ವಂಟಮುರಿ, ವಂಟಮೂರಿ ಅಥವಾ ಒಂಟಮುರಿ ಎಂದು ಹೆಸರುವಾಸಿಯಾದ ದೇಸಗತಿ ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಊಳಿಗಮಾನ್ಯ ಮನೆತನ. ಇದನ್ನು ದೇಸಗತ್‌ ಅಥವಾ ದೇಸಗತಿ ಎಂದು ಕರೆಯುವುದು ರೂಡಿ. ಇಂಥ ಸಣ್ಣ ದೊಡ್ಡ ದೇಸಗತಿಗಳು ಅಥವಾ ಊಳಿಗಮಾನ್ಯರ ಮನೆತನಗಳು ಬೆಳಗಾವಿ ಜಿಲ್ಲೆಯಲ್ಲಿ ೨೦ನೆಯ ಶತಮಾನದವರೆಗೂ ಉಳಿದು ಬಂದು, ೧೯೫೦ರಲ್ಲಿ ಭಾರತೀಯ ಒಕ್ಕೂಟದಲ್ಲಿ ವಿಲೀನವಾಗುವವರೆಗೆ ಪ್ರತ್ಯೇಕ ಅಸ್ತಿತ್ವ ಪಡೆದುಕೊಂಡಿದ್ದವು. ಇವುಗಳ ಸಂಖ್ಯೆ ೧೨೦ ಎಂದು ತಿಳಿದು ಬರುತ್ತದೆ. ಆದರೆ ಇವೆಲ್ಲವೂ ಒಂದೇ ದರ್ಜೆಯವಲ್ಲ ; ಅರ್ಥಾತ್‌ ಎಲ್ಲವೂ ದೇಸಗತಿಗಳು. ಕೆಲವು ಇನಾಮುಗಳು, ಕೆಲವು ಜಹಗೀರುಗಳು; ಕೆಲವು ಮಾತ್ರ ದೇಸಗತಿಗಳಲ್ಲ. ಕ್ರಿ. ಶ. ೧೮೨೪ ರಲ್ಲಿ ಕಿತ್ತೂರಿನ ದೇಸಗತಿ ನಷ್ಟವಾದ ಮೇಲೆ ಇಂಥ ದೇಸಗತಿಗಳಲ್ಲಿ ಉಳಿದ ಅತಿ ದೊಡ್ಡ ದೇಸಗತಿ ಎಂದರೆ ಸಿರಸಂಗಿ-ನವಲಗುಂದಗಳದ್ದು. ಸಿರಸಂಗಿಯ ದೇಸಗತಿ ಅದಕ್ಕೂ ಮುಂಚೆ ತೊರಗಲ್ಲಿನ ದೇಸಗತಿಯಾಗಿತ್ತು. ಈ ದೇಸಗತಿಗಳ ಸಾಲಿನಲ್ಲಿ ಇನ್ನೊಂದು ದೊಡ್ಡ ಮನೆತನ ಎಂದರೆ ವಂಟಮೂರಿ/ಒಂಟಮುರಿ ದೇಸಗತಿ. ಜಿಲ್ಲೆಯಲ್ಲಿ ತರುವಾಯ ಉಳಿದು ಬಂದ ದೇಸಗತಿಗಳಲ್ಲಿ ಎರಡನೆಯ ಅತಿ ದೊಡ್ಡದು ಎಂದರೆ ಇದೇ. ಇವೆರಡೂ ಮನೆತನಗಳು ವೀರಶೈವ ಪಂಗಡವು. ಈ ಜಿಲ್ಲೆಯಲ್ಲಿ ವೀರಶೈವೇತರ ದೇಸಗತಿಗಳ ಸಂಖ್ಯೆಯೂ ತುಂಬಾ ಇದೆ. ಅವರಲ್ಲಿ ಕೆಲವರು ಮುಸಲ್ಮಾನರು. ಇವರು ಬಿಜಾಪುರ ಆದಿಲಶಾಹಿ ಮತ್ತು ಬಹುಮನಿ ಸುಲ್ತಾನರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದವರು ಮರಾಠಾ ಜನಾಂಗದವರು ಕೆಲವರು ; ಇವರು ಕೊಲ್ಲಾಪುರದ ಛತ್ರಪತಿಗಳ ಪ್ರಭಾವ ಕಾರಣವಾಗಿ ಅಸ್ತಿತ್ವ ಪಡೆದರು. ಎಂದರೆ ತಾರಾಬಾಯಿ ಸಾತಾರೆಯನ್ನು ತ್ಯಜಿಸಿ ಪನ್ನಾಳಕೋಟೆ-ಕೊಲ್ಲಾಪುರಗಳಿಗೆ ಬಂದು ತಳವೂರಿದ ತರುವಾಯ ಇವರು ದೇಸಗತಿಗಳ ಒಡೆತನ ಸಂಪಾದಿಸಿದರು. ಇನ್ನು ಅಲ್ಲಲ್ಲಿ ಉಳಿದಿದ್ದ ಬ್ರಾಹ್ಮಣ ದೇಸಾಯರು ಪೇಶ್ವೆಗಳಿಂದ ಸ್ಥಾಪನೆಗೊಂಡರು. ಅದರಲ್ಲೂ ವಿಶೇಷವಾಗಿ ತಾಸಗಾಂವ-ಮಿರಜಗಳಲ್ಲಿ ಪೇಶ್ವೆಗಳ ರಾಜಪ್ರತಿನಿಧಿಗಳಾಗಿ, ಈ ಜಿಲ್ಲೆಯ ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ತುಂಬಾ ಪ್ರಭಾವ ಬೀರಿದ ಪಟವರ್ಧನ ಮನೆತನದವರ ಸಂಬಂಧಿಗಳು ಅಥವಾ ಅವರಿಂದ ಅಧಿಕಾರ ಪಡೆದರು.

ಮೇಲಿನ ಮೂರು ವರ್ಗದ (ಮುಸಲ್ಮಾನ, ಮರಾಠಾ, ಪೇಶ್ವೆ) ಅನ್ಯಮೂಲದ ದೇಸಾಯರಲ್ಲದೆ, ಅಚ್ಚಕನ್ನಡಿಗರಾದ ದೇಸಾಯರಲ್ಲಿ ಸಿರಸಂಗಿ, ಒಂಟಮುರಿ, ತಲ್ಲೂರ ಮುಂತಾದ ದೇಸಗತಿಗಳು ಬರುತ್ತವೆ. ಇವರಲ್ಲಿ ಹೆಚ್ಚಿನವರು ವೀರಶೈವರಾದರು ಕೆಲವರು ಕ್ಷತ್ರಿಯರೂ ಉಂಟು. ಉದಾಹರಣೆಗೆ ಯರಗಟ್ಟಿ, ಕೌಜಲಗಿ, ಸಿಂದಿಕುರಬೆಟ್ಟ ಮುಂತಾದವರನ್ನು ಇಲ್ಲಿ ಹೆಸರಿಸಬಹುದು. ಇವರಂತೆ ಜೈನ ಮತ್ತು ಇತರ ದೇಸಗತಿಗಳೂ ಇವೆ.

ಈ ಎಲ್ಲ ದೇಸಗತಿಗಳು ಬಿಜಾಪುರದವರಿಂದ ಅಥವಾ ಅವರ ತುರವಾಯ ಅಸ್ತಿತ್ವಕ್ಕೆ ಬಂದವೆಂದು ಡಾ. ವಿರೂಪಾಕ್ಷ ಬಡಿಗೇರ ತಮ್ಮ ದೊಂದು ಲೇಖನದಲ್ಲಿ ಹೇಳಿದ್ದಾರೆ.[1] ಈ ಅಭಿಪ್ರಾಯವನ್ನು ಕೊಂಚ ಮಾರ್ಪಡಿಸಬೇಕಾದ ಅವಶ್ಯಕತೆಯಿದೆ. ಕಾರಣವೆಂದರೆ ಈ ಕನ್ನಡ ಮೂಲದ ದೇಸಗತಿಗಳು ತುಂಬಾ ಹಳೆಯವು. ಇವರ ಬಗೆಗೆ ಅಧಿಕೃತವಾದ ದಾಖಲೆಗಳಿಲ್ಲದ್ದರಿಂದ ಇವರ ಇತಿಹಾಸವನ್ನು ನಿಖರವಾಗಿ ಹೇಳುವುದು ಕಠಿಣವಾದರೂ ಇವರು ೧೪ನೆಯ ಶತಮಾನಕ್ಕಿಂತ ಹಿಂದಿನವರೆಂಬುದು ತೀರ ಸ್ಪಷ್ಟ. ಬಿಜಾಪುರದ ಆದಿಲಶಾಹಿ ೧೪೮೯ರಲ್ಲಿ ಅಸ್ತಿತ್ವಕ್ಕೆ ಬಂದು, ಈ ಅವಧಿಗಿಂತ ಪೂರ್ವದಲ್ಲಿಯೇ ಕ್ರಿ.ಶ. ಸುಮರು ೧೪೦೦ ರಲ್ಲಿ ಒಂಟಮುರಿ ಅಥವಾ ಹುಕ್ಕೇರಿಯ ಒಂದು ಪುಟ್ಟ ಸಂಸ್ಥಾನ ಅಥವಾ ದೇಸಗತಿಯು ಖಚಿತವಾಗಿ ಅಸ್ತಿತ್ವದಲ್ಲಿದ್ದ ಬಗ್ಗೆ ಮುಂದೆ ನೋಡಲಿರುವೆವು.

ಮೂಲತಃ ಒಂಟಮುರಿ ದೇಸಾಯರು ಹುಕ್ಕೇರಿಯವರೆಂದು ತಿಳಿದು ಬರುತ್ತದೆ.[2]ಬಿಜಾಪುರ ಆದಿಲಶಾಹಿಯ ಪತನ ಸಮಯದಲ್ಲಿ ಅವರು ಹುಕ್ಕೇರಿಯಲ್ಲಿಯೇ ಇದ್ದರೆಂದು ಖಚಿತವಾದ ಅಭಿಪ್ರಾಯವಿದೆ. ಆದರೆ ಡಾ. ಎಸ್.ಜಿ. ಘಿವಾರಿಯವರು ಈ ಮನೆತನ ಮೂಲತಃ ಚಿಕ್ಕೋಡಿಯದೆಂದು ಹೇಳಿದ್ದಾರೆ.[3]

ಈ ಅಭಿಪ್ರಾಯ ಡಾ. ಘಿವಾರಿಯವರಿಗೆ ವದಂತಿಗಳ ಮೂಲಕ ಪ್ರಾಪ್ತವಾಗಿರುವಂತೆ ಕಾಣುತ್ತದೆ. ಈ ಮನೆತನದ ಮೂಲದ ಬಗ್ಗೆ ಹಲವಾರು ವದಂತಿಗಳಿವೆ. ಒಂದು ವದಂತಿಯ ಪ್ರಕಾರ ಇವರು ರತ್ನಪಡಿ ವ್ಯಾಪಾರಿಗಳಾಗಿದ್ದು ಬಿಜಾಪುರ ಜಿಲ್ಲೆಯ ಎರೆ ಹಂಚಿನಾಳದವರಂತೆ. ತರುವಾಯ ಇವರು ಸಾಂಗಲಿಯ ಕಡೆಗೆ ಬಂದು ದೇಸಗತಿಯನ್ನು ಸಂಪಾದಿಸಿದ್ದಾಗಿ ಹೇಳಲಾಗುತ್ತದೆ. ಈ ವದಂತಿ ಅವರ ಮನೆತನದ ಹೆಳವರಿಂದ ಸಂಗ್ರಹಿಸಲಾದುದು. ಎಂದರೆ ಇವರು ಮೂಲತಃ ವ್ಯಾಪಾರಿಗಳಾಗಿದ್ದು ಯಾವುದೋ ಒಂದು ಸಂದರ್ಭದಲ್ಲಿ ಅವಕಾಶ ದೊರೆತು, ಆಡಳಿತಗಾರರಾಗಿ ಮಾರ್ಪಟ್ಟಂತೆ ತೋರುತ್ತದೆ. ಇನ್ನೊಂದು ವದಂತಿಯೆಂದರೆ ಇಂದಿನ ನಿಪ್ಪಾಣಿ ಸಮೀಪದ ನಣದಿಯ ದೇಸಾಯಿಯೊಬ್ಬ ಬಿಜಾಪುರದವರ ಕೈಯಲ್ಲಿ ಸೆರೆಸಿಕ್ಕು, ಕಾರಾಗ್ರಹದ ಬಂದಿಯಾಗಿದ್ದ. ಹುಕ್ಕೇರಿ ಮನೆತನದ ಮೂಲಪುರುಷ ವ್ಯಾಪಾರಿಯಾಗಿದ್ದಲ್ಲದೆ ನಣದಿಯ ದೇಸಾಯಿಯ ಆಪ್ತಮಿತ್ರನೂ ಆಗಿದ್ದ. ಜೊತೆಗೆ ಉತ್ತಮ ಕುದುರೆಯ ಸವಾರನಾಗಿದ್ದ. ಈ ವ್ಯಾಪಾರಿ ಒಬ್ಬ ಅರಬನು ತಂದಿದ್ದ ಅಸಾಮಾನ್ಯ ಕುದುರೆಯನ್ನು ಏರಿ, ತನ್ನ ಶೌರ್ಯ ಪ್ರದರ್ಶಿಸಿದ್ದರಿಂದ ಸಂಪ್ರೀತನಾದ ಸುಲ್ತಾನ ಅವನ ಕೋರಿಕೆಯ ಮೇರೆಗೆ ನಣದಿಯ ದೇಸಾಯಿಯನ್ನು ಬಿಡುಗಡೆಗೊಳಿಸಿದ. ಅದಕ್ಕೆ ಪ್ರತಿಯಾಗಿ ನಣದಿಯ ದೇಸಾಯಿ ಈ ವ್ಯಾಪಾರಿಗೆ ತನ್ನ ದೇಸಗತಿಯಲ್ಲಿ ಅರ್ಧ ಪಾಲುಕೊಟ್ಟು, ಅವನನ್ನು ಒಬ್ಬ ದೇಸಾಯಿಯನ್ನಾಗಿ ಪ್ರತಿಷ್ಠೆ ಗೊಳಿಸಿದ.

ಇವಲ್ಲದೆ ಮಂಗಸೂಳಿಯ ಮೈಲಾರ ದೇವರ ದೇವಾಲಯದಲ್ಲಿ ಪ್ರಚಲಿತ ವಿರುವ ಒಂದು ಐತಿಹ್ಯವನ್ನು ನಾನು ಸಂಗ್ರಹಿಸಿ ಕೊಟ್ಟಿದ್ದೇನೆ.[4] ಅದರ ಪ್ರಕಾರ, ವಂಟಮೂರಿ ದೇಸಾಯಿಯು ಬಿಜಾಪುರದವರು ಕೈಗೆ ಸಿಕ್ಕು, ನಳದುರ್ಗ ಕೋಟೆಯಲ್ಲಿ ಸೆರೆವಾಸ ಅನುಭವಿಸುತ್ತಿದ್ದ. ದೇವರ ಕೃಪೆಯಿಂದ ಅಲ್ಲಿಂದ ದಿವ್ಯ ಅಶ್ಯಾರೋಹಿನೊಬ್ಬನ ಸಹಾಯದಿಂದ ಪಾರಾಗಿ, ಬಂದ ಮತ್ತು ಈಗಿನ ಅಥಣಿ ತಾಲೂಕು ಮಂಗಸೂಳಿಯಲ್ಲಿ ಬಂದಿಳಿದು, ಕೆಲವು ಕಾಲ ಅಲ್ಲಿ ವಿಶ್ರಮಿಸಿ ಮೈಲಾರ ದೇವರ ದೇವಾಲಯ ಕಟ್ಟಿಸಿದ.

ಇನ್ನೊಂದು ವದಂತಿಯಂತೆ ಈ ಮನೆತನದ ಮೂಲಪುರುಷನನ್ನು ದಿಲ್ಲಿಯ ಬಾದಶಹನು ಸೆರೆ ಹಿಡಿದುಕೊಂಡು ದಿಲ್ಲಿಗೆ ಒಯ್ಯಲು, ಈ ಮನೆತನದ ಕುಲ ದೇವರಾದ ಅಲ್ಲಮಪ್ರಭು ದಿಲ್ಲಿಯ ಸೆರೆಯಿಂದ ಇವನನ್ನು ಪಾರುಮಾಡಿ ತಂದ.[5]

ಇವುಗಳಲ್ಲಿ ದಿಲ್ಲಿಯ ಕಥೆಯ ತುಂಬಾ ದೂರದ್ದು. ಚಿಕ್ಕೋಡಿ ಮೂಲದ ಐತಿಹ್ಯಕ್ಕೂ ಇದೇ ಮಾತು ಅನ್ವಿಯಿಸುತ್ತದೆ. ಮಂಗಸೂಳಿಯ ದೇವಾಲಯಗಳನ್ನು ನಳದುರ್ಗದಲ್ಲಿರುವ ಮೈಲಾರದೇವರ ದೇವಾಲಯವನ್ನೇ ಅನುಕರಿಸಿ ಒಂಟಮುರಿಯ ದೇಸಾಯರೇ ಕಟ್ಟಿಸಿರುವ ಸಂಗತಿ. ಆದರೆ ಕುದುರೆಯ ಕಥೆ ಇಲ್ಲಿ ಅಷ್ಟು ಪ್ರಸ್ತುತವೆಂದು ಹೇಳಲಾಗುವುದಿಲ್ಲ. ನಣದಿಯ ದೇಸಾಯರ ಐತಿಹ್ಯದಲ್ಲಿ ಹೆಚ್ಚಿನ ಸತ್ಯಾಂಶವಿರುವಂತೆ ಕಾಣುತ್ತದೆ. ಕಾರಣವೆಂದರೆ ನಣದಿಯ ದೇಸಾಯರ ಜಿಮೀನುಗಳು ಯಾವ ಯಾವ ಊರುಗಳಲ್ಲಿ ಇವೆಯೋ ಅಲ್ಲೆಲ್ಲ. ಒಂಟಮುರಿ ದೇಸಾಯರ ಜಮೀನುಗಳು ಈಗಲೂ ಕಂಡಬರುತ್ತವೆ. ಎಂದರೆ ನಣದಿ ದೇಸಾಯರಿಗೂ ಒಂಟಮುರಿಯವರಿಗೂ ಅವಿನಾಭಾವ ಸಂಬಂಧವೊಂದು ಇದೆಯೆಂಬುದು ಇದರಿಂದ ಖಚಿತವಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ಸಂಗತಿ ಎಂದರೆ ತರುವಾಯದಲ್ಲಿ ಪ್ರಸಿದ್ಧಿಗೆ ಬಂದ ನಣದಿಯ ದೇಸಾಯರು ಮರಾಠರು: ಅವರಿಗಿಂತ ಪೂರ್ವದಲ್ಲಿ ಆ ಊರನ್ನು ಆಳಿಕೊಂಡಿದ್ದ ದೇಸಾಯರು ಕನ್ನಡಿಗರು. ಅವರಲ್ಲೊಬ್ಬನು ಬಿಜಾಪುರದ ಪ್ರಥಮ ಶಹಾ ಯಸೂಫ್ ಆದಿಲ್‌ಖಾನ ಅಥವಾ ಆದಿಲಶಹನ ಆಜ್ಞೆಯಂತೆ ಕ್ರಿ.ಶ. ಸುಮಾರು ೧೪೯೦ರಲ್ಲಿ ಹುಕ್ಕೇರಿಯಲ್ಲೊಂದು ಮಸೀದೆ ಕಟ್ಟಿಸಿದ. ಇವನ ಹೆಸರು ಕೇತಗೌಡ.[6]

ಹೀಗೆ ಈ ಮನೆತನ ಮೂಲತಃ ಬಿಜಾಪುರ ಕಡೆಯ ವ್ಯಾಪಾರಿಗಳದಾಗಿದ್ದು ನಣದಿಯ ದೇಸಾಯರ ಸಂಪರ್ಕದಲ್ಲಿ ದೇಸಗತಿಯನ್ನು ಸಂಪಾದಿಸಿರುವುದು ಹೆಚ್ಚು ಸಂಭವನೀಯವಾಗಿದೆ. ಹಾಗೂ ನಣದಿ-ಸದಲಗೆಯ ಸಮೀಪ ಪ್ರದೇಶದಲ್ಲಿ ಪ್ರಖ್ಯಾತಿಗೆ ಬಂದು, ತರುವಾಯ ಹುಕ್ಕೇರಿಯನ್ನು ತನ್ನ ಮುಖ್ಯ ಊರನ್ನಾಗಿ ಪರಿವರ್ತಿಸಿ, ಅಲ್ಲಿ ಬಹುಕಾಲ ನೆಲೆನಿಂತರೂ ರಾಜಕೀಯ ಒತ್ತಡ ಕಾರಣವಾಗಿ ಹುಕ್ಕೇರಿಯನ್ನು ತ್ಯಜಿಸಿ, ಅಲ್ಲಿಂದ ಕೊಂಚ ದೂರ ಘಟಪ್ರಭೆಯ ದಕ್ಷಿಣ ತಡಿಯಲ್ಲಿರುವ ಒಂಟಮೂರಿಗೆ ಸ್ಥಾನಾಂತರಗೊಂಡಿತೆಂದು ಹೇಳಬಹುದು.

ಈ ಮನೆತನದ ವಂಶಾವಳಿಯನ್ನು ಡಾ. ಎಸ್. ಜಿ. ಘಿವಾರಿಯವರು ತಮ್ಮ ಪುಸ್ತಿಕೆಯಲ್ಲಿ ಕೊಟ್ಟಿದ್ದಾರೆ ಅದು ಮುಂದಿನಂತೆ ಇದೆ :

೧ ಪ್ರಭು ಬಸವಂತರಾಯ
(ಮೂಲಪುರುಷ)
|
೨ ಇಮಗೌಡ
|
೩ ಧೂಳಗೌಡ
|
೪ ಯಾದಗೌಡ ಉರ್ಫ ಮಹದಗೌಡ*
|
೫ ಮಲಗೌಡ
|
೬ ಸಾತಗೌಡ ಉರ್ಫ ಸಾಯಿಗೌಡ
|
೭ ಧೂಳಗೌಡ
|
೮ ಅಲಗೌಡ ಉರ್ಫ ಸಿದಗೌಡ
|
೯ ಹಿರೇಲಖಮಗೌಡ
|

ಹೀಗೆ ಈ ಮನೆತನದ ಸುಮಾರು ೨೦ ತಲೆಮಾರುಗಳು ಲಭ್ಯವಾಗಿವೆ. ಸದರೀ ವಂಶಾವಳಿಯ ೧೭ನೆಯ ದೇಸಾಯರಾದ ಲಖಮಗೌಡರು ೧೮೫೦ ಸಪ್ಟಂಬರ ೬ ರಂದು ಬ್ರಿಟಿಶ್ ಸರಕಾರಕ್ಕೆ ಸಲ್ಲಿಸಿದ್ದೆಂದು ತಿಳಿದು ಬರುತ್ತದೆ.

ಒಂದು ತಲೆಮಾರಿಗೆ ೨೫ ವರ್ಷಗಳಂತೆ ಲೆಕ್ಕ ಹಾಕಿದರೆ ೧೯೪೦ ರಿಂದ ಹಿಂದೆ ಈ ಮನೆತನದ ಮೂಲಪುರುಷನ ಕಾಲ ಕ್ರಿ.ಶ. ಸುಮಾರು ೧೪೨೫ ಎಂದಾಗುತ್ತದೆ. ಈ ವಿಷಯಕ್ಕೆ ನಿರಂಜನ ವಂಶರತ್ನಾಕರ ಕೂಡ ಬೆಳಕು ಚೆಲ್ಲುತ್ತದೆ. ಅದನ್ನು ಇಲ್ಲಿ ಸ್ವಲ್ಪ ಬಿಡಿಸಿ ನೋಡಬಹುದು.

ನಿರಂಜನ ಪರಂಪರೆಯಲ್ಲಿ ಹನ್ನೆರಡನೆಯವರು ಬಸವಪ್ರಭು ಸ್ವಾಮಿಗಳು. ಇವರು ೭೨ ಬಿರುದು ಸಮೇತ ಗಣಸಂದಣಿಯಿಂದ ಕೆಳದಿ ಮುಂತಾದ ದೇಶಗಳನ್ನು ಸಂಚರಿಸುತ್ತ ಹಿರೇಸೂರು. ಕಿರೇಸೂರುಗಳ ಮುಖಾಂತರ ಹುಕ್ಕೇರಿ ನಾಡಿಗೆ ಬಂದು ಅಲ್ಲಿದ್ದ ಜೈನಮತಸ್ಥರಿಗೆ ವೀರಶೈವದೀಕ್ಷೆ ನೀಡಿದರು. ಅದೇ ರೀತಿ ಹನಗಂಡಿಗೆ ಹೋಗಿ ಅಲ್ಲಿದ್ದ ಜೈನ ದೊರೆಗೆ ಲಿಂಗಧಾರಣ ಮಾಡಿಸಿದರು.[7] ಅಲ್ಲಿಂದ ತೇರದಾಳಕ್ಕೆ ತೆರಳಿ ಅಲ್ಲಿ ಆದಿಲಿಂಗಸ್ವಾಮಿಗಳಿಗೆ ತಮ್ಮ ಚರಂತಿಗೆಯ ಪಟ್ಟವನ್ನಿತ್ತು ಬಯಲಾದರು. ಅಲ್ಲದೆ ತಮ್ಮ ಕುರುಹಾಗಿ ಮಗಿ ರೂಪದ ತಮ್ಮ ಕಮಂಡಲು ಮತ್ತು ಬೆತ್ತಗಳನ್ನು ತೇರದಾಲ ಮಠದಲ್ಲಿ ಸ್ಥಾಪಿಸಿದರು. ಆ ಮಗಿ ಮತ್ತು ಬೆತ್ತಗಳು ತೇರದಾಳದಲ್ಲಿ ಈಗಲೂ ಪೂಜೆಗೊಳ್ಳುತ್ತಿವೆ.

ಇಲ್ಲಿ ಗಮನಾರ್ಹವಾದ ಸಂಗತಿ ಎಂದರೆ, ಈ ಬಸವಪ್ರಭುದೇವರು ಒಂಟಿಮುರಿ ಮನೆತನದವರಿಗೆ ಆಶೀರ್ವಾದ ಮಾಡಿದ್ದರಿಂದ ಅವರಿಗೆ ದೇಸಗತಿ ಪ್ರಾಪ್ತವಾಯಿತೆಂಬ ನಂಬಿಕೆ ಈ ಮನೆತನದವರಲ್ಲಿ ಪ್ರಬಲವಾಗಿದೆ. ಈಗ ಪ್ರಚಲಿತ ವಿರವ ಇವರ ಸೋದರ ಸಂಬಂಧಿ ಮನೆತನಗಳಲ್ಲೆಲ್ಲ ಈ ವಿಷಯಕ್ಕೆ ಏಕಾಭಿಪ್ರಾಯವಿರುವುದಲ್ಲದೆ ಪ್ರತಿಯೊಬ್ಬರ ಮನೆಯಲ್ಲಿ ಈಗಲೂ ಮಗಿಯ ಪೂಜೆ ನಡೆಯುತ್ತದೆ. ಮಗೆಪ್ಪ ಎಂಬ ಹೆಸರು ಇವರ ಐದನೆಯ ತಲೆಮಾರಿಗಾಗಲೇ ಕಂಡುಬಂದಿದೆ. ಕರಜಗಿ-ರಾಂಗೋಳಿ ಶಾಖೆಯ ಮೂಲಪುರುಷನ ಹೆಸರೇ ಮಗೆಪ್ಪಗೌಡನೆಂದಿರುವುದಾಗಿ ತಿಳಿದು ಬರುತ್ತದೆ. ಎಂದರೆ ತೇರದಾಳ ಮಠದ ಬಸವಪ್ರಭುಸ್ವಾಮಿಗಳು ಹುಕ್ಕೇರಿ ನಾಡಿಗೆ ಬಂದಿದ್ದರೆಂದು ಹೇಳಲಾಗಿರುವುದರಿಂದ ಇವರೇ ಈ ಮನೆತನಕ್ಕೆ ಆಶೀರ್ವಾದ ಮಾಡಿ ತಮ್ಮ ಸಂಕೇತವಾದ ಮಗಿಯನ್ನು ದಯಪಾಲಿಸಿದರೆಂದು ತಿಳಿಯುವುದು ಸಮಂಜಸವೆನಿಸುತ್ತದೆ.

೧೯ನೆಯ ನಿರಂಜನ ಪಟ್ಟಾಧಿಕಾರಿಗಳಾದ ಶ್ರೀ ತೋಂಟದ ಸಿದ್ದಲಿಂಗರು ಕ್ರಿ.ಶ. ೧೫೮೦ ರ ಸುಮಾರಿನಲ್ಲಿ ಇನ್ನೂ ಜೀವಿಸಿದ್ದರು. ಅವರ ಹಿಂದಿನವರಾದ ತೇರದಾಳದ ಬಸವ ಪ್ರಭುಗಳು ೧೨ನೆಯ ಪಟ್ಟಾಧಿಕಾರಿಗಳು. ಏಳು ತೆಲಮಾರುಗಳಿಗೆ ೧೭೫ ವರ್ಷಗಳನ್ನು ಕಳೆದರೆ ಕ್ರಿ. ಶ. ಸುಮಾರು ೧೪೦೦ ರಲ್ಲಿ ಬಸವಪ್ರಭುಗಳು ಇದ್ದರೆಂದು ನಿರ್ಧಾರವಾಗುತ್ತದೆ. ಇದು ಒಂಟಮುರಿ ದೇಸಾಯರ ಮೂಲ ಪುರುಷನ ಕಾಲಕ್ಕೆ ೪೦-೫೦ ವರ್ಷಗಳ ವ್ಯತ್ಯಾಸವನ್ನು ಮಾತ್ರ ತೋರಿಸುವುದರಿಂದ ಆ ವ್ಯತ್ಯಾಸವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಒಟ್ಟಿನಲ್ಲಿ ಈ ಮನೆತನದ ಮೂಲಪುರುಷ ೧೫ನೆಯ ಶತಮಾನದ ಆದಿಭಾಗದಲ್ಲಿ ಎಂದರೆ ಕ್ರಿ.ಶ. ೧೪೦೦ ರಿಂದ ೧೪೨೫ರ ಅವಧಿಯಲ್ಲಿ ಆಗಿಹೋದನೆಂದು ಭಾವಿಸುವಲ್ಲಿ ತಪ್ಪೇನು ಕಾಣುವುದಿಲ್ಲ.[8] ಈ ಮನೆತನ ಬಿಜಾಪುರ ಜಿಲ್ಲೆಯಿಂದ ವಲಸೆಗೊಂಡು ಕೊಲ್ಲಾಪುರ-ಬೆಳಗಾವಿ ಜಿಲ್ಲೆಯ ಗಡಿಪ್ರದೇಶದಲ್ಲಿ ಪ್ರಾಬಲ್ಯಕ್ಕೆ ಬಂದು ನಣದಿಯ ದೇಸಾಯರ ಸಹಾಯದಿಂದ ಹುಕ್ಕೇರಿಯಲ್ಲಿ ಆಳ್ವಿಕೆ ಪ್ರಾರಂಭಿಸಿತೆಂದು ಭಾವಿಸಬಹುದು.

ಈ ಅವಧಿಯಲ್ಲಿ ವಿಜಾಪುರದವರು ಬಹುಮನೀ ರಾಜ್ಯದ ಆಧೀನದಲ್ಲಿ ಇನ್ನೂ ತರಫ್‌ದಾರ ಎಂದರೆ ಪ್ರಾಂತೀಯ ರಾಜ್ಯಪಾಲರಾಗಿದ್ದರು. ಇವರ ಪ್ರತಿನಿಧಿಗಳಾಗಿ ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ ಇನ್ನೂ ಇಬ್ಬರು ಅಧಿಕಾರಿಗಳಾಗಿದ್ದು, ಅವರನ್ನು ಅಮೀರರೆಂದು ಕರೆಯುತ್ತಿದ್ದರು. ಒಬ್ಬನು ಹುಕ್ಕೇರಿ ಪ್ರಾಂತದಲ್ಲಿಃ ಇನ್ನೊಬ್ಬ ಈಗಿನ ರಾಯಬಾಗದಲ್ಲಿ. ಹುಕ್ಕೇರಿಯ ಪ್ರಾಂತ ಕ್ರಿ. ಶ. ೧೩೨೭ಕ್ಕಾಗಲೇ ಎಲ್ಲ ಸುಲ್ತಾನರ ವಶವಾಗಿತ್ತಷ್ಟೇ ಅಲ್ಲದೆ ದಕ್ಷಿಣಕ್ಕೆ ದಾಳಿ ಹೊರಡುವ ಮುನ್ನ ದಿಲ್ಲಿಯ ಸುಲ್ತಾನ ಮಹಮ್ಮದ್‌ ಬಿನ್‌ ತೊಘಲಕ್‌ನು ಹುಕ್ಕೇರಿಯಲ್ಲಿ ಮೇಲೆ ಹೇಳಿದ ವರ್ಷ ಬೀಡು ಬಿಟ್ಟಿದ್ದನು.[9]ಆದರೆ ದಕ್ಷಿಣದ ಮುಸಲ್ಮಾನರು ದಿಲ್ಲಿಯ ಆಡಳಿತವನ್ನು ತಿರಸ್ಕರಿಸಿ ಕ್ರಿ.ಶ. ೧೩೪೭ರಲ್ಲಿ ಕಲಬುರ್ಗಿಯ ಬಹಮನಿ ದೊರೆ ಅಲ್ಲಾವುದ್ದೀನ್ ಹಸನ್‌ ಗಂಗೂವಿನ ಮುಖಂಡತ್ವದಲ್ಲಿ ಸ್ವತಂತ್ರರಾಜ್ಯವೊಂದಕ್ಕೆ ಅಡಿಪಾಯ ಹಾಕಿದರು. ಆಗ ಕಲಬುರ್ಗಿಯಲ್ಲಿ ಸೇರಿದ ಸಭೆಗೆ[10]ಹುಕ್ಕೇರಿಯ ಅಮೀರನೂ ಹಾಜರಿದ್ದುದಾಗಿ ತಿಳಿದು ಬರುತ್ತದೆ. ಒಟ್ಟಿನಲ್ಲಿ ಬಹಮನಿ ರಾಜ್ಯ ಅಸ್ತಿತ್ವ ಪಡೆದು, ವಿಜಾಪುರದಲ್ಲಿ ಅಧಿಕಾರ ನಡೆಸುತ್ತಿದ್ದ ಹಾಗೂ ಅದರ ಮುಖ್ಯ ಪ್ರಾಂತಾಧಿಕಾರಿಗಳಾಗಿ ಮುಂದೆ ಸ್ವತಂತ್ರ ರಾಜರಾದ ಆದಿಲಶಾಹಿ ಮನೆತನದವರು.[11] ಈ ದೇಶಗತಿಯ ಅಸ್ತಿತ್ವಕ್ಕೆ ಬುನಾದಿ ಹಾಕಿದವರೆಂದು ಹೇಳಬಹುದು.

ಈ ಮನೆತನದ ಮೂರನೆಯ ದೇಸಾಯಿ ಧೂಳಗೌಡನನ್ನು ದಿಲ್ಲಿಯ ಮೊಘಲರು ಸೆರೆಹಿಡಿದು ಒಯ್ದರೆಂದು ಡಾ. ಜಿ. ಘಿವಾರಿಯವರು ಬರೆದಿದ್ದಾರೆ. ಅವರ ಪ್ರಕಾರ ಧೂಳಗೌಡ ದಿಲ್ಲಿಯಲ್ಲಿ ಸೆರೆವಾಸದಲ್ಲಿದ್ದನು. ದಿಲ್ಲಿಯ ವರೆಗೆ ಒಯ್ದು ಸೆರೆಯಲ್ಲಿಡುವಷ್ಟು ಈತ ಪ್ರಬಲನಾಗಿದ್ದನೆಂದು ತಿಳಿಯುವುದು ತುಂಬ ಕಠಿಣ. ಬಿಜಾಪುರದವರು ನಳದುರ್ಗದಲ್ಲಿ (ವಂಟಮುರಿ?) ಅವನನ್ನು ಸೆರೆಯಲ್ಲಿಟ್ಟಿದ್ದರೆಂದು ಹೇಳುವ ಮಂಗಸೂಳಿಯ ದೇವಾಲಯದ ಐತಿಹ್ಯ ಸತ್ಯಕ್ಕೆ ಹೆಚ್ಚು ಸಮೀಪವಾಗಿದೆ. ವೇಳೆಗೆ ಸರಿಯಾಗಿ ಕಪ್ಪಗಳನ್ನು ಕೊಡದಿದ್ದರೂ ಸಾಕು; ಪ್ರಾಚೀನ ಕಾಲದಲ್ಲಿ ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗಬೇಕಿತ್ತು. ಅಂಥ ಒಂದು ಯಾವುದೋ ಕಾರಣಕ್ಕಾಗಿ ಈ ದೇಸಾಯಿ ಸೆರೆಮನೆ ವಾಸ ಅನುಭವಿಸಿರಬಹುದು. ಧೂಳಗೌಡನು ಸೈನಿಕ ಹೋರಾಟ ಮಾಡಿರಬಹುದಾದರೂ ಅದನ್ನು ಪೋಷಿಸುವ ದಾಖಲೆಗಳಿದ್ದಂತಿಲ್ಲ. ಈ ಧೂಳಗೌಡನ ಕಾಲ ಕ್ರಿ.ಶ. ಸುಮಾರು ೧೪೭೫.

ಧೂಳಗೌಡನ ತರುವಾಯ ಯಾದಗೌಡ ಅಥವಾ ಮಹದಗೌಡ ಅಧಿಕಾರಕ್ಕೆ ಬಂದನು. ಈ ಸುಮಾರಿಗೆ ಬಿಜಾಪುರದಲ್ಲಿ ಯಸೂಫ್ ಆದಿಲ್ ಖಾನನು ತರಫ್‌ದಾರನಾಗಿದ್ದ ಮುಂದೆ ಕ್ರಿ.ಶ. ೧೪೮೯ರಲ್ಲಿ ಆದಿಲ್‌ಖಾನನು ಆದಿಲಶಹನೆಂದು ತನ್ನ ಸ್ವಯಂಘೋಷಿತ ಅಧಿಕಾರದಿಂದ ಸ್ವತಂತ್ರನಾದನು. ಆ ಅವಧಿಯಲ್ಲಿ ಹುಕ್ಕೇರಿಗೆ ಫತೇಹ್ ಬಹದ್ದೂರ ಎಂಬವನು ಅಮಲದಾರ ಅಥವಾ ಸಾವಿರ ಕುದುರೆಗಳ ಸರದಾರನಾಗಿ ಬಂದಂತೆ ತಿಳಿದು ಬರುತ್ತದೆ.[12] ಹುಕ್ಕೇರಿಯಲ್ಲಿ ಯಸೂಫ್‌ಖಾನನು ಗಜಬಾರಾ ಗುಮ್ಮಟ ಎಂದು ಹೆಸರಾದ ಮಸೀದೆಯನ್ನು ಕಟ್ಟಿಸಿದರು. ಇದರ ಉಸ್ತುವಾರಿ ಮಾಡಿದವನು ನಣದಿಯ ದೇಸಾಯಿ ಕೇತಗೌಡ ಎಂದರೆ ವಂಟಮರಿಯ ದೇಸಾಯರು. ಆಗ ಏನೋ ತೊಂದರೆಗೊಳಗಾಗಿ ಹುಕ್ಕೇರಿಯಿಂದ ಸ್ಥಾನಭ್ರಷ್ಟರಾಗಿದ್ದಂತೆ ಕಾಣುತ್ತದೆ. ಅದೇ ರೀತಿ ಐನ್ ಉಲ್-ಮುಲ್ಕಗಿಲಾನಿ ಎಂಬ ಬಿಜಾಪುರದ ಸರದಾರ ಮೊದಲು ಬೆಳಗಾವಿಯ ಅಧಿಕಾರಿಯಾಗಿದ್ದು. ಕ್ರಿ.ಶ. ೧೫೦೩ ರಿಂದ ೧೫೪೬ರ ವರೆಗೆ ಹುಕ್ಕೇರಿಗೆ ವರ್ಗಾಯಿಸಲ್ಪಟ್ಟ.[13] ಈ ಐನ್-ಉಲ್ಕ್‌-ಮುಲ್ಕ ಕೂಡ ಹುಕ್ಕೇರಿಯಲ್ಲಿ ದೊಡ್ಡದಾದ ಮಸೀದೆಯನ್ನು ಕ್ರಿ.ಶ. ೧೫೦೯ರಲ್ಲಿ ಕಟ್ಟಿಸಿದ. ಈ ಅವಧಿಯಲ್ಲಿ ಮೂವರು ಅಥವಾ ನಾಲ್ವರು ದೇಸಾಯಿಗಳಾಗಿ ಹೋಗಿರುವಂತೆ ಊಹಿಸಬಹುದು. ಎಂದರೆ ೫ ಮಲಗೌಡ, ೬ ಸಾತಗೌಡ, ೭ ಧೂಳಗೌಡ ಇವರು ಈ ಅವಧಿಯವರೆಂದು ಸುಮಾರಾಗಿ ಗ್ರಹಿಸಬಹುದು. ಮುಂದೆ ಬಂದ ೮ ಅಲಗೌಡ ಉರ್ಫ್ ಧರಿಗೌಡ. ೯ ಲಖಮಗೌಡ, ೧೦. ಹಿರೇಮಗೆಪ್ಪಗೌಡ ಇವರ ಕಾಲಾವಧಿ ಶಾಂತಿಪೂರ್ಣವಾಗಿತ್ತೆಂದು ಹೇಳಲಾಗಿದೆ.

ಕ್ರಿ.ಶ. ೧೫೪೯ರಲ್ಲಿ ಗಿಲಾನಿ ಮನೆತನದ ಬದಲಾಗಿ, ಬೆಳಗಾವಿಯ ಪ್ರಸಿದ್ಧ ಸರದಾರ ಅಸದಖಾನನ ಮಗ ಮಹಮ್ಮದ ಖಿಶ್ವರಖಾನನಿಗೆ ಹುಕ್ಕೇರಿ ಪ್ರಾಂತದ ಮೇಲಾಳಿಕೆಯೂ ಪ್ರಾಪ್ತವಾಯಿತು. ಸದರೀ ಖಿಶ್ವರಖಾನನೇ ವಿಜಯನಗರದ ವರೊಡನೆ. ಕ್ರಿ.ಶ. ೧೫೬೫ರಲ್ಲಿ ನಡೆದ ತಾಳಿಕೋಟೆಯಲ್ಲಿ ಜರುಗಿದ ಯುದ್ಧದ ರೂವಾರಿ. ಈ ಅವಧಿಯಲ್ಲಿ ಸಿರಸಂಗಿ, ನವಲಗುಂದಗಳಂತೆ ವಂಟಮುರಿಯವರೂ ಮುಸಲ್ಮಾನರ ಪರವಾಗಿ ಹೋರಾಡಿರುವ ಸಾಧ್ಯತೆಯಿದೆ. ಇದೊಂದು ಊಹೆ ಮಾತ್ರ.[14]

ಕ್ರಿ.ಶ. ೧೫೬೯ ರಿಂದ ೧೬೧೫ ರ ವರೆಗೆ ಹುಕ್ಕೇರಿ ಪ್ರಾಂತವನ್ನು ಇನ್ನೊಬ್ಬ ಸರದಾರ ರಣದುಲ್ಲಾಖಾನನು ಆಳುತ್ತಿದ್ದ. ೧೬೧೬ರಲ್ಲಿ ಈ ಪ್ರಾಂತ ರುಸ್ತುಂಜಮಾನ್ ಎಂಬವನ ಕೈಗೆ ಬಂತು. ಮುಂದೆ ೧೬೮೯ ವರೆಗೂ ವಿಶೇಷ ಘಟನೆಗಳು ನಡೆದಂತೆ ಕಾಣಲಿಲ್ಲ. ವಿಜಾಪುರದವರ ಮೇಲಾಳಿಕೆ ಹಾಗೆಯೇ ಮುಂದುವರೆದಿತ್ತು. ಆದರೆ ೧೫೮೦ರಲ್ಲಿ ಅಹಮ್ಮದನಗರ ಮತ್ತು ಗೋವಳಗೊಂಡದವರ ಸಂಯುಕ್ತ ಸೈನ್ಯಗಳು ಈ ಭಾಗದ ಮೇಲೆ ದಾಳಿಮಾಡಿದವು. ಹುಕ್ಕೇರಿ, ರಾಯಬಾಗ ಮತ್ತು ಮಿರ್ಜಿ-ಸಾಂಗಲಿ ಪ್ರದೇಶಗಳನ್ನು ಈ ಸೈನ್ಯಗಳು ಸುಟ್ಟು ಸೂರೆಗೈದವು. ಮುಂದೆ ಕ್ರಿ.ಶ . ೧೬೮೬ ರಿಂದ ಸುಮಾರು ಕ್ರಿ.ಶ. ೧೭೦೭ರ ವರೆಗೆ ವಂಟಮುರಿ ಸಂಸ್ಥಾನ ಯಾರ ಆಧೀನಕ್ಕೂ ಒಳಗಾಗದೆ ಸ್ವತಂತ್ರ ಸ್ಥಾನಪಡೆದಿತ್ತೆಂದು ತಿಳಿದು ಬರುತ್ತದೆ. ಕ್ರಿ.ಶ. ಸುಮಾರು ೧೬೭೦ರ ಅವಧಿಯಲ್ಲಿ ಸಂಪಾದನೆಯ ಸಿದ್ಧವೀರಸ್ವಾಮಿ ಎಂಬುವರು ಹುಕ್ಕೇರಿ ಮತ್ತು ಒಂಟಮುರಿಗಳಲ್ಲಿ ಸಂಪಾದನೆಯ ಸಂಪ್ರದಾಯದ ಮಠಗಳನ್ನು ಸ್ಥಾಪಿಸಿದರೆಂದು ತಿಳಿದು ಬರುತ್ತದೆ. ಇದು ೯ನೆಯವರಾದ ಹಿರೇ ಲಖಮಗೌಡ ಅಥವಾ ೧೦ನೆಯ ಹಿರೇಮಗೆಪ್ಪಗೌಡ ಇವರ ಕಾಲಾವಧಿಯಲ್ಲಿ ನಡೆದಿರಬಹುದೆಂದು ಕಾಣುತ್ತದೆ. ೧೩ನೆಯವರಾದ ಸವಾಯಿ ಲಖಮಗೌಡ ಮತ್ತು ಅವರ ಹಿಂದಿನವರಾದ ಅಲಗೌಡ ಮತ್ತು ಬಸವಪ್ರಭುಗೌಡರು ಬಹುಶಃ ಸ್ವತಂತ್ರರಾಗಿ ದೇಸಗತಿಯನ್ನು ಪಾಲಿಸಿದರೆಂದು ಭಾವಿಸಬಹುದು.

ಕ್ರಿ. ಶ. ೧೬೮೬ರಲ್ಲಿ ಇದರ ಪರಮಾಧಿಕಾರ ಮೊಗಲರಿಗೆ ಸೇರಿತು. ತರುವಾಯ ಸವಣೂರ ನವಾಬರು, ಹೈದರ ಅಲಿ-ಟಿಪ್ಪು ಸುಲ್ತಾನರು, ಹೀಗೆ ಕೈ ಬದಲಾಯಿಸುತ್ತ ಕ್ರಿ.ಶ. ೧೭೬೩-೬೪ ರಲ್ಲಿ ಪೇಶ್ವೆಗಳ ವಶವಾಯಿತು. ಪೇಶ್ವೆಗಳು ಹುಕ್ಕೇರಿಯ ದೇಸಗತಿಯನ್ನು ದೇಸಾಯರಿಂದ ಕಿತ್ತುಕೊಂಡು ಕೊಲ್ಲಾಪುರದ ಛತ್ರಪತಿಗಳಿಗೆ ಕೊಟ್ಟರು. ದೇಸಾಯರು ಆಗ ಸವಣೂರ ನವಾಬರ ಪರವಾಗಿದ್ದುದೇ ಇದಕ್ಕೆ ಕಾರಣವೆಂದು ಊಹಿಸಬಹುದು. ಪೇಶ್ವೆಗಳೊಂದಿಗಿನ ಈ ಘರ್ಷನೆಯ ಅವಧಿಯಲ್ಲಿ ೧೨ ನೆಯವರಾದ ಬಸವಪ್ರಭು ಅಥವಾ ೧೩ನೆಯವರಾದ ಸವಾಯಿ ಲಖಮಗೌಡರು ಹುಕ್ಕೇರಿಯ ದೇಸಾಯರಾಗಿ ಆಡಳಿತ ನಡೆಸುತ್ತಿದ್ದರು. ಈ ಮಾರ್ಪಾಟು ಬಹುದಿನ ಉಳಿಯಲಿಲ್ಲ. ಪೇಶ್ವೆಗಳು ೧೭೬೯ರಲ್ಲಿ ಕೊಲ್ಲಾಪುರದವರಿಂದ ಕಸಿದು ಹುಕ್ಕೇರಿ ವಂಟಮುರಿಗಳನ್ನು ಪುನಃ ದೇಸಾಯರ ಕೈಗಿತ್ತರು.[15] ಈ ಅವಧಿಯಲ್ಲಿ ೧೨ನೆಯವರಾದ ಬಸವಪ್ರಭು ಅಥವಾ ೧೩ನೆಯವರಾದ ಸವಾಯಿ ಲಖಮಗೌಡರು ಹುಕ್ಕೇರಿಯ ದೇಸಾಯರಾಗಿ ಆಳ್ವಿಕೆ ನಡೆಸುತ್ತಿದ್ದರು.

ಕ್ರಿ.ಶ. ೧೮೧೮ರಲ್ಲಿ ಬ್ರಿಟಿಶರು ಪ್ರೇಶ್ವೆಗಳನ್ನು ಸೋಲಿಸಿ ಮೂಲೆಗೊತ್ತಿದಾಗ ಈ ದೇಸಗತಿ ಸಹಜವಾಗಿ ಬ್ರಿಟಿಶರ ವಶವಾಯಿತು. ಕ್ರಿ.ಶ. ೧೮೩೦ರ ಸುಮಾರಿಗೆ ಕಂಪನಿ ಸರಕಾರದವರು ಆಡಳಿತದ ಕ್ರೋಢೀಕರಣ ಮಾಡತೊಡಗಿದರು. ಈ ದ್ರಷ್ಟಿಯಿಂದ ಹಲವಾರು ಊರುಗಳನ್ನೂ, ಪ್ರದೇಶಗಳನ್ನು ಅಲ್ಲಿಂದಿತ್ತ ಇಲ್ಲಿಂದತ್ತ ವರ್ಗಾಯಿಸತೊಡಗಿದರು. ಆ ಪ್ರಸಂಗದಲ್ಲಿ ಮತ್ತು ಇದಕ್ಕೂ ಹಿಂದೆ ನಡೆದ ರಾಜಕೀಯ ಪರಿವರ್ತನೆಯಲ್ಲಿ ಹುಕ್ಕೇರಿ ಮುಂತಾದ ಊರುಗಳು ಕೈತಪ್ಪಿದ್ದರೂ ಒಟ್ಟಾರೆ ಅವರ ದೇಸಗತಿ ಹೆಚ್ಚಿನ ವಿಸ್ತಾರದಲ್ಲಿ ಅವರ ಅಧೀನವಾಗಿಯೇ ಉಳಿಯಿತು.

ಕ್ರಿ. ಶ. ೧೮೨೪ ರಲ್ಲಿ ಕಿತ್ತೂರ ದೇಸಗತಿ ನಷ್ಟವಾಯಿತು. ತರುವಾಯ ಸಂಗೊಳ್ಳಿ ರಾಯಣ್ಣ ಮುಂತಾದ ವೀರರು ಅದನ್ನು ಪುನ: ಸಂಪಾದಿಸುವ ಸಲುವಾಗಿ ದಂಗೆ ಎದ್ದದ್ದು ವ್ಯರ್ಥವಾಯಿತು. ಕ್ರಿ. ಶ ೧೮೩೦ ತರುವಾಯವೂ ಕಿತ್ತೂರಿನ ವಾರಸುದಾರರೆಂದು ಹೇಳಿಕೊಳ್ಳುವವರು ಅದನ್ನು ಪುನ: ಸಂಪಾದಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಅಂಥವರಲ್ಲಿ ಶಿವಲಿಂಗಪ್ಪ ಎಂಬುವನೂ ಒಬ್ಬ ಇವನು ಬಹುಶ: ಮಾಸ್ತಮರಡಿಯ ಗೌಡರ ಮಗನಾಗಿರಬೇಕು. ಇವನಿಗೆ ಒಂಟಮುರಿಯ ದೇಸಾಯರು ಹೆಣ್ಣು ಕೊಟ್ಟಿದ್ದರು. ಈ ಶಿವಲಿಂಗ ಕ್ರಿ.ಶ. ೧೮೪೫ ಸುಮಾರಿಗೆ ಪುನ: ಸಂಪಗಾವಿ ಮತ್ತು ಬೀಡಿಗಳಲ್ಲಿ ದಂಗೆ ಎಬ್ಬಿಸಲು ಹವಣಿಸಿದ. ಆದರೆ ಅದೆಲ್ಲ ವ್ಯರ್ಥವೆಂದು ಮನಗಂಡಿದ್ದ ಒಂಟಮುರಿಯ ದೇಸಾಯರು-ಬಹುಶ: ೧೬ನೆಯವರಾದ ಬಸವಪ್ರಭು ಎಂಬುವರು ಅವನಿಗೆ ತಿಳುವಳಿಕೆ ನೀಡಿ, ಅದನ್ನು ನಿಲ್ಲಿಸಿದ್ದಲ್ಲದೆ ಅವನನ್ನು ತಮ್ಮ ಆಶ್ರಯದಲ್ಲಿ ಇಟ್ಟುಕೊಂಡರು.

ಆಗೀಗ ಇವರ ಮನೆತನದಲ್ಲಿ ಗಂಡು ಸಂತಾನವಿಲ್ಲದ್ದರಿಂದ ಬೇರೆ ಬೇರೆ ಸೋದರ ಸಂಬಂಧಿ ಮನೆತನಗಳಿಂದ ಇವರು ದತ್ತಕ ಪಡೆಯುವ ಪ್ರಕ್ರಿಯೆ ನಡೆಯುತ್ತ ಬಂದಿದೆ. ಹಾಗೆ ಅಮ್ಮಣಗಿಯ ಮನೆತನದಿಂದ ದತ್ತಕ ಬಂದು ೧೯ನೆಯ ದೇಸಾಯರೆನಿಸಿಕೊಂಡವರು ರಾಜಾಲಖಮಗೌಡರು. ಇವರು ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿಸಿದರು. ಅಖಿಲ ಭಾರತ ವೀರಶೈವ ಮಹಾಸಭೆ, ಧಾರವಾಡ ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆ ಬೆಳಗಾವಿ ಕೆ.ಎಲ್.ಇ. ಸಂಸ್ಥೆ ಮುಂತಾದ ಸಂಸ್ಥೆಗಳ ಹುಟ್ಟು ಬೆಳವಣಿಗೆಗಳಿಗೆ ಬಹುದೊಡ್ಡ ಕಾಣಿಕೆಯಿತ್ತರು. ಪಾಶ್ಚಾಪುರ ಸ್ಟೇಶನದಿಂದ ಒಂಟಮುರಿಯವರೆಗೆ ಮತ್ತು ಒಂಟಮುರಿಯಿಂದ ರಾಷ್ಟೀಯ ಹೆದ್ದಾರಿಯ ವರೆಗೆ ರಸ್ತೆ ನಿರ್ಮಾಣ ಮಾಡಿಸಿದರು ಇವರೇ.

ಇತ್ತೀಚಿನವರೆಗೂ ಕೇಂದ್ರವಾದ ಒಂಟಮುರಿಯಲ್ಲಿ ಪ್ರಾಚೀನ ಕಾಲದ ಕೋಟೆಯ ಅವಶೇಷಗಳಿದ್ದವು. ಅಲ್ಲಿದ್ದ ಇನ್ನೂ ಹಲವಾರು ದೊಡ್ಡ ಕಟ್ಟಡಗಳು ವಾಸ್ತುಶಿಲ್ಪ ದೃಷ್ಟಿಯಿಂದ ತುಂಬ ಗಮನಾರ್ಹವೆನಿಸಿದ್ದವು. ಅವೆಲ್ಲ ಇಂದು ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿವೆ. ಕೋಟೆ ನಿರ್ಮಾಣದ ಕಾಲ, ಕರ್ತೃಗಳ ವಿವರಗಳು ಲಭ್ಯವಾಗಿಲ್ಲ. ಅದೇ ರೀತಿ ಇವರು ಹುಕ್ಕೇರಿಯಲ್ಲಿ ನೆಲೆಸಿದ್ದ ಬಗೆಗಿನ ಕುರುಹುಗಳಾವುವೂ ಉಳಿದಂತೆ ಕಾಣದು. ಈ ದಿಸೆಯಲ್ಲಿ ಯಾವುದೇ ಶೋಧ ಪ್ರಯತ್ನ ನಡೆದಿಲ್ಲವೆಂಬುದನ್ನು ನಾವು ಗಮನಿಸಬೇಕು.

ಇವರ ಕುಲದೇವರ ಬಗ್ಗೆ ಹಲವು ತೆರನಾದ ಅಭಿಪ್ರಾಯಗಳು ಕಂಡು ಬರುತ್ತವೆ. ಆಚರಣೆಗಳೂ ಅಷ್ಟೇ ಈಗ ಬಡಕುಂದ್ರಿ ಬಳಿ ಹುಕ್ಕೇರಿಯ ದಕ್ಷಿಣಕ್ಕೆ ೫ ಕಿಲೋ ಮೀಟರ ದೂರದಲ್ಲಿರುವ ಲಕ್ಕವ್ವ ಅಥವಾ ಹೊಳೆವ್ವ ಇವರ ಮನೆತನದ ಪ್ರಮುಖ ಆರಾಧ್ಯ ದೇವತೆ. ಒಂಟಮುರಿ ಮನೆತನದ ವಂಶಾವಳಿ ಒಂದರಲ್ಲಿಯೇ. ಸುಮಾರು ೫ ಜನ ದೇಶಾಯರಿಗೆ ಈ ದೇವಿಯ ಹೆಸರಿದೆ. ಅವಳ ದೇವಾಲಯಕ್ಕೆ ಇವರಿತ್ತ ಉಂಬಳಿಗಳು ಈಗಲೂ ಊರ್ಜಿತದಲ್ಲಿವೆ.

ಅದೇ ರೀತಿ ತೇರದಾಳದ ಬಸವಪ್ರಭುಗಳು ಮತ್ತು ಅವರ ತರುವಾಯದ ಪಟ್ಟಾಧಿಕಾರಿಗಳು ಇವರ ಮನೆತನದ ಗುರುಗಳು.[16] ತೇರದಾಳ ಮಠದೊಂದಿಗೆ ಇರುವ ಇವರ ಸಂಬಂಧ ತುಂಬಾ ಘನಿಷ್ಠವಾದುದು. ಕೆಲವರಂತೂ ಈ ಮಠದ ಪ್ರಭುಗಳು ತಮ್ಮ ಕುಲದೇವರೆಂದು ಭಾವಿಸುತ್ತಾರೆ. ಇದರಿಂದಾಗಿ ಒಂಟಮುರಿಯ ಶಾಖೆಯೊಂದರಲ್ಲಿಯೇ ಆರು ಜನ ‘ಬಸಲಿಂಗಪ್ರಭು’ಗಳು ಆಗಿ ಹೋಗಿದ್ದಾರೆ. ಇದಲ್ಲದೆ. ತೇರದಾಳದ ಬಸಲಿಂಗಪ್ರಭುಗಳ ಇನ್ನೊಂದು ಹೆಸರಾದ ‘ಮಗಿಯಪ್ರಭು’ ಎಂಬುದೂ ಇವರಲ್ಲಿ ಅನೇಕರಿಗೆ ಹೆಸರಿನಂತೆ ಬಳಕೆಯಾಗಿದೆ. ಹತ್ತನೆಯ ದೇಸಾಯಿಯ ಹೆಸರು ‘ಹೀರೆಮಗೆಪ್ಪ’ ಎಂದಿರುವುದನ್ನು ಇಲ್ಲಿ ನೆನೆಯಬಹುದು. ಇವರ ಇತರ ಶಾಖೆಗಳಲ್ಲಿ ಈ ‘ಮಗೆಪ್ಪ’ ಎಂಬ ಹೆಸರೂ ದೇವರ ಜಗುಲಿಯ ಮೇಲೆ ‘ಮಗಿ’ಯನ್ನಿಟ್ಟುಕೊಂಡು ಪೂಜಿಸುವುದೂ ಬಹು ವ್ಯಾಪಕವಾಗಿದೆ.

ಮಂಗಸೂಳಿಯ ಮೈಲಾರ ದೇವಾಲಯವನ್ನು ಕಟ್ಟಿಸಿದವರು. ಈ ಮನೆತನದವರೇ ಇವರ ಮನೆತನದ ಅನೇಕ ಶಾಖೆಯವರು ಮಂಗಸೂಳಿಯ ಶ್ರೀಮಲ್ಲಯ್ಯ/ಖಂಡೋಬಾ ದೇವರನ್ನು ತಮ್ಮ ಕುಲದೇವರಲ್ಲಿ ಒಬ್ಬ ಎಂದು ಭಾವಿಸುತ್ತಾರೆ. ಈ ಹೆಸರು ಒಂಟಮುರಿ ಮನೆತನದಲ್ಲಿ ಒಂದು ಸಲ ಮಾತ್ರ ಎಂದರೆ ೫ ನೆಯವನಾದ ಮಲಗೌಡ ದೇಸಾಯಿಗೆ ಬಂದಿದೆ. ಇದಲ್ಲದೆ ಇವರಲ್ಲಿ ಧೂಳಪ್ಪ ಮತ್ತು ಧರಿದೇವರ ಹೆಸರುಗಳೂ ವ್ಯಕ್ತನಾಮಗಳಾಗಿ ಬಂದಿವೆ. ‘ಧರಿ’ ಎಂದರೆ ವಿಜಾಪುರದ ಸಮೀಪ ಕನಮಡಿಯಲ್ಲಿರುವ ‘ಧರೀದೇವರು’ ಈ ದೇವರ ಸಂಬಂಧಿಯಾದ ಆಚರಣೆಗಳು ಅಥವಾ ಐತಿಹ್ಯಗಳು ಈಗ ಅಲಭ್ಯವಾಗಿವೆ. ಇದಲ್ಲದೆ ಇವರ ಅಮ್ಮಿನಭಾವಿಯ ಶಾಖೆ ಜೈನಮತಾವಲಂಬಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಇದನ್ನೆಲ್ಲ ಇಲ್ಲಿ ಸೂಚಿಸಲು ಕಾರಣ, ಈ ಪರಂಪರೆಗಳು ಎಷ್ಟೊಂದು ದೀರ್ಘವಾಗಿರುತ್ತವೆ ಎಂಬುದೇ ಆಗಿದೆ. ಇವು ಖಚಿತವಾಗಿ ಇತಿಹಾಸವನ್ನು ಬಹು ಹಿಂದಕ್ಕೆ ಕೊಂಡೊಯ್ಯುತ್ತವೆ.

ಒಟ್ಟಿನಲ್ಲಿ ಈ ಮನೆತನ ಕ್ರಿ.ಶ ೧೪೦೦ ಸುಮಾರಿಗೆ ಅಸ್ತಿತ್ವಕ್ಕೆ ಬಂದು, ಕಾಲನ ಹಲವಾರು ಆಘಾತಗಳನ್ನು ಸಹಿಸಿಯೂ ಇಪ್ಪತ್ತನೆಯ ಶತಮಾನದವರೆಗೆ ನಡೆದು ಬಂತು. ರಾಜಾ ಲಖಮಗೌಡರಂಥ ದೈವೀಪುರುಷರನ್ನು ಕರ್ನಾಟಕಕ್ಕೆ ಕಾಣಿಕೆ ನೀಡಿ, ಸಾರ್ಥಕ್ಯ ಪಡೆಯಿತು. ಬೆಳಗಾವಿ ಜಿಲ್ಲೆಯ ಎರಡನೆಯ ಅತಿ ದೊಡ್ಡ ದೇಸಗತಿ ಎನಿಸಿ ಮೆರೆದು, ಕ್ರಿ.ಶ ೧೯೭೫ ರಲ್ಲಿ ನಿರ್ಮಾಣವಾದ ಹಿಡಕಲ್‌ ಆಣೆಕಟ್ಟಿನಿಂದಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.

ಸಂದರ್ಭ ಸಾಹಿತ್ಯ

೧. A memoir of Saradar Raja lakhamagouda Basava Prabhu Pub. In 1941 by The literary committee. L.E. Association, Dharwad.

೨. An Historical Account of Belgaum Dist 1870 by H.J. Stokes.

೩. The imperal Gazetter of India-Govt. of India 1908. Clerendon press, Oxford.

೪. ನಿರಂಜನವಂಶ ರತ್ನಾಕರ-ಸಂ.ಫ.ಗು.ಹಳಕಟ್ಟಿ.

೫. ಬೆಳಗಾವಿ ಜಿಲ್ಲೆಯ ದೇಸಗತಿಗಳು-ಶ್ರೀ ಜಗದ್ಗುರು ವೀರಶೈವ ಸಂಸ್ಥಾನಮಠ, ಗದಗ ೧೯೮೯.

೬. ಮಹಲಿಂಗೇಂದ್ರ ವಿಜಯ (ಮಹದೇವ ಕವಿ) ಸಂ.ಡಾ.ಎಲ್. ಬಸವರಾಜು ೧೯೭೧. ಶ್ರೀ ಚಿತ್ರದುರ್ಗ ಬೃಹನ್ಮಠ ಸಂಸ್ಥಾನ.

೭. ಮುಂಬೈ ಇಲಾಖೆಯ ಗೆಜೆಟಿಯರ, ಅನು: ವೆಂಕಟ ರಂಗೋ ಕಟ್ಟಿ ಮುಂಬೈ ಸರಕಾರ ೧೯೯೩.

೮. ರಾಜಾಲಖಮಗೌಡರು : ಡಾ. ಎಸ್. ಜಿ. ಘಿವಾರಿ, ನಿವೃತ್ತ ಪ್ರಿನ್ಸಿಪಾಲರು-ಲಿಂಗರಾಜ ಕಾಲೇಜು, ಬೆಳಗಾವಿ, ೧೯೮೦. ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯಮಠ, ಗದಗ.

೯. ಶ್ರೀ ಮನ್ನಿರಂಜನ ಜಗದ್ಗುರು ಗ್ರಂಥಮಾಲೆ ಪುಷ್ಪ, ೮ ರಿಂದ ೧೨. ಸಂ. ಶ್ರೀ ಬುದ್ದಯ್ಯ ಮಗೆಯ್ಯ ಪುರಾಣಿಕ, ತೇರದಾಳ, ೧೯೩೦.

೧೦. ಡಾ. ಎಸ್.ಜಿ. ಘಿವಾರಿ, ಬೆಳಗಾವಿ, ಡಾ.ಸಿ.ಬಿ.ದೇಸಾಯಿ, ಯಾದಗುಡ್ಡ ಮುಂ. ಮಹನೀಯರೊಂದಿಗೆ ನಡೆಸಿದ ಸಂದರ್ಶನಗಳು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ”ವಿಜಯನಗರದ ಪತನದ ನಂತರ ಸುಮಾರು ೨೫೦ ವರ್ಷಗಳ ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಅನೆಕ ದೇಸಗತಿಗಳು ಹುಟ್ಟಿಕೊಂಡವು” ”ಬೆಳಗಾವಿ ಜಿಲ್ಲೆಯ ವೀರಶೈವ ದೇಸಗತಿಗಳು” ಪು-೨೫.

[2]ನೋಡಿ : Imperial Gezetter of India Vol. XIII p.p. 222-23.

[3] ”ರಾಜಾ ಲಖಮನಗೌಡರು” ಪುಟ-೧೨.

[4]ಮೈಲಾರಲಿಂಗ-ಖಂಡೋಬಾ ಪು. ೮೫.

[5]ರಾಜಾ ಲಖಮಗೌಡರಿಗೆ ಅರ್ಪಿಸಿದ ಸನ್ಮಾನ ಗ್ರಂಥ ೧೯೪೧. ಪು. ೧ ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಧಾರವಾಡ.

[6] The Historical Accounts of Belgaum District, p-23.

*ಇವನ ಬಳಿಕ ಈ ಮನೆತನದಲ್ಲಿ ಆರು ಶಾಖೆಗಳಾದವು : ೧. ದೇಸಗತಿಯ ಹಿರಿಯ ಮನೆತನ, ೨. ಅಮ್ಮಣಗಿಯ ಮನೆತನ ೩. ಸದಲಗೆಯ ಮನೆತನ ೪. ಕರಜಗಿ-ರಾಂಗೊಳಿ ಮನೆತನ ೫. ಗೌಡವಾಡ ಅಮ್ಮಿನಭಾವಿ ಮನೆತನ ೬. ಮಜತಿ ಮನೆತನ

[7]ಸದ್ಯ ಹನಗಂಡಿಯಲ್ಲಿರುವ ದೇಸಾಯಿ ಮನೆತನದವರು ಜೈನ ಧರ್ಮಾವಲಂಬಿಗಳೇ ಆಗಿರುವರೆಂದು ತಿಳಿದು ಬರುತ್ತದೆ. ಆದರೆ ಇವರು ತೇರದಾಳದ ಪ್ರಭುದೇವರ ಮಠಕ್ಕೆ ನಡೆದುಕೊಳ್ಳುವುದು ಮಾತ್ರ ಈಗಲೂ ಇದೆಯಂತೆ. ಇದಲ್ಲದೆ ಹುಕ್ಕೆರಿ ಬೆಳಗಾವಿ ಜಿಲ್ಲೆಯ ಒಂದು ಪ್ರಸಿದ್ಧ ಕೇಂದ್ರಪಟ್ಟಣವಾಗಿತ್ತೆಂಬ ವಿಷಯ ನಿರಂಜನ ವಂಶ ರತ್ನಾಕರದಿಂದ ಸ್ಪಷ್ಟವಾಗುತ್ತದೆ. ಈ ಅಂಶ ಮುಸಲ್ಮಾನ ಇತಿಹಾಸಕಾರರಿಂದಲೂ ಬ್ರಿಟಿಶ್ ಅಧಿಕಾರಿಗಳ ಬರಹಗಳಿಂದಲೂ ದೃಢಪಡುತ್ತದೆ. ಆದ್ದರಿಂದ ಈ ದೇಸಗತಿ ಮನೆತನ ಒಂಟ ಮುರಿಗಿಂತ ಮೊದಲು ಹುಕ್ಕೆರಿಯಲ್ಲಿತ್ತೆಂದು ಹೇಳುವ ಗೆಜೆಟಿಯರ್ ಅಭಿಪ್ರಾಯ ಸಾಧುವಾದುದೆಂದು ಹೇಳಬೇಕಾಗಿದೆ.

[8]ಶ್ರೀ ಬುದ್ದಯ್ಯ ಮಗೆಯ್ಯ ಪುರಾಣಿಕ (ತೇರದಾಳ) ಇವರು ತೋಂಟದ ಸಿದ್ಧಲಿಂಗ ಯತಿಗಳ ಕಾಲ ಕ್ರಿ.ಶ. ಸುಮಾರು ೧೪೭೦ ಇತ್ಯಾದಿಯಾಗಿ ಭಾವಿಸಿಕೊಂಡಿರುವುದರಿಂದ ಅವರು ತೇರದಾಳ ಮಠದ ಸ್ವಾಮಿಗಳ ಕಾಲಗಣನೆಯ ಬಗ್ಗೆ ಮಾಡಿಕೊಂಡ ಗ್ರಹಿಕೆಗಳು ಅಸಂಗತವಾಗಿವೆ ಎಂದು ಬೇರೆ ಹೇಳಬೇಕಾಗಿಲ್ಲ. ನೋಡಿ ಶ್ರೀ ಮನ್ನಿರಂಜನ ಜಗದ್ಗುರು ಗ್ರಂಥ ಮಾಲೆ ೧೯೩೧ ಪುಷ್ಪ ೮-೧೨ರ ವರೆಗಿನ ಮುನ್ನುಡಿಗಳು.

[9] The imperial Gazetteer of India Vol. XIII- p-222-223.

[10] The Historical Accounts of Belgaum Dist. p. 11.

[11]ವಿಜಾಪುರದಲ್ಲಿ ಆದಿಲ್‌ಶಾಹಿಗಳು ಕ್ರಿ.ಶ. ೧೪೮೯ ರಲ್ಲಿ ತಮ್ಮ ಸ್ವಾತಂತ್ರವನ್ನು ಘೋಷಿಸಿ ಕೊಂಡರು. ತರುವಾಯ ಒಬ್ಬರಾದ ಮೇಲೆ ಒಬ್ಬರಂತೆ, ಬೀದರ, ಅಹಮ್ಮದನಗರ, ಗೋವಳಕೊಂಡಗಳು ಸ್ವಾತಂತ್ಯ್ರ ಸಾರಿದವು. ಬಹುಮನಿ ರಾಜ್ಯ ಅಸ್ತಂಗತವಾಯಿತು.

[12] The Historical Asscounts of Belgaum Dist. p-22-23.

[13]ಅದೇ.

[14]ಸಿರಸಂಗಿಯವರು ಭಾಗವಹಿಸಿದ್ದು ಮಾತ್ರ ಖಚಿತ. ಅವರು ಆದಿಲಶಾಹಿಗಳ ಪರವಾಗಿ ತೊರಗಲ್ಲು, ತೇರದಾಳ, ಯಾದವಾಡ, ಸತ್ತಿಗೇರಿ, ಮುದಕವಿ, ಸವದತ್ತಿ, ಗೋವನಕೊಪ್ಪ, ಯಕ್ಕುಂಡಿ, ಅಸುಂಡಿ, ಹೂಲಿ ಮತ್ತು ಮುರಗೋಡಗಳನ್ನು ಈ ದೇಸಾಯಿ ಕೊಕಟನೂರಿ ನಿಂದ ಬಂದು ವಶಪಡಿಸಿಕೊಂಡನು. ಈ ಸಮಯದಲ್ಲಿ ಕೊಕಟನೂರಿನ (ತರುವಾಯ ಸಿರ ಸಂಗಿಯ) ಈ ದೇಸಾಯಿ ೧೦೦೦ ಕುದುರೆ ಸವಾರರು ಮತ್ತು ೨೦೦೦ ಕಾಲುದಳಗಳ ಸೈನ್ಯದೊದಿಗೆ ಬಿಜಾಪುರದವರ ಬೆಂಬಲಕ್ಕಿದ್ದನು. ಅದರಿಂದಾಗಿ ಇವರಿಗೆ ತೊರಗಲ್ಲು ಪ್ರಾಂತದ ಸರ ದೇಸಾಯರೆಂದು ಕ್ರಿ.ಶ. ೧೫೬೬ರಲ್ಲಿ ಅಧಿಕಾರ ಪ್ರಾಪ್ತವಾಯಿತು. ಅದೇ-ಪುಟ ೩೫-೩೬.

[15] An Historical Account of Belgaum Dist. 9-52.

[16]ತೇರದಾಳ ಮಠದ ಮೂಲಪುರುಷರು ಶ್ರೀ ಬಸವಪ್ರಭುಸ್ವಾಮಿಗಳು; ೧೨ನೆಯ ಶತಮಾನದ ಅಲ್ಲಮಪ್ರಭುದೇವರೆಲ್ಲ ಇದು ವಸ್ತುಸ್ಥಿತಿ.