ಕನ್ನಡದಲ್ಲಿ ಹಾಡು, ಪದ, ದೇವರನಾಮ ಮುಂತಾಗಿ ಪರ್ಯಾಯ ನಾಮಗಳಿಂದ ಹೆಸರಿಸಲ್ಪಡುವ ಲಘುಕೃತಿಗಳು ಬಹು ಹಿಂದಿನಿಂದ ರಚನೆಗೊಳ್ಳುತ್ತ ಬಂದಿವೆ. ಇವು ಅನೇಕ ವೇಳೆ ರಾಗ-ತಾಳಯುಕ್ತವಾಗಿ ರಚನೆಗೊಂಡಿವೆ. ತರುವಾಯದ ದಾಸರಪದ ಅಥವಾ ದೇವರ ನಾಮಗಳಿಗಂತೂ ತುಂಬ ಪ್ರಸಿದ್ಧಿ ಮತ್ತು ಜನಪ್ರಿಯತೆ ಪ್ರಾಪ್ತವಾಯಿತು. ಇಂಥ ಹಾಡಿನ ಬಗೆಯ ಸಾಹಿತ್ಯ ನಮ್ಮಲ್ಲಿ ಪರಂಪರೆಯಾಗಿ ನಡೆದುಬಂದಿತ್ತೆಂಬ ಅಂಶವನ್ನು ಡಾ. ಎಲ್. ಬಸವರಾಜು ಅವರು ‘ಶಿವದಾಸ ಗೀತಾಂಜಲಿ’ಯ ಪ್ರಸ್ತಾವನೆಯಲ್ಲಿ ಚರ್ಚಿಸಿದ್ದಾರೆ. ಅವರ ಪ್ರಕಾರ ಕವಿರಾಜಮಾರ್ಗಕಾರ ಹೇಳುವ ಚತ್ತಾಣ, ಬೆದಂಡೆ ಮುಂತಾದ (ಜನಸಾಧಾರಣ), ಕಾವ್ಯ ಪ್ರಕಾರಗಳಲ್ಲಿ ‘ಜಾತಿ’ ಮುಂತಾದ ಹಾಡುಗಳಿದ್ದವು. ಪದ, ಪಾಡು, ಮೆಲ್ವಾಡು, ಪಾಡುಗಬ್ಬ ಮೊದಲಾದ ರಚನೆಗಳು ೯ನೆಯ ಶತಮಾನದಷ್ಟು ಹಿಂದಿನವು. ಇಮ್ಮಡಿ ನಾಗವರ್ಮ, ನೇಮಿಚಂದ್ರ ಮೊದಲಾದ ದೊಡ್ಡ ಕವಿಗಳ ಮಾತುಗಳಿಂದಲೂ ಈ ವಿಷಯಕ್ಕೆ ಪುಷ್ಟಿ ದೊರೆಯುತ್ತದೆ.

ಆದ್ದರಿಂದ ಬಸವಾದಿ ಶರಣರು ವಚನಗಳನ್ನು ರಚಿಸುವುದರ ಜೊತೆಗೆ ರಾಗ-ತಾಳ ಯುಕ್ತವಾದ ಹಾಡಿನ ಸಾಹಿತ್ಯವನ್ನೂ ರಚಿಸಿದರು ಎಂದು ಹೇಳುವಲ್ಲಿ ಅವಾಸ್ತವತೆ ಏನೂ ಇಲ್ಲ. ಈ ಬಗೆಯ ರಚನೆಗಳು ವಚನ ಸಾಹಿತ್ಯ ದೊರಕುವ ಹಸ್ತಪ್ರತಿ ಕಟ್ಟುಗಳಲ್ಲಿ ಅಲ್ಲಲ್ಲಿ ದೊರೆಯುತ್ತಿದ್ದವು. ಆದರೆ ವಚನ ಸಾಹಿತ್ಯದ ಬಗ್ಗೆ ಆರಂಭ ಕಾಲದಲ್ಲಿ ಮೂಡಿನಿಂತ ಕೌತುಕ-ಕುತೂಹಲಗಳು ಈ ಸ್ವರವಚನ ಸಾಹಿತ್ಯ ಕುರಿತಾಗಿ (ಆಧುನಿಕರಲ್ಲಿ) ಮೂಡಿಬರಲಿಲ್ಲ. ಆದ್ದರಿಂದ ಈ ಸಾಹಿತ್ಯದ ಹೆಚ್ಚಿನ ಪರಾಮರ್ಶೆ ನಡೆಯಲಿಲ್ಲ. ಆಧುನಿಕ ಕಾಲದಂತೆ ಪ್ರಾಚೀನ ಕಾಲದಲ್ಲಿ ಕೂಡ ಇವುಗಳ ಮಹತಿಯನ್ನು ಎತ್ತಿ ತೋರಬಲ್ಲ ಸಂಕಲನಗಳು ವಿಶೇಷವಾಗಿ ಶೂನ್ಯಸಂಪಾದನೆಗಳಂಥ ಪ್ರಭಾವಶಾಲೀ ಸಂಕಲನಗಳು ಸ್ವರವಚನಗಳಿಗೆ ಹೆಚ್ಚಿನ ಇಂಬು ಕೊಡಲಿಲ್ಲ. ವಚನ ಸಂಕಲನಕಾರರ ಸಂಖ್ಯೆಗೆ ಹೋಲಿಸಿದರೆ ಸ್ವರವಚನ ಸಂಕಲನಕಾರರು ಕಡಿಮೆ ಪ್ರಮಾಣದಲ್ಲಿದರುವುದು ಎದ್ದು ಕಾಣುವ ಅಂಶ. ಮಹಲಿಂಗದೇವ, ಜಕ್ಕಣಾರ್ಯ ಸಿದ್ಧಲಿಂಗರಂಥ ಮೂವರು ನಾಲ್ವರು ಇತ್ತ ಗಮನ ಹರಿಸಿದರು.

ಈಗಾಗಲೇ ಹೇಳಿರುವಂತೆ ಆಧುನಿಕ ಕಾಲದಲ್ಲಿ ವೀರಶೈವ ಸ್ವರವಚನ ಸಾಹಿತ್ಯ ಕುರಿತಂತೆ, ಸಂಶೋಧನೆ, ವಿಚಾರ-ವಿಮರ್ಶೆ, ಪರಾಮರ್ಶೆ ನಡೆಸಿರುವುದು ತುಂಬ ಕಡಿಮೆ. ಡಾ. ಎಲ್. ಬಸವರಾಜು ಮಾತ್ರ ೧೯೬೩ರಲ್ಲಿಯೇ ‘ಶಿವದಾಸ ಗೀತಾಂಜಲಿ’ ಸಂಪುಟ ಹೊರತಂದು ವೀರಶೈವ ಸಾಹಿತ್ಯದ ಈ ಹೊಸಕ್ಷಿತಿಜವನ್ನು ಅನಾವರಣಗೊಳಿಸಿದರು.

ಡಾ. ಚಿದಾನಂದಮೂರ್ತಿ, ಡಾ. ವಿ. ಶಿವಾನಂದ ಮುಂತಾದ ಕೆಲವು ಜನ ವಿದ್ವಾಂಸರು ‘ಬಸವಾದಿ ಶರಣರ ಹೆಸರಿನಲ್ಲಿ ಲಭ್ಯವಿರುವ ಸ್ವರವಚನಗಳು ನಿಜವಾಗಿ ಅವರಿಂದ ರಚಿತವಾದುವಲ್ಲ ; ೧೫ನೆಯ ಶತಮಾನದಲ್ಲಿದ್ದ ಮಹಲಿಂಗದೇವ ಮೊದಲಾದ ಈಚಿನ ಸಂಕಲನಕಾರರು ಪ್ರಾಚೀನ ಶರಣರ ವಚನಗಳನ್ನಾಧರಿಸಿ ಬರೆದು ಅವನ್ನು ತಮಗೆ ಇಷ್ಟಬಂದ ಕಡೆಗೆ ಪ್ರಕ್ಷಿಪ್ತಗೊಳಿಸಿದರು’ ಎಂಬರ್ಥದ ಹೇಳಿಕೆಗಳನ್ನಿತ್ತಿದ್ದಾರೆ. ಈ ಅಂಶ ವಿಚಾರಣೀಯವಾದುದಾದರೂ ಇನ್ನೂ ವಿಸ್ತೃತ ಚರ್ಚೆ ನಡೆಸಲು ಈ ದಿಶೆಯಲ್ಲಿ ಅವಕಾಶವುಂಟೆಂದು ಹೇಳಬೇಕು.

ಡಾ. ಎಲ್. ಬಸವರಾಜು ಅವರು ಶಿವದಾಸ ಗೀತಾಂಜಲಿಯ ದ್ವಿತೀಯ ಆವೃತ್ತಿಯನ್ನು ೧೯೯೦ರಲ್ಲಿ ಹೊರತಂದಿರುವರಾದರೂ ಅದರಲ್ಲಿ ತಮ್ಮ ಮೊದಲಿನ ನಿಲವನ್ನೇ ಮುಂದುವರಿಸಿದ್ದಾರೆ. ಅವರು ಹೇಳಿರುವ ಹಲವು ವಿಚಾರಗಳು ಮೌಲಿಕವಾಗಿವೆ. ಜಕ್ಕಣಾರ್ಯನ ಸ್ವರ ಏಕೋತ್ತರ ಶತಸ್ಥಲ ಗ್ರಂಥಕ್ಕೆ ರಚಿತವಾಗಿರುವ ವ್ಯಾಖ್ಯಾನಗಳಲ್ಲಿ ಅನಾಮಧೇಯ ವ್ಯಾಖ್ಯಾನಕಾರರು ವ್ಯಕ್ತಮಾಡಿರುವ ಅಭಿಪ್ರಾಯಗಳು ಈ ದಿಶೆಯಲ್ಲಿ ಕೆಲವು ಮುಖ್ಯ ನೋಟಗಳನ್ನು ನೀಡುತ್ತವೆ. ಬೇರೆ ಬೇರೆ ಶರಣರ ಪ್ರಸಿದ್ಧ ಅಂಕಿತಗಳಿಂದ ದೊರೆಯುವ ಸ್ವರವಚನಗಳು ಆಯಾ ವಚನಕಾರರೇ ನಿಜವಾಗಿ ರಚಿಸಿದವುಗಳೆಂಬ ವಿಚಾರ ಅವುಗಳಿಂದ ಸ್ಫುಟವಾಗುತ್ತದೆ.

”ಆನು=ಶರಣೆಯಾದಂಥ ನೀಲಲೋಚನೆ ನಾನು”, ”ಶರಣ=ಜಗದಾಧಾರ ನಾದಂಥ ಚೆನ್ನಬಸವೇಶ್ವರನೆಂಬ ಷಟ್ಸ್ಥಲಾಚಾರ್ಯರು” ಎಂದು ಮುಂತಾಗಿ ವ್ಯಾಖ್ಯಾನಕಾರರು ಹೇಳುವ ಮಾತುಗಳಿಂದ ಇವು ಮಹಲಿಂಗದೇವ ಅಥವಾ ಅವನ ಶಿಷ್ಯ ಜಕ್ಕಣಾರ್ಯರಂಥವರು ರಚಿಸಿದುವುಗಳಲ್ಲ ಎಂಬಂಶ ಸ್ಪಷ್ಟವಾಗುತ್ತದೆ. ಇವರಲ್ಲದೆ ಸಿಂಗಿರಾಜನ ಸಿಂಗಿರಾಜ ಪುರಾಣ ಶೂನ್ಯಸಂಪಾದನೆಗಳು, ಪರಮ ಮೂಲಜ್ಞಾನ ಷಟ್ಸ್ಥಲ, ಇತ್ಯಾದಿ ಕಾವ್ಯ ಮತ್ತು ಸಂಕಲನಗಳಲ್ಲೂ ‘ಸ್ವರವಚನಗಳು’ ಸಂಕಲಿತವಾಗಿವೆ ಹಾಗೂ ಅವುಗಳಿಗೆ ಬಸವಾದಿ ಪ್ರಮಥರ ಅಂಕಿತಗಳಿವೆ. ಈ ಎಲ್ಲ ಆಧಾರಗಳಿಂದ ಈ ಸ್ವರವಚನಗಳನ್ನು ಬಸವಾದಿ ಪ್ರಮಥರು ರಚಿಸಿರುವರೆಂಬ ಪ್ರಮೇಯಕ್ಕೆ ಹೆಚ್ಚು ಬಲಬರುತ್ತದೆ.

ಹೀಗೆ ಬಸವಾದಿ ಪ್ರಮಥರಲ್ಲಿ ಸುಮಾರು ೧೮ ರಿಂದ ೨೦ರಷ್ಟು ವಚನಕಾರರು ಸ್ವರವಚನಗಳನ್ನು ರಚಿಸಿರುವುದಾಗಿ ತಿಳಿದು ಬಂದಿರುವುದಲ್ಲದೆ, ಇವರ ಕಾಲದ ಸ್ವರವಚನಗಳ ಸಂಖ್ಯೆ ಸುಮಾರು ೩೫೦ ಎಂದು ಡಾ. ವೀರಣ್ಣ ರಾಜೂರ ಅವರು ಮಾಡಿರುವ ಒಂದು ಅಂದಾಜು. ಈಗ ಇವೆಲ್ಲ ಸ್ವರವಚನಗಳು ಒಂದೆಡೆ ಲಭ್ಯವಾಗಿಲ್ಲ. ಡಾ. ಎಲ್. ಬಸವರಾಜು ಅವರು, ಈ ಪೈಕಿ ಅಲ್ಲಮಪ್ರಭುವಿನವು೨೮, ಬಹುರೂಪಿ ಚೌಡಯ್ಯನವು-೪. ನಿಜಗುಣರವು-೭, ಅಕ್ಕಮಹಾದೇವಿಯವು-೧೭, ಸಿದ್ಧರಾಮಯ್ಯನವು-೨, ನೀಲಲೋಚನೆಯವು-೭, ಬಸವಣ್ಣನ ವರವು-೨೧, ಚನ್ನಬಸವಣ್ಣನವರು-೬೦, ಸೊಡ್ಡಳ ಬಾಚರಸರವು-೩, ಅಮುಗಿದೇವಯ್ಯ, ಅಗ್ಗಣಿಹೊನ್ನಯ್ಯ, ಪುಷ್ಪದ ಸೋಮಯ್ಯ ಇವರವು ಎರಡೆರಡು, ಚಿಕ್ಕಯ್ಯ, ಹಾವಿನಹಾಳ ಕಲ್ಲಯ್ಯ, ಅಗ್ಗಣಿಯ ಹಂಪಯ್ಯ, ಸಕಲೇಶ ಮಾದರಸ ಮತ್ತು ಅದಯ್ಯ ಇವರವು ಒಂದೊಂದು ಸ್ವರವಚನಗಳನ್ನು ಸಂಕಲಿಸಿದ್ದಾರೆ. ಡಾ. ರಾಜೂರ ತಾವು ಸಂಪಾದಿಸಿದ ‘ಶಿವಯೋಗ ಪ್ರದೀಪಿಕೆ ಪ್ರಸ್ತಾವನೆ’ಯಲ್ಲಿ ೬೦ ಹೊಸ ಸ್ವರವಚನಗಳನ್ನು ಸಂಕಲಿಸಿರುವುದು ಕಂಡುಬರುತ್ತದೆ. ಇದಲ್ಲದೆ ಡಾ. ಎಂ. ಎಂ. ಕಲಬುರ್ಗಿಯವರು ‘ಆದಯ್ಯನ ಲಘುಕೃತಿ’ಗಳಲ್ಲಿ ‘ಆದಯ್ಯಗಳ ಕಂದ’ ‘ಉಯ್ಯಾಲ ಪದ’ ‘ಮುಕ್ತಿಕ್ಷೇತ್ರ’ ಎಂಬ ಪದ್ಯ ಕೃತಿಗಳಲ್ಲದೆ ಆತನ ೨೦ ಸ್ವರವಚನಗಳನ್ನು ಸಂಗ್ರಹಿಸಿದ್ದಾರೆ. ಈ ಸ್ವರವಚನಗಳ ಪಟ್ಟಿ ಈಗಾಗಲೇ ಹೇಳಿರುವಂತೆ ೩೫೦ ನ್ನು ಮಿಕ್ಕುವುದಂತೂ ನಿಶ್ಚಿತ. ಅವೆಲ್ಲವೂ ಪ್ರಕಟವಾದಾಗ ಈ ಸ್ವರವಚನಗಳ ಒಂದು ಸಮಗ್ರ ಚಿತ್ರಣ ದೊರಕಬಹುದಾಗಿದೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೆಲವು ಹೊಸ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ೧೨ನೆಯ ಶತಮಾನದ ಆಸುಪಾಸಿನ ಶರಣರಿಂದ ರಚಿತಗೊಂಡ ಸಾಹಿತ್ಯದಲ್ಲಿ ಒಂದು ಸ್ಥೂಲ ವರ್ಗೀಕರಣ ಮಾಡಬಹುದಾಗಿದೆ. ಅದು ಈ ರೀತಿಯಾಗಬಹುದು.

೧. ಕಂದ-ವೃತ್ತಗಳ ಪದ್ಯಸಾಹಿತ್ಯ. ಈ ರೀತಿ ಸಾಹಿತ್ಯ ರಚನೆಗೆ ‘ಕೊಂಡಗುಳಿ ಕೇಶಿರಾಜ’ ಉದಾಹರಣೆಯೆನಿಸಿದ್ದಾನೆ. ಆತ ರಚಿಸಿರುವ ‘ಮಂತ್ರ ಮಹತ್ವದ ಕಂದ’ ಎರಡು ‘ಲಿಂಗಮಹತ್ವದ ಕಂದ’ಗಳು, ‘ಅಳಲಾಷ್ಟಕ’ ‘ನವರತ್ನ ಮಾಲಿಕೆ’ ಮೊದಲಾದವು ಈ ವರ್ಗದ ಉದಾಹರಣೆಗಳು.

೨. ಪ್ರಭುದೇವರ ಮಂತ್ರಗೋಪ್ಯ, ಚೆನ್ನಬಸವಣ್ಣನವರ ಮಂತ್ರ ಗೋಪ್ಯ ಮುಂತಾದವು ಇನ್ನೊಂದು ವರ್ಗದ ಪದ್ಯಪ್ರಕಾರಗಳು.

೩. ಮೂರನೆಯ ವರ್ಗದಲ್ಲಿ ಮಹಾದೇವಿಯಕ್ಕನ ‘ಯೋಗಾಂಗ ತ್ರಿವಿಧಿ’, ಸಿದ್ಧರಾಮನ ಬಸವಸ್ತೋತ್ರ ತ್ರಿವಿಧಿ, ಮಿಶ್ರಸ್ತೋತ್ರ ತ್ರಿವಿಧಿ, ಅಷ್ಟಾವರಣ ಸ್ತೋತ್ರ ತ್ರಿವಿಧಿ ಇವು ತ್ರಿಪದಿ ರೂಪದಲ್ಲಿದ್ದು, ಈ ಪದ್ಯ ಸಾಹಿತ್ಯ ಪ್ರಕಾರದಲ್ಲಿ ಗಮನಾರ್ಹವಾದ ಸ್ಥಾನ ಪಡೆದುಕೊಂಡಿವೆ. ಈ ತ್ರಿವಿಧಿಗಳನ್ನು ಡಾ. ಎಲ್. ಬಸವರಾಜು ಅವರು ‘ತ್ರಿಪದಿಯ ಶತಕ ಸಾಹಿತ್ಯ’ವೆಂದು ಗುರುತಿಸುತ್ತಾರೆ.

೪. ಇನ್ನು ನಾಲ್ಕನೆಯದಾಗಿ ಆದಯ್ಯ ರಚಿಸಿರುವ ‘ಉಯ್ಯಾಲಪದ’, ‘ಮುಕ್ತಿಕ್ಷೇತ್ರ’ ಗಳೆಂಬ ರಚನೆಗಳು ವಿಶೇಷ ರೀತಿಯ ಇನ್ನೊಂದು ಪದ್ಯಪ್ರಕಾರವಾಗಿರುವಂತೆ ತೋರುತ್ತದೆ.

೫. ಐದನೆಯ ಪ್ರಕಾರದಲ್ಲಿ ‘ಸ್ವರವಚನ ಸಾಹಿತ್ಯ’ ಎಂಬ ಪ್ರತ್ಯೇಕ ಪ್ರಕಾರವನ್ನು ಸ್ಪಷ್ಟವಾಗಿ ವಿಂಗಡಿಸಬಹುದಾಗಿದೆ. ಈ ಪ್ರಕಾರ ತ್ರಿಪದಿ, ವೃತ್ತ-ಕಂದ ಷಟ್ಪದಿಗಳಂತೆ ತಕ್ಕಷ್ಟು ಜನಪ್ರಿಯವಾಗಿಯೇ ಕಾಲಾಂತರದಲ್ಲಿ ಸ್ವರವಚನ ಮುಂದುವರೆದುಬಂದಿದೆ. ಈ ‘ಸ್ವರವಚನ’ಗಳನ್ನು ಇತರ ಪ್ರಕಾರಗಳಿಂದ ಪ್ರತ್ಯೇಕಿಸಲು ಹಲವಾರು ಅಂಶಗಳು ಸಹಾಯಕವಾಗಿವೆ. ಇವುಗಳಿಗೆ ಬಹಳಷ್ಟು ಹಸ್ತಪ್ರತಿಗಳಲ್ಲಿ ರಾಗ ತಾಳಗಳನ್ನು ಸೂಚಿಸಿರುವುದು ಬಹುಮುಖ್ಯವಾದ ಒಂದು ಅಂಶ. ರಾಗಸೂಚನೆಯಿಲ್ಲದ ಅಥವಾ ರಾಗಸೂಚನೆ ಮಾತ್ರವಿದ್ದು, ತಾಳ ಸೂಚನೆಯಿಲ್ಲದ ಹಲವು ಉದಾಹರಣೆಗಳು ಹಸ್ತಪ್ರತಿಗಳಲ್ಲಿವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ರಾಗಗಳನ್ನು ಗುರುತು ಹಾಕಿರುವ ಅಸಾಧಾರಣ ಸಂಗತಿ ಕಂಡುಬರುತ್ತದೆ.

ಮುಂದಿನ ಉದಾಹರಣೆಗಳನ್ನು ಗಮನಿಸಬಹುದು.

  ಸಂಕಲನ ಪದ್ಯ ಸಂಖ್ಯೆ ರಾಗ ತಾಳ
೧.

 

ಶಿವದಾಸ
ಗೀತಾಂಜಲಿ
೧. ಓಂ ಪ್ರಥಮ ಮಧುಮಾಧವಿ- ರೂಪಕ
೨. ೨. ಓಂ ಪ್ರಥಮ ಜ್ಞಾನ ಶಾಂತಮಲಹರಿ ಝಂಪೆ
೩. ೩. ಗುರುಕರಣ ಮಲಹರಿ ಆಟತಾಳ
೪. ೪. ಲಿಂಗಧಾರಣ ದೇಶಿ ಆಟತಾಳ

ಪಲ್ಲವಿಯ ಪ್ರಯೋಗ ಸ್ವರವಚನಗಳಲ್ಲಿ ಸಾಮಾನ್ಯವಾಗಿದೆ. ಹೆಚ್ಚಿನ ಕಡೆ ಎರಡು ಸಾಲುಗಳಲ್ಲಿ ಕಂಡುಬಂದರೆ ಕೆಲವೆಡೆ ಮೂರು, ನಾಲ್ಕು ಪದಗಳನ್ನೊಳಗೊಂಡಿರುವುದೂ ಉಂಟು. ಅನುಪಲ್ಲವಿ ಕೂಟ ಅಲ್ಲಲ್ಲಿ ಗೋಚರಿಸುತ್ತದೆ. ವೀರಶೈವ ಕವಿಗಳಿಂದ ರಚಿತವಾದ ಕಾವ್ಯಗಳಲ್ಲಿ ಸಂಧಿ ಅಥವಾ ಸ್ಥಲಗಳ ಆದಿಯಲ್ಲಿ ಅನೇಕ ವೇಳೆ ಒಂದೆರಡು ಸೂಚನಾ ಪದ್ಯಗಳಿರುವುದು ಸಾಮಾನ್ಯ. ಆದರೆ ಇಂಥ ಸೂಚನಾ ಪದ್ಯಗಳಿಗೂ ಪಲ್ಲವಿಗಳಿಗೂ ಅಂತರವಿದೆ. ಪಲ್ಲವಿ ಪ್ರತಿಯೊಂದು ನುಡಿಯ ಜತೆಗೆ ಅವರ್ತನೆಗೊಳ್ಳುವಂತೆ ಈ ಸೂಚನಾ ಪದ್ಯಗಳು ಆವರ್ತನಗೊಳ್ಳುವುದು ಶಕ್ಯವಿಲ್ಲ. ಇತರ ಕವಿ ಕಾವ್ಯಗಳನ್ನು ಹಾಡುತ್ತಿದ್ದರಾದರೂ ಅವುಗಳ ಹಾಡುಗಾರಿಕೆ ಮತ್ತು ಸ್ವರವಚನ-ದಾಸರ ಪದ್ಗಳ ಹಾಡುಗಾರಿಕೆ ತೀರ ಭಿನ್ನಶೈಲಿಯದಾಗಿತ್ತೆಂಬುದು ಈ ರಾಚನಿಕ ಅಂಶದಿಂದ ಸ್ಪಷ್ಟವಾಗುತ್ತದೆ ಎಂದರೆ ಕಾವ್ಯಗಳ ಸೂಚನಾ ಪದ್ಯಗಳನ್ನು ಪಲ್ಲವಿಯಂತೆ ಪ್ರತಿ ಪದ್ಯಕ್ಕೂ ಆವರ್ತನಗೊಳಿಸುವ ಪರಿಪಾಠ ಇರಲಿಲ್ಲವೆಂದು ಹೇಳಬಹುದು.

ಬಸವಾದಿ ಶರಣರ ಹಾಡುಗಳನ್ನು ಛಂದಸ್ಸಿನ ದೃಷ್ಟಿಯಿಂದ ಗಮನಿಸಿದಾಗ ಅಂಶಗಣ-ಮಾತ್ರಾಗಣಗಳ ಮಿಶ್ರಣವಿರುವಂತೆ ಕಂಡುಬರುತ್ತದೆ. ಅನೇಕ ವೇಳೆ ಅಂಶಗಣಗಳ ನಡಿಗೆ ಕಂಡುಬಂದರೆ ಕೆಲವು ಸಂದರ್ಭಗಳಲ್ಲಿ ೩, ೪, ೫ ಮಾತ್ರೆಯ ಗಣಗಳು, ಇನ್ನು ಕೆಲವೊಮ್ಮೆ ೩/ ೪/೩/೪ ಮುಂತಾದ ವೈವಿಧ್ಯವುಳ್ಳ ಬಂಧಗಳು ಕಂಡು ಬರುತ್ತವೆ. ಉದಾ:

ಮಲವ: ತೊಳೆಯ :ಲಱೆಯ: ದಮಲ
ಜಲದಿ : ತೊಳೆವೆ : ನೆಂಬೆ : ಯೋ ?
ಒಳಗೆ : ಹೊರಗೆ : ಲಿಂಗ : ವಿರಲು
ತೊಳಲಿ : ಬಳಲ : ಲೇತ : ಕೋ
(ಶಿ. ಗೀ. ೪೯೩)

ಲಿಂಗಂ : ಶ್ರೋತ್ರದಿ : ಕೇಳಲು : ಯೋಗ್ಯವು : ಲಿಂಗಕೆ : ಕೇಳಲಿತ್ತು
ಪ್ರಸಾದ ಶ್ರೋತ್ರದಿ ಕೇಳಲು ಯೋಗ್ಯವು ಪ್ರಸಾದಿ ಕೇಳುವನು
(ಅದೇ ೫೧೦)

ಅಂಗದ : ಜ್ಞಾನ : ಗುಣ: ಸಂಗದೊಳಃಗಿರ್ದು : ಶಿವ
ಲಿಂಗದೊಳು: ಸಹಭೋಜನ:ನವ ಮಾಡುವ
(ಅದೇ ೨೯೩)

ಅನೇಕ ವೇಳೆ U- ಇಂಥ ಗುಣಯೋಜನೆ ಕಂಡುಬರುತ್ತದೆ. ಇದು ಅಚ್ಚಗನ್ನಡಕ್ಕೆ ಹೊರಗು. ಬಹುಶಃ ಪ್ರಾಕೃತ ಭಾಷೆಯ ಪ್ರಭಾವದಿಂದಾಗಿ ಇಂಥ ರಚನೆಗಳುಂಟಾದಂತೆ ಕಾಣುತ್ತದೆ.

ಇದಱ : ಭೇದವ : ನಮ್ಮ : ಗುಹೇಶ್ವರಃನೆ ಬಲ್ಲ
ಜಡಜೀವಿ : ಗಳಿಗಿದು : ತಿಳಿಯದು : ನೋಡಾ
(ಶಿವಯೋಗ ಪ್ರದೀಪಿಕೆ ಪು. ೫೪)

ಕೆಲವೊಮ್ಮೆ ಗಣವಿಂಗಡಣೆ ಸಾಧ್ಯವಾಗುವುದಿಲ್ಲ. ನಿಜವಾಗಿ ಸಂಗೀತ ಪ್ರಧಾನವಾದ ರಚನೆಗಳಲ್ಲಿ ಇದೆಲ್ಲ ಸಾಧ್ಯ. ಇಂಥ ವಿಚಾರಗಳನ್ನು ಹೆಚ್ಚು ಬೆಳೆಸುವುದು ಪ್ರಯೋಜನಕಾರಿಯಲ್ಲವೇನೋ?

ಅಚ್ಚುಕಟ್ಟಾದ ಒಂದು ಸ್ವರವಚನ ಅಥವಾ ಹಾಡಿನಲ್ಲಿ ಪಲ್ಲವಿ ಪರಿಚಯಿಸುವ ಒಂದು ಭಾವ ಅಥವಾ ವಿಚಾರ ಮುಂಬರುವ ಪ್ರತಿಯೊಂದು ನುಡಿಯಲ್ಲಿ ರೂಪಕ ಅಥವಾ ಪ್ರತಿಮೆಯಾಗಿ ಬೆಳೆದು ನಿಲ್ಲುತ್ತದೆ. ಇಂಥ ರಚನೆಗಳು ಕೇಳುಗರ ಬುದ್ಧಿ-ಭಾವಗಳನ್ನು ಸೊರೆಗೊಳ್ಳಬಲ್ಲವು.

ಹೂವಿಲ್ಲದ ಕಂಪು ಹೊನ್ನಿಲ್ಲದ ಬಣ್ಣ
ಕಳೆಯಿಲ್ಲದ ಚಂದ್ರನ ಪರಿಯಂತೆ ಶಿವಯೋಗ || ಪಲ್ಲವ ||

ಕಾಲಿಲ್ಲದ ನಡೆ ಕಣ್ಣಿಲ್ಲದ ನೋಟ
ಹಾಲಿಲ್ಲದ ತುಪ್ಪದ ಪರಿನೋಡ
ನಾಲಗೆಯಿಲ್ಲದ ರುಚಿ ಕಿವಿಯಲ್ಲಿ
ಕೇಳದೆ ಹೇಳುವ ಪರಿ ಶಿವಯೋಗ || ೧ ||

ಹರಳಿಲ್ಲದ ಗೆಜ್ಜೆ ಹುರುಳಿಲ್ಲದ ಹಯನು
ಕರ್ಬುನ ಉಂಡ ನೀರಿನ ಪರಿ ನೋಡ
ಹುರಿದು ಬಿತ್ತಿದ ಬೀಜ ನಾಟಿಯ
ಪರಿಯಂತೆ ಪರಶಿವಯೋಗ || ೨ ||

ತನಗುಣಗಳನರಿಯದ ಸಮಾಧಿ
ಮನವೊಲಿದು ನೆರೆವ ಸುಖ ನಿಮ್ಮ ನೆರೆಯಲರಿದು ನಿಜಗುಣ ಯೋಗ
ಅನುಪಮಸುಖಿ ಸಿದ್ಧರಾಮೇಶ ತಂದೆ || ೩ ||

ಸ್ವರವಚನಗಳ ವಿಶ್ಲೇಷಣೆಯಿಂದ ಇನ್ನೂ ಹಲವು ಅಂಶಗಳು ನಮ್ಮ ಗಮನ ಸೆಳೆಯುತ್ತವೆ. ಮೊದಲನೆಯದಾಗಿ ಪ್ರಾಚೀನ ಕಾಲದ ಸ್ವರ ವಚನಗಳ ಸಂಖ್ಯೆ ಇವು ಒಟ್ಟು ಸುಮಾರು ೩೫೦ ರಷ್ಟಾಗಬಹುದೆಂಬುದನ್ನು ಈಗಾಗಲೇ ನೋಡಿದ್ದೇವೆ. ಇದೇ ಅವಧಿಯಲ್ಲಿ ಹುಟ್ಟಿರುವ ವಚನಗಳ ಸಂಖ್ಯೆ ದಿಗ್ಭ್ರಮೆಗೊಳಿಸುವಂಥದು. ಸುಮಾರು ೧೪ ಸಾವಿರ ವಚನಗಳ ಈ ಅವಧಿಯಲ್ಲಿ ಸಿಕ್ಕು ಪ್ರಕಟವಾಗಿವೆ. ಇತ್ತೀಚೆಗೆ ಸಿದ್ಶರಾಮನ ಇನ್ನು ಸು. ೫೦೦ ರಷ್ಟು ವಚನಗಳಿರುವುದಾಗಿ ಮಾಹಿತಿಯಿದೆ. ಎಂದರೆ ಸಂಖ್ಯೆಯ ದೃಷ್ಟಿಯಿಂದ ಸ್ವರವಚನಗಳು ಸಿಕ್ಕಿರುವುದು ವಚನಗಳ ೪೦ನೆಯ ಒಂದು ಭಾಗ ಮಾತ್ರ. ಇದಲ್ಲದೆ ಪ್ರಾಸ, ಗಣ ಇತ್ಯಾದಿ ರಚನಾಂಶಗಳು ಮತ ಸಂಬಂಧಿ ತಾತ್ವಿಕ ವಿವರಗಳು ಸಂಗೀತದ ಸಂಬಂಧ ಇತ್ಯಾದಿ ಸಂಗತಿಗಳು ಸ್ವರವಚನಗಳಲ್ಲಿರುವಂತೆ ವಚನಗಳಲ್ಲಿ ಇಲ್ಲ. ಆದರೆ ವಚನಕಾರರು ತೋಡಿಕೊಳ್ಳುವ ಆತ್ಮೀಯ ನಿವೇದನಾಭಾವ ಅವರದೇ ಆದ ಸ್ವರವಚನಗಳಲ್ಲಿ ಅಷ್ಟಾಗಿ ಪ್ರಕಟವಾಗುವದಿಲ್ಲ. ಬೆಡಗಿನ ಪ್ರಕಾರ ಉಭಯ ಮಾಧ್ಯಮಗಳಲ್ಲಿಯೂ ಇದೆ.

ಎತ್ತಣ ಮಾಮರ ಎತ್ತಣ ಕೋಗಿಲೆ……….
ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ ……….

ಚಿಲಿಮಿಲಿ ಎಂದೋದುವ ಗಿಳಿಗಳಿರ ನೀವು ಕಾಣಿರೆ ……….
ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆಹಳ್ಳ ಬಾವಿಗಳುಂಟು ……….
ಎನ್ನ ಕಾಯವ ದಂಡಿಗೆಯ ಮಾಡಯ್ಯ ……….

ಆಚಾರವೇ ಸ್ವರ್ಗ ಅನಾಚಾರವೇ ನರಕ ……….
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ……….

ಮೊದಲಾದ ವಚನಗಳಲ್ಲಿ ಕಂಡುಬರುವ ಅಪೂರ್ವ ಭಾವಸಂಪತ್ತಿ, ಸ್ವವಿಮರ್ಶೆ, ಲೋಕ ಸಂಗ್ರಹದೃಷ್ಟಿ ಇತ್ಯಾದಿ ಅನನ್ಯ ಸಾಧಾರಣ ಅಂಶಗಳು ವಚನ ಸಾಹಿತ್ಯವನ್ನು ವಿಶ್ವಸಾಹಿತ್ಯದ ಸಾಲಿಗೆ ಸೇರಿಸುತ್ತವೆ.

ತಾತ್ವಿಕತೆಯ ಹಿನ್ನೆಲೆಯಾಗಿ ಮುನ್ನೆಲೆಯಲ್ಲಿ ಅಲೌಕಿಕವಾದ ಅನುಭಾವ ಸಂಪತ್ತಿಯಿಂದ ಓತಪ್ರೋತವಾಗಿರುವುದು ವಚನಗಳಲ್ಲಿ ಕಂಡುಬಂದರೆ, ಸ್ವರವಚನಗಳಲ್ಲಿ ಇವು ಅಷ್ಟು ಮುಖ್ಯ ಸಂಗತಿಗಳಾಗದೆ ಇರುವುದು ಎದ್ದು ಕಾಣುವ ಸಂಗತಿ. ವೀರಶೈವ ಪರಿಭಾಷೆ ಸ್ವರವಚನಗಳ ಪ್ರಮುಖ ಲಕ್ಷಣಗಳಲ್ಲೊಂದು ಎಂದು ೧೨ನೆಯ ಶತಮಾನದ ಸ್ವರವಚನಗಳನ್ನು ಕುರಿತು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ನರಜನ್ಮದ ಪೂರ್ವಾಶ್ರಯ ದೋಷವ
ಪರಿಹರಿಸಿದುದೆನ್ನ ಗುರುಕರುಣ

ಲಿಂಗಸಹಿತ ನಡೆ ಲಿಂಗಸಹಿತ ನುಡಿ
ಲಿಂಗಸಹಿತ ಸಕಲೇಂದ್ರಿಯ ಮುಖವು

ಶ್ರೀ ವಿಭೂತಿಯನೊಲಿದು ಧರಿಸಿದಡಾವ
ಕರ್ಮವು ಹೊದ್ದಲಮ್ಮವು

ಚಿಂತಾಮಣಿ ರುದ್ರಾಕ್ಷಿಗಳವಱಂತುವಱೆದು
ಧರಿಸ ಬಲ್ಲಡೆ ಆತ ರುದ್ರನು

ಹೀಗೆ ಈ ಸ್ವರವಚನಗಳಲ್ಲಿ ಅಷ್ಟಾವರಣ, ಷಟ್‌ಸ್ಥಳ, ಶೀಲಗಳು ಮುಂತಾದ ತಾತ್ವಿಕ ವಿಚಾರಗಳಿಗೆ ಹೆಚ್ಚು ಒತ್ತು ಬಿದ್ದಿದೆ. ಮಹಲಿಂಗದೇವನಂಥವರು ತಾವು ಪ್ರತಿಪಾದಿಸಿರುವ ನೂರಾ ಒಂದು ಸ್ಥಲಗಳಿಗೆ ಒಂದೊಂದರಂತೆ ಸ್ವರವಚನಗಳನ್ನು ಕೊಂದಿಸಿದರು. ಮುಂದುವರಿದು ‘ಕಂಬಾಳ ಶಾಂತಮಲ್ಲೇಶ’ನು ಸ್ವರವಚನಗಳನ್ನು ಇನ್ನಷ್ಟು ಸಂಗ್ರಹಿಸಿ ೨೧೬ಕ್ಕೆ ಮುಟ್ಟಿಸಿದ. ಎಂದರೆ ವೀರಶೈವ ಪರಿಭಾಷೆ ಸ್ವರವಚನಗಳಲ್ಲಿ ತುಂಬ ಸ್ಫುಟವಾಗಿ ಪ್ರಕಟಗೊಳ್ಳುವುದೇ ಅದರ ಮುಖ್ಯ ಲಕ್ಷಣ. ಸರ್ವಜನ-ಸರ್ವಕಾಲಗಳಲ್ಲಿ ಮನೋಹರವಾಗಿ ಗೋಚರಿಸುವ ವಚನಗಳಂತೆ ಸ್ವರವಚನಗಳು ಗೋಚರಕ್ಕೆ ಬರದಿರಲು ಅವುಗಳ ಈ ವೈಲಕ್ಷಣವೇ ಕಾರವೆಂದು ಹೇಳಬೇಕು. ಮುಂದಿನ ಕಾಲದ ನಿಜಗುಣಶಿವಯೋಗಿ, ಸರ್ಪಭೂಷಣ ಶಿವಯೋಗಿ, ಷಡಕ್ಷರ ಸ್ವಾಮಿಗಳು ಈ ಕೆಲವು ಮುಖ್ಯ ಸ್ವರವಚನಕಾರರ ರಚನೆಗಳು ಜನಪ್ರಿಯತೆ ಪಡೆಯಲು ಅವುಗಳ ಪರಿಭಾಷಿಕತೆ ಕಾರಣವಾಗಿರದೆ ಅನುಭಾವಾದಿ ಅಲೌಕಿಕತೆ ಕಾರಣವೆಂಬುದನ್ನು ಎಲ್ಲರೂ ಬಲ್ಲರು.

ಇಲ್ಲಿ ಇನ್ನೊಂದು ಮಾತನ್ನು ಕೂಡ ಪರಿಶೀಲನೆಗೆ ಇಟ್ಟುಕೊಳ್ಳಬಹುದೆಂದು ಕಾಣುತ್ತದೆ. ನಮಗೆ ಖಚಿತವಾಗಿ ತಿಳಿದುಬಂದಿರುವಂತೆ ವೀರಶೈವದಲ್ಲಿ ಪದ್ಯರೂಪಿ ಸಾಹಿತ್ಯವೇ ಮೊದಲು ಆವಿರ್ಭವಿಸಿದೆ. ಕೊಂಡಗುಳಿಯ ಕೇಶಿರಾಜನ ಕೃತಿಗಳು ಈ ಮಾತಿಗೆ ಬಲವಾದ ಆಧಾರ ನೀಡುತ್ತವೆ. ಮುಂದಿನ ಹಲವು ಜನ ಶಿವಶರಣರು ಪದ್ಯರೂಪದ ಕೃತಿಗಳನ್ನು ರಚಿಸಿದ್ದಾರೆ. ಅಕ್ಕಮಹಾದೇವಿ ಮತ್ತು ಸಿದ್ಧರಾಮರು ಈ ನಿಟ್ಟಿನಲ್ಲಿ ಪ್ರಮುಖರು. ಆದಯ್ಯನ ಲಘುಕೃತಿಗಳನ್ನು ಇಲ್ಲಿ ನೆನಪಿಗೆ ತಂದುಕೊಳ್ಳಬಹುದು. ಸಕಲೇಶ ಮಾದರಸ, ಜೇಡರದಾಸಿಮಯ್ಯ, ಆದಯ್ಯ ಮತ್ತು ಸಿದ್ಧರಾಮರ ಅನೇಕ ವಚನಗಳು ವಚನಗಳೇ ಅಥವಾ ಪದ್ಯಗಳೇ ಎಂಬ ಸಂಶಯಕ್ಕೆಡೆ ಮಾಡಿಕೊಡುತ್ತವೆ. ಈ ಎಲ್ಲ ಕಾರಣದಿಂದಾಗಿ ಪದ್ಯ ಮತ್ತು ಸ್ವರವಚನ ಸಾಹಿತ್ಯವೇ ಮೊದಲು ಹುಟ್ಟಿ, ತರುವಾಯ ವಚನ ಸಾಹಿತ್ಯದ ಉದಯವಾಯಿತೆನ್ನಬೇಕು.