ಶ್ರೀ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ ದಿನಾಂಕ ೭-೧೧-೧೮೯೩ ರಂದು ಜನಿಸಿದರು. ತಂದೆ ಶಿವ ಯೋಗಪ್ಪನವರು ರೇಲ್ವೆ ಖಾತೆಯಲ್ಲಿ ಸ್ಪೇಶನ್ ಮಾಸ್ತರರೆಂದು ಬಳ್ಳಾರಿ ಜಿಲ್ಲೆಯ ಬೇರೆ ಬೇರೆ ಊರುಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸದಾಚಾರ ಸಂಸ್ಕೃತಿ-ಸಂಪನ್ನರೂ ವಿದ್ಯಾಪ್ರೇಮಿಗಳೂ ಆದ ಶಿವಯೋಗಪ್ಪನವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಗಮನವಿತ್ತರು. ಕರ್ನಾಟಕದ ಹೆಮ್ಮೆಯ ನಾಯಕರೆನಿಸಲಿದ್ದ ತಮ್ಮ ಹಿರಿಯ ಮಗ ಶಿವಲಿಂಗಪ್ಪನವರ ಶಿಕ್ಷಣಕ್ಕೆ ಅವರು ಎಲ್ಲ ಅನುಕೂಲತೆಗಳನ್ನೂ ಕಲ್ಪಿಸಿದರು. ಅಂದು ಬಳ್ಳಾರಿ ಜಿಲ್ಲೆಯಲ್ಲಿ ತೆಲುಗು ವಿಶೇಷ ಪ್ರಭಾವಶಾಲಿಯಾಗಿತ್ತು. ಪ್ರಾಥಮಿಕ ಶಿಕ್ಷಣದ ಮಾಧ್ಯಮ ತೆಲುಗೇ ಆಗಿತ್ತು. ಆದುದರಿಂದ ಶಿವಲಿಂಗಪ್ಪನವರ ಶಿಕ್ಷಣವು ತೆಲುಗಿನಲ್ಲಿ ಆರಂಭವಾಯಿತು. ಆದರೆ ಮನೆಯಲ್ಲಿ ತಂದೆಯವರಿಂದ ಕನ್ನಡ-ಸಂಸ್ಕೃತಗಳ ಶಿಕ್ಷಣವೂ ದೊರೆಯುತ್ತಿತ್ತು. ಶ್ರೀ ಬಸವನಾಳರು ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಬಳ್ಳಾರಿಯ ವಾರ್ಡ್ಲಾ ಹೈಸ್ಕೂಲು, ಗದಗ ಮತ್ತು ಧಾರವಾಡ ಹೈಸ್ಕೂಲುಗಳಲ್ಲಿ ಪೂರೈಸಿದರು. ಪ್ರತಿಭಾಸಂಪನ್ನ ವಿದ್ಯಾರ್ಥಿಯಾದುದರಿಂದ ಅವರು ಒಂದೇ ವರ್ಷದಲ್ಲಿ ಎರಡೆರಡರಂತೆ ವರ್ಗಗಳನ್ನು ತೇರ್ಗಡೆಯಾಗುತ್ತ ಬಂದರು. ೧೯೧೦ನೆಯ ಡಿಸೆಂಬರ್ ತಿಂಗಳಿನಲ್ಲಿ ಧಾರವಾಡದಲ್ಲಿ ಮ್ಯಾಟ್ರಿಕ್ ಪಾಸಾದರು. ಮಗನು ಉತ್ತಮ ವರ್ಗದಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸಾದುದನ್ನು ಕಂಡು ಹಿಗ್ಗಿದ ತಂದೆ ಶಿವಯೋಗಪ್ಪನವರು ಅವರನ್ನು ಉಚ್ಚಶಿಕ್ಷಣಕ್ಕಾಗಿ ಪುಣೆಗೆ ಕಳುಹಿಸಿದರು. ಪುಣೆಯ ಡೆಕ್ಕನ್ ಕಾಲೇಜು ಅಂದು ಬಹು ಪ್ರಸಿದ್ಧ ವಿದ್ಯಾಸಂಸ್ಥೆಯಾಗಿತ್ತು. ಅಲ್ಲಿ ಪ್ರವೇಶ ಪಡೆದ ಬಸವನಾಳರು ೧೯೧೨ರಲ್ಲಿ ಇಂಟರ ಪರೀಕ್ಷೆಯನ್ನೂ ೧೯೧೪ರಲ್ಲಿ ಬಿ. ಎ. (ಆನರ್ಸ್) ಪರೀಕ್ಷೆಯನ್ನೂ ಪಾಸಾದರು. ಆದರೆ ಬಿ. ಎ. ವರ್ಗದಲ್ಲಿರುವಾಗಲೇ ತಂದೆ-ತಾಯಿಗಳು ಲಿಂಗೈಕ್ಯರಾದರು. ಇದು ಒಂದು ದೊಡ್ಡ ಆಘಾತ, ಮಧ್ಯಮ ವರ್ಗದ ಕುಟುಂಬದವರಾದ ಬಸವನಾಳರಿಗೆ ನಾಲ್ಕು ಜನ ಸಹೋದರಿಯರು ಮತ್ತು ಒಬ್ಬ ಸಹೋದರ. ಅಷ್ಟು ಜನರನ್ನೂ ಪೋಷಿಸುವ ಹೊಣೆ ಒಂದು ಕಡೆಯಾದರೆ ತಮ್ಮ ಉಚ್ಚಶಿಕ್ಷಣವನ್ನು ಪೂರೈಸಬೇಕೆಂಬ ಹಂಬಲ ಇನ್ನೊಂದು ಕಡೆ. ಅವರು ಧೈರ್ಯಗುಂದದೆ ತಮ್ಮ ಶಿಕ್ಷಣ ಮುಂದುವರಿಸಿದರು. ಮುಂಬೈಯಲ್ಲಿ ವೀರಶೈವ ವ್ಯಾಪಾರಸ್ಥರಿಂದ ನಡೆಸಲ್ಪಡುತ್ತಿದ್ದ ‘ವೀರಶೈವ ಆಶ್ರಮ’ದಲ್ಲಿ ಇವರಿಗೆ ಪ್ರವೇಶ ದೊರೆತುದರಿಂದ ಮುಂಬೈ ವಾಸವು ಸಹ್ಯವೆನಿಸಿತು, ಅವರು ಮುಂಬೈ ವಿಶ್ವವಿದ್ಯಾಲಯದ ಎಂ. ಎ. ವರ್ಗಕ್ಕೆ ಸೇರಿದರಲ್ಲದೆ ಅದರ ಜತೆಯಲ್ಲಿಯೇ ಎಲ್. ಎಲ್. ಬಿ. ಅಭ್ಯಾಸವನ್ನೂ ಕೈಗೊಂಡರು. ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳನ್ನು ಐಚ್ಛಿಕ ವಿಷಯಗಳನ್ನಾಗಿ ಆಯ್ದುಕೊಂಡು ೧೯೧೬ರಲ್ಲಿ ಎಂ. ಎ. ಪರೀಕ್ಷೆಯನ್ನು ಉಚ್ಚಶ್ರೇಣಿಯಲ್ಲಿ ಪಾಸಾದರು. ಇದರಿಂದ ಶ್ರೀ ಬಸವನಾಳರು ಮತ್ತು ಅವರ ಜತೆಯಲ್ಲಿಯೇ ಎಂ. ಎ. ಪಾಸಾದ ಶ್ರೀ ಎಂ. ಆರ್. ಸಾಖರೆಯವರು ವೀರಶೈವ ಸಮಾಜದಲ್ಲಿ ಆ ಪರೀಕ್ಷೆಯನ್ನು ಪಾಸಾದ ಪ್ರಥಮ ವಿದ್ಯಾರ್ಥಿಗಳೆಂದು ಕೀರ್ತಿ-ಗೌರವಗಳಿಗೆ ಪಾತ್ರರಾದರು ಹಾಗೂ ‘ವ್ಹಿಕ್ಟೋರಿಯಾ ಜ್ಯುಬಿಲಿ’ ಪಾರಿತೋಷಕವನ್ನು ಇವರಿಬ್ಬರೂ ಒಟ್ಟಾಗಿ ಪಡೆದರು. ಹೆಚ್ಚು ಗುಣಗಳನ್ನು ಸಂಪಾದಿಸಿದ್ದರಿಂದ ಬಹುಮಾನದ ಪೂರ್ಣ ಮೊತ್ತವಾದ ೧೨೦೦ ರೂ. ಗಳು ಇವರಿಗೇ ಸಲ್ಲುವಂತಿದ್ದರೂ ತಮ್ಮ ಸಹಪಾಠಿಯಾಗಿದ್ದ ಸಾಖರೆಯವರೊಂದಿಗೆ ಹಂಚಿಕೊಳ್ಳಲು ಶ್ರೀ ಬಸವನಾಳರು ತಾವಾಗಿಯೇ ಮುಂದೆ ಬಂದರು. ಆ ವಿಷಯಕ್ಕೆ ಬಹುಮಾನ ವಿತರಕರಿಗೆ ಒಂದು ವಿನಂತಿ ಪತ್ರ ಬರೆದು ತಮ್ಮ ಔದಾರ್ಯ ಗುಣವನ್ನು ಪ್ರಕಟಿಸಿದರು.

ಎಂ. ಎ. ಪದವಿ ಪಡೆದುದರಿಂದ ದೊಡ್ಡ ಸಂಬಳದ ನೌಕರಿಯೊಂದನ್ನು ಹಿಡಿದು ವೈಭವದ ಜೀವನ ನಡೆಸುವುದು ಶ್ರೀ ಬಸವನಾಳರಿಗೆ ಸಾಧ್ಯವಿತ್ತು. ಅಂದಿನ ದಿನಗಳಲ್ಲಿ ಅಂಥ ದೊಡ್ಡ ಪರೀಕ್ಷೆ ಪಾಸಾದವರನ್ನು ಹುಡುಕುತ್ತ ದೊಡ್ಡ ನೌಕರಿಗಳು ಮನೆ ಬಾಗಿಲಿಗೇ ಬರುತ್ತಿದ್ದವು. ಆದರೆ ಅವರ ಜೀವನ ಧ್ಯೇಯ ಬೇರೆಯೇ ಆಗಿತ್ತು. ಪುಣೆ-ಮುಂಬೈಗಳಲ್ಲಿರುವಾಗಲೇ ಅವರ ಹೃದಯದಲ್ಲಿ ಪುರೋಗಾಮೀ ವಿಚಾರಗಳ ಅಂಕುರಾರ್ಪಣವಾಗಿತ್ತು. ಪುಣೆಯ ‘ಡೆಕ್ಕನ್ ಎಜ್ಯುಕೇಶನ್ ಸೊಸಾಯಟಿ’ಯ ಮಾದರಿಯಲ್ಲಿ ತಾವೂ ಒಂದು ಶಿಕ್ಷಣ ಸಂಸ್ಥೆಯನ್ನು ಉತ್ತರ ಕರ್ನಾಟಕದಲ್ಲಿ ಪ್ರಾರಂಭಿಸಬೇಕೆಂಬ ಮಹತ್ವಾಕಾಂಕ್ಷೆ ಶ್ರೀ ಬಸವನಾಳರಿಗೂ ಅವರ ಇನ್ನುಳಿದ ಕೆಲ ಸಹಾಧ್ಯಾಯಿಗಳಿಗೂ ಉಂಟಾಗಿತ್ತು. ಅವರೆಲ್ಲ ಸೇರಿ ಉತ್ತರ ಕರ್ನಾಟಕದ ಭಾಗ್ಯಜ್ಯೋತಿ ಎಂದು ಹೆಸರಾದ ಕೆ. ಎಲ್. ಇ. ಸಂಸ್ಥೆಯನ್ನು ಕಟ್ಟುವ ಕಾರ್ಯಕ್ಕೆ ಬದ್ಧಕಂಕಣರಾದರು. ಶ್ರೀ ಪಂಡಿತಪ್ಪ ಚಿಕ್ಕೋಡಿ, ಎಚ್.ಎಫ್. ಕಟ್ಟೀಮನಿ ಮುಂತಾದ ಇತರ ಆರು ಜನ ಸಂಗಾತಿಗಳೊಂದಿಗೆ ಅವರು ೧೯೧೬ ರಲ್ಲಿ ‘ಲಿಂಗಾಯತ ಎಜುಕೇಶನ್ ಸೊಸಾಯಿಟಿ’ ಎಂಬ ಹೆಸರಿನಿಂದ ಆ ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರು. ಅದರ ಮುಖಾಂತರ ಒಂದು ಹೈಸ್ಕೂಲನ್ನು ಪ್ರಾರಂಭಿಸಿ, ಅಂದು ವೀರಶೈವ ಸಮಾಜದ ಏಳಿಗೆಗಾಗಿ ಆಹೋರಾತ್ರಿ ಶ್ರಮಿಸುತ್ತಿದ್ದ ಗಣ್ಯ ಹಿರಿಯರಾದ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಮತ್ತು ಶ್ರೀ ಅರಟಾಳ ರುದ್ರಗೌಡರ ಸ್ಮರಣಾರ್ಥ ಅದಕ್ಕೆ ‘ಗಿಲಗಂಚಿ ಅರಟಾಳ ಹೈಸ್ಕೂಲ’ ಎಂದು ನಾಮಕರಣ ಮಾಡಿದರು. ಕೆಲವೇ ದಿನಗಳಲ್ಲಿ ಅದು ತುಂಬ ಪ್ರಸಿದ್ಧಿಯಾಯಿತು. ಅದೇ ರೀತಿ ಸಂಸ್ಥೆಯ ಪರವಾಗಿ, ೧೯೨೨ರಲ್ಲಿ ಧಾರವಾಡದಲ್ಲಿ ಒಂದು ಹೈಸ್ಕೂಲು ಮತ್ತು ೧೯೩೩ರಲ್ಲಿ ಬೆಳಗಾವಿಯಲ್ಲಿ ‘ಲಿಂಗರಾಜ ಕಾಲೇಜು’ಗಳು ಸ್ಥಾಪನೆಯಾದವು. ಬಸವನಾಳರು ಇದರ ಬೇರೆ ಬೇರೆ ಸಂಸ್ಥೆಗಳ ಪ್ರಾರಂಭಿಕ ಹಂತದಲ್ಲಿ ಸಂಘಟನಾ ಕಾರ್ಯ ನಿರ್ವಹಿಸಿದ್ದಲ್ಲದೆ ಅವುಗಳಲ್ಲಿ ಶಿಕ್ಷಕರೆಂದು, ಪ್ರಾಧ್ಯಾಪಕರೆಂದು, ಪ್ರಿನ್ಸಿಪಾಲ ರೆಂದು ಅಮೂಲ್ಯ ಸೇವೆ ಸಲ್ಲಿಸಿದರು. ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ಕನ್ನಡ ಮುಂತಾದ ವಿಷಯಗಳನ್ನು ಅತ್ಯಂತ ಶ್ರದ್ಧೆಯಿಂದ ಬೋಧಿಸಿದರು. ಇವರ ಮತ್ತು ಇನ್ನಿತರ ಸಂಗಾತಿಗಳ ಶ್ರದ್ಧೆ-ಪರಿಶ್ರಮಗಳ ಫಲವಾಗಿ ಕೆ. ಎಲ್. ಇ. ಸಂಸ್ಥೆ ಬಹು ಬೇಗ ಪ್ರವರ್ಧಮಾನಕ್ಕೆ ಬಂತು. ೧೯೪೮ರಲ್ಲಿ ಸಂಸ್ಥೆಯ ಹೆಸರನ್ನು ‘ಕರ್ನಾಟಕ ಲಿಬರಲ್ ಎಜ್ಯುಕೇಶನ್ ಸೊಸಾಯಿಟಿ’ ಎಂದು ಬದಲಾಯಿಸಲಾಯಿತು. ಅಲ್ಲದೆ ಕಾಲಕ್ಕೆ ತಕ್ಕಂತೆ ಸಂಸ್ಥೆಯ ಕಾರ್ಯಕಲಾಪಗಳಲ್ಲಿ, ಸಂವಿಧಾನದಲ್ಲಿ ಮಹತ್ವಪೂರ್ಣವಾದ ಸುಧಾರಣೆಗಳು ಆಗುತ್ತಲೇ ಬಂದವು. ಅವೆಲ್ಲವುಗಳ ಹಿನ್ನೆಲೆಯಲ್ಲಿ ಪ್ರೊ. ಬಸವನಾಳರ ಕರ್ತೃತ್ವಶಕ್ತಿಯ ಪಾಲು ಯಾವಾಗಲೂ ಇದ್ದೇ ಇತ್ತು.

ಪುಣೆ-ಮುಂಬೈಗಳ ಮರಾಠಿ ಮುಖಂಡರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತುವುದು ಬೇಡವಾಗಿತ್ತು. ಆದ್ದರಿಂದ ಅವರು ಮೊದಲಿ ನಿಂದಲೂ ಎಲ್ಲ ಹಂತಗಳಲ್ಲಿ ಕರ್ನಾಟಕದ ಈ ಭಾಗವನ್ನು ಹತ್ತಿಕ್ಕುತ್ತಲೇ ಬಂದಿದ್ದರು. ಅಂಥ ಸನ್ನಿವೇಶದಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜಿನ ಸ್ಥಾಪನೆಗೆ ಅವರು ಹಲವಾರು ಅಡ್ಡಿಗಳನ್ನು ಒಡ್ಡುತ್ತಲೇ ಇದ್ದರು. ಆದರೆ ಶ್ರೀ ಬಸವನಾಳರು ಮತ್ತು ಅವರ ಸಂಗಾತಿಗಳು ಪಟ್ಟು ಬಿಡದೆ, ಸತತ ಪ್ರಯತ್ನಪಟ್ಟು ಕಾಲೇಜಿನ ಸ್ಥಾಪನೆಗೆ ಅನುಮತಿ ದೊರಕಿಸುವಲ್ಲಿ ಯಶಸ್ವಿಯಾದರು.

ಬೆಳಗಾವಿ, ಸೊಲ್ಲಾಪುರ ಮತ್ತು ಬಳ್ಳಾರಿಗಳು ಅಚ್ಚ ಕನ್ನಡ ಪ್ರದೇಶಗಳಾದರೂ ಅವುಗಳ ಮೇಲೆ ಮರಾಠಿಗರು ಮತ್ತು ತೆಲುಗರು ಸತತವಾಗಿ ಅಭಿಯೋಗ ನಡೆಸುತ್ತಲಿದ್ದರು. ಅದನ್ನು ಮನಗಂಡಿದ್ದ ಕೆ.ಎಲ್.ಇ. ಸಂಸ್ಥೆಯವರು ಇಲ್ಲೆಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ಕನ್ನಡವನ್ನು ರಕ್ಷಿಸುವ ಗುರಿ. ಇಟ್ಟುಕೊಂಡಿದ್ದರು. ಸೊಲ್ಲಾಪುರದಲ್ಲಿ ತೆರೆದ ಹೈಸ್ಕೂಲಿಗೆ ಶ್ರೀ ಬಸವನಾಳರೇ ಪ್ರಿನ್ಸಿ ಪಾಲರೆಂದು ನಿಯಮಿತರಾದರು. ಆ ಸಂಸ್ಥೆಗೆ ಭದ್ರಬುನಾದಿ ಹಾಕಲು ಅವರ ಪೂರ್ಣ ಪರಿಶ್ರಮ ವಹಿಸಿದರು. ಬೆಳಗಾವಿಯು ಇಂದು ಕರ್ನಾಟಕದಲ್ಲಿ ಉಳಿದಿದ್ದರೆ ಅದರ ಮುಖ್ಯ ಶ್ರೇಯಸ್ಸು ಕೆ. ಎಲ್. ಇ. ಸಂಸ್ಥೆಗೆ ಸಲ್ಲುತ್ತದೆ. ಇಂಥ ಹಲವಾರು ವಿಧಾಯಕ ಕಾರ್ಯಗಳಲ್ಲಿ ಶ್ರೀ ಬಸವನಾಳರು ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಉತ್ತರ ಕರ್ನಾಟಕದಷ್ಚೇ ಅಲ್ಲದೆ ಇಡೀ ಕರ್ನಾಟಕದಲ್ಲಿ ಏಕೀಕರಣ ಚಳುವಳಿಯನ್ನು ಪ್ರಾರಂಭಿಸಿದ ಸಂಸ್ಥೆ. ಮೊದಲಿನಿಂದ ಕೊನೆಯತನಕ ಏಕೀಕರಣದ ಹೋರಾಟವನ್ನು ಎಡೆಬಿಡದೆ ನಡೆಸಿಕೊಂಡು ಬಂದ ಶ್ರೇಯಸ್ಸು ಅವರದು. ಶ್ರೀ ಬಸವನಾಳರು ಈ ವಿದ್ಯಾವರ್ಧಕ ಸಂಘದ ಮುಖಾಂತರವೂ ಸಾಕಷ್ಟು ಕಾರ್ಯ ಮಾಡಿದ್ದಾರೆ. ೧೯೨೩ ರಲ್ಲಿಯೇ ಆಜೀವ ಸದಸ್ಯರಾಗಿ ಸೇರಿ ಅದರ ಕಾರ್ಯಕಾರೀ ಮಂಡಲದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೪೦ರಲ್ಲಿ ನಡೆದ ಸಂಘದ ಸುವರ್ಣಮಹೋತ್ಸವವು ಯಶಸ್ವಿ ಯಾಗಲು ಅವರು ತುಂಬಾ ಹೆಣಗಿದರು. ಅಂತೆಯೇ ಸಂಘದ ಕಟ್ಟಡ ಪೂರ್ಣ ಗೊಳ್ಳಲು ಬಹಳಷ್ಟು ಶ್ರಮಿಸಿದವರಲ್ಲಿ ಒಬ್ಬರು. ಅದರ ಮುಖಾಂತರ ನಿಯತಕಾಲಿಕೆಗಳನ್ನೂ ಹಳಗನ್ನಡದ ಪ್ರೌಡ ಗ್ರಂಥಗಳನ್ನೂ ಹೊರತಂದು ಕನ್ನಡಕ್ಕೆ ಚಿರಸ್ಮರಣೀಯ ಸೇವೆ ಸಲ್ಲಿಸಿದರು.

೧೯೩೮ ರಲ್ಲಿ ಕರ್ನಾಟಕ ಪ್ರಾಚ್ಯ ಸಂಶೋಧನ ಸಂಸ್ಥೆ ಸ್ಥಾಪಿತವಾದಾಗ ಇವರು ಅದರ ಸದಸ್ಯರೆಂದು ಸರಕಾರದಿಂದ ನಿಯಮಿತರಾದರು. ‘ಶಬ್ದಾನು ಶಾಸನ ಪ್ರಕಾಶಿಕೆ’ ಮತ್ತು ‘ಕಾವ್ಯಾವಲೋಕನ’ಗಳನ್ನು ಈ ಸಂಸ್ಥೆಯ ಪರವಾಗಿ ವಿದ್ಯಾವರ್ಧಕ ಸಂಘದಲ್ಲಿ ಪ್ರಕಟಿಸಿದರು.

ಪ್ರೊ. ಸ.ಸ. ಮಾಳವಡರ ಜತೆಗೂಡಿ A Case for Karnataka University) ಎಂಬ ಪುಸ್ತಿಕೆಯನ್ನು ರಚಿಸಿ ಕರ್ನಾಟಕ ವಿಶ್ವವಿದ್ಯಾಲಯದ ಅಗತ್ಯತೆಯನ್ನು ಒಳ್ಳೆಯ ಸಮರ್ಥವಾಗಿ ಪ್ರತಿಪಾದಿಸಿದರು. ಅದರಿಂದ ಎಲ್ಲರ ಮೆಚ್ಚುಗೆಗೂ ಪಾತ್ರರಾದರು. ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶದಿಂದ ರಚಿಸಲಾದ ಸಮಿತಿಗೆ ಶ್ರೀ ಬಸವನಾಳರು ಗಣ್ಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅಂದಿನ ಶಿಕ್ಷಣ ಮಂತ್ರಿಗಳಾಗಿದ್ದ ಶ್ರೀ ಬಿ. ಜಿ. ಖೇರರನ್ನು ಕಾಣಲು ಹೋದ ನಿಯೋಗದ ಮುಖಂಡತ್ವವನ್ನು ಅವರೇ ವಹಿಸಿದ್ದರು. ನಿಯೋಗವು ಯಶಸ್ವಿಯಾಗಿ ವಿಶ್ವವಿದ್ಯಾಲಯ ಸ್ಥಾಪನೆಯ ದಾರಿ ಸುಗಮವಾಗಿತು.

ಧಾರವಾಡದ ಕರ್ನಾಟದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಏಳಿಗೆಗೂ ಅವರು ವಿಶೇಷವಾಗಿ ದುಡಿದರು. ಅದರ ಪರವಾಗಿ ೧೯೩೦ ರಲ್ಲಿ ”ಸಾಹಿತ್ಯ ಸಮಿತಿ”ಯನ್ನು ಪ್ರಾರಂಭಿಸಿ ಅದರ ಕಾರ್ಯಾಧ್ಯಕ್ಷರಾದರು. ಈ ಸಾಹಿತ್ಯ ಸಮಿತಿಯ ಮುಖಾಂತರ ಹಲವಾರು ಶ್ರೇಷ್ಠ ಕೃತಿಗಳನ್ನು ಬೆಳಕಿಗೆ ತಂದರಲ್ಲದೆ ”ಸಾಹಿತ್ಯ ಸಮಿತಿ ಪತ್ರಿಕೆ” ಎಂಬ ಕನ್ನಡ ಇಂಗ್ಲಿಷ್ ಭಾಷೆಯ ನಿಯತಕಾಲಿಕೆಯನ್ನು ಪ್ರಕಟಿಸ ತೊಡಗಿದರು.

ಮೇಲೆ ವಿವರಿಸಿದ ಕಾರ್ಯಕಲಾಪಗಳಲ್ಲದೆ ಅಖಿಲ ಭಾರತ ವೀರಶೈವ ಮಹಾಸಭೆ, ಅಖಿಲ ಭಾರತ ವೀರಶೈವ ತರುಣಸಂಘ, ಧಾರವಾಡದ ಮುರುಘಾಮಠದ ಕಾರ್ಯಕಲಾಪಗಳು ಮುಂತಾದ ವೀರಶೈವ ಸಮಾಜ ಸಂಘಟನೆಯ ಅಸಂಖ್ಯ ಕಾರ್ಯಕಲಾಪಗಳಲ್ಲಿ ಅವರು ಅವಿಶ್ರಾಂತವಾಗಿ ದುಡಿದರು. ೧೯೪೨ರಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ಜರುಗಿದ ವೀರಶೈವ ತರುಣ ಸಂಘದ ಸಮ್ಮೇಲನಕ್ಕೆ ಅಧ್ಯಕ್ಷರೆಂದು ಆಯ್ಕೆಯಾದರು. ಅಲ್ಲದೆ ೧೯೩೯ ಹುಬ್ಬಳ್ಳಿಯಲ್ಲಿ ಜರುಗಿದ ಅಖಿಲಭಾರತ ವೀರಶೈವ ಮಹಾಸಭೆಯು ಅವರನ್ನು ಅಧ್ಯಕ್ಷರನ್ನಾಗಿ ಆರಿಸಿ ತನ್ನ ಗೌರವ ವ್ಯಕ್ತಪಡಿಸಿತು.

೧೯೩೦ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದವರು ಇವರನ್ನು ಮುಖ್ಯ ಅತಿಥಿ ಎಂದು ಆಮಂತ್ರಿಸಿದ್ದರು. ಆ ಸಂದರ್ಭದಲ್ಲಿಯೂ ಇವರು ಕರ್ನಾಟಕ ಎಕೀಕರಣ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಆವಶ್ಯಕತೆಯನ್ನು ಪ್ರತಿಪಾದಿಸಿದರು. ೧೯೪೦ ರಲ್ಲಿ ಧಾರವಾಡದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಲನದ ಸ್ವಾಗತಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಅದೇ ರೀತಿ ೧೯೪೫ ರಲ್ಲಿ ರಬಕವಿ ಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷರೆಂದು ಸರ್ವಾನುಮತದಿಂದ ಆಯ್ಕೆಯಾದರು. ಮೇಲಿನ ಎರಡೂ ಸಂದರ್ಭಗಳಲ್ಲಿ ಕನ್ನಡನಾಡು, ಭಾಷೆ ಮತ್ತು ಅದರ ಸಾಹಿತ್ಯವನ್ನು ಕುರಿತಂತೆ ಮಂಡಿಸಿದ ಅವರ ವಿಚಾರಗಳು ಮತ್ತು ಯೋಜನೆ ಗಳು ಅವರಲ್ಲಿದ್ದ ಅಪೂರ್ವ ದೂರದೃಷ್ಟಿಯನ್ನೂ ಕನ್ನಡದ ಬಗೆಗಿದ್ದ ಕಳಕಳಿಯನ್ನೂ ಬಹು ಸಮರ್ಥವಾಗಿ ವ್ಯಕ್ತಪಡಿಸುತ್ತವೆ. ಅವುಗಳಲ್ಲಿ ಹಲವಾರು ವಿಚಾರಗಳು ಇಂದು ಕೂಡ ಕನ್ನಡಿಗರಿಗೆಲ್ಲ ಮಾರ್ಗದರ್ಶಕವಾಗಿವೆ.

ಈ ರೀತಿ ಪ್ರೊ. ಬಸವನಾಳರು ಅಂದಿನ ಕರ್ನಾಟಕದ-ವಿಶೇಷವಾಗಿ ಉತ್ತರ ಕರ್ನಾಟಕದ-ಹಲವಾರು ಸಂಘ-ಸಂಸ್ಥೆಗಳಲ್ಲಿ ಒಂದಿಲ್ಲೊಂದು ರೀತಿಯ ಕಾರ್ಯಮಾಡುತ್ತಲೇ ಇದ್ದರು. ಮುಂಬೈ ವಿಶ್ವವಿದ್ಯಾಲಯದ ಸಿನೇಟಿನ ಸದಸ್ಯರಾಗಿದ್ದುದಲ್ಲದೆ ಅವರ ಫೆಲೊ ಆಗುವ ಗೌರವಕ್ಕೂ ಅವರು ಪಾತ್ರರಾಗಿದ್ದರು. ಮೈಸೂರು. ಮುಂಬೈ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಪರೀಕ್ಷಕರೆಂದು ಹಲವಾರು ವರ್ಷಗಳ ಕಾಲ ಕೆಲಸ ಮಾಡಿದರು. ವಿಶ್ವವಿದ್ಯಾಲಯಗಳ ಹಲವಾರು ಸಮಿತಿಗಳಲ್ಲಿ ಸದಸ್ಯರೆಂದು ಕಾರ್ಯ ನಿರ್ವಹಿಸಿದರು. ವರ್ನಾಕ್ಯುಲರ್ ಪಠ್ಯಪುಸ್ತಕ ಸಮಿತಿ ಮತ್ತು ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ಸಮಿತಿಗಳ ಸದಸ್ಯರೂ ಆಗಿದ್ದರು. ಆ ಮೂಲಕ ಕನ್ನಡದಲ್ಲಿ ಒಳ್ಳೊಳ್ಳೆಯ ಪಠ್ಯಪುಸ್ತಕಗಳು ರಚನೆಗೊಳ್ಳಲು ಕಾರಣರೆನಿಸಿದರಲ್ಲದೆ ತಾವೇ ಸ್ವತಃ ದಿ. ಹಲಗಲಿ ಹಂಪಯ್ಯನವರೊಡನೆ ಜತೆಗೂಡಿ ‘ಇಂಗ್ಲೆಂಡಿನ ಅರ್ವಾ ಚೀನ ಇತಿಹಾಸ’ ಮತ್ತು ‘ಹಿಂದುಸ್ಥಾನದ ಇತಿಹಾಸ’ ದಂತಹ ಪಠ್ಯ ಪುಸ್ತಕಗಳನ್ನು ರಚಿಸಿದರು. ಹೀಗೆ ಅಂದಿನ ಕರ್ನಾಟಕದ ಸಾರ್ವಜನಿಕ ರಂಗದಲ್ಲಿ ಯಾವತ್ತೂ ಮುಖ್ಯ ಪಾತ್ರವಹಿಸುತ್ತ ಕರ್ನಾಟಕ ಮತ್ತು ಕನ್ನಡ ಸಾಹಿತ್ಯಗಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾದರು. ‘ಶ್ರೀ ಬಸವನಾಳರು ಸದಸ್ಯರೋ, ಕಾರ್ಯದರ್ಶಿಯೋ ಅಥವಾ ಅಧ್ಯಕ್ಷರೋ ಆಗಿರದ ಯಾವ ಸಂಘ-ಸಂಸ್ಥೆಗಳೂ ಅಂದು ಈ ಭಾಗದಲ್ಲಿ ಇರಲಿಲ್ಲ’ ವೆಂಬ ಮಾತು ಅವರ ಕಾರ್ಯಚಟುವಟಿಕೆಗಳ ಬೃಹತ್ಸ್ವರೂಪವನ್ನು ತೋರಿಸಿಕೊಡುತ್ತದೆ.

ಬಸವನಾಳರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯಗಳಲ್ಲಿ ಆಳವಾದ ಪರಿಶ್ರಮ ವಿತ್ತೆಂದು ಬೇರೆ ಹೇಳುವುದೇ ಬೇಡ. ಅವರು ಸಂಪಾದಿಸಿದ ಕೃತಿಗಳನ್ನು ನೋಡಿದರೆ ಕನ್ನಡ ಗ್ರಂಥ ಸಂಪಾದನ ಕ್ಷೇತ್ರವು ಅವರಿಂದ ಒಂದು ನಿಶ್ಚಿತ ಹಂತವನ್ನು ತಲುಪಿ ತೆಂಬುದು ಸ್ಪಷ್ಟಪಡುತ್ತದೆ. ಆದುದರಿಂದ ಇಲ್ಲಿ ಅವರ ಸಾಹಿತ್ಯಕ ಚಟುವಟಿಕೆಗಳನ್ನು ಸಂಗ್ರಹವಾಗಿ-ಆದರೂ ಪ್ರತ್ಯೇಕವಾಗಿ ನೋಡುವುದು ಅವಶ್ಯಕ.

ಈಗಾಗಲೇ ಹೇಳಿದಂತೆ, ೧೯೧೮ ರಲ್ಲಿ ಬೆಳಗಾವಿಯಲ್ಲಿ ಸೇರಿದ ವೀರಶೈವ ತರುಣ ಸಂಘದ ಸಮ್ಮೇಲನದಲ್ಲಿ ಒಂದು ಮಾಸಿಕವನ್ನು ಪ್ರಾರಂಭಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದೇ ಪ್ರಕಾರ ‘ಪ್ರಬೋಧ’ವೆಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ನಡುವೆ ಕೆಲಕಾಲ ಅದರ ಪ್ರಕಟನೆ ನಿಂತಿತ್ತಾದರೂ ಅದು ೧೯೨೭ರ ವರೆಗೆ ಪ್ರಕಟವಾಗುತ್ತಲಿತ್ತು. ಅದರ ಸಂಪಾದಕರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಬಸವನಾಳರು ತಮ್ಮ ಲೇಖನ ವ್ಯವಸಾಯವನ್ನು ಪ್ರಾರಂಭಿಸಿದರೆನ್ನ ಬಹುದು. ಅಂದಿನಿಂದ ಅವರ ಲೇಖನ ವೃತ್ತಿ ವರ್ಧಿಸುತ್ತಲೇ ಹೋಯಿತು.

ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪರವಾಗಿ ‘ಸಾಹಿತ್ಯ ಸಮಿತಿ’ಯನ್ನು ಪ್ರಾರಂಭಿಸಿದಾಗ ಅದರ ಮುಖಾಂತರ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಸಮಿತಿಯು ‘ಸಾಹಿತ್ಯಸಮಿತಿ ಪತ್ರಿಕೆ’ ಎಂಬ ತ್ರೈಮಾಸಿಕವನ್ನು ಹೊರಡಿ ಸಲನುವಾದಾಗ ಬಸವನಾಳರು ಅದರ ಸಂಪಾದಕರಲ್ಲೊಬ್ಬರಾದರು. ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳು ಅದರಲ್ಲಿ ಪ್ರಕಟವಾಗತೊಡಗಿದವು. ಅದಲ್ಲದೆ ಸಾಹಿತ್ಯ ಸಮಿತಿಯು ಪ್ರಾಚೀನ ವೀರಶೈವ ಕೃತಿಗಳನ್ನು ಸಂಶೋಧಿಸಿ ಪ್ರಕಟಿಸುವ ಯೋಜನೆ ಹಾಕಿಕೊಂಡಿತು. ಅದರ ಮುಖಾಂತರ, ವಿರೂಪಾಕ್ಷಪಂಡಿತನ ಬೃಹತ್ಕಾವ್ಯವಾದ ಚೆನ್ನಬಸವಪುರಾಣ, ಚಾಮರಸನ ಪ್ರಭುಲಿಂಗಲೀಲೆ, ಷಡಕ್ಷರ ಕವಿಯ ಶಬರ ಶಂಕರ ವಿಲಾಸ, ಬಸವಣ್ಣನವರ ಷಟ್-ಸ್ಥಳದ ವಚನಗಳು, ಹರಿ ಹರನ ರಕ್ಷಾಶತಕ ಮತ್ತು ಪಂಪಾಶತಕ ಮೊದಲಾದ ಅಮೂಲ್ಯ ಕೃತಿಗಳು ಬಸವ ನಾಳರಿಂದ ಸಂಶೋಧಿಸಲ್ಪಟ್ಟು ಪ್ರಕಟವಾದವು. ಅದರಲ್ಲೂ ಅವರು ಸಂಪಾದಿಸಿದ ಚೆನ್ನಬಸವ ಪುರಾಣ, ಪ್ರಭುಲಿಂಗಲೀಲೆ, ಶಬರ ಶಂಕರ ವಿಲಾಸ ಮತ್ತು ಬಸವಣ್ಣನ ವರ ಷಟ್-ಸ್ಥಳದ ವಚನಗಳು ಅಂದಿನಿಂದ ಇಂದಿನವರೆಗೂ ವೀರಶೈವ ಸಾಹಿತ್ಯ ಸಂಪಾದನೆಯ ಕ್ಷೇತ್ರದಲ್ಲಿ ಅತ್ಯುತ್ತಮ ಮಾದರಿಗಳಾಗಿ ನಿಂತಿವೆ. ಆ ಕಾಲದ ವೀರಶೈವ ಕೃತಿಗಳ ಸಂಪಾದನಾ ಕಾರ್ಯ ಸಂಪಾದನಾ ಶಾಸ್ತ್ರಶುದ್ಧಿಯಿಲ್ಲದೆ ಸೊರ ಗಿದೆ. ಆದರೆ ಬಸವನಾಳರ ಸಂಪಾದನೆಗಳು ಎಲ್ಲ ರೀತಿಯಿಂದಲೂ ಬಹು ಅಚ್ಚು ಕಟ್ಟಾಗಿವೆ. ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪರವಾಗಿ ಶ್ರೀ ಕೇಪು ಶಂಕರನಾರಾಯಣರೊಡನೆ, ಸಂಪಾದಿಸಿ ಪ್ರಕಟಿಸಿದ ಕಾವ್ಯಾವಲೋಕನ ಮತ್ತು ಶಬ್ದಾನುಶಾಸನ ಪ್ರಣಾಳಿಕೆಗಳಂತಹ ಕೃತಿಗಳು ವಿದ್ಯಾವರ್ಧಕ ಸಂಘದ ಈವರೆಗಿನ ಪ್ರಕಟನೆಗಳಲ್ಲೆಲ್ಲ ಮುಕುಟಪ್ರಾಯವಾಗಿವೆ. ಇವಲ್ಲದೆ ಸರ್ಪಭೂಷಣ ಶಿವಯೋಗಿಗಳ ಕೈವಲ್ಯ ಕಲ್ಪವಲ್ಲರಿ, ಮೈಲಾರದ ಬಸವಲಿಂಗ ಶರಣರ ಕೃತಿಗಳು, ಬಾಲಲೀಲಾ ಮಹಾಂತ ಶಿವಯೋಗಿಗಳ ಕೈವಲ್ಯದರ್ಪಣ ಮುಂತಾದವುಗಳನ್ನು ಅವರು ಸಂಪಾದಿಸಿ ಅವುಗಳಿಗೆ ಬರೆದಿರುವ ಪ್ರಸ್ತಾವನೆಗಳು ತುಂಬ ಬೆಲೆಯುಳ್ಳವಾಗಿವೆ. ಇವುಗಳಲ್ಲೆಲ್ಲ ಅವರ ಮತಾಭಿಮಾನವನ್ನು ಮೀರಿ ನಿಲ್ಲುವ ಇತಿಹಾಸ ಸಂಶೋಧಕನ ಮೂಲಗಾಮೀ ಚಿಕಿತ್ಸಕ ಬುದ್ಧಿಯನ್ನೂ ಬಹುಕಾಲ ಮನ್ನಣೆ ಗರ್ಹವಾದ ಗಟ್ಟಿ ಅಭಿಪ್ರಾಯಗಳನ್ನೂ ಕಾಣಬಹುದು.

ಮೇಲಿನ ಕೃತಿಗಳಲ್ಲದೆ ಅವರು ‘ಬಸವ ತತ್ವ ಪ್ರಕಾಶ’ದಂತಹ ಮಹತ್ವದ ಕೃತಿಗಳನ್ನು ಸಂಪಾದಿಸಿದ್ದಾರೆ. ಹಲವಾರು ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ‘ಇತಿಹಾಸ’, ‘ಹರಿಹರನ ಗಿರಿಜಾ ಕಲ್ಯಾಣ’, ‘ವೀರಶೈವದ ಹುಟ್ಟು-ಬೆಳವಣಿಗೆ’ ಯಂತಹ ಶಾಶ್ವತ ಮೌಲ್ಯದ ಲೇಖನಗಳನ್ನು ಬರೆದಿದ್ದಾರೆ. ‘ಕನ್ನಡ ಮುನ್ನಡೆವ ಬಗೆ’, ‘ವೀರಶೈವ-ಇಂದು ಮುಂದು’, ‘ಕನ್ನಡ ಸಾಹಿತ್ಯ ಸಮ್ಮೇಲನ, ‘ಧಾರವಾಡ ಸ್ವಾಗತಾಧ್ಯಕ್ಷ ಭಾಷಣ’ ಮೊದಲಾದ ವಿಚಾರ ಪರಿಪ್ಲುತ ಭಾಷಣಗಳನ್ನು ಕನ್ನಡ ಕುಲಕ್ಕೆ ಇತ್ತಿದ್ದಾರೆ. ‘ಕನ್ನಡ ಮುನ್ನಡೆವ ಬಗೆ’ಯಲ್ಲಿ ಕನ್ನಡ ನಾಡು, ಭಾಷೆ, ಅದರ ಪ್ರಾಚೀನ ಸಾಹಿತ್ಯ, ಅದರ ಮೌಲ್ಯಗಳ ಮಹತಿ, ಅಂದಿನ ಕರ್ನಾಟಕ-ಕನ್ನಡಗಳ ಸ್ಥಿತಿ, ಭಾವೀ ಕನ್ನಡ ಸಾಹಿತ್ಯದ ಸ್ವರೂಪ-ಯೋಜನೆಗಳು ಈ ಮೊದಲಾದ ಅವರು ವ್ಯಕ್ತಪಡಿಸಿರುವ ವಿಚಾರಗಳನ್ನು ನೋಡಿದರೆ ಅವರಲ್ಲಿ ದೃಷ್ಟಾರನ ದೃಷ್ಟಿಯಿದ್ದುದು ಗೋಚರಿಸುತ್ತದೆ.

ಅಂದು ಕನ್ನಡ ಭಾಷೆಗೆ ಬೃಹತ್ ಪ್ರಮಾಣದ ನಿಘಂಟಿನ ಅವಶ್ಯಕತೆಯಿದ್ದುದನ್ನು ಮನಗಂಡಿದ್ದ ಅವರು ಅಂಥ ಒಂದು ಯೋಜನೆಯನ್ನೂ ಹಾಕಿಕೊಂಡು ಆ ದಿಶೆಯಲ್ಲಿ ಸಾಕಷ್ಟು ಕಾರ್ಯವೆಸಗಿದ್ದರು. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಮುಖಾಂತರ ಭೀಮ ಕವಿಯ ‘ಬಸವ ಪುರಾಣ’ವನ್ನು ಸಂಶೋಧಿಸಿ ಪ್ರಕಟಿಸುವ ಯೋಜನೆಯು ಮೂಲತಃ ಅವರದೇ. ಅದೇ ರೀತಿ ಧಾರವಾಡ ಮುರುಘಾಮಠದಿಂದ ಹರಿಹರ ಮಹಾಕವಿಯ ಸಮಗ್ರ ಕೃತಿಗಳನ್ನು ಪ್ರಕಟಿಸುವ ಯೋಜನೆಯನ್ನು ಅವರು ಸಿದ್ಧಗೊಳಿಸಿದ್ದರು. ದುರ್ದೈವವಶಾತ್ ಅವರು ಬೇಗನೇ ದಿನಾಂಕ; ೨೨-೧೨-೧೯೫೧ ರಂದು, ತೀರಿಹೋದುದರಿಂದ ಕನ್ನಡಕ್ಕೆ ಅವರಿಂದ ಇನ್ನೂ ಸಲ್ಲ ಬಹುದಾಗಿದ್ದ ಅಮೂಲ್ಯ ಸೇವೆ ತಪ್ಪಿಹೋಯಿತು.

ಭಾಷಣ, ಲೇಖನ ಮತ್ತು ಗ್ರಂಥ ಸಂಪಾದನೆಯ ಕ್ಷೇತ್ರಗಳಲ್ಲಿ ಅಪಾರ ಕಾರ್ಯವೆಸಗಿದ್ದಲ್ಲದೆ ‘ಜಯಕರ್ನಾಟಕ’ದಂತಹ ಪತ್ರಿಕೆಗಳ ಮೂಲಕ ಕನ್ನಡ ಪತ್ರಿಕಾರಂಗಕ್ಕೂ ಅವರು ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಕನ್ನಡ ಬರೆಹಗಾರರಿಗೆ ಪ್ರೋತ್ಸಾಹವಿತ್ತು ಹಲವರನ್ನು ಬೆಳಕಿಗೆ ತಂದಿದ್ದಾರೆ. ಅನೇಕ ಗ್ರಂಥಗಳಿಗೆ ಮುನ್ನುಡಿಗಳನ್ನು ಬರೆದು ಪ್ರೋತ್ಸಾಹಿಸಿದ್ದಾರೆ. ಹೀಗೆ ಅಧ್ಯಾ ಪನ, ಗ್ರಂಥ ಸಂಪಾದನ, ಸಂಶೋಧನಾಶುದ್ಧ ಲೇಖನ, ವಿಚಾರ ಪರಿಪ್ಲುತ ಭಾಷಣ, ಕನ್ನಡದ ಜಾಗ್ರತಿ, ಸಹಕಾರ ಚಳುವಳಿ, ವೀರಶೈವ ಸಮಾಜ ಸಂಘಟನ, ಪರಿಭಾಷಿಕರ ದಾಳಿಯ ಪ್ರತಿರೋಧನ ಮೊದಲಾದ ಅಪೂರ್ವ ಕಾರ್ಯಗಳನ್ನು ಎಸಗಿದ ಪುಣ್ಯಪುರುಷರಾಗಿದ್ದಾರೆ. ನಾಡನ್ನು ಬೆಳಗಿದ ಮಹಾ ಸತ್ವರಾಗಿದ್ದಾರೆ. ಅಂಥವರನ್ನು ಪಡೆದ ಕನ್ನಡ ನಾಡೇ ಧನ್ಯ.