ಉದಾಹರಣೆಗಳು:

ಪ್ರ.: ನಾ ಬರತೇನ, ನಾನು ಬರತೇನ ‘ನಾನು ಬರುತ್ತೇನೆ’
ಅದ ಬರತ:ತಿ ‘ಅದು ಬರುತ್ತದೆ’
ಕೂಸ ಅಳತ:ತಿ ‘ಕೂಸು ಅಳುತ್ತದೆ’
ಕೂಸ ಅಳತೇತಿ (ಗ)
ಕೂಸು ಅಳತದ (ಬ್ರಾ)
ಸಾವಕಾರ ಹ್ವಂಟ ‘ಸಾಹುಕಾರ ಹೊರಟನು’
ದ್ವಿ.: ೧. ಊರ ನೋಡ ‘ಊರನ್ನು ನೋಡು’
ಅವ ಪುಸ್ತೇಕ ತಂದ ‘ಅವನು ಪುಸ್ತಕ ತಂದನು’
ಅಕಿ ಮಡಿ ಉಟಗೊಂಡ್ಲು ‘ಆಕೆ ರೇಶ್ಮೆ ಸೀರೆ ಉಟ್ಟುಕೊಂಡಳು’
೨. ಅವನ್ನ ಕರಿ ‘ಅವನನ್ನು ಕರೆ’
ಅವನ ಕರಿ
ಹುಡುಗನ ಕಳಸ ‘ಹುಡುಗನನ್ನು ಕಳುಹಿಸು’
ಹುಡುಗನ್ನ ಕಳಸ
೩. ಹ್ವಲಾ ನೋಡಿ ಬಾ ‘ಹೊಲವನ್ನು ನೋಡಿ ಬಾ’
ನೀ ನನಗ ರ್ವಕ್ಕಾ ಕೊಡ ‘ನೀನು ನನಗೆ ಹಣ ಕೊಡು’
ಅಕಿ ಬುಟ್ಟೀ ತುಂಬ್ಲಿ ‘ಆಕೆ ಬುಟ್ಟಿಯನ್ನು ತುಂಬಲಿ’
ಮುದುಕ ಬಡಿಗೀ ಇಟ್ಟ ‘ಮುದುಕನು ಬಡಿಗೆ ಇಟ್ಟನು’
ಕಡೂ ತಾ ‘ಕ (ಖ) ಡುವನ್ನು ತಾ’
ಕೂಳೇ ಕೀಳು ‘ಕೂಳೆಯನ್ನು ಕೀಳು’
ತೋಡೇ ಹಾಕು ‘ತೋಡೆಯನ್ನು ಹಾಕು’
ತೃ.: ಕಯ್ಲೆ ‘ಕಯ್ಯಿಂದ’
ಸಲಿಕೀಲೆ ‘ಸಲಿಕೆಯಿಂದ’
ಸ್ವಕ್ಕಿಲೆ, ಸೊಕ್ಕಿಲೆ ‘ಸೊಕ್ಕಿನಿಂದ’
ಕಯ್ಯಿಂದ
ಸಲಿಕಿಂದ
ಮನಿಂದ ‘ಮನೆಯಿಂದ’
ಚ.: ಹ್ವಲಕ ‘ಹೊಲಕ್ಕೆ’
ಹ್ವಲಕ್ಕ
ನಡಕ ‘ನಡುವಿಗೆ’
ನಡಕ್ಕ  
ಹ್ವಳಿಗ್ಯ /holigae/) ‘ಹೊಳೆಗೆ’
ಮಳಿಗ್ಯ ‘ಮಳೆಗೆ’
ಅವಗ ‘ಅವನಿಗೆ’
ಇವಗ ‘ಇವನಿಗೆ’
ಪಂ. : ಹ್ವಲದಿಂದ ‘ಹೊಲದಿಂದ’
ನಡದಿಂದ ‘ನಡುವಿನಿಂದ’
ಷ. : ಅದರ ಹಿಂದ ‘ಅದರ ಹಿಂದೆ’
ಹುಡುಗನ ಕಡ್ಯಾವ್ರ ‘ಹುಡುಗನ ಕಡೆಯವರು’
ಯಾ ಮಾತ ‘ಯಾವ ಮಾತು’
ಹಿರೀ ಹ್ವಳಿ ‘ಹಿರಿಯ ಹೊಳೆ’- ಕೃಷ್ಣಾನದಿ
ಹೂಡೂ ಯತ್ತ ‘ಹೂಡುವ ಎತ್ತು’
ಆಡೂ ಮಾತ ‘ಆಡುವ ಮಾತು’
ಸ. : ಹ್ವಲದಾಗ ‘ಹೊಲದಲ್ಲಿ’
ಮನಿವಳಗ ‘ಮನೆಯಲ್ಲಿ’
ಮನ್ಯಾಗ
ಹ್ವಲದೋಕ (ಗ) ‘ಹೊಲದೊಳಗೆ, ಹೊಲದಲ್ಲಿ’
ಮನಿಯೋಕ (ಗ) ‘ಮನೆಯೊಳಗೆ, ಮನೆಯಲ್ಲಿ’

ಗಡಿ ಕನ್ನಡದಲ್ಲಿ ದ್ವಿತೀಯೆಗೆ ಬದಲು ಚತುರ್ಥಿ ಪ್ರಯೋಗ ಸಾಮಾನ್ಯ.

ಉದಾ:

ಅವಗ ಕರಿ ‘ಅವನಿಗೆ=ಅವನನ್ನು ಕರೆ’
ಕೂಸಿಗ್ಯ ಹ್ವಡದ ‘ಕೂಸಿಗೆ=ಕೂಸನ್ನು ಹೊಡೆದ’

ಕನ್ನಡದ ಇತರ ಪ್ರಭೇದಗಳಲ್ಲಿರುವಂತೆ ಈ ಜಿಲ್ಲೆಯಲ್ಲಿಯೂ -ಊ ಎಂಬುದು ಮುಖ್ಯವಾದ ಸಮುಚ್ಚಾಯಕವಾಗಿದೆ. ಇದರ ಬದಲು ಗಡಿಕನ್ನಡದಲ್ಲಿ ‘ಭೀ’ ಎಂಬ ಹಿಂದುಸ್ತಾನಿಯ ಸಮುಚ್ಚಯ ಪ್ರತ್ಯಯವು ಪ್ರಯೋಗದಲ್ಲಿದೆ :

ಉದಾ :

ನಾ ಭೀ ಬರತೇನ ‘ನಾನೂ ಬರುತ್ತೇನೆ’
ಅವ ಭೀ ಬರತಾ ‘ಅವನೂ ಬರುತ್ತಾನೆ’

ಅಲ್ಲದೆ ಅಯಿನ್ತ /ayinta/ ಅಥವಾ ಆಯಿನ್ದ /ayinda/ ಎಂಬುದು ಸಮುಚ್ಚಾಯಕದಂತೆ ಕಾರ್ಯ ಮಾಡುತ್ತದೆ.

ಉದಾ :

‘ನೀ ಬಾ ಅಯಂತ’ ‘ನೀನು ಬಾ ಮತ್ತೆ’

ಕಾಲಗಳನ್ನು ಕುರಿತ ಕೆಲವು ವಿಶೇಷ ಸಂಗತಿಗಳು :

ವರ್ತಮಾನಕಾಲ : ಪ್ರ.ಪು. ಏಕವಚನ, ಪುಲ್ಲಿಂಗ :
ಬಡಿತಾ (ಗ), ಬಡುತಾನ (ರಾ), ಬಡಿತಾನ (ಬೈ.ಗೋ) ‘ಬಡೆಯುತ್ತಾನೆ’
ಕಡಿತಾ (ಗ), ಕಡುತಾನ (ರಾ), ಕಡಿತಾನ (ಬೈ.ಗೋ) ‘ಕಡಿಯುತ್ತಾನೆ’

ಭೂತಕಾಲ : ಪ್ರ.ಪು. ಏಕವಚನ ಪುಲ್ಲಿಂಗ :
ಹೇಳಿದಾ (ಗ)       ಹೇಳಿದಾನ           (ರಾ.ಬೈ.ಗೋ)     ‘ಹೇಳಿದ್ದಾನೆ’
ಮಾಡಿದಾ ”         ಮಾಡಿದಾನ         ”           ‘ಮಾಡಿದ್ದಾನೆ’
ಕರದ್ದಾ  ”           ಕರದ್ದಾನ           ”           ‘ಕರೆದಿದ್ದಾನೆ’
ಬ(ಭ) ಯಿಂದಾ    ”           ಬಂದಾನ ”           ‘ಬಂದಿದ್ದಾನೆ’

ಪ್ರ.ಪು. ಏಕವಚನ ಸ್ತ್ರೀಲಿಂಗ :
ಹೇಳಿದಾಳ, ಹೇಳಿಯಾಳ (ಗ) ಹೇಳಿದಾಳ (ರಾ.ಬೈ.ಗೋ) ‘ಹೇಳಿದ್ದಾಳೆ’
ಮಾಡಿದಾಳ, ಮಾಡಿಯಾಳ (ಗ) ಮಾಡಿದಾಳ    ”           ‘ಮಾಡಿದ್ದಾಳೆ’

ಪ್ರ ಪು.ಏಕವಚನ ನಪುಂಸಕಲಿಂಗ:
ಹೋತು (ಗ)       ಹೋತಿ   (ಬೈ.ರಾ.ಗೋ)     ‘ಹೋಯಿತು’
ತಿತ್ತ, ಚಿತ್ತ           ”           ತಿಂತು, ತಿಂತ        ”           ‘ತಿಂದಿತು’
ತಿತ್ತು, ಚಿತ್ತು        ”                                   ”
ತತ್ತ, ತತ್ತು                      ತಂತು, ತಂತು                   ‘ತಂದಿತು’
ಖು(ಕು)ತ್ತ್ಯ
ಖು (ಕು) ತ್ತ್ಯು      ”           ಕುಂತ್ಯ, ಕುಂತ್ಯು   ”           ‘ಕುಳಿತಿತು’

ಉ.ಪು. ಏಕವಚನ:
ಹೇಳ್ನ್ಯು (ಗ)       ಹೇಳಿನಿ   (ಬೈ.ಗೋ.ರಾ.)    ‘ಹೇಳಿದೆನು’
ಬಂದ್ನ್ಯು            (ಗ)       ಬನ್ನಿ     (ಬೈ.ಗೋ.ರಾ)     ‘ಬಂದೆನು’
ತಂದ್ನ್ಯು ”           ತನ್ನಿ      ”           ‘ತಂದೆನು’
ಕ್ವಂದ್ನ್ಯು           ”           ಕ್ವಂದ್ನಿ,ಕ್ವನ್ನಿ     ”           ‘ಕೊಂದೆನು’

ಈ ಪ್ರಭೇದಗಳಲ್ಲಿ ಭವಿಷತ್ಕಾಲ ಸೂಚಿಸಲು ಪ್ರತ್ಯೇಕವಾದ ರೂಪವಿಲ್ಲ. ವರ್ತಮಾನಕಾಲದ ಕ್ರಿಯಾರೂಪವೇ ಭವಿಷತ್ಕಾಲವನ್ನೂ ನಿರಂತರಕಾಲವನ್ನೂ ಸೂಚಿಸುತ್ತದೆ.

ಈ ಪ್ರಭೇದಗಳಲ್ಲಿ ‘ಅದೇ'(= ‘ಇದೆ’) ಎಂಬ ಕ್ರಿಯಾರೂಪವು ಕೆಳಗಿನಂತೆ ಕಂಡುಬರುತ್ತದೆ.

ಯೇತಿ (ಗ) ಅ : ತಿ (ǝ:ti) (ಬೈ.ರಾ.ಗೋ) ಅದ (ಬ್ರಾ) ಅದೆ = ಇದೆ
ಗಡಿಕನ್ನಡ ನಿಷೇಧ ರೂಪಗಳು ಕೆಳಗಿನಂತೆ ಇವೆ.
ಮಾಡಾಣಿಲ್ಲ      =          ‘ಮಾಡಿಲ್ಲ’         ಅಥವಾ  ‘ಮಾಡಲಿಲ್ಲ’
ಹೇಳಾಣಿಲ್ಲ        =          ‘ಹೇಳಿಲ್ಲ’           ”           ‘ಹೇಳಲಿಲ್ಲ’
ಬರಾಣಿಲ್ಲ         =          ‘ಬರಲಿಲ್ಲ’          ”           ‘ಬಂದಿಲ್ಲ’

ಕೆಲವೊಮ್ಮೆ ಇವೇ ರೂಪಗಳು ವರ್ತಮಾನ, ಭವಿಷತ್ಕಾಲಗಳಲ್ಲೂ ಪ್ರಯೋಗ ಗೊಳ್ಳುತ್ತವೆ.

ವಿಧಿ : ಮ.ಪು. :
ಗಡಿ: ಹೇಳ, ಹೇಳೋ, ಹೇಳಲಕೋ, ‘ಹೇಳು’, ‘ಹೇಳೋ’
ಗೋಕಾಕ: ಹೇಳಾಕೊ, (ಹೇಳಾಕ್ರಿ, ಹೇಳಾಕಪಾ)            ”
ಉಳಿದೆಡೆಗಳಲ್ಲಿ: ಹೇಳ, ಹೇಳು
ಗಡಿ: ಬಾ, ಬಾರೋ, ಬಾನೋ, ಬಾರಲಕೋ, ‘ಬಾ’, ‘ಬಾರೋ’
ಗೋಕಾಕ: ಬರಾಕೊ, (ಬರಾಕ್ರಿ)
ಇತರೆಡೆಗಳಲ್ಲಿ: ಬಾ, ಬಾರೊ, (ಬರ್ರಿ‍)
ಗಡಿ: ತಾ,ತಾರೋ, ತಾನೊ, ತಾಲಕೊ ‘ತಾ’, ‘ತಾರೊ’
ಗೋಕಾಕ: ತರಾಕೊ (ತರಾಕ್ರಿ)          ”
ಉಳಿದೆಡೆಗಳಲ್ಲಿ: ತಾ, ತಾರೊ, (ತರ್ರಿ‍)          ”

ಸಂಬೋಧನೆಯಲ್ಲಿ ತಮ್ಮ ಸಮಾನರು ಅಥವಾ ತಮಗಿಂತ ಕೀಳಾದವರನ್ನು ಕರೆಯುವಾಗ ‘ಯಾ’ ಪ್ರತ್ಯಯ ಸೇರಿಸುವುದು ಇಲ್ಲಿ ಬಹು ಸಾಮಾನ್ಯ.

ಉದಾ :

ಕಲ್ಲಪ್ಪ >ಕಲ್ಲ್ಯಾ, ನಿಂಗಪ್ಪ > ನಿಂಗ್ಯಾ, ಬಸಪ್ಪ > ಬಸ್ಸ್ಯಾ

ಈ ರೀತಿ ‘ಯಾ’ ಪ್ರತ್ಯಯ ಸೇರಿದ ಕೆಲವು ರೂಪಗಳು ಸಂಬೋಧನೆಯಲ್ಲಿಯೂ ಕಂಡುಬರುತ್ತವೆ.

ಉದಾ :

ಮಂಗ್ಯಾ ‘ಮಂಗ’ ಸೂರ್ಯಾ ‘ಸೂರ್ಯ’
ಅಳ್ಯಾ ‘ಅಳಿಯ’ ಶಾಣ್ಯಾ ‘ಜಾಣ’
ಹಿರ್ಯಾ ‘ಹಿರಿಯ’ ಕಿರ್ಯಾ ‘ಕಿರಿಯ’

ಸ್ತ್ರೀಲಿಂಗದಲ್ಲಿ -ಇ ಸೇರಿಸಿ ಸಂಬೋಧಿಸಲಾಗುತ್ತದೆ.

ಉದಾ :

ಕಲ್ಲವ್ವ > ಕಲ್ಲಿ, ನಿಂಗವ್ವ > ನಿಂಗಿ, ಬಸವ್ವ > ಬಸ್ಸಿ.

ತಾಯಿ ಅಥವಾ ಅವಳಿಗೆ ಸಮಾನಳಾದ ಸ್ತ್ರೀಯನ್ನು – ಬೆ ಎಂದು ಸಂಬೋಧಿಸಲಾಗುತ್ತದೆ. (ಇದು ಗಡಿ ಕನ್ನಡದಲ್ಲಿಲ್ಲ)

ಎಬೆ, ಬಾರಬೆ, ಉಣಸಬೆ (‘ಉಣ್ಣಿಸು’)

ಗಡಿ ಕನ್ನಡದಲ್ಲಿ ಚಿಕ್ಕ ಬಾಲಕರನ್ನು ಕರೆಯುವಾಗ – ಅಪು, – ಅಪ್ಪು – ಪು, ಅಪಯ್, ಅಪ್ಪಯ್ ಮುಂತಾದ ಪದಗಳನ್ನೂ ಸೇರಿಸಲಾಗುತ್ತದೆ.

ಉದಾ :

ಬಾರಪು, ಬಾರಪ್ಪ, ಅಪಯ್ ಇಲ್ಲಿ ಬಾ, ಅಪ್ಪಯ್ ಇಲ್ಲಿ ಬಾ.

ಬಾಲಕಿಯನ್ನು – ಅವು, ಅವ್ವು, ಅವಿ ಮುಂತಾದವುಗಳಿಂದ ಸಂಬೋಧಿಸಲಾಗುತ್ತದೆ.

ಬಾರವು, ಬಾ ಅವ್ವು, ಬಾ ಅವಿ, ಅವ್ವಿ ಇಲ್ಲಿ ಬಾ.

ಇತರೆಡೆಗಳಲ್ಲಿ-ಪು, ಅಪು, ತಮ್ಮಾ ಎಂದು ಬಾಲಕರಿಗೂ, -ವು, ಅವು, ತಂಗಿ ಎಂದು ಬಾಲಕಿಯರಿಗೂ ಬಳಸಲ್ಪಡುತ್ತವೆ.

ಅಕಾರದಿಂದಾರಂಭವಾಗುವ ಸಂಬಂಧವಾಚಕಗಳು ಸಂಬೋಧನೆಯಲ್ಲಿ ಯ (<ಏ) ಕಾರದಿಂದೊಡಗೂಡಿ ಪ್ರಯೋಗಿಸಲ್ಪಡುತ್ತವೆ.

ಉದಾ:

ಯಕ್ಕಾ, ಯಣ್ಣಾ, ಯಪ್ಪಾ, ಯೆವ್ವಾ, ಯೆಮ್ಮಾ, ಯೆತ್ತಿ.

ಸ್ವೀಕೃತ ಪದಗಳನ್ನು ಇಲ್ಲಿ – ಆಸ (ಗಡಿ), -ಅಸ ಎಂಬ ಪ್ರತ್ಯಯ ಸೇರಿಸಿ ಕ್ರಿಯಾಧಾತುಗಳನ್ನಾಗಿ ಪರಿವರ್ತಿಸಲಾಗುತ್ತದೆ.

ಉದಾ :

ಬದಲಾಸ (ಗ) ಬದಲಸ (ಬೈ ಗೋ.ರಾ.) ‘ಬದಲಿಸು’
ತಟಾಸ ತಟಸ ‘ತಾಟಿಸು’
ಜಬರಾಸ ಜಬರಸ ‘ಜಬರಿಸು’

ಗಡಿ ಕನ್ನಡದಲ್ಲಿ ಮರಾಠಿ ಪದಗಳನ್ನು ಸ್ವೀಕರಿಸಿ – ಆಸ ಪ್ರತ್ಯಯ ಸೇರಿಸುವುದು ತೀರ ಸಾಮಾನ್ಯ.

ಉದಾ :

ಉಡಾಸ ‘ಉಡಾಯಿಸು’ = ‘ಹಾರಿಸು’
ಬಿಗಡಾಸ ‘ಬಿಗಡಾಯಿಸು’ = ‘ಕೆಡು’
ವಳಖಾಸ ‘ಗುರುತಿಸು’
ಚಿಡಾಸ ‘ಚಿಡಾಯಿಸು’, ‘ಪೀಡಿಸು’
ಜಿತಾಸ ‘ಗೆಲ್ಲು’
ಹರಾಸ ‘ಸೋಲು’
ಅಟಕಾಸ ‘ಸಿಕ್ಕಿಕೊಳ್ಳು’
ಸುಚಾಸ ‘ಹೊಳೆ’, ‘ತಿಳಿ’

ಈ ಎಲ್ಲ ಪ್ರಭೇದಗಳಲ್ಲಿ ಮುಖ್ಯ ಕ್ರಿಯಾಧಾತುವಿಗೆ ಹತ್ತು ಎಂಬುದನ್ನು ಸಹಾಯಕ ಕ್ರಿಯಾಪದವನ್ನಾಗಿ ಸೇರಿಸುವುದುಂಟು.

ಉದಾ :

ಹೋಗಾಕ ಹತ್ತಿದ್ದ ‘ಹೋಗುತ್ತಿದ್ದನು’
ಹೋಗಾಕ ಹತ್ತಿದಾನ ‘ಹೋಗುತ್ತಿದ್ದಾನೆ’
ಹೇಳಾಕ ಹತ್ತಿದಾ (ಗ) ‘ಹೇಳುತ್ತಿದ್ದಾನೆ’
ಹೇಳಲಾಕ ಹತ್ತಿದ್ದ (ಗ, ಗೋ) ‘ಹೇಳುತ್ತಿದ್ದನು’

ಬರಹಕನ್ನಡದ – ಓಣ ಪ್ರತ್ಯಯವು ಇಲ್ಲಿ – ಊನ (ಣ), ಊನು (ಣು) ಎಂದು ತೋರುತ್ತದೆ.

ಹೋಗೂನು ‘ಹೋಗೋಣ’
ಹೋಗೂನ
ಬರೂನು ‘ಬರೋಣ’
ಬರೂನ

ಈ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಭೂತನ್ಯೂರ ರೂಪಗಳ ಮುಂದೆ – ಕರ,-ಕಸ, -ಕಾರ, -ಕಾಸ, -ಕ್ಯಾರ, -ಕ್ಯಾಸ, – ಕೇರಿ, – ಕೇಸಿ, – ಕರಿಂದ, – ಕಸಿಂದ, -ಕಾರಿಂದ, -ಕಾಸಿಂದ, -ಕೇರಿಂದ, -ಕೇಸಿಂದ ಎಂಬ ರೂಪಾವಳಿಯನ್ನು ಪ್ರಯೋಗಿಸುವುದು ಸಾಮಾನ್ಯವಾದ ರೂಢಿ. ಇವುಗಳಲ್ಲಿ – ಇಂದ ಸೇರಿದ ರೂಪಗಳು ಗಡಿಕನ್ನಡದಲ್ಲಿಯೂಉಳಿದವು ಉಳಿದೆಡೆಗಳಲ್ಲಿಯೂ ವಿಶೇಷ ರೂಢಿಯಲ್ಲಿವೆ.

ಉದಾ :

ನಾ ಹೋಗ್ ಕರ ಬತೇನ ‘ನಾನು ಹೋಗಿ ಬರುತ್ತೇನೆ’
ನಾ ಹೋಗ್ ಕಸ ಬರತೇನ
ನಾ ಹೋಗ್ ಕಾರ ಬರತೇನ
ನಾ ಹೋಗ್ ಕಾಸ ಬರತೇನ
ನಾ ಹೋಗ್ ಕ್ಯಾರ ಬರತೇನ
ನಾ ಹೋಗ್ ಕ್ಯಾಸ ಬರತೇನ
ನಾ ಹೋಗ್ಕೇಸಿ ಬರತೇನ
ನಾ ಹೋಗ್ ಕರಿಂದ ಬರತೇನ
ನಾ ಹೋಗ್ ಕಸಿಂದ ಬರತೇನ
ನಾ ಹೋಗ್ ಕೇರಿಂದ ಬರತೇನ
ನಾ ಹೋಗ್ ಕೇಸಿಂದ ಬರತೇನ

ಅತ್ತ, ಇತ್ತ, ಎತ್ತ ಎಂಬ ದಿ‌ಗ್ವಾಚಕ್ರಗಳನ್ನು ಗಡಿಕನ್ನಡದಲ್ಲಿ ಅತ್ತಲಾಗ, ಇತ್ತಲಾಗ, ಎತ್ತಲಾಗ ಎಂದೂ ರಾಮದುರ್ಗ ಪ್ರದೇಶದಲ್ಲಿ ಅತ್ತಾಗ, ಇತ್ತಾಗ, ಎತ್ತಾಗ ಎಂದು ಉಳಿದೆಡೆಯಲ್ಲಿ ಅತ್ತ,ಇತ್ತ, ಎತ್ತ ಎಂದೂ ಪ್ರಯೋಗಿಸಲಾಗುತ್ತದೆ.

ಇಲ್ಲಿಯ ಕನ್ನಡ, ಮರಾಠಿಯಿಂದ ಪ್ರಭಾವಿತವಾಗಿದೆಯೆಂದು ಹೇಳಿತಷ್ಟೇ. ಕೆಳಗಿನ ಕೆಲವು ಮರಾಠಿ ಶಬ್ದಗಳು ಇಲ್ಲಿ ವಿಶೇಷ ರೂಢಿಯಲ್ಲಿವೆ :

ಅಗದೀ ‘ಅತೀ’
ಅಪೂಟ ‘ತೀರಾ’
ದೀಡ ‘ಒಂದೂವರೆ’
ರಗಡ ‘ಬಹಳ’
ಶಿಲ್ಲಕ ‘ಶಿಲ್ಕು’
ಲಾವಣಿ ‘ಹೊಲವನ್ನು ಬೇರೆಯವರಿಗೆ ಉಳಲು ಕೊಡುವುದು’
ಟೇ (ಠೇ)ವಣಿ ‘Deposit’
ಕೊ (ಖೊ) ಟ್ಟಿ ‘ಸುಳ್ಳು’, ‘ಖೋಟಾ’
ಕ (ಖ) ರೆ ‘ಸತ್ಯ’
ಮೋಜಣಿ ‘ಅಳತೆ’
ಪೀಕ ‘ಬೇಳೆ’ (ನಾ)
ಶಾಣ್ಯಾ ‘ಜಾಣ’
ಶೇಂಗಾ ‘ಶೇಂಗಾ’, ‘ನೆಲಗಡಲೆ’

ಗಡಿ ಕನ್ನಡದಲ್ಲಿ ಈ ಸ್ವೀಕರಣ ಅತಿಯಾಗಿದೆ. ಅಲ್ಲಿ ಸಂಖ್ಯಾವಾಚಕಗಳೆಲ್ಲ ಮರಾಠಿಯಿಂದ ಬಂದಿವೆ. ದಿನನಿತ್ಯ ಬಳಕೆಯ ‘ವಯಿನಿ’ (ಅತ್ತಿಗೆ), ಮಾವಸಿ (ಚಿಕ್ಕಮ್ಮ), ಬಾತ್ಮಿ(ಸುದ್ದಿ’), ಗಪ್‌ಚಿಪ್‌ (ಗುಪ್ತವಾಗಿ), ಹಳುಹಳು (ಸಾವಕಾಶ), ಥಾಮಣಿ (ತಡೆ, ಸೈರಣೆ) ಮುಂತಾದ ಶಬ್ದಗಳೂ ಮರಾಠಿಯ ಸ್ವೀಕರಣಗಳೆ.

ಮಾದರಿಗಾಗಿ ಈ ಪ್ರದೇಶದಲ್ಲಿ ಬಳಕೆಯಲ್ಲಿರುವ ಕೆಲವು ವಿಶಿಷ್ಟ ಪದಗಳ ಸಂಗ್ರಹವನ್ನು ಕೆಳಗೆ ಕೊಟ್ಟಿದೆ.

ಗಡಿ ಬೈ.ಗೋ.ರಾ.  
ಪೋರ ಹುಡಗ ‘ಹುಡುಗ’
ಪೋರಿ ಹುಡಗಿ ‘ಹುಡುಗೆ’
ವನಗಿ ಪಲ್ಲೆ ‘ಪಲ್ಯ’
ಖಯ್ ಇಸಾ ‘ವಿಷ,ಕಹಿ’
ಮಂದಿ ಮಂದಿ ‘ಜನ’
ಚಟಗಿ ಕುಡಿಕಿ, ಮಿಳ್ಳಿ ‘ಕುಡಿಕೆ’
ಭಾಂಗ ಬೋತೊಲೆ, ಬೋತಾಲಿ, ಬೋತಲಿ ‘ಬೈತಲೆ’
ಕ (ಖ) ಳವ ಕಳಸ ‘ಕಳುಹಿಸು, ಕಳಸು’
ತ (ಥ) ಮಗಿ ತ್ಯಂಬಿಗಿ, ಚರಿಗಿ ‘ತಂಬಿಗೆ’
ಹೊಯ್ಕ ಅಚ್ಚೀರೆ ‘ಆಶ್ಚರ್ಯ’
ಉಸಲ ಉಸಲ ‘ಉಸಿರು’
ಅಮಟಿ ಬ್ಯಾಳಿ ‘ಬೇಳೆ, ಸಾರು’
ಝಣಕ ಹಿಟ್ಟಿನ ಪಲ್ಲೆ
ಗನಸ ಗಂಡ್ಸ ‘ಗಂಡಸು’
ಹೆಗಸಿ ಹೆಂಗ್ಸ ‘ಹೆಂಗಸು’
ಹತೀಲಿ, ಹತ್ಯಾಕ ಹಂತೇಕ ‘ಹತ್ತಿರ’
ಹುಂಚಿ ಹುಂಚಿ ‘ಹುಣುಸೆ’
ಹುನಕ ಹುಡಕ ‘ಹುಡುಕು’
ಹಡ್ಡ ಹಡ್ಡ ‘ಹರಡು’ (ಧಾ)
ಟ (ಠ)ಂಪಿ ಟ್ವಂಗಿ, ತ್ವಂಗಿ, ಕ್ವಂಗಿ ‘ಟೊಂಗೆ’
ತ್ವಾಟಿ ‘ತೋಟೆ, ತೊಗಟೆ’
ತಟ್ಟಾಗು ‘ಬದಿಗೆ ಸರಿ, ದೂರ ಸರಿ’
ಮೆಟ್ಟ,ಕಾಲಮರ್ಗಿ ಕಾಲಮೇರಿ,ಕಾಲಮರ್ಗಿ ಕೆರವ ‘ಕೆರವು’
ಚಪ್ಪಲಿ ತಟ್ಲಿ ‘ಹೆಣ್ಣುಮಕ್ಕಳ ಚಪ್ಪಲು’
ಗುಮ್ಮ ಆಳ ‘ಆಳ’
ಊದ ಓದ ‘ಓದು’
ಉಡಗೋಲ ಕಸಬರಿಗಿ, ಹಿಡಿ ‘ಪೊರಕೆ’
ಗುಂಡಿ ಬಿಡ್ಡಿ, ಬುಡ್ಡಿ (ರಾ) ‘ಗುಂಡಿ’
ಬಾಗ್ಲ ಬಾಗ್ಲ, ಬಾಕ್ಲ (ರಾ) ‘ಬಾಗಿಲು’
ಲಕ್ಕ ‘ಉತ್ತಮ’
ಗಡಿ ಬೈ.ಗೋ.ರಾ  
ಗೌಂಡಿ ಉಪ್ಪಾರ ‘ಉಪ್ಪಾರ’
ತತ್ರಾಣ್ಗಿ ‘ಹೊಲಕ್ಕೆ ನೀರು ತುಂಬಿಕೊಂಡು ಒಯ್ಯುವಮಣ್ಣಿನ ಪಾತ್ರೆ’
ಚಿಪ್ಪಾಡಿ ಚಿಪ್ಪಾಡಿ ‘ದನಗಳು ತಿಂದು ಬಿಟ್ಟ ಮೇವು’
ಕಿ (ಖಿ)ಚಡಿ ಕಿಚಡಿ ‘ಅನ್ನ’
ತಾ(ಥಾ) ಟ ತಾಟ ‘ಮನೆಯ ಮೇಲ್ಭಾಗ’
ಸೀಪ ಸೀಪ ‘ಚೀಪು’
ಬುಡಬೆದರು ಮಯ್ನೆರಿ ‘ಮೈನೆರೆ’
ಗಟ್ಟಬೀಳು ಬೆಟ್ಟಿಯಾಗು ‘ಭೆಟ್ಟಿಯಾಗು’
ಪೈಸ ಬಯ್ಲು ‘ಬಯಲು’
ಗಂಡಾ ಅಂಡಿ ‘ನಾಲ್ಕರ ಗುಂಪು’
ಸೇಂದ ಸೇದ ‘ಸೇದು’

ಈವರೆಗೆ ಈ ಜಿಲ್ಲೆಯ ಧ್ವನಿ, ವ್ಯಾಕರಣ ಮತ್ತು ಕೆಲವು ವಿಶಿಷ್ಟ ಪ್ರಯೋಗಗಳನ್ನು ಕುರಿತು ವಿವೇಚಿಸಲಾಯಿತು. ಇಲ್ಲಿ ಪ್ರಮುಖವಾದ ಅಂಶಗಳನ್ನು ಎತ್ತಿ ಹೇಳಿದೆ. ನೆರೆಯ ಭಾಷೆಯಾದ ಮರಾಠಿಯಿಂದ ಇಲ್ಲಿಯ ಕನ್ನಡವು ಸ್ವೀಕರಿಸುವುದನ್ನು ಅಲ್ಲಲ್ಲಿ ಎತ್ತಿತೋರಿಸಿದೆ. ಇದಲ್ಲದೆ ಹಿಂದುಸ್ತಾನಿಯಿಂದಲೂ ಅಂಥ ಸ್ವೀಕರಣ ನಡೆದಿದೆ. ಹಕ್ಕ, ಹಾಸಿಲ, ತಾಲೂಕ, ಜಿಲ್ಲಾ, ಕಚೇರಿ, ಪೌಜದಾರ, ಇನಾಮದಾರ, ಲಿಲಾವ, ಶ್ಯಾರ (ಶಹರ), ನಸೀಬ, ದವುಲ – ದವುಳ (<ದೌಲತ್), ದಾದ, ಪಿರಾದಿ (ಫರ್ಯಾದ), ಹರಕಾತ ಮುಂತಾದವು ಅಂಥ ಸ್ವೀಕೃತ ಶಬ್ದಗಳಲ್ಲಿ ಕೆಲವು. ಕನ್ನಡವು ಮರಾಠಿಯಿಂದ ಸ್ವೀಕರಿಸಿದಂತೆ ಅದಕ್ಕೆ ಎರವಲನ್ನು ಕೊಟ್ಟಿದೆ. ಅದೇ ರೀತಿ ಹಿಂದುಸ್ತಾನಿಗೆ ಎರವಲು ಕೊಟ್ಟಿದೆಯೆ ಎಂಬುದು ವಿಚಾರಾರ್ಹವಾದ ಸಂಗತಿ. ಈಗೀಗ ಟೇ (ತೇ)ಸನ, ರೇಲ್ವೆ, ಬಸ್ಸ, ಕಾರ, ರೋಡ, ಟ್ರ(ಟ)ಕ್ಕ, ಲಾಯಿಟ, ಮಿಸೇನ, ರೇಡವೆ ಮುಂತಾದ ಇಂಗ್ಲಿಷ ಪದಗಳು ತೀರ ಅಶಿಕ್ಷಿತರಲ್ಲಿಯೂ ಬಳಕೆಯಾಗಹತ್ತಿವೆ. ಸುರಕ್ಷಿತರ ಸ್ವೀಕರಣಕ್ಕಂತೂ ಮಿತಿಯೆ ಇಲ್ಲ. ಹೀಗೆಯೆ ಇನ್ನು ಒಂದೆರಡು ದಶಕಗಳ ಕಾಲ ನಡೆದುದಾದರೆ ಕನ್ನಡ ಭಾಷೆಯ ಮೂಲ ಧ್ವನಿ ಮತ್ತು ಆಕೃತಿಮಾ ವ್ಯವಸ್ಥೆ ಪೂರ್ಣ ವ್ಯತ್ಯಸ್ತಗೊಳ್ಳುವುದರಲ್ಲಿ ಸಂಶಯವಿಲ್ಲ.