ಮೈಲಾರದೇವರು ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಪ್ರಾಚೀನ ಕಾಲದಿಂದಲೂ ಮೈಲಾರಲಿಂಗ ‘ಮಲ್ಲಯ್ಯ’ ಖಂಡೋಬಾ ಇತ್ಯಾದಿ ಹೆಸರುಗಳಿಂದ ಪ್ರಸಿದ್ಧನಾಗಿರುವ ಜಾನಪದ ದೈವತ. ಕನ್ನಡ ಸಾಹಿತ್ಯದಲ್ಲಿ ಕ್ರಿ.ಶ. ೧೨ನೆಯ ಶತಮಾನದಿಂದಲೇ ಕಾಣಿಸಿಕೊಳ್ಳುತ್ತ ಬಂದಿರುವ ಈ ದೇವರು ಕರ್ನಾಟಕದ ಎಲ್ಲ ಮತದವರ ಲಕ್ಷ್ಯ ಸೆಳೆದಿದ್ದಾನೆ. ಹಲವು ಜನ ವಚನಕಾರರ ವಚನಗಳಲ್ಲಿ ಉಲ್ಲೇಖ ಗೊಂಡಿರುವಂತೆ ಬಸವಣ್ಣನವರಲ್ಲಿಯೂ ಈ ದೇವರು ಉಲ್ಲೇಖಗಳಿರುವುದನ್ನು ವಿದ್ವಾಂಸರು ಈಗಾಗಲೇ ಎತ್ತಿ ತೋರಿಸಿದ್ದಾರೆ.[1] ಬಸವಣ್ಣನವರ ವಚನಗಳಲ್ಲಿ ‘ಮೈಲಾರ’ ಎಂದು ಕೆಲವೆಡೆಗಳಲ್ಲಿ ಹೆಸರಿಸಿದ್ದರೆ ಒಂದೆಡೆಯಲ್ಲಿ ಮಾತ್ರ ‘ಮೈಲುಗ’ ಎಂದು ಪ್ರಯೋಗವಿರುವುದು ಕಂಡುಬರುತ್ತದೆ. ಉದಾ:

ಅಸಮಾಕ್ಷಲಿಂಗಕ್ಕೆ ಅನ್ಯದೈವವ ಸರಿಯೆಂಬನ ಬಾಯಲ್ಲಿ
ಮಸೆದ ಕೂರಲಗನಿಕ್ಕದೆ ಮಾಣ್ಬನೆ ?
ಹುಸಿಯಾಗಿ ನುಡಿವವನ ನಾಯಾಗಿ ಬಗುಳಿಸನೆ ?
ಹಿರಿಯರುತ್ತಮರೆನ್ನದವರ ಕುದುರೆಯಾಗಿ ಕಟ್ಟಿಸನೆ ?
ಗುರು ಲಘುವೆಂಬವರ ಬಾಯಲ್ಲಿ ಮೆಟ್ಟಿ ಹುಡಿಹೊಯ್ಯದೆ ಮಾಣ್ಬನೆ ?
ಪರಸ್ತ್ರೀಗಳುಪಿದವರ ಹಿಡಿಕಂಡಗೊಯ್ಯನೆ ?
ಕೂಡಲ ಸಂಗಮದೇವಾ ನಿಮ್ಮ ಹೇಳಿದ ಹೇಳಿಕೆಯಿಂದ
ಪಿಂಬೇರ ಮೈಲಿಗೆ ಮೇಳವಾಡುತ್ತಿದ್ದ ಕಾಣಾ ತ್ರೈಜಗದೊಳಗೆ [2]

ಇಲ್ಲಿನ ‘ಪಿಂಬೇರ ಮೈಲಿಗೆ’ ಎಂಬುದು ಅಪಪಾಠವಾಗಿದ್ದು ‘ಪಿಂಬೇರ ಮೈಲುಗ’ ಎಂಬುದು ಅದರ ಸರಿಯಾದ ಪಾಠವೆಂದು ಡಾ || ಪಿ.ಬಿ. ದೇಸಾಯಿ ಯವರು ತಮ್ಮದೊಂದು ಲೇಖನದಲ್ಲಿ ನಿರ್ಧರಿಸಿದ್ದಾರೆ. [3]

ಇದೇ ರೀತಿ ಪಿಂಬೇರಿನ ಮೈಲಾರದೇವರ ಉಲ್ಲೇಖ ಹಲವು ಕಡೆಗೆ ಬರುತ್ತಿದ್ದು ಅವಗಳಲ್ಲಿ ಹರಿಹರನ ಶಂಕರದಾಸಿಮಯ್ಯನ ರಗಳೆ ಮತ್ತು ಮಲ್ಲಿಕಾರ್ಜುನ ಕವಿಯ (ಕ್ರಿ.ಶ.೧೭೦೦) ಶಂಕರದಾಸಿಮಯ್ಯನ ಪುರಾಣಗಳು ಉಲ್ಲೇಖನೀಯವಾದವುಗಳು ಹರಿಹರ ಮತ್ತು ಮಲ್ಲಿಕಾರ್ಜುನರಿಬ್ಬರೂ ಮೈಲಾರನು ಶಂಕರದಾಸಿಮಯ್ಯನಿಗೆ ಕೊಡೆ ಹಿಡಿದು ಅವನ ಸೇವೆ ಮಾಡಿದನೆಂದು ತಮ್ಮ ಕೃತಿಗಳಲ್ಲಿ ಹೇಳಿರುವುದನ್ನು ಆಧಾರಿವಾಗಿಟ್ಟುಕೊಂಡು ಶ್ರೀ ಹಾಲಬಾವಿಯವರು ಸಾತಾರಜಿಲ್ಲೆಯ ತರಲಾನದಿ (ಇದರ ಸರಿಯಾದ ಹೆಸರು ತಾರಳಿನದಿ)ಯ ದಡದ ಮೇಲಿನ ‘ಪಾಲ’ ಎಂಬ ಊರಿನ ಖಂಡೋಬಾ (ಮೈಲಾರಲಿಂಗ) ದೇವರ ಕ್ಷೇತ್ರವೇ ಇದೆಂದು ಭಾವಿಸಿದ್ದಾರೆ.[4] ಅದನ್ನೇ ಡಾ || ಎಂ. ಚಿದಾನಂದಮೂರ್ತಿಯವರು ತಮ್ಮದೊಂದು ಲೇಖನದಲ್ಲಿ ಸೂಚಿಸಿದ್ದಾರೆ.[5] ಶ್ರೀ ಹಾಲಬಾವಿಯವರ ಈ ಊಹೆ ಪ್ರಬಲವಾದುದಲ್ಲವಾದ ಕಾರಣ ಪ್ರಸ್ತುತ ಲೇಖನದಲ್ಲಿ ಪಿಂಬೇರ ಕ್ಷೇತ್ರ ಎಂದರೆ ಯಾವುದು ಎಂಬುದನ್ನು ನಿರ್ಧರಿಸಲು ಪ್ರಯತ್ನಿಸಲಾಗುವುದು.

ಶಂಕರದಾಸಿಮಯ್ಯನು ಸೂಚಿ ಕಾಯಕದವನಾಗಿದ್ದು ಅವನ ಊರು ಕಂದಶಿಲೆ ಅಥವಾ ಕಂದಗಲ್ಲು (ಹುನಗುಂದ ತಾ :ವಿಜಾಪೂರ ಜಿಲ್ಲೆ) ಎಂದೂ ಅವನ ಆರಾಧ್ಯದೈವ ಪ್ರಸ್ತುತ ಕಂದಗಲ್ಲಿನಿಂದ ಪೂರ್ವಕ್ಕೆ ೧೨ ಮೈ. ಅಂತರದಲ್ಲಿ ಕೃಷ್ಣಾ ತೀರದಲ್ಲಿರುವ ನವಿಲೆ (ಲಿಂಗಸೂರು ತಾ.ರಾಯಚೂರು ಜಿ.)ಯ ಜಡೆಯ ಶಂಕರ ಲಿಂಗವೆಂಬ ಸ್ಥಾವರಲಿಂಗವೆಂದೂ ತಿಳಿದುಬರುತ್ತದೆ.[6] ಶಂಕರದಾಸಿಮಯ್ಯನು ಜಡೆಯ ಶಂಕರನ ವರಪ್ರಸಾದದಿಂದ ಉರಿಗಣ್ಣು ಪಡೆದು ಕಲ್ಯಾಣಕ್ಕೆ ಹೋದನು. ಅಲ್ಲಿ ತನ್ನ ಉರಿಗಣ್ಣಿನಿಂದ ನರಸಿಂಹನ ವಿಗ್ರಹ ಸುಟ್ಟುಹಾಕಿದರು. ಬರುತ್ತ ದಾರಿಯಲ್ಲಿ ಹೆಂ (ಪೆಂ) ಬೇಱಿನಲ್ಲಿದ್ದ ಮೈಲಾರ ದೇವಸ್ಥಾನದಲ್ಲಿ ತಂಗಿದ್ದು ಅಲ್ಲಿ ಮೈಲಾರದೇವರಿಗೆ ಭಕ್ತರು ಅರ್ಪಿಸುತ್ತಿದ್ದ ಸೇವಾ ಪರಿಕರಗಳನ್ನು ತಾನೇ ಸ್ವೀಕರಿಸಿ ಆತನು ತನ್ನೆಂಜಲನ್ನು ತಿನ್ನುವಂತೆಮಾಡಿ ಅವನಿಂದಲೇ ತನಗೆ ಕೊಡೆ ಹಿಡಿಸಿ ಕೊಂಡನು. ತರುವಾಯ ಅಲ್ಲಿಯ ಜನರ ಇಚ್ಛೆಯಂತೆ ಮೈಲಾರವನ್ನು ಅಲ್ಲಿಯೆ ಉಳಿಸಿ ಅವನ ಅಪೇಕ್ಷೆಯಂತೆ ಕೊಡೆಯನ್ನಿತ್ತು ಮುಂದೆ ಸಾಗಿದನು. ಅಲ್ಲಿಂದ ಮುಂದೆ ‘ಶಿವಭಾರ’ದಲ್ಲಿದ್ದ ಭೈರವನಿಂದ ವಂದಿಸಿಕೊಂಡು ನವಿಲೆಗೆ ಹಿಂತುರುಗಿ ಬಂದನು.[7]

ರಗಳೆಯಲ್ಲಿ ಹೇಳಿರುವ ಈ ಮಾರ್ಗದಲ್ಲಿ ಈ ಮಾರ್ಗದಲ್ಲಿ ಶಂಕರದಾಸಿಮಯ್ಯನು ಪ್ರಯಾಣ ಮಾಡಿರಲಿ ಅಥವಾ ಮಾಡದೆ ಇರಲಿ[8]ಆದರೆ ಕವಿ ಹರಿಹರನ ವಿಚಾರದಲ್ಲಿ ಪೆಂ (ಹೆಂ) ಬೇರು ಪಟ್ಟಣವು ಕಲ್ಯಾಣ ಮತ್ತು ನವಿಲೆಗಳ ಮಧ್ಯದಲ್ಲಿ ಇತ್ತೆಂಬುದಾಗಿ ಸ್ಪಷ್ಟಪಡುತ್ತದೆ. ಈ ಕಾರಣ ಶ್ರೀ ಹಾಲಬಾವಿಯವರು ಪೆಂಬೇರೆಂದು ಊಹಿಸಿರುವ ಪಾಲಕ್ಷೇತ್ರವು ನಿಜವಾದ ಪೆಂಬೇರಲ್ಲಂದು ಹೇಳಬೇಕಾಗುತ್ತದೆ.[9] ಪಾಲಕ್ಷೇತ್ರ ವಾದರೋ ಕಲ್ಯಾಣದ ಪಶ್ಚಿಮ ದಿಕ್ಕಿಗೆ ಸಹ್ಯಾದ್ರಿಯ ಸಾಲಿನಲ್ಲಿ ಬರುತ್ತದೆ. ಅದು ಈಗಿನ ರಾಷ್ಟ್ರೀಯ ಹೆದ್ದಾರಿ ನಂ.೪ರ ಸಮೀಪ ಕರಾಡ ಮತ್ತು ಸಾತಾರೆಗಳ ನಡುವೆ ಸಾತಾರೆಯಿಂದ ದಕ್ಷಣಕ್ಕೆ ಸು.೧೫ ಮೈಲುಗಳ ಅಂತರದಲ್ಲಿದೆ. ಚಾಲುಕ್ಯ ಸಾಮ್ರಾಟ ಜಯಸಿಂಹನು ಇದ್ದ (?) ಕಲ್ಯಾಣ ನಗರವು ಪ್ರಸ್ತುತ ಪಾಲಕ್ಷೇತ್ರದಿಂದ ಕನಿಷ್ಟ ೪೦೦ ಕಿಲೋಮೀಟರು ದೂರವಾದರೂ ಆದೀತು. ರಗಳೆಯಲ್ಲಿನ ಸಂದರ್ಭದಲ್ಲಿ ಶಂಕರದಾಸಿಮಯ್ಯ ಕಲ್ಯಾಣದಿಂದ ನವಿಲೆಗೆ ಬರುವಾಗ ಅಷ್ಟು ದೂರ ಪಶ್ಚಿಮಕ್ಕೆ ಹೋದನೆಂದು ಊಹಿಸುವುದು ತೀರ ಅಸಂಮಜಸವೆನಿಸುತ್ತದೆ. ಆದ್ದರಿಂದ ಕಲ್ಯಾಣ – ನವಿಲೆಗಳ ನಡುವೆ ಎಲ್ಲಿಯೋ ಒಂದೆಡೆ ‘ಲೋಕವರ್ಚಿಸುವ ಮೈಲಾರನ’ ಪ್ರಸಿದ್ಧ ಕ್ಷೇತ್ರವೊಂದು ಬಸವಣ್ಣ – ಹರಿಹರನ ಕಾಲದಲ್ಲಿ ಇದ್ದಿರಬೇಕು. ಮತ್ತು ಅದು ಪೆಂ (ಹೆಂ) ಬೇಱು ಎಂದು ಹೆಸರಾಗಿರಬೇಕು.

ಪ್ರಾಚೀನಕಾಲದಲ್ಲಿ ಮೈಲಾರಲಿಂಗ ಬಹು ಜನಪ್ರಿಯವಾಗಿದ್ದ ದೇವರೆಂಬುದಂತೂ ಸ್ಪಷ್ಟವಿದೆ. ನಾನು ಒಂದೆಡೆಯಲ್ಲಿ[10]ಈಗಾಗಲೇ ಪ್ರಸ್ಥಾಪಿಸಿರುವಂತೆ ಹನ್ನೊಂದನೆಯ ಶತಮಾನದ ವೇಳೆಗಾಗಲೇ ಈಗಿನ ಹೈದರಾಬಾದ ಪ್ರದೇಶದಿಂದ ದಕ್ಷಿಣದ ತುಂಗಭದ್ರೆಯವರೆಗಿನ ಪ್ರದೇಶದಲ್ಲಿ ಮೈಲಾರದೇವರು ಪೂಜೆಗೊಳ್ಳುತ್ತಿದ್ದ. ಹಲವು ಜನ ವಚನಕಾರನೂ, ನಯಸೇನ – ಬ್ರಹ್ಮಶಿವರಂಥ ಜೈನಮತ ಪ್ರತಿಪಾದಕರೂ ಮೈಲಾರ ಮಾಳಚಿಯವರನ್ನು ಪದೇ ಪದೇ ಉಲ್ಲೇಖಿಸುವುದನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಆದುದರಿಂದ ಆ ಕಾಲಕ್ಕಾಗಲೇ ಈ ವಿಸ್ತಾರವಾದ ಪ್ರದೇಶದಲ್ಲಿ ಮೈಲಾರ ದೇವರ ಹಲವಾರು ದೇವಾಲಯಗಳು ಇದ್ದರಿಬೇಕು. ಈಗಂತೂ ಇವೆ.

ಒಟ್ಟು ಕರ್ನಾಟಕದಲ್ಲಿ ಮೈಲಾರಲಿಂಗ ದೇವಸ್ಥಾನಗಳ ಸಂಖ್ಯೆ ಸು.೫೦೦ರಷ್ಟು ಆಗಬಹುದು. ಆದರೆ ಅವೆಲ್ಲವೂ ಮಹತ್ವದುವಲ್ಲ. ಭಕ್ತರಿಗೆ ಅತ್ಯಂತ ಪೂಜನೀಯವೆನಿಸಿ ಜಾಗೃತ ಸ್ಥಾನಗಳಾಗಿ ಪ್ರಸಿದ್ಧವಾಗಿರುವ ಕ್ಷೇತ್ರಗಳು ಕೆಲವು ಮಾತ್ರ ಇವೆ. ಉಳಿದವು ಪ್ರಾತಿನಿಧಿಕ ದೇವಾಲಯಗಳು. ಪ್ರಸಿದ್ಧ ಕ್ಷೇತ್ರಗಳು ಮತ್ತು ಪಾತಿನಿಧಿಕ ದೇವಾಲಯಗಳಲ್ಲಿ (ಈಗ) ಕಂಡುಬರುವ ಒಂದು ಪ್ರಮುಖ ವ್ಯತ್ಯಾಸವನ್ನು ಇಲ್ಲಿ ಹೇಳಬೇಕು. ಮೈಲಾರಲಿಂಗನ ದೇವಾಲಯಗಳ ಪೈಕಿ ಕೆಲವರಲ್ಲಿ ಮಾತ್ರ ಸ್ವಯಂ ಭೂ ಲಿಂಗಗಳಿವೆ. ಹಾಗೆ ಸ್ವಯಂಭೂ ಲಿಂಗಗಳಿರುವ ದೇವಾಲಯಗಳು ಜನಾಕರ್ಷಣೆಯ ಕೇಂದ್ರಗಳಾಗಿದ್ದು ಅಲ್ಲಿ ಭಾರಿ ಜನಸ್ತೋಮ ಸೇರಿ ಜಾತ್ರೆ ನಡೆಸುವುದು, ಹರಕೆ-ತೀರಿಸುವುದು ಮುಂತಾದ ಕಾರ್ಯಕ್ರಮಗಳು ಜರುಗುತ್ತವೆ. ಕಾರಣ ಅಂಥ ಒಂದು ಯಾವುದೋ ಕ್ಷೇತ್ರ ನವಿಲೆ ಮತ್ತು ಕಲ್ಯಾಣಗಳ ನಡುವೆ ಅಂದು ಇದ್ದಿರಬೇಕು.

ಸದ್ಯ ಕೃಷ್ಣಾತೀರದ ನವಿಲೆ ಮತ್ತು ಕಲ್ಯಾಣಗಳ ನಡುವೆ (ಕರ್ನಾಟಕದ ಭಾಗದಲ್ಲಿ) ಮೈಲಾರಲಿಂಗನ ಸ್ವಯಂಭೂ ಲಿಂಗಗಳಿರುವ ಕ್ಷೇತ್ರಗಳು ನನಗೆ ತಿಳಿದಿರುವಂತೆ ಇವು : (೧) ಮಂಗಸೂಳಿಯ ಮಲ್ಲಯ್ಯ (ಅಥಣಿ ತಾ., ಬೆಳಗಾವಿ ಜಿ.) (೨) ದೇವರ ಹಿಪ್ಪರಿಗೆಯ ಮಲ್ಲಯ್ಯ ಅಥವಾ ರಾವುತರಾಯ (ಸಿಂದಗಿ ತಾ., ವಿಜಾಪುರ ಜಿ.) (೩) ಯಾತಗಿರಿ-ಮೈಲಾಪುರ ಮಲ್ಲಯ್ಯ (ಯಾದಗಿರಿ ತಾ., ಕಲಬುರ್ಗಿ ಜಿ.) (೪) ಪ್ರೇಮಪುರ -ಮೈಲಾರ ಅಥವಾ ಭೂತಮೈಲಾರ (ಭಾಲ್ಕಿ ತಾ., ಬೀದರ ಜಿ.) ಈ ನಾಲ್ಕು ಕ್ಷೇತ್ರಗಳು ಬಹು ಪ್ರಸಿದ್ಧವಾಗಿದ್ದು ಇಲ್ಲೆಲ್ಲ ದೊಡ್ಡ ಪ್ರಮಾಣದ ಕ್ಷೇತ್ರವು ತುಂಬ ಗಮನಾರ್ಹವಾದುದು. ಅದನ್ನು ಈಗಲೂ ಪ್ರೇಮಪುರ, ಮೈಲಾರ, ದಕ್ಷಿಣ ಕಾಶಿ, ಪ್ರೇಮಪುರ-ಮೈಲಾರ, ಭೂತ-ಮೈಲಾರ ಮುಂತಾದ ಹೆಸರುಗಳಿಂದ ಕರೆಯುವರಲ್ಲದೆ ಮಹಾರಾಷ್ಟ್ರದ ಭಕ್ತರು ಈಗಲೂ ಇದನ್ನು ‘ಪೇಂಬರ’ ಎಂದು ಹೇಳುತ್ತಾರೆ. ಅಲ್ಲದೆ ಇಡೀ ಮಹಾರಾಷ್ಟ್ರದಲ್ಲಿ ಈ ‘ಪೇಂಬರ ಕ್ಷೇತ್ರ’ವೇ ಖಂಡೋಬಾ (ಮೈಲಾರಲಿಂಗ)ನ ಮೂಲಪೀಠವೆಂದು ನಂಬುತ್ತಾರೆ. ಈ ನಂಬಿಕೆಯನ್ನು ಸಮರ್ಥಿಸುವಂತೆ ಮರಾಠಿಯಲ್ಲಿ ಹುಲುಸಾದ ಸಾಹಿತ್ಯಿಕ ಸಾಮಗ್ರಿ ಉಪಲಬ್ಧವಾಗಿದೆ. ಹದಿನಾರನೆಯ ಶತಮಾನದ ಆದಿಭಾಗದಲ್ಲಿ ರಚಿತವಾದ ಮರಾಠಿ ‘ಮಲ್ಲಾರಿ ಮಹಾತ್ಮೆ’ ಮತ್ತು ಅದರ ಮೂಲ ಆಕರವಾದ ಸಂಸ್ಕೃತ’ ಮಲ್ಲಾರಿ ಮಹಾತ್ಮೆ’ಗಳಲ್ಲಿ ಮೈಲಾರ – ಖಂಡೋಬಾನ ಮೂಲಪೀಠ ಪ್ರೇಮಪುರವೆಂದು ಹೇಳಲಾಗಿದ್ದು ಈ ಆ ಪ್ರೇಮಪುರವೆಂದರೆ ‘ಪೇಂಬರ’ವೇ ಎಂತಲೂ ಅದು (ಬೀದರ ಜಿಲ್ಲೆಯ) ಇದೇ ದೇವಸ್ಥಾನವೆಂತಲೂ ತಿಳಿದುಬರುತ್ತದೆ.* ಪ್ರಸ್ತುತ ದೇವಾಲಯದ ಪರಿಸರವನ್ನು ನೀರಿಕ್ಷಿಸಿದರೆ ಅದು ಬಹು ಪುರಾತನವಾದ ದೇವಾಲಯವೆಂಬುದು ಸ್ಪಷ್ಟಪಡುತ್ತದೆ. ಈ ಸ್ಥಳವಾಚಕಕ್ಕೆ ಮರಾಠಿಯಲ್ಲಿ ಪೇಂಬರ, ಪೇಮರ, ಪೇಮರಿ ಎಂಬಿತ್ಯಾದಿ ಪರ್ಯಾಯಗಳು ಈಗಲೂ ಪ್ರಚಾರದಲ್ಲಿವೆ. ಪೇಂಬರ ಎಂಬುದು ಹಳಗನ್ನಡದ ಪೆಂಬೇಱು ಎಂಬುದರ ಇನ್ನೊಂದು ರೂಪವೇ ಎಂಬುದರಲ್ಲಿ ಅನುಮಾನವಿಲ್ಲ. ಇದನ್ನೇ ಸಂಸ್ಕೃತೀಕರಣಗೊಳಿಸಿ ‘ಪ್ರೇಮಪುರ’ ಎಂದು ಮಾಡಿಕೊಂಡಿದ್ದಾರೆ. ಈ ಪ್ರವೃತ್ತಿ ನಮ್ಮಲ್ಲಿ ತೀರ ಸಾಮಾನ್ಯವೆಂದು ಬೇರೆ ಹೇಳಬೇಕಿಲ್ಲ. ಆದ್ದರಿಂದ ಬಸವಣ್ಣ ಹರಿಹರ ಮತ್ತು ಮಲ್ಲಿಕಾರ್ಜುನ ಕವಿ ಇವರು ಹೇಳುವ ಪೆಂ (ಹೆಂ) ಬೇರೆಂದರೆ ಬೀದರ ಜಿಲ್ಲೆಯ ಈ ಕ್ಷೇತ್ರವೆಂದೇ ತಿಳಿಯಬೇಕು.

ಇಲ್ಲಿ ಶ್ರೀಹಾಲಬಾವಿಯವರು ಹೇಳಿರುವ ಒಂದೆರಡು ಸಂಗತಿಗಳನ್ನು ಕುರಿತು ವಿವರಿಸುವುದು ಅವಶ್ಯಕವೆಂದು ಕಾಣುತ್ತದೆ. ಅವರು ಕರಾಡ ಸಮೀಪದ ಪಾಲ ಅಥವಾ ಪಾಲಿಕ್ಷೇತ್ರಕ್ಕೆ ಪೇಂಬರ ಎಂದು ಹೆಸರಿರುವುದನ್ನು ಸೂಚಿಸಿದ್ದಾರೆ.[11] ಆ ಭಾಗದ ಜನ ಆ ಕ್ಷೇತ್ರವನ್ನು ಪಾವಿ-ಪೇಂಬರ ಎಂದು ಕರೆಯುವುದನ್ನು ಅವರೇ ತಿಳಿಸುತ್ತಾರೆ. ಹಾಗೆ ಆ ಕ್ಷೇತ್ರ ಪಾಲಿ-ಪೇಂಬರ ಎಂದಾಗಲು ಪೇಂಬರ (ಪ್ರೇಮ ಪುರ)ದ ದೇವರು ಪಾಲಿಯಲ್ಲಿ ಪ್ರಕಟಗೊಂಡದ್ದೇ ಕಾರಣ. ಪಾಲಿಯ ಗೌಳಿಗಿತ್ತಿಯೊಬ್ಬಳ[12]ಭಕ್ತಿಗೆ ಮೆಚ್ಚಿ ಮೈಲಾರಲಿಂಗನು ಸ್ವಯಂಭೂಲಿಂಗರೂಪದಲ್ಲಿ ಆ ಕ್ಷೇತ್ರದಲ್ಲಿಪ್ರಕಟವಾದನಂತೆ. ಈ ನಂಬಿಕೆ ಇಡಿ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿದೆ.[13]

ಖಂಡೋಬಾ ಕ್ಷೇತ್ರಗಳು ಮಹಾರಾಷ್ಟ್ರದಲ್ಲಿ ಸ್ಥಾಪಿತವಾದ ಕ್ರಮವನ್ನು ಕೂಡ ಅಲ್ಲಿನ ಜನ ಹೇಳುತ್ತಾರೆ. ಆ ಕ್ರಮ ಹೀಗಿದೆಯಂತೆ; ಪ್ರೇಮಪುರ (ಪೇಂಬರ)ದಿಂದ ಮೊದಲು ದೇವರು ಮಾಲೆಗಾಂವಕ್ಕೆ ಹೋಗಿ ನೆಲಸಿದನು. ಇದು ನಾಂದೇಡ ಜಿಲ್ಲೆಯಲ್ಲಿದೆ. ಅಲ್ಲಿಂದ ಉಸ್ಮಾನಾಬಾದ ಜಿಲ್ಲೆಯ ನಳದುರ್ಗುಕ್ಕೆ ಹೋದನು. ತರುವಾಯ ಸಾತಾರ ಜಿಲ್ಲೆಯ ಪಾಲಿಗೂ ತದನಂತರ ಜಜೂರಿ, (ಪುಣೆಜಿಲ್ಲೆ)ಗೂ ಹೋದನು. ಇದು ಬೀದರ-ಮೈಲಾರದಲ್ಲಿರುವ ಸ್ಥಾನಿಕರು ನನಗೆ ಹೇಳಿದ ಕ್ರಮ. ಆದರೆ ರಾ.ಚಿಂ.ಢೇರೆ ಎಂಬ ವಿದ್ವಾಂಸರು ಸ್ವಲ್ಪ ಬೇರೆಯಾದ ರೀತಿಯಲ್ಲಿ ಈ ಕ್ರಮವನ್ನು ಹೇಳಿದ್ದಾರೆ.[14] ಅವರ ಪ್ರಕಾರ ಪ್ರೇಮಪುರ (ಪೇಂಬರ) > ಪಾಲಿ > ನಳದುರ್ಗ > ಜಜೂರಿ ಈ ಕ್ರಮದಲ್ಲಿ ದೇವಾಲಯಗಳು ನಿರ್ಮಾಣಗೊಂಡವು. ಮಹಾರಾಷ್ಟ್ರದಲ್ಲಿ ಈ ನಂಬಿಕೆ ಸಾರ್ವತ್ರಿಕವಾಗಿದೆಯಂತೆ. ಒಟ್ಟಿನಲ್ಲಿ ಹೇಳಬೇಕೆಂದರೆ ಬೀದರೆ ಜಿಲ್ಲೆಯ ಪ್ರೇಮಪುರವೇ ಮೂಲ ಪೇಂಬರ ಎಂಬುದು ಮಹಾರಾಷ್ಟ್ರದಲ್ಲಿ ನಿರ್ವಿವಾದ ವಿಷಯವಾಗಿದೆ. ಈ ಕಾರಣದಿಂದಲೇ ಪಾಲಿಗೆ ‘ಪಾಲಿ-ಪೇಂಬರ’ ಎಂದು ಹೆಸರುಂಟಾದುದು. ಎಂದರೆ ಅದು ಮತ್ತೊಂದು ಪೇಂಬರವಾಯಿತು.

ಎರಡನೆಯದಾಗಿ ಪಾಲಿಯ ದೇವಾಲಯದ ಸ್ವಯಂಭೂಲಿಂಗದ ಮೇಲೆ ಆಚ್ಛಾದಿಸಿರುವ ಹಿತ್ತಾಳಿಯ ಮುಖವಾಡದಲ್ಲಿನ ಪ್ರಭಾವಳಿಯಲ್ಲಿ ಕೊಡೆಯೊಂದು ಇರುವ ವಿಷಯ.[15] ಶಂಕರದಾಸಿಮಯ್ಯನು ಮೈಲಾರನಿಂದ ಕೊಡೆ ಹಿಡಿಸಿಕೊಂಡು ತರುವಾಯ ಇದೇ ಕೊಡೆಯನ್ನು ಅವನ ಅಪೇಕ್ಷೆಯಂತೆ ಅವನಿಗೇ ಹಿಂತಿರುಗಿ ಕೊಟ್ಟನೆಂದು ರಗಳೆ ಮತ್ತು ಪುರಾಣಗಳಲ್ಲಿ ವರ್ಣನೆ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಭಾವಳಿಯಲ್ಲಿನ ಕೊಡೆಗೆ ಅವರು ಮಹತ್ವವಿತ್ತಿದ್ದಾರೆ. ಶ್ರೀ ಹಾಲಬಾವಿಯವರು ನೋಡಿದಾಗ ಪಾಲಿ ದೇವಾಲಯದ ಕೊಡೆ ಇದ್ದುದು ಹಾಗೂ ಈಗಲೂ ಅದು ಇರುವುದು ನಿಜ ಸಂಗತಿಯಾದರೂ ಅದು ತೀರ ಚಿಕ್ಕದಾಗಿದೆ. ಅದೇ ರೀತಿ ಅಲ್ಲಿನ ಒಟ್ಟು ಪರಿಸರದಲ್ಲಿ ಆ ಕೊಡೆ ನಗಣ್ಯವಾಗಿದೆ. ಕಾರಣ ರಗಳೆ (ಮತ್ತು ಪುರಾಣ)ಯಲ್ಲಿ ಹೇಳಿರುವ ಕೊಡೆಗೂ ಸಂಬಂಧ ಕಲ್ಪಿಸುವುದು ಅನಗತ್ಯವೆಂದೇ ಹೇಳಬೇಕು.

ಒಟ್ಟು ಮೈಲಾರಲಿಂಗನ ಸಂಪ್ರದಾಯ ಮತ್ತು ಕುರುಬ ಜನಾಂಗದ ಸಂಪ್ರದಾಯಗಳಲ್ಲಿ ಕೆಲವೊಂದು ವಸ್ತುಗಳಿಗೆ ವಿಶೇಷ ಮಹತ್ವವಿರುವುದು ಕಂಡುಬರುತ್ತದೆ. ಅವುಗಳಲ್ಲಿ ಕೊಡೆ ಅಥವಾ ‘ಸತ್ತಿಗೆ’ಯೂ ಒಂದು. ಕುರುಬರ ದೇವರುಗಳಾದ ಬೀರ, ಕರಿಸಿದ್ಧ, ಇಟ್ಟಪ್ಪ, ಮೊದಲಾದ ದೇವರುಗಳಿಗೆ ‘ಸತ್ತಿಗೆ’ ಎಂದು ಕರೆಯಲಾಗುವ ದೊಡ್ಡ ಕೊಡೆಯೊಂದು ಇದ್ದೇ ಇರುತ್ತದೆ. ಹಾಗೂ ಆ ಜನಾಂಗದ ಜನರು ತಮ್ಮ ಲಗ್ನ ಮುಂತಾದ ಮುಖ್ಯ ಕಾರ್ಯಗಳನ್ನು ಆ ಸತ್ತಿಗೆಯ ನೆರಳಿನಲ್ಲಿಯೆ ನೆರವೇರಿಸುವ ಪದ್ಧತಿ ಈಗಲೂ ರೂಢಿಯಲ್ಲಿದೆ. ಮೈಲಾರ ದೇವರ ಸಂಪ್ರದಾಯದಲ್ಲಿ ಕೂಡ ಕೊಡೆಗೆ ವಿಶೇಷ ಮಹತ್ವವಿದೆ. ಮೈಲಾರಲಿಂಗನ ಮುಖ್ಯ ಕ್ಷೇತ್ರಗಳಾದ ಹಿರೇ ಮೈಲಾರ (ಬಳ್ಳಾರಿ ಜಿಲ್ಲೆ) ದೇವರಗುಡ್ಡ (ಧಾರವಾಡ ಜಿಲ್ಲೆ) ಹಾಗೂ ಬೀದರ ಮೈಲಾರಗಳಲ್ಲಿ ಈಗಲೂ ಪ್ರತ್ಯೇಕ ಕೊಡೆಗಳ ಉಪಯೋಗವಿದ್ದು ಆಯಾ ದೇವಾಲಯಗಳ ಸ್ಥಾನಿಕರು ದೇವಾಲಯಕ್ಕೆ ಸಂಬಂಧಿಸಿದಂತೆ ಅಧಿಕೃತವಾದ ಯಾವ ಆಚರಣೆ ನೆರವೇರಿಸಿದರೂ ಕುದುರೆಯೊಂದರ ಮೂರ್ತಿ[16]ಮತ್ತು ಕೊಡೆಯ ಸಾನ್ನಿಧ್ಯದಲ್ಲಿಯೇ ನೆರವೇರಿಸುತ್ತಾರೆ. ಗೊರವಪ್ಪ-ಗೊರವಮ್ಮ ಮೊದಲಾದವರ ದೀಕ್ಷೆ, ಬೇರೆ ರೀತಿಯ ಹೊರೆ ಹೊರಿಸುವುದು, ಭಕ್ತರ ಮಕ್ಕಳ ಜವಳ ತೆಗೆಯುವುದು ಭಂಡಾರ ಛಟ್ಟಿಯಲ್ಲಿ ಭಂಡಾರ ಹಂಚುವುದು ಕಾರಣಿಕ ಹೇಳುವುದು ಮುಂತಾದ ಪ್ರಮುಖ ಆಚರಣೆಗಳೆಲ್ಲವೂ ಆ ಕೊಡೆಯ ನೆರವಿನಿಂದಲೇ ನಡೆಯಬೇಕು. ಕುರುಬ ಜನಾಂಗಕ್ಕೆ ಮಾತ್ರ ಸೀಮಿತವಾಗಿರುವ ಬೀರ, ಕರಿಸಿದ್ಧ ಮೊದಲಾದ ದೇವರು ಗಳಿಗೂ ಕೊಡೆ ಅವಶ್ಯವಾಗಿರುವಂತೆ ಡೊಳ್ಳಿನ ಪ್ರತಿಯೊಂದು ವಾಲಗದಲ್ಲಿ ಕೊಡೆಯೊಂದು ಇದ್ದೆ ಇರುತ್ತದೆ. ಇದನ್ನೆಲ್ಲ ನೋಡಿದಾಗ ಶಂಕರದಾಸಿಮಯ್ಯ ನಂಥವರು ಕೊಟ್ಟದ್ದರಿಂದಲೇ ಮೈಲಾರ ದೇವರಿಗೆ ಕೊಡೆಯುಂಟಾಯಿತೆಂದು ಬಾವಿಸುವ ಅವಶ್ಯಕತೆ ಉಳಿಯುವುದಿಲ್ಲ. ಈ ಕಲ್ಪನೆಗೆ ಮೂಲವಾಗಿರುವಂತೆ ತೋರುವ ಬಸವಣ್ಣನವರ ವಚನದಲ್ಲಿಯೂ ಕೊಡೆಯ ಸ್ಪಷ್ಟ ಉಲ್ಲೇಖವಿಲ್ಲ. ಆ ಸಂಪ್ರದಾಯದಲ್ಲಿ ಕೊಡೆ ಪ್ರಮುಖ ಪಾತ್ರ ವಹಿಸುತ್ತಿದ್ದುದನ್ನು ಕಂಡ ಹರಿಹರನಂಥ ಕವಿಗಳು ಹಾಗೆ ಚಿತ್ರಿಸಿದ್ದಾರಷ್ಟೆ. “ಶಂಕರ ದಾಸಿಮಯ್ಯ ಶಿವನ ಅವತಾರವೆಂದು ಜನರು ನಂಬಿದ್ದರಿಂದ ಪಿಂಬೇರಿನ ಮೈಲಾರ ಶಂಕರದಾಸಿಮಯ್ಯನಿಗೇ ಕೊಡೆ ಹಿಡಿದು ಊಳಿಗವನ್ನೆಸಗಿದ ಎಂಬ ಕತೆ ಕಲ್ಪಿತವಾಯಿತು” ಎಂದಿರುವ ಡಾ || ಚಿದಾನಂದ ಮೂರ್ತಿಯ ಹೇಳಿಕೆ ಈ ನಿಟ್ಟಿನಲ್ಲಿ ಸಮರ್ಥನೀಯವೇ. ಆದ್ದರಿಂದ ಪೆಂ (ಪಿಂ) ಬೇರು ಕ್ಷೇತ್ರವನ್ನು ನಿಶ್ಚಯಗೊಳಿಸಲು ಕೊಡೆಯೂ ಒಂದು ಆಧಾರವೆಂದು ಶ್ರೀ ಹಾಲಬಾವಿಯವರು ಭಾವಿಸಿದ್ದು ಅಸಮಪರ್ಕವೆಂಬುದು ಸ್ಪಷ್ಟ. ಒಟ್ಟು ಮೇಲಿನ ಸಂಗತಿಗಳ ಬೆಳಕಿನಲ್ಲಿ ನೋಡಿದಾಗ ಶಂಕರ ದಾಸಿಮಯ್ಯನು ಭೆಟ್ಟಿಕೊಟ್ಟಿರಬಹುದಾದ ಅಥವಾ ಬಸವಣ್ಣನವರು ಉಲ್ಲೇಖಿಸಿರುವ ಪಿಂ (ಪೆಂ) ಬೇಱು (ರು) ಬೀದರಜಿಲ್ಲೆಯ ಪ್ರೇಮಪುರ-ಮೈಲಾರ ಕ್ಷೇತ್ರವೇ ಎಂದು ತಿಳಿಯಲಡ್ಡಿಯಿಲ್ಲ.

 

[1]ಎಂ.ಚಿದಾನಂದಮೂರ್ತಿ -‘ಸಂಶೋಧನ ತರಂಗ’ -ಭಾಗ-೨, ೧೯೭೧, ಬೆಂಗಳೂರು ವಿ.ವಿ.ಪುಟ ೨೦೭.

[2] i) ಬಸವಣ್ಣನವರ ಷಟ್ಸ್ಥಳದ ವಚನಗಳು, ಸಂ, ಶಿ. ಶಿ, ಬಸವನಾಳ, ೧೯೬೩, ವಚನ ಸಂಖ್ಯೆ ೫೬೮

ii) ಬಸವಣ್ಣನವರ ವಚನಗಳು: ಸಂ.ಆರ್.ಸಿ.ಹಿರೇಮಠ ಕ.ವಿ.ವಿ. ಧಾರವಾಡ, ೧೯೬೯, ನಂ. ೫೬೫೯. ಈ ಸಂಪಾದನೆಯಲ್ಲಿ ಪ್ರಸ್ತುತ ವಚನದ ಪಾಠ ಸ್ವಲ್ಪ ಬೇರೆಯಾಗಿದ್ದು ಅದರಲ್ಲಿ ಪಿಂಬೇರ ಎಂಬುದಕ್ಕೆ ಬದಲು ‘ಪಿಂಬೆಱ’ ಎಂಬ ಪಾಠವಿದೆ.

[3] Journal of the Karnataka University Vol. iii-ii

[4]ಶಂಕರದಾಸಿಮಯ್ಯ ಪುರಾಣ. ಸಂ.ವಿ.ಬ. ಹಾಲಬಾವಿ. ಪ್ರಸ್ತಾವನೆ.

[5]ಅ.ಟಿ. ೧

[6]ಆ.ಠೀ. ೪. ಫೂಠ ೪೫

[7]ನೂತನ ಪುರಾತನರ ರಗಳೆಗಳು-೧೯೭೬, ಸಂ.ಎಂ.ಎಸ್.ಸುಂಕಾಪುರ. ಕ.ವಿ.ವಿ. ಧಾರವಾಡ- ‘ಶಂಕರ ದಾಸಿಮಯ್ಯನ ರಗಳೆ’

[8]ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ ಶಂಕರ ದಾಸಿಮಯ್ಯನು ನವಿಲೆಯಿಂದ ಕಲ್ಯಾಣಕ್ಕೆ ಹೋಗುವಾಗಲೇ ಪೆಂಬೇರಿನಲ್ಲಿ ಇಳಿದುಕೊಂಡಿದ್ದನೆಂದಿದೆ. ನೋಡಿ. ಭೈ.ಕಾ.ಕ.ಸೂ.ರ.ಪುಟ ೮೪

[9]ಪಿಂಬೇರ ಎಂಬುದೂ ಅಪಪಾಠವಾಗಿದ್ದು ಬಹುಶಃ ಪೆಂಬೇಱು ಅಥವಾ ಹೆಂಬೇಱು ಎಂಬುದು ಹೆಚ್ಚು ಸರಿಯಾದ ಪಾಠವಾಗಬಹುದು.

[10]ಮೈಲಾರಲಿಂಗನ ಪದಗಳು ಭಾಗ-೧, ೧೯೮೨ – ಪುಟ viii

*ರಾ.ಚಿಂ.ಢೇರೆ ‘ಖಂಡೋಬಾ’, ೧೯೬೧. ಪು. ೮೧ ಮತ್ತು ೧೪೪

[11]ಅ.ಟಿ.೪.

[12]ಇವಳ ಹೆಸರು ‘ಪಾಲಾಯಿ’ ಎಂದು ಮಹಾರಾಷ್ಟ್ರದ ಜನ ಹೇಳುತ್ತಾರೆ.

[13] ‘ಖಂಡೋಬಾ’ ಪುಟ ೮೧

[14]ಅದೇ.

[15]ಶಂಖರ ದಾಸಿಮಯ್ಯ ಪುರಾಣ. ಪ್ರಸ್ತಾವನೆ

[16]ಭಂಡಾರ, ದೋಣೀ, ಕಬ್ಬಿಣಸರಪಣಿ, ಕೊಡೆ ಮತ್ತು ಕುದುರೆ ಈ ಮುಂತಾದ ಕೆಲವು ಸಂಕೇತಗಳು ಮೈಲಾರ ಸಂಪ್ರದಾಯದಲ್ಲಿ ಬಹು ಮುಖ್ಯಪಾತ್ರ ವಹಿಸುತ್ತವೆ.