ಬೆಳಗಾವಿ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವುಳ್ಳ ಕರ್ನಾಟಕದ ಕೆಲವೇ ನಗರಗಳಲ್ಲಿ ಒಂದು. ಈಗ ಬೆಂಗಳೂರು ಮತ್ತು ಹುಬ್ಬಳ್ಳಿಗಳು ತರುವಾಯ ರಾಜ್ಯದ ಮೂರನೆಯ ದೈತ್ಯ ನಗರ. ಇದರ ಬೆಳೆವಣಿಗೆ ಶತ ಶತಮಾನಗಳಿಂದ ಹೆಚ್ಚುತ್ತಲೇ ಬಂದಿದೆ. ಒಂದು ಶತಮಾನದ ಮುಂಚೆ ವಡಗಾಂವಿ. ಶಹಾಪೂರ ಮತ್ತು ಬೆಳಗಾವಿಗಳು ಪ್ರತ್ಯೇಕ ಪಟ್ಟಣಗಳೆನಿಸಿದ್ದರೆ ಇಂದು ಈ ಮೂರು ಪಟ್ಟಣಗಳು ಏಕೀಭವಿಸಿ ಒಂದು ಮಹಾನಗರವಾಗಿ ರೂಪುಗೊಂಡಿವೆ. ಈಗಲೂ ಈ ನಗರ ಗರ್ಭದಲ್ಲಿ ಕನಿಷ್ಠ ಎಂಟು ಹರಿಜನ ಕೇರಿಗಳನ್ನು ಗುರುತಿಸಬಹುದು. ಚವಾಟಗಲ್ಲಿ, ಕಂಗ್ರಾಳ, ಗೋಂದಳಿಗಲ್ಲಿ, ಕೋನವಾಳ ಗಲ್ಲಿ, ಭಾಂಧೂರ ಗಲ್ಲಿ, ಹೊಸೂರ ಅಥವಾ ಹೊಸಟ್ಟಿ, ಖಾಸಬಾಗ, ಶಹಾಪೂರ (ಸರಾಫ-ಆಚಾರ ಗಲ್ಲಿಗಳಿಗೆ ಹೊಂದಿಕೊಂಡಿರುವ ಪೂರ್ವಭಾಗ) ಮತ್ತು ವಡಗಾವಿ-ಇವುಗಳಲ್ಲಿ ಪ್ರತ್ಯೇಕವಾಗಿ ಒಂದೊಂದು ದಲಿತರ ಕೇರಿಗಳು ಈಗಲೂ ಅಸ್ತಿತ್ವದಲ್ಲಿವೆ ಎಂದರೆ ಕನಿಷ್ಠ ಎಂಟು ಊರುಗಳಾದರೂ ಇಂದಿನ ಬೆಳಗಾವಿಯಲ್ಲಿ ಸಮಾವೇಶ ಗೊಂಡಿರುವುದು ಖಚಿತವಾಗುತ್ತವೆ. ಇಂದಿನ ಹೊಸ ಊರು ಕಣಬರಗಿ, ಕುಡಚಿ, ಹಳೆ ಬೆಳಗಾವಿ, ವೈತಾಕವಾಡಿ, ಅನಿಗೋಳ, ಮಚ್ಜೆ ಮಜಗಾವ, ನಾನಾವಾಡಿ, ಸಾವಗಾಂವ, ಗಣೇಶಪುರ, ಹಿಂಡಲಗಿ, ಎರಡು ಕಂಗ್ರಾಳಿಗಳು ಯಮುನಾಪುರ, ಅಲತಗೆ, ಕಾಕತಿ, ಈ ಎಲ್ಲ ಹಳ್ಳಿಗಳನ್ನು ತನ್ನ ಮಹಾಗರ್ಭದಲ್ಲಿ ಸೇರಿಸಿಕೊಂಡಿದೆ. ಈಗ ಸ್ಪಷ್ಟವಾಗಿ ಗುರುತಿಸಬಹುದಾದ ಮೂಲ ಬೆಳಗಾವಿ ನಗರವೆಂದರೆ ಈಗಿರುವ ಶನಿದೇವರ ಗುಡಿಯಿಂದ ಉತ್ತ ವೆಂಕಟರಮಣನ ಗುಡಿ, ಪೂರ್ವದ ಮಠಬೀದಿಯ ತುದಿಯಲ್ಲಿರುವ ವೀರಶೈವ ಮಠದಿಂದ ಪಶ್ಚಿಮದ ಹನುಮಂತದೇವರ ಗುಡಿ (ಮಾರುತಿ ವೀಥಿಯ ಪಶ್ಚಿಮ ತುದಿ) ವರೆಗಿನ ಪ್ರದೇಶ ಮಾತ್ರ. ಈಗಲೂ ಈ ಪ್ರದೇಸ ಪ್ರತಿಶತ ೮೦ ರಷ್ಟು ಕನ್ನಡಿಗರಿಂದಲೇ ತುಂಬಿರುವುದನ್ನು ಯಾರಾದರೂ ನೋಡಬಹುದು.

ಮೇಲೆ ತಿಳಿಸಿದ ಪ್ರಾಚೀನ ಬೆಳಗಾವಿ ನಗರ ಇತಿಹಾಸದ ಕಾಲಾಂತರದಲ್ಲಿ ನಿಜವಾಗಿಯೂ ನಾಲ್ಕನೆಯದು ಎಂದು ಹೇಳಿದರೆ ಯಾರೂ ಬೆಚ್ಚಿ ಬೀಳಬೇಕಾದುದಿಲ್ಲ. ಮೊದಲ ಬೆಳಗಾವಿ ಈಗಿನ ರೇಲ್ವೆ ನಿಲ್ದಾಣದ ಉತ್ತರ ಬದಿಯಲ್ಲಿ ದಂಡಿನ ಶಿಬಿರದ ಪೂರ್ವಕ್ಕೆ ನೆಲೆಸಿತ್ತು. ಈಗಲೂ ಅಲ್ಲೊಂದು ಪುರಾತನ ಬಾವಿಯ ಅವಶೇಷಗಳಿವೆ. ಅಲ್ಲದೆ ‘ನಾಗರಕೆರೆ’ ಎಂಬ ಹೆಸರಿನ ಭಾರೀ ಗ್ರಾತದ ಕೆರೆಯೊಂದು ಈ ಪ್ರದೇಶದ ಮೇಲ್ಭಾಗದಲ್ಲಿ ಅಸ್ತಿತ್ವದಲ್ಲಿತ್ತು. ಈಗಿರುವ ರೇಲ್ವೆ ಸೇತುವೆಯು ಪ್ರಸ್ತುತ ಕೆರೆಯ ಪೂರ್ವ ಏರಿಯ ಮೇಲೆಯೇ ಕಟ್ಟಲ್ಪಟ್ಟಿದೆ. ಗೋವೆ ಅಗಸಿಯ ಬಸ್‌ ನಿಲ್ದಾಣದ ಕೆಳಗಡೆಯಿಂದ ಈ ಕೆರೆಯ ಒಂದು ಕೋಡಿ ಈಗಲೂ ಹರಿಯುತ್ತಿರುವುದನ್ನು ನೋಡಬಹುದು. ಈ ಕೆರೆ ಪಶ್ಚಿಮದಲ್ಲಿ ಒಂದು ಕಿಲೋ ಮೀಟರ ಪಸರಿಸಿತ್ತು. ಪಶ್ಚಿಮದಲ್ಲಿ ಈಗಿರುವ ಕನ್ನಡ ಶಾಲೆಗೆ ಈಗಲೂ “ನಾಗಝರಿ ಶಾಲೆ” ಎಂದೇ ಜನ ಕರೆಯುತ್ತಾರೆ. ಈಗ್ಗೆ ಸುಮಾರು ಒಂದುನೂರು ವರ್ಷಗಳ ಹಿಂದೆ ಹನ್ನೆರಡೂ ತಿಂಗಳು ನೀರುಚಿಮ್ಮುವ ಝರಿಯೊಂದು ಅಲ್ಲಿ ಇದ್ದುದೇ ಹೀಗೆ ಹೆಸರಾಗಲು ಕಾರಣ. ಇಷ್ಟು ದೊಡ್ಡದಾದ ಕೆರೆ ಮತ್ತು ಅದಕ್ಕೆ ತಾಗಿದ ಪೂರ್ವಕ್ಕಿರುವ ಪ್ರಾಚೀನ ವಸತಿ ಸ್ಥಾನ ಇವು ‘ಸಾತವಾಹನ’ ಕಾಲಕ್ಕಿಂತ ಪೂರ್ವದವು. ಬಹುಶಃ ನಾಗರ ಸಂಸ್ಕೃತಿಗೆ ಸಂಬಂಧಪಟ್ಟವು.

ತರುವಾಯದ್ದು ಸಾತವಾಹನರ ಕಾಲದ ಬೆಳಗಾವಿ. ಇದು ಈಗಿನ ಹಳೆಯ ಬೆಳಗಾವಿ-ವಡಗಾವಿಯ ಪೂರ್ವ ಭಾಗ ಮತ್ತು ಮಾಧವಪುರಗಳ ಪ್ರದೇಶವನ್ನೊಳಗೊಂಡಿತ್ತು. ಇಲ್ಲಿ ‘ಸಾತವಾಹನ’ರ ಕಾಲದ ನಗರಾವಶೇಷಗಳು ಪತ್ತೆಯಾಗಿರವುದು ಹಾಗೂ ಕ್ರಿ.ಶ. ಪೂರ್ವ ೧ ನೆಯ ಶತಮಾನದ ಬ್ರಾಹ್ಮೀ ಲಿಪಿಯ ಶಾಸನ ಸಿಕ್ಕಿರುವುದು ಎಲ್ಲರಿಗೂ ತಿಳಿದಿದೆ. ಈ ಪ್ರದೇಶವನ್ನು ವಿದ್ವಾಂಸರು ಕಂದಾಯ ಇಲಾಖೆಯ ದಾಖಲೆಗಳನ್ನುನುಸರಿಸಿ ಮಾಧವಪುರ-ವಡವಾಗಿ ಪ್ರದೇಶವೆಂದು ಕರೆದಿದ್ದಾರೆಯೇ ಹೊರತು ವಾಸ್ತವವಾಗಿ ಈ ಪ್ರದೇಶ ಈಗಲೂ ಹಳೇ ಬೆಳಗಾವಿಯೆಂದು ಹೇಳಲಾಗುವ ಊರಿನ ಒಂದು ಭಾಗ.

ಈ ಪುರಾತನ ನಗರಕ್ಕೆ ಒಂದು ರಕ್ಷಣಾ ಗೋಡೆ ಅಥವಾ ಕೋಟೆ ಕೂಡ ಇತ್ತು. ಇದರ ಅವಶೇಷ ರೂಪದ ಅಡಿಪಾಅಯವು ಉತ್ಖನನದಲ್ಲಿ ಗುರುತಿಸಲ್ಪಟ್ಟಿದೆ. ಹಿಂದೆ ಈ ಕೋಟೆಯ ಅವಶೇಷವಾಘಿ ಉಳಿದಿದ್ದ ಕಲ್ಲು ಬಂಡೆಗಳನ್ನು ಈಗಿರುವ ದೊಡ್ಡ ಕೋಟೆಯ ಕಟ್ಟಡಕ್ಕಾಗಿ ಬಳಸಿಕೊಳ್ಳಲಾಗಿದೆಯಂತೆ. ಈ ಕೋಟೆಯ ಒಳಗಡೆಯಿದ್ದ ಸಾತವಾಹನ ಕಾಲದ (ಕ್ರಿ.ಶ. ಪೂರ್ವ ಒಂದನೆಯ ಶತಮಾನದ) ನಗರ ತುಂಬ ಸಂಪದ್ಭರಿತವಾಗಿತ್ತು. ವಾಣಿಜ್ಯ ವ್ಯಾಪರಗಳ ದೊಡ್ಡ ಕೇಂದ್ರವೆನಿಸಿತ್ತು. ಕರ್ನಾಟಕದಲ್ಲಿ ಈಗ ಪತ್ತೆಯಾಗಿರುವ ಸನ್ನತಿ (ಕಲಬುರ್ಗಿ ಜಿಲ್ಲೆ) ಯ ತರುವಾಯ ಇಂಥದೊಂದು ದೊಡ್ಡ ನಗರದ ಅವಶೇಷಗಳು ಇಲ್ಲಿನ ಅಗೆತಗಳಲ್ಲಿ ಕಂಡು ಬಂದಿರುವದನ್ನು ಇಲ್ಲಿ ಸ್ಮರಿಸಬಹುದು.

ಇಲ್ಲಿ ವೈದಿಕ ಧರ್ಮದ ಯಜ್ಞ-ಯಾಗಾದಿಗಳನ್ನು ನಡೆಸುತ್ತಿದ್ದ ಬಗ್ಗೆ ಮೇಲೆ ತಿಳಿಸಿದ ಶಾಸನದಲ್ಲಿ ಉಲ್ಲೇಖವಿದೆ. ‘ಧಸ’ ಎಂಬ ವ್ಯಕ್ತಿ ವಾಜಪೇಯಿ ಮೊದಲಾದ ಯಾಗ ಮಾಡಿದನೆಂದು ಶಾಸನದಲ್ಲಿ ಹೇಳಿದೆ. ಇದಲ್ಲದೇ ಬೌದ್ಧ ಧರ್ಮ ಇಲ್ಲಿ ಪ್ರಚಲಿತವಾಗಿದ್ದ ಬಗ್ಗೆ, ಶಿವಾರಾಧನೆ ನಡೆಯುತ್ತಿದ್ದುದರ ಬಗ್ಗಗೆ ಕೆಲವು ಸೂಚನೆಗಳು ಅಗೆತಗಳಿಂದ ಕಂಡುಬಂದಿವೆ. ‘ಯದು ಗ್ರಾಮ’ವೆಂಬ ಸ್ಥಳ ವಾಚಕದ ಉಲ್ಲೇಖ ಅದೇ ಶಾಸನದಲ್ಲಿ ಇರುವುದರಿಂದೆ ಬೆಳಗಾವಿಗೆ ಎರಡು ಸಾವಿರ ವರ್ಷಗಳ ಹಿಂದೆ ಅದೇ ಹೆಸರು ಇರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ.

ಇಲ್ಲಿನ ಉತ್ಖನನಗಳಲ್ಲಿ ಪಶ್ಚಿಮ ಕ್ಷತ್ರಪರು ಮತ್ತು ರೋಮ ಚಕ್ರವರ್ತಿಯ ನಾಣ್ಯಗಳು ದೊರೆತಿವೆ. ಅಲ್ಲದೆ ಸಾತವಾಹನರ ಕಾಲದ ಬಹಳಷ್ಟು ನಾಣ್ಯಗಳು ಲಭ್ಯವಾಗಿದ್ದು ಅವುಗಳ ಮೇಲೆ ಪ್ರಾಕೃತ ಭಾಷೆಯಲ್ಲಿ ಬರೆದ ‘ವಾಶಿಷ್ಠಿ ಪುತ್ರ ಪುಳುಮಾವಿ’ ಯಜ್ಞಸಿರಿ ಸಾತಕರ್ಣಿ, ವಾಶಿಷ್ಠಿ ಪುತ್ರ ವಿಳಿವಾಯಕುರ ಎಂಬ ಸಾತವಾಹನ ದೊರೆಗಳ ಹೆಸರುಗಳ ಕಂಡುಬಂದಿವೆ. ಇದರಿಂದ ಈ ಊರು ಸಾತವಾಹನರ ಆಳ್ವಿಕೆಗೆ ಒಳಪಟ್ಟಿದ್ದು ಕ್ರಿ.ಶ. ೨ನೆಯ ಶತಮಾನದವರೆಗೂ ಅವರ ಅಧೀನವಾಗಿತ್ತೆಂದು ತಿಳಿದು ಬರುತ್ತದೆ. ಒಂದು ನಾಣ್ಯ ‘ಮಹಾರಠಿ’ ಎಂಬ ಸಾತವಾಹನರ ಅಧೀನ ರಾಜನೊಬ್ಬನ ಹೆಸರನ್ನು ಹೇಳುತ್ತದೆ.

ಮೇಲೆ ತಿಳಿಸಿದ ಮುಖ್ಯ ವಸ್ತುಗಳಲ್ಲದೆ ಅಂದಿನ ಜನಜೀವನಕ್ಕೆ ಸಂಬಂಧಪಟ್ಟ ಮಡಕೆ-ಪಾತ್ರೆಗಳು ಅವಶೇಷಗಳು, ಮಣ್ಣಿನ ಬೊಂಬೆಗಳು, ಬಾವಿಗಳು, ಓಣಿಗಳ ಅವಶೇಷಗಳು, ಮೊದಲಾದವು ಇಲ್ಲಿ ದೊರೆತಿವೆ. ಅಲ್ಲದೆ ಈ ಅವಶೇಷಗಳ ಪದರುಗಳಲ್ಲಿ ಇನ್ನೂ ಪ್ರಾಚೀನ ಕಾಲಕ್ಕೆ ಸೇರುವ ಅವಶೇಷಗಳಿವೆಯೆಂದು ಡಾ || ಅ. ಸುಂದರ ತಿಳಿಸುತ್ತಾರೆ. ಹೀಗೆ ಕರ್ನಾಟಕದಲ್ಲಿ ಮೌರ್ಯರು ಆಳ್ವಿಕೆಯ ತರುವಾಯ ಮತ್ತು ಕದಂಬ ಪೂರ್ವಕಾಲದ ಸು. ೫೦೦ ವರ್ಷಗಳ ಅವಧಿಯ ಚರಿತ್ರೆ ಸಂಬಂಧಿ ಅವಶೇಷಗಳನ್ನು ಉಳಿಸಿಕೊಂಡು ಬಂದ ಶ್ರೇಯಸ್ಸು ಈ ಹಳೆಯ ಬೆಳಗಾವಿಯದು.

ಇನ್ನು ಮೂರನೆಯ ಬೆಳಗಾವಿಯ ಅವಶೇಷಗಳನ್ನು ಸದ್ಯದ ಕೋಟೆ ಪ್ರದೇಶ, ಅದರ ಸಮೀಪದ ಪಶ್ಚಿಮ ಮತ್ತು ಉತ್ತರ ಬದಿಗಳಲ್ಲಿ ಎಂದರೆ ಈಗಿನ ಖಡೇಬಜಾರ, ಮಾಳಿಗಲ್ಲಿ, ಕಾಮತಗಳಲ್ಲಿ, ಹಳೆ ಧಾರವಾಡ ರಸ್ತೆಯ ಅಕ್ಕಪಕ್ಕಗಳಲ್ಲಿ ಗುರುತಿಸಬಹುದು. ಈಗಿರುವ ದೊಡ್ಡ ಕೋಟೆಯ ಮೇಲ್ಭಾಗ ಮುಸಲ್ಮಾನ ಆಡಳಿತಗಾರರಿಂದ ನಿರ್ಮಿಸಲ್ಪಟ್ಟಿದ್ದರೂ ಅದರ ಅತಿ ಕೆಳಗಿನ ಸ್ತರದಲ್ಲಿ ಬನವಾಸಿ ಕದಂಬರ ಕಾಲಾವಧಿಗೆ ಸೇರುವ ರಚನೆಯೂ ಅದರ ಮೇಲೆ ಚಾಲುಕ್ಯ ರಾಷ್ಟ್ರಕೂಟದ ಕಾಲದ ರಚನೆಯೂ ಇದೆಯೆಂದು ಡಾ. ಎಸ್‌. ಕೆ. ಜೋಶಿ ತಿಳಿಸುತ್ತಾರೆ. ಎಂದರೆ ಸಾತವಾಹನ ಕಾಲದ ಬೆಳಗಾವಿ ನಗರ ಕಾರಣಾಂತರಗಳಿಂದ ತ್ಯಜಿಸಲ್ಪಟ್ಟ ಮೇಲೆ ಮೂರನೆಯ ಹಂತಹ ನಗರ ಈ ಕೋಟೆಯ ಪ್ರದೇಶದಲ್ಲಿ ಅಭಿವೃದ್ಧಿ ಹೊಂದಿತೆಂದು ಖಚಿತವಾಗಿ ನಿರ್ಧರಿಸಬಹುದು.

ಈ ಕೋಟೆಯ ಪ್ರದೇಶದಲ್ಲಿ ಆದಿಲಶಾಹಿಯ ಪೂರ್ವದ ಸು. ನಾಲ್ಕರಷ್ಟು ಬಸದಿಗಳು ಹಾಗೂ ಹಲವು ದೇವಾಲಯಗಳ ಅವಶೇಷಗಳು ಮತ್ತು ಶಾಸನಗಳು ದೊರೆತಿವೆ. ಇವುಗಳಲ್ಲಿ ಕಮಲ ಬಸ್ತಿಯು ತನ್ನ ಶಿಲ್ಪಕಲೆಗಾಗಿ ಕರ್ನಾಟಕದಲ್ಲೆಲ್ಲ ಪ್ರಸಿದ್ಧವಾಗಿದೆ. ಇದನ್ನು ಕ್ರಿ.ಶ. ೧೨೦೪ರಲ್ಲಿ ಶಾಂತಿನಾಥ ತೀರ್ಥಂಕರನ ಮೂರ್ತಿ ಸ್ಥಾಪಿಸಲೋಸುಗ ಕಟ್ಟಲಾಯಿತೆಂದು ತಿಳಿದುಬರುತ್ತದೆ. ಒಟ್ಟು ಈ ಪ್ರದೇಶ ಸುಮಾರು ಒಂದು ಕಿಲೋ ಮೀಟರ ವ್ಯಾಸವುಳ್ಳದ್ದಾಗಿದ್ದು ಕದಂಬರ ಕಾಲದಿಂದ ಬ್ರಿಟಿಷರ ಕಾಲದವರೆಗೂ ಬಲವಾದ ಕೋಟೆಯೆನಿಸಿತ್ತು.

ಕೋಟೆಯ ಪ್ರದೇಶವಲ್ಲದೆ ಅದರ ಸಮೀಪದ ಖಡೇಬಜಾರಿನ ಒಂದು ಚಿಕ್ಕ ದೇವಾಲಯದಲ್ಲಿ ಎರಡು ವೀರಗಲ್ಲುಗಳೂ ಒಂದು ಗಣಪತಿಯ ವಿಗ್ರಹವೂ ಇವೆ. ಅದೇ ರೀತಿ ದರಬಾರಗಲ್ಲಿ ಮತ್ತು ಖಂಜರ ಗಲ್ಲಿ ಪ್ರದೇಶಗಳಲ್ಲಿ ಕನಿಷ್ಠ ಎರಡು ಮೂರು ಬಸದಿ ಅಥವಾ ದೇವಾಲಯಗಳ ಅವಶೇಷಗಳಿವೆ. ಕಾಮತ ಓಣಿಯ ಪಶ್ಚಿಮದ ಮಾಳಿಗಲ್ಲಿಯ ಮಧ್ಯದಲ್ಲಿ ಈಗ ರವಳನಾಥ ದೇವಾಲಯವಿರುವ ಭಾಗದಲ್ಲಿ ಮುಂಚೆ ಒಂದು ದೊಡ್ಡ ದೇವಾಲಯವಿದ್ದ ಕುರುಹುಗಳಿವೆ. ಇದು ಬಹುಶಃ ದುರ್ಗಾ-ಮಹಿಷಾಸುರ ಮರ್ದಿನಿಯ ದೇವಾಲಯವಾಗಿದ್ದು ರಾಷ್ಟ್ರಕೂಟ ಅಥವಾ ಕಲ್ಯಾಣ ಚಾಲುಕ್ಯರ ಕಾಲಾವಧಿಗೆ ಸೇರಿದ್ದು, ಈಗಿನ ಮಾಳಿಗಲ್ಲಿವರೆಗಿನ ಪ್ರದೇಶ ಮತ್ತು ಕೋಟೆಯ ಉತ್ತರದಲ್ಲಿರುವ ವಿಸ್ತಾರವಾದ ಕೆರೆಗಳು ಪ್ರಾಚೀನ ಕಾಲದ ಮೂರನೆಯ ಬೆಳಗಾವಿಗೆ ಸೇರಿದ್ದವೆಂದು ಹೇಳಬಹುದು. ಈ ಮೂರನೆಯ ಬೆಳಗಾವಿ ಸುತ್ತಲಿನ ೧೬ ಊರುಗಳನ್ನು ಒಟ್ಟುಗೂಡಿಸಿ ರಚಿತವಾದುದೆಂದು ತಿಳಿದು ಬರುತ್ತದೆ.

ನಾಲ್ಕನೆಯ ಹಂತದ ಬೆಳಗಾವಿ ಈಗಿನ ಮಠಗಳಲ್ಲಿ (ಹಳೆಯ ರವಿವಾರ ಪೇಟೆಯ ದಕ್ಷಿಣ ಪಾರ್ಶ್ವ) ಯಿಂದ ಪಶ್ಚಿಮದಲ್ಲಿ ಹನುಮಂತದೇವರ ಗುಡಿಯವರೆಗೆ ಪೂರ್ವ ಪಶ್ಚಿಮವಾಗಿ ಮತ್ತು ದೇಶಪಾಂಡೆಗಲ್ಲಿಯಿಂದ ಅಥವಾ ಗಣಪತಿಯ ದೇವಾಲಯದಿಂದ ಶನಿದೇವಾಲಯದವರೆಗೆ ದಕ್ಷಿಣೋತ್ತರವಾಗಿ ಹಬ್ಬಿತ್ತು. ಈ ಪ್ರದೇಶದಲ್ಲಿ ಕೂಡ ಹಲವಾರು ಪ್ರಾಚ್ಯಾವಶೇಷಗಳು ಉಪಲಬ್ಧವಾಗಿವೆ. ಇಲ್ಲಿರುವ ಬಸವಣ್ಣ ಬೀದಿಯ ಕೇಂದ್ರಲ್ಲಿ ಈಗಿರುವ ಬಸವಣ್ಣನ ಗುಡಿ ಮುಂಚೆ ಒಂದು ದೊಡ್ಡ ದೇವಾಲಯ ಬಹುಶಃ ಶೈವದೇವಾಲಯವಾಗಿತ್ತು. ಅದರ ಹಲವು ಬಿಡಿ ಭಾಗಗಳು ಈಗಲೂ ನೋಡ ಸಿಗುತ್ತವೆ. ಇಲ್ಲಿನ ಈಗಿನ ಕಾಳಿಕಾದೇವಾಲಯದಲ್ಲಿ ಇಟ್ಟಿರುವ ವರುಣನ ಮೂರ್ತಿ ತುಂಬ ದೊಡ್ಡದಿದ್ದು ಅದು ಬಹುಶಃ ಈ ಮೂಲ ದೇವಾಲಯಕ್ಕೆ ಸಂಬಂಧಪಟ್ಟಿತ್ತು. ಇದಲ್ಲದೆ ಇದರ ಪಶ್ಚಿಮ ಬದಿಯಲ್ಲಿರುವ ಈಗಿನ ಜೈನ ಬಸದಿ (ದೊಡ್ಡ ಬಸದಿ) ಕೂಡ ಹಳೆಯದು. ಈಗ ಈ ಬಸದಿಯಲ್ಲಿ ಬೇರೆಡೆಯಿಂದ ತಂದು ಸ್ಥಾಪಿಸಿರುವ ನೇಮಿನಾಥ ತೀರ್ಥಂಕರನ ಮೂರ್ತಿ ಕೂಡ ತುಂಬಾ ಪ್ರಾಚೀನ. ಚಾಲುಕ್ಯ ರಟ್ಟರ ಕಾಲಕ್ಕೆ ಸೇರಿದ್ದು. ಇದಲ್ಲದೆ ಶೇರಿಗಲ್ಲಿ ಮಠಗಳಲ್ಲಿ ಪ್ರದೇಶಗಳಲ್ಲಿ ಕೂಡ ಒಂದೊಂದು ಬಸದಿಗಳಿವೆ. ಅನಂತಶಯನಗುಡಿ ಮತ್ತು ವೆಂಕಟರಮಣನ ದೇವಸ್ಥಾನಗಳು ಕೂಡ ತಕ್ಕಷ್ಟು ಹಳೆಯವು. ಅನಂತಶಯನ ದೇವಾಲಯದ ಬದಿಯಲ್ಲಿರುವ ದ್ಯಾಮವ್ವ ಅಥವಾ ಗ್ರಾಮ ದೇವತೆಯ ಗುಡಿ ಈಗ ನೋಡಲು ಅಷ್ಟೇನು ಪ್ರಾಚೀನವೆಂದು ಕಾಣದಿದ್ದರೂ ಮೂಲತಃ ೪ ನೆಯ ಬೆಳಗಾವಿಯ ಸ್ಥಾಪನೆಯೊಂದಿಗೇ ನಿರ್ಮಾಣಗೊಂಡುದು. ಪ್ರಾಚೀನ ಕನ್ನಡಿಗರು ಊರೊಂದನ್ನು ನಿರ್ಮಿಸುವಾಗ ಮೊದಲು ಈ ದೇವಿಯನ್ನು ಸಿದ್ಧಗೊಳಿಸಿ, ಪ್ರತಿಪ್ಠಿಸಿದ ತರುವಾಯವೇ ಊರನ್ನು ನಿರ್ಮಿಸುತ್ತಿದ್ದರು. ಇವಳು ತಮ್ಮ ಮಾತೃದೇವತೆ, ಎಲ್ಲಂದದಲ್ಲೂ ತಮ್ಮನ್ನು ರಕ್ಷಿಸುವಳು ಎಂದು ತಿಳಿದಿದ್ದರು.

ಇದರೊಂದಿಗೆ ಈಗಿನ ಕಪಿಲೇಶ್ವರ ದೇವಾಲಯದ ಪ್ರದೇಶವನ್ನು ಇಲ್ಲಿ ಗಮನಿಸಬೇಕು. ಈ ಪ್ರದೇಶ ಮೂಲತಃ ಮೊದಲ ಬೆಳಗಾವಿ ಅಥವಾ ನಾಗರ ಬೆಳಗಾವಿಗೆ ಸೇರಿದ್ದೊ ಅಥವಾ ಬಾಂದೂರ ಅಥವಾ ಕೋನವಾಳ ಎಂಬ ಪ್ರಾಚೀನ ಹಳ್ಳಿಗಳಿಗೆ ಸಂಬಂಧಿಸಿದ್ದೊ ಹೇಳುವುದು ಕಷ್ಟ. ಮುಂಚೆ ಇಲ್ಲಿ ಹನ್ನೆರಡು ತಿಂಗಳೂ ಹರಿಯುತ್ತಿದ್ದ ಹಳ್ಳ ಮತ್ತು ದೇವಾಲಯದ ದಕ್ಷಿಣ ಬದಿಯಲ್ಲಿದ್ದ ಸುಂದರವಾದ ಕೊಳಗಳು ಈಗ ವಿಕೃತಗೊಂಡಿವೆ. ಮೊದಲು ಈ ಭಾಗದಲ್ಲಿ ಒಂದು ರುದ್ರಭೂಮಿ ಕೂಡ ಇತ್ತು. ಈಗಲೂ ಇಲ್ಲಿ ಶ್ರಾದ್ಧ ಕರ್ಮಾದಿಗಳನ್ನು ಮಾಡುವ ಪರಂಪರೆ ನಡೆದುಕೊಂಡು ಬಂದಿದೆ. ಕಪಿಲೇಶ್ವರ ದೇವಾಲಯದ ಆವರಣದಲ್ಲಿ ಈಗಲೂ ಉಳಿದು ಬಂದಿರುವ ಪ್ರಾಚ್ಯಾವಶೇಷಗಳಲ್ಲಿ ಉತ್ತರಾಭಿಮುಖ ಗಣಪತಿ, ಪಶ್ಚಿಮಾಭಿಮುಖ ಭೈರವ ಅಥವಾ ವೀರಭದ್ರ, ಒಂದು ಮುಖಲಿಂಗ ಪ್ರಾಚೀನಕಾಲದ ನಾಗರ ಮೂರ್ತಿಗಳು ಮತ್ತು ಅರ್ಧ ಭಾಗ ಮಾತ್ರ ಉಳಿದಿರುವ ಒಂದು ಶಿವನ ಮೂತ್ತಿ ಗಮನಾರ್ಹವಾಗಿವೆ. ಮೇಲಿನ ಅರ್ಧ ಮಾತ್ರ ಉಳಿದಿರುವ ಶಿವನ ಮೂರ್ತಿ ಬಹಳ ಹಳೆಯದಾಗಿದ್ದು ಬಹುಶಃ ಲಕುಲೀಶ ಶಿವನದಾಗಿರುವಂತೆ ಕಾಣುತ್ತದೆ. ಎರಡು ಕೈಗಳು ಮುರಿದು ಎರಡು ಕೈಗಳು ಮಾತ್ರ ಈಗ ಉಳಿದಿರುವುದರಿಂದ ಇದನ್ನು ನಿರ್ಧರಿಸಿ ಹೇಳುವುದು ಕಷ್ಟವೆನಿಸಿದೆ.

ತರುವಾಯದಲ್ಲಿ ಕಲ್ಯಾಣ ಚಾಳುಕ್ಯರು, ರಟ್ಟರು, ಗೋವೆಯ ಕದಂಬರು, ದೇವಗಿರಿಯ ಯಾದವರು, ವಿಜಯನಗರದವರು ಬೆಳಗಾವಿಯನ್ನು ರಕ್ಷಿಸಿ ಅದನ್ನು ಬೆಳೆಸುತ್ತ ಬಂದಿದ್ದಾರೆ. ಕ್ರಿ.ಶ. ೧೪೭೨-೭೩ ರಲ್ಲಿ ಬೆಳಗಾವಿಯ ಕೋಟೆ ವಿಜಯನಗರದವರ ಕೈತಪ್ಪಿ ಬಹಮನಿ ಮತ್ತು ತರುವಾಯ ವಿಜಾಪುರದವರ ಕೈ ಸೇರಿತು. ಪ್ರಸಿದ್ಧ ಬಹಮನಿ ಮಂತ್ರಿ ಮಹಮ್ಮದ ಗವಾನನ ನೇತೃತ್ವದಲ್ಲಿ ಬಹಮನಿ ಸೈನ್ಯ ಬೆಳಗಾವಿ ಕೋಟೆಯನ್ನು ವಶಪಡಿಸಿಕೊಂಡಿತು. ಇದಲ್ಲದೆ ಮಹಮ್ಮದ ತಘಲಖ್, ಆದಿಲಶಾಹಿಗಳು ಶಿವಾಜಿ ಮತ್ತು ಪೇಶ್ವೆಗಳು ಬ್ರಿಟಿಶರು, ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ಬೆಳಗಾವಿಯ ಮೇಲೆ ದಾಳಿ ಮಾಡಿ ಲೂಟಿ ಮಾಡುತ್ತ ವಶಪಡಿಸಿಕೊಂಡು ತಮ್ಮ ಆಡಳಿತ ನಡೆಸುತ್ತ ಬಂದರು. ಬೆಳಗಾವಿಯ ಇತಿಹಾಸದಲ್ಲಿ ಅಸದಖಾನನೆಂಬ ವಿಜಾಪುರ ಸರದಾರನ ಹೆಸರು ಎತ್ತಿ ಹೇಳುವಂಥದು. ಈಗ ಕೋಟೆಯಲ್ಲಿ ಕಟ್ಟಿಸಿರುವ ಸಫಾಮಸೀದೆ ಮತ್ತು ದಂಡಿನ ಪ್ರದೇಶದಲ್ಲಿರುವ ಈಗಿನ ಗೋರಿಗಳು ಉಲ್ಲೇಖನೀಯವಾಗಿವೆ. ಬೆಳಗಾವಿಗೆ ಹಿಂದಿನ ಮುಸಲ್ಮಾನರು ಮುಸ್ತಫಾಬಾದ ಎಂದೂ ದಿಲ್ಲಿಯ ಮೊಘಲರು ಗೆದ್ದ ಮೇಲೆ ಆಜಂನಗರವೆಂದೂ ಹೆಸರಿಟ್ಟರೆಂದು ತಿಳಿಯುತ್ತದೆ. ಆದರೆ ಆ ಹೆಸರುಗಳು ನಿಲ್ಲದೆ ಬೆಳಗಾವಿ ಎಂಬ ಹೆಸರು ಸುಮಾರು ಎರಡು ಸಾವಿರ ವರ್ಷಗಳವರೆಗೆ ಅನೂಚಾನವಾಗಿ ಉಳಿದು ಬಂದಿದ್ದು ನಗರ ಕೂಡ ಕಾಲನ ದಾಳಿಯನ್ನು ಸೈರಿಸಿಯೂ ಕುಂದಿಲ್ಲದೆ ತನ್ನ ಏಳಿಗೆಯನ್ನು ಮುಂದುವರಿಸಿಕೊಂಡು ಬಂದಿದೆ. ಇಂದು ರಾಜ್ಯದ ಮೂರನೆಯ ಮಹಾನಗರವಾಗಿದೆ.