ಶ್ರೀ ಹರಿನಿರ್ಮಿತಾ ಪ್ರಥಮಕಲ್ಪೇ ವಿಷ್ಣುಪಲ್ಲೀ ತಥಾ
ಕಲ್ಪಾಣಾಂ ತ್ರಿತಯಂ ಗತೇ ಯುಗ ಚರುಷ್ಕೇ ಸಪ್ತವಿಂಶೇ ಪುನಃ ||
ದ್ವಾಪರಾಪಗಮೇ ವಿರಾಟತನಯೇನ ಶ್ವೇತನಾಮ್ನಾಕೃತಾ |
ಗ್ರಾಮಾಣಾಂ ತ್ರಿಶತೈರ್ವೃತಾ ಷ್ಪುರಿಕರಶ್ರೀಃರಾಜಧಾನೀತ್ಯಭೂಃ ||

ಎಂದು ಶಾಸನವೊಂದರಲ್ಲಿ ಲಕ್ಷ್ಮೇಶ್ವರವನ್ನು ಕುರಿತು ಹೇಳಲಾಗಿದೆ. ಪ್ರಥಮ ಕಲ್ಪದಲ್ಲಿ ಶ್ರೀಹರಿಯಿಂದ ನಿರ್ಮಿತವಾಗಿ ವಿಷ್ಣುಪಲ್ಲಿಯೆಂಬ ಹೆಸರನ್ನು, ದ್ವಾಪರದಲ್ಲಿ ಶ್ವೇತನೆಂಬ ವಿರಾಟರಾಜನ ಮಗನಿಂದ ನಿರ್ಮಿತವಾಗಿ ಪುರಿಕರವೆಂಬ ಹೆಸರನ್ನು ಪಡೆದಿತ್ತೆಂದು ಹೇಳುವಲ್ಲಿ ಪೌರಾಣಿಕತೆಯ ಅಂಶ ಸೇರಿದ್ದರೂ ಪುಲಿಗೆಱೆಯು ಕರ್ನಾಟಕದ ಅತ್ಯಂತ ಪ್ರಾಚೀನ ಪಟ್ಟಣಗಳಲ್ಲಿ ಒಂದೆಂಬ ಸಂಗತಿಯನ್ನು ಶಾಸನದ ಈ ಪದ್ಯ ಸಮರ್ಪಕವಾಗಿ ಧ್ವನಿಸುತ್ತದೆ. ಇದು ಪ್ರಾಚೀನವಷ್ಟೆ ಅಲ್ಲ; ಪ್ರಖ್ಯಾತವೂ ಆದಪಟ್ಟಣ ಅಂದು ಕರ್ನಾಟಕದಲ್ಲಿ ಪ್ರಸಿದ್ಧವಾಗಿದ್ದ ‘ಪುಲಿಗೆಱೆ ಮನ್ನೂಱು’ ಎಂಬ ಪ್ರಾಂತ ವಿಶೇಷದ ರಾಜಧಾನಿ. ಆದುದರಿಂದ ಅದರ ಉಲ್ಲೇಖವು ಕರ್ನಾಟಕದ ಇತಿಹಾಸದ ಹಲವು ಸಂದರ್ಭಗಳಲ್ಲಿ ಬರುವುದು ಸ್ವಾಭಾವಿಕವಾಗಿದೆ. ಇದಕ್ಕೆ ಕಳಸವಿಟ್ಟಂತೆ ಕನ್ನಡ ಸಾಹಿತ್ಯದ ಅದಿಕೃತಿಗಳಾದ ಕವಿರಾಜಮಾರ್ಗ ಹಾಗೂ ವಿಕ್ರಮಾರ್ಜುನ ವಿಜಯಗಳಲ್ಲಿ ಲಕ್ಷ್ಮೇಶ್ವರದ ಸ್ಥಾನ ಮಹತ್ವ ಹಾಗೂ ಭಾಷಾವೈಶಿಷ್ಟ್ಯಗಳು ಎಡೆಪಡೆದುದು ಗಮನಾರ್ಹ. ಇಂಥ ಒಂದು ನಗರಕ್ಕೆ ಸಂಬಂಧಿಸಿದ ಸುಮಾರು ಐವತ್ನಾಲ್ಕು ಸಂಸ್ಕೃತ ಕನ್ನಡ ಶಾಸನಗಳು ದೊರೆಯುತ್ತಿರುವುದು ಅದರ ತುಂಬು ಜೀವನದ ಹರಹನ್ನು ನಿರ್ದೇಶಿಸುತ್ತದೆಯೆಂದು ಹೇಳಬಹುದು.

ಲಕ್ಷ್ಮೇಶ್ವರದಲ್ಲಿ ಸಂಬಂಧಪಟ್ಟ ಕೆಲವು ಶಾಸನಗಳು ಶಿರಹಟ್ಟಿಯ ತಾಲೂಕ ಕಚೇರಿಯ ಗೋಡೆಯಲ್ಲಿಯೂ ದೊರೆಯುತ್ತದೆ. ಈ ಸಂಗತಿಯನ್ನು ಗಮನಿಸಿದಾಗ ಈ ಗ್ರಾಮದ ಇನ್ನೂ ಕೆಲವು ಶಾಸನಗಳು ಸ್ಥಾನಾಂತರ ಹೊಂದಿ ನಷ್ಟವಾಗಿರಲು ಸಾಧ್ಯವಿದೆಯೆನಿಸುತ್ತದೆ. ಅವುಗಳ ವಿವೇಚನೆಯನ್ನು ಕೈಬಿಟ್ಟು ಲಭ್ಯವಿರುವ ಶಾಸನಗಳಿಂದ ಲಕ್ಷ್ಮೇಶ್ವರ ಗತೇತಿಹಾಸನದ ರೇಖಾಚಿತ್ರವನ್ನು ಬಿಡಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಕನ್ನಡ ಕಾವ್ಯ ಶಾಸನಗಳಲ್ಲಿ ಸಾಮಾನ್ಯವಾಗಿ ಲಕ್ಷ್ಮೇಶ್ವರದ ಉಲ್ಲೇಖ ಬರುವದು “ಪುಲಿಗೆಱೆ”ಯೆಂಬ ಹೆಸರಿನಿಂದ. ಕೆಲವೆಡೆ ಇದು ‘ಪುಲಿಕರ’ ‘ಪುಲಿಕರ’ವೆಂದೂ ರೂಪಾಂತರಗೊಂಡಿದೆ. ಲಕ್ಷ್ಮೇಶ್ವರದಲ್ಲಿ ದೊರೆಯುವ ಅತೀ ಪ್ರಾಚೀನವಾದ ಚಾಲುಕ್ಯ ದೊರೆ ಎಱೆಯಮ್ಮನ (ಕ್ರಿ.ಶ. ಸು. ೬೦೦) ಸಂಸ್ಕೃತ ಶಾಸನದಲ್ಲಿ ‘ಪುಲಿಗೆಱೆ’ಯೆಂಬ ರೂಪಕಂಡು ಬರುತ್ತದೆ. ಆದುದರಿಂದ ಪುಲಿಗೆಱೆಯೆಂಬ ರೂಪವೇ ಪ್ರಾಚೀನವಾಗಿದ್ದು ಪುಲಿಕರ, ಪುರಿಕರಗಳು ಈಚಿನ ರೂಪಗಳೆಂದು ಹೇಳಬಹುದು. ಇದಲ್ಲದೆ ಪುಲಿಗೆಱೆಯೆಂಬುದನ್ನು ಕೆಲವುಸಲ ವ್ಯಾಘ್ರಪುರವೆಂದು (ಆದಯ್ಯನ ರಗಳೆ) ಭಾಷಾಂತರಿಸಲಾಗಿದೆ. ಕಾಲಾನುಕ್ರಮದಲ್ಲಿ ಈ ಹೆಸರುಗಳು ನಿಂತುಹೋಗಿ ಲಕ್ಷ್ಮೇಶ್ವರವೆಂಬ ಹೆಸರು ರೂಢಿಗೊಂಡಿತು. ಲಕ್ಷಣ ಅಥವಾ ಲಕ್ಷ್ಮರಸನೆಂಬವನು ತನ್ನ ಹೆಸರಿನ ಶಿವಾಲಯವನ್ನು ನಿರ್ಮಿಸಿ ಅದಕ್ಕೆ ಲಕ್ಷ್ಮೇಶ್ವರ ಅಥವಾ ಲಕ್ಷ್ಮೆಣೇಶ್ವರ’ ಎಂದು ನಾಮಕರಣ ಮಾಡಿರಬೇಕು; ಮುಂದೆ ಆ ದೇವಾಲಯವೇ ಪ್ರಸಿದ್ಧವಾಗಿ ಆ ಹೆಸರು ಊರಿಗೇ ಅನ್ವಯಿಸಿರಬೇಕು. ದೇವಾಲಯಗಳನ್ನು ನಿರ್ಮಿಸಿದವರು, ಅವುಗಳಿಗೆ ತಮ್ಮ ಹೆಸರನ್ನು ಇಡುವ ಪರಂಪರೆ ಕನ್ನಡ ನಾಡಿನಲ್ಲಿ ಸಾಕಷ್ಟು ಪ್ರಚಲಿತವಿತ್ತು. ಉದಾಹರಣೆಗೆ ಅಮೃತಾಪುರದ ಅಮೃತೇಶ್ವರ, ಪಟ್ಟದಕಲ್ಲಿನ ತ್ರೈಲೋಕೇಶ್ವರ, ಕೊಪ್ಪಳದ ಜಯಧೀರ ಜಿನಾಲಯ ಮುಂತಾದವನ್ನು ಹೆಸರಿಸಬಹುದು. ಲಕ್ಷ್ಮೇಶ್ವರಕ್ಕೆ ಸಂಬಂಧಿಸಿದ, ಈಗ ಶಿರಹಟ್ಟಿ ತಾಲೂಕಾ ಕಚೇರಿಯ ಗೋಡೆಯಲ್ಲಿರುವ ಶಾಸನ (ಕ್ರಿ.ಶ. ೧೧೭೯) ದಲ್ಲಿ “ಸ್ವಯಂಭೂ ಲಕ್ಷ್ಮೇಶ್ವರ”  ದೇವರ ಉಲ್ಲೇಖವಿದೆ.[1] ಅದೇ ಶಾಸನದಲ್ಲಿ “ಕಲುವೆಸದಿಂದುದ್ಧರಿಸಲ್ಕೆ” ಎಂದಿರುವುದರಿಂದ ಈ ಶಾಸನ ರಚನೆಗಿಂತ ಮೊದಲೇ ಈ ದೇವಾಲಯವು ನಿರ್ಮಿತವಾಗಿರಬೇಕು. ಕ್ರಿ.ಶ. ೧೦೭೪ ರಲ್ಲಿ ರಚಿತವಾದ ಒಂದು ಶಾಸನದಲ್ಲಿ ಕಲ್ಯಾಣ ಚಾಲುಕ್ಯ ಚಕ್ರವರ್ತಿ ೨ನೆಯ ಸೋಮೇಶ್ವರನ ಆಳ್ವಿಕೆಯಲ್ಲಿ ಪುಲಿಗೆಱೆ ಮುನ್ನೂರನ್ನೂ ಬೆಳ್ವಲ ಮುನ್ನೂರನ್ನೂ ಮಹಾಮಂಡಲೇಶ್ವರ ಲಕ್ಷ್ಮರಸನೆಂಬುವನು ಆಳುತ್ತಿದ್ದನೆಂದು ಹೇಳಲಾಗಿದೆ.[2] ಈ ಲಕ್ಷ್ಮರಸನೇ ಬಹುಶಃ ಲಕ್ಷ್ಮೇಶ್ವರ ದೇವಾಲಯವನ್ನು ನಿರ್ಮಿಸಿರಬಹುದು. ಇದು ನಿಜವಿದ್ದಲ್ಲಿ ಸ್ವಯಂಭೂ ಲಕ್ಷ್ಮೇಶ್ವರ ದೇವಾಲಯ ಕಾರಣವಾಗಿ ಪುಲಿಗೆಱೆಯ ಹೆಸರು ಲಕ್ಷ್ಮೇಶ್ವರವೆಂದು ಪರಿವರ್ತನೆಗೊಂಡಿರಬೇಕು. ಒಬ್ಬ ವ್ಯಕ್ತಿಯ ಹೆಸರು ದೇವರಿಗೆ, ದೇವರ ಹೆಸರು ಊರಿಗೆ ಬಳಕೆಯಾದದ್ದು ಹೆಚ್ಚು ಸಂದರ್ಭಗಳಲ್ಲಿ ಕಂಡುಬರುತ್ತದೆ. ಉದಾಹರಣೆಗಾಗಿ ಹಂಪಿ, ಮೈಲಾರ, ರಾಮೇಶ್ವರ ಮುಂತಾದವು. ಈ ಪ್ರಸಂಗದಲ್ಲಿ ಕ್ರಿ.ಶ. ೧೫೪೭ರ ಒಂದು ಶಾಸನದ “ಸೀಮೆಸೀಮೆಗೆ ಶಾಸನವ ಬರಸಿ ಹುಲಿಗೆರೆ ಲಕ್ಷುಮೇಶ್ವರದ ಸೀಮೆಗೆ” “ಆ ಹುಲಿಗೆಱೆ ಲಕ್ಷ್ಮೇಶ್ವರ ನಾಡು….”, ಕ್ರಿ.ಶ. ೧೫೭೬ರ ಒಂದು ಶಾಸನದ ಹುಲಿಗೆರೆ ನಾಡ “ಲಕ್ಷ್ಮಣೇಶ್ವರದ ಗೌಡಗೆರೆ”, ಎಂಬ ಉಲ್ಲೇಖಗಳನ್ನು ಗಮನಿಸಬಹುದು.”[3]

ಲಕ್ಷ್ಮೇಶ್ವರ ಪಿಲಿಗೆಱೆ ಮುನ್ನೂರರ ರಾಜಧಾನಿ. ಈ ಸಂಗತಿಯನ್ನು ಅನೇಕ ಶಾಸನಗಳು ದೃಢಪಡಿಸುತ್ತವೆ.[4]ಪುಲಿಗೆಱೆ ಮುನ್ನೂರು ಎಂದರೆ ಮೂರುನೂರು ಹಳ್ಳಿಗಳನ್ನೊಳಗೊಂಡ ಪ್ರದೇಶ ಅಥವಾ ರಾಜಕೀಯ ಘಟಕ. “ಗ್ರಾಮಾಣಾಂ ತ್ರಿಶತೈರ್ವ್ರತಾ”[5] ಎಂದರೆ ೩೦೦ ಗ್ರಾಮಗಳಿಂದ ಸುತ್ತುವರಿಯಲ್ಪಟ್ಟುದು ಎಂಬ ಒಂದು ಶಾಸನೋಕ್ತ ಹೇಳಿಕೆ ಇದಕ್ಕೆ ಪೋಷಕವಾಗಿದೆ. ಈ ನಾಡು ಅಸ್ತಿತ್ವಕ್ಕೆ ಬಂದ ಸಮಯವನ್ನು ಹೇಳುವುದು ಕಠಿಣ. ಕ್ರಿ.ಶ. ೮೬೬ರ ಶಿಗ್ಗಾವಿಯ ಶಾಸನವು “ಪುಲಿಗೆಱೆ ಮುನ್ನೂಱು” ಎಂದು ಉಲ್ಲೇಖಿಸುತ್ತದೆ.[6] ಲಕ್ಷ್ಮೇಶ್ವರದಲ್ಲಿ ದೊರೆತ ಕ್ರಿ.ಶ. ೬೮೩ರ ಚಾಲುಕ್ಯ ವಿನಯಾದಿತ್ಯನ ಶಾಸನವು ಬೆಳುವಲ ಮುನ್ನೂರನ್ನು ಹೆಸರಿಸುತ್ತದೆ. ಇವೆರಡು ಪ್ರಾಂತಗಳೂ ಏಕಕಾಲಕ್ಕೆ ಅಸ್ತಿತ್ವದಲ್ಲಿ ಬಂದಿರುವ ಸಂಭವ ಹೆಚ್ಚು. ಇವುಗಳಲ್ಲಿ ಪ್ರಸ್ತುತ ಮುನ್ನೂರು ಅಂದಿನಿಂದ ೧೬ನೆಯ ಶತಮಾನದ ಅಂತ್ಯದವರೆಗೆ ನಿರ್ದಿಷ್ಟವಾದ ಪ್ರಾಂತವಾಗಿತ್ತೆಂದು ಹೇಳಬಹುದು.[7]

ಹದಿನಾರನೆಯ ಶತಮಾನದ ಮಧ್ಯದಲ್ಲಿ ವಿಜಯನಗರವು ಪತನವಾಗಿ ಕನ್ನಡನಾಡಿನ ಎಲ್ಲ ಪರಂಪರೆಗಳೂ ಹಾಳಾದವೆಂಬುದನ್ನು ಗಮನಿಸಿದರೆ ಅದರ ಅಳಿವಿನೊಂದಿಗೆ ಪುಲಿಗೆರೆ ಮುನ್ನೂರು ಪ್ರಾಂತವೂ ಕಣ್ಮರೆಯಾಯಿತೆಂದು ಹೇಳಬಹುದು. ಒಟ್ಟಿನಲ್ಲಿ ಈ ಪ್ರಾಂತವು ಸು. ೯೦೦ ವರ್ಷಗಳವರೆಗೆ ಅಸ್ತಿತ್ವದಲ್ಲಿದ್ದಿತೆಂದೂ ಪುಲಿಗೆರೆ ಅಥವಾ ಲಕ್ಷ್ಮೇಶ್ವರ ಅದರ ರಾಜಧಾನಿಯಾಗಿತ್ತೆಂದೂ ಈವರೆಗಣ ವಿವೇಚನೆಯಿಂದ ಸ್ಪಷ್ಟವಾಗುತ್ತದೆ.

ಪ್ರಾಚೀನ ಕರ್ನಾಟಕದ ಪ್ರಬಲ ಮತಗಳಲ್ಲಿ ಜೈನ ಧರ್ಮವು ಒಂದು. ಆ ಕಾಲದ ಜೈನಕೇಂದ್ರಗಳಲ್ಲಿ ಲಕ್ಷ್ಮೇಶ್ವರವು ಗಮನಾರ್ಹವೆನಿಸಿತ್ತು. ಇಲ್ಲಿಯ ಅರ್ಧದಷ್ಟು ಶಾಸನಗಳು ಜೈನಧರ್ಮಕ್ಕೆ ಸಂಬಂಧಪಟ್ಟಿರುವುದು ಇದಕ್ಕೆ ಸಾಕ್ಷಿ. ಮೇಲಾಗಿ ಲಕ್ಷ್ಮೇಶ್ವರದ ಅತ್ಯಂತ ಪ್ರಾಚೀನ ಶಾಸನವು ಜಿನಮತಕ್ಕೆ ಸಂಬಂಧಿಸಿದ್ದು ಗಮನಿಸಬೇಕಾದ ಸಂಗತಿ.[8] ಇಲ್ಲಿಯ ಜಿನಾಲಯಗಳಲ್ಲಿ ಶಂಕಬಸದಿಯು ಅತಿ ಪ್ರಾಚೀನವಾದದ್ದು. ಈ ಬಸದಿಗಳು ಜೈನಮತದ ಮೂಲಸಂಘಕ್ಕೆ ಸಂಬಂಧಿಸಿದುವೆಂಬುದಕ್ಕೆ ಹಲವು ಶಾಸನಗಳಲ್ಲಿ ಆಧಾರವಿದೆ.[9] ಅಶ್ವವೇಧಾದಿಯಾಗಗಳನ್ನು ಮಾಡಿದ ಬಾದಾಮಿ ಚಾಲುಕ್ಯರು ಇಲ್ಲಿಯ ಜೈನ ಬಸದಿಗಳಿಗೆ ಉದಾರ ನೆರವು ನೀಡಿದ ಬಗೆಗೆ ಶಾಸನೋಲ್ಲೇಖಗಳಿವೆ. ಲಕ್ಷ್ಮೇಶ್ವರ ಆನೆಸಜ್ಜೆ ಬಸದಿಯನ್ನು ಕಟ್ಟಿಸಿದವಳು ವಿಜಯಾದಿತ್ಯ ಚಕ್ರವರ್ತಿಯ ತಂಗಿ ಕುಂಕುಮ ಮಹಾದೇವಿಯೆಂಬುದು ಇಲ್ಲಿ ಅವಶ್ಯ ಗಮನಿಸಬೇಕಾದ ಅಂಶ.

೧೨ನೆಯ ಶತಮಾನದ ಕರ್ನಾಟಕದಲ್ಲಿ ಶೈವ ಮತವು ಪ್ರಬಲವಾಗಿ ಅಂದಿನಿಂದ ಲಕ್ಷ್ಮೇಶ್ವರದಲ್ಲಿ ಶೈವ ದೇವಾಲಯಗಳು, ಶೈವ ಮತಕ್ಕೆ ಸಂಬಂಧಿಸಿದ ಶಾಸನಗಳು ಹುಟ್ಟ ತೊಡಗಿದವು. ಪ್ರಸಿದ್ಧವಾದ ಸೋಮೇಶ್ವರ ದೇವಾಲಯಕ್ಕೆ ಸಂಬಂಧಪಟ್ಟ ಶಾಸನಗಳಲ್ಲಿ ಕ್ರಿ. ಶ. ೧೧೦೨ ರಲ್ಲಿ ಹುಟ್ಟಿದ ಆರನೆಯ ವಿಕ್ರಮಾದಿತ್ಯನ ಕಾಲದ ಶಾಸನ ಅತೀ ಪ್ರಾಚೀನವಾದದ್ದು.[10] ಸ್ವಯಂಭೂ ಸೋಮೇಶ್ವರ ದೇವಾಲಯದ ಮುದ್ದೇಶ್ವರ ದೇವರಿಗೆ ದತ್ತಿಬಿಟ್ಟ ಸಂಗತಿಯನ್ನು ಈ ಶಾಸನವು ಶ್ರುತ ಪಡಿಸುತ್ತದೆ. ಈ ಸೋಮೇಶ್ವರ ದೇವಾಲಯ ಅತೀ ಪ್ರಸಿದ್ಧವಾದುದರ ಕುರುಹಾಗಿ ಸೋಮೇಶ್ವರನನ್ನು ಸ್ವಯಂಭೂ ಸೋಮ, ದಕ್ಷಿಣ ಸೋಮ ಎಂದು ಕರೆಯಲಾಗುತ್ತಿತ್ತು. ಸೌರಾಷ್ಟ್ರದ ಸೋಮೇಶ್ವರನು ಜೋತಿರ್ಲಿಂಗಗಳಲ್ಲಿ ಒಬ್ಬನೆಂದು ಪ್ರಸಿದ್ಧನಾಗಿ ಭಾರತೀಯರೆಲ್ಲರಿಗೂ ಪೂಜ್ಯನಾಗಿದ್ದಾನೆ. ಅಷ್ಟೇ ಮಹತಿಯನುಳ್ಳ ಈ ದಕ್ಷಿಣದ ಸೋಮನಿಂದಾಗಿ ಲಕ್ಷ್ಮೇಶ್ವರವು ಅಂದು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾದ ತೀರ್ಥಕ್ಷೇತ್ರವಾಗಿತ್ತೆಂದು ಹೇಳಬಹುದು. ಹರಿಹರ ಕವಿಯ ಆದಯ್ಯನ ರಗಳೆ ಹಾಗೂ ರಾಘವಾಂಕನ ಸೋಮನಾಥ ಚಾರಿತ್ರ್ಯಗಳು ಈ ಸೋಮೇಶ್ವರನ ಪ್ರತಿಷ್ಠಾಪನೆಯನ್ನೇ ಕುರಿತಾಗಿವೆ.

ಸೌರಾಷ್ಟ್ರದಿಂದ ಲಕ್ಷ್ಮೇಶ್ವರಕ್ಕೆ ಬಂದ ತರುವಾಯ ಆದಯ್ಯನು ಹೋಜೇಶ್ವರವೆಂಬ ಶಿವಾಲಯದಲ್ಲಿ ಇಳಿದುಕೊಂಡಿದ್ದನೆಂದು ಹರಿಹರ ರಾಘವಾಂಕರಿಬ್ಬರೂ ಹೇಳುತ್ತಾರೆ. ಅಲ್ಲದೆ ಆದಯ್ಯನು ಪದ್ಮಾವತಿಯನ್ನು ಪರಿಗ್ರಹಿಸುವ ಮುನ್ನ ಅವಳಿಗೆ ಈ ಹೋಜೇಶ್ವರ ದೇವಾಲಯದ ಸ್ಥಾನಪತಿಯಿಂದ ದೀಕ್ಷೆಕೊಡಿಸಿದನಂತೆ. ಇಂದು ಊರಲ್ಲಿರುವ ಹೋಜೇಶ್ವರ ಅಥವಾ ವಾಚೇಶ್ವರ ದೇವಾಲಯವು ಚಿಕ್ಕದೇವಾಲಯವಾಗಿದ್ದರೂ ಇದು ಬಹು ಪುರಾತನವಾದುದು.

ಇದನ್ನು ಕುರಿತ ಪ್ರತ್ಯೇಕ ಶಾಸನಗಳು ದೊರೆತಿಲ್ಲವಾದರೂ ಲಕ್ಷ್ಮೇಶ್ವರ ಅತೀ ಪ್ರಾಚೀನ ಅಂದರೆ ಚಾಲುಕ್ಯ ಎಱೆಯಮ್ಮನ ಕಾಲದಲ್ಲಿ (ಕ್ರಿ.ಶ. ಸು. ೬೦೦) ಹುಟ್ಟಿದ ಶಾಸನದಲ್ಲಿ “ವಾಯವ್ಯಾಂ. ಹೋಬೇಶ್ವರ ಕ್ಷೇತ್ರಂ”[11] ಎಂಬ ಕ್ರಿ.ಶ. ೧೧೬೬ರ ಒಂದು ಶಾಸನದಲ್ಲಿ “ತೆಂಕಲ್ ಹೋಬೇಶ್ವರ ಭೂಮಿ”[12] ಎಂಬ ಉಲ್ಲೇಖಗಳಿವೆ. ಈ ಹೋಬೇಶ್ವರ ದೇವಾಲಯವೇ ಹರಿಹರ ರಾಘವಾಂಕರು ಹೇಳುವ ಹೋಜೇಶ್ವರ ದೇವಾಲಯವೆಂದು ಹೇಳಬಹುದು.[13]

ಡಾ || ಎಂ.ಎಂ. ಕಲಬುರ್ಗಿಯವರು ಇತ್ತೀಚಿನ ತಮ್ಮ ‘ಶಾಸನಗಳಲ್ಲಿ ಶಿವಶರಣರು’ ಎಂಬ ಗ್ರಂಥದಲ್ಲಿ ‘ಮೂರು ಜಾವಿದೇವ’ ಎಂಬ ಶರಣನನ್ನು ಕುರಿತು ವಿವೇಚಿಸಿದ್ದಾರೆ. ಗುಬ್ಬಿಯ ಮಲ್ಲಣಾರ್ಯನು ಹೇಳುವಂತೆ ಈತ ಬೆಂದ ತನ್ನ ಕೈಕಾಲುಗಳನ್ನು ಮರಳಿ ಪಡೆದವನು. ಸೂರ್ಯನನ್ನು ಮೇಲಿರಿಸಿದವನು. ಹಾಗೂ ಏಕಾಂತದ ರಾಮಯ್ಯನಿಗೆ ಆತನ ‘ಶಿರಸ್ಸು ಪವಾಡ’ದಲ್ಲಿ ನೆರವಾದವನು ಹಿರೇ ಮಗಲಗೇರಿಯ ಒಂದು ಹಾಗೂ ರಟ್ಟಿಹಳ್ಳಿಯ ಎರಡು ಶಾಸನಗಳಲ್ಲಿ ಒಟ್ಟು ಮೂರು ಜನ ಮೂರು ಜಾವಿದೇವರ ಉಲ್ಲೇಖ ಬರುವುದೆಂದು ಮೇಲಣ ಗ್ರಂಥದಲ್ಲಿ ಹೇಳಲಾಗಿದೆ.[14] ರಟ್ಟಿಯ ಹಳ್ಳಿಯ ಶಾಸನಗಳಲ್ಲಿ ಬರುವ ಎರಡನೆಯ ಮೂರು ಜಾವಿ ದೇವನ ಕಾಲಕ್ಕೆ ಸರಿ ಸುಮಾರಾಗಿ ಇದ್ದ ಒಬ್ಬ ‘ಮೂರು ಜಾವಿ ದೇವಮುನಿ’ಯನ್ನು ಕ್ರಿ.ಶ. ೧೨೨೭ರ ಲಕ್ಷ್ಮೇಶ್ವರ ಶಾಸನ ಉಲ್ಲೇಖಿಸುತ್ತದೆ.[15]ಈ ಶಾಸನವು ನಡುನಡುವೆ ನಷ್ಟವಾಗಿರುವುದರಿಂದ ಈ ಮೂರು ಜಾವಿ ದೇವನ ಬಗೆಗೆ ವಿವರಗಳು ಲಭ್ಯವಿಲ್ಲ “ಕೃತಬುಧವಾಂಛಿತ ದಾನಂ ಮೂರು ಜಾವಿ ದೇವಮುನಿ” ಎಂದು ಹೊಗಳಲ್ಪಟ್ಟ ಈತನು ತನ್ನ ಗುರುವಾದ ಕೇದಾರ ದೇವಯತಿಗೆ ಒಂದು ನಿವೇಶನವನ್ನು ದಾನಮಾಡಿದಂತೆ ತೋರುತ್ತದೆ. ಪ್ರಸ್ತುತದಲ್ಲಿ ಆತನನ್ನು ‘ಮುನಿ’ ಯೆಂದಿರುವುದು ಗಮನೀಯ. ಇದೇ ಕಾಲದಲ್ಲಿದ್ದ ಇನ್ನೊಬ್ಬ ‘ಭಿಕ್ಷೆಯ ಮೂಱು ಜಾವಿದೇವ’ನನ್ನು ಕಲಕೇರಿಯ ಎರಡು ಶಾಸನಗಳು ಉಲ್ಲೇಖಿಸುತ್ತವೆ.[16]

ಕಲಕೇರಿಯ ಮೂಱುಜಾವಿದೇವನು ಅಲ್ಲಿಯ ದೇವಸ್ಥಾನದ ಸ್ಥಾನಾಚಾರ್ಯ. ರಟ್ಟಹಳ್ಳಿಯವನೂ ಅಲ್ಲಿಯೇ ಸ್ಥಾನಾಚಾರ್ಯನಾಗಿದ್ದನೆಂಬುದು ಸ್ಪಷ್ಟ. ಆದುದರಿಂದ ಅವರಿಬ್ಬರೂ ಬೇರೆ ಬೇರೆ. ಲಕ್ಷ್ಮೇಶ್ವರದವನ ಗುರು ಕೇದಾರಯತಿಯಾದರೆ ರಟ್ಟಿಹಳ್ಳಿಯ ಮೂರುಜಾವಿದೇವನ ಗುರು ಲಕುಲೀಶ. ಕಾರಣ ಇವರಿಬ್ಬರೂ ಬೇರೆ ಬೇರೆ. ಇದೇ ರೀತಿ ಕಲಕೇರಿ ಹಾಗೂ ಲಕ್ಷ್ಮೇಶ್ವರದವರೂ ಬೇರೆ ಬೇರೆಯೆಂದು ತೋರುತ್ತದೆ. ಆದುದರಿಂದ ಗುಬ್ಬಿಯ ಮಲ್ಲಣಾಚಾರ್ಯನು ಹೇಳುವ ಮೂಱುಜಾವೀದೇವನು ಈ ಮೂವರಲ್ಲಿ (ಇವರಿಗಿಂತ ಪ್ರಾಚೀನರಾದ ರಟ್ಟಿಹಳ್ಳಿ ಹಿರೇಮಗಲಗೇರಿಯ ಶಾಸನಗಳಲ್ಲಿ ಉಲ್ಲೇಖಿಸಲ್ಪಟ್ಟವರನ್ನು ಕೂಡಿಸಿದರೆ ಆಗುವ ಒಟ್ಟು ಐವರಲ್ಲಿ) ಯಾರೆಂಬುದು ಸ್ಪಷ್ಟಪಡುವುದಿಲ್ಲ. ರಟ್ಟಿಹಳ್ಳಿಯ ನಂತರದ ಶಾಸನಗಳು ವೀರಶೈವ ವಾತಾವರಣವುಳ್ಳವಾಗಿವೆಯೆಂಬುದು ಹೆಚ್ಚು ಗಮನೀಯ.

S.I.I. ೨೦ನೆಯ ಸಂಪುಟ ೩೧೫ ಹಾಗೂ ೪೨೦ನೆಯ ಶಾಸನಗಳಲ್ಲಿ ಲಕ್ಷ್ಮೇಶ್ವರದಲ್ಲಿಯ ವೈಷ್ಣವ ದೇವಾಲಯದ ಉಲ್ಲೇಖಗಳಿವೆ. ಸುಮಾರು ೧೨ನೆಯ ಶತಮಾನದಲ್ಲಿ ಬರೆಯಲಾದ ೩೧೫ನೆಯ ಶಾಸನವು ಲಕ್ಷ್ಮೀನಾರಾಯಣ ದೇವರ ಪ್ರತಿಷ್ಠಾಪನೆಯನ್ನೂ ೪೨೦ನೆಯ ಶಾಸನವು ರಾಮಚಂದ್ರದೇವರ ಪ್ರತಿಷ್ಠಾಪನೆಯನ್ನೂ ಉಲ್ಲೇಖಿಸುತ್ತವೆ. ಕ್ರಿ.ಶ. ೧೧೫೩ರ ಶಾಸನವೊಂದು ಪಂಚಮಠಗಳನ್ನು ಉಲ್ಲೇಖಿಸುತ್ತದೆ. ಇಂದಿಗೂ ಊರಲ್ಲಿ ವಾಗ್ದೇವಿ ಹಾಗೂ ವೀರಭದ್ರ ದೇವಾಲಯಗಳಿವೆ. ಕ್ರಿ.ಶ ೧೧೫೩ರ ಶಾಸನದಲ್ಲಿ ರಚಿತವಾದ ಶಾಸನವೊಂದರಲ್ಲಿ ಲಿಂಗದಿಂದ ಉದ್ಭವಿಸಿದ ರೇವಣ ಅಥವಾ ಸಿದ್ಧರೇವಣನ ಉಲ್ಲೇಖ ಬರುತ್ತದೆ.[17] ಈತನು ವೀರಶೈವ ಪಂಚಾಚಾರ್ಯರಲ್ಲಿ ಒಬ್ಬನು. ಈ ಹಿಂದೆ ಹೇಳಿದಂತೆ ಆದಯ್ಯನ ರಗಳೆ ಹಾಗೂ ಸೋಮನಾಥ ಚಾರಿತ್ರಗಳು ಆದಯ್ಯನೆಂಬ ಶರಣನು ಸೌರಾಷ್ಟ್ರದಿಂದ ಸೋಮನಾಥನನ್ನು ಲಕ್ಷ್ಮೇಶ್ವರಕ್ಕೆ ತಂದು ಪ್ರತಿಷ್ಠಾಪಿಸಿದನೆಂದು ಹೇಳಿದರೆ ಸು. ೧೫ನೆಯ ಶತಮಾನದ ಶಾಸನವೊಂದು ಸೌರಾಷ್ಟ್ರದಿಂದ ಬಂದ ನಾಗೇಶ್ವರ ಗುರುವನ್ನು ಉಲ್ಲೇಖಿಸುತ್ತದೆ.[18] ಕಾಲದ ದೃಷ್ಟಿಯಿಂದ ಇದು ತೀರ ಇತ್ತೀಚಿನದು. ಕಾರಣ ಇದರ ಬಗೆಗೆ ನಿಶ್ಚಿತವಾಗಿ ಹೇಳಲು ಬರುವುದಿಲ್ಲ.[19]

ಹೀಗೆ ಲಕ್ಷ್ಮೇಶ್ವರ ಹಲವು ಮತಗಳಿಗೆ ಕೇಂದ್ರವಾಗಿ ಅವುಗಳನ್ನು ಪೋಷಿಸುತ್ತ ಬಂದಿದೆ. ಈ ಮತಗಳೆಲ್ಲ. (ಆಗಾಗ ಚಿಕ್ಕ ಪುಟ್ಟ ಜಗಳಗಳಾಗುತ್ತಿದ್ದರೂ) ಲಕ್ಷ್ಮೇಶ್ವರದ ತುಂಬು ಜೀವನದಲ್ಲಿ ಸಹಜೀವನವನ್ನು ನಡೆಯಿಸಿದ್ದವೆಂದು ಹೇಳಬಹುದು.

ಸಾಂಸ್ಕೃತಿಕವಾಗಿ ಲಕ್ಷ್ಮೇಶ್ವರ ಬಹು ಮಹತ್ವದ ಪಾತ್ರವನ್ನು ವಹಿಸಿದ ಊರು. ಕಲಚೂರಿ ಬಿಜ್ಜಳನ ಕಾಲದ ಒಂದು ಶಾಸನದಲ್ಲಿ ಶ್ರೀಧರನೆಂಬ ಅಧಿಕಾರಿ ಬ್ರಾಹ್ಮಣರಿಗಾಗಿ ಬ್ರಹ್ಮಪುರಿಯನ್ನು ನಿರ್ಮಿಸಿ ಅದನ್ನು ೫೧ ಜನರಿಗೆ ದಾನವಾಗಿತ್ತನೆಂದು ಹೇಳಲಾಗಿದೆ.[20] ಕ್ರಿ.ಶ. ೧೦೭೪ ರ ಒಂದು ಶಾಸನ ಮಣಲವಂಶದ ರಾಷ್ಟ್ರಕೂಟ ಜಯಕೇಶಿಯರಸನೆಂಬುವವನು “ಪುರ”ವನ್ನು ನಿರ್ಮಿಸಿದನೆಂದು ತಿಳಿಸುತ್ತದೆ.[21] ಇದುಜೈನ ಶಾಸನವಾದುದರಿಂದ ಪುರವು ಬ್ರಾಹ್ಮಣರ ಬ್ರಹ್ಮಪುರಿಯನ್ನು ಹೋಲುತ್ತಿರಬೇಕು. ಕ್ರಿ.ಶ. ೬೦೦ರ ಎಱೆಯಮ್ಮನ ಶಾಸನದ “ದಕ್ಷಿಣತಃ ಘಟಿಕಾಕ್ಷೇತ್ರಂ” ಎಂಬ ಉಲ್ಲೇಖದಿಂದಲೂ ಅಷ್ಟು ಪ್ರಾಚೀನ ಕಾಲದಲ್ಲಿಯೆ ಒಂದು ಘಟಿಕಾ ಸ್ಥಾನವಿತ್ತೆಂದು ಹೇಳಬಹುದಾಗಿದೆ.[22]ಕ್ರಿ.ಶ. ೧೧೨೮ ರಲ್ಲಿಯ ಒಂದು ಶಾಸನವು ಸೋಮೇಶ್ವರ ದೇವಾಲಯದಲ್ಲಿ ಘಟಿಕಾ ಸ್ಥಾನವಿತ್ತೆಂದು ಹೇಳುತ್ತದೆ. ಘಟಿಕಾ ಸ್ಥಾನ ಅಥವಾ ಘಳಿಗೆಯೆಂದರೆ ಶಾಲೆ ಅಥವಾ ವಿದ್ಯಾಲಯವೆಂದು ಅರ್ಥ.[23] ಕ್ರಿ.ಶ. ೧೧೨೨ನೆಯ ವರ್ಷದ ಶಾಸನವು ಕೌಮಾರವೆಂಬ ಸಂಸ್ಕೃತ ವ್ಯಾಕರಣ ಶಾಖೆಯ ಅಧ್ಯಾಪಕ ಹಾಗೂ ಅಧ್ಯಾಯಿಗಳನ್ನು ಉಲ್ಲೇಖಿಸುತ್ತದೆ.[24] ಹನ್ನೆರಡನೆಯ ಶತಮಾನದ ಶಾಸನಗಳಲ್ಲಿ ಕರ್ನಾಡ ಸುಕವಿ, ನಾಗಾರ್ಜುನ ಕವಿ ಸಹಜ ಕವಿ ನಾಗದೇವ ಎಂಬ ಕವಿಗಳ ಹೆಸರು ಕಂಡುಬರುತ್ತವೆ.

ಅಂದಿನ ಕರ್ನಾಟಕದಲ್ಲಿದ್ದ ಪ್ರಸಿದ್ಧ ವಣಿಕ್‌ಸಂಘ “ಅಯ್ಯಾವೊಳೆಯ ಅಯ್ನೂರ್ವರು” ಎಂಬುದು. ಇದೇ ರೀತಿಯ ಅಥವಾ ಇದಕ್ಕೆ ಬಹುಶಃ ನಿಕಟವಾದ ಸಂಬಂಧವುಳ್ಳ “ಮುಮ್ಮುರಿ ದಂಡಂಗಳು” ಎಂಬ ಒಂದು ಸಂಘಟನೆಯೂ ಅಂದು ಕನ್ನಡ ನಾಡಿನಲ್ಲಿ ಅಸ್ಥಿತ್ವದಲ್ಲಿತ್ತು. ಅದರ ಶಾಖೆಯು ಲಕ್ಷ್ಮೇಶ್ವರದಲ್ಲಿ ಇದ್ದ ಬಗೆಗೆ ಕ್ರಿ.ಶ. ೧೧೧೮ರ ಶಾಸನದಲ್ಲಿ ಉಲ್ಲೇಖವಿದೆ.[25] ಇದರಿಂದ ಲಕ್ಷ್ಮೇಶ್ವರವು ಅಂದು ವ್ಯಾಪಾರ ವ್ಯವಹಾರಗಳಲ್ಲಿಯೂ ಪ್ರಾಮುಖ್ಯವನ್ನು ಪಡೆದ ಪಟ್ಟಣವಾಗಿತ್ತೆಂದು ಹೇಳಬಹುದು.

ಕವಿರಾಜ ಮಾರ್ಗದಲ್ಲಿ ತಿರುಳ್‌ಗನ್ನಡ ನಾಡನ್ನು ಕುರಿತು ಹೀಗೆ ಹೇಳಲಾಗಿದೆ.

ಕಾವೇರಿಯಿಂದಮಾಗೋ
ದಾವರಿವರಮಿರ್ದನಾಡದಾ ಕನ್ನಡದೊಳ್
||
ಭಾವಿಸಿದ ಜನಪದಂ ವಸು
ಧಾವಳಯ ವಿಲೀನ ವಿಶದ ವಿಷಯ ವಿಶೇಷಂ
||
ಅದರೊಳಗಂ ಕಿಸುವೊಳಲಾ
ವಿದಿತ ಮಹಾಕೊಪಣ ನಗರದಾ ಪುಲಿಗೆಱೆಯಾ
||
ಸದಭಿಸ್ತುತಮಪ್ಪೊಂಕುಂ
ದದ ನಡುವಣ ನಾಡೆನಾಡೆ ಕನ್ನಡದ ತಿರುಳ್
||

ಭೂಮಂಡಲದಲ್ಲಿ ಪ್ರಸಿದ್ಧವಾದ ನಾಡು ಕರ್ನಾಟಕ. ಅದು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದೆ. ಅದರಲ್ಲಿ ಒಕ್ಕುಂದ, ಪಟ್ಟದಕಲ್ಲು, ಕೊಪ್ಪಳ ಹಾಗೂ ಪುಲಿಗೆಱೆಗಳ ನಡುವಿದೆ ನಿರುಳ್ಗನ್ನಡನಾಡು ಎಂದು ಈ ಪದ್ಯಗಳ ಒಟ್ಟು ಅಭಿಪ್ರಾಯ. ಈ ನಾಲ್ಕೂ ಊರುಗಳು ಪುಲಿಗೆರೆ ಮುನ್ನೂರು ಹಾಗೂ ಬೆಳ್ವೊಲ ಮುನ್ನೂರುಗಳಲ್ಲಿ ಬರುವವೆಂದು ವಿದ್ವಾಂಸರ ಮಾತು.[26] ಆದುದರಿಂದ ಆ ಕಾಲದಲ್ಲಿ ಪುಲಿಗೆರೆಯ ಕನ್ನಡವು ಶ್ರೇಷ್ಠವಾದುದೆಂದು ಮನ್ನಣೆ ಪಡೆದಿರಲು ಸಾಕು. ಪಂಪನಂತೂ ‘ರಾಜದ್ರಾಜಕಮೆನಿಸಿದ ಸಾಜದ ಪುಲಿಗೆರೆಯ ತಿರುಳಕನ್ನಡ’ದಲ್ಲಿ ತನ್ನ ವಿಕ್ರಮಾರ್ಜುನ ವಿಜಯವನ್ನು ಬರೆದುದಾಗಿ ಹೇಳುತ್ತಾನೆ. ಇದರಿಂದ ಲಕ್ಷ್ಮೇಶ್ವರವು ಕನ್ನಡ ಸಾಹಿತ್ಯಕ್ಕೆ ಪ್ರಮಾಣಭೂತವಾದ ಭಾಷೆಯನ್ನೊದಗಿಸಿಕೊಟ್ಟ ಕೇಂದ್ರ ಪಟ್ಟಣವಾಗಿತ್ತೆಂದು ಹೇಳಬಹುದು.

ಭಾಷೆಯ ದೃಷ್ಟಿಯಿಂದ ಲಕ್ಷ್ಮೇಶ್ವರದ ಶಾಸನಗಳು ಪ್ರಾರಂಭದಲ್ಲಿ ಹೆಚ್ಚಾಗಿ ಸಂಸ್ಕೃತದಲ್ಲಿವೆ. ೧೧-೧೨ನೆಯ ಶತಮಾನದ ಶಾಸನಗಳು ಕನ್ನಡದಲ್ಲಿವೆ. ಇವು ಬಿಂಬಿಸುತ್ತವೆ. ಇವುಗಳಲ್ಲಿ ಸಾಹಿತ್ಯಗುಣದಿಂದ ಕೂಡಿದವು ೧೨ನೆಯ ಶತಮಾನದ ಶಾಸನಗಳು ಕ್ರಿ.ಶ. ೧೧೫೨ ರಲ್ಲಿ ರಚಿತವಾದ ಶಾಸನವು-

ತೆವರೆಲ್ಲಂ ದೇವತಾನಿಹವಮೆ ನಿಮ್ನ ಸ್ಥಳೀರಾಜಿಯೆಲ್ಲಂ |
ಸುವಿರಾಜದ್ಧೀರ್ಘಿಕಾಸಂಕುಳಭರಿತ ಪಯಃ ಪೂರನಿರೇಜಕಾಸಾ
||
ರವೆ ಮತ್ತಂ ತತ್ಸಮಾಳಂಕೃತ ವಸುಧೆಯದೆಲ್ಲಂಲಸಚ್ಚಂದನೋದ್ಯಾ |
ನವೆನಲ್ ರಮ್ಯಂದಲೆಂದುಂ ಪುರಿಕರನಗಲೀಲೆ ಲೋಕಾವ ಲೋಕಂ ||[27]

ಎಂದು ಲಕ್ಷ್ಮೇಶ್ವರದ ಸೌಂದರ್ಯ ಶೋಭೆಯನ್ನು ಬಣ್ಣಿಸುತ್ತದೆ. ಅದೇ ಶಾಸನದ ಮತ್ತೊಂದು ಪದ್ಯದಲ್ಲಿ ಶಿವಲಿಂಗಕ್ಕೆ ಒಂದು ಕಾಳುಹಾಕಿದರೆ ಲಿಂಗಮಹಿಮೆಯಿಂದ ಒಂದು ಕೊಳಗ ತುಂಬುತ್ತದೆಂದು ಹೇಳಿದ ಅತಿಶಯೋಕ್ತಿ ಸೊಗಸಾಗಿದೆ. ನಯಸೇನಸೂರಿಯ ಕೀತಿಯಂತೂ ಅತಿಮನೋಹರವಾಗಿ ವರ್ಣಿತವಾಗಿದೆ. ಸರಸತಿಯನ್ ಮನೋಮುದದೆ ತಾಳ್ದಿದನ್, ಎನ್ನನ್ ಅವಜ್ಞೆಗೆಯ್ದೆನ್ ಆನ್ ಇರೆನ್ ಅವಳಿರ್ಕೆ ಚಿಃ ಸವತಿಯೊಳ್ ಪುದುವಾಳ್ವುದು ಕಷ್ಟಂ ಎಂದು ನಿಷ್ಟುರ ವಚನಂಗಳಂ ನುಡಿದು ದಿಕ್ಕರಿಯಂ ಪರಿದೇರಿ ಕೀರ್ತಿತಾ ಪುರುಡಿಸಿ ದೂರಿಪಳ್ ವರತಪೋ ನಿಧಿಯಂ ನಯಸೇನಸೂರಿಯಂ[28] ನಯಸೇನ ಸೂರಿಯಲ್ಲಿರುವ ಸರಸ್ವತಿಯ ಬಗೆಗೆ ದೂರುತ್ತ ಅವನ ಕೀರ್ತಿಯೆಂಬ ಕಾಂತೆ ದಿಗ್ದೇಶಗಳಲ್ಲೆಲ್ಲ ಸುತ್ತಿದಳಂತೆ ! ಈತನು ಧರ್ಮಾಮೃತದ ಕರ್ತೃವೆಂದು ಪಂಡಿತರ ಊಹೆ. ಇನ್ನು

ಕರೆಯದಕಂಡರಿಸದ ಬೇ
ರ್ಪಡಿಸದೆ ಕಮ್ಮಯಿಸದೊಂದಕೃತ್ರಿಯ ರೂಪಂ
||

ಪಡೆದು ಸ್ವಯಂಭೂ ನೆಲದಿಂ
ದೊಡೆದುದಯಂಗೆಯ್ದನಲ್ಲಿ ದಕ್ಷಿಣಸೋಮಂ
||[29]

ನಂದಿಯು ಮಹಿಭೂಷಣ ಮುಂ
ಮಂದಾಕಿನಿಯುಂ ಜಟಾಳಿಯುಂ ಗಿರಿಜೆಯುಮ
||

ರ್ದ್ಧೇಂದುವು ವೊಪ್ಪಿರ ಲುದಯಿಸಿ
ದಂ ದಕ್ಷಿಣಸೋಮನಾಥದೇವಂ ಮುದದಿಂ
||[30]

ಈ ಪದ್ಯದಲ್ಲಿ ಸ್ವಯಂ ಭೂ ಸೋಮನ ಉದ್ಭವವನ್ನು ಸೊಗಸಾಗಿ ವರ್ಣಿಸಿದ್ದಾನೆ ಶಾಸನದ ಕವಿ.

ಲಕ್ಷ್ಮೇಶ್ವರದಲ್ಲಿ ದೊರೆಯುವ ಶಾಸನಗಳು ಕಾಲದ ದೃಷ್ಟಿಯಿಂದ ಸು. ೯೦೦ ವರ್ಷಗಳ ವ್ಯಾಪ್ತಿಯುಳ್ಳವಾಗಿಯೆಂಬುದನ್ನು ಕಂಡಿದ್ದೇವೆ. ಹೀಗಾಗಿ ಅವುಗಳಿಗೆ ಸುಮಾರು ಒಂದು ಸಾವಿರ ವರ್ಷದ ಕರ್ನಾಟಕದ ಐತಿಹಾಸಿಕ ಅಂಶಗಳನ್ನು ಹೊತ್ತುನಿಂತ ಹಿರಿಮೆ ಸಲ್ಲುತ್ತದೆ. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಗಂಗರು ಕಲ್ಯಾಣ ಚಾಲುಕ್ಯರು ಕದಂಬರು ಕಲಚುರಿಗಳು ವಿಜಯನಗರದರಸರು ಮುಂತಾದ ರಾಜ ಮನೆತನಗಳ ವಂಶಾವಳಿ, ಅವರು ಕೈಕೊಂಡ ಯುದ್ಧ, ಗಳಿಸಿದ ವಿಜಯ ರಾಜಕೀಯ ವಿಪ್ಲವ ಮುಂತಾದ ಸಂಗತಿಗಳನ್ನು ತಿಳಿಸುತ್ತವೆ. ೧೬ನೆಯ ಶತಮಾನದ ಎರಡು ಶಾಸನಗಳು ಮಹಮ್ಮದೀಯರ ಆಳಿಕೆಯನ್ನು ಹೇಳುತ್ತವೆ. ಕ್ರಿ.ಶ. ೧೫೭೬ರ ಶಾಸನ ಮುಸಲ್ಮಾನರಿಂದ ರೂಢಿಗೊಂಡ ಗೋಮಾಂಸ ಭಕ್ಷಣೆಪಾಪವನ್ನು ಫಲಶ್ರುತಿಯ ಮೂಲಕ ಉಲ್ಲೇಖಿಸುತ್ತದೆ.

ಹೀಗೆ ಲಕ್ಷ್ಮೇಶ್ವರ ಶಾಸನಗಳು ದತ್ತಿ-ದಾನಗಳು, ಮಂದಿರ ನಿರ್ಮಾಣ, ಮತಗಳ ವ್ಯಾಜ್ಯ ನಿವಾರಣೆ, ಈ ಹಲವಾರು ಸಂಗತಿಗಳನ್ನು ಖಚಿತ ಪಡಿಸುವ ಅಧಿಕೃತ ದಾಖಲೆಗಳಾಗಿವೆ. ಅವು ನಮಗೆ ಪರೋಕ್ಷವಾಗಿ ತಿಳಿಸುವ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ, ಭಾಷಿಕ, ಸಾಹಿತ್ಯಿಕ ಸಂಗತಿಗಳು ಬಹು ಬೆಲೆಯುಳ್ಳವು. ಆದುದರಿಂದ ಲಕ್ಷ್ಮೇಶ್ವರ ಧಾಸನ ಸರಸ್ಸಿನಲ್ಲಿ ಕರ್ನಾಟಕೇತಿಹಾಸದ ಭವ್ಯ ಚಿತ್ರದ ಪ್ರತಿಬಿಂಬ ಚಿಕ್ಕದಾಗಿಯಾದರೂ ಚೊಕ್ಕದಾಗಿ ಮಾಡಿನಿಂತಿದೆಯೆಂದು ಧಾರಾಳವಾಗಿ ಹೇಳಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

*ಈ ಲೇಖನಗಳನ್ನು ಸಿದ್ಧಗೊಳಿಸುವಲ್ಲಿ ಗುರುಗಳಾದ ಡಾ. ಎಂ.ಎಂ. ಕಲಬುರ್ಗಿಯವರು ನನಗೆ ಹಲವು ರೀತಿಯಿಂದ ಸಲಹೆ-ಸೂಚನೆಗಳನ್ನೂ ಇತ್ತಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

[1] S.I.I. XX. No. 167 ಕ್ರಿ.ಶ. ೧೧೭೯. ಅಲ್ಲದೆ “…..ರಾಮನನುಜನಂದು || ಚೆನ್ನಿಂ ಪ್ರತಿಷ್ಠಿಸಿದ ಲಕ್ಷ್ಮಣೇಶ್ವರಂ” ಎಂದು ಕವಿ ರಾಘವಾಂಕನು ಪೌರಾಣಿಕ ಮೂಲವನ್ನು ಹೇಳುತ್ತಾನೆ. ರಾಘವಾಂಕನ ಕಾಲ ೧೩ನೆಯ ಶತಮಾನದ ಪೂವಾರ್ಧವಾದುದರಿಂದ ಕ್ರಿ.ಶ. ೧೨೦೦ ರಷ್ಟೊತ್ತಿಗೆ ಈ ದೇವಾಲಯವು ನಿರ್ಮಾಣಗೊಂಡು ಹಲವಾರು ತಲೆಮಾರುಗಳು ಗತಿಸಿರಬೇಕು.

[2] S.I.I. Vol XX 47

[3] S.I.I. Vol XX, No. 239 & 246

[4] S.I.I. Vol XX No. 78 & 55

[5] S.I.I. Vol XX, No. 55

[6] Karnataka Inscriptions Vol. I. No. 14.

[7]ನಡುವೆ ಕೆಲಕಾಲ ಬೆಳ್ವೊಲ ಮುನ್ನೂರು ಪುಲಿಗೆಱೆ ಮುನ್ನೂರುಗಳು ಒಂದೇ ಆಡಳಿತಕ್ಕೊಳಪಟ್ಟು “ಎರಡಱುನೂಱು” ಎಂದು ಕರೆಯಲ್ಪಡುತ್ತಿದ್ದರೂ ಪುಲಿಗೆಱೆಗೆ ರಾಜಧಾನಿಯ ಸ್ಥಾನವು ಯಾವತ್ತೂ ದೊರೆತಿತ್ತೆಂದು ಹೇಳಬಹುದು.

[8] S.I.I. Vol. XX. No.3

[9]ಅದೇ No. 4, 5, 47, 55, & 244.

[10] S.I.I. Vol. XX, No. 66.

[11] S.I.I.XX. No. 3

[12]ಅದೇ No. 144, ಈ ದೇವಾಲಯದ ಬಗೆಗೆ ನನ್ನ ಗಮನ ಸೆಳೆದವರು ಗುರುಗಳಾದ ಡಾ || ಕಲುಬುರ್ಗಿಯವರು.

[13]ಲಕ್ಷ್ಮೇಶ್ವರದಲ್ಲಿ ಇಂದು ಈ ದೇವಾಲಯವನ್ನು ವಾಷೇಶ್ವರ ದೇವಾಲಯವೆಂದು ಕರೆಯುವದೆಂದು ತಿಳಿದು ಬರುತ್ತದೆ. ಹಳಗನ್ನಡದ ಲಿಪಿಯಲ್ಲಿ ಚಕಾರ ಬಕಾರಗಳಲ್ಲಿಯ ವ್ಯತ್ಯಾಸವು ಸ್ಪಷ್ಟವಿರುವದಿಲ್ಲ. ಎಂತೆ ಪ್ರಸ್ತುತ ಶಾಸನಗಳ ಸಂಪಾದಕರು ‘ಹೋಚೇಶ್ವರ ಎಂಬುದನ್ನು ‘ಹೋಬೇಶ್ವರ’ ಎಂದು ಓದಿದ್ದಾರೆ. ಜನರ ಬಾಯಲ್ಲಿ ಅದು ಹೋಚೇಶ್ವರ > ಓಚೇಶ್ವರ > ವಾಚೇಶ್ವರ ಎಂಬ ಪರಿವರ್ತನೆ ಹೊಂದಿದೆ. ಕನ್ನಡ ಭಾಷೆಯಲ್ಲಿ ಹಕಾರವು ಶೂನ್ಯಧ್ವನಿಯಾಗಿ ಮಾರ್ಪಡುತ್ತದೆ. ಅಲ್ಲದೆ ಇಂದಿನ ಆಡುನುಡಿಯಲ್ಲಿ ಒ, ಓಕಾರಗಳು ‘ವ, ವಾ’ ಗಳಾಗುತ್ತವೆ. ಆದುದರಿಂದ ಈ ವಾಚೇಶ್ವರವೇ ಶಾಸನಗಳಲ್ಲಿ ಕಂಡುಬರುವ ಹೋಬೇಶ್ವರ ಸೋ. ನಾ. ಚಾ. ಹಾಗೂ ಆ, ರ, ಗಳ ಲಿಪಿಕಾರರು ‘ಚೇ’ ಬರೆಯುವ ಬದಲು ‘ಜೇ’ ಎಂದು ಬರೆದಿದ್ದಾರೆ. ಸೋ. ನಾ. ಚಾ. ದ. ೧-೧೧೭ ಹಾಗೂ ೨-೬೦ ರಲ್ಲಿ ಇದಕ್ಕೆ ‘ಮ. ಪ್ರತಿಯಲ್ಲಿ ‘ಚೇ; ಇರುವುದು ಇದನ್ನು ಸಮರ್ಥಿಸುತ್ತದೆ.

[14]ಶಾಸನಗಳಲ್ಲಿ ಶಿವಶರಣರು’ ಪುಟ ೧೦೨-೧೦೭.

[15] S.I.I. Vol. XX, No. 198

[16]ಅದೇ No. 228 & 332.

[17] S.I.I. Vol. XX, No. 390

[18]ಅದೇ No. 331.

[19]ಇದೇ ಸಂದರ್ಭದಲ್ಲಿ ಏಕಾಂತರಾಮಯ್ಯನೆಂಬ ಪ್ರಖ್ಯಾತ ಶರಣನನ್ನು ಉಲ್ಲೇಖಿಸಬಹುದು. ಆತನು ಕೆಲವು ದಿನ ಲಕ್ಷ್ಮೇಶ್ವರದಲ್ಲಿ ವಾಸವಾಗಿದ್ದನೆಂದು ಹೇಳಲು ಅಬ್ಬಲೂರ ಶಾಸನದಲ್ಲಿ ಆಧಾರವಿದೆ. ಅಲಂದೆಯಲ್ಲಿ ಹುಟ್ಟಿದ ರಾಮಯ್ಯನು ತೀರ್ಥಯಾತ್ರೆ ಮಾಡುತ್ತ ಪುಲಿಗೆರೆಗೆ ಬಂದನೆಂದೂ ಸೋಮನಾಥನು ಪ್ರತ್ಯಕ್ಷನಾಗಿ ರಾಮಯ್ಯನಿಗೆ ಅಬ್ಬಲೂರಿಗೆ ಹೋಗಲು ಅಪ್ಪಣೆಯಿತ್ತನೆಂದೂ ಅದರಿಂದ ಗೊತ್ತಾಗುತ್ತದೆ. ಬಸವಣ್ಣನ ವಂಶಜನಾದ ಕವಿಳಾಸಪುರದ ಹಾಲಬಸವಿದೇವನಿಗೆ ಚವುಡಿಸೆಟ್ಟಿಯೆಂಬ ಪ್ರಸಿದ್ಧ ದಾನಿಯು ಲಕ್ಷ್ಮೇಶ್ವರ ಸೋಮನಾಥನ ಸನ್ನಿಧಿಯಲ್ಲಿ ಹಲವು ದತ್ತಿಗಳನ್ನು ಬಿಟ್ಟನೆಂಬ ಸಂಗತಿಯು ಅರ್ಜುನವಾಡ (ತಾ. ಹುಕ್ಕೇರಿ ಜಿ. ಬೆಳಗಾವಿ) ಶಾಸನದಿಂದ ತಿಳಿಯುತ್ತದೆ.

[20] S.I.I. Vol. XX, No.144

[21]ಅದೇ No. 47

[22]ಅದೇ No. 3

[23]ಕ್ರಿ.ಶ. ೧೦೫೮ರ ನಾಗಾವಿಯ ಶಾಸನದಲ್ಲಿ “ಘಟಿಕಾ ಸ್ಥಾನವೆನಿಪ ಶಾಲೆಗೆ” ಎಂದು ಸ್ಪಷ್ಟಪಡಿಸಲಾಗಿದೆ. ಪ್ರಾರಂಭದ ಘಟಿಕಾ ಸ್ಥಾನಗಳ ನಿರ್ಮಾಣವು ಯಾವ ಉದ್ದೇಶದಿಂದಾಗುತ್ತಿತ್ತೆಂಬುದು ತಿಳಿದಿಲ್ಲವಾದರೂ ೧೦-೧೨ನೆಯ ಶತಮಾನದ ಘಟಿಕಾ ಸ್ಥಾನಗಳು ಶೈಕ್ಷಣಿಕ ಸಂಸ್ಥೆಗಳಾಗಿದ್ದವೆಂಬುದನ್ನು ಮೇಲಿನ ಉದ್ಧೃತಿಯು ಸ್ಪಷ್ಟಪಡಿಸುತ್ತದೆ.

[24] S.I.I. Vol. XX, No. 83

[25]ಅದೇ No. 78.

[26]ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಪುಟ ೬೧-೬೭- ಡಾ | ಎಂ. ಎಂ. ಕಲಬುರ್ಗಿ

[27] E.I. ಪು ೩೭ (ಸಂ. ೧೬)

[28] E.I. ಪು. ೫೯ ( ” )

[29] E.I. ಪು. ೩೭ (ಸಂ. ೧೬)

[30] E.I. XVI. ಪು. ೪೬