ಈವರೆಗೆ ಹಲವಾರು ವಿದ್ವಾಂಸರು ವೀರಶೈವ ಶರಣರನ್ನು ಕರ್ನಾಟಕದ ಶಾಸನಗಳಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಜೆ.ಎಫ್. ಪ್ಲೀಟ, ಆರ್. ನರಸಿಂಹಾಚಾರ್, ಬಿ. ಶಿವಮೂರ್ತಿಶಾಸ್ತ್ರಿ, ನಾ.ಶ್ರೀ. ರಾಜಪುರೋಹಿತ, ಪಿ. ಬಿ ದೇಸಾಯಿ, ಆರ್.ಸಿ. ಹಿರೇಮಠ, ಎಸ್.ಸಿ. ನಂದೀಮಠ ಮೊದಲಾದವರನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಈ ಹಿರಿಯ ವಿದ್ವಾಂಸರ ಪ್ರಯತ್ನಗಳನ್ನು ಮುಂದುವರೆಸಿ ಡಾ || ಎಂ. ಎಂ. ಕಲಬರ್ಗಿಯವರು ‘ಶಾಸನಗಳಲ್ಲಿ ಶಿವಶರಣರು’ ಎಂಬ ಪುಸ್ತಕದಲ್ಲಿ ತಮ್ಮ ಹಲವಾರು ಹೊಸ ವಿಚಾರಗಳನ್ನು ಕ್ರೋಢೀಕರಿಸಿ ಅಭ್ಯಾಸಿಗಳಿಗೆ ತುಂಬ ಉಪಯುಕ್ತ ಮಾಹಿತಿಗಳನ್ನು ಒದಗಿಸಿಕೊಟ್ಟರು. ಈ ಎಲ್ಲ ವಿದ್ವಾಂಸರೂ ಹೆಚ್ಚಾಗಿ ಶಾಸನಗಳಲ್ಲಿ ಶರಣರನ್ನು ಗುರುತಿಸುವತ್ತ ಹಾಗೂ ಅವರ ಕಾಲಗಳನ್ನು ನಿಗದಿಗೊಳಿಸುವತ್ತ ಲಕ್ಷ್ಯ ಕೇಂದ್ರೀಕರಿಸಿದ್ದು ಕಂಡುಬರುತ್ತದೆ. ಹೀಗೆ ಶರಣರನ್ನು ಗುರುತಿಸುವ ದಿಶೆಯಲ್ಲಿ ಎವರು ಆಧಾರವಾಗಿಟ್ಟುಕೊಂಡ ಗ್ರಾಂಥಿಕ ಸಾಮಗ್ರಿ ಎಂದರೆ ಶರಣರೇ ಬರೆದ ವಚನಗಳನ್ನು ಹರಿಹರಕವಿಯ ರಗಳೆಗಳು. ಲಕ್ಕಣ್ಣ ದಂಡೇಶನ ‘ಶಿವತತ್ತ್ವ ಚಿಂತಾಮಣಿ’ ಗುಬ್ಬಿಯ ಮಲ್ಲಣಾರ್ಯನ ‘ವೀರಶೈವಾಮೃತ ಮಹಾಪುರಾಣ,’ ವಿರೂಪಾಕ್ಷ ಪಂಡಿತನ ‘ಚೆನ್ನಬಸವ ಪುರಾಣ’ ‘ಶೂನ್ಯ ಪಂಪಾದನೆ,’ ಗಳು ಸಿದ್ದನಂಜೇಶನ ‘ಗುರುರಾಜ ಚಾರಿತ್ರ,’ ‘ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ’ ಮುಂತಾದ ಪ್ರಮುಖ ಕೃತಿಗಳು ಈ ಕೃತಿಗಳಲ್ಲಿ ಉಲ್ಲೇಖಿತರಾದ ವೀರಶೈವ ಪರಂಪರೆಯ ಹಲವಾರು ಮಹಾವ್ಯಕ್ತಿಗಳು ಮತ್ತು ಅವರ ಇಷ್ಟಲಿಂಗ, ಊರು ಮುಂತಾದ ಸಂಗತಿಗಳ ಆಧಾರಗಳಿಂದ ಅವರನ್ನು ಗುರುತಿಸಿಕೊಂಡು ಶಾಸನ ಮತ್ತು ಗ್ರಂಥಗಳಲ್ಲಿ ಕಂಡ ಬರುವ ಚಾರಿತ್ರಿಕ ಮಹತ್ತ್ವದ ಸಂಗತಿಗಳನ್ನು ವಿವೇಚಿಸುವ ಪ್ರಯತ್ನ ನಮ್ಮಲ್ಲಿ ಹಲವಾರು ದರ್ಶಕಗಳಿಂದ ನಡೆಯುತ್ತ ಬಂದಿದೆ. ಎಂದರೆ ಬಹು ದೀರ್ಘ ಪ್ರಯತ್ನದ ಹಿನ್ನಲೆ ಈ ನಿಟ್ಟಿನ ಅಧ್ಯಯನದಲ್ಲಿ ಅಡಕಗೊಂಡಿರುವುದು ಸ್ಪಷ್ಟ.

ಈ ತೆರನಾದ ಪ್ರಯತ್ನಗಳಿಂದ ಹಲವಾರು ಹೊಸ ಸಂಗತಿಗಳು ಬೆಳಕಿಗೆ ಬಂದುವಲ್ಲದೆ ವೀರಶೈವ ಪರಂಪರೆ ಮುಂದುವರಿಯುತ್ತ ಬಂದ ಹಲವಾರು ಮಾರ್ಗಗಳು ಗುರುತಿಸಲ್ಪಟ್ಟವು. ಇವಲ್ಲದೆ ಕೆಲಮಟ್ಟಿನ ಆಂತರಿಕ ಭಿನ್ನತೆಯುಳ್ಳ ವೀರಶೈವದ ಬೇರೆ ಬೇರೆ ಶಾಖೆಗಳು ಕೂಡ ಅಸ್ತಿತ್ವದಲ್ಲಿದ್ದುದನ್ನು ಶಾಸನಗಳಿಂದ ಗುರುತಿಸಲು ಸಾಧ್ಯ ಎಂಬುದು ನಮ್ಮ ಅನಿಸಿಕೆ. ಅಂಥ ಮುಖ್ಯವಾದ ಕೆಲವು ಅಂಶಗಳತ್ತ ವಿದ್ವಾಂಸರ ಗಮನಸೆಳೆಯುವುದು ಈ ಲೇಖನದ ಉದ್ದೇಶ.

ಈಗ ತಿಳಿದುಬರುವಂತೆ ಚಾಲುಕ್ಯದೊರೆ ಜಯಸಿಂಹನ ರಾಣಿ ಸುಗ್ಗಲೆಯನ್ನು ಉಲ್ಲೇಖಿಸುವ ಶಾಸನಗಳೇ ಅತ್ಯಂತ ಪ್ರಾಚೀನವಾದುವೆಂದು ಹೇಳಬಹುದು. ಜಗದೇಕಮಲ್ಲ ಜಯಸಿಂಹ ಅಥವಾ ಒಂದನೆಯ ಜಗದೇಕಮಲ್ಲನ ಕಾಲ ಕ್ರಿ. ಶ. ೧೦೧೮ ರಿಂದ ೧೦೪೨ರ ವರೆಗೆ. ಈ ಅವಧಿಯ ಕ್ರಿ.ಶ. ೧೦೨೯ ರಲ್ಲಿ ಹುಟ್ಟಿದ ದೇವೂರಿನ ಶಾಸನ (S.I.I. XX, NO. 23) ಸುಗ್ಗಲೆಯನ್ನು ನಮಗೆ ಮೊದಲ ಬಾರಿ ಪರಿಚಯಿಸುತ್ತೆವೆ. ವೀರಶೈವ ಕೃತಿಗಳಲ್ಲಿ ಈ ಸುಗ್ಗಲೆಯ ಗುರು ‘ಮುದಿನೀರ ದೇವರ ದಾಸಿಮಯ್ಯ’ ನೆಂದು ಹೇಳಿದೆ.

ಮಹಾರಾಣಿ ಸುಗ್ಗಲೆ ಹನ್ನೊಂದನೆಯ ಶತಮಾನದ ಪೂರ್ವಾರ್ಧವೆಂದಾದರೆ ಆಕೆಯ ಗುರು ಎಂದು ತಿಳಿದುಬರುವ ಜೇಡರದಾಸಿಮಯ್ಯ ಅವಳ ಸಮಕಾಲೀನ ಅಥವಾ ಹಿರಿಯ ಸಮಕಾಲೀನನಾಗುತ್ತಾನೆ. ಆದರೆ ಅದೇ ಕಾಲದಲ್ಲಿ ಅವನನ್ನು ಹೆಸರಿಸುವ ಶಾಸನಗಳು ಸಿಕ್ಕಿಲ್ಲ. ಕ್ರಿ.ಶ. ೧೧೪೮ ರಲ್ಲಿ ಹುಟ್ಟಿದ ಗೊಬ್ಬೂರು ಶಾಸನ ಜೇಡರದಾಸಿಮಯ್ಯ ಮತ್ತು ಅವನ ಇಷ್ಟಲಿಂಗ ರಾಮನಾಥನ ಉಲ್ಲೇಖವುಳ್ಳ ಪ್ರಾಚೀನತಮ ದಾಖಲೆ ಎನಿಸಿದೆ: ಇದೇ ರೀತಿ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಅಥವಾ ಅವನ ಆಳ್ವಿಕೆಯಲ್ಲಿ ದಂಡನಾಯಕನಾಗಿದ್ದ ಕೊಂಡಗುಳಿಯ ಕೇಶಿರಾಜನನ್ನು ಉಲ್ಲೇಖಿಸುವ ಕ್ರಿ.ಶ ೧೧೦೭ರ ಕೊಂಡಗುಳಿ ಶಾಸನಗಳು ಅತ್ಯಂತ ಪ್ರಾಚೀನ ದಾಖಲೆಯೆನಿಸಿವೆ. ಡಾ. ಎಂ. ಎಂ ಕಲಬುರ್ಗಿಯವರು ‘ಶಾಸನಗಳಲ್ಲಿ ಶಿವಶರಣರು’ ಎಂಬ ತಮ್ಮ ಪ್ರಸಿದ್ಧ ಕೃತಿಯಲ್ಲಿ ಈ ವಿಷಯವನ್ನು ಚರ್ಚಿಸಿದ್ದಾರೆ.

ಎಂದರೆ ಬಸವ ಪೂರ್ವದಲ್ಲಿ ಜೇಡ (ನೇಕಾರ) ಕುಲದ ದಾಸಿಮಯ್ಯ ಮತ್ತು ವಾಜಿಕುಲದ ಕೇಶಿರಾಜ ದಂಡನಾಯಕ ಇವರ ಮಧ್ಯದ ಸುಗ್ಗಲೆ ವೀರಶೈವದ ಪ್ರಾರಂಭಕ್ಕೆ ಅಡಿಗಲ್ಲನ್ನಿಟ್ಟ ಹಿರಿಯರೆಂಬುದು ವ್ಯಕ್ತವಾಗುತ್ತದೆ. ಸುಗ್ಗಲೆಯನ್ನು ಹೊರತುಪಡಿಸಿ ಉಳಿದಿಬ್ಬರೂ ಸಾಹಿತ್ಯ ರಚನೆ ಮಾಡಿದ್ದಾರೆ.

ಇವರ ತರುವಾಯ ಹಲವು ಜನ ಶರಣರ ಹೆಸರುಗಳು ಶಾಸನಗಳಲ್ಲಿ ಗೋಚರಿಸುತ್ತವೆ. ಅವರ ಪೈಕಿ ಅಲಂದೆಯಲ್ಲಿ ಜನಿಸಿ ಪುಲಿಗೆರೆಯಲ್ಲಿ ತಪಗೈದು ಅಬ್ಬಲೂರಲ್ಲಿ ಪವಾಡಮೆರೆದು ವೀರಶೈವ ಹಬ್ಬುಗೆಯಲ್ಲಿ ದೊಡ್ಡಪಾತ್ರವಹಿಸಿದ್ದ ಏಕಾಂತರಾಮಯ್ಯ ಕ್ರಿ.ಶ. ೧೧೬೦ ರಿಂದ ಸು. ೧೨೦೦ ರವರೆಗೂ ಜೇವಿಸಿದ್ದನೆಂದು ಅಬ್ಬಲೂರ ಶಾಸನ ಹೇಳುತ್ತದೆ.

ಏಕಾಂತ ರಾಮಯ್ಯನನ್ನು ಪ್ರಸ್ತುತ ಶಾಸನವು “ಏಕಾಗ್ರ ಭಕ್ತಿಯೋಗದಿನ್ ಏಕಾಕಿ ಎನಲ್ಕೆ ಸಂದು ಶಿವನಂ ಪಿರಿದಪ್ಪ ಏಕಾಂತದೊಳ್ ಆರಾಧಿಸಿ ಏಕಾಂತರಾಮನೆಂಬ ಪೆಸರಂ ಪಡೆದಂ” ಎಂದು ವರ್ಣಿಸುತ್ತದೆ. ಮುಂದೆ ಕೊಂಚಕಾಲದ ಅನಂತರ ಕ್ರಿ.ಶ. ೧೨೦೭ರಲ್ಲಿ ಹುಟ್ಟಿದ ಬಂದಳಿಕೆ ಶಾಸನದಲ್ಲಿ ಏಕಾಂತದ ರಾಮಯ್ಯಗಳ ‘ಮಂಮ (ಎಂದರೆ ಮೊಮ್ಮಗ) ರಾಮದೇವಭಟ್ಟ’ ನನ್ನು ಹೆಸರಿಸಲಾಗಿದೆ. ಈತ ಒಂದು ಚಿಕ್ಕ ಉಂಬಳಿ ಪಡೆದಿದ್ದನೆಂಬ ವಿಷಯ ಮಾತ್ರವಿದ್ದು ಹೆಚ್ಚಿನ ವಿವರಗಳು ಲಭ್ಯವಿಲ್ಲ.[1] ಆದರೆ ಕ್ರಿ.ಶ.ಸು. ೧೫ನೆಯ ಶತಮಾನದ ಕೆಂಪನಪುರ ಶಾಸನ[2] “ಏಕಾಂತರಾಮೇಶ್ವರ ಅನ್ವಯೋಧ್ಪೂತ…… ವೀರಶೈವಮತ ಸ್ಥಾಪನಾಚಾರ್ಯ ಶ್ರೀಮದೇಕಾಂತ ಬಸವೇಶ್ವರ ದೇವರ” ಎನ್ನುವ ಮಹತ್ವದ ವ್ಯಕ್ತಿಗಳನಗನು ಪರಿಚಯಿಸುತ್ತದೆ. ಏಕಾಂತ ಬಸವೇಶ್ವರ ಎಂಬ ಹೆಸರು ತುಂಬ ವಿಶಿಷ್ಟವಾಗಿದ್ದು, ಎರಡು ವಿಷಯಗಳನ್ನು ನಮಗೆ ಮನದಟ್ಟು ಮಾಡುತ್ತದೆ, ಒಂದು, ಏಕಾಂತ ರಾಮಯ್ಯನ ಪರಂಪರೆಯೊಂದು ಖಚಿತವಾಗಿ ೧೫ನೆಯ ಶತಮಾನದವರೆಗೆ ಮುಂದುವರೆದಿತ್ತು ಎನ್ನುವುದು. (ಈ ವ್ಯಕ್ತಿಏಕಾಂತರಾಮಯ್ಯನ ನೇರವಂಶಜ ಅಥವಾ ಆತನ ಮತ (ಮಠ?) ಪರಂಪರೆಯಲ್ಲಿ ಬಂದವನಾಗಿರಬೇಕು ಬಹುಶಃ ಎರಡನೆಯ ಅಭಿಪ್ರಾಯ ಹೆಚ್ಚು ಸೂಕ್ತವೆಂದು ಹೇಳಬಹುದು) ಇನ್ನೊಂದು, ಇದರೊಂದಿಗೆ ಇವನಿಗೆ ಬಸವೇಶ್ವರ ಎಂಬ ಹೆಸರಿರುವುದು, ವೀರಶೈವದ ಪ್ರಮುಖ ನೇತಾರ ಶ್ರೀಸಂಗನ ಬಸವೇಶ್ವರರ ಪರಂಪರೆಯೊಂದಿಗೆ ತನ್ನ ಸ್ಪಷ್ಟ ಸಂಬಂಧ ಕಲ್ಪಿಸಿಕೊಂಡಿರುವುದರ ದ್ಯೋತಕವಾಗಿದೆ.

ಇದಲ್ಲದೆ ಶಾಸನ ಇನ್ನೂ ಹಲವಾರು ಮಹತ್ವದ ಅಂಶಗಳಗನ್ನು ಬಯಲುಗೊಳಿಸುತ್ತದೆ. “ಅನೇಕಾಂತಾದಿ ವಿರುದ್ದ ವಾಗ್-ವಿಘಟನ ಪ್ರೌಢಪ್ರತಾಪೋಜ್ಜಲಃ ಸ್ವಸಿದ್ಧೋಃ ಮಹಾನ್ ಏಕಾಂತ ಸ್ಥಿತಿವಾನ್” ಎಂದು ವರ್ಣಿಸಿದೆ. ಅಬ್ಬಲೂರು ಶಾಸನ ಹೇಳುವಂತೆ ಶಿವನನ್ನು ಕೇವಲ ಏಕಾಂತದಲ್ಲಿ ಪೂಜಿಸಿದ್ದರಿಂದಾಗಿ ಅವನಿಗೆ ಏಕಾಂತ ರಾಮಯ್ಯನೆಂದು ಹೆಸರಾಗಲಿಲ್ಲ; ಬದಲು ಅನೇಕಾಂತವಾದದ ವಿರೋಧಿಯಾದ್ದರಿಂದ ‘ಏಕಾಂತವಾದ’ ಎಂಬುದನ್ನು ಪ್ರಸ್ತುತ ಕೆಂಪನಪುರ ಶಾಸನ ದೃಢೀಕರಿಸುತ್ತದೆ. ನಮ್ಮ ವಿದ್ವಾಂಸರು ‘ಏಕಾಂತ’ ಶಬ್ದಕ್ಕೆ ಈ ಅರ್ಥವನ್ನು ಗ್ರಹಿಸಿದ್ದರು. ಆದರೆ ಆ ಬಗ್ಗೆ ಹೆಚ್ಚಿನ ಪರಾಮರ್ಶೆ ಮಾಡಿರಲಿಲ್ಲ. ನಮಗೆ ತಿಳಿದುಬರುವಂತೆ ಅನೇಕಾಂತವಾದ ಎಂದರೆ ಮುಖ್ಯವಾಗಿ ಜೈನ ಮತ್ತು ದ್ವೈತ ಸಿದ್ಧಾಂತಗಳು ಇವು ಕರ್ನಾಟಕದಲ್ಲಿ ತುಂಬ ಪ್ರಚಲಿತವಾಗಿದ್ದವು. ಈ ಹಿನ್ನಲೆಯಲ್ಲಿ ರಾಮಯ್ಯ ಜೈನರನ್ನುವಾದದಲ್ಲಿ ಗೆದ್ದನೆಂದಿರುವುದು ಇದಕ್ಕೆ ಪೋಷಕವಾಗಿದೆ. ದ್ವೈತ ಸಿದ್ಧಾಂತ ಆ ಕಾಲದಲ್ಲಿ ಅಷ್ಟು ಮುಖ್ಯವಾಗಿರುವಂತೆ ಕಾಣದು. ಆದರೆ ೧೫ನೆಯ ಶತಮಾನದ ಏಕಾಂತ ಬಸವೇಶ್ವರನ ಕಾಲದಲ್ಲಿ ಅದೂ ಕೂಡ ಪ್ರಬಲ ಸಿದ್ಧಾಂತವಾಗಿ ಕರ್ನಾಟಕದಲ್ಲಿ ನೆಲೆಸಿತ್ತು. ಏಕಾಂತ ಬಸವೇಶ್ವರ ತಾನ ‘ಅನೇಕಾಂತಾದಿ ವಿರುದ್ಧವಾಗ್ವಿಘಟನ ‌ಪ್ರೌಢ ಪ್ರತಾಪೋಜ್ವಲಃ” ಎಂದಿರುವಲ್ಲಿ ಎರಡೂ ಅನೇಕಾಂತವಾದಗಳ ಹಿನ್ನೆಲೆ ಇದೆ ಎನ್ನಬಹುದು.

ಇನ್ನು ಕೆಂಪನಪುರ ಶಾಸನ ಪ್ರಯೋಗಿಸಿರುವ ‘ವೀರಶೈವ’ ಎಂಬ ಪದ ಬಹುಮಖ್ಯವಾದುದು. ಈ ಶಾಸನ ಈ ನಿಟ್ಟಿನಲ್ಲಿ ಅತಿಪ್ರಾಚೀನ ದಾಖಲೆಯೆಂದು ಹೇಳಿದರೂ ನಡೆದೀತು. ವೀರಶೈವ ಧರ್ಮದಲ್ಲಿ ಹಲವಾರು ಪಾರಿಭಾಷಿಕ ಪದಗಳ ಪ್ರಚುರವಾಗಿವೆ. ಇಷ್ಟಲಿಂಗ, ಷಟ್‌ಸ್ಥಲ, ಪಂಚಾಚಾರ ಶಿವಯೋಗ, ಅಷ್ಟಾವರಣ, ಶರಣ, ಲಿಂಗೈಕ್ಯ, ಲಿಂಗಾಂಗ ಸಾಮರಸ್ಯ, ದ್ವೈತ್ವಾದ್ವೈತ, ಶಿವಾದ್ವೈತ ಇತ್ಯಾದಿ. ಇವಲ್ಲದೆ ಶಾಸನಗಳಲ್ಲಿ ಆಗೀಗ ಕಂಡುಬರುವ ಗಣಕುಮಾರಿ ಗಣಂಗಳು, ವೀರಮಾಹೇಶ್ವರ, ಭಕ್ತರು ಇತ್ಯಾದಿ ಪದಗಳು ಕೂಡ ವೀರಶೈವಕ್ಕೇ ಸಂಬಂಧ ಪಟ್ಟಿವೆ. ಈಗ ಲಿಂಗಾಯತ/ಲಿಂಗವಂತ ಮತ್ತು ವೀರಶೈವ ಎಂಬವು ಈ ಧರ್ಮಕ್ಕೆ ಎಲ್ಲೆಡೆ ಪ್ರಯೋಗಗೊಳ್ಳುತ್ತಿವೆ. ಯಾದರೂ ಶಾಸನಗಳಲ್ಲಿ ಇವು ಬಹು ಹಿಂದೆ ಬಳಕೆಯಾದದ್ದು ಕಾಣದು. ಕಾರಣ ‘ವೀರಶೈವ’ ಪದ ಪ್ರಯೋಗವುಳ್ಳ ಕೆಂಪನಪುರ ಶಾಸನಕ್ಕೆ ತುಂಬ ಮಹತ್ತ್ವವಿದೆ ಎಂದು ಹೇಳಬೇಕು.

ದೇವರ ದಾಸಿಮಯ್ಯನ ಪರಂಪರೆ ಲಕುಲೀಶ ಪಾಶುಪತದೊಂದಿಗೆ ನೇರ ಸಂಬಂಧ ಪಡೆದುದು ಎಂದು ಕಪಟರಾಳರಂಥವರು ಹೇಳಿರುವ ವಿಚಾರವನ್ನು ಹಲವು ವಿದ್ವಾಂಸರು ಮುಂದುವರೆಸಿ ಅದೇ ಮುಂದೆ ‘ಅಭಿನವ ಪಾಶುಪತೆ’ ಎಂದು ವೀರಶೈವಕ್ಕೆ ಇನ್ನೂ ಸಮೀಪ ಬಂತೆಂದು ಶಾಸನಾಧಾರಗಳಿಂದ ಹೇಳುತ್ತದ್ದಾರೆ. ಇದು ಖಚಿತವೆಂದಾದರೆ ವೀರಶೈವದ ಪ್ರಾರಂಭದ ಹಂತದಲ್ಲಿ ಲಕುಲೀಶ-ಪಾಶುಪತದಂತೆ ಏಕಾಂತವಾದಿಗಳು ಎಂದರೆ ಬಹುತೇಕ ಅದ್ವೈತಿಗಳು, ಕನಿಷ್ಠಪಕ್ಷಕ್ಕೆ ಅವರಲ್ಲಿ ಕೆಲವರಾದರೂ ಈ ಪರಂಪರೆಯ ಮುಂಚೂಣಿ ಹಿಡಿದರೆಂದು ಹೇಳಬೇಕಾಗುತ್ತದೆ. ಈ ಸಂಗತಿಗಳನ್ನು ಶಾಸನಗಳು ತಿಳಿಸಿಕೊಡುವಂತೆ ವೀರಶೈವ ಸಾಹಿತ್ಯ ಕೃತಿಗಳು ಪರಿಚಯಿಸುವುದಿಲ್ಲವೆಂಬುದು ಸ್ಪಷ್ಟ. ಇಲ್ಲಿ ನೆನಪಿಗೆ ಬರುವ ಒಂದು ಅಪವಾದವೆಂದರೆ ಲಕ್ಕಣ್ಣ ದಂಡೇಶ ತಿಳಿಸುವ ಕ್ರಿಯಾಶಕ್ತಿಯತಿರಾಯನ ಸ್ಮರಣೆ ಮಾತ್ರ.

 

[1]ಬಂದಳಿಕೆ ಶಾಸನ-EC VII, ಶಿಕಾರಿಪುರ ೨೩೫ ಕ್ರಿ.ಶ. ೧೨೦೭ ಮತ್ತು ಹನುಮಾಕ್ಷಿಗೋಗಿಯವರ ಲೇಖನ, ಕ.ಭಾ. ೧೦-೧.

[2]ಕೆಂಪನಪುರ ಶಾಸನ-ಚಾಮರಾಜನಗರ ೧೪೪, ಕ್ರಿ.ಶ.ಸು. ೧೫ನೆಯ ಶತಮಾನ ಮತ್ತು ಕ.ಭಾ. ೯-೪ ರಲ್ಲಿ. ಡಾ || ಬಿ.ಆರ್. ಹಿರೇಮಠದ ಲೇಖನ.