ಒಂದು ರೀತಿಯ ಬೆಳಗಾವಿ ಜಿಲ್ಲೆಯ ವೀರಶೈವಮಠಗಳಿಗೆ ಪರಂಪರೆಯ ಮೂಲ ಅರ್ಜುನವಾಡ (ಹುಕ್ಕೇರಿ. ತಾ) ಶಾಸನದಲ್ಲಿಯೇ ಕಂಡುಬರುತ್ತದೆ. ಈ ಶಾಸನದಲ್ಲಿ ಸ್ಪಷ್ಟವಾದ ಕಾಲ ಉಲ್ಲೇಖವಿದ್ದು ದೇವಗಿರಿಯಾದವ ದೊರೆ ಕನ್ನರ ದೇವನ ಆಳ್ವಿಕೆಯ ಕ್ರಿ.ಶ. ೧೨೬೦ನೆಯ ವರ್ಷವನ್ನು ನಮೂದಿಸಿದೆ. ಇದರಲ್ಲಿ ದೇವಗಿರಿ ಯಾವದವರ ಅಧಿಕಾರಿಗಳಾದ ಚಾವುಂಡ ಮತ್ತು ನಾಗರಾಜರು ಸೇರಿ ಬಸವಣ್ಣನವರ ವಂಶಸ್ಥನಾದ ಹಾಲಬಸವಿದೇವ ಮುನೀಶನಿಗೆ ಅರ್ಜುನವಾಡ ಸಮೀಪದ ಕವಿಳಾಸಪುರದಲ್ಲಿ ಅವನಿಗೆ ಮೊದಲಿದ್ದ ದತ್ತಿಗಳನ್ನು ನವೀಕರಸಿಕೊಟ್ಟಿದ್ದಾರೆ. ಕವಿಳಾಸಪುರ ಈಗ ಹಾಳಾಗಿದ್ದು ಪ್ರಸ್ತುತ ಅರ್ಜುನವಾಡಿ ಗ್ರಾಮದ ಸೀಮೆಯಲ್ಲಿದೆ. ಅಲ್ಲಿರುವ ಮಲ್ಲಿಕಾರ್ಜುನ ಸಂಗಮೇಶ್ವರ ಮತ್ತು ನಾಗೇಶ್ವರ ಈ ಮೂರು ದೇವಸ್ಥಾನಗಳಿಗಾಗಿ ಅವುಗಳ ಅಧಿಕಾರಿ ಹಾಲಬಸವಿದೇವನಿಗೆ ಕೊತ್ತಸಿ, ಕುರುವನಿಗೆ ಮತ್ತು ಅಂಕವಲ ಎಂಬ ಮೂರು ಊರುಗಳನ್ನು ಮತ್ತು ಕೆಲವು ಕರಪರಿಹಾರಗಳನ್ನು ಲಕ್ಷ್ಮೇಶ್ವರದ ಸೋಮನಾಥದೇವರ ಸನ್ನಿಧಿಯಲ್ಲಿದ್ದುಕೊಂಡು ಮೇಲೆ ಹೇಳಿದ ಅಧಿಕಾರಿಗಳಿಬ್ಬರುದತ್ತಿ ಬಿಟ್ಟುಕೊಟ್ಟಿದ್ದಾರೆ. ಎಂದರೆ ಹಾಲ ಬಸವಿದೇವ ಮುನಿ ಮತ್ತು ಆತನ ಮನೆತನದವರು ಸ್ವಲ್ಪ ಮುಂಚಿನಿಂದಲೇ ಕವಿಳಾಸಪುರದಲ್ಲಿ ನೆಲೆಸಿದ್ದರೆಂದು ತಿಳಿದುಬರುತ್ತದೆ.

ಈ ಶಾಸನದ ಪ್ರತಿಗೃಹಿ ಹಾಲಬಸವಿದೇವಮುನಿ ಬಸವಣ್ಣನವರ ಅಣ್ಣ ದೇವ ರಾಜ ಮುನಿಯ ನೇರವಂಶಸ್ಥನಿದ್ದು ಅವರಿಂದ ನಾಲ್ಕನೆಯ ತಲೆಮಾರಿನವನೆಂಬುದು ಖಚಿತವಾಗಿದೆ. ಎಂದರೆ ಬಸವಣ್ಣನವರ ಈ ಮನೆತನ ಪ್ರಸ್ತುತ ಕವಿಳಾಸಪುರದಲ್ಲಿ ಕ್ರಿ.ಶ. ೧೨೬೦ ಕ್ಕಿಂತ ಮುಂಚೆಯೇ ನೆಲೆಸಿದ್ದು ಬಸವಣ್ಣನವರ ತತ್ವ ಪ್ರಚಾರದಲ್ಲಿ ನಿರತವಾಗಿತ್ತೆಂದು ಹೆಳಬೇಕಾಗುತ್ತದೆ. ”ಸಮಸ್ತಭುವನಾಶ್ರಯಂ ಮಹಾಮಹೇಶ್ವರಂ ಕವಿಳಾಸಪುರವರಾಧೀಶ್ವರಂ ಸುವರ್ಣ ವೃಷಭಧ್ವಜಂ ತೇಸಷ್ಠಿ (೬೩) ಪುರಾತಪಾದಾ ರ್ಚಕರುಂ ಮಹಾಲಿಂಗ ಜಂಗಮ ಪ್ರಸಾದನಿಯತರುಂ……….ಶ್ರೀ ಬಸವರಾಜನನ್ವಯರುಮಪ್ಪ ತಪಚಕ್ರವರ್ತಿ ವೀರಬ್ರತಿ ಹಾಲಬಸವಿ ದೇವ”ಎಂದು ಶಾಸನ ವರ್ಣಿಸುತ್ತದೆ. ಶಾಸನದ ಕೊನೆಯಲ್ಲಿ ಹೇಳುವ ಎರಡು ವಾಕ್ಯಗಳೂ ಇಲ್ಲಿ ಗಮನಾರ್ಹವಾಗಿವೆ. ಹದಿನೆಂಟು ಸಮಯವೂ ಅರವತ ಮೂವರು ಬಣಜುಭಕುತಿ; ಭೇದವಿಲ್ಲ. ಕವಿಳಾಸಪುರವೇ ಶಾಸನದ ಮನೆ; ಬಸವರಾಜನೇ ಶಾಸನಿಗನೆಂದು ಉಭಯ ನಾನಾದೇಶಿ ಮುಮ್ಮರಿದಂಡಂಗಳು ಕೊಟ್ಟ ಶಾಸನ” ಎಂದಿದೆ. ಆದ್ದರಿಂದ ಕವಿಳಾಸಪುರದಲ್ಲಿದ್ದುಕೊಂಡು ಕಲ್ಯಾಣದಲ್ಲಿದ್ದ ಬಸವಣ್ಣನವರು ಮಾಡುತ್ತಿದ್ದ ಧರ್ಮಚಕ್ರ ಪರಿವರ್ತನೆಯ ಮಹಾಕಾರ್ಯವನ್ನು ಈ ಮನೆತನ ಮುಂದು ವರೆಸಿತ್ತೆಂದೆಂಬಲ್ಲಿ ಅನುಮಾನವೇ ಇಲ್ಲ. ಈ ಶಾಸನದ ಕಾಲಾವಧಿಯ ತರುವಾಯ ಸು. ೧೮೦ ವರ್ಷಗಳ ಅಂತರದಲ್ಲಿದ್ದ ಹಂಪೆಯ ಲಕ್ಕಣ್ಣ ದಂಡೇಶನು ತನ್ನ ಶಿವತತ್ವ ಚಿಂತಾಮಣಿಯಲ್ಲಿ ಕಲ್ಯಾಣದಲ್ಲಿ ಬಸವರಾಜನ ಮಠವಿತ್ತೆಂದೂ ಅದರಲ್ಲಿ ವರಧಾನ್ಯದಯ್ಯ ಎಂಬ ಶರಣನಿದ್ದನೆಂದೂ ಸ್ಪಷ್ಟವಾಗಿ ಹೇಳಿದ್ದಾನೆ. ಶ್ರೀ ಚನ್ನಬಸವಣ್ಣನವರಂಥ ಶರಣರು ಕಲ್ಯಾಣ ತ್ಯಜಿಸಿ ಹೋಗಬೇಕಾಗಿ ಬಂದರೂ ಅವರ ವಂಶಸ್ಥರಾದ ಕೆಲವರು ಕ್ರಾಂತಿಯ ಝಂಝಾವಾತದಿಂದ ಪಾರಾಗಿ ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ ದೃಢವಾಗಿ ನಿಂತಿದ್ದರೆಂದು ಇದರಿಂದ ಸಾಬೀತಾಗುತ್ತದೆ.

ಕವಿಳಾಸಪುರದ ತರುವಾಯದ ನಮಗೆ ಗೋಚಿರಿಸುವ ಬೆಳಗಾವಿ ಜಿಲ್ಲೆಯ ಇನ್ನೊಂದು ಪ್ರಮುಖ ವೀರಶೈವ ಕೇಂದ್ರವೇಂದರೆ ಹೂಲಿ. ಸವದತ್ತಿ ತಾಲೂಕಿನ ಈ ಕೇಂದ್ರ ಮೊದಲು ಕಾಳಾಮುಖ ಸಂಪ್ರದಾಯದ ಕೇಂದ್ರವಾಗಿತ್ತೆಂದು ಅಲ್ಲಿ ದೊರೆತಿರುವ ಶಾಸನಗಳಿಂದ ಡಾ. ಸಿ.ಚೆ. ನಂದಿಮಠ ಮುಂತಾದ ವಿದ್ವಾಂಸರು ನಿರ್ಣಯಿಸಿದ್ದಾರೆ. ಇಲ್ಲಿನದು ತರುವಾಯದಲ್ಲಿ ಪ್ರಸಿದ್ಧ ವೀರಶೈವ ಮಠವಾಯಿತು. ಲಕ್ಕಣ್ಣ ದಂಡೇಶನು ತನ್ನ ಶಿವತತ್ವ ಚಿಂತಾಮಣಿಯಲ್ಲಿ ಹೂಲಿಯಲ್ಲಿದ್ದ ಶರಣ ‘ಪೌರಾತ ಬೊಮ್ಮಣ್ಣ ಅಥವಾ ಚೊಮ್ಮಣ್ಣ’ ಎಂಬವನ ಹೆಸರು ಹೇಳಿದ್ದಾನೆ. ಈತ ಹೂಲಿಯ ಪಂಚವಣ್ಣಿಗೆಯ ಮಠಕ್ಕೆ ಸೇರಿರಬಹುದಾದ ಸಾಧ್ಯತೆಯನ್ನು ಅಲ್ಲ ಗಳೆಯುವಂತಿಲ್ಲ.

ಮೇಲೆ ಹೇಳಿದ ಶಿವತತ್ವ ಚಿಂತಾಮಣಿಯಲ್ಲಿ ಲಕ್ಕಣ್ಣದಂಡೇಶ (ಸಂ. ೩೮-ಪ ೧೩೫ ರಿಂದ ೧೪೧) ಬೆಳಗಾವಿ ಜಿಲ್ಲೆಯ ಹಲವು ಜನ ಶಿವಭಕ್ತರ-ಶರಣರ ಹೆಸರುಗಳನ್ನು, ಅವರ ಊರು ಮತ್ತು ಕಾಯಕಗಳ ಸಮೇತ ಹೇಳಿದ್ದಾನೆ. ‘ಪಡುವನಾಡಿನ ಕೊಟ್ಟಬಾವಿಯ ಮೆಂಡೆಹರಕಾಯಕದ ಚೌಡು ಎಂಬವನು ಅವರಲ್ಲಿ ಒಬ್ಬ. ಈ ಕೊಟ್ಟಬಾವಿ ಎಂಬ ಊರ ಹೆಸರು ಸ್ವಲ್ಪತಪ್ಪಾಗಿರುವಂತೆ ಕಾಣುತ್ತದೆ. ಇದು ಕೊಟ್ಟಬಾವಿ ಎಂದಿರದೆ ಕೊಟ್ಟಬಾಗಿ ಎಂದಿರಬೇಕು. ಈ ಹೆಸರಿನ ಒಂದು ಊರು ಬೈಲಹೊಂಗಲ ತಾಲೂಕಿನಲ್ಲಿ, ಒಂದು ಹುಕ್ಕೇರಿ ತಾಲೂಕಿನಲ್ಲಿ, ಮತ್ತೊಂದು ಧಾರವಾಡ ತಾಲೂಕಿನಲ್ಲಿವೆ. ಈ ಮೂರರ ಪೈಕಿ ಒಂದಕ್ಕೆ ಈ ಮೆಂಡೆಹರ ಕಾಯಕದ ಚೌಡು ಸಂಬಂಧಪಟ್ಟವನಾಗಿರಬೇಕು. ಅದೇ ಪದ್ಯದಲ್ಲಿ ಬಟ್ಟಕೆಱೆಯಲ್ಲಿ ಬಸವನೆಂಬವನಿದ್ದನೆಂದು ಲಕ್ಕಣ್ಣ ದಂಡೇಶ ತಿಳಿಸುತ್ತಾನೆ. ಇಲ್ಲಿನ ಬಟ್ಟಕೆರೆಯೆಂದರೆ ಬೆಟಗೇರಿ ಎಂಬ ಊರು. ಈಗ ಗೋಕಾಕ ತಾಲೂಕಿನಲ್ಲಿ ಒಂದು ಮತ್ತು ಧಾರವಾಡ ತಾಲೂಕಿನಲ್ಲಿ ಇನ್ನೊಂದು ಈ ಹೆಸರಿನ ಊರುಗಳಿವೆ. ಬಸವನೆಂಬವನು ಈ ಎರಡರ ಪೈಕಿ ಒಂದಕ್ಕೆ ಸೇರಿದವನು. ಮುಂದೆ ಪದ್ಯ ೧೩೬ ರಲ್ಲಿ ದೊಡ್ಡವಾಡದಲ್ಲಿ ಸ್ವರ್ಣಗೆಲಸಿ ಮಲ್ಲಪ್ಪನೆಂಬ ಶರಣನಿದ್ದನೆಂದು ತಿಳಿಸುತ್ತಾನೆ. ಪದ್ಯ ೧೩೯ ರಲ್ಲಿ ಕರಿಗೊಂಡನೆಂಬ ಭಕ್ತನೂ ಇದೇ ಊರಿನವನೆಂಬ ಉಲ್ಲೇಖ ಬಂದಿದೆ. ಮುಂದುವರಿದು ಇದೇ ಪದ್ಯದಲ್ಲಿ ಬೆಳವಡಿಯಲ್ಲಿ ‘ಅತಿ ಮೆರೆವ ದಂಡಪ್ಪನಾಯಕ’ ಮತ್ತು ಒಕ್ಕುಂದದಲ್ಲಿ ನಾಗಪ್ಪಯ್ಯನೆಂಬ ಶರಣರು ಇದ್ದುದಾಗಿ ಹೇಳಿದ್ದಾನೆ. ದೊಡ್ಡವಾಡ ಬೆಳವಡಿ ಮತ್ತು ಒಕ್ಕುಂದಗಳು ಈಗ ಬೈಲಹೊಂಗಲ ತಾಲೂಕಿನ ದಕ್ಷಿಣಪೂರ್ವ ಭಾಗದಲ್ಲಿಯೇ ಇವೆ. ನಾಗಪ್ಪನ ಹೆಸರು ಬಂದಿರುವ ಪದ್ಯ ೧೪೦ರಲ್ಲಿ ‘ಧೀರ ಮುರುನಾಡ’ ಸುರಗಿಯ ಚೌಡಿದೇವರ ಮಠದಲ್ಲಿಪ್ಪ ಹಾಲಯ್ಯನು, ಬೆಳಗಾವಿಯಲ್ಲಿಯ ಅಮರಪ್ಪನು ಮತ್ತು ಮಲಿದೇವ ರಾಣಿಯರು (ರಾಣೆಯರು) ಎಂಬ ಶರಣರ ಹೆಸರುಗಳು ಕಂಡು ಬರುತ್ತವೆ. ಇಲ್ಲಿಯ ಬೆಳಗಾವಿ ಎಂದರೆ ಇಂದಿನ ಜಿಲ್ಲಾ ಕೇಂದ್ರವಾದ ಬೆಳಗಾವಿ ನಗರವೇ. ಇದು ರಟ್ಟರ ಕಾಲದಿಂದಲೂ ಪ್ರಖ್ಯಾತ ಪಟ್ಟಣ ವಾಗಿದ್ದರಿಂದ ತುಂಬ ಗಮನಾರ್ಹವಾಗಿದೆ. ೧೫ನೆಯ ಶತಮಾನಕ್ಕಾಗಲೇ ಇಲ್ಲಿ ವೀರಶೈವ ಮತ ನೆಲೆಯೂರಿತ್ತೆಂದು ಶಿವತತ್ವ ಚಿಂತಾಮಣಿ ಸಾಕ್ಷಿನುಡಿಯುತ್ತಿದೆ.

ಮೇಲೆ ತಿಳಿಸಿದಂತೆ ಮುರುನಾಡಸುರಗಿಯ ಚೌಡಯ್ಯನ ಮಠದಲ್ಲಿ ಹಾಲಯ್ಯ ನಿದ್ದನೆಂಬ ಹೇಳಿಕೆ ಇನ್ನೂ ಮಹತ್ವದ್ದಾಗಿದೆ. ಬಸವಣ್ಣನವರ ಸಮಕಲೀನನಾದ ಈ ಶರಣ ಸುರಗಿಯ ಚೌಡಯ್ಯ ಮೂಲತಃ ಗುಜರಾತ ದೇಶದ ಮಂಗಳಪುರ ದವನಾಗಿದ್ದು ಪ್ರವರಶೈವ ಎಂಬ ಶೈವಪಂಗಡಕ್ಕೆ ಸೇರಿದ್ದನೆಂದೂ ತರುವಾಯ ಬಸವಣ್ಣನವರಿದ್ದ ಮಂಗಳವಾಡಿಕ್ಕೆ ಬಂದು ವೀರಶೈವನಾದನೆಂದೂ ಬೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ ಹೇಳಿದೆ. ಬಸವಣ್ಣನವರಲ್ಲಿ ಸುರಗಿ ಹಿಡಿದಿರುವ ಕಾಯಕದಲ್ಲಿದ್ದ ಈ ಶರಣನ ಪರಂಪರೆಯ ಮಠವೊಂದು ಮುರುನಾಡೆಂಬ ಊರಲ್ಲಿತ್ತೆಂದು ಲಕ್ಕಣ್ಣ ದಂಡೇಶ ಹೆಳಿರುವುದು ವೀರಶೈವ ಮಠಪರಂಪರೆಯ ದೃಷ್ಟಿಯಿಂದ ತುಂಬ ಬೆಳೆಯುಳ್ಳದ್ದು. ಈಗ ಮುರನಾಳ ಎಂಬ ಊರು ಬೆಳಗಾವಿಯ ಪರಿಸರದಲ್ಲಿದ್ದದೆಂದು ಹೇಳಬೇಕಾಗಿದೆ. ಸವದತ್ತಿ ತಾಲೂಕಿನಲ್ಲಿರುವ ಮುರಗೋಡು ಈ ಊರಾಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಚಿಕ್ಕನಂಜೇಶ ಅಥವಾ ಸಿದ್ಧನಂಜೇಶ (೧೭ನೆಯ ಶತಮಾನ) ರಾಘವಾಂಕ ಚರಿತೆ ಮತ್ತು ಗುರುರಾಜ ಚಾರಿತ್ಯ್ರಗಳನ್ನು ಬರೆದಿದ್ದಾನೆ. ಈತ ಈಗಿನ ಕರ್ನೂಲು ಜಿಲ್ಲಯ ನಂದ್ಯಾಲ ಮಠಕ್ಕೆ ಅಧಿಪತಿಯಾಗಿ ಹೋಗುವ ಪೂರ್ವದಲ್ಲಿ ಹೂಲಿಯ ಪಂಚವಣ್ಣಿಗೆಯ ಮಠದ ಗುರುಸಿದ್ಧನಂಜೇಶನ ಶಿಷ್ಯನಾಗಿ ಅಧ್ಯಯನ ನಿರತನಾಗಿದ್ದ. ಈತ ತನ್ನ ಗುರುರಾಜ ಚಾರಿತ್ಯ್ರದಲ್ಲಿ ಗುರುಸಿದ್ಧ ನಂಜೇಶ ಮತ್ತು ಅವನ ಪತ್ನಿ ಚನ್ನ ವೀರಾಂಬೆಯರನ್ನು ಜೊತೆಗೆ ಹೂಲಿಯ ಪರಿಸರವನ್ನು ಸುಂದರವಾಗಿ ವರ್ಣಿಸಿದ್ದಾನೆ. ಅಲ್ಲದೆ ಹೂಲಿಯ ಮಠವು ಅಂದು ಬಹುಪ್ರಖ್ಯಾತವಾಗಿತ್ತೆಂದೂ ಅನೇಕ ಜನ (ವೀರಶೈವ) ವಿದ್ವಾಂಸರು ಸಿದ್ಧನಂಜೇಶನ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ನಿರತರಾಗಿದ್ದರೆಂದೂ ಹೇಳಿದ್ದಾನೆ. ಕವಿನಂದೀಶ, ರಾಚವಟ್ಟಿಯಾರಾಧ್ಯ, ಸಿದ್ಧ ಭದ್ರೇಶ, ನಂಜಯ್ಯ, ವಿಜಯಪುರದ ನಂಜಯ್ಯ, ಮುಖಬೋಳು ಸಿದ್ಧರಾಮಯ್ಯ, ಭೂಷದೋಣಿಯಮಠದ ಮುತ್ತಿನಕಂಥೆಯಯ್ಯ, ಬೀಳಲಿಗೆಯ ಸಿದ್ಧರಾಮಯ್ಯ ಮುಂತಾದ ಸು. ೨೨ ಜನ ಶಿಷ್ಯರ ಹೆಸರುಗಳು ಅದರಲ್ಲಿ ಬಂದಿವೆ. ಇದರಿಂದ ಕವಿಯ ಗುರು ಸಿದ್ಧನಂಜೇಶ ಅಂದಿನ ದೊಡ್ಡ ವಿದ್ವಾಂಸರಲ್ಲಿ ಒಬ್ಬನಾಗಿದ್ದು ಹೂಲಿ ಅಂದು ಉತ್ತರ ಕರ್ನಾಟಕದ ಪ್ರಖ್ಯಾತ ಮಠಗಳಲ್ಲಿ ಒಂದಾಗಿತ್ತೆಂದು ತಿಳಿದು ಬರುತ್ತದೆ. ಸ್ವತಃ ಕವಿಯಾದ ಚಿಕ್ಕನಂಜೇಶ ಗುರುಸಿದ್ಧನಂಜೇಶನನ್ನು ‘ಕರ್ನಾಟಕ ಕವಿತ್ವ ಕೋವಿದ’ ಎಂದು ವಿಶ್ಲೇಷಿಸಿದ್ದಾನೆ. ಇದರಿಂದ ಮೂಲ ಕುರುವತ್ತಿಯವನಾಗಿ ಹೂಲಿಯ ಮಠದ ಅಧಿಕಾರಕ್ಕೆ ಬಂದಿದ್ದ ಸಿದ್ಧನಂಜೇಶನೂ ಒಬ್ಬ ಕವಿಯಾಗಿದ್ದನೆಂದು ತಿಳಿದುಬರುತ್ತದೆ. ಇದಲ್ಲದೆ ಬೆಳಗಾವಿ ಜಿಲ್ಲೆಯ ದೃಷ್ಟಿಯಿಂದ ಗಮನಿಸಬೇಕಾದ ಎರಡು ಹೆಸರುಗಳು ಮೇಲಿನ ೨೨ ಜನರ ಪಟ್ಟಿಯಲ್ಲಿವೆ. (ಗು. ರಾ. ಚಾ.ಸಂ-೧ ಪದ್ಯ ೪೦-೪೪). ರಾಯಬಾಗಿಯ ನಂಜಯ್ಯ ಮತ್ತು ಸೇಡುಬಳದ ನಂಜಯ್ಯ ಎಂಬುವವರೇ ಅವರು. ರಾಯಬಾಗಿ ಎಂದರೆ ಈಗನ ತಾಲೂಕಾ ಸ್ಥಳವಾದ ರಾಯಬಾಗ ಮತ್ತು ಸೇಡುಬಳ ಎಂದರೆ ಅಥಣಿ ತಾಲೂಕಿನಲ್ಲಿರುವ ಇಂದಿನ ಸೇಡಬಾಳ ಎಂಬ ಊರು. ಮುಂದೆ ಸಂಧಿ-೧೬ ಪದ್ಯ ೨೧ ರಲ್ಲಿ ಕಲುಬಾವಿಯಲ್ಲಿ ಕುಂಬಾರಕಾಯಕದ ಶೀಲವಂತ ಬಸವಪ್ಪಯ್ಯನೆಂಬ ಪ್ರಸಿದ್ಧ ಭಕ್ತನಾಗಿ ಹೋದನೆಂದು ಹೇಳಿದ್ದಾನೆ. ಈಗ ಬೈಲಹೊಂಗಲ ತಾಲೂಕಿನಲ್ಲಿರುವ ಕಲಭಾವಿ ಎಂಬ ಊರಲ್ಲಿ ಹಲವು ಶಾಸನಗಳೂ ಪ್ರಾಚೀನ ದೇವಾಲಯದ ಅವಶೇಷಗಳೂ ಇವೆ. ಚಿಕ್ಕನಂಜೇಶ ಹೇಳುವ ಶೀಲವಂತ ಬಸವಪ್ಪಯ್ಯ ಪ್ರಸ್ತುತ ಕಲಭಾವಿಯವನೇ ಎನ್ನಬಹುದು. ಹೀಗೆ ಚಿಕ್ಕನಂಜೇಶನ ಇವೆರಡು ಕೃತಿಗಳು ೧೬-೧೭ನೆಯ ಶತಮಾನದ ಬೆಳಗಾವಿ ಪ್ರದೇಶದಲ್ಲಿದ್ದ ವೀರಶೈವಮಠ ಪರಂಪರೆಯ ಮೇಲೆ ವಿಶೇಷ ಬೆಳಕು ಬೀರುವ ಕೃತಿಯಾಗಿವೆ. ಅದರಂತೆ ಇಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರಸಿದ್ಧಿಯಲ್ಲಿರುವ ಬಹಳಷ್ಟು ಮಠಗಳು ಅಂದು ಇನ್ನೂ ಪ್ರಸಿದ್ಧಿಗೆ ಬಂದಿರ ಇಲಿಲ್ಲವೆಂದು ತಿಳಿದುಬರುತ್ತದೆ.

ನಿರಂಜನವಂಶ ರತ್ನಾಕರ ಎಂಬೊಂದು ಕೃತಿಯನ್ನು ದಿ. ಫ. ಗು. ಹಳ ಕಟ್ಟಿಯವರು ೧೯೩೨ರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಶ್ರೀ ಅಲ್ಲಮ ಪ್ರಭುದೇವರಿಂದ ಪ್ರಾರಂಭವಾಗಿ ತೋಂಟದ ಸಿದ್ಧಲಿಂಗೇಶ್ವರರಿಂದ ಜಾಜ್ವಲ್ಯಮಾನವಾಗಿ ಬೆಳಗಿದ ವಿರಕ್ತ ಸಂಪ್ರದಾಯದ ವಿವರಣೆ ಬಂದಿದೆ. ಅದೇ ಮುಂದುವರಿದು ಚಿತ್ರದುರ್ಗದ ಮುರುಘಾ ಸಮಯದ ಸ್ಥಾಪನೆಯಲ್ಲಿ ಪರ್ಯವಸಾನಗೊಂಡುದರ ಸಂಕ್ಷಿಪ್ತ ಚರಿತ್ರೆ ಪ್ರಸ್ತುತ ಕೃತಿಯಲ್ಲಿ ದಾಖಲಾಗಿದೆ. ಜೊತೆಗೆ ೧೨ನೆಯ ಶತಮಾನದ ಕಲ್ಯಾಣದಲ್ಲಿ ಅಲ್ಲಮ ಪ್ರಭುದೇವರಿಂದ ಏರಲ್ಪಟ್ಟ ಶೂನ್ಯಸಿಂಹಾಸನದ ಅಧಿಕಾರವು ಕ್ರಮಬದ್ಧವಾಗಿ ಚಿತ್ರದುರ್ಗದ ಮುರುಘಾಮಠಕ್ಕೆ ಪ್ರಾಪ್ತವಾಯಿತೆಂಬ ಐತಿಹ್ಯವನ್ನು ವಿವರಿಸುವ ಪ್ರಯತ್ನಮಾಡಿದೆ. ಈ ಪ್ರಯತ್ನದ ಅಂಗವಾಗಿ ಚಿತ್ರಿತವಾದ ಪರಂಪರೆಯ ಇತಿಹಾಸದಲ್ಲಿ ಬೆಳಗಾವಿ ಜಿಲ್ಲೆಗೆ ಸಂಬಂಧಪಟ್ಟ ವೀರಶೈವ ಮಠ ಸಂಪ್ರದಾಯದ ಉಲ್ಲೇಖ ಕೆಲವು ಕಡೆಗೆ ಬರುತ್ತಿದೆ. (ಪ್ರಸ್ತುತ ಕೃತಿಯ ಕಾಲ ೧೮ ಅಥವಾ ೧೯ನೆಯ ಶತಮಾನವಾಗಿದ್ದರೂ ಇದರಲ್ಲಿ ಶ್ರೀ ತೋಂಟದ ಸಿದ್ಧಲಿಂಗೇಶ್ವರರ ಹಿಂದಿನ ಕೆಲವು ತಲೆಮಾರುಗಳು ಮತ್ತು ಅವರ ತರುವಾಯದ ಹೆಚ್ಚಿನ ತಲೆಮಾರುಗಳ ವಿವರಗಳು ಐತಿಹಾಸಿಕ ಸತ್ಯವಾಗಿರುವಂತೆ ತೋರುತ್ತದೆ. ಇತರ ವೀರಶೈವ ಕೃತಿಗಳಲ್ಲಿ ಶ್ರೀ ತೋಂಟದ ಸಿದ್ಧಲಿಂಗೇಶ್ವರರ ಹಿಂದು-ಮುಂದಿನ ತಲೆಮಾರುಗಳ ಸಂಬಂಧಿಯಗಿ ಬಂದಿರುವ ವಿವರಗಳು ಪ್ರಸ್ತುತ ಕೃತಿಯ ವಿವರಗಳೊಂದಿಗೆ ತಾಳೆಯಾಗುತ್ತಿವೆ. ಅದರ ವಿವರವಾಗ ಚರ್ಚೆ ಇಲ್ಲಿ ಅನವಶ್ಯಕ.) ಇಲ್ಲಿ ಬೆಳಗಾವಿ ಜಿಲ್ಲೆಗೆ ಸಂಬಂಧಪಟ್ಟಂತೆ ಆಸಕ್ತಿದಾಯಕವಾದ ವಿವರಗಳನ್ನು ಮಾತ್ರ ನೋಡಬಹುದು.
ರಾಮದುರ್ಗ ತಾಲೂಕಿನ ಗೊಡಚಿಯಲ್ಲಿ ಇಂದು ಪ್ರಸಿದ್ಧವಾಗಿರುವ ವೀರಭದ್ರ ದೇವರನ್ನು ‘ವೀರಗಂಟಿ ಮಡಿವಾಳಯ್ಯನವರು’ ಸ್ಥಾಪಿಸಿದರೆಂದು ಪು.೮ರಲ್ಲಿ ಹೇಳಿದೆ ಇದೇ ವಿಷಯ ಕುರಿತಂತೆ ಮುಂದೆ ಪುಟ ೨೩ರಲ್ಲಿ ಶರಣ ಮಡಿವಾಳ ಮಾಚಯ್ಯನವರು ದೇವರ ಹಿಪ್ಪರಿಗೆಗೆ ದಯಮಾಡಿಸುವಾಗ ‘ಆ (ಗೊಡಚಿಯ) ಹುತ್ತದಿ ಚಿಕ್ಕ ಗುಡಿಯನ್ನು ಕಟ್ಟಿ, ಆ ಗುಡಿಯಲ್ಲಿ ತಮ್ಮ ವೀರೇಶನನ್ನು ಸ್ಥಾಪಿಸಿದ್ದರೆಂದೂ ಅಲ್ಲಿಯೇ ನಿರಂಜನ ವಂಶದ ೧೩ನೆಯ ಪಟ್ಟದ ಆದಿಲಿಂಗ ಸ್ವಾಮಿಗಳು ತಮ್ಮ ಪಟ್ಟವನ್ನು ಚನ್ನವೀರ ಸ್ವಾಮಿಯವರಿಗೆ ಮಾಡಿದರೆಂದೂ, ಹೇಳಿದೆ ಮತ್ತು ಜಗದೇವ ಹಾಗೂ ಮಲ್ಲಿಬೊಮ್ಮಣ್ಣರು ಗೊಡಚಿಯ ಸಮೀಪದ ತೊರಗಲ್ಲಿನಲ್ಲಿ ಗುಂಡ ಬ್ರಹ್ಮಯ್ಯರಾಗಿ ಹುಟ್ಟಿದರೆಂದೂ ಈ ಗುರುತಿಗಾಗಿ ತೊರಗಲ್ಲು ಮತ್ತು ಬನ್ನೂರುಗಳ ಮಧ್ಯದಲ್ಲಿ ಇವರಿಬ್ಬರ ಹೆಸರಿನ ದೇವಾಲಯವೊಂದು ಸ್ಥಾಪಿತವಾಗಿತ್ತೆಂದೂ (ಪುಟ-೧೦) ಹೇಳಿದೆ. ಬಹುಶಃ ಗೊಡಚಿಯಲ್ಲಿ ಆದಿಲಿಂಗ ಸ್ವಮಿಯವರಿಂದ ಮಠವೊಂದು ನಿರ್ಮಾಣಗೊಂಡಿರುವ ಸಾಧ್ಯತೆಯೂ ಇದೆ.

ಮೇಲೆ ತಿಳಿಸಿದ ಆದಿಲಿಂಗ ಸ್ವಾಮಿಗಳ ಗುರುಗಳಾದ ಬಸವಪ್ರಭು ಸ್ವಾಮಿಗಳು ಹುಕ್ಕೇರಿನಾಡಿಗೆ ದಯಮಾಡಿಸಿದ್ದರೆಂದೂ ಹಿರೇಸೂರು ಕಿರೇಸೂರುಗಳಲ್ಲಿ ತಮ್ಮ ಕುರುಹುಗಳನ್ನುಳಿಸಿ ತರುವಾಯ ತಮ್ಮ ಕುರುಹಾದ ಮಗಿ ಬೆತ್ತ ಹಾಗೂ ಹಾವುಗೆಗಳನ್ನು ತೇರದಾಳದಲ್ಲಿ ಬಿಟ್ಟು ಅಲ್ಲಿಯೇ ನಿರ್ಬಯಲಾದರೆಂದೂ ಹೇಳಿದೆ. (ಪು. ೨೧, ೨೨.) ಇಲ್ಲಿನ ಬಸವ ಪ್ರಭು ಸ್ವಾಮಿಗಳೇ ಇಂದಿನ ತೇರದಾಳ ಮಠದ ಪ್ರಭುದೇವರೆಂದು ಇಲ್ಲಿನ ಸ್ಪಷ್ಟ ಅಭಿಪ್ರಾಯವಾಗಿದೆ. ಹುಕ್ಕೇರಿಯ ಉತ್ತರಕ್ಕೆ ಚಿಕ್ಕೋಡಿ ತಾಲೂಕಿನ ಚಿಂಚಣಿಯಲ್ಲಿಯೂ ಒಂದು ಪ್ರಭುದೇವರ ಮಠವು ಈಗಲೂ ಇದೆ. ಬಹುಶಃ ಇದೂ ಕೂಡ ಈ ೧೨ ನೆಯ ಚರಂತಿಗೆಯ ಪ್ರಭು ಸ್ವಾಮಿಗಳ ಕುರುಹೇ ಆಗಿರಬಹುದೆ?

ಮೇಲೆ ಹೇಳಿದ ಆದಿಲಿಂಗ ಸ್ವಾಮಿಯವರು ಗೊಡಚಿಗೆ ಹೋಗುವ ಮುನ್ನ ತೊರಗಲ್ಲಿಗೆ ಸಮೀಪದ ಮೇಗುಂಡಿ ಕೊಳ್ಳದ ತಿರುಕಾಮೇಶ್ವರದಲ್ಲಿ ಅನುಷ್ಠಾನ ಮಾಡಿದರು. ಅಲ್ಲಿಂದ ಕಲ್ಲುರಿಗೆ ಹೋಗಿ ಅಲ್ಲಿಯೇ ದೇಹ ಬಿಟ್ಟರು ಮತ್ತು ಅವರಿಟ್ಟ ಭಸ್ಮದ ಘಟ್ಟಿಯ ಕುರುಹಿನೊಂದಿಗೆ ಸಿದ್ಧೇಶ್ವರನನ್ನು ಅಲ್ಲಿ ಸ್ಥಾಪಿಸಲಾಯಿತು.

ಗೊಡಚಿಯಲ್ಲಿ ಪಟ್ಟಾಧಿಕಾರ ಪಡೆದ ೧೪ನೆಯ ಚನ್ನವೀರ ಸ್ವಾಮಿಗಳು ಸೊಗಲ ಕ್ಷೇತ್ರಕ್ಕೆ ಬಂದು ಅಲ್ಲಿ ಕೆಲವು ದಿನಗಳಿದ್ದು ಮುನವಳ್ಳಿಗೆ ಹೋದರು. ಅಲ್ಲಿದ್ದ ಪ್ರಾಚೀನ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು. (ಪು. ೨೪) ಈ ಹೇಳಿಕೆಯಲ್ಲಿ ಸತ್ಯಾಂಶವಿದ್ದಂತೆ ಕಾಣುತ್ತದೆ.

ಪ್ರಭು ವಂಶೋದ್ಭವರಾದ ಶ್ರೀ ಚೆನ್ನವೀರ ಸ್ವಾಮಿಗಳು ಸೊಗಲ ಕ್ಷೇತ್ರದಲ್ಲಿದ್ದಾಗ ಕಕುದ್ಗಿರಿ ಎಂಬ ಶಿವಗಂಗೆಯ ಹೊನ್ನಮ್ಮನ ಗವಿಮಠದ ಸೂತ್ರಕಾರರಾದ ರುದ್ರ ಮುನಿ ದೇವರು ಶ್ರೀ ಚೆನ್ನವೀರ ಸ್ವಾಮಿಗಳನ್ನು ಕಾಣಲು ಸೊಗಲ ಕ್ಷೇತ್ರಕ್ಕೆ ಬಂದರು. ಚೆನ್ನವೀರ ಸ್ವಾಮಿಗಳು ಅವರನ್ನು ಮೇಲೆ ತಿಳಿಸಿದ ಮುನವಳ್ಳಿಗೆ ಕರೆದೊಯ್ದು ಅವರೊಡನೆ ಅಲ್ಲಿ ಕೆಲವು ದಿನವಿದ್ದರು. ಅಲ್ಲಿಯೇ ಬಸವ ಪುರಾಣದ ಪ್ರವಚನಕ್ಕಾಗಿ ಹೊಲಿಯ ಪಂಚವಣ್ಣಿಗೆಯ ಮಠಸ್ಥರಾದ ನಂಜಣಾರ್ಯರೆಂಬವರನ್ನು ನೇಮಿಸಿದರು. ಈ ರುದ್ರ ಮುನಿ ದೇವರು ಮತ್ತು ಚನ್ನವೀರ ಸ್ವಾಮಿಗಳು ಮುನವಳ್ಳಿಯಲ್ಲಿಯೇ ಲಿಂಗೈಕ್ಯರಾಗಲು ಅವರಿಬ್ಬರ ಗದ್ದುಗೆಗಳನ್ನು ಅಲ್ಲಿ ನಿರ್ಮಿಸಲಾಯಿತು. (ಪು. ೨೬). ಹರಪನಹಳ್ಳಿ, ಗುಳೂರು, ಗುಮ್ಮಳಾಪುರ ಮೊದಲಾದ ಪ್ರಸಿದ್ಧ ವೀರಶೈವ ಪರಂಪರೆಯ ಕೇಂದ್ರಗಳಂತೆ ಬೆಳಗಾವಿ ಜಿಲ್ಲೆಯ ಸೊಗಲ, ಮುನವಳ್ಳಿ ಮತ್ತು ಗೊಡಚಿಗಳು ಆ ಪೂರ್ವದಲ್ಲಿಯೇ ವೀರಶೈವ ಪರಂಪರೆಯ ಪ್ರಸಿದ್ಧ ಕ್ಷೇತ್ರವಾಗಿದ್ದವೆಂಬುದು ಇದರಿಂದ ಶ್ರುತ ಪಡುತ್ತದೆ. ಶ್ರೀ ಸಿದ್ಧಲಿಂಗೇಶ್ವರರು ಹರಪನಹಳ್ಳಿಯಲ್ಲಿ ಪ್ರಖ್ಯಾತರಾದ ತರುವಾಯ ಈ ಕ್ಷೇತ್ರಗಳ ಆಕರ್ಷಣೆ ಸ್ವಲ್ಪ ಕಡಿಮೆಯಾದಂತೆ ಕಾಣುತ್ತದೆ. ಕ್ರಿ. ಶ. ೧೫ ನೆಯ ಶತಮಾನದಲ್ಲಿ ಬೆಳಗಾವಿ ಜಿಲ್ಲೆಯ ಈ ಕ್ಷೇತ್ರಗಳು ಮತ್ತು ಹೂಲಿಯ ಮಠ ತುಂಬ ಚಟುವಟಿಕೆಯಿಂದ ಕೂಡಿದ್ದವೆಂಬುದು ಸ್ಪಷ್ಟ. ಆಗ ಬೆಳಗಾವಿ ಜಿಲ್ಲೆ ವೀರಶೈವದ ಆಡುಂಬೊಲವಾಗುತ್ತೆಂಬುದು ಗಮನಿಸಬೇಕಾದ ಅಂಶ.

ಪ್ರಸ್ತುತ ನಿರಂಜನ ವಂಶದಲ್ಲಿ ತೋಂಟದ ಸಿದ್ಧಲಿಂಗೇಶ್ವರರು ೧೮ನೆಯವರೆಂದು ಈ ಕೃತಿಕಾರ ತಿಳಿಸುತ್ತಾನೆ. ಅವರ ಹಿಂದಿನ ೧೭ ತಲೆಮಾರುಗಳ ವಿಷಯದಲ್ಲಿ ಮತ್ತು ಮುಂದಿನ ಕೆಲವು ತಲೆಮಾರುಗಳ ಪಟ್ಟಾಧಿಕಾರಿಗಳ ಸಂಬಂಧದಲ್ಲಿ ‘ನಿರಂಜನ ಜಂಗಮ ವಂಶದರ್ಪಣ’ ಎಂಬ ಕೃತಿಯೂ ಏಕಾಭಿಪ್ರಾಯ ಉಳ್ಳದ್ದಾಗಿದೆ. ಆದ್ದರಿಂದ ನಿರಂಜನ ವಂಶದ ೧೨, ೧೩, ಮತ್ತು ೧೪ನೆಯ ತಲೆಮಾರಿನ ವಿಷಯಗಳು ಐತಿಹಾಸಿಕ ಸತ್ಯವೆಂದು ಒಪ್ಪಬೇಕಾಗುತ್ತದೆ.

ಇದೇ ಗ್ರಂಥದ ೬೦ನೆಯ ಪುಟದಲ್ಲಿ ನಿರಂಜನ ವಂಶದ ೨೩ ನೆಯ ಪಟ್ಟಾಧಿಕಾರಿಗಳಾದ ಕಟ್ಟಿಗೆ ಹಳ್ಳಿಯ ಸಿದ್ಧವೀರ ಸ್ವಾಮಿ ಎಂಬುವರು ಮಾಗಡಿಯಲ್ಲಿ ಕೆಲವು ಕಾಲ ಇದ್ದರೆಂದು ಹೇಳಿದೆ. ಆಗ ಸಂಪಾದನೆಯ ಸಿದ್ಧ ವೀರಪ್ಪ ಎಂಬವನು ಅವರಿಗೆ ವಿರೋಧವಾಗಿ ನಡೆದುಕೊಂಡನೆಂದಿದೆ. ಈ ಸಂಪಾದನೆಯ ಸಿದ್ಧವೀರಪ್ಪ (ತರುವಾಯ) ಹಾಗಲವಾಡಿಗೆ ಹೋಗಿ ಅಲ್ಲಿಯ ರಾಜನನ್ನು ಭಕ್ತನನ್ನಾಗಿ ಮಾಡಿ ಅಲ್ಲಿಯೇ ಉಳಿದು ಅಲ್ಲಿಯೇ ಲಿಂಗೈಕ್ಯನಾದನು. ಈ ಸಿದ್ಧವೀರಪ್ಪನವರ ತರುವಾಯ ಅವರ ಪರಂಪರೆಯವರು ಹಾಗಲವಾಡಿ, ಹುಕ್ಕೇರಿ ನಾಡು, ಒಂಟಮುರಿ, ನರೇಂದ್ರ, ಬಾಗವಾಡಿ ಮುಂತಾದ ಸ್ಥಳಗಳಲ್ಲಿ ಸಂಪಾದನೆಯ ಮಠಗಳನ್ನು ಸ್ಥಾಪಿಸಿದರು ಎಂದು ಇದರಲ್ಲಿ ಹೇಳಿದೆ. ಪ್ರಸ್ತುತ ಇಲ್ಲಿನ ಹುಕ್ಕೇರಿನಾಡು ಮತ್ತು ಒಂಟಮುರಿಗಳು ಬೆಳಗಾವಿ ಜಿಲ್ಲಾ ಪ್ರದೇಶವೇ ಎಂಬುದು ನಿರ್ವಿವಾದ. ಈಗ ಈ ಪ್ರದೇಶದಲ್ಲಿ ಒಂಟಮುರಿ, ಯಮಕನಮರಡಿ, ಘೋಡಗೇರಿ, ಬೆಲ್ಲದ ಬಾಗೇವಾಡಿ (ನಾಲ್ಕೂ ಹುಕ್ಕೇರಿ. ತಾ || ) ಗೋಕಾವಿ, ಮಮದಾಪುರ (ಗೋಕಾಕ. ತಾ || ) ಚಿಕ್ಕೋಡಿ, ಖಡಕಲಾಟ, ನೀರಲಗಿ ನವನಿಹಾಳ (ಹೆಚ್ಚಿನವು ಚಿಕ್ಕೋಡಿ. ತಾ || ) ಗಡಹಿಂಗ್ಲಜ (ಕೊಲ್ಲಾಪುರ ಜಿ.) ಈ ಊರುಗಳಲ್ಲಿ ಸಂಪಾದನೆಯ ಸಮಯದ ಮಠಗಳಿವೆ. ಎಂದರೆ ನಿರಂಜನ ವಂಶದ ೨೩ ನೆಯ ಪಟ್ಟಾವಧಿಯಲ್ಲಿ ಈ ಸಂಪಾದನೆಯ ಸಮಯ ಹುಟ್ಟಿಕೊಂಡಿತೆಂಬುದು ಈ ಗ್ರಂಥಕರ್ತನ ಅಭಿಪ್ರಾಯವಾಗಿದೆ. ಅದನ್ನು ನಾವು ಒಪ್ಪಬೇಕಿಲ್ಲ. ಆದರೆ ಈ ಭಾಗದಲ್ಲಿ ಆಗಲೇ ಸಂಪಾದನೆಯ ಸಂಪ್ರದಾಯದ ಪರಂಪರೆ ನೆಲೆಯೂರಿತ್ತೆಂಬ ಸಂಗತಿಯ ದೃಢೀಕರಣ ಈತನ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ.

ಈ ಸಂಪಾದನೆಯ ಸಂಪ್ರದಾಯ ಎಷ್ಟು ಹಳೆಯದು ಎಂಬ ಅಂಶವನ್ನು ನಾವಿಲ್ಲ ಸ್ಪಷ್ಟಪಡಿಸಲಾರೆವು. ಇದು ಪ್ರತ್ಯೇಕ ಸಂಶೋಧನೆಯ ವಿಷಯ. ಇಲ್ಲಿ ಸದ್ಯ ಇಷ್ಟನ್ನು ಹೇಳಬಹುದು. ಶ್ರೀ ತೋಂಟದ ಸಿದ್ಧಲಿಂಗೇಶ್ವರರು ೧೮ ನೆಯವರು, ಶ್ರೀ ಬೋಳ ಬಸವೇಶ್ವರರು ೧೯ನೆಯವರು, ಗುಮ್ಮಳಾಪುರ ಸಿದ್ಧಲಿಂಗ ಮತ್ತು ಇನ್ನೊಬ್ಬ ಶಿಷ್ಯ ಸಂಪಾದನೆಯ ಚನ್ನಂಜೆದೇವ ಇವರು ನಿರಂಜನ ವಂಶದಲ್ಲಿ ೨೦ ನೆಯ ತಲೆಮಾರಿನವರು. ಈ ಇಬ್ಬರೂ ಸಂಪಾದನೆಯ ಸಂಪ್ರದಾಯದವರೇ ಎಂಬಲ್ಲಿ ಅನುಮಾನವಿಲ್ಲ ಅದ್ದರಿಂದ ನಿರಂಜನ ವಂಶದ ೨೩ ನೆಯ ತಲೆಮಾರಿನ ತರುವಾಯ ಸಂಪಾದನೆಯ ಸಂಪ್ರದಾಯ ಹುಟ್ಟಿತೆಂಬು ಅಭಿಪ್ರಾಯ ಹುರುಳಿಲ್ಲದ್ದು. ೨೦ನೆಯ ತಲೆಮರಿಗಾಗಲೇ ಎಂದರೆ ಕ್ರಿ.ಶ. ೧೫೫೦ ರಿಂದ ೧೬೦೦ರ ಅವಧಿಯಲ್ಲಿಯೇ ಅದರ ಅಸ್ತಿತ್ವವಿದ್ದ ಬಗ್ಗೆ ಸಂಶಯ ಉಳಿಯುವುದಿಲ್ಲ. ಶ್ರೀ ತೋಂಟದ ಸಿದ್ಧಲಿಂಗೇಶ್ವರರ ಪೂರ್ವದಲ್ಲಿಯೇ ಈ ಪ್ರದೇಶದಲ್ಲಿ ಇರಬಹುದಾದ ಶಕ್ಯತೆಯೂ ಇದೆ.

ಸದ್ಯ ನಮ್ಮ ಕೈಗೆ ಮೇಲೆ ತಿಳಿಸಿದ ಸಂಪಾದನೆ ಮಠಗಳ ಪೈಕಿ ಗೋಕಾಕ ಮತ್ತು ಘೋಡಗೇರಿ ಮಠಗಳ ಕೆಲಮಟ್ಟಿನ ಮಾಹಿತಿ ಬಂದಿದೆ. ಗೋಕಾಕ ಸಂಪಾದನೆಯ ಮಠದ ಮೂಲ ಕರ್ತೃಗಳು ಶ್ರೀ ಗುರುಸಿದ್ಧ ಚರಮೂರ್ತಿಗಳೆಂಬವರು. ಇವರು ಶಕವರ್ಷ ೧೬೦೧ ರಲ್ಲಿ ಎಂದರೆ ಕ್ರಿ. ಶ. ೧೬೭೯ರಲ್ಲಿ ಶ್ರೀ ತೋಂಟದ ಸಿದ್ಧಲಿಂಗೇಶ್ವರರ ತೋರುಗದ್ದಿಗೆಯೊಂದನ್ನು ಸ್ಥಾಪಿಸಿದರೆಂದು ಈ ಮಠದ ಪ್ರಕಟನೆಯಲ್ಲಿ ಹೇಳಲಾಗಿದೆ. (ಇವರ ತರುವಾಯ ಶ್ರೀ ರಾಚೋಟಿ ದೇವರು ಅಧಿಕಾರಕ್ಕೆ ಬಂದರು. ಆಮೇಲೆ ಎರಡನೆಯ ಗುರುಸಿದ್ಧದೆವರು, ಎರಡನೆಯ ರಾಚೋಟಿ ಸ್ವಾಮಿಗಳು, ಮೂರನೆಯ ಗುರುಸಿದ್ಧ ಸ್ವಾಮಿಗಳು, ಮೂರನೆಯ ರಾಚೋಟಿ ಸ್ವಾಮಿಗಳು ಈ ಕ್ರಮದಲ್ಲಿ ಪಟ್ಟಾಧಿಕಾರಿಗಳಾದರು) ಶ್ರೀ ನಿ. ಪ್ರ. ಸ್ವ. ೩ ನೆಯ ರಾಚೋಟಿ ಸ್ವಾಮಿಗಳು ಕಾಲದಲ್ಲಿ ಯಮಕನಮರಡಿ, ಘೋಡಗೇರಿ ಮತ್ತು ಗೋಕಾವಿ ಮಠಗಳು ಒಬ್ಬರೇ ಸ್ವಾಮಿಗಳ ಅಧೀನದಲ್ಲಿದ್ದವು. ಈ ಪೀಠಾಧಿಕಾರಿಗಳು ಹತ್ತರಗಿಯ ಹಿರಿಯ ಮಠದ ಬಾಲಕನೊಬ್ಬನನ್ನು ತಂದು ಶ್ರೀ. ನಿ. ಪ್ರ. ಸ್ವ. ಚನ್ನಬಸವ ಸ್ವಾಮಿಗಳೆಂದು ಹೆಸರಿಟ್ಟು ಗೋಕಾವಿ ಮಠದ ಮರಿದೇವರನ್ನಾಗಿ ಮಾಡಿದರು. ಶ್ರೀ. ನಿ.ಪ್ರ.ಸ್ವ. ಚನ್ನಬಸವ ಸ್ವಾಮಿಗಳು ಮಠದ ಏಳಿಗೆಗಗಿ ತುಂಬಾ ಶ್ರಮವಹಿಸಿದರು. ಈ ಚರಿತ್ರ ರೂಪವಾದ ಗ್ರಂಥವೊಂದು ಈಗ ಪ್ರಕಟವಾಗಿದೆ. ಇವರು ೧೯೫೦ ರಲ್ಲಿ ಲಿಂಗದೊಳಗಾದರು. ಈಗ ಶ್ರೀ ಮಠದ ಅಧಿಕಾರಿಗಳಾಗಿರುವ ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು ೧೯೫೨ ರಲ್ಲಿ ಪೀಠವಹಿಸಿಕೊಂಡಿದ್ದಾರೆ.)

ಘೋಡಗೇರಿಯ ಮಠ ಸಾಕಷ್ಟು ಹಳೆಯದಾದರೂ ಅದರ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಇದರ ಮೂಲ ಕರ್ತೃ ಶ್ರೀ. ನಿ. ಪ್ರ. ಗಟ್ಟಿವಾಳ ಸ್ವಾಮಿಗಳು. ಇವರ ಸಮಾಧಿ ಮಹಾರಾಷ್ಟದ ಆಜರಾದಲ್ಲಿದೆ. ಆಜರಾದಲ್ಲಿ ಈಗಲೂ ಈ ಮಠಕ್ಕೆ ಸಂಬಂಧಿಸಿದ ಆಸ್ತಿಯಿದೆ. ಸದ್ಯ ಶ್ರೀ. ನಿ. ಪ್ರ. ಸ್ವ. ಕಾಶಿನಾಥ ಸ್ವಾಮಿಗಳು ಪ್ರಭು ದೇವರು ಈ ಮಠದ ಅಧಿಕಾರಿಗಳಾಗಿದ್ದಾರೆ. ಮೂಲತಃ ನೇರಲಿಗ್ರಾಮದವರಿದ್ದು ದೊಡ್ಡ ವಿದ್ವಾಂಸರಾಗಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಒಳ್ಳೆಯ ಪರಿಣತಿ ಹೊಂದಿದ್ದಾರೆ.

ಈ ಸಂಪಾದನೆ ಮಠಗಳ ಹೆಚ್ಚಿನ ವಿವರಗಳು ಲಭ್ಯವಾದರೆ ಸಂಪಾದನೆ ಸಂಪ್ರದಾಯದ ಇತಿಹಾಸದ ಮೇಲೆ ಹೊಸಬೇಳಕು ಬೀಳುವ ಸಾಧ್ಯತೆ ಇದ್ದೇ ಇದೆ.

ಶ್ರೀ ಕಾಡಸಿದ್ಧೇಶ್ವರ ಮಠ

ಶ್ರೀ ಕಾಡಸಿದ್ಧೇಶ್ವರರು ಕರ್ನಾಟಕ-ಮಹಾರಾಷ್ಟ್ರಗಳ ನಾನಾ ಭಾಗಗಳಲ್ಲಿ ಸಂಚರಿಸಿ ಲಕ್ಷಾಂತರ ಭಕ್ತರನ್ನು ಪಡೆದು ಹಲವಾರು ಕಡೆ ತಮ್ಮ ಮಠಗಳ ಸ್ಥಾಪನೆಗೆ ಕಾರಣೀಭೂತರಾದ ಮಹಾ ಮಹಿಮರು. ಬೆಳಗಾವಿ ಜಿಲ್ಲೆಯ ಹಲವಾರು ಕಡೆಗೆ ಇವರ ಮಠಗಳಿವೆ. ಈಗಲೂ ಚಿಕ್ಕೋಡಿ ತಾಲೂಕಿನ ಯಡೂರು ಮತ್ತು ಗೋಕಾಕ ತಾಲೂಕಿನ ಮರಡಿ ಮಠಗಳು ತುಂಬ ಪ್ರಸಿದ್ಧವಾಗಿವೆ. ಇವಲ್ಲದೆ ಗುಂಡೇವಾಡಿ, ಚಂದೂರು, ರಬಕವಿ, ಕುಂಡಲ, ಬಸ್ತವಾಡ, ನೇಜ, ಮಾವನೂರು, ಕರ್ಜಗಿ, ನವಲಗುಂದ, ಹೂಲಿ ಕಟ್ಟಿ, ನಗರಸಿದ್ಧಗಿರಿ, ಹುಬ್ಬಳ್ಳಿ, ಗೋಕಾಕ, ಧೂಮ (ಸಾತಾರಾ) ಮುಂತಾದೆಡೆಗಳಲ್ಲಿ ಮಠಗಳಿರುವುದಾಗಿ ತಿಳಿದು ಬರುತ್ತದೆ. ಈ ಸಂಪ್ರದಾಯದ ಮೂಲ ಮಠ (ಕರ್ನಾಟಕದ ಗಡಿಯ) ಕೊಲ್ಲಾಪುರದ ಸಮೀಪ ಕಣೇರಿಯಲ್ಲಿದೆ. ಇದನ್ನು ಸಿದ್ಧಗಿರಿ ಕಣೇರಿ ಎಂದು ಕರೆಯಲಾಗುತ್ತದೆ.

ಪ್ರಸ್ತುತ ಕಣೇರಿ ಮಠದಲ್ಲಿ ಹಲವಾರು ಸನದುಗಳು ಈಗಲೂ ಇರುವುದಾಗಿ ತಿಳಿದು ಬರುತ್ತದೆ. ಅವುಗಳಲ್ಲಿ ಫಸಲಿ ಸನ್ ೧೧೦೭ ನೆಯ ವರ್ಷದ್ದು ಅತ್ಯಂತ ಹಳೆಯದು. ಎಂದರೆ ಕ್ರಿ. ಶ. ೧೬೯೮ ರ ಪೂರ್ವದಲ್ಲಿಯೇ ಶ್ರೀ ಮಠ ಅಸ್ತಿತ್ವಹೊಂದಿತ್ತಷ್ಟೆ ಅಲ್ಲದೆ ರಾಜ ಪೂಜಿತವಾಗಿದ್ದುದಾಗಿ ತಿಳಿದು ಬರುತ್ತದೆ. ಈ ಸನದಿನಲ್ಲಿ ಈ ಮಠವು ಪ್ರಾಚೀನವಾದುದೆಂದು ಹೇಳಿರುವಂತೆ ತಿಳಿದು ಬರುತ್ತದೆ. ಹಿಂದೂ ದ್ವೇಷಿಯೆಂದು ಹೆಸರಾದ ಔರಂಗಜೇಬನು ಕೂಡ ಈ ಮಠಕ್ಕೆ ಸನದು ಹಾಕಿಕೊಟ್ಟಿರುವುದೊಂದು ವಿಶೇಷ. ‘ಶ್ರೀ ಕಾಡಸಿದ್ಧೇಶ್ವರರ ವಚನಗಳು’ ಗ್ರಂಥದ ಮುನ್ನುಡಿ ಪು. ೧೭ರಲ್ಲಿ ಹೇಳಿರುವಂತೆ ಈ ಸನದಿನ ಕಾಲ ದಿನ ೧೭ ತಿಂಗಳು ರಜ್ಜಲ (ಔರಂಗಜೇಬನ) ಸಿಂಹಾಸನಾರೋಹದ ವರ್ಷ ೪೧ ಎಂದು ತಿಳಿದುಬರುತ್ತದೆ. ಕೊಲ್ಲಾಪುರದ ಛತ್ರಪತಿಗಳು ಮತ್ತು ಬಾದಶಹರು ಈ ಮಠಕ್ಕೆ ಬೇರೆ ಬೇರೆ ಅವಧಿಗಳಲ್ಲಿ ಕೊಟ್ಟಿರುವ ಸನದುಗಳ ಸಂಖ್ಯೆ ಸು. ೧೨೦ ಎಂದು ತಿಳಿದು ಬರುತ್ತದೆ.

ಶ್ರೀ ಶಿವಪ್ಪ ಛಪ್ರೆ ಎಂಬವರು ಬರೆದ ”ಶ್ರೀಕ್ಷೇತ್ರ ಯಡೂರು” ಎಂಬ ತಮ್ಮ ಗ್ರಂಥದಲ್ಲಿ ಶ್ರೀ ಕಾಡಸಿದ್ಧೇಶ್ವರರು ಬಸವಣ್ಣನವರ ಸಮಕಾಲೀನರೆಂದು ಹೇಳಿರುವುದಾಗಿ ತಿಳಿದು ಬರುತ್ತದೆ. (ಪೂರ್ವೋಕ್ತ. ಪು. ೧೮) ಈ ಹೇಳಿಕೆ ಸಾಧಾರವಾಗಿಲ್ಲ. ದಿ. ಆರ್. ನರಸಿಂಹಾಚಾರ್ಯರು ಇಷ್ಟಲಿಂಗ ಶತಕವನ್ನು ಬರೆದ ಕಾಡಸಿದ್ಧೇಶ್ವರರ ಕಾಲ. ಕ್ರಿ. ಶ. ಸು. ೧೭೨೫ ಎಂದು ಕ. ಕ. ಚ. ಸಂ. ೧೧ ರಲ್ಲಿ ಹೇಳಿದ್ದಾರೆ. ‘ಶ್ರೀ ಕಾಡ ಸಿದ್ಧೇಶ್ವರ ವಚನಗಳ’ ಸಂಪಾದಕರಾದ ವೇ. ಚಂದ್ರಶೇಖರ ಶಾಸ್ತ್ರಿಗಳು ಹೀರೇಮಠ ಹೊಳಲು ಅವರು ಕವಿಚರಿತ್ರೆಕಾರರ ಈ ಅಭಿಪ್ರಾಯ ತಪ್ಪೆಂದು ಪ್ರತಿಪಾದಿಸಿದ್ದಾರೆ. ಈ ಪ್ರತಿಪಾದನೆಯಲ್ಲಿ ಹಾಗೂ ಕಾಡಸಿದ್ಧೇಶ್ವರರ ಕಾಲ ನಿರ್ಣಯದಲ್ಲಿ ಹಲವು ತಪ್ಪುಗಳು – ಅಸಂಗತಿಗಳು ಹಣಿಕಿಕ್ಕಿವೆ.

ಕೊಕಟನೂರು, ಕೊಣ್ಣೂರು ಮತ್ತು ಶಿರಸಂಗಿ-ನವಲಗುಂದಗಳ ದೇಸಾಯರಿಗೆ ಶ್ರೀ ಕಾಡಸಿದ್ಧೇಶ್ವರರು ಕುಲದೇವರು. ಈ ಪರಂಪರೆಯ ಮಠಗಳಿಗೆ ಈ ಮನೆತನಗಳವರು ಬಹಳ ಹಿಂದಿನಿಂದ ತಮ್ಮ ಭಕ್ತಿ ತೋರಿಸುತ್ತ ಬಂದಿದ್ದಾರೆ. ಈಗಲೂ ಆಕ್ರಮ ಮುಂದುವರಿದಿದೆ. ಇದರ ಆಧಾರದಿಂದ, ವೇ. ಚಂದ್ರಶೇಖರ ಶಾಸ್ತ್ರಿಗಳು ಈ ಮನೆ ತನದ ಮೂಲ ಪುರುಷನಿಗಿಂತ ಹಿಂದೆಯೇ ಶ್ರೀ ಕಾಡಸಿದ್ಧೇಶ್ವರರು ಇದ್ದರೆಂದು ನಿರ್ಣಯಿಸಿದ್ದಾರೆ. ಈ ವಿಷಯವನ್ನು ನಂಬುವುದು ಕಷ್ಟ. ಅವರ ಈ ನಿರ್ಣಯದಲ್ಲಿರುವ ಅಸಂಗತಿಗಳನ್ನು ಇಲ್ಲಿ ಎತ್ತಿ ತೋರಿಸಬಹುದು. ಉದಾಹರಣೆಗೆ ಈ ದೇಸಾಯರ ವಂಶಸ್ಥನಾದ ಗದಿಗೆಪ್ಪಗೌಡನೆಂಬವನು ಕ್ರಿ.ಶ. ೧೩೦೨ರಲ್ಲಿ ಆನೆಗೊಂದಿಯಲ್ಲಿದ್ದ (ವಿಜಯನಗರದ) ದೊರೆ ರಾಮರಾಯನೆಂಬವ ನಿಂದ ಕೊಕಟನೂರಿನ ಗೌಡಿಕೆಯನ್ನು ಪಡೆದನೆಂದು ಹೇಳಿರುವುದನ್ನು ನೋಡಬಹುದು. (ಪು. ೨೩) ವಿಜಯನಗರ ರಾಜ್ಯ ಸ್ಥಾಪನೆಯಾದುದೇ ಕ್ರಿ.ಶ. ೧೩೩೬ ರಲ್ಲಿ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಕವಿಚರಿತೆಗಾರರು ಇಷ್ಟಲಿಂಗ ಶತಕದ ಕರ್ತೃ ಕಾಡಸಿದ್ಧೇಶರ ಕಾಲ ಕ್ರಿ. ಶ. ೧೭೨೫ ಎಂದು ಹೇಳಿರುವ ಸಂಗತಿಯನ್ನು ಮೇಲೆ ನೋಡಿದ್ದೇವೆ. ಈ ಕಾಡಸಿದ್ಧೇಶ ತಾನು ‘ಪರ್ವತೇಶನ ಅಂಗೈಯೊಳೊಗೆದಾತ ಭಕ್ತರಣುಗ ಕಾಡಸಿದ್ಧೇಶ” ಎಂದು ಹೇಳಿಕೊಂಡಿರುವುದರಿಂದ ಈತ ಕ್ರಿ. ಶ. ೧೬೯೮ ರಲ್ಲಿ ಚತುರಾಚಾರ್ಯ ಪುರಾಣವನ್ನು ಬರೆದ ಪರ್ವತೇಶನ ಶಿಷ್ಯನಾಗಿರಬಹುದೆಂದು ಅವರು ಊಹಿಸಿದ್ದಾರೆ. ತತ್ಕಾರಣ ಅವನಿಗೆ ಕ್ರಿ.ಶ. ೧೭೨೫ರ ಗಡುವನ್ನು ಹೇಳಿದ್ದಾರೆ. ಜೊತೆಗೆ ”ಕಾಡಿ (ಡ) ನೊಳಗಾದ ಶಂಕರ ಪ್ರಿಯ ಚೆನ್ನಕದಂಬಲಿಂಗ ನಿರ್ಮಾಯ ಪ್ರಭುವೇ” ಎಂಬ ಅಂಕಿತದಲ್ಲಿ ವಚನಗಳನ್ನು ಬರೆದ ಶ್ರೀ ಕಾಡಸಿದ್ಧೇಶ್ವರನೂ ಇಷ್ಟಲಿಂಗ ಶತಕ ಬರೆದ ಕಾಡಸಿದ್ಧನೂ ಒಬ್ಬನೇ ಇರಬಹುದೆಂಬ ಊಹೆ ಮಾಡಿದ್ದಾರೆ.