ಮಹಾರಾಷ್ಟ್ರದ ಜಾನಪದ ಮತ್ತು ಮಾರ್ಗ ಸಂಪ್ರದಾಯದ ಹಲವಾರು ದೇವತೆಗಳು ಮೊದಲಲ್ಲಿ ಕನ್ನಡಿಗರ ದೇವತೆಗಳೆಂದೇ ಖ್ಯಾತರಾದವರು. ಪಂಡರಪುರದ ವಿಠೋಬಾನ ಸಂಗತಿ ಎಲ್ಲಿರಿಗೆ ತಿಳಿದೇ ಇದೆ. ಜ್ಞಾನೇಶ್ವರಿಯಲ್ಲಿನ ಕನ್ನಡ ಓವಿ ಮತ್ತು ಕನ್ನಡ ಭಾಷಾ ಪ್ರಭಾವ ಕುರಿತಾದ ವಾದ ವಿವಾದ ಈಗ ಒಂದು ನಿಲುಗಡೆಗೆ ಬಂದಿದೆ. ಆ ಗ್ರಂಥದ ಮೇಲೆ ಆದ ಗ್ರಂಥದ ಮೇಲೆ ಆದ ಕನ್ನಡದ ಪ್ರಭಾವವನ್ನು ಈಗ ಒಪ್ಪಲಾಗಿದೆ.ನೇಗಿನಹಾಳ ಪ್ರಬಂಧಗಳು ಎಂದರೆ ವಿಠೋಬಾ ಮೂಲತಃ ಕನ್ನಡಿಗರ ದೇವರೆಂಬ ವಿಷಯ ಮಹಾರಾಷ್ಟ್ರದಲ್ಲಿ ಸರ್ವಮಾನ್ಯವಾಗಿದೆ. ಅದೇ ರೀತಿ ಸವದತ್ತಿ ಮತ್ತು ಇತರೆಡೆಯಲ್ಲಿ ದೇವಾಲಯ ಹೊಂದಿರುವ ರೇಣುಕೆಯ ಪ್ರಭಾವ ದಕ್ಷಿಣ ಮಹಾರಾಷ್ಟ್ರದ ಬಹುಭಾಗದಲ್ಲಿ ಕಂಡು ಬರುತ್ತದೆ. ಕೊಲ್ಲಾಪುರ ಅಚ್ಚಗನ್ನಡ ಪ್ರದೇಶವಾಗಿತ್ತೆಂಬ ಬಗೆಗೆ ಅನುಮಾನವಿಲ್ಲ. ಅಲ್ಲಿಯ ಅಧಿದೇವತೆಯಾದ ಮಹಾಲಕ್ಷ್ಮೀ ಒಂದು ಕಾಲದಲ್ಲಿ ಕನ್ನಡಿಗರಿಗೆ ಜನಪ್ರಿಯ ದೇವತೆಯೆನಿಸಿದ್ದಳು. ಇದೇ ದೇವತಾ ಪರಂಪರೆಯಲ್ಲಿ ಬರುವ ಇನ್ನೊಬ್ಬ ದೇವರೆಂದರೆ ಮೈಲಾರದೇವರು ಅಥವಾ ಮೈಲಾರಲಿಂಗ.

ವಿಠೋಬಾವ ಕನ್ನಡತನದ ಬಗ್ಗೆ ಮಹಾರಾಷ್ಟ್ರದಲ್ಲಿ ಕುಂಡು ಬಂದ ಭಿನ್ನಭಿಪ್ರಾಯ ಮೈಲಾರಲಿಂಗನ ಬಗ್ಗೆ ಕಂಡು ಬರಲೇ ಇಲ್ಲ. ಮಹಾರಾಷ್ಟ್ರದ ವಿದ್ವಾಂಸರಿಗೆ ಬಹುಬೇಗನೆ ಈತ ಕರ್ನಾಟಕದ ಜಾನಪದ ದೇವರು ಎಂಬ ವಿಷಯ ತಿಳಿದು ಬಂತು. ತತ್ಸಂಬಂಧವಾಗಿ ದೊರೆಯುವ ಸಾಕ್ಷಾಧಾರಗಳು ಮೈಲಾರಲಿಂಗನ ಕನ್ನಡ ತನವನ್ನು ನಿಸ್ಸಂಶಯಾವಾಗಿ ಸಿದ್ಧಪಡಿಸುವುದು ವಿದ್ವಾಂಸರ ಗಮನಕ್ಕೆ ಬಂತು. ಹಾಗಾಗಿ ಈ ದೇವರನ್ನು ಕುರಿತಾದ ಹೆಚ್ಚಿನ ಅನ್ವೇಷಣೆ ಕರ್ನಾಟಕದಲ್ಲಿ ನಡೆಯೆಬೇಕೆಂದು ಖಚಿತವಾಗಿ ಸೂಚಿಸಿದರು.

ದೇವತಾ ಸ್ವರೂಪಃ ಮಹಾರಾಷ್ಟ್ರದಲ್ಲಿ ಈ ದೇವರನ್ನು ಮೈರಾಳ, ಮೈಳಾರ, ಖಂಡೋಬಾ, ಮೇಂಗನಾಥ, ಹಯಪತಿ, ಮಾರ್ತಾಂಡಭೈರವ, ಮಲ್ಹಾರ (ರಿ)ಮಲುದೇವ, ಮಲ್ಲೇಶ್ವರ ಮಲ್ಲುಖಾನ ಅಜಮತಖಾನ ಎಂದು ಮುಂತಾಗಿ ಕರೆಯಲಾಗುತ್ತದೆ. ಅದರಲ್ಲೂ ಖಂಡೋಬಾ ಅಥವಾ ಖಂಡೇರಾಯ ಎಂಬ ಹೆಸರು ಸರ್ವಜನಪ್ರಿಯವಾಗಿದೆ. ಜತೆಗೆ ಏಳಕೋಟಿ ಎಂಬ ಅವನ ಹೆಸರು ಅಥವಾ ಬಿರುದು ಅಲ್ಲಿ ಎಲ್ಲ ದೇವಾಲಯಗಳಲ್ಲಿ ಈಗಲೂ ಉದ್ಘೋಷಿಸಲ್ಪಡುತ್ತದೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಭಕ್ತಕೋಟಿಯಲ್ಲಿ ಪ್ರಚಲಿತವಿರುವ ಗ್ರಂಥದಲ್ಲಿ ಈ ದೇವರ ಮೂಲಪೀಠ ಬೀದರ ಜಿಲ್ಲೆಯ ಪೇಂಬರ ಅಥವಾ ಪ್ರೇಮಪುರ ಅಥವಾ ಪ್ರೇಮಪುರಮೈಲಾರವೇ ಎಂದು ಖಂಡಿತವಾದ ಶಬ್ದಗಳಲ್ಲಿ ಹೇಳಿದೆ. ಮಹಾರಾಷ್ಟ್ರದ ಇತರತ್ರ ಈ ದೇವರ ದೇವಾಲಯಗಳು ನಿರ್ಮಾಣವಾಗುವಲ್ಲಿ ಪೇಂಬರವ ಈ ಪೀಠವೇ ಪ್ರೇರಣಾ ಸ್ಥಾನವೆಂದು ನಂಬಿಕೆಗಳು ಕೈಯೆತ್ತಿ ಸಾರುತ್ತಿವೆ. ಪ್ರೇಮಪುರ ಅಥವಾ ಪೇಂಬರದ ದೇವರು ಗೌಳಿಗಿತ್ತಿಯೊಬ್ಬಳ ಭಕ್ತಿ ಕಾರಣವಾಗಿ ಮೊದಲು ಸಾತಾರಾ ಜಿಲ್ಲೆಯ ಪಾಲಿಗೆ ಹೋದನಂತೆ. ಅಲ್ಲಿಂದ ನಳದುರ್ಗ (ಉಸ್ಮಾನಾಬಾದ) ಜಿಲ್ಲೆ). ಕ್ಕೆ ತರುವಾಯ ಜೆಜೂರಿಗೆ ಹೋಗಿ ನೆಲಸಿದನಂತೆ. ಇನ್ನೊಂದು ನಳದುರ್ಗಕ್ಕೆ, ಆಮೇಲೆ ಪಾಲಿಗೆ, ಆನಂತರ ಜೆಜೂರಿಗೆ ಹೋದನೆಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಸಾತಾರಾ ಜಿಲ್ಲೆಯ ಪಾಲಿ, ಉಸ್ಮಾನಾಬಾದ ಜಿಲ್ಲೆಯ ನಳದುರ್ಗ, ಪುಣೆ ಜಿಲ್ಲೆಯ ಜೆಜೂರಿ ಮತ್ತು ನಿಮಗಾಂವ, ಔರಂಗಬಾದ ಜಿಲ್ಲೆಯ ಸಾತಾರೆ, ಅಹಮ್ಮದ ನಗರ ಜಿಲ್ಲೆಯ ಶೇಗುಡ್ಡ ಮತ್ತು ನೇವಾಸೆಗಳು ಈ ದೇವರು ವಾಸಿಸುವ ಸ್ಥಳಗಳೆಂದು ಪ್ರಖ್ಯಾತವಾಗಿವೆ. ಜಾಗ್ರತಸ್ಥಾನಗಳೆಂದು ಇವುಗಳ ಬಗ್ಗೆ ಜನತೆ ಬಹುಗೌರವ ಪ್ರದರ್ಶಿಸುತ್ತದೆ. ಪ್ರಸಿದ್ಧವಾದ ಈ ದೇವಾಲಯಗಳಲ್ಲದೆ ಇತರ ಸ್ಥಾನಿಕ ಮಹತ್ವದ ದೇವಾಲಯಗಳು ಬಹಳ ಸಂಖ್ಯೆಯಲ್ಲಿವೆ. ಅಂಥ ಸಣ್ಣ ದೊಡ್ಡ ಎಲ್ಲ ದೇವಾಲಯಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ಸು. ಇನ್ನೂರು ಅಯ್ವತ್ತಕ್ಕೂ ಹೆಚ್ಚು ಎಂದು ಅಂದಾಜು ಮಾಡಲಾಗಿದೆ. ವ್ಯಾಪ್ತಿಯ ದೃಷ್ಟಿಯಿಂದ ಕೊಂಕಣ, ದಕ್ಷಿಣ ಮಹಾರಾಷ್ಟ್ರ, ಮರಾಠವಾಡಾ, ವಿದರ್ಭ ಈ ಎಲ್ಲ ಪ್ರದೇಶಗಳಲ್ಲಿ ದೇವಾಲಯಗಳೂ ಆಚರಣೆಗಳೂ ಭಕ್ತಕೋಟಿಯೂ ಬೆಳೆದು ನಿಂತಿವೆ.

ಪ್ರಾದೇಶಿಕ ಜಾನಪದದ ವೈಶಿಷ್ಟ್ಯಗಳಲ್ಲಿ ಒಂದು ದೇವರ ಮೂಲಪೀಠ ಪ್ರೇಮಪುರವೆಂದು ಒಪ್ಪಿದರೂ ಆಯಾ ಭಾಗದ ಜನತೆ ದೇವರು ತಮ್ಮಲ್ಲಿ ಅವಿನಾಭಾವಿಯಾದ ಸಂಬಂಧವುಳ್ಳವನು ಎಂದು ಭಾವಿಸುತ್ತದೆ. ಆ ಕಾರಣದಿಂದಾಗಿ ಆಯಾ ಪ್ರದೇಶದ ಜನರು ದೇವರಿಗೆ ಸಂಬಂಧಿಸಿದ ಐತಿಹ್ಯಗಳನ್ನು ಸ್ಥಾನೀಕರಿಸಿದ್ದು ಕಂಡು ಬರುತ್ತದೆ. ಉದಾಹರಣೆಗೆ ದೇವರ ಪಟ್ಟದ ಹೆಂಡತಿಯಾದ ಮಾಳಸಾದೇವಿ ಅಥವಾ ಗಂಗಿಮಾಳಮ್ಮನ ತವರು ಮನೆ ಅಹಮ್ಮದ ನಗರ ಜಿಲ್ಲೆಯ ನೇವಾಸೆ ಕ್ಷೇತ್ರವಂತೆ. ಅವಳು ಅಲ್ಲಿಯ ಲಿಂಗಾಯತ ಬಣಜಿಗನಾದ ತಿಮ್ಮಶೆಟ್ಟಯ ಮಗಳಂತೆ. ಮೈಲಾರ ಲಿಂಗ-ಖಂಡೇರಾಯ ಅವಳನ್ನು ಪಾಲಿಯಲ್ಲಿ ಲಗ್ನವಾದ, ಬಾಣಾಯಿ ಅಥವಾ ಕುರುಬತೆವ್ವ ಚಂದನ ಪುರದ ಕುರುಬನ ಮನೆಯಲ್ಲಿ ಬೆಳೆದಳು. ಅವಳು ಜೆಜೂರಿಗೆ ಹೋಗಿ ದೇವರನ್ನು ನೋಡಿದ ಕೂಡಲೇ ಪರಸ್ಪರರು ಮೋಹಗೊಂಡರು. ಅವರಿಬ್ಬರ ಲಗ್ನ ನಳದುರ್ಗದಲ್ಲಿ ಜರುಗಿತು. ದೇವರು ಅವಳನ್ನು ಜೆಜೂರಿಗೆ ಕರೆದೊಯ್ದು ಅಲ್ಲಿ ತನ್ನ ಪಟ್ಟದರಿಸಿ ವಾಸವಾಗಿರುವ ಕೋಟೆಯ ಕೆಳಗಡೆ ಒಂದು ಸ್ಥಾನದಲ್ಲಿ ಇಟ್ಟ. ಮತ್ತು ಮೇಲಿಂದ ಮೇಲೆ ಅಲ್ಲಿಗೆ ಹೋಗಿ ಬರತೊಡಗಿದ. ಇಂಥ ಹಲವಾರು ಐತಿಹ್ಯಗಳು ಮಹಾರಾಷ್ಟ್ರದಲ್ಲಿ ಪ್ರಚುರವಾಗಿರುವುದು ಕಂಡು ಬರುತ್ತದೆ.

ದೇವತಾ ಸ್ವರೂಪದ್ಲಲಿ ಮಹಾರಾಷ್ಟ್ರಕ್ಕೂ ಕರ್ನಾಟಕಕ್ಕೂ ವಿಶೇಷ ಭಿನ್ನತೆಗಳು ಕಂಡು ಬರುವುದಿಲ್ಲ. ಮೈಲಾರಲಿಂಗನ ಮೂರ್ತಿಗಳೆಲ್ಲ ಅಲ್ಲಿಯ ಚತುರ್ಭುಜಗಳುಳ್ಳವಾಗಿದ್ದು ಅವುಗಳಲ್ಲಿರುವ ಸಂಕೇತಗಳು ಒಂದೇ ಬಗೆಯಾಗಿವೆ. ಎಂದರೆ ಕ್ರಮವಾಗಿ ಖಡ್ಗ, ತ್ರಿಶೂಲ, ಡಮರು ಮತ್ತು ಪಾನಪಾತ್ರಗಳು ಇರುವುದು ಕಂಡು ಬರುತ್ತದೆ. ಇಲ್ಲಿಯಂತೆ ಅಲ್ಲಿಯೂ ಆನಂದಾಸನದ ಮೂರ್ತಿಗಳು, ಅಶ್ವಾರೋಹಿ ಮೂರ್ತಿಗಳು, ನಿಂತ ಭಂಗಿಯ ಮೂರ್ತಿಗಳು ಎಲ್ಲೆಡೆ ಕಂಡು ಬರುತ್ತವೆ. ಮೂರ್ತಿ ಅಶ್ವಾರೋಹಿಯಾಗಿದ್ದಾಗ ಹೆಚ್ಚಿನ ಸಂದರ್ಭಗಳಲ್ಲಿ ಬೆನ್ನು ಹಿಂದೆ ಗಂಗಿಮಾಳಮ್ಮ ಸಹಿತವಾಗಿರುವ ಪದ್ಧತಿ ಅಲ್ಲಿಯೂ ಇದೆ. ಭಕ್ತರ ಮನೆಗಳಲ್ಲಿ ಪೂಜೆಗೊಳ್ಳುವ ದೇವರ ಅಚ್ಚುಗಳು ಕರ್ನಾಟಕ ಮಹಾರಾಷ್ಟ್ರದ ಎಲ್ಲೆಡೆ ಒಂದೇ ಬಗೆಯಾಗಿವೆ. ದೇವರ ವಾಹನ ಕುದುರೆ ಎಂಬುದು ಅಲ್ಲಿಯೂ ಸರ್ವಸಾಮಾನ್ಯವಾಗಿದೆ. ಜತೆಯಲ್ಲಿ ನಾಯಿಯೂ ಇರುತ್ತದೆ.

ಒಂದೆರಡು ದೇವಾಲಯಗಳಲ್ಲಿ ಉತ್ಸವ ಹೊರಡಿಸುವ ಸನ್ನಿವೇಶದಲ್ಲಿ ಮಾತ್ರ ವಾಹನವಾಗಿ ಆನೆ ಮತ್ತು ನಂದಿಗಳನ್ನು ಬಳಲಾಗುತ್ತದೆ.

ದೇವಿಯ ಮೂರ್ತಿಗಳು ಮಾತ್ರ ಕರ್ನಾಟಕಕ್ಕಿಂತ ಹೆಚ್ಚು ಭಿನ್ನತೆಯ ಲಕ್ಷಣವುಳ್ಳವಾಗಿವೆ. ಕರ್ನಾಟಕದಲ್ಲಿ ಚತುರ್ಭುಜಗಳು ದೇವಿಗೆ ಸಾಮಾನ್ಯವಾಗಿದ್ದರೆ ಅಲ್ಲಿ ದ್ವಿಭುಜವುಳ್ಳ ಮೂರ್ತಿಗಳ ದೊಡ್ಡ ಸಮುದಾಯವೇ ಇದೆ. ಹಸ್ತಗಳಲ್ಲಿನ ಸಂಕೇತಗಳು ಭಿನ್ನತರವಿದೆ. ಕೆಲವೆಡೆ ಕಮಲ ಕಲಿಕೆ, ಗಜಹಸ್ತ ಮುದ್ರೆಗಳು ಕಂಡು ಬರುತ್ತವೆ. ದೇವಿಯನ್ನು ಮೂಲ ಮಲ್ಲಾರಿ ಮಹಾತ್ಮ್ಯದಲ್ಲಿ ಗಂಗಾ – ಮ್ಹಾಲಸಿಕಾ ಎಂದಿದ್ದರೂ ಮರಾಠಿಗಳು ‘ಮಾಳ್ಹಸಾ’ ಎಂದು ಕರೆಯುವುದೇ ವಿಶೇಷ. ಕೆಲವೆಡೆ ಅವಳನ್ನು ಜೋಗೇಶ್ವರಿ ಎಂದಿರುವುದೂ ಉಂಟು. ಲೀಳಾಚರಿತ್ರದಲ್ಲಿ ಇವಳನ್ನು ‘ಮಾಳಸೀ’ ಎಂದು ಕರೆದಿರುವುದಾಗಿ ತಿಳಿದು ಬರುತ್ತದೆ. ಇದು ಹಳಗನ್ನಡ ನಡುಗನ್ನಡ ಸಾಹಿತ್ಯದಲ್ಲಿ ದೊರೆಯುವ ‘ಮಾಳಚಿ’ ಎಂಬುದರಿಂದ ನೇರವಾಗಿ ನಿಷ್ಪನ್ನವಾದುದು ಎಂದು ಬೇರೆ ಹೇಳಬೇಕಾಗಿಲ್ಲ. ಜ್ಞನೇಶ್ವರಿಯಲ್ಲಿ ‘ಮಹಾಲಸಾ’ ಎಂದಿದೆ. ಕೆಲವೆಡೆ ಇದನ್ನು ಹೆಚ್ಚು ಸಂಸ್ಕೃತೀಕರಿಸುವ ಪ್ರಯತ್ನವಾಗಿ ‘ಮಹಾಲಯಾ’ ಎಂದು ಪರಿವರ್ತಿಸಲಾಗಿದೆ. ಇವಳು ಕರ್ನಾಟಕದಲ್ಲಿಯಂತೆ ಉಚ್ಚ ಕುಲದವಳು ಎಂದರೆ ಲಿಂಗಾಯತ ಬಣಜಿಗರವಳು ಎಂಬ ನಂಬಿಕೆ ಅಲ್ಲಿಯೂ ಇದೆ. ನೇವಾಸೆ ಇವಳ ತವರು ಮನೆಯಂತೆ. ಪ್ರಸ್ತುತ ನೇವಾಸೆಯಲ್ಲಿ ಇವಳ ಪ್ರತ್ಯೇಕ ದೇವಾಲಯ ಕ್ರಿ.ಶ.೧೨೯೮ರ ಕಾಲಕ್ಕಾಗಲೇ ಇತ್ತು ಈಗಲೂ ಇದೆ. ಆದರೆ ಈಗಿನ ಮೂರ್ತಿ ಸ್ವರೂಪ ಮಾತ್ರ ಬೇರೆಯಾಗಿದೆ.

ಕುರುಬರ ಮಾಳವ್ವ ಮತ್ತು ಕುರುಬತೆವ್ವನನ್ನು ಅಲ್ಲಿ ಈಗ ‘ಬಾಣಾಯಿ’ ಎಂದು ಹೇಳುವುದು ಹೆಚ್ಚು ರೂಢವಾಗಿದೆ. ಬನು, ಬಾನಾ, ಬಾಣಾ ಇತ್ಯಾದಿ ಪರ್ಯಾಯಗಳು ಈ ಹೆಸರಿಗೆ ಇರುವುದು ಕಂಡು ಬರುತ್ತದೆ. ಇವಳು ಕುರುಬ ಕನ್ನೆ ಎಂಬಲ್ಲಿ ಭಿನ್ನಾಭಿಪ್ರಾಯವಿಲ್ಲ. ಅಷ್ಟೇ ಅಲ್ಲ ಇವಳ ಮೂರ್ತಿ ಶಿಲ್ಪದ ಜತೆಗೆ ಕುರಿಮರಿಯೊಂದನ್ನು ತೋರಿಸಿರುವುದು ಕೆಲವೆಡೆ ಕಂಡು ಬರುತ್ತದೆ. ಹರಕೆ ಹೊತ್ತವರು ಇವಳಿಗೆ ಕಟ್ಟಿಗೆಯ ಕುರಿಯನ್ನು ಅರ್ಪಿಸುವ ಆಚರಣೆಯೂ ಉಂಟು. ಪಾಲಿಯಲ್ಲಿ ಇವಳ ಮೂರ್ತಿ ಕೈಮುಗಿದು ನಿಂತ ಭಂಗಿಯಲ್ಲಿದೆ. ಇತರತ್ರ ಇವಳ ದ್ವಿಭುಜ ಮೂರ್ತಿಗಳು ಕಂಡುಬರುತ್ತವೆ. ಲಾಂಛನಗಳಲ್ಲಿ ಕೇವಲ ಕುಟ್ಮಲ, ಕುರಿ ಮುಂತಾದುವು ಕಂಡು ಬರುತ್ತವೆ. ಕರ್ನಾಟಕದಲ್ಲಿ ಇವಳಿಗಾಗಿ ಪ್ರತ್ಯೇಕ ಹಬ್ಬವೊಂದು ಇದ್ದರೆ ಮಹಾರಾಷ್ಟ್ರದಲ್ಲಿ ಈಗ ಅದು ಕಂಡು ಬರುವುದಿಲ್ಲ. ಮಾಂಸದ ನೈವೇದ್ಯ ಇವಳಿಗಾಗಿ ಮಾತ್ರ ಅರ್ಪಿಸಲ್ಪಡುತ್ತದೆ. ಅದೂ ಮುಖ್ಯ ದೇವಾಲಯದಿಂದ ಹೊರಗಡೆ.

ಹೆಗ್ಗಡೆ ಅಥವಾ ಹೆಗ್ಗಣ್ಣ ಪ್ರಧಾನಿ ಮಹಾರಾಷ್ಟ್ರದಲ್ಲಿ ‘ಹೇಗಡಿ’ ಎಂದೇ ಪ್ರಸಿದ್ಧನಾಗಿದ್ದಾನೆ. ಎಲ್ಲ ದೇವಾಲಯಗಳಲ್ಲಿ ಈತನಿಗೆ ಪ್ರತ್ಯೇಕ ದೇವಾಲಯ ಅಥವಾ ಸ್ಥಾನವೊಂದು ಇದ್ದೇ ಇರುತ್ತದೆ. ಮಹಾರಾಷ್ಟ್ರದ ಭಕ್ತರೂ ಈತ ಮೈಲಾರಲಿಂಗನ ಭಾವ-ಮೈದ ಎಂದೇ ನಂಬುತ್ತಾರೆ. ಮತ್ತು ಶಿವನ ದೌತ್ಯ ವಹಿಸಿದ ವಿಷ್ಣು ಎಂದು ತಿಳಿಯುತ್ತಾರೆ. ಜೆಜೂರಿಯಲ್ಲಿ ಪದ್ಮಾಸನ ಹಾಕಿದ ದ್ವಿಭುಜ ಮೂರ್ತಿಯಿದೆ. ಎಡಗೈ ಪಾನ ಬಟ್ಟಲು ಹೊಂದಿದ್ದು ಬಲಗೈ ಖಾಲಿ ಇದೆ. ತಲೆಗೆ ಸಾಮಾನ್ಯ ರೈತರಂತೆ ಬಟ್ಟೆಯೊಂದನ್ನು ಸುತ್ತಿದ್ದಾನೆ. ಇಂಥದೇ ಒಂದು ಮೂರ್ತಿ ಪಾಲಿಯಲ್ಲಿಯೂ ಇದೆ. ಕರ್ನಾಟಕದಲ್ಲಿ ಈತನ ಮೂರ್ತಿಗಳು ಚತುರ್ಭುಜ ಹೊಂದಿರುವುದೇ ಹೆಚ್ಚು.

ಮಹಾರಾಷ್ಟ್ರದ ದೇವಾಲಯಗಳಲ್ಲಿ ತುಪ್ಪದ ಮಾಳವ್ವ ಅಥವಾ ಘೃತಮಾರಿಯ ದೇವಾಲಯಗಳು ಕಂಡು ಬರುವುದಿಲ್ಲ. ಬದಲು ಕೆಲವು ದೇವಾಲಯಗಳು ಪರಿಸರದಲ್ಲಿ ಈ ದೇವತೆಯ ಸ್ಥಾನ ಮಾತ್ರ ಇದೆ. ಜೆಜೂರಿಯಲ್ಲಿ ಮುಖ್ಯ ದೇವಾಲಯದ ಹಿಂದೆ ಇರುವ ದೊಡ್ಡ ಬಡ್ಡೆಗಲ್ಲನ್ನು ಇವಳ ಸಂಕೇತವೆಂದು ನಂಬುತ್ತಾರೆ. ಅಲ್ಲಿನ ಜಾನಪದರಿಗೆ ಇವಳ ಬಗ್ಗೆ ಹೆಚ್ಚಿನ ತಿಳುವಳಿಕೆಯಿಲ್ಲ.

ಕರ್ನಾಟಕದಲ್ಲಿ ಚಿಕ್ಕಯ್ಯ ಮತ್ತು ಜುಂಜಯ್ಯರು ಮೈಲಾರಲಿಂಗ ಗಂಗಿ ಮಾಳಮ್ಮರ ಮಕ್ಕಳೆಂದು ತಿಳಿಯಲಾಗುತ್ತದೆ. ಇವರ ಬಗ್ಗೆ ಮಹಾರಾಷ್ಟ್ರದಲ್ಲಿ ಯಾವ ತಿಳುವಳಿಕೆಯೂ ಇಲ್ಲ. ಮಲ್ಲಾರಿ ಮಹಾತ್ಮ್ಯದ್ಲಲಿ ಷಣ್ಮುಖ ಮತ್ತು ಗಣಪತಿಯ ಉಲ್ಲೇಖವೇನೋ ಇದೆ. ಆದರೆ ಅವರ ಜಾನಪದ ಅವತಾರವಾದ ಈ ದೇವರುಗಳು ಅಲ್ಲಿ ನೆಲೆಸಿಲ್ಲ.

ಕುದುರೆ ನಾಯಿಗಳ ಜತೆಗೆ ಭಂಡಾರ ಮತ್ತು ಕವಡೆಗಳಿಗೆ ಅಲ್ಲಿಯೂ ಮಹತ್ವದ ಸ್ಥಾನವಿದೆ. ಕರ್ನಾಟಕದಲ್ಲಿರುವುದಕ್ಕಿಂತ ಒಂದು ಕೈ ಮಿಗಿಲಾಗಿಯೇ ಇದೆ. ದೇವರಿಗೆ ಭಕ್ತರು ಪ್ರತಿನಿತ್ಯ. ಭಂಡಾರ ಏರಿಸುತ್ತಾರೆ. ಜೆಜೂರಿಯಲ್ಲಿ ಭಂಡಾರ ಏರಿಸುವಾಗ ಕಾಗದದಲ್ಲಿ ಪೊಟ್ಟಣಕಟ್ಟಿ ಒಯ್ಯುವುದಿಲ್ಲ. ಬದಲು ಬಟ್ಟೆಯ ಚೀಲಗಳಲ್ಲಿ ಕಿಲೋಗಟ್ಟಲೆಯಾಗಿ ತುಂಬಿ ಒಯ್ದು ದೇವರಿಗೆ ಅರ್ಪಿಸುವ ಪದ್ಧತಿ ರೂಢಿಗೆ ಬಂದಿದೆ. ಮೇಲಿನ ಸಂಕೇತಗಳ ಜತೆಗೆ ಕತ್ತೆ ಮತ್ತು ಕುದುರೆಗಳ ಬಗ್ಗೆ ಅಲ್ಲಿ ಹೆಚ್ಚಿನ ಸ್ಥಾನವಿದ್ದಂತೆ ಕಂಡು ಬರುತ್ತದೆ. ಜೆಜೂರಿಯಲ್ಲಿ ಕತ್ತೆಗಳ ಸಂತೆ ನಡೆಯುತ್ತದೆ. ಮಾಲೆಗಾವದಲ್ಲಿ ಕುದುರೆಗಳ ಜಾತ್ರೆ ಸೇರುತ್ತದೆ. ಇತರ ದೇವಾಲಯಗಳಲ್ಲಿ ದನಗಳ ಜಾತ್ರೆ ನಡೆಯುವುದು ಉಂಟು.

ಕರ್ನಾಟಕ ಪ್ರದೇಶದಲ್ಲಿ ಸ್ವಯಂಭೂ ಲಿಂಗವಷ್ಟೇ ಅಲ್ಲದೆ ಆಲದ ಮರ ಮತ್ತು ಹುತ್ತುಗಳಿಗೆ ವಿಶೇಷ ಮಹತ್ವವಿದೆ. ಇವುಗಳ ಜತೆಗೆ ಎಕ್ಕೆಯ ಗಿಡಕ್ಕೂ ಗೌರವ ಸಲ್ಲುತ್ತದೆ. ದೇವರು ಹುತ್ತದಲ್ಲಿ ವಾಸವಾಗಿರುತ್ತಾನೆ ಎಂದೂ ಕರಿಯಾಲದಲ್ಲಿ ವಾಸವಾಗಿರುತ್ತಾನೆಂದೂ ಇತ್ತಲಿನ ಭಕ್ತರು ನಂಬುತ್ತಾರೆ. ಕೆಲವರು ಎಕ್ಕೆಯ ಮರದಲ್ಲಿ ಮಲ್ಲಯ್ಯನಿರುತ್ತಾನೆಂದು ಭಾವಿಸುತ್ತಾರೆ. ಈ ಕುಲಸಂಕೇತ (totem) ಗಳ ಜತೆಗೆ ತ್ರಿಶೂಲ ಸಹಿತವಾದ ಶಿಬಾರಕ್ಕೂ ಆಗ್ರಸ್ಥಾನವಿದೆ. ಮಹಾರಾಷ್ಟ್ರದಲ್ಲಿ ಇವುಗಳ ಪರಿಚಯವಿಲ್ಲ. ಮಲ್ಲಾರಿ ಮಹಾತ್ಮ್ಯ ಮತ್ತು ಇತರ ಗ್ರಂಥಗಳಲ್ಲಿ ಆಲದ ಮರದ ಉಲ್ಲೇಖ ಎಡೆ ಪಡೆದಿರುವದಾದರೂ ಜನಮನದಲ್ಲಿ ಕರಿಯಾಲ ಮತ್ತು ಇತರ ಸಂಕೇತಗಳಿಗೆ ಹೆಚ್ಚಿನ ಗೌರವ ಇಲ್ಲ. ನಳದುರ್ಗ ಮತ್ತು ಪ್ರೇಮಪುರ ದೇವಾಲಯಗಳಲ್ಲಿ ಮಾತ್ರ ದೇವರು ಕರಿಯಾಲದಲ್ಲಿ ವಾಸಿಸುತ್ತಾನೆಂಬ ನಂಬಿಕೆ ಪ್ರಚಲಿತವಾಗಿದೆ. ಆದರೆ ತ್ರಿಶೂಲ ಮತ್ತು ಖಡ್ಗಗಳಿಗೆ ಅಲ್ಲಿಯೂ ವಿಶೇಷ ಮಹತ್ವವಿದೆ. ಜೆಜೂರಿಯಲ್ಲಿರುವ ಒಂದು ಖಡ್ಗ ೩೫ ಕಿಲೋ ಭಾರಿದ್ದಿದೆ. ಅದೇ ರೀತಿ ಅಲ್ಲಿ ಪ್ರತ್ಯೇಕವಾದ ಹಿತ್ತಾಳೆಯ ತ್ರಿಶೂಲವೊಂದು ದೊಡ್ಡಗಾತ್ರದ್ದಿದ್ದು ದಿನನಿತ್ಯ ಪೂಜೆಗೊಳ್ಳುತ್ತದೆ. ಇಲ್ಲಿಯಂತೆ ಅಲ್ಲಿಯೂ ನಾಯಿ ಎಂದರೆ ಮಲ್ಲಯ್ಯನೆಂದೂ ಶಿವನು ಲಿಂಗರೂಪಧರಿಸಿದ್ದು ಮಲ್ಲಾಸುರನ ಅಪೇಕ್ಷೆಯ ಮೇರೆಗೆ ಎಂದೂ ನಂಬಿಕೆ ಪ್ರಬಲವಾಗಿದೆ. ಮಲ್ಲಾಸುರನ ತಮ್ಮ ಮಣಿಕಾಸುರನೇ ದೇವರ ವಾಹನವಾದ ಕುದುರೆ ಎಂಬ ತಿಳುವಳಿಕೆ ಅಲ್ಲಿ ಕೂಡ ಇಂಬು ಪಡೆದಿದೆ. ದೇವರ ಹೆಸರು ಅಥವಾ ಬಿರುದು ಏಳುಕೋಟಿ ಎನ್ನುವಲ್ಲಿ ಮಹಾರಾಷ್ಟ್ರದ ಭಕ್ತರಲ್ಲಿ ಭಿನ್ನಾಭಿಪ್ರಾಯವಿಲ್ಲ. ಅಲ್ಲಿನ ಎಲ್ಲ ದೇವಾಲಯಗಳಲ್ಲಿ ಘೋಷಿಸುವಾಗ ಎಂದರೆ ಉಗ್ಗಡಿಸುವಾಗ ಈ ಏಳು ಕೋಟಿ ಎಂಬ ಶಬ್ದ ಬಂದೇ ತೀರುತ್ತದೆ.

ಆಚರಣೆ :ಗೊರವ ಗೊರವಿಯರಲ್ಲಿ ಕರ್ನಾಟಕದಲ್ಲಿರುವ ವೈವಿಧ್ಯ ಮಾತ್ರ ಮಹಾರಾಷ್ಟ್ರದಲ್ಲಿ ಕಂಡುಬರುವುದಿಲ್ಲ. ಇಲ್ಲಿರುವಂತೆ ನಾಯಿಗೊರವರು. ಕರಡಿಗೊರವರು, ಪಾರಿಗೊರವರು – ಕುದುರೆಕಾರರು ಕಂಚಾವೀರರು ಇತ್ಯಾದಿ ಭೇದ ಅವರಲಿಲ್ಲ. ಎಲ್ಲ ಗೊರವರು ಅಲ್ಲಿ ವಾಘ್ಯಾಗಳೆಂದೇ ಕರೆಯಲ್ಪಡತ್ತಾರೆ. ಸದ್ಯದ ಗೊರವರು ಕೋರಿಯ ಅಂಗಿ ತೊಡುವ ಪದ್ಧತಿಯೂ ಅಲ್ಲಿ ಉಳಿದಿಲ್ಲ. ನಳದುರ್ಗ, ಜೆಜೂರಿ ಮತ್ತು ಪಾಲಿಗಳಲ್ಲಿ ಮಾತ್ರ ಕುದುರೆಕಾರರು ಈಗಲೂ ಇದ್ದು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರು ಸಂಶೋಧಕರ ಗಮನಕ್ಕೆ ಅಷ್ಟಾಗಿ ಬಂದಿಲ್ಲ. ಕಂಚಾವೀರರನ್ನು ಹೋಲುವ ವೀರರು ಮುಂಚೆ ಪಾಲಿ ಮತ್ತು ಜೆಜೂರಿಗಳಲ್ಲಿ ಇದ್ದ ಬಗ್ಗೆ ಉಲ್ಲೇಖಗಳಿವೆ. ಈಗ ಈ ಪ್ರದೇಶದಲ್ಲಿ ಕಂಡು ಬರುವುದಿಲ್ಲ.

ಅಲ್ಲಿನ ಗೊರವಿಯರೆಂದರೆ ಮುರಳಿಯರು. ಇವರು ತಪ್ಪದೇ ದೇವದಾಸಿ ಸಂಪ್ರದಾಯ ಅನುಸರಿಸುವವರು. ಕರ್ನಾಟಕದಲ್ಲಿ ಈ ಪರಿಸ್ಥಿತಿಯಿಲ್ಲ. ಗೊರವಿಯರು ದೇವದಾಸಿಯರಾಗಿರಲೇಬೇಕೆಂಬ ನಿಯಮ ಇಲ್ಲಿ ಇಲ್ಲ. ಪ್ರತಿವರ್ಷ ಚೈತ್ರದಲ್ಲಿ ಮುರಳಿಯರಾಗುವುದು ಸಾಮಾನ್ಯ. ಈಗ ಮುರಳಿಯರಾಗುವ ಪದ್ಧತಿ ತೀರ ಕ್ಷೀಣವಾಗಿದೆ.

ವಾಘೆ-ಮುರಳಿಯರಲ್ಲಿ ದೋಣಿ, ಗಂಟೆ, ಭಂಡಾರಚೀಲ, ತ್ರಿಶೂಲ ಅಥವಾ ಶೂಲ ಮತ್ತು ಒಂದು ಜೋಳಿಗೆ ಇರುವುದು ಸಾಮಾನ್ಯ. ಡಮರುವಿನ ಬದಲು ಇವರಲ್ಲಿ ಘೋಳ ವಾದ್ಯ ಇರುವುದೇ ಹೆಚ್ಚು. ತುಂತುಣಿ ಇವರ ಪ್ರಮುಖ ಸಂಗೀತವಾದ್ಯ. ತಾಳಗಳು ಇರುವುದೂ ಉಂಟು. ಬಹಳಷ್ಟು ಜನ ವಾಘ್ಯಾಗಳಲ್ಲಿ ಸರಪಣಿಗಳಿರುತ್ತವೆ.

ಚಂಪಾಷಷ್ಠಿ ಅಥವಾ ವಾಂಗೀಸಟಿಯ ಆರಾಧನೆ ಮಹಾರಾಷ್ಟ್ರದಲ್ಲಿಯೂ ಪ್ರಾಮುಖ್ಯ ಪಡೆದಿದೆ. ಸಣ್ಣ-ದೊಡ್ಡ ಎಲ್ಲ ದೇವಾಲಯಗಳಲ್ಲಿ ಛಟ್ಟಿಯಂದು ದೇವರಿಗೆ ಭಂಡಾರ ಪೂಜೆ ವೈಭವದಿಂದ ನಡೆಯುತ್ತದೆ. ಜೆಜೂರಿಯಲ್ಲಿ ಈ ಸಂದರ್ಭದಲ್ಲಿ ‘ತಿಳವಣಾಚಾ ಹಂಡಾ’ ಅರ್ಪಿಸುವ ಕಾರ್ಯಕ್ರಮ ವೈಭವ ಪೂರ್ಣವಾಗಿ ಸಾಂಗಗೊಳ್ಳುತ್ತದೆ. ದೇವಸ್ಥಾನದಿಂದ ಮೆರವಣಿಗೆಯಲ್ಲಿ ದೊಡ್ಡ ಹಂಡೆಯೊಂದನ್ನು ಕೋಟೆಯಿಂದ ಕೆಳಗೆ ತಂದು ಇಟ್ಟು ಊರವರೆಲ್ಲ ಅದರಲ್ಲಿ ಒಳ್ಳೆಣ್ಣೆ ಹಾಕುತ್ತಾರೆ. ತರುವಾಯ ಅದನ್ನು ಮೆರವಣಿಗೆಯಲ್ಲಿ ಒಯ್ದು ದೇವರಿಗೆ ಅರ್ಪಿಸುತ್ತಾರೆ. ಮಹಾನವಮಿಯ ನವರಾತ್ರಿಯಂತೆ ಈಗಲೂ ೬ ದಿನಗಳ ನವರಾತ್ರಿಯ ಕಾರ್ಯ ನಡೆಯುತ್ತದೆ. ಇದೇ ರೀತಿ ಮಹಾರಾಷ್ಟ್ರದ ಪ್ರತಿಯೊಬ್ಬ ಭಕ್ತರೂ ತಮ್ಮ ಮನೆಗಳಲ್ಲಿ ಛಟ್ಟಿಯ ನವರಾತ್ರಿ ಮತ್ತು ಭಂಡಾರ ಪೂಜೆಯ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ದೋಣಿ ತುಂಬುವ ಪರಿಪಾಠ ಇದ್ದೇ ಇರುತ್ತದೆ. ಹೂರಣದ ಅಡಿಗೆಯ ಜತೆಗೆ ಹಸಿಯ ಉಳ್ಳೇಗಡ್ಡಿ ಬದನೆಯ ಕಾಯಿಯ ಭರತ (ಬಜ್ಜೆ) ಬಳ್ಳೊಳ್ಳಿ, ಸಜ್ಜೆ ರೊಟ್ಟಿ ಮತ್ತು ಉಪ್ಪನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಕರ್ನಾಟಕದಲ್ಲಿ ಮೇಲಿನ ವಸ್ತುಗಳ ಪೈಕಿ ಸಜ್ಜೆಯ ರೊಟ್ಟಿ ಅರ್ಪಿಸುವ ಕ್ರಮ ಇರುವುದಿಲ್ಲ.

ಪಾಲಿಯಲ್ಲಿ ಬನದ ಹುಣ್ಣಿವೆಗೆ ಎಂದರೆ ಪೌಷ್ಯ ಶುದ್ಧ ದ್ವಾದಶಿಗೆ ದೇವರ ಲಗ್ನವಾಗಿರುತ್ತದೆ. ಗಂಗಿಮಾಳಮ್ಮ-ಮೈಲಾರಲಿಂಗಪ್ಪರ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಒಯ್ದು ಊರು ಸುತ್ತಿಸಿ ತಂದು ಹಂದರವೊಂದರಲ್ಲಿ ಸ್ಥಾಪಿಸುತ್ತಾರೆ. ತರುವಾಯ ಲಗ್ನ ಮಾಡುತ್ತಾರೆ. ಮೆರವಣಿಗೆಯ ಕಾಲಕ್ಕೆ ಬಂದ ಭಕ್ತರೆಲ್ಲ ಕೊಬ್ಬರಿಯ ಬಟ್ಟಲುಗಳಲ್ಲಿ ಭಂಡಾರ ತುಂಬಿ ಹಾರಿಸುವುದು ಇಲ್ಲಿ ಸಂಪ್ರದಾಯ. ಪೇಶ್ವೆಗಳ ಕಾಲದಲ್ಲಿ ಆನೆಯ ಮೇಲೆ ದೇವರ ಮೆರವಣಿಗೆ ಮತ್ತು ಅಕ್ಷತಾರೋಪಣದ ಕಾಲದಲ್ಲಿ ತೋಪುಗಳ ಸಲಾಮಿ ಕಾರ್ಯಕ್ರಮ ಜರುಗುವುದಿತ್ತು.

ನವರಾತ್ರಿಯಲ್ಲಿ ಇತರ ದೇವಾಲಯಗಳಂತೆ ಇಲ್ಲಿಯೂ ಘಟಸ್ಥಾನಪೆ ದೀಪೋತ್ಸವ ನಡೆಯುತ್ತವೆ. ಕೆಲವು ಕಡೆ ವಿಶೇಷ ಜಾತ್ರೆ ನೆರೆಯುವುದೂ ಉಂಟು.

ಸೋಮವತಿ ಅಮವಾಸ್ಯೆಗೆ ಖಂಡೋಬಾ ದೇವಸ್ಥಾನಗಳಲ್ಲಿ ದೊಡ್ಡ ಪ್ರಮಾಣದ ಜಾತ್ರೆ ಕೂಡುತ್ತದೆ. ವಿಶೇಷವಾಗಿ ಜೆಜೂರಿಯಲ್ಲಿ ಇಂಥ ಜಾತ್ರೆಗೆ ಭಕ್ತರ ದಟ್ಟಣೆ ಗಮನಾರ್ಹ ಪ್ರಮಾಣದಲ್ಲಿರುತ್ತದೆ.

ಭಕ್ತರಲ್ಲಿ ಕುಲಾಚಾರವೆಂದು ನಡೆಯುವ ಹಲವು ಆಚರಣೆಗಳು ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿದೆ. ಅವುಗಳಲ್ಲಿ ‘ಜಾಗರಣ’ ಎಂಬುದು ಪ್ರಮುಖವಾದುದು. ಕಲಶರೂಪದಲ್ಲಿ ದೇವರನ್ನು ಪ್ರತಿಷ್ಠೆ ಮಾಡಿ ವಾಘ್ಯಾ ಮುರಳಿಯರಿಂದ ಹಾಡು-ಕುಣಿತ, -ವಾದ್ಯಗಳ ಸೇವೆ ನಡೆಯುತ್ತದೆ. ಮುರಳಿಯವರು ಮುಖಕ್ಕೆ ಅರಿಸಿನ ಹಚ್ಚಿಕೊಂಡು ಕಾಲಿಗೆ ಗೆಜ್ಜೆಕಟ್ಟಿ ಹಾಡುತ್ತ ಕುಣಿಯುತ್ತಾರೆ. ಇವರಿಗೆ ಹಿನ್ನೆಲೆಯ ಸಾಥಿ ಆಗಿ ವಾಘ್ಯಾಗಳು ಸಹಾಯ ಮಾಡುತ್ತಾರೆ. ಘೋಳ, ತುಂತುಣಿ ಮತ್ತು ತಾಳಗಳು ಈ ಸಂದರ್ಭದಲ್ಲಿ ಉಪಯೋಗಿಸಲ್ಪಡುತ್ತವೆ. ಬೆಳಿಗ್ಗೆ ಸರಪಣಿಯ ಪವಾಡ ನಡೆಯುತ್ತದೆ. ಮಾಂಸಾಹಾರಿಗಳಾದರೆ ಕುರಿಯ ಬಲಿ ನಡೆಯುತ್ತದೆ. ಶಾಖಾಹಾರಿಗಳು ಹೂರಣ, ಮೊಸರನ್ನ, ಹಸೀ ಉಳ್ಳೇಗಡ್ಡಿ, ಬದನೆಕಾಯಿ, ಉಪ್ಪು, ಬಳ್ಳೊಳ್ಳಿಗಳ ಸಮೇತ ನೈವೇದ್ಯ ಮಾಡಿ ಕಾಯಿ ಒಡೆಯುತ್ತಾರೆ. ಮನೆಯಲ್ಲಿ ಲಗ್ನ ಮುಂತಾದ ವಿಶೇಷ ಕಾರ್ಯಕ್ರಮವಿದ್ದಾಗ ಈ ವಿಧಿ ಹೆಚ್ಚಾಗಿ ನಡೆಯುತ್ತದೆ. ಅಲ್ಲದೆ, ಮಕ್ಕಳ ಜವಳ, ಕಿವಿಚುಚ್ಚುವುದು, ಅಥವಾ ಹರಕೆ ಕೈಗೂಡಿದ ಸಂದರ್ಭದಲ್ಲಿಯೂ ಇದನ್ನು ಮಾಡಬಹುದು. ಕರ್ನಾಟಕದಲ್ಲಿನ ಚಿಕ್ಕಯ್ಯ-ಜುಂಜಯ್ಯನ ಪೂಜೆಗೆ ಇದು ಸಮನಾಗಿದೆ. ಮುರಳಿಯರ ನರ್ತನ ಗಾಯನ ಹೊರತು ಪಡಿಸಿದರೆ ಇದು ಅಂಬಾಬಾಯಿಯ ಗೊಂದಲಕ್ಕೆ ಹತ್ತಿರವಾಗಿದೆ. ಇಲ್ಲಿ ಲಕ್ಷಿಸಬೇಕಾದ ಸಂಗಿತಯೆಂದರೆ ಮಾಂಸದ ಅಡಿಗೆಯನ್ನು ದೋಣಿಗೆ ತುಂಬುವದಿಲ್ಲ ಮತ್ತು ದೇವಾಲಯದಲ್ಲಿ ಒಯ್ಯುವುದು ನಿಷಿದ್ದವೆಂದು ಭಾವಿಸಲಾಗುತ್ತದೆ. ಕನ್ನಡ ಭಕ್ತರ ನಡೆತೆಯೂ ಇದೇ ತೆರನಾಗಿದೆ.

ಲಗ್ನವಾದ ತರುವಾಯ ನವದಂಪತಿಗಳು ‘ತಳಿಭರಣೆ’ ಎಂಬ ವಿಧಿಯನ್ನು ಆಚರಿಸುತ್ತಾರೆ. ದೊಡ್ಡ ತಟ್ಟೆಯೊಂದರಲ್ಲಿ ಎಲೆ, ಅಡಿಕೆ, ಭಂಡಾರ ಮತ್ತು ಕೊಬ್ಬರಿ ಬಟ್ಟಲನ್ನು ತುಂಬಿ ದೇವರ ಎದುರಿಗೆ ನಿಂತು ‘ಏಳು ಕೋಟಿ ಘೇ’ ಎಂದು ಹೇಳುತ್ತ ಮೂರು ಸಲ ಎತ್ತುತ್ತಾರೆ. ತರುವಾಯ ಕಾಯ್-ಕೋಲು ದೀವಟಿಗೆಯಿಂದ ದೇವರಿಗೆ ಬೆಳಗುತ್ತಾರೆ. ಇದನ್ನೇ ‘ತಳೀ ಭರಣೆ’ ಎಂದು ಕರೆಯಲಾಗುತ್ತದೆ. ಈ ವಿಧಿ ಜೆಜೂರಿ ಅಥವಾ ಇತರ ದೇವಾಲಯಕ್ಕೆ ಹೋಗಿ ಮಾಡಬೇಕಾದುದು. ಹಾಗೆ ಹೋಗುವ ಅನುಕೂಲವಿಲ್ಲದವರು ಸಾಂಕೇತಿಕ ಜೆಜೂರಿಗೆ ಹೋಗಿ ಬರುತ್ತಾರೆ. ಎಂದರೆ ತಮ್ಮ ಮನೆಯಿಂದ ಹೊರಬಂದು ನಾಲ್ಕು ಹೆಜ್ಜೆ ಜೆಜೂರಿಯ ದಿಕ್ಕಿನಲ್ಲಿ ನಡೆದು ತಟ್ಟೆ ಎತ್ತಿ ದೀವಟಿಗೆ ಬೆಳಗಿ ಬರುತ್ತಾರೆ.

ಮಲ್ಲುಖಾನನ ವಾರಿ ಅಥವಾ ಮಲ್ಲುಖಾನನ ಗದಾ ಎಂಬ ತಾತ್ಪೂರ್ತಿಕ ವಾಘ್ಯಾ ಆಗುವ ಆಚರಣೆ ಮಹಾರಾಷ್ಟ್ರೀಯರಲ್ಲಿ ಪ್ರಚಲಿತವಾಗಿದೆ. ನಿಶ್ಚಿತ ಕಾಲದಲ್ಲಿ ಮುಖ್ಯ ದೇವಸ್ಥಾನಕ್ಕೆ ಹೋಗಿ ಬರುವುದು, ದೇವಸ್ಥಾನದಲ್ಲಿ ವಸ್ತಿ ಇದ್ದು ಮಡಿಯಿಂದ ಉಪವಾಸ ಮಾಡುವುದು. ಭಿಕ್ಷೆಯೆತ್ತಿ ಅದನ್ನು ಒಂದು ಹೊತ್ತು ಮಾತ್ರ ಊಟ ಮಾಡುವುದು, ಇವು ‘ವಾರಿ’ ಅಥವಾ ‘ಗದಾ’ ಆಚರಣೆಯ ಪ್ರಮುಖ ಅಂಶಗಳು. ತಮ್ಮ ಹರಕೆ ಕೈಗೂಡಲೆಂದು ಇದನ್ನು ಆಚರಿಸುತ್ತಾರೆ. ಕೆಲವೊಮ್ಮೆ ಕೇವಲ ದೇವರ ದರ್ಶನ ಪಡೆದು ಬರಲು ನಿಗದಿ ಪಡಿಸಿದಷ್ಟು ಸಲ ದೊಡ್ಡ ದೇವಾಲಯಕ್ಕೆ ಹೋಗಿ ಬರುವುದೂ ಉಂಟು. ಇದನ್ನು ‘ಖೇಟೆ’ ಎಂದು ಕರೆಯಲಾಗುತ್ತದೆ. ಇದಲ್ಲದೆ ಸಿಡಿಯಾಡುವುದು, ಕಿಚ್ಚಹಾಯುವುದು ಮುಂತಾದ ಪದ್ಧತಿಗಳೂ ಮೊದಲು ಇದ್ದವು. ಜೆಜೂರಿ ದೇವಸ್ಥಾನದ ಪೌಳಿಯಲ್ಲಿ ಈಗಲೂ ಸಿಡಿಗಂಬ ಇರುವುದನ್ನು ಕಾಣಬಹುದು. ಇಂಥ ಉಗ್ರ ಆಚರಣೆಗಳು ಈಗ ನಿಂತು ಹೋಗಿವೆ.

ಮೇಲೆ ಹೇಳಿದ ರೀತಿ, ದೇವರಿಗೆ, ಭಂಡಾರ ಪೂಜೆ, ದೀವಟಿಗೆ ಸೇವೆ, ಸರಪಣಿ ಪವಾಡ, ಗಾಯನ – ನರ್ತನ ಸೇವೆ ಮುಂತಾದವು ಪ್ರಚಲಿತವಿರುವುದದಲ್ಲದೆ ಹಳದಿ ಹೂವು ಏರಿಸುವುದು ಬಿಲ್ವ, ಗಂಧ ಮುಂತಾದ ಪರಿಕರದಿಂದ ಪೂಜಿಸುವುದು, ರೋಡಗಾ ಎಂದು ಹೇಳುವ ಗೋದಿಯ ರೊಟ್ಟಿ ಮತ್ತು ‘ಠೋಂಬರಾ’ ಎಂದು ಕರೆಯಲ್ಪಡುವ ಜೋಳದ ಕಿಚಡಿ ಅರ್ಪಿಸುವುದು ಇತ್ಯಾದಿ ಸೇವೆಗಳೂ ದೇವರಿಗೆ ಸಲ್ಲುತ್ತವೆ. ಹರಕೆಯ ಅಂಗವಾಗಿ ವಾರ್ಘ್ಯಾ ಮುರಳಿಯರಾಗುವುದು ಹೋರಿ, ಕುದುರೆ, ಕುರಿಗಳನ್ನು ಅರ್ಪಿಸುವುದು ಮುಂತಾದ ನಡವಳಿಕೆಗಳೂ ತೋರಿಬರುತ್ತವೆ. ಕೆಲವೆಡೆ ಗುಗ್ಗಳ ಸೇವೆ ಕೂಡ ನಡೆಯುತ್ತದೆ.

ಐತಿಹ್ಯಪುರಾಣಗಳು :ಮಹಾರಾಷ್ಟ್ರದಲ್ಲಿ ಕೆಲವು ಐತಿಹ್ಯಗಳು ಸೂಚ್ಯವಾಗಿ ಈಗಾಗಲೇ ತಿಳಿಸಲಾಗಿದೆ. ಖಂಡೋಬಾನ ಅವತಾರ, ಗಂಗಿ ಮಾಳವ್ವನ ಮನೆ, ತಂದೆ ಮತ್ತು ಖಂಡೇರಾಯನ ಜೊತೆಗೆ ನಡೆಯುವ ಅವಳ ಲಗ್ನ, ಬಾಣಾಯಿಯ ಪ್ರೇಮ ಪ್ರಸಂಗ, ಮತ್ತು ಮಣಿಕ – ಮಲ್ಲಾಸುರರ ವಧೆ ಇವು ಮಹಾರಾಷ್ಟ್ರದಲ್ಲಿ ಪ್ರಮುಖವಾಗಿವೆ. ಮಲ್ಲಾರಿ ಮಹಾತ್ಮ್ಯ ಪುರಾಣದಲ್ಲಿ ಮಣಿ – ಮಲ್ಲಾಸುರರ ವಧೆ, ಅದಕ್ಕಾಗಿ ದೇವರ ಅವತಾರ ಮತ್ತು ಘೃತಮಾರಿಯರ ಉತ್ಪತ್ತಿಗಳು ಮಾತ್ರ ಎಡ ಪಡೆದಿದೆ. ಕುರುಬರ ಮಾಳವ್ವನ ಪ್ರೇಮ ಪ್ರಸಂಗವೂ ಇತ್ತೀಚಿನ ಮರಾಠಿ ಪುರಾಣಗಳಲ್ಲಿ ಎಡೆ ಪಡೆದಿದೆ. ಕುದುರೆ, ನಾಯಿ, ಲಿಂಗ, ಭಂಡಾರ ಮುಂತಾದ ವಸ್ತುಗಳ ಬಗ್ಗೆ ಕೂಡ ಉಜ್ವಲೀಕೃತ ಆಖ್ಯಾಯಿಕೆಗಳು ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿವೆ. ಗ್ರಂಥಸ್ಥ ಕಥೆಗಳಲ್ಲಿ ರಾಕ್ಷಸ ವಧೆಯ ಪ್ರಸಂಗಕ್ಕೆ ಹೆಚ್ಚು ಪ್ರಾಶಸ್ತ್ಯ ಸಂದಿದೆ. ಏಳು ಜನ ಧರ್ಮ ಪುತ್ರರ ಅಪೇಕ್ಷೆಯ ಮೇರೆಗೆ ಶಿವನು ತನ್ನ ಸೈನ್ಯ ಸಮೇತ ದಂಡೆತ್ತಿ ಬಂದು ಅವನನ್ನು ನಿಗ್ರಹಿಸಿದನೆಂದು ಮಲ್ಲಾರಿ ಮಹಾತ್ಮೆ ಹೇಳುತ್ತದೆ. ‘ ಏಳುಕೋಟಿ’ ‘ಗಂಗಾ – ಮಾಲಸಿಕಾ’ ಮುಂತಾದ ಕನ್ನಡ ಸಮಸ್ತ ಪದಗಳ ಅರ್ಥವನ್ನು ವಿವರಿಸುವಂತೆ ಕಥಾಂಶಗಳು ಅದರಲ್ಲಿ ಸೇರಿಸಲ್ಪಟ್ಟಿವೆ. ಇವೆಲ್ಲ ವಿಸ್ತೃತ ಅಧ್ಯಯನಕ್ಕೆ ಯೋಗ್ಯವಾದ ವಿಷಯಗಳು.

ಭಕ್ತರು: ಖಂಡೋಬಾ ದೇವಾಲಯಗಳಲ್ಲಿ ಗುರವ ಜನಾಂಗದವರು ಪೂಜಾರಿಗಳಾಗಿದ್ದರೆ ಬ್ರಾಹ್ಮಣ ಪುರೋಹಿತರು ಅಭಿಷೇಕ ಮತ್ತು ಸಹಸ್ರ ನಾಮಪೂಜೆ ಮಾತ್ರ ಮಾಡಿ ಹೋಗುತ್ತಾರೆ. ಇತರೆಲ್ಲ ಕಾರ್ಯಗಳನ್ನು ಗುರವ ಸಮಾಜದವರೇ ನೋಡಿಕೊಳ್ಳುತ್ತಾರೆ. ಕೆಲವು ದೇವಾಲಯಗಳಲ್ಲಿ ಕುರುಬ ಮತ್ತು ಲಿಂಗಾಯತ ಪೂಜಾರಿಗಳೂ ಇದ್ದಾರೆ. ಎಲ್ಲೆಡೆ ಕುರುಬರಿಗೆ ಒಂದಿಲ್ಲೊಂದು ಸೇವಾಕಾರ್ಯ ಲಭ್ಯವಿದೆ. ದೇವಾಲಯ ಪ್ರವೇಶ ವಿಷಯದಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚು ಉದಾರ ಧೋರಣೆ ಮಹಾರಾಷ್ಟ್ರದಲ್ಲಿದೆ.

ಭಕ್ತವರ್ಗದಲ್ಲಿ ಕುರುಬರ ತರುವಾಯ ರಾಮೋಶೀ (ಬೇಡ) ಮತ್ತು ಕೋಳಿ (ಬೇಸ್ತ) ಜನಾಂಗದವರು ವಿಶೇಷವಾಗಿ ಕಂಡು ಬರುತ್ತಾರೆ. ಪಾಲಿಯ ಜಾತ್ರೆಗೆ ರಾಮೋಶಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ. ಜೆಜೂರಿ ಮತ್ತು ಪಾಲಿಗಳಲ್ಲಿ ಕೋಳಿ ಸಮಾಜದವರು ದೊಡ್ಡ ದೊಡ್ಡ ಛತ್ರಗಳನ್ನು ಕಟ್ಟಿಸಿದ್ದಾರೆ. ಕುಲದೇವರೆಂದು ನಡೆದು ಕೊಳ್ಳುವ ಇನ್ನೊಂದು ದೊಡ್ಡ ಸಮುದಾಯವೆಂದರೆ ಮರಾಠಜನರದು. ಮರಾಠಾ, ಛತ್ರಪತಿಗಳು, ಸಾಮಂತರು, ಸರದಾರರು ಮೊದಲಾದವರೆಲ್ಲ ಈಗಲೂ ಈ ದೇವರಿಗೆ ನಡೆದು ಕೊಳ್ಳುವ ಕ್ರಮ ಚಾಲ್ತಿಯಲ್ಲಿದೆ. ಕುಣಬಿ, ಮಾಂಗ, ಮಹಾರ ಮುಂತಾದ ಕೆಳಜಾತಿಗಳಲ್ಲಿ ಈ ದೇವರಿಗೆ ನಡೆದು ಕೊಳ್ಳುವವರ ಸಂಖ್ಯೆ ಇನ್ನೂ ಹೆಚ್ಚು. ವಾಘ್ಯಾ – ಮುರಳಿಯರಾಗುವವರಲ್ಲಿ ಹೆಚ್ಚಿನವರು ಇವರೇ. ಬ್ರಾಹ್ಮಣರಲ್ಲಿ ದೇಶಸ್ತಬ್ರಾಹ್ಮಣರು ನಡೆದುಕೊಳ್ಳುವ ದೇವರುಗಳಲ್ಲಿ ಖಂಡೋಬಾ ಸರ್ವಪ್ರಥಮ ಸ್ಥಾನದಲ್ಲಿದ್ದಾನೆಂದು ಸಂಶೋಧಕರು ವರದಿ ಮಾಡಿದ್ದಾರೆ.

ಶಿವಾಜಿಯ ಮಲತಮ್ಮನಾದ ವೆಂಕೋಜಿಯ ಮನೆತನ ತಂಜಾವೂರು ಜಿಂಜಿ ಪ್ರದೇಶಗಳನ್ನು ಆಳುತ್ತಿತ್ತು. ಈ ವೆಂಕೋಜಿಯ ಮಗನಾದ ಶರಭೋಜಿಯು ಜೆಜೂರಿಯಲ್ಲಿ ಸದ್ಯ ಇರುವ ಒಂದು ಜೋಡಿ ದೇವರ ಮೂರ್ತಿಗಳನ್ನು ಅರ್ಪಿಸಿದ್ದಾನೆ. ನಾರಾಯಣರಾವ ಪೇಶ್ವೆಯ ಕೊಲೆಯ ಸಮಯದಲ್ಲಿ ಅವನ ಪತ್ನಿ ಗಂಗಾಬಾಯಿ ಗರ್ಭಿಣಿಯಾಗಿದ್ದಳು. ಆಗ ಪೇಶ್ವೆ ಆಡಳಿತ ನೋಡಿಕೊಳ್ಳಲು ನಾನಾ ಫಡನಾವೀಸ ಮುಂತಾದ ೧೨ ಜನ ಮಂತ್ರಿಗಳು ಮುಂದಾದರು. ಗಂಗಾಬಾಯಿಯನ್ನು ಜೆಜೂರಿಯ ಸಮೀಪದ ಪುರಂದರಗಡದಲ್ಲಿಟ್ಟು ರಕ್ಷಿಸಿದರು. ಅವಳ ಗರ್ಭದಿಂದ ಪೇಶ್ವೆಯ ಉತ್ತಾರಾಧಿಕಾರಿ ಸವಾಯಿ ಮಾಧವರಾವ ಹುಟ್ಟಿದಾಗ ನಾನಾ ಫಡನಾವೀಸನು ಜೆಜೂರಿಗೆ ಬಂದು ಹರಕೆ ತೀರಿಸಿದನು. ಒಂದು ಸಾವಿರ ರೂ. ಬೆಲೆಯ ಒಂದು ಮುತ್ತಿನ ಸರ, ಒಂದು ಲಕ್ಷ ರೂಪಾಯಿ ಮತ್ತು ಒಂದು ಮಣ ಬಂಢಾರವನ್ನು ದೇವರಿಗೆ ಅರ್ಪಿಸಿದನು. ಹೋಳ್ಕರ ಮನೆತನದ ಕುಲದೇವರು ಜೆಜೂರಿಯ ಖಂಡೋಬಾ. ಕಾರಣ ಆ ರಾಜಮನೆತನದ ಪ್ರಸಿದ್ಧರಾಣಿ ಅಹಲ್ಯಾ ಬಾಯಿ ಹೋಳ್ಕರ ಜೆಜೂರಿ ದೇವಾಲಯದ ಸುತ್ತಲಿರುವ ಕೋಟಿಯ ಪುನರ್ನೀಮಾಣ ನಳದುರ್ಗ ದೇವಾಲಯದ ಜೀರ್ಣೋದ್ಧಾರ, ಪ್ರೇಮಪುರ ದೇವಾಲಯದ ಭವ್ಯ ಮಹಾದ್ವಾರ ನಿರ್ಮಾಣ ಮುಂತಾಗಿ ಅಪರಿಮಿತ ಪುನರುದ್ಧಾರ ಕಾರ್ಯ ಮಾಡಿದ್ದಾಳೆ. ಮಹಾರಾಷ್ಟ್ರದ ಅನೇಕ ಹಿಂದೂ ದೇವಾಲಯಗಳು ಮುಸಲ್ಮಾನರ ಏಳಿಗೆಯ ಅವಧಿಯಲ್ಲಿ ಬಹಳಷ್ಟು ಉಧ್ವಸ್ತಗೊಂಡವು. ಪೂಜಾ ಪುನಸ್ಕಾರಗಳು ನಿಂತು ಹೋದವು. ಆದರೆ ಪಾಲಿ ಮತ್ತು ಜೆಜೂರಿಯ ದೇವಾಲಯಗಳು ಮಾತ್ರ ಯಾವರೀತಿಯಲ್ಲೂ ಹಾನಿಗೊಳಗಾಗದೆ ಹಾಗೇ ಉಳಿದವು. ಮಹಾರಾಷ್ಟ್ರದ ವೀರ ಸಮುದಾಯ ಈ ದೇವಾಲಯಗಳು ಎಳ್ಳಷ್ಟೂ ಮುಕ್ಕಾಗದಂತೆ ನೋಡಿಕೊಂಡಿವೆ. ಶಿವಾಜಿಯ ಸಮಕಾಲೀನನಾದ ಒಬ್ಬ ಜಾನಪದ ಕವಿ ಮುಸ್ಲಿಮ ದಾಳಿಯನ್ನು ಉಲ್ಲೇಖಿತಸುತ್ತ ಹೀಗೆ ಹಾಡಿದ್ದಾನೆ.

ಖಾನದರ ಮಜಲಿ ಕೂಚಕೇಲಾ ಚಾಲುನಿ
ಪಾಲಿ ಕಾರಣೇಗೇಲಾ ||
ಪಾಲಿ ಚಾ ಖಂಡೋಬಾ ಆಜಮತ
ದಾವಿ ಮೋಗಲಾಲಾ ||
ನ್ಹಾಟೋ ನ್ಹಾಟೋ ರೇ ಭಾಯಿ ಬೋಲಿಲಾ
ತೀನ ಕೋಸ ಮೋಡಕೇಲಾ ||
ದೀಪಮಾಳ ಬಂಧೀಲಿ ದೇವಾಲಾ ಮಗ
ಖಾನಾಚ ಭೋಗಪುರಲಾ ||

ಇದೇ ರೀತಿ ಜಿಜೂರಿಯ ಮೇಲೆ ಕೂಡ ಔರಂಗಜೇಬನ ದಾಳಿ ಬಂದಿತ್ತಂತೆ. ಆಗ ದೇವರು ಅಸಂಖ್ಯ ಗುಂಗೀಹುಳಗಳನ್ನು ಸೃಷ್ಟಿಸಿ ಅವನ ಸೈನ್ಯದ ಮೇಲೆ ಕಳಿಸಿದ್ದರಿಂದ ಮೊಗಲ ಸೈನ್ಯ ಹೆದರಿ ಓಡಿ ಹೋಯಿತಂತೆ. ಈ ಸಂದರ್ಭದಲ್ಲಲಿ ಔರಂಗಜೇಬನು ದೇವರಿಗೆ ಹರಕೆ ಹೊತ್ತು ಒಂದೂ ಕಾಲ ಲಕ್ಷರೂಪಾಯಿ ಬೆಲೆಬಾಳುವ ಚಿನ್ನದ ಗುಂಗೀಹುಳವೊಂದನ್ನು ಮಾಡಿಸಿ ಕೊಟ್ಟನೆಂದು ಪ್ರತೀತಿ ಇದೆ. ಕುತೂಹಲದ ಅಂಶವೆಂದರೆ ಅಂಥ ಒಂದು ಚಿನ್ನದ ಗುಂಗೀಹುಳ ಬಹುದಿನಗಳವರೆಗೆ ಜೆಜೂರಿ ದೇವಾಲಯಗಳಲ್ಲಿ ಇದ್ದ ಬಗ್ಗೆ ದಾಖಲೆಗಳಿವೆ. ಜೆಜೂರಿ, ಪ್ರೇಮಪುರ ಮತ್ತು ಪಾಲಿದೇವಾಲಯಗಳ ವಾಸ್ತು ವೈಭವವನ್ನು ನೋಡಿದರೆ ಮಹಾರಾಷ್ಟ್ರಿಗರ ಶ್ರದ್ಧೆ-ಭಕ್ತಿಗಳ ಬೃಹತ್ತಿನ ಕಲ್ಪನೆ ಬರುತ್ತದೆ.

ಜೆಜೂರಿಯಲ್ಲಿರುವ ಶಾಸನಗಳಲ್ಲಿ ಕ್ರಿ.ಶ.೧೨೪೬ ರಲ್ಲಿ ಕೆತ್ತಿದ ಒಂದು ಜೈನ ಶಾಸನ ಅತ್ಯಂತ ಹಳೆಯದು. ಇದು ಜೆಜೂರಿಯ ಖಂಡೋಬಾ ಮಂದಿರದ ಹೊರಗೋಡೆಯಲ್ಲಿ ಕೂಡ್ರಿಸಲ್ಪಟ್ಟಿದೆ. ಧವುಲ್ಲನೆಂಬುವನು ‘ಕಪರ್ದ’ ಯಕ್ಷನನ್ನು ಸ್ಥಾಪಿಸದ್ದಾಗಿ ಅದರಲ್ಲಿ ಹೇಳಿದೆ. ಜೈನ ಗೃಹಸ್ಥನೊಬ್ಬ ಖಂಡೋಬಾನಿಗೆ ನಡೆದು ಕೊಂಡು ತನ್ನ ಭಕ್ತಿಯ ದ್ಯೋತಕವಾಗಿ ಯವುದೋ ಮೂರ್ತಿಯೊಂದನ್ನು ಮಾಡಿಸಿ ಕೊಟ್ಟಂತೆ ಕಾಣುತ್ತದೆ. ‘ಹತ್ತೊಂಬತ್ತನೆಯ ತೀರ್ಥಂಕರ ಮಲ್ಲಿನಾಥ ಅವನ ಯಕ್ಷನ ಹೆಸರು ಕಪರ್ದಿ. ಪ್ರಸ್ತುತ ಧವುಲ್ಲಕನು ದೇವರನ್ನು ಜೈನ ಪರವೆಂದು ಗ್ರಹಿಸಿ ಈ ಹೆಸರಿನ ಮೂರ್ತಿ ಮಾಡಿಸಿ ಕೊಟ್ಟಂತೆ ತೋರುತ್ತದೆ’ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ಶಾಸನ ದೇವಸ್ಥಾನದ ಗರ್ಭಗೃಹದಲ್ಲಿದೆ. ಕಾಲ ಕ್ರಿ.ಶ. ೧೩೮೧. ವೀರಪಾಳ ವೀಲಮಲ್ಲನೆಂಬ ಭಕ್ತನು ಗರ್ಭಗೃಹ ನಿರ್ಮಿಸಿದ್ದ ಉಲ್ಲೇಖ ಅದರಲ್ಲಿದೆಯಂತೆ.

ಕ್ರಿ.ಶ. ೧೨೯೮ ರಲ್ಲಿ ಪೂರ್ಣಗೊಂಡ ಜ್ಞಾನದೇವನ ಜ್ಞಾನೇಶ್ವರಿಯಲ್ಲಿ ನೇವಾಸೆಯು ಶ್ರೀ ಮಹಾಲಸಾದೇವಿಯ ಎಂದರೆ ಮ್ಹಾಲಸಾ ದೇವಿಯ ಅನಾದಿ ಕ್ಷೇತ್ರ ಎಂದು ಹೇಳಿದೆ. ಮಹಾನುಭಾವ ಪಂಥದ ಸ್ಥಾಪಕ ಚಕ್ರಧರನ ಜೀವನ ಚರಿತ್ರೆಯನ್ನು ಮಾಹಿಮ ಭಟ್ಟನು ಹದಿಮೂರನೆಯ ಶತಮಾನದ ಕೊನೆಯಲ್ಲಿ (ಸು. ೧೨೮೩ A.D) ‘ಲೀಳಾ ಚರಿತ್ರ’ ಎಂಬ ಹೆಸರಿನಿಂದ ಬರೆದಿದ್ದಾನೆ. ಇದರ ಎಲ್ಲ ಭಾಗಗಳು ಏಕಕಾಲದಲ್ಲಿ ರಚಿತವಗಲಿಲ್ಲವೆಂದು ಮರಾಠಿ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಆದರೆ ಈ ಗ್ರಂಥ ದೇವಗಿರಿ ಯಾದವರ ಕಾಲದ ಮಹಾರಾಷ್ಟ್ರ ಜನಜೀವನವನ್ನು ಚಿತ್ರಿಸುತ್ತದೆಂದು ಒಪ್ಪಲಾಗಿದೆ. ಎಂದರೆ ೧೩-೧೪ನೆಯ ಶತಮಾನದಲ್ಲಿ ಈ ಗ್ರಂಥ ತನ್ನ ಒಟ್ಟು ಸ್ವರೂಪದಲ್ಲಿ ಸಿದ್ದಗೊಂಡಿದೆ ಎಂದು ತಿಳಿಯಲಡ್ಡಿಯಿಲ್ಲ. ಇದರಲ್ಲಿ ಚಕ್ರಧರನು ಅಲ್ಲಲ್ಲಿ ಬಿಡಾರ ಮಾಡುತ್ತ. ಪವಾಡ ಮೆರೆಯುತ್ತ, ಅಂದಿನ ಸಮಾಜದಲ್ಲಿ ಬೇರುಬಿಟ್ಟಿದ್ದ ವೈದಿಕ ದೇವರುಗಳ ಪೂಜೆ-ಪುನಸ್ಕಾರ ಜನರ ಆಚಾರ-ವಿಚಾರಗಳನ್ನು ಟೀಕಿಸುತ್ತ ಹೋದಂತೆ ವರ್ಣಿತವಾಗಿದೆ. ಪ್ರಸ್ತುತ ಕೃತಿಯಲ್ಲಿ ಮೈಲಾರ ದೇವರ ಸಂಬಂಧಿಯಾದ ಹಲವು ಉಲ್ಲೇಖನಗಳಿರುವುದನ್ನು ವಿದ್ವಾಂಸರು ಗಮನಿಸಿದ್ದಾರೆ. ಬೀಡ ಜಿಲ್ಲೆಯ ಪಾಲಿ, ಔರಂಗಬಾದ ಜಿಲ್ಲೆಯ ಸಾಡೆಗಾಂವ, ಅಹಮ್ಮದ ನಗರ ಜಿಲ್ಲೆಯ ಸೋನಯಿ, ಮತ್ತು ನೇವಾಸೆಗಳು ಮೈಲಾರ ಮತ್ತು ಮಾಳಸಾದೇವಿಯ ಕ್ಷೇತ್ರಗಳೆಂದು ಇದರಲ್ಲಿ ಉಲ್ಲೇಖಗೊಂಡಿವೆ.

ಬಂಗಾಲದ ಪ್ರಸಿದ್ಧ ಸಂತ ಗೌರಾಂಗ ಅಥವಾ ಚೈತನ್ಯ ಪ್ರಭು ತೀರ್ಥಯಾತ್ರೆ ಮಾಡುತ್ತ. ಕ್ರಿ.ಶ. ೧೫೧೦-೧೧ರಲ್ಲಿ ಜೆಜೂರಿಗೆ ಬಂದಿದ್ದಂತೆ ತಿಳಿದುಬರುತ್ತದೆ. ಕ್ರಿ.ಶ.೧೫೩೩ ರಿಂದ ೧೫೯೯ರ ಅವಧಿಯಲ್ಲಿದ್ದ ಸಂತ ಏಕನಾಥ ಖಂಡೋಬಾನನ್ನೂ ಅವನ ಸಂಬಂಧಿಯಾದ ಆರಾಧನೆಗಳನ್ನೂ ಬಾರಿಬಾರಿ ಉಲ್ಲೇಖಿಸಿದ್ದಾನೆ. ಒಟ್ಟಿನಲ್ಲಿ ದೇವರನ್ನು ಮತ್ತು ಆರಾಧನೆಯನ್ನು ಈ ಸಂತ ಒಪ್ಪಿದ್ದರೂ ಮುರಳಿ ಪದ್ಧತಿಯನ್ನು ಪರೋಕ್ಷವಾಗಿ ಖಂಡಿಸಿದ್ದಾನೆ. ಕ್ರಿ.ಶ.೧೫೫೧ ರಿಂದ ೧೬೧೫ರ ಸುಮಾರಿನಲ್ಲಿದ್ದ ಇನ್ನೊಬ್ಬ ಅನುಭಾವಿ, ಸಂತ ದಾಸೋಪಂತರಿಗೆ ಖಂಡೋಬಾ ಕುಲದೇವರು. (ದಾಸೋರಪಂತರು ಖಂಡೋಬಾನನ್ನು ತನ್ನ ಕೃತಿಗಳಲ್ಲಿ ಸ್ಮರಿಸಿದ್ದಾಗಿ ತಿಳಿದು ಬರುತ್ತದೆ.)

ನೇವಾಸೆಯ ಮಾಳಸಾನಾರಾಯಣಿ ದೇವಿಯ ಪೂಜಾರಿ (ಬಡವೆ) ಗಳಲ್ಲಿ ಹಳೆಯ ಕಾಗದ ಪತ್ರಗಳು ದೊರತಿವೆಯಂತೆ. ಅವುಗಳಲ್ಲಿ ಕ್ರಿ.ಶ.೧೬೨೮ರ ವರೆಗೆ ದೇವಿಯನ್ನು ‘ಶ್ರೀ ಮ್ಹಾಲಸಾದೇವಿ’ ಎಂದೇ ಕರೆದಿರುವುದಾಗಿ ತಿಳಿದು ಬರುತ್ತದೆ. ಭಾರದ್ವಾಜ ಗೋತ್ರದ ರಾಘೋ ಮಂಬಾಜಿ ಎಂಬವವನು ಜೆಜೂರಿಯ ಗಡಕೋಟ ದೇವಾಲಯದ ಸಭಾಮಂಟಪವನ್ನು ದಿನಾಂಕ ೧೨.೬.೩೫ರಂದು ಪ್ರಾರಂಭಿಕ ಕ್ರಿ.ಶ. ೧೬೩೭ ರಲ್ಲಿ ಪೂರ್ತಿಗೊಳಿಸಿದನೆಂದು ಅಲ್ಲಿನ ಬರಹವೊಂದು ತಿಳಿಸುತ್ತದೆ. ಪ್ರಸಿದ್ಧ ಮರಾಠಾ ಸರದಾರ ಧನಾಜಿ ಜಾಧವನು ಪಾಲಿಯ ದೇವಾಲಯದ ಹೊರಮಂಟಪದಲ್ಲಿ ವಾಸ್ತುಸೇವೆ ಮಾಡಿದ್ದಾನೆ. ಕ್ರಿ.ಶ.೧೭೧೧ ರಿಂದ ೧೭೨೭ ರ ವರೆಗೆ ಆಳಿದ ವೆಂಕೋಜಿಯ ಮಗ ಶರಭೋಜಿಯ ಸೇವೆಯನ್ನು ಈಗಾಗಲೇ ಹೇಳಿದೆ. ಹೋಳ್ಕರ ಮನೆತನದ ಪ್ರಸಿದ್ಧರಾಣಿ ಅಹಲ್ಯಾಬಾಯಿ ಹೋಳ್ಕರ (ಕ್ರಿ.ಶ. ೧೭೨೫ ರಿಂದ ೧೨೯೫) ಸಲ್ಲಿಸಿದ ಸೇವೆಯನ್ನೂ ಈ ಮುಂಚೆ ತಿಳಿಸಿದೆ. ಹದಿನೇಳನೆಯ ಶತಮಾನದ ಇನ್ನೊಬ್ಬ ಸಂತಕವಿ ರಾಮದಾಸರು ಖಂಡೋಬಾನನ್ನು ಪದೇ ಪದೇ ಸ್ತುತಿಸಿದ್ದಾರೆ. ಮೊಗಲರ ದಾಳಿಯಾದಾಗ ದೇವರು ಗುಂಗೀ ಹುಳುಗಳನ್ನು ಸೃಷ್ಟಿಸಿದನೆಂಬ ಐತಿಹ್ಯ ಅವರ ಒಂದು ಪದ್ಯದಲ್ಲಿ ಉಕ್ತವಾಗಿದೆ. ರಾಮದಾಸರು ಖಂಡೇರಾಯನನ್ನು ಕುರಿತು ಒಂದು ಆರತಿ ಹಾಡನ್ನು ಕೂಡ ರಚಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಪ್ರಸಿದ್ಧ ಅನುಭಾವಿ ‘ಮಾಣಿಕ ಪ್ರಭು’ ಸಕಲ ಮತಾಚಾರ್ಯರೆಂದು ಹೆಸರಾದವರು. ಇವರೂ ಒಂದು ‘ಮಲ್ಲಾರಿ ಮಹಾತ್ಮ್ಯ’ ರಚಿಸಿದ್ದಾಗಿ ತಿಳಿದು ಬರುತ್ತದೆ.

ಹದಿಮೂರನೆಯ ಶತಮಾನದಿಂದ ಮಹಾರಾಷ್ಟ್ರದಲ್ಲಿ ಖಚಿತ ಉಲ್ಲೇಖಗಳು ಲಭ್ಯವಾಗಿವೆ ಮತ್ತು ಹದಿನೇಳನೆಯ ಶತಮಾನದಿಂದ ಜೆಜೂರಿ ಮತ್ತು ಪಾಲಿಗಳಲ್ಲಿ ಅಸಂಖ್ಯ ಶಾಸನಗಳು ಹುಟ್ಟಿಕೊಂಡಿವೆ. ಸದ್ಯಕ್ಕೆ ಹದಿಮೂರನೆಯ ಶತಮಾನ ದಷ್ಟೊತ್ತಿಗೆ ಮೈಲಾರಲಿಂಗ – ಮಾಳಸಾದೇವಿಯವರ ಆರಾಧನೆ. ಮಹಾರಾಷ್ಟ್ರದ ವಿದರ್ಭದ ವರೆಗೆ ವ್ಯಾಪಿಸಿತ್ತೆಂದು ತಿಳಿಯಲು ಸೃಷ್ಟ ಆಧಾರಗಳಿವೆ ಎಂದು ಹೇಳಿದರೆ ಸಾಕೆಂದು ಕಾಣುತ್ತದೆ.

ಜಾನಪದ ಸ್ತರದಿಂದ ಪೌರಾಣಿಕ ಸ್ತರಕ್ಕೆ ಈ ದೇವರವನ್ನು ಏರಿಸಿದ್ದು ಮಹಾರಾಷ್ಟ್ರವೇ ಎಂದು ಮಹಾರಾಷ್ಟ್ರದ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಅಭಿಪ್ರಾಯವನ್ನು ಒಪ್ಪಬಹುದಾಗಿದೆ. ಮರಾಠಿ ಮತ್ತು ಸಂಸ್ಕೃತ ಭಾಷೆಯಲ್ಲಿ ಈ ದೇವರ ಸಂಬಂಧಿಯಾಗಿ ಹುಟ್ಟಿಕೊಂಡಿರುವ ಭಕ್ತಿ ಸಾಹಿತ್ಯ. ವೈವಿದ್ಯ ಮತ್ತು ಪ್ರಮಾಣ ದೃಷ್ಟಿಯಿಂದ ತುಂಬ ಗಮನಾರ್ಹವಾಗಿದೆ. ವಾರಕರಿ ಮತ್ತು ದತ್ತ ಪಂಥದ ಅನೇಕ ಸಂತ ಕವಿಗಳು ಮೈಲಾರ ದೇವರನ್ನು ನಾನಾ ಬಗೆಯಾಗಿ ಸ್ತುತಿಸಿದ್ದಾರೆ. ಶೇಖಮಹಮ್ಮದ ಶ್ರೀಗೋಂದೇಕರರಂಥ (ಅದ್ವೈತಿ) ಒಬ್ಬಿಬ್ಬರು ಮಾತ್ರ ಅಪವಾದಾತ್ಮಕವಾಗಿದ್ದಾರೆ.