ಶಿವನದಕ್ಷಾಧ್ವರ ಸಂಹಾರ ಲೀಲೆ ಪ್ರಸಿದ್ಧವಾದುದು. ಪಂಚವಿಂಶತಿ ಲೀಲೆಗಳಲ್ಲಿ ಬ್ರಹ್ಮ ಕಪಾಲಚ್ಛೇದ ಲೀಲೆಯಂತೆ ಇದೂ ಒಂದು ಸಂಹಾರಲೀಲೆ ಎಂದು ಪರಿಗಣಿತವಾಗಿದೆ. ಲಿಂಗ, ಸ್ಕಂದ, ಶಿವ ಪುರಾಣಗಳಲ್ಲಷ್ಟೆ ಅಲ್ಲದೆ, ಮತ್ಸ್ಯ, ವಿಷ್ಣು, ವಾಯು, ಬ್ರಹ್ಮಾಂಡ, ಭಾಗವತ ಪುರಾಣಗಳು ಹಾಗೂ ಮಹಾಭಾರತದಲ್ಲಿ ಕೂಡ ಈ ಲೀಲೆಯ ಉಲ್ಲೇಖವಿದೆ. ಯಜ್ಞಯಾಗಾದಿ ಹಿಂಸಾತ್ಮಕ ಸಂಸ್ಕೃತಿಯ ಬಗ್ಗೆ ಜನಸಾಮಾನ್ಯರಲ್ಲಿ ವಿರೋಧ ವ್ಯಕ್ತವಾಗತೊಡಿದಾಗ ಈ ಕಥೆ ಹುಟ್ಟಿರುವಂತೆ ಊಹಿಸಬಹುದು.

ಹಿಂದೂ ಪುರಾಣಗಳ ವಿವರಗಳನ್ನು ಶಿಲ್ಪದಲ್ಲಿ ಚಿತ್ರಿಸುವ ಸಂದರ್ಭಗಳಲ್ಲಿ ಆನುಷಂಗಿಕವಾಗಿ ವೀರಭದ್ರನ ಶಿಲ್ಪಗಳನ್ನು ನಮ್ಮ ಪ್ರಾಚೀನ ದೇವಾಲಯಗಳಲ್ಲಿ ಆಗೀಗ ಕಾಣಬಹುದು. ಆದರೆ ಶಾಸನಗಳಲ್ಲಿ ವೀರಭದ್ರನ ಉಲ್ಲೇಖ ಅಷ್ಟು ಪ್ರಾಚೀನ ಕಾಲದಲ್ಲಿ ಕಂಡುಬರದು. ಭಾರತವರ್ಷದ ತುಂಬ ವೀರಭದ್ರದೇವರ ಆರಾಧನೆ ನಡೆಯುತ್ತಿತ್ತು ಮತ್ತು ಈಗಲೂ ನಡೆಯುತ್ತಿದೆಯಾದರೂ ಈ ದೇವರ ಆರಾಧನೆ ದಕ್ಷಿಣಾಪಥದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ಆಂಧ್ರಗಳಲ್ಲಿ ವ್ಯಾಪಕವಾಗಿರುವಂತೆ ಇತರೆಡೆಗಳಲ್ಲಿ ಅಷ್ಟಾಗಿ ಇಲ್ಲ. ತಮಿಳರಲ್ಲಿ ಶಿವನ ಪುತ್ರನೆನಿಸುವ ಷಣ್ಮುಖ ಮಹಾರಾಷ್ಟ್ರದಲ್ಲಿ ಶಿವನ ಇನ್ನೊಬ್ಬ ಪುತ್ರ ಗಣಪತಿ ಇವರ ಆರಾಧನೆ ವಿಶೇಷವಾಗಿದೆ. ಎಂದರೆ ದಕ್ಷಿಣಾಪಥದಲ್ಲಿಯೂ ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳಗಳಲ್ಲಿ ವೀರಭದ್ರದೇವರ ಆರಾಧನೆ ಅಷ್ಟಾಗಿ ಇಲ್ಲ.

ಹೀಗಾಗಿ ಕರ್ನಾಟಕ ಮತ್ತು ಆಂಧ್ರಗಳಲ್ಲಿ ಈ ದೇವರನ್ನು ಕುರಿತ ಶಾಸನೋಲ್ಲೇಖಗಳು ಹೆಚ್ಚಾಗಿ ಕಂಡುಬರುತ್ತವೆ. ಕರ್ನಾಟಕದ ಶಾನಗಳಲ್ಲಿ ಅನೇಕ ವೇಳೆ ರಾಜರು ಅಥವಾ ಇತರ ಪರಾಕ್ಷಮಿಗಳನ್ನು ವಣಿಸುವ ಸಂದರ್ಭದಲ್ಲಿ ಅವರನ್ನು ‘ವೀರಾವತಾರ’ ಎಂದು ವಿಶ್ಲೇಷಿಸಲಾಗುತ್ತದೆ. ಇಂಥ ವಿಶೇಷಣಗಳಲ್ಲಿ ಬರುವ ‘ವೀರ’ ಎಂಬ ಪದ ಕೇವಲ ವೀರವೃತ್ತಿಯ ದ್ಯೋತಕವಾಗಿರಬಹುದು ಅಥವಾ ‘ವೀರಭದ್ರನಂತೆ ಪರಾಕ್ರಮಿ’ ಎಂಬರ್ಥದಲ್ಲೂ ಇರಬಹುದು. ಎಂದರೆ ಈ ಅರ್ಥಾನ್ವಯದಲ್ಲಿ ಖಚಿತವಾಗಿ ವೀರಭದ್ರದೇವರ ಉಲ್ಲೇಖವೇ ಇದೆ ಎಂದು ಹೇಳುವದು ಕೊಂಚ ಕಷ್ಟವೆ.

ಮೇಲಿನ ವಿವರಗಳ ಹಿನ್ನೆಲೆಯಲ್ಲಿ ಕರ್ನಾಟಕದ ಶಾಸನಗಳಲ್ಲಿ ತೋರುವ ಕೆಲವು ಉಲ್ಲೇಖಗಳನ್ನು ಇಲ್ಲಿ ಪರಿಶೀಲಿಸಬಹುದು. ಧಾರವಾಡ ಜಿಲ್ಲೆಯ ಕೋಳೂರು (ಹಾವೇರಿ ತಾಲೂಕು) ಶಾಸನದಲ್ಲಿ[1]ವೀರಭದ್ರದೇವರ ಉಲ್ಲೇಖ ಪ್ರಥಮ ಭಾರಿಗೆ ಸ್ಪಷ್ಟವಾಗಿ ಕಂಡುಬಂದಿದೆ. ಇದರ ಕಾಲ ಕ್ರಿ.ಶ. ೧೦೪೫. ಚಾಲುಕ್ಯ ತ್ರೈಲೋಕಮಲ್ಲ ೧ನೆಯ ಸೋಮೇಶ್ವರನನ್ನು ವಣಿಸುವಾಗ ‘ಶೌರ್ಯರಲ್ಲಿ ಅವನು ವೀರಭದ್ರನಿಗೆ ಸಮಾನ’ ಎಂದು ಹೇಳಲಾಗಿದೆ. ಕ್ರಿ.ಶ. ೧೧೦೭ರ ನೀಲಗುಂದ (ಹರಪನಹಳ್ಳಿ ತಾಲೂಕು) ಶಾಸನ[2] ಕಲ್ಯಾಣ ಚಾಲುಕ್ಯರ ದೊರೆ ತ್ರಿಭುವನ ಮಲ್ಲದೇವ ೬ನೆಯ ವಿಕ್ರಮಾದಿತ್ಯನ ಕಾಲದ್ದು. ಇದರಲ್ಲಿ ಶ್ರೀಸ್ವಯಂಭೂ ವೀರೇಶದೇವರಿಗೆ ದತ್ತಿಬಿಟ್ಟ ವಿಷಯವನ್ನು ಉಲ್ಲೇಖಿಸಲಾಗಿದೆ. ವೀರೇಶ್ವರನೆಂದರೆ ವೀರಭದ್ರದೇವರೇ ಎಂದು ತಿಳಿಯಲು ಅಡ್ಡಿಯಿಲ್ಲ. ವೀರಭದ್ರದೇವರ ದೇವಸ್ಥಾನವೊಂದು ನೀಲಗುಂದದಲ್ಲಿದ್ದು, ದೇವರ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದ ಬಗ್ಗೆ ಖಚಿತವಾದ ಮಾಹಿತಿ ಈ ಶಾಸನದಿಂದ ತಿಳಿದುಬರುತ್ತದೆ. ಕೃಷ್ಣರಾಜಪೇಟೆಯ ಕಕ್ಕೇರಿಯಲ್ಲಿ ಕ್ರಿ. ಶ. ೧೧೭೧ರಲ್ಲಿ ಹುಟ್ಟಿರುವ ಶಾಸನ[3] ಬ್ರಹ್ಮರಾಶಿ ಜೀಯರ್ ಎಂಬ ಶೈವ ಗುರುವಿಗೆ ದತ್ತಿಕೊಟ್ಟ ವಿಷಯವನ್ನು ತಿಳಿಸುತ್ತದೆ. ಅದರ ಮೇರೆಗಳನ್ನು ಹೇಳುವಾಗ ವೀರಭದ್ರನ ‘ಹುಣುಸೆ’ ಎಂದು ಉಲ್ಲೇಖಿಸಿದೆ. ಎಂದರೆ ಆ ಊರಲ್ಲಿ ದೇವಾಲಯವಿಲ್ಲದೆ ಕೇವಲ ಹುಣಸೆಮರದ ಕೆಳಗೆ ಮೂರ್ತಿಯುಳ್ಳ ವೀರಭದ್ರದೇವರ ಸ್ಥಾನ ಇತ್ತೆಂದು ತೋರುತ್ತದೆ.

ಕ್ರಿ.ಶ. ೧೧೬೦ ರಿಂದ ಕ್ರಿ. ಶ. ೧೨೧೧ ರ ವರೆಗಿನ ಕಾಲಾವಧಿಯ ಬೇರೆ ಬೇರೆ ದತ್ತಿಗಳನ್ನು ಶರಣ ಏಕಾಂತರಾಮಯ್ಯನಿಗೆ ನೀಡಿರುವ ಉಲ್ಲೇಖವುಳ್ಳ ಅಬ್ಬಲೂರಿನ ಶಾಸನ ಗಮನಾರ್ಹವಾಗಿದೆ.[4] ಏಕಾಂತರಾಮಯ್ಯ ಉಗ್ರ ಶಿವಭಕ್ತನಾಗಿದ್ದು, ಶಿರಸ್ಸು ಪವಾಡಗೈದು ಪ್ರಖ್ಯಾತನಾದವ. ಈತನನ್ನು ಕುರಿತು ಹಲವಾರು ಮಹತ್ವಪೂರ್ಣವಾದ ವಿಷಯಗಳನ್ನಿಲ್ಲಿ ಉಲ್ಲೇಖಿಸಿದೆ. ಈತ ಮೂಲತಃ ಬೀದರ ಜಿಲ್ಲೆಯ ಅಳಂದೆ (ಆಳಂದ) ಯವನಾಗಿದ್ದು, ವೀರಭದ್ರನ ಅವತಾರವೆಂದು ಶಾಸನ ಸಾರುತ್ತದೆ. ಲೋಕದಲ್ಲಿ ಹೆಚ್ಚಿದ್ದ ಪರವಾದಿಗಳನ್ನು ನಿಗ್ರಹಿಸಲು ವೀರಭದ್ರನಿಗೆ ಶಿವನು ಆಜ್ಞಾಪಿಸಲು ತನ್ನ ಅಂಶದಿಂದ ವೀರಭದ್ರದೇವರು ಏಕಾಂತರಾಮಯ್ಯನನ್ನು ಹುಟ್ಟಿಸಿದನು ಮತ್ತು ಅಳಂದೆಯಲ್ಲಿ ಬೆಳೆದು ದೊಡ್ಡವನಾದ ಏಕಾಂತರಾಮಯ್ಯ ದೈವನಿಯಾಮಕದಂತೆ ಶಿವಭಕ್ತಿ ಪರಾಯಣನಾಗಿ ಲೋಕ ಸಂಚಾರ ಮಾಡುತ್ತ ಪುಲಿಗೆರೆ ಪಟ್ಟಣಕ್ಕೆ ಬಂದನು. ಅಲ್ಲಿಂದ ದೇವರ ಪ್ರೇರಣೆಯಂತೆ ಅಬ್ಬಲೂರಿಗೆ ಹೋಗಿ ಬ್ರಹ್ಮೇಶ್ವರ ದೇವಾಲಯದಲ್ಲಿ ಶಿವಪೂಜೆಯಲ್ಲಿ ನಿರತನಾಗಿದ್ದಾಗ ಜೈನರು ಬಂದು ಕಾಲು ಕೆದರಿ ಜಗಳ ತೆಗೆದರು. ಆಗ ಕನಸಿನಲ್ಲಿ ಕಾಣಿಸಿದ ವೀರಭದ್ರ

ಏಕಾಂತರಾಮಯ್ಯನಿಗೆ-

ಅಬ್ಬಲೂರು ವರಗ್ರಾಮಂ ಗತ್ವಾರಾಮ ಮಮಾಜ್ಞಯಾ |
ತತ್ರ ವಾಸಂ ಕುರು ಸ್ವಸ್ಥ ಯಾಜಮಾಂ ಭಕ್ತಿಯೋಗತಃ ||
ಜೈನೈಃ ಸಹ ವಿವಾದಂ ವ ಶಂಕಾಂ ಹಿತ್ವಾ ಕುರುಷ್ವಥ |
ಸ್ವಶಿರೋsಪಿ ಪಣಂ ಕೃತ್ವಾ ಪುತ್ರಂ ತ್ವಂ ವಿಜಯೀ ಭವ ||

ಎಂದು ಆಜ್ಞೆಯಿತ್ತನು. ಅದೇ ಪ್ರಕಾರ ತನ್ನ ಶಿರಸ್ಸನ್ನು ಪಣವಾಗಿಟ್ಟು, ಪವಾಡ ಮೆರೆದು ಜೈನರನ್ನು ಸೋಲಿಸಿದನು.

ರಾಮಯ್ಯನ ಈ ಕಾರ್ಯದಿಂದಾಗಿ ಬೆಳವಣಿಗೆಯ ಹಂತದಲ್ಲಿದ್ದ ವೀರಶೈವಕ್ಕೆ ಅಪಾರ ಬಲ ಬಂದಿತೆಂದು ಬೇರೆ ಹೇಳಬೇಕಾಗಿಲ್ಲ.

ಕ್ರಿ.ಶ. ೧೧೯೯ರ ಯಾದವ ಜೈತುಗಿಯ ಕಾಲದ (ಸಿಂದಗಿ ತಾ.) ದೇವಣ ಗಾಂವ ಶಾಸನ ಕೂಡ ಗಮನಾರ್ಹವಾಗಿದೆ. ವೀರಭದ್ರದೇವರನ್ನು ಸುಂದರವಾಗಿ ಈ ಶಾಸನ ವರ್ಣಿಸಿದೆ.[5]

ಸ್ವಸ್ಥಿಃ ಸಮಸ್ತದಿವಿಜ ದನುಜಾರಿ ಮುಕುಟ ಮಾಣಿಕ್ಯ ಕಿರೀಟಕೋಟಿ
ಜಾಳ ಮಂಜರೀ ಬಿಂಜರಿ ರಂಜಿತ ಪಾದಾರವಿಂದಂ, ಅನೇಕ
ಪ್ರಮಥ ಗಣ ಪರಿವೇಷ್ಠಿತಾಳಂಕೃತಂ ಸಮಸ್ತ ಜನಸ್ತುತ್ಯಂ
ಸುಧಾ ಧವಳಿತಾಂಶು ದ್ಯುತಿಯೆನಿಪ ತರುಣ ಹರಿಣೋತ್ತುಂಗ
ಶಶಿ ಶಿಖಾಮಣಿ, ಅತ್ಯುಗ್ರ ಅತಿವಿಷಮ ಕರ್ಕೋಟಕ ಕುಂತಳಾ
ಭರಣ ಭೂಸಿತಂ, ದಕ್ಚಕೃತು ವಿದ್ವಾಂಸಕಂ ಭಕ್ತ ಜನಃ ರಕ್ಷಕ ದಕ್ಷಕಂ
ಸಂಸಾರ ಸಾಗರೋತ್ತುಂಗ ತರಂಗ ಗಂಗಾಧರಂ ತುಂಬುರ ನಾರದಾದಿ
ನೃತ್ಯಗೀತ ವಾದ್ಯ ವಿತರಣ ವಿನೋದಪ್ರಿಯಂ

ಎಂದು ಶಿವನ ವರ್ಣನೆ ಮಾಡುವಲ್ಲಿ ದಕ್ಷಾಧ್ವರಲೀಲೆಯ ಉಲ್ಲೇಖ ಬಂದಿದೆ.

ಹೊಳೆನರಸಿಪುರ ತಾಲೂಕಿನ ಒಂದು ಶಾಸನದಲ್ಲಿ ವೀರಭದ್ರನ ಬನದ ಉಲ್ಲೇಖವಿದೆ. ಮಂಡ್ಯ ಜಿಲ್ಲೆಯ ರಾಯಶೆಟ್ಟಿಪುರ ಸೋಮೇಶ್ವರ ದೇವಾಲಯದ ಕ್ರಿ.ಶ. ೧೨೫೧ನೆಯ ವರ್ಷದ ಶಾಸನ ಪರಮೇಶ್ವನ ಓಲಗದ ವರ್ಣನೆ ಮಾಡಿದೆ. ಅವರಲ್ಲಿ ಭೃಂಗೀಶ ಚಂಡೀಶ ಮುಖ್ಯವಾದ ದೇವಗಣಂಗಳು. ವೀರಭದ್ರ ವೀರಸೋಮನಾಥ ಎಂಬ ಉಲ್ಲೇಖಗಳ ಜೊತೆಗೆ ಅಸಂಖ್ಯಾತ ಮುಹಾಗಣಂಗಳು ವೀರಭದ್ರ ದೇವರು ಮತ್ತು ವೀರಸೋಮೇಶ್ವರ ಬಿಟ್ಟಿರುವ ದತ್ತಿ ಈ ಮೊದಲಾದ ಉಲ್ಲೇಖಗಳಿವೆ. ಇವಲ್ಲದೆ ಶಾಸನದ ಮಿತಿಯಲ್ಲಿ ಮಂಗಳವಾರದ ಪ್ರಸ್ತಾಪ ಬಂದಿದೆ. ವೀರಭದ್ರದೇವರ ವಾರವೆಂದು ಮಂಗಳವಾರವನ್ನು ದೇವರ ಪೂಜೆ ಸೇವೆಗಳಿಗಾಗಿ ಪ್ರಶಸ್ತ ಎಂದು ತಿಳಿಯುವ ಪದ್ಧತಿ ೧೩ನೆಯ ಶತಮಾನದಷ್ಟು ಹಿಂದಿನದೆಂಬ ಅಂಶ ಈ ಶಾಸನದಿಂದ ಸ್ಪಷ್ಟಪಡುತ್ತದೆ. ಕ್ರಿ.ಶ. ೧೨೫೭ನೆಯ ವರ್ಷದ ಚಿಕ್ಕಮಗಳೂರ ತಾಲೂಕಿನ ಒಂದು ಶಾಸನ[6] ಇನ್ನೊಂದು ದೃಷ್ಟಿಯಿಂದ ಪ್ರಮುಖವಾಗಿದೆ. ಈ ಶಾಸನದಲ್ಲಿ ದೇವಳಿಗೆ ನಾಡಿನ ಚಿಕ್ಕಮುಗಳಿಯ ನಾಡಪ್ರಭು ಸೋಮಗೌಡ ಮತ್ತು ಆತನ ತಮ್ಮ ನಾಡಪ್ರಭು ಬಾಚನಾಯಕ ಶ್ರೀ ಸೋಮನಾಥದೇವರನ್ನೂ ವೀರಭದ್ರದೇವರನ್ನೂ ಪ್ರತಿಷ್ಠಾಪಿಸಿ ದೇವರಿಗೆ ಕೆಲವು ದತ್ತಿಗಳನ್ನು ಬಿಟ್ಟಿದ್ದಾಗಿ ತಿಳಿಸುತ್ತದೆ. ಇದರಿಂದ ವೀರಭದ್ರದೇವರನ್ನು ಪ್ರತಿಷ್ಠಾಪಿಸುವ ಉಲ್ಲೇಖವುಳ್ಳ ಪ್ರಥಮ ಶಾಸನ ಇದಾಗುತ್ತದೆ. ಇದೇ ರೀತಿ ೧೩ನೆಯ ಶತಮಾನದ ಬಸವಾಪಟ್ಟಣ, ಅರಸಿಕೆರೆ, ಮರಡಿಪುರ, ಗಿರಿಸಿದ್ಧಾಪೂರ, ಹೊಸಹೊಳಲು ಮೊದಲಾದ ಶಾಸನಗಳಲ್ಲಿ ವೀರಭದ್ರದೇವರ ಉಲ್ಲೇಖ ಬಂದಿದೆ. ಅರಸಿಕೆರೆ ೧೪೯ನೆಯ ಕ್ರಿ.ಶ. ೧೨೭೮ರ ಶಾಸನದಲ್ಲಿ ಕಲ್ಲಯ್ಯನೆಂಬ ವೀರನೊಬ್ಬನು ಭೃಂಗೀಶ, ನಂದಿನಾಥ ಮತ್ತು ವೀರಭದ್ರದೇವರು ಮೆಚ್ಚುವಂತೆ ಹೋರಾಡಿದನೆಂದು ಹೇಳಿದೆ. ಅದೇ ರೀತಿ ಕ್ರಿ.ಶ. ೧೨೫೦ ಮರಡಿಪುರ ಶಾಸನದಲ್ಲಿ ಶಿವ ಮತ್ತು ಕಲಿದೇವ ಒಬ್ಬನೇ ಎಂದು ಹೇಳುವುದಲ್ಲದೆ, ನಂದಿನಾಥ, ಭೃಂಗಿನಾಥ, ವೀರಭದ್ರದೇವರು ಈ ಮೂವರನ್ನು ಪ್ರತ್ಯೇಕವಾಗಿ ಪೂಜಿಸುವ ಪರಂಪರೆ ವೀರಶೈವ ಧರ್ಮದಲ್ಲಿ ೧೩ನೆಯ ಶತಮಾನದ ಕಾಲಾವಧಿಯಲ್ಲಿ ರೂಢಗೊಂಡಿತ್ತೆಂದು ಹೇಳಬೇಕಾಗುತ್ತದೆ. ಶಿವನ ಪೂಜೆಯ ಜೊತೆಗೆ ಈ ಮೂವರು ಪ್ರಮಥಗಣಂಗಳ ಪೂಜೆಗೆ ಮಹತ್ವದ ಸ್ಥಾನ ಕಲ್ಪಿತವಾಗಿದ್ದು, ಇದರಿಂದ ಸ್ಪಷ್ಟವಾಗುತ್ತದೆ.

ಮುಂದೆ ೧೪ನೆಯ ಶತಮಾನದಲ್ಲಿ ವೀರಭದ್ರ ದೇವರನ್ನು ಕುರಿತ ಉಲ್ಲೇಖಗಳು ಹೆಚ್ಚುತ್ತ ಹೋಗಿವೆ. ಭೃಂಗಿ, ನಂದಿ, ವೀರಭದ್ರ ಜೊತೆಗೆ ೬೩ ಮಹಾಗಣಂಗಳು, ಬಸವರಾಜ, ನಂಬಿಯಣ್ಣ ಮೊದಲಾದವರ ಉಲ್ಲೇಖವುಳ್ಳ ಅರಕಲಗೂಡು ತಾಲೂಕಿನ ಕೇರಳಾಪುರದ ಶಾಸನ ಇನ್ನೊಂದು ಹೊಸ ಅಂಶವನ್ನು ತಿಳಿಸುತ್ತದೆ.[7] ವೀರಭದ್ರನೇ ಶರಭಾವತಾರ ತಾಳಿ ಉಗ್ರ ನರಸಿಂಹನ ಸಂಹಾರ ಮಾಡಿದನೆಂದು ಕಥೆ ಪುರಾಣ ಪ್ರಸಿದ್ಧವಾಗಿದೆ. ಈ ಅಂಶ ಪ್ರಸ್ತುತ ಶಾಸನದಲ್ಲಿ “ಶೂಲಾಯುಧಾಯ, ಸುರಪಾಂತಕ ಮೌಳಿಮಾಲಾಲೀಲಾಯ; ಮಾನ ಚರಣಾಂಬುಜ ಪಲ್ಲವಾಯ, ಹೇಳಾವರೇಪ ಭೂಯಃ ನೃಸಿಂಹ ಹರಂ ಹೋ ಲೀಲಾಪಹುತಿ ಶರಭಾಶ್ರುತಯೇ ನಮೋಸ್ತು’ ಎಂದು ವೀರಭದ್ರನ ಸ್ತುತಿ ಮತ್ತು ಶರಭ, ವೀರಭದ್ರರ ಅಭೇದ ಕಲ್ಪನೆ ಇಲ್ಲಿ ಸ್ಪಷ್ಟವಾಗಿದೆ. ಬೇಲೂರ ತಾಲೂಕಿನ (೪೪೮) ಪುಷ್ಪಗಿರಿಯ ಕ್ರಿ.ಶ. ಸುಮಾರು ೧೪ನೆಯ ಶತಮಾನದ ಶಾಸನದಲ್ಲಿ ನಖರೇಶ್ವರ ‘ಓರುಂಗಲ’ ಶ್ರೀ ವೀರಭದ್ರದೇವರಿಗೆ ಶ್ರೀ ವೀರಹರಿಹರಮಾ ರಾಯರ ಅಳಿಯ ಕುಲಖಂಡ ಸಿದ್ಧರಾಜ ಎಂಬುವನು ಕೆಲವು ದಾನಗಳನ್ನು ನೀಡಿದ ಉಲ್ಲೇಖವಿದೆ. ಆಂಧ್ರದ ಓರಗಲ್ಲಿನ ವೀರಭದ್ರ ದೇವರು ಕರ್ನಾಟಕದ ಭಕ್ತರಿಗೂ ಪೂಜ್ಯನೀಯನಾಗಿದ್ದ. ಈ ಸಂಗತಿ ರಾಘವಾಂಕನ ವೀರೇಶ ಚರಿತೆಯಿಂದ ಸ್ಪಷ್ಟವಾಗಿದೆ. ಇದು ಈ ಸಂಗತಿಯನ್ನು ದೃಢಪಡಿಸುವ ಮೊದಲ ಶಿಲಾಲಿಪಿಯೆಂದು ಹೇಳಬಹುದು.

ಕ್ರಿ.ಶ. ೧೪೨೨ರ ಅಡಗೂರು (ಬೇಲೂರು-೪೬೫) ಶಾಸನದಲ್ಲಿ ವೀರಭದ್ರ ದೇವರಿಗೆ ದತ್ತಿ ಬಿಟ್ಟ ಪ್ರಸ್ತಾಪ ಜೊತೆಗೆ ದ್ಯಾವಾಪೃಥ್ವಿ ಮಹಾಮಹತ್ತಿನ ಹೆಸರು ಹೇಳಲಾಗಿದೆ. ಇದೊಂದು ವಿಶಿಷ್ಟವಾದ ಉಲ್ಲೇಖ. ಮಹಾಮಹತ್ತು ಅಥವಾ ಮಹಾಮಹತ್ತಿನ ಮಠವೆಂದರೆ ವೀರಶೈವ ಮಠವೆಂದೇ ಅರ್ಥ. ಈ ಮಹಾಮಹತ್ತಿನ ಮಠದ ಉಲ್ಲೇಖ ದಕ್ಷಿಣ ಕರ್ನಾಟಕದ ಹಲವಾರು ಶಾಸನಗಳಲ್ಲಿ ಮೇಲಿಂದ ಮೇಲೆ ಕಂಡುಬರುತ್ತದೆ. ಉದಾಹರಣೆಗೆ ಕ್ರಿ.ಶ. ೧೫೧೨ರ ಕುಂತೂರು (ಕೊಳ್ಳೇಗಾಲ ತಾಲೂಕು) ಮೊದಲಾದ ಶಾಸನಗಳನ್ನು ನೋಡಬಹುದು.

ಕೊಪ್ಪ ತಾಲೂಕು ನಂ. ೫ನೆಯ ಕ್ರಿ.ಶ. ೧೫೬೯ನೆಯ ಶಾಸನದಲ್ಲಿ ೯ ದಾನಿವಾಸದ ಸೀಮೆಯ ಸಮಸ್ತ ಗೌಡರು ಸೇರಿ ಬಾಳೆಹಳ್ಳಿಯ ಸಿಂಹಾಸನದ ಕುಮಾರ ಚನ್ನಬಸವೇಶ್ವರ ಒಡೆಯರಿಗೆ ದತ್ತಿಯನ್ನು ಬಿಟ್ಟ ಸಂದರ್ಭದಲ್ಲಿ ಈ ಗೌಡರುಗಳ ಮನೆದೇವರಾದ ದಾನಿವಾಸದ ವೀರಭದ್ರದೇವರ ಸಾಕ್ಷಿ ಹೇಳಲಾಗಿದೆ. ೧೬ನೆಯ ಶತಮಾನದ ಉತ್ತರಾರ್ಧದ ಈ ಶಾಸನ ಬಾಳೇಹಳ್ಳಿಯ ಕುಮಾರ ಚೆನ್ನಬಸವದೇವರ ಉಲ್ಲೇಖ ಮತ್ತು ಮನೆದೇವರು ವೀರಭದ್ರದೇವರ ಉಲ್ಲೇಖ ಮಾಡಿರುವುದು ಮಹತ್ವ ಸಂಗತಿ. ಕ್ರಿ.ಶ. ೧೪೩೭ರ ಅಡುವಳಿ (ತಾ. ಕೊಪ್ಪ-೮) ಉಯ್ಯಾಲೆ ಕಂಬದ ಶಾಸನದಲ್ಲಿ ತಮ್ಮಣ್ಣ ಹೆಗ್ಗಡೆ ಎಂಬುವನ ಮಹಾಂಕಾಳಿದೇವಿಗೆ ಉಯ್ಯಾಲೆಯ ಕಂಬ ಮಾಡಿಸಿದನೆಂದು ಹೇಳಲಾಗಿದೆ. ಬೇಲೂರು ನಂ. ೧೮ರ ಕ್ರಿ. ಶ. ೧೫೫೬ರ ಶಾಸನದಲ್ಲಿ ಪಾಂಚಾಳರ ವಸತಿಕ ವಿಷಯಕವಾಗಿ ಉಂಟಾದ ವಿವಾದದ ಪ್ರಸ್ತಾಪವಿದೆ. ಜೊತೆಗೆ ಅಲ್ಲಿದ್ದ ಕಾಳಿಕಾ ದೇವಸ್ಥಾನದ ಉಲ್ಲೇಖವೂ ಬಂದಿದೆ. ಇದೇ ರೀತಿ ಟಿ. ನರಸಿಪುರ ೨೭೭ನೆಯ ಶಾಸನದಲ್ಲಿ ಮಹಾಕಾಳಿ, ಭದ್ರಕಾಳಿ, ಯೋಗಕಾಳಿ ಎಂಬ ನಾಲ್ಕು ವಿಗ್ರಹ ಪಾದಪೀಠದ ಬರಹಗಳಿವೆ. ಎಂದರೆ ಕಾಳಿಕಾ ಮೂರ್ತಿಗಳಲ್ಲಿಯೇ ನಾಲ್ಕು ಬೇರೆ ಬೇರೆ ಪ್ರಕಾರಗಳಿದ್ದು, ಅವರಲ್ಲಿ ಭದ್ರಕಾಳಿಯೂ ಒಬ್ಬಳು. ಭದ್ರಕಾಳಿಯೇ ವೀರಭದ್ರ ದೇವರ ಪತ್ನಿ ಎಂಬ ನಂಬಿಕೆ ಭಕ್ತರಲ್ಲಿ ಸಾರ್ವತ್ರಿಕವಾಗಿದೆ.

ಮೇಲೆ ತಿಳಿಸಿದ ಶಾಸನ ಸುಮಾರು ೧೯ನೆಯ ಶತಮಾನದ್ದೆಂದು ತಿಳಿದು ಬರುತ್ತದೆ. ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ದೊರೆತ ತಾಮ್ರಪಟವೊಂದನ್ನು ರಾಚವಟ್ಟಿ ವೀರಭದ್ರದೇವರ ಉಲ್ಲೇಖವಿದೆಯಾದರೂ ಈ ಶಾಸನ ಕೃತಕವೆಂದು ವಿದ್ವಾಂಸರಿಂದ ತೀರ್ಮಾನಿಸಲ್ಪಟ್ಟಿದೆ.

ಕ್ರಿ.ಶ. ಸುಮಾರು ೧೫ನೆಯ ಶತಮಾನದ ಕೆಂಪನಪುರ (ಚಾಮರಾಜನಗರ ೧೪೪) ಶಾಸನ ಇನ್ನೊಂದು ರೀತಿಯಲ್ಲಿ ಪ್ರಮುಖವಾಗಿದೆ. ಈ ಶಾಸನದಲ್ಲಿ ೧೨ನೆಯ ಶತಮಾನದ ಪ್ರಸಿದ್ಧ ಶರಣ ಏಕಾಂತರಾಮಯ್ಯನ ವಂಶೋದ್ಭವ ಏಕಾಂತ ಬಸವೇಶ್ವರ ದೇವರು ಎಂಬ ಉಲ್ಲೇಖವಿದೆ. ಶಾಸನ ಈತನನ್ನು ಅನೇಕಾಂತ ವಾದವಿ ಘಟನ ಎಂದೂ ಏಕಾಂತ ಸ್ಥಿತಿವಾದವೆಂದು ವೀರಸೋಮೇಶ್ವರ ದ್ವಾದಶಾವತಾರ ಶ್ರೀ ವೀರಭದ್ರ ಅನ್ವಯೋದ್ಭುತನೆಂದೂ ಸಾರುತ್ತದೆ. ಅಷ್ಟೇ ಅಲ್ಲದೆ, ಈ ಬಸವೇಶ್ವರದೇವನು ವೀರಶೈವ ಮತಸ್ಥಾಪನಾಚಾರ್ಯನೆಂದೂ ಉಲ್ಲೇಖಿಸಲಾಗಿದೆ. ಈ ಮೊದಲು ನೋಡಿರುವಂತೆ ನಂಬಿ ಭೃಂಗಿ, ವೀರಭದ್ರದೇವರಿಗೆ ಪರಾಶಸ್ತ್ಯವುಳ್ಳ ದ್ಯಾವಾಪೃಥ್ವಿ, ಮಹಾಮಹತ್ತಿನ ಸಂಪ್ರದಾಯ ಒಂದಾದರೆ, ಅನೇಕಾಂತ ವಿರೋಧಿ ಏಕಾಂತವಾದಿಯಾದ ಇನ್ನೊಂದು ಪರಂಪರೆ ೧೫ನೆಯ ಶತಮಾನದ ವರೆಗೂ ಕೆಲಮಟ್ಟಿಗೆ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡುಬಂದಿತೆಂದೂ, ಅದೂ ಕೂಡ ವೀರಭದ್ರದೇವರ ಪೂಜೆಯನ್ನು ಒಪ್ಪಿಕೊಂಡಿತ್ತೆಂದೂ ಹೇಳಬಹುದಾಗಿದೆ. ಈ ರೀತಿ ಶಾಸನಗಳಿಂದ ತಿಳಿದುಬರುವಂತೆ ಕಲ್ಯಾಣ ಚಾಲುಕ್ಯರು, ವಿಜಯನಗರದ- ವಿಶೇಷವಾಗಿ ಸಂಗಮ ವಂಶದ- ದೊರೆಗಳು, ಕೆಳದಿ ನಾಯಕರು, ಉಮ್ಮತ್ತೂರು (೧೪ನೆಯ ಶತಮಾನದಲ್ಲಿದ್ದ) ಕದಂಬ ಶಾಖೆಯವರು ಮೊದಲಾದ ರಾಜಮನೆತನದವರು ವೀರಭದ್ರದೇವರನ್ನು ಪೂಜಿಸಿದ ಸ್ಪಷ್ಟ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬಂದಿವೆ. ೧೧ನೆಯ ಶತಮಾನದ ಶಾಸನಗಳಲ್ಲಿ ಕ್ವಚಿತ್ತಾಗಿ ಅಥವಾ ನಾಮಮಾತ್ರ ಉಲ್ಲೇಖವಾಗಿ ಕಂಡು ಬರುತ್ತಿದ್ದ ಈ ದೇವರ ಆರಾಧನೆ ೧೨ನೆಯ ಶತಮಾನದಿಂದ ಹೆಚ್ಚುತ್ತ ಬಂದು ವಿಜಯನಗರ ಕಾಲದಲ್ಲಿ ಹೆಚ್ಚು ವ್ಯಾಪಕಗೊಂಡಿತೆಂಬುದನ್ನು ನಾವು ಗಮನಿಸಬಹುದಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] E.I XIX. P. 181

[2] SII IX-i, No. 176

[3] EC VI, ಕೃ. ರಾ. ಪೇಟೆ, ೨೭

[4]‘ಶಾಸನಸಂಪದ’ ಕ. ವಿ.ವಿ. ಪ್ರಕಟಣೆ

[5] SSI XX, No. 184

[6] EC VI, ಚಿಕ್ಕಮಗಳೂರು 1

[7] EC V, ಬೇಲೂರು-೪೪೯ (ಕೇರಳಾಪುರ)