ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ ವೀರಶೈವ ದಾಖಲೆಗಳಲ್ಲಿ ಒಂದು ಮೈಲುಗಲ್ಲು. ಮಾನ್ಯ ದೇವೀರಪ್ಪನವರು ಅದನ್ನು ಪ್ರಕಟಿಸವಾಗ ಅದರ ಮಹತ್ವದ ಮುಖಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ತರುವಾಯದಲ್ಲಿ ಅವರೇ ಅದರ ಬಗ್ಗೆ ಉಪನ್ಯಾಸವಿತ್ತರು. ಕರ್ನಾಟಕ ವಿಶ್ವವಿದ್ಯಾಲಯ ೧೯೭೪ ರಲ್ಲಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಆದರೆ ಪ್ರಸ್ತುತ ಕೃತಿಯ ಅಧ್ಯಯನ ಇನ್ನೂ ಸವಿಸ್ತಾರವಾಗಿ ನಡೆಯಬೇಕಾದುದು ಆವಶ್ಯಕವಾಗಿದೆ.

ಶಿವತತ್ವ ಚಿಂತಾಮಣಿಯ ಮೂವತ್ತೆಂಟನೆಯ ಸಂಧಿ ೧೩ ಮತ್ತು ೧೪ನೆಯ ಶತಮಾನಕ್ಕೆ ಸಂಬಂಧಿಸಿದಂತೆ ವೀರಶೈವ ಇತಿಹಾಸದ ಒಂದು ದೊಡ್ಡ ಘಟ್ಟವನ್ನು ತನ್ನಲ್ಲಿ ಗರ್ಭೀಕರಿಸಿಕೊಂಡಿದೆ. ತರುವಾಯ ಕಾಲದ ಸಿದ್ಧ ನಂಜೇಶ ಈ ಅವಧಿಗೆ ಸಂಬಂಧ ಪಟ್ಟಂತೆ ತನ್ನ ಗುರುರಾಜ ಚಾರಿತ್ರದಲ್ಲಿ ಹೇಳಿರುವುದೆಲ್ಲ ಶಿವತತ್ವ ಚಿಂತಾಮಣಿಯ ಈ ಸಂಧಿಯ ಪ್ರತಿಧ್ವನಿ ಮಾತ್ರ. ಸಿದ್ಧನಂಜೇಶನಿಗಿಂತ ಹಿಂದೆ ಇದ್ದ ಗುಬ್ಬಿಯ ಮಲ್ಲಣಾರ್ಯ ತನ್ನ ವೀರಶೈವಾಮೃತ ಪುರಾಣದಲ್ಲಿ ಹಲಕೆಲವು ಹೆಚ್ಚಿನ ಸಂಗತಿಗಳನ್ನು ಸೇರಿಸಿರುವನಾದರೂ ಲಕ್ಕಣ್ಣ ದಂಡೇಶನಷ್ಟು ದೇಶವಿಸ್ತಾರ ಮತ್ತು ವೈವಿಧ್ಯಗಳು ಅವನಲ್ಲಿ ಕಂಡು ಬರುವುದಿಲ್ಲ. ಸಕ್ರೀಯ ರಾಜಕೀಯದಲ್ಲಿದ್ದು ದಕ್ಷಿಣಾ ಪಥದ ತುಂಬ ಸಂಚರಿಸದವನಾದುದರಿಂದ ಇಡೀ ದಕ್ಷಿಣದ ನೇರವಾದ ಪರಿಚಯ ಅವನಿಗಿತ್ತು. ಅವನು ಸು.ಕ್ರಿ.ಶ. ೧೪೦೦ ರಂದು ೧೪೭೦ ರವರೆಗೆ ಜೀವಿಸಿದ್ದನೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಎಂದರೆ ಅವನು ಹೇಳುವ ಶರಣರು, ಅವರ ಊರು ಮತ್ತು ಕಾಯಕಗಳ ಬಗ್ಗೆ ಸಂಶಯ ತಾಳುವ ಅವಕಾಶ ತುಂಬ ಕಡಿಮೆಯಾಗಿದೆ. ಅವನೂ ಪವಾಡಗಳನ್ನು ನಂಬಿಕೊಂಡು ಅದನ್ನು ಬೇರೆ ಬೇರೆ ಶರಣರಿಗೆ ಆರೋಪಿಸಿದ್ದು ಉಂಟು. ಆಧರೆ ಇದೊಂದು ದೊಡ್ಡ ದೋಷವೆಂದು ನಾವು ಪರಿಗಣಿಸಬೇಕಾಗಿಲ್ಲ. ತಾತ್ಪರ್ಯವಿಷ್ಟೇ, ೧೩ನೆಯ ಶತಮಾನದ ಉತ್ತರಾರ್ಧದಿಂದ ಪ್ರಾರಂಭಿಸಿ ೧೫ ನೆಯ ಶತಮಾನದ ಪೂರ್ವಾರ್ಧದ ವರೆಗಿನ ಇನ್ನೂರು ವರ್ಷಗಳ ವೀರಶೈವ ಚರಿತ್ರೆಗೆ ಸಂಬಂಧಪಟ್ಟಂತೆ ಶಿವತತ್ವ ಚಿಂತಾಮಣಿ ಒಂದು ಪ್ರಮಾಣ ಭೂತಗ್ರಂಥವೆಂದು ತಿಳಿಯಬೇಕಾಗಿದೆ.

ಪ್ರಸ್ತುತ ೩೪ನೆಯ ಸಂಧಿಯನ್ನಾತ ಶ್ರೀಶೈಲದ ವರ್ಣನೆಯಿಂದ ಪ್ರಾರಂಭಿಸುತ್ತಾನೆ. ಶ್ರೀಶೈಲದ ಪೂರ್ವದ್ವಾರವಾಗಿ ತ್ರಿಪುರಾಂತಕ, ದಕ್ಷಿಣದಲ್ಲಿ ಸಿದ್ಧವಟ, ಪಶ್ಚಿಮದಲ್ಲಿ ಅಣಪೂರುಪುರ (ಅಳಂಪುರ) ಉತ್ತರದಲ್ಲಿ ಮಹೇಶ್ವರವೆಂದು ಕರೆಯಲಾಗುವ ಪ್ರದೇಶ ಇವು ಅದರ ನಾಲ್ಕು ದ್ವಾರಗಳೆಂದು ಹೇಳುತ್ತಾನೆ. ಶ್ರೀಶೈಲದ ಬಗ್ಗೆ ಎಲ್ಲಿಲ್ಲದ ಭಕ್ತಿ ಲಕ್ಕಣ್ಣದಂಡೇಶನಿಗೆ. ಮುಂದಿನ ಕೆಲವು ಪದ್ಯಗಳಲ್ಲಿ ಅವನ್ನು ಚೊಕ್ಕಟವಾಗಿ ವ್ಯಕ್ತಪಡಿಸಿದ್ದಾನೆ. ಶ್ರೀಶೈಲದಲ್ಲಿ ವೇದವೇದಾಂಗ, ಆಗಮ ಪುರಾಣಗಳಲ್ಲಿ ಪಾರಂಗತರಾಗಿದ್ದ ಮಹಾವಿದ್ವಾಂಸರಿದ್ದರೆಂದೂ ಶೈವ-ವೀರಶೈವಪರ ಗಣ್ಯರು ನೆಲೆಸಿದ್ದರೆಂದೂ ತಿಳಿಸುತ್ತಾನೆ. ಭಿಕ್ಷಾವೃತ್ತಿರಾಯ (ಪ-೮) ವರಧಾನ್ಯ ದಯ್ಯ, ಬ್ರಹ್ಮಚಾರ್ಯೊಡೆಯರು ಮೊದಲಾದ ಹೆಸರುಗಳು ಅವರಲ್ಲಿ ಕಂಡು ಬರುತ್ತವೆ. ಬಹುಶಃ ಇವರು ಅಲ್ಲಿ ನೆಲೆಸಿದ್ದ ವೀರಶೈವ ಪ್ರಮುಖರು. ಪರಂಪರಾ ಗತವಾಗಿ ಶ್ರೀಶೈಲ ವೀರಶೈವ ಶರಣರಿಗೆ ಆಶ್ರಯಸ್ಥಾನವಾದ್ದುದರಿಂದ ಇವರೆಲ್ಲ ಅಲ್ಲಿ ನೆಲೆನಿಂತು ವೀರಶೈವದ ಹಬ್ಬುಗೆಗೆ ದುಡಿಯುತ್ತಿದ್ದರೆಂದು ತಿಳಿಯಬಹುದು.

ಶ್ರೀಶೈಲದಂತೆ ಪ್ರಮುಖವಾಗಿದ್ದ ಇನ್ನೊಂದು ವೀರಶೈವ ಕೇಂದ್ರ ಉಳಿವೆ. ಇದು ಇಂದು ಉತ್ತರ ಕನ್ನಡ ಜಿಲ್ಲೆಯ ಸುಪಾ ತಾಲೂಕಿನಲ್ಲಿರುವ ಉಳಿವೆಯೇ ಎಂಬಲ್ಲಿ ಎರಡು ಅಭಿಪ್ರಾಯವಿರದು. ಇಲ್ಲಿಯ ‘ಮಹಮನೆಯಲ್ಲಿ ಹಲವಾರು ಜನ ಶರಣರಿದ್ದರೆಂದು ಲಕ್ಕಣ್ಣ ದಂಡೇಶ ಹೇಳಿದ್ದಾನೆ (ಪ-೧೪೪-೧೪೫) ಅವರಲ್ಲಿ ಆ (ನಾ) ವಾರಿ ದಾಸೋಹಿ ಹರಿಯಪ್ಪರಾಣೆ, ವೀರಪ್ಪರಾಣೆ, ಬೋಪದೇವರಾಣೆ ಮತ್ತು ಸಪ್ಪೆಯರ ಮಂಡಳಿಕ ಸಾರಜ್ಞರೆನಿಪ ಶರಣನಿಚಯ ಪ್ರಸಿದ್ಧವಾಗಿತ್ತೆಂದು ತಿಳಿಸಿದ್ದಾನೆ. ಅಲ್ಲದೆ ಕಡವೂರ ಓಲೆಯರಾಮಣಯ್ಯ ಕಡವುಳದ ಸೋಯಿಸೆಟ್ಟಿ ದವಟದಧೀರ ಮಲ್ಲಯ್ಯ ನಾಯಕ ಇವರು ಬೇರಬೇರೆ ಊರುಗಳವರಾದರೂ ಉಳಿವೆಯಲ್ಲಿಯೇ ಇರುತ್ತಿದ್ದರೆಂದು ಕಾಣುತ್ತದೆ. ಎಂದರೆ ಚನ್ನಬಸವಣ್ಣನವರ ತರುವಾಯವೂ ಉಳಿವೆ ಪ್ರಸಿದ್ಧ ವೀರಶೈವ ಕೇಂದ್ರವಾಗಿತ್ತೆಂದು ಇದರಿಂದ ಅರಿಯಬಹುದಾಗಿದೆ. ಇಲ್ಲಿ ಹಿಂದೆ ಒಂದು ‘ಮಹಮನೆ’ಯೇ ಇತ್ತೆಂದು ಲಕ್ಕಣ್ಣದಂಡೇಶ ಹೇಳಿದ್ದಾನೆ.

ಪದ್ಯ ೧೩೯ರಲ್ಲಿ ಹುಲಿಗೆರೆಯ ಭಕ್ತರು ಮತ್ತು ಲಕಮಣೇಶ್ವರದ ಚಿಂದಿಯ ಕಾಯಕದ ಕಸವಿದೇವ ಎಂಬವರನ್ನು ಕುರಿತು ಉಲ್ಲೇಖಿಸಿದ್ದಾನೆ. ಹುಲಿಗೆರೆ ಎಂದರೆ ಈಗಿನ ಲಕ್ಷ್ಮೇಶ್ವರದಲ್ಲಿ ಹಲವಾರುಜನ ಪ್ರಸಿದ್ಧ ವೀರಶೈವ ಶರಣರು ಪಂಡಿತರು ಆಗಿಹೋದುದು ನಮಗೆ ತಿಳಿದಿದೆ. ಪುರಾಣದ ಮಾಯಿದೇವ ಪಂಡಿತ, ಮಹಲಿಂಗ ದೇವ ಅಥವಾ ವಾರಣಾಸೀಂದ್ರ ಮೊದಲಾದವರು ಪ್ರಖ್ಯಾತರಾಗಿದ್ದಾರೆ. ಇವರ ಹೆಸರುಗಳನ್ನು ಲಕ್ಕಣ್ಣ ದಂಡೇಶ ಇಲ್ಲಿ ಬಾಯಿಬಿಟ್ಟು ಹೇಳಿಲ್ಲ.

ಲಕಮಣೇಶ್ವರವು ಪ್ರಾಚೀನ ಹುಲಿಗೆರೆಯ ಒಂದು ಭಾಗವಾಗಿರಲು ಸಾಕು. ಲಕುಮಣೇಶ್ವರವೆಂಬ ದೇವಾಲಯ ಕಾರಣವಾಗಿ ಹುಲಿಗೆರೆಯ ಒಂದು ಉಪನಗರ ಅಂದು ಈ ಪ್ರತ್ಯೇಕ ಹೆಸರಿನಿಂದ ಪ್ರಸಿದ್ಧವಾಗಿತ್ತೆಂದು ಇಲ್ಲಿ ಊಹಿಸಬೇಕಾಗಿದೆ. ತರುವಾಯದಲ್ಲಿ ಈ ಉಪನಗರವೇ ಪ್ರಾಮುಖ್ಯ ಪಡೆದು ಊರ ಹೆಸರು ಲಕ್ಷ್ಮೇಶ್ವರ ಎಂದಾಗಿ ಮಾರ್ಪಟ್ಟಿತು. ಅಂತೂ ೧೪-೧೫ನೆಯ ಶತಮಾನಗಳಲ್ಲಿ ಪುಲಿಗೆರೆ ! ಲಕ್ಷ್ಮೇಶ್ವರವೂ ಒಂದು ಪ್ರಸಿದ್ಧ ವೀರಶೈವ ಕೇಂದ್ರವಾಗಿತ್ತೆಂದು ತಿಳಿಯಲಡ್ಡಿಯಿಲ್ಲ.

ಪದ್ಯ ೫೯ ರಿಂದ ೬೧ ರವರೆಗೆ ‘ಗುಮ್ಮಹಾಳ’ದ ಬಗ್ಗೆ ಲಕ್ಕಣ್ಣ ದಂಡೇಶ ಪ್ರಸ್ತಾಪಿಸಿದ್ದಾನೆ. ಇದರ ವರ್ಣನೆ ತುಂಬ ಮಹತ್ವದ್ದಾಗಿದೆ ;

ಶಿವನ ಕೈಲಾಸಾದ್ರಿಯೇ ಮನುಜರರಿಯಲ್ ಅವತರಿಸಿದಂತು
ಬಸವೇಶ್ವರನ ಕಲ್ಯಾಣ ಆ ಕಲ್ಯಾಣವೇ ಭುವನವರಿಯಲ್ ನೆಲೆಸಲು
ಉತ್ತರವ ಬಿಟ್ಟು ದಕ್ಷಿಣಭಾಗಕೆಯ್ದಂತೆ, ವಿವರಿಸುವಡೆ ಎಸೆವ
ಜಂಗಮದ ಸಂಚಾರದಿಂದ ಭವಿಯ ಮುಖ ನೋಡದ ಮಹಾಭಕ್ತ
ರಿರವಿನಿಂದವೆ ಮೆರೆವ ಗುಮ್ಮಹಾಳಪುರ

ಎಂದು ಲಕ್ಕಣ್ಣ ದಂಡೇಶ ಒಮ್ಮೆಲೆ ತನ್ನ ಧಾಟಿಯನ್ನು ಬದಲಾಯಿಸಿ ಹೇಳುತ್ತಾನೆ. ಈ ಪದ್ಯದಲ್ಲಿ (೧೫ನೆಯ ಶತಮಾನದ) ಗುಮ್ಮಹಾಳ ೧೨ನೆಯ ಶತಮಾನದ ಕಲ್ಯಾಣದಂತಿದ್ದಿತೆಂದು ಘೋಷಿಸುತ್ತಾನೆ. ಮುಂದುವರಿದು ‘ಶಿವನ ಪಟ್ಟವರ್ಧ ನರಿಪ್ಪರಾಪುರಂ, ಗುಮ್ಮಹಾಳ ಪುರಂ’ ಎನ್ನುತ್ತ ಅಲ್ಲಿ ಚೊಕ್ಕದೇವಪ್ಪಯ್ಯಾ, ಗುಬ್ಬಿಯಾ ಮಲ್ಲಣ್ಣ ನಮ್ಮಣನ (ಅಮ್ಮಣನ ?) ನಾಗಪ್ಪ, ಹೊನ್ನ ಮಲ್ಲಣ್ಣ, ಮಳವಳಿಯ ಬಸವಣ್ಣ ಆನುಗಲ್ಲ ನಾಗಪ್ಪ ಈ ಮೊದಲಾದ ಶರಣರಿದ್ದರೆಂದೂ ಅವರ ಅಧೀನದಲ್ಲಿ ದಾಸೋಹದ ಮಠಗಳಿದ್ದವೆಂದೂ ಹೇಳುತ್ತಾನೆ. ಲಕ್ಕಣ್ಣ ದಂಡೇಶನ ಸಮಕಾಲೀನ ಅಥವಾ ಹಿರಿಯ ಸಮಕಾಲೀನನಾದ ಗುಬ್ಬಿಯ ಮಲ್ಲಣ್ಣ ಆಗ ತನ್ನ ಸ್ವಂತ ಊರಾದ ಗುಬ್ಬಿಯಲ್ಲಿರದೆ ಗುಮ್ಮಹಾಳ ಪುರದಲ್ಲಿದ್ದುದು ಇದರಿಂದ ಖಚಿತವಾಗುತ್ತದೆ. ಇದಲ್ಲದೆ ಆ ಊರಲ್ಲಿ ”ಸಲ್ಲಲಿತ ಶತಗಣಂಗಳು’ ಪ್ರಸಿದ್ಧರಾಗಿದ್ದರೆಂದು (ಪ-೬೧) ವಾಚ್ಯವಾಗಿಯೇ ಹೇಳಿದ್ದಾನೆ. ಇದರಿಂದ ೧೦೧ ವಿರತರ ಕಲ್ಪನೆ ಲಕ್ಕಣ್ಣ ದಂಡೇಶನಿಗಿಂತ ಹಿಂದೆಯೇ ಇದ್ದುದು ಸ್ಪಷ್ಟಪಡುತ್ತದೆ. ಹಾಗೂ ಅವರೆಲ್ಲ ಇದ್ದುದ್ದು ವಿಜಯ ನಗರದಲ್ಲಿ ಅಲ್ಲ ಗುಮ್ಮಹಾಳದಲ್ಲಿ ಎನ್ನುವ ಸಂಗತಿಯನ್ನು ನಾವು ಲಕ್ಷಿಸಬೇಕಾಗುತ್ತದೆ. ಸ್ವತಃ ವಿಜಯನಗರದವನೇ ಆಗಿ ಕ್ರಿ. ಶ. ಸು. ೧೪೭೦ರ ವರೆಗೂ ಜೀವಿಸಿದ್ದ ಲಕ್ಕಣ್ಣ ದಂಡೇಶನೇ ಈ ಮಾತನ್ನು ಹೇಳಿರುವುದು ಅತ್ಯಂತ ಮಹತ್ವದ್ದು. ೧೦೧ ವಿರಕ್ತರೆಂಬ ಮಾತು ವಿಜಯನಗರದಲ್ಲಿ ಆಗಿ ಹೋದ ಶರಣರಿಗೆ ತರುವಾಯದಲ್ಲಿ ರೂಢಗೊಂಡು ಗುಮ್ಮಹಾಳದೊಂದಿಗಿನ ಅವರ ಸಂಬಂಧ ಮರೆ ಮಾಚಿದಂತೆ ಕಾಣುತ್ತದೆ. ೧೬ನೆಯ ಶತಮಾನದ ತೋಂಟದ ಸಿದ್ಧಲಿಂಗ ಯತಿಗಳ ಪರಂಪರೆ ಹೇಳಿಕೊಳ್ಳುವ (ಬೋಳ ಬಸವನ ನೇರ ಶಿಷ್ಯ) ಗುಮ್ಮಳಾಪುರ ಸಿದ್ಧಲಿಂಗನಿಗೆ ಒಂದು ಶತಮಾನ ಅಥವಾ ಅದಕ್ಕು ಹೆಚ್ಚು ಅವಧಿಯ ಹಿನ್ನೆಲೆಯಿದೆ ಎಂಬ ಮಾತನ್ನು ಇಲ್ಲಿ ಗಮನಿಸಬೇಕು. ಎಂದರೆ ಹರದನಹಳ್ಳಿ, ಕಗ್ಗೆರೆ, ಕುಣಿಗಲ್ಲುಗಳ ಪರಿಸರದಲ್ಲಿ ಸು. ಒಂದು ಶತಮಾನಕಾಲ ಮೊದಲೇ ಗುಮ್ಮಹಾಳು ಪುರ ಹೆಚ್ಚು ಜಾಗೃತವಾಗಿತ್ತೆಂದು ಭಾವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೂರೊಂದು ವಿರಕ್ತರ ಐತಿಹ್ಯ ಮತ್ತು ಹೆಸರುಗಳನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ.

ವೀರಶೈವ ಇನ್ನೊಂದು ಕೇಂದ್ರ ವಿಜಯನಗರ. ಅಲ್ಲಿದ್ದ ‘ವಿಜಯ ಕಲ್ಯಾಣ ಪುರದ’ ಚರಲಿಂಗ ಮೂರ್ತಿಗಳು’ ‘ಸಿಂಹಾಸನದ ಚರಲಿಂಗ ಮೂರ್ತಿಗಳು,’ ‘ ಸಂಪದದ ಸಿಂಹಾಸನದ ಚರಲಿಂಗ ಮೂರ್ತಿಗಳು’, ‘ನಿರಪೇಕ್ಷ ಸಿಂಹಾಸನದ ‘ಚರಲಿಂಗ ಮೂರ್ತಿಗಳು’ ಇತ್ಯಾದಿಯಾಗಿ ವಿಶೇಷಿಸುತ್ತ ಹಲವಾರು ಜನ ವೀರಶೈವ ಶರಣರಿದ್ದ ಬಗೆಗೆ ಲಕ್ಕಣ್ಣ ದಂಡೇಶ ನಿರ್ದೇಶನ ಮಾಡಿದ್ದಾನೆ. ಕೆಲವರನ್ನು ಅವರವರ ವಾಸಸ್ಥಾನಗಳಿಂದಲೇ ಸೂಚಿಸುತ್ತಾನೆ. ಉದಾ-ಸಿದ್ಧಶಿಖರಿಯಲ್ಲಿದ್ದವರು. ಮಾಲ್ಯವಂತದಲ್ಲಿದ್ದವರು, ಅಂಜನಾದ್ರಿ, ಮತಂಗಾಚಲ, ಪಂಪಾಪತಿಯ ರಥವೀಧಿಯಲ್ಲಿದ್ದವರು ಮುಂತಾಗಿ ಅವರ ವಾಸಸ್ಥಾನಗಳನ್ನು ತಿಳಿಸಿದ್ದಾನೆ. ರಥವೀಧಿಯಲ್ಲಿದ್ದ ಒಂದೆತ್ತಿನಯ್ಯ (ಪ-೨೨೪) ಕ್ರಿಯಾಶಕ್ತಿಯತಿರಾಯ (ಪ-೨೪೬) ದಕ್ಷಿಣಾಮೂರ್ತಿಯತಿ ಚಕ್ರವರ್ತಿ (ಪ-೨೪೭) ಆಕಾಶವಾಸಿಯತಿ (ಪ-೨೪೮) ಇವರನ್ನು ಹೆಸರುಗೊಂಡು ಸ್ತುತಿಸಿದ್ದಾನೆ. ಇವರಲ್ಲಿ ಕ್ರಿಯಾಶಕ್ತಿ ಸಂಗಮವಂಶದ ದೊರೆಗಳಿಗೂ ಲಕ್ಕಣ್ಣ ದಂಡೇಶನಿಗೂ ಅತ್ಯಂತ ಪೂಜ್ಯನಾಗಿದ್ದ ಕಾಳಾಮುಖ ಪಂಥದ ಯತಿ ಎಂದೂ ಆಕಾಶವಾಸಿಯತಿ ಮತ್ತು ಒಂದೆತ್ತಿನಯ್ಯಗಳು ವೀರಶೈವರೆಂದೂ ವಿದ್ವಾಂಸರು ಭಾವಿಸಿದ್ದಾರೆ. ಮೇಲೆ ಹೇಳಿದ ‘ಸಂಪದದ ಸಿಂಹಾಸನ’ ಎಂದು ವಿಶೇಷಿಸಿದ್ದು ಸಂಪಾದನೆಯ ಸಂಪ್ರದಾಯದವರನ್ನು ಸೂಚಿಸುವಂತೆ ಕಾಣುತ್ತದೆ. ಈ ಊಹೆ ನಿಜವಾದರೆ ಆಗಲೇ ವಿಜಯ ನಗರದಲ್ಲಿ ಸಂಪಾದನೆಯ ಸಂಪ್ರದಾಯ ನೆಲೆಯೂರಿತ್ತೆಂದು ಹೇಳಬೇಕಾಗುತ್ತದೆ.

೧೨ನೆಯ ಶತಮಾನದ ಕ್ರಾಂತಿ ಕೇಂದ್ರವಾಗಿ ಮೆರೆದ ಕಲ್ಯಾಣವನ್ನು ಲಕ್ಕಣ್ಣ ದಂಡೇಶ ಭಕ್ತಿ ಸತಿಯ ವಿವಾಹ ಕಲ್ಯಾಣ ಮುಂತಾಗಿ ಹೊಗಳುತ್ತ ‘ಕಲ್ಯಾಣದೊಳ್ ಬಸವನಂತಿರ್ಪ ಭಕ್ರಸುಚರಣಾಂಬುಜಕ್ಕೆ ಶರಣು’ (ಪ-೧೫೮) ಎಂದು ಅಲ್ಲಿ ಸಾಕ್ಷಾತ್‌ ಬಸವಣ್ಣ ನಂಥವರೇ ಇದ್ದರೆಂದು ಹೇಳುತ್ತಾನೆ. ಅಷ್ಟೇ ಅಲ್ಲದೆ ‘ಬಸವರಾಜನ ಮಠದ ವರಧಾನ್ಯದಯ್ಯ’ ಎಂಬ ಶರಣನ ಹೆಸರನ್ನು ಎತ್ತಿ ಹೇಳಿದ್ದಾನೆ. ಇದರಿಂದ ಬಸವಣ್ಣ ಮೊದಲಾದ ಶರಣರು ಕ್ರಾಂತಿಯಲ್ಲಿ ಕಲ್ಯಾಣ ತ್ಯಜಿಸಿದರೂ ಅವರ ಮಠ ಪರಂಪರೆ ಕಲ್ಯಾಣದಲ್ಲಿ ೧೫ನೆಯ ಶತಮಾನದ ವರೆಗೂ ಉಳಿದಿತ್ತೆಂಬುದು ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ. ಅದೇ ಪದ್ಯದ (೧೫೯)ಲ್ಲಿ ಹಱುವೆಯ ಸಿದ್ಧದೇವರ ಮಠದ ಬೀಡಾಡಿದೇವಯ್ಯ, ಆ ಪುರದ ಗಂದಿಗರ ಪಸರಗಾಯಕದ ಸಂಗಪ್ಪ ಮತ್ತು ನಾಗಪ್ಪ ಎಂಬವರ ಹೆಸರುಗಳು ಬಂದಿವೆ. ಇಲ್ಲಿ ಬಂದಿರುವ ಹಱುವೆ ಪುರ, ನಾರಣಪುರ ಮತ್ತು ರಾಜೇಶ್ವರ ಪುರಗಳು ಅಂದಿನ ಕಲ್ಯಾಣ ಪಟ್ಟಣದ ಭಾಗಗಳು ಅಥವಾ ಉಪನಗರಗಳಾಗಿರಬೇಕು. ಬೀಡಾಡಿ ದೇವಯ್ಯನಿದ್ದ ವಠವು ಮೂಲದಲ್ಲಿ ಹರುವೆಯ ಸಿದ್ಧದೇವನೆಂಬ ಶರಣನಿಂದ ಸ್ಥಾಪಿತವಾದದ್ದೆಂದು ಊಹಿಸಬಹುದಾಗಿದೆ. ಎಂದರೆ ಆ ಹೆಸರಿನ ಶರಣನೊಬ್ಬ ಹಿಂದೆಯೇ ‌ಪ್ರಸಿದ್ಧನಾಗಿರಬೇಕು. ಬಹುಶಃ ಆತ ಬಸವ ಸಮಕಾಲೀನ ಅಥವಾ ಬಸವೋತ್ತರ ಕಾಲದವನಾಗಿರಬೇಕು. ಅಂತು, ಕಲ್ಯಾಣವೆಂಬ ಪ್ರಣತೆ ಒಡೆಯಿತೆಂಬ ಹೇಳಿಕೆಯಿದ್ದರೂ ಅಲ್ಲಿನ ಜ್ಯೋತಿ ಮಾತ್ರ ನಂದಿರಲಿಲ್ಲವೆಂದು ಇದರಿಂದ ತಿಳಿಯ ಬಹುದು.

ಮೇಲಿನ ಆರು ಕೇಂದ್ರಗಳಲ್ಲಿ ಶ್ರೀಶೈಲ ಬಹುಪುರಾತನವಾದುದು. ಅಲ್ಲಿ ವೀರಶೈವವು ಯಾವಾಗ ಮತ್ತು ಯಾರಿಂದ ಪ್ರಸ್ತಾಪಿತವಾಯಿತೆಂದು ನಿರ್ಧರಿಸಿಹೇಳುವುದು ಕಷ್ಟ. ಸರಿ ಸುಮಾರು ಹಂಪೆಗೂ ಇದೇ ಮಾತು ಅನ್ವಯಿಸುತ್ತದೆ. (ಸೊಲ್ಲಾಪುರದ ಚರ್ಚೆ ಇಲ್ಲಿ ಬೇಡ). ಲಕ್ಷ್ಮೇಶ್ವರ ಆದಯ್ಯನ ಕಾರ್ಯಕ್ಷೇತ್ರ. ಆದಯ್ಯ ಅಥವಾ ಸೋಮಯ್ಯರಂಥವರಿಂದ, ಕ್ರಿ. ಶ. ೧೨ನೆಯ ಶತಮಾನದ ಉತ್ತರಾರ್ಧ ನಂತರ ಅದು ವೀರಶೈವದ ಮುಖ್ಯ ಕೇಂದ್ರವೆನಿಸಿತು. ಉಲೀವೆ ಹನ್ನೆರಡನೆಯ ಶತಮಾನದ ಉತ್ತರಾರ್ಧ ನಂತರ ಅದು ವೀರಶೈವದ ಮೂಕ್ಯ ಕೇಂದ್ರವೆನಿಸಿತು. ಉಳಿವೆ ಹನ್ನೆರಡನೆಯ ಶತಮಾನದ ಉತ್ತರಾರ್ಧದಿಂದ ಮುಖ್ಯಕೇಂದ್ರಗಳಲ್ಲಿ ಒಂದೆನಿಸಿತು. ಗುಮ್ಮಳಾಪುರ ಇಷ್ಟು ಹಳೆಯದಲ್ಲವೆಂಬುದು ಸ್ಪಷ್ಟ. ಆದರೆ ಕ್ರಿ.ಶ. ೧೪೦೦ ರ ಸುಮಾರಿಗೆ ಅದು ಅಸ್ತಿತ್ವದಲ್ಲಿದ್ದು ತುಂಬಾ ಚಟುವಟಿಕೆಯಿಂದ ಕೂಡಿತ್ತೆಂದು ಹೇಳಬಹುದಾಗಿದೆ. ದಕ್ಷಿಣದಲ್ಲಿ ರಾಜಕೀಯವಾಗಿ ಪ್ರಾಬಲ್ಯಕ್ಕೆ ಬಂದ ವಿಜಯನಗರ ಮುಂದಿನ ಕಾಲದ ಜನಮಾನಸದ ಮೇಲೆ ವಿಶೇಷ ಪ್ರಭಾವ ಬೀರಿ ಅದರ ಸ್ಥಾನಮಾನ ಇತರ ಕೇಂದ್ರಗಳ ಕಾಂತಿ ಮಸುಳಿಸುವಂತೆ ಮಾಡಿತು. ಮಂಗಳವಾಡದ ಸ್ಥಿತಿಯೂ ಇದೇ ತೆರನಾಗಿ ಅದರ ಹೆಸರು ಕೇಳಿಬರದೆ ಕಲ್ಯಾಣದ ಹೆಸರೇ ಎಲ್ಲೆಡೆ ಪ್ರಚಾರಕ್ಕೆ ಬಂದುದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ಶಿವತತ್ವ ಚಿಂತಾಮಣಿಯನ್ನು ಅನುಸರಿಸಿದರೆ ಚಾಮರಸ, ಕಲ್ಲುಮಠದ ಪ್ರಭುದೇವ ಮುಂತಾದವರು ಪ್ರಸಿದ್ಧಿಗೆ ಬರುವ ಪೂರ್ವದಲ್ಲಿಯೇ ಗುಮ್ಮಳಾಪುರ ಹೆಸರಾಂತ ವೀರಶೈವ ಕೇಂದ್ರವಾಗಿತ್ತೆಂದು ಹೇಳಬೇಕಾಗುತ್ತದೆ. ಆದರೆ ಇದು ಸಾಧ್ಯವಾದುದು ಹೇಗೆ ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರವನ್ನು ಇನ್ನು ಮೇಲೆ ಹುಡುಕಬೇಕು.

ಶೂನ್ಯ ಸಂಪಾದನೆಗಳ ಉಗಮ ಗುಮ್ಮಳಾಪುರದ ಪರಿಸರದಲ್ಲಿ ಆಯಿತೆಂಬುದು ಎಲ್ಲರಿಗೂ ತಿಳಿದ ವಿಷಯ. ಗುಬ್ಬಿಯ ಮಲ್ಲಣ್ಣನು ‘ಗಣಭಾಷಿತ ರತ್ನಮಾಲೆ’ ಯನ್ನು ಸಂಕಲಿಸಿ ಅದರಲ್ಲಿ ನೂರೊಂದು ಸ್ಥಲಗಳನ್ನು ನಿರೂಪಿಸುವ ಪ್ರಯತ್ನ ಮಾಡಿದ್ದರೂ ಅವನ ಸ್ಥಲವ್ಯವಸ್ಥೆ ಮುಂದಿನವರಿಗೆ ಒಪ್ಪಿಗೆಯಾದಂತೆ ಕಾಣದು. ಎಂತಲೆ ಹುಲಿಗೆರೆಯ ಮಹಲಿಂಗದೇವ ಮತ್ತು ಅವನ ಪರಂಪರೆಯವರು ಬೇರೊಂದು ರೀತಿಯ ನೂರೊಂದು ಸ್ಥಲಗಳ ವ್ಯವಸ್ಥೆ ಮಾಡಿ ಅವಕ್ಕೆ ಸೈದ್ಧಾಂತಿಕ ಮನ್ನಣೆಗಳಿಸುವಲ್ಲಿ ಯಶಸ್ವಿಯಾದರು. ವಿಜಯನಗರದವರು ಹೆಚ್ಚಾಗಿ ಕಾವ್ಯಗಳನ್ನು ರಚಿಸುವುದರತ್ತ ಗಮನ ಹರಿಸಿದರು.