗೆ ಕೊಪ್ಪಳ, ಶ್ರವಣಬೆಳ್ಗೊಳವೆರಡೂ ಪಾವನ ಕ್ಷೇತ್ರಗಳಾಗಿದ್ದವು.

ಕನ್ನಡ ಶಾಸನಗಳು:

ಕನ್ನಡದ ಪ್ರಥಮ ದಾಖಲೆ ಹಲ್ಮಿಡಿ ಶಾಸನದಲ್ಲಿ ಸು. ೨೭ ರಷ್ಟು ಕನ್ನಡ ಪ್ರಕೃತಿಗಳು, ಒಟ್ಟಾರೆ ೫೮ ರಷ್ಟು ಕನ್ನಡ ಭಾಷೆಯ ಅಂಶಗಳು ಕಂಡು ಬಂದಿರುವ ಸಂಗತಿಯನ್ನು ಈಗಾಗಲೇ ಹೇಳಿದೆ. ಅದೇ ರೀತಿ ತಗರೆಯ ಭೋಗವರ್ಮ ಶಾಸನ, ಅವಿ ನೀತನ ಮಲ್ಲೋ ಹಳ್ಳಿ ಶಾಸನ, ಪೊಲವೀರನ ಬಿಸನಳ್ಳಿ ಶಾಸನ ಮೊದಲಾದವುಗಳಲ್ಲಿ ಕೆಲವು ಕನ್ನಡ ವಾಕ್ಯಗಳು ಬರೆಯಲ್ಪಟ್ಟಿವೆ. ಮುಂದಿನ ಅವಧಿಯಲ್ಲಿ ಕಂಡು ಬರುವ ಕನ್ನಡ ಶಾಸನವನ್ನು ಇಲ್ಲಿ ನೋಡಬಹುದು.

ತಮಟ ಕಲ್ಲು ಶಾಸನ:

ಫಣಮಣಿ ಅನ್ತುಭೋಗಿ ಘಣದುಳ್ಮಣಿವಿಲ್ಮನದೋನ್
ರಣಮುಖದುಳ್ಳೆ ಕೋಲನೆರಿಯರ್ಕ್ಕುಮನಿನ್ದ್ಯ ಗುಣನ್
ಪ್ರಣಯಿ ಜನಕ್ಕೆ ಕಾಮನನಿತೋತ್ಪಲವರ್ಣ್ಣನವನ್‌
ಗುಣಮಧುರಾಂಕ ದಿವ್ಯಪುರುಷನ್ ಪುರುಷ ಪ್ರವರನ್

ಸಿರಿಗುಂದ ಶಾಸನ:

ಸ್ವಸ್ತಿಶ್ರೀ ನಿವ್ವನೀತರಾ ಕಿಱಿಯಾ ಮಗನ್ದಿರ್‌-ಕದು ವಟ್ಟಿಯರಿನ್ದಮ್
ಪಲ್ಲವರಸರಿನ್ದಕೊಗೊಣ್ಡಿಪದ ಸೂದಿ (ಡಿ) ದೊ
ರಾ ಅನುಜೊ ಇನ್ದು ಕನಲ್ಗೊಳಿ ನನ್ದಿಯಾಲರಾ ವಿ
ಟ್ಟದು ಪಡೆವೈಲಾಮು ಅಸಮಪಾಲುಮ್‌
ಇದಾನೞಿದೋನ್ನಾಡನೞಿದೋನ್, ಪಞ್ಚ ಮಹಾಪತಗಮಕ್ಕುಂ
ಸ್ವಸ್ತಿ ಶ್ರೀ ಅವ್ವೊರಯ್ವದಿಪರ್ಕ್ಕು (ಅಯ್ಪದಿಂಬರ್ಗುಂ) ಪದಿರ್ಕಣ್ಡುಗ ನಾಲ್ವತ್ಥವಿ……
. . . . . . . . . ದಮರಸುಕೆಯೆ
ಇಉರಾ ಸುಕಂದೈವತು.

ಕೊಪ್ಪಳ ಶಾಸನ: ಆಪ್ಪರಸನ್‌ ಆಜನ್ನಾ………..

ಭೋಗಿವರ್ಮನ ತಗರೆಯ ಶಾಸನ:

ಕಿಱು ಕೂಡಲೂರ ಮೂವತ್ತಾ ಎರಡು ಸರ್ವ್ವ ಪರಿಹಾರಂ
ಓಂ ತಗರೆಯಾ | ಪೆರ್ಗ್ಗೆಪೆಯಾ ಮೊದಲ್ಗೆ | ಱೆಮೂವತ್ತಾ
ಎರಡುಂ ಸರ್ವ್ವ ಪರಿಹಾರಂ ವಡಗೈಗೇರಿ ಮನೆ ಭನಂ
ಭೂಮಿ ದಾನಂ | ಕೊಟ್ಟಂ………….. ಇದಾನ್
ಕಾದೊಂಗೆ | ಕಿೞ್ತಿವೂರಲ್‌ ವಿಣ್ಣರ್ಗ್ಗೆ ಕೊಟ್ಟೋ(ನ) ಪೆರಿಯ
ಡಿಗಳ್‌ ಕಿೞು ಕೂಡಲೂರಂ ಕೆೞೆಯ ಕೆೞಗು ಸಮಭಗ
ಸಕ್ಷಿ ಮಣಿಯ ಭಳ್ಳವಿಯಂ ಅಮೂಲ.

ಸಿರಗುಪ್ಪಿ (ತಾ | ಹುಬ್ಬಳ್ಳಿ)ಯ ತುರುಗೋಳ್‌ ಶಾಸನ:

ಸ್ವಸ್ತಿ ಶ್ರೀ ವಾಣಸತ್ತಿ ಅರಸರಾ
(ಮೂ)ಳು ಙ್ಗು (ನ್ಡಾ) ಳೆ ಅನ್ತವರ್ಮ್ಮಕ್ಕಳಾ ಸಿರಿ(ಗು) ಪ್ಪೆ ಆ
ಳೆ ಕುನ್ಡಸತ್ತಿ ಅರಸ……..ಗೊಳೆ ಕವೋಡರಾ ಸಿರಿಗು
ಪ್ಪನುಂ ಸಿರಿ ವಾಕ್ಕ (ಟ) ಕ ಣದೇವಿ…………………

ರವಿವರ್ಮನ ಕೆಲಗುಂದ್ಲಿ ಶಾಸನ; [13]

[ಸ್ವಸ್ತಿಶ್ರೀ] ರವಿವರ್ಮರ್‌]
ನಾಡಾಳೆ ಮಲ್ಲಿಗೆಆ
ಅರಸರಾ ಪೆರಿಯಾ ಅರಸಿ ಆ (ಯಾ)
ಕೆೞಗುಜ್ಜೇನಿ ಯಾ ಪಡುಗ [ಲ್]
ಇನ್ನಿದಾನ್ನೞಿವೋರ್ಪ [ಞ್ಚಪಾ]
ದಗ ಸಂಯುತ್ತರಪ್ಪಾ [ರ್‌]

ಅಜವರ್ಮನ ಕಂಪ್ಲಿ ಶಾಸಿನ; 16

(ಪ್ರಾರಂಭದ ಭಾಗ ನಷ್ಟ)
(ಇ) ವ (ರ್ಗ್ಗೆ)………….. ಮುಬಿಲಿಯರ
ಧರ್ಮ್ಮ ಸೇನಾವರನ್‌ ಮೋರಿಯವಳ್ಳಿ
ಯನ್ಸರ್ವ್ವವಾದ (ಧಾ) ಪರಿಹಾರಂ ಕೊಟ್ಟ
ಕಂಪಿಲ್ಲಿಯಾ ದೇವಭೋಗಂ ಪಾಯ್ವೆ
ಯರ ದತ್ತಿ ಕೊಟ್ಟದ (ದಾ) ನ್ ಮಹಾರಾಜನ
ಮಗನಜವರ್ಮನಿಱಿಸಿದಾನ್
ಧರ್ಮ್ಮ ಸೇನಾವರನ್ಯಾದನ್ ಇದನ್ ಕಾದೋ
ನ್ಗಸ್ವಮೇಧದ ಫಲಮಕ್ಕು
ಇದನ್ಕೆಡಿಸಿದೋನ್ ವಾರಣಾಸಿಯ
ನೞಿದ ಪಾಪಮಕ್ಕು.

ಮಂಗಲೇಶನ ಬಾದಾಮಿ ಶಾಸನ:

ಸ್ವಸ್ತಿಶ್ರೀಮತ್‌ ಪ್ರಿಥಿವೀವಲ್ಲಭ ಮಂಗಲೀಸನಾ ಕಲ್ಮನೆಗೆ
ಇತ್ತೊಂದು ಲಂಜಿಗೇಸರಂ. ದೇವರ್ಕೆ ಪೂನಿೞಿವೊನ್ ಪಞ್ಚಮಹಾ
ಪಾತನಕುಂ| |ಏೞನೆಯಾ ನರಕದಾ ಪುೞು ಅಕುಂ| |

ಆರನೆಯ ಶತಮಾನದಲ್ಲಿ ಕಂಡುಬರುವ ಈ ಏಳೆಂಟು ಬರಹಗಳು ಕನ್ನಡವು! ಪ್ರಸ್ತುತ ಅವಧಿಯಲ್ಲಿ ಆಡಳಿತಭಾಷೆಯಾಗಿ ಪರಿವರ್ತನಗೊಳ್ಳುತ್ತಿದ್ದುದರ ದಿಕ್ಸೂಚಿಯಾಗಿವೆ.

ಸಾಹಿತ್ಯ ಚಟುವಟಿಕೆಗಳು:

ಕ್ರಿ.ಶ. ಸುಮಾರು ಒಂದನೆಯ ಶತಮಾನದಲ್ಲಿದ್ದ ಗುಣಾಢ್ಯ ಪೈಶಾಚಿ ಪ್ರಾಕೃತದಲ್ಲಿ ಬೃಹತ್ಕಥೆ ಅಥವಾ ವಡ್ಡಕಥೆಯನ್ನು ರಚಿಸಿದ. ವ್ಯಾಸ ವಾಲ್ಮೀಕಿಗಳಂತೆ ಅಸಾಮಾನ್ಯ ಪ್ರತಿಭೆಯ ಕವಿಯೀತ. ಮೂಲ ಬೃಹತ್ಕಥೆ ಕಳೆದು ಹೋಗಿದೆ. ಸಾತವಾಹನರೊಡನೆ ಈತನಿಗಿದ್ದ ಸಂಬಂಧವನ್ನು ಬಹುಶಃ ಒಪ್ಪಿಕೊಳ್ಳಲಾಗಿದೆ. ಸಾತವಾಹನ ಸಾಮ್ರಾಜ್ಯದಲ್ಲಿ ಅಂದಿನ ಕರ್ನಾಟಕದ ಬಹುಭಾಗ ಸಮಾವಿಷ್ಟವಾಗಿದ್ದುದರಿಂದ ಬೃಹತ್ಕಥೆಯ ಪ್ರಭಾವ ಕರ್ನಾಟಕದ ಜನತೆಯ ಮೇಲೆ ಅಂದು ತೀವ್ರ ಪ್ರಭಾವ ಬೀರಿತು. ೬ನೆಯ ಶತಮಾನದಲ್ಲಿದ್ದ ಗಂಗದೊರೆ ದುರ್ವಿನೀತ ಅದನ್ನು ಸಂಸ್ಕೃತಕ್ಕೆ ಅನುವಾದಿಸಿದ್ದನೆಂದು ಗಂಗರ ಉತ್ತನೂರು ಮೊದಲಾದ ತಾಮ್ರ ಪಟಗಳಲ್ಲಿ ಹೇಳಿದೆ. [14]

ದುರ್ವಿನೀತ ಕನ್ನಡದಲ್ಲಿ ಗದ್ಯ ಕೃತಿ ರಚಿಸಿದ ಪ್ರಸಿದ್ಧ ಲೇಖಕ. ಈತ ಕಿರಾತಾರ್ಜುನೀಯ ಟೀಕೆ, ಶಬ್ದಾವತಾರ ವ್ಯಾಕರಣ ಮತ್ತು ವಡ್ಡ ಕಥೆಗಳನ್ನು ಬರೆದ ನೆಂಬುದನ್ನು ಮೇಲೆ ತಿಳಿಸಿದ ಶಾಸನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಬಹುಶಃ ವಡ್ಡಕಥೆಯನ್ನು ಆತ ಸಂಸ್ಕೃತಿ (ದೇವ ಭಾರತೀನಿಬ್ಧ)ದಲ್ಲಿ ಅನುವಾದಿಸಿದಂತೆ ಕನ್ನಡದಲ್ಲೂ ಅನುವಾದಿಸಿರಬಹುದು.

ಬೃಹತ್ಕಥೆ ಕೇವಲ ಅನುವಾದವಷ್ಟೇ ಅಲ್ಲದೆ, ವಿವಿಧ ಆಕಾರ-ರೂಪ ತಳೆಯಿತು. ಸಂಸ್ಕೃತದ ಬುಧಸ್ವಾಮಿ, ಕ್ಷೇಮೇಂದ್ರ, ಸೋಮದೇವರ ಅನುವಾದಗಳಲ್ಲದೆ ಹಿತೋಪದೇಶ, ಪಂಚತಂತ್ರಗಳಾಗಿ ವಿಷ್ಣುಶರ್ಮ ಮತ್ತು ವಸುಭಾಗಭಟ್ಟ ಮೊದಲಾದವರಿಂದ ಅದು ಬಹುವ್ಯಾಪಕವಾಗಿ ಪ್ರಸಾರಗೊಂಡಿತು. ಕನ್ನಡದ ಆದಿಗುಣವರ್ಮ (ಕ್ರಿ.ಶ. ಸು. ೯ನೆಯ ಶ.) ‘ಶೂದ್ರಕ’ವೆಂಬ ಚಂಪೂ ಕಾವ್ಯ. ರಚಿಸಿದ್ದು. ಅದಕ್ಕೆ ಬೃಹತ್ಕಥೆಯೇ ಆಧಾರ. ಅದೇ ರೀತಿ ೧೧ನೆಯ ಶತಮಾನದ ದುರ್ಗಸಿಂಹ ವಸುಭಾಗಭಟ್ಟನ ಪಂಚತಂತ್ರವನ್ನು ಕನ್ನಡಕ್ಕೆ ಅನುವಾದಿಸಿದ.

ಗುಣಾಡ್ಯನ ತರುವಾಯ ಹೆಸರಿಸಬೇಕಾದ ಇನ್ನೊಬ್ಬ ಪ್ರಸಿದ್ಧ ಜೈನ ಲೇಖಕನೆಂದರೆ ಸಿವಜ್ಜ ಅಥವಾ ಶಿವಾರ್ಯ. ಯಾಪನೀಯನಾದ ಈತ ಗುರಿ ನಗರದಲ್ಲಿ ಜಿನ ನಂದಿ ಗಣಿ, ಸರ್ವ ಗುಪ್ತಗಣಿ ಮತ್ತು ಆರ್ಯಮಿತ್ರನಂದಿ ಇವರ ಪಾದ ಮೂಲದಲ್ಲಿ ಮೂಲ ಸೂತ್ರರ್ಥಗಳನ್ನು ಓದಿ ಕಲಿತು ಮೂಲಾರಾಧನೆ ಅಥವಾ ಭಗವತೀ ಆರಾಧನಾ ಎಂಬ ಜೈನ ಆಚಾರ ಸಂಹಿತೆಯ ಒಂದು ದೊಡ್ಡ ಭಾಗವನ್ನು ಶೌರಸೇನಿಯಲ್ಲಿ ಸೂತ್ರೀಕರಿಸಿದ. ಯಾಪನೀಯನಾದುದರಿಂದ ಕರ್ನಾಟಕದ ಸಂಬಂಧ ಈತನಿಗೆ ಇದ್ದುದು ಸಹಜ. ಯಾಪನೀಯ ಜೈನ ಪಂಥ ಕರ್ನಾಟಕ ಮೂಲದ್ದು. ಭಗವತೀ ಆರಾಧಾನೆಯ ಮೇಲೆ ಹುಟ್ಟಿದ ಟೀಕಾಗ್ರಂಥಗಳ ಪರಂಪರೆಯೊಂದು ಕನ್ನಡದಲ್ಲಿಯೇ ಬೆಳೆದು ಬಂದಿದೆ. ಈಗ ನಮಗೆ ತಿಳಿದು ಬಂದಿರುವಂತೆ ಭ್ರಾಜಿಷ್ಣು ಎಂಬವನು ‘ಆರಾಧನಾ ಕರ್ನಾಟ ಟೀಕೆ’ ಎಂಬ ಹೆಸರಿನ ಕಥಾ ರೂಪದ ಟೀಕೆಯನ್ನು ಕ್ರಿ.ಶ. ಹತ್ತನೆಯ ಶತಮಾನದ ಹಿಂದೆ, ಬಹುಶಃ ಒಂಬತ್ತನೆಯ ಶತಮಾನದಲ್ಲಿ ರಚಿಸಿದ. ಇದು ಇಂದು ನಮಗೆ ಉಪಲಬ್ಧವಾದ ‘ವಡ್ಡಾರಾಧನೆ’ ಎಂಬ ಕೃತಿಯೇ ಎಂದು. ಡಾ. ಎಂ. ಎಂ. ಕಲಬುರ್ಗಿ ಮತ್ತು ಡಾ. ಹಂ ಪ. ನಾಗರಾಜಯ್ಯನವರು ಹೇಳುವರಾದರೂ ಇವೆರಡೂ ಒಂದೇ ಎಂಬ ಸಂಗತಿಯನ್ನು ಒಪ್ಪಲು ಹೆಚ್ಚಿನ ಆಧಾರಗಳು ಬೇಕು. ವಡ್ಡಾರಾಧನೆಯನ್ನು ಕಥಾರೂಪದ ಟೀಕೆಯನ್ನಾಗಿ ಶಿವಕೋಟಿಯೆಂಬವನು ಕನ್ನಡದಲ್ಲಿ ರಚಿಸಿದನೆಂದು ಡಾ. ‘ದೊಲನ’ರು ಹೇಳಿದ್ದಾರೆ. ೧೧ನೆಯ ಶತಮಾನದ ಶಾಂತಿನಾಥ ಕವಿಯ ಸುಕುಮಾರ ಚರಿತೆಯು ಮೂಲತಃ ಒಂದು ಆರಾಧನಾ ಕಥೆಯೇ. ಸುಮಾರು ಇದೇ ಅವಧಿಯ ರತ್ನ ಕರಂಡಕದ ಕಥೆಗಳು ಆರಾಧನಾ ಕಥೆಗಳ[15] ಪ್ರಭಾವದಿಂದಲೇ ಕನ್ನಡದಲ್ಲಿ ಹುಟ್ಟಿದ ಇನ್ನೊಂದು ಕಥಾ ಸಂಗ್ರಹ.

ಕ್ರಿ.ಶ.ಸು ಅಯ್ದನೆಯ ಶತಮಾನದಲ್ಲಿದ್ದ ಯಾಪನೀಯಮನಿ ಕರ್ನಾಟಕದ ಕೊಡಗಿನ ಪ್ರದೇಶದವನೆಂದು ಡಾ. ವರದರಾಜ ಉಮರ್ಜಿ ಹೇಳಿದ್ದಾರೆ.[16] ಈತ ತನ್ನ ‘ಲೋಕ ವಿಭಾಗ’ ಕೃತಿಯನ್ನು ಕರ್ನಾಟಕದಲ್ಲಿಯೇ ರಚಿಸಿದ್ದಾನೆಂದು ಡಾ. ಎ. ಎನ್‌. ಉಪಾಧ್ಯೆ ಹೇಳುತ್ತಾರೆ.[17] ಇದರಂತೆ ಯತಿ ವೃಷಭನ ತಿಲೋಯ ಪಣ್ಣತ್ತಿಕೂಡ ಕರ್ನಾಟಕದಲ್ಲಿಯೇ ರಚಿತವಾದ ಕೃತಿ. ಇದೇ ಅವಧಿಯಲ್ಲಿದ್ದ ವಟ್ಟಕೇರನೆಂಬ ಮುನಿ ಕರ್ನಾಟಕದವನಾಗಿದ್ದು ಇವನ ಊರು ಬೆಟಗೇರಿ ಅಥವಾ ವಳಕೇರಿ ಎಂದು ಅಭಿಪ್ರಾಯಪಡಲಾಗಿದೆ. ಮೂಲಾಚಾರ ಇವನ ಕೃತಿ. ಯಾಪನೀಯ ಸಂಘದ ಇನ್ನೊಬ್ಬ ದೊಡ್ಡ ಕವಿ ಸ್ವಯಂಭು. ಇವನ ಸಂಬಂಧಿಗಳ ಹೆಸರುಗಳಲ್ಲಿ ವಂದಿಇಯ, ಧವಲಇಯ (ಪಂಪಯ್ಯ, ಧವಲಯ್ಯ) ಅಮಇವ ‘ಅಇಚ್ಚಂವ’ ‘ಸುಅವ’ ಎಂಬ ಅವ್ವ ಪದಾಂತರೂಪಗಳು ಬಂದಿರುವುದರಿಂದ ಈತ ಕರ್ನಾಟಕದವನೆಂದು ಎಲ್ಲ ವಿದ್ವಾಂಸರು ತಿಳಿದಿದ್ದಾರೆ. ಇವನ ಕೃತಿಗಳಾದ ಪಉಮಚರಿಉ (ರಾಮಾಯಣ) ರಿಟ್ಠನೇಮಿ ಚರಿಉ (ಹರಿವಂಶ ಪುರಾಣ) ಮೊದಲಾದವು ಅಪಭ್ರಂಶ ಸಾಹಿತ್ಯದ ಪ್ರಸಿದ್ಧ ಕೃತಿಗಳು. ಗುಜರಾತಿ, ಅವಧಿ ವ್ರಜ ಮೊದಲಾದ ಭಾಷಾ ಸಾಹಿತ್ಯಗಳ ಮೇಲೆ ಇವನ ಕೃತಿಗಳ ಪ್ರಭಾವವಿರುವದರಿಂದ ಅಖಿಲ ಭಾರತ ಮಟ್ಟದ ಮನ್ನಣೆಯ ಕವಿಯೀತ. ತರುವಾಯದ ಹತ್ತನೆಯ ಶತಮಾನಾವಧಿಯಲ್ಲಿ ರಾಷ್ಟ್ರಕೂಟ ದೊರೆ, ಮುಮ್ಮಡಿ ಕೃಷ್ಣನ ಆಸ್ಥಾನದಲ್ಲಿದ್ದು ಅಪಭ್ರಂಶ ಮಹಾಕಾವ್ಯ ತಿಸಟ ಮಹಾಪುರಿಸ ಗುಣಾಲಂಕಾರ ಚರಿಉ’ ಬರೆದವನು ಪುಷ್ಪದಂತ.

ಇವರಲ್ಲದೆ ಸಮಂತ ಭದ್ರ, ಪೂಜ್ಯಪಾದ ಕವಿ ಪರಮೇಷ್ಠಿ ಮೊದಲಾದವರೂ ಕನ್ನಡದಲ್ಲಿ ಬರೆದಿರಬಹುದೆಂಬ ಊಹೆಗಳಿದೆಯಾದರೂ ಆಧಾರಗಳು ಲಭ್ಯವಿಲ್ಲ. ಕ್ರಿ.ಶ. ದ ಆದಿಭಾಗದಲ್ಲಿದ್ದು ಷಟ್ಖಂಡಾಗಮಟೀಕಾ. ಸಮಯಸಾರ, ಪಂಚಾಸ್ತಿಕಾಯ ಮೊದಲಾದ ಮಹತ್ವಪೂರ್ಣ ಗ್ರಂಥಗಳನ್ನು ಬರೆದ ಕುಂದಕುಂದಾಚಾರ್ಯರು ಕನ್ನಡಿಗರೆಂಬ ವಿಷಯ ಈಗ ದೃಢಪಟ್ಟಿದೆ. ತರುವಾಯದ ಕನ್ನಡ ಸಾಹಿತ್ಯದ ಮೇಲೆ ಇವರ ಪ್ರಭಾವವೂ ಇದೆ. ಇವರ ಪರಂಪರೆಯಲ್ಲಿ ಬಂದ ಶ್ಯಾಮಕುಂದಾಚಾರ್ಯನು ೬ನೆಯ ಖಂಡವನ್ನು ಹೊರತುಪಡಿಸಿ ಷಟ್ಖಂಡಾಗಮ ಮತ್ತು ಕಷಾಯ. ಪ್ರಾಭೃತಗಳಿಗೆ ೧೨ ಸಾವಿರ ಗ್ರಂಥ (ಪದ್ಯ) ಪ್ರಮಾಣದ ವ್ಯಾಖ್ಯಾನ ಬರೆದಿದ್ದು. ಇದರಲ್ಲಿ ಸಂಸ್ಕೃತ ಪ್ರಾಕೃತ ಮತ್ತು ಕನ್ನಡ ಭಾಷೆಗಳ ಮಿಶ್ರಣವಿತ್ತೆಂದು ಇಂದ್ರ ಇದರಲ್ಲಿ ಸಂಸ್ಕೃತ ಪ್ರಾಕೃತ ಮತ್ತು ಕನ್ನಡ ಭಾಷೆಗಳ ಮಿಶ್ರಣವಿತ್ತೆಂದು ಇಂದ್ರ ನಂದಿಯ ಶ್ರುತಾವತಾರ ದಲ್ಲಿ ಹೇಳಿದೆ. ಅದೇ ರೀತಿ ತುಂಬಳೂರಾಚಾರ್ಯನನು ೮೪೦೦೦ ಗ್ರಂಥ ಪ್ರಮಾಣದ ಪ್ರಾಕೃತ-ಕನ್ನಡ ವ್ಯಾಖ್ಯಾನವನ್ನು ಅದೇ ಷಟ್ಖಂಡಾಗಮ ಮತ್ತು ಕಷಾಯ ಪ್ರಾಭೃತಗಳಿಗೆ ಬರೆದನೆಂದು ಇಂದ್ರನಂದಿ ಕನ್ನಡದ ಭಟ್ಟಾಕಳಂಕ, ಮತ್ತು ದೇವಚಂದ್ರರು ಹೇಳಿದ್ದಾರೆ. ಈ ವಿಷಯಗಳನ್ನು ಆಧುನಿಕ ಜೈನ ಸಾಹಿತ್ಯ ವಿಶಾರದರೆಲ್ಲ ಸಮರ್ಥಿಸುತ್ತಾರೆ.[18] ಚೂಡಾಮಣಿ ವ್ಯಾಖ್ಯಾನ ಭಟ್ಟಾಕಳಂಕ (೧೬-೧೭ನೆಯ ಶತಮಾನ) ದ ಕಾಲದವರೆಗೂ ಉಳಿದು ಬಂದಿದ್ದು ದುರ್ದೈವವಶಾತ್ ತರುವಾಯದಲ್ಲಿ ನಷ್ಟ ಗೊಂಡಿದೆ. ಇವರಲ್ಲದೆ ಶ್ರೀ ವರ್ಧದೇವನೂ ಒಂದು ‘ಚೂಡಾಮಣಿ’ ಬರೆದಿರುವುದಾಗಿ ವಿದ್ವಾಂಸರು ಹೇಳುತ್ತಾರೆ.

ಕವಿರಾಜ ಮಾರ್ಗಕಾರನು ಶ್ರೀವಿಜಯ, ಕವೀಶ್ವರ ಪಂಡಿತ ಚಂದ್ರ ಮತ್ತು ಲೋಕಪಾಲರೆಂಬ ಪದ್ಯಕವಿಗಳೂ ವಿಮಳೋದಯ. ನಾಗಾರ್ಜುನ, ಜಯಬಂಧು, ದುರ್ವಿನೀತರೆಂಬ ಗದ್ಯಕವಿಗಳೂ ಕನ್ನಡದಲ್ಲಿ ಆಗಿಹೋದರೆಂದು ಹೇಳಿದ್ದಾನೆ. ಇವರೆಲ್ಲ ಕ್ರಿ.ಶ. ೮೫೦ ಕ್ಕೆ ಹಿಂದಿನವರು. ದುರ್ವಿನೀತ ಆರನೆಯ ಶತಮಾನದಲ್ಲಿದ್ದ ಗಂಗ ದೊರೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಕವಿರಾಜ ಮಾರ್ಗಕಾರನೆ ತನಗಿಂತ ಹಿಂದಿದ್ದ ‘ಕನ್ನಡವನ್ನು ಪೞಗನ್ನಡ’ ಎಂದು ಹೆಸರಿಸಿ ಅದನ್ನು ಸರಿಯಾಗಿ ತಿಳಿಯಲಾರದವರು ಅದರ ಘನತೆಗೆ ಕುಂದು ತರುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾನೆ. ಅಂದಿನ ಪೞ ಗನ್ನಡವೆಂದರೆ ಅದು ಪೂರ್ವದ ಹಳಗನ್ನಡವೆ. ಶ್ಯಾಮಕುಂದ, ತುಂಬಳೂರಾಚಾರ್ಯ, ದುರ್ವಿನೀತ ಮೊದಲಾದವರು ಕಾವ್ಯಕ್ಕೆ, ಶಾಸ್ತ್ರಕ್ಕೆ ಅಳವಡಿಸಿದ ಭಾಷೆ. ಕ್ರಿ.ಶ. ಆರು ಮತ್ತು ಅದಕ್ಕಿಂತ ಸ್ವಲ್ಪಾದರು ಹಿಂದಿನ ಶತಮಾನಗಳಿಗೆ ಸೇರಿದ್ದು.

೫ನೆಯ ಶತಮಾನದಿಂದ ೯ನೆಯ ಶತಮಾನದ (ಕ್ರಿ.ಶ. ೮೫೦ರ) ಅವಧಿಯ ವರೆಗೆ ಸು. ೬೪ ಕನ್ನಡ ಪದ್ಯಗಳು ಕಂಡು ಬಂದಿವೆ. ಇವುಗಳಲ್ಲಿ ನಾನಾ ರೀತಿಯ ಪ್ರಾಸಗಳು, ಸಂಸ್ಕೃತದ ಚಂಪಕಮಾಲೆ, ಉತ್ಪಲಮಾಲೆ ಇತ್ಯಾದಿ ಆರು ಖ್ಯಾತ ಕರ್ನಾಟಕಗಳು, ಕನಕಾಬ್ಜಿನಿ ಮಲ್ಲಿಕಾಮಾಲೆ, ರಥೋದ್ಧತ ವಂಶಸ್ಥ, ಶ್ಲೋಕಗಳು, ಆರ್ಯಾಗೀತಿಯಿಂದ ಬೆಳೆದು ಬಂದ ಕಂದ ಪದ್ಯಗಳು, ಅಚ್ಚಗನ್ನಡದ ತ್ರಿಪದಿ, ಪರಿಯಕ್ಕರ ಮತ್ತು ೯ ಗಣ ಸಂಖ್ಯೆಯುಳ್ಳ ಅಂಶಗಣದ ಪದ್ಯ ಕ್ರಿ.ಶ. ೭೫೮ರ ಗುಂಡ್ಲಹಳ್ಳಿ ಶಾಸನದಲ್ಲಿ ಮಿಶ್ರ ಛಂದಸ್ಸಿನ ಲಯ ವೃತ್ತ ಹಾಗೂ ಚಿಕ್ಕಬಳ್ಳಾಪುರ ಶಾಸನ (ಕ್ರಿ.ಶ. ೮೧೦)ದಲ್ಲಿ ಸಂಕೀರ್ಣ ಯೋಜನೆಯ ಎರಡು ಸಂಸ್ಕೃತ ಮಿಶ್ರ ಕನ್ನಡದಲ್ಲಿರುವ ಮಣಿ ಪ್ರವಾಳ ಶೈಲಿಯ ಪದ್ಯಗಳು ಈ ಅವಧಿಯಲ್ಲಿ ಕಂಡು ಬಂದಿವೆ. ತಾಳಗುಂದ ಕುಬ್ಜನ ಕದಂಬ ಶಾಸನದಲ್ಲೂ ಅಯ್‌ಹೊಳೆಯ ರವಿಕೀರ್ತಿ ಶಾಸನದಲ್ಲೂ ಮೇಲೆ ನೋಡಿದ ಸಂಸ್ಕೃತ ವೃತ್ತಗಳೇ ಇವೆ. ಕುಬ್ಜ. ರವಿಕೀರ್ತಿಗಳ ತರುವಾಯ ಕ್ರಿ.ಶ. ಸು ೭೬೦ ರಲ್ಲಿದ್ದ ದಿವ್ಯಭಾಷಾಕಲನ್‌’ ಎಂಬ ಕನ್ನಡ ಕವಿ ಗುಂಡ್ಲಹಳ್ಳಿ ಶಾಸನದಲ್ಲಿ ತೋರಿ ಬಂದಿದ್ದಾನೆ. ಈ ಕಾಲಾವಧಿಯಲ್ಲಿಯೇ ಸ್ವತಃ ಕರ್ನಾಟಕರಾಜ ಪ್ರಿಯೆಯಾಗಿದ್ದ ವಿಜ್ಝಿಕೆ (ವಿಜಯಾಂಬಿಕೆ) ಸಂಸ್ಕೃತದಲ್ಲಿ ‘ಕೌಮುದೀ ಮಹೋತ್ಸ’ವ ಎಂಬ ನಾಟಕ ರಚಿಸಿದ್ದಾಳೆ. ಗಂಗ, ಕದಂಬ, ಬಾದಾಮಿ ಚಾಲುಕ್ಯ ಮತ್ತು ರಾಷ್ಟ್ರಕೂಟರು ಉದಾರಾಶ್ರಮ ವಿತ್ತುದರಿಂದ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಗಳು ಅನೂಚಾನವಾಗಿ ಬೆಳೆದು ಬಂದವು. ಈ ಮನೆತನಗಳ ಪೈಕಿ ಬನವಾಸಿ ಕದಂಬರ ಆಶ್ರಯದಲ್ಲಿ ಕನ್ನಡ ಕಾವ್ಯ ಹುಟ್ಟಿದ ಬಗ್ಗೆ ಮಾತ್ರ ನೇರ ಪುರಾವೆಯಿಲ್ಲ. ಇತರೆಲ್ಲ ಮನೆತನಗಳ ಆಶ್ರಯದಲ್ಲಿ ಒಂದಿಲ್ಲೊಂದು ಕೃತಿ ಅಥವಾ ಪದ್ಯ ಶಾಸನ ರಚನೆಗೊಂಡಿದೆ. ಒಂದೇ ಕೊರಗೆಂದರೆ ಈ ಅವಧಿಯ ಕವಿ ಕೃತಿಗಳು ನಮ್ಮ ವರೆಗೆ ಉಳಿದು ಬರಲಿ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಹಿಂದಿನ ೪ ನೆಯ ಲೇಖನ ನೋಡಿ.

[2]ಐ.ಕೆ. ಶರ್ಮ ಮತ್ತು ಜೆ. ವರಪ್ರಸಾದರಾವ Eearly Brahmi Inscription from Sannathi “Human Publishing House-New Delhi-1993

[3] Curpus Inscription Indicarum I. Dr. Hulsch.-ನೋಡಿ.

*ಧರ್ಮ:> ಥಮ್ಮೋ, ವ್ಯಾಘ್ರ> ವಕ್ಖೋ ಮುಂತಾದವನ್ನು ಗಮನಿಸಬಹುದು.

[4] Karnataka Inscriptions Vol-I P.3

[5]ಡಾ. ಬಿ. ಆರ್. ಗೋಪಾಲ: Corpus of Kadamba Inscriptions.

[6] Karnataka Through ages-pp-109-110

[7]ನೋಡಿ Early Brahmi inscriptions from Sannati pp 87, 97, 98.

[8]ಇತ್ತೀಚೆ ದೊರೆತ ಸನ್ನತಿಯ ಶಾಸನವೊಂದರಲ್ಲಿರಟಿ | ರಟ್ಟ ರಾಜ್ಯದ ಉಲ್ಲೇಖಬಂದಿದೆ. ನೋಡಿ: Early Brahmi inscriptions from Sannathi P-65

[9]ಹೆಚ್ಚಿನ ವಿವರಗಳಿಗೆ ನೋಡಿ: ಎಸ್‌. ಶ್ರೀಕಂಠ ಶಾಸ್ತ್ರಿ ಅವರ Sources of Karnataka History-Part-I

[10]ಮಹಾಭಾರತ ಇಂಡೆಕ್ಸ್‌-III ಕರ್ಣಪರ್ವ-೧೬೩೫೨

[11]ಎಸ್‌. ಶ್ರೀಕಂಠ ಶಾಸ್ತ್ರ (ಅ. ಟಿ. ೧೦ ರಂತೆ)

[12]ಈ ವಿಷಯದಲ್ಲಿ ನನ್ನೊಂದಿಗೆ ಚರ್ಚಿಸುವಾಗ ಗಮನ ಸೆಳೆದವರು ಡಾ. ಕೆ. ಅನ್ಬನ್‌ ಭಾಷಾವಿಜ್ಞಾನ ಪ್ರವಾಚಕರು-ಕನ್ನಡ ಅಧ್ಯಯನ ಪೀಠ ಕ.ವಿ.ವಿ. ಧಾರವಾಡ ಅವರು.

[13] Corpus of Kadamba Inscription; ಕೆಲಗುಂದ್ಲಿ ಶಾಸನ ಪ್ರಕಟಿಸಿದ ಡಾ. ರಘುನಾಥ ಭಟ್ಟದ ಪಾಠಕ್ಕೆ ಪೊ. ಬಿ. ರಾಜಶೇಖರಪ್ಪ ಕೆಲವು ತಿದ್ದುಪಡಿ ಸೂಚಿಸಿದ್ದಾರೆ. ಪ್ರಜಾವಾಣಿ ೧೬-೨-೧೯೮೩ ನಾನೂ ಚಿಕ್ಕ ಮಾರ್ಪಾಟು ಮಾಡಿಕೊಂಡಿದ್ದೇನೆ.

[14]ಎ.ಪಿ.ಕ. 17. ಮು.ಬಾ. 3ಬಾ.

[15]ಇದನ್ನು ಡಾ. ಬಿ. ವ್ಹಿ. ಶಿರೂರ. ಕರ್ನಾಟಕದ ವಿಶ್ವ ವಿದ್ಯಾಲಯದಿಂದ ಪ್ರಕಟಿಸಿದ್ದಾರೆ.

[16]ಕರ್ನಾಟಕ ಭಾರತ ೬-೪ ಪು. ೧೧೧.

[17]ಕರ್ನಾಟಕ ದ್ರೂ ವಜಿಸ್‌ ಪು. ೪೭೫

[18]ನೋಡಿ. ಡಾ. ಎಂ. ಎಂ. ಕಲಬುರ್ಗಿ, ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ