ಮೈಲಾರ ದೇವರ ಬಗೆಗೆ ವಿದ್ವಾಂಸರಲ್ಲಿ ಹಲವಾರು ರೀತಿಯ ತಪ್ಪು ಕಲ್ಪನೆಗಳುಂಟಾಗಿವೆ. ಅದಕ್ಕೆ ಕಾರಣ ಈ ಸಂಪ್ರದಾಯದ ಸರಿಯಾದ ಪರಿಚಯ ಇಲ್ಲದಿರುವುದೇ ಆಗಿದೆ. ಪ್ರಾಚೀನ ಕನ್ನಡ ಕೃತಿಗಳಲ್ಲಿರುವ ಉಲ್ಲೇಖವುಗಳಲ್ಲಿ ಹೆಚ್ಚಿನ ಇಂಥ ತಪ್ಪು ಕಲ್ಪನೆಗಳಿಗೆ ಇನ್ನಷ್ಟು ಸಹಾಯಕವಾಗಿವೆ. ಪ್ರಾಚೀನರ ವಿಷಯಕ್ಕೆ ಹೇಳಬೇಕೆಂದರೆ, ಅವರಲ್ಲಿದ್ದ ತಪ್ಪು ಕಲ್ಪನೆಗಳಿಗೆ ಅವರಿಗಿದ್ದ ಅಲ್ಪ ಪರಿಚಯ ಒಂದು ಕಾರಣವಾದರೆ ತಂತಮ್ಮ ಮತಗಳ ಅಭಿನಿವೇಶ ಅದಕ್ಕೂ ಪ್ರಬಲವಾಗಿದ್ದ ಮತ್ತೊಂದು ಕಾರಣ. ಈ ಸಂಪ್ರದಾಯವು ಬಹು ವ್ಯಾಪಕವಾಗಿದ್ದರೂ ಒಂದು ಮತವಿಶೇಷವಾಗಿ ಬೆಳೆದು ಬರದೆ, ಸರ್ವಜನ ಸುಲಭವಾಗಿ ಮತೀಯತೆಯ ಬಿಗಿ ಚೌಕಟ್ಟಿನಿಂದ ಹೊರಗೆ ನಿಂತು ಸರ್ವಜಾತಿಗಳವರಿಗೂ ಮುಕ್ತವಾಗಿ ಉದ್ದಕ್ಕೂ ಸಾಗಿಬಂದಿದೆ. ಇದರಿಂದಾಗಿ ಆಚರಣೆಯಲ್ಲಿ ಹೆಚ್ಚಿನ ಪರಿಷ್ಕಾರಗಳು ನಡೆಯದೆ ಜಾನಪದೀಯ ಅಂಶಗಳು ದೊಡ್ಡ ಪ್ರಮಾಣದಲ್ಲಿ ಉಳಿದು ಬಂದಿವೆ. ಕರ್ನಾಟಕದ ಉಚ್ಚವರ್ಗವು ಇದರ ಬಗೆಗೆ ಮಮತ್ವವನ್ನು ತಾಳದೇ ಹೋದುದರಿಂದ ಸಂಪ್ರದಾಯವನ್ನು ಸಮರ್ಥಿಸುವ ಗ್ರಂಥಗಳಾಗಲೀ ಪುರಾಣಗಳಾಗಲೀ ಕನ್ನಡದಲ್ಲಿ ವಿಶೇಷವಾಗಿ ರಚನೆಗೊಂಡಂತೆ ಕಾಣಲಿಲ್ಲ. ಸರ್ವಜಾತಿ ಸಾಧಾರಣವಾದ ಭಕ್ತಿಯೊಂದೇ ಈ ಸಂಪ್ರದಾಯದ ಮೂಲ ಆಸ್ತಿಯಾಯಿತು. ಮೇಲಾಗಿ ವೈದಿಕ, ಜೈನ ಮತ್ತು ವೀರಶೈವ ಪಂಗಡಗಳು ಕರ್ನಾಟಕದಲ್ಲಿ ತಮ್ಮ ಪ್ರಭಾವ ಬೀರಲು ಪೈಪೋಟಿ ನಡೆಸುತ್ತಿದ್ದೆವು. ಆದ್ದರಿಂದ ಜನಸಾಮಾನ್ಯರಲಲ್ಲಿ ತಮ್ಮ ಮತ ಪ್ರಭಾವವನ್ನು ಬೆಳೆಯಿಸಲು ಅಡ್ಡಿಯಾಗಿ ತೋರಿದ ಈ ಸಂಪ್ರದಾಯವನ್ನೂ ಇದರ ಅನುಯಾಯಿಗಳನ್ನೂ ಸಂದರ್ಭ ಸಿಕ್ಕಾಗಲೆಲ್ಲ ಜರೆಯುತ್ತ ಬಂದರು. ಅದೇ ರೀತಿ ತಂತಮ್ಮ ಮತಗ್ರಂಥಗಳಲ್ಲಿ ಈ ದೇವತೆಯನ್ನು ಕುರಿತಂತೆ ಇರುವ ಕತೆಗಳನ್ನು ಮನಬಂದ ರೀತಿಯಲ್ಲಿ ತಿರುಚಿ ಹೇಳಿದರು. ಇದರಿಂದ ಈ ಕಾಲದ ವಿಮರ್ಶಕ ವಿದ್ವಾಂಸರಿಗೂ ಹಲವು ವಿಷಯಗಳಲ್ಲಿ ತಪ್ಪುಕಲ್ಪನೆ ಉಂಟಾಗಲು ಅವಕಾಶವಾಯಿತು.

ಆದರೆ ಮಹಾರಾಷ್ಟ್ರದಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಅಲ್ಲಿಯ ಬ್ರಾಹ್ಮಣ ಸಮುದಾಯವು ಈ ಸಂಪ್ರದಾಯದತ್ತ ವಿಶೇಷ ಆಕರ್ಷಿತವಾಯಿತು. ತತ್ಫಲವಾಗಿ ಅಲ್ಲಿ ಸಂಸ್ಕೃತ-ಮರಾಠಿ ಭಾಷೆಗಳಲ್ಲಿ ಮೈಲಾರಲಿಂಗನನ್ನು ಕುರಿತಂತೆ ಪುರಾಣಗಳೂ ಆಚರಣಾ ವಿಧಿನಿರೂಪಕ ಗ್ರಂಥಗಳೂ ಸಹಸ್ರನಾಮಾವಳಿಗಳೂ ಹುಟ್ಟಿಕೊಂಡು ಬಂದವು, ಅಷ್ಟೇ ಅಲ್ಲದೆ ಸ್ಕಂದ ಪುರಾಣ, ಪದ್ಮ ಪುರಾಣಗಳಂಥ ಆಧಾರಭೂತ ಕೃತಿಗಳಲ್ಲಿಯೂ ಈ ದೇವತೆಯ ಮಹಾತ್ಮ್ಯಗಳು ಸೇರಿಕೊಂಡವು. ಮೂಲಭೂತವಾಗಿ ಕರ್ನಾಟಕದವನಾದ ಈ ದೇವತೆಯ ಬಗೆಗೆ ಮಹಾರಾಷ್ಟ್ರದ ವಿದ್ವಾಂಸರು ಸಂಶೋಧನೆಗಳನ್ನು ಕೈಕೊಂಡು ಗ್ರಂಥಗಳನ್ನು ಕೂಡ ರಚಿಸಿದ್ದಾರೆ. ಪರಂಪರೆಯಿಂದ ಬಂದ ಸಂಸ್ಕೃತ-ಮರಾಠಿ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಆದರೂ ಅವರು ಸಂಶೋಧಿಸಿದ ಸಂಗತಿಗಳಲ್ಲಿ ಹಲವಾರು ಬಗೆಯ ಕೊರತೆಗಳಿವೆ ಎಂದು ಅವರೇ ಒಪ್ಪಿದ್ದಾರೆ. ಆದ್ದರಿಂದ ಈ ವಿಷಯಕ್ಕೆ ಕರ್ನಾಟಕದಲ್ಲಿ ಸಂಪೂರ್ಣವಾದ ಸಂಶೋಧನೆ ನಡೆಯಬೇಕಾಗಿದೆ. ಸದ್ಯಕ್ಕೆ ಈ ದೇವತಾಪರಿವಾರದ ಲಘುಪರಿಚಯವಾದರೂ ಇರಬೇಕಾದುದು ಅಪೇಕ್ಷಣೀಯ.

ಈ ಸಂಪ್ರದಾಯದ ಪ್ರಧಾನದೇವತೆ ಮೈಲಾರಲಿಂಗ ಅಥವಾ ಏಳುಕೋಟಿ ಎಂಬ ಪುರುಷದೇವತೆ ಭಕ್ತರಿಗೆ ಈತ ಪ್ರತ್ಯಕ್ಷ ಶಿವನೆ. ರಾಕ್ಷಸರ ವಧಾರ್ಥ ಭೋಲೋಕಕ್ಕೆ ಬಂದು ಕಂಬಳಿ ಕಂಥೆಯ ವೇಷತೊಟ್ಟನು. ಮಲ್ಲಾರಿ ಸಹಸ್ರನಾಮಾವಳಿಯಲ್ಲಿ[1] ಮುಂದಿನಂತೆ ವರ್ಣನೆಯಿದೆ:

ಧ್ಯಾಯೇನ್ಮಲ್ಲಾರಿದೇವಂ ಕನಕಗಿರಿನಿಭಂ ಮ್ಹಾಳಸಾ ಭೂಷಿತಾಕಮ್‌ |
ಶ್ವೇತಾಶ್ವಂ ಖಡ್ಗಹಸ್ತಂ ವಿಬುಧಗಣೈಃ ಸೇವ್ಯಮಾನಂ ಕೃತಾರ್ಥೈಃ || || ||

ಯುಕ್ತಾಂಘ್ರಿಂ ದೈತ್ಯಮೂರ್ದ್ನಿಂ ಡಮರು ವಿಲಸಿತಂ ನೈಶಚೂರ್ಣಾಭಿರಾಮ್‌ |
ನಿತ್ಯಂ ಭಕ್ತೇಷು ತುಷ್ಟಂ ಶ್ವಗಣ ಪರಿವೃತಂ ನಿತ್ಯಂಯೋಂಕಾರ ರೂಪಮ್‌ || ||

ಶ್ರೀತತ್ವನಿಧಿಯಲ್ಲಿ ಮುಂದಿನ ಕೆಲವು ಸ್ತೋತ್ರಗಳಿವೆ”
ಆದ್ಯಾಷ್ಟಕಂ ಸುವರ್ಣಾಭಂ ತ್ರಿಶೂಲಂ ಡಮರುಂ ತಥಾ |
ಪಾಶಂ ಚಾಸಿ ದಧಾನಂ ಚ ಧಾಯೇತ್ಸರ್ವಾಂಗ ಸುಂದರಮ್‌ ||[2] || ||

ಶುಭಾಂಗಂ ಭೂಷಣೈರ್ಯುಕ್ತಂ ಹರಿದ್ರಾಚೂರ್ಣಸಂಯುತಮ್‌ |
ಪೀತಾಂಬರಮುದಾರಾಂಗಂ ಭಜತಾಂ ಕಾಮದಂ ಸದಾ || ||

ತ್ರಿಶೂಲಂ ಡಮೃಗಂ ಖಡ್ಗಂ ವರದಂಚ ಕರಾಂಬುಜೈಃ |

ಬಿಭ್ರಾಣಂ ಪ್ರಾಣಿ ರಕ್ಷಣಾರ್ಥಂ ಸರ್ವಕಾಲಮತಂದ್ರಿತಮ್‌ || ||
ದೇವಾನಾಮ್‌ ರಕ್ಷಣಾರ್ಥಾಯ ದಾನವಾನಾಮ್‌ ವಧಾಯ ಚ |
ಮೈಲಾರಂ ರೂಪಮಾಸ್ಥಾಯ ಶಂಕರಃ ಶಂಕರೋs ಭವತ್‌ || || ||

ಗಜಸಿಂಹ ವರಾಹಾರ್ಕ್ಷ ವ್ಯಾಘ್ರರೂಪಧರಾನ್‌ ಖಲಾನ್‌ |
ದುಷ್ಟಾನ್ ಶತ್ರೂನ್ ವಿನಿಘ್ನಂತುಂ ತುರಗೇಣ ಚಚಾರಹ ||[3] || ||

ಆತನ ಇನ್ನೊಂದು ಧ್ಯಾನ:

ಸಿತಹಯ ವರ ಪತ್ರಂ ಹಾರಸಂಭೂಷಿತಾಂಗಮ್‌ |
ಪರಿವೃತವತಿ ಘೋರೈಃ ಸಪ್ತಭಿಃ ಸಾರಮೇಯೈಃ[4] || ||

ಮೈಲಾರ ದೇವಸ್ಥಾನದ ಕಾಗದ ಪತ್ರಗಳಲ್ಲಿ ಮುಂದಿನ ಒಂದು ಪದ್ಯ ಕಂಡು ಬರುತ್ತದೆ:

ಖಡ್ಗಂ ಕಪಾಲಂ ಢಮರುಂ ತ್ರಿಶೂಲಂ
ಭುಜೈಶ್ಚತುರ್ಭಿಚತುರಂ? ವಹಂತಂ |
ಆಶೇಷು ಸಂಪತ್ಸುಖದಾಯಕಾಕ್ಷಂ |
ಮಲ್ಲಾರಿನಾಥಂ ಮನಸಾ (ನಮಸಾ) ಸ್ಮರಾಮಿ || ೧೦ ||

ಮೇಲಿನ ಧ್ಯಾನಶೋಕ್ಲ ಮತ್ತು ಸ್ತುತಿಗಳಿಂದ ಈ ದೇವತೆಯ ಸ್ವರೂಪವು ಮುಂದಿನಂತೆ ವ್ಯಕ್ತವಾಗುತ್ತದೆ:

ಮೈಲಾರನಿಗೆ ಚತುರ್ಭುಜಗಳು. ಅವುಗಳಲ್ಲಿ ತ್ರಿಶೂಲ, ಡಮರು, ಖಡ್ಗಗಳು ಶೋಭಿಸುತ್ತವೆ. ಇನ್ನೊಂದು ಕೈಯು ವರದ ಹಸ್ತವೆಂದು ಒಂದು ಕಡೆ ಹೇಳಿದ್ದರೆ ಕಪಾಲವಿರುವುದಾಗಿ ಮತ್ತೊಂದರಲ್ಲಿ (ಪ. ೯) ಹೇಳಿದೆ. ಮೈಗೆ ನೈಶಚೂರ್ಣ ಎಂದರೆ ಅರಿಸಿನದಿಂದ ತೊಡೆದು ಕನಕಗಿರಿಯಂತೆ ಶೋಭಾಯಮಾನನಾಗಿ ತೋರುತ್ತಾನೆ. ಶ್ವೇತ ಹಯಾರೂಢನಾಗಿದ್ದು ಎಡಭಾಗದಲ್ಲಿ ಗಂಗಾಮ್ಹಾಲಸಿಕಾ (ಗಂಗಿ ಮಾಳವ್ವ) ಸಂಯುತನಾಗಿದ್ದಾನೆ. ತನ್ನ ಪಾದವನ್ನು ದೈತ್ಯನು ಶಿರದ ಮೇಲೆ ಇಟ್ಟು ಕೊಂಡಿದ್ದಾನೆ. ಸುತ್ತಲೂ ಭಯಂಕರವಾದ (ಏಳು) ಶ್ವಾನಗಳು ಸುತ್ತುವರಿದಿವೆ. ದಾನವರನ್ನು ವಧಿಸಿ ಶರಣಾಗತರನ್ನು ರಕ್ಷಿಸಲೋಸುಗ ಕಲ್ಯಾಣಕಾರಕನಾದ ಸಾಕ್ಷತ್‌-ಶಂಕರನು ಮೈಲಾರನ (ಮೇಲೆ ವರ್ಣಿಸಿದ) ರೂಪತಾಳಿ ಅವತರಿಸಿ ಬಂದಿದ್ದಾನೆ. ಇದು ಒಟ್ಟು ಮೈಲಾರಲಿಂಗನನ್ನು ಕುರಿತಂತೆ ಇರುವ ಸ್ವರೂಪವೆನ್ನಬಹುದು-ವಿಶೇಷವಾಗಿ ಗ್ರಾಂಥಿಕವಾದ ಪರಂಪರೆಯಲ್ಲಿ.

ಜಾನಪದ ಪರಂಪರೆಯಂತೆ, ಈತನ ಸ್ವರೂಪವು ಅವನ ಭಕ್ತರಾದ ಗೊರವರು ಕಟ್ಟಿಕೊಂಡಿರುವ ರೀತಿಯ ವೇಷ-ಭೂಷಣಗಳಿಂದ ಕೂಡಿದ್ದಾಗಿರುವುದಂತೆ. ಎಂದರೆ ಮೈಮೇಲೆ ಕಂಬಳಿಯಿಂದ ಮಾಡಿದ ಕಂಥೆ (ನಿಲುವಂಗಿ), ತಲೆಯ ಮೇಲೆ ಮುರಗಿ-ಮುಂಡಾಸ, ಕೈಯಲ್ಲಿ ತ್ರಿಶೂಲ, ಡಮರು, ಭಂಡಾರದ ಬಕ್ಷ (ಚೀಲ) ಹುಲಿ ಅಥವಾ ಜಿಂಕೆಯ ಚರ್ಮದಿಂದ ಮಾಡಿದ್ದು-ಗಂಟೆ, ಮತ್ತು ಡೋಣಿ ಇವು ಸಾಮಾನ್ಯ. ಜಾನಪದ ಹಾಡುಗಳಲ್ಲಿ ಈ ಸ್ವರೂಪ ವರ್ಣನೆ ಕಂಡುಬರುತ್ತದೆ.

ಈ ದೇವತೆಯನ್ನೇ ಅನೇಕ ವೇಳೆ ‘ಮಾರ್ತಾಂಡ ಭೈರವ’ ನೆಂದು ಕರೆಯುವುದೂ ಕಂಡುಬರುತ್ತದೆ. ಶಿವನ ಸಂಹಾರ ಮೂರ್ತಿಗಳಲ್ಲಿ ಭೈರವನ ಸ್ವರೂಪವು ಪ್ರಧಾನವಾದುದು. ಭೈರವ ಸ್ವರೂಪದಲ್ಲಿ ಒಟ್ಟು ಅರವತ್ನಾಲ್ಕು ಪ್ರಭೇದಗಳಿವೆ. ಈ ಅರವತ್ನಾಲ್ಕನ್ನೂ ಎಂಟು ವರ್ಗಗಳಾಗಿ ವಿಭಾಗಿಸಿದೆ. ಅವುಗಳಲ್ಲಿ ‘ಅಸಿತಾಂಗ ಭೈರವ’ ಎಂಬುದೂ ಒಂದು. ವರ್ಗ, ವಿಶಾಲಾಕ್ಷ, ಮಾರ್ತಾಂಡ, ಮೋದಕಪ್ರಿಯ, ಸ್ವಚ್ಛಂದ, ವಿಘ್ನಸಂತುಷ್ಟ, ಖೇಚರ’ ಮತ್ತು ಸಚಾರಚರ ಎಂಬವು ಅಸಿತಾಂಗ ಭೈರವರಲ್ಲಿ ಬರುವ ಅಷ್ಟ ಮೂರ್ತಿಗಳು. ಈ ವರ್ಗದ ಭೈರವರು ಸಂಪೂರ್ಣ ವರ್ಣದವರಾಗಿದ್ದು ಚತುರ್ಭುಜಗಳಿರುವುದು ಇವರ ವೈಶಿಷ್ಟ್ಯ. ತ್ರಿಶೂಲ, ಡಮರು, ಪಾಶ ಮತ್ತು ಖಡ್ಗಗಳು ಕ್ರಮವಾಗಿ ಇವರ ಕೈಯಲ್ಲಿರುವ ಆಯುಧಗಳು.[5]ಮೇಲಿನ ಸಂಸ್ಕೃತ ಶ್ಲೋಕಗಳಲ್ಲಿ ಮೂರನೆಯದು ಈ ವಿವರವನ್ನು ಸಮರ್ಥಿಸುತ್ತದೆ.

ಅನಂತಾನಂದಗಿರಿಯ ಶಂಕರ ವಿಜಯದಲ್ಲಿ[6]ಮಲ್ಲಾರಿ-ಶಿವನ ಉಲ್ಲೇಖವಿದ್ದುದು ತಿಳಿದುಬಂದಿದೆ. ಅದರಲ್ಲಿ ಮಲ್ಲಾರಿ-ಶಿವನ ವಾಹನವು ಹಯದ ಬದಲು ಶ್ವಾನವೆಂದು ಹೇಳಿದೆ. ಅನಂತಾನಂದಗಿರಿಗೆ ಮೈಲಾರ ದೇವತೆಯ ಸ್ವರೂಪ-ವಿಷಯಕ್ಕೆ ಸರಿಯಾದ ತಿಳುವಳಿಕೆ ಇರಲಿಲ್ಲವೆಂದು ವ್ಯಕ್ತವಾಗುತ್ತದೆ. ಇದೇ ರೀತಿ ‘ಒಳ್ಳಿಹ ಮೈಲಾರನ ಒಳಗೆಲ್ಲ-ಸಣಬು’[7]ಎಂಬ ಬಸವಣ್ಣನವರ ವಚನಕ್ಕೂ ಅನ್ವಯಿಸುತ್ತದೆಂದು ಹೇಳಬಹುದು. ಅಥವಾ ಯಾರೋ ತಿಳುವಳಿಕೆ ಇಲ್ಲದವರು ರಚಿಸಿದ ಮೂರ್ತಿಗಳು ಇವರ ಕಣ್ಣಿಗೆ ಬಿದ್ದಿರಬಹುದಾದ ಸಾಧ್ಯತೆಯೂ ಇದೆ.

ಮೈಲಾರ ಮತ್ತು ದೇವರಗುಡ್ಡಗಳಲ್ಲಿರುವ ಸ್ವಯಂಭೂಲಿಂಗಗಳ ಹಿಂಭಾಗದಲ್ಲಿ ಪೀಠದ ಮೇಲೆ ಕುಳಿತಿರುವಂತೆ ರಚಿಸಿದ ದೇವತಾ ಮೂರ್ತಿಗಳಿವೆ. ಸ್ವಯಂಭೂಲಿಂಗಗಳಿಗೆ ಇಲ್ಲಿ ಹೆಚ್ಚಿನ ಪ್ರಾಧಾನ್ಯವಿದೆ. ಅಭಿಷೇಕಾದಿಗಳು ಜರಗುವುದು ಸ್ವಯಂ ಭೂಲಿಂಗಗಳಿಗೇ, ಮೈಲಾರದಲ್‌ಇಲಯ ಮೂರ್ತಿ ಮಣ್ಣಿನದಾಗಿದೆ. ಎಂತಲೆ ಅದನ್ನು ಮಣ್‌-ಮೈಲಾರ ಎಂದು ಕರೆಯವುದು ರೂಢಿಯಾಗಿದೆ. ದೇವರ ಗುಡ್ಡದಲ್ಲಿರುವ ಮೂರ್ತಿ ಸಾಮಾನ್ಯವಾಗಿ ಇದೇ ತೆರನಾಗಿದೆ.

ಉತ್ಸವ ಮೂರ್ತಿಗಳಲ್ಲಿ ಕೆಲವು ವಾಮಭಾಗದಲ್ಲಿ ಗಂಗಿಮಾಳವ್ವ ನಿಂದೊಡ ಗೂಡಿದ ಅಶ್ವಾರೋಹಿ ಮೂರ್ತಿಗಳಾಗಿವೆ. ಶಿವನು ರಕ್ಕಸರ ಸಂಹಾರಕ್ಕೆ ಅಶ್ವಾರೋಹಿಯಾಗಿ ಹೊರಡುವನು ಎಂದು ಭಾವಿಸಲಾಗುವುದರಿಂದ ಅಂಥ ಪ್ರತೀಕಗಳಿಗೂ ಹೆಚ್ಚಿನ ಮಹತ್ವವಿದೆ. ಈ ಸ್ವರೂಪದ ಮೂರ್ತಿಗಳು ಭಕ್ತರ ಮನೆಗಳಲ್ಲಿ ನಿತ್ಯಪೂಜೆಗೆ ಸಲ್ಲುತ್ತವೆ. ಮೊದಲಲ್ಲಿ ಇವು ತಾಮ್ರ ಮುಂತಾದ ತಗಡಿನ ಮೇಲೆ ಅಂಟಿಸಿದ ಉಬ್ಬುಮೂರ್ತಿಗಳಾಗಿರುತ್ತಿದ್ದವು. ಈಗ ಪ್ರತ್ಯೇಕವಾದ ಅಶ್ವಾರೋಹಿ ಮೂರ್ತಿಗಳಿರುವುದು ಕಂಡು ಬರುತ್ತದೆ. ಇವನ್ನು ಬೆಳ್ಳಿ, ಬಂಗಾರ, ಪಂಚಲೋಹ, ಹಿತ್ತಾಳಿ ಮುಂತಾದ ಲೋಹಗಳಿಂದ ತಯಾರಿಸಲಾಗುವುದು. ಮೈಲಾರ ಮುಂತಾದ ದೇವಸ್ಥಾನಗಳಲ್ಲಿ ಮೇಲೆ ವರ್ಣಿಸಿದ ಪ್ರತಿಷ್ಠಿಸಿದ ಮೂರ್ತಿಯ ಜತೆಗೆ ಇಂಥ ಮೂರ್ತಿಗಳೂ ಇವೆ. ಬೇರೆ ಬೇರೆ ಉತ್ಸವ ಸಂದರ್ಭಗಳಲ್ಲಿ ಇವು ಪೂಜೆಗೊಳ್ಳುತ್ತವೆ. ಇದೇ ಸ್ವರೂಪದ ಭಾವತ್ರಿಗಳು ಈಗ ಎಲ್ಲೆಡೆ ಪ್ರಚಾರದಲ್ಲಿವೆ. ಈ ಚಿತ್ರಗಳನ್ನು ಮೂಲತಃ ಮಹಾರಾಷ್ಟ್ರದ ಬೆಜೂರಿ ದೇವಸ್ಥಾನದವರು ಮುದ್ರಿಸಿ ಪ್ರಚರು ಪಡಿಸಿದರು.

ಮೈಲಾರಲಿಂಗ ಮೇಲೆ ವಿವರಿಸಿದ ರೀತಿಯಲ್ಲಿ ಅಶ್ವಾರೂಢನಾಗಿ ರಾಜಠೀವಿಯಿಂದ ಹೊರಟು ಮಣಿಮಲ್ಲರೆಂಬ ದೈತ್ಯರನ್ನು ಸಂಹರಿಸಲು ಭೂಲೋಕಕ್ಕೆ ಬಂದನಂತೆ. ಹಾಗೂ ಸ್ವಯಂಭೂಲಿಂಗವಾಗಿ ಮೊದಲು ಉದ್ಭವಗೊಂಡನು. ಸ್ವಯಂಭೂ ಸ್ವರೂಪದಲ್ಲಿ ಭೂಲೋಕದಲ್ಲಿ ಅವತರಿಸಿದ್ದು ಮಾರ್ಗಶೀರ್ಷ ಮಾಸದ ಶುದ್ಧಷಷ್ಠೀ, (ಚಂಪಾಷಷ್ಠಿ) ಶತತಾರಕಾ ನಕ್ಷತ್ರ ಭಾನುವಾರದಂದು ಪ್ರೇಮಪುರದ ಒಂದು ವಟ ವೃಕ್ಷದ ಅಡಿಯಲ್ಲಿ ಹುತ್ತಿನ ಕೆಳಗಡೆ. ಈ ರೀತಿಯ ಅವತಾರದ ನಂಬಿಕೆಯು ಕರ್ನಾಟಕ ಮಹಾರಾಷ್ಟ್ರದ ಎಲ್ಲದ ದೇವಸ್ಥಾನಗಳಲ್ಲಿಯೂ ಗ್ರಂಥಗಳಲ್ಲಿಯೂ ಜಾನಪದ ಸಾಹಿತ್ಯ ಕಥೆಗಳಲ್ಲಿಯೂ ಏಕಪ್ರಕಾರವಾಗಿದೆ.

ಶಿವನು ಈ ರೀತಿ ಅವತರಿಸಿದುದು ಮೈಲಾರದಲ್ಲಿ ಎಂದೂ ದೇವರಗುಡ್ಡದ ಸಮೀಪ ಸಿಡಗಿನಹಾಳ ಗ್ರಾಮದ ಪಶ್ಚಿಮದ ಕರಿಯಾಲದಲ್ಲಿ ಎಂದೂ ನಂಬಿಕೆ ಇದೆ. ಸಿಡಗಿನಹಾಳದಲ್ಲಿ ಈಗಲೂ ಭಾರಿಗಾತ್ರದ (ಕರಿಯ) ಆಲದ ಮರವಿದ್ದು ಎರಡು-ಮೂರು ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹಬ್ಬಿದೆ. ಅದನ್ನು ನೋಡಿದರೆ ಅದು ಹಲವಾರು ಶತಮಾನಗಳಷ್ಟು ಹಳೆಯದೆಂಬುದು ನಿಸ್ಸಂಶಯ. ಜತೆಗೆ ಆ ಪರಿಸರದಲ್ಲಿಯೆ ‘ಮಜ್ಜನಬಾವಿ’ ಎಂಬ ಪುರಾತನವಾದ ದೊಡ್ಡಬಾವಿಯಿದ್ದು ಹಳೆಯ ದೇವಾಲಯದ ಅವಶೇಷಗಳು ಅಲ್ಲೆಲ್ಲ ಹರಡಿಹೋಗಿವೆ. ರಾಕ್ಷಸರ ಸಿಕ್ಕಿದ್ದು ಅಲ್ಲಿಯೇ. ಅವರಲ್ಲಿ ಮಲ್ಲಾಸುರನನ್ನು ಹೊರತುಪಡಿಸಿ ಉಳಿದೆಲ್ಲ ರಾಕ್ಷಸರನ್ನು ಸಂಹರಿದ್ದು ಈ ಪ್ರದೇಶದಲ್ಲಿಯೇ ಎಂದು ಹೇಳಲಾಗುತ್ತದೆ. ಮಲ್ಲಾಸುರನನ್ನು ಸಂಹರಿಸಿದ್ದು ಮಾತ್ರ ಮೈಲಾರದಲ್ಲಿ. ಮೈಲಾರವು ನಿರ್ಣಾಯಕ ಸ್ಥಳ. ಆದುದರಿಂದ ಅದೇ ಮುಖ್ಯವಾದ ಕ್ಷೇತ್ರ. ಮೈಲಾರದಲ್ಲಿಯೂ ಸ್ವಯಂಭೂ ಲಿಂಗವಿದೆ. ಜತೆಗೆ ಆಲದ ಮರವೂ ದೇವಾಲಯದ ಸಮೀಪದಲ್ಲಿದೆ. ಈ ಮರವೂ ಮೂಲತಃ ಬಹಳ ದೊಡ್ಡಗಾತ್ರದ್ದಿತ್ತೆಂದು ತಿಳಿದುಬರುತ್ತದೆ. ಈಗ ಇದರ ಸ್ವಲ್ಪಭಾಗ ಮಾತ್ರ ಉಳಿದಿದೆ. ಈ ಪರಿಸರದಲ್ಲಿ ಜನವಸತಿ ಉಂಟಾಗಿರುವುದೇ ಅದರ ಗಾತ್ರ ಕುಗ್ಗಲು ಕಾರಣವಾಗಿದೆ.

ಸಂಸ್ಕೃತ ಮಲ್ಲಾರಿ ಮಹಾತ್ಮ್ಯವು ಶಿವನು ಸ್ವಯಂಭೂ ಲಿಂಗವಾಗಿ ಅವತರಿಸಿದ್ದು ಪ್ರೇಮಪುರದ ವಟವೃಕ್ಷದ ಅಡಿಯಲ್ಲಿ ಎಂದು ಹೇಳುತ್ತದೆ. ಪ್ರೇಮಪುರವೆಂಬ ಹೆಸರು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ತರಲಾ (ವಾಸ್ತವವಾಗಿ ತಾರಳೀ) ನದಿಯ ಮೈಲಾರಲಿಂಗನ ಕ್ಷೇತ್ರಕ್ಕೆ ಇದ್ದುದಾಗಿ ತಿಳಿದು ಬರುತ್ತದೆ. ಮಹಾರಾಷ್ಟ್ರದಲ್ಲಿ ಪ್ರಸಿದ್ಧವಾಗಿರುವ ಈ ಹೆಸರಿನ ಇನ್ನೊಂದು ಕ್ಷೇತ್ರವೆಂದರೆ ಬೀದರ ಜಿಲ್ಲೆಯ ‘ಮೈಲಾಪುರ’ ಎಂಬುದು. ಹಲವಾರು ಸಂಗತಿಗಳನ್ನು ಪರಿಶೋಧಿಸಿ ಶ್ರೀ ಢೇರೆ ಅವರು ಮಲ್ಲಾರಿ ಮಹಾತ್ಮ್ಯದಲ್ಲಿ[8]ಹೇಳಿದ ಪ್ರೇಮಪುರವೆಂದರೆ ಬೀದರ ಜಿಲ್ಲೆಯ ‘ಕ್ಷೇತ್ರವೇ ಎಂದು ಹೇಳಿದ್ದಾರೆ.[9]ಅವರೇ ಇದು ‘ಪೇಂಬರ’ ಎಂಬ ರೂಪದಲ್ಲಿಯೂ ಮರಾಠಿ ಕೃತಿಗಳಲ್ಲಿ ತೋರಿಬರುವುದೆಂದು ಹೇಳುತ್ತಾರೆ. ಕನ್ನಡ ಸಾಹಿತ್ಯ ಕೃತಿಗಳಲ್ಲಿ ‘ಪೇಂಬೇರ’, ‘ಪಿಂಬೇರ’, ‘ಪೆಂಬೇರ’ ಎಂದು ಸ್ವಲ್ಪ ಪರಿವರ್ತಿತ ರೂಪದಲ್ಲಿ ಇದು ಕಾಣಿಸಿಕೊಂಡಿದೆ. ಶ್ರೀಹಾಲಭಾವಿಯವರು ಸಾತಾರಾ ಜಿಲ್ಲೆಯ ತಾರಳಿ ನದೀ ದಂಡೆಯ ಕ್ಷೇತ್ರದೊಡನೆ ಇದನ್ನು ಸಮೀಕರಿಸಿದ್ದಾರೆ.[10]ಆದರೆ ಮೈಲಾರ ಕ್ಷೇತ್ರ (ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲೂಕ) ಕ್ಕೂ ಮೂಲತಃ ಪ್ರೇಮಪುರವೆಂಬ ಹೆಸರು ಇದ್ದುದಾಗಿ ಅಲ್ಲಿಯ ಸ್ಥಾನಿಕರಿಂದ ತಿಳಿದು ಬರುತ್ತದೆ.

ಮಹಾರಾಷ್ಟ್ರದ ವಿದ್ವಾಂಸರಾದ ಡಾ. ಖರೆ ಮತ್ತು ಶ್ರೀ ಢೇರೆ ಇಬ್ಬರೂ ತಮ್ಮ ಸಮಗ್ರ ಪರಿಶೋಧನೆಯ ನಂತರ ಈ ಸಂಪ್ರದಾಯದ ಮೂಲ ಕ್ಷೇತ್ರವು ಬಳ್ಳಾರಿ ಜಿಲ್ಲೆಯ ಮೈಲಾರವೇ ಎಂಬ ನಿರ್ಣಯಕ್ಕೆ ಬಂದಿದ್ದಾರೆ.[11]ಆದುದರಿಂದ ಮೈಲಾರದ ಕ್ಷೇತ್ರವೇ ಪ್ರೇಮಪುರವೆಂಬ ಹೆಸರಿನಿಂದ ಪ್ರಾಚೀನ ಕಾಲದಲ್ಲಿ ಪ್ರಸಿದ್ಧವಾಗಿತ್ತೆಂದು ತಿಳಿಯಬುದು.

ಸಂಸ್ಕೃತ ಮತ್ತು ಮರಾಠಿ ಲೇಖಕರಿಗೆ ಬೀದರ ಜಿಲ್ಲೆಯ ಕ್ಷೇತ್ರವು ತೀರ ಸಮೀಪದ್ದಾಗಿದ್ದುದರಿಂದ ಮಲ್ಲಾರಿ ಮಹಾತ್ಮ್ಯದಲ್ಲಿ ಅದರ ಉಲ್ಲೇಖವು ಪ್ರಾಮುಖ್ಯ ಪಡೆದಿದೆ. ಮಹಾರಾಷ್ಟ್ರದಲ್ಲಿ ಪ್ರೇಮಪುರ, ಪಾಲಿ, ನಳದುರ್ಗ, ಜೆಜೂರಿ ಈ ಕ್ರಮ ದೇವಸ್ಥಾನಗಳನ್ನು ಹೆಸರಿಸುವಲ್ಲಿ ಇದೆಯೆಂದು ತಿಳಿದು ಬರುತ್ತದೆ.

ಜೆಜೂರಿ ಕ್ಷೇತ್ರವು ಈಗ ಮಹಾರಾಷ್ಟ್ರದಲ್ಲಿ ಬಹು ಪ್ರಸಿದ್ಧವಾಗಿದೆ. ಪುಣೆಯ ಆಗ್ನೇಯಕ್ಕೆ ಸು. ೩೦ ಮೈಲುಗಳ ಮೇಲೆ ಒಂದು ಗುಡ್ಡದ ಮೇಲೆ ದೇವಸ್ಥಾನವಿದೆ.ಈ ದೇವಸ್ಥಾನವೂ ಸಾಕಷ್ಟು ಪ್ರಾಚೀನವಾಗಿದೆ. ಅಲ್ಲಿರುವ ಒಂದು ಶಿಲಾ ಶಾಸನವು ಹದಿಮೂರನೆಯ ಶತಮಾನದ್ದಾಗಿದೆ. ಅದರಲ್ಲಿ ದೇವಸ್ಥಾನ ಮತ್ತು ಕ್ಷೇತ್ರಾಧಿಪ ದೈವತದ ಖಚಿತವಾದ ನಿರ್ದೇಶನವಿಲ್ಲ. ಆದರೂ ಶಾಸನಕಾಲಕ್ಕಾಗಲೇ ದೇವಸ್ಥಾನವು ಅಸ್ತಿತ್ವದಲ್ಲಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ.[12]ಮಹಾರಾಷ್ಟ್ರದ ಹೋಳ್ಕರ ರಾಜಮನೆತನದ ಕುಲದೇವರಾದುದರಿಂದ ಈ ದೇವಸ್ಥಾನದ ಮಹತಿ ಅನಂತರ ಕಾಲದಲ್ಲಿ ಬಹಳ ಹೆಚ್ಚಿದೆ. ಆದರೆ ಆಗಾಗ ಅಲ್ಲಿಯ ಪೂಜಾರಿಗಳೂ ಗೊರವರೂ ಇಷ್ಟು ದೂರವಿರುವ ದೇವರಗುಡ್ಡ ಮತ್ತು ಮೈಲಾರಗಳಿಗೆ ಬಂದು ದರ್ಶನ ಪಡೆದು ಹೋಗುವರು. ಈ ಪದ್ಧತಿ ಈಗಲೂ ಅಸ್ತಿತ್ವದಲ್ಲಿದೆ. ಇದರಿಂದಲೂ ಮೈಲಾರದ ಕ್ಷೇತ್ರವೇ ಮೂಲದ್ದೆಂಬ ಸಂಗತಿ ದೃಢಪಡುತ್ತಿದೆ.

ಈ ಕಾರಣದಿಂದ ಏಳುಕೋಟಿ (<ಏೞ್ಕೋಟಿ < ಏೞ್ಕೋಟ್ಟಿ) ಎಂಬ ದೇವತೆ ಮೈಲಾರನೆಂದು ಹೆಸರುಗೊಂಡು ಹಳಗನ್ನಡ ಸಾಹಿತ್ಯದಲ್ಲಿಯೂ ಶಾಸನಗಳಲ್ಲಿಯೂ ಉಲ್ಲೇಖಗೊಂಡಿದ್ದಾನೆ. ಮೈಲಾರ ಎಂಬುದು ಮೈರಾಲ ಎಂಬ ರೂಪದಲ್ಲಿ ಮರಾಠಿ-ಸಂಸ್ಕೃತ ಕೃತಿಗಳಲ್ಲಿ ಗೋಚರಿಸುತ್ತದೆ. ಇದಲ್ಲದೆ ದೇವರಿಗೆ ಇನ್ನೂ ಹಲವು ಹೆಸರುಗಳು ಪ್ರಚಲಿತವಾಗಿವೆ. ಮಾರ್ತಾಂಡ, ಮಾರ್ತಾಂಡಭೈರವ, ಮೇಂಗನಾಥ ಎಂಬಂಥ ಹೆಸರುಗಳು ಗ್ರಂಥಸ್ಥ ಕೃತಿಗಳಲ್ಲಿ ಕಂಡುಬರುತ್ತವೆ. ಜತೆಗೆ ಮಲ್ಹಾರ, ಮಲ್ಲಾರ, ಮಲ್ಲಾರಿ, ಮಲ್ಲಿಕಾರ್ಜುನ, ಮಲ್ಲಯ್ಯ, ನಿ(ಲಿ)೦ಗಯ್ಯ, ನೀಲ, ನೀಲಗಿರಿ, ಗುಡ್ಡದಯ್ಯ ಎಂಬವೂ ಅಷ್ಟೇ ಜನಪ್ರಿಯವಾಗಿವೆ. ಇತ್ತಿತ್ತ ‘ಮಾಲತೀಶ’ ಅಥವಾ ಮಾಲತೇಶ ಎಂಬ ಹೆಸರೂ ರೂಢವಾಗುತ್ತಿದೆ (ಇದರಲ್ಲಿ ಮಾಲತಿ/ಮಾಳಚಿಯ ಪತಿ ಎಂಬ ಅಂಶ ವ್ಯಕ್ತವಾಗುತ್ತದೆ). ಮಹಾರಾಷ್ಟ್ರದಲ್ಲಿ ಖಂಡೋಬಾ, ಖಂಡೇರಾಯ, ಏಕಕೋಟಿ ಇವು ವಿಶೇಷ ಪ್ರಚಾರದಲ್ಲಿರುವುದು ಕಂಡು ಬರುತ್ತದೆಯಲ್ಲದೆ ಅಡಮತ್‌ಖಾನ, ಮಲ್ಲುಖಾನ ಎಂಬ ಮುಸ್ಲಿಮ್‌ ಹೆಸರುಗಳೂ ಇರುವುದಾಗಿ ತಿಳಿದು ಬರುತ್ತದೆ.

ಗಂಗಿಮಾಳವ್ವ-ಮಾಳಚಿ: ಮೈಲಾರ-ದೇವರಗುಡ್ಡಗಳಲ್ಲಿ ಈಗಿರುವ ಮಾಳಚಿಯ ಮೂರ್ತಿಗಳು ಮೈಲಾರಲಿಂಗನ ತದ್ವತ್ತಾದ ಸ್ತ್ರೀ ಮೂರ್ತಿಗಳಾಗಿವೆ. ಎಂದರೆ ಬಲದ ಕೈಗಳಲ್ಲಿ ಖಡ್ಗ, ತ್ರಿಶೂಲಗಳೂ ಎಡದ ಕೈಯಲ್ಲಿ ಪಾನಪಾತ್ರ-ಡಮರುಗಳೂ ಇವೆ. ಮಾಳಚಿ ಅಥವಾ ಗಂಗಿ ಮಾಳವ್ವನು ‘ಪಟ್ಟದ ಹೆಂಡತಿ’ ಯಾದುದರಿಂದ ಮೈಲಾರಲಿಂಗನ ದೇವಾಲಯಗಳ ಪಕ್ಕದಲ್ಲಿಯೇ ಅವಳ ದೇವಾಲಯಗಳಿವೆ. ಜತೆಗೆ ಮೂರ್ತಿಯ ಮುಂದುಗಡೆಯಲ್ಲಿ ಉದ್ಭವಲಿಂಗಗಳಿವೆ.

ಗಂಗಿ ಮಾಳವ್ವ ಅಥವಾ ಮಾಳಚಿಗಾಗಿಯೇ ಪ್ರತ್ಯೆಕವಾದ ದೇವಸ್ಥಾನಗಳು ಪ್ರಾಚೀನಕಾಲದಲ್ಲಿ ಇದ್ದ ಬಗ್ಗೆ ಉಲ್ಲೇಖಗಳಿವೆ. ದೇವಿಹೊಸೂರಿನಲ್ಲಿ ಅಂಥ ಮಂದಿರವೊಂದು ೧೧ನೆಯ ಶತಮಾನದಲ್ಲಿದ್ದ ಬಗ್ಗೆ ಆ ಊರಿನಲ್ಲಿನ ಎರಡು ಶಾಸನಗಳೂ ಸಾಕ್ಷಿ ನುಡಿಯುತ್ತಿವೆ. ಅಲ್ಲದೆ ಶಾಸನಗಳಿರುವ ಸ್ಥಾನದಲ್ಲಿ ಇಂದಿಗೂ ಹಾಳು ಬಿದ್ದ ದೇವಾಲಯ ಕೂಡ ಇದೆ. ಮಂದಿರವು ಪೂರ್ಣ ಶಿಥಿಲವಾಗಿಲ್ಲ. ಈಗಲೂ ಉಪಯೋಗಿಸಬಹುದಾದ ಸ್ಥಿತಿಯಲ್ಲಿದೆ. ಮುಖ್ಯ ಮಂದಿರದ ಸುತ್ತಲೂ ಇರುವ ಆವಾರದಲ್ಲಿ ಶಿವಲಿಂಗಗಳೂ ಚಿಕ್ಕ ಚಿಕ್ಕ ದೇವಮಂದಿರಗಳೂ ಇವೆ. ಆದರೆ ಇವುಗಳನ್ನು ಈಗ ಗುರುತಿಸಿ ಹೆಸರಿಸುವುದು ಕಷ್ಟ. ಇದೀಗ ಇಲ್ಲಿದ್ದ ದೇವಿಯ ಮೂರ್ತಿಯನ್ನು ಊರಲ್ಲಿರುವ ಮತ್ತೊಂದು ದೇವಸ್ಥಾನದಲ್ಲಿಟ್ಟು ಪೂಜಿಸಲಾಗುತ್ತಿದೆ. ಊರ ಜನ ‘ಬನಶಂಕರಿ’ ಎಂದು ಈಗ ಈ ದೇವತೆಯನ್ನು ಕರೆಯುತ್ತಾರೆ. ಮಹಾರಾಷ್ಟ್ರದ ನೇವಾಸೆ ಮತ್ತು ಗೋವೆಯ ಮ್ಹಾಡದೋಳಗಳಲ್ಲಿ ಈಗಲೂ ಪ್ರತ್ಯೇಕವಾದ ದೇವಾಲಯಗಳಿವೆ. ಮ್ಹಾಡದೋಳದ ದೇವಿಯನ್ನು ಈಗ ‘ಮ್ಹಾಳಸಾ-ನಾರಾಯಣಿ’ ಎಂದು ಕರೆಯುವುದಾಗಿ ತಿಳಿದು ಬರುತ್ತದೆ.[13]

ಕುರುಬತೆವ್ವ-ಕುರುಬರ ಮಾಳವ್ವ-ಬನಾಯಿ-ಬಾಣಾಯಿ:

ಇವಳು ಮೈಲಾರಲಿಂಗನ ಎರಡನೆಯ ಹೆಂಡತಿ. ಜಾತಿಯಿಂದ ಕುರುಬಳಂತೆ. ಹಟದಿಂದ ಇವಳನ್ನು ಮೈಲಾರಲಿಂಗ ತಂದನು. ಗಂಗಿ ಮಾಳವ್ವನಂತೆ ಇವಳಿಗೂ ಹೆಗ್ಗಡೆಯೇ ಅಣ್ಣ. ಮಹಾರಾಷ್ಟ್ರದ ಸೀಮಾಗಾವದಲ್ಲಿರುವ ಇವಳ ಮೂರ್ತಿ ತಾಮ್ರದಿಂದ ಮಾಡಿದ್ದಿದ್ದು ನಿಂತ ಭಂಗಿಯಲ್ಲಿರುವುದಾಗಿ ತಿಳಿದುಬರುತ್ತದೆ.[14]ಅಲ್ಲಿರುವ ಮ್ಹಾಳಸೆಯಂತೆಯೇ ಕೈಯಲ್ಲಿ ಕಮಲ ಕಳಿಕೆ ಮತ್ತು ಪಾನಪಾತ್ರಗಳನ್ನು ಹಿಡಿದಿದ್ದಾಳಂತೆ. ದೇವರಗುಡಡ್ಡ-ಮೈಲಾರಗಳಲ್ಲಿ ಗಂಗಿ ಮಾಳವ್ವನ ಮೂರ್ತಿಯಂತಯೇ ಇವಳ ಮೂರ್ತಿಗಳೂ ಇವೆ. ಮೈಲಾರದಲ್ಲಿ ಮುಖ್ಯ ದೇವಾಲಯದ ಆವಾರದ ಹೊರಗಡೆಯಲ್ಲಿದೆ. ದೇವರಗುಡ್ಡದಲ್ಲಿ ಇವಳ ದೇವಸ್ಥಾನವು ಮುಖ್ಯ ದೇವಾಲಯದಿಂದ ಸು. ೨ ಫರ್ಲಾಂಗ ದೂರದಲ್ಲಿ ಉತ್ತರಕ್ಕಿದೆ.

ಮರಾಠಿ ಜಾನಪದ ಸಾಹಿತ್ಯದಲ್ಲಿ ಇವಳನ್ನು ಬನಾಯಿ ಬಾನೂ, ಬಾಣಾಯಿ ಎಂದು ಸಂಬೋಧಿಸಿದ್ದುದಾಗಿ ತಿಳಿದುಬರುತ್ತದೆ. ದೇವೀಹೊಸೂರಿನಲ್ಲಿ ಈಗ ‘ಬನಶಂಕರಿ’ ಎಂದು ದೇವಿಯನ್ನು ಕರೆಯುತ್ತಿರುವ ಸಂಗತಿಯನ್ನು ಈಗಾಗಲೇ ಸೂಚಿಸಲಾಗಿದೆ. ಬನಾಯಿ (ಬನ+ಆಯಿ) ಅಂದರೆ ಬನದ ತಾಯಿ ಎಂಬುದು ಹಳಗನ್ನಡ ಸಾಹಿತ್ಯ-ಶಾಸನಗಳಲ್ಲಿ ತೋರುವ ‘ಬನದಬ್ಬೆ’ ಎಂಬ ರೂಪದ ಭಾಷಾಂತರದಂತೆ ಕಂಡು ಬರುತ್ತದೆ. ಇದು ವಿಚಾರಣೀಯವಾದ ಅಂಶ. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯ.

ಘೃತಮಾರಿ-ತುಪ್ಪದ ಮಾಳವ್ವ:

ಮಲ್ಲಾರಿ ಮಹಾತ್ಮ್ಯದಲ್ಲಿ ಇವಳನ್ನು ಘೃತಮಾರಿ ಎಂದು ಕರೆದಿದೆ. ಜಾನಪದಲ್ಲಿ ಇವಳನ್ನು ‘ತುಪ್ಪದ ಮಾಳವ್ವ’ ಎಂದು ಕರೆಯುವುದು ವಾಡಿಕೆ. ‘ತುಪ್ಪದ ಮಾಳವ್ವ’ ಎಂಬುದನ್ನೇ ಸಂಸ್ಕೃತೀಕರಿಸಿ ‘ಘೃತಮಾರಿ’ ಎಂದು ಕರೆದಿದೆ. ಇವಳು ರಾಕ್ಷಸರೊಡನೆ ಯುದ್ಧಕ್ಕೆ ಹೊರಡುವ ಮುಂಚೆ ಶಿವನ ಜಡೆಯಿಂದ ಉದ್ಭವಿಸಿದಳಂತೆ. ರಾಕ್ಷಸ ವಧೆಯಲ್ಲಿ ಇವಳ ಪಾತ್ರ ಪ್ರಧಾನವಾದುದಂತೆ. ಇವಳ ಘೋರರೂಪವನ್ನು ಕಂಡು ಮುನಿಗಳು ಶಾಂತಿಗಾಗಿ ತುಪ್ಪದಿಂದ ಅಭಿಷೇಕ ಮಾಡಿದರು. ಆದುದರಿಂದ ಇವಳಿಗೆ ಈ ಹೆಸರು ಬಂತೆದಂದು ‘ಮಹಾತ್ಮ್ಯ’ವು ಹೇಳುತ್ತದೆ. ಭಕ್ತರು ಈಗಲೂ ಈ ಮೂರ್ತಿಯನ್ನು ತುಪ್ಪದಿಂದ ಅಭಿಷೇಕ ಮಾಡುವುದು ವಾಡಿಕೆ. ಇದಿರಂದ ಹೈನ ಸಮೃದ್ಧವಾಗುವುದೆಂದು ಭಕ್ತರು ನಂಬುತ್ತಾರೆ. ಎಂತಲೇ ಇವಳಿಗೆ ‘ತುಪ್ಪದ ಮಾಳವ್ವ’ ಎಂಬ ಹೆಸರು ಬಂದುದು ಸಾರ್ಥಕ. ದೇವರಗುಡ್ಡದಲ್ಲಿ ಇವಳಿಗಾಗಿ ಮುಖ್ಯದೇವಾಲಯದ ಆವರಣದಲ್ಲಿಯೇ ಗುಡಿಯಿದೆ. ಮೂರ್ತಿಯನ್ನು ಶಿಲ್ಪವು ಗಂಗಿಮಾಳವ್ವನಂತೆಯೆ ಇದೆ. ಕೈಯಲ್ಲಿ ಕ್ರಮವಾಗಿ ಖಡ್ಗ, ತ್ರಿಶೂಲ, ಡಮರು ಮತ್ತು ಪಾನಪಾತ್ರಗಳಿವೆ.

ರಣದಮ್ಮ:

ಯುದ್ಧದಲ್ಲಿ ಶಿವನ ಕಣ್ಣುಗಳಿಂದ ಹೊರಟ ಕೋಪಾಗ್ನಿಯಿಂದ ಇವಳು ಹುಟ್ಟಿದಳಂತೆ. ಇವಳಿಗಾಗಿಯೂ ದೇವರಗುಡ್ಡ ಪರಿಸರದಲ್ಲಿ ಪ್ರತ್ಯೇಕ ದೇವಾಲಯವಿದೆ.

ಕೋಮಾಲೆ:

ಇವಳಿಗಾಗಿ ಸಿಡಗಿನಹಾಳದಲ್ಲಿ ಪ್ರತ್ಯೇಕ ದೇವಾಲಯವಿದೆ. ಇವಳನ್ನು ಕೂಡ ಮೈಲಾರಲಿಂಗನು ಗಂಗಿಮಾಳವ್ವನ ಮೇಲಿನ ಹಟದಿಂದ ತಂದನೆಂದು ಕಥೆಯಿದೆ. ಇವಳೂ ಕುರಬರವಳೇ.

ದೇವರಗುಡ್ಡದ ಪರಿಸರದಲ್ಲಿ ಮಾತ್ರ ರಣದಮ್ಮ, ಕೋಮಾಲೆ, ತುಪ್ಪದ ಮಾಳವ್ವ ಮತ್ತು ಕುರುಬತೆವ್ವ ಇವರಿಗೆ ಪ್ರತ್ಯೇಕ ದೇವಾಲಯಗಳಿವೆ. ಮೈಲಾರದಲ್ಲಿ ಮತ್ತು ಇತರೆಡೆಗಳಲ್ಲಿ ಮೈಲಾರಲಿಂಗನಿಗೆ ಹೆಂಡಂದಿರಿರುವುದು ಇಬ್ಬರು ಮಾತ್ರ. ಒಬ್ಬಳು ಗಂಗಿ ಮಾಳವ್ವ ಇನ್ನೊಬ್ಬಳು ತುಪ್ಪದ ಮಾಳವ್ವ (ಮರಾಠಿ-ಬಾಣಾಯಿ) ಎಂಬ ನಂಬಿಕೆ ಇದೆ. ಗುಡಿಗಳ ವಿಷಯವೂ ಹಾಗೆಯೆ. ಆದುದರಿಂದ ತುಪ್ಪದ ಮಾಳವ್ವ, ಕುರುಬತೆವ್ವ, ಕೋಮಾಲೆ, ಬನಾಯಿ-ಬಾಣಾಯಿ ಇವು ಒಬ್ಬ ದೇವತೆಯ ಬೇರೆ ಬೇರೆ ಹೆಸುರಗಳೇ ಎಂದು ಹೇಳಬಹುದು.

ಚಿಕ್ಕಯ್ಯ-ಜುಂಜಯ್ಯ:

ಇವರಿಬ್ಬರೂ ಮೈಲಾರಲಿಂಗ ಮಾಳವ್ವನ ಮಕ್ಕಳು. ಆದುದರಿಂದ ಭಕ್ತರಿಗೆ ಇವರೂ ಪೂಜ್ಯರೂ. ಚಿಕ್ಕಯ್ಯನೆಂದರೆ ಷಣ್ಮುಖನೆಂದೂ ಜುಂಜಯ್ಯ ಅಥವಾ ದೊಡ್ಡಯ್ಯನೆಂದರೆ ಗಣಪತಿಯೆಂದೂ ಹೇಳುವರು. ದೇವರಗುಡ್ಡದಲ್ಲಿ ಚಿಕ್ಕಯ್ಯ ಮತ್ತು ಜುಂಜಯ್ಯರಿಗಾಗಿ ಪ್ರತ್ಯೇಕ ದೇವಾಲಯಗಳಿಲ್ಲ. ಮುಖ್ಯದೇವತೆಯ ಮುಂಭಾಗದ ಎಡ-ಬಲಗಳಲ್ಲಿ ಇವರಿಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲಿ ಚಿಕ್ಕಯ್ಯನ ಮಾನುಷಾಕಾರದ ಮೂರ್ತಿ ಇಲ್ಲ. ಬದಲು ಒಂದು ಶಿಲಾಗೋಳವಿದ್ದು ಅದಕ್ಕೇ ಮುಖದಂತೆ ಅಲಂಕಾರ ಮಾಡಲಾಗಿದೆ. ದೊಡ್ಡಯ್ಯನೆಂದಿರುವ ವಿಗ್ರಹವು ಗಣಪತಿಯದೇ ಆಗಿದೆ. ಮೈಲಾರದಲ್ಲಿ ಮಾತ್ರ ಇಬ್ಬರಿಗೂ ಪ್ರತ್ಯೇಕ ದೇವಾಲಯಗಳಿವೆ. ಇಬ್ಬರಿಗೂ ಪೂರ್ಣ ಪ್ರಮಾಣದ ಮೂರ್ತಿಗಳಿರದ ಕೇವಲ ಶಿರೋಭಾಗಗಳು ಮಾತ್ರ ಇವೆ. ಕಲ್ಲಿನ ಪೀಠಗಳ ಮೇಲೆ ಅವನ್ನು ಪ್ರತಿಷ್ಠಿಸಲಾಗಿದೆ. ಮೂರ್ತಿಶಿಲ್ಪದಲ್ಲಿ ಇದೊಂದು ವಿಶೇಷವೆಂದು ಹೇಳಬಹುದು. ಚಿಕ್ಕಯ್ಯನ ಶಿರದಮೇಲೆ ಕಿರೀಟಾದಿಗಳಿಲ್ಲ. ಜಂಜಯ್ಯನ ಮೂರ್ತಿಗೆ ಕಿರೀಟದಂತಿರುವ ಟೊಪ್ಪಿಗೆಯೂ ಕಿವಿಯಲ್ಲಿ ಕುಂಡಲಗಳೂ ಇವೆ.

ಚಿಕ್ಕಯ್ಯ-ಜುಂಜಯ್ಯರಿಗಾಗಿ ವಿಶೇಷ ಪೂಜೆಗಳೂ ಇವೆ, ಆದರೆ ಇವರಿಗಾಗಿ ಸ್ವತಂತ್ರವಾದ ದೇವಾಲಯಗಳನ್ನು ನಿರ್ಮಿಸಿದ ಬಗೆಗೆ ಪ್ರಾಚೀನಕಾಲದ ದಾಖಲೆಗಳು ಕಂಡುಬರುವುದಿಲ್ಲ. ಮಲ್ಲಾರಿ ಮಹಾತ್ಮ್ಯದಲ್ಲಿ ಷಣ್ಮಖ-ಗಣಪತಿಯರ ಉಲ್ಲೇಕವಿರುವುದು ಇವರನ್ನು ಕುರಿತೇ ಎಂದು ಹೇಳಬಹುದು.

ಬ್ರಹ್ಮ ಶಿವನ ಸಮಯಪರೀಕ್ಷೆಯಲ್ಲಿ ಒಂದೆಡೆ ಚಿಕ್ಕಯ್ಯನ ಉಲ್ಲೇಖ ಬಂದಿದೆ.

ಉದಾ:

ಒಕ್ಕಲಿಗನಕ್ಕೆ ಪಂಚಮ
ನಕ್ಕೆಮ ಸದ್ರುಷ್ಟಿಯಾಗೆ ಕಾಲಂಕರ್ಚ |
ಲ್ತಕ್ಕುದು ಜೈನಂಗೇಕೆನೆ
ಚಿಕ್ಕಯ್ಯಂ ಶೂದ್ರನೆಂದು ಕಚ್ಚರೆ ಕುಲಜರ್‌ || ೫-೧೪೧
ಒಕ್ಕಲಿಗಂ ಋಷಿಯಾದೊಡೆ
ಚಿಕ್ಕಯನೆ(ನ?) ಕಾಲನೆಂತು ಕರ್ಚುವರದೃಱೆಂ |
ಒಕ್ಕಲಿಗಂ ಬ್ರತಿಯಾದಂ
ದಕ್ಕುಂಕರ್ಚಲ್ಕೆ ಮದಮನುಳಿಗೆ ಕುಲಜ್ಞಂ || ೫-೧೪೨

(ಜೈನೇತರರಾದ) ಉಚ್ಚ ಕುಲದವರು ಚಿಕ್ಕಯ್ಯನು ಶೂದ್ರನಾಗಿದ್ದರೂ ಆತನ ಕಾಲು ತೊಳೆಯುವರು. ಆದುದರಿಂದ ಜೈನವ್ರತಧಾರಿಯಾದ ಮುನಿ ಜನ್ಮದಿಂದ ಒಕ್ಕಲಿಗ ಶೂದ್ರನೆಂದು ಭಾವಿಸಿ ಮದಿಂದ ಅವನ ಕಾಲು ತೊಳೆಯಲು ನಿರಾಕರಿಸತಕ್ಕದ್ದಲ್ಲ’ ಎಂದು ಇಲ್ಲಿಯ ಪದ್ಯಗಳ ಭಾವ. ಇಲ್ಲಿ ಬಂದಿರುವ ‘ಚಿಕ್ಕಯ್ಯ’ ಎಂಬ ಶಬ್ದಕ್ಕೆ ಕಠಿಣದ ಕೋಶದಲ್ಲಿ ‘ಮೈಲಾರನ ಒಂದು ಹೆಸರು’ ಎಂದು ಸಂಪಾದಕರಾದ ಡಾ. ಬಿ.ಎಸ್. ಕುಲಕರ್ಣಿಯವರು ಅರ್ಥಹೇಳಿದ್ದಾರೆ. ಚಿಕ್ಕಯ್ಯನೆಂದರೆ ಮೈಲಾರನನ್ನು ಕುರಿತಿರದೆ ಆತನ ಭಕ್ತರನ್ನು-ಎಂದರೆ ಗೊರವರನ್ನು ಬ್ರಹ್ಮ ಶಿವ ಹೆಸರಿಸಿದ್ದಾನೆಂದು ಹೇಳಬಹುದು. ಮೈಲಾರನ ಗೊರವರು ತಮ್ಮನ್ನು ಅವನ ಶಿಷ್ಯರೆಂದು ಭಕ್ತರೆಂದು ಹೇಳುವ ಬದಲು ಮಕ್ಕಳೆಂದು ಹೇಳಿಕೊಳ್ಳುವುದೂ ಉಂಟು. ಆದುದರಿಂದ ಅವರಿಗೆ ಜನಸಾಮಾನ್ಯರಲ್ಲಿ ಆ ಹೆಸರು ರೂಢವಾಗಿರುವಂತೆ ತೋರುತ್ತದೆ. ಮೈಲಾರಲಿಂಗನು ಕುಲದೇವತೆಯಾಗಿರುವ ಮನೆತನಗಳಲ್ಲಿ ಗೊರವರನ್ನು ಕರೆದು ಪೂಜಿಸುವುದು ಈಗಲೂ ರೂಢಿಯಲ್ಲಿದೆ. ಗೊರವರು ಯಾವ ಜಾತಿಯವರಾದರೂ ಅವರು ಭಕ್ತರಿಗೆ ಪೂಜಾರ್ಹರು. ಬ್ರಾಹ್ಮಣ ಭಕ್ತರು ಕೂಡ ಇದನ್ನ ಮೀರದೇ ಪಾಲಿಸುವರು. ಆದುದರಿಂದ ಬ್ರಹ್ಮಶಿವನು ಹೇಳುವ ಚಿಕ್ಕಯ್ಯನೆಂದರೆ ಮೈಲಾರಲಿಂಗ ದೇವತೆಯಾಗಿರದೆ ಆತನ ನೈಷ್ಠಿಕ ಭಕ್ತರಾದ ಗೊರವರೇ ಎಂದು ಹೇಳಬಹುದು. ಚಿಕ್ಕಯ್ಯನ ಸ್ವರೂಪವೇ ತಾವೆಂದು ಹೇಳಿಕೊಂಡು ಗೊರವರು ಆಗಲೂ ಸಂಚರಿಸುತ್ತಿದ್ದರೆಂದು ಇದರಿಂದ ತಿಳಿಯಬಹುದಾಗಿದೆ. ಮೈಲಾರಲಿಂಗನ ದೇವಸ್ಥಾನಗಳು ಇರುವಲ್ಲೆಲ್ಲ ಚಿಕ್ಕಯ್ಯ-ಜುಂಜಯ್ಯರ ಸ್ಥಾನಗಳು ಇರಲೇಬೇಕು. ಪ್ರತ್ಯೇಕ ಗುಡಿಗಳಿಲ್ಲದಿದ್ದರೂ ದೇವಾಲಯದ ಪರಿಸರದಲ್ಲಿ ಇವರಿಗೆ ಸ್ಥಾನ ಕಲ್ಪಿತವಾಗಿರುವುದು ಎಲ್ಲೆಡೆ ಕಂಡು ಬರುತ್ತವೆ. ಆದ್ದರಿಂದ ಇವರೂ ಕೂಡ ಈ ಸಂಪ್ರದಾಯದ ಅವಿಭಾಜ್ಯ ಅಂಗ.

ಹೆಗ್ಗಡೆ:

ಈ ಸಂಪ್ರದಾಯದಲ್ಲಿ ಹೆಗ್ಗಡೆಯೂ ಒಬ್ಬ ಪ್ರದಾನದೇವತೆ. ಹೆಗ್ಗಯ್ಯ, ಹೆಗ್ಗಪ್ಪ, ಹೆಗ್ಗಣ್ಣ, ಪರುದಾನಿ (ಪ್ರಧಾನಿ) ಮೊದಲಾದ ಹೆಸರುಗಳು ಈತನಿಗೆ ಇವೆ. ಅನೇಕ ವೇಳೆ ‘ಹೆಗ್ಗಯ್ಯ ಪರುದಾನಿ’ ಎಂದು ದ್ವಿರುಕ್ತಿಗೊಳಿಸುವುದೂ ಉಂಟು. ಮೈಲಾರಲಿಂಗನ ಪ್ರತಿಯೊಂದು ದೇವಾಲಯದಲ್ಲಿ ಈತ ಇರಲೇಬೇಕು. ಈತನಿಗೆ ಪ್ರತ್ಯೇಕ ಮಂದಿರವಿದ್ದು ಇತರ ದೇವರುಗಳ ಸಮುದಾಯದಿಂದ ಸ್ವಲ್ಪ ಅಂತರದಲ್ಲಿ ಅದು ಕಂಡುಬರುತ್ತದೆ. ಈತ ಕ್ಷೇತ್ರಪಾಲಕ ದೇವತೆ. ಕ್ಷೇತ್ರಕ್ಕೆ ಬರುವ ಭಕ್ತರು ಸುಖವಾಗಿ ತಮ್ಮ ಊರುಗಳಿಗೆ ಮುಟ್ಟುವಂತೆ ಈತ ನೋಡಿಕೊಳ್ಳುವನೆಂದು ನಂಬಿಕೆಯಿದೆ. ಭಕ್ತರು ಈತ ಪ್ರತ್ಯಕ್ಷ ವಿಷ್ಣುವೇ ಎಂದೂ ತಿರುಪತಿಯ ತಿಮ್ಮಪ್ಪನೆಂದೂ ತಿಳಿಯುವರು. ಈ ವಿಷಯಕ್ಕೆ ಒಂದು ಅಖ್ಯಾಯಿಕೆಯೂ. ಇದೆ. ಗಂಗಿಮಾಳವ್ವ ಮತ್ತು ತುಪ್ಪದ ಮಾಳವ್ವ ಇವರಿಬ್ಬರಿಗೂ ಈತ ಅಣ್ಣ. ಆದುದರಿಂದ ಮೈಲಾರಲಿಂಗನ ಬೀಗ (ಭಾವ) ಈತ. ಜಾನಪದ ಸಾಹಿತ್ಯದಲ್ಲಿ ಈ ವಿಷಯಕ್ಕೆ ಮೇಲಿಂದಮೇಲೆ ಉಲ್ಲೇಖಗಳು ಬರುತ್ತವೆ.

ಮಹಾರಾಷ್ಟ್ರದಲ್ಲಿ ಈತನನ್ನು ಈಗಲೂ ‘ಹೆಗಡೆ ಪ್ರಧಾನ’ ಎಂದು ಸಂಬೋಧಿಸುವರು. ಶ್ರೀ ಢೇರೆಯವರು ಬ್ರಹ್ಮ ಶಿವನು ಹೇಳುವ ‘ಮನೆವೆರ್ಗಡೆ ಚಟ್ಟಪ್ಪ’ನೆಂದರೆ ಈತನೇ ಇರಬಹುದೆಂದು ಊಹಿಸುತ್ತಾರೆ.[15]ಅವರ ಊಹೆಯಲ್ಲಿ ಸತ್ಯಾಂಶವಿರುವ ಸಾಧ್ಯತೆಯಿದೆ. ಬ್ರಹ್ಮ ಶಿವನು ಕ್ಷೇತ್ರಪಾಲಕನಾದ ಈ ದೇವತೆಯೆ ಮೈಲಾರನನ್ನು ಪ್ರತಿಷ್ಠಿಸಿದನೆಂದು ಭಾವನೆ ಮಾಡಿಕೊಂಡಂತೆ ತೋರುತ್ತದೆ.

ಈತನಿಗೂ ವಿಶಿಷ್ಟವಾದ ಆರಾಧನೆಗಳಿವೆ. ಹಿರೇ ಮೈಲಾರದಲ್ಲಿರುವ ಮೂರ್ತಿಯ ಭಿನ್ನವಾಗಿರುವುದರಿಂದ ಇದೀಗ ಅಲ್ಲಿ ಬೇರೆ ಮೂರ್ತಿಯನ್ನು ಪ್ರತಿಷ್ಠಿಸಲಾಗಿದೆ. ಭಿನ್ನಗೊಂಡಿರುವ ಮೂರ್ತಿ ಚತುರ್ಭುಜದ್ದಾಗಿದ್ದು ಎರಡು ಕೈಗಳಲ್ಲಿ ಪಾಶ ಮತ್ತು ಹಲಾಯುಧಗಳು ಕಂಡಬರುತ್ತವೆ.[16]ದೇವರಗುಡ್ಡದಲ್ಲಿರುವ ಮೂರ್ತಿಯ ಕೈಯಲ್ಲಿ ತ್ರಿಶೂಲ, ಖಡ್ಗ, ಡಮರು ಮತ್ತು ಪಾನಪಾತ್ರ (ಕಪಾಲ) ಗಳಿರುವುದು ಕಂಡು ಬರುತ್ತದೆ.

ಹೀಗೆ ಈ ಪರಂಪರೆಯಲ್ಲಿ ಆರು ಜನ ದೇವತೆಗಳು ಸಮಾವಿಷ್ಟರಾಗಿದ್ದಾರೆ. ಇದಲ್ಲದೆ ಸಿಬಾರಗಟ್ಟೆ, ತ್ರಿಶೂಲ, ಡಮರು, ಮೈಲಾರಲಿಂಗನ ವಾಹನವಾದ ಕುದುರೆ ಪಾದರಕ್ಷೆಗಳು ಭಂಡಾರ (ಅರಿಷಣ), ಮೈಲಾರ-ದೇವರ ಗುಡ್ಡಗಳಲ್ಲಿರುವ ಬಿಲ್ಲುಗಳು ಇವುಗಳಿಗೂ ಪೂಜ್ಯತೆ ಸಲ್ಲುತ್ತದೆ.

ಮೇಲೆ ಹೇಳಿದಂತೆ ಈ ಸಮುದಾಯದ ದೇವತೆಗಳ ಪೈಕಿ ಗಂಗಿಮಾಳವ್ವ ಅಥವಾ ಮಾಳಚಿ (ಮರಾ-ಮ್ಹಾಳಸಾ) ದೇವತೆಗಾಗಿಯ ಪ್ರತ್ಯೇಕ ದೇವಾಲಯಗಳಿದ್ದುದು ತಿಳಿದುಬರುತ್ತದೆ. ಇನ್ನುಳಿದ ದೇವತೆಗಳಿಗೆ ಪ್ರತ್ಯೇಕ ದೇವಾಲಯಗಳಿರುವ ಸಾಧ್ಯತೆ ಇದೆ. ಈ ದೆಸೆಯಲ್ಲಿ ಹೆಚ್ಚಿನ ಸಂಶೋಧನೆಯಾಗಬೇಕು.

 

[1]ಶ್ರೀ ರಾ. ಚಿ. ಢೇರೆ” ‘ಖಂಡೋಬಾ’ ಪು. ೫೦’, ಮಲ್ಲಾರಿ ಸಹಸ್ರನಾಮಾವಳಿ ಪು. ೩.

[2]ಅದೇ: ಪು. ೪೯.

[3]ಅದೇ: ಪು. ೪೯.

[4]ಅದೇ: ಪು. ೫೦.

[5]ಜಿ. ಗೋಪಿನಾಥರಾವ ಎ. Hindu Iconography ಪು. ೧೮೦

[6]ಅದೇ : ಪು. ೧೯೧-೧೯೨

[7]ಬಸವಣ್ಣನವರ ಷಟ್ಸ್ಥಳದ ವಚನಗಳು (ಸಂ: ಶಿ.ಶಿ. ಬಸವನಾಳ) ವಚನಸಂಖ್ಯೆ ೨೮೦

[8]ಸಂಸ್ಕೃತ ಮಲ್ಲಾರಿ ಮಹಾತ್ಮ್ಯವು ಕ್ರಿ.ಶ. ೧೨೬೦ ರಿಂದ ೧೫೪೦ ರ ಮಧ್ಯದಲ್ಲಿ ರಚನೆಗೊಂಡಿರಬೇಕೆಂದು ಶ್ರೀಢೇರೆ, ನಿರ್ಧರಿಸಿದ್ದಾರೆ. (ಖಂಡೋಬಾ. ಪು. ೯.)

[9]ಖಂಡೋಬಾ. ಪು. ೧೪೪

[10]ಶ್ರೀಹಾಲಭಾವಿ: ಶಂಕರದಾಸಿಮಯ್ಯನ ಪುರಾಣ: ಪ್ರಸ್ತಾವನೆ, ಪುಟ. ೪೬

[11]ಮಹಾರಾಷ್ಟ್ರಾಂಚೀ ಚಾರ ದೈವತೆ. ಪು. ೧೬೮. ಮತ್ತು ಶ್ರೀಢೇರೆ: ಖಂಡೋಬಾ. ಪು. ೨ ಮತ್ತು ೮೧.

[12]ಖಂಡೋಬಾ ಪು. ೮೦.

[13]ಅದೇ ಪು. ೧೪೫.

[14]ಅದೇ ಪು. ೫೪.

[15]ಅದೇ: ಪು. ೫೬.

[16]ಶ್ರೀ ಢೇರೆಯವರು ಪಾಶ ಮತ್ತು ಅಂಕುಶಗಳಿವೆಯೆಂದು ಹೇಳಿದ್ದಾರೆ. (ಖಂಡೋಬಾ. ಪು. ೫೬) ಆದರೆ ಈಗಲೂ ಇರುವ ಆ ಹಳೆಯ ಭಿನ್ನ ಮೂರ್ತಿಯನ್ನು ಪರೀಕ್ಷಿಸಿದರೆ ಅವರ ವರ್ಣನೆ ತಪ್ಪೆಂದು ಕಂಡುಬರುತ್ತದೆ.