ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ಇದರ ಪಶ್ಚಿಮೋತ್ತರ ಗಡಿ, ಮಹಾರಾಷ್ಟ್ರದೊಂದಿಗೆ ಹೊಂದಿಕೊಂಡಿದೆ. ಮರಾಠರ ಹಲವಾರು ಸಂಸ್ಥಾನಗಳು ಬೆಳಗಾವಿ ಜಿಲ್ಲೆಯಲ್ಲಿ ಇದ್ದುದರಿಂದ ಮರಾಠಿಯು ಬೆಳಗಾವಿ ಜಿಲ್ಲೆಯ ಕನ್ನಡದ ಮೇಲೆ ಪ್ರಭಾವ ಬೀರಿದುದು ಸಹಜವಾಗಿದೆ. ಈಗಲೂ ಬೆಳಗಾವಿ, ಖಾನಾಪುರ ಹಾಗೂ ಚಿಕ್ಕೋಡಿ ತಾಲೂಕುಗಳಲ್ಲಿ ಮರಾಠಿ ಮಾತನಾಡುವವರು ವಿಶೇಷ ಸಂಖ್ಯೆಯಲ್ಲಿದ್ದಾರೆ. ಬೆಳಗಾವಿಯ ಬಗೆಗೆ ಇರುವ ವಾದವಂತೂ ಜನಜನಿತವಾಗಿದೆ.

ಮರಾಠಿಗರಲ್ಲದೆ ಭಾಷಾ ಅಲ್ಪಸಂಖ್ಯಾತರಾಗಿ ಮುಸಲ್ಮಾನರು, ಪಟ್ಟೆಗಾರರು, ಕೊರವರು, ಲಮಾಣಿಗಳು, ಗೊಲ್ಲರು, ವಡ್ಡರು ಈ ಜಿಲ್ಲೆಯಲ್ಲಿದ್ದಾರೆ. ಮರಾಠಿಯ ಪ್ರಭೇದವೊಂದನ್ನಾಡುವ ಗೌಳಿಗರು ಖಾನಾಪೂರ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿದ್ದಾರೆ. ಇತ್ತಿತ್ತಲಾಗಿ ವಲಸೆಬಂದ ಮಾರವಾಡಿಗಳು, ಗುಜರಾತಿಗಳು, ಸಿಂಧಿಗಳು ಕೆಲಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಬೆಳಗಾವಿ ನಗರದಲ್ಲಿ ಕೊಂಕಣಿಗಳ ಸಂಖ್ಯೆಯೂ ಗಮನಾರ್ಹವಾಗಿದೆ.

ಬೆಳಗಾವಿ ಜಿಲ್ಲೆಯ ಕನ್ನಡದಲ್ಲಿ ಪ್ರಮುಖವಾದ ನಾಲ್ಕು ಪ್ರಭೇದಗಳನ್ನು ಗುರುತಿಸಬಹುದು. ೧.ಬೈಲಹೊಂಗಲ ಕನ್ನಡ ೨. ಗಡಿ ಕನ್ನಡ ೩. ಗೋಕಾಕ ಕನ್ನಡ ೪. ರಾಮದುರ್ಗ ಕನ್ನಡ.

೧.ಬೈಲಹೊಂಗಲ ಕನ್ನಡ : ಇದರಲ್ಲಿ ಬೆಳಗಾವಿ ತಾಲೂಕಿನ ಬಾಗೆವಾಡಿ ವಿಭಾಗ. ಖಾನಾಪೂರ ತಾಲೂಕಿನ ಉತ್ತರ-ಪಶ್ಚಿಮ ಭಾಗ ಹೊರತುಪಡಿಸಿ ಉಳಿದ ಭಾಗ, ಬೈಲಹೊಂಗಲ ತಾಲೂಕು, ಸವದತ್ತಿ ತಾಲೂಕಿನ ಬಹು ಭಾಗಗಳು ಸಮಾವೇಶವಾಗುತ್ತವೆ.

೨.ಗಡಿ ಕನ್ನಡ :ಇದು ಮಹಾರಾಷ್ಟ್ರದ ಗಡಿಯ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇದರ ಮೇಲೆ ಆರ್ಯಭಾಷೆಯಾದ ಮರಾಠಿಯ ಪ್ರಭಾವ ವಿಶೇಷವಾಗಿದೆ. ಬೆಳಗಾವಿ ತಾಲೂಕಿನ ಬೆಳಗಾವಿ ನಗರ ಹಾಗೂ ಉತ್ತರಭಾಗ, ಬಾಗೇವಾಡಿ ಭಾಗವನ್ನು ಹೊರತುಪಡಿಸಿ ಉಳಿದ ಪೂರ್ವಭಾಗ, ಹುಕ್ಕೇರಿ ತಾಲೂಕಿನ ಪಶ್ಚಿಮ ಮತ್ತು ಉತ್ತರಭಾಗ, ಚಿಕ್ಕೋಡಿ ತಾಲೂಕು-ಇವು ಗಡಿ ಕನ್ನಡದಲ್ಲಿ ಸಮಾವೇಶಗೊಳ್ಳುತ್ತವೆ. ರಾಯಬಾಗ ತಾಲೂಕಿನ ಉತ್ತರಭಾಗ ಹಾಗೂ ಅಥಣಿ ತಾಲೂಕುಗಳಲ್ಲಿಯ ಕನ್ನಡವು ಗಡಿಕನ್ನಡದೊಡನೆ ವಿಶೇಷ ಸಾಮ್ಯವುಳ್ಳದಾಗಿದ್ದರೂ ವಿಜಾಪೂರ ಕನ್ನಡದ ಪ್ರಭಾವವೂ ಇಲ್ಲಿ ಕಂಡುಬರುತ್ತದೆ.

೩. ಗೋಕಾಕ ಕನ್ನಡ: ಇದರಲ್ಲಿ ಗೋಕಾಕ ತಾಲೂಕು, ಹುಕ್ಕೇರಿ ತಾಲೂಕಿನ ದಕ್ಷಿಣ ಮತ್ತು ಪೂರ್ವಭಾಗಗಳು ಸಮಾವೇಶಗೊಳ್ಳುತ್ತವೆ.

೪. ರಾಮದುರ್ಗ ಕನ್ನಡ : ಇದರಲ್ಲಿ ಸವದತ್ತಿ ತಾಲೂಕಿನ ಪೂರ್ವಭಾಗ, ರಾಮದುರ್ಗ ತಾಲೂಕುಗಳು ಸೇರುತ್ತವೆ. ಇಲ್ಲಿ ಬಾಗಲುಕೋಟೆ, ಬಾದಾಮಿಗಳ ಕನ್ನಡ ಪ್ರಭಾವ ಬೀರಿದೆ. ಗಡಿ ಕನ್ನಡದ ಹೊರತು ಉಳಿದ ಭಾಗಗಳಲ್ಲಿ ಭಾಷಿಕ ವೈದೃಶ್ಯಗಳು ಕಡಿಮೆ. ಗಡಿ ಕನ್ನಡದಲ್ಲಿ ಮರಾಠಿ ಪ್ರಭಾವ ಎದ್ದುಕಾಣುತ್ತದೆ. ಅಲ್ಲದೆ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಅದು ಬೆಳಯಿಸಿಕೊಂಡುಬಂದಿದೆ.

ಪ್ರದೇಶಾನುಸಾರ ಆಯಾ ಪ್ರಭೇದಗಳ ಪ್ರಭಾವ ತೋರಬಹುದಾದರೂ ಒಟ್ಟಿನಲ್ಲಿ ಈ ಜಿಲ್ಲೆಯ ಬ್ರಾಹ್ಮಣರ ಕನ್ನಡ ಇತರರಿಗಿಂತ ಬೇರೆಯಾಗಿದೆ.

ಈ ಲೇಖನದಲ್ಲಿ ಮೇಲಿನ ಪ್ರಭೇದಗಳನ್ನು ಕ್ರಮವಾಗಿ ಬೈಲಹೊಂಗಲ ಕನ್ನಡ (ಬೈ), ಗಡಿಕನ್ನಡ (ಗ), ಗೋಕಾಕ ಕನ್ನಡ (ಗೋ), ರಾಮದುರ್ಗ ಕನ್ನಡ (ರಾ), ಬ್ರಾಹ್ಮಣ ಕನ್ನಡ (ಬ್ರಾ) ಎಂದು ಸಂಕೇತಿಸಲಾಗುವುದು.

ಸ್ವರಗಳು:

ǝ, a, ae, i, e, u, o, c ಎಂಬ ಎಂಟು ಸ್ವರಗಳು ಕಂಡುಬರುತ್ತವೆ. ಇವುಗಳಲ್ಲಿ

[o] ಮತ್ತು [c] ಗಳನ್ನು ಪ್ರತ್ಯೇಕವಾದ ಧ್ವನಿಮಾಗಳೆಂದು ಹೇಳಲು ಸಾಧ್ಯವಾಗುವಂತಹ ಕನಿಷ್ಠಯುಗ್ಮಗಳು ದೊರೆಯುವುದಿಲ್ಲ. [c], [o:] ಮತ್ತು [c:] ಈ ಮೂರೂ ವೈದೃಶ್ಯ ಪ್ರಸಾರ ಪಡೆದಿದ್ದು ಪ್ರತ್ಯೇಕ ಧ್ವನಿಮಾಗಳೆಂದು ಹೇಳಲು ಸಾಧ್ಯ ವಾಗುವಂಥ ಕನಿಷ್ಠಯುಗ್ಮಗಳಲ್ಲಿ ಬರುತ್ತವೆ.

ಇನ್ನುಳಿದ ಆರೂ ಸ್ವರಗಳ ದೀರ್ಘತೆಯು ಧ್ವನಿಮಾ ಬೆಲೆಯುಳ್ಳದ್ದಾಗಿದೆ. a, ಸ್ವರಕ್ಕೆ ಮಾತ್ರ ಹೆಚ್ಚಿನ ಕನಿಷ್ಠಯುಗ್ಮಗಳಿಲ್ಲ.

ಉದಾ:

01

ಬೆಳಗಾವಿ ಜಿಲ್ಲೆಯ ಪ್ರಭೇದಗಳಲ್ಲಿ [c] ಹ್ರಸ್ವಸ್ವರವು ಸಾಮಾನ್ಯವಾಗಿದ್ದು [o] ಕ್ವಚಿತ್ತವಾಗಿದೆ. ಈ [c] ಸ್ವರವು ಒ ಸ್ವರದಿಂದಲೇ ನಿಷ್ಪನ್ನವಾದುದೆಂಬಲ್ಲಿ ಸಂದೇಹವಿಲ್ಲ. ಇಂದು ಬರಹ ಕನ್ನಡದಲ್ಲಿ ಒಕಾರವಿರುವ ಕಡೆಗಳಲ್ಲೆಲ್ಲ ಇಲ್ಲಿಯ ಪ್ರಭೇದಗಳಲ್ಲಿ [c] ಸ್ವರವೇ ಕಂಡುಬರುತ್ತದೆ. ಆದರೆ (ಬರಹ ಕನ್ನಡದಲ್ಲಿ) ಪವರ್ಗ ವ್ಯಂಜನದ ಮುಂದೆ ಇರುವ ಒ ಓಕಾರಗಳು ಈ ಪ್ರಭೇದಗಳಲ್ಲಿ ಶುದ್ಧವಾಗಿ ಕೇಂದ್ರ ವಿವೃತಸ್ವರಗಳಾಗಿರುವುದೂ ಅಷ್ಟೇ ಸಾಮಾನ್ಯ.

ಉದಾ:

02

ಸ್ವರಗಳಲ್ಲಿ ಅನುನಾಸಿಕತೆ ಆಗಾಗ ಕಂಡುಬರುತ್ತದೆ.

ಉದಾ:

03

ಮೇಲಿನ ಉದಾಹರಣೆಗಳಲ್ಲಿ ಕೊನೆಯ ಜೋಡಿಯೊಂದು ಮಾತ್ರ ಕನಿಷ್ಠ ಯುಗ್ಮ ವೆಂಬುದನ್ನು ಕಾಣಬಹುದು.

ವ್ಯಂಜನಗಳು :

ಪ್,       ಬ್,       ಮ್,      ವ್

ತ್,        ದ್,

ನ್,        ಲ್, ರ್

ಟ್,       ಡ್,       (ಣ್)     ಳ್

ಚ್,       ಜ್,                   ಯ್, ಸ್, (ಶ್)

ಕ್,        ಗ್,                    ಹ್

ಇವಲ್ಲದೆ ಗಡಿ ಕನ್ನಡ ಹಾಗೂ ಬ್ರಾಹ್ಮಣ ಕನ್ನಡಗಳಲ್ಲಿ ಮಹಾಪ್ರಾಣಗಳು ಕಂಡುಬರುತ್ತವೆ.

ಈ ಪ್ರಭೇದಗಳಲ್ಲಿ ವಕಾರವು ದಂತೋಷ್ಠ್ಯವಾಗಿರದೆ ಉಭಯೋಷ್ಠ್ಯವಾಗಿದೆ. ಸಾಮಾನ್ಯವಾಗಿ ನ್, ಣ್ ಗಳಲ್ಲಿ ವ್ಯತ್ಯಾಸ ತೋರಿಬಂದಿರುವುದಿಲ್ಲ. ಆಗೀಗ ತೋರಿ ಬರುತ್ತಿದ್ದರೆ ಗಡಿ ಹಾಗೂ ಬ್ರಾಹ್ಮಣ ಕನ್ನಡದಲ್ಲಿ ಮಾತ್ರ.

ರ್, ಲ್ ಗಳು ಇಲ್ಲಿ ವರ್ತ್ಸ್ಯವಾಗಿವೆ. ಇದೇ ರೀತಿ ಪರದಲ್ಲಿ ದಂತ್ಯ ವ್ಯಂಜನಗಳಾದ ತ, ದ ಗಳಿದ್ದಾಗ ನಕಾರವು ದಂತ್ಯವಾಗಿಯೂ ಉಳಿದ ಪರಿಸರಗಳಲ್ಲಿ ವರ್ತ್ಸ್ಯವಾಗಿಯೂ ಉಚ್ಚರಿಸಲ್ಪಡುತ್ತದೆ.

ಗಡಿ ಕನ್ನಡವನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಪಶ್ಚಸ್ವರಗಳು ಪರದಲ್ಲಿದ್ದಾಗ ಪದಾದಿ ಚ, ಜ ಗಳಿಗೆ ದಂತ್ಯೋಚ್ಚಾರವೂ ಉಳಿದ ಸ್ವರಗಳಿದ್ದಾಗ ತಾಲವ್ಯೋಚ್ಚಾರವೂ ಇರುತ್ತದೆ. ಪದಮಧ್ಯದಲ್ಲಿ ಪೂರ್ವಸ್ವರಗಳ ಹೊರತು ಬೇರೆ ಸ್ವರಗಳಿದ್ದಾಗ ದಂತ್ಯೋಚ್ಚಾರ ಹಾಗೂ ಪೂರ್ವಸ್ವರಗಳಿದ್ದಾಗ ತಾಲವ್ಯೋಚ್ಚಾರ ಇರುತ್ತದೆ.

ಗಡಿ ಕನ್ನಡದಲ್ಲಿ ಎಲ್ಲ ಸ್ಥಾನಗಳಲ್ಲಿ ಪೂರ್ವಸ್ವರಗಳು ಪರದಲ್ಲಿದ್ದಾಗ ಮಾತ್ರ ತಾಲವ್ಯೋಚ್ಚಾರವಿರುತ್ತದೆ.

ಈ ಪ್ರಭೇದಗಳಲ್ಲಿ ಶಕಾರವು ಕ್ವಚಿತ್ತಾಗಿ ಪ್ರಯೋಗಗೊಳ್ಳುವುದು ಕಂಡು ಬರುತ್ತದೆ.

ಶಂಕ ‘ಶಂಕು’
ಶಾಣ್ಯಾ ‘ಜಾಣ’
ಶಾಂತಿ
ಶಾಲ ‘ಮೇಲುಹೊದಿಕೆ’
ಶಲ್ಲೆ
ಶೆಟ್ಟಿ, ಸೆಟ್ಟಿ
ಶೇಂಗಾ ‘ಶೇಂಗಾ’
ಶ್ಯಾರ ‘ಶಹರ’, ‘ಪಟ್ಟಣ’

ಬ್ರಾಹ್ಮಣ ಮತ್ತು ಗಡಿ ಕನ್ನಡಗಳಲ್ಲಿರುವ ಮಹಾಪ್ರಾಣಗಳಿಗೆ ಉದಾಹರಣೆಗಳು :

ಖಣ ‘ಕುಪ್ಪಸದ ಬಟ್ಟೆ’
ಕಣ ‘ರಾಸಿ ಮಾಡುವ, ಒಕ್ಕುವ ಸ್ಥಳ’
ಗಾಣ
ಘಾಣ (ಗಡಿ) ‘ಹೊಲಸು’
ದನಿ ‘ಧ್ವನಿ’
ಧನಿ ‘ಶ್ರೀಮಂತ’

ಈ ಜಿಲ್ಲೆಯಲ್ಲಿ ಹಕಾರವು ಪದಾದಿಯಲ್ಲಿ ಮಾತ್ರವೇ ಬರಬಲ್ಲುದು :

ಬಾಳ, ಭಾಳ (ಗ,ಬ್ರಾ) ‘ಬಹಳ’
ಹಂತ, ಹಂತಾ ‘ಅಂತಹ’
ಹಿಂತ, ಹಿಂತಾ ‘ಇಂತಹ’
ಹಾರ ‘ಬಲಿ’ = ಆಹಾರ
ಬರಿ ‘ಬರಹ’
ಚಿತ್ರ ‘ಸಿಂಹ’
ಮಾಡೀ ‘ಮಹಡಿ’
ತರಾ, ಥರಾ (ಗ, ಬ್ರಾ) ‘ತರಹ’)
ಹೌದ, ಹೌಂದ, ಹೋಂದ, ಹೊಂದ ‘ಅಹುದು’
ಸಲೂ, ಸಲುವ ‘ಸಲಹು’

ಕನ್ನಡ ಭಾಷೆಯ ಪದಾದಿ ಪಕಾರವು ಇಂದು ಹಕಾರವಾಗಿ ಮಾರ್ಪಟ್ಟಿರುವುದು ಸರ್ವವಿದಿತವಾದ ಸಂಗತಿ. ಆದರೆ ಬೆಳಗಾವಿ ಕನ್ನಡದಲ್ಲಿ ಆದಿ ಪಕಾರದಿಂದೊಡಗೂಡಿದ ಅನೇಕ ಪದಗಳು ಬಳಕೆಯಲ್ಲಿವೆ.

ಉದಾ :

ಪಕಳಿ ‘ಪುಷ್ಪದಳ’
ಪಕ್ಕ ‘ಪುಚ್ಚ’, ‘ಪಕ್ಷ’
ಪಕ್ಕಿ ‘ಬೊಕ್ಕೆ’
ಪಚಡಿ ‘ಕೋಸಂಬರಿ’
ಪಟಗೆ ‘ತಲೆಗೆ ಸುತ್ತುವ ಬಟ್ಟೆ’
ಪಟಗಾ ‘ರುಮಾಲು’
ಪಟ ‘ಗಾಳಿಪಟ’
ಪಟ್ಟಿ
ಪಡಿ ‘ಪಡೆ, ಕಲ್ಲುಬಂಡೆ’
ಪಡಿ /pǝḍi/ ‘ಕಾಳಿನ ಒಂದು ಅಳತೆ’
ಪಡ್ಡ ‘ಒಂದು ಕರಿದ ತಿನಿಸು’
ಪಳಿ ‘ಹಲಗೆ’
ಪರಿ ‘ಪೊರೆ’
ಪನದೆ ‘ಮಜ್ಜಿಗೆ-ಸಾರು’
ಪಳ್ಳ ‘ಪೊಳ್ಳು’
ಪಟ್ಟಿ ‘ಪರಟೆ’, ‘ತಲೆಯ ಓಡು’
ಪಂಜಿ, ಪಂಜಾ (ಬ್ರಾ) ‘ಜಾಳದ ಅರಿವೆ, ಪಂಚೆ’
ಪಾಟಿ ‘ಸ್ಲೇಟು’
ಪಾರ ‘ಪಾರು’
ಪಾಲ ‘ಪಾಲು’
ಪಾಳಿ ‘ಸರತಿ’, ‘ಹರವಾದ ಕಲ್ಲು’
ಪಾಚಿ ‘ನೀರುಳ್ಳಿ ಮುಂತಾದ ಸಸ್ಯಗಳ ಎಲೆ’
ಪಾಡ ‘ಉತ್ತಮ’, ‘ಅರೆಮಾಗಿದ ಹಣ್ಣು’, ‘ಸ್ಥಿತಿ’
ಪಿಂಡ ‘ತಿರುಳು’
ಪುಡಿ ‘Powder’
ಪುಡಿಕಿ ‘ಪೊಟ್ಟಣ’
ಪುಂಡಿ ‘ನಾರು ಕೊಡುವ ಒಂದು ಸಸ್ಯ’
ಪೂಜಿ, ಪೂಂಜಿ (ಗ) ‘ ಪೂಜೆ’, ‘ಶೂನ್ಯ’
ಪ್ಯಂಟಿ ‘ಪೆಂಟೆ’
ಪ್ಯಂಡಿ ‘ಪೆಂಡೆ’, ‘ಕಟ್ಟು’, ‘ಸಿವುಡು’
ಪ್ಯಾಟಿ ‘ಪೇಟೆ’
ಪ್ಯಾಲಿ (ಬೈ) ‘ಪೆದ್ದ’
ಪೋಚ (ಗ) ‘ಕೈಯಲ್ಲಿಯ ಬಂಗಾರದ ಆಭರಣ’

ಈ ಜಿಲ್ಲೆಯ ಗಡಿಭಾಗದ ಜನರು, ಬ್ರಾಹ್ಮಣರು ಹಾಗೂ ಸುಶಿಕ್ಷಿತ ವರ್ಗದವರನ್ನು ಬಿಟ್ಟು ಉಳಿದವರಲ್ಲಿ ಪದಾದಿಯಲ್ಲಿ ಟ, ಡ ಗಳಿರುವುದು ಬಹು ಅಪರೂಪ. ಟ, ಡ, ಗಳ ಬದಲು ತ, ದ ಗಳಿರುತ್ತವೆ.

ಉದಾ:

ತಕ್ಕೆ ತಕ್ಕೆ
ಡೋಣಿ ದೋಣಿ (ನಿ)
ಡಬ್ಬಣ ದಬ್ಬನ
ಡಾಂಬರ ದಾಂಬರ
ಡಾವಣಿ ದಾವನಿ
ಟಗರು ತಗರು
ಟೆಂಗಿನಕಾಯಿ ತೆಂಗಿನಕಾಯಿ
ಡೊಂಬ ದ್ವಂಬ
ಡೋರ, ಢೋರ (ಗ, ಬ್ರಾ) ದ್ವಾರ

ಬರಹ ಕನ್ನಡದಲ್ಲಿ ಪ್ರಥಮಾಕ್ಷರವು ಸಕಾರವುಳ್ಳದ್ದಾಗಿದ್ದು ದ್ವಿತೀಯಾಕ್ಷರದಲ್ಲಿ ಚ. ಜಕಾರ ಬಂದಿದ್ದರೆ ಆದಿ ಸಕಾರವೂ ಚಕಾರವಾಗಿ ಮಾರ್ಪಡುತ್ತದೆ.

ಸಂಜೆ ಚಂಜಿ
ಸೂಜಿ ಚೂಜಿ
ಸೋಜಿಗ ಚೋಜ್ಗ
ಸಜ್ಜಿ ಚಜ್ಜಿ
ಸಂಚಿ ಚಂಚಿ, ಚ್ವಂಚಿ

ಕೆಲವು ಸಲ, ಮಧ್ಯಸ್ವರ ಲೋಪಿಸುವುದರಿಂದ ಸಕಾರ ಮತ್ತು ಬೇರೆ ವ್ಯಂಜನಗಳಿಂದಾಗಬೇಕಾದ ವಿಜಾತೀಯ ಸಂಯುಕ್ತಾಕ್ಷರದ ಬದಲು ‘ಞ್ಚ’ ಅಥವಾ ‘ಚ್ಚ’ ಸಜಾತೀಯ ಸಂಯುಕ್ತಾಕ್ಷರವುಂಟಾಗುತ್ತದೆ.

ಹೊಸ್ತಿಲು ಹ್ವಚ್ಚಲ
ಹೊದಿಸು ಹ್ಚಚ್ಚ
ಹುಣುಸೆ ಹುಂಚಿ

ಆದಿ ವಕಾರ:

ಸ್ವೀಕೃತಪದಗಳಲ್ಲಿಯ ಆದಿ ವಕಾರವು ಇಲ್ಲಿ ಲೋಪಿಸುತ್ತದೆ.

ವಿಮಾನ ಇಮಾನ
ವಿಷ ಇಸ
ವಿಧಿ ಇದಿ
ವಿಚಾರ ಇಚಾರ
ವಿಜಾಪೂರ ಇಜಾಪೂರ
ವಿರೂಪಾಕ್ಷ ಇರಪಕ್ಸಿ
ವಿಪರೀತ ಇಪರೀತ

ಬರಹ ಕನ್ನಡದ ಪದಾಂತ ಉಕಾರದ ಬದಲು ಈ ಜಿಲ್ಲೆಯಲ್ಲಿ ‘a’ ಅಥವಾ ‘a’ ಸ್ವರವಿರುವುದು ಸಾಮಾನ್ಯ. ಕೆಲವು ಸಲ ವಿಕಲ್ಪವಾಗಿ ಉಕಾರವಿರಬಹುದು.

ಉದಾ :

ಅವರ ಅಥವಾ ಅವ್ರ ‘ಅವರು’
ಅದ ಅಥವಾ ಅದಾ (ಗ) ‘ಅದು’
ಹುಳಾ ‘ಹುಳು’

ಬರಹ ಕನ್ನಡದಲ್ಲಿ ಮೂರು ಅಥವಾ ಅದಕ್ಕೂ ಹೆಚ್ಚಿನ ಅಕ್ಷರಗಳುಳ್ಳ ಪದದಲ್ಲಿ ದ್ವಿತೀಯಸ್ವರವು ಹ್ರಸ್ವವಾಗಿದ್ದರೆ ಅದು ಲೋಪಿಸುವುದು ಇಲ್ಲಿ ಬಹು ಸಾಮಾನ್ಯ ಅಂಥ ಲೋಪವು (೧) ಪ್ರಥಮಸ್ವರ ದೀರ್ಘವಾಗಿದ್ದಾಗ (೨) ಬರಹ ಕನ್ನಡದಲ್ಲಿ ದ್ವಿತೀಯಾಕ್ಷರವು ದ್ವಿತ್ವವಾಗಿದ್ದಾಗ (೩) ದ್ವಿತೀಯಾಕ್ಷರದಲ್ಲಿ ಯ್. ರ್. ವ್. ಡ್. ಈ ವ್ಯಂಜನಗಳಿದ್ದಾಗ ಹೀಗೆ ಮೂರು ಸಂದರ್ಭಗಳಲ್ಲಿ ಘಟಿಸುತ್ತದೆ.

ಉದಾ:

೧. ಕಾಮ್ಣಿ ‘ಕಾಮಾಲೆ’ಹೋಳ್ಗಿ ‘ಹೋಳಿಗೆ’  
  ಕಾಸ್ಗೊ, ಕಾಸ್ಯ್ಗೊ ‘ಕಾಯಿಸಿಕೊ’ ಮಾಡ್ತಾನ ‘ಮಾಡುತ್ತಾನೆ’
  ಹೋಗ್ಲಿ ‘ಹೋಗಲಿ’ ನೋಡ್ತಾನ ‘ನೋಡುತ್ತಾನೆ’
೨. ಕತ್ಲ ‘ಕತ್ತಲು’ ಕಮ್ಗ ‘ಕಮ್ಮಗೆ, ಕಮ್ಮನೆ’
  ತಂಬ್ಗಿ ‘ತಂಬಿಗೆ’ ತೊಟ್ಲ ‘ತೊಟ್ಟಿಲು’
  ತುಪ್ಳ ‘ತುಪ್ಪುಳ’ ತಂಗ್ಳ ‘ತಂಗಳು’
  ಮಕ್ಳ ‘ಮಕ್ಕಳು’ ಮಗ್ಲ ‘ಮಗ್ಗಲು’
  ನ್ಯಟ್ಗ ‘ನೆಟ್ಟಗೆ’ ಸಂಗ್ಟ ‘ಸಂಕಟ’
  ಸಪ್ಳ ‘ಸಪ್ಪಳ’ ಹಪ್ಳ ‘ಹಪ್ಪಳ’
೩. ಬಯ್ಲ ‘ಬಯಲು’ ಪಯ್ರ ‘ಪಯಿರು’
  ಹಯ್ನ ‘ಹಯನ’    
  ಉರ್ಲ ‘ಉರುಳು’ ಅರ್ಲ ‘ಅರಲು’
  ಅರ್ಸ ‘ಅರಸ’ ಬಿರ್ಸ ‘ಬಿರುಸು’
  ಕವ್ಣಿ ‘ಕವಣೆ’ ನವ್ಣಿ ‘ನವಣೆ’
  ನವ್ಲ ‘ನವಿಲು’ ಸವ್ಲತ್ತ ‘ಸವಲತ್ತು’
  ಕಡ್ಲಿ ‘ಕಡಲೆ’ ಕ್ವಡ್ಲಿ ‘ಕೊಡಲಿ’
  ವಡ್ಲ ‘ಒಡಲು’ ಸಡ್ಲ ‘ಸಡಿಲು

ಮೇಲಿನ ಪ್ರಕಾರವಲ್ಲದೆ ಬರಹ ಕನ್ನಡದ ದ್ವಿತೀಯಾಕ್ಷರದಲ್ಲಿ ರಕಾರವಿದ್ದು, ತೃತೀಯಾಕ್ಷರದಲ್ಲಿ ಪ್ರತಿವೇಷ್ಟಿತಗಳಾದ ಟ, ಡ, ಣ, ಳ ಗಳಿದ್ದರೆ ರಕಾರದ ಮುಂದಿನ ಸ್ವರವು ಲೋಪ ಹೊಂದಿ, ಮುಂದಿನ ವಂಜನದೊಡನೆ ರಕಾರವು ಸಮರೂಪ ಧರಿಸುತ್ತದೆ.

ಉದಾ:

ಅಳ್ಳಿ ‘ಅರಳೆ’ ಅಳ್ಳ ‘ಅರಳು’
ಉಳ್ಳಿ ‘ಉರುಳಿ’ ವಳ್ಳ ‘ಒರಳು’
ಒಟ್ಟ ‘ಒರಟ’ ಕಡ್ಡ ‘ಕರಡು’
ಕಳ್ಳ ‘ಕರುಳು’ ಕ್ವಳ್ಳ ‘ಕೊರಳು’
ಗ್ವಟ್ವ ‘ಗೊರಟ’ ಪಟ್ಟಿ ‘ಪರಟಿ’
ಹಡ್ಡ ‘ಹರಡು’ ಹ್ವಳ್ಳ ‘ಹೊರಳು’
ಕಣ್ಣಿ ‘ಕರಣಿ’ ಕುಲಕಣ್ಣಿ ‘ಕುಲಕರಣಿ’

ಲಿಂಗವಚನವಿಭಕ್ತಿ:

ಲಿಂಗ:ಕೂಸು ನಪುಂಸಕಲಿಂಗವಾಗಿರುವಂತೆ ಈ ಪ್ರಭೇದಗಳಲ್ಲಿ ಮುದುಕ, ಮುದುಕಿ, ಹೆಣ್ಣು ಮುಂತಾದ ಶಬ್ದಗಳು ವಿಕಲ್ಪವಾಗಿ ನಪುಂಸಕಲಿಂಗದಲ್ಲಿ ಪ್ರಯೋಗಿಸಲ್ಪಡುತ್ತವೆ.

ಉದಾ:

ಅವರ ಮನ್ಯಾಗ ಒಂದ ಹ್ಯಣ್ಣ ಅ:ತಿ ‘ಅವರ ಮನೆಯಲ್ಲಿ ಒಂದು ಹೆಣ್ಣು ಇದೆ’
ಮುದಕಾ ಕ್ಯಮ್ಮಾಕ ಹತ್ತ : ತಿ ‘ಮುದುಕ ಕೆಮ್ಮುತಿದ್ದಾನೆ’

ವಚನ:ಜಾತ್ಯೇಕ ವಚನವು ಇಲ್ಲಿ ಸರ್ವೇಸಾಮಾನ್ಯವಾಗಿದೆ. ಬಹುವಚನ ಸೂಚಕವಾಗಿ-ಗಳು ಇಲ್ಲಿ-ಗೊಳ, -ಗೋಳ ಎಂದು ಪ್ರಯೋಗಗೊಳ್ಳುತ್ತದೆ.

ಅಣ್ಣಗೋಳ, ಅಪ್ಪಗೋಳ, ಸ್ವಾಮಿಗೋಳ ಹ್ಯಣ್ಣಗೋಳ (ಹೆಣ್ಣುಗಳು)

-ಅರು ಎಂಬದು – ಆರ ಎಂದಾಗುತ್ತದೆ.

ಹುಡಿಗ್ಯಾರ, ಕುಲಕಣ್ಯಾರ, ಪಾತರದಾರ, ಗಾಣಿಗ್ಯಾರ.

ಕೆಲವೊಮ್ಮೆ – ಓರ ಎಂದಾಗುವುದೂ ಉಂಟು. ಉದಾ : ಹುಡುಗೋರ.

ಗಡಿ ಕನ್ನಡದಲ್ಲಿ ಸಂಬಂಧವಾಚಕಗಳಿಗೆ – ದೇರ ಎಂಬ ಪ್ರತ್ಯಯ ಸೇರುತ್ತದೆ.

ಉದಾ:

ತಮ್ಮದೇರ ‘ತಮ್ಮಂದಿರು’
ತಂಗಿದೇರ ‘ತಂಗಿಯರು’

ವಿಭಕ್ತಿ:

ಪ್ರ : ಪ್ರಕೃತಿ
ದ್ವಿ : ೧. ಪ್ರಕೃತಿ
  ೨. (ಅ) ನ್ನ ಅಥವಾ (ಅ) ನ
  ೩. ಅಂತ್ಯಸ್ವರವು ದೀರ್ಘವಾಗುವುದು. ಆದರೆ ಆಕಾರವನ್ನುಳಿದು ಇತರ ಸ್ವರಗಳಲ್ಲಿ ದೀರ್ಘತ್ವವು ವಿಕಲ್ಪ.
ತೃ: – ಇಂದ. -ಲೆ
ಚ.: -ಗ್ಯ, -ಕ, -ಕ್ಕ, -ಗ
ಪಂ. : -ಇಂದ
ಷ.: -ಅ, -ಆ, -ಈ, -ಊ
ಸ.: -ಆಗ, -ವಳಗ, -ಓಕ (ಗಡಿ)