ಮೈಲಾರಲಿಂಗ-ಮಾಳಚಿಯರನ್ನು ಕುರಿತು ಕನ್ನಡ ಮತ್ತು ಮರಾಠಿಗಳಲ್ಲಿ ಈವರೆಗೆ ಹಲವಾರು ಲೇಖನಗಳು ಪ್ರಕಟವಾಗಿವೆ. ಅವುಗಳಲ್ಲಿ ಶಾಸನಿಕ ಆಧಾರಗಳನ್ನು ಪ್ರಧಾನವಾಗಿಟ್ಟುಕೊಂಡು ಚರ್ಚಿಸಿದ ಕನ್ನಡಲೇಖನಗಳು ಮೂರು__

೧. ಪಿ. ಬಿ. ದೇಸಾಯಿ
‘ಮೈಲಾರಲಿಂಗ’ (Journal of Karnataka University, ill, Part ll. P. ೧೧೭)

೨. ಎಂ. ಚಿದಾನಂದಮೂರ್ತಿ
‘ಕನ್ನಡ ಕಾವ್ಯ ಶಾಸನಗಳಲ್ಲಿ ಮೈಲಾರ ಮತ್ತು ಮಾಳಚಿ’ (ಸಂಶೋಧನ ತರಂಗ-೨, ಪುಟ ೨೦೭-೨೩೧)

೩. ಕೆ. ವ್ಹಿ. ರಮೇಶ
‘ಮನೆವೆಗ್ಗಡೆ ಚಟ್ಟಪ’ (ಪ್ರಬುದ್ಧ ಕರ್ಣಾಟಕ ೪೮-೪)

ಇವುಗಳಲ್ಲಿ ಡಾ | ಎಂ. ಚಿದಾನಂದಮೂರ್ತಿಯವರು ಕರ್ನಾಟಕದ ಶಾಸನಗಳಲ್ಲಿ ತಮಗೆ ಕಂಡುಬಂದ ಮೈಲಾರ ಮತ್ತು ಮಾಳಚೀ ವಾಚಕವಾದ ವ್ಯಕ್ತಿನಾಮಗಳ ಒಂದು ಪಟ್ಟಿಯನ್ನು ಕೊಟ್ಟು ಅಭ್ಯಾಸಿಗಳಿಗೆ ಸಹಾಯಮಾಡಿದ್ದಾರೆ. ಆದರೆ ಅವರು ಪಟ್ಟಿ ಮಾಡಿರುವಂತೆ ಕ್ರಿ.ಶ. ೯೨೨ರ ‘ಮಾಳಯ್ಯ’ (SII-IX-I. ನಂ. ೫೭) ಮತ್ತು ಮೈಲರಸ (SII-IX-I.ನಂ. ೯೭. ಕ್ರಿ.ಶ. ೧೦೩೨) ಎಂಬ ಉಲ್ಲೇಖಗಳೇ ಅತ್ಯಂತ ಪ್ರಾಚೀನವಾದವುಗಳಲ್ಲ. ಬರೀ ವ್ಯಕ್ತವಾಚಕಗಳೇ ಅಲ್ಲದೆ, ಈ ದೇವತೆಗಳನ್ನು ಕುರಿತ ನೇರ ಉಲ್ಲೇಖಗಳು ಇದಕ್ಕೂ ಹಿಂದಿನ ಶಾಸನಗಳಲ್ಲಿ ದೊರೆಯುತ್ತವೆ. ಅಂಥ ಉಲ್ಲೇಖಗಳನ್ನು ಕುರಿತು ಚರ್ಚಿಸುವುದು ಪ್ರಸ್ತುತ ಲೇಖನದ ಉದ್ದೇಶ.

ಶಾಸನಗಳ ಅಂತ್ಯದ ಫಲಶ್ರುತಿಯಲ್ಲಿ ಎಱ್ಕೋಟಿ ತಪೋಧನರು ಎಂದು ೧೦ನೆಯ ಶತಮಾನದಿಂದ ೧೩ನೆಯ ಶತಮಾನದ ವರೆಗೆ ವಿಶೇಷವಾಗಿ ಮತ್ತು ಮುಂದಿನ ಕಾಲಾವಧಿಯ ಶಾಸನಗಳಲ್ಲಿ ಕ್ವಚಿತ್ತಾಗಿ ಉಲ್ಲೇಖಗಳು ಬರುತ್ತವೆ. ಮೈಲಾರದ ಅಧಿದೈವತದ ಹಲವಾರು ಹೆಸರುಗಳಲ್ಲಿ ಏೞ್ಕೋಟಿ, ಎಳ್ಕೋಟಿ, ಎಕ್ಕೋಟಿ ಅಥವಾ ಏಳುಕೋಟಿ ಎಂಬುದು ಅತ್ಯಂತ ಪ್ರಸಿದ್ಧವಾದದ್ದು. ‘ಮೈಲಾರ’ ಎಂಬುದು ದೇವತೆ ನೆಲೆಸಿದ ಮೂಲ ಅಥವಾ ಮುಖ್ಯವಾದ ಗ್ರಾಮದ ಹೆಸರು. ಎಂದರೆ ಈ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿಗೆ ಸೇರಿದ, ತುಂಗಭದ್ರೆಯ ತೀರದಲ್ಲಿ ೧/, ೧/೨ ಮೈಲಿನ ಮೇಲಿರುವ ಮೈಲಾರವೇ. ಈ ಸಂಪ್ರದಾಯದ ಹಲವು ಸಂಗತಿಗಳ ಪರಿಶೋಧನೆಯಿಂದ ಮೂಲತಃ ಇದೇ ಊರಿನಿಂದ, ದೇವರ ಹೆಸರು ಮೈಲಾರ, ಮೈಳಾರ, ಮೈರಾಲ ಎಂದು ಮುಂತಾದ ರೂಪಗಳಲ್ಲಿ ಪ್ರಸಿದ್ಧಗೊಂಡುದು ಸ್ಪಷ್ಟಡುತ್ತದೆ. ದೇವರ ಪ್ರಖ್ಯಾತಿಯ ಜತೆಗೆ ಊರಿಗೂ ಮಹತ್ವ ಬಂದುದರಿಂದಾಗಿ ದೇವರು ಪ್ರಸ್ತುತ ಊರಿನ ಹೆಸರಿನಿಂದಲೇ ಪ್ರಸಿದ್ಧನಾದನು. ಕರ್ನಾಟಕ-ಮಹಾರಾಷ್ಟ್ರಗಳಲ್ಲಿ ಹರಡಿರುವ ಆತನ ಅನೇಕಾನೇಕ ದೇವಾಲಯಗಳಲ್ಲಿಯೂ ಆತನ ಭಕ್ತಕೋಟಿ ಯಲ್ಲಿಯೂ ಮೈಲಾರ-ಮೈರಾಲದ ಜತೆಗೆ ‘ಏಳುಕೋಟಿ’ ಎಂಬ ಅವನ ಹೆಸರೂ ಸಾರ್ವತ್ರಿಕವಾಗಿ ರೂಢವಾಗಿದೆ. ಭಕ್ತರು ಮೈಲಾರಲಿಂಗ, ಮಾಲತೀ (ತೇ)ಶ, ಮಾರ್ತಾಂಡಭೈರವ, ಮಲ್ಲಯ್ಯ ಗುಡ್ಡದಯ್ಯ ಎಂಬಿತ್ಯಾದಿಯಾಗಿ ಹಲವಾರು ಹೆಸರುಗಳಿಂದ ದೇವರನ್ನು ಸಂಬೋಧಿಸುತ್ತಾರೆ. ಆದರೆ ದೇವರ ಹೆಸರನ್ನು ಹಿಡಿದು ಉದ್ಘೋಷಿಸುವಾಗ ಮಾತ್ರ ತಪ್ಪದೇ ‘ಏಳುಕೋಟಿ’ ಎಂದೇ ಘೋಷಿಸುತ್ತಾರೆ. ಆದುದರಿಂದ ಎಲ್ಲ ಹೆಸರುಗಳಲ್ಲಿ ಇದೇ ಪ್ರಧಾನವಾದುದು ಮತ್ತು ಮೂಲದ್ದೆಂಬುದು ಸ್ಪಷ್ಟವಾಗುತ್ತದೆ. ಶಾಸನಗಳೂ ಈ ಸಂಗತಿಯನ್ನು ಸಮರ್ಥಿಸುತ್ತವೆ. ಈಗಾಗಲೇ ಹೇಳಿದಂತೆ ಅಂತ್ಯದ ಫಲಶ್ರುತಿಯಲ್ಲಿ ಈ ಪದಪ್ರಯೋಗವು ಹಲವಾರು ಶಾಸನಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಉದಾ:

೧) ಏರ್ಕ್ಕೋಟಿ ತಪೋಧನರುಮನಳಿದ ಪಾಪಮನೆಯ್ದಿದ ಘೋರನರಕ ದೊಳಾಳ್ಗು (Karnataka Inscription V ನಂ. ೧೬. ಧಾರವಾಡ-೧೧೧೭ A.D. )

೨) ಸಾಸಿರ್ವರ್ಬಾಹ್ಮರುಮನೇಳ್ಕೋಟಿ ತಪೋಧನರುಮನಳಿದ ಪಾತಕ (SII-IX-II-೧೬೩ ೧೧೧೩. A.D.)

೩) ವಾರಣಾಸಿಯುಮನೀ ಲಿಂಗಮುಮನೀ ಕವಿಲೆಯುಮನೆೞ್ಕೋಟಿ ತಪೋಧನರುಮನೞೆದ ಪಾಪಮಕ್ಕುಮ್‌ (SII-XI-I, ನಂ. ೩೪. ೯೨೫ A.D.)

೪) ಎರ್ಕೋಟಿ ತಪೋಧನರುಮಂ (SII-IX-II- ನಂ. ೧೬೭)

ಹೀಗೆ ಅಂತ್ಯಫಲಶ್ರುತಿಯಲ್ಲಿ ಬರುವ ಈ ‘ಎೞ್ಕೋಟಿ’ ಎಂಬುದು ಕೇವಲ ಸಂಖ್ಯಾವಾಚಿಯಾಗಿದೆಯೇ ಹೊರತು ಒಂದು ಸಂಪ್ರದಾಯ ದ್ಯೋತಕವಾಗಿಲ್ಲವೆಂದು ತಿಳಿಯುವ ಮತ್ತು ಹಾಗೆ ವಾದಿಸುವ ಅವಕಾಶವಿದೆ. ಆದರೆ ಇಂಥ ಉಲ್ಲೇಖಗಳಲ್ಲಿ ಸಹಸ್ರ, ಲಕ್ಷ, ಕೋಟಿ ಎಂದಿರುವಂತೆಯೇ ಏಳುಕೋಟಿ ಎಂಬುದೂ ಒಂದು ಸಂಖ್ಯಾವಾಚಿಯಲ್ಲ ಎಂದು ಹೇಳಲಿಕ್ಕೆ ಬೇರೆ ಶಾಸನಗಳಲ್ಲಿ ಖಚಿತವಾದ ಆಧಾರಗಳಿವೆ. ಅವನ್ನು ವಿವರವಾಗಿ ನೋಡಬಹುದು:

೫) ಧಾರವಾಡ ಜಿಲ್ಲೆಯ ಗದಗ ತಾಲೂಕಿಗೆ ಸೇರಿದ ಕೋಟುಮ್ಮಚಿಗೆಯಲ್ಲಿಯ ಚಾಳುಕ್ಯ ಸಾಮ್ರಾಟ ತ್ರಿಭುವನಮಲ್ಲ ಐದನೆಯ ವಿಕ್ರಮಾದಿತ್ಯನ ಆಳ್ವಿಕೆಯ ಕ್ರಿ.ಶ. ೧೦೧೨ರ ಶಾಸನದಲ್ಲಿ

“ಎೞ್ಕೋಟಿ ತಪೋಧನರ ಸತ್ರಕ್ಕೆ ೧೨ ಮತ್ತರು” ಭೂಮಿಯನ್ನು ದತ್ತಿಯಾಗಿ ಬಿಟ್ಟ ಉಲ್ಲೇಖವಿದೆ. ಹೀಗೆ ದತ್ತಿ ಬಿಟ್ಟವನು ಉಮ್ಮಚಿಗೆಯನ್ನು ದತ್ತಿಯಾಗಿ ಪಡೆದ ‘ಮೌನರ ಶ್ರೀಧರ ಭಟ್ಟ’ ನೆಂಬುವನು. ಇಲ್ಲಿಯ ಎ(ಏ)ೞ್ಕೋಟಿ ಎಂಬುದು ಸಂಖ್ಯಾ ನಿರ್ದೇಶಕವಾಗಿಲ್ಲವೆಂಬುದು ಸ್ಪಷ್ಟ. ನಿರ್ದಿಷ್ಟವಾಗಿ ಸಂಪ್ರದಾಯವಾಚಕವೆಂಬುದು ಸಂಶಯಾತೀತ.

೬) ಕುಡುತಿನಿಯ ಶಾಸನ (ಕಾಲ. ಕ್ರಿ.ಶ. ೧೨೦೭) ದಲ್ಲಿ “ಸ್ವಾಮಿ ಕಾರ್ತ್ತಿಕೇಯ ತಪೋವನಾಧಿಪತಿಯಪ್ಪ ವಿಷ್ಣುಕರ ಬ್ರಹ್ಮಚಾರಿ ಮುಖ್ಯಸ್ಥಾನ ದಯ್ದು ವರ್ಗಮುಂ ಶ್ರೀ ಎಳ್ಕೋಟಿ ಮಹಾದೇವರುಂ ಅಸಂಖ್ಯಾತ ಗಣಂಗಳುಂ ಮುಂಮುರಿ ದಂಡಂಗಳುಂ ನೆರೆದು ಮಾಡಿದಾಜ್ಞೆಯ ಸಾಸನಎಂತೆಂದಡೆ” ಎಂಬ ಹೇಳಿಕೆಯಿದೆ. ಇಲ್ಲಿ ಶ್ರೀ ಎಳ್ಕೋಟಿ ಮಹಾದೇವ ಎಂದರೆ ಮೈಲಾರ ದೇವರಿಗೆ ಸಂಬಂಧಪಟ್ಟ ತಪಸ್ವಿ ಅಥವಾ ಗೊರವನಾಗಿರಬೇಕು. ಕನಿಷ್ಟಪಕ್ಷ ಮೈಲಾರದ ಸಂಪ್ರದಾಯವನ್ನು ಪ್ರತಿನಿಧಿಸುವ ಒಬ್ಬ ಗಣ್ಯನಾದ ವ್ಯಕ್ತಿ ಎಂಬುದಂತೂ ಸ್ಪಷ್ಟವಿದೆ. ನ್ಯಾಯ ನಿರ್ಣಯದಂಥ ಮಹತ್ವದ ಕಾರ್ಯಗಳಲ್ಲಿ ಗಮನಾರ್ಹ ವ್ಯಕ್ತಿಯಾಗಿದ್ದನೆಂಬುದೂ, ಇತರರ ಗೌರವಕ್ಕೆ ಅವನು ಪಾತ್ರನಾಗಿದ್ದನೆಂಬುದೂ ಇದರಿಂದ ವ್ಯಕ್ತವಾಗುತ್ತದೆ.

ಮೇಲಿನ ಎರಡೂ ಶಾಸನಗಳನ್ನು ಡಾ || ಖರೆ ಮತ್ತು ಶ್ರೀ ರಾ. ಚಿಂ. ಢೇರೆ ಅವರು ಗಮನಿಸಿದ್ದಾರೆ. ಇವುಗಳಲ್ಲಿಯ ‘ಎ (ಏ) ಳ್ಕೋಟಿ ಎಂಬುದನ್ನು ಅವರು ಯಾವ ಅನುಮಾನವೂ ಇಲ್ಲದೆ ಮೈಲಾರ ದೇವರ ಸಂಪ್ರದಾಯ ಸೂಚಕವೆಂಬುದನ್ನು ಒಪ್ಪಿಕೊಂಡಿದ್ದಾರೆ.

೭) ಕರಮಡಿಯ ಶಾಸನ (Slt-XV No. ೪೯೨. ಸು. ಕ್ರಿ.ಶ. ೯ ನೆಯಶ.) ಇದರ ಫಲಶ್ರುತಿಯಲ್ಲಿ “ಇದನೞಿದಾತ ಎೞ್ಕೋಟ್ಟಿಯೊಳು [೦] ವಾರಣಾಸಿಯೊಳಂ ಕವಿಲೆಯುವಮನೞಿದೋಂ” ಎಂದು ಹೇಳಿದೆ. ಇಲ್ಲಿ ‘ಎೞ್ಕೋಟ್ಟಿ’ ಎಂಬುದು ಸಂಖ್ಯಾವಾಚಿಯಾಗಿರದೆ ವಾರಾಣಾಸಿಯೆಂತೆಯೇ ಒಂದು ಕ್ಷೇತ್ರದ ಹೆಸರಾಗಿದೆ. ಅಷ್ಟಲ್ಲದೆ ‘ಎೞ್ಕೋಟಿ’ ಎಂಬ ಕ್ಷೇತ್ರವು ವಾರಣಾಸಿಯಂತೆ ಈ ಭಾಗದಲ್ಲಿ ೯ನೆಯ ಶತಮಾನಕ್ಕಾಗಲೇ ಪ್ರಸಿದ್ಧವಾಗಿದ್ದ ಸಂಗತಿ ಇದರಿಂದ ವ್ಯಕ್ತವಾಗುತ್ತದೆ.

೮) ಮೈಸೂರು ಜಿಲ್ಲೆಯ ಮೈಸೂರು ತಾಲ್ಲೂಕಿನ ಕುಕ್ಕರಹಳ್ಳಿಯ ಶಾಸನ (EC.XIV ಮೈ-ಮೈ-೧೨೭) ಕಾಲ ಕ್ರಿ.ಶ. ಸು. ೯ನೆಯ ಶತಮಾನವೆಂದು ಹೇಳಲಾಗಿದೆ. ಶಾಸನದಲ್ಲಿ ನರಸಿಂಗಯ್ಯನೆಂಬ ಒಬ್ಬ ಚಾಲುಕ್ಯ ಮಾಂಡಲಿಕನ ಹೆಸರಿದೆ. ಇದರಲ್ಲಿ “ಇ ಧರ್ಮ್ಮಮನೞಿದವರ್‌ ಲಿಂಗವುಮಂ ಶ್ರೀಪರ್ವ್ವತ ಮುಮಂ ಎೞ್ಕೋಟಿ ಎಂಬುದು ತಪೋಧನ ಅಥವಾ ತಪೋಜನ ಎಂದಿರದೆ ಶ್ರೀಪರ್ವತ ವಾರಾಣಾಸಿಗಳಂತೆ ಕ್ಷೇತ್ರ ವಾಚಾಕವಾಗಿದೆ. ಕರಮಡಿ ಮತ್ತು ಕುಕ್ಕರಹಳ್ಳಿಯ ಶಾಸನಗಳಿಂದ ಏಳುಕೋಟಿ ಎಂಬುದು ಒಂದು ಕ್ಷೇತ್ರ ವಿಶೇಷವಾಗಿತ್ತೆಂಬುದು ಸ್ಪಷ್ಟ.

ಮೇಲಿನ ಎರಡೂ ಶಾಸನಗಳಲ್ಲಿ ‘ಎ (ಏ) ೞ್ಕೋಟ್ಟಿ’ ಎಂಬ ರೂಪವಿದೆ. ದೀರ್ಘ ಸ್ವರಕ್ಕೆ ಪರದಲ್ಲಿ ಸಜಾತೀಯ ದ್ವಿತ್ವವಿರುವುದು ಈ ಶಾಸನಗಳ ಪ್ರಾಚೀನತೆಗೆ ಸಾಕ್ಷಿಯಾಗಿದೆ.

೯) ಕ್ರಿ.ಶ. ೯೭೧ ರ ಶಾಸನವೊಂದು (SII-XI-I ನಂ. ೪೨) “ಎೞ್ಕೋಟಿ ಯುವಂ ವಾರಣಾಸಿಯುವಂ ಕವಿಲೆಯುಮನೞಿದ ದೋಷಮನೆಯ್ದುವರ್” ಎಂದು ಹೇಳುತ್ತದೆ. ಮೇಲಿನ ಎರಡೂ ಶಾಸನಗಳನ್ನು ಇದು ಸಮರ್ಥಿಸುತ್ತದೆ.

ಪ್ರಸ್ತುತ ಕ್ಷೇತ್ರವು ‘ಏಳುಕೋಟಿ’ ಎಂಉದ ಪ್ರಸಿದ್ಧವಾಗಿದ್ದುದರಿಂದ ಆ ಕ್ಷೇತ್ರಕ್ಕೆ ಸಂಬಂಧಿಸಿದ್ದ ತಪಸ್ವಿಗಳು ಅಥವಾ ನೈಷ್ಠಿಕ ಭಕ್ತರನ್ನು ಎಳ್ಕೋಟಿ ತಪೋಧನ’ರೆಂದು ಕರೆಯುವುದು ಸ್ವಾಭಾವಿಕವಾಗಿದೆ. ಮೇಲಿನ ಮೊದಲ ಆರು ಉದಾಹರಣೆಗಳು ಈ ಮಾತಿನ ಸತ್ಯತೆಗೆ ಪೋಷಕವಾಗಿವೆ. ಇದರಿಂದಾಗಿ ಮೈಲಾರ ಲಿಂಗ ಅಥವಾ ಏಳುಕೋಟಿಯ ಸಂಪ್ರದಾಯವು ಕೇವಲ ೧೧ನೆಯ ಶತಮಾನದಿಂದ ಅಸ್ತಿತ್ವಕ್ಕೆ ಬಂದದ್ದಲ್ಲವೆಂಬುದು ಸಿದ್ಧಿಸುತ್ತದೆಯಲ್ಲದೆ ಕ್ರಿ.ಶ. ಒಂಬತ್ತನೆಯ ಶತಮಾನಕ್ಕಾಗಲೇ ಕರ್ನಾಟಕದಲ್ಲಿ ಈ ದೇವತಾ ಕ್ಷೇತ್ರವೂ ಅದರ ತಪಸ್ವಿಗಳೂ ಬಹುಪ್ರಭಾವಶಾಲಿಗಳಾಗಿದ್ದರೆಂದೂ ಶ್ರೀಪರ್ವತ ಮತ್ತು ವಾರಣಾಸಿಗಳಂತೆ ಪೂಜನೀಯರಾಗಿದ್ದರೆಂದೂ ಖಚಿತವಾಗಿ ಹೇಳಬಹುದಾಗಿದೆ. ಈ ಕಾರಣ, ವಿದ್ವಾಂಸರು ಬ್ರಹ್ಮಶಿವನು ಹೇಳಿದ “ಮನೆವೆಗ್ಗಡೆ ಚಟ್ಟಪನಿಂದ ನಿನ್ನೆ ತಾನಾದ” ಎಂಬ ಉಕ್ತಿಗೆ ಜೋತುಬೀಳುವುದು ಮತ್ತು ೧೦-೧೧ನೆಯ ಶತಮಾನಗಳ ಇತಿಹಾಸದಲ್ಲಿ ‘ಮನೆವೆಗ್ಗಡೆ’ ಚಟ್ಟಪನನ್ನು ಪತ್ತೆಹಚ್ಚಿ ಪ್ರತಿಷ್ಠಿಸಲು ಪ್ರಯತ್ನಿಸುವುದು ನಿರುಪಯುಕ್ತವೆನಿಸುತ್ತದೆ. ಜೈನ ಮತವೇ ಆದಿಯಾದ ಮತ; ಉಳಿದುವೆಲ್ಲ ಇತ್ತೀಚಿನವು ಎಂಬ ನಂಬಿಕೆ, ಹಾಗೂ ಜೈನಮತ ಸಮರ್ಥನೆ ಪರಮತ ವಿಡಂಬನೆಯೇ ಪ್ರಧಾನ ಲಕ್ಷ್ಯವಾಗಿ ಉಳ್ಳವರ ಮಾತನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವುದರಿಂದ ಯಾವ ಲಾಭವೂ ಇಲ್ಲ.

೧೦) ಕ್ರಿ.ಶ. ೧೧-೧೨ನೆಯ ಶತಮಾನಗಳಲ್ಲಿ ಮೈಲಾರಲಿಂಗ ಮತ್ತು ಮಾಳಚಿ (ಈಗ ಗಂಗಿ ಮಾಳವ್ವ,-ಮಾಲತಿ) ದೇವತೆಗಳನ್ನು ತಮ್ಮ ಕುಲದೇವತೆಯನ್ನಾಗಿ ಮಾಡಿಕೊಂಡಿದ್ದ ರಾಜ ಮನೆತನಗಳು ಇದ್ದ ಸಂಗತಿ ವಿದ್ವಾಂಸರಿಗೆ ತಿಳಿದಿದೆ. ಅಂಥ ರಾಜಮನೆತನಗಳಲ್ಲಿ ಗೋವೆಯ ಕದಂಬರದೂ ಒಂದು ಈ ಕದಂಬರು ತಮ್ಮನ್ನು “ಶ್ರೀ ಸಪ್ತಕೋಟೀಶ್ವರ ಲಬ್ಧ ವರಪ್ರಸಾದ” “ಶ್ರೀಸಪ್ತಕೋಟೀಶ್ವರ ಪಾದಪದ್ಮ ಪ್ರಸಾದ” ಎಂದು ಕರೆದುಕೊಂಡು ಸಂಗತಿಯನ್ನು ಡಾ || ಖರೆ ಮತ್ತು ಶ್ರೀ ಢೇರೆ ಅವರು ಎತ್ತಿ ತೋರಿಸಿದ್ದಾರೆ. ಮೇಲಿನ ಕದಂಬ ಪ್ರಶಸ್ತಿಯು ಆರನೆಯ ವಿಕ್ರಮಾದಿತ್ಯನ ಸಮಕಾಲೀನನಾಗಿದ್ದ ಗೋವೆಯ ಕದಂಬ ದೊರೆ ಗೂವಲದೇವನ ಮುಗುದ (ಜಿ. ಧಾರವಾಡ SII-XII ನಂ. ೨೧೧) ಶಾಸನದಲ್ಲಿಯೂ ತೋರಿಬರುತ್ತದೆ. ಮೇಲಾಗಿ ಮೈಳಲದೇವಿ ಎಂಬ ಖ್ಯಾತಳಾದ ರಾಣಿ ಆ ವಂಶದಲ್ಲಿ ಆಗಿ ಹೋಗಿದ್ದಾಳೆ. ಆದುದರಿಂದ ಕದಂಬರ ಈ ಮನೆತನದ ಶಾಸನಗಳಲ್ಲಿ ತೋರುವ ‘ಸಪ್ತಕೋಟೀಶ್ವರ’ ಎಂಬುದು ‘ಎಳ್ಕೋಟಿ’ಯ ಭಾಷಾಂತರವೇ ಆಗಿದೆ ಎಂದು ಹೇಳಬಹುದು. ಗೋವೆಯ ನಾರವೆಯ ಪ್ರದೇಶದಲ್ಲಿ ಈಗಲೂ ಕೋಟೀಶ್ವರ ಅಥವಾ ಕೋಟೇಶ್ವರ ಎಂಬ ದೇವಾಲಯವಿದೆ. ಇದು ಬಹು ಪ್ರಾಚೀನವಾಗಿದ್ದು ಕದಂಬರ ಕುಲದೇವತೆ ಯಾಗಿರುವ ಸಾಧ್ಯತೆ ಹೆಚ್ಚಿದೆ. ಡಾ || ಖರೆ ಈ ಅಭಿಪ್ರಾಯವುಳ್ಳವರಾಗಿದ್ದಾರೆ. ಆದರೆ ಶ್ರೀ ಢೇರೆಯವರು ಅವರ ಅಭಿಪ್ರಾಯವನ್ನು ಸಂಶಯದಿಂದ ನೋಡಿದ್ದಾರೆ. ಗೋವೆಯ ಕೋಟೀಶ್ವರ ದೇವಸ್ಥಾನದಲ್ಲಿ ಈಗ ಶುದ್ಧ ಶೈವದ ಆಚಾರ ಪರಂಪರೆಗಳು ಕಂಡುಬರುತ್ತಿದ್ದು ಇಲ್ಲಿಯ ದೈವತವು ಸಾರಸ್ವತ ಬ್ರಾಹ್ಮಣರ ಅಧಿದೈವತವೆಂದು ಮನ್ನಿಸಲ್ಪಡುತ್ತದೆ. ಆದುದರಿಂದ ಮೈಲಾರಲಿಂಗನಿಗೂ ಕೋಟೀಶ್ವರನಿಗೂ ಸಂಬಂಧ ಕಲ್ಪಿಸುವುದು ಕಷ್ಟವೆಂದು ಶ್ರೀ ಢೇರೆಯವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅವರು ಎತ್ತಿರುವ ಆಕ್ಷೇಪಣೆಯು ದುರ್ಬಲವಾದುದೆಂಬುದನ್ನು ಅವರೇ ಮನಗಂಡಿದ್ದಾರೆ. ಅವರ ‘ಖಡೋಬಾ’ ಗ್ರಂಥದ ಪುಟ ೧೪೨ ರಲ್ಲಿ ‘ಸಪ್ತ’ ಶಬ್ದವನ್ನು ಕುರಿತು ಅವರೇ ಮಾಡಿರುವ ಚರ್ಚೆಯನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಇಂದು ಆ ದೇವಸ್ಥಾನದಲ್ಲಿಯ ಆಚಾರಾದಿಗಳು ಬೇರೆಯಾಗಿದ್ದುದು ಕಾಲಮಾನಗಳಲ್ಲಾದ ವ್ಯತ್ಯಾಸ ಕಾರಣವಾಗಿ ಎಂದು ಹೇಳಬಹುದು. ಅದೇ ಗೋವೆಯಲ್ಲಿರುವ ಮ್ಹಾಡದೋಳ ಗ್ರಾಮದ ಮ್ಹಾಳಸಾದೇವಿಯ ಸ್ಥಾನವನ್ನು ಕುರಿತು ಚರ್ಚಿಸುವಾಗ ಶ್ರೀ ಢೇರೆಯವರು ಅಲ್ಲಿ ಈಗ ಮೈಲಾರದೇವರು ಅಥವಾ ಮಾಳವ್ವನಿಗೆ ಸಂಬಂಧಿಸಿದ ಆಚರಣೆಗಳು ವ್ಯತ್ಯಸ್ತಗೊಂಡಿರುವುದನ್ನು ನಮೂದಿಸಿದ್ದಾರೆ. ಆದರೂ ಅವರಿಗೆ ಈ ದೇವಸ್ಥಾನವು ಪ್ರಸ್ತುತ ಸಂಪ್ರದಾಯಕ್ಕೇ ಸಂಬಂಧಿಸಿದ್ದೆಂಬ ವಿಷಯಕ್ಕೆ ಸಂಶಯ ಉಂಟಾಗಿಲ್ಲ. ಕಾರಣವೆಂದರೆ ಮ್ಹಾಳಸಾದೇವಿಯನ್ನು ಮಾಳಚಿಗಲ್ಲದೆ ಬೇರೆ ಯಾವ ದೇವತೆಗೂ ಜೋಡಿಸುವುದು ಸಾಧ್ಯವಿಲ್ಲ. ಮೂಲತಃ ಇವೆರಡು ದೇವಸ್ಥಾನಗಳು ವೇರ್ಣೆ ಮತ್ತು ನಾರವೆಯ ಪ್ರದೇಶಗಳಿಗೆ ಸೇರಿದವುಗಳಾಗಿದ್ದವು. ಇವುಗಳಲ್ಲಿರುವ ಈ ಸಾಮೀಪ್ಯವು ಇವು ಮೂಲದಲ್ಲಿ ಒಂದೇ ಸಂಪ್ರದಾಯಕ್ಕೆ ಸೇರಿದವುಗಳೆಂದು ಸೂಚಿಸುತ್ತದೆ. ಆದುದರಿಂದ ಕದಂಬ ಶಾಸನಗಳ ಸಪ್ತಕೋಟೀಶ್ವರ ನೆಂದರೆ ಕನ್ನಡದ ಏಳುಕೋಟಿಯೇ ಎಂದು ಹೇಳುವ ಡಾ || ಖರೆಯವರ ಅಭಿಪ್ರಾಯವು ಸಾಧುವಾದುದೆಂದು ಹೇಳಬೇಕು.

ಗೋವೆಯ ಕೋಟೀಶ್ವರ ದೇವಾಲಯವು ಮೂಲತಃ ಸಪ್ತಕೋಟೀಶ್ವರ ಎಂಬ ಹೆಸರಿನಲ್ಲಿದ್ದು ರೂಢಿಯಲ್ಲಿ ಕೋಟೀ (ಟೀ)ಶ್ವರ ಎಂಬ ರೂಪದಲ್ಲಿ ಪ್ರಚಾರವಾಗಿದೆ. ಇದೇ ಹೆಸರಿನ ಒಂದು ದೇವಸ್ಥಾನವು ಈಗ ಕರ್ನಾಟಕದ ಕೊಂಕಣ ಪಟ್ಟಿಯಲ್ಲಿದೆ. ಅದರ ಹೆಸರೂ ಕೋಟೇಶ್ವರವೇ. ಈ ದೇವಸ್ಥಾನಕ್ಕೂ ಮೈಲಾರ ಸಂಪ್ರದಾಯಕ್ಕೂ ಏನಾದರೂ ಸಂಬಂಧವಿದೆಯೋ ಹೇಗೆ ಎಂಬುದು ವಿಚಾರಣೀಯವಾಗಿದೆ. ಗೋವೆಯ ಕೋಟೇಶ್ವರ ದೇವಸ್ಥಾನದ ಹೆಸರು ಸಪ್ತಕೋಟಿ ಎಂಬುದು ಕೋಟಿ ಅಥವಾ ಕೋಟೇಶ್ವರ ಎಂದಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಆದುದರಿಂದ ಮೈಲಾರ-ಮೈಳಾರ-ಮೈರಾಲ, ಮಾಳಚಿ-ಮ್ಹಳಸಾ-ಮಾಳವ್ವ, ಸಪ್ತಕೋಟಿ-ಏಳುಕೋಟಿ-ಎೞ್ಕೋಟಿ ಇವುಗಳ ಜತೆಗೆ ಕೋಟೇಶ್ವರ ಅಥವಾ ಕೋಟಿ ಎಂಬುವುಗಳನ್ನೂ ಸೇರಿಸಿಕೊಂಡು ವಿಚಾರಿಸುವುದು ಸಮರ್ಥನೀಯವೆನಿಸುತ್ತದೆ. ಹೀಗೆ ಈ ಸಂಪ್ರದಾಯದ ಮಿತಿಗಳು ವರ್ಧಿಸುವುದರಿಂದ ದೊರೆಯತಕ್ಕ ಶಾಸನೋಲ್ಲೇಖಗಳ ಸಂಖ್ಯೆ ಇನ್ನೂ ಹೆಚ್ಚುವುದು ಸ್ವಾಭಾವಿಕ. ಈ ಪರಿಮಿತಿಯಲ್ಲಿ ಬರುವ ಮುಂದಿನ ಕೆಲವು ಶಾಸನಗಳನ್ನು ನೋಡಬಹುದು:

I. ಗದ್ದೆ ಮನೆ ಶಾಸನ: (M.A.R. 1923-P-83. ಸು.ಕ್ರಿ.ಶ. ೭ನೆಯ ಶ.) “…………ಪೆಟ್ಟಣಿ ಸತ್ಯಾಂಕನ್ ಅಟ್ಟುಳ್ವಭಟನ್‌ ಬೆದರೆ ಮಹೇನ್ಡ್ರನ್ ಬೇಡರ ರಾಯರ ಮಲಪ್ಪರ ಕಾಳೆಗದುಳೆ ವಿೞಿದು ಸ್ವರ್ಗಾಲಯಕ್ಕೇಱಿದನ್ ( | *) ಬೆಳೆಯ ಮಾೞ ( | *) ಕಾದೊನ್ ಕಲ್ಯಾಣಂ ಅಕ್ಕೆ ಅೞೆವೊನ್‌ ಪಞ್ಚಮ………”

ಇದರಲ್ಲಿ ಬೆಳೆಯ ಮಾೞ ಎಂದಿರುವುದು ಬೇಳೆಯ (ವೇಳೆಯ) ಮಾೞ ಎಂಬ ಒಬ್ಬ ವ್ಯಕ್ತಿಯ ಹೆಸರಾಗಿದೆ.

II. ಎರಡನೆಯ ಕೀರ್ತಿವರ್ಮನ ಆಡೂರು. ಶಾಸನ (ಕ್ರಿ.ಶ. ಸು. ೭೫೦ k.l Vol-l. No-3.)

ಈ ಶಾಸನವು ಆಡೂರನ್ನು ಗಂಗಿ-ಪಾಂಡಿವೂರು ಎಂದು ಕರೆದಿದೆ ಮತ್ತು ಸಿಂದರಸರು ಅಷ್ಟು ಪ್ರಾಚೀನ ಕಾಲದಿಂದಲೂ ಈ ಭಾಗದಲ್ಲಿ ಆಳುತ್ತಿದ್ದುದು ಇದರಿಂದ ತಿಳಿದುಬರುತ್ತದೆ. ಮುಂದಿನ ಕಾಲದ ಸಿಂದರಸರು “ಮಾಳತೀದೇವಿ ಲಬ್ಧ ವರ ಪ್ರಸಾದ’ರೆಂದು ತಮ್ಮನ್ನು ಕರೆದುಕೊಳ್ಳುತ್ತಿದ್ದ ಸಂಗತಿ ದೇವೀಹೊಸೂರು ಮುಂತಾದ ಶಾಸನಗಳಲ್ಲಿ ಉಲ್ಲೇಖಿತವಾಗಿದೆ. ಮಾಳತೀದೇವಿಯನ್ನು (ಈಗ) ‘ಗಂಗಿ ಮಾಳವ್ವ’ ದೇವತೆಗೂ ಏನಾದರೂ ಸಂಬಂಧವಿದೆಯೋ ಏನೋ? ವಿಚಾರಣೀಯವಾದ ಅಂಶವಿದು.

III. E.C.VI. ಕಡೂರು-೧೪೫ ಸು. ಕ್ರಿ.ಶ. ೭೮೦ (ಗಂಗ ಶ್ರೀಪುರುಷ) ಅಂತ್ಯದ ಫಲಶ್ರುತಿಯಲ್ಲಿ “ಕೆಡಸಿದೋನುಕ್ಕೋಟಿ ಬಾರಣಾಸಿಯುಳ್ ಸಾಸಿರ್ವ್ವರ್ಪ್ಪಾರ್ವ್ವರುಂ ಸಾ…….ವಿಲೆಯಂ ಕೊನ್ದ ಕೊಲೆವಯ್ದುಗೆ” ಎಂದು ಹೇಳಿದೆ. ಇಲ್ಲಿಯ ಕ್ಕೋಟಿ ಎಂಬುದು ಒಂದು ಕ್ಷೇತ್ರನಾಮವಾಗಿರುವುದು ಕಂಡು ಬರುತ್ತದೆ.

ನಾಚಾಯ್ಯಳ ಪೂರಂ ವ್ರತ ಮಾಡಿದ ಕಥೆಯನ್ನು ಹಾಡಿನ ಮೂಲಕ ಪ್ರಸ್ತುತಮಾಡಿಸುವಾಗ ಕಾಮ ಹಾಗೂ ಕನ್ನಡಿಯ ತೆಯ್ಯಾ ಕೋಲಗಳು ಬರುತ್ತವೆ. ಕೆಲವು ನಾಯರ್ ಕುಟುಂಬಗಳಲ್ಲಿ ಕುದುರೆಯ ಮೇಲೆ ಸವಾರಿ ಮಾಡುವ ಕಾಮನ ಕೋಲವಿರುತ್ತದೆ. ಇದು ಆಕಾಶಗಾಮಿ ಗಂಧರ್ವವನ್ನು ನೆನಪಿಸುತ್ತದೆ. ಕೋಲತ್ತು ನಾಡಿನ ಉತ್ತರ ಭಾಗದಲ್ಲಿ ನೀಲಿಕೇಶಿ ಪಾಟ್ ಹಾಡುವರು. ಕೆಲವೆಡೆ ನೀಲಿಕೇಶಿಯ ಕೋಲವಿರುವುದು. ಅರ್ಧರಾತ್ರಿಯ ಹೊತ್ತಿಗೆ ಅನೇಕ ಕೋಲಗಳು ನಡೆಯುತ್ತದೆ. ವೇಚಿ, ಮಾಪಳ, ಮಾಯಿಲೋನ್, ಯೋಗಿ ಮೊದಲಾದ ಕಥಾಪಾತ್ರಗಳು ರಂಗಕ್ಕಿಳಿಯುತ್ತವೆ. ಮುಂಜಾನೆಯ ಹೊತ್ತಿಗೆ ಕ್ರೋಂದೋನ್ ಪಾಟು ಮುಗಿಯುವುದು. ಪೊಲಿಪಾಟ್ ಹಾಡಿ, ಅಕ್ಕಿ, ಧಾನ್ಯ, ವಸ್ತ್ರ, ಹಣವನ್ನು ವೃದ್ಧಿಸುವ ಆಚರಣೆ ನಡೆಯುತ್ತದೆ. ಅನಂತರ ತೆಂಗಿನ ಎಳೆಯ ಗೊನೆಯನ್ನು ಬಾಧೆಗೊಳಗಾದ ಮಹಿಳೆಯಿಂದ ನೆಲಕ್ಕೆ ಹೊಡೆಸಿ, ಶಕುನ ನೋಡುವ ಕ್ರಮವಿದೆ.

IV. ಮೇಲೆ ಉಲ್ಲೇಖಿಸಿದ ನಂ. ೮ರ ಶಾಸನ.

V. E. C. VII. ಶಿಕಾರಿಪುರ. ೨೮೩ ಕಾಲ ಸು. ಕ್ರಿ.ಶ. ೮೩೦.

“ಗುಡ್ಡರ ಪುಬ್ಬಾಮಿಗಂಗೆ ಮಾಳಿಙ್ಗೆಗಾಮಿತ್ತಿಯಾಂಗೆ ಪುಟ್ಟಿದ” ಇಲ್ಲಿ ಮಾಳಿಙ್ಗೆ ಗಾಮಿತ್ತಿ ಎಂಬ ಸ್ತ್ರೀನಾಮವಿದೆ.

VI. SII. IX. I. ನಂ. ೧೮ ಕ್ರಿ.ಶ. ೮೮೩ (ಕದಂಬದೂರ ಕಲ್ಯಾಣದುರ್ಗ ತಾ – ಅನಂತಪೂರ ಜಿ.)”ಮಯಿಲ ಪಾರ್ವರ ಮದಙ್ಗೆರೆಯರು”

ಇದರಲ್ಲಿಯ ಮಯಿಲ ಪಾರ್ವ್ವರ್ ಎಂಬುದು ವೃತ್ತಿವಾಚಕ ಅಥವಾ ಸ್ಥಳ ವಾಚಕವಾಗಿದೆ.

VII : SII-XI-I ನಂ-೨೭ ಕ್ರಿ.ಶ. ೯೦೩

“ಈ [ದನ] ೞಿದಾತಂ ವಾರಣಾಸಿಯೊಳ್ ಮೂವತಿಚ್ಚಾಸಿರವಮುಮಾನೆ ೞ್ಕೋಟಿಯುಮಾಂ [ಕವಿ] ಲಯುಮನೞಿದೋಂ”

VIII. E-I-XVI. p ೫೯೯. ಕ್ರಿ.ಶ. ೯೦೬

“ವಾರಣಾಸಿಯುಮಂ ಎೞ್ಕೋಟಿ ತಪೋದನಮುಮ…..ಅೞಿದೆ ಪಾಪ ಮಕ್ಕುಂ”

ಇಲ್ಲಿ ಎೞ್ಕೋಟಿ ತಪೋವನ ಎಂಬ ಪ್ರಯೋಗ ಪ್ರಥಮ ಬಾರಿ ಕಂಡುಬರುತ್ತದೆ.

IX. SII-IX.I ನಂ. ೩೧ ಕ್ರಿ. ೯೩೩

“ಎೞ್ಕೋಟಿಯಂ ಕವಿಲೆಯುಮನೞಿದೋ”

X. SII-XI-I- ನಂ. ೪೨ ಕ್ರಿ.ಶ. ೯೭೧

“ಎೞ್ಕೋಟಿಯುವಂ ವಾರಣಾಸಿಯುವಂ ಕವಿಲೆಯುಮನೞಿದ ದೋಷ ಮನೆಯ್ದುವರ್”

ಮೇಲಿನ ಎರಡೂ ಶಾಸನಗಳಲ್ಲಿ ಎೞ್ಕೋಟಿ ಎಂಬುದು ಕ್ಷೇತ್ರವಾಚಕವಾಗಿದೆ.

XI. E.C.VII ಶಿವಮೊಗ್ಗೆ ೨೪. ಸು.ಕ್ರಿ.ಶ. ೯೬೦

“ಮಾಳನುಂ ಮಾರಗನುಂ ನಾಗ….ಮುದ್ದನು ಒಡೆನೆಸಿದ್ಧಿಸಿದರ್”

XII. E.I. XXpp. ೬೪-೭೦ ಕ್ರಿ.ಶ. ೧೦೧೨ ಕೋಟುಮ್ಮಚಿಗೆಯ ಶಾಸನ. ಮೇಲಿನ ನಂ. ೫ ರಲ್ಲಿ ಇದರ ಚರ್ಚೆ ಬಂದಿದೆ.

XIII. ವೆಲುಪಗೊಂಡ (ಜೋಗೀಪೇಟೆ ತಾ – ಸಂಗರಾಡಿ ಜಿಲ್ಲೆ – ಆಂಧ್ರ ಕ್ರಿ.ಶ. ೧೦೧೯) ‘ಸಾಧನೆ’ IX.I ಪು. ೫೯

“ಶ್ರೀಮನು ಮಹಾಮಂಡಳೇಶ್ವರ ಸೋಮ ಪೆರ್ಮಾಡಿಗಳು ಸವಲಕ್ಕೆಯು ಮುಕಂದ ಮೂವನ್ನೂರನಾಳುತ್ತಂ ವೆಲುಪಗೊಂಡೆಯದ ಮೈಳಾರದೇವರಿಗೆ ಹೆಗ್ಗೆಡೆ…… ಪೆಬ…… ಕನುಂ….. ಊರ……. ನಭೋ…… ಬಮಕ…. ಮಾ… ದರು ದೇವರ.. ನಿವೇದ್ಯಕ್ಕದಾಯಿ ಕೊಟ್ಟ…… ಮತ್ತರೊಂದು”

ಮೈಲಾರಲಿಂಗನ ದೇವಸ್ಥಾನವಿದ್ದ ಸಂಗತಿಯನ್ನು ನಿರ್ದುಷ್ಟವಾದ ಶಬ್ಧಗಳಲ್ಲಿ ತಿಳಿಸುವ ಪ್ರಥಮ ಶಾಸನವಿದು. ಆದರೆ ಶಾಸನವಿರುವುದು ಆಂಧ್ರಪ್ರದೇಶದ ಸಂಗರಡ್ಡಿ ಜಿಲ್ಲೆಯಲ್ಲಿ ಹೋಳಿಕೆಯಲ್ಲಿ ಬ್ರಹ್ಮ ಶಿವನ ಪ್ರದೇಶಕ್ಕೆ ಸಮೀಪವಾದ ಊರು ವೆಲುಪಗೊಂಡವೆಂಬುದನ್ನು ಇಲ್ಲಿ ಗಮನಿಸಬಹುದು.

XIV. I. A, XIV, P-೨೮೮. ಪಣಜಿಯ ತಾಮ್ರಶಾಸನ. ಇದರಲ್ಲಿ ‘ಸಪ್ತ ಕೋಟೀಶ್ವರ’ ಎಂದರಿವ ಪ್ರಯೋಗದ ಬಗೆಗೆ ಮಹಾರಾಷ್ಟ್ರದ ಇಬ್ಬರು ವಿದ್ವಾಂಸರು ಚರ್ಚಿಸಿದ್ದಾರೆ.

XV. ಕ್ರಿ.ಶ. ೧೦೮೫ ಮುರಗೋಡ ಶಾಸನ (ಖಂಡೋಬಾ’ ಪುಸ್ತಕದ ಅನುಬಂಧ) ಇದರಲ್ಲಿ ‘ಮೈಳಾರಶಕ್ತಿ’ ಎಂಬ ಶೈವಸನ್ಯಾಸಿಯ ಹೆಸರಿದೆ. ಮುರಗೋಡು ಮೈಲಾರಲಿಂಗನ ದೇವಸ್ಥಾನವಿರುವ ಕಾರೀಮುನಿಯಿಂದ ೨. ೧/೨ಮೈಲುಗಳಷ್ಟು ಉತ್ತರಕ್ಕೆ ಇರುವ ಊರು.

XVI. SII-XI-II. ನಂ. ೨೧೧ (ಆರನೆಯ ವಿಕ್ರಮಾದಿತ್ಯ) ಮುಗದ (ಧಾರವಾಡ)

ಇದರಲ್ಲಿ “ಸಪ್ತಕೋಟೇಶ್ವರ ಲಬ್ಧವರಪ್ರಸಾದ” ಎಂಬ ಕದಂಬ ಪ್ರಶಸ್ತಿಯಿದೆ.

XVII. ದೇವೀಹೊಸೂರಿನ ಎರಡು ಶಾಸನಗಳು (SII-XVIII ನಂ ೬೯, ೧೫೨ ಕ್ರಿ.ಶ. ೧೦೬೩ ಮತ್ತು ೧೧೪೯) ಇವುಗಳಲ್ಲಿ ಮಾಳಚೀದೇವಿಯ ದೇವಸ್ಥಾನವಿದ್ದ ಉಲ್ಲೇಖಗಳಿವೆ. ಈ ಶಾಸನಗಳನ್ನು ಕುರಿತು ವಿದ್ವಾಂಸರು ಚರ್ಚಿಸಿದ್ದಾರೆ. ನಂ ೧೫೨ರ ಶಾಸನದ ೨೮ನೆಯ ಸಾಲಿನಲ್ಲಿ ‘ಮಾಳಚಾದೇವಿಯಿಂ ಬಡಗಲು’ ಎಂಬುದಕ್ಕ ಬದಲಾಗಿ ‘ಮಾಳಚಾ’ ಎಂಬ ರೂಪ ಕಂಡುಬರುತ್ತದೆ. ಈ ಮಾಳಚಾ ರೂಪವೇ ಮರಾಠಿಯಲ್ಲಿ ಮಾಳಸಾ ಅಥವಾ ‘ಮಾಳ್ಹಸಾ’ ಎಂದಾಗಿರುವುದು ಸ್ಪಷ್ಟ.

XVIII. K-I-V. ನಂ. ೧೩ ಕ್ರಿ.ಶ. ೧೧೬೫ ಹಳೆನಿಡುನೇಗಿಲು (ಹಿರೇಕೆರೂರ-ಧಾರವಾಡ)

ಇದರಲ್ಲಿಯೂ ‘ಮಾಳತೀದೇವಿ ಲಬ್ಧವರಪ್ರಸಾದ’ ಎಂಬ ಸಿಂದರಾಜರ ಪ್ರಶಸ್ತಿ ಕಂಡುಬರುತ್ತದೆ.

XIX. ಉಮ್ರಾಣಿ ಶಾಸನ (ಜತ್ತ ತಾಲೂಕ, ಸಾಂಗಲಿ ಜಿಲ್ಲೆ) ಕ್ರಿ.ಶ. ೧೧೬೫ ಮತ್ತು ೧೧೭೨ (‘ಕರ್ನಾಟಕ ಭಾರತಿ’ ೪-೧)

ಇದರಲ್ಲಿ ‘ಮಾಳಿಯಂಣ ಘೈಸಾಸರು’ ಎಂಬ ವೈದಿಕ ಬ್ರಾಹ್ಮಣನ ಹೆಸರಿದೆ.

XX. ಮಲ್ಹಾಲ (ವಿಲಾಸಪೂರ-ಮಧ್ಯಪ್ರದೇಶ ಮತ್ತು ರತನಪೂರ. ಮಧ್ಯಪ್ರದೇಶ-ಢೇರೆಯವರ ‘ಖಂಡೋಭಾ’ ಪುಸ್ತಕದಲ್ಲಿ ಚರ್ಚಿತ)

ಇಲ್ಲಿ ಅನುಕ್ರಮವಾಗಿ ಕ್ರಿ.ಶ. ೧೧೬೨ ಮತ್ತು ೧೧೬೩ ಎರಡು ಚೇದಿವಂಶದ ಶಾಸನಗಳಲ್ಲಿ ‘ಮಲ್ಹಾರ’ ಎಂಬ ಕ್ಷೇತ್ರದ ಹೆಸರು ಇದೆ.

XXI. SII-XI-I ನಂ. ೧೧೧ ಮಳಖೇಡ (ಸೇಡಂ-ಗುಲಬರ್ಗಾ) ಕ್ರಿ.ಶ. ೧೩೩೭ ಇದರಲ್ಲಿ ಮಹಾಪ್ರಧಾನ ಬಾಚರಸ ರಾಣೆಯರು ಮೈಲಾರದೇವರ ಮುಖ ಮಂಟಪ ಮಾಡಿಸಿದ ಸಂಗತಿ ಉಲ್ಲೇಖಿಸಿದೆ.

XXIV. ಕಾರೀಮನಿ ಶಾಸನ ಕಾಲ ಕ್ರಿ.ಶ. ೧೫೭೩ (ಢೇರೆಯವರಿಂದ ಉಲ್ಲೇಖಿತ)

ಮೈಲಾರದೇವರ ಉಲ್ಲೇಖ ಈ ಶಾಸನದಲ್ಲಿದೆ. ಪ್ರಸ್ತುತ ಶಾಸನವು ಈಗ ಮೈಲಾರಲಿಂಗನ ದೇವಸ್ಥಾನದ ಆವರಣದಲ್ಲಿಯೆ ಇದೆ. ಮೈಲಾರಲಿಂಗನ ಏಳು ಅತಿಮುಖ್ಯ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು. ಈ ಭಾಗದ ಜನರು ಈಗ ‘ಮಲ್ಲಯ್ಯ’ ನೆಂದು ದೇವರನ್ನು ಸಂಬೋಧಿಸುತ್ತಾರೆ.

ಇವಲ್ಲದೆ ಹಲವಾರು ಉಲ್ಲೇಖಗಳು ಇರುವ ಶಾಸನಗಳು ಇನ್ನೂ ಇರಬಹುದು. ಕ್ರಿ.ಶ. ೧೧,೧೨ ಮತ್ತು ೧೩ನೆಯ ಶತಮಾನಕ್ಕೆ ಸೇರಿದ ಸುಮಾರು ೨೫-೩೦ ರಷ್ಟಾದರೂ ಶಾಸನಗಳಲ್ಲಿ ಏಳ್ಕೋಟಿ ತಪೋಧನರ ಉಲ್ಲೇಖವಿದೆ. ಇವುಗಳಲ್ಲಿ ಸಂಪ್ರದಾಯ ಸೂಚಕವಾಗಿರದೆ ಕೇವಲ ಸಂಖ್ಯಾಸೂಚಕವಾದ ಕೆಲವು ಶಾಸನಗಳೂ ಇರಬಹುದು. ಅವನ್ನು ಪ್ರತ್ಯೇಕಿಸುವುದು ಕಠಿಣ.

ಇಲ್ಲಿ ಇನ್ನೊಂದು ಸಂಗತಿಯನ್ನು ಲಕ್ಷಿಸಬೇಕು. ಫಲಶ್ರುತಿಯಲ್ಲಿ ಎಳ್ಕೋಟಿ ತಪೋಧನರನ್ನು ಉಲ್ಲೇಖಿಸಿರುವ ಶಾಸನಗಳೆಲ್ಲ ಹೆಚ್ಚಾಗಿ ಶೈವಶಾಸನಗಳಾಗಿವೆ. ಯಾವ ಜೈನಶಾಸನದಲ್ಲಿಯೂ ಅವರನ್ನು ಉಲ್ಲೇಖಿಸಿದಂತೆ ಕಾಣಲಿಲ್ಲ.

ಮೇಲಿನ ಉಲ್ಲೇಖಗಳ ಪರಿಶೀಲನೆಯಿಂದ ಮೈಲಾರದೇವರ ದೇವಸ್ಥಾನಗಳ ಪ್ರದೇಶವ್ಯಾಪ್ತಿ ಮತ್ತು ಸಂಪ್ರದಾಯದ ಪ್ರಾಚೀನತೆ ಎಂಥದೆಂಬುದನ್ನು ಮನಗಾಣಬಹುದಾಗಿದೆ.