ಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಠ :

ಗೋಕಾಕ ತಾಲೂಕಿನ ಇನ್ನೊಂದು ಪ್ರಖ್ಯಾತಮಠ ಸಾವಳಗಿಯ ಶ್ರೀ ಶಿವಲಿಂಗೇಶ್ವರರದು. ಘಟಪ್ರಭಾತೀರದ ಈ ಮಠದಲ್ಲಿ ಮೂಲ ಶ್ರೀಶಿವಲಿಂಗೇಶ್ವರರು ಮತ್ತು ಅವರ ಪರಮ ಶಿಷ್ಯೆ ‘ಮಳ್ಳಮ್ಮ’ನವರ ಸಮಾಧಿಗಳಿವೆ.

ಸಾವಳಗಿ ಸಂಪ್ರದಾಯದ ಮೂಲ ಪುರುಷ ಶ್ರೀ ಶಿವಲಿಂಗೇಶ್ವರರು ಕಲಬುರ್ಗಿ ಜಿಲ್ಲೆಯ ಕೊಳ್ಳೂರು ಎಂಬ ಗ್ರಾಮದವರು. ಅಲ್ಲಿನ ಹಿರಿಯಗೌಡರ ಮನೆತನದ ಲಿಂಗಬಸಪ್ಪ ಮತ್ತು ಮಲ್ಲಮ್ಮ ಎಂಬ ದಂಪತಿಗಳ ದಿವ್ಯಪುತ್ರರು. ಮಕ್ಕಳ ಅಪೇಕ್ಷೆಯಿಂದ ಶಿವನನ್ನು ಭಜಿಸಲು ಶಿವ-ಕನಸಿನಲ್ಲಿ ಬಂದು ‘ನೀವು ಮಾಹೇಶ್ವರ ದೀಕ್ಷೆ ವಹಿಸಿದರೆ ನಿಮಗೆ ಮಗ ಹುಟ್ಟುವನು’ ಎಂದು ಆಜ್ಞೆಯಿತ್ತನು. ಅದರ ಪ್ರಕಾರ ಗೌಡರು ಮಾಹೇಶ್ವರ ದೀಕ್ಷೆ ತೆಗೆದುಕೊಳ್ಳಲು ಸಿದ್ಧರಾದಾಗ ಅವರ ತಮ್ಮ ಅದನ್ನು ವಿರೋಧಿಸಿದನು. ಆದರೆ ಲಿಂಗಬಸಪ್ಪಗೌಡರು ಶಿವನ ಆಜ್ಞೆಯನ್ನು ಶಿರಸಾವಹಿಸಿ ಮಾಹೇಶ್ವರ ದೀಕ್ಷೆ ವಹಿಸಿದರು ಮತ್ತು ವರಪುತ್ರನಾಗಿ ಶ್ರೀಶಿವಲಿಂಗೇಶ್ವರರನ್ನು ಪಡೆದರು. ಬಾಲಕ ಶಿವಲಿಂಗೇಶ ಲೀಲಾ ಮೂರ್ತಿಯಾಗಿದ್ದು (ಆಫಜಲಪುರ-ತಾ.) ಶಿವಪುರದ ಶ್ರೀ ಗುರುಸಿದ್ಧದೇವರಿಂದ ಅನುಗ್ರಹೀತನಾಗಿ ಸಾವಳಗಿಯಲ್ಲಿ ಮಠ ಸ್ಥಾಪಿಸಿದರು. ತರುವಾಯ ಈ ಮೂಲ ಸಾವಳಗಿಯಿಂದ ದೇಶಸಂಚಾರ ಹೊರಟು ಹೋದಲ್ಲೆಲ್ಲ ತಮ್ಮ ಪರಂಪರೆಯ ಮಠಗಳ ಸ್ಥಾಪನೆಗೆ ಕಾರಣೀಭೂತರಾದರು. ಕೊನೆಗೆ ಗೋಕಾಕ ಸಮೀಪದ ಘಟಪ್ರಭಾತೀರಕ್ಕೆ ಬಂದು ಸದ್ಯದ ಸಾವಳಗಿ ಕ್ಷೇತ್ರದಲ್ಲಿ ಲಿಂಗೈಕ್ಯರಾದರು.

ಶಿವಪುರದ ಸಿದ್ಧಲಿಂಗ ಕವಿ ಬರೆದ ‘ಸಾವಳಗಿ ಶಿವಲಿಂಗೇಶ್ವರ ಪುರಾಣ’ದ ವಿವರಗಳನುಸಾರ ಶ್ರೀಶಿವಲಿಂಗೇಶ್ವರರು ಮೊಗಲ ಬಾದಶಹ ಔರಂಗಜೇಬ, ಕಲಬುರ್ಗಿಯ ಸೂಫಿಸಂತ ಖ್ವಾಜಾಬಂದೇ ನವಾಜ, ಸಿಂದಿ ಕುರುಬೆಟ್ಟದ ದೊರೆ ಮುಷ್ಟಿಗಿ ಸಿದ್ಧರಾಮಪ್ಪ ಮೊದಲಾದವರ ಸಮಕಾಲೀನರು. ಈ ಸಂಗತಿಗಳನ್ನನುಸರಿಸಿ ಡಾ. ನಂದೀಮಠರು ಶ್ರೀ ಶಿವಲಿಂಗೇಶ್ವರರು ಹದಿನೇಳನೆಯ ಶತಮಾನದ ಅಂತ್ಯದಲ್ಲಿದ್ದರೆಂದು ನಿರ್ಣಯಿಸಿದ್ದಾರೆ.

ತಮ್ಮ ಸಂಚಾರ ಕಾಲದಲ್ಲಿ ಅವರು ಹೋದೆಡೆಗಳಲ್ಲೆಲ್ಲ ಭಕ್ತರು ಅವರ ತೋರುಗದ್ದಿಗೆ-ಮಠಗಳನ್ನು ಕಟ್ಟಿದ್ದಾರೆ. ಬಾಲ್ಖೇಡ, ನರವನೇಪುರ, ತುಂಗಳ-ತುಬಚಿ, ಕಾಗಿಣಿ, ಬಾಗಿಲುಕೋಟೆ ಗೋಕಾಕ, ಸಿಂದಿಕುರುಬೆಟ್ಟ, ಚಿಕ್ಕಸಾವಳಗಿ ಮುಂತಾದೆಡೆಗಳಲ್ಲಿ ಮಠಗಳಿರುವುದನ್ನು ಈಗಲೂ ಕಾಣಬಹುದು.

ಪ್ರಸ್ತುತ ಗೋಕಾಕ-ಸಾವಳಗಿಯ ಶ್ರೀಮಠದ ಗುರುಪರಂಪರೆ ಶ್ರೀ ಮಲ್ಲಾಬಾದಿ ವೀರಭದ್ರಪ್ಪನವರಿಂದ ತಯಾರಿಸಲ್ಪಟ್ಟಿದ್ದು ಮುಂದಿನಂತಿದೆ :

೧) ಶ್ರೀ ನಿ. ಪ್ರ. ಸ್ವ. ಶ್ರೀ ಶಿವಲಿಂಗೇಶ್ವರರು
೨) ಶ್ರೀ ನಿ. ಪ್ರ. ಸ್ವ. ಪಂಚಾಕ್ಷರ ಸ್ವಾಮಿಗಳು
೩) ಶ್ರೀ ನಿ. ಪ್ರ. ಸ್ವ. ಚಿಂಚಕೋಟಿ ಸ್ವಾಮಿಗಳು
೪) ಶ್ರೀ ನಿ. ಪ್ರ. ಸ್ವ. ಕೋಡಳ್ಳಿ ಸ್ವಾಮಿಗಳು
೫) ಶ್ರೀ ನಿ. ಪ್ರ. ಸ್ವ. ಬಸವಲಿಂಗ ಸ್ವಾಮಿಗಳು
೬) ಶ್ರೀ ನಿ. ಪ್ರ. ಸ್ವ.ಪ್ರಭುಸ್ವಾಮಿಗಳು
೭) ಶ್ರೀ ನಿ. ಪ್ರ. ಸ್ವ. ಮಹಾಲಿಂಗ ಸ್ವಾಮಿಗಳು
೮) ಶ್ರೀ ನಿ. ಪ್ರ. ಸ್ವ. ಷಡಕ್ಷರ ಸ್ವಾಮಿಗಳು (ಖಾನಾಪುರ) ವಿರೂಪಾಕ್ಷದೇವರು (೧೮೫೩)
೯) ಶ್ರೀ ನಿ. ಪ್ರ. ಸ್ವ. ಎರಡನೇ ಪ್ರಭುಸ್ವಾಮಿಗಳು (೨೦-೫-೧೮೮೫)
೧೦) ಶ್ರೀ ನಿ. ಪ್ರ. ಸ್ವ. ಅನ್ನದಾನ ಸ್ವಾಮಿಗಳು (ಕರಿಕಟ್ಟಿ-ಸವದತ್ತಿ ೧೬-೧-೧೯೦೧ ರಲ್ಲಿ ಐಕ್ಯ)
೧೧) ಶ್ರೀ ನಿ. ಪ್ರ. ಸ್ವ. ಶಾಂತಲಿಂಗ ಸ್ವಾಮಿಗಳು (ಅಕ್ಕಿವಾಡ-ನಿಡಸೋಸಿ (೧೯೧೩)
೧೨) ಶ್ರೀ ನಿ. ಪ್ರ. ಸ್ವ. ಶಂಕರ ಸ್ವಾಮಿಗಳು (ಇಳಸೂರ-ಶಿರಸಿ-೧೯೧೮)
೧೩) ಶ್ರೀ ನಿ. ಪ್ರ. ಸ್ವ. ಶಿವಲಿಂಗ ಸ್ವಾಮಿಗಳು (ಅವರಗೊಳ್ಳ -ತಾ. ಹುಕ್ಕೇರಿ-೧೯೫೩)
೧೪) ಶ್ರೀ ನಿ. ಪ್ರ. ಸ್ವ. ಸಿದ್ಧರಾಮ ಸ್ವಾಮಿಗಳು (ಯಕ್ಕುಂಡಿ- ತಾ. ಸವದತ್ತಿ)
೧೫) ಶ್ರೀ ನಿ. ಪ್ರ. ಸ್ವ. ಶಿವಲಿಂಗ ಕುಮಾರ ರಾಜೇಂದ್ರ ಸ್ವಾಮಿಗಳು (ಸದ್ಯದವರು)

ಶ್ರೀಮಠವು ಹಿಂದು ಮುಸ್ಲಿಂ ಬಾಂಧವ್ಯಕ್ಕೆ ಜ್ವಲಂತ ನಿದರ್ಶನವಾಗಿದೆ. ಸದ್ಯಗೋಕಾಕ ಸಾವಳಗಿ ಮಠದ ಕಟ್ಟಡ ಮಸೀದೆಯ ರಚನೆಯನ್ನೇ ಹೋಲುತ್ತದೆ. ಮೇಲ್ಭಾಗವಂತೂ ಶುದ್ಧ ಮಸಿದೆಯಂತೆ ಇದೆ. ಕೆಳಭಾಗದಲ್ಲಿ ಇವರು ಗದ್ದಿಗೆಗೆ ಹಣ್ಣುಕಾಯಿ ಅರ್ಪಿಸಿದರೆ, ಮೇಲ್ಭಾಗದಲ್ಲಿ ಊದು ಹಾಕುವ ಪದ್ಧತಿ ಇದೆ. ಮೂಲ ಶಿವಲಿಂಗೇಶ್ವರರು ತೊಡುತ್ತಿದ್ದರೆಂದು ಹೇಳಲಾಗುವ ವೇಷಭೂಷಣಗಳು ಈಗಲೂ ಮಠದಲ್ಲಿವೆ. ಅವು ಮುಸ್ಲಿಂ ಸಂತರ ವೇಷಭೋಷಣದಂತೆಯೇ ಕಂಡುಬರುತ್ತವೆ. ಮಠದಲ್ಲಿ ‘ದೀನಹರ’ ಎಂಬ ಘೋಷಣೆಯೇ ಮೊಳಗುತ್ತದೆ.

ಈ ಮಠದ ವತಿಯಿಂದ ಗೋಕಾವಿಯ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿಗೆ ಐವತ್ತು ಜಮಿನು ದಾನವಾಗಿ ಕೊಡಲ್ಪಟ್ಟಿದೆ. ಈ ಶಿಕ್ಷಣ ಸಂಸ್ಥೆಗೆ ಶ್ರೀ ಶಿವಲಿಂಗೇಶ್ವರರ ಹೆಸರನ್ನೇ ಇಡಲಾಗಿದೆ.

ಅಥಣಿಯ ಶ್ರಿ ಗಚ್ಚಿನ ಮಠ :

ಬೆಳಗಾವಿ ಜಿಲ್ಲೆಯ ವಿರಕ್ತ ಸಂಪ್ರದಾಯದ ಪ್ರಸಿದ್ಧಮಠಗಳಲ್ಲಿ ಅಥಣಿಯ ಈ ಗಚ್ಚಿನ ಮಠವು ಒಂದು, ಇದು ಕ್ರಿ.ಶ. ಹದಿನೈದನೆಯ ಶತಮಾನದಲ್ಲಿ ಶ್ರೀರೇವಣ ಸಿದ್ಧಸ್ವಾಮಿಗಳು ಎಂಬವರಿಂದ ಸ್ಥಾಪಿತವಾಯಿತೆಂದು ಬೆಳಗಾಂವಿ ಜಿಲ್ಲಾ ಗೆಝೆಟೀಯರನಲ್ಲಿ ಹೇಳಲಾಗಿದೆ. ಇದನ್ನು ನಂಬುವುದು ಕಷ್ಟು. ಬಹು ಪ್ರಸಿದ್ಧರಾಗಿದ್ದ ಶ್ರೀ ಮುರಘೇಂದ್ರ ಶಿವಯೋಗಿಗಳ ಕಾಲ ಕ್ರಿ. ಶ. ೧೮೫೬ ರಿಂದ ೧೯೨೩ ಎಂದು ತಿಳಿಯುತ್ತದೆ. ಅವರ ಹಿಂದೆ ಮೂರು ಜನ ಸ್ವಾಮಿಗಳು ಮಾತ್ರ ಆಗಿ ಹೋಗಿದ್ದಾರೆ ಎಂದರೆ, ಮೂಲ ಕರ್ತೃ ಶ್ರೀ ರೇವಣಸಿದ್ಧೇಶ್ವರರು ಸುಮಾರು ೧೭೫೦ ರಲ್ಲಿ ಇದ್ದರೆಂದು ಹೇಳಬೇಕಾಗುವುದು.

ಶ್ರೀ ಮುರಗೇಂದ್ರ ಶಿವಯೋಗಿಗಳು ಈ ಮಠದ ವಿಶೇಷ ಪ್ರತಿಷ್ಠೆಗೆ ಕಾರಣರಾದವರು. ಇವರು ಅಥಿಣಿಯಿಂದ ಐದು ಮೈಲು ಅಂತರದ ಮೇಲಿರುವ ನಂದಿ ಇಂಗಳಗಾಂವಿಎಂಬ ಗ್ರಾಮದಿಂದ ಬಂದವರು (ಅಲ್ಲಿನ ಭಾಗೋಜಿ ಮಠದ ಆದಿ ರಾಜಯ್ಯ ಎಂಬವರ ಗಂಡು ಮಕ್ಕಳಲ್ಲಿ ನಾಲ್ಕನೆಯವರು. ಪೂರ್ವಾಶ್ರಮದ ಹೆಸರು ಗುರುಲಿಂಗಯ್ಯ ಎಂದು. ಇವರ ಕಾಲಾವಧಿಯಲ್ಲಿ ಮಠದ ಪ್ರಭಾವ ಅತ್ಯಧಿಕವಾಗಿದ್ದುದರಿಂದ ಉತ್ತರ ಕರ್ನಾಟಕದ ಹಲವಾರು ಮಠಾಧಿಪತಿಗಳು ಇವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. ಹಲವರು ಎಡೆಗಳಲ್ಲಿ ಇವರ ಶಿಷ್ಯ ಪರಂಪರೆಯವರಿಗೆ ಅಧಿಕಾರ ಪ್ರಾಪ್ತವಾದವು. ತಮ್ಮ ಗುರುಗಳಂತೆ ಅವರು ಕೂಡಾ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಆಮೂಲ್ಯ ಕಾಣಿಕೆ ಇತ್ತರು. ಇಂಥವುಗಳಲ್ಲಿ ಧಾರವಾಡದ ಮುರುಘಾಮಠವು ಒಂದು ಈ ಗಚ್ಚಿನ ಮಠದ ಪರಂಪರೆ ಮುಂದಿನಂತಿದೆ.

೧) ಶ್ರೀ ನಿ. ಪ್ರ. ಸ್ವ. ರೇವಣಸಿದ್ಧ ಸ್ವಾಮಿಗಳು
೨) ಶ್ರೀ ನಿ. ಪ್ರ. ಸ್ವ. ಗುರುಶಾಂತ ಸ್ವಾಮಿಗಳು
೩) ಶ್ರೀ ನಿ. ಪ್ರ. ಸ್ವ. ಮರುಳಶಂಕರ ಸ್ವಾಮಿಗಳು
೪) ಶ್ರೀ ನಿ. ಪ್ರ. ಸ್ವ. ಮುರುಘೇಂದ್ರ ಶಿವಯೋಗಿಗಳು
೫) ಶ್ರೀ ನಿ. ಪ್ರ. ಸ್ವ. ಚನ್ನಬಸವ ಸ್ವಾಮಿಗಳು
೬) ಶ್ರೀ ನಿ. ಪ್ರ. ಸ್ವ. ಮರುಳಶಂಕರ ಸ್ವಾಮಿಗಳು
೭) ಶ್ರೀ ನಿ. ಪ್ರ. ಸ್ವ. ಗುರುಶಾಂತ ಸ್ವಾಮಿಗಳು
೮) ಶ್ರೀ ನಿ. ಪ್ರ. ಸ್ವ. ಚನ್ನಬಸವ ಸ್ವಾಮಿಗಳು
೯) ಶ್ರೀ ನಿ. ಪ್ರ. ಸ್ವ. ಸಿದ್ಧಲಿಂಗ ಸ್ವಾಮಿಗಳು
೧೦) ಶ್ರೀ ನಿ. ಪ್ರ. ಸ್ವ. ಚನ್ನಬಸವ ಸ್ವಾಮಿಗಳು
೧೧) ಶ್ರೀ ನಿ. ಪ್ರ. ಸ್ವ. ಮಹಾಲಿಂಗ ಸ್ವಾಮಿಗಳು (ಇದ್ದಾರೆ)
೧೨) ಶ್ರೀ ನಿ. ಪ್ರ. ಸ್ವ. ಮಲ್ಲಿಕಾರ್ಜುನ ಮುರಘೇಂದ್ರಸ್ವಾಮಿಗಳು (ಈಗಿನ ಪೀಠಾಧಿಕಾರಿಗಳು)

ಮೋಟಗಿ ಮಠ ಅಥಣಿ :

ಈ ಮಠದ ಶ್ರೀ ಮಹಾಂತಪ್ಪನವರು ಮೂಲ ಕರ್ತೃಗಳೆಂದು ತಿಳಿದುಬರುತ್ತದೆ. ಇವರಿಗೆ ಗಡ್ಡ-ಜಡೆಗಳಿದ್ದುದರಿಂದ ಗಡ್ಡ-ಜಡೆ ಸ್ವಾಮಿಗಳಂತಲೂ ಇವರನ್ನು ಕರೆಯುತ್ತಿದ್ದರು. ಇವರ ಕಾಲ ಸುಮಾರು ೧೬೫೦ ನೆಯ ಇಸ್ವಿ ಎಂದು ಹೇಳಲಾಗುತ್ತದೆ. ಶ್ರೀ ಶಿವಯ್ಯನವರು ಎರಡನೆಯವರು. ಇವರ ತರುವಾಯ ಗಡ್ಡ-ಜಡೆಸ್ವಾಮಿಗಳು, ಶ್ರೀ ಸಂಗನಬಸಯ್ಯ ಸ್ವಾಮಿಗಳು, ಶ್ರೀ ಮುರಿಗೆಪ್ಪ ಸ್ವಾಮಿಗಳು, ಶ್ರೀ ಚನ್ನಬಸವ ಸ್ವಾಮಿಗಳು, ಶ್ರೀ ಗುರುಬಸವ ಸ್ವಾಮಿಗಳು ಎಂಬವರು ಆಗಿಹೋಗಿದ್ದಾರೆ. ಶ್ರೀ ನಿ. ಪ್ರ. ಸ್ವ. ಗುರುಬಸವ ಸ್ವಾಮಿಗಳ ತರುವಾಯ ಈಗಿರುವ ಶ್ರೀ ನಿ. ಪ್ರ. ಸ್ವ. ಚನ್ನಬಸವ ದೇವರು ಪಟ್ಟಕ್ಕೆ ಬಂದಿದ್ದಾರೆ. ಇನ್ನೂ ಚಿಕ್ಕವರಿದ್ದು ಶಿವಯೋಗಿ ಮಂದಿರದಲ್ಲಿ ಅಧ್ಯಯನ ನಿರತರಾಗಿದ್ದಾರೆ.

ಈ ಮೋಟಗಿ ಮಠವು ಗಚ್ಚಿನಮಠಕ್ಕಿಂತಲೂ ಪ್ರಾಚೀನವಾದುದು ಎಂಬ ನಂಬಿಕೆ ಇದೆ. ಹೆಚ್ಚಿನ ವಿವರಗಳು ಲಭ್ಯವಿಲ್ಲ. ಈ ಪರಂಪರೆಯಲ್ಲಿ ಐದನೆಯವರಾದ ಶ್ರೀ ಮುರಿಗೆಪ್ಪ ಸ್ವಾಮಿಗಳು ಕ್ರಿ.ಶ.ಸು. ೧೮೫೦ರ ಸುಮಾರಿಗೆ ಮೋಟಗಿ ಮಠಕ್ಕೆ ಅಧಿಕಾರಿಗಳಾಗಿ ಬಂದು, ದಿನಾಂಕ ೨೩-೯-೧೯೧೪ ರಂದು ಲಿಂಗೈಕ್ಯರಾದರು. ಇವರು ಗಚ್ಚಿನಮಠದ ಶ್ರೀ ಮುರಗೇಂದ್ರ ಶಿವಯೋಗಿಗಳಿಗೆ ಧಾರ್ಮಿಕ ವೈದಿಕ ಮತ್ತು ಆಧ್ಯಾತ್ಮಿಕ ಪಾಠಗಳನ್ನು ಹೇಳಿಕೊಡುತ್ತಿದ್ದರು. ಶ್ರೀ ಮುರುಗೇಂದ್ರ ಶಿವಯೋಗಿಗಳು ಇವರನ್ನು ತಮ್ಮ ವಿದ್ಯಾಗುರುಗಳೆಂದೇ ಗೌರವಿಸುತ್ತಿದ್ದರು. ಇವರ ತರುವಾಯ ಈ ಮಠದ ಪೀಠವೇರಿದವರು ಶ್ರೀ ಚನ್ನಬಸವಸ್ವಾಮಿಗಳು.

ಶ್ರೀ ಚನ್ನಬಸವಸ್ವಾಮಿಗಳು ಶ್ರೀ ಮುರುಗೇಂದ್ರ ಶಿವಯೋಗಿಗಳ ರಕ್ತಸಂಬಂಧಿಗಳು. ನದಿ ಇಂಗಳಗಾಂವಿ ಗ್ರಾಮದ ಭಾಗೋಜಿಮಠದ ಮನೆತನಕ್ಕೆ ಸಂಬಂಧಪಟ್ಟವರು. ಶ್ರೀ ಮುರುಗೇಂದ್ರ ಶಿವಯೋಗಿಗಳ ತೀರ್ಥರೂಪರಾದ ಶ್ರೀ ಆದಿರಾಜ್ಜಯ್ಯನವರ ಹಿರಿಯಮಗ ದುಂಡಯ್ಯ ಎಂಬವರು, ಪತ್ನಿ ಲಿಂಗಮ್ಮನವರು, ಇವರ ಪುತ್ರರೇ ಶ್ರೀ ನಿ. ಪ್ರ. ಸ್ವ ಚನ್ನಬಸವಸ್ವಾಮಿಗಳು. ಇವರು ಮೋಟಗಿ ಮಠದ ಸತ್‌ ಪರಂಪರೆಗೆ ತಕ್ಕಂತೆ ಪೂಜೆ, ಅನುಷ್ಠಾನ, ಬಂದ ಭಕ್ತರಿಗೆ ಸಾಂತ್ವನಪರ ಉಪದೇಶ ಮುಂತಾದವುಗಳಿಂದ ಬಹು ಜನಪ್ರಿಯರಾಗಿದ್ದರು. ಬಂಥನಾಳದ ಶ್ರೀ ಶಿವಯೋಗಿ ಸಂಗನಬಸವ ಸ್ವಾಮಿಗಳಿಗೆ ದೀಕ್ಷೆ ಇತ್ತವರು ಇವರೇ. ಶ್ರೀ ಚನ್ನಬಸವ ಸ್ವಾಮಿಗಳ ಕಾಲದಲ್ಲಿ ಮಿರಜದ ರಾಜಾಸಾಹೇಬರು ಈ ಮಠಕ್ಕೆ ಉಂಬಳಿ ಹಾಕಿಕೊಟ್ಟಿದ್ದರು.

ಶ್ರೀ ಮುರುಘೇಂದ್ರ ಶಿವಯೋಗಿಗಳ ವಿರಕ್ತಮಠ ಸೇಗುಣಸಿ

ಈ ಮಠವು ಕೂಡ ಬಹಳ ಹಳೆಯದೆಂದು ಹೇಳಲಾಗುತ್ತದೆ. ಆದರೆ ದಾಖಲೆಗಳು ಲಭ್ಯವಿಲ್ಲ. ಈ ವರೆಗೆ ಆಗಿಹೋದ ಒಟ್ಟು ೧೨ ಜನ ಪೀಠಾಧಿಕಾರಿಗಳ ಹೆಸರುಗಳು ದೊರೆಯುತ್ತವೆ.

೧) ಶ್ರೀ ನಿ. ಪ್ರ. ಸ್ವ. ಮುರುಘೇಂದ್ರ ಸ್ವಾಮಿಗಳು
೨) ಶ್ರೀ ನಿ. ಪ್ರ. ಸ್ವ. ಬಸವಲಿಂಗ ಸ್ವಾಮಿಗಳು
೩) ಶ್ರೀ ನಿ. ಪ್ರ. ಸ್ವ. ಮಹಾಂತ ಸ್ವಾಮಿಗಳು
೪) ಶ್ರೀ ನಿ. ಪ್ರ. ಸ್ವ. ಶಂಕರ ಸ್ವಾಮಿಗಳು
೫) ಶ್ರೀ ನಿ. ಪ್ರ. ಸ್ವ. ಸೋಮಲಿಂಗ ಸ್ವಾಮಿಗಳು
೬) ಶ್ರೀ ನಿ. ಪ್ರ. ಸ್ವ. ಎರಡನೆಯ ಮುರುಘೇಂದ್ರ ಸ್ವಾಮಿಗಳು
೭) ಶ್ರೀ ನಿ. ಪ್ರ. ಸ್ವ. ಬಸವಪ್ರಭು ಸ್ವಾಮಿಗಳು
೮) ಶ್ರೀ ನಿ. ಪ್ರ. ಸ್ವ. ಮಹಾಲಿಂಗ ಸ್ವಾಮಿಗಳು
೯) ಶ್ರೀ ನಿ. ಪ್ರ. ಸ್ವ. ಎರಡನೆಯ ಬಸವಲಿಂಗ ಸ್ವಾಮಿಗಳು
೧೦) ಶ್ರೀ ನಿ. ಪ್ರ. ಸ್ವ. ಎರಡನೆಯ ಶಂಕರ ಸ್ವಾಮಿಗಳು
೧೧) ಶ್ರೀ ನಿ. ಪ್ರ. ಸ್ವ. ಮೂರನೇಯ ಮುರುಘೇಂದ್ರ ಸ್ವಾಮಿಗಳು
೧೨) ಶ್ರೀ ನಿ. ಪ್ರ. ಸ್ವ. ಮೂರನೇಯ ಶಂಕರ ಸ್ವಾಮಿಗಳು(ಸದ್ಯದ ಅಧಿಕಾರಿಗಳು)

ಇಷ್ಟನ್ನು ಬಿಟ್ಟರೆ ಶ್ರೀ ಮಠದ ಚರಿತ್ರೆಗೆ ಸಂಬಂಧಟ್ಟ ಹೆಚ್ಚಿನ ವಿವರಗಳು ನಮಗೆ ಲಭ್ಯವಾಗಲಿಲ್ಲ.

ಶ್ರೀ ಗುರುಲಿಂಗೇಶ್ವರ ವಿರಕ್ತಮಠ ಕಡೋಲಿ :

ಈ ಮಠದ ಮೂಲ ಕರ್ತೃ ಶ್ರೀ ಶಿವಲಿಂಗೇಶ್ವರರು ಜತ್ತ ತಾಲೂಕಿನ ‘ಡಫಳಾಪುರ’ದವರು. ಕ್ರಿ.ಶ.ಸು. ೧೭೭೫ರಲ್ಲಿ ಕಡೋಲಿಗೆ ಬಂದು ಇಲ್ಲಿಯೇ ನೆಲೆ ನಿಂತರು. ಈ ಮಠದ ಪರಂಪರೆಯಲ್ಲಿ ಈ ವರೆಗೆ ಏಳುಜನ ಪೀಠಾಧಿಕಾರಿಗಳಾಗಿ ಹೋಗಿದ್ದಾರೆ.

೧) ಶ್ರೀ ನಿ. ಪ್ರ. ಸ್ವ. ಗುರುಲಿಂಗೇಶ್ವರ ಸ್ವಾಮಿಗಳು
೨) ಶ್ರೀ ನಿ. ಪ್ರ. ಸ್ವ. ಬಸವಲಿಂಗ ಸ್ವಾಮಿಗಳು
೩) ಶ್ರೀ ನಿ. ಪ್ರ. ಸ್ವ. ಚನ್ನಬಸವ ಸ್ವಾಮಿಗಳು
೪) ಶ್ರೀ ನಿ. ಪ್ರ. ಸ್ವ. ಎರಡನೆಯ ಗುರುಲಿಂಗ ಸ್ವಾಮಿಗಳು (ಗಣಿಕೊಪ್ಪ)
೫) ಶ್ರೀ ನಿ. ಪ್ರ. ಸ್ವ. ಎರಡನೆಯ ಬಸವಲಿಂಗ ಸ್ವಾಮಿಗಳು (೧೮೪೪ರಲ್ಲಿ ಲಿಂಗೈಕ್ಯರಾದರು)
೬) ಶ್ರೀ ನಿ. ಪ್ರ. ಸ್ವ. ಎರಡನೆಯ ಚನ್ನಬಸವ ಸ್ವಾಮಿಗಳು (ಹಣ್ಣಿಕೇರಿ)
೭) ಶ್ರೀ ನಿ. ಪ್ರ. ಸ್ವ. ಶ್ರೀ ಸಿದ್ಧಲಿಂಗ ಸ್ವಾಮಿಗಳು (ಡಫಳಾಪುರ)  (ಸದ್ಯದ ಉತ್ತರಾಧಿಕಾರಿಗಳು)

ಈ ಮಠವು ಮುರುಘಾ ಸಮಯಕ್ಕೆ ಸಂಬಂಧಟ್ಟದ್ದೆಂದು ಹೇಳಲಾಗುತ್ತದೆ. ಇದಕ್ಕಿಂತ ಹೆಚ್ಚಿನ ವಿವರಗಳು ಲಭ್ಯವಿಲ್ಲ.

ಶ್ರೀ ಫಲಾಹಾರೇಶ್ವರ ಮಠ ಅವರಾದಿ :

ಈ ಮಠ ರಾಮದುರ್ಗ ತಾಲೂಕಿನಲ್ಲಿ ಬಹು ಜನಾದರಣೀಯವಾಗಿದೆ. ಇದರ ಮೂಲ ಕರ್ತೃ ಧಾರವಾಡ ಜಿಲ್ಲಾ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಕ್ರಿ. ಶ. ಸು. ೧೭೭೦ರಲ್ಲಿ ಜನಿಸಿದರೆಂದು ತಿಳಿದುಬರುತ್ತದೆ. ಶ್ರೀಶೈಲಕ್ಕೆ ಹೋಗಿ ಶಿವಯೋಗ ಸಾಧನೆಮಾಡಿ ಮರಳಿ ಈ ಭಾಗಕ್ಕೆ ಬಂದು ಮಠ ಸ್ಥಾಪಿಸಿದರು. ಮೂಲತಃ ಈ ಮಠ ವಿಜಾಪುರ ಜಿಲ್ಲೆಯ ಕಕನೂರಿನಲ್ಲಿತ್ತೆಂದು ತರುವಾಯ ಅವರಾದಿಗೆ ಸ್ಥಳಾಂತರಿತಗೊಂಡಿತೆಂದೂ ತಿಳಿದು ಬರುತ್ತದೆ.

ತಮ್ಮ ಸಾಧಕ ಜೀವನಕ್ಕೆ ಅನೂಕೂಲವಾಗಲೆಂದು ಕೇವಲ ಫಲಗಳನ್ನು ಮಾತ್ರ ಆಹಾರವನ್ನಾಗಿ ಮಾಡಿಕೊಂಡಿದ್ದರಿಂದ ಜನರು ಇವರನ್ನು ಫಲಹಾರ ಸ್ವಾಮಿಗಳೆಂದು ಕರೆಯತೊಡಗಿದರು. ಈ ಹೆಸರೇ ಮುಂದೆ ಶ್ರೀ ಮಠದ ಹೆಸರಾಗಿ ರೂಢಿಗೊಂಡಿತು. ಇವರ ತಪೋಬಲಕ್ಕೆ ಪ್ರಭಾವಿತರಾದ ನರಗುಂದ, ತೊರಗಲ್ಲ ಮತ್ತು ರಾಮದುರ್ಗ ಸಂಸ್ಥಾನಿಕರು ಇವರನ್ನು ತುಂಬಾ ಭಕ್ತಿಯಿಂದ ಕಾಣುತ್ತಿದ್ದರು. ಮಠಕ್ಕೆ ಇವರು ಭೂದಾನ ಕೂಡಾ ಮಾಡಿದ್ದು ಆ ಬಗ್ಗೆ ಸನ್ನದುಗಳು ಶ್ರೀ ಮಠದ ವಶದಲ್ಲಿ ಈಗಲೂ ಇದ್ದುದಾಗಿ ತಿಳಿದುಬರುತ್ತದೆ. ಸ್ರೀ ಚಿದಂಬರ ದೀಕ್ಷಿತರು, ಗರಗಡ ಶ್ರೀ ಮಡಿವಾಳಪ್ಪನವರು ಇವರ ಸಮಕಾಲೀನರು. ಕ್ರಿ.ಶ. ೧೮೩೫ರಲ್ಲಿ ಇವರು ಲಿಂಗದೊಳಗಾದರು. ಶ್ರೀ ಮಠದಲ್ಲಿ ಈಗಲೂ ಶ್ರೀಶೈಲ ಮಲ್ಲಿಕಾರ್ಜುನನ ತೋರುಗದ್ದಿಗೆ ಇದೆ. ಇತ್ತೀಚೆಗೆ ಇದು ಮುರುಘಾ ಸಮಯಕ್ಕೆ ತನ್ನ ಸಂಬಂಧ ಕಲ್ಪಿಸಿಕೊಂಡಿದೆ.

ಈ ಪರಂಪರೆಯಲ್ಲಿ ಒಟ್ಟು ೭ ಜನ ಪೀಠಾಧಿಪತಿಗಳು ಆಗಿಹೋಗಿದ್ದಾರೆ. ಅವರಲ್ಲಿ ಐದನೆಯವರಾದ ಶ್ರೀ ನಿ. ಪ್ರ. ಸ್ವ. ಸಂಗನಬಸವ ಸ್ವಾಮಿಗಳು ೧೯೦೨ ರಿಂದ ೧೯೬೨ರ ವರೆಗೆ ಅಧಿಕಾರದಲ್ಲಿದ್ದರು. ಇವರ ಕಾಲದಲ್ಲಿ ಮಠವು ಬಹಳ ಉನ್ನತಿ ಸಾಧಿಸಿತು. ಹಲವಾರು ಧಾರ್ಮಿಕ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ರೂಢಿಗೆ ತರಲಾಯಿತು. ಇವರ ಕಾಲದಲ್ಲಿಯೇ ಮಠದ ಚರಿತ್ರೆಯನ್ನು ಪುರಾಣದ ರೂಪದಲ್ಲಿ ಬರೆಯಿಸಲಾಯಿತು.

ಶ್ರಿ ಮಠದ ಪರವಾಗಿ ೧೯೪೬ರಲ್ಲಿ ರಾಮದುರ್ಗದಲ್ಲೊಂದು ಉಚಿತ ಪ್ರಸಾದ ನಿಲಯ ಪ್ರಾರಂಭಗೊಂಡಿತು. ಅದೇ ರೀತಿ ಸುರೇಬಾನದಲ್ಲಿ ಒಂದು ಜ್ಯೂನಿಯರ ಕಾಲೇಜು, ಉಚಿತ ಪ್ರಸಾದ ನಿಲಯ ಮತ್ತು ರೋಣ ತಾಲೂಕಿನ ಮೆಣಸಗಿಯಲ್ಲಿ ಒಂದು ಪ್ರೌಢಶಾಲೆ, ಒಂದು ಉಚಿತ ಪ್ರಸಾದ ನಿಲಯ ನಡೆಸಲ್ಪಡುತ್ತಿವೆ. ಪ್ರತಿವರ್ಷ ಮಾರ್ಗಶಿರ ಪೌರ್ಣಿಮೆಗೆ ಶ್ರೀ ಮಠದ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಈ ಮಠದ ಪರಂಪರೆ ಮುಂದಿನಂತಿದೆ :

೧) ಮೂಲಕರ್ತೃ ಶ್ರೀ ನಿ. ಪ್ರ. ಸ್ವ. ಫಲಹಾರೇಶ್ವರರು
೨)                     ಶ್ರೀ ನಿ. ಪ್ರ. ಸ್ವ. ಶಿವಪ್ಪಯ್ಯ ಸ್ವಾಮಿಗಳು
೩)                     ಶ್ರೀ ನಿ. ಪ್ರ. ಸ್ವ. ಅಡವಿ ಸ್ವಾಮಿಗಳು
೪)                     ಶ್ರೀ ನಿ. ಪ್ರ. ಸ್ವ. ಎರಡನೆಯ ಶಿವಪ್ಪಯ್ಯಸ್ವಾಮಿಗಳು
೫)                     ಶ್ರೀ ನಿ. ಪ್ರ. ಸ್ವ. ಸಂಗನಬಸವ ಸ್ವಾಮಿಗಳು
೬)                     ಶ್ರೀ ನಿ. ಪ್ರ. ಸ್ವ. ಶಿವಮೂರ್ತಿ ಸ್ವಾಮಿಗಳು
೭)                     ಶ್ರೀ ನಿ. ಪ್ರ. ಸ್ವ. ಶ್ರೀ ಮೃತ್ಯುಂಜಯ ಸ್ವಾಮಿಗಳು(ಸದ್ಯದ ಪೀಠಾಧಿಕಾರಿಗಳು)

ಶ್ರೀ ಅಡವಿಸ್ವಾಮಿ ಮಠ ಅಂಕಲಗಿ :

ಶ್ರೀ ಅಡಿವೆಪ್ಪನವರು, ಅಡವಿಸ್ವಾಮಿಗಳು, ಅಡವಿ ಸಿದ್ಧೇಶ್ವರರು ಇತ್ಯಾದಿ ಪಾರ್ಯಯ ನಾಮದಿಂದ ಪ್ರಸಿದ್ಧರಾಗಿದ್ದ ಅಂಕಲಗಿಯ ಶ್ರೀ ಅಡಿವೆಪ್ಪನವರು ೧೯ನೆಯ ಶತಮಾನದ ಆದಿಭಾಗದಲ್ಲಿ ಆಗಿಹೋದರು. ಇವರ ಲೀಲಾಜೀವನದ ಬಗ್ಗೆ ಅಪಾರ ಐತಿಹ್ಯಗಳು ಕೇಳಿಬರುತ್ತವೆ. ಹಲವಾರು ಊರುಗಳಲ್ಲಿ ಇವರ ಹೆಸರಿನ ತೋರುಗದ್ದಿಗೆಗಳು ನಿರ್ಮಾಣವಾಗಿವೆ. ಗೋಕಾಕ ತಾಲೂಕಿನ ಹಳ್ಳೂರು. ಕಳ್ಳಿಗುದ್ದಿ, ಮಾಲದಿನ್ನಿ ಮೊದಲಾದ ಊರುಗಳಲ್ಲಿ ಇವರ ಹೆಸರಿನ ಮಠಗಳಿವೆ. ತವಗ ಮಠದ ಸಂಸ್ಥಾಪಕರಾದ ಶ್ರೀ ಬಾಳಯ್ಯನವರೂ ಅವರ ಸಮಕಾಲೀನರಾಗಿದ್ದ ಕೊಣ್ಣೂರಿನ ಮರಡಿಮಠಕ್ಕೆ ಸ್ವಾಮಿಗಳಾಗಿ ಹೋದ ಶ್ರೀ ಕೆಂಪಯ್ಯನವರೂ ಅಡವೀಸಿದ್ಧೇಶ್ವರರ ಶಿಷ್ಯರು. ಇವರ ಹೆಸರಿನ ಪುರಾಣವೊಂದು ಇದ್ದು ಅವರ ಲೀಲಾಜೀವನದ ವಿಸ್ತಾರವಾದ ವರ್ಣನೆ ಅದರಲ್ಲಿದೆ. ಶ್ರೀ ತವಗದ ಬಾಳಯ್ಯನವರು ಜಾತಿ-ಮತ-ಪಂಥಗಳ ಭೇದವಿಲ್ಲದೆ ಸರ್ವರನ್ನು ಸಮಭಾವದಿಂದ ಕಾಣುವ ಸಿದ್ಧಪುರುಷರಾಗಿದ್ದಾರೆ. ಇವರ ಪ್ರಸಾದ ಪರಂಪರೆ, ತವಗ ಮತ್ತು ಇತರ ಊರುಗಳಲ್ಲಿರುವ ಮಠಗಳಲ್ಲಿ ಇಂದಿಗೂ ಅನೂಚಾನವಾಗಿ ನಡೆಯುತ್ತಿದೆ.

ಬೆಂಡವಾಡದ ಶ್ರೀ ರೇವಣಸಿದ್ಧೇರ್ಶವರರ ಮಠ

ರಾಯಬಾಗ ತಾಲೂಕಿನ ಬೆಂಡವಾಡದ ಈ ಮಠ ಮೂಲತಃ ಪವಾಡಸಿದ್ಧ ಮತ್ತು ರೇವಣಸಿದ್ಧರೆಂಬ ಸಿದ್ಧಪುರುಷರಿಂದ ಸ್ಥಾಪಿತವಾಯಿತ್ತೆಂದು ಐತಿಹ್ಯವಿದೆ. ವೀರಶೈವರ ಪ್ರಸಿದ್ಧ ಆಚಾರ್ಯ ಪುರುಷರೂ ಮಹಾಸಿದ್ಧಿಪುರುಷರೂ ಆದ ರೇವಣಸಿದ್ಧರು ಕೊಲ್ಲಿಪಾಕದ ಸೊಮೇಶ್ವರ ಲಿಂಗದಿಂದ ಉದ್ಭವಿಸಿ ಲೋಕಸಂಚಾರ ಮಾಡುತ್ತಾ ಸೋಲ್ಲಾಪುರಕ್ಕೆ ಬಂದು, ಸಿದ್ಧರಾಮನ ಜನನಭವಿಷ್ಯ ಹೆಳಿ, ಮಂಗಳವಾಡದಲ್ಲಿದ್ದ ಬಿಜ್ಜಳನ ಗರ್ವಹರಣ ಮಾಡಿ, ಕೊಲ್ಲಾಪುರದ ಮಹಾಮಾಯೆ ಮತ್ತು ಗೋರಖನಾಥ ಸಿದ್ಧರನ್ನು ಸದೆಬಡೆದು. ಹಾವಿನಹಾಳ ಕಲ್ಲಯ್ಯನಿಗೆ ದೀಕ್ಷೆ ಇತ್ತು ಅನಂತ ಲೀಲೆಗಳನ್ನೆಸಗಿದವರು ಎಂದು ಅವರನ್ನು ಕುರಿತ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಇತಿಹಾಸಜ್ಞರು ೧೨ನೆಯ ಶತಮಾನದ ಸಿರಿವಾಳ ಶಾಸನೋಕ್ತ ರೇವಣಸಿದ್ಧನು ಐತಿಹಾಸಿಕ ಮಹಾಪುರುಷನೆಂದು ಬಣ್ಣಿಸುತ್ತಾರೆ. ಬೆಂಡವಾಡದಲ್ಲಿರುವ ಪ್ರಸ್ತುತ ಮಠ ಗುಡಿ ಮೊದಲಾದ ಅವಶೇಷಗಳಲ್ಲಿ ಅಷ್ಟು ಹಿಂದಿನ ಅಂಶಗಳು ಈಗ ಕಾಣ ದೊರೆಯುತ್ತಿಲ್ಲ.

ರೇವಣಸಿದ್ಧ ಮತ್ತು ಪವಾಡ ಸಿದ್ಧರೂ ಈ ಮಠದ ಹುಟ್ಟಿಗೆ ಕಾರಣರೆಂಬ ನಂಬಿಕೆ ಪ್ರಚಲಿತವಾಗಿದ್ದರೂ ಈ ಮಠದ ಪರಂಪರೆಯಲ್ಲಿ ಶ್ರೀ ನಿ.ಪ್ರ.ಸ್ವ. ಸಿದ್ಧರಾಮೇಶ್ವರರು ಮೊದಲನೆಯವರಾಗಿ ಕಂಡುಬರುತ್ತಾರೆ. ಇವರು, ಈಗ ಬೆಳಗಾಂವಿ ಮತ್ತು ಪಾಶ್ಚಾಪೂರಗಳಲ್ಲಿ ಇರುವ ಮಿಶ್ರಕೋಟಿ ಎಂಬ ಭಕ್ತರ ಮನೆತನದಿಂದ ಬಂದವರು. ಇವರ ತರುವಾಯ, ಕೊಡಗಿನಿಂದ ಬಂದ ಶ್ರೀ ಕೋಡಗಸ್ವಾಮಿ ಎಂಬವರು ಈ ಮಠದ ಅಧಿಕಾರಿಗಳಾಗಿದ್ದರು. ಇವರ ಸಮಾಧಿ ಈಗಲೂ ಇದೆ. ಮೂರನೆಯವರಾದ ಶ್ರೀ ನಿ.ಪ್ರ.ಸ್ವ. ಗುರುಶಾಂತ ಸ್ವಾಮಿಯವರು ಮೈಸೂರು ಸೀಮೆಯಿಂದ ಬಂದವರು. ಇವರ ಕಾಲಾವಧಿಯಲ್ಲಿ ಅಂದರೆ ಕ್ರಿ.ಶ. ೧೭೭೮ ರಲ್ಲಿ ಪಾಶ್ಚಾಪೂರದ ಶಿವಬಾಯಿ ಮಿಶ್ರಿಕೋಟಿಯವರು ಮುಖ್ಯ ಗುಡಿಯ ಕೆಲ ಭಾಗವನ್ನು ಮತ್ತು ಕಲ್ಲಿನ ಬಾವಿಯೊಂದನ್ನು ಕಟ್ಟಿಸಿದರು. ನಾಲ್ಕನೆಯವರಾದ ಶ್ರೀ ನಿ.ಪ್ರ.ಸ್ವ. ಗುರುಸಿದ್ಧ ಸ್ವಾಮಿಗಳು ಮಂಟೂರಿನ ಗುಗ್ಗರಿ ಮನೆತನದವರು. ಇವರಿಗೆ ಶ್ರೀ ಹೂಲಿ ವೆಂಕರಡ್ಡಿ, ಶ್ರೀ ಅಣ್ಣೂಗುರೂಜಿ, ಶ್ರೀ ಅಪ್ಪಣ್ಣಗೌಡ ಪಾಟೀಲ ಮುಂತಾದ ಸ್ವಾತಂತ್ಯ್ರ ಹೊರಾಟಗಾರರ ನಿಕಟ ಪರಿಚಯವಿತ್ತು. ಚಳುವಳಿ ಕಾಲದಲ್ಲಿ ಇಂತಹವರಿಗೆ ಶ್ರೀಮಠದಲ್ಲಿ ಆಶ್ರಯ ದೊರೆಯುತ್ತಿತ್ತು. ಐದನೆಯವರಾಗಿ ಅದೇ ಮಂಟೂರಿನ ಹಂಜಿಮನೆತನದ ಸ್ರೀ ಮಲ್ಲಿಕಾರ್ಜುನ ಮತ್ತು ಪಾರ್ವತಿ ದೇವಿಯವರ ವರಪುತ್ರ ಶ್ರೀ ಶಿವಯ್ಯನವರು ಅಧಿಕಾರಕ್ಕೆ ಬಂದರು. ಕ್ರಿ.ಶ. ೧೯೨೮ರಲ್ಲಿ ಬೆಂಡವಾಡದ ಮಠಕ್ಕೆ ಶಿವಯ್ಯನವರು ಶ್ರೀ ನಿ.ಪ್ರ.ಸ್ವ.ಸಿದ್ಧ ಪ್ರಭು ಸ್ವಾಮಿಗಳೆಂದು ಪಟ್ಟಾಧಿಕಾರಿಗಳಾದರು. ತರುವಾಯ ಚಿಂಚಣಿಯ ಶ್ರೀ ಪ್ರಭು ದೇವರ ಮಠದ ಅಧಿಕಾರವು ಇವರಿಗೆ ಬಂದದ್ದರಿಂದಾಗಿ ಈ ಎರಡು ಮಠಗಳನ್ನು ಇವರೇ ನೋಡಿಕೊಳ್ಳಬೇಕಾಯಿತು. ಸ್ವಾತಂತ್ಯ್ರ ಹೋರಟ, ಕರ್ನಾಟಕದ ಏಕೀಕರಣ ಮುಂತಾದ ಚಳುವಳಿಗಳಲ್ಲಿ ಕೂಡ ಭಾಗವಹಿಸಿದ್ದಾರೆ. ಶ್ರೀ ಮಠದ ಸರ್ವತೋಮುಖದ ಏಳುಗೆಗಾಗಿ ಶ್ರಮಿಸಿದ್ದಾರೆ. ೧೯೮೮ ರಲ್ಲಿ ಶ್ರೀಗಳು ಕೈಕೊಂಡ ಧರ್ಮಯಾತ್ರೆ ಈ ಭಾಗದ ಜನಮನದಲ್ಲಿ ಇನ್ನೂ ಹಚ್ಚ ಹಸುರಾಗಿದೆ. ಭಕ್ತವರ್ಗದ ಪರಂಪರೆಯ ಈ ಮಠ ಈ ಭಾಗದಲ್ಲಿ ಸರ್ವಜನಾಧರಣೀಯವಾಗಿದೆ.

ಈ ವರೆಗೆ ಹೇಳಿರುವ ಮಠಗಳಲ್ಲಿದೆ ಇನ್ನು ಬಹಳಷ್ಟು ವಿರಕ್ತ ಸಂಪ್ರದಾಯದ ಮಠಗಳು ಜಿಲ್ಲೆಯ ತುಂಬ ಹರಡಿವೆ. ಅವೆಲ್ಲವುಗಳ ಚರಿತ್ರೆ ಸುಲಭವಾಗಿ ತಿಳಿದು ಬರುವಂತಿಲ್ಲ. ಅದಕ್ಕಾಗಿ ವಿಶೇಷ ಪರಿಶ್ರಮ ಪಡುವುದು ಅಗತ್ಯವಿದೆ. ಎಕ್ಕುಂಡಿಯ ವಿರಕ್ತ ಮಠ, ದೇಶನೂರು, ಬೆಳವಡಿ, ಹುಣಸಿಕೊಳ್ಳ, (ಯಮಕನಮರಡಿ), ರಾಮದುರ್ಗದ ಶ್ರೀ ಶಿವಮೂರ್ತೇಶ್ವರ ಮಠ, ನಾಗನೂರ ರುದ್ರಾಕ್ಷಿ ಮಠ, ಅಥಣಿಯ ಶೆಟ್ಟರ ಮಠ ಮುಂತಾಗಿ ಇನ್ನು ಬಹಳಷ್ಟು ವಿರಕ್ತ ಮಠಗಳು ಈ ಪ್ರದೇಶದಲ್ಲಿವೆ. ಇವೆಲ್ಲವುಗಳ ಚಾರಿತ್ರಿಕ ವಿವರಗಳನ್ನು ಸಂಗ್ರಹಿಸುವುದು ಆವಶ್ಯಕವಾಗಿದೆ.

ವೀರಶೈವ ಪಂಚ ಪೀಠಗಳ ಪರಂಪರೆಯಲ್ಲಿ ಬಂದಿರುವ ಹಿರೇಮಠ, ಪಟ್ಟದ ದೇವರ ಮಠಗಳು, ವೀರಶೈವ ಸಮಾಜದ ಇನ್ನೊಂದು ಒಳ ಪದರನ್ನು ಪ್ರತಿನಿಧಿಸುತ್ತವೆ. ಬೆಳಗಾಂವಿ ಜಿಲ್ಲೆಯಲ್ಲಿ ರಂಭಾಪುರ ಪೀಠದ ಪರಂಪರೆಯನ್ನು ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಕಂಡುಬರುವಂತೆ ಕಾಣುತ್ತದೆ. ಇದರರ್ಥ ಇತರ ಪೀಠಗಳ ಶಾಖೆಯವರು ಈ ಜಿಲ್ಲೆಯಲ್ಲಿ ಇಲ್ಲವೆಂತಲ್ಲ.

ಈ ಮಠಗಳ ಪರಂಪರೆ ಕೂಡ ಸಾಕಷ್ಟು ಪ್ರಾಚೀನವಾಗಿರುವಂತೆ ಕಾಣುತ್ತದೆ. ಆದರೆ ನಿಶ್ಚಿತ ದಾಖಲೆಗಳು ದೊರೆಯುವುದಿಲ್ಲ. ಹೂಲಿಯ ಪಂಚವಣ್ಣಿಗೆಯ ಮಠ ಇದಕ್ಕೊಂದು ಅಪವಾದ. ಈ ಮಠವನ್ನು ಕುರಿತ ವಿವರವನ್ನು ಈಗಾಗಲೇ ನೋಡಿದ್ದೇವೆ. ಶಿವತತ್ವ ಚಿಂತಾಮಣಿ, ಗುರುರಾಜ ಚರಿತ್ರೆ ಮತ್ತು ರಾಘವಾಂಕ ಚರಿತೆಗಳಲ್ಲಿ ಈ ಮಠದ ಪ್ರಸಕ್ತಿ ಇರುವುದನ್ನು ಈಗಾಗಲೇ ಗಮಿನಿಸಿದ್ದೇವೆ.

ಸದ್ಯ ನಮಗೆ ಲಭಿಸಿರುವ ಮಾಹಿತಿಯಂತೆ ಬೆಳಗಾಂವಿ ಜಿಲ್ಲೆಯಲ್ಲಿ ಪಟ್ಟದ ದೇವರ ಹಿರೇಮಠಗಳು ಮುಂದಿನ ಊರುಗಳಲ್ಲಿರುವುದು ಕಂಡು ಬರುತ್ತದೆ :

ಅಥಣಿ ತಾಲೂಕು :ತೆಲಸಂಗ,

ಚಿಕ್ಕೋಡಿ ತಾಲೂಕು :ನಿಪ್ಪಾಣಿ, ಡೋಣವಾಡ, ಸದಲಗಿ ಮತ್ತು ಕಡಕಲಾಟ.

ಹುಕ್ಕೇರಿ ತಾಲೂಕು :ಒಂಟಮುರಿ,

ಗೋಕಾಕ ತಾಲೂಕು :ಗೋಕಾಕದಲ್ಲಿ ಎರಡು ಮಠಗಳು, ಮಮದಾಪುರ ಮತ್ತು ಮಾಲದಿನ್ನಿ

ಬೆಳಗಾಂವಿ ತಾಲೂಕು :ಮುತ್ತನಾಳ ಬೆಳಗಾಂವಿ, ಕಾಗತಿ (ಈಗ ನಷ್ಟ)

ಬೈಲಹೊಂಗಲ ತಾಲೂಕ :ಬೈಲಹೊಂಗಲ, ಒಕ್ಕುಂದ, ಹಣ್ಣಿಕೇರಿ ಹಣಬರ ಹಟ್ಟಿ ಮತ್ತು ಸಂಗೊಳ್ಳಿ, ಸಂಪಗಾಂವಿಯ ಕಾಟಾಪುರಿ ಮಠ ಕೂಡ ಒಂದು ಪಟ್ಟದ ದೇವರ ಮಠವೆಂದು ಹೇಳಲಾಗುತ್ತದೆ.

ಸವದತ್ತಿ ತಾಲೂಕು :ಮುರುಗೋಡ, ಎಕ್ಕುಂಡಿ, ಸತ್ತಿಗೇರಿ, ಸವದತ್ತಿ ಮತ್ತು ಹೂಲಿ.

ರಾಮದುರ್ಗ ತಾಲೂಕು :ಕಟಕೋಳ, ಗೊಡಚಿ, ತೊರಗಲ್ಲು, ಬನ್ನೂರಿನಲ್ಲಿ ಎರಡು ಮತ್ತು ಮುಳ್ಳೂರು.

ಈ ಪಟ್ಟಿ ಸಮಗ್ರವಾಗಿಲ್ಲ. ಇನ್ನೂ ಹಲವಾರು ಪಟ್ಟದ ದೇವರ ಮಠಗಳು ಜಿಲ್ಲೆಯಲ್ಲಿ ಇರುವ ಸಾಧ್ಯತೆಯಿದೆ. ಈ ಮಠಗಳ ಪರಂಪರೆಯನ್ನು ಕುರಿತು ಪ್ರತ್ಯೇಕವಾದ ತಾಲೂಕಾ ಮಟ್ಟದ ಕ್ಷೇತ್ರಕಾರ್ಯ ನಡೆಯಬೇಕಿದೆ.

ಈವರೆಗೆ ವಿವರಿಸಿರುವ ಮಠಗಳು ಈಗ ಹೆಚ್ಚಾಗಿ ಶುದ್ಧ ವೀರಶೈವ ಪರಂಪರೆಗೆ ಅನುಗುಣವಾಗಿವೆ. ಇವಲ್ಲದೆ ಅದ್ವೈತ ಮೊದಲಾದ ಸ್ವಲ್ಪ ಬೇರೆ ತರಹದ ಪರಂಪರೆಯ ಮಠಗಳೂ ಜಿಲ್ಲೆಯಲ್ಲಿವೆ. ಈ ಮಠಗಳ ಪರಂಪರೆ ಬೇರೆಯಾಗಿದ್ದರೂ ಇವುಗಳಲ್ಲಿ ಪೀಠಾಧಿಕಾರಿಗಳಾಗಿ ಆಗಿ ಹೋಗಿರುವ ಸ್ವಾಮಿಗಳು ನಡೆದುಕೊಳ್ಳುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವರೇ ಆಗಿದ್ದಾರೆ. ಅಂಥವುಗಳಲ್ಲಿ ಇಂಚಲದ ಶಿವಯೋಗೀಶ್ವರ ಮಠ, ಮುಗಳಕೋಡದ ಎಲ್ಲಾ ಲಿಂಗಮಠ, ಬಬಲಾದಿ ಸಂಪ್ರದಾಯದ ಮಠಗಳು, ಗದುಗಿನ ಶಿವಾನಂದರ ಮಠಗಳು, ಹುಬ್ಬಳ್ಳಿಯ ಸಿದ್ಧಾರೂಢರು ಮತ್ತು ಅವರ ಪರಂಪರೆಯ ರಾಮರೂಢರ ಹೆಸರಿನ ಮಠಗಳು, ರಾಮದುರ್ಗ ತಾಲೂಕಿನ ಕುಳ್ಳೂರು ಶಿವಯ್ಯನವರ ಮಠಗಳು ಮೊದಲಾದವು ಹಲವಾರು ಊರುಗಳಲ್ಲಿ ಕಂಡುಬರುತ್ತವೆ. ಬಹುಶಃ ಒಂದು ಕಾಲಕ್ಕೆ ಪ್ರಸಿದ್ಧವಾಗಿರಬಹುದಾದ, ಸೊಪ್ಪೆದೇವರ ಮಠ, ಎರಗಂಬಳಿ ಮಠ, ಸಪ್ಪೆಯ ಮಠ ಮುಂತಾದ ಕೆಲವು ಅಜ್ಞಾತ ಮಟಗಳು ಅಲ್ಲಲ್ಲಿ ಉಳಿದುಕೊಂಡಿರುವುದು ಕಂಡುಬರುತ್ತದೆ. ರೇವಣಸಿದ್ಧ, ಕಾಡಸಿದ್ಧ, ಅಲ್ಲಮ ಪ್ರಭು, ಬಸವಣ್ಣನವರು, ಸುರಿಗೆಯ ಚೌಡಯ್ಯ ಮುಂತಾದ ಪ್ರಸಿದ್ಧ ಪುರಾತನರ ಹೆಸರುಗಳು ಅಲ್ಲಲ್ಲಿ ಕೇಳ ಬರುತ್ತಲಿವೆ. ನಾಗಲಾಂಬಿಕೆ, ನೀಲಮ್ಮ, ಅಕ್ಕಮಹಾದೇವಿ ಮುಂತಾದ ಶರಣೆಯರೂ ಕೂಡ ಅಲ್ಲಲ್ಲಿ ನೆನಪಿಗೆ ಬರುವಂತೆ ಗುಡಿಗಳೂ, ಮಠಗಳೂ ಸ್ಥಾಪಿತವಾಗಿವೆ. ಇವೆಲ್ಲ ವಿಷಯಗಳನ್ನು ಇನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಬೇಕಾದ ಅವಶ್ಯಕತೆ ಇದೆ.