ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಒಂದು ಹಳ್ಳಿ ಸಿರಗುಪ್ಪಿ. ಹುಬ್ಬಳ್ಳಿ-ಗದಗ ರಸ್ತೆಯ ಮೇಲೆ ಹುಬ್ಬಳ್ಳಿ ನಗರದಿಂದ ಸು. ೧೮ ಕಿಲೋ ಮೀಟರು ದೂರದಲ್ಲಿದೆ. ಈಗ ಊರಲ್ಲಿರುವ ವೀರಭದ್ರ ದೇವರ ಒಂದು ಮೂರ್ತಿ (ಹನುಮಂತದೇವರ ಗುಡಿಯ ಬಾಗಿಲಲ್ಲಿರುವುದು) ಮತ್ತು ನಾಲ್ಕು ಶಾಸನಗಳು ಈ ಊರ ಪ್ರಾಚೀನತೆಗೆ ಕುರುಹಾಗಿವೆ. ಪ್ರಾಚೀನ ಕಾಲದ ಕಟ್ಟಡಗಳಾವುವೂ ಈಗ ಊರಲ್ಲಿಲ್ಲ.

ವಿಜಯನಗರದ ಕೃಷ್ಣದೇವರಾಯನ ಕಾಲದ ಒಂದು ಶಾಸನವು ಹನುಮಂತ ದೇವರ ಗುಡಿಯಲ್ಲಿ ಕಟ್ಟಿಗೆಯ ತೊಲೆಯ ಮೇಲೆ ಕೊರೆಯಲ್ಪಟ್ಟಿದೆ. ಗಾತ್ರದಲ್ಲಿ ಚಿಕ್ಕದಾಗಿದೆ. ಊರ ಗ್ರಾಮಪಂಚಾಯತಿಯ ಕಟ್ಟಡದ ಮಗ್ಗುಲಲ್ಲಿ ಬಿದ್ದಿರುವ ಒಂದು ಕಲ್ಲಿನಲ್ಲಿ ೧೩-೧೪ನೆಯ ಶತಮಾನದ ಒಂದು ಶಾಸನ ಕೆತ್ತಿದ್ದು ಕಂಡು ಬರುತ್ತದೆ. ಆದರೆ ಕಲ್ಲು ಬಹಳ ಸವೆದಿದೆ. ಅಲ್ಲದೆ ಕಲ್ಲು ಬಹಳ ಹುರು ಬರಕಾಗಿರುವುದರಿಂದ ಶಾಸನವನ್ನು ಓದುವುದು ಅಸಾಧ್ಯವೆನಿಸಿದೆ. ಇನ್ನೊಂದುಶಾಸನದ ಕಲ್ಲು ಒಡೆದುಹೋಗಿವುದಲ್ಲದೆ ತೀರಾ ಸವೆದಿದೆ. ಅದರಲ್ಲಿ ಸು. ೧೦-೧೧ನೆಯ ಶತಮಾನದ ಅಕ್ಷರಗಳ ಗುರುತಿರುವುದನ್ನು ಕಾಣಬಹುದು.

ನಾಲ್ಕನೆಯ ಶಾಸನವು, ಊರ ಹೊರಗಡೆ, ಗ್ರಾಮಪಂಚಾಯಿತಯ ಹಿಂದುಗಡೆ ಇರುವ ಗುಡಿಯ ಹಿತ್ತಲಲ್ಲಿ ಬಿದ್ದಿದೆ. ಊರವರ ಹೇಳಿಕೆಯಂತೆ ಪ್ರಸ್ತುತ ಶಾಸನದ ಕಲ್ಲು ಬಹಳ ದಿನಗಳವರೆಗೆ ನೆಲದಲ್ಲಿ ಹುಗಿದುಹೋಗಿತ್ತು.

ಈ ನಾಲ್ಕನೆಯ ಶಾಸನ ಹಲವು ದೃಷ್ಟಿಗಳಿಂದ ಮಹತ್ವಪೂರ್ಣವಾಗಿದೆ. ಭಾರತಸರ್ಕಾರದ ಶಾಸನಶಾಖೆಯ ಪರವಾಗಿ ಡಾ. ಜಿ.ಎಸ್. ಗಾಯಿ ಅವರು ‘ದಕ್ಷಿಣ ಭಾರತದ ಶಾಸನಗಳು ಸಂಪುಟ ೧೮’ ರಲ್ಲಿ ೭ನೆಯ ಕ್ರಮಾಂಕದ ಶಾಸನವಾಗಿ ಪ್ರಕಟಿಸಿದ್ದಾರೆ. ಲಿಪಿ ಸ್ವರೂಪದ ಮೇಲಿಂದ ಇದರ ಕಾಲ ಸು. ೬-೭ನೆಯ ಶತಮಾನವೆಂದು ಹೇಳಿದ್ದಾರೆ. ಅಕ್ಷರಗಳು ತಲೆಕಟ್ಟಿನ Box headed Letters ಎಂದು ಕರೆಯಲಾಗುವ ರೀತಿಯನ್ನು ಹೆಚ್ಚಾಗಿ ಹೋಲುತ್ತವೆ. ಆದುದರಿಂದ ಶಾಸನದ ಕಾಲ ೬-೭ ನೆಯ ಶತಮಾನವೆಂದು ಅಭಿಪ್ರಾಯಪಟ್ಟಿರುವುದು ಯೋಗ್ಯವಾಗಿದೆ. ೬ನೆಯ ಶತಮಾನವೆಂದರೂ ನಡೆದೀತು.

ಶಾಸನ ಶಿಲೆಯ ಮೇಲೆ ಅರ್ಧವರ್ತುಲಾಕಾರದಲ್ಲಿ ನಾಲ್ಕು ಸಾಲುಗಳ ಬರಹವಿದೆ.

ಶಾಸನ ಪಾಠ:

೧) ಸ್ವಸ್ತಿಶ್ರೀ ವಾಣಸತ್ತಿ ಅರಸರಾ

೨) [ಮೂ]ಳು ಙ್ಗು [ನ್ದಾ]ಳೆ ಅ[ನ್ತ] ವರ್ಮ್ಮಕ್ಕಳಾಸಿರಿ[ಗು*]ಪ್ಪೆ

೩) ಆಳೆ ಕುನ್ದಸತ್ತಿ ಅರಸ ….. ಗೊಳೆ ಕವೋಡರಾ ಸಿರಿಗು

೮) ಪ್ಪನುಂ ಸಿರಿವಾಕ [ಟ]ಕಣದೇವಿ …..

ನಾನು ತೆಗೆದುಕೊಂಡು ಬಂದಿರುವ ಶಾಸನ ಪಡಿಯಚ್ಚಿನಲ್ಲಿ ಎರಡನೆಯ ಸಾಲಿನ ‘ಮೂ’ ಮತ್ತು ನಾಲ್ಕನೆಯ ಸಾಲಿನ ‘ಟ’ ಅಕ್ಷರಗಳು ಸ್ಪಷ್ಟವಿವೆ. ಆದುದರಿಂದ ಇವುಗಳಿಗೆ ಊಹಾಸೂಚಕ ಕಂಸದ ಅವಶ್ಯಕತೆಯಿಲ್ಲ. ಮೂರನೆಯ ‘ಅರಸ…. ಗೊಳೆ’ ಇವುಗಳ ನಡುವೆ ಇನ್ನೆರಡು ಅಕ್ಷರಗಳಿರುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕಲ್ಲನ್ನು ಯಾರೋ ಕುಟುಕಿರುವುದರಿಂದ ಅವು ಪೂರ್ಣ ಅಳಿಸಿಹೋಗಿವೆ. ಕೊನೆಯ ಸಾಲಿನ ‘ದೇವಿ’ ಶಬ್ದದ ತರುವಾಯ ಇನ್ನೊಂದು ಅಕ್ಷರವಿರುವಂತಿದೆ. ಶಾಸನವು ಒಮ್ಮೆಲೆ ನಿಂತುಹೋಗಿದೆಯೆಂದು ಶಾಸನ ಸಂಪಾದಕರು ಹೇಳಿದ ಮಾತು ಸತ್ಯವಾಗಿದೆ.

‘ವಾಣಸತ್ತಿ’ ಪ್ರಯೋಗದಲ್ಲಿಯ ಆದಿ ವಕಾರವು ಗಮನಾರ್ಹವಾಗಿದೆ. ಇದು ಪೂರ್ವದ ಹಳಗನ್ನಡದ ವೈಶಿಷ್ಟ್ಯ. ಇದಕ್ಕಿಂತ ಗಮನಾರ್ಹವಾದ ಪೂರ್ವ ಹಳಗನ್ನಡದ ವೈಶಿಷ್ಟ್ರವೊಂದು ಈ ಶಾಸನದಲ್ಲಿದೆ.

ಉದಾ:

ಶ್ರೀವಾಣಸತ್ತಿ ಅರಸರಾ ಮೂಳುಙ್ಗುನ್ದಾಳೆ
ಅನ್ತವರ್ಮ್ಮಕ್ಕಳಾ ಸಿರಿಗುಪ್ಪೆ ಆಳೆ.

ಇಲ್ಲಿ ಷಷ್ಟಿಯ ದೀರ್ಘವು ಪ್ರಥಮಾರ್ಥದಲ್ಲಿ ಪ್ರಯೋಗಗೊಂಡಿರುವುದು ತೀರ ಸ್ಪಷ್ಟ. ಇದು ಪೂರ್ವದ ಹಳಗನ್ನಡ ಕಾಲದಲ್ಲಿ ಅಲ್ಲಲ್ಲಿ ಪ್ರಯೋಗಗೊಂಡಿರುವುದು ಕಂಡುಬರುತ್ತದೆ.

ಉದಾ:

ನನ್ದಿಯಾಲರಾ ವಿಟ್ಟದು
(E.c. IV. ಚಿಕ್ಕಮಗಳೂರು-೫೦ ಸಿರಿಗುಂದ ಶಾಸನ. ಸು. ೬ನೆಯ ಶ.)
ಮಂಗಲೀಸಲಾ ಕಲ್ಮನೆಗೆ ಇತ್ತೊದು ಲಿಂಜಿಗೇಸರಂ.
(I.A.X. ಪುಟ ೬೦ ಬದಾಮಿ ಶಾಸನ ಕ್ರಿ.ಶ. ೫೭೮)
ಅಡಿಗಳಾ ಪ್ರಸಾದಂತೆಯ್ದನ್ತೆ ಸಲ್ಗೆನ್ದರ್
(S.I.I. IX-1 No. 52. ೭ನೆಯ ಶ. ಕೊನೆ ಅಥವಾ ೮ನೆಯ ಶ. ದ. ಆದಿ)
ಮಾರಬಿಚ್ಚರಮ್ಮಯ್ಯಗಳಾ ಬಿನ್ನಪ್ಪಮಾನ್ಗೆಯೆ
(ಆಂದ್ರ ಪ್ರದೇಶ ಗವರ್ನಮೆಂಟ್ ಆರ್ಕಿಯಾಲಾಜಿಲ್ ಸಿರೀಜ,
ನಂ.೩, ಶಾಸನ ನಂ ೯೯ ಅಲಂಪೂರ ಸಿ. ೭೮೦)

ಇವೆಲ್ಲ ಷಷ್ಠೀದೀರ್ಘವು ಪ್ರಥಮಾರ್ಥದಲ್ಲಿ ಪ್ರಯೋಗಗೊಂಡ ಉದಾಹರಣೆಗಳು. ಇಂಥ ಪ್ರಯೋಗಗಳು ೮ನೆಯ ಶತಮಾನದ ಕೊನೆಯವರೆಗಿದ್ದು ೯ನೆಯ ಶತಮಾನದಿಂದ ಕಣ್ಮರೆಯಾಗುತ್ತವೆ. ಪ್ರಸ್ತುತ ಸಿರಗುಪ್ಪಿಯ ಈ ಚಿಕ್ಕ ಶಾಸನದಲ್ಲಿ ಎರಡು ಬಾರಿ ಇಂಥ ಪ್ರಯೋಗ ಬಂದಿರುವುದು ತುಂಬ ಗಮನಾರ್ಹವಾದ ಸಂಗತಿ.

ಈ ಶಾಸನದ ಇನ್ನೊಂದು ಹೆಚ್ಚಳವೆಂದರೆ ಇದು ತುರುಗೋಳ್ಗಾಳಗದ ಸ್ಮಾರಕವಾಗಿದೆ. ಶಸನ ಬರಹದಲ್ಲಿ ಈ ಸಂಗತಿಯ ಸ್ಪಷ್ಟ ಉಲ್ಲೇಖವಿಲ್ಲ. ಬರಹವು ಅಪೂರ್ಣವಾಗಿದೆಯೆಂದು ಈಗಾಗಲೇ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಆದರೆ ಶಾಸನ ಬರಹವಿರುವ ಭಾಗದ ಕೆಳಗಡೆ ಇರುವ ಚಿತ್ರಗಳಲ್ಲಿ ಈ ಸಂಗತಿ ಸ್ಪಷ್ಟವಿದೆ. ಮೊದಲ ಭಾಗದಲ್ಲಿ ಆಕಳುಗಳ ಹಿಂಡನ್ನೂ ಬಿಲ್ಲು ಬಾಣಗಳಿಂದ ಸಜ್ಜಾದ ಯೋಧರಲ್ಲಿ ನಡೆಯುತ್ತಿರುವ ಯುದ್ಧವನ್ನೂ ಚಿತ್ರಿಸಲಾಗಿದೆ. ಮೇಲ್ಭಾಗದಲ್ಲಿ ವೀರರಿಬ್ಬರನ್ನು ದೇವಕನ್ನಿಕೆಯರು ಸೇವಿಸುತ್ತಿರುವುದು ಸೇವಿಸುತ್ತಿರುವುದು ಚಿತ್ರಿತವಾಗಿದೆ. ಅವರಿಬ್ಬರೂ ತುರುಸೆರೆ ಬಿಡಿಸುವ ಕಾರ್ಯದಲ್ಲಿ ಪ್ರಾಣಾರ್ಪಣೆ ಮಾಡಿದವರೆಂಬುದು ಸ್ಪಷ್ಟ. ಈ ವರೆಗೆ ತಿಳಿದಿರುವಂತೆ ಇಂಥ ಸ್ಮಾರಕಗಳಲ್ಲಿ ಇದೇ ಪ್ರಥಮವಾದುದೆಂದು ಖಚಿತವಾಗುತ್ತದೆ.

ವಾಣಸತ್ತಿ, ಕುಂದಸತ್ತಿ ಎಂಬ ಅರಸರ ಹೆಸರುಗಳು ಅಂತ್ಯದಲ್ಲಿಯ ‘ಸತ್ತಿ’ ಶಕ್ತಿ ಎಂಬುದರಿಂದ ಬಂದುದು ಹೀಗೆ ಸತ್ತಿ, ಶಕ್ತಿ ಎಂದು ಅಂತ್ಯವಾಗುವ ಹೆಸರುಗಳು ಸೇಂದ್ರಕ ರಾಜರಲ್ಲಿರುವುದು ಸಾಮಾನ್ಯ. ಸೇಂದ್ರಕರು ನಾಗರಖಂಡದ ಅಧಿಪತಿಗಳಾಗಿದ್ದರು. ಮೊದಲಲ್ಲಿ ಅವರು ಕದಂಬರ ಸಾಮಂತರಾಗಿದ್ದು ನಾಗರಕಂಡವನ್ನು ಆಳುತ್ತಿದ್ದರು. ಕದಂಬರನ್ನು ಬಾದಾಮಿಯ ಚಾಲುಕ್ಯರು ಗೆದ್ದಮೇಲೆ ಸೇಂದ್ರಕರು ಅವರ ಸಾಮಂತರಾಗಿ ಅವರೊಡನೆ ರಕ್ತಸಂಬಂಧವನ್ನು ಕೂಡ ಮಾಡಿದರು. ತರುವಾಯದಲ್ಲಿ ಚಾಳುಕ್ಯ ಸಾಮ್ರಾಜ್ಯದ ಉತ್ತರಭಾಗಗಳಲ್ಲಿ ಅವರ ಅಧಿಕಾರಿಗಳಾಗಿ ಆಳುತ್ತಿದ್ದರು. ಇವರು ಪ್ರಥಮವಾಗಿ ಮಯೂರ ಶರ್ಮನ ಚಂದ್ರವಳ್ಳಿ ಶಾಸನದಲ್ಲಿ ಕಾಣಿಸಿಕೊಳ್ಳುತ್ತಾರೆ. ಅನಂತರ ಹರಿವರ್ಮನ ಹಲಸಿಗೆಯ ಶಾಸನ ಎರಡನೆಯ ಪುಲಿಕೇಶಿಯ ಚಿಪಳೂಣ ತಾಮ್ರಶಾಸನ (E.I. III. ಪು 30), ಲಕ್ಷ್ಮೇಶ್ವರ ಶಾಸನ (I.A. VII ಪು. 106) ವಿನಯಾದಿತ್ಯನ ಬೆಳಗಾವೆ ಶಾಸನ (I.A. XIX ಪು 142) ಮೊದಲಾದವುಗಳಲ್ಲಿ ಸೇಂದ್ರಕರು ಉಲ್ಲೇಖಿಸಲ್ಪಟ್ಟಿದ್ದಾರೆ. ಪ್ರಸ್ತುತ ಶಾಸನದಿಂದ ೬-೭ನೆಯ ಶತಮಾನಗಳಲ್ಲಿ ಅವರ ಅಧಿಕಾರ ಧಾರವಾಡ ಜಿಲ್ಲೆಯ ಪಶ್ಚಿಮಾರ್ಧದವರೆಗೂ ವ್ಯಾಪಿಸಿತ್ತೆಂಬುದು ತಿಳಿದುಬರುತ್ತದೆ.