ಒಂದು ಸಮಾಜ ಪ್ರಗತಿಪರವಾಗುವುದೆಂದರೆ ಅದು ತಾನಾಗಿಯೇ ಘಟಿಸುವ ಕ್ರಿಯೆಯಲ್ಲ. ಮೊದಲಿದ್ದುದನ್ನು ಸಂಪೂರ್ಣ ಉಧ್ವಸ್ತಗೊಳಿಸಿ ಹೊಚ್ಚ ಹೊಸ ಸಮಾಜವನ್ನು ನಿರ್ಮಿಸುವುದೂ ಸಾಧ್ಯವಿಲ್ಲ. ಇದ್ದುದನ್ನೇ ಪರಿವರ್ತಿಸಿ ಕಾಯಕಲ್ಪ ಮಾಡಬೇಕಾಗುತ್ತದೆ. ಅದಕ್ಕಾಗಿ ಸಾಮಾಜಿಕ ಸ್ಥಿತ್ಯಂತರಗಳ ಐತಿಹಾಸಿಕ ವಿಶ್ಲೇಷಣೆ ಕ್ರಮಬದ್ಧವಾಗಿ ನಡೆಯಬೇಕಾಗುತ್ತದೆ. ಎಂದರೆ ಸಮಾಜದ ಹಿಂದಿನ ಆಗುಹೋಗುಗಳನ್ನೆಲ್ಲ ಕೂಲಂಕಷವಾಗಿ ವಿಮರ್ಶಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅದರ ಐತಿಹಾಸಿಕ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಪರಿಶೋಧನೆ ಅನಿವಾರ್ಯ. ಈ ಪರಿಶೋಧನೆ ಅಥವಾ ಸಂಶೋಧನೆ ಎಂಬುದು ಮೀರಲಾಗದ ಒಂದು ಅವಶ್ಯಕತೆಯೆನಿಸುತ್ತದೆ. ಮಹಾನ್ ವಿಚಾರವಾದಿ ಕಾರ್ಲಮಾರ್ಕ್ಸ ಮಾಡಿದ ಕಾರ್ಯ ಇಂಥದೇ. ಒಂದು ಮಿತಿಯಲ್ಲಿ ಇಂಥದೇ ಪ್ರಯತ್ನ ಮಾಡಿದವರು, ಹರ್ಡೇಕರ ಮಂಜಪ್ಪನವರು.

ಭಾರತೀಯರ ಉದ್ಧಾರಕ್ಕೆ ರಾಜಕೀಯ ಸ್ವಾತಂತ್ಯ್ರ ಅನಿವಾರ್ಯವಾದ ಅವಶ್ಯಕತೆಯೆಂದು ಮಂಜಪ್ಪನವರು ನಂಬಿದ್ದರು. ಆದರೆ ಅದೊಂದರಿಂದಲೇ ನಮ್ಮ ಜನಾಂಗದ ಉದ್ಧಾರವಾಗುವಂತಿರಲಿಲ್ಲ. ಈ ಅಂಶ ಅವರಿಗೆ ಪೂರ್ಣ ಮನವರಿಕೆ ಯಾಗಿತ್ತು. ಆದ್ದರಿಂದ ಅಂದಿನ ಕರ್ನಾಟಕದ ಸಾಮಾಜಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಸುಧಾರಣೆಗಳತ್ತಲೂ ಅವರು ಗಮನಹರಿಸಿದರು. ಅಂದಿನ ಕರ್ನಾಟಕದಲ್ಲಿ, ಇತರತ್ರ ಭಾರತದಲ್ಲಿ ನೆಲೆಸಿದ್ದಂತೆ ಧಾರ್ಮಿಕ ಕುರುಡು ನಂಬಿಕೆ. ಜಾತಿ ಉಪ ಜಾತಿಗಳ ಭೇದ, ಸ್ತ್ರೀಯರ ಮತ್ತು ನಿಮ್ನವರ್ಗಗಳ ಶೋಚನೀಯಸ್ಥಿತಿ ಅವರನ್ನು ಚಿಂತೆಗೀಡುಮಾಡಿದ್ದವು. ಜಾತಿಭೇದವನ್ನಳಿಸಲು ಪಣತೊಟ್ಟಿದ್ದ ವೀರಶೈವವೇ ಹಲವಾರು ಉಪಜಾತಿಗಳಿಂದ ತುಂಬಿದುದು ಅವರನ್ನು ತೀವ್ರವಾಗಿ ಕಾಡಿತು. ಅದರ ಪರಿ ಮಾರ್ಜನೆಯತ್ತ ಲಕ್ಷ್ಯವಹಿಸಲೇಬೇಕೆಂಬುದನ್ನು ಮಂಜಪ್ಪನವರು ಮನಗಂಡಿದ್ದರು. ಇದರ ಸಾಧನೆಗಾಗಿ ಅವರು ಆಳವಾದ ಅಧ್ಯಯನ, ಚಿಂತನ ಮಾಡುವುದು ಅನಿವಾರ್ಯವಾಗಿದ್ದಿತು. ಹೀಗಾಗಿ ಆಗ ಪ್ರಚಾರದಲ್ಲಿದ್ದ ಬ್ರಹ್ಮ ಸಮಾಜ, ಪ್ರಾರ್ಥನಾ ಸಮಾಜ, ಆರ್ಯಸಮಾಜ ಮುಂತಾದ ಸಂಘಟನೆಗಳ ಚಟುವಟಿಕೆಗಳನ್ನವರು ಬಹು ಆಸಕ್ತಿಯಿಂದ ಗಮನಿಸುತ್ತಿದ್ದರು. ಆರ್ಯಸಮಾಜದ ಕಾರ್ಯ ಚಟುವಟಿಕೆಗಳಂತೂ ಅವರಿಗೆ ತುಂಬಾ ಹಿಡಿಸಿದ್ದವು. ಮಂಜಪ್ಪನವರ ಸಮಾಜ ಸುಧಾರಣೆಯ ಹಂಬಲ ಇಷ್ಟರಿಂದಲೇ ಸಂತೃಪ್ತವಾಗಲಿಲ್ಲ. ಜಗತ್ತಿನ ಹಲವು ಮತಧರ್ಮಗಳ ತತ್ವಗ್ರಂಥಗಳನ್ನು ಅವರು ತಿರುವಿಹಾಕಿದರು. ಹಲವು ಜನ ತತ್ವವೇತ್ತರ ವಿಚಾರಗಳನ್ನು ಮನನ ಮಾಡಿದರು. ಗಾಂಧಿಜೀಯವರ ಆದರ್ಶ ಅವರ ಮುಂದೆ ಇದ್ದೇ ಇತ್ತು. ಇಂಥ ಪರಿಸರದಲ್ಲಿ ತಾವು ಅರ್ಥಾತ್ ಕನ್ನಡಿಗರು ಅರಿತುಕೊಳ್ಳಬೇಕಾದುದೇನು ? ಯಾವುದು ಎಷ್ಟು ಉಪಯುಕ್ತ ? ಎಂಬ ಅಂಶದತ್ತ ಅವರ ಗಮನ ಹರಿಯಿತು. ಹೀಗಾಗಿ ನಮ್ಮ ನಾಡಿನಲ್ಲಿ ಆಗಿಹೋದ ಸಾಧು ಸತ್ಪುರುಷರ ಚರಿತ್ರೆಗಳನ್ನೂ ಅವರ ಬೋಧನೆಗಳನ್ನೂ ಪರಿಶೀಸಿ ನೋಡಿದರು. ವೇದಾಗಮಾದಿ ಸಾಹಿತ್ಯವನ್ನೂ ಅವರು ತಿರುವಿಹಾಕಿದರು. ಆಚಾರ್ಯತ್ರಯರ ವಿಚಾರಗಳನ್ನೂ ಬೌದ್ಧ-ಜೈನ ಮತಗಳ ಪ್ರತಿಪಾದನೆಗಳನ್ನೂ ತೂಗಿ ನೋಡಿದರು. ಈ ಎಲ್ಲ ಸೈದ್ಧಾಂತಿಕ ವಿಚಾರಗಳಲ್ಲಿ ಅವರಿಗೆ ಪ್ರಾರಂಭದಲ್ಲಿ ಬುದ್ಧನ ವಾದಸರಣಿ ತುಂಬಾ ಹಿಡಿಸಿದಂತೆ ಕಾಣುತ್ತದೆ. ಬೌದ್ಧಮತ ಹೆಚ್ಚು ಉದಾರ ಮತ್ತು ಮಾನವೀಯ ಅನುಕಂಪವುಳ್ಳ ಮತವಾಗಿತ್ತು. ಅದರ ಹೋಲಿಕೆಗೆ ಸರಿಬರುವ ಇನ್ನೊಂದು ಮತವೆಂದರೆ ವೀರಶೈವ ಮಾತ್ರ ಎಂಬುದು ಅವರಿಗೆ ಖಚಿತವಾಯಿತು. ತತ್ಕಾರಣ ಅವರು ವೀರಶೈವ ಸಂಬಂಧಿಯಾಗಿ ತುಂಬಾ ಅನುಸಂಧಾನ ನಡೆಸಿದರು.

ಇತರ ಹಿಂದುಗಳಲ್ಲಿ ಮನೆಮಾಡಿದ್ದಂತೆಯೇ ಕರ್ನಾಟಕದ ವೀರಶೈವ ಸಮಾಜದಲ್ಲಿ ಕೂಡ ವಿಘಟನಕಾರೀ ತತ್ವಗಳು ಬೇರೂರಿದ್ದವು. ಬಸವಾದಿ ಶರಣರು ಬೋಧಿಸಿದ್ದ ಅಮರವಾಣಿ ಬಹು ಕ್ಷೀಣವಾಗಿತ್ತು. ಜಾತಿ-ಉಪಜಾತಿಗಳ ಗೋಜಲಿನಲ್ಲಿ ಸಿಕ್ಕು ಅದು ತೊಳಲಾಡುತ್ತಿತ್ತು. ಇದನ್ನು ಹೋಗಲಾಡಿಸಲೆಂದು ಶ್ರೀ ಮಂಜಪ್ಪನವರು ಪ್ರಯತ್ನಿಶೀಲರಾದರು. ತತ್ಫಲವಾಗಿ ಅವರು ವೀರಶೈವಕ್ಕೆ ಅಚಾರ್ಯ ಪುರುಷರಾದ ಬಸವಣ್ಣನವರನ್ನು ಕುರಿತು ಅವರ ಜೀವನದ ಸಿದ್ಧಿಸಾಧನೆಗಳನ್ನು ಕುರಿತ ಸಂಶೋಧನೆಗೆ ಕೈಹಾಕಿದರು. ಅದರ ಪರಿಣಾಮವೇ ಅವರು ಬರೆದ ‘ಬಸವ ಚರಿತ್ರೆ, ಬಸವ ಬೋಧಾಮೃತ, ಶುದ್ಧಿ ಮತ್ತು ಸಂಘಟನೆ ಹಾಗೂ ಲಿಂಗಪೂಜೆಯ ಐತಿಹಾಸಿಕ ವಿವೇಚನೆ’ ಎಂಬ ನಾಲ್ಕು ಪ್ರಮುಖ ಕೃತಿಗಳು.

ಸು. ೧೯೨೦ ರ ದಶಕದಲ್ಲಿ ಆಧುನಿಕ ಕನ್ನಡ ಸಾಹಿತ್ಯ ಅದೇ ಎಚ್ಚರ ಗೊಳ್ಳುತ್ತಲಿತ್ತು. ಹಿಂದಿನ ಜಾಡ್ಯ ತೊಲಗಿ ಸಂಶೋಧನೆ ಕೂಡ ಕೆಲಮಟ್ಟಿನ ಪ್ರಗತಿ ಸಾಧಿಸಿತ್ತು. ಬಿ. ಎಲ್. ರೈಸ. ಫ್ಲೀಟ, ಆರ್ ನರಸಿಂಹಾಚಾರ್ ಮುಂತಾದ ಪ್ರಕಾಂಡರು ಈ ಕ್ಷೇತ್ರದಲ್ಲಿ ಗಣನೀಯ ಕಾರ್ಯಮಾಡಿದ್ದರು. ಆದರೆ ಆಗಬೇಕಾದ ಕಾರ್ಯ ಇನ್ನೂ ಅಪಾರವಾಗಿತ್ತು. ವೀರಶೈವದ ಬಗೆಗೆ ಗಂಭೀರ ಅಧ್ಯಯನ ಇನ್ನೂ ಪ್ರಾರಂಭವಾಗಬೇಕಿತ್ತು. ಈ ಕ್ಷೇತ್ರದಲ್ಲಿ ಆಗಬೇಕಾಗಿದ್ದ ಭಾವೀಕಾರ್ಯಕ್ಕೆ ಭದ್ರಪೀಠಿಕೆಯಂತೆ ಮಂಜಪ್ಪನವರು ಮೇಲೆ ತಿಳಿಸಿದ ನಾಲ್ಕು ಸಂಶೋಧನ ಗ್ರಂಥಗಳನ್ನು ಮತ್ತು ಇನ್ನೂ ಹಲವು ಸಣ್ಣಪುಟ್ಟ ಕೃತಿಗಳನ್ನು ರಚಿಸಿದರು.

ಅವರ ಮೊದಲ ಕೃತಿ ‘ಬಸವ ಚರಿತ್ರೆ’ ೧೯೨೪ ರಲ್ಲಿ ಪ್ರಕಟವಾದಂತೆ ತಿಳಿದು ಬರುತ್ತದೆ. ಇದು ಇವರ ವೀರಶೈವಪರ ಕೃತಿಗಳಲ್ಲಿ ಬಹುಶಃ ಮೊದಲನೆಯದು. ಇದರ ರಚನೆಗೆ ಅವರು ಹಲವಾರು ವೀರಶೈವ ಕಾವ್ಯ-ಪುರಾಣಗಳನ್ನು ಬಳಸಿಕೊಂಡಿದ್ದಾರೆ. ಬಸವಣ್ಣನವರ ಬಗ್ಗೆ ಕೇವಲ ಅಂಧಶ್ರದ್ಧೆ ತುಂಬಿದ್ದ ಅಂದಿನ ದಿನಗಳಲ್ಲಿ ಅವರು ಅತ್ಯಂತ ವಸ್ತುನಿಷ್ಠವಾದ ಶೈಲಿಯಲ್ಲಿ ಇದನ್ನು ಬರೆಯಲು ಪ್ರಯತ್ನಿಸಿದ್ದಾರೆ. ಹರಿಹರ, ಭೀಮಕವಿ, ಲಕ್ಕಣ್ಣದಂಡೇಶ, ಗುಬ್ಬಿಯ ಮಲ್ಲಣಾರ್ಯ, ಸಿಂಗರಾಜ, ಬಸವಲಿಂಗ ಕವಿ ಮುಂತಾದ ಪ್ರಾಚೀನ ಲೇಖಕರ ಹೇಳಿಕೆಗಳನ್ನೆಲ್ಲ ಪರಾಮರ್ಶಿಸಿ ನೋಡಿದ್ದಾರೆ. ಜೊತೆಗೆ ಧರಣಿ ಪಂಡಿತನ ಹೇಳಿಕೆಗಳನ್ನೂ, ಅವನನ್ನೇ ಹೆಚ್ಚಾಗಿ ಆಧರಿಸಿ ತಮ್ಮ ವಿಚಾರಗಳನ್ನು ಪ್ರತಿಪಾದಿಸಿದ ಡಾ. ಭಂಡಾರಕರ ಮತ್ತು ಶ್ರೀ ದೇಶಪಾಂಡೆಯವರ ನಿಲವನ್ನೂ ತೂಕಬದ್ಧವಾಗಿ ಪರಾಮರ್ಶಿಸಿದ್ದಾರೆ. ಇದರಲ್ಲಿ ಅವರೀರ್ವರ ಹಲವು ಅಭಿಪ್ರಾಯಗಳನ್ನು ಮಂಜಪ್ಪನವರು, ಬಲು ಸಮರ್ಥವಾಗಿ ನಿರಾಕರಿಸಿದ್ದಾರೆ. ಅವು ಸತ್ಯಕ್ಕೆ ತುಂಬ ದೂರ ಎಂಬುದನ್ನು ಯಾರೂ ಒಪ್ಪಬಹುದಾದ ರೀತಿಯಲ್ಲಿ ಮಂಜಪ್ಪನವರು ಪ್ರತಿಪಾದಿಸಿದ್ದಾರೆ.

ಈ ದಿಶೆಯಲ್ಲಿ ಅವರು ವೀರಶೈವ ಪುರಾಣಗಳನ್ನಷ್ಟೇ ಅಲ್ಲದೆ ಕೆಲವು ಶಾಸನಗಳನ್ನೂ ಜನಮನದಲ್ಲಿ ನೆಲೆಯೂರಿದ್ದ ನಂಬಿಕೆಗಳನ್ನೂ ಪರಿಶೀಲಿಸಿ ನೋಡಿದ್ದಾರೆ. ಜನಮನದಲ್ಲಿನ ನಂಬಿಕೆಗಳನ್ನು ಕುರಿತು ಅವರು ಅರಿತುಕೊಳ್ಳಲು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ವಿವರಗಳನ್ನು ಕಲೆಹಾಕಿದ್ದಾರೆ ಮತ್ತು ಅವನ್ನೆಲ್ಲ ವಿಮರ್ಶೆಯ ಒರೆಗಲ್ಲಿಗೆ ತಿಕ್ಕಿತಿಕ್ಕಿ ನೋಡಿದ್ದಾರೆ. ಒಂದು ಕ್ಷೇತ್ರದ ಅಥವಾ ವಿಷಯದ ಅಧ್ಯಯನದ ಪೂರ್ವಭಾವಿಯಾಗಿ ವ್ಯಾಪಕವಾದ ಕ್ಷೇತ್ರಕಾರ್ಯ ನಡೆದ ಬೇಕಾದುದು ಅನಿವಾರ್ಯ. ಇಂದೂ ಕೂಡ ಬಹುಜನ ವಿದ್ವಾಂಸರಲ್ಲಿ ಕ್ಷೇತ್ರಕಾರ್ಯದ ಕೊರತೆ ಎದ್ದು ಕಾಣುತ್ತದೆ. ಅಂದಿನ ದಶಕಗಳ ದೇಶೀಯ ವಿದ್ವಾಂಸರಲ್ಲಿ ಇದು ಅಪರೂಪದ್ದಾಗಿತ್ತು. ಅಂಥದರಲ್ಲಿ ಮಂಜಪ್ಪನವರು ಮಾಡಿರುವ ಕ್ಷೇತ್ರಕಾರ್ಯ ಆಶ್ಚರ್ಯ ಹುಟ್ಟಿಸುವಂಥದು. ತಾವು ಹೋದ ಹೋದಲ್ಲಿ ಜನರನ್ನು ಮಠಗಳ ಸ್ವಾಮಿಗಳನ್ನು, ಅಧಿಕಾರಿಗಳನ್ನು ಸಂಪರ್ಕಿಸಿ ಒಂದೆಡೆಯವರಿಂದ ಸಂಗ್ರಹಿಸಿದ ಮಾಹಿತಿಯನ್ನು ಇನ್ನೊಂದೆಡೆಯವರಲ್ಲಿ ಸಂಗ್ರಹಿಸಿದ ಮಾಹಿತಿಯೊಂದಿಗೆ ತೂಗಿನೋಡಿ, ಅದಕ್ಕೆ ಸಂಬಂಧಪಟ್ಟಂತೆ ತಮ್ಮ ಊಹೆ ತರ್ಕಗಳನ್ನು ವಿವರವಾಗಿ ಚರ್ಚೆಗೀಡುಮಾಡುತ್ತಿದ್ದರು. ಹಾಗೆ ಮಾಡುವಾಗ ತೋರಿಬರುತ್ತಿದ್ದ ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ತಮಗೆ ಯೋಗ್ಯವೆಂದು ಕಂಡವುಗಳನ್ನು ಗ್ರಹಿಸುತ್ತಿದ್ದರು. ಹೀಗಾಗಿ ಬಸವಣ್ಣನವರನ್ನು ಕುರಿತ ಹಲವು ವಿಷಯಗಳನ್ನು ನಿಖರಗೊಳ್ಳುವುದು ಸಾಧ್ಯವಾಯಿತು. ಈ ಕ್ಷೇತ್ರದಲ್ಲಿ ನಡೆಯಬೇಕಾಗಿದ್ದ ಮುಂದಿನ ಬೃಹತ್ ಪ್ರಮಾಣದ ಸಂಶೋಧನೆಗೆ ಅವರ ಈ ಕಾರ್ಯದಿಂದಾದ ಸಹಾಯ ಅಷ್ಟಿಷ್ಟಲ್ಲ. ಉದಾಹರಣೆಗೆ ಬಸವಣ್ಣನವರ ಜನನ ಶಾ. ಶ. ೧೦೩೭ ಮನ್ಮಥ ಸಂವತ್ಸರ ವೈಶಾಖ ಶು. ೪ ಶನಿವಾರ ಸೂರ್ಯೋದಯದ ನಂತರ ಘಟಿಕಾ ೧೪-೨೪ ಎಂಬ ಅಂಶವನ್ನು ಹರಪನಹಳ್ಳಿಯ ಆರ್. ಶಾಂತಪ್ಪಾಜಿಯವರ ಸಹಾಯದಿಂದ ನಿರ್ಧರಿಸಿದರು. ತರುವಾಯ ಅದನ್ನೇ ಬಸವಜಯಂತಿ ಎಂದು ಆಚರಿಸುವ ಕ್ರಮ ಜಾರಿಗೆ ತಂದರು. ಅಂದು ಪ್ರಾರಂಭವಾದ ಈ ಉತ್ಸವ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಹಬ್ಬವಾಗಿ ಮಾರ್ಪಟ್ಟಿತು. ಈ ಮಿತಿಯನ್ನು ಅವರು ಸಂಸ್ಕೃತ ಬಸವಪುರಾಣದಿಂದ ತೆಗೆದುಕೊಂಡುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಬಿಜ್ಜಳನ ರಾಜ್ಯಾಧಿಕಾರದ ಅವಧಿಯನ್ನು ಒಂದು ಪ್ರಮಾಣಭೂತ ಆಧಾರವನ್ನಾಗಿ ಪರಿಗಣಿಸಿ, ಬಸವಣ್ಣನವರ ಜೀವನದ ಹಲವು ಸಂಗತಿಗಳನ್ನು ಗೊತ್ತು ಮಾಡಿದ್ದು, ಮೆಚ್ಚಬೇಕಾದ ಸಂಗತಿ. ಇದೇ ರೀತಿ ಚೆನ್ನಬಸವಣ್ಣನವರ ಜನನ ಕಲ್ಯಾಣದಲ್ಲಿ ಆಗಿಲ್ಲ. ಬಸವಣ್ಣನವರು ಕಲ್ಯಾಣಕ್ಕೆ ಅಥವಾ ಮಂಗಳವಾಡಕ್ಕೆ ಹೋಗುವ ಪೂರ್ವದಲ್ಲಿಯೇ ಆಗಿರಬೇಕೆಂಬುದು ಅವರ ತರ್ಕಬದ್ಧವಾದ, ಆದರೆ ತುಂಬ ಮಹತ್ವದ ನಿರ್ಣಯ. ಸಿದ್ಧರಸ ಮತ್ತು ಬಲದೇವ ಇವರಿಬ್ಬರು ಬೇರೆ ಬೇರೆ ಆಗಿದ್ದು ಬಿಜ್ಜಳನಲ್ಲಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದವರೆಂಬುದು ಅವರ ಒಂದು ಗ್ರಹಿಕೆ. ಸಾಮಗ್ರಿಯ ಅಭಾವದಲ್ಲಿ ಇದೊಂದು ಉಚಿತ ಪ್ರಕಲ್ಪನೆಯೆಂದೇ ಹೇಳಬೇಕು. ಬಲವಾದ ಪ್ರತಿಸಾಮಗ್ರಿ ಬೆಳಕಿಗೆ ಬರುವತನಕ ಇದು ಸಾಧುವಾದುದೇ. ಇದೇ ನಿಟ್ಟಿನಲ್ಲಿ ನೀಲಾಂಬಿಕೆ, ಬಿಜ್ಜಳ ಮತ್ತು ಸಿದ್ಧರಸರ ಸಂಬಂಧಗಳನ್ನು ಕುರಿತೂ ಚರ್ಚಿಸಿದ್ದಾರೆ. ನೀಲಾಂಬಿಕೆ ಸಿದ್ಧರಸನ ನಿಜಪುತ್ರಿ, ಬಿಜ್ಜಳನ ತಾಯಿ ಸಹಗಮನ ಮಾಡಿದಾಗ ಬಿಜ್ಜಳನ ತಮ್ಮ ಕರ್ಣದೇವನನ್ನು ಸಿದ್ಧರಸನ ಹೆಂಡತಿ ಪದ್ಮಗಂಧಿ ಹಾಲುಣಿಸಿ ಬೆಳಸಿದಳು. ತತ್ಕಾರಣ ನೀಲಲೋಚನೆ ಬಿಜ್ಜಳನಿಗೆ ಸಹೋದರಿಯೆಂಬ ಸಂಬಂಧ ಉಂಟಾಯಿತು ಎಂಬುದನ್ನು ಮಂಜಪ್ಪನವರು ಬೆಂಬಲಿಸಿದ್ದಾರೆ. ಬಿಜ್ಜಳರಾಯ ಚರಿತೆ ಮತ್ತು ಸಿಂಗಿರಾಜ ಪುರಾಣಗಳನ್ನು ಗಮನಿಸಿದರೆ ಈ ಬಗೆಯಲ್ಲಿಯೇ ಸಂಬಂಧಗಳು ಸಿದ್ಧವಾಗುತ್ತವೆ. ಬಿಜ್ಜಳನ ವ್ಯಕ್ತಿತ್ವವನ್ನು ಕುರಿತೂ ಅವರು ವಸ್ತುನಿಷ್ಠವಾದ ಮೌಲ್ಯಮಾಪನ ಮಾಡಿದ್ದಾರೆ. ಅವನೊಬ್ಬ ಕನಿಷ್ಠವ್ಯಕ್ತಿಯಾಗಿದ್ದನೆಂಬ ಶ್ರೀ ದೇಶಪಾಂಡೆಯವರ ವಿಚಾರವನ್ನು ಒಪ್ಪದೆ ಅವನೊಬ್ಬ ಸಮರ್ಥ, ಧೀರ ರಾಜನೆಂಬ ಅಂಶವನ್ನು ಎತ್ತಿ ಹೇಳಿದ್ದಾರೆ.

ಈ ರೀತಿ ಬಸವಣ್ಣ ಮತ್ತು ಅವರ ಸಮಕಾಲೀನ ಚರಿತ್ರೆಗಳನ್ನು ಕುರಿತಂತೆ ಹೇಳಿರುವ ಅವರ ಇತರ ನಿರ್ಣಯಗಳು ಬಹು ಮೌಲಿಕವಾಗಿಯೇ ಇವೆ. ಇದರರ್ಥ ಅವುಗಳಲ್ಲಿ ದೋಷ-ಕೊರತೆಗಳನ್ನು ಇಲ್ಲವೇ ಇಲ್ಲವೆಂದಲ್ಲ. ಧರಣಿ ಪಂಡಿತನ ವಿಚಾರಗಳನ್ನು ಅವರು ಅಲ್ಲಗಳೆದುದು ಸಮಂಜಸವೇ. ಆದರೆ ಸಿಂಗಿರಾಜನ ಕೃತಿಗೆ ಅವರು ಅತಿಯಾಗಿ ಮಹತ್ವ ನೀಡಿದ್ದಾರೆ. ಇದು ಅಸಮರ್ಥನೀಯ. ಸಿಂಗಿರಾಜನ ಕಾಲವನ್ನು ಅವರು ತಪ್ಪಾಗಿ ತಿಳಿದುದು ಇದಕ್ಕೆ ಕಾರಣವೇ ಹೊರತು ಯಾವ ಪೂರ್ವಾಗ್ರಹವೂ ಅಲ್ಲವೆಂಬುದು ಸಮಾಧಾನದ ಸಂಗತಿ. ಇಂಥ ಇನ್ನೆರಡು ತಪ್ಪುಗ್ರಹಿಕೆಯ ಉದಾಹರಣೆಗಳೆಂದರೆ ವೀರಶೈವವು ಆಗಮಗಳಿಂದ ಪ್ರಣೀತವಾದುದೆಂದೂ ಸಿದ್ಧಾಂತ ಶಿಖಾಮಣಿಯೇ ಅದರ ಆಧಾರಭೂತ ಗ್ರಂಥವೆಂದೂ ನಂಬಿದ್ದು.

ಪ್ರಸ್ತುತ ಬಸವಚರಿತ್ರೆಯ ಅಂಗವಾಗಿಯೇ ವೀರಶೈವಮತದ ತತ್ವ ವಿವೇಚನೆಯೂ ಬಂದಿದೆ. ವೀರಶೈವಮತದ ಹೆಸರು. ಪರಮಾತ್ಮಲಕ್ಷಣ, ಜೀವ ಸ್ವರೂಪ, ಸಂಸಾರ, ದುಃಖ, ಷಟ್‌ಸ್ಥಲ, ಅಂಗಸ್ಥಲ, ಲಿಂಗಸ್ಥಲ, ಲಿಂಗಾಂಗ ಸಾಮರಸ್ಯ, ಮುಕ್ತಿ, ಅಧಿಕಾರ, ಆಚಾರ ಮುಂತಾದ ವಿಚಾರಗಳನ್ನು ಸ್ಥೂಲವಾಗಿ ಇಲ್ಲಿ ವಿವರಿಸಿದ್ದಾರೆ. ಬಸವಣ್ಣನವರ ವ್ಯಕ್ತಿತ್ವವನ್ನು ಬುದ್ಧ, ಕ್ರಿಸ್ತ, ಆಚಾರ್ಯತ್ರಯರು ಮುಂತಾದ ವಿಭೂತಿಗಳೊಡನೆ ಹೋಲಿಸಿ ನೋಡಿದ್ದಾರೆ. ಅದರಲ್ಲೂ ಕರುಣಾಮಯರಾದ ಬುದ್ಧ ಮತ್ತು ಕ್ರಿಸ್ತರ ವ್ಯಕ್ತಿತ್ವದೊಡನೆ ತೌಲನಿಕವಾಗಿ ಪರಿಶೀಲಿಸಿದ್ದಾರೆ. ಅಂದಿನ ವೀರಶೈವವು ಪ್ರಸಾರಗೊಂಡ ಬಗೆಯನ್ನು ಕುರಿತು ಕೂಡ ಚಿಂತನೆ ನಡೆಸಿದ್ದಾರೆ. ಬಸವಣ್ಣನವರ ಕಾಲದಲ್ಲಿಯೇ ವೀರಶೈವವು ಸಾಕಷ್ಟು ಪ್ರಬಲವಾಗಿತ್ತೆಂದೂ ಅದರತ್ತ ಕೆಳವರ್ಗದ ಜನ ವಿಶೇಷ ಆಕರ್ಷಿತವಾಗಿದ್ದು, ಮೇಲುವರ್ಗದವರ ವಕ್ರದೃಷ್ಟಿಗೆ ಅದು ಗುರಿಯಾಗಿತ್ತೆಂದೂ ಸಕಾರಣವಾಗಿಯೇ ಊಹಿಸಿದ್ದಾರೆ. ಇದು ವ್ಯವಹಾರಿಕ ನಿಲವು. ನಮ್ಮ ಪರಂಪರೆ ಹಾಗೂ ಸಂಸ್ಕೃತಿಗಳ ಬಗ್ಗೆ ಈ ರೀತಿಯ ವಿಶ್ಲೇಷಣೆ ತುಂಬ ಅವಶ್ಯಕ. ‘ಲಕ್ಷದ ಮೇಲೆ ತೊಂಬತ್ತಾರು ಸಾವಿರ’ ಎಂಬ ಪ್ರಯೋಗ ಅಂದಿನ ಕಲ್ಯಾಣದಲ್ಲಿದ್ದ ವೀರಶೈವರ ಸಂಖ್ಯೆಯಾಗಿರಬೇಕೆಂದಿರುವ ಅವರ ಊಹೆ ಕೂಡ ಸಮರ್ಥನೀಯವಾದುವೇ ಸರಿ.

‘ಬಸವ ಚರಿತ್ರೆ’ಯ ಉತ್ತರಭಾಗದಲ್ಲಿ ಅವರು ಬರೆದಿರುವ ವಿಚಾರಗಳಿಗೆ ಪೂರಕವಾಗಿ ಎಂಬಂತೆ ‘ಬಸವಬೋಧಾಮೃತ’ ಬಂದಿದೆ. ಸಂಶೋಧನೆಯ ಅಂಶಗಳು ಹೆಚ್ಚಿಲ್ಲವೆಂದುಕೊಂಡರೂ ಇದರಲ್ಲಿ ವಚನಸಾಹಿತ್ಯದ ಸಾರವೆಲ್ಲ ಇದೆ. ಮಂಜಪ್ಪನವರ ವ್ಯಾಖ್ಯಾನದ ರೀತಿಯನ್ನು ಇದರಲ್ಲಿ ಕಾಣಬಹುದು. ‘ನೂರಾ ಎಂಟು ವಚನಗಳಿಗೆ’ (ಸು. ೧೧೦ ಕ್ಕೂ ಹೆಚ್ಚು) ಸರಳವಾದ ಕನ್ನಡದಲ್ಲಿ ಬರೆದಿರುವ ವ್ಯಾಖ್ಯಾನ ಮೌಲಿಕವಾಗಿದೆ. ಒಟ್ಟು ವಚನಸಾಹಿತ್ಯದ ಮೌಲ್ಯವೇನೆಂಬುದು ಅದರಿಂದ ವ್ಯಕ್ತವಾಗುತ್ತದೆ. ವಚನಸಾಹಿತ್ಯವನ್ನು ಕುರಿತು ಅವರು ಹಲವಾರು ವರ್ಷಗಳ ವರೆಗೆ ನಡೆಸಿದ ಅನುಸಂಧಾನದ ಫಲವೇ ಈ ವ್ಯಾಖ್ಯಾನವೆನ್ನಬಹುದು.

ಅವರ ಮುಂದಿನ ಸಂಶೋಧನಾ ಕೃತಿಯೆಂದರೆ ‘ಶುದ್ಧಿ ಮತ್ತು ಸಂಘಟನೆ’. ನಿರ್ವಿವಾದವಾಗಿ ಇದೊಂದು ಶ್ರೇಷ್ಠ ಸಂಶೋಧನಕೃತಿ. ಇದರಲ್ಲಿ ಪ್ರಾಚೀನ ಭಾರತೀಯ ಜನಾಂಗ, ಋಗ್ವೇದದ ದಶಾರ್ಣಯುದ್ಧ, ಅದರಲ್ಲಿನ ಅನಾರ್ಯ ರಾಜರ ಮತ್ತು ಜನವರ್ಗಗಳ ಉಲ್ಲೇಖಗಳು, ರಾಕ್ಷಸರು, ಆದಿದ್ರಾವಿಡರು, ದ್ರಾವಿಡರು, ಲಿಂಗಪೂಜೆಯ ಸಂಸ್ಕೃತಿ, ರಾಮಾಯಣ – ಮಹಾಭಾರತಗಳ ಕಾಲ, ಮಹಾಭಾರತದ ವಾಹೀಕ ಬ್ರಾಹ್ಮಣರ ಉಲ್ಲೇಖ ಇತ್ಯಾದಿಯಾಗಿ ಪ್ರಾಚೀನ ಭಾರತೀಯ ಜನಾಂಗದ ಏಳುಬೀಳುಗಳನ್ನು ಗುರತಿಸುತ್ತ, ೧೨ ನೆಯ ಶತಮಾನದ ವರೆಗಿನ ಪರಿಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿವೇಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಬಸವಣ್ಣನವರ ಜೀವನಕಾಲ ಮತ್ತು ಕಾರ್ಯಗಳ ಮಹತ್ವವೇನೆಂದಬುದನ್ನು ಗುರುತಿಸಲು ಪ್ರಯತ್ನ ಪಟ್ಟಿದ್ದಾರೆ. ಆರ್ಯರ ಪ್ರಾಬಲ್ಯ ಸ್ಥಾಪಿತವಾದ ತರುವಾಯ ಹಾಗೂ ಬಸವಣ್ಣನವರಿಗಿಂತ ಹಿಂದೆ, ಭಾರತೀಯರ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಗಮನಾರ್ಹವಾದ ಬದಲಾವಣೆಗಳು ಆಗದೆ ಹೋದುದು ಅವರಿಗೆ ಖೇದವನ್ನುಂಟು ಮಾಡಿದೆ. ಬುದ್ಧನ ಪ್ರಯತ್ನಗಳಿಂದಾಗಿ ಹಲವು ಶತಮಾನಗಳ ಮಟ್ಟಿಗೆ ಇಲ್ಲಿನ ಸ್ಥಿತಿ ಉತ್ತಮಗೊಂಡಿತ್ತಾದರೂ ಅದು ಬಹಳಕಾಲದವರೆಗೆ ಉಳಿಯಲಿಲ್ಲ. ಗುಪ್ತರ ಆಳ್ವಿಕೆಯೊಡನೆ ಅದರಲ್ಲಿ ಪುನಃ ಅವನತಿ ಪ್ರಾರಂಭಗೊಂಡಿತು. ಬೌದ್ಧಧರ್ಮ ಈ ನಾಡನ್ನೇ ಬಿಟ್ಟು ಹೊರನಡೆಯ ಬೇಕಾಯಿತು. ಜನನದಿಂದ ವರ್ಣಜಾತಿಗಳು ನಿರ್ಣಯಗೊಳ್ಳುವುದು ಆಳವಾಗಿ ಬೇರೂರಿ ಸಾಮಾಜಿಕ ನ್ಯಾಯವೇ ಅಸ್ತವ್ಯಸ್ತ ಗೊಂಡಿತು. ಇಂಥ ಸಮಯದಲ್ಲಿ ಬಸವಣ್ಣನವರ ಉದಯವಾಗಿ ಈ ಸಮಾಜವನ್ನು ಸಮಗ್ರ ಬದಲವಾಣೆಗೊಳಿಸುವ ಪಣ ತೊಡಬೇಕಾದ ಸ್ಥಿತಿಯೇ ನಿರ್ಮಾಣವಾಗಿತ್ತು; ವರ್ಣವ್ಯವಸ್ಥೆ, ಸಾಮಾಜಿಕ ಸೇವೆಗಳಲ್ಲಿ ಮೇಲು-ಕೀಳಿನ ಭಾವನೆ, ವ್ರತನಿಯಮಗಳೆಂಬ ಕೃತಕ ಆಚಾರಗಳು, ದೇವಾಲಯಗಳ ಅತಿಶಯ ಪ್ರಭಾವ, ತನ್ಮೂಲಕ ನಡೆಯುತ್ತಿದ್ದ ಜನತೆಯ ಶೋಷಣೆ, ರಾಜರು- ಮಾಂಡಲಿಕರು ಪುರೋಹಿತರು ಅನುಸರಿಸುತ್ತಿದ್ದ ಸಮಯ ಸಾಧಕವೃತ್ತಿ ಮುಂತಾದ ನಿಸರ್ಗ ವಿರುದ್ಧ ಆಚರಣೆಗಳು ಸಮಾಜವನ್ನು ಛಿದ್ರಛಿದ್ರಗೊಳಿಸಿದ್ದವು. ಚತುರ್ಥ – ಪಂಚಮವರ್ಗದವರ ಸ್ಥಿತಿ ತೀರ ದಯನೀಯವಾಗಿತ್ತು. ಬುದ್ಧದೇವನ ತರುವಾಯದ ೧೫೦೦ ವರ್ಷಗಳ ಅವಧಿಯಲ್ಲುಂಟಾದ ಇಂಥ ಸ್ಥಿತಿಯಲ್ಲಿ ಬಸವಣ್ಣನವರು ಜನಿಸಿ ಬಂದರು. ಅವರು ಏಕಾಂಗಿಯಾಗಿಯೇ ತಮ್ಮ ಸುಧಾರಣೆಯ ಮಹಾಕಾರ್ಯವನ್ನು ಕೈಗೆತ್ತಿಕೊಂಡರು. ತರುವಾಯ ಹಲವು ಜನ ಶರಣ ಶರಣೆಯರು ಅವರನ್ನು ಕೂಡಿ ಕೊಂಡರು. ಈ ಎಲ್ಲ ವಿವರಗಳನ್ನು ಮಂಜಪ್ಪನವರು ತಮ್ಮ ಈ ಕೃತಿಯಲ್ಲಿ ತಕ್ಕಷ್ಟು ಉತ್ತಮವಾಗಿಯೇ ಚರ್ಚಿಸಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ಅವರು ಮುಂಚಿನ ಕೃತಿಯಲ್ಲಿನಂತೆ ಪುರಾಣ ಸಾಹಿತ್ಯದ ಆಧಾರವನ್ನೇ ನಂಬದೆ ಇತರ ಸಾಮಗ್ರಿಯನ್ನು ಕೂಡ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಸ್ವತಃ ಬಸವಣ್ಣನವರ ವಚನಗಳಲ್ಲಿಯೇ ಬಿಜ್ಜಳನ ಹೆಸರು ಮೂರು ಕಡೆಗೆ ಉಲ್ಲೇಖಗೊಂಡಿರುವುದನ್ನು ಮಂಜಪ್ಪನವರು ಎತ್ತಿ ಹೇಳಿದ್ದಾರೆ. “ಬಸವಣ್ಣನವರ ಸಂಬಂಧವಾಗಿ ಈ ವರೆಗೆ ಎರಡು ಪ್ರಬಲ ಶಿಲಾಲಿಪಿಗಳೂ ದೊರೆತಿವೆ” ಎಂದು ಅವರು ಚೌಡದಾನಪುರ ಮತ್ತು ಅರ್ಜುನವಾಡ ಶಾಸನಗಳನ್ನು ಉಲ್ಲೇಖಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಬಸವಣ್ಣನವರ ಸಂಬಂಧಿಯಾದ ಪ್ರಮುಖ ಅಂಶವೊಂದನ್ನು ಕುರಿತು ಚರ್ಚಿಸಿದ್ದಾರೆ. “ಗುರುಲಿಂಗಜಂಗಮ ಪ್ರೇಮಿಗಳು ಮತ್ತು ಮುನಿಪ, ಜಂಗಮಪುರುಷ, ಮಹಾಮಹೇಶ್ವರ ಎಂಬ ಗೌರವೋಕ್ತಿಗಳಿಂದ (ಬಸವಣ್ಣನವರ ವಂಶಸ್ಥರು) ಬಹು ಪೂಜ್ಯರಾಗಿದ್ದಾರೆ” ಎಂದು ನಿರ್ಧರಿಸುತ್ತ ಇನ್ನೊಂದು ಪ್ರಮುಖ ಅಂಶದ ಕಡೆಗೆ ನಮ್ಮ ಲಕ್ಷ್ಯ ಸೆಳೆದಿದ್ದಾರೆ. “ಇವರೆಲ್ಲರೂ ಗೃಹಸ್ಥರಾಗಿಯೇ ಇದ್ದರೆಂದು ಧಾರಾಳವಾಗಿ ಹೇಳಬಹುದು ಮತ್ತು ಬಸವಣ್ಣನವರು ಭಕ್ತರೆಂಬ ಜಾತಿಯವರು, ಅವರು ಪೂಜ್ಯರಾಗಿರಲಿಲ್ಲ; ಎಂಬ ಕಲ್ಪನೆಯು ಮಿಥ್ಯವಾದುದೆಂದೇ ಈ ಶಿಲಾಶಾಸನದಿಂದ ಸ್ಪಷ್ಟವಾಗುತ್ತದೆ” ಎಂದು ಸಾರಿದ್ದಾರೆ. ೧೫,೧೬, ೧೭ನೆಯ ಶತಮಾನದಲ್ಲಿ ಹುಟ್ಟಿದ ವೀರಶೈವ ಗ್ರಂಥಗಳು ಉದ್ದೇಶಪೂರ್ವಕವಾಗಿ ಬಸವಣ್ಣನವರ ಚರಿತ್ರೆಯನ್ನು ಅಂತರಿತಗೊಳಿಸುವ ಕಾರ್ಯಕ್ಕೆ ಕೈಹಾಕಿವೆ. ಈ ಕಾರ್ಯ ಬಹುಶಃ ಶೂನ್ಯಸಂಪಾದನೆಕಾರರಿಂದ ಪ್ರಾರಂಭವಾಯಿತು. ಇವರು ಅಂದಿನ ಯಾವುದೋ ಆವಶ್ಯಕತೆಗಾಗಿ ಅಥವಾ ಆಶಯಪೂರ್ತಿಗಾಗಿ ಅಲ್ಲಮಪ್ರಭುವನ್ನು ಶೂನ್ಯಪೀಠದ ಚಕ್ರವರ್ತಿಯನ್ನಾಗಿ ಚಿತ್ರಿಸಹೊರಟರು. ಅವನನ್ನೇಕೇಂದ್ರವ್ಯಕ್ತಿ ಎಂದು ಭಾವಿಸಿಕೊಂಡರು. ಇದರಿಂದಾಗಿ ಬಸವಣ್ಣ, ಸಿದ್ಧಾರಾಮ ಮೊದಲಾದವರನ್ನು ದ್ವಿತೀಯ ದರ್ಜೆಯ ವ್ಯಕ್ತಿಗಳೆಂಬಂತೆ ಇವು ಚಿತ್ರಿಸಿದವು. ಶೂನ್ಯಸಂಪಾದನೆಕಾರರನ್ನನುಸರಿಸಿ ಪ್ರಭುಲಿಂಗಲೀಲೆ, ಪ್ರಭುದೇವರ ಪುರಾಣ ಮುಂತಾದ ಗ್ರಂಥಗಳು ಹುಟ್ಟಿದವು. ಈ ಪ್ರವೃತ್ತಿ ಮುಂದುವರಿದು ತಮ್ಮ ಮಠ ಸಂಪ್ರದಾಯಗಳನ್ನು ಎತ್ತಿ ಹಿಡಿಯಲೋಸುಗ ಲಿಂಗಲೀಲಾ ವಿಲಾಸ ಚಾರಿತ್ಯ್ರ, ಏಕೋತ್ತರ ಶತಸ್ಥಲ, ಗುರುರಾಜ ಚಾರಿತ್ಯ್ರ, ಚತುರಾಚಾರ್ಯ ಪುರಾಣ ಮುಂತಾದ ಗ್ರಂಥಗಳು ರಚನೆಗೊಂಡವು. ಇವು ಹರಿಹರ; ಪಾಲ್ಕುರಿಕೆ ಸೋಮೇಶ್ವರ, ಭೀಮಕವಿ ಮುಂತಾದವರು ಅನುಸರಿಸಿಕೊಂಡ ಬಂದಿದ್ದ ಧೋರಣೆಗಳು ಕಾಲಾಂತರದಲ್ಲಿ ಹಿಮ್ಮೆಟ್ಟುವಂತೆ ಮಾಡಿದುವು. ಈಗಲೂ ಅನೇಕರಲ್ಲಿ ಇಂಥ ಭಾವನೆಗಳಿವೆ. ಈ ಸಂದರ್ಭದಲ್ಲಿ ಒಂದೆರಡು ಅಂಶಗಳನ್ನು ಇಲ್ಲಿ ಗಮನಿಸಬಹುದು. ಬಸವಣ್ಣನವರನ್ನು ಹಲವು ವೀರಶೈವ ಗ್ರಂಥಗಳು ಪೂರ್ವಾಚಾರ್ಯರೆಂದು ಮಾನ್ಯಮಾಡಿವೆ. ಕಪ್ಪಡಿಸಂಗಮಕ್ಕೆ ಬಂದಾಗ ಅಲ್ಲಿಯ ಸ್ಥಾನಚಾರ್ಯ ಅವರಿಗೆ ಸಂಗಮನಾಥನ ಪೂಜೆಮಾಡಿಕೊಂಡಿರಲು ಹೇಳುತ್ತಾನೆ! ಬಸವಣ್ಣ ಅದೇರೀತಿ ನಡೆಯುತ್ತಾನೆ. ಮಂಗಳವಾಡಕ್ಕೆ ಹೋಗುವ ಪೂರ್ವದಲ್ಲಿ ಸಾಕ್ಷಾತ್ ನಂದಿಕೇಶ್ವರನೇ ಅವನಿಗೆ ಲಿಂಗ ದಿಕ್ಷೆಯಿತ್ತನೆಂದು ಹರಿಹರ ಬಣ್ಣಿಸಿದ್ದಾನೆ. ಅನಿಮಿಷಯ್ಯನಿಗೆ ಬಸವಣ್ಣನವರಿಂದ ಲಿಂಗಸಂಪ್ರಾಪ್ತಿಸಿತೆಂದು ಹಲವೆಡೆ ಬಂದಿದೆ. ಬದನೆಯಕಾಯಿಯನ್ನು ಕಟ್ಟಿಕೊಂಡು ಬಂದಿದ್ದ ಬಂದಿಕಾರರಿಗೆ ಲಿಂಗಧಾರಣ ಮಾಡಿದವರು ಬಸವಣ್ಣನವರೇ. ಅಸಂಖ್ಯಾತ ವೀರಶೈವ ಹಸ್ತಪ್ರತಿಗಳಲ್ಲಿ ”ಶ್ರೀಗುರು ಬಸವಲಿಂಗಾಯನಮಃ” ಅಥವಾ “ಶ್ರೀಬಸವಲಿಂಗಾಯನಮಃ” ಎಂಬ ಮಂತ್ರ ವಿದ್ದುದು ಕಂಡು ಬರುತ್ತದೆ. ಇವು ಬಸವಣ್ಣನವರ ವ್ಯಕ್ತಿಮಹಿಮೆಗೆ ಸಾಕ್ಷಿಯಾಗಿವೆ. ಇವೆಲ್ಲ ಸಂಗತಿಗಳನ್ನು ಒಟ್ಟಾರೆಯಾಗಿ ಗಮನಿಸಿದರೆ ಶ್ರೀ ಮಂಜಪ್ಪನವರ ಮಾತಿನ ಸತ್ಯತೆ ಸ್ಪಷ್ಟಪಡುತ್ತದೆ.

ಅವರ ಇಂಥ ಹಲವು ನಿರ್ಣಯಗಳು ಯಾವುದೇ ಪೂರ್ವಾಗ್ರಹವಿಲ್ಲದೆ, ಇದ್ದ ಪೂರ್ವಾಗ್ರಹಳ ನಿವಾರಣೆಗಾಗಿ ತಲೆಯೆತ್ತಿವೆ. ಬಸವಣ್ಣನವರಿಗೆ ಉಪನಯನ ಸಂಸ್ಕಾರವಾಗಿತ್ತೆಂದು ಸ್ಪಷ್ಟವಾದ ಮಾತುಗಳಲ್ಲಿ ಅವರು ಒಪ್ಪಿಕೊಂಡು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿಯೇ ಆದಯ್ಯ ಮತ್ತು ದೇವರ ದಾಸಿಮಯ್ಯನ ಮಗ ಸದ್ಯೋಜಾತನಗೆ ಉಪನಯನವಾದ ವಿಷಯವನ್ನೂ ಎತ್ತಿತೋರಿಸಿದ್ದಾರೆ. ಬಸವಣ್ಣ, ಶಂಕರದಾಸಿಮಯ್ಯ ಮೊದಲಾದ ಶರಣರು ಮೊದಲು ಸ್ಥಾವರಲಿಂಗ ಪೂಜೆಯಿಂದ ಪ್ರೇರಿತರಾಗಿಯೇ ಇಷ್ಟಲಿಂಗದತ್ತ ಒಲಿದರೆಂದೂ ಅಂದಿನ ಸ್ತ್ರೀಯರು ಮೊದಲುಗೊಂಡು ಅನೇಕರು ಶಿರದಲ್ಲಿ ಲಿಂಗಧರಿಸಿದ್ದರೆಂದೂ ಸಾಧಾರವಾಗಿಯೇ ಊಹಿಸಿದ್ದಾರೆ. (ಪುಟ. ೪೭೭).*

ಶ್ರೀ ಮಂಜಪ್ಪನವರು ಇನ್ನೂ ಮುಂದುವರಿದು ಹಲವಾರು ಮಹತ್ತರ ವಿಚಾರಗಳನ್ನು ಮಂಡಿಸಿದ್ದಾರೆ. ಉದಾಹರಣೆಗೆ ಸಿದ್ಧಾಂತ ಶಿಖಾಮಣಿಯನ್ನೂ ಪಂಚಾಚಾರ್ಯರನ್ನೂ ಕುರಿತಾದ ಅವರ ವಿಚಾರಗಳನ್ನು ನೋಡಬಹುದು. “ರೇಣುಕರಿಂದ ಅಗಸ್ತ್ಯರಿಗೆ ಬೋಧಿಸಿದ್ದೆಂದು ಹೇಳಲ್ಪಡುತ್ತಿರುವ ಸಿದ್ಧಾಂತ ಶಿಖಾಮಣಿಯು ಬಸವಣ್ಣನವರ ತರುವಾಯ ರಚನೆಯಾದುದು. ಕವಿ ಕಾಣದುದನ್ನು ರವಿ ಕಂಡನೆಂಬಂತೆ ರೇಣುಕರು ಅಗಸ್ತ್ಯನಿಗೆ ಬೋಧಿಸಿದರೆಂಬುದು ಕವಿಯ ಕಲ್ಪನೆಯ ಮಾತೇ ವಿನಃ ಐತಿಹಾಸಿಕ ಸಂಗತಿಯಲ್ಲ. ಆ ಸಿದ್ಧಾಂತ ಶಿಖಾಮಣಿಯನ್ನು ಬರೆದ ಶಿವಯೋಗಿ ಆಚಾರ್ಯನೇ ತನ್ನ ವಂಶವನ್ನು ಅದೇ ಗ್ರಂಥದ ಮೊದಲನೆಯ ಪರಿಚ್ಛೇದದಲ್ಲಿ ಹೀಗೆ ಹೇಳಿಕೊಂಡಿದ್ದಾನೆ”ಎನ್ನುತ್ತ “ಸಿದ್ಧರಾಮೇಶ್ವರನ ವಂಶದಲ್ಲಿ ಮುದ್ದದೇವನೆಂಬವನು ಜನ್ಮವೆತ್ತಿದನು. ಆತನಿಗೆ ಸಿದ್ಧನಾಥನೆಂಬ ಶಿವಾಚಾರ್ಯನಿದ್ದನು. ಆತನ ಮಗನಾದ ಶಿವಯೋಗಿ ಆಚಾರ್ಯನೇ ಈ ಗ್ರಂಥವನ್ನು ರಚಿಸಿದನು” ಎಂಬ ಬಹು ಮಹತ್ವದ ಅಂಶದ ಕಡೆಗೆ ಗಮನ ಸೆಳೆದಿದ್ದಾರೆ. ಹೀಗೆ ಶಿವಯೋಗಿ ಶಿವಾಚಾರ್ಯನು ಸಿದ್ಧರಾಮನ ವಂಶೋತ್ಪನ್ನನಾದ ಮುದ್ದದೇವ ನೆಂಬವನ ಗುರುವಿನ ಮಗನೆಂಬ ಖಚಿತವಿರುವ ವಿಚಾರವನ್ನು ಮಂಜಪ್ಪನವರು ಎತ್ತಿ ತೋರಿದ್ದಾರೆ. ಇದು ಅವರು ಶ್ರೇಷ್ಠಮಟ್ಟದ ಸಂಶೋಧಕರೆಂಬುದನ್ನು ಸಾಬೀತು ಪಡಿಸುತ್ತದೆ. ಇದೇ ರೀತಿ “ವೇದ ಅಥವಾ ದಶೋಪನಿಷತ್ತುಗಳು ಹೇಗೆ ಕ್ಲುಪ್ತವಾಗಿ ವ್ಯವಸ್ಥಿತ ರೂಪದಲ್ಲಿವೆಯೋ ಹಾಗೇನೂ ಶಿವಾಗಮಗಳಿಲ್ಲ. ಆದುದರಿಂದ ನಾನಾಕಲ್ಪಿತಾಭಿಪ್ರಾಯಗಳೆಲ್ಲಾ ಸೇರಲು ಅವಕಾಶವಾಗಿರುವ ಆಗಮಗಳು ವೀರಶೈವರ ಪ್ರಮಾಣ ಗ್ರಂಥಗಳಾಗಲಾರವು. ರೇಣುಕಾದಿ ಪಂಚಾಚಾರ್ಯರು ಈ ವೀರಶೈವಮತವನ್ನು ಸ್ಥಾಪಿಸಿದರೆಂದು ಅನೇಕರು ಹೆಳುತ್ತಿದ್ದಾರಷ್ಟೇ. ಎಂದ ಮೇಲೆ ಅವರು ಬರೆದ ಗ್ರಂಥಗಳಿರಬೇಕಷ್ಟೇ. ಇಲ್ಲವೆ ಅವರು ಬೋಧಿಸಿದ ಮತತತ್ವಗಳು ಸಂಗ್ರಹಿತವಾಗಿರಬೇಕಲ್ಲವೆ ? ಒಂದಾದರೂ ಮತಗ್ರಂಥವಿದ್ದರೆ ಬೈಲಿಗೆ ಬರಲಿ.” ಎಂದು ಸವಾಲನ್ನು ಎಸೆದಿದ್ದಾರೆ. (ಪುಟ. ೪೯೨). “ತಮ್ಮಿಷ್ಟದಂತೆ ಮಾಡಿಕೊಂಡ ಸಂಸ್ಕೃತ ಶ್ಲೋಕಗಳೆಲ್ಲಾ ಆಗಮ ಶ್ಲೋಕಗಳಾಗಿಯೇ ಪರಿಣಮಿಸಿವೆ” ಎಂಬ ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ. ರೇಣುಕರು ಅಥವಾ ರೇವಣಸಿದ್ಧರು ಕ್ರಿ. ಶ. ೧೧೮೭ ರ ಸಿರಿವಾಳ ಶಾಸನದಲ್ಲಿ ಉಲ್ಲೇಖಿತರಾದವರೇ ವಿನಃ ಬೇರಾರೂ ಅಲ್ಲ. ಅವರು ಲಕುಲೀಶ ಶೈವರಾಗಿದ್ದಾರೆಂದು ಮಂಜಪ್ಪನವರು ಬಲವಾಗಿ ನಂಬಿದ್ದರು. ಐತಿಹಾಸಿಕ ಆಧಾರಗಳಿಗೆ ಮಾತ್ರ ಗೌರವ ಸಲ್ಲಿಸುವ ಅವರ ನಿಲವು ಇಂಥಲ್ಲೆಲ್ಲ ಬಹುಸ್ಫುಟಗೊಳ್ಳುತ್ತದೆ. ಇದೇ ರೀತಿ ಅವರು ಮುಂದುವರಿದು ಪಂಚಾಚಾರ್ಯರಲ್ಲಿ ಒಬ್ಬರೆಂದು ವರ್ಣಿಸಲ್ಪಟ್ಟ ಮಲ್ಲಿಕಾರ್ಜುನ ಪಂಡಿತಾರಾಧ್ಯರ ಬಗ್ಗೆಯೂ ಮಾಡಿರುವ ಮೀಮಾಂಸೆ ಸಮರ್ಪಕವೆಂದೇ ತೋರುತ್ತದೆ.

ಈ ಕೃತಿಯ ಅಂತ್ಯದಲ್ಲಿ ಲಿಂಗಪೂಜೆಯ ಹಂತಗಳನ್ನು ಗುರುತಿಸಿದ್ದಾರೆ. ಪ್ರಾಚೀನಕಾಲದಲ್ಲಿದ್ದ ಲಿಂಗಪೂಜೆ ಆರ್ಯರು ಬಂದ ಸಾವಿರಾರು ವರ್ಷಗಳ ತರುವಾಯ, ಅದು ಪಾಶುಪತರಿಂದ ದೇಹದ ಮೇಲೆ ಧರಿಸುವ ಲಿಂಗರೂಪಕ್ಕೆ ಬಂತು. ಆದರೆ ಅದು ಲಕುಲೀಶ ಪಾಶುಪತರು ವರ್ಣಾಶ್ರಮ ಧರ್ಮವನ್ನನುಸರಿ ಸುವವರಾಗಿದ್ದರು. ತರುವಾಯದಲ್ಲಿಯೇ ಬಸವಣ್ಣನವರು ಅವತರಿಸಿ ಇಷ್ಟಲಿಂಗ ಧಾರಣೆಯನ್ನು ಕಡ್ಡಾಯವೆಂಬಂತೆ ಮಾಡಿ ಮೊದಲಿನ ಶೈವವನ್ನು ಮತ್ತೂ ಪರಷ್ಕಾರಗೊಳಿಸಿದರು. ಅದೇ ವೀರಶೈವ ಅಥವಾ ಲಿಂಗವಂತ ಮತವೆಂದು ಹೆಸರಾಯಿತು.

ಮೇಲಿನ ವಿಚಾರಗಳನ್ನು ಮಂಜಪ್ಪನವರು ಮಂಡಿಸಿ ಬಸವಣ್ಣನವರನ್ನು ಕುರಿತಾದ ತಮ್ಮ ನಿಲುವೇನೆಂಬುದನ್ನು ಅತ್ಯಂತ ನಿರ್ದಿಷ್ಟ ಶಬ್ದಗಳಲ್ಲಿ ಮುಂದಿನಂತೆ ಸಾರಿದರು !

“ಒಬ್ಬಾತನು ಒಂದು ಮನೆಯನ್ನು ಕಟ್ಟಿದನೆಂದರೆ ಅದರಲ್ಲಿದ್ದ ಕಲ್ಲು ಕಟ್ಟಿಗೆ ಕಬ್ಬಿಣ ಮೊದಲಾವುಗಳನ್ನೆಲ್ಲಾ ಹುಟ್ಟಿಸಿದನೆಂದು ತಿಳಿಯಬೇಕೆ? ಮೊದಲಿದ್ದವುಗಳನ್ನೇ ತನ್ನಿಷ್ಟದಂತೆ ವ್ಯವಸ್ಥಿತಗೊಳಿಸಿ ಒಂದು ರೂಪಕ್ಕೆ ತರುವುದರಿಂದ ಅತನು ಮನೆಯನ್ನು ಕಟ್ಟಿದನೆಂದು ಹೇಳುವುದಿಲ್ಲವೆ?” ಅದೇ ಪ್ರಕಾರ ಬಸವಣ್ಣನವರು ತಮ್ಮ ಪೂರ್ವದಲ್ಲಿದ್ದ ಲಿಂಗಧಾರಣ ಪದ್ಧತಿ, ಭಕ್ತಿಮಾರ್ಗ, ವರ್ಣಾಶ್ರಮ ವಿರಹಿತ ಸಮಾಜರಚನೆ ಮೊದಲಾದವುಗಳನ್ನೆಲ್ಲಾ ಏಕೀಕರಿಸಿ ಜನಾಂಗದ ಶ್ರೇಯಸ್ಸಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಡಿಸಿ ಈ ವೀರಶೈವಮತವೆಂಬ ಸುಂದರವಾದ ಮನೆಯನ್ನು ಕಟ್ಟಿದರು. ಅಂತೆಯೇ ಇವರಿಗೆ ವೀರಶೈವ ಮತಸ್ಥಾಪಕರೆಂದು ಹೇಳಿದುದು.” ಈ ರೀತಿ ಶ್ರೀ ಮಂಜಪ್ಪನವರು ತಮ್ಮ ನಿಲವು ಏನೆಂಬುದನ್ನು ಖಚಿತವಾದ ಶಬ್ದಗಳಲ್ಲಿ ಹೇಳಿದ್ದಾರೆ. ಅವರ ನಿಲವು ಸ್ಫಟಿಕದಂತೆ ನಿರ್ಮಲವಾಗಿದೆ.

ಈ ಕೃತಿಯಲ್ಲಿ ಕೆಲವು ಅಸಮಂಜಸ ವಿಚಾರಗಳು ಹಾಗೇ ಉಳಿದಿರುವುದೇನೋ ನಿಜ. ಉದಾಹರಣೆಗೆ ಅರ್ಜುನವಾಡ ಶಾಸನೋಕ್ತ ದೇವರಾಜ ಮುನಿಪ ಬಸವಣ್ಣನವರ ಮೊಮ್ಮಗನೆಂದು ಅವರು ಭಾವಿಸಿದ್ದಾರೆ. ಸಂಗನಬಸವನ ಅಗ್ರಜ ಎಂದರೆ ಬಸವಣ್ಣನವರ ಅಣ್ಣನೆಂದು ಆ ಶಾಸನ ಖಚಿತವಾಗಿ ಹೇಳಿದೆ. ಬಿಜ್ಜಳ ಜೈನ ಮತೀಯನೆಂದು ವಿರೂಪಾಕ್ಷ ಪಂಡಿತ ಹೇಳಿ ದೊಡ್ಡ ತಪ್ಪನ್ನೆಸಗಿದ. ಅದನ್ನೇ ನಂಬಿ ಧರಣೀಪಂಡಿತ ಬಿಜ್ಜಳನನ್ನು ಕುರಿತುದ ಜೈನಪರವಾದ ಕಾವ್ಯವನ್ನೇ ಬರೆದು ಹಾಕಿದ. ಈ ತಪ್ಪು ಹಾಗೇ ಮುಂದುವರೆಯಿತು. ಮಂಜಪ್ಪನವರೂ ಇದನ್ನೇ ನಂಬಿ ಬಿಜ್ಜಳ ಮತ್ತು ನೀಲಲೋಚನೆಯರು ಜೈನರೆಂದು ಬರೆದರು. ಬಿಜ್ಜಳನ ಶಾಸನಗಳ ಪರಿಶೋಧನೆಯಿಂದ ಆತ ಜೈನನಲ್ಲ ; ಆತನೊಬ್ಬ ಕಟ್ಟಾ ಶಿವಭಕ್ತ ; ಆದರೆ ಅತಿಯಾದ ಮಹತ್ವಾಕಾಂಕ್ಷಿ ಎಂಬ ಅಂಶವನ್ನು ವಿದ್ವಾಂಸರು ಗಮನಿಸಿದ್ದಾರೆ. ಹರಿಹರ ಬಿಜ್ಜಳನನ್ನು ‘ಕಲಿಯುಗ ರಾವಣ’ ಎಂದಿರುವುದೂ ಶಾಸನಗಳು ಆತನನ್ನು ‘ಪ್ರತಾಪ ಲಂಕೇಶ್ವರ’ವೆಂದು ಕರೆದಿರುವುದೂ ಬಹು ಸ್ವಾರಸ್ಯವಾಗಿದೆ. ಮಂಜಪ್ಪನವರ ಗಮನಕ್ಕೆ ಈ ಅಂಶ ಬರಲಿಲ್ಲ. ಹೀಗೆ ಕೆಲವು ಅಂಶಗಳನ್ನು ಬಿಟ್ಟರೆ ಈ ಕೃತಿ ಅವರ ಪಕ್ವ ಸಂಶೋಧನೆಗೆ ಒಂದು ಉತ್ತಮ ಉದಹರಣೆಯಾಗಿ ನಿಲ್ಲುತ್ತದೆ.

ಮಂಜಪ್ಪನವರು ಭೀಮಕವಿ ಮತ್ತು ವಿರೂಪಾಕ್ಷ ಪಂಡಿತರ ಬಗ್ಗೆ ಹೇಳಿರುವ ಮಾತುಗಳು ತುಂಬ ಮೌಲಿಕವಾಗಿವೆ. ಬಸವಣ್ಣನವರ ಚರಿತ್ರೆಯನ್ನು ಬರೆದ ಭೀಮಕವಿ, ಅವರಲ್ಲಿ ಅಪಾರ ಗೌರವ ಇಟ್ಟಿದ್ದನಾದರೂ ಬಸವಣ್ಣನವರ ಬದುಕಿನ ಪ್ರಮುಖ ಅಂಶಗಳಲ್ಲೊಂದಾದ ಬ್ರಾಹ್ಮಣೀಯ ಧರ್ಮದ ವಿರುದ್ಧ ಅವರ ನಡೆಸಿದ ಹೋರಾಟವನ್ನು ಯಥಾವತ್ತಾಗಿ ಚಿತ್ರಿಸುವ  ಧೈರ್ಯಮಾಡಿಲ್ಲ ಅರ್ಥಾತ್ ವೈದಿಕಮತವನ್ನು ಖಂಡಿಸುವ ಗೊಡವೆಗೆ ಅವನು ಕೈ ನೀಡಲಿಲ್ಲ. ಅದೇ ರೀತಿ ವಿರೂಪಾಕ್ಷ ಪಂಡಿತನು ಚೆನ್ನಬಸವಣ್ಣ ಅವತರಿಸಿದ್ದು ಬೌದ್ಧ, ಜೈನ ಮತ್ತು ಚಾರ್ವಾಕ ಮತಗಳ ಖಂಡನೆಗಾಗಿ ಎಂದು ಹೇಳಿ ವೈದಿಕ ಮತದ ಹೆಸರನ್ನೇ ಎತ್ತಲಿಲ್ಲ: (ಪುಟ ೪೮೮) (ಈ ವಿಷಯದಲ್ಲಿ ಹರಿಹರನ ನಿಲವು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿದೆ.) ನಮ್ಮ ಕವಿಗಳು ನಮ್ಮಲ್ಲಿ ಹುಟ್ಟಿಕೊಂಡ ಕ್ರಾಂತಿಯ ಕಿಡಿಗಳನ್ನು ಹೇಗೆ ಕ್ರಮಬದ್ಧವಾಗಿ ನಂದಿಸುತ್ತ ಬಂದರೆಂಬಂಶವನ್ನು ಶ್ರೀ ಮಂಜಪ್ಪ ಮನಗಂಡಿದ್ದರೆಂದು ಈ ಪರಾಮರ್ಶೆ ತಿಳಿಯಪಡಿಸುತ್ತದೆ.

ಈ ಶ್ರೇಣಿಯಲ್ಲಿನ ಅವರ ಇನ್ನೊಂದು ಕೃತಿ ‘ಲಿಂಗಪೂಜೆಯ ಐತಿಹಾಸಿಕ ವಿವೇಚನೆ’. ದ್ರಾವಿಡರಲ್ಲಿದ್ದ ಲಿಂಗಪೂಜೆ ಮತ್ತು ತರುವಾಯ ಅದರಲ್ಲಾದ ವಿಕಾಸವನ್ನು ಕುರಿತಂತೆ ಮಂಜಪ್ಪನವರು ‘ಬಸವ ಚರಿತ್ರೆ’ ಮತ್ತು ‘ಶುದ್ಧಿ ಮತ್ತು ಸಂಘಟನೆ’ಗಳಲ್ಲಿ ಚರ್ಚಿಸಿದ್ದರು. ಇದರಲ್ಲಿ ಅದೇ ವಿಷಯವನ್ನು ಪುನಃ ಎತ್ತಿಕೊಂಡು ಲಿಂಗ ವಿಷಯಕವಾದ ಪರಂಪರಾಗತ ಚೋದ್ಯ-ಕುಚೋದ್ಯದ ವಿವರಗಳನ್ನು ಪರಿಶೀಲಿಸಿ ನೋಡಿದ್ದಾರೆ. ಪೃಥ್ವಿಯನ್ನು ಆವರಿಸಿರುವ ಆಕಾಶದ ಸ್ವರೂಪವೇ ಲಿಂಗವಾಗಿಯೂ ಶಿವನ ಪ್ರತೀಕವಾಗಿಯೂ ಪೂಜೆಗೊಂಡಿದೆ ಎಂಬ ನಿರ್ಣಯಕ್ಕೆ ಅವರು ತಲುಪಿದ್ದಾರೆ.

ಈ ನಾಲ್ಕು ಮುಖ್ಯ ಕೃತಿಗಳಲ್ಲದೆ ಸಂಶೋಧನೆಯ ಹಲವು ಅಂಶಗಳು ಅವರ ಇತರ ಹಲವಾರು ಗ್ರಂಥಗಳಲ್ಲಿಯೂ ನಿಹಿತವಾಗಿವೆ. ವೀರಶೈವರ ೬೪ ಶೀಲಗಳಲ್ಲಿ ೨೧ನೆಯ ಶೀಲವು ಬಟ್ಟೆಯ ಪಾವಿತ್ಯ್ರವನ್ನು ಕುರಿತು ಹೇಳುತ್ತದೆ. ಇದನ್ನರಿತ ಮಂಜಪ್ಪನವರು ಅದನ್ನು ಖಾದಿ ಪ್ರಚಾರದಲ್ಲಿ ಚೆನ್ನಾಗಿ ಬಳಸಿಕೊಂಡರು. ಸಮಾಜದಲ್ಲಿನ ತಪ್ಪು ಕಲ್ಪನೆ-ನಂಬಿಕೆಗಳನ್ನು ದೂರಮಾಡಿ ಅದರ ಪುರೋಭಿವೃದ್ಧಿಗೆ ನೆರವಾಗುವುದೇ ನಿಜವಾದ ಸಂಶೋಧಕನ ಗುರಿ. ಇದು ಸಂಶೋಧಕನ ಮೇಲೆ ಇರುವ ಮುಖ್ಯವಾದ ಸಾಮಾಜಿಕ ಹೊಣೆ. ಶ್ರೀ ಮಂಜಪ್ಪನವರು ತಮ್ಮ ಅಪಾರವಾದ ಕಾರ್ಯಭರದಲ್ಲಿಯೂ ಈ ಹೊಣೆಯನ್ನು ಬಹು ಸಮರ್ಥವಾಗಿ ನಿರ್ವಹಿಸಿದ್ದಾರೆ.

 

*ಇಲ್ಲಿ ಮತ್ತು ಮುಂದೆ ಕೆಲವೆಡೆಗಳಲ್ಲಿ ಕಂಸದೊಳಗೆ ಕೊಟ್ಟಿರುವ ಪುಟ ಸಂಖ್ಯೆಗಳು “ರಾಷ್ಟ್ರ ಧರ್ಮದ್ರಷ್ಟಾರ ಹರ್ಡೇಕರ ಮಂಜಪ್ಪನವರು” ಗ್ರಂಥದವು.