ಈಗಾಗಲೇ ನಾವು ನಾಗರಖಂಡ ಪ್ರದೇಶಗಳಲ್ಲಿ ಕಂಡು ಬಂದ ಬಹಳಷ್ಟು ಗೋಸಾಸಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಬೇರೊಂದೆಡೆ ಕೊಟ್ಟಿದ್ದೇವೆ. ಮುತ್ತಳ್ಳಿಯ ಜೇನುಮರಡಿಯಲ್ಲಿ ಒಂದೇ ಕಡೆಗೆ ಒಟ್ಟು ೩೦ ಗೋಸಾಸಗಳ ಸಮುದಾಯವಿರುವ ಸಂಗತಿಯನ್ನು ಅಲ್ಲಿ ಗುರುತಿಸಿದೆ. ಅವುಗಳಲ್ಲಿ ಐದು ಲಿಪಿ ಸಹಿತವಾಗಿವೆಯೆಂಬುದನ್ನು ಈ ಮುಂಚೆ ನಾವು ಗಮನಿಸಿದ್ದೆವು. ಇತ್ತೀಚಿನ ನಮ್ಮ ಪುನಃಪರಿಶೀಲನೆಯಲ್ಲಿ ಇನ್ನೂ ಎರಡು ಗೋಸಾಸಗಳ ಮೇಲೆ ಶಾಸನ ಕೆತ್ತಿರುವುದು ಗಮನಕ್ಕೆ ಬಂದಿದೆ. ಜೊತೆಗೆ ಇವೆರಡು ಶಾಸನಗಳು ಐತಿಹಾಸಿಕವಾಗಿ ಕೂಡ ಅಷ್ಟೇ ಮಹತ್ವ ಪೂರ್ಣವಾಗಿವೆ. ಇವುಗಳಲ್ಲಿ ಒಂದು ಶಾಸನ ರಾಷ್ಟ್ರಕೂಟ ದೊರೆ ಕನ್ನರ ಮತ್ತು ಅವನ ಮಗ ಪ್ರಭೂತವರ್ಷ ಗೋವಿಂದರ ಸಂಯುಕ್ತ ರಾಜ್ಯ ಭಾರವನ್ನು ಉಲ್ಲೇಖಿಸಿದೆ. ಎಂದರೆ ಈ ಶಾಸನೋಕ್ತ ಕನ್ನರ ಮತ್ತು ಗೋವಿಂದ ಇವರು ರಾಷ್ಟ್ರಕೂಟ ಚಕ್ರವರ್ತಿ ಒಂದನೆಯ ಕೃಷ್ಣ ಮತ್ತು ಅವನ ಹಿರಿಯ ಮಗ ಇಮ್ಮಡಿ ಗೋವಿಂದರೆಂಬುದು ಸ್ಪಷ್ಟ.

ಇಲ್ಲಿನ ಎರಡನೆಯ ಶಾಸನದಲ್ಲಿ ಕೇವಲ ಪ್ರಭೂತ ವರ್ಷಗೋವಿಂದನ ಹೆಸರು ಮಾತ್ರ ಉಲ್ಲೇಖಿಸಲ್ಪಟ್ಟಿದೆ ಎಂದರೆ ಒಂದನೆಯ ಕೃಷ್ಣನು ಆಗ ಜೀವಿಸಿರದೇ ರಾಷ್ಟ್ರಕೂಟರ ಅಧಿಕಾರಸೂತ್ರಗಳೆಲ್ಲ ಎರಡನೆಯ ಗೋವಿಂದನಿಗೆ ಹಸ್ತಾಂತರಗೊಂಡಿರುವುದು ಖಚಿತ. ಇಮ್ಮಡಿಗೋವಿನಂದ ತಮ್ಮ ಧ್ರುವನ ಹೆಸರನ್ನು ಉಲ್ಲೇಖಿಸುವ ಎರಡು ಪ್ರತ್ಯೇಕ ಶಾಸನಗಳು ಮುತ್ತಳ್ಳಿಯ ಇದೇ ಗೋಸಾಸಗಳ ಸಮುದಾಯದಲ್ಲಿ ದೊರೆತಿರುವುದನ್ನು ನಾವು ಈಗಾಗಲೇ ಬೆಳಕಿಗೆ ತಂದಿದ್ದೇವೆ. ಎಂದರೆ ಇಲ್ಲಿ ಲಿಪಿ ಸಹಿತವಾಗಿ ದೊರೆತಿರುವ ಒಟ್ಟು ಏಳು ಗೋಸಾಸಗಳಲ್ಲಿ ಎರಡು ರಾಷ್ಟ್ರಕೂಟರ ಒಂದನೆಯ ಕೃಷ್ಣನ ಕಾಲವಾದರೆ ಎರಡು ಅವನ ಹಿರಿಯ ಮಗನಾದ ಗೋವಿಂದನ ಕಾಲ ಮತ್ತು ಅವನ ಕಿರಿಯ ಮಗನಾದ ಧ್ರುವನ ಕಾಲದಲ್ಲಿ ಹುಟ್ಟಿಕೊಂಡಿವೆ. ಮೇಲೆ ತಿಳಿಸಿರುವಂತೆ ಕೃಷ್ಣ ಮತ್ತು ಗೋವಿಂದರ ಹೆಸರುಗಳನ್ನು ಸಂಯುಕ್ತವಾಗಿ ಹೇಳುವ ಒಂದು ಶಾಸನ ಲಭ್ಯವಾಗಿದೆ. ಈ ಐದು ಶಾಸನಗಳನ್ನು ಹೊರತುಪಡಿಸಿ ಇನ್ನುಳಿದ ಲಿಪಿಸಹಿತವಾದ ಎರಡು ಚಿಕ್ಕ ಗೋಸಾಸಗಳಲ್ಲಿ ರಾಷ್ಟ್ರಕೂಟ ಚಕ್ರವರ್ತಿಗಳ ಹೆಸರು ಕಂಡುಬರುವುದಿಲ್ಲ. ಬದಲು ಅವರ ಮಹಾಮಂಡಲೇಶ್ವರನಾಗಿ ಬನವಾಸಿ ಪ್ರಾಂತ್ಯವನ್ನು ಆಳುತ್ತಿದ್ದ ಅರಸನ ಹೆಸರು ಉಲ್ಲೇಖಿಸಲ್ಪಟ್ಟಿದೆ. ಬಹುಶಃ ಇವೆರಡು ಶಾಸನಗಳು ಒಂದನೆಯ ಕೃಷ್ಣನ ಕಾಲಾವಧಿಯವೇ ಆಗಿರಬಹುದು.

ಇಲ್ಲಿ ಆಶ್ಚರ್ಯಕರವಾದ ಒಂದು ಅಂಶ ಹುದುಗಿದೆ. ಮಾರಕ್ಕೆ ಅರಸನು ಚಾಲುಕ್ಯರ ಬಲವನ್ನು ಮುರಿಯುವುದರಲ್ಲಿ ಒಂದನೆಯ ಕೃಷ್ಣನಿಗೆ ತುಂಬಾ ಸಹಾಯ ಮಾಡಿದನು, ಈ ಮಾತಿಗೆ ಇಲ್ಲಿ ಕೊಟ್ಟಿರುವ ಒಂದನೆಯ ಶಾಸನದಲ್ಲಿ ಸ್ಪಷ್ಟವಾದ ಆಧಾರವಿದೆ. ಶಾಸನವು ಕೃಷ್ಣನನ್ನು “ಸ್ವಸ್ತ್ಯಕಾಲವರ್ಷ ಪ್ರಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರ” ಎಂದು ಮೊದಲು ವಿಶೇಷಿಸಿ ಕೂಡಲೇ “ಅಕಾಲವರ್ಷ ಶ್ರೀ ಪ್ರಥ್ವೀವಲ್ಲಭ ಮಾರಕ್ಕೆ ಅರಸರ್” ಎಂದಿದೆ. ಎಂದರೆ ಮಾರಕ್ಕೆ ಅರಸನು ಚಕ್ರವರ್ತಿಗೆ ಸಲ್ಲಬಹುದಾಗಿದ್ದ ಗೌರವಾದರಗಳಿಗೆ ಪಾತ್ರನಾಗಿದ್ದನೆಂಬ ಅಂಶ ಇದರಿಂದ ಖಚಿತವಾಗುತ್ತದೆ. ಆದರೆ ಈತನ ಹೆಸರು ಗೋವಿಂದನನ್ನು ಉಲ್ಲೇಖಿಸುವ ಎರಡೂ ಶಾಸನಗಳಲ್ಲಿ ಇಲ್ಲ! ಬದಲು ಎಱೆ[ಯ]ರಸ ಎಂಬುವನು ಇಮ್ಮಡಿಗೋವಿಂದನ ಕೈಕೆಳಗೆ ಮಂಡಳೇಶ್ವರನಾಗಿ ಬನವಾಸಿ ಪ್ರಾಂತವನ್ನು ಆಳುತ್ತಿದ್ದನೆಂದು ಇಲ್ಲಿನ ಎರಡನೆಯ ಶಾಸನ ತಿಳಿಸುತ್ತದೆ. ಎಂದರೆ ಇಮ್ಮಡಿ ಗೋವಿಂದ ಯಾವುದೋ ಕಾರಣಕ್ಕಾಗಿ ಮಾರಕ್ಕೆ ಅರಸನನ್ನು ಅಧಿಕಾರವಂಚಿತಗೊಳಿಸಿ ಅವನ ಸ್ಥಾನದಲ್ಲಿ ಎರೆ[ಯ]ರಸನನ್ನು ನಿಯಮಿಸಿದ್ದು ಸ್ಪಷ್ಟವಾಗುತ್ತದೆ.[1]

ಈ ವಿಚಿತ್ರ ಇಷ್ಟಕ್ಕೆ ಕೊನೆಗಾಣುವುದಿಲ್ಲ. ಇಮ್ಮಡಿ ಗೋವಿಂದನ ತಮ್ಮನೂ ಮುಮ್ಮಡಿ ಗೋವಿಂದನ ತಂದೆಯೂ ಆದ “ಧಾರವರ್ಷ ಕಲಿವಲ್ಲಭ ನಿರುಪಮ ಧ್ರುವನ” ಕಾಲದಲ್ಲಿ ಪುನಃ ಮಾರಕ್ಕೆ ಅರಸನು ಬನವಾಸಿ ಮಂಡಲದ ಅಧಿಕಾರ ಪಡೆದನೆಂಬುದು ಇದೇ ಮುತ್ತವಳ್ಳಿಯ ಇನ್ನೊಂದು ಗೋಸಾಸದಿಂದ ನಮಗೆ ಸ್ಪಷ್ಟವಾಗಿದೆ* ಬಹುಶಃ ಈ ಸಹೋದರರ ಮೇಲಾಟದಲ್ಲಿ ಮಾರಕ್ಕೆ ಅರಸ ತಮ್ಮನ ಪಕ್ಷವಹಿಸಿದ್ದೇ ಕಾರಣವಾಗಿ ಇಮ್ಮಡಿ ಗೋವಿಂದನ ಕಾಲದಲ್ಲಿ ಅಧಿಕಾರ ವಂಚಿತನಾಗ ಬೇಕಾಯಿತು. ಧ್ರುವನು ರಾಷ್ಟ್ರಕೂಟ ಸಿಂಹಾಸನದ ಅಧಿಖಾರ ಪಡೆದಿಕೊಂಡದ್ದರಿಂದ ಮಾರಕ್ಕೆ ಅರಸನು ಪುನಃ ಬನವಾಸಿ ಪ್ರಾಂತದ ಮಂಡಲೇಶ್ವರತ್ವ ಪಡೆದುಕೊಂಡಿದ್ದಾರೆ.

ಮಾರಕ್ಕೆ ಅರಸನನ್ನು ಹೆಸರಿಸುವ ಒಂದು ಶಾಸನ-ಸೌ.ಇಂ xx, ಸಂ.೧೦ ರಲ್ಲಿ ಮತ್ತು ಇನ್ನೊಂದು ಶಾಸನ ಎಪಿ. ಇಂ VI, ಪು. ೧೬೨ ರಲ್ಲಿ ಈ ಮುಂಚೆ ಪ್ರಕಟವಾಗಿದೆಯಾದರೂ ಅವೆರಡರಿಂದ ಈತನ ಬಗ್ಗೆ ಯಾವ ಹೆಚ್ಚಿನ ಅಂಶಗಳೂ ಬೆಳಕಿಗೆ ಬಂದಿಲ್ಲ. ಪ್ರಸ್ತುತ ಇಲ್ಲಿನ ಒಂದನೆಯ ಶಾಸನದಲ್ಲಿ ಈತ ಸೇನಾವರ ಮನೆತನದವನೆಂಬುದು ಸ್ಪಷ್ಟವಾಗಿದೆ.[2] ಈ ಅಂಶವನ್ನು ಸ್ಪಷ್ಟಪಡಿಸುವ ಇನ್ನೂ ಕೆಲವು ದಾಖಲೆಗಳು ಬೆಳಕಿಗೆ ಬಂದಿವೆ. ಈ ಸೇನಾವರ ಅಥವಾ ಸೇಣವಾರರು ಕರ್ನಾಟಕದ ಬಹುದು ಪ್ರಾಚೀನವಾದ ರಾಜಮನೆತನಕ್ಕೆ ಸೇರಿದವರಾಗಿದ್ದು, ಈಗಿನ ಶಿವಮೊಗ್ಗ, ಚಿಕ್ಕ ಮಂಗಳೂರು ಜಿಲ್ಲೆ ಪ್ರದೇಶದಲ್ಲಿ ನೆಲೆಸಿದ್ದರೆಂದು ತಿಳಿಯಬಹುದು. ಈ ಸೇಣವಾರರ ಕೆಲ ಹೆಸರುಗಳು ಅಲ್ಲಲ್ಲಿ ಕಂಡುಬರುತ್ತವೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕೂಡ ಇವರ ಮನೆತನ ಅಸ್ತಿತ್ವದಲ್ಲಿದ್ದ ಬಗ್ಗೆ ಶಾಸನೋಲ್ಲೇಖಗಳಿವೆ. ಆದರೆ ಅವರಲ್ಲೆಲ್ಲ ಅತ್ಯಂತ ಪ್ರಮುಖನೂ ರಾಷ್ಟ್ರಕೂಟ ಚಕ್ರವರ್ತಿ ೧ನೆಯ ಕೃಷ್ಣನಿಗೆ ಸಮಬಲನೂ ಆಗಿದ್ದ ಮಾರಕ್ಕೆ ಅರಸನ ಬಗ್ಗೆ ಖಚಿತ ಮಾಹಿತಿಯು ಮುತ್ತಳ್ಳಿಯ ಈ ಶಾಸನಗಳಿಂದ ಈಗ ಲಭ್ಯವಾಗಿದೆ.

ಹೆಸರುಗಳನ್ನು ನೇರವಾಗಿ ಹೇಳುವ ರಾಷ್ಟ್ರಕೂಟ ೧ನೆಯ ಕೃಷ್ಣನ ಕನ್ನಡ ಶಾಸನಗಳ ಸಂಖ್ಯೆ ಇದೀಗ ಮೂರಕ್ಕೆ ಏರಿದಂತಾಗಿದೆ. ಈ ಮೊದಲು ಹತ್ತಿಮತ್ತೂರಿನ ಶಾಸನವೊಂದು ಮಾತ್ರ ಅವನ ಕನ್ನಡ ಶಾಸನವಾಗಿತ್ತು.[3] ಅದೇ ರೀತಿ ಇಮ್ಮಡಿ ಗೋವಿಂದನ ಕಾಲದ ಎರಡು ಕನ್ನಡ ಶಾಸನಗಳು ಈಗ ಸಿಕ್ಕಂತಾಗಿವೆ. ಧ್ರುವ ಮತ್ತು ಮುಮ್ಮಡಿ ಗೋವಿಂದರ ಕಾಲದ ಕನ್ನಡ ಶಾಸನಗಳ ಸಂಖ್ಯೆ ಹೆಚ್ಚಾಗಿರುವುದು ವಿದ್ವಾಂಸರಿಗೆ ತಿಳಿದೇ ಇದೆ.

ಇಲ್ಲಿನ ಎರಡು ಗೋಸಾಸಗಳಲ್ಲಿ ಆದಿತ್ಯಸೇನ ಪಂಡಿತನೆಂಬುವನು ಹೆಸರಿಸಲ್ಪಟ್ಟಿದ್ದಾನೆ. ಇದೇ ರೀತಿ ಇಲ್ಲಿನ ಇನ್ನೊಂದು ಶಾಸನದಲ್ಲಿ ದೇವೇಂದ್ರಸೇನ ಪಂಡಿತನೆಂಬುವನ ಹೆಸರು ಉಲ್ಲೇಖಿತವಾಗಿದೆ.[4] ಇವರು ಈ ಗೋಸಾಸ ದಾನ ವಿಷಯಕ್ಕೆ ಯಾವುದೇ ಒಂದು ರೀತಿಯಲ್ಲಿ ಸಂಬಂಧಪಟ್ಟಿರುವುದಂತೂ ಸ್ಪಷ್ಟ. ಬಹುಶಃ ಇವರೇ ಪ್ರತಿಗೃಹಿಗಳೆಂದು ತೋರುತ್ತದೆ. ಕಾರಣ ಗೋಸಹಸ್ರದಾನ ಪಡೆಯುವವರು ಜೈನರಾಗಿದ್ದರೆಂದು ಇಲ್ಲಿ ಊಹಿಸಬೇಕಾಗಿದೆ. ಹೀಗೆ ಮುತ್ತಳ್ಳಿಯ ಈ ಗೋಸಾಸಗಳು ತುಂಬ ಮಹತ್ವಪೂರ್ಣವಾದ ಐತಿಹಾಸಿಕ ದಾಖಲೆಗಳಾಗಿವೆ.

ಶಾಸನ ಪಾಠಗಳು:

ಮುತ್ತಳ್ಳಿಯ ಗೋಸಾಸಳು. (ಶಿಕಾರಿಪುರ ತಾಲ್ಲೂಕು)

I. ರಾಷ್ಟ್ರಕೂಟರ ಒಂದನೆಯ ಕೃಷ್ಣ ಕಾಲ ಸು. ೭೭೦ A.D

೧. ಸ್ವಸ್ತ್ಯಕಾಲವರ್ಷ ಶ್ರೀ ಪೃಥುವೀ ವಲ್ಲಭ ಮಹಾರಾಜಾಧಿರಾಜ ಪ

೨. ರಮೇಶ್ವರ ಭಟರರಾ ಪೃಥವೀ ಯಾನೇಕಚ್ಛತ್ರ ಚ್ಛಾಯೆಯಿನ್ಪರಿಪಾಲಿಸಿ ಆಳೆ

೩. ಅಕಾಲವರ್ಷ ಶ್ರೀ ಪೃಥುವೀ ವಲ್ಲಭಸೇನಾವರ ಮಾರಕ್ಕೆ ಅರಸರ್ಬ್ಬನ್

೪. ವಾಸಿ ಪರ್ನ್ನಿಚ್ವಾಸಿರಮಾಳೆ ಆದಿತ್ಯಸೇನ ಪಂಡಿತರ್ಕುನ್ದ ಮುಗಾಳೆ ಸ

೫. ಯಾಯ್ಚ ಗಾಮುಣ್ಣಂ ಗೋಸಾಸಮಿೞ್ದು ಪೂದೋಣ್ಟ [ಬಿ]ಟ್ಟು ಮೇಣ್ಟಿ ನಿಱೆಸಿದಾ [ಸಾಸ] ನಂ.

೬. ಪ… ರನಾ ಮಗನ್ಬಲ್ಲುಗಂ ಮಾಡಿದೋನ್

II. ರಾಷ್ಟ್ರಕೂಟ ಒಂದನೆಯ ಕೃಷ್ಣ ಮತ್ತು ಇಮ್ಮಡಿ ಗೋವಿಂದ ಕಾಲ ಕ್ರಿ.. ಸು. ೭೭೫ A.D

೧. ಸ್ವಸ್ತಿಪ್ರಭೂತ ವರ್ಷ ಶ್ರೀ ಪೃಥುವೀ ವಲ್ಲಭ ಮಹಾರಾಜಾಧಿರಾಜ

೨. ಕನ್ದರ ಭಟರರ್ಗ್ಗೋಯಿನ್ದ ರಸರ್ಪ್ರಿಥುವಿ ರಾಜ್ಯಙ್ಗೆಯೆ ಎಱೆ x

೩. ರಸರ್ಬ್ಬನವಾಸಿ ನಾಡಾಳೆ ಆದಿತ್ಯಸೇನ ಪಣ್ಡಿ ತರ್ಕುನ್ದಮು xxx

೪. ಸನ್ದಿಗರಾ ಸಿರಿದೇವನಾ ಮಗಂ ಸಿರಿಕನ್ದರ್ಪ್ಪದೊರಾಪ

೫. ದಲ್ದಾನ ಮುಂಗೊಟ್ಟು [.ಣ. ಗೆರ್ದುx]

೬. ಮೇಣ್ಟಿ ನಿಱೆಸಿದಾನ್.

 

III. ರಾಷ್ಟ್ರಕೂಟ ಇಮ್ಮಡಿ ಗೋವಿಂದ. ಕಾಲ ಸು. ೭೮೦ D

೧. ಸ್ವಸ್ತಿ ಪ್ರಭೂತ ವರ್ಷ ಶ್ರೀ ಪೃಥವೀ ವಲ್ಲಭ ಮ…

೨. ರಾಜ ಪರಮೇಶ್ವರ ಭಟರಗ್ಗೋಯಿನ್ದರಸ ಪ್ರಿಥುವಿ ರಾಜ್ಯಂ[ಗೆ]

೩. … ರಸರ್ಬ್ಬನವಾಸಿ ನಾಡಾಳೆ ಆದಿತ್ಯಸೇನ ಪಣ್ಡಿತರ್ಕುನ್ದ…

೪. ದನದೇವ ಕೊಣ್ಡೆಸರಾ ಮಗನ್

೫. ಸಿರಿದೇವನ್ ಪೂಡೋರೂಪದ

೬. ಲ್ದಾನ [ಮುಂ]ಸಮಣ್ಣುಂ? ಕೊಟ್ಟುನಿ

೭. ಱೆಸಿದಾ ಮೇಣ್ಟಿ.

 

* ಡಾ. ಭೋಜರಾಜ ಪಾಟೀಲರೊಡನೆ

[1]ಈ ಎಱೆಯಮ್ಮನನ್ನು ಸಿರಗಂಬಿಯ ಒಂದು ಶಾಸನ ಕೂಡ ಹೆಸರಿಸಿದ್ದು ಅವನು ಜಗತ್ತುಂಗನ ಅಧೀನನಾಗಿ ಬನವಾಸಿ ಪ್ರಾಂತ ಆಳುತ್ತಿದ್ದನೆಂದಿದೆ. ಎಂದರೆ ಈ ಸಿರಗಂಬಿ ಶಾಸನಕೂಡ ಇಮ್ಮುಡಿ ಗೋವಿಂದನ ಕಾಲದ್ದೆಂದು ಹೇಳಬಹುದಾಗಿದೆ. ನೋಡಿ ಕೆ. ಆರ್. ಐ ಪ್ರೊರಿ. ೧೯೫೩-೫೭ ಪುಟ-೬೯

[2]ಸತ್ಯಶುದ್ಧ ಕಾಯಕ. ೩.೪ ಪುಟ-೯ ನೋಡಬಹುದು. ನೂಲಗೇರಿ ಶಾಸನ (KRI. Pr-Report 1953-57-P-68) ದಲ್ಲಿ ಈ ಮಾರಕ್ಕೆ ಅರಸ ಮತ್ತು ಗೋವಿಂದ ಇಬ್ಬರ ಹೆಸರುಗಳೂ ಕಂಡು ಬಂದಿರುವುದರಿಂದ ಈ ಶಾಸನ ಕಾಲದಲ್ಲಿ ಇಮ್ಮಡಿ ಗೋವಿಂದನ ವಿಶ್ವಾಸ ಪಾತ್ರನಾಗಿ ಮಾರಕ್ಕೆಯರಸ ಅಧಿಕಾರದಲ್ಲಿದ್ದನೆನ್ನಬಹುದು.

[3] E.I.VI.P. 161

[4]ಜೈನಪರವಾದ ಹೆಸರುಗಳೆಂಬಲ್ಲಿ ಸಂಶಯವೇ ಇಲ್ಲ.