ಕಾಡಸಿದ್ಧೇಶ್ವರರ ವಚನಗಳನ್ನು ಕ್ರಿ.ಶ. ೧೯೩೭ ರಲ್ಲಿ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರ ಮಠದವರು ಪ್ರಕಟಿಸಿದ್ದಾರೆ. ವೇ. ಚಂದ್ರಶೇಖರ ಶಾಸ್ತ್ರಿ ಹಿರೇಮಠ ಹೊಳಲು ಇವರು ಈ ವಚನಗಳ ಸಂಪಾದಕರು. ಇವರ ಜೊತೆಗೆ ಸಹಾಯ ಸಲ್ಲಿಸಿದವರು ವೇ. ಸೋಮಶೇಖರಶಾಸ್ತ್ರಿ ಬೆಣಕಲ್ಲು ಅವರು. ಬೆಂಗಳೂರು, ಬ್ಯಾಡಗಿ, ಗದಗ ಮತ್ತು ಹುಬ್ಬಳ್ಳಿಗಳ್ಲಲಿ ದೊರೆತ ನಾಲ್ಕು ಹಸ್ತಪ್ರತಿಗಳ ಸಹಾಯದಿಂದ ಈ ವಚನಗಳನ್ನು ಮುದ್ರಿಸಿದ್ದಾಗಿ ಹೇಳಿದ್ದಾರೆ. ಸಂಕಲನದ ಪೀಠಿಕೆಯಲ್ಲಿ ಕಾಡಸಿದ್ಧೇಶ್ವರರ ಪರಂಪರೆಯನ್ನು ಕುರಿತು ತಕ್ಕಷ್ಟು ವಿಸ್ತಾರವಾಗಿ ಚರ್ಚಿಸಿದ್ದಾರೆ. ಆದರೆ ಪ್ರಸ್ತುತ ವಚನಗಳ ಬಗ್ಗೆ ಹೆಚ್ಚಿನ ವಿವರಗಳನ್ನಿತ್ತಿಲ್ಲ. ದಿ. ಆರ್. ನರಸಿಂಹಾಚಾರ್ ಈ ವಚನಗಳ ಹಸ್ತಪ್ರತಿಗಳನ್ನು ಪರಿಶೀಲಿಸಿ ಕವಿಚರಿತ್ರೆ ಸಂಪುಟ ಮೂರರಲ್ಲಿ ಕಾಡಸಿದ್ಧೇಶ್ವರರ ಕಾಲವನ್ನು ಕುರಿತು ಚರ್ಚಿಸುವಾಗ ಇವನ್ನು ಉಲ್ಲೇಖಿಸಿದ್ದಾರೆ. ಕಾಡಸಿದ್ಧೇಶ್ವರರ ಬಗ್ಗೆ ಅಥವಾ ಅವರ ವಚನಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆದಂತೆ ಕಂಡುಬರುವುದಿಲ್ಲ. ಕಾಡಸಿದ್ಧೇಶ್ವರರ ವಚನಗಳ ಸವಿವರ ಅಧ್ಯಯನ ನಡೆಯಬೇಕಾದುದು ತೀರ ಅಗತ್ಯ ಎಂಬುದು ನಮ್ಮ ಭಾವನೆ. ಆದ್ದರಿಂದ ಅವರ ವಚನಗಳನ್ನು ಕುರಿತ ಕೆಲವಾದರೂ ಮುಖ್ಯ ವಿಚಾರಗಳನ್ನು ಇಲ್ಲಿ ಪರಿಶೀಲಿಸಲಾಗುವುದು.

ಕಾಡಸಿದ್ಧೇಶ್ವರರ ಕಾಲ ವಿಷಯಕ ಚರ್ಚೆಯಲ್ಲಿ ಅವರ ವಚನಗಳ ಭಾಷೆಯ ಬಗ್ಗೆ ಕೆಲವೊಂದು ವಿಚಾರಗಲನ್ನು ಕುರಿತು ವಿವರವಾಗಿ ಪರಿಶೀಲಿಸುವುದು ಅವಶ್ಯವಿದೆ. ಅವರ ವಚನಗಳಲ್ಲಿ ಉರ್ದು ಮತ್ತು ಮರಾಠಿ ಭಾಷೆಗಳ ಪ್ರಭಾವ ತೀರ ನಿಚ್ಛಳವಾಗಿದೆ. ಅಲ್ಲದೆ ಬಹುಳಷ್ಟು ಕಡೆ ಉತ್ತರ ಕರ್ನಾಟಕದ ಆಡನುಡಿಯ ರೂಪಗಳು ಕಂಡುಬರುತ್ತವೆ. ಉದಾಹರಣೆಗೆ:

ಬಲಕ ಬಂದವನ ಹೆಟ್ಟಿ, ಇದುರಿಗೆ ಬಂದವನ ಮೆಟ್ಟಿ
ಯನ್ನ ವಡಹುಟ್ಟಿದವರ ಬಿಟ್ಟು
ರಾಟಿಯ ಕಳಿದು ಪೋದೊಡೆ
ಭವಿಗಳ ಕಪ್ಪಡ, ಕವದಿ, ಕಂಬಳಿ

ಮುಂತಾದ ಪ್ರಯೋಗಗಳನ್ನು ನೋಡಬಹುದು. ಇಂತಹವು ಲಿಪಿಕಾರರ ಕೈವಾಡದಿಂದ ಉಂಟಾಗಿರುವ ಸಾಧ್ಯತೆಯೂ ಇದೆ. ಆದ್ದರಿಂದ ಸದ್ಯಕ್ಕೆ ಇವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.

ವಚನಗಳ ಸಂಖ್ಯೆಯನ್ನು ಕುರಿತಂತೆ ಪ್ರಸ್ತುತ ವಚನ ಸಂಗ್ರಹದ ಕೊನೆಯಲ್ಲಿ ಮುಂದಿನ ವಿವರಗಳು ಕಂಡುಬರುತ್ತವೆ:

ಇಂತು ಭಕ್ತಸ್ಥಲದ ವಚನ ೧೨೯ ಇದರಲ್ಲಿ ಕಾಣಬಂದ ಅರ್ಥ || ೫೩ ||ಟೀಕಿನ ವಚನ ೭೨ ||
ಮತ್ತಂ ಮಹೇಶ್ವರಸ್ಥಲದ ವಚನ     ೧೮೨ ಕಾಯಕ || ೮೧ || ಟೀ || ವಚನ೧೦೧ ||
ಪ್ರಸಾದಸ್ಥಲದ ವಚನ                   ೨೩೩ ಕಾಯಕ || ೧೦೫ || ಟೀ || ೧೨೮
ಪ್ರಾಣಲಿಂಗಸ್ಥಲದ ವಚನ               ೧೨೪ ಕಾಯಕ || || ಟೀ || ೧೧೭
ಮತ್ತಂ ಐಕ್ಯಸ್ಥಲದ ವಚನ              ೮೬ ಕಾಯಕ || || ಟೀ || ೮೧
ಮತ್ತಂ                                       ೨೯೦ ಕಾಯಕ || ೧೨೧ || ಟೀ || ೧೬೯
ಮತ್ತಂ ಶರಣಸ್ಥಲದ ವಚನ            ೫೦೦ (ಅದರೊಳಗೆ ಟೀ ವಚನ ೩೬೩ ||೧೩೩ ||

[ಕಾ || ೧೩೩ ಟೀ || ೩೬೩]

ಕ್ಕೆ ಕೂಡಲು ಆರುಸ್ಥಲದ ವಚನ ೧೭೧೨ || ಇಂತೀ ಕಾಡಸಿದ್ಧೇಶ್ವರ ಸ್ವಾಮಿಗಳು ನಿರೂಪಿಸಿದ ವೀರಶೈವ ಷಟುಸ್ಥಲ ಸಂಗ್ರಹ ಸಂಪೂರ್ಣ. ಮಂಗಳ ಮಹಾಶ್ರೀ ಎಂದು ಹೇಳಿದೆ.

ಇಲ್ಲಿ ಐಕ್ಯಸ್ಥಲದ ತರುವಾಯ ಶರಣಸ್ಥಲದ ವಚನಗಳು ೫೦೦ ಎಂದಿದೆ. ಶರಣಸ್ಥಲದ ಟೀಕಿನ ವಚನ ಮತ್ತು ಕಾಣಬಂದ ಅರ್ಥದ ವಚನಗಳ ಸಂಖ್ಯೆ ೪೯೬ ಆಗುತ್ತದೆಯೇ ವಿನಃ ೫೦೦ ಅಲ್ಲ. ಟೀಕಿನ ಮತ್ತು ಕಾಣಬಂದ ಅರ್ಥದ ವಚನಗಳೆಂದು ಹೇಳಿರುವ ಸಂಖ್ಯೆಯನ್ನು ಬದಿಗಿಟ್ಟು ಎಲ್ಲ ಸ್ಥಲಗಳ ವಚನಗಳನ್ನು ಒಟ್ಟುಗೊಡಿಸಿದರೆ ೧೫೪೪ ವಚನಗಳಾಗುತ್ತವೆ ; ೧೭೧೨ ಆಗುವುದಿಲ್ಲ. ಆದ್ದರಿಂದ ಇಲ್ಲಿನ ವಚನಗಳ ಸಂಖ್ಯೆಯಲ್ಲಿ ಗೊಂದಲವಿರುವುದು ಸ್ಪಷ್ಟ. ಸ್ಥಲಗಳ ಪ್ರಕಾರ ವಚನಗಳಿಗೆ ಅನುಕ್ರಮ ಸಂಖ್ಯೆ ಕೊಡುವಲ್ಲಿಯೂ ಅವ್ಯವಸ್ಥೆಯಿದೆ. ಕೆಲವೊಮ್ಮೆ ಕೊಟ್ಟು ಕೆಲವೊಮ್ಮೆ ಕೊಡದೇ ಬಿಟ್ಟಿದೆ.

ಟೀಕೆ ಬರೆಯುವಲ್ಲಿ ಕೂಡ ಗೊಂದಲವಿರುವುದು ಕಂಡುಬರುತ್ತದೆ. ಕೆಲವೊಮ್ಮೆ ವಚನಾಂಕಿತವನ್ನು ಟೀಕೆಯಲ್ಲಿ ಉಪಯೋಗಿಸಿದ್ದರೆ ಮತ್ತೆ ಕೆಲವೊಮ್ಮೆ ಅದನ್ನು ವರ್ಜಿಸಲಾಗಿದೆ. ಎಂದರೆ ವಚನಾಂಕಿತ ಬಳಸಿದ್ದು ಕೇವಲ ಟೀಕೆಯೋ ಅಥವಾ ಅದೇ ಒಂದು ಸ್ವತಂತ್ರ ವಚನವೋ ಎಂದು ನಿರ್ದರಿಸುವುದು ಕಷ್ಟದ್ದಾಗಿದೆ. ಇದರಿಂದ ವಚನಗಳ ಸಂಖ್ಯಾ ನಿರ್ಧಾರ ಸಾಧ್ಯವಾಗುತ್ತಿಲ್ಲ. ಸದ್ಯ ನಾವು ಕಾಡಸಿದ್ಧೇಶ್ವರರ ವಚನಗಳ ಸಂಖ್ಯೆ ಎಷ್ಟೆಂದು ಖಚಿತವಾಗಿ ಹೆಳುವ ಸ್ಥಿತಿಯಲ್ಲಿಲ್ಲ. ೧೫೦೦ನ್ನು ಅದು ಮಿಕ್ಕುತದೆಂಬುದು ಮಾತ್ರ ಖಚಿತ.

ಈ ವಚನಗಳಿಗೆ ಟೀಕೆ ಬರೆಯಲಾಗಿದೆಯಷ್ಟೆ. ಅದನ್ನು ಬರೆದವರು ಯಾರೆಂದು ಗೊತ್ತಾಗುವುದಿಲ್ಲ. ಒಂದೆಡೆ ಟೀಕಾಕಾರ ಬೋಳಬಸವೇಶ್ವರರ ಹೆಸರು ಹೇಳಿದ್ದಾನೆ. ಆತ ವೀರಶೈವ ಪರಿಭಾಷೆಯನ್ನು ತಲಸ್ಪರ್ಶಿಯಾಗಿ ಬಲ್ಲ ದೊಡ್ಡ ವಿದ್ವಾಂಸನೆಂಬುದರಲ್ಲಿ ಸಂಶಯವಿಲ್ಲ. ಸು. ೧೨೦೦ ಕ್ಕೂ ಹೆಚ್ಚಿಗಿರುವ ಬೆಡಗಿನ ವಚನಗಳಿಗೆ ಟೀಕೆ ಬರೆದಿರುವುದರಿಂದ ಅವುಗಳ ಅರ್ಥ ಮಾಡಿಕೊಳ್ಳುವುದು ಸುಲಭವಾಗಿದೆ. ಬೆಡಗಿನ ವಚನಗಳಿಗೆ ಟೀಕೆ ಬರೆಯುವವರಲ್ಲಿ ಈ ಟೀಕಾಕಾರ ಅಗ್ರಗಣ್ಯರ ಪಂಕ್ತಿಗೆ ಸೇರಿದ್ದಾನೆಂದು ನಿಸ್ಸಂಶಯವಾಗಿ ಹೇಳಬಹುದು. ‘ವಲ್ಲೀ ಪೀರಣ್ಣಗಳ ವಚನ’ ಎಂದು ಹೇಳಿಕೊಟ್ಟಿರುವ ಉರ್ದು ಭಾಷೆಯ ವಚನಗಳನ್ನು ಕೂಡ ಟೀಕಾಕಾರ ವೀರಶೈವ ಪರಿಭಾಷೆಯಲ್ಲಿ ಸಮರ್ಥವಾಗಿ ವಿವರಿಸಿದ್ದಾನೆ. ಇದು ತುಂಬ ಗಮನಾರ್ಹ.

ಇಲ್ಲಿ ವಚನಗಳನ್ನು ಸ್ಥಲ ಕಟ್ಟುಗಳಿಗನುಸಾರವಾಗಿಯೇ ಕೊಡಲಾಗಿದೆ. ಮೂಲ ವಚನಕಾರರೇ ಹೀಗೆ ಮಾಡಿರುವರೋ ಅಥವಾ ತರುವಾಯದವರು ಈ ರೀತಿ ಜೋಡಿಸಿರುವರೋ ತಿಳಿಯದು. ಪಿಂಡಾದಿ ಸ್ಥಲಗಳನ್ನು ನೋಡಿದರೆ ಮೂಲ ಮಚನಕಾರರೇ ಹೀಗೆ ಜೋಡಿಸಿರುವ ಸಾಧ್ಯತೆಯಿದೆ ಎಂದು ಹೇಳಬೇಕಾಗುತ್ತದೆ. ಮುಂದಿನಂತೆ ಸ್ಥಲಕಟ್ಟುಗಳ ವ್ಯವಸ್ಥೆ ಇಲ್ಲಿ ಕಂಡುಬರುತ್ತದೆ.

ಪಿಂಡಸ್ಥಲ ಮಾಯಾವಿಡಂಬನಸ್ಥಲ
ಸಂಸಾರಹೇಯಸ್ಥಲ ಗುರುಕಾರುಣ್ಯಸ್ಥಲ
ಲಿಂಗಧಾರಣಸ್ಥಲ ವಿಭೂತಿಧಾರಣಸ್ಥಲ
ರುದ್ರಾಕ್ಷಿಧಾರಣಸ್ಥಲ ಪಂಚಾಕ್ಷರಿಸ್ಥಲ
ಭಕ್ತಿಸ್ಥಲ ಮಹೇಶ್ವರಸ್ಥಲ
ಪ್ರಸಾದಸ್ಥಲ ಪ್ರಾಣಲಿಂಗಿಸ್ಥಲ
ಶರಣಸ್ಥಲ ಐಕ್ಯಸ್ಥಲ*

ಇವುಗಳಲ್ಲಿ ಭಕ್ತಿಸ್ಥಲದ ಮುಂದಿನ ಸ್ಥಲಗಳಲ್ಲಿ, ಭಕ್ತಿ, ಭಕ್ತನ ಮಹೇಶ್ವರ, ಭಕ್ತನ. ಪ್ರಸಾದಿ, ಭಕ್ತನ ಪ್ರಾಣಲಿಂಗಿ, ಭಕ್ತನ ಶರಣ, ಭಕ್ತನ ಐಕ್ಯ ಎಂದು ಆವಾಂತರ ಸ್ಥಲಗಳನ್ನು ಅನುಸರಿಸಿದೆ. ಎಂದರೆ ಪಿಂಡಾದಿ ಪ್ರಾರಂಭ ಸ್ಥಲಗಳು, ತರುವಾಯ ಅಷ್ಟಾವರಣಗಳ ಪೈಕಿ ನಾಲ್ಕರ ಮಹತ್ವ ವಿವರಿಸುವ ಸ್ಥಲಗಳು ಮತ್ತು ಆವಾಂತರ ಸ್ಥಲಗಳನ್ನೊಳಗೊಂಡ ಆರು ಸ್ಥಲಗಳು-ಹೀಗೆ ಇಲ್ಲಿನ ವ್ಯವಸ್ಥೆಯಿದೆ.

ಈ ವಚನಗಳಲ್ಲಿ ಬಸವಾದಿ ಪುರಾತನ ಶರಣರ ಹೆಸರುಗಳು ಅಲ್ಲಲ್ಲಿ ಉಲ್ಲೇಖಗೊಂಡಿವೆ. ಅವರ ಜೊತೆಗೆ ಈವರೆಗೆ ಕನ್ನಡ ಸಾಹಿತ್ಯಕ್ಕೆ ತೀರ ಅಪರಿಚಿತರಾದ ಹಲವು ಜನ ಶರಣರ ಹೆಸರುಗಳು ಅವರವರ ಕಾಯಕ ಸಹಿತ ಹೇಳಲ್ಪಟ್ಟಿವೆ. ಒಟ್ಟು ಇಂಥ ಹೆಸರುಗಳು ಸು. ೫೦ ರಷ್ಟಾಗಬಹುದು. ಮುಂದಿನ ಪಟ್ಟಿಯನ್ನು ಅವಲೋಕಿಸಬಹುದಾಗಿದ:

ಮಟಪತಿ ಭೀಮಯ್ಯ (ಪು-೪೪) ವಿಭೂತಿ ಪರಯ್ಯ (ಪು-೫೪) ರುದ್ರಾಕ್ಷಿ ಕಾಯಕದ ರಾಮದೇವಯ್ಯ ಶಿವಜಾತಯ್ಯ ಮತ್ತು ಅವನ ಶಿಷ್ಯ ಮಂತ್ರ ಜಾತಯ್ಯ (ಪು-೬೩) ಗಾರುಡ ಭೀಮಯ್ಯ (ಪು-೭೦) ಕಾಮಾಟದ ರಾಯಿತಂದೆ (ಪು-೧೦೯) ಸಾವಕಾರ ಮಲ್ಲಬೊಮ್ಮಣ, ಗಣಾಚಾರಿ ವೀರಬಸವಂತಯ್ಯ (ಪು-೧೨೧) ಯಾತ್ರೆಯ ಸಂಕಣ್ಣ (ಪು-೧೪೦) ಚರಿಕೇರಿ ಕಾಮಣ್ಣ (ಪು-೧೪೯) ಕೊರವರ ಸಂಕಣ್ಣ (ಪು-೧೫೬) ಚತ್ರಿಯರ ಮಹಾಲಿಂಗ ಶಬರಿಗಳು (ಪು-೨೦೨) ಶಬರಿಕಬ್ಬಿನ ಕಾಳಣ್ಣ (ಪು-೨೦೭) ಕುರುಬ ಭೀಮಣ್ಣ (ಪು-೨೭೯) ವಡ್ಡರ ತಿಮ್ಮಯ್ಯ (ಪು-೨೯೦) ಚನ್ನಯ್ಯನವರ ಶಟ್ಟಣ್ಣನವರು (ಪು-೩೦೨) ಹರಳಯ್ಯನವರ ಮೊಸಣ್ಣನವರು (ಪು-೩೦೮) ಸಮಗಾರ ಸಾಬಣ್ಣಗಳು (ಪು-೩೧೬) ಕೋಮಟಿಗಳ ಕಾಳಣ್ಣನವರು (ಪು-೩೨೪) ಬಡಿಗೇರ ಬಾಬಣ್ಣಗಳು (ಪು-೩೨೯) ಕಮ್ಮಾರ ಕಾಸಣ್ಣಗಳು (ಪು-೩೩೪) ವೀರಗಂಟಿ ಮಡಿವಾಳಯ್ಯಗಳು (ಪು-೩೩೬) ಪೊತ್ತಾರ ಬಾಳಣ್ಣಗಳು (ಪು-೩೪೮) ಬಳಿಗಾರ ಬಸವಂತಯ್ಯಗಳು (ಪು-೩೫೦) ಜೋವಿಸರ ಗೋವಿಂದ ಭಟ್ಟರು (ಪು-೩೫೪) ಶಾನುಭೋಗ ರಾಮಯ್ಯ (ಪು-೩೬೨) ಸೀಂಪಿಗೇರ ಸಂಗಣ್ಣಗಳು (ಪು-೩೬೮) ಚಿತ್ರಗಾರ ಸೋಮಯ್ಯಗಳು (ಪು-೩೭೫) ಸುಣ್ಣಗಾರ ಕೇತಯ್ಯಗಳು (ಪು-೩೯೧) ಗಾಣಿಗೇರ ಕಲ್ಲಪ್ಪಗಳು (ಪು-೩೮೬) ಬಿಳಿಮಗ್ಗದ ಗುರುಬಸಯ್ಯಗಳು (ಪು-೩೯೫) ಪಿಂಜಾರ ಮಮದಖಾನಯ್ಯಗಳು (ಪು-೩೯೩) ವಲ್ಲಿ ಪೀರಣ್ಣಗಳು (ಪು-೩೯೫) ಜೀರಸಂಕಣ್ಣ (ಪು-೪೦೨) ಸುಂಕದ ಸೋಮಯ್ಯ (ಪು-೪೧೩) ಗೊಲ್ಲರ ನಾಗಣ್ಣಗಳು (ಪು-೪೧೬) ಮಜೂರಿ ಸಂಗಣ್ಣಗಳು (ಪು-೪೨೧) ಭೋಗಾರ ಕಾಸಣ್ಣ (ಪು.೪೩೩) ಉಪ್ಪಣಿಗ ಭರಮಣ್ಣ (ಪು.೪೪೦) ತೋಟಿಗೇರ ಮಲ್ಲಣ್ಣಗಳು (ಪು-೪೪೨) ಬಣ್ಣಗಾರ ಬಸಯ್ಯನವರು (ಪು-೪೪೭) ಅವಟಿಗ ಮಲ್ಲಣ್ಣಗಳು (ಪು-೪೫೩) ಇಂಗಳಿಗಿ ವೈಜಕವ್ವ (ಪು-೪೭೪) ಗೌಳಿಗೇರ ನಾಗಣ್ಣಗಳು (ಪು-೪೮೪) ಸುವ್ವಿಶಿವಯ್ಯ (ಪು-೪೯೦) ಕಲಹದ ಖ್ಯಾತ ಮುರಿಗಿಸ್ವಾಮಿಗಳು (ಪು-೪೯೭) ಸೂಳೆ ಚೋಳಕ್ಕ, ಸೊಳೆ ನೆಂಬವ್ವ.

ಕಾಡಸಿದ್ಧೇಶ್ವರರು ಇವರೆಲ್ಲರನ್ನು ಶರಣರೆಂದು ಭಾವಿಸಿ ಉಲ್ಲೇಖಿಸಿರುವುದು ಸ್ಪಷ್ಟವಾಗಿದೆ. ಈ ಶರಣರು ವಚನಗಳನ್ನೇನಾದರೂ ಬರೆದಿದ್ದರೆ ? ಈ ಪ್ರಶ್ನೆಗೆ ಸದ್ಯ ಉತ್ತರಿಸುವುದು ಕಠಿಣ. ಕಾಡಸಿದ್ಧೇಶ್ವರರು ಆಯಾ ಶರಣರ ಕಾಯಕ ಮತ್ತು ಹೆಸರುಗಳನ್ನೂ ಹೇಳವುದರೊಂದಿಗೆ ಅವರು ಮಾಡಿದ ಕಾಯಕದ ವಚನ ಎಂದು ಒಂದೆರಡು ವಚನಗಳನ್ನು ಕೂಡ ಹೇಳುತ್ತಾರೆ. ಕೆಲವೆಡೆ ವಚನಗಳ ಸಂಖ್ಯೆ ಹೆಚ್ಚಾಗಿರುವುದೂ ಉಂಟು. ಉದಾಹರಣೆಗೆ ”ಯಾತ್ರೆಯ ಸಂಕಣ್ಣಗಳು ಕಾಯಕವ ಮಾಡಿದ ವಚನವ ಪೇಳ್ವೆ” ಎಂದು ಉತ್ತಮಪುರುಷ ಏಕವಚನದಲ್ಲಿ ಹೇಳಿ ತರುವಾಯ ಯಾತ್ರೆಯ ಸಂಕಣ್ಣಗಳ ವಚನ ಎಂದು ಮುಂದಿನ ವಚನ ಕೊಡುತ್ತಾರೆ :

ಒಂದು ಕ್ಷೇತ್ರಕ್ಕೆ ಹೋಗಿ ಬ್ರಹ್ಮಲೋಕವ ದಾನಕೊಟ್ಟೆ.
ಮೂರನೆಯ ಕ್ಷೇತ್ರಕ್ಕೆ ಹೋಗಿ ರುದ್ರಲೋಕವ ದಾನವ ಕೊಟ್ಟೆ.
ನಾಲ್ಕನೆಯ ಕ್ಷೇತ್ರಕ್ಕೆ ಹೋಗಿ ಈಶ್ವರಲೋಕವ ದಾನವ ಕೊಟ್ಟೆ.
ಐದನೆಯ ಕ್ಷೇತ್ರಕ್ಕೆ ಹೋಗಿ ಸದಾಶಿವಲೋಕವ ದಾನವ ಕೊಟ್ಟೆ.
ಆರನೆಯ ಕ್ಷೇತ್ರಕ್ಕೆ ಹೋಗಿ ಶಿವಲೋಕವ ದಾನವ ಕೊಟ್ಟೆ.
ಏಳನೆಯ ಕ್ಷೇತ್ರಕ್ಕೆ ಹೋಗಿ ಮರ್ತ್ಯಲೋಕವ ದಾನವ ಕೊಟ್ಟೆ.
ಎಂಟನೆಯ ಕ್ಷೇತ್ರಕ್ಕೆ ಹೋಗಿ ಸ್ವರ್ಗಲೋಕವ ದಾನವ ಕೊಟ್ಟೆ.
ಒಂಭತ್ತನೆಯ ಕ್ಷೇತ್ರಕ್ಕೆ ಹೋಗಿ ಪಾತಾಳಲೋಕವ ಕೊಟ್ಟೆ.

ದಶಕ್ಷೇತ್ರಕ್ಕೆ ಹೋಗಿ ಚತುರ್ದಶ ಭೂವನವ ದಾನವಕೊಟ್ಟು ನಾಸತ್ತು ಬದುಕಿದವರ ಹೊತ್ತು ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಲಿಂಗ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ.

ಇಲ್ಲಿನ ವಚನಶಿಲ್ಪವನ್ನು ನೋಡಿದರೆ ಅಂಕಿತದವರೆಗೆ ಇರುವ ವಚನ ಭಾಗವೆಲ್ಲ ಯಾತ್ರೆ ಸಂಕಣ್ಣನವರದ್ದಿರಬಹುದೆಂಬ ಭಾವನೆ ಉಂಟಾಗುತ್ತದೆ. ಆದರೆ ಕೊನೆಯಲ್ಲಿಯ ವಚನಾಂಕಿತ ಕಾಡಸಿದ್ಧೇಶ್ವರದೇ ಆಗಿದೆ. ಹೀಗಾಗಿ ಇಲ್ಲಿನ ವಚನ ಕಾಡಸಿದ್ಧೇಶ್ವರರೇ ಬರೆದದ್ದು ಎಂದು ಹೇಳಬೇಕಾಗಿ ಬರುತ್ತದೆ. ಎಂದರೆ ಬೇರೆಯವರ ಕಾಯಕವನ್ನು ಸ್ಪಷ್ಟವಾಗಿ ತಮಗೆ ಅರೋಪಿಸಿಕೊಂಡು ಅವರ ಹೆಸರನ್ನೇ ಹೇಳಿ ತಾವು ವಚನಗಳನ್ನು ರಚಿಸುವ ಈ ಪರಿ ಅನ್ಯಾದೃಶವಾಗಿದೆ. ಇದಕ್ಕೆ ಬೇರೆ ಉದಾಹರಣೆಯಾಗಿ ವಲ್ಲಿ ಪೀರಣ್ಣಗಳ ಎರಡು ವಚನಗಳನ್ನು ನೋಡಬಹುದು.

ಸಹೀ ದರ ಖುರಾನವ ನೋಡಿ
ದಾಡಿಜವನ ಲೋಚನ ಬಿಟ್ಟು ದಿಗಂಬರವ ಆಗುವರು.
ಆ ಖುರಾನವ ನೋಡಿ ದಾಡಿಜಾವನ ಲೋಚವ ಬೋಳಿಸಿ
ಸಹೀ ದನಾಗುವ ನಾರನು ಕಾಣೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೇ
ಏಕ ಪಾವಮೇ ಶತ ಏಕ ಪಾಂವು ಗಈಬಾ
ಏಕ ಪಾನಿಮೇ ಛೇ ಕೋಟಿ ಪಾನಿ ಗಈಬಾ
ಏಕ ಪನ್ನೇ ಜಾಗಾಮೇ ತೇಶತ್ ಛೇದಸ ಕೋಟಿ ಪನ್ನೇಜಾಗಾ ಗಈಬಾ
ಈ ಅಲ್ಲಾಕು ಖಬರ ಸಹಿದರ ಸುಲತಿ ಕೊ ಬಮ್ಮನ ಬಲಾ ಆದ್ಮಿಕು ಜಾನತಾ ಹೈ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯ ಪ್ರಭುವೇ

ಇಂಥ ವಚನಗಳನ್ನು ಕಾಡಸಿದ್ಧೇಶ್ವರರು ಹೇಗೆ ಮತ್ತು ಯಾವ ಸಂದರ್ಭದಲ್ಲಿ ರಚಿಸಿದರೋ ತಿಳಿಯದು. ಇವೆಲ್ಲವುಗಳಿಗೆ ಟೀಕಾಕಾರನು ವೀರಶೈವ ಪರವಾದ ವಿವರಣೆಯನ್ನಿತ್ತಿದ್ದಾನೆ. ಹೀಗಾಗಿ ಇವು ಕಾಡಸಿದ್ಧೇಶ್ವರರ ಸ್ವಂತದ ರಚನೆಗಳೆಂದು ತಿಳಿಯುವುದು ಅನಿವಾರ್ಯವಾಗುತ್ತದೆ. ಬಸವಾದಿ ಪುರಾತನರಂತೆ ತರುವಾಯದ ಈ ಶರಣರು ಕೂಡಾ ಅವರಿಗೆ ಗೌರವಾರ್ಹರಾಗಿ ಮತ್ತು ನಿಕಟ ಪರಿಚಯದವರಾಗಿದ್ದು ಆಧ್ಯಾತ್ಮಕೋನ್ನತಿ ಸಾಧಿಸಿದವರಾದುದರಿಂದ ಕಾಯಕಗಳ ಮೂಲಕ ಅವರ ಸಾಧನ ಸಿದ್ಧಿಗಳನ್ನು ಪ್ರಕಟಪಡಿಸುವುದೇ ಕಾಡಸಿದ್ಧೇಶ್ವರರ ಉದ್ದೇಶವಾಗಿರುವಂತೆ ಕಾಣುತ್ತದೆ.

ಇಲ್ಲಿ ಇನ್ನೊಂದು ಸಂಗತಿಯನ್ನು ಬೇಕಾದರೆ ಎತ್ತಿ ಹೇಳಬಹುದು. ಡೋಹಾರ ಕಕ್ಕಯ್ಯ, ಗಾಣದ ಕಣ್ಣಪ್ಪ, ಮೇದಾರ ಕೇತಯ್ಯ ಮತ್ತು ಹೊಡೆಹುಲ್ಲ ಬಂಕಣ್ಣ ಎಂಬ ಪುರಾತನರ ಹೆಸರಿನ ಮುಂದೆ ಬಂದಿರುವ ವಚನಗಳನ್ನು ಕೂಡಾ ಪರಿಶೀಲಿಸಲು ಅಡ್ಡಿ ಇಲ್ಲ. ಈ ಸಂಕಲನದಲ್ಲಿ ಇವರ ಹೆಸರಿನ ಮುಂದಿರುವ ವಚನಗಳು ಈಗ ಪ್ರಕಟವಾಗಿರುವ ಇದೇ ಶರಣರ ವಚನಗಳಿಂದ ತೀರ ಭಿನ್ನವಾಗಿವೆ. ಅಂಶಿಕವಾಗಿ ಯಾದರೂ ಆ ಪುರಾತನರ ವಚನಗಳಿಗೆ ಈ ವಚನಗಳು ಹೋಲಿಕೆ ತೋರುವುದಿಲ್ಲ.

ಕಾಡಸಿದ್ಧೇಶ್ವರರು ಈ ಮುಂಚೆ ಹೇಳಿದ ಸುಮಾರು ‘೫೦’ ಜನರನ್ನು ಅವರು ಶರಣರೆಂದು ಭಾವಿಸಿ ಉಲ್ಲೇಖಿಸಿರುವುದು ಸ್ಪಷ್ಟವಾಗಿದೆ. ಇವರೆಲ್ಲ ಎಲ್ಲಿಯವರು ? ಯಾವ ಕಾಲದವರು ಎಂಬ ಸಮಸ್ಯೆಗೆ ಸದ್ಯ ಉತ್ತರ ದೊರೆಯುವುದಿಲ್ಲ. ಇವರ ಕಾಯಕಗಳ ಉಲ್ಲೇಖ ಮಾತ್ರ ಸ್ಪಷ್ಟವಾಗಿದೆ. ಮಠಪತಿ, ವಿಭೂತಿ ಮತ್ತು ರುದ್ರಾಕ್ಷಿ ಮಾರುವವರು, ಕಾಮಾಟಿಕ ಸಿಂಪಿಗ ಕೋಮಟಿಗ ಸುಣ್ಣಗಾರ ಬಳಿಗಾರ ಸಮಗಾರ ಪೊತ್ತಾರ (ಅಕ್ಕಸಾಲಿ) ಬಡಿಗ ಕಮ್ಮಾರ ಗಾಣಿಗ ತೋಟಿಗ ಉಪ್ಪಣಿಗ ಬಣ್ಣಗಾರ ಗೌಳಿಗ ಬೋಗಾರ ಈ ಮೊದಲಾದ ಕಾಯಕಗಳವರೂ ಇವರಲ್ಲಿದ್ದಾರೆ. ಬಿಳಿಮಗ್ಗದ ಎಂದರೆ ನೇಕಾರ ಕಾಯಕವೆಂದು ಕಾಣುತ್ತದೆ. ಆವಟಿಗಿ ಮಲ್ಲಣ್ಣ ಮತ್ತು ಸುವ್ವಿ ಶಿವಯ್ಯ ಎಂಬ ಶರಣರ ಕಾಯಕಗಳ ಬಗ್ಗೆ ಖಚಿತವಾಗಿ ಹೇಳುವುದು ಕಷ್ಟ. ಸುವ್ವಿ ಶಿವಯ್ಯ ಬಹುಶಃ ಪುರಾಣ ಹೇಳುವ ಉದ್ಯೋಗದವನೆಂದು ಕಾಣುತ್ತದೆ. ಮಜೂರಿ ಸಂಗಣ್ಣ ಎಂದರೆ ಕೂಲಿಕಾರ ಕಾಯಕದವರು.

ಮೇಲೆ ಹೇಳಿದ ಕಾಯಕ ಎಂದರೆ- ಜಾತಿಗಳಲ್ಲದೆ ಕುರುಬ, ಬೇಡ, ವಡ್ಡ, ಕೊರವ, ಛತ್ರಿಯ ಎಂದರೆ ಕ್ಷತ್ರಿಯ ಜೋಯಿಸ ಶಾನುಭೋಗ ಮುಂತಾದ ಜಾತಿಯವರು ಇಲ್ಲಿ ಸಮಾವಿಷ್ಟರಾಗಿದ್ದಾರೆ. ಅದೇ ರೀತಿ ಹೇಳಿರುವ ಚನ್ನಯ್ಯನವರು ಎಂದರೆ ಮಾದಾರ ಚನ್ನಯ್ಯನವರ ಜಾತಿವಂತರೆಂದೂ ಹರಳಯ್ಯನವರೆಂದರೆ ಸಮಗಾರ ಜಾತಿಯವರೆಂದೂ ಸಾಧಾರಣವಾಗಿ ಗುರುತಿಸಿಬಹುದು.

ಒಬ್ಬಿಬ್ಬರು ತಮ್ಮ ಊರು ಹೆಸರುಗಳಿಂದ ಪ್ರಸಿದ್ಧರಾಗಿದ್ದಂತೆ ಕಾಣುತ್ತದೆ. ಅಂಥವರಲ್ಲಿ ಇಂಗಳಿಗೆಯ ವೈಜಕವ್ವೆ ಒಬ್ಬಳು. ಇಂಗಳಿ, ಇಂಗಳಿಗಿ, ಇಂಗಳಗಾಂವಿ ಮುಂತಾದ ಹೆಸರಿನ ಹಲವಾರು ಊರುಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ ಈ ವೈಜಕವ್ವೆ ಯಾವ ಇಂಗಳಿಗಿಯವಳೋ ? ವೀರಗಂಟಿ ಮಡಿವಾಳಯ್ಯಗಳು ಇಲ್ಲಿ ಗಮನಾರ್ಹ, ನಿರಂಜನವಂಶರತ್ನಾಕರ ಪ್ರಸಿದ್ಧಶರಣ ಮಡಿವಾಳ ಮಾಚಯ್ಯನನ್ನು ವೀರಗಂಟಿ ಮಡಿವಾಳಯ್ಯನೆಂದು (ಪು. ೮ ಮತ್ತು ೨೩) ಹೇಳುವಂತೆ ತೋರುತ್ತದೆ. ಇದು ನಿಜವಾದರೆ ಇಲ್ಲಿ ಉಲ್ಲೇಖಿತನಾದ ಶರಣ ವೀರಗಂಟಿ ಮಡಿವಾಳಯ್ಯ, ಮಡಿವಾಳ ಮಾಚಯ್ಯನೆಂದಾಗುತ್ತದೆ. ಇದು ಇನ್ನೂ ಹೆಚ್ಚಿನ ಪರಿಶೀಲನೆಗೆ ಒಳಪಡಬೇಕಾದ ವಿಷಯ. ಏಕೆಂದರೆ ಮಡಿವಾಳ ಮಾಚಯ್ಯನವರು ಹಿಪ್ಪರಿಗಿಯರೆಂಬ ನಂಬಿಕೆಯೇ ಈಗ ಸಾರ್ವತ್ರಿಕವಾಗಿದೆ. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಮೊದಲಾದ ಕೃತಿಗಳಲ್ಲಿ ಮಡಿವಾಳ ಮಾಚಯ್ಯ ಹಿಪ್ಪರಿಗೆಯವರೆಂದು ಸ್ಪಷ್ಟವಾಗಿ ಹೇಳಿದೆ. ಕಲಹದ ಖ್ಯಾತ ಮುರಗಿಸ್ವಾಮಿ ಎಂಬ ಶರಣನೊಬ್ಬನ ಹೆಸರು ಇಲ್ಲಿ ಬಂದಿದೆ. ಕಲಹ ಎಂದರೆ ಅದು ಒಂದು ಕಾಯಕ ಎಂದು ಪ್ರಸ್ತುತ ಕೃತಿಯ ಸಂಪಾದಕರು ಭಾವಿಸಿದ್ದಾರೆ (ಪ್ರಸ್ತಾವನೆ, ಪು. ೩೧). ಕಲ್ಲೆ-ಕಲ್ಲೆಹ ಮುಂತಾದ ಹೆಸರುಗಳಿರುವ ಊರುಗಳು ನಮ್ಮಲ್ಲಿವೆ. ಆದ್ದರಿಂದ ಈ ಶರಣ ಇಂತಹ ಒಂದು ಊರಿಗೆ ಸಂಬಂಧಪಟ್ಟವನಾಗಿರಬಹುದು. ಮಮದಾಖಾನ ಮತ್ತು ವಲ್ಲಿ ಪೀರಣ್ಣಗಳು ಹುಟ್ಟಿನಿಂದ ಮುಸಲ್ಮಾನರೆಂದು ಬೆರೆ ಹೇಳಬೇಕಾಗಿಲ್ಲ. ಇವರೇನಾದರೂ ವಚನಗಳನ್ನೂ ರಚಿಸಿರಬಹುದೇ ? ರಚಿಸಿದ್ದರೆ ಅದೊಂದು ಅಪೂರ್ವ ದಾಖಲೆ ಯಾಗುತ್ತದೆ. ಒಟ್ಟಿನಲ್ಲಿ ಈ ಶರಣರನ್ನು ಕುರಿತು ಕಾಡಸಿದ್ಧೇಶ್ವರರ ಹೊರತಾಗಿ ಬೇರೆ ಯಾವ ವೀರಶೈವ ಲೇಖಕನೂ ಉಲ್ಲೇಖಿಸಿದಂತೆ ಕಂಡುಬರುವುದಿಲ್ಲ.

ಸ್ಥಲ ಕಟ್ಟುಗಳನ್ನು ನೋಡಿದರೆ ಕಾಡಸಿದ್ಧೇಶ್ವರ ವಚನಗಳ ಸ್ವರೂಪವೇನೆಂಬುದು ಸಾಮಾನ್ಯವಾಗಿ ತಿಳಿಯಬರುತ್ತದೆ. ವೀರಶೈವ ಷಟ್‌ಸ್ಥಳದ ಪ್ರತಿಪಾದನೆ ಅವರ ಪ್ರಮುಖ ಗುರಿ. ಅಷ್ಟಾವರ್ಣಗಳ ಮಹತಿಯನ್ನು ಎತ್ತಿ ಹೇಳುವುದು ಅವರ ಇನ್ನೊಂದು ಉದ್ದೇಶ.

ಅವರ ವಚನಗಳಲ್ಲಿ ಮುಕ್ಕಾಲುಪಾಲು ಬೆಡಗಿನ ವಚನಗಳೆ ಆಗಿವೆ. ಎಂದರೆ ಸುಮಾರು ೧೨೦೦ ರಷ್ಟು ಬೆಡಗಿನ ವಚನಗಳ ಈ ಸಂಕಲನದಲ್ಲಿವೆ. ಬೇರೆ ಬೇರೆ ಶರಣರ ಕಾಯಕಗಳನ್ನೆಲ್ಲ ರೂಪಕಕ್ಕೆ ಪರಿವರ್ತಿಸಿ ಅವನ್ನು ಬೆಡಗಿನ ವಚನಗಳನ್ನಾಗಿ ಹೇಳುವುದು ಕಾಡಸಿದ್ದೇಶ್ವರರಿಗೆ ತುಂಬಾ ಇಷ್ಟವಾದ ವಿಚಾರ. ಮುಂದಿನ ಉದಾಹರಣೆಗಳನ್ನು ನೋಡಬಹುದು :

ಅನೇಕ ಹೊಲಿಗೆಯ ಕಪ್ಪಡವ ಬಿಚ್ಚಿ
ಮೂರೆಳಿದಾರದ ಕಪ್ಪಡವ ಹೊಲಿದು
ನಾಲ್ಕುಗಳಿಗೆಯ ಜೊಡಿಸಿ
ಬೇಡಿದವರಿಗೆ ಕೊಡರು ಬೇಡದವರಿಗೆ ಕೊಡುವರು
ನೋಡೆಂದನಯ್ಯ ಲಿಂಗಿಗಳು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯ ಪ್ರಭುವೆ
(ಸಿಂಪಿಗೇರ ಸಂಗಣ್ಣಗಳು ಕಾಯಕವ ಮಾಡಿದ ವಚನ, ಪು-೩೬೯).

ಎರಡು ಗಾಲಿಯ ಬಂಡಿಯ ಮುರಿದು
ಮೂರುಗಾಲಿಯ ಬಂಡಿಯ ಹೂಡಿ
ಮೂಗೇನಬಿಟ್ಟು ಮೂಎತ್ತ ಕಟ್ಟಿ
ಭೂಮಿ ಇಲ್ಲದಾರುಣ್ಯ ಬೆಟ್ಟದ ಕಲ್ಲ ಬಂಡಿಯ ತುಂಬಿ
ತಂದು ಬೇಡಿದವರಿಗೆ ಕಲ್ಲಕೊಡೆ [ಕೊಡದೆ] ಬೇಡದವರಿಗೆ ಕಲ್ಲಹಾಕಿ
ಹಾಗದ ರೊಕ್ಕವ ಕೊಂಡು ಕಾಯಕವ ಮಾಡುತಿರ್ದರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ
(ವಡ್ಡರ ತಿಮ್ಮಯ್ಯಗಳು ಕಾಯಕವ ಮಾಡಿದ ವಚನ, ಪು ೨೯೦).

ಹಲವು ಸಂದರ್ಭಗಳಲ್ಲಿ ಅವರ ಬೆಡಗು ಸುಂದರವಾದ ಪ್ರತಿಮಾ ಲೋಕವನ್ನು ಸೃಷ್ಟಿಸುವುದೂ ಉಂಟು. ಉದಾ :

ನೀರಲಫಲ ಉತ್ತತ್ತಿ ಮಾವಿನಹಣ್ಣಿನಂತಿರುವರು ಮರ್ತ್ಯರು
ಹಲಸು, ತೆಂಗು ಡಾಳಿಂಬದಂತಿರುವವರು ಸ್ವರ್ಗದವರು
ಹಾಲು ಸಕ್ಕರೆ ಬೆಲ್ಲ ತುಪ್ಪದಂತಿರುವವರು ನಿಮ್ಮವರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ.
ಕತ್ತೆಯ ಕಟ್ಟಲಿಲ್ಲ ಕತ್ತೆ ಇಲ್ಲದ ಅರಣ್ಯಕ್ಕೆ ಹೋಗಲಿಲ್ಲ.
ಕತ್ತೆಯ ಕಾಲ ಮುರಿದು ಕಣ್ಣ ಕಳೆದು ಅಡವಿಗೆ ಹೋಗಿ
ಬೇರಿಲ್ಲದೆ ಪುಟ್ಟಿ ಪರ್ಣಶಾಖೆಗಳಿಲ್ಲದೆ ಪಲ್ಲವಿಸದ
ವೃಕ್ಷದ ಕಟ್ಟಿಗೆಯ ತಂದು
ಮುಪ್ಪುರದ ಅರಸುಗಳಿಗೆ ಕೊಟ್ಟು
ಭಿಕ್ಷವ ಕೊಂಡು
ಆರಿಗೂ ಕೊಡದೆ ಇರ್ದನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ.

ಹೆಚ್ಚಿನ ವಚನಗಳಲ್ಲಿ ಅವರ ಬೆಡಗು ಬಿನ್ನಾಣಕ್ಕೆ ತಿರುಗುತ್ತದೆ. ಉದಾ :

ಅಂಗೈ ಒಳಗಿನ ಕೂಸು ಅವಕಾಶವ ನುಂಗಿ
ಮಂಗಳಾಂಗಿಯ ಸಂಗವ ಮಾಡಿ
ಕಂಗಳಿಲ್ಲದವನ ಕೈಯ ಪಿಡಿದು
ಕೋಲು ಮುರಿದು ಕಾಲ ಕಡಿದು
ಕಮಲದ ಹಾಲು ಕುಡಿದು
ಸತ್ತು ಎತ್ತಹೊಯಿತ್ತೆಂದು ಅರಿಯನಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ.

ಕಾಡಸಿದ್ಧೇಶ್ವರರಿಗೆ ಬೆಡಗು ತೀರ ಸಹಜವೂ ಹೌದು, ಪ್ರಿಯವು ಹೌದು. ಅನೇಕ ವೇಳೆ ಅವರ ನುಡಿ ಬಿಚ್ಚುಧಾರೆಯಾಗುತ್ತದೆ. ಆಷಾಢಭೂತಿತನವನ್ನು ಅವರು ಎಳ್ಳಷ್ಟೂ ಸೇರರು. ಅಂತಹ ತೀಕ್ಷ್ಣವಚನಗಳು ಈ ಸಂಕಲನದಲ್ಲಿ ಬೇಕಾದಷ್ಟಿವೆ.

ಉದಾಹರಣೆಗೆ :

ಇಂದಿನ ಚಿಂತೆ ಉಳ್ಳವರೆಲ್ಲ ಹಂದಿಗಳು
ನಾಳಿನ ಚಿಂತೆಯವರೆಲ್ಲ ನಾಯಿಗಳು
ತನ್ನ ಚಿಂತೆಯುಳ್ಳವರೆಲ್ಲ ಜೋಗಿಗಳು
ನಿನ್ನ ಚಿಂತೆಯುಳ್ಳವರೆಲ್ಲ ಯೋಗಿಗಳು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯ ಪ್ರಭುವೆ.

ಒಟ್ಟಿನಲ್ಲಿ ಬೆಡಗು ಮತ್ತು ಬಿಚ್ಚು ಮಾತು ಅವರ ವಚನಗಳ ಪ್ರಧಾನ ಲಕ್ಷಣಗಳೆಂದು ಹೇಳಬಹುದು.

 

*ಇಲ್ಲಿನ ಹೆಸರುಗಳನ್ನು ಮೂಲದಲ್ಲಿ ಪ್ರಯೋಗಿಸಿದಂತೆ ಕೊಟ್ಟಿದ್ದೇವೆ.