ಇಂದಿನ ಕರ್ನಾಟಕದ ಬೆಳಗಾವಿ ವಿಭಾಗ ಮತ್ತು ಕಲಬುರ್ಗಿ ವಿಭಾಗಗಳಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ಹಾಗೂ ಇವುಗಳ ಉಪನದಿಗಳ ಜಾಲ ಹರಡಿರುವುದರಿಂದ ಸಾಂಪತ್ತಿಕವಾಗಿ ಈ ಪ್ರದೇಶ ಪುರಾತನಕಾಲದಿಂದಲೂ ದೇಶದ ರಾಜಕೀಯದಲ್ಲಿ ಅದರಲ್ಲೂ ಡೆಕ್ಕನ್ನಿನ ಪ್ರಸ್ಥಭೂಮಿಯಲ್ಲಿ ಬಹುಮುಖ್ಯವಾದ ಪಾತ್ರವಹಿಸಿದೆ. ಉತ್ತರದಿಂದ ದಕ್ಷಿಣಕ್ಕೆ ದಕ್ಷಿಣದಿಂದ ಉತ್ತರಕ್ಕೆ ನಡೆಯುತ್ತಿದ್ದ ಸಾರಿಗೆ ಸಂಚಾರ, ಯುದ್ಧಗಳು, ಧರ್ಮಪ್ರಚಾರ ಮಾನವಜನಾಂಗಗಳ ವಲಸೆ ಮುಂತಾದ ವಿಷಯಗಳಲ್ಲಿ ಈ ಪ್ರದೇಶ ಅಪಾರವಾದ ಪ್ರಭಾವ ಬೀರಿದೆ. ಇತಿಹಾಸಕಾಲದಲ್ಲಿ ಕೂಡ ಉತ್ತರದಿಂದ ಬರುತ್ತಿದ್ದ ಜಾನಾಂಗಿಕವಲಸೆ ಮತ್ತು ಧರ್ಮಪ್ರಸಾರದ ಪ್ರಭಾವ ಸ್ವಾಭಾವಿಕವಾಗಿಯೇ ಈ ಪ್ರದೇಶದ ಮೇಲೆ ಹೆಚ್ಚಿನ ಪ್ರಮಾಣದಲ್ಲಾದುದು ಕಂಡು ಬರುತ್ತದೆ. ಗೋದಾವರಿ ಮತ್ತು ತುಂಗಭದ್ರಾನದಿಗಳ ನಡುವಿನ ಇಂದಿನ ಜನವರ್ಗಗಳಲ್ಲಿ ಭಾಷೆ ಬೇರೆ ಬೇರೆಯಾದರೂ ದೈಹಿಕಲಕ್ಷಣಗಳಲ್ಲಿ ವೈಪರೀತ್ಯಗಳು ತುಂಬ ಕಡಿಮೆಯೇ.

ಬೆಳಗಾವಿ ವಿಭಾಗ ತುಂಗಭದ್ರೆಗೆ ತಾಗಿಕೊಂಡು ಉತ್ತರಕ್ಕೆ ಪಸರಿಸಿದೆ. ಈ ಪ್ರದೇಶ ಅಶೋಕನ ಕಾಲಕ್ಕೆ ಮೌರ್ಯಸಾಮ್ರಾಜ್ಯದ ಒಂದು ಭಾಗವೇ ಆಗಿದ್ದು ಸ್ಪಷ್ಟವಿದೆ. ತುಂಗಭದ್ರೆಯ ಮತ್ತಷ್ಟು ದಕ್ಷಿಣಕ್ಕೆ ಅಶೋಕಚಕ್ರವರ್ತಿಯ ಶಾಸನಗಳು ದೊರಕಿವೆ. ಮೌರ್ಯಸಾಮ್ರಾಜ್ಯದ ಪತನಾನಂತರ ಈ ಪ್ರದೇಶ ಸಾತವಾಹನರ ಕೈವಶವಾಯಿತು. ಪ್ರತಿಷ್ಠಾನ (ಈಗಿನ ಪೈಠಣ) ಅವರ ಮುಖ್ಯ ರಾಜಧಾನಿಯಾಗಿದ್ದರೂ ವಿಸ್ತಾರವಾದ ಅವರ ಸಾಮ್ರಾಜ್ಯದಲ್ಲಿ ಹಲವಾರು ಉಪಕೇಂದ್ರಗಳಿದ್ದವು. ಅವುಗಳ ಪೈಕಿ ಬನವಾಸಿಯೂ ಒಂದು. ವೈಜಯಂತಿ ಎಂಬ ನಾಮಧೇಯದಿಂದಿದ್ದ ಈ ಬನವಾಸಿ ಕ್ರಿಸ್ತಶಕದ ಆರಂಭ ಕಾಲಕ್ಕಾಗಲೇ ಪ್ರಖ್ಯಾತ ಪಟ್ಠಣವಾಗಿತ್ತು. ಬನವಾಸಿಯಂತೆ ಬಾದಾಮಿ ಅಥವಾ ವಾತಾಪಿ ಮುಂತಾದ ಉತ್ತರ ಕರ್ನಾಟಕದ ಹಲವಾರು ಸ್ಥಳಗಳು ಆ ಕಾಲಕ್ಕಾಗಲೇ ಅಂತಾರಾಷ್ಟ್ರೀಯ ಖ್ಯಾತಿಯಲ್ಲಿದ್ದವು. ಪಾಶ್ಚಾತ್ಯಬರಹಗಾರರಾದ ಟಾಲೆಮಿ, ಪ್ಲಿನಿ ಮುಂತಾದವರ ಉಲ್ಲೇಖಗಳಿಂದ ಈ ಮಾತು ಸ್ಪಷ್ಟವಾಗಿದೆ. ಸಾತವಾಹನರ ತರುವಾಯದಲ್ಲಿ ಬಂದ ಚುಟುಗಳು ಈ ಪ್ರದೇಶವನ್ನು ತಮ್ಮ ಅಂಕಿತದಲ್ಲಿಟ್ಟುಕೊಂಡಿದ್ದರು. ಅನಂತರ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ಮುಂತಾಗಿ ಬೇರೆ ಬೇರೆ ರಾಜಮನೆತನಗಳು ಈ ಪ್ರದೇಶವನ್ನು ಆಳುತ್ತ ಬಂದವು. ಈ ಎಲ್ಲ ಅವಧಿಯಲ್ಲಿ ಸಾಂಸ್ಕೃತಿಕವಾಗಿಯೂ ಧಾರ್ಮಿಕವಾಗಿಯೂ ಆದ ಬದಲಾವಣೆಗಳಾದರೋ ಅಪಾರ. ಧಾರ್ಮಿ ಬದಲಾವಣೆಯನ್ನಷ್ಟೆ ಗಮನಿಸುವುದಾದರೆ ಕ್ರಿ.ಶ. ದ ಪೂರ್ವದಲ್ಲಿಯೇ ಉತ್ತರ ಬೌದ್ಧಧರ್ಮ ಕರ್ನಾಟಕದ ಈ ಭಾಗದಲ್ಲಿ ವ್ಯಾಪಕವಾಗಿಯೇ ಹಬ್ಬಿತ್ತು. ಅಶೋಕನ ವೈಯಕ್ತಿಕ ಆಸಕ್ತಿ ಕಾರಣವಾಗಿ ಅಸಂಖ್ಯರಾದ ಬೌದ್ಧಧರ್ಮ ಪ್ರಚಾರಕರು ಈ ಕಾರ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ರಾಜಮನೆತನದ ವ್ಯಕ್ತಿಗಳೇ ಖುದ್ದಾಗಿ ನಿಂತು ಆ ಮತಪ್ರಸಾರ ಮಾಡಿದರು. ‘ದೀಪವಂಶ’ ಮತ್ತು ‘ಮಹಾವಂಶ’ ಎಂಬ ಗ್ರಂಥಗಳು ಪ್ರಕಾರ ಅಶೋಕನಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರೆ ಸಿಂಹಳದವರೆಗೆ ಹೋಗಿ ಈ ಮತವನ್ನು ಪ್ರಚುರಪಡಿಸಿದರು. ಅವರಂತೆ ಮಹಾದೇವ ಮತ್ತು ರಕ್ಖಿತ ಎಂಬ ಧರ್ಮಪ್ರಸಾರಕವನ್ನು ಕರ್ನಾಟಕದ ಬನವಾಸಿಗೆ ಕಳುಹಿಸಲಾಯಿತೆಂದು ಈ ಗ್ರಂಥಗಳಿಂದ ತಿಳಿದುಬರುತ್ತದೆ. ದೀಪವಂಶ, ಮಹಾವಂಶ ಗ್ರಂಥಗಳು ಹೇಳಿರುವ ವಿಷಯ ಸತ್ಯಕ್ಕೆ ತೀರ ಸಮೀಪವಾಗಿದೆಯೆಂಬ ಅಂಶವನ್ನು ಮುಂದಿನ ಕಾಲದ ಬೌದ್ಧ ಅವಶೇಷಗಳು ಮತ್ತು ಶಾಸನಗಳು ಸಾಕಷ್ಟು ಸಮರ್ಥನೆಯನ್ನೀಯುತ್ತವೆ.

ಬೌದ್ಧಧರ್ಮ ತನ್ನ ನೆಲೆಯನ್ನು ಅರಸುತ್ತ ಬಂದ ಪ್ರಮುಖ ಕೇಂದ್ರ ಬನವಾಸಿಯಾಗಿರಬಹುದಾದರೂ ಅದೊಂದರಿಂದಲೇ ಅದು ತೃಪ್ತಿಪಟ್ಟಿರುವುದು ಸಾಧ್ಯವಿಲ್ಲ. ತನ್ನ ಪ್ರಭಾವವನ್ನು ಸುಮಾರು ಅರ್ಧಗೋಲಾರ್ಧದಲ್ಲಿ ಹಬ್ಬಿಸಿದ ಆ ಮತ ಕನ್ನಡ ನಾಡಿನ ತುಂಬ ಪಸರಿಸಿರುವುದು ತೀರ ಸ್ವಾಭಾವಿಕ. ಈ ಮಾತನ್ನು ಪೋಷಿಸುವ ಹಲವಾರು ಆಧಾರಗಳು ಲಭ್ಯವಾಗಿದೆ. ಈ ದಿಶೆಯಲ್ಲಿ ಸಂಶೋಧನೆ ಅನ್ವೇಷಣೆ ಹೆಚ್ಚು ಹೆಚ್ಚು ನಡೆದಂತೆ ಹೆಚ್ಚುಹೆಚ್ಚಾದ ಸಾಮಗ್ರಿ ಬೆಳಕಿಗೆ ಬರತೊಡಗಿದೆ. ಅನೇಕ ಕಡೆ ಬೌದ್ಧಾವಶೇಷಗಳು ಪತ್ತೆಯಾಗುತ್ತಲಿವೆ. ಅವನ್ನೆಲ್ಲ ಗಮನದಲ್ಲಿಟ್ಟುಕೊಂಡು ಬೆಳಗಾವಿ ವಿಭಾಗದಲ್ಲಿ ಕಂಡುಬರುವ ಬೌದ್ಧಧರ್ಮದ ಪ್ರಭಾವವೇನೆಂಬುದನ್ನು ಇಲ್ಲಿ ವಿವೇಚಿಸಲಾಗಿದೆ.

ಈ ಮೊದಲು ತಿಳಿಸಿರುವಂತೆ ಬೌದ್ಧ ಕೃತಿಗಳಲ್ಲಿ ಬನವಾಸಿಯ ಉಲ್ಲೇಖ ಬಂದಿದೆ. ದೀಪವಂಶ, ಮಹಾವಂಶ ಗ್ರಂಥಗಳ ಕಾಲ ಸು. ಕ್ರಿ.ಶ. ನಾಲ್ಕನೆಯ ಶತಮಾನ. ಕ್ರಿ.ಶ. ಏಳನೆಯ ಶತಮಾನದ ಚೀನಾದ ಪ್ರವಾಸಿ ಹುಯೆನ್‌ತ್ಸಾಂಗ್‌ ಬನವಾಸಿಯಲ್ಲಿ ನಾಲ್ಕು ನೂರು ಬೌದ್ಧವಿಹಾರಗಳಿದ್ದುವೆಂದೂ ಹತ್ತುಸಾವಿರ ಬೌದ್ಧ ಭಿಕ್ಷುಗಳಿದ್ದರೆಂದೂ ಹೇಳುತ್ತಾನೆ. ಇದರಲ್ಲಿ ಕೆಲಮಟ್ಟಿನ ಅತಿಶಯೋಕ್ತಿ ಇದ್ದಿರಬಹುದು. ಆದರೆ ಬನವಾಸಿ ಅಂದು ತುಂಬಾ ಪ್ರಭಾವಶಾಲಿಯಾದ ಬೌದ್ಧ ಕೇಂದ್ರವಾಗಿರುವುದರಲ್ಲಿ ಸಂಶಯವಿಲ್ಲ. ಹುಯೆನ್‌ತ್ಸಾಂಗ್‌ ಹೇಳುವಂತೆ ಎಲ್ಲ ನಾಲ್ಕು ನೂರು ವಿಹಾರಗಳು ಬನವಾಸಿಪಟ್ಟಣದಲ್ಲಿಯೇ ಇರಲಾರವು. ಆತ ಹೇಳುವ ಈ ಸಂಖ್ಯೆ ಬನವಾಸಿನಾಡಿಗೆ ಅನ್ವಯಿಸಿದ್ದಿರಬೇಕು. ಈ ಗ್ರಾಂಥಿಕ ಉಲ್ಲೇಖಗಳಲ್ಲದೆ ಬನವಾಸಿಯಲ್ಲಿ ದೊರೆಯುವ ಕೆಲವು ಅವಶೇಷಗಳೂ ಈ ಮಾತಿಗೆ ಸಾಕ್ಷಿ ನುಡಿಯುತ್ತಿವೆ. ಕ್ರಿಸ್ತಶಕ ಸು. ೨ನೆಯ ಶತಮಾನಕ್ಕೆ ಸೇರಿದ ಚುಟು ಶಾಸನವೊಂದು ಬನವಾಸಿಯ ಮಧುಕೇಶ್ವರ ಗುಡಿಯಲ್ಲಿದೆ. ನಾಗಸಿರಿ ಎಂಬುವಳು (ನು?) ಅಲ್ಲಿ ಒಂದು ಕೆರೆಯನ್ನು ಒಂದು ವಿಹಾರವನ್ನು ಕಟ್ಟಿಸಿ ನಾಗ ಪ್ರತಿಮೆಯೊಂದನ್ನು ದಾನವಾಗಿತ್ತರೆಂದು ಆ ಶಾಸನ ತಿಳಿಸುತ್ತದೆ.[1] ಪ್ರಸ್ತುತ ಶಾಸನದಲ್ಲಿ ಬಂದಿರುವ ವಿಣ್ಣುಕಡ ಚುಟುಕುಲಾನಂದ ಸಾತಕಣ್ಣಿಯು ಬನವಾಸಿಯಲ್ಲಿಯೇ ರಾಜ್ಯವಾಳುತ್ತಿದ್ದನೆಂದು ಇನ್ನೊಂದು ಶಾಸನದಿಂದ ತಿಳಿದುಬರುತ್ತದೆ.[2] ಮಳವಳ್ಳಿ ಮತ್ತು ತಾಳಗುಂದದ ಶಿಲಾಲಿಪಿಗಳನ್ನು ಗಮನಿಸಿದರೆ ಈ ಚುಟುಕುಲದ ಸಾತಕಣ್ಣಿಗಳು ಶೈವಧರ್ಮದ ಜೊತೆಜೊತೆಗೆ ಬೌದ್ಧಧರ್ಮವನ್ನೂ, ಅನುಸರಿಸುವವರಾಗಿದ್ದರೆಂದು ಹೇಳಲಭ್ಯಂತರವಿಲ್ಲ. ಬೌದ್ಧಧರ್ಮವನ್ನೂ ಅನುಸರಿಸುವವರಾಗಿದ್ದರೆಂದು ಹೇಳಲಭ್ಯಂತರವಿಲ್ಲ. ಬನವಾಸಿಯ ಕಡೆಗೆಗೋಡಿನಲ್ಲಿರುವ ಅರ್ಧನಾಶವಾಗಿರುವ ರಚನೆ ಸ್ತೂಪವಾಗಿರುವ ಸಂಭವವಿದೆಯೆಂದು ಡಾ. ಅ. ಸುಂದರ ತಿಳಿಸುತ್ತಾರೆ.[3] ಕಾರ್ಲೆಯ ಪ್ರಸಿದ್ಧ ಗುಹಾಚೈತ್ಯಾಲಯವನ್ನು ಬನವಾಸಿಯವನೇ ಆದ ಭೂತಪಾಲನೆಂಬ ವ್ಯಾಪಾರಿ ಕಟ್ಟಿಸಿದನೆಂದು ಅಲ್ಲಿರುವ ಚಿಕ್ಕ ಪ್ರಾಕೃತಶಾಸನವೊಂದು ಹೇಳುತ್ತದೆ. ಇವೆಲ್ಲವುಗಳ ಜೊತೆಗೆ ಬನವಾಸಿಯ ಮೂರನೆಯ ಗುಡಿಯ ಹತ್ತಿರ ದೊರೆತಿರುವ ತಾರಾಭವತಿಯ ವಿಗ್ರಹವನ್ನೂ ಇಲ್ಲಿ ಗಮನಕ್ಕೆ ತಂದುಕೊಳ್ಳಬಹುದು.[4] ಇದು ತರುವಾಯದ ಕಾಲದ್ದು. ಎಂದರೆ ಬನವಾಸಿಯಲ್ಲಿ ಮೌರ್ಯ ಅಶೋಕನ ಕಾಲದಿಂದ ಸು. ೧೦-೧೧ನೆಯ ಶತಮಾನದ ತನಕವೂ ಬೌದ್ಧಧರ್ಮ ನೆಲೆಯೂರಿತ್ತೆಂದು ಸಾಧಾರಣವಾಗಿ ತಿಳಿಯುವಂತಾಯಿತು.

ಉತ್ತರಕನ್ನಡ ಜಿಲ್ಲೆಯ (ಹೊನ್ನಾವರ ತಾ.) ಹೈಗುಂದದಲ್ಲಿ ಕ್ರಿ.ಶ. ಸು. ೨-೩ ನೆಯ ಶತಮಾನಕ್ಕೆ ಸೇರುವ ಬುದ್ಧನ ಎರಡುಮೂರ್ತಿಗಳು ಸಿಕ್ಕಿವೆ. ಕರ್ನಾಟಕದಲ್ಲಿ ಈ ತನಕ ದೊರಕಿರುವ ಬುದ್ಧನ ಮೂರ್ತಿಗಳಲ್ಲಿ ಇವೇ ಅತ್ಯಂತ ಪ್ರಾಚೀನವಾದವುಗಳೆಂದು ತಿಳಿಯಲಾಗಿದೆ.[5]

ರಾಜಧಾನಿ ಬನವಾಸಿ ಆದಿಕದಂಬರಿಗೆ ಕೇಂದ್ರಪಟ್ಟಣವಾಗಿದ್ದಂತೆ ಹಲಸಿಗೆ ಅವರ ಇನ್ನೊಂದು ರಾಜಧಾನಿಯಾಗಿತ್ತು. ಹಲಸಿಗೆ ಇಂದು ತೀರ ನಿಕೃಷ್ಟಾವಸ್ಥೆಗೆ ಬಂದಿದೆ. ಈಗ ಇಲ್ಲಿನ ಹೆಚ್ಚಿನ ಅವಶೇಷಗಳು ನಷ್ಟವಾಗಿವೆ. ಆದರೆ ಇಲ್ಲಿಯೂ ಬೌದ್ಧರ್ಮೀಯರು ಇದ್ದಿರುವುದು ಅಸಂಭವವೇನಲ್ಲ. ಈ ಹಲಸಿಗೆಯಿಂದ ಈಶಾನ್ಯಕ್ಕೆ ಸು. ೫೦ ಕಿಲೊಮೀಟರ್‌ಗಳ ಅಂತರದಲ್ಲಿರುವ ಬೆಳಗಾವಿ ಮಹಾನಗರ ಕೂಡ ಬಹಳ ಪ್ರಾಚೀನವಾದ ಸಾಂಸ್ಕೃತಿಕ ಕೇಂದ್ರ. ಇದರ ಸಮೀಪದಲ್ಲಿರುವ ವಡಗಾಂವ-ಮಾಧವಪುರಪ್ರದೇಶದಲ್ಲಿ ಸಾತವಾಹನರ ಕಾಲದ ನಗರವೊಂದರ ಅವಶೇಷಗಳು ಪತ್ತೆಯಾಗಿದೆ. ಈ ನೆಲೆಯನ್ನು ಪ್ರಾಚೀನ ಬೆಳಗಾವಿ ಊರು ಎನ್ನಬಹುದು. ಇಲ್ಲಿನ ಅಗೆತಗಳಲ್ಲಿ ಹಲವಾರು ಪ್ರಾಚ್ಯವಸ್ತುಗಳು ಲಭ್ಯವಾಗಿದೆ. ಅವುಗಳಲ್ಲಿ ಕ್ರಿ.ಶ. ಪೂ. ಒಂದನೆಯ ಶತಮಾನಕ್ಕೆ ಸೇರಿದ ಪ್ರಾಕೃತ ಶಾಸನವೂ ಒಂದು. ಇದರಲ್ಲಿ ಕಾಶ್ಯಪ ಗೋತ್ರದ ಧಸ ಎಂಬವನು ವಾಜಪೇಯ ಮುಂತಾದ ಯಾಗಗಳನ್ನು ಮಾಡಿದನೆಂದಿದೆ. ಆವೆಮಣ್ಣಿನಲ್ಲಿ ಮಾಡಿದ ಬುದ್ಧಮೂರ್ತಿಯೊಂದು ಕೂಡ ಸಿಕ್ಕಿರುವುದಾಗಿ ಡಾ. ಅ. ಸುಂದರ ತಿಳಿಸುತ್ತಾರೆ.[6] ಇದರಿಂದ ಈ ನಗರಪ್ರದೇಶದಲ್ಲಿ ಬೌದ್ದಧರ್ಮದ ಪ್ರಭಾವ ಕೆಲಮಟ್ಟಿಗಾದರೂ ಇತ್ತೆಂದು ಹೇಳಬೇಕಾಗುತ್ತದೆ.

ಬಾದಾಮಿಚಾಲುಕ್ಯರ ಪ್ರಸಿದ್ಧಕೇಂದ್ರಗಳ ಪೈಕಿ ಒಂದಾದ ಐಹೊಳೆಯಲ್ಲಿಯೂ ಬೌದ್ಧವಶೇಷಗಳಿರುವುದ ಬೆಂಕಿಗೆ ಬಂದಿದೆ. ಮೇಗುಟಿದೇವಾಲಯದ ದಾರಿಯಲ್ಲಿರುವ ಪ್ರಾಚೀನದೇವಾಲಯ ರಚನೆಯಲ್ಲಿ ವಿಶಿಷ್ಟವಾಗಿದೆ. ಇದರರ್ಧಭಾಗ ನಿರ್ಮಿಸಿದ ಕಟ್ಟಡವಾದರೆ ಇನ್ನುಳಿದುದು ಬಂಡೆಯನ್ನು ಕೊರೆದುದಾಗಿದೆ. ಇದನ್ನು ಜಿನಾಲಯವೆಂದು ಹೆನ್ರಿಕಝಿನ್ಸ ಬಂಡೆಯನ್ನು ಕೊರೆದುದಾಗಿದೆ. ಇದನ್ನು ಜಿನಾಲಯವೆಂದು ಹೆನ್ರಿಕಝಿನ್ಸನ ತಪ್ಪಾಗಿ ಭಾವಿಸಿದ್ದರು. ಇದೊಂದು ಬೌದ್ಧಚೈತ್ಯವೆಂಬುದು ಸ್ಪಷ್ಟವಾಗಿದೆ. ಇದರ ನಡುವೆ ಬುದ್ಧನ ಮೂರ್ತಿಯಿದೆ. ಇದರ ಕಾಲ ಕ್ರಿ.ಶ. ೫ನೆಯ ಶತಮಾನವೆಂದು ತರ್ಕಿಸಲಾಗಿದೆ. ಇದೇ ರೀತಿ ಬಾದಾಮಿಯ ಎರಡು-ಮೂರನೆಯ ಗುಹೆಗಳ ನಡುವೆ ಇರುವ ನೈಸರ್ಗಿಕಗುಹೆಯನ್ನು ಬೌದ್ಧಗುಹೆಯೆಂದು ಈಗ ಗುರುತಿಸಲಾಗಿದೆ. ಇದರಲ್ಲಿ ಬೋಧಿಸತ್ವ ಪದ್ಮಪಾಣಿಯ ಅರೆಉಬ್ಬುಚಿತ್ರವಿದೆ. ಇವೆರಡು ಪ್ರಮುಖ ರಚನೆಗಳಲ್ಲದೆ ಐಹೊಳೆ, ಪಟ್ಟದಕಲ್ಲು ಮಹಾಕೂಟ ಮತ್ತು ಬಾದಾಮಿಯಲ್ಲಿ ಗಜಪೃಷ್ಠಾಕಾರದ ಹಲವಾರು ಕಟ್ಟಡಗಳಿವೆ. ಐಹೊಳೆಯ ದುರ್ಗಾ ದೇವಾಲಯ ಇದಕ್ಕೊಂದು ಉತ್ತಮ ನಿದರ್ಶನ. ಬೌದ್ಧಚೈತ್ಯಾಲಯಗಳ ಅನುಕರುಣೆಯೇ ಇದಕ್ಕೆ ಕಾರಣ. ಹೀಗಾಗಿ ಚಾಲುಕ್ಯರ ಈ ನೆಲೆಯಲ್ಲಿ ಬೌದ್ಧ ಧರ್ಮಕ್ಕೆ ತಕ್ಕಷ್ಟಾದರೂ ಪ್ರೋತ್ಸಾಹವಿತ್ತೆಂದು ತಿಳಿಯುವುದಕ್ಕೆ ಬಾಧಕವೇನೂ ಅಲ್ಲ.

ಇನ್ನು ಧಾರವಾಡ ಜಿಲ್ಲೆಯ ವಿಚಾರವಾಗಿ ಹೇಳಿದರೆ, ಗದಗ ತಾಲ್ಲೂಕಿನ ಕೋಳಿವಾಡಗ್ರಾಮದಲ್ಲಿ ದೊರೆತಿರುವ ತಾರಾಭಗವತಿಯ ಮೂರ್ತಿಯ ವಿಚಾರ ಪ್ರಸಿದ್ಧವಾಗಿದೆ. ತಾರಾದೇವಿ ಮಹಾಯಾನಪಂಥದ ಅಧಿದೇವತೆಗಳ ಪೈಕಿ ಒಬ್ಬಳು. ಒಂದು ಕಾಲಕ್ಕೆ ಕೋಳಿವಾಡದಲ್ಲಿ ಬೌದ್ಧವಿಹಾರವಿದ್ದುದು ಸ್ಪಷ್ಟಪಡುತ್ತದೆ. ಗದಗಿನ ಸಮೀಪವಿರುವ ಡಂಬಳದಲ್ಲಿ ಬೌದ್ಧಧರ್ಮಪರವಾದ ತಕ್ಕಷ್ಟು ದೊಡ್ಡ ಶಾಸನವೊಂದಿದೆ.[7] ಈ ಶಾಸನ ಡಂಬಳ ಊರನ್ನು ಧರ್ಮಪುರ/ಧರ್ಮವೊಳಲ್ ಎಂದು ಕರೆದಿದೆ. ಬೌದ್ಧರು ಧರ್ಮವನ್ನು ರತ್ನತ್ರಯಗಳ ಪೈಕಿ ಒಂದೆಂದು ಭಾವಿಸುತ್ತಾರೆ. ಹೀನಯಾನಪಂಥದಲ್ಲಂತೂ ಧರ್ಮಕ್ಕೇ ಪ್ರಥಮಸ್ಥಾನ. ಆದ್ದರಿಂದ ಡಂಬಳಕ್ಕೆ ಧರ್ಮಪುರ ಎಂದಿರುವುದು ಬೌದ್ಧಧರ್ಮದ ಹಿನ್ನೆಲೆಯಲ್ಲಿ ಸಾರ್ಥಕವಾದುದು. ಇಲ್ಲಿ ಅಯ್ಯಾವೊಳೆಯ ಐನೂರ್ವರ ಶಾಖೆಗೆ ಸೇರಿದ ‘ಪದಿನರುವರು’ ಎಂದರೆ ‘ಹದಿನಾರು’ ಸೆಟ್ಟಿಗಳು (ಉಭಯ ನಾನಾದೇಶಿಗಳು ಮತ್ತು ಮಹಾನಕರರು) ಕೂಡಿ ಒಂದು ಬೌದ್ಧ ವಿಹಾರ ಮಾಡಿಸಿದರು ಮತ್ತು ಲೊಕ್ಕಿಗುಂಡಿಯ ಮಹಾವಡ್ಡ ವ್ಯವಹಾರಿ ಸಂಗವಯ್ಯ ಸೆಟ್ಟಿ ಎಂಬವನು ಅಲ್ಲಿ ಆರ್ಯತಾರಾದೇವಿಯ ವಿಹಾರವನ್ನು ಕಟ್ಟಿಸಿದನು. ಈ ಆರ್ಯತಾರದೇವಿ, ಬುದ್ಧದೇವರು ಮತ್ತು ಅಲ್ಲಿನ ಭಿಕ್ಷುಗಳ ಆಹಾರಾದಿಗಳಿಗಾಗಿ ಅಲ್ಲಿಯ ವ್ಯಾಪಾರಿಸಮುದಾಯದವರು ಹಲವು ದತ್ತಿಗಳನ್ನು ಬಿಟ್ಟರೆಂದು ಇದು ತಿಳಿಸುತ್ತದೆ. ಆರ್ಯತಾರಾದೇವಿಯ ವಿಹಾರವನ್ನು ಕಟ್ಟಿಸಿದವನು ಲೊಕ್ಕಿಗುಂಡಿ ಅಥವಾ ಲಕ್ಕುಂಡಿಯವನೆನ್ನುವುದರಿಂದ ಲಕ್ಕುಂಡಿಯಲ್ಲಿಯೂ ಅಂದು ಬೌದ್ಧಧರ್ಮ ಆಚರಣೆಯಲ್ಲಿ ಇತ್ತೆಂದು ಈ ಶಾಸನದಿಂದ ವ್ಯಕ್ತವಾಗುತ್ತದೆ. ಈ ಶಾಸನದ ಆರಂಭ ಮತ್ತು ಅಂತ್ಯದ ಸಂಸ್ಕೃತಪದ್ಯಗಳಲ್ಲಿ ಬುದ್ಧ, ತಾರಾದೇವಿಯರ ಸ್ತುತಿಯಿದೆ. ತಥಾಗತ, ಪ್ರಜ್ಞಾ ಎಂಬಂಥ ಬೌದ್ಧ ಪಾರಿಭಾಷಿಕಪದಗಳ ಪ್ರಯೋಗ ಕೂಡ ಇದರಲ್ಲಿ ಎಡೆ ಪಡೆದಿವೆ.

ವಿಜಾಪುರ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರದ ಒಂದು ಶಾಸನದಲ್ಲಿ ಬೌದ್ಧದೇವಾಲಯವಿದ್ದ ಉಲ್ಲೇಖವಿದೆ.[8] ಈ ಶಾಸನದ ಕಾಲ ಕ್ರಿ.ಶ. ಸು. ೯ನೆಯ ಶತಮಾನ. ಅದೇ ಊರಿನ ಒಂದು ಶಾಸನದಲ್ಲಿ ಊರನ್ನು ‘ಬೌದ್ಧವಾಡಿಗೆ’ ಎಂದಿದೆ.[9] ಅದೇ ರೀತಿ ಬುಡ್ಡರಸಿಂಗಿ, ಬುಡ್ಡರಕಟ್ಟಿ ಎಂಬ ಗ್ರಾಮಗಳು ಕ್ರಮವಾಗಿ ಹುಬ್ಬಳ್ಳಿ ಮತ್ತು ಬೈಲಹೊಂಗಲ ತಾಲ್ಲೂಕಿನಲ್ಲಿವೆ. ಇವು ಬುದ್ಧರಸಿಂಗಿ ಹಾಗೂ ಬುದ್ಧರಕಟ್ಟೆಗಳಾಗಿ ಒಂದು ಕಾಲದಲ್ಲಿ ಪ್ರಸಿದ್ಧವಾಗಿರುವ ಸಾಧ್ಯತೆಯಿದೆ.

ಮೂರ್ತಿ ಶಿಲ್ಪದ ದೃಷ್ಟಿಯಿಂದ ಅವಲೋಕಿಸಿದಾಗ ಹೈಗುಂದ, ಬೆಳಗಾವಿ (ಮಾಧವಪುರ-ವಡಗಾಂವ) ಮತ್ತು ಐಹೊಳೆಯ ಚೈತ್ಯದಲ್ಲಿ ಬುದ್ಧನ ಮೂರ್ತಿಗಳು ಕಂಡುಬಂದಿವೆ. ಬಾದಾಮಿಯ ಗವಿಯಲ್ಲಿನ ಪದ್ಮಪಾಣಿ ಬೋಧಿಸತ್ವನದು. ಬನವಾಸಿ-ಕೋಳಿವಾಡಗಳಲ್ಲಿ. ತಾರಾಭಗವತಿಯ ಮೂರ್ತಿಗಳಿವೆ. ಹುಯೆನ್‌ತ್ಸಾಂಗ್‌ ಬನವಾಸಿಯಲ್ಲಿ ಮೈತ್ರೇಯನ ಮೂರ್ತಿಯಿದ್ದ ವಿಚಾರ ಹೇಳುತ್ತಾನೆ. ಈ ಎಲ್ಲ ಅಂಶಗಳು ಕರ್ನಾಟಕದಲ್ಲಿ ಮಹಾಯಾನಪಂಥ ಹೆಚ್ಚು ರೂಢವಾಗಿತ್ತೆಂಬುದನ್ನು ದೃಢೀಕರಿಸುತ್ತವೆ. ಕೆಲವರ ಅಭಿಪ್ರಾಯದಲ್ಲಿ ವಜ್ರಯಾನವೂ ರೂಢಿಯಲ್ಲಿತ್ತು. ಹೀಗಾಗಿ ಕ್ರಿ.ಶ. ಪೂರ್ವ ೩ನೆಯ ಶತಮಾನದಿಂದ ಕ್ರಿ.ಶ. ೧೨ನೆಯ ಶತಮಾನದ ವರೆಗೆ ಈ ಭಾಗದಲ್ಲಿ ಬೌದ್ಧಧರ್ಮ ಸಾಕಷ್ಟು ಪ್ರಭಾವಶಾಲಿಯಾಗಿತ್ತೆಂದು ಹೇಳಬೇಕಾಗುತ್ತದೆ. ೧೨ನೆಯ ಶತಮಾನಕ್ಕೆ ಪ್ರವರ್ಧಮಾನಕ್ಕೆ ಬಂದ ವೀರಶೈವವು ‘ಶೂನ್ಯ’ ಮತ್ತು ‘ಕದಳಿ’ ಎಂಬ ಪಾರಿಭಾಷಿಕಪದಗಳನ್ನು ಬೌದ್ಧಧರ್ಮದಿಂದಲೇ ಸ್ವೀಕರಿಸಿದೆ. ಕರ್ನಾಟಕದ ಇತರೆಡೆಗಳಲ್ಲಿ ದೊರೆತಿರುವ ಅಶೋಕನ ಶಾಸನಗಳು, ಸನ್ನತಿಯಂಥ ಬೌದ್ಧಕೇಂದ್ರ, ಕರ್ನಾಟಕದ ಮೇಲೆ ಬೌದ್ಧಧರ್ಮ ಉಂಟುಮಾಡಿದ ಪ್ರಭಾವದ ಸ್ವರೂಪವನ್ನು ನವು ಕಲ್ಪಿಸಿಕೊಳ್ಳಬಹುದಾಗಿದೆ.

 

[1] Luiders List of Brahmi Inscriptions. No-1186.

[2]ಅದೇ ನಂ. ೧೧೯೫.

[3]ಅವಲೋಕನ-ಕರ್ನಾಟಕ ಸರಕಾರ. ಪು. ೫೩.

[4] Journal of Karnataka University-Social Sciences-XXII p.p. 95-96.

[5]ಕರ್ನಾಟಕ ಭಾರತಿ, ಸಂ. ೮ ಸಂಚಿಕೆ-೨, ಪುಟ ೧೦-೨೨

[6]ಅವಲೋಕನ, ಪುಟ ೫೫

[7] I.A-X ಪುಟ ೧೮೫

[8]ವಿಜಾಪುರ ಜಿಲ್ಲೆಯ ಶಾಸನ ಸೂಚಿ, ಪುಟ ೨೨

[9] Sll.XV. No. ೧೫೧ ಕ್ರಿ.ಶ. ೧೧೯೧