ಶಿವಲೆಂಕ ಮಂಚಣ್ಣನನ್ನು ಕುರಿತಂತೆ ಉಲೇಖವೀಯುವ ಮೊದಲ ಕವಿಯೆಂದರೆ ಪಾಲ್ಕುರಿಕೆಯ ಸೋಮನಾಥ. ಸೋಮನಾಥನ ಕಾಲ ಕ್ರಿ.ಶ. ೧೨೯೨. ಅವನ ‘ಪಂಡಿ ತಾರಾಧ್ಯ ಚರಿತ’ ಎಂಬ ತೆಲುಗು ಕೃತಿಯಲ್ಲಿ (೧-ಪು. ೭) ಮುಂದಿನ ವಿವರ ಕಂಡು ಬರುತ್ತದೆ :

ಹರಭಕ್ತಿಯುತ್ಪತ್ತಿಕಧಿಪತಿ ನಾಗ
ಬರಗೆದಾ ದೊಲ್ಲಿ ಶ್ರೀಪತಿ ಪಂಡಿತಯ್ಯ….
ಚೆನಸಿ ಭಕ್ತಿಕ್ರಿಯಾ ಸ್ಥಿತಿ ಕರ್ತ ಯನಗ
ಜನಿಯನು ಲೆಂಕಮಂಚನ ಪಂಡಿತಯ್ಯ…….
ದೂರಾನ್ಯ ಸಮಯ ಸಂಹಾರುಡೈ ಚನಿಯೆ
ಶೂರುಂಡು ಮಲ್ಲಿಕಾರ್ಜುನ ಪಂಡಿತಯ್ಯ
ಖ್ಯಾಪಿತ ಭಕ್ತಿಕಿ ಗಾರಣ ಪುರುಷು
ಲೈ ಪಂಡಿತ ತ್ರಯಂಬನ ಭುವಿ ಜನಿಯೆ
(ಮೈಸೂರು ವಿ. ವಿ. ಕ. ಸಾ. ಚ. ಸಂ. v)

ಇಲ್ಲಿ ಹೆಸರಿಸಿರುವ ಶ್ರೀಪತಿ ಪಂಡಿತ, ಲೆಂಕಮಂಚನ ಮತ್ತು ಮಲ್ಲಿಕಾರ್ಜುನ ಪಂಡಿತಯ್ಯರಲ್ಲಿ ‘ಲೆಂಕ ಮಂಚನ’ ಎಂದರೆ ಶಿವಲೆಂಕ ಮಂಚಣ್ಣನೇ. ಸೋಮ ನಾಥನು ಅವನು ಭಕ್ತಿಕ್ರಿಯಾ ಸ್ಥಿತಿಗೆ ಕರ್ತನೆಂದು ಇಲ್ಲಿ ಹೇಳಿದ್ದಾನೆ. ಮಂಚಣ್ಣನನ್ನು ಪಂಡಿತಯ್ಯ ಎಂದು ವಿಶೇಷಿಸಿರುವುದಲ್ಲದೆ ಪಂಡಿತ ತ್ರಯರ ಪಟ್ಟಿಯಲ್ಲಿ ಅವನನ್ನು ಎರಡನೆ ಯವನನ್ನಾಗಿ ಹೇಳಿದ್ದಾನೆ. ಈ ಅಂಶಗಳು ತುಂಬ ಗಮನಾರ್ಹವಾದುವುಗಳೆಂದು ಬೇರೆ ಹೇಳಬೇಕಿಲ್ಲ. ಸೋಮನಾಥನ ಕಾಲಕ್ಕಾಗಲೇ ಮಂಚಣ್ಣನು ಪ್ರಸಿದ್ಧ ಪಂಡಿತ ನೆನಿಸಿ ವೀರಶೈವ ಮತಪ್ರತಿಪಾದಕನೆಂದು ಹೆಸರುವಾಸಿ ಯಾಗಿದ್ದ ನೆಂದು ಇದರಿಂದ ವ್ಯಕ್ತವಾಗುತ್ತದೆ. ಬೇರೆ ಕಾವ್ಯಗಳಲ್ಲಿ ಈ ವಿಷಯಗಳನ್ನು ಬೆಂಬಲಿಸುವಂತೆ ಹಲವಾರು ಅಂಶಗಳು ಉಲ್ಲೇಖ ಪಡೆದಿರುವುದು ಕಂಡುಬರುತ್ತದೆ.

ಈತನ ಅಜ್ಜನ ಹೆಸರು ಸೋಮಶಂಭು ದೇಶಿಕನೆಂಬುದು. ತಂದೆ ಶಂಬುಭಟ್ಟ ಇವನು ”ಕಾಮಿಕಾದ್ಯಖಿಳ ಶಿವಕಥಿತ ತಂತ್ರಾವಳಿಗೆ | ಪ್ರೆಮದಿಂ ವೃತ್ತಿದೀಪಿಕೆಗಳಂ ಬಿತ್ತರಿಸಿ | ಸೋಮಧರ ಸಮಯಮಂ ಧರಣಿಯೊಳ್ ನಿಱಿಸಿದ” ”ಸಕಲಾಗಮಾ ಚಾರ್ಯ” ನೆನಿಸಿದ್ದನು. ನೀಲಕಂಠನೆಂಬ ಕವಿ (ಕ್ರಿ. ಶ. ೧೪೮೫) ತನ್ನ ‘ಆರಾಧ್ಯ ಚರಿತೆ’ ಯಲ್ಲಿ ಈ ಸಂಗತಿ ತಿಳಿಸಿದ್ದಾನೆ. ತಮ್ಮ ಮನೆತನದ ಈ ಪರಂಪರೆಯಂತೆ ಮಂಚಣ್ಣನು ಕೂಡ ಖ್ಯಾತಿವೆತ್ತವನು. ಮಂಚಣ್ಣನನ್ನು ಉಲ್ಲೇಖಿಸುವ ಕನ್ನಡದ ಮೊದಲ ಪುರಾಣಕಾವ್ಯವಾದ ಬಸವಪುರಾಣ (ಭೀಮಕವಿಕೃತ)ದಲ್ಲಿ ‘ಮಂಚಣಾಚಾರ್ಯ’ (ಸಂಧಿ ೫೨ ಪದ್ಯ ೬೦), ‘ಮಂಚಣ ಪಂಡಿತರು’ (ಅದೇ ಪದ್ಯ ೫೮ ಮತ್ತು ೬೨) ಎಂದು ಈತನನ್ನು ಗೌರವಪೂರ್ವಕ ಸ್ಮರಿಸಿರುವುದನ್ನು ನೋಡಿದರೆ ಭೀಮಕವಿಗೆ ಈತನ ವಿದ್ವತ್ತೆಯ ಪೂರ್ಣಕಲ್ಪನೆ ಇತ್ತೆಂಬುದು ಸ್ಪಷ್ಟಪಡುತ್ತದೆ. ಪಾಲ್ಕುರಿಕೆಯ ಸೋಮನಾಥ ಈತನನ್ನು ಪಂಡಿತ ತ್ರಯದಲ್ಲಿ ಸೇರಿಸಿರುವುದಕ್ಕೆ ಇದು ಪೋಷಕ ಅಂಶ.

ಶ್ರೀಪತಿ ಪಂಡಿತನು ತನ್ನ ಶ್ರೀಕರ ಭಾಷ್ಯದಲ್ಲಿ, ಮಂಚಣ್ಣ ಪಂಡಿತನು ‘ಗುಹಾಧಿಕರಣ’ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದ್ದಾಗಿ ಹೇಳಿದ್ದಾನೆ. ಇದು ಮತ ಪ್ರತಿ ಪಾದಕ ಕೃತಿಯಾಗಿರಬೇಕಾದುದರಿಂದ ಮಂಚಣ್ಣನ ಪಾಂಡಿತ್ಯದ ನೇರ ಪ್ರಮಾಣವೆನ್ನಬಹುದು.

ಮತ ಪ್ರತಿಪಾದಕ ಗ್ರಂಥ ರಚನೆಯಲ್ಲದೆ ಪರಸಮಯಿಗಳನ್ನು ವಿರೋಧಿಸಿ ಅವನು ವಾದ ಮಾಡಿ ಗೆದ್ದಿರುವುದಾಗಿಯೂ ತಿಳಿದುಬರುತ್ತದೆ. ಭೀಮಕವಿ (ಕ್ರಿ.ಶ. ೧೩೬೯) ತನ್ನ ಬಸವ ಪುರಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮೊದಲ ಬಾರಿಗೆ ಸವಿಸ್ತರವಾಗಿ ಹೇಳಿದ್ದಾನೆ :

ಶ್ರೀ ಮಹಾಕಾಶಿಯೊಳು ತತ್ಪುರ
ಧಾಮ ವಿಶ್ವೇಶ್ವರನನತಿಶಯ
ನೇಮವಾಗಿರಲು ತನ್ನ ಹತ್ತು ಬೆರಳ್ಗಳಂ ಕಡಿದು |
ಪ್ರೇಮದಿಂದರ್ಚಿಸಿ ಪಡೆದನಭಿ
ರಾಮವೆನಲಿಂತು ತ್ರಿಕಾಲಂ
ಭೂಮಿಜನವಚ್ಚರಿವಡುತ ಕೀರ್ತಿಸಲು ವರ್ತಿಸುತ || ೫೨೫೬ ||

ಒತ್ತರಿಪ ಸಿತ ಕೀರ್ತಿಯೊಳು ಪ್ರಭೆ
ವೆತ್ತು ಪರದರುಶನದ ಮೂಗಿನ
ಕತ್ತಿಯೆಂಬಾ ಠೆಕ್ಕೆಯವನಾ ಪುರದೊಳೆತ್ತಿಸಿದಾ ||
ಉತ್ತಮಂ ಶಿವಭಕ್ತ ಪದಮೆ
ಚಿತ್ತಜಾರಿಯೆ ಕರ್ತನೊರ್ಬನೆ
ನುತ್ತ ಸಂಪಾದಿಸಖಿಳ ಸಮಯಿಗಳು ನಡೆತಂದು || ೫೨೫೭ ||

ನೆರೆದು ವಾರಣಾಸಿಯೊಳು ಗದಾ
ಧರನ ದೇಗುಲದೊತ್ತಿನಲಿ ಸಭೆ
ವೆರಸಿ ಕುಳ್ಳಿತು ತರ್ಕದುನ್ಮುಖರಾಗಿ ಕರಸಿದೊಡೆ
ಶರಣ ಮಂಚಣ ಪಂಡಿತರು ಸನದು
ಚಿರ ಮಹಿಮೆಯಲಿ ಕರಮೆಸೆದು ನಡೆ
ತರಲಿತರ ಸಮಯಿಗಳು ತಾವೊಂದೊಂದು ಮತಿಗಳಲಿ || ೫೨೫೮ ||

ಈ ರೀತಿ ತರ್ಕದ ಉನ್ಮತ್ತತೆಯಿಂದ ಶಿವಲೆಂಕ ಮಂಚಣ್ಣನನ್ನು ವಾದಕ್ಕೆ ಆಹ್ವಾನಿಸಿದರಂತೆ. ಮಂಚಣ್ಣ ಪಂಡಿತನು ವಾದಕ್ಕೆ ಹಿಂದೆಗೆಯದೆ ಬಂದು ‘ಶಿವನೇ ಶ್ರೇಷ್ಠ; ಸಕಲಕ್ಕೂ ಅವನೇ ಕರ್ತ’ನೆಂದು ನಾನಾ ಶಾಸ್ತ್ರಾಧಾರಗಳಿಂದ ಸಮರ್ಥಿಸಿ, ಕಾಶೀ ಪಟ್ಟಣದಲ್ಲಿ ‘ಪರದರ್ಶನದ ಮೂಗಿನ ಕತ್ತಿ’ ಎಂದು ಎತ್ತಿಸಿದ್ದ ತನ್ನ ಠೆಕ್ಕೆಯಕ್ಕನು ಸಾರವಾಗಿ ಶಿವಪಾರಮ್ಯವನ್ನು ಎತ್ತಿ ಹಿಡಿದನು. ಅದಕ್ಕೆ ಪ್ರತ್ಯಕ್ಷ ನಿದರ್ಶನವಾಗಿ ಅದೇ ದೇವಾಲಯದಲ್ಲಿದ್ದ (ಗದಾಧರನೆಂಬ) ವಿಷ್ಣು ಪ್ರತಿಮೆಗೆ ಆಜ್ಞೆಯಿತ್ತು ಅದು ತಾನಾಗಿಯೇ ಕಾಶೀಪಟ್ಟಣದ ಬೀದಿಯಲ್ಲಿ ನಡೆದುಬರುವಂತೆ ನಿಯಮಿಸಿದ್ದಲ್ಲದೆ ವಿಶ್ವೇಶ್ವರನಿಗೆ ಅದು ದಂಡ ಪ್ರಣಾಮಗೈದು ಅಲ್ಲಿಯೆ ಕೆಡದಿರುವಂತೆ ಮಾಡಿದನು. ಆಗ ಪರವಾದಿಗಳು ಆಶ್ಚರ್ಯಗೊಂಡು ತಮ್ಮ ಸೋಲನ್ನು ಒಪ್ಪಿಕೊಂಡರು.

ಬಸವ ಪುರಾಣದಲ್ಲಿಯ ಈ ಕಥೆಯೇ ಮುಂದಿನ ಕಾಲದ ವೀರಶೈವ ಕೃತಿಗಳಲ್ಲಿ ಪ್ರಸಂಗಾನುಸಾರ ಹಿರಿದು- ಕಿರಿದಾಗಿ ಉಲ್ಲೇಖಗೊಂಡಿದೆ. ಲಕ್ಕಣ್ಣ ದಂಡೇಶ (ಕ್ರಿ.ಶ. ೧೪೩೦) ನ ಶಿವತತ್ವ ಚಿಂತಾಮಣಿ (೩೭-೧೧೬) ಯಲ್ಲಿ ‘ಬೆರಳನ್ನು ಈಶ್ವರನಿಗಿತ್ತು ಪಡೆಯುತ್ತಿದ್ದು ಅಲ್ಲಿಯ ವಿಷ್ಣು ಮೂರ್ತಿಯನ್ನು ನಡೆತರಿಸಿದನು” ಎಂದು ಹೇಳಿದೆ. ಇದೇ ಸಂಗತಿ ಚೆನ್ನಬಸವ ಪುರಾಣ (೫೭-೪೪), ರಾಘವಾಂಕ ಚರಿತೆ (೧೪-೬೯) ಸಿಂಗಿರಾಜ ಪುರಾಣ (೯-೬) ಮೊದಲಾದ ಕೃತಿಗಳಲ್ಲಿ ಪುನರಾವರ್ತನ ಗೊಂಡಿದೆ. ಇತ್ತೀಚೆ ಕನ್ನಡ ಸಾಹಿತ್ಯ ಪರಿಷತ್ತಿನ ಚೆನ್ನಬಸವ ಪುರಾಣದ ಗದ್ಯಾನುವಾದದಲ್ಲಿ ಮಾತ್ರ ಗದಾಧರನೆಂದರೆ (ವಿಷ್ಣು ಎನ್ನುವ ಬದಲು) ಆ ಹೆಸರಿನ ಆನೆಯನ್ನು ತಂದು ವಿಶ್ವೇಶ್ವರನಿಗೆ ನಮಸ್ಕಿರಿಸುವಂತೆ ಮಾಡಿದನೆಂದು ಅರ್ಥ ಹೇಳಲಾಗಿದೆ.

ಶಾಂತಲಿಂಗದೇಶಿಕನು (ಕ್ರಿ. ಶ. ೧೬೭೨) ತನ್ನ ಭೈರವೇಶ್ವರ ಕಾವ್ಯದ ಕಥಾ ಮಣಿ ಸೂತ್ರ ರತ್ನಾಕರದಲ್ಲಿ ಇದನ್ನೆ ಕೆಲವು ಹೊಸ ವಿವರಗಳೊಂದಿಗೆ ತಕ್ಕಷ್ಟು ವಿಸ್ತಾರವಾಗಿ ಹೇಳಿದ್ದಾನೆ :

”ವಾರಣಾಸಿ ಪುರದಲ್ಲಿ ಶಂಭುಭಟ್ಟನೆಂಬ ಶಿವಬ್ರಾಹ್ಮಣನಲ್ಲಿ ಶಿವಲೆಂಕ ಮಂಚಣ್ಣ ಪಂಡಿತರು ಉದಯವಾಗಿ ವೀರಶೈವ ದೀಕ್ಷೆಯಂ ಪಡೆದು…..ಶಿವನಧಿಕವಲ್ಲ ಎಂದ ಪರಸಮಯವಾದಿಗಳ ಮೂಗನರಿವ ಶಸ್ತ್ರವು ಶಿವಲೆಂಕ ಮಂಚಣ್ಣ ಪಂಡಿತರೆಂದು ಬಿರಿದಿನ ಟೆಕ್ಕೆಯ ನೆತ್ತಿಸಿ ಸಾರುತ್ತ ಜ್ವಾಲಾಮುಖಿಗೆ ಪೋಗಿ ನೀಲ ಕಂಠನ ನೋಡಿ ಕಾಶಿಗೆ ಬಂದು ಕಲ್ಯಾಣಕ್ಕೆ ಬರಬೇಕೆಂಬ ಸಮಯದೊಳೊಂದು ದಿನಂ ಏಕ ದಂಡಿ ದ್ವಿದಂಡಿ ತ್ರಿದಂಡಿಗಳೆಂಬ ವೈಷ್ಣವಾಚಾರ್ಯರು ತಮ್ಮ ಸಮಯವಂ ನೆರಹಿ ಮಂಚಣ್ಣ ಪಂಡಿತರಂ ಕರಸಿ…. ‘ಇಂದು ದೃಷ್ಟವ ತೋಱಿ’ ಎನಲು… ‘ಶಿವನೆನಗೆ ಕರ್ತನೆಂದು ಮುಕುಂದ ನುಡಿದರೆ ಒಡಂಬಡಿಕೆ’ ಎನಲು….. ಮಂಚಣ್ಣ ಪಂಡಿತರು, ದುಂಡುಬ ವಿನಾಯಕ ಮೊದಲಾದ ಚವುದಂತ ಕಡೆಯಾದ ಎಂಬತ್ತೆಂಟು ವಿನಾಯಕರಿಗೆ ಹೇಳಿ ವಿಷ್ಣುವ ಕರೆತನ್ನಿ ಎನಲಾಗವರು ಹಾಲಸಮುದ್ರದಲ್ಲಿ ಮಲಗಿರ್ದ ನಾರಾಯಣನ ಪಿಡಿದು…….ಎಳೆಯುತ್ತ, ಕಾಶಿಯಲ್ಲಿಗೆ ವಿಷ್ಣು ಬಂದು ತನ್ನ ಶಿಲಾ ಮೂರ್ತಿಯಲ್ಲಿ ನೆಲಸಿರಲಾಗ ಮಂಚಣ್ಣ ಪಂಡಿತರು……..’ಮಮ ಕರ್ತ ಮಹೇಶ್ವರನೆಂಬ ನಿನ್ನ ನುಡಿ ಬಂಧವಾದರೆದ್ದು ಬಂದು ವಿಶ್ವನಾಥಂಗೆ ಪೊಡಮಡು ಬಾರೈ’ ಎನಲಾಗ ‘ಏಳು ಗಜ ಪ್ರಮಾಣಿನ ವಿಷ್ಣು ಪ್ರತಿಮೆಯೆದ್ದು ನಡದು ಬೀದಿಯಲ್ಲಿ ಬರೆವಾಗ ಮಂಚಣ್ಣ ಪಂಡಿತರು ಮೊದಲಾದ ಭಕ್ತರು ಮುಂದೆ ನಡೆಯಲು ನೋಡಿ ಪುರಜನ ಬೆರಗಾಗುತ್ತಿರಲು ವಿಷ್ಣುವ ಕರೆತಂದು ವಿಶ್ವನಾಥಂಗೆ ಪೊಡೆಗೆಡಹಿ ಏಳದಂತೆ ಅಲ್ಲಿಯೆ ಇರಿಸಲು ವಾದಿಗಳು ಭಂಗಿತರಾಗಿ ಪೋದರು’……. ”ಇತ್ತಂ ಶಿವಲೆಂಕ ಮಂಚಣ್ಣ ಪಂಡಿತರು ಕಲ್ಯಾಣ ಪಟ್ಟಣಕ್ಕೆ ಬಂದು ಬಸವಣ್ಣ ಮೊದಲಾದ ಪ್ರಮಥರ ದರುಶನವಂ ಮಾಡಿ ಲಿಂಗಪೂಜೆಯ ನೈಷ್ಟೆಯಲ್ಲಿರುವಾಗ ತಮ್ಮಂಗದ ವಸ್ತುವ ಲಿಂಗಕರ್ಪಿಸುವೆನೆಂದು ದಿನಂಪ್ರತಿ ತಪ್ಪದೆ ತಮ್ಮ ಕುರುಳ ಕೊಯ್ದು ಲಿಂಗಕ್ಕೆ ಚವುರವ ಬೀರಿ, ಬೆರಲನಾರತಿಯೆತ್ತಿ ಕುರುಳ ಬೆರಳ ಉರವ ಈ ಮೂರನು ಮರಳಿ ದಿನಂಪ್ರತಿಯಲ್ಲಿ ಪಡೆಯುತ್ತ ಇದ್ದರು.”

ಈ ವಿವರಣದಲ್ಲಿ ಹಲವು ಹೆಚ್ಚಿನ ಅಂಶಗಳಿರುವುದನ್ನು ಕಾಣಬಹುದು. ಶಿವಲೆಂಕ ಮಂಚಣ್ಣ ಶಂಭುಭಟ್ಟರಿಗೆ ಮಗನಾಗಿ ಜನ್ಮವೆತ್ತಿ ಪ್ರಸಿದ್ಧ ವಿದ್ವಾಂಸನೆನಿಸಿ ಕೊಂಡು ಪರವಾದಿಗಳನ್ನು ವಾದದಿಂದ ಜಯಿಸಿ ಜ್ವಾಲಾಮುಖಿ ಮೊದಲಾದ ಹಲವಾರು ಕ್ಷೇತ್ರಗಳನ್ನು ಸಂದರ್ಶಿಸಿದನು. ತರುವಾಯ ಕಲ್ಯಾಣಕ್ಕೆ ಬಂದು ಅಲ್ಲಿಯೆ ನೆಲಸಿದನು. ಅಲ್ಲಿ ಬಸವಾದಿಗಳ ಸಹವಾಸದಲ್ಲಿದ್ದು ಶಿವಲಿಂಗ ಪೂಜೆಯಲ್ಲಿ ನಿರತ ನಾದನು. ಪ್ರತಿನಿತ್ಯ ಕುರುಳು, ಬೆರಳು ಮತ್ತು ಉರಗಳನ್ನು ಕತ್ತರಿಸಿ ಲಿಂಗಕರ್ಪಿಸಿ ಪುನಃ ಪಡೆದುಕೊಳ್ಳುತ್ತಿದ್ದನು. ಇಂತು ಮಂಚಣ್ಣ ಶಿವನಿಗೆ ತನ್ನ ಲೆಂಕತನ ಮರೆಯುತ್ತಿದ್ದುದು ಕಲ್ಯಾಣದಲ್ಲಿ ಎಂದು ಇದರಿಂದ ವ್ಯಕ್ತವಾಗುತ್ತದೆ. ಅವನು ಕಾಶಿಯಲ್ಲಿ ಕೂಡ ತನ್ನ ಈ ಉಗ್ರನೇಮವನ್ನು ಸಲ್ಲಿಸುತ್ತಿದ್ದಿರಲೂಬಹುದು. ಇವಿಷ್ಟು ಶಾಂತಲಿಂಗ ದೇಶಿ ಕನ ಹೇಳಿಕೆಯಿಂದ ಪ್ರವಕ್ಷಿತವಾಗುವ ಸಂಗತಿಗಳು.

ರಾ. ಬ. ಆರ್. ನರಸಿಂಹಾಚಾರ್ಯರು ನೀಲಕಂಠನ ಆರಾಧ್ಯಚರಿತೆಯ ಆಧಾರ ದಿಂದ ಉರಿಲಿಂಗದೇವನು ಶಿವಲೆಂಕ ಮಂಚಣ್ಣನ ಮಗನೆಂದು ಹೇಳಿದ್ದಾರೆ. ಅವರೇ ಮುಂದುವರಿದು ಉರಿಲಿಂಗದೇವ ನಲ್ಲೂರಿ ಮಠದಲ್ಲಿ ಅಯ್ಯನಾಗಿದ್ದನೆಂದು ತಿಳಿಸಿದ್ದಾರೆ. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಂತೆ ಉರಿಲಿಂಗ ದೇವನು ಇದ್ದುದು ಕಾಂಧಾರವೆಂಬ ಊರಿನಲ್ಲಿ. ಈ ಕಾಂಧಾರ ಮಹಾರಾಷ್ಟ್ರದ ನಾಂದೇಡ ಜಿಲ್ಲೆ ಯಲ್ಲಿರುವುದೆಂತಲೂ ಅದು ವಿಜಾಪುರ ಜಿಲ್ಲೆಗೆ ಸೇರಿದ್ದೆಂತಲೂ ಬೇರೆ ಬೇರೆ ಅಭಿ ಪ್ರಾಯಗಳಿವೆ. ಉರಿಲಿಂಗ ದೇವನು ಶಿವಲೆಂಕ ಮಂಚಣ್ಣನ ಮಗ ಅಥವಾ ಶಿಷ್ಯ ನಾಗಿದ್ದು ಒಂದು ಮಠದ ಅಧಿಕಾರಿಯಾಗಿದ್ದನೆಂದು ಒಟ್ಟಿನಲ್ಲಿ ತಿಳಿಯಬಹುದು.

ಮೇಲೆ ಹೇಳಿರುವಂತೆ ಉರಿಲಿಂಗ ದೇವನು ಮಂಚಣ್ಣನ ಶಿಷ್ಯ ಅಥವಾ ಮಗನೆಂದು ತಿಳಿದರೆ ಉರಿಲಿಂಗದೇವನ ಶಿಷ್ಯನಾದ ಉರಿಲಿಂಗ ಪೆದ್ದಣ್ಣನು ಮಂಚಣ್ಣನಿಗೆ ಎರಡನೆಯ ತಲೆಮಾರಿನವನೆನಿಸುತ್ತಾನೆ. ಈ ಉರಿಲಿಂಗ ಪೆದ್ದಿಯು ಹದಿನೈದನೆಯ ಶತಮಾನದಲ್ಲಿ ಪ್ರಸಿದ್ಧಿಗೆ ಬಂದ ಮಹಲಿಂಗದೇವ-ಕುಮಾರ ಬಂಕನಾಥ-ಭಂಡಾರಿ ಜಕ್ಕಣ್ಣರಂಥ ಪ್ರಸಿದ್ಧ ಪರಂಪರೆಗೆ ಮೂಲ ಪುರುಷರೆನಿಸಿದವರಲ್ಲಿ ಒಬ್ಬನೆಂಬುದು ಮಹಲಿಂಗ ದೇವನ ಏಕೋತ್ತರ ಶತಸ್ಥಲದಿಂದ ತಿಳಿದುಬರುತ್ತದೆ. ಮಹಲಿಂಗದೇವನ ಪರಂಪರೆಯಲ್ಲಿ ಸದ್ಯ ಶಿವಲೆಂಕ ಮಂಚಣ್ಣನ ಹೆಸರು ಕಂಡುಬರುವುದಿಲ್ಲ. ಆದರೆ ಶಿವಲೆಂಕ ಮಂಚಣ್ಣ, ಉರಿಲಿಂಗದೇವ ಮತ್ತು ಉರಿಲಿಂಗಪೆದ್ದಿಗಳ ಪರಸ್ಪರ ಸಂಬಂಧಗಳನ್ನು ಸದ್ಯ ಒಪ್ಪಿಕೊಳ್ಳಬೇಕಾಗಿರುವುದರಿಂದ ಈ ಪರಂಪರೆಯ ಮೂಲದಲ್ಲಿ ಶಿವ ಲೆಂಕ ಮಂಚಣ್ಣನ ಪಾತ್ರ ಮಹತ್ತರವಾಗಿರಬೇಕೆಂದು ಊಹಿಸಬಹುದಾಗಿದೆ.

ಈ ರೀತಿ ಶಿವಲೆಂಕ ಮಂಚಣ್ಣನನ್ನು ಕುರಿತಂತೆ ಮೇಲಿನ ಒಂದು ವಿಸ್ತೃತ ಚಿತ್ರ ವೀರಶೈವ ಕೃತಿಗಳಿಂದ ನಮಗೆ ದೊರಕುತ್ತದೆ. ಆದರೆ ಈ ಚಿತ್ರ ಪರಿಪೂರ್ಣ ಅಥವಾ ಸಮಗ್ರವೆಂದು ತಿಳಿಯುವ ಕಾರಣವಿಲ್ಲ. ಅದರಲ್ಲಿನ ಹಲವಾರು ರೇಖೆಗಳು ಮಸಕುಮಸಕಾಗಿವೆ. ಹೇಳದೆ ಬಿಟ್ಟಿರುವ ಅಂಶಗಳು ಹೆಚ್ಚಿಗಿರುವ ಸಾಧ್ಯತೆ ಯಾವತ್ತೂ ಇದ್ದೇ ಇದೆ. ಪ್ರಸ್ತುತ ಅಂಥ ಒಂದೆರಡು ಸಂಗತಿಗಳನ್ನು ಕುರಿತು ಪರಾಮರ್ಶಿಸುವುದು ಪ್ರಯೋಜನಕಾರಿಯೆನಿಸುತ್ತದೆ.

ವೀರಶೈವ ಕೃತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಬೇರೆ ಬೇರೆ ಸಂದರ್ಭಗಳಲ್ಲಿ ಒಟ್ಟು ನಾಲ್ಕು ಜನ ಮಂಚಣ್ಣರು ಉಲ್ಲೇಖಿತರಾದುದು ಕಂಡುಬರುತ್ತದೆ. ಶಿವಲೆಂಕ ಮಂಚಣ್ಣ, ರಾಯಸದ ಮಂಚಣ್ಣ. ಗುಪ್ತ ಮಂಚಣ್ಣ ಮತ್ತು ಕೊಂಡೆಯ ಮಂಚಣ್ಣ ಇವರೇ ಆ ನಾಲ್ವರು. ಇವರಲ್ಲಿ ಶಿವಲೆಂಕ ಮಂಚಣ್ಣನ ಹೊರತು ಉಳಿದ ಮೂವರು ಖಚಿತವಾಗಿಯೂ ಬಸವಣ್ಣನವರ ಸಮಕಾಲೀನರೆಂದು ಉಲ್ಲೇಖಗಳಿಂದ ಕಂಡು ಬರುತ್ತದೆ. ಅದೇ ರೀತಿ ಶಿವಲೆಂಕ ಮಂಚಣ್ಣನ ಕೂಡ ಬಸವಾದಿ ಪ್ರಮಧರ ಸಮಯದಲ್ಲಿ ಎಂದರೆ ಕ್ರಿ. ಶ. ಸು. ೧೧೬೦ ರ ಸುಮಾರಿನಲ್ಲಿ ಇದ್ದನೆಂಬ ಕವಿಚರಿತೆ ಕಾರರ ಹೇಳಿಕೆಯನ್ನು ಈಗಾಗಲೇ ಗಮನಿಸಿದ್ದೇವೆ. ಈತ ವಚನಕಾರನಾಗಿದ್ದು ಸಕಲ ಪುರಾತನರ ವಚನಗಳ ಕಟ್ಟುಗಳಲ್ಲಿಯೆ ಇವನವು ಸಮಾವೇಶವಾಗಿವೆ ಮತ್ತು ಇನ್ನೊಬ್ಬ ವಚನಕಾರನಾದ ಉರಿಲಿಂಗದೇವನಿಗೆ ಇವನು (ತಂದೆ ಅಥವಾ) ಗುರುವಾಗಿದ್ದನೆಂಬ ಸಂಗತಿಯ ಆಧಾರದಿಂದ ಇವನ ಕಾಲ ಕ್ರಿ.ಶ. ೧೧೬೦ ಎಂಬುದನ್ನೆ ಶ್ರೀಮಾನ್ ಬಿ.ಎಸ್. ಸಣ್ಣಯ್ಯನವರು ದೃಢೀಕರಿಸಿದ್ದಾರೆ. (ಮೈ. ವಿ. ವಿ. ಕ. ಸಾ. ಚ. ಸಂ. v) ಸದ್ಯ ವಿದ್ವಾಂಸರ ಈ ನಿರ್ದಾರವನ್ನು ಕದಲಿಸುವಂಥ ಪ್ರಬಲವಾದ ಸಾಕ್ಷ್ಯಾಧಾರ ಇಲ್ಲವೇನೊ ಸರಿ. ಆದರೆ ಇದೇ ಆತ್ಯಂತಿಕ ತೀರ್ಮಾನವೆಂದಾಗಿ ಬೇಕಿಲ್ಲ. ಕನ್ನಡದಲ್ಲಿ ಈತನ ಚರಿತ್ರೆ ಪ್ರಪ್ರಥಮವಾಗಿ ಭೀಮಕವಿಯ ಬಸವಪುರಾಣದಲ್ಲಿ ಬಂದಿದೆಯಷ್ಟೆ. ಈ ಸಂಗತಿಯನ್ನು ಈಗಾಗಲೇ ಗಮನಿಸಿದ್ದೇವೆ. ಭೀಮಕವಿ ಹೇಳಿರುವ ಕಥೆಯಿಂದ ಶಿವಲೆಂಕ ಮಂಚಣ್ಣ ಬಸವಣ್ಣನವರಿಗಿಂತ ಪ್ರಾಚೀನನೆಂಬ ಅನುಮಾನ ಉಂಟಾಗುತ್ತದೆ. ಸೊಡ್ಡಳ ಬಾಚರಸನ ಕಥೆ (ಬ.ಪು.ಕಾಂಡ – ೫ – ಸಂಧಿ ೫೨-೫೩) ಯಲ್ಲಿ ಇವನ ವೃತ್ತಾಂತ ಉಪಕಥೆಯಂತೆ ಬಂದಿದೆ. ಬಸವಣ್ಣ ಬಿಜ್ಜಳನಿಗೆ ಶಿವನ ಅತ್ಯಂತ ನಿಷ್ಠಭಕ್ತರನ್ನು ಕುರಿತು ವಿವರಿಸುವ ಸಂದರ್ಭದಲ್ಲಿ ಮಂಚಣ್ಣನ ಪ್ರಸಂಗ-ಬಸವನಿಂದಲೇ ಕಥಿತವಾಗಿದೆ. ಭೃಂಗಿನಾಥ, ಘಂಟಾಕರ್ಣ ಅರುವತ್ತು ಮೂವರಿಗಿಂತ ಪ್ರಾಚೀನನೆನಿಸುವ ಅರಿಯಮರಾಜ ವೀರಶಂಕರದೇವ. ಇವರ ತರು ವಾಯದಲ್ಲಿ ಶಿವಲೆಂಕ ಮಂಚಣ್ಣ ಈ ಕ್ರಮ ಅಲ್ಲಿ ಕಂಡು ಬರುತ್ತದೆ. ಆ ಮೇಲೆ ಬರುವ ಪೂರ್ವಕಾಲದಲ್ಲಿ ಆಗಿಹೋದ ಪ್ರಸಿದ್ಧ ಶರಣ ಶಂಕರದಾಸಿಮಯ್ಯನ ವೃತ್ತಾಂತ ಬಂದಿದೆ. ಬಸವ ಪುರಾಣದಲ್ಲಿ ಹೇಳಿದ ಇತರ ಅನೇಕ ಶರಣರು ಬಸವಣ್ಣನವರ ಸಮ ಕಾಲೀನರು, ಸಮಕಾಲೀನ ಹಿರಿಯರು ಅಥವಾ ಪ್ರಾಚೀನರು ಎಂಬಂತೆ ವರ್ಣನೆ ಬಂದಿದೆ. ಇದು ಸ್ವಾಭಾವಿಕವೇ. ಅಂತೆಯೇ ಶಿವಲೆಂಕ ಮಂಚಣ್ಣನ ಚರಿತ್ರೆ ಕೂಡ ಅದರಲ್ಲಿ ಪ್ರಾಚೀನ ಭಕ್ತರ ಸ್ತವನ ಸಂದರ್ಭವಾಗಿಯೆ ಹೇಳಲ್ಪಟ್ಟಿದೆ. ಕಾರಣ ಭೀಮ ಕವಿಯ ಅಭಿಪ್ರಾಯದಲ್ಲಿ ಈ ಮಂಚಣ್ಣ ಶಂಕರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯರಂತೆ ಬಸವ ಪೂರ್ವ ಕಾಲದವನೆಂಬ ಸಂಗತಿ ವಿವಕ್ಷಿತವಾಗುತ್ತದೆ. ಕ್ರಿ. ಶ. ಸು. ೧೫೦೦ ರಲ್ಲಿದ್ದ ಸಿಂಗಿರಾಜ ಮತ್ತು ಕ್ರಿ.ಶ. ೧೬೭೨ ರಲ್ಲಿದ್ದ ಶಾಂತಲಿಂಗದೇಶಿ ಕರು, ಶಿವಲೆಂಕ ಮಂಚಣ್ಣ ಬಸವಣ್ಣನವರ ಸಮಕಾಲೀನನೆಂದು ಹೇಳಿರುವರು. ಇವರಿಗೆ ಪ್ರಾಚೀನರಾದ ಭೀಮಕವಿ, ಲಕ್ಕಣ್ಣ ದಂಡೇಶ ಮತ್ತು ತರುವಾಯದವರಾದ ವಿರೂಪಾಕ್ಷ ಪಂಡಿತ, ಸಿದ್ಧನಂಜೇಶ ಅಥವಾ ಚಿಕ್ಕನಂಜೇಶ ಈ ಮೊದಲಾದವರು ಹಾಗೆ ಹೇಳಿಲ್ಲ. ಇದನ್ನು ಲಕ್ಷಿಸಿದರೆ ಶಿವಲೆಂಕ ಮಂಚಣ್ಣ ಬಸವಪೂರ್ವದವನೆಂಬ ಅನುಮಾನಕ್ಕೆ ಇನ್ನಷ್ಟು ಬಲ ಬರುತ್ತದೆ.

ಇನ್ನು ಇತರ ವಚನಕಾರರಾರೂ ಶಿವಲೆಂಕ ಮಂಚಣ್ಣನನ್ನು ಸ್ಮರಿಸಿರುವಂತೆ ಕಾಣದು. ಶಿವಲೆಂಕ ಮಂಚಣ್ಣನ ಶಿಷ್ಯ ಪ್ರಶಿಷ್ಯರೆಂದೆನಿಸುವ ಉರಿಲಿಂಗ ದೇವ ಮತ್ತು ಉರಿಲಿಂಗ ಪೆದ್ದಣ್ಣಗಳು ಕೂಡ ಅವನ ಹೆಸರನ್ನು ತಮ್ಮ ವಚನಗಳಲ್ಲಿ ಸ್ಮರಿಸಿಲ್ಲ. ಅದೇ ರೀತಿ ಶಿವಲೆಂಕ ಮಂಚಣ್ಣ ಕೂಡ ತನ್ನ ವಚನಗಳಲ್ಲಿ ಬೇರೆ ಯಾರ ಹೆಸರನ್ನೂ ಹೇಳಿಲ್ಲ.

ಮಂಚಣ್ಣನ ಊರು, ನಾಡುಗಳು ಯಾವವಾಗಿದ್ದುವೆಂಬುದೂ ಚಿಂತನೀಯವಾಗಿದೆ. ಅವನು ಕಾಶೀಪಟ್ಟಣದವನಾಗಿದ್ದು ಅಲ್ಲಿಯ ಗದಾಧರನ ಪ್ರತಿಮೆ ನಮಸ್ಕರಿಸುವಂತೆ ಪವಾಡವೆಸಗಿದನೆಂದು ಹೇಳುವಲ್ಲಿ ಏಕಾಭಿಪ್ರಾಯವಿದೆ. ಕೆಲವು ಕೃತಿಗಳಲ್ಲಿ ಗದಾಧರನ ಪ್ರತಿಮೆ ಎಂದಿರುವ ಬದಲು ಬಿಂದು ಮಾಧವನ ಪ್ರತಿಮೆಯೆಂದಿದೆ. ಮತ್ತೆ ಕೆಲವರಲ್ಲಿ ಮಂಚಣ್ಣ ಕಾಶಿಯಿಂದ ಹೊರಟು ಕಲ್ಯಾಣಕ್ಕೆ ಬಂದನೆಂದಿದೆ. ಈ ವಿಷಯಕ್ಕೆ ಕೆಲವು ಸಂದೇಹಗಳು ತಲೆದೋರುತ್ತವೆ. ಮಂಚಣ್ಣನ ಜತೆಗೆ ಪಂಡಿತತ್ರಯದಲ್ಲಿ ಗಣನೆಗೊಳ್ಳುವ ಇತರ ಇಬ್ಬರಾದ ಶ್ರೀಪತಿ ಪಂಡಿತ ಮತ್ತು ಮಲ್ಲಿಕಾರ್ಜುನ ಪಂಡಿತರು ನಿಶ್ಚಯವಾಗಿಯೂ ತೆಲುಗು ನಾಡಿನವರು, ಮಂಚಣ್ಣನನ್ನು ಪ್ರಪ್ರಥಮವಾಗಿ ಉಲ್ಲೇಖಿಸುವ ಪಾಲ್ಕುರಿಕೆ ಸೋಮನಾಥ ಹಾಗೂ ಭೀಮಕವಿಗಳು ಮೂಲತಃ ಆಂಧ್ರದವರು. ಮಂಚಣ್ಣ ಎಂಬ ಹೆಸರೇ ತೆಲುಗು ಮೂಲದ್ದು. ಉತ್ತರ ದೇಶದ ನಿವಾಸಿಯೊಬ್ಬ ಹೀಗೆ ತೆಲುಗು ಮೂಲದ ಹೆಸರನ್ನಿಟ್ಟುಕೊಳ್ಳುವುದು ಅಸಂಭವವೇ ಸರಿ. ಆತನ ಇಷ್ಟಲಿಂಗದ ಹೆಸರು ‘ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗ’ ಎಂದಿರುವುದು ಇದನ್ನೇ ಸಮರ್ಥಿಸುತ್ತದೆ. ಮಲ್ಲಿಕಾರ್ಜುನ ಎಂದಿರುವ ಶಿವನ ಹೆಸರು ಉತ್ತರ ಮೂಲದ್ದಲ್ಲ ; ಆಂಧ್ರ-ಕರ್ನಾಟಕ ಮೂಲದ್ದು. ಪ್ರಸಿದ್ಧ ಜೋತಿರ್ಲಿಂಗ ಸ್ಥಾನವಾದ ಶ್ರೀಶೈಲ ಮತ್ತು ಅದರ ಸಮೀಪದ ಪ್ರಾಂತಗಳೇ ಈ ಹೆಸರಿನ ಮೂಲ ಸ್ಥಾನವೆಂಬುದು ನಿಶ್ಚಿತ. ಈ ಕಾರಣಗಳಿಂದ ಶಿವಲೆಂಕ ಮಂಚಣ್ಣನ ಮೂಲ ಸ್ಥಳ ಮತ್ತು ಪ್ರದೇಶಗಳು ವಾರಣಾಸಿಯಷ್ಟು ದೂರದಲ್ಲಿರದೆ ದಕ್ಷಿಣದ ಈ ಭಾಗದಲ್ಲಿರ ಬೇಕಾದುದು ತರ್ಕ ಸಮ್ಮತ. ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣವನ್ನು ಕೇಂದ್ರವಾಗಿಟ್ಟುಕೊಂಡ ವೀರಶೈವ ಚಳುವಳಿ ನಡೆದುದರಿಂದ ಅಲ್ಲಿಗೆ ದೇಶದ ನಾನಾ ಭಾಗಗಳಿಂದ ಭಕ್ತರು-ಶರಣರು ಆಕರ್ಷಿತರಾಗಿ ಬಂದರೆಂಬುದನ್ನು ದೃಢವಾಗಿ ನಂಬಿಯೂ ಹೀಗೆ ತರ್ಕಿಸಬೇಕಾಗಿದೆ. ಒಟ್ಟಿನಲ್ಲಿ ಶಿವಲೆಂಕ ಮಂಚಣ್ಣ ಆಂಧ್ರ-ಕರ್ನಾಟಕದ ಮೂಲದವನೆಂದು ಹೇಳಿದರೆ ಹೆಚ್ಚು ಸೂಕ್ತವೆನಿಸುತ್ತದೆ. ವೀರಶೈವ ಕೃತಿಗಳಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ನಿರ್ದೇಶನ ಕಂಡು ಬರದೇ ಇರುವುದು ಒಂದು ಕೊರತೆಯೆನಿಸುತ್ತದೆ.

ಇನ್ನೊಂದು ವಿಷಯ: ದೊಡ್ಡ ವಿದ್ವಾಂಸರ ವಂಶದವನೆನಿಸಿ ಸ್ವಂತಕ್ಕೂ ವಿದ್ವಾಂಸನೆಂದು ಪ್ರಸಿದ್ಧಿ ಪಡೆದಿದ್ದ ಮಂಚಣ್ಣ ಶಿವನಿಗೆ ಲೆಂಕತನವನ್ನು ಒಪ್ಪಿ ಕುರುಳು ಬೆರಳು ಮತ್ತು ಉರಗಳನ್ನು ಕತ್ತರಿಸಿ ಅರ್ಪಿಸುತ್ತಿದ್ದೆಂಬುದು ಕುತೂಹಲಕರ ಸಂಗತಿ. ತಾನು ನಂಬಿದ ದೈವಕ್ಕೆ ತನ್ನ ಸಂಪೂರ್ಣ ಶರಣಾಗತಿ ಸೂಚಿಸಲೋಸುಗ ಆಚರಣೆ ಯೊಂದನ್ನಿಟ್ಟುಕೊಂಡು, ಅದು ಎಷ್ಟೇ ಉಗ್ರವಾದದ್ದಿದ್ದರೂ ಅದನ್ನು ಪರಿಪಾಲಿಸುವುದು ಭಕ್ತನಿಗೆ ಸಹಜವಾದದ್ದು. ಅದರೆ ಮಂಚಣ್ಣ ಪಂಡಿತರಂಥವರ ವಿಷಯದಲ್ಲಿ ಉಗ್ರಾಚರಣೆ ಅಷ್ಟು ಸಹಜವಾದದ್ದೆಂದು ಎನಿಸುವುದಿಲ್ಲ. ಪ್ರಾಚೀನಕಾಲದ ಜನ ಜೀವನದಲ್ಲಿ ಜೋಳವಾಳಿ, ಲೆಂಕವಾಳಿ ಅಥವಾ ವೇಳೆವಾಳಿಯಂಥ ನಡುವಳಿಕೆ ಗಳಿಗೂ ಪಾಂಡಿತ್ಯಕ್ಕೂ ಸಹಜವಾದ ಹೊಂದಾಣಿಕೆ ಸಾಧ್ಯವಿರಲಿಲ್ಲ.

ವಚನಗಳು :

ಶಿವಲೆಂಕ ಮಂಚಣ್ಣನ ಒಟ್ಟು ೧೩೧ ವಚನಗಳು ಈವರೆಗೆ ಉಪಲಬ್ಧವಾಗಿವೆ. ಅವನು ‘ಗುಹಾಧಿಕರಣ’ ಎಂಬ ಸಂಸ್ಕೃತ ಕೃತಿಯನ್ನು ರಚಿಸಿರುವ ಉಲ್ಲೇಖವಿದೆ ಯಾದರೂ ಈವರೆಗೆ ಅದು ಪತ್ತೆಯಾಗಿಲ್ಲ. ಲಭ್ಯ ಆಕರಗಳನ್ನು ಪರಿಶೋಧಿಸಿದ ಶ್ರೀಮಾನ್ ಬಿ. ಎಸ್. ಸಣ್ಣಯ್ಯನವರು, ಮಂಚಣ್ಣ ೧೩೩ ವಚನಗಳನ್ನು ರಚಿಸಿರುವನೆಂದು ಹೇಳಿದ್ದಾರೆ. (ಮೈಸೂರು ವಿ. ವಿ. ಕ. ಸಾ. ಚ. ಸಂ. v) ಅವರೆ ೧೯೭೧ ರಲ್ಲಿ ಡಕ್ಕೆಯ ಬೊಮ್ಮಣ್ಣನ ವಚನಗಳ ಜತೆಗೆ ಶಿವಲೆಂಕ ಮಂಚಣ್ಣನ ವಚನಗಳನ್ನೂ ಪ್ರಕಟಿಸಿದ್ದಾರೆ. ಅವರ ಈ ಪ್ರಕಟಣೆಯಲ್ಲಿ ಒಟ್ಟು ೧೩೫ ಮಂಚಣ್ಣನ ವಚನಗಳಿವೆ. ದಿ. ಫ. ಗು. ಹಳಕಟ್ಟಿಯವರು ಪ್ರಕಟಿಸಿದ್ದ ಈತನ ವಚನಗಳ ಸಂಖ್ಯೆ ೫೩ ಮಾತ್ರ. ಡಾ. ಆರ್.ಸಿ. ಹಿರೇಮಠರು ಕರ್ನಾಟಕದ ವಿಶ್ವವಿದ್ಯಾಲಯದ ಪರವಾಗಿ ಮಂಚಣ್ಣನ ೧೩೧ ವಚನಗಳನ್ನು ಸಕಲ ಪುರಾತನರ ವಚನಗಳ ಮೊದಲ ಸಂಪುಟದಲ್ಲಿ ಸೇರಿಸಿ ಪ್ರಕಟಿಸಿದ್ದಾರೆ. ಇದರಿಂದ ಶ್ರೀ ಬಿ. ಎಸ್. ಸಣ್ಣಯ್ಯನವರಲ್ಲಿ ವಚನಗಳ ಸಂಖ್ಯೆ ಹೆಚ್ಚೆಂಬುದು ಕಂಡು ಬರುತ್ತದೆ. ಆದರೆ ಶ್ರೀಮಾನ್ ಸಣ್ಣಯ್ಯನವರೇ ತಮ್ಮ ಸಂಪಾದನೆಯ ೧೨೫ ಮತ್ತು ೧೨೭ನೆಯ ವಚನಗಳು ಕ್ರಮವಾಗಿ ೨೧ ಮತ್ತು ೭೬ನೆಯ ವಚನಗಳ ಪಾಠಾಂತರಗಳಾಗಿರುವುದನ್ನು ಎತ್ತಿ ತೋರಿಸಿದ್ದಾರೆ. ಅಂತೆಯೇ ಅವರ ಸಂಪಾನದನೆಯ ೧೨೪ ಮತ್ತು೧೨೬ ನೆಯ ವಚನಗಳು ಕೂಡ ಕ್ರಮವಾಗಿ ೪ ಮತ್ತು ೩೬ ನೆಯ ವಚನಗಳ ಪಾಠಾಂತರಗಳೇ ಆಗಿರುವುದು ಕಂಡುಬರುತ್ತದೆ. ಆದ್ದರಿಂದ ಈವರೆಗೆ ದೊರೆತಿರುವ ಶಿವಲೆಂಕ ಮಂಚಣ್ಣನ ವಚನಗಳ ಸಂಖ್ಯೆ ಡಾ. ಆರ್.ಸಿ.ಹಿರೇಮಠರ ಸಂಪಾದನೆಯಲ್ಲಿರುವಂತೆ ೧೩೧ ಮಾತ್ರ ಎಂಬುದು ನಿಶ್ಚಯವಾಗುತ್ತದೆ.

ಮಂಚಣ್ಣನ ವಚನಗಳು ಹಲವು ದೃಷ್ಟಿಯಿಂದ ಗಮನಾರ್ಹವಾಗಿರುತ್ತವೆ. ಸಂಖ್ಯೆಯಿಂದ ಕಡಿಮೆಯೆನಿಸಿದರೂ ಸತ್ವದಿಂದ ಅವು ಪರಿಪುಷ್ಟವಾಗಿವೆ. ಆತನ ವಾಣಿಯಲ್ಲಿ ತುಂಬಿ ಸೂಸುವ ನದಿಯ ಶ್ರೀ ಮದ್ಗಾಂಭಿರ್ಯ ಮೇಲುನೋಟಕ್ಕೇ ಗೋಚರವಾಗುತ್ತದೆ. ಕೆಲವು ವಚನಕಾರರಲ್ಲಿ ಕಂಡುಬರುವಂತೆ ಅನ್ಯದೈವ, ಅನ್ಯಮತ, ಅನ್ಯ ಆಚರಣೆಗಳ ವಿಡಂಬನೆ ಅಥವಾ ಕಂದಾಚಾರಗಳ ನಿಂದೆ ಅವನಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಇದರರ್ಥ ಮಂಚಣ್ಣ ಲೌಕಿಕದಿಂದ ಸಂಪೂರ್ಣ ನಿರ್ಲಿಪ್ತನೆಂದೇನೂ ಅಲ್ಲ. ಲೌಕಿಕವನ್ನು ಒಂದು ಕೈಯಿಂದ ಹಿಡಿದುಕೊಂಡೆ ಇನ್ನೊಂದು ಕೈಯಿಂದ ಪರಮಾರ್ಥವನ್ನೂ ಸಾಧಿಸಬಹುದೆಂಬುದು ವೀರಶೈವದ ನಂಬಿಕೆಯಷ್ಟೆ. ಅದಕ್ಕನುಸರಿಸಿ ಪರದ ಸಾಧನೆಗೆ ಇಹವೇ ಆಧಾರವೆಂಬ ನಂಬಿಕೆ ಅವನ ಹಲವು ವಚನಗಳಲ್ಲಿ ಪ್ರತಿಪಾದಿತವಾಗಿರುವುದನ್ನು ಕಾಣುತ್ತೇವೆ. ಅಲ್ಲಿ ಸಲ್ಲಬೇಕೆನ್ನುವವರು ಮೊದಲು ಇಲ್ಲಿ ಸಲ್ಲಲೇಬೇಕಾಗುತ್ತದೆ. ಉದಾಹರಣೆಗೆ :

‘ಕಾಯವಿಲ್ಲದೆ ಜೀವಕ್ಕೆ ಬೆಲೆಯಿಲ್ಲ’
‘ಕ್ರೀಯ ಮಱೆದಲ್ಲಿ ಅಱಿವು ಹೀನವಾಗಿಪ್ಪುದು’

ಎಂಬಂಥ ನುಡಿಗಳನ್ನು ಪರಕಿಸಬಹುದು. ಇಹಪರಗಳೆರಡೂ ದಂಡಿಗೆಯ ಎರಡು ತುದಿಗಳೆಂಬುದನ್ನು ಇಂಥ ಉಕ್ತಿಗಳು ಸಾರಿಹೇಳುತ್ತವೆ. ಮುಂದುವರಿದು ಆತ-

ಮನಸಿಜನ ಇರವುಳ್ಳನ್ನಕ್ಕ ಶೃಂಗಾರವ ಹಾರಬೇಕು
ಅವಱಂಗವುಳ್ಳನ್ನಕ್ಕ ಅಂಗನೆಯರ ಸಂಗಬೇಕು
ಸಂಗಸುಖಕ್ಕೊಡಲ ಹನ್ನಬರ ಶಿವಲಿಂಗ ಪೂಜೆಯ ಮಾಡಬೇಕು
ಇದು ಅಱಿವಿನ ಗೊತ್ತು, ಜ್ಞಾನದ ಬಿತ್ತು
ಪರಬ್ರಹ್ಮದ ಕೂಟ, ಶಿವಪೂಜೆಯ ಮಾಟ
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗದ ಕೂಡ.

ಎಂದಿರುವನು. ಐಹಿಕದ ತಿರಸ್ಕಾರ ತರವಲ್ಲ ಎನ್ನುವ ಅವನ ನಿಲವು ಸ್ಪಷ್ಟ ಶಬ್ದಗಳಲ್ಲಿ ಪಡಿಮೂಡಿದೆ. ಅಂತೆಯೇ ಬಾಹ್ಯ ಆಚರಣೆಗಿಂತ ಪರಿಶುದ್ಧ ಹೃದಯದ ಅನು ಸಂಧಾನ ಮುಖ್ಯವೆಂಬುದು ಅವನ ವಚನಗಳಲ್ಲಿ ಮತ್ತೆ ಮತ್ತೆ ಪ್ರತಿಪಾದಿತವಾಗಿದೆ :

ಗುರುವೆಂಬ ಅಂಗವ ಧರಿಸಿದಡೇನು ?
ಚಿತ್ರದ ಸತಿಯ ಕಯ್ಯ ದೀಪಕ್ಕೆ
ಮೊತ್ತದ ತಮ ಹರೆದುದುಂಟೆ ?
ನಿಃಕಳೆಯ ಲಿಂಗವ ಧರಿಸಿದಲ್ಲಿ ಪಲವೇನು ?
ಮೃತ್ತಕೆಯ ಬೊಂಬೆಯ ಕಯ್ಯಲ್ಲಿ
ನಿಶ್ಚಯದ ಖಂಡೆಯವಿರೆ ಕುಟ್ಟಬಲ್ಲುದೆ ?
ವಿದಾಂತ ರೂಪು ಲಾಂಛನವ ತೊಟ್ಟು ಬಹುರೂಪಿಯಾದಲ್ಲಿ
ನೆಱೆ ಈತನ ಯುಕ್ತಿಯ ವಿರಕ್ತಿ ಜಂಗಮನಾಗಬಲ್ಲನೆ ?
ಇಂತೀ ಮಾತಿನ ಬಳಕೆಯ ವೇಷವ ಬಿಟ್ಟು
ನಿಜ ತತ್ವದ ಸಾಕಾರವೇ ಮೂರ್ತಿಯಾದ
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವು ತಾನೆ.

ಗುರುವಿನಿಂದ ಇಹದ ಮೊತ್ತದ ತಮ ಹರಿದು ಪರದ ಹೊಂಬೆಳಗು ತೋರಬೇಕು. ನಿಃಕಳೆಯ ಲಿಂಗಧರಿಸಿದಾಕ್ಷಣ ಅದು ತ್ರಿವಿಧ ಮಲದ ಕೋಟೆಯನ್ನು ಕುಟ್ಟಬೇಕು. ಹಾಗಿಲ್ಲದಿದ್ದರೆ ಅಂಗವಿದ್ದೂ ಗುರು ಚಿತ್ರದ ಕೈಯಲ್ಲಿನ ದೀಪಕ್ಕೆ ಸಮ; ನಿಃಕಳೆಯ ಲಿಂಗವಿದ್ದರೂ ಅದು ಮಣ್ಣಿನ ಬೊಂಬೆಯ ಕೈಯಲ್ಲಿ ಸಿಕ್ಕಿಸಿದ ಖಡ್ಗಕ್ಕೆ ಸಮ. ಹೀಗೆ ನೈಜಾರ್ಥದ ಆಚರಣೆಯ ಮಹತಿಯನ್ನು ಮಂಚಣ್ಣ ಅಪೂರ್ವ ದೃಷ್ಟಾಂತದ ಮೂಲಕ ಹೃದಯಸ್ವರ್ಶಿಸುವಂತೆ ತಿಳಿಯ ಹೇಳುತ್ತಾನೆ. ಆದರೆ ಹೇಳುವ ವಿಧಾನದಲ್ಲಿ ಕಟುತ್ವ ಲೇಶ ಮಾತ್ರವೂ ಇಲ್ಲ. ಯಾವ ವಿಚಾರವಿದ್ದರೂ ಅದು ಸಹಜ ಗಂಭೀರವಾಗಿಯೆ ವ್ಯಕ್ತವಾಗುತ್ತದೆ.

ಬಾಹ್ಯವ್ರತ, ಭ್ರಮೆವ್ರತ, ಸೀಮೋಲಂಘನ ವ್ರತ, ಉಪಚರಿಯಕೂಟಸ್ಥವ್ರತ
ಸಮಕ್ರೀ ಭೋಜನ ವ್ರತ ಇಷ್ಟಸಂಬಂಧ ಕೂಡ ವ್ರತ
ದ್ರವ್ಯ ಉಪಚರಿಯ ಸಂಪದ ವ್ತತ, ಅಹುದಲ್ಲವೆಂಬ ಸಂದೇಹಸಂಕಲ್ಪ ವ್ರತ
ತಿಲ ಮಧುರ ಕ್ರಮುಕ ಲವಣ ಪರಪಾಕ ವಿಸರ್ಜನ ವ್ರತ
ಗಮನ ಸುಮನ ಸಮತೆ ನೇಮ ಸಂತೋಷವ್ರತ
ಇಂತೀ ಸೀಮೆಗೊಳಗಾದ ಆಱುವತ್ತು ನಾಲ್ಕು ಶೀಲವನಱಿದಡೇನು ?
ಪರವಧುವಿಂಗೆ ಪಲ್ಲಟಿಸದೆ, ಪರಧನಕ್ಕೆ ಕೈದುಡುಕದೆ ಅನರ್ಪಿತಕ್ಕೆ ಮನಮುಟ್ಟದೆ

ತಾ ಕೊಂಡ ಸೀಮೆಯಲ್ಲಿ ಭಾವ ಭ್ರಮೆಯಿಲ್ಲದೆ
ಮನ ವಚನ ಕಾಯದಲ್ಲಿ ಕೊಂಡ ವ್ರತಕ್ಕೆ ಪೂಜಿಸುವ
ಗುರುಲಿಂಗ ಜಂಗಮಕ್ಕೆ ಉಭಯದೋಱದೆ ನಿಂದುದು
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗಕ್ಕೆ ಸಂದುದು.

ಇಂಥ ವಚನಗಳಲ್ಲಿ ಅಂತರ-ಬಾಹ್ಯದಲ್ಲಿ ಇರಬೇಕಾದ ಸಮನ್ವಯದ ಸ್ವರೂಪ ಸುವ್ಯಕ್ತವಾಗಿದೆ. ‘ತಾ ಕೊಂಡ ಸೀಮೆಯಲ್ಲಿ ಭಾವಭ್ರಮೆಯಿಲ್ಲದೆ’ ಎಂದಿರುವ ಇಲ್ಲಿನ ಮಾತು ಎಲ್ಲ ಕಾಲಕ್ಕೂ ಆದರ್ಶಪ್ರಾಯ. ಲೌಕಿಕ ದೃಷ್ಟಿಯಲ್ಲಿ ಅಲ್ಪನೆಂದೆನಿಸಿದ್ದರೂ ತನ್ನ ಅಳವಿಗೆ ಎಟುಕುವಷ್ಟು ಆಚರಣೆ ಇಟ್ಟುಕೊಮಡು ತನ್ನ ನಿಜ ಜೀವನದ ನಿತ್ಯ ಕರ್ಮಗಳನ್ನು ಪರಿಪಾಲಿಸುತ್ತ ಇದ್ದರೆ ಸಾಕು; ಆ ಪಾಲನೆ ಎಲ್ಲ ತರದ ವ್ರತ-ಆಚರಣೆ ಗಳಿಗೆ ಸರಿದೊರೆ ಎನಿಸಬಲ್ಲುದು. ಇದನ್ನೆ ಇನ್ನೊಂದೆಡೆ ಪರದ್ರವ್ಯ ಪರಸತಿ ಹುಸಿ ಕೊಲೆ ಕಳವು ಅತಿಕಾಂಕ್ಷೆಯಂ ಬಿಟ್ಟು, ಬಂದುದ ನಿಂದಂತೆ ಕಂಡು, ಬಾರದುದಕ್ಕೆ ಕಾಂಕ್ಷೆಯ ಮಾಡದಿಪ್ಪುದೆ ಅಱುವತ್ತು ನಾಲ್ಕು ವ್ರತ, ಆಯಿವತ್ತಾಱು ಶೀಲ, ಮೂವತ್ತರಡು ನೇಮ ಸಂದಿತ್ತು.’ ಎಂದು ಮತ್ತೂ ಸುಲಭ ಗೊಳಿಸಿ ಹೇಳಿದ್ದಾನೆ. ಇಂಥಲ್ಲೆಲ್ಲ ವ್ಯಷ್ಟಿ ತತ್ವದ ಮೂಲಕ ಸಮಷ್ಟಿ ಸಾಧನೆಗೈಯ ಬೇಕಾದ ವಿಧಾನ ‘ಬಹುಜನ ಹಿತಾಯ’ ಎಂಬ ನೀತಿಗೆ ಅನುಗುಣವಾಗಿದೆ.

ಆಱು ಸ್ಥಲವಿಟ್ಟು ಬೇಱೆ ಕರೆದ ಭಾವವಾವುದಯ್ಯಾ ?
ಸಕಲ ಗುಣಂಗಳನಱತು ಸರ್ವ ಜೀವಕ್ಕೆ ದಯಾಪರನಾಗಿಪ್ಪುದು ಭಕ್ತಿ ಸ್ಥಲ
ಸಕಲದೇಹ ಭಾವಂಗಳಲ್ಲಿ ಕಲೆದೋಱದಿಪ್ಪುದು ಗುರುಸ್ಥಲ
ಉತ್ಪತ್ಯ ಸ್ಥಿತಿಲಯಕ್ಕೆ ಹೊಱಗಾದುದು ಲಿಂಗಸ್ಥಲ
ಆ ಮೂಱ ಹೆಱೆ ಹಿಂಗಿ ನಿಂದುದು ಜಂಗಮಸ್ಥಲ
ಆ ಚತುರ್ವಿಧವ ನೊಳಕೊಂಡುದು ಶರಣಸ್ಥಲ
ಆ ಅಯಿಧನವಗವಿಸಿ ನಿಂದುದು ಐಕ್ಯಸ್ಥಲ. ಇಂತೀ ಷಡುಸ್ಥಲದ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣ ಐಕ್ಯನೆಂಬುದು ನಿಂದುದು ಒಂದೇ ಸ್ಥಲ.

ಇಲ್ಲಿ ಷಡುಸ್ಥಲದ ಬಗೆಗಿನ ಮಂಚಣ್ಣನ ನಿಲುವು ಸುವ್ಯಕ್ತವಾಗಿದೆ. ಆರು ಸ್ಥಲಗಳು ಬೇರೆ ಬೇರೆ ಎನಿಸಿದರೂ ಅವು ತಮ್ಮಷ್ಟಕ್ಕೆ ಭಿನ್ನ ಭಿನ್ನವೆಂದು ಎಂದಿಗೂ ಆಗವು. ಆರನ್ನೂ ಒಂದಾಗಿಸುವಂಥ ಏಕಸೂತ್ರತೆ ಅವುಗಳಲ್ಲಿ ಇದ್ದೇ ಇರುತ್ತದೆ. ಆ ಏಕಸೂತ್ರತೆಯ ಸ್ಥಲ ಸಿದ್ಧಾಂತದ ಮೂಲಭೂತ ಸತ್ವ-ತತ್ವಗಳನ್ನು ಸಫಲಗೊಳಿಸುವ ಸಾಧನವೆನಿಸುತ್ತದೆ.

ಮಧುರ ದಂಡ ಒರಳಿಗೆ ಬಂದು
ಮರಳಿ ಬೆಂದು ತ್ರಿಗುಣದಲ್ಲಿ ಹೊಂದಿ
ಕಡೆಯಾಣೆಯಾದಂತೆ,
ಒಂದನೊಂದು ಕಂಡು ಸಂದನಳಿದು ನಿಂದುದು
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವು ತಾನೆ.

ಇದೊಂದು ಪುಟ್ಟ ವಚನವಾದರೂ ಇದರಲ್ಲಿ ಮೂಲ ವಸ್ತು ಇಕ್ಷುದಂಡವಾಗಿ ಆವಿರ್ಭವಿಸಿ ರಸವಾಗಿ ಪರಿಪಾಕಗೊಂಡು ತಂತಾನೆ ಕರಣೆಗಟ್ಟುವ ಅದರ ಅಗುಚೇಗೆ ಮನೋಜ್ಞವಾದ ರೀತಿಯಲ್ಲಿ ಅಭಿವ್ಯಕ್ತಗೊಂಡಿರುವುದನ್ನು ಕಾಣಬಹುದು. ಈ ರೀತಿ ಮಂಚಣ್ಣ ಅನುಭಾವದ ಚರಮ ಸೀಮೆಯನ್ನು ದಾಟಿ ತೋರುತ್ತಾನೆ.

ಮಂಚಣ್ಣಸ್ವಂತಕ್ಕೆ ದೊಡ್ಡ ಪಂಡಿತನಾಗಿದ್ದರೂ ತನ್ನ ವಚನಗಳಲ್ಲಿ ವೇದೋಪ ನಿಷತ್ತುಗಳಿಂದೆತ್ತಿದ ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸುವ ಗೋಜಿಗೇ ಹೋಗಿಲ್ಲ. ಅವನದು ಸಹಜ ಸ್ಪೂರ್ತವಾಣಿ.

ಹೇಱನೊಪ್ಪಿಸಿದವಂಗೆ ಸುಂಕವ ಬೇಡಿಗಾಱು ಮಾಡಲೇತಕ್ಕೆ ?
ಮೊದಲು ತ್ರಿವಿಧವ ಎನಗೆಂದು ಕೊಟ್ಟು
ಮತ್ತೆ ನೀ ಬೇಡಿದಡೆ ನಿನಗಿತ್ತ
ಮತ್ತೆ ಎನ್ನಡಿಯ ನೋಡುವ ಬಿಡುಮುಡಿ ಯಾವುದು ?

ಇಂಥಲ್ಲಿ ಮಂಚಣ್ಣನ ಅನುಭಾವ ಮಾಗಿ ಪಕ್ವಗೊಳ್ಳುತ್ತಿರುವುದುನ್ನು ಗುರುತಿಸ ಬಹುದು.

ನೀ ಹಾಕಿದ ಮುಡಿಗೆ ಎನಗೂ ಸರಿ, ನಿನಗೂ ಸರಿ.
ಹಾಕಿದ ಮುಡಿಗೆ ನಿನ್ನ ಕೇಡು, ಎನ್ನ ಕೇಡು ;
ಗರ್ಭವ ಹೊತ್ತಿರ್ದ ಸ್ತ್ರೀ ಅಳಿದಂತೆ.

ಎಂದು ಹೇಳುವಲ್ಲಿ ಆ ಅನುಭಾವ ಸುಂದರವಾದ ಸಾಹಿತ್ಯವಾಗಿ ಅರಳುತ್ತದೆ. ಅನುಭವಾದ ಸಿದ್ಧರಸದಲ್ಲಿ ಅದ್ದಿ ತೆಗೆದಂತಿರುವ ಇಂಥ ಹಲವು ವಚನಗಳು ಅವನಿಂದ ರಚಿತವಾಗಿವೆ. ಸಾಹಿತ್ಯದ ಅಪೂರ್ವ ಸಮಪದವಾಗಬಲ್ಲಂಥ ಅನೇಕ ಭಾಗಗಳು, ಉಕ್ತಿಗಳು, ಹೋಲಿಕೆಗಳು ಅವನಲ್ಲಿ ಮೇಲಿಂದ ಮೇಲೆ ಕಂಡುಬರುತ್ತವೆ. ಉದಾಹರಣೆಗೆ ಮುಂದಿನ ಕೆಲವನ್ನು ನೋಡಬಹುದು :

ಮಹಾರ್ಣವವುರಿದು ಬೇವಲ್ಲಿ ಕರಗದ ಜಡಕ್ಕೆ ಹೊಡೆಗೆಡುವುದೆ ?
ಕೂಲಿಗೆ ಹಾವ ಕಚ್ಚಿಸಿಕೊಂಡಡೆ ಅದಾರ ಹರಣವಳಿವುದು ?
ಘಟದಲ್ಲಿದ್ದ ಗಂಧ ಅಡಗುವುದಲ್ಲದೆ ಸಂಚಾರವನೆಮ್ಮಿದ ಗಂಧಅಡಗುವುದೇ?
ರತ್ನದ ಗುಂಡೆಂದಡೆ ಶಿರದ ಮೇಲೆ ಹಾಕಿದಡೆ ಒಡೆಯದೆ ?
ಅಱಿಯದವನ ಅರ್ಪಿತ ಶರಧಿಯ ಹೊಯಿದ ಕರವಾಳಿನಂತಾಯಿತ್ತು
ಭಂಗಾರದ ರೂಪಿದ್ದಲ್ಲದೆ ಬಣ್ಣವನವಗವಿಸದು
ಅಂಧಕ ಸಮೂಹದಲ್ಲಿದ್ದು ನಗೆಯ ಕೇಳಿ ತಾ ಕಾಣದೆ ನಗುವಂತೆ.

ಇಂತು ಮಂಚಣ್ಣನ ವಚನಗಳಲ್ಲಿ ಅವನ ಹಲವಾರು ವಿಶೇಷತೆಗಳು ವ್ಯಕ್ತವಾಗಿರುವುದು ಕಂಡುಬರುತ್ತದೆ.

ಈಗಾಗಲೆ ನೋಡಿರುವಂತೆ ಮಂಚಣ್ಣನಲ್ಲಿ ಯಾವುದೂ ಅತಿಯಗಿಲ್ಲ. ಆಚಾರಕ್ಕಿಂತ ಅದರ ಅನುಸಂಧಾನ ಮುಖ್ಯವೆಂದು ಅವನು ಪದೇ ಪದೇ ಹೇಳುತ್ತಿದ್ದರೂ ಅದು ಎಲ್ಲಿಯೂ ಮತಿ ಮೀರಿದ್ದಿಲ್ಲ. ಪಂಡಿತತ್ರಯದಲ್ಲಿ ಒಬ್ಬನಾಗಿದ್ದರೂ ಸಂಸ್ಕೃತದ ವ್ಯಾಮೋಹ ಅವನಿಗೆ ಲೇಶವಾದರೂ ಇಲ್ಲ. ಅದೇ ರೀತಿ ಅವನು ದೀರ್ಘ ವಚನಗಳನ್ನು ಹೆಣೆಯಲೂ ಹೋಗಿಲ್ಲ. ಹೇಳುವುದನ್ನು ಚುಟುಕಾಗಿ ನೇರಗೆರೆ ಎಳದಂತೆ ಹೇಳುವುದು ಅವನ ಗುಣ. ಅವನವು ಆರೆಂಟು ಬೆಡಗಿನ ವಚನಗಳೇನೋ ಇವೆ. ಅವೂ ಕುಡ ಬುದ್ಧಿಯ ಕಸರತ್ತಿನ ಪ್ರದರ್ಶನಕ್ಕಾಗಿ ರಚಿಸಿದವುಗಳಂತೆ ತೋರದೆ ಸಹಜ ಅಭಿವ್ಯಕ್ತಿಗಳಾಗಿ ಗಮ್ಯವೆನಿಸುತ್ತವೆ. ವೀರಶೈವಕ್ಕೆ ಸಹಜವಾದ ಭಕ್ತಿ, ಜ್ಞಾನ, ಕ್ರಿಗಳ ಸಮನ್ವಯ, ಅಷ್ಟಾವರಣ, ಮಲತ್ರಯ ಮುಂತಾದ ತಾತ್ವಿಕಾಂಶಗಳ ವಿವೇಚನೆ ಅವನ ವಚನಗಳಲ್ಲಿ ಪ್ರತಿಪಾದಿತವಾಗಿದ್ದರೂ ಅದರಲ್ಲಿ ವ್ಯಕ್ತವಾಗುವ ಅಪೂರ್ವ ಸಂಯಮ ತಲೆದೂಗಿಸುವಂಥದು. ಭಾವ ತೀವ್ರತೆ ಅವನಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಅದೇ ರೀತಿ ಆಂತರ್ಯದಲ್ಲಿ ನಡೆಯುವ ಒಳತೋಟಿ ಅವನ ವಚನಗಳಲ್ಲಿ ಅಷ್ಟಾಗಿ ಪ್ರಕಟಿತಗೊಳ್ಳುವು ದಿಲ್ಲ. ಆದರೆ ಅಭಿವ್ಯಕ್ತಿಯ ಸಹಜತೆ ಖಚಿತತೆ ಮತ್ತು ಗಂಭೀರತೆಗಳಿಗೆ ಕೊರತೆಯಂತೂ ಎನಿಸದು. ಒಟ್ಟಿನಲ್ಲಿ ಹೇಳಬೇಕೆಂದರೆ ಮಂಚಣ್ಣನ ವಚನಗಳಲ್ಲಿ ಯಾವುದೂ ಅತಿಯಾಗಿಲ್ಲ. ಅದೊಂದು ತೆರನ ಅಪೂರ್ವ ಸೌಮ್ಯ ಗಾಂಭಿರ್ಯಗಳು ಅವನ ವಚನಗಳ ಪ್ರಧಾನ ಗುಣ ಎಂದು ಹೇಳಬಹುದು.