ಇಲ್ಲಿ ಉದ್ಭವಿಸುವ ಒಂದು ತೊಡಕನ್ನು ಮೊದಲು ಮನಗಾಣಬೇಕು. ಮೂಲ ಶ್ರೀ ಕಾಡಸಿದ್ಧೇಶ್ವರರು ಇಷ್ಟಲಿಂಗ ಶತಕ ಮತ್ತು ವಚನಗಳನ್ನು ಬರೆದಿದ್ದಾರೆ ಎಂದು ಗ್ರಹಿಸಿದರೆ ಈ ಕೃತಿಕಾರರು ಮತ್ತು ಕಣೇರಿ ಮಠ ಪರಂಪರೆಯ ಮೂಲಕರ್ತೃ ಒಬ್ಬರೆ ಎಂದು ಸ್ಥಾಪಿಸಬೇಕಾಗುತ್ತದೆ. ಇದು ಅಸಾಧ್ಯವಾಗಿ ತೋರುತ್ತದೆ. ಇದನ್ನು ಸ್ವಲ್ಪ ವಿವರವಾಗಿ ನೋಡುವಾ :

ಕಣೇರಿ-ಸಿದ್ಧಗಿರಿಯ ಮಠ ಕ್ರಿ.ಶ. ೧೬೯೮ ಕ್ಕಿಂತ ಹಿಂದಿನದೆಂಬ ಸಂಗತಿಯನ್ನು ಈಗಾಗಲೇ ನೋಡಿದ್ದೇವೆ. ಪ್ರಸ್ತುತ ಈ ಮಠದ ಗುರು ಪರಂಪರೆ ಲಭ್ಯವಿದ್ದು ಅದನ್ನು ಇಲ್ಲಿ ನೋಡಬಹುದು :

೧. ಶ್ರೀ ಮೂಲ ಕಾಡಸಿದ್ಧೇಶ್ವರ ಸ್ವಾಮಿಗಳು

೨. ” ಅದೃಶ್ಯ ಕಾಡದೇವರು

೩. ” ಕೆಂಚ ಕಾಡದೇವರು

೪. ” ಮುಪ್ಪಿನ ಕಾಡದೇವರು

೫. ” ಸಿದ್ಧಕಾಡ ಸ್ವಾಮಿಗಳು

೬. ” ಅದೃಶ್ಯ ಕಾಡಸಿದ್ಧರು

೭. ” ಗದಿಗೆಯ್ಯಸ್ವಾಮಿ ಕಾಡಸಿದ್ಧೇಶ್ವರರು

೮. ” ಮುಪ್ಪಿನ ಕಾಡದೇವರು

೯. ” ಗುರುಸಿದ್ಧ ಕಾಡದೇವರು

೧೦. ” ಕೆಂಚ ಸಿದ್ಧೇಶ್ವರರು

೧೧. ” ಪವಾಡಿ ಕಾಡದೇವರು

೧೨. ” ವಿರುಪಾಕ್ಷ ಕಾಡಸಿದ್ಧೇಶ್ವರ ಸ್ವಾಮಿಗಳು

೧೩. ” ಅದೃಶ್ಯ ಕಾಡಸಿದ್ಧರು

೧೪. ” ಸಿದ್ಧಕಾಡದೇವರು

೧೫. ” ಮುಪ್ಪಿನ ಕಾಡಸಿದ್ಧ ಸ್ವಾಮಿಗಳು

೧೬. ” ಗುರುಸಿದ್ಧ ಕಾಡದೇವರು (ಹುಲ್ಯಾಳ ಸಂಸ್ಥಾನ ಜಮಖಂಡಿ)

೧೭. ” ಗದಿಗೆಯ್ಯಸ್ವಾಮಿ ಕಾಡದೇವರು (ಪನ್ನಾಳಸಂಸ್ಥಾನ ಜಮಖಂಡಿ)

೧೮. ” ಪವಾಡಿ ಕಾಡದೇವರು (ಸಾವಗಾಂವ ಹುಕ್ಕೇರಿ)

೧೯. ” ಗುರುಸಿದ್ಧ ಕಾಡದೇವರು (ಜಮಖಂಡಿ)

೨೦. ” ಪವಾಡಿ ಕಾಡದೇವರು (ಮುರಕಿಬಾವಿ-ಬೈಲಹೊಂಗಲ)

೨೧. ಶ್ರೀ ಗುರುಸಿದ್ಧ ಕಾಡದೇವರು (ಕರಗಾವ-ತಾ.ಹುಕ್ಕೇರಿ)

೨೨. ” ಮುಪ್ಪಿನಕಾಡಸಿದ್ಧಸ್ವಾಮಿಗಳು (ಗೊರವನಕೊಳ್ಳ-ಸವದತ್ತಿ)

೨೩. ” ಸಿದ್ಧಕಾಡದೇವರು (ರಾಯರ ದೊಡ್ಡ ಹುಬ್ಬಳ್ಳಿ) (೧೧-೩-೧೮೫೦ ರಂದು ಲಿಂಗೈಕ್ಯ)

೨೪. ” ಮುಪ್ಪಿನ ಕಾಡದೇವರು (ಪಾಟಗಾಂವ ಕೊಲ್ಲಾಪುರ)(೧೮೯೭ರಲ್ಲಿ ಲಿಂಗೈಕ್ಯ)

೨೫. ” ವಿರೂಪಾಕ್ಷ ಕಾಡದೇವರು (ಗಳತಗಿ -ಚಿಕ್ಕೋಡಿ)

೨೬. ” ಮುಪ್ಪಿನ ಕಾಡದೇವರು (ಲಿಂಗನೂರು)

ಕ್ರಿ.ಶ. ೧೮೫೦ರ ತನಕ ಈ ಪರಂಪರೆಯಲ್ಲಿ ೨೩ ಜನ ಪೀಠಾಧಿಕಾರಿಗಳಾಗಿ ಹೋಗಿರುವುದು ಸ್ಪಷ್ಟ ಎಂದರೆ ಕಣೇರಿ ಮಠದ ಪರಂಪರೆ ತಲೆಮಾರಿಗೆ ೨೦ ರಂತೆ ಎಣಿಸಿದರೂ ಕ್ರಿ.ಶ. ೧೪೦೦-೧೪೫೦ರ ವರೆಗೆ ಹಿಂದೆ ಸರಿಯುತ್ತದೆ. ಅಂದರೆ ಈ ಮಠ ಪರಂಪರೆ ೧೪ ಅಥವಾ ೧೫ನೆಯ ಶತಮಾನದಿಂದ ಬಂದುದೆಂದು ಭಾವಿಸು ವಲ್ಲಿ ತಪ್ಪೇನು ಕಾಣದು.

ಇಷ್ಟಲಿಂಗ ಶತಕದ ಕರ್ತೃ ಕಾಡಸಿದ್ಧನು ಇಷ್ಟು ಪ್ರಾಚೀನನಾಗಿರಲಾರನೆಂಬ ಅಂಶ ಸ್ಷಷ್ಟವಿದೆ. ಈ ಮಠ ಪರಂಪರೆಯ ಯಡೂರಿನಲ್ಲಿ ಶ್ರೀ ಕಾಡಸಿದ್ಧೇಶ್ವರ ವಚನಗಳನ್ನು ಈಗಲೂ ಖಡ್ಗದಂತೆ ಹೇಳುವ ಪರಿಪಾಠವಿದೆ. ಕೊಣ್ಣೂರು ಮಠದಲ್ಲಿಯೂ ಈ ವಚನಗಳು ಈ ಸಂಪ್ರದಾಯದ ಸ್ವಾಮಿಗಳಿಂದಲೇ ರಚಿತವಾದವುಗಳೆಂಬ ನಂಬಿಕೆಯಿದೆ. ಆದರೆ ವಚನಕಾರ ಕಾಡಸಿದ್ಧೇಶ್ವರರು ತಮ್ಮ ಪ್ರಾರಂಭದ ವಚನದಲ್ಲಿ ಹೇಳಿರುವ ಗುರು ಪರಂಪರೆ ಬೇರೊಂದು ತೆರನಾಗಿದೆ. ಆ ವಚನ ತಕ್ಕಷ್ಟು ದೀರ್ಘವಾಗಿದ್ದು ಆದಿಯಿಲ್ಲಿ ”ಕಾಡಸಿದ್ಧೇಶ್ವರ ಸ್ವಾಮಿಗಳು ನಿರೂಪಿಸಿದ ವೀರಶೈವ ಷಟ್ ಸ್ಥಲದೊಳಗೆ ಕುಲಕೊಬ್ಬ ಗಣಂಗಳು ಕಾಯಕವ ಮಾಡಿ ಆಚರಿಸಿ ನಿರ್ವಯಲಾದ ವಚನವು” ಎಂಬ ವಾಕ್ಯವಿದೆ. ತರುವಾಯ ‘ಪ್ರಥಮದಲ್ಲಿ ಗುರುಸ್ತೋತ್ರ’ – ಎಂದು ಹೆಳಿ ಮೊದಲ ವಚನ ಪ್ರಾರಂಭವಾಗುತ್ತದೆ !

”ನಿರವಯನೆಂಬ ಗಣೇಶ್ವರನ ಶಿಷ್ಯ ನಿರಾಕುಳನೆಂಬ ಗಣೇಶ್ವರ” ಎಂದು ಮುಂತಾಗಿ ೧೦ ಕಾಲ್ಪನಿಕ ಹೆಸರುಗಳು ಬಂದಿವೆ. ಆಮೇಲೆ ”………. ಸರ್ವಾಧಾರ ಸದಾಶಿವ ಸ್ವರೂಪರಾದಂಥಾ ಆದಿನಾಥೇಶ್ವರರು” > ಶಿಷ್ಯ ಸತ್ಯೇಶ್ವರ ದೇವರು > ಶಿಷ್ಯ ಘಟಿಯಂತ್ರ ದೇವರು > ಶಿಷ್ಯ ಭೃಕುಟೇಶ್ವರ ದೇವರು > ಶಿಷ್ಯ ವಿಶ್ವೇಶ್ವರ ದೇವರು > ಶಿಷ್ಯ ಮುತ್ತೇಶ್ವರ ದೇವರು > ಶಿಷ್ಯ ಬ್ರಹ್ಮೇಸ್ವರ ದೇವರು > ಶಿವದೇವಯ್ಯನವರು > ಶಿವಜ್ಞಾನೇಶ್ವರರು > ಓಂಕಾರ ದೇವರು > ಸೋಮಲಿಂಗ ದೇವರು > ಇವರ ಶಿಷ್ಯ ಸಂಗಮೇಶ್ವರ ದೇವರು. ಈ ಸಂಗಮೇಶ್ವರ ದೇವರ ಕರಕಮಲದಲ್ಲಿ ಉತ್ಪತ್ತಿ ಯಾದವರು ಶ್ರೀ ಕಾಡಸಿದ್ಧೇಶ್ವರರು ತಾವೆಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.

ಇಲ್ಲಿನ ಯಾವ ಹೆಸರುಗಳೂ ಕಣೇರಿ ಪರಂಪರೆಯಲ್ಲಿ ಇಲ್ಲದಿರುವುದು ಗಮನಿಸಬೇಕಾದ ಅಂಶ. ಇಲ್ಲಿನ ಸಂಗಮೇರ್ಶವರ ದೇವರಲ್ಲದೆ ಪ್ರಸ್ತುತ ವಚನ ಸಂಗ್ರಹದ ಪುಟ-೯೪ ರಲ್ಲಿ ”ಶ್ರೀ ಗುರು ಚನ್ನಮಲ್ಲಯ್ಯ” ಎಂಬವರ ಉಲ್ಲೇಖವೂ ಇದೆ. ಇದರಿಂದ ಇಷ್ಟಲಿಂಗ ಶತಕದ ಪರ್ವತೇಶ್ವರನ ಶಿಷ್ಯ ಕಾಡಸಿದ್ಧ ಬೇರೆ : ಈ ವಚನ ಕಾರ ಕಾಡಸಿದ್ಧರು ಬೇರೆ ಎಂಬ ಅಂಶ ಸ್ಪಷ್ಟವೇ ಇದೆ. ಸದ್ಯ ” ಶ್ರೀ ಗುರು ಚನ್ನ ಮಲ್ಲಯ್ಯ” ಎಂಬುದನ್ನು ನಾವು ಅಲಕ್ಷಿಸಿದರೂ ಕಣೇರಿ ಮಠದ ಪರಂಪರೆ, ವಚನ ಕಾರ ಕಾಡಸಿದ್ಧರು ಮತ್ತು ಇಷ್ಟಲಿಂಗ ಶತಕದ ಕರ್ತೃ ಕಾಡಸಿದ್ಧರು ಹೇಳಿಕೊಂಡಿರುವ ಪರಂಪರೆಗಳು ತೀವ್ರ ವ್ಯತ್ಯಾಸ ತೋರುತ್ತವೆಂಬುದನ್ನು ಯಾರೂ ಮನಗಾಣ ಬಹುದು.

ಇನ್ನು ವಚನಕಾರ ಶ್ರೀ ಕಾಡಸಿದ್ಧೇಶ್ವರರು ಬಳಸಿದ ಭಾಷೆ ೧೭ ನೆಯ ಶತಮಾನಕ್ಕಿಂತ ಹಿಂದಿನದಲ್ಲವೆಂಬುದು ಎಂದು ತೋರುತ್ತದೆ.

ಹೊನ್ನು ತೆತ್ತಲ್ಲದೆ ಹೊಲ ಮಾಡದೆ ಬಿಟ್ಟಿಬೇಗಾರಿ ಇಲ್ಲದೆ
ಊರೊಳಗಿದ್ದೆ | ಸರಕಾರಕ್ಕೆ ರುಜು ಇಲ್ಲದೆ ರೈತನಾಗಿ |
ಅದೆಂತೆಂದೊಡೆ ಇಂತಲ್ಲದೆ ಪಾಚ್ಛಾ ರೈತನಲ್ಲ; ಅವನಕ್ರ |
ಕಾಡ (ಡಿ) ನೊಳಗಾದ ಶಂಕರಪ್ರಿಯ ಚನ್ನಕದಂಬ ಲಿಂಗ ನಿರ್ಮಾಯ ಪ್ರಭುವೆ |

ಇಲ್ಲಿನ ಸರಕಾರ, ರುಜು, ರೈತ, ಪಾಚ್ಛಾ (<ಬಾದಶಹ) ಎಲ್ಲವೂ ಉರ್ದು ಭಾರ್ಷೆಯಿಂದ ಬಂದವುಗಳು. ಇದೇ ರೀತಿ ಬುರುಬು, ಕೊತ್ತಲ, ದರವಾಜ (ಪು-೯೧) ಕಾರಭಾರಿಗಳು, ಕುಂಪಣಿ (ಇಂ-?< ಕಂಪನಿ) ಕುಲ್ಪಿ (ಪು-೯೪) ಮುಂತಾದವನ್ನು ಧಾರಾಳವಾಗಿ ಬಳಸಲಾಗಿದೆ. ಅಲ್ಲದೆ ವಲ್ಲೀ ಪೀರಣ್ಣಗಳ ವಚನ ಎಂದು ಹೇಳಿ ಕೊಟ್ಟಿರುವ ಮೂರು ವಚನಗಳು ಉರ್ದು ಭಾಷೆಯಲ್ಲಿವೆ. (P-೩೯೭) ಇದರಿಂದ ವಚನಕರ ಕಾಡಸಿದ್ಧೇಶ್ವರರು ಬಸವಣ್ಣನವರ ಸಮಕಾಲೀನರಾಗಿರಲಾರರು; ಬಹುಶಃ ಪೇಶ್ವೆಗಳ ಕಾಲದಲ್ಲಿ ಎಂದರೆ ಕ್ರಿ.ಶ. ೧೮ ನೆಯ ಶತಮಾನದಲ್ಲಿ ಇದ್ದರೆಂದು ತಿಳಿಯಲು ಅಡ್ಡಿಯಿಲ್ಲ.

ಮಠದ ಪ್ರಾಚೀನತೆಗೆ ಸಂಬಂಧಿಸಿದಂತೆ ಇನ್ನೂ ಒಂದೆರಡು ಅಂಶಗಳನ್ನು ಇಲ್ಲಿ ನೋಡಬಹುದು. ಕೊಕಟನೂರಿನ ದೇಸಾಯಿ ಗದಿಗೆಪ್ಪಗೌಡರ ತಂದೆ ಮತ್ತು ಮಕ್ಕಳ ಹೆಸರುಗಳು ಕಾಡಗೌಡ ಎಂದಿವೆ. (ಕಾ.ಸಿ.ವ.ಪು. ೨೩) ಇವನ ತರುವಾಯದಲ್ಲಿಯೂ ಸಿದ್ಧಕಾಡಗೌಡ, ಅದೃಶ್ಯ ಕಾಡಗೌಡ ಇತ್ಯಾದಿ ಹೆಸರುಗಳು ಇವರ ವಂಶದಲ್ಲಿ ಇದ್ದಂತೆ ತಿಳಿದುಬರುತ್ತದೆ. ಗದಿಗೆಪ್ಪಗೌಡನ ಕಾಲ ಕ್ರಿ. ಶ. ೧೩೦೨ ಎಂದು ಹೇಳಲಾಗಿದೆ. ಇದನ್ನು ಎಷ್ಟರ ಮಟ್ಟಿಗೆ ನಂಬಬೇಕೋ ತಿಳಿಯದು. ಈ ಮನೆತನದಲ್ಲಿ ಮುಂದೆ ಬಂದ ವಿಟಗೌಡನು ಕ್ರಿ. ಶ. ೧೩೬೫ ರಿಂದ ೧೫೯೦ ರ ವರೆಗೆ ಆಡಳಿತ ನಡೆಸಿದನೆಂದು ತಿಳಿದು ಬರುತ್ತದೆ. ಈ ಮನೆತನದ ಇತಿಹಾಸ ವಿಜಯನಗರ ಮತ್ತು ವಿಜಾಪುರದ ಆದಿಲಶಾಹಿ ಮನೆತನಗಳ ಪಾರ್ಶ್ವ ವರ್ತಿಯಾಗಿ ಬರುತ್ತಿರುವುದರಿಂದ ಶ್ರೀ ಕಾಡಸಿದ್ಧೇಶ್ವರ ಮಠದ ಮೂಲ ಕರ್ತೃಗಳು ಈ ಮೊದಲೇ ಹೇಳಿದಂತೆ ಕ್ರಿ. ಶ. ೧೪ ನೆಯ ಶತಮಾನದ ಸ್ವಲ್ಪ ಹಿಂದು ಮುಂದಿನ ಕಾಲದಲ್ಲಿ ಆಗಿಹೋದರೆಂದು ನಂಬಬಹುದು.

ಈ ಮಠಕ್ಕೆ ಕೊಲ್ಲಾಪುರದ ಛತ್ರಪತಿಗಳು, ಸಾಂಗಲಿಯ ಪಟವರ್ಧನರು, ಔರಂಗಜೇಬ, ಕೊಕಟನೂರು, ಕೊಣ್ಣೂರು ಹಾಗೂ ಶಿರಸಂಗಿ ಮತ್ತು ನವಲ ಗುಂದದ ದೇಸಾಯರು ಮೊದಲಾದ ರಾಜಮಹಾರಾಜರು, ದೇಸಾಯರು ಗೌರವ ಸಲ್ಲಿಸುತ್ತ ಬಂದಿದ್ದಾರೆ. (ಮೂಲ ಕರ್ತೃಗಳಾದ) ಶ್ರೀ ಕಾಡಸಿದ್ಧೇಶ್ವರರು ಅಥಣಿ ತಾಲೂಕಿನ ಶೇಗುಣಸಿ ಗೌಡರ ಮನೆತನದವರೆಂಬ ನಂಬಿಕೆಯೂ ಇದೆ.

ಇಷ್ಟಲಿಂಗ ಶತಕ ಮುದ್ರಣಗೊಂಡಂತೆ ಕಾಣಲಿಲ್ಲ. ‘ವಚನಗಳು’ ಕ್ರಿ. ಶ. ೧೯೩೭ ರಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ಮುದ್ರಿಸಲ್ಪಟ್ಟಿವೆ. ಇವು ಹಲವು ದೃಷ್ಟಿಯಿಂದ ಗಮನಾರ್ಹವಾಗಿವೆ. ಬಸವಾದಿ ಪ್ರಮಥರ ಜತೆಗೆ ಹಲವಾರು ಜನ ನವೀನರ ಹೆಸರುಗಳು ಇದರಲ್ಲಿ ಬಂದಿವೆ. ವೀರಶೈವದ ಷಟ್‌ಸ್ಥಲ ಕಟ್ಟಿಗನು ಸರಿಸಿ ಈ ವಚನಗಳು ಜೋಡಿಸಲ್ಪಟ್ಟಿದ್ದು, ಷಟ್‌ಸ್ಥಲ, ಪಂಚಾಚಾರ, ಅಷ್ಟಾವರಣಗಳ ಪ್ರತಿಪಾದನೆ ಇವುಗಳಲ್ಲಿದೆ. ಕಾಯಕತತ್ವ ಮತ್ತು ಪಂಚಾಚಾರಗಳ ಪ್ರಸಕ್ತಿ ವಿಶೇಷವಾಗಿದೆ. ಹೆಚ್ಚಿನ ಸಂಖ್ಯೆಯ ವಚನಗಳು ಬೆಡಗಿನ ವಚನಗಳಾಗಿರುವ ದೊಂದು ವಿಶೇಷ. ಯಡೂರಿನ ಶ್ರೀ ವೀರಭದ್ರದೇವಸ್ಥಾನದಲ್ಲಿ ಇವುಗಳನ್ನು ಒಡಬುಗಳಂತೆ ಬಳಸುವುದನ್ನು ಕುರಿತು ಈಗಾಗಲೇ ಹೇಳಿದ್ದೇವೆ.

ಬೆಳಗಾವಿ ಜಿಲ್ಲೆಯಲ್ಲಿ ಈಗ ಅಸ್ಥಿತ್ವದಲ್ಲಿದ್ದು ಹೆಚ್ಚು ಪ್ರಮಾಣದಲ್ಲಿ ಜನಾದರಣೆಗೆ ಒಳಗಾದ ಮಠಗಳು ಕ್ರಿ. ಶ. ಸು. ೧೬ ನೆಯ ಶತಮಾನದ ಅಂತ್ಯ ಅಥವಾ ೧೭ನೆಯ ಶತಮಾನದ ಆದಿಯಲ್ಲಿ ಹುಟ್ಟಿಕೊಂಡಂತೆ ಕಂಡುಬರುತ್ತದೆ. ಇವುಗಳಲ್ಲಿ ಅರಭಾವಿಯ ದುರದುಂಡಿ ಮಠವು ಬಹು ಜನಾದರಣೀಯವಾಗಿ ಹಲವಾರು ಶಾಖೆಗಳನ್ನು ಹೊಂದಿದೆ.

ದುರದುಂಡಿ ಮಠ ಅರಭಾವಿ :

ಜನಶ್ರದ್ಧೆ ಮತ್ತು ಶಾಖಾಮಠಗಳ ಪ್ರದೇಶ ವಿಸ್ತಾರವನ್ನು ಗಮನಿಸಿದರೆ ಈ ಮಠಪರಂಪರೆ ತುಂಬ ಮಹತ್ವದ್ದು ಎಂಬಲ್ಲಿ ಎರಡು ಮಾತಿಲ್ಲ. ಗೋಕಾಕ ತಾಲೂಕಿನಲ್ಲಷ್ಟೆಯಲ್ಲದೆ ಹುಕ್ಕೇರಿ, ಚಿಕ್ಕೋಡಿ, ಬೆಳಗಾವಿ, ಬೈಲಹೊಂಗಲ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳಲ್ಲಿ ಮತ್ತು ಕೆಲಮಟ್ಟಿಗೆ ಈ ಜಿಲ್ಲೆಯಿಂದ ಹೊರಗಡೆ ಕೂಡ ಇದರ ಪ್ರಭಾವ ಕಂಡುಬರುತ್ತದೆ. ಈಗ ಗಮನಕ್ಕೆ ಬಂದಿರುವಂತೆ ನಿಡಸೋಸಿ, ಸಂಕೇಶ್ವರ, ಬೋರಗಲ್, ಕಮಟನೂರ, ಕೋಚರಿ (ಹುಕ್ಕೇರಿ ತಾ), ಬೆಳವಡಿ, ತಿಗಡೊಳ್ಳಿ, ಸಂಪಗಾವ, ಕಲ್ಲೂರ, (ಬೈಲಹೊಂಗಲ ತಾ) ಮುರಗೋಡ, ಯರಗಟ್ಟಿ, ಗೋರಾಬಾಳ, (ಸವದತ್ತಿ ತಾ) ಕಟಕೋಳ, (ರಾಮದುರ್ಗ ತಾ) ಬೆಳಗಾವ ತಾಲೂಕಿನ ಕಡೋಲಿ, ತಾರೀಹಾಳ, ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ಮುಂತಾದ ಊರುಗಳಲ್ಲಿ ಶ್ರೀ ದುರದುಂಡೇಶ್ವರರ ಮಠಗಳು ಅಥವಾ ಗುಡಿಗಳು ನೆಲೆನಿಂತಿರುವುದು ಕಂಡುಬರುತ್ತದೆ. ವಿಜಾಪುರ ಜಿಲ್ಲೆಯಲ್ಲಿಯೂ ಕೆಲವೆಡೆ ಮಠಗಳಿವೆ. (ಸರ್ವೆ ನಡೆಸಿದರೆ ಇನ್ನೂ ಹಲವಡೆ ಶ್ರೀ ಮಠದ ಶಾಖೆಗಳು ಕಂಡು ಬರುಬಹುದು.)

ಅರಭಾವಿ ಸಮೀಪದ ದುರದುಂಡಿಯಲ್ಲಿ ಈ ಮಠದ ಮೂಲ ಕರ್ತೃಗಳಾದ ಶ್ರೀಮನ್‌ ನಿರಂಜನ ಜಗದ್ಗುರು ಶಿವಲಿಂಗೇಶ್ವರರು ನೆಲೆನಿಂತು ಮೊದಲು ಕಾಡು ಪ್ರದೇಶವಾಗಿದ್ದ ನೆಲವೆನ್ನು ಪುಣ್ಯದ ಬೀಡಾಗಿಸಿದರು.

ಮೂಲ ಕರ್ತೃಗಳಾದ ಶ್ರೀ ಶಿವಲಿಂಗೇಶ್ವರರ ಜೀವನದ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಇವರು ಪ್ರಸಿದ್ಧಯೋಗಿವರರಾಗಿದ್ದು ದೇಶದ ನಾನಾಭಾಗಗಳಲ್ಲಿ ಸಂಚರಿಸುತ್ತ ಬಂದು ಅರುಣಾಚಲದ ಕಂಬಳೇಶ್ವರ ಲಿಂಗದಲ್ಲಿ ಅನುಷ್ಠಾನ ಮಾಡಿ ಕೊಂಡಿದ್ದರು. ತರುವಾಯ ಜತ್ತ ಪ್ರದೇಶದ ಡಫಳಾಪುರಕ್ಕೆ ಬಂದು ಅಲ್ಲಿನ ಶ್ರೀ ಗುರುಲಿಂಗೇಶ್ವರರ ದರ್ಶನ ಪಡೆದರು. ಅವರ ಆಜ್ಞಾನುಸಾರ ದುರದುಂಡಿ ಪ್ರದೇಶಕ್ಕೆ ಬಂದು ನೆಲೆಸಿದರು ಎಂದರೆ ೧೮ ನೆಯ ಶತಮಾನದ ಮಧ್ಯಭಾಗದಷ್ಟೊತ್ತಿಗೆ ಶ್ರೀ ಶಿವಲಿಂಗೇಶ್ವರರು ದುರದುಂಡಿಗೆ ಬಂದು ಶ್ರೀ ದುರದುಂಡೀಶರೆನಿಸಿದರು. ಇವರ ಪರಂಪರೆಯಲ್ಲಿ ಎರಡನೆಯವರಾಗಿ ಹಣಬರಹಟ್ಟಿಯಲ್ಲಿದ್ದ ಪಟ್ಟದದೇವರ ಮನೆತನದವರೆಂದು ಕಾಣುತ್ತದೆ. ಈಗಿರುವ ಕರ್ತೃಗದ್ದಿಗೆ ಮತ್ತು ಮಠದ ಕಟ್ಟಡವನ್ನು ಇವರೇ ಕಟ್ಟಿಸಿದರು. ಈ ಪರಂಪರೆ ಯಲ್ಲಿ ಶ್ರೀ ನಿ.ಪ್ರ.ಸ್ವ. ಶಿವಲಿಂಗೇಶ್ವರರು ಎಂಟನೆಯವರು. ಒಂಬತ್ತನೆಯವರೇ ಶ್ರೀ. ನಿ.ಪ್ರ.ಸ್ವ. ಮಹಾಂತ ಶಿವಯೋಗಿಗಳು. ಇವರು ಮುರಗೋಡಿಗೆ ಬಂದು ಅಲ್ಲಿಯೇ ಕೊನೆತನಕ ನೆಲೆಸಿದರು. ಶತಯುಷಿಗಳಾದ ಶ್ರೀ ಮಹಾಂತ ಶಿವಯೋಗಿ ಗಳು ಅರ್ಧಶತಮಾನ ಕಾಲ ಈ ಭಾಗದ ಆಧ್ಯಾತ್ಮ ಜ್ಯೋತಿಯಾಗಿ ಬೆಳಗಿದರು.

ಶ್ರೀ ದುರದುಂಡಿ-ಮಠದಿಂದ ನಡೆಯುತ್ತ ಬಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳಿಗೆ ಲೆಕ್ಕವಿಲ್ಲ. ಪುಣ್ಯಾರಣ್ಯವೆಂಬ ಮಾಸಿಕ ಮಠದಿಂದ ಪ್ರಕಟವಾಗುತ್ತಿದೆ. ಮುರಗೋಡ ಶಾಖೆಯಿಂದ ಜ್ಯೋತಿ ಬೆಳಗುತಿದೆ. ಮಹಾಂತ ಶಿವಯೋಗಿಗಳ ಚರಿತಾಮೃತ, ಮಹಾಂತ ಮಹಿಮೆ, ಪ್ರಸಾದವಾಣಿ, ಬಸವೇಶ್ವರರ ವಚನಗಳು, ಭಕ್ತಿಯ ಬೆಳಕು, ಗೀತಾ ಕುಸುಮಮಾಲೆ ಮುಂತಾದ ೧೫ ರಷ್ಟು ಗ್ರಂಥಗಳು ಪ್ರಕಟವಾಗಿವೆ. ಅರಭಾವಿ ಮತ್ತು ಮುರಗೋಡಗಳಲ್ಲಿ ಪ್ರೌಡಶಾಲೆ, ಜ್ಯು. ಕಾಲೇಜು, ಸಂಸ್ಕೃತ-ಜ್ಯೋತಿಷ್ಯ ಪಾಠ ಶಾಲೆ, ಉಚಿತ ಪ್ರಸಾದನಿಲಯ ಮುಂತಾದವು ನಡೆಸಲ್ಪಡುತ್ತಿವೆ. ಇವೆಲ್ಲಕ್ಕೆ ಕಳಸವಿಟ್ಟಂತೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶ್ರೀ ಮಹಾಂತ ಶಿವಯೋಗಿಗಳ ಹೆಸರಿನಲ್ಲಿ ಶ್ರೀ ಬಸವೇಶ್ವರ ಅಧ್ಯಯನ ಪೀಠ ಸ್ಥಾಪಿತವಾಗಿ ವೀರಶೈವದ ಅಧ್ಯಯನಕ್ಕೆ ಒಂದು ದೊಡ್ಡ ಅವಕಾಶ ಕಲ್ಪಿಸಿದಂತಾಗಿದೆ.

ನಿಡಸೋಸಿಮಠ :

ಇದು ಅರಭಾವಿಯ ದುರದುಂಡೀಶ್ವರ ಮಠದ ಶಾಖೆಗಳಲ್ಲಿ ತುಂಬ ಪ್ರಸಿದ್ಧವಾದುದು. ಮೂಲ ಕರ್ತೃ ಶ್ರೀ ಆದಿ ನಿಜಲಿಂಗೇಶ್ವರರು, ಸಾಕ್ಷಾತ್‌ ಶ್ರೀ ದುರ ದುಂಡೀಶರ ಶಿಷ್ಯರು. ಇವರ ಭಕ್ತಿಗೆ ಮೆಚ್ಚಿ ಶ್ರೀ ದುರದುಂಡೀಶ್ವರರು ದಿನಾಂಕ ೨೨-೮-೧೭೬೫ ರಂದು ಭಸ್ಮಘಟ್ಟಿ ಮತ್ತು ಪಂಚಪಾತ್ರೆಗಳ ರೂಪದಲ್ಲಿ ನಿಡಸೋಸಿಯಲ್ಲಿ ಪ್ರಕಟವಾದರು. ಸ್ಥಳೀಯವಾದ ಐತಿಹ್ಯ ಮತ್ತು ವದಂತಿಗಳು ಈ ವಿಷಯವನ್ನು ಸಂಶಯಕ್ಕೆಡೆಯಲ್ಲದಂತೆ ಪ್ರತಿ ಪಾದಿಸುತ್ತವೆ.

ಇದರಿಂದ ಶ್ರೀ ಆದಿನಿಜಲಿಂಗೇಶ್ವರರು ೧೮ ನೆಯ ಶತಮಾನದ ಮಧ್ಯಾವಧಿಯಲ್ಲಿದ್ದರೆಂದು ತಿಳಿಯಬಹುದಾಗಿದೆ. ಇವರು ನಿಡಸೋಸಿ ಗ್ರಾಮದವರೇ ಆದ ಹೂಗಾರ ಮನೆತನ ಶಿವಲಿಂಗಯ್ಯ ಮತ್ತು ಲಿಂಗಮ್ಮ ಎಂಬ ದಂಪತಿಗಳ ಪುತ್ರರು. ಸಮೀಪದ ಕರೋಶಿ ಗ್ರಾಮದ ಬಸವಯ್ಯ ಮತ್ತು ನೀಲಮ್ಮ ಎಂಬ ದಂಪತಿಗಳ ಮಗಳು ಬಾಳಮ್ಮ ಎಂಬವರನ್ನು ಲಗ್ನವಾಗಿದ್ದರೂ ಪರಮ ವಿರಾಗಿಗಳಾಗಿ ಶರಣ ಜೀವನವನ್ನು ಬಾಳಿಬದುಕಿದರು. ಅಸಂಖ್ಯ ಭಕ್ತರನ್ನು ತಮ್ಮ ಅನುಗ್ರಹ ಶಕ್ತಿಯಿಂದ ಉದ್ಧರಿಸಿದರು. ಅವರ ಭಕ್ತ ಸಮುದಾಯದಲ್ಲಿ ವೀರಶೈವರಂತೆ ವೀರಶೈವೇತರರೂ ಇದ್ದಾರೆ. ಕೊಲ್ಲಾಪುರದ ಛತ್ರಪತಿಗಳ ಮನೆತನದ ರಾಜರು, ಸಾಂಗಲಿಯ ರಾಜ ಮನೆತನದವರು ಶ್ರೀ ಮಠಕ್ಕೆ ಭಯಭಕ್ತಿಯಿಂದ ನಡೆಯುತ್ತ ಬಂದಿದ್ದಾರೆ. ಶ್ರೀಮಠದ ಆಶ್ರಯದಲ್ಲಿ ಪ್ರಾರಂಭವಾದ ಸಂಸ್ಕೃತ ಪಾಠಶಾಲೆ ಇಂದಿಗೂ ನಡೆಯುತ್ತಿದೆ.

ಪ್ರಥಮ ನಿಜಲಿಂಗೇಶ್ವರರ ತರುವಾಯ ಅಧಿಕಾರಿಗಳಾಗಿ ಶ್ರೀಪ್ರಥಮ ಶಿವಲಿಂಗೇಶ್ವರರು ಬಂದರು. ಇವರು ಕೂಡ ತಮ್ಮ ಗುರುಗಳಂತೆ ತಪಃ ಪ್ರಭಾವದಿಂದಲೂ ಸತ್ವಾತಿಶಯದಿಂದಲೂ ಖ್ಯಾತನಾಮರಾದರು. ಕೊಲ್ಲಾಪುರ ಜಿಲ್ಲೆಯ ಸಾಮಾನಗಡದ ನೀಲಕಂಠ ಮನೆತನದ ಶಿವಲಿಂಗ ಮತ್ತು ಪಾರ್ವತಿ ದಂಪತಿಗಳ ಉದರದಲ್ಲಿ ಬಂದ ವರಪುತ್ರರು. ಶ್ರೀ ಆದಿನಿಜಲಿಂಗೇಶ್ವರರ ಆಶೀರ್ವಾದದಿಂದಲೇ ಜನಿಸಿದವರು. ಶ್ರೀ ನಿಜಲಿಂಗೇಶ್ವರರು ಇವರಿಗೆ ಮಾಹೇಶ್ವರ ದೀಕ್ಷೆಯಿತ್ತು. ಶಾ. ಶ. ೧೭೪೮ ಫಾಲ್ಗುಣ ಶು. ೯ ಗುರುವಾರದಂದು (ಕ್ರಿ.ಶ. ೧೮೨೬) ಶ್ರೀ ಶಿವಲಿಂಗೇಶ್ವರ ಎಂಬ ನಾಮದಿಂದ ಪಟ್ಟಗಟ್ಟಿದರು. ಇವರು ಕೂಡ ಸಕಲ ಮತ ಜಾತಿಗಳವರಿಗೆ ಆದರಣೀಯರಾಗಿ ತಮ್ಮ ಲೀಲಾಮಯ ಜೀವನದಲ್ಲಿ ಒದಗಿಬಂದ ಹಲವಾರು ಜನರನ್ನು ಉದ್ಧರಿಸಿದ್ದಾರೆ. ಮುತನಾಳ ಗ್ರಾಮದ ಭೀಮರಾವ ದೇಶಪಾಂಡೆ, ಹಲಕರಣಿಯ ಉದಾಜಿರಾವ ಚವ್ಹಾಣ, ಅಕೂರ್ಡೆಯ (ಕೊಲ್ಲಾಪುರ ಜಿಲ್ಲೆ) ನರಸಿಂಹಭಟ್ಟ, ಹರಗಾಪುರದ ಸಿದ್ಧನಗೌಡ, ಕೊಲ್ಲಾಪುರದ ೪ ನೆಯ ಛತ್ರಪತಿ ಶಿವಾಜಿ, ಸಾಂಗಲಿಯ ಚಿಂತಾಮಣರಾವ ಅಪ್ಪಾಸಾಹೇಬ ಪಟವರ್ಧನ ಮೊದಲಾದವರು ಅಂಥವರಲ್ಲಿ ಕೆಲವರು. ಇವರ ಸಿದ್ಧಿ ಸಾಧನೆಗಳು ಅಮೋಘವಾಗಿದ್ದವೆಂದೂ ಆ ಕಾರಣ ಹಲವಾರು ಸ್ಥಳಗಳಲ್ಲಿ ಭೂತ, ಪ್ರೇತ, ಶಾಕಿನಿ-ಡಾಕಿಣಿ ಮೊದಲಾದವರನ್ನು ನಿಗ್ರಹಿಸಿದರೆಂದೂ ವದಂತಿಗಳಿವೆ : ಶ್ರೀಮಠವನ್ನು ಭವ್ಯವಾಗಿ ನಿರ್ಮಿಸಿದವರು ಶ್ರೀ ಆದಿಶಿವಲಿಂಗೇಶ್ವರರೇ. ಮಠದ ಆವರಣದಲ್ಲಿ ಗಣಪತಿ, ಹನುಮಂತ, ಶಕ್ತಿ ಮುಂತಾದ ದೇವತಾ ಮೂರ್ತಿಗಳನ್ನು ಸ್ಥಾಪಿಸಿರುವುದು ಅವರ ಮನೋ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ.

ತರುವಾಯದಲ್ಲಿ ಇಬ್ಬರು ಶ್ರೀ ನಿಜಲಿಂಗೇಶ್ವರರು ಹಾಗೂ ಇಬ್ಬರು ಶ್ರೀ ಶಿವ ಲಿಂಗೇಶ್ವರರು ಪೀಠಾಧಿಕಾರಿಗಳಾಗಿ ಶ್ರೀ ಮಠದ ಅಭಿವೃದ್ಧಿ ಮಾಡಿದ್ದಾರೆ. ಶ್ರೀ. ನಿ. ಪ್ರ. ಸ್ವ. ಚತುರ್ಥ ನಿಜಲಿಂಗೇಶ್ವರರು ಆಶೀರ್ವದಿಸಿದ ಶ್ರೀ ದುರದುಂಡೀಶ್ವರ ವಿದ್ಯಾವರ್ದಕ ಸಂಘವು ಕ್ರಿ. ಶ. ೧೯೪೬ ರಲ್ಲಿ ಪ್ರಾರಂಭಗೊಂಡು ಇದರ ವತಿಯಿಂದ ಈಗ ಹಲವಾರು ಶೈಕ್ಷಣಿಕ ಸಂಸ್ಥೆಗಳು ನಡೆಯುತ್ತಿವೆ. ಈಗ ಸಂಕೇಶ್ವರದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ನಿಡಸೋಸಿಯ ಪಾಲಿಟೆಕ್ನಿಕ್‌ ಮತ್ತು ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಿರುವ ಪ್ರೌಢಶಾಲೆಗಳು ಮೊದಲಾದವು ಶ್ರೀಮಠದ ಕೃಪಾಶೀರ್ವಾದದಿಂದ ಈ ಭಾಗದಲ್ಲಿ ವಿದ್ಯಾಜ್ಯೋತಿಯನ್ನು ಬೆಳಗುತ್ತಲಿವೆ.

ಶ್ರೀ ನಿ. ಪ್ರ. ಸ್ವ. ಪಂಚಮ ನಿಜಲಿಂಗೇಶ್ವರರ ಕಾಲದಲ್ಲಿ ಶ್ರೀ ಮಠದ ಜೀರ್ಣೋದ್ಧಾರ, ಮಠದ ಹೊಲಗಳ ಅಭಿವೃದ್ಧಿ, ಬೆಳ್ಳಿಯ ಸಿಂಹಾಸನ ಮತ್ತು ಪಲ್ಲಕ್ಕಿಗಳ ನಿರ್ಮಾಣ ಮೊದಲಾದವು ಸಿದ್ಧಗೊಂಡು ಮಠದ ಸಾಂಸ್ಕೃತಿಕ ಪರಂಪರೆಗೆ ವಿಶೇಷ ಶೋಭೆ ತಂದಿವೆ. ಹಿಂದೂ ಧರ್ಮದ ಎಲ್ಲ ಹಬ್ಬಗಳನ್ನು ಆಚರಿಸುವದು ಈ ಮಠದ ಪರಂಪರೆಯಲ್ಲಿ ನಡೆದು ಬಂದಿದೆ. ಗುಳ್ಳವ್ವನ ಹಬ್ಬ ಕೂಡ ಇದಕ್ಕೆ ಹೊರತಾಗಿಲ್ಲ. ಮಠದ ಗುರು ಪರಂಪರೆ ಮುಂದಿನಂತಿದೆ.

೧. ಶ್ರೀ ನಿ. ಪ್ರ. ಸ್ವ. ಪ್ರಥಮ ನಿಜಲಿಂಗೇಶ್ವರರು (ಕಿ. ಶ. ಸು. ೧೭೪೮ ರಿಂದ ೧೮೨೬)

೨. ಶ್ರೀ ನಿ. ಪ್ರ. ಸ್ವ. ಪ್ರಥಮ ನಿಜಲಿಂಗೇಶ್ವರರು (೧೮೨೬-೧೮೫೭)

೩. ಶ್ರೀ ನಿ. ಪ್ರ. ಸ್ವ. ದ್ವಿತೀಯ ನಿಜಲಿಂಗೇಶ್ವರರು (೧೮೫೭-೧೮೭೦)

೪. ಶ್ರೀ ನಿ. ಪ್ರ. ಸ್ವ. ದ್ವಿತೀಯ ಶಿವಲಿಂಗೇಶ್ವರರು (೧೮೭೦-೧೮೯೦)

೫. ಶ್ರೀ ನಿ. ಪ್ರ. ಸ್ವ. ತೃತೀಯ ನಿಜಲಿಂಗೇಶ್ವರರು (೧೮೯೦-೧೯೦೭)

೬. ಶ್ರೀ ನಿ. ಪ್ರ. ಸ್ವ. ತೃತೀಯ ನಿಜಲಿಂಗೇಶ್ವರರು (೧೯೦೭-೧೯೧೬)

೭. ಶ್ರೀ ನಿ. ಪ್ರ. ಸ್ವ. ಚ. ನಿಜಲಿಂಗೇಶ್ವರರು (೧೯೧೬-೧೯೫೦)

೮. ಶ್ರೀ ನಿ. ಪ್ರ. ಸ್ವ. ಚ. ನಿಜಲಿಂಗೇಶ್ವರರು (೧೯೫೦-೫೯೭೧)

೯. ಶ್ರೀ ನಿ. ಪ್ರ. ಸ್ವ. ಪಂ. ನಿಜಲಿಂಗೇಶ್ವರರು (೧೯೭೧-೧೯೮೯)

೧೦. ಶ್ರೀ ನಿ. ಪ್ರ. ಸ್ವ. ಪಂ. ಶಿವಲಿಂಗೇಶ್ವರರು (ಸಧ್ಯದ ಪಟ್ಟಾಧಿಕಾರಿಗಳು)

ಕಿತ್ತೂರಿನ ಕಲ್ಮಠ :

ಬೆಳಗಾವಿ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಬಹುಪ್ರಸಿದ್ಧವಾದ ಮಠವಿದು. ಕಿತ್ತೂರ ಸಂಸ್ಥಾನಕ್ಕಿಂತಲೂ ಪೂರ್ವದ್ದೆಂದು ನಂಬಿಕೆಯಿದೆ. ಕಿತ್ತೂರ ಸಂಸ್ಥಾನದ ಆರಂಭ ಕ್ರಿ. ಶ. ೧೫೮೫. ಆದರೆ ಇಷ್ಟು ಹಿಂದಿನ ಮಠದ ಪರಂಪರೆಯ ದಾಖಲೆಗಳು ನಮಗಿಂದು ಲಭ್ಯವಿಲ್ಲ ಇದರ ಮೂಲ ಕರ್ತೃಗಳು ಶ್ರೀ. ನಿ. ಪ್ರ. ಸ್ವ. ಗುರುಸಿದ್ಧ ಸ್ವಾಮಿಗಳು, ಕ್ರಿ. ಶ. ೧೬೨೭ ರ ಸುಮಾರಿಗೆ ಇದ್ದರೆಂದು ನಂಬಲಾಗಿದೆ. ಈ ಪರಂಪರೆಯಲ್ಲಿ ಏಳನೆಯವರಾದ ಶ್ರೀ ಪ್ರಭುಸ್ವಾಮಿಗಳು ಕಿತ್ತೂರಿನ ದೊರೆ ಮಲ್ಲಸರ್ಜನ (ಕ್ರಿ. ಶ. ೧೭೮೨-೧೮೧೬) ಸಮಕಾಲೀನರೆಂದು ಸುಮಾರಾಗಿ ನಿರ್ಧರಿಸಬಹುದು. ಕ್ರಿ. ಶ. ೧೭೩೪ ರಿಂದ ೧೭೪೯ ರ ವರೆಗೆ ಆಳಿದ ಮಾಳವರುದ್ರ ಗೌಡ ಅಥವಾ ರುದ್ರ ಸರ್ಜ ಮತ್ತು ಅವನ ಪ್ರೇಯಸಿ ನಿರಂಜನಿಯರ ಸಮಾಧಿಗಳು ಈಗಲೂ ಕಲ್ಮಠದ ಆವರಣದಲ್ಲಿರುವುದರಿಂದ ಹದಿನೆಂಟನೆಯ ಶತಮಾನದ ಆರಂಭಕ್ಕಾಗಲೇ ಈ ಮಠ ರಾಜಗೌರವಕ್ಕೆ ಪಾತ್ರವಾಗಿ ಅವರ ಭಕ್ತಿ-ಶ್ರದ್ಧೆಗಳಿಂದ ವೈಭವಯುತವಾಗಿ ಮೆರೆಯುತ್ತಿತ್ತೆಂದು ಊಹಿಸಬಹುದು. ಶ್ರೀ ಮಠದ ಪಟ್ಟಾವಳಿಯು ಮುಂದಿನಂತಿದೆ.

೧) ಶ್ರೀ ನಿ. ಪ್ರ. ಸ್ವ. ಗುರುಸಿದ್ಧಸ್ವಾಮಿಗಳು (ಮೂಲಕರ್ತೃ)

೨) ಶ್ರೀ ನಿ. ಪ್ರ. ಸ್ವ. ರಾಚೋಟಿ ಸ್ವಾಮಿಗಳು

೩) ಶ್ರೀ ನಿ. ಪ್ರ. ಸ್ವ. ಶಿವಲಿಂಗ ಸ್ವಾಮಿಗಳು

೪) ಶ್ರೀ ನಿ. ಪ್ರ. ಸ್ವ. ಮುದಿ ಮಡಿವಾಳ ಸ್ವಾಮಿಗಳು

೫) ಶ್ರೀ ನಿ. ಪ್ರ. ಸ್ವ. ಕಲ್ಪಿತ ಗುರುಸಿದ್ಧಸ್ವಾಮಿಗಳು

೬) ಶ್ರೀ ನಿ. ಪ್ರ. ಸ್ವ. ಮುದಿರಾಚೋಟಿ ಸ್ವಾಮಿಗಳು

೭) ಶ್ರೀ ನಿ. ಪ್ರ. ಸ್ವ. ಪ್ರಭು ಸ್ವಾಮಿಗಳು

೮) ಶ್ರೀ ನಿ. ಪ್ರ. ಸ್ವ. ಮಡಿವಾಳ ಶಿವಯೋಗಿಗಳು (ಪಟ್ಟವಾಗಲಿಲ್ಲ)

೯) ಶ್ರೀ ನಿ. ಪ್ರ. ಸ್ವ. ರಾಚೋಟಿ ಸ್ವಾಮಿಗಳು (ಗಂದಿಗವಾಡ)

೧೦) ಶ್ರೀ ನಿ. ಪ್ರ. ಸ್ವ. ಶಿವಲಿಂಗ ಸ್ವಾಮಿಗಳು ( ” )

೧೧) ಶ್ರೀ ನಿ. ಪ್ರ. ಸ್ವ. ಗುರುಸಿದ್ಧಸ್ವಾಮಿಗಳು ( ” )

೧೨) (ಅ) ಶ್ರೀ ನಿ. ಪ್ರ. ಸ್ವ. ಚನ್ನಬಸವ ಸ್ವಾಮಿಗಳು (ಬೆಳವಡಿ, ಕಿತ್ತೂರನ್ನು ತ್ಯಜಿಸಿದರು)

(ಬ) ಶ್ರೀ ನಿ. ಪ್ರ. ಸ್ವ. ಗುರುಸಿದ್ಧೇಶ್ವರರು (ಗಂದಿಗವಾಡ)

೧೩) ಶ್ರೀ ನಿ. ಪ್ರ. ಸ್ವ. ಶಿವಬಸವ ಸ್ವಾಮಿಗಳು (ಸದ್ಯದವರು)

ಮೇಲಿನ ಪಟ್ಟಾವಳಿಯ ನಂ. ೨ ಮತ್ತು ೩ನೆಯವರ ಹೆಸರಿನ ಬಗ್ಗೆ ಕೊಂಚ ಅಸ್ಪಷ್ಟತೆಯಿದೆ. ಒಟ್ಟು ೧೬ ತಲೆಮಾರುಗಳಾಗಿ ಹೋದವೆಂದು ಹೇಳುವುದೂ ಉಂಟು. ಆದರೆ ಮೇಲಿನ ಪಟ್ಟಾವಳಿಯನ್ನು ಅಂಗೀಕರಿಸಿದರೆ ಹೆಚ್ಚಿನ ತೊಂದರೆ ಯಾಗುವುದಿಲ್ಲ.

ವೈಮನಸ್ಯಕಾರಣವಾಗಿ ಶಿವಲಿಂಗ ರುದ್ರಸರ್ಜನು ೮ನೆಯವರಾದ ಶ್ರೀ ಮಡಿವಾಳ ಶಿವಯೋಗಿಗಳು ಪಟ್ಟಕ್ಕೆ ಬರದಂತೆ-ನೋಡಿಕೊಂಡನೆಂದೂ ತತ್ಕಾರಣ ಅವರು ಕಿತ್ತೂರನ್ನು ಶಪಿಸಿ ಹೊರಟು ಹೋದರೆಂದೂ ಈ ಭಾಗದಲ್ಲಿ ದಟ್ಟವಾದ ವದಂತಿಯಿದೆ. ಎಂಟನೆಯವರಾದ ಶ್ರೀಮಡಿವಾಳ ಶಿವಯೋಗಿಗಳನ್ನು ಹೊರತು ಪಡಿಸಿದರೆ ಈ ವರೆಗೆ ಈ ಮಠಕ್ಕೆ ಒಟ್ಟು ೧೨ಜನ ಪೀಠಾಧಿಕಾರಿಗಳಾಗಿರುವುದು ಸ್ಪಷ್ಟವಾಗುತ್ತದೆ.

ಕಲ್ಮಠವು ಕಿತ್ತೂರಿನ ರಾಜರಿಂದ ಪೂಜನೀಯವೇನಿಸಿದ್ದರಿಂದ ಸಂಸ್ಥಾನದ ಆಗುಹೋಗುಗಳಲ್ಲಿ ಇದರ ಪಾತ್ರತುಂಬ ಮಹತ್ವದ್ದಾಗಿತ್ತು. ದೊರೆ ಮಾಳವರುದ್ರ ಗೌಡನ ಕಾಲದಲ್ಲಿ ಅವನ ಅವಕೃಪೆಗೆ ಪಾತ್ರನಾಗಿದ್ದ ಅವನ ತಮ್ಮನ ಮಗ ವೀರಪ್ಪ ಗೌಡನನ್ನು ರಕ್ಷಿಸಿದವರು ಕಲ್ಮಠದ ಸ್ವಾಮಿಗಳೇ. ರುದ್ರಗೌಡನ ತರುವಾಯ ಈ ವೀರಪ್ಪ ಗೌಡನೇ ಸಂಸ್ಥಾನದ ಅಧಿಪತಿಯಾದ. ಹುಡುಕಿದರೆ ಶ್ರೀಮಠದ ಪರಂಪರೆಯಲ್ಲಿ ಇಂಥ ಹಲವಾರು ಸಂಗತಿಗಳು ಘಟಿಸಿರುವ ವಿವರಗಳು ಲಭ್ಯವಾಗಬಹುದು.

ಈ ಮಠಕ್ಕೆ ಹಲವಾರು ಶಾಖಾಮಠಗಳಿವೆ. ಅವುಗಳ ಸಂಖ್ಯೆ ಒಟ್ಟು ೩೬ ಎಂದು ಹೇಳಲಾಗುತ್ತದೆ. ಕುಲವಳ್ಳಿ, ಅರವಳ್ಳಿ, ತುರ್ಕಾರ, ಶೀಗೆಹಳ್ಳಿ, ಸಂಪಗಾಂವಿ, ತಿಗಡಿ, ನೇಸರಗಿ ಬೈಲಹೊಂಗಲ, ಬೆಳವಡಿ, ಬೀಡಿ, ಹಲಸಗಿ, ಮುಗಳಿಹಾಳ, ನಂದಗಡಿ, ಇಟಗಿ, ಖಾನಾಪುರ ಬೈಲೂರ, ದೇಶನೂರ ಮೊದಲಾದೆಡೆಗಳಲ್ಲಿ ಶಾಖೆಗಳಿದ್ದುವೆಂದು ತಿಳಿದು ಬರುತ್ತದೆ. ಕೆಲವೆಡೆಗಳಲ್ಲಿ ಈಗ ಇವುಗಳ ಅಸ್ತಿತ್ವವಿಲ್ಲ. ಸು. ೧೧೦೦ ಎಕರೆ ಭೂಮಿ ಈ ಮಠಕ್ಕೆ ಮುಂಚೆ ಇದ್ದದ್ದು ಭೂಸುಧಾರಣೆಯ ಕಾನೂನಿನಿಂದಾಗಿ ಅದರ ಬಹುಭಾಗ ರೈತರ ಕೈವಶವಾಗಿದೆ.

ಸಾಹಿತ್ಯಿಕವಾಗಿ ಈ ಮಠದಿಂದ ಸಾಕಷ್ಟು ಕಾರ್ಯ ನಡೆದಿದೆಯೆಂದು ಹೇಳಲಾಗುತ್ತದೆ. ಅದರ ವಿವರಗಳನ್ನು ಕಲೆ ಹಾಕುವ ಆವಶ್ಯಕತೆಯಿದೆ. ಸಂಸ್ಥಾನಿಕರ ಕಾಲದಲ್ಲಿ ಮಠದಿಂದ ಸಂಸ್ಕೃತ ಪಾಠಶಾಲೆಯೊಂದು ನಡೆಯುತ್ತಿತ್ತು. ಈಗ ಅದರ ಅಸ್ತಿತ್ವವಿಲ್ಲ. ಮಠದ ಉದಾರಾಶ್ರಯದಲ್ಲಿ ಉಚಿತ ಪ್ರಸಾದ ನಿಲಯ, ಸಿದ್ಧೇಶ್ವರ, ಪ್ರೌಢಶಾಲೆ, ಶಿಶುವಿಹಾರ, ಜ್ಯೂನಿಯರ ಮತ್ತು ಪದವಿ ಕಾಲೇಜುಗಳು ನಡೆಯುತ್ತಿವೆ. ಈ ಭಾಗದ ಶೈಕ್ಷಣಿಕ ಕೇಂದ್ರವಾಗಿ ಕಿತ್ತೂರು ಅಭಿವೃದ್ಧಿ ಹೊಂದುತ್ತಿರುವುದು ಶ್ರೀಮಠದ ಪ್ರಭಾವ ಪ್ರಯತ್ನಗಳಿಂದಲೇ. ಇನ್ನಿತರ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳಿಗೂ ಕೊರತೆಯಿಲ್ಲ.

ಗರಗದ ಮಡಿವಾಳೇಶ್ವರರೆಂದು ಈಗ ಖ್ಯಾತರಾದವರು ಪ್ರಸ್ತುತ ಕಲ್ಮಠಕ್ಕೇ ಸೇರಿದವರೆಂಬ ವಿಷಯವನ್ನು ಈ ಮುಂಚೆ ಹೇಳಲಾಗಿದೆ. ಪರಂಪರೆಯಲ್ಲಿ ಏಳನೆಯ ವರಾದ ಶ್ರೀ ಪ್ರಭು ಸ್ವಾಮಿಗಳು ತಮಗೆ ದೊರೆತ (ಅಜಾತವೆಂಬ ಭಾವನೆಯಿರುವ) ಕೂಸನ್ನು ಮಠದಲ್ಲಿ ಸಾಕಿ ದೊಡ್ಡವರನ್ನಾಗಿ ಮಾಡಿದರು. ಸಂಸ್ಥಾನಿಕರೊಡನೆ ಉಂಟಾದ ಭಿನ್ನಾಭಿಪ್ರಾಯ ಕಾರಣವಾಗಿ ಮಠ ತೊರೆದು ಈ ಬಾಗದ ಹಲವು ಊರುಗಳಲ್ಲಿ ಸಂಚರಿಸುತ್ತ ಲೀಲಾ ಮೂರ್ತಿಗಳಾಗಿ ಮೆರೆದರು. ಅವರನ್ನು ಕುರಿತು ಈ ಬಾಗದ ಜನ ಅನೇಕ ಪವಾಡರೂಪದ ಕಥೆಗಳನ್ನು ಹೇಳುತ್ತಾರೆ. ಅವರು ಬಿಟ್ಟು ಹೋದ ಕುರುಹುಗಳು ಈ ಭಾಗದ ಹಲವಾರು ಜನ ಭಕ್ತರಲ್ಲಿ ಮತ್ತು ಮಠಗಳಲ್ಲಿ ಇಂದಿಗೂ ಇವೆ. ಅಂಥ ಹೆಚ್ಚಿನ ವಿವರಗಳನ್ನು ದಿ. ಈಶ್ವರ ಸಣಕಲ್‌ರು ಬರೆದಿರುವ ಗ್ರಂಥದಲ್ಲಿ ನೋಡಬಹುದು.

ಕಲ್ಮಠದಲ್ಲಿ ಬೆಳದವರಾಗಿ ವೀರಶೈವ ದೀಕ್ಷೆ ಪಡೆದವರಾಗಿದ್ದರೂ ಶ್ರೀಮಡಿವಾಳೇಶ್ವರರು ತಮ್ಮ ಅನಂತರದ ಕಾಲಾವಧಿಯಲ್ಲಿ ಇಷ್ಟಲಿಂಗವಿಲ್ಲದೆ ಲೀಲಾಮೂರ್ತಿಗಳಾಗಿ ಮರೆದರೆಂದು ಹೇಳಲಾಗುತ್ತದೆ. ಅವರ ವ್ಯಕ್ತಿತ್ವಕ್ಕೆ ಮಾರುಹೋದ ಬಕ್ತರು ತಮ್ಮ ಊರುಗಳಲ್ಲಿ ಅವರನ್ನು ಉಳಿಸಿಕೊಳ್ಳಲು ಮಾಡಿದ ಯಾವ ಪ್ರಯತ್ನಿಗಳೂ ಸಫಲವಾಗಲಿಲ್ಲ. ಒಂದೆಡೆಯಲ್ಲಿ ನಿಲ್ಲದೆ ತಮ್ಮ ಸಮಕಾಲೀನರಾದ ನವಿಲುಗುಂದದ ನಾಗಲಿಂಗ ಸ್ವಾಮಿಗಳು, ಕಳಸದ ಗೋವಿಂದ ಭಟ್ಟರು ಮತ್ತು ಶಿಶುನಾಳ ಶರೀಫ ಸಾಹೇಬರು ಒಟ್ಟಾಗಿ ಸಂಚರಿಸುತ್ತಿದ್ದರು.

ಇವರು ಯಾವುದೇ ಊರಲ್ಲಿ ಮಠ ಸ್ಥಾಪಿಸಿ ತಮ್ಮ ಮರಿಯನ್ನು ಬಿಡುವ ಗೋಜಿಗೆ ಹೋಗದಿದ್ದರೂ ಶ್ರದ್ಧಾಳುಗಳಾಗಿ ಅವರ ಭಕ್ತರು ಕೆಲಕಾಲದ ಮಟ್ಟಿಗೆ ಅವರು ಉಳಿದು ಹೋದ ಊರುಗಳಲ್ಲಿ ತೊರಗದ್ದಿಗೆಗಳನ್ನು ಮಾಡಿಕೊಂಡಿದ್ದಾರೆ. ಅಂಥವುಗಳು ಈಗಲೂ ಪರಂಪರೆಯಾಗಿ ಉಳಿದು ಬಂದಿವೆ. ಇಂಥವುಗಳ ಸಂಖ್ಯೆ ಕೂಡ ತಕ್ಕಷ್ಟು ದೊಡ್ಡದಿದೆ. ನನ್ನ ಗಮನಕ್ಕೆ ಬಂದಿರುವಂತೆ ಮುಂದಿನ ಊರುಗಳಲ್ಲಿ ಅವರ ಮಠ ಅಥವಾ ತೋರುಗದ್ದಿಗೆಗಳು ಇವೆ :

ನಿಚ್ಚಣಕಿ, ದೇಗಲೊಳ್ಳಿ, ಅಂಬಡಗಟ್ಟಿ, ನೇಗಿನಹಾಳ, ತುರಮರಿ, ಒಕ್ಕುಂದ (ಈಗ ಮುಳಗಡೆಯಾಗಿದೆ) ಹಿರೇನಂದಿಹಳ್ಳಿ, ದೇವರ ಶೀಗೆಹಳ್ಳಿ, ಭಾವಿಹಾಳ, ಯರಡಾಲ, (ಎಲ್ಲವೂ ಬೈಲಹೊಂಗಲ-ತಾ) ಕೊರವಿಕೊಪ್ಪ, ಕಾರೀಮನಿ, ಹೊಸೂರ (ಸವದತ್ತಿ-ತಾ.) ಬಡಸ (ಖಾನಾಪುರ-ತಾ.), ಗರಗ ಮತ್ತು ರಾಯಾಪುರ. ಗರಗದ ಮಠ ಈಗಲೂ ಜಾಗೃತಸ್ಥಾನವೆಂದು ಗೌರವಿಸಲ್ಪಡುತ್ತಿದೆ. ಇಲ್ಲಿ ಶ್ರೀ ಮಡಿವಾಳೇಶ್ವರರ ಸಮಾಧಿಯಿದೆ. ಈ ಪರಂಪರೆಯಲ್ಲಿ ಪಂಚಮ ಸಾಲಿ ಲಿಂಗಾಯತ ಸ್ವಾಮಿಗಳೇ ಮಠಾಧಿಪತಿಗಳಾಗುತ್ತ ಬಂದಿದ್ದಾರೆ.