ಸೇನವಾರರು ಪ್ರಾಚೀನ ಕರ್ನಾಟಕದ ರಾಜ ಮನೆತನಗಳಲ್ಲಿ ಪ್ರಮುಖರಾದವರು. ಆದರೆ ಇವರನ್ನು ಕುರಿತು ಈವರೆಗೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ಕ್ರಿ.ಶ. ಸು.೭ನೆಯ ಶತಮಾನದಿಂದ ಕಂಡುಬರುವ ಇವರು*ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗೆ ಮತ್ತು ಧಾರವಾಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ದೊರೆತಿರುವ ಕೆಲವು ಶಾಸನಗಳಲ್ಲಿ ಇವರನ್ನು ಕುರಿತು ಉಲ್ಲೇಖಗಳಿವೆ.

ಸೇನವ, ಸೇನವಾರ, ಸೇಣವಾರ, ಸೇನಾವರ, ಸೇನವಲ್ಲ ಮುಂತಾದ ರೂಪಗಳಲ್ಲಿ ಕಾಣುವ ಇವರ ಮನೆತನ ಹೆಚ್ಚಾಗಿ ಸಾಮಂತರ ಅಂತಸ್ತಿನದಾಗಿದ್ದುದು ಈವರೆಗೆ ಪ್ರಕಟಿತ ಶಾಸನಗಳಿಂದ ವ್ಯಕ್ತವಾಗುತ್ತದೆ. ಆದರೆ ಕ್ರಿ.ಶ. ೮ನೆಯ ಶತಮಾನದಲ್ಲಿ ಮಾತ್ರ ಇವರು ಮಹಾಮಂಡಲೇಶ್ವರರಾಗಿ ಪ್ರಕಟಗೊಳ್ಳುತ್ತಾರೆ. ಪಶ್ಚಿಮಘಟ್ಟ ಮತ್ತು ಪೂರ್ವದ ಕೆಲವು ಪ್ರದೇಶಗಳಲ್ಲಿ ಕಂಡುಬರುವ ಇವರು ಸೇಂದ್ರಕ-ಸಾಂತರರಂತೆ ಆಳುಪರು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಹಾಗೂ ಕಲ್ಯಾಣಿ ಚಾಳುಕ್ಯರ ಅಧೀನರಾಗಿ ಆಳುತ್ತಿದ್ದುದು ಶಾಸನಗಳಲ್ಲಿ ನಿರ್ದಿಷ್ಟವಾಗಿದೆ.

ಬಿ.ಎಲ್. ರೈಸರು ಇವರನ್ನು ಉಲ್ಲೇಖಿಸುವ ಕೆಲವು ಶಾಸನಗಳನ್ನು ಆಧಾರವಾಗಿಟ್ಟುಕೊಂಡು ಕೆಲವು ಸಂಗತಿಗಳನ್ನು ಕಲೆ ಹಾಕಿದ್ದಾರೆ.

[1]ಉದಾಹರಣೆಗೆ ಮುಂದಿನ ಉಲ್ಲೇಖಗಳನ್ನು ಇಲ್ಲಿ ಗಮನಿಸಬಹುದು.

೧. ಕೊಪ್ಪ-೩೭ನೆಯ ಶಾಸನ ಸು. ಕ್ರಿ.ಶ. ೬೯೦ ಇದರಲ್ಲಿ ಇವರ ಮನೆತನದ ಉಲ್ಲೇಖ ಮಾತ್ರವಿದ್ದು ಆಳುಪರು ಇವರ ಅಧೀನರಾಜರಾಗಿದ್ದಾರೆ. ಆಳುಪ ಚಿತ್ರವಾಹನನ ಹೆಸರು ಇದರಲ್ಲಿದೆ.

೨. ಶಿಕಾರಿಪುರ-೨೭೮ ಕ್ರಿ.ಶ. ಸು. ೭೦೦ ಇದರಲ್ಲಿಯೂ ಇವರ ವಂಶನಾಮ ನಿರ್ದೇಶನವಿದ್ದು ಸೇನಾವರ ದೊರೆ ಭೂವರಕ್ಕೆ ಅರ್ಕೇಸರಿ ಎಂಬುವನು ಮುಗುಂದ ನಾಡನ್ನಾಳುತ್ತಿದ್ದನು. ಬಾ ಚಾ. ಚಕ್ರವರ್ತಿ ವಿನಯಾದಿತ್ಯನು ಇವರ ಅಧೀನರಾಜನಾಗಿದ್ದ.

೩. ಸೊರಬ-೩೮೧ ಕ್ರಿ.ಶ.ಸು. ೧೦೧೦ ರಲ್ಲಿ ಅಯ್ದನೆಯ ವಿಕ್ರಮಾದಿತ್ಯನ ಅಧೀನನಾಗಿ ಸೇನವಾರ ದೊರೆಯೊಬ್ಬ ಬನವಾಸಿಯಲ್ಲಿದ್ದ.

೪. ಚಿ.ಮ ೬೧,೬೨,೯೪ ಮತ್ತು ೯೫ ರಲ್ಲಿ ಇವರ ಉಲ್ಲೇಖಗಳಿವೆ. ಜೀವಿತವಾರ, ಜೀಮೂತವಾಹನ ಮಾರ ಅಥವಾ ಮಾರಸಿಹಂ ಎಂಬ ಇವರ ಹೆಸರುಗಳು ಕಂಡು ಬರುತ್ತವೆ.

೫. ಡಾವಣಗೆರೆ-೮೪ ಮತ್ತು ೯೦ ರಲ್ಲಿ ಇವರ ಕೆಲವು ಹೆಸರುಗಳು ಕಂಡು ಬರುತ್ತವೆ. ಆದಿತ್ಯ, ಸೂರ್ಯ ಎಂಬವರು ೬ನೆಯ ವಿಕ್ರಮಾದಿತ್ಯನ ಅಧಿಕಾರಿಗಳಾಗಿದ್ದುದು ಕಂಡುಬರುತ್ತದೆ.

೬. ಈ ಮೇಲಿನ ಉಲ್ಲೇಖಗಳಲ್ಲದೆ ರೈಸರ ಕಣ್ಣು ತಪ್ಪಿ ಉಳಿದು ಹೋಗಿರುವ ಶಿಕಾರಿಪುರ-೧೫೫ ನೆಯ ಶಾಸನವನ್ನೂ ಇಲ್ಲಿ ನಮೂದಿಸಬೇಕು. ಇದರ ಕಾಲ ಕೂಡ ಕ್ರಿ.ಶ. ಸು. ೮ನೆಯ ಶತಮಾನವಾಗಿದ್ದು “…..ಹನ” ಎಂಬ ಹೆಸರು ತ್ರುಟಿತವಾದ ರಾಜನೊಬ್ಬ ಜೆದುಗೂರ ಎಪ್ಪತ್ತು ನಾಡನ್ನು ಆಳುತ್ತಿದ್ದಾಗ ಅವನ ಅಧೀನದಲ್ಲಿ? ಒಬ್ಬ “ಸೇನಾವೆರಸರ್” ಅಧಿಕಾರಿಯಾಗಿದ್ದನೆಂದು ಇದು ತಿಳಿಸುತ್ತದೆ. ಪ್ರಸ್ತುತ ಶಾಸನ ತುಂಬ ತ್ರುಟಿತವಾಗಿದೆ……ಹನ ಎಂಬ ತ್ರುಟಿತ ಹೆಸರು ಬಹುಶಃ ಚಿತ್ರವಾಹನ (ಅಥವಾ ಕ್ಷೇತ್ರವಾಹನ) ನದಾಗಿರಬಹುದು.

ಇದೀಗ ಇವರನ್ನು ಉಲ್ಲೇಖಿಸುವ ಹಲವಾರು ಹೊಸ ಗೋಸಾಸ ಶಾಸನಗಳು ನಾಗರಖಂಡ ಪ್ರದೇಶ (ಈಗಿನ ಸೊರಬ. ಹಿರೇಕೆರೂರ, ಶಿಕಾರಿಪುರ, ಹಾನಗಲ್ ಮತ್ತು ಬ್ಯಾಡಗಿ ತಾಲೂಕುಗಳ ಕೆಲವು ಊರುಗಳು) ದಲ್ಲಿ ಕಂಡುಬಂದಿವೆ.

ಇಲ್ಲಿ ಗೋಸಾಸಗಳ ಬಗ್ಗೆ ಒಂದು ಮಾತು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದುವರೆಗೆ ಸಿಕ್ಕ ಗೋಸಾಸಗಳನ್ನು ಡಾ || ಎಂ. ಎಂ. ಕಲಬುರ್ಗಿಯವರು ತಮ್ಮದೊಂದು ಲೇಖನದಲ್ಲಿ ಪಟ್ಟಿ ಮಾಡಿದ್ದಾರೆ. (ಮಾರ್ಗ ಸಂಪುಟ-೨) ಆದರೆ ಈ ಸೇನವಾರರ ಅವಧಿಯಲ್ಲಿ ಅವು ಅತ್ಯಧಿಕ ಸಂಖ್ಯೆಯಲ್ಲಿ ದೊರೆತಿರುವುದು ಗಮನಿಸತಕ್ಕ ಸಂಗತಿಯಾಗಿದೆ. ನಾಗರಖಂಡ ಪ್ರದೇಶದಲ್ಲಿಯೇ ಒಟ್ಟು ಸು. ೯೦ ಗೋಸಾಸಗಳಿದ್ದು ಅವುಗಳಲ್ಲಿ ಸು. ೧೭ ಗೋಸಾಸಗಳು ಲಿಪಿಸಹಿತವಾಗಿವೆ. ಈ ಪಟ್ಟಿ ಮುಂದಿನಂತಿದೆ:

    ಅಲಿಖಿತ ಲಿಖಿತ ಒಟ್ಟು
೧. ಮತ್ತೀಹಳ್ಳಿ
೨. ಬೆಟ್ಟಗೆರೂರು
೩. ಕಿರವಾಡಿ
೪. ತಿಳವಳ್ಳಿ
೫. ಸಾತೇನಹಳ್ಳಿ
೬. ಚಿಕ್ಕೊಣತಿ
೭. ಅಗ್ರಹಾರ ಮುತ್ತಳ್ಳಿ ೨೩ ೩೦
೮. ಕರ್ನೆಲ್ಲಿ ೧೯ ೧೯
೯. ಮಲ್ಲೇನಹಳ್ಳಿ ೧೨
೧೦. ಬಾರಂಗಿ ೧೪ ೧? ೧೫
೧೧. ಅಬ್ಬಲೂರು
೧೨. ಬಂದಳಿಕೆ
      ಒಟ್ಟು ೯೦

ಉತ್ತರ ಕನ್ನಡ ಜಿಲ್ಲೆಯ ಎಸಳಿ ಮತ್ತು ಹುಸ್ನಿಗಳಲ್ಲಿ ೧೫ರಂತೆ ಗೋಸಾಸಗಳ ಸಮೂಹ ಕಂಡುಬಂದುದು ಅತೀ ಹೆಚ್ಚಿನ ಸಂಖ್ಯೆಯ ಗೋಸಾಸಗಲ್ಲುಗಳ ಸಮುದಾಯವೆನಿಸಿತ್ತು. ಆದರೆ ಅಗ್ರಹಾರ ಮುತ್ತಳ್ಳಿ ಮತ್ತು ಕರ್ನೆಲ್ಲಿಗಳ ಸಮುದಾಯ ಅವನ್ನು ಮೀರಿರುವುದು ಈಗ ಸ್ಪಷ್ಟ. ಎಂದರೆ ಸೇನವಾರರ ಆಡಳಿತದಲ್ಲಿ ಗೋಸಾಸಗಳನ್ನು ನಿಲ್ಲಿಸುವುದು ಸಾಂಸ್ಕೃತಿಕವಾದ ಒಂದು ವಿಶೇಷ ಸಂಪ್ರದಾಯವಾಗಿ ರೂಢಿಗೊಂಡಂತೆ ತೋರಿಬರುತ್ತದೆ.

ಈಗಾಗಲೇ ನೋಡಿರುವಂತೆ ಇವರ ಬಗ್ಗೆ ಕಂಡು ಬರುವ ಮೊದಲ ಉಲ್ಲೇಖ ಕೊಪ್ಪ-೩೭ರ ಕ್ರಿ.ಶ. ಸು. ೬೯೦ರ ಶಾಸನದಲ್ಲಿ. ಇಲ್ಲಿ ಇವರ ವಂಶನಾಮ ಮಾತ್ರವಿದ್ದು ಅಧಿರಾಜನಾಗಿ ಆಳುಪ ಚಿತ್ರವಾಹನನ ಹೆಸರು ಗೋಚರಿಸಿದೆ. ತರುವಾಯದ ಹಾರೋಮುಚಡಿ (ಶಿಕಾರಿಪುರ ತಾ || ಶಾಸನದಲ್ಲಿ ಈ ಮನೆತನದ ಭೂವರಕ್ಕೆ ಅರ್ಕೇಸರಿ (<ಅರಿಕೇಸರಿ?) ಎಂಬವನು ಮುಗುಂದನಾಡನ್ನಾಳುತ್ತಿದ್ದುದಾಗಿ ಹೇಳಿದೆ.

ಚಿಕ್ಕನಂದೀಹಳ್ಳಿ (ಬ್ಯಾಡಗಿ ತಾ || ) ಯಲ್ಲಿ ದೊರೆತಿರುವ ಒಂದು ಶಾಸನದಲ್ಲಿ ಬಾದಾಮಿ ಚಾಲುಕ್ಯ ದೊರೆ ಕೊಕ್ಕುಲಿ ಎಂಬ ಅಧಿರಾಜನ ಕೈಕೆಳಗೆ ಸೇನವಾರ ಮನೆತನದ ದೋಸಿಯರ ಎಂಬ ಅರಸನು ಮುಗಂದನಾಡನ್ನಾಳುತ್ತಿದ್ದನೆಂದು ತಿಳಿದು ಬರುತ್ತದೆ.[2] ಎಂದರೆ ದೋಸಿ ಅಥವಾ ದೋಸಿಯರ ಎಂಬ ದೊರೆ ಸೇನವಾರ ಮನೆತನದವನೆಂಬ ಅಂಶ ಈ ಶಾಸನದಲ್ಲಿ ನಿರ್ದಿಷ್ಟವಾಗಿದೆ. ಇದಲ್ಲದೆ ಹಾವೇರಿ ತಾಲ್ಲೂಕಿನ ದಿಡಗೂರ ಗ್ರಾಮದ ಒಂದು ಶಾಸನದಲ್ಲಿ.[3] ಕತ್ತಿಯರನು ಪೃಥ್ವಿಯನ್ನಾಳುತ್ತಿದ್ದಾಗ ಬನವಾಸಿ-೧೨೦೦೦ ಪ್ರಾಂತವನ್ನು ಮಂಡಲೇಶ್ವರನಾಗಿ ಆಳುತ್ತಿದ್ದಾಗ ದೋಸಿ ಎಂಬವನು ಮುಗುಂದದ ಮಹಾಜನರಿಗೆ ದತ್ತಿಗಳನ್ನು ಬಿಟ್ಟ ವಿಷಯ ಉಲ್ಲೇಖಗೊಂಡಿದೆ. ಇಲ್ಲಿ ಕತ್ತಿಯರನೆಂದರೆ ಬಾ. ಚಾ. ಇಮ್ಮಡಿ ಕೀರ್ತಿವರ್ಮನೆಂದೂ ದೋಸಿ, ದೋಸಿಯರನೆಂದರೆ ಆತನ ಕೈಕೆಳಗೆ ಮಂಡಲೇಶ್ವರನಾಗಿದ್ದ ಸೇನವಾರ ದೊರೆಯೆಂದೂ ನಿಶ್ಚಿತವಾಗಿ ಹೇಳಬಹುದು. ಅದೇ ರೀತಿ ಚಿಕ್ಕನಂದಿಹಳ್ಳಿ ಶಾಸನದ ಕೊಕ್ಕುಲಿ ಎಂದರೆ ಬಾದಾಮಿ ಚಾಲುಕ್ಯ ಚಕ್ರವರ್ತಿ ಇಮ್ಮಡಿ ವಿಕ್ರಮಾದಿತ್ಯನೆಂದು ತಿಳಿಯಬಹುದು. ಇಮ್ಮಡಿ ವಿಕ್ರಮಾದಿತ್ಯನ ಕಾಲದಲ್ಲಿ ಈ ದೋಸಿಯರ ಮುಗುಂದ ನಾಡಿನ ನಾಡಾಧಿಕಾರಿಯಾಗಿದ್ದು ಅವನ ಮಗ ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ಬನವಾಸಿ-೧೨೦೦೦ ಪ್ರಾಂತದ ಮಹಾಮಂಡಲೇಶ್ವರನಾಗಿ ಉನ್ನತಿ ಹೊಂದಿದ. ಆದರೆ ದುರ್ದೈವವಶಾತ್ ಈತ ಚಾಲುಕ್ಯರಿಗೂ ರಾಷ್ಟ್ರ ಕೂಟರಿಗೂ ನಡೆದ ಘೋರ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ. ಪ್ರಸ್ತುತ ವಿಷಯವನ್ನು ಬ್ಯಾಡಗಿ ತಾಲೂಕು, ಸಿಡೇನೂರ ಶಾಸನ ಸ್ಪಷ್ಟವಾಗಿ ಹೇಳಿದೆ.[4] ಪ್ರಸ್ತುತ ಶಾಸನದಲ್ಲಿ ದೋಸಿ ಮತ್ತು ಪೊಗಿಲ್ಲಿ ಎಂಬ ಇಬ್ಬರ ಹೆಸರುಗಳು ಬಂದಿರುವುದರಿಂದ ಇಲ್ಲಿನ ಪೊಗಿಲ್ಲಿ ಎಂದರೆ ಸೇಂದ್ರಕ ದೊರೆ ಶ್ರೀ ಪೊಗಿಲ್ಲಿಯೇ ಆಗಿರಬೇಕು. ಅದೇ ರೀತಿ ಭೂವರಕ್ಕೆ ಮತ್ತು ದೋಸಿಯರರು ಮೂಲತಃ ಮುಗುಂದ ನಾಡಿನ ಅಧಿಕಾರಿಗಳಾಗಿದ್ದು ಇಬ್ಬರ ನಡುವಿನ ಕಾಲಾವಧಿ ತೀರ ಕಡಿಮೆ ಇರುವುದರಿಂದ ಇವರೀರ್ವರೂ ತಂದೆ ಮಕ್ಕಳಾಗಿರುವ ಸಾಧ್ಯತೆ ತುಂಬ ಹೆಚ್ಚಾಗಿದೆ.

ದಿಡಗೂರ ಶಾಸನ ದೋಸಿಯರನು ಕೀರ್ತಿವರ್ಮನ ಅಧೀನನಾಗಿ ಬನವಾಸಿ ನಾಡನ್ನು ಆಳುತ್ತಿದ್ದ ವಿಷಯ ತಿಳಿಸುವಂತೆ ವಕ್ಕಲೇರಿ ತಾಮ್ರಪಟ ಕೂಟ ಈತನನ್ನು ಬನವಾಸಿ ಮಂಡಲೇಶ್ವರನೆಂದು ಗುರುತಿಸುತ್ತದೆ. ಪ್ರಸ್ತುತ ಶಾಸನದ ಕಾಲ ಕ್ರಿ.ಶ. ೭೫೮. ಇದರಲ್ಲಿ ದೋಸಿಯರನು ಚಕ್ರವರ್ತಿಯ ಅನುಜ್ಞೆ ಪಡೆದು ಸುಳ್ಳಿಯೂರು (ತಾಮರಮುಗೆ; ಪಾನುಂಗಲ್ ಮತ್ತು ಕಿಱುವಳ್ಳಿಗಳ ಮಧ್ಯದಲ್ಲಿದ್ದ) ನೆಂಗಿಯೂರು ಹಾಗೂ ನಂದಿವಳ್ಳಿ ಗ್ರಾಮಗಳನ್ನು ಕೆಲವು ಬ್ರಾಹ್ಮಣರಿಗೆ ದತ್ತಿಯಾಗಿ ಬಿಟ್ಟನೆಂದಿದೆ.[5] ಇದೀಗ ದೊರೆತ ಮಲ್ಲೇನಹಳ್ಳಿಯ ಶಿವಾಲಿಹಕ್ಕಲಿನಲ್ಲಿ ದೊರೆತ ಒಂದು ಶಾಸನದಲ್ಲಿಯೂ ಈತನ ಹೆಸರು ಬಂದಿದೆ.[6] ಕೀರ್ತಿವರ್ಮನು ಪೃಥ್ವೀರಾಜ್ಯಗೆಯ್ಯುವಲ್ಲಿ ದೋಸಿಯರನು ಬನವಾಸಿ ಪನ್ನಿರ್ಚ್ಛಾಸಿರವನ್ನು ಆಳುತ್ತಿದ್ದುದಾಗಿ ಈ ಶಾಸನ ಸ್ಪಷ್ಟಪಡಿಸುತ್ತದೆ.

ಇವನ ತರುವಾಯ ಬಾದಾಮಿ ಚಾಳುಕ್ಯರಿಗೆ ವಿರೋಧಿಯಾಗಿ ರಾಷ್ಟ್ರಕೂಟಪರ, ಅವರ ಅಧೀನನಾಗಿ ಬನವಾಸಿ ಪ್ರಾಂತವನ್ನು ಆಳುತ್ತಿದ್ದ ಮಾರಕ್ಕೆ ಅರಸನೆಂಬುವನ ಹೆಸರು ಈಗ ದೊರೆತಿರುವ ಹೊಸ ಶಾಸನಗಳಲ್ಲಿ ಉಕ್ತವಾಗಿದೆ: ಶಿವಾಲಿಹಕ್ಕಲಿನ ಒಂದು ಶಾಸನ ಮುಂದಿನಂತಿದೆ:

ಸ್ವಸ್ತ್ಯಕಾಲ ವರ್ಷ ಶ್ರೀ ಪೃಥುವೀ ವಲ್ಲಭ ಮಹಾರಾಜಾಧಿ ರಾಜ ಪ
ರಮೇಶ್ವರ ಭಟರರಾ ಪೃಥುವಿಯಾನ್ನೇಕಚ್ಛತ್ರಚಾಯೆಯಿನ್ ಪರಿಪಾ
ಲಿಸೆ ಅಕಾಲ ವರ್ಷ ಶ್ರೀ ಪೃಥುವೀ ವಲ್ಲಭ ಸೇನಾವರ ಮಾರಕ್ಕೆ ಅರಸರ್ಬನ
ವಾಸಿ ಪನ್ನಿಚ್ಛಾಸಿರಮಾನಾಳೆ ಆlದಿತ್ಯ ಸೇನ ಪಣ್ಡಿತರ್ ಧರ್ಮ್ಮರಾಜ್ಯ [] ಆಳೆ
………..
ಲಿಗರಾ ಬಿಟ್ಟಿಯಂ ಪೂನ್ದನ್ದುದಾ ಕೊಟ್ಟು ………….ಣ್ಡೆ……… ಪೃಥವೀ…….

ಮಾರಕ್ಕೆ ಅರಸ ಸೇನವಾರ ಮನೆತನದವನೆಂಬ ಅಂಶವನ್ನು ಇದು ಸಮರ್ಥಿಸುತ್ತದೆಯಲ್ಲದೆ ಈತ ಒಂದನೆಯ ಕೃಷ್ಣನ ಒಬ್ಬ ಪ್ರಸಿದ್ಧ ಹಾಗೂ ಪ್ರಬಲ ಮಂಡಲೇಶ್ವರನಾಗಿದ್ದನೆಂಬುದು ಬೆಳಕಿಗೆ ಬರುತ್ತದೆ. ಒಂದನೆಯ ಕೃಷ್ಣನಿಗೆ ಅಕಾಲವರ್ಷ ಪೃಥುವೀವಲ್ಲಭ ಎಂದಿರುವಂತೆಯೇ ಮಾರಕ್ಕೆ ಅರಸನನ್ನು ಅಕಾಲ ವರ್ಷ ಪೃಥುವೀ ವಲ್ಲಭ ಎಂದಿರುವುದು ತುಂಬ ಗಮನಾರ್ಹ ಅಂಶ. ಬಾದಾಮಿ ಚಾಲುಕ್ಯರ ಅಧಿಕಾರವನ್ನು ಕಿತ್ತೊಗೆಯುವಲ್ಲಿ ರಾಷ್ಟ್ರಕೂಟ ಒಂದನೆಯ ಕೃಷ್ಣನಿಗೆ ಮಾರಕ್ಕೆಯರಸ ಅಪಾರ ಸಹಾಯ ಸಲ್ಲಿಸಿರುವುದು ಇದರಿಂದ ಸಿದ್ಧವಾಗುತ್ತದೆ. ಸೇನವಾರ ಮನೆತನದವನೇ ಆದ ದೋಸಿಯರ ಮತ್ತು ಸೇಂದ್ರ ಪೊಗಿಲ್ಲಿಗಳನ್ನು ಬಗ್ಗು ಬಡಿದು ಈ ಭಾಗದಲ್ಲಿ ರಾಷ್ಟ್ರಕೂಟರು ತಮ್ಮ ಆಧಿಪತ್ಯ ಸ್ಥಾಪಿಸುವಲ್ಲಿ ಈತನ ಪಾತ್ರ ತುಂಬ ಮಹತ್ವದ್ದಾಗಿರಬೇಕು.

ಈಗ ಮಾರಕ್ಕೆ ಅರಸನ ವಂಶ ನಿರ್ದಿಷ್ಟಗೊಂಡದ್ದರಿಂದ ಸೇನವಾರ ಮನೆ ತನಕ್ಕೆ ಸಂಬಂಧ ಪಡುವ ಶಾಸನಗಳ ಸಂಖ್ಯೆ ಹೆಚ್ಚುತ್ತಲಿದೆ. ನೇರವಾಗಿ ಅವನ ಹೆಸರನ್ನು ಹೇಳುವ ಶಾಸನಗಳು ಮುಂದಿನಂತಿವೆ:

೧. ಮುತ್ತಳ್ಳಿ (ಸತ್ಯಶುದ್ಧ ಕಾಯಕ, ೩-೩, ೪, ನಂ. ೧೦) ಅಧಿರಾಜ ರಾ.ಕೂ. ೧ನೆಯ ಕೃಷ್ಣ
೨. ಮಲ್ಲೇನಹಳ್ಲಿ (ಅದೇ., ನಂ.೨)
೩. ( ” ನಂ. ೩)
೪. ಮುತ್ತಳ್ಳಿ ( ” ನಂ. ೬)  
೫. ( ” ನಂ. ೭)
೬. ( ” ನಂ. ೮) ರಾ.ಕೂ. ಧ್ರುವ
೭. ( ” ನಂ. ೯) ರಾ.ಕೂ. ಧ್ರುವ
ಬೆಟ್ಟಗೆರೂರ (ಅದೇ., ನಂ. ೧೧)
೯. ನೂಲಗೇರಿ (KRI, Pro. Report, 1953-57 ನಂ.೫) ರಾ.ಕೂ. ೨ನೆಯ ಗೋವಿಂದ
೧೦. (ಅದೇ., ನಂ.೧೧) ರಾ.ಕೂ. ೧ನೆಯ ಕೃಷ್ಣ
೧೧. ಸಿಡೇನೂರ (SII, XX, No.10)

 

” ಧ್ರುವ
೧೨. ನರೇಗಲ್ (E.I. VI, p. 162) ” ಧ್ರುವ
೧೩. ಹೊಂಬಳಿ (EI, XXXIII, p.257) (ಕೇವಲ ಮಾರಕ್ಕೆಯರಸನ ಉಲ್ಲೇಖ ಮಾತ್ರವಿದೆ.)

ಇವಲ್ಲದೆ “ಶ್ರೀ ಮಾಕ್ಕೆ ಅ…… ನಾಡಾಳೆ” ಎಂದು ಹೇಳುವ ರಾಣೆಬೆನ್ನೂರ ತಾ. ಹೂಲಿಹಳ್ಳಿ ಶಾಸನೋಕ್ತ ಅಧಿಕಾರಿ ಮಾರಕ್ಕೆ ಅರಸನೇ ಆಗಿರುವ ಸಾಧ್ಯತೆಯಿದೆ.[7]

ಹೀಗೆ ವಕ್ಕಲೇರಿ ತಾಮ್ರಶಾಸನ, ದಿಡಗೂರು, ಚಿಕ್ಕನಂದೀಹಳ್ಳಿ, ಮಲ್ಲೇನಹಳ್ಳಿ ಮತ್ತು ಸಿಡೇನೂರುಗಳ ಶಿಲಾಶಾಸನಗಳು ಸೇನವಾರ ದೋಸಿಯರನ ಹೆಸರನ್ನು ನೇರವಾಗಿ ಹೇಳುವ ೫ ದಾಖಲೆಗಳು ದೊರೆತಂತಾಗುತ್ತದೆ. ಅದೇ ರೀತಿ ಮಾರಕ್ಕೆ ಅರಸನ ನೇರ ಹೆಸರು ಹೇಳುವ ಶಾಸನಗಳ ಸಂಖ್ಯೆ ೧೩-೧೪ ಆಗುತ್ತದೆ. ಎಂದರೆ ಹೆಸರು ಅಸ್ಪಷ್ಟವಾಗಿರುವ ಆದರೆ ೭-೮ನೆಯ ಶತಮಾನದ ಕಾಲಾವಧಿಗೆ ಸೇರುವ ಸೇನವಾರ ಮನೆತನದ ಶಾಸನಗಳ ಸಂಖ್ಯೆ ಮುಂಚೆ ತಿಳಿದಿದ್ದದಕ್ಕಿಂತ ಸು. ೨೫ ರಷ್ಟಾದರೂ ಹೆಚ್ಚಾಗುತ್ತಲಿದೆ.

ದೋಸಿಯರ ಮತ್ತು ಮಾರಕ್ಕೆ ಅರಸರು ಒಂದೇ ವಶದವರಾಗಿದ್ದು ಒಂದೇ ಪ್ರದೇಶಕ್ಕೆ ಸೇರಿದ್ದರೂ ಪರಸ್ಪರ ವಿರೋಧೀ ರಾಜಕೀಯ ಶಕ್ತಿಗಳ ಅಧೀನರಾಗಿದ್ದು ಒಬ್ಬರ ವಿನಾಶಕ್ಕೆ ಮತ್ತೊಬ್ಬರು ಕಾರಣರಾದುದು ಚರಿತ್ರೆಯ ವಿಪರ್ಯಾಸವಷ್ಟೆ. ಅಷ್ಟೇ ಅಲ್ಲದೆ ಸ್ವತಃ ಮಾರಕ್ಕೆಯರಸ ರಾ. ಕೂ. ಒಂದನೆಯ ಕೃಷ್ಣ, ಅವನ ಮಗ ಇಮ್ಮಡಿ ಗೋವಿಂದ ಮತ್ತು ಗೋವಿಂದನ ತಮ್ಮ ಧ್ರುವ- ಈ ಮೂವರ ಅಧೀನನಾಗಿ ಬನವಾಸಿ ಮಂಡಲದ ಅಧಿಕಾರ ಹೊಂದಿದ್ದರೂ ನಡುವೆ ಕೆಲಕಾಲ ಇಮ್ಮಡಿ ಗೋವಿಂದನ ಅವಧಿಯಲ್ಲಿನ ಮುತ್ತಳ್ಳಿಯ ಎರಡು ಶಾಸನಗಳಲ್ಲಿ[8] ಇವನ ಹೆಸರಿಲ್ಲ. ಬದಲು ಎಱೆಯ ರಸ ಎಂಬವನ ಹೆಸರು ಕಂಡುಬರುತ್ತದೆ. ಮುಂದೆ ಪುನಃ ಮುತ್ತಳ್ಳಿಯ ನಂ.೮ ಮತ್ತು ೯ ನೆಯ ಧ್ರುವನ ಶಾಸನಗಳಲ್ಲಿ[9] ಇವನ ಹೆಸರು ಕಣಿಸಿಕೊಂಡಿದೆ. ಇಮ್ಮಡಿ ಗೋವಿಂದನನ್ನು ಅವನ ತಮ್ಮ ಧ್ರುವ ಪದಚ್ಯುತಗೊಳಿಸಿದ್ದು ಒಂದು ಪ್ರಮುಖ ಘಟನೆ. ಬಹುಶಃ ಈ ತಾಕಲಾಟದಲ್ಲಿ ಮಾರಕ್ಕೆಯರಸ ಧ್ರುವನ ಪರವಾಗಿ ನಿಂತುದು ಗೋವಿಂದನ ಅವಕೃಪೆಗೆ ಕಾರಣವೆಂದು ಊಹಿಸಬಹುದು. ಮಾರಕ್ಕೆಯರಸ ಬನವಾಸಿಯ ಮಂಡೆಲೇಶ್ವರ ಪದವಿಯನ್ನು ಪುನಃ ಧ್ರುವನ ಕಾಲದಲ್ಲಿ ಸಂಪಾದಿಸಿರುವ ಬಗ್ಗೆ ಮೇಲಿನ ಶಾಸನಗಳು ಖಚಿತ ಆಧಾರ ನೀಡುತ್ತವೆ.

ಎರೆಯಮ್ಮ ಮತ್ತು ಮಾರಕ್ಕೆಅರಸರ ತರುವಾಯ ಬನವಾಸಿಯ ಮಂಡಲೇಶ್ವರರಾಗಿ, ಚಾಳುಕ್ಯ ರಾಜಾದಿತ್ಯ, ಮದನಾಗ, ಮುದೆಲೂರ ಮಾರ, ದನ್ತಿಗ ಮೊದಲಾದವರ ಹೆಸರುಗಳು ಕಂಡುಬರುತ್ತವೆ. ಇದರಿಂದ ಧ್ರುವನ ಆಳ್ವಿಕೆಯ ಉತ್ತರಾವಧಿಯಲ್ಲಿ ಮಾರಕ್ಕೆ ಅರಸ ತೀರಿಕೊಂಡಂತೆ ಕಾಣುತ್ತದೆ. ಸೇನವಾರ ದೋಸಿಯರ ಕ್ರಿ.ಶ. ಸು. ೭೬೦ ರಲ್ಲಿ ಅಸುನೀಗಿದ್ದು ಅದೇ ಕಾಲದಲ್ಲಿ ಮಾರಕ್ಕೆ ಅರಸ ಅಧಿಕಾರಕ್ಕೆ ಬಂದಿದ್ದಾನೆ ಮತ್ತು ಧ್ರುವನ ಕೊನೆಯ ವರ್ಷದಲ್ಲಿ ಎಂದರೆ ಸು. ೭೮೦ ರ ಆಸುಪಾಸಿನಲ್ಲಿ ಈತ ತೀರಿಕೊಂಡಿದ್ದಾನೆಂದು ಊಹಿಸಬಹುದು.

ಮೇಲೆ ಹೇಳಿದ ಬನವಾಸಿಯ ಮಂಡಲೇಶ್ವರರಲ್ಲಿ ರಾಜಾದಿತ್ಯನ ವಂಶ ಖಚಿತವಾಗಿದೆ. ಇನ್ನುಳಿದವರ ವಂಶಗಳು ಸ್ಪಷ್ಟವಾಗುವುದಿಲ್ಲ. ಇವರಲ್ಲಿ ಇನ್ನೂ ಒಬ್ಬಿಬ್ಬರು ಸೇನವಾರ ಮನೆತನದವರಾಗಿರುವ ಸಾಧ್ಯತೆಯನ್ನು ನಾವು ಇಟ್ಟುಕೊಳ್ಳಬಹುದು.

ಹಾವೇರಿ ತಾ. ದೇವಗಿರಿಯ ಒಂದು ಶಾಸನ (SII, XVIII, ನಂ. ೩೦೮) ದಲ್ಲಿ ಕಾಲ ನಿರ್ದೇಶನವಿಲ್ಲ. ಶಾಸನ ಸಂಪಾದಕರು ಇದರ ಲಿಪಿ ಎಂಟನೆಯ ಶತಮಾನವೆಂದು ತಿಳಿಸುತ್ತಾರೆ. ಇದರಲ್ಲಿ ಸೇನಮಲ್ಲರ ಮಾಚಣಗಾಮುಣ್ಣ ಬಾಸವೂರ ನೂರನಲ್ವತ್ತನ್ನು ಆಳುತ್ತಿದ್ದುದಾಗಿ ಹೇಳಿದೆ. ಇದರಲ್ಲಿ ಹೆಚ್ಚಿನ ವಿವರಗಳಿಲ್ಲ. ಇಲ್ಲಿನ ಸೇನಮಲ್ಲರೆಂದರೆ ಸೇನಮಲ್ಲ ಅಥವಾ ಸೇನವರ/ ಸೇನವಾರರೆಂದೇ ಗ್ರಹಿಸಬಹುದು. ಏಕೆಂದರೆ ಪ್ರಸ್ತುತ ಬಾಸವೂರು ಪ್ರದೇಶ ೮ನೆಯ ಶತಮಾನದ ಅವಧಿಯಲ್ಲಿ ಸೇನವಾರರ ಅಧೀನವಾಗಿತ್ತು. ಆದರೆ ಈ ಮಾಚಗಾಮುಂಡನ ಹಿಂದು-ಮುಂದುಗಳು ಗೊತ್ತಾಗುತ್ತಿಲ್ಲ.

ಮುಂದೆ ಸು. ೧೫೦-೨೦೦ ವರ್ಷಗಳವರೆಗೆ ದಾಖಲೆಗಳಲ್ಲಿ ಸೇನವಾರರ ಉಲ್ಲೇಖಗಳು ಕಂಡು ಬರುವುದಿಲ್ಲ. ಕ್ರಿ.ಶ. ಸು. ೧೦೧೦ ನೆಯ ಶಾಸನವೊಂದರಿಂದ ಚಾಲುಕ್ಯ ದೊರೆ ೫ನೆಯ ವಿಕ್ರಮಾದಿತ್ಯನ ಅಧೀನನಾಗಿ ಒಬ್ಬ ಸೇನವಾರ ದೊರೆ ಬನವಾಸಿ ಪ್ರಾಂತವನ್ನಾಳುತ್ತಿದ್ದನೆಂದು ತಿಳಿದುಬರುತ್ತದೆ.[10] ಅದೇ ರೀತಿ ಹಾವೇರಿ ತಾಲೂಕಿನಕಬ್ಬೂರು ಮತ್ತು ಬಿದರಗಡ್ಡಿ ಶಾಸನಗಳಲ್ಲಿ (SII, XVIII, ನಂ. ೪೫ ಮತ್ತು ೫೨) ಕಣ್ಣಮ್ಮ ಅಥವಾ ಕಣ್ವನೃಪನೆಂಬವನು ಸೇನವಲ್ಲರ ಮನೆತನದವನೆಂದು ಹೇಳಿದೆ. ಈತ ಬಹುಸಃ ಸೇನವಾರ ವಂಶದವನೇ ಆಗಿದ್ದು ಬಾಸವೂರ ೧೪೦ (ಹಿರೇಕೆರೂರ ಮತ್ತು ಬ್ಯಾಡಗಿ ತಾಲೂಕುಗಳ ಪ್ರದೇಶ)ನ್ನು ಆಳುತ್ತಿದ್ದ. ಈತನ ಕಾಲ ೧೧ನೆಯ ಶತಮಾನದ ಪೂರ್ವಾರ್ಧ. ೧೧ನೆಯ ಶತಮಾನದ ಉತ್ತರಾರ್ಧ ಮತ್ತು ೧೨ನೆಯ ಶತಮಾನದ ಆದಿಭಾಗದಲ್ಲಿ ಈ ಮನೆತನದ ಜೀವಿತವಾರ, ಜೀವನವಾರ, ಮಾರ ಅಥವಾ ಮಾರಸಿಂಹ ಎಂಬವರು ಕ್ರಮವಾಗಿ ಕಂಡುಬರುತ್ತಾರೆ. ಸೂರ್ಯ ಮತ್ತು ಆದಿತ್ಯರೆಂಬವರು ಆರನೆಯ ವಿಕ್ರಮಾದಿತ್ಯನ ಅಧಿಕಾರಿಗಳಾಗಿದ್ದ ಸಂಗತಿಯನ್ನು ಬಿ.ಎಲ್. ರೈಸ್‌ರು ಗುರುತಿಸಿದ್ದಾರೆ.[11]

ಹೀಗೆ ಇವರು ೬ನೆಯ ಶತಮಾನದಿಂದ ೧೨ನೆಯ ಶತಮಾನದವರೆಗೂ ಮಧ್ಯ ಕರ್ನಾಟಕದಲ್ಲಿ ಕಂಡು ಬರುತ್ತಾರೆ. ಇವರಲ್ಲಿ ಅತ್ಯಂತ ಪ್ರಮುಖರೆಂದರೆ ದೋಸಿಯರ ಮತ್ತು ಮಾರಕ್ಕೆಯರಸರು. ಇಬ್ಬರೂ ಬನವಾಸಿ-೧೨೦೦೦ ಪ್ರಾಂತದ ಮಹಾ ಮಂಡಲೇಶ್ವರರಾಗಿದ್ದವರು. ಈವರೆಗೆ ಈ ಮನೆತನ ಇಂಥ ಮಹತ್ವದ ವ್ಯಕ್ತಿಗಳೇ ಇತಿಹಾಸಕಾರರ ಗಮನಕ್ಕೆ ಬಾರದೆ ಮರೆಯಲ್ಲಿ ಉಳಿದಿದ್ದರು.

ಇವರು ಜೈನಧರ್ಮೀಯರೆಂದು ಬಿ.ಎಲ್. ರೈಸ್ ಗುರುತಿಸಿದ್ದಾರೆ. ಕನತಿ ಮೊದಲಾದ ಶಾಸನಗಳು ಇವರನ್ನು ಕೂಡಲೂರಪುರ ಪರಮೇಶ್ವರರು, ಮೃಗೇಂದ್ರ (ಸಿಂಹ) ಲಾಂಛನರು ಫಣಿಧ್ವಜ ವಿರಾಜಮಾನರು, ಖಚರ ತ್ರಿಣೇತ್ರರು ಎಂದು ಪರಿಚಯಿಸುತ್ತವೆ. ಕನತಿಯ ಶಾಸನ ಶಿಲೆಯ ಮೇಲ್ಭಾಗದಲ್ಲಿ ಮೂರು ಹುತ್ತಗಳಿಂದ ಹೊರ ಬಂದು ಹೆಡೆ ಎತ್ತಿರುವ ೩ ಸರ್ಪಗಳು ಮತ್ತು ಅವುಗಳ ಎಡ ಪಕ್ಕದಲ್ಲಿ ನಿಂತಿರುವ ಸಿಂಹವೊಂದನ್ನು ಬಿಡಿಸಲಾಗಿದೆ. ಖಚರ ವಂಶದವರೆಂಬುದು ಬರಿಯ ಕಪೋಲ ಕಲ್ಪನೆ ಎಂದು ಬೇರೆ ಹೇಳಬೇಕಿಲ್ಲ. ಇವರ ಮೂಲ ನೆಲೆಕೂಡಲೂರು ಎಂದಿರುವುದು ಕೂಡ ಇವರು ಮೂಲತಃ ಕನ್ನಡ.[12] ನೆಲದಿಂದ ಮೇಲೆ ಬಂದವರೆಂಬುದನ್ನು ಸಾಬೀತು ಪಡಿಸುತ್ತದೆ. ಇಂದಿನ ಹರಿಹರ ಪಟ್ಟಣ ಪ್ರಾಚೀನ ಕಾಲದಲ್ಲಿ ಕೂಡಲೂರೆಂದು ಹೆಸರಾಗಿತ್ತು. ಇಂಥ ಕೂಡಲೂರುಗಳು ಹಲವಾರಿವೆ. ಇವರ ಮೂಲನೆಲೆ ಮಧ್ಯ ಕರ್ನಾಟಕದಲ್ಲಿನ ಇಂತಹ ಯಾವುದೋ ಒಂದು ಊರಾಗಿರಬಹುದು.

ತರುವಾಯದ ಶಾಸನಗಳಲ್ಲಿ ಇವರು ಜೈನಧರ್ಮ ಪರರಾಗಿದ್ದ ಸಂಗತಿ ಬಿ. ಎಲ್. ರೈಸ್‌ರ ಗಮನಕ್ಕೆ ಬಂದಿದೆ. ಮಲ್ಲೇನಹಳ್ಳಿ ಮತ್ತು ಮುತ್ತಳ್ಳಿಯ ಶಾಸನಗಳು ಜೈನ ಪರವಾಗಿವೆ. ಆದರೆ ಇವುಗಳಲ್ಲಿ ಸೇನವಾರರು ಜೈನಧರ್ಮ ಪರವಾದ ನಿಲುವು ತಾಳಿದ್ದರೆ, ಬುದರ ನೇರ ಪುರಾವೆಗಳು ಲಭ್ಯವಾಗಿಲ್ಲ.

ಗೋಸಾಸ ದಾನದ ಪ್ರತೀಗ್ರಹಿಗಳು ಬ್ರಾಹ್ಮಣರಲ್ಲದೆ ಜೈನಧರ್ಮೀಯರೂ ಆಗಿರಬಹುದೆಂಬುದಕ್ಕೆ ಇವರ ಶಾಸನಗಳಲ್ಲಿ ಪುರಾವೆಗಳಿವೆ. ಆದಿತ್ಯಸೇನಪಂಡಿತ, ದೇವೇಂದ್ರಸೇನಪಂಡಿತ ಎಂಬ ಜೈನ ಪ್ರತೀಗ್ರಹಿಗಳ ಹೆಸರುಗಳು ಮುತ್ತಳ್ಳಿಯ ಶಾಸನಗಳಲ್ಲಿ ಗೋಚರಿಸಿವೆ.

ಕೊನೆಯದಾಗಿ ಈ ಶಾಸನಗಳಿಂದ ತಿಳಿದುಬರುವ ಇನ್ನು ಕೆಲವು ಮುಖ್ಯ ಅಂಶಗಳತ್ತ ನಮ್ಮ ಗಮನ ಹರಿಸಬಹುದು. ಈಗ ಸಿಕ್ಕಿರುವ ಶಾಸನಗಳಿಂದ ರಾಷ್ಟ್ರಕೂಟ ಒಂದನೆಯ ಕೃಷ್ಣನ ಕಾಲದ ಕನ್ನಡ ಶಾಸನಗಳ ಸಂಖ್ಯೆ ಹೆಚ್ಚುತ್ತಲಿದೆ. ಮುತ್ತಳ್ಳಿಯ ಎರಡು ಗೋಸಾಸಗಳು, ನೂಲಗೇರಿ (KRI, Pro. Report, 1953-57, ನಂ. ೧೧) ಸೂಡಂಬಿ (ಅದೇ ನಂ. ೧೫) ಮೇದೂರ (ಅದೇ ನಂ.೭) ಹೀಗೆ ೫ ಅಥವಾ ೬ ಶಾಸನಗಳು ಅವನ ಆಳ್ವಿಕೆಗೆ ನೇರ ಸಂಬಂಧಪಡುತ್ತವೆ. ಇದೇ ರೀತಿ ಮುತ್ತಳ್ಳಿಯ ಎರಡು ಗೋಸಾಸಗಳು ರಾಷ್ಟ್ರಕೂಟ ಇಮ್ಮಡಿ ಗೋವಿಂದನ ಕಾಲದಲ್ಲಿ ಹುಟ್ಟಿವೆ. ಈ ದಾಖಲೆಗಳ ಬಲದಿಂದ ಸಿರಗುಂಬಿ (KRI, Pro, Report-53-57. ನಂ.೬) ಶಾಸನವನ್ನೂ ಇಮ್ಮಡಿ ಗೋವಿಂದನ ಕಾಲಾವಧಿಗೆ ಸೇರಿಸಬಹುದು. ಸಿರಗಂಬಿ ಶಾಸನದಲ್ಲಿ ಎರೆಯಮ್ಮನೆಂಬ ಮಂಡಲೇಶ್ವರನ ಹೆಸರಿದ್ದು ಈ ಬಗ್ಗೆ ಮುಂಚೆ ಚರ್ಚಿಸಿದೆ. ಅದೇ ರೀತಿ ಮೇದೂರ ಶಾಸನವು ಜಗತ್ತುಂಗ (ಮುಮ್ಮಡಿ ಗೋವಿಂದ)ನನ್ನು ಅಕಾಲವರ್ಷನ ಪೌತ್ರನೆಂದು ಸ್ಪಷ್ಟವಾಗಿ ಗುರುತಿಸಿದೆ. ನೂಲಗೇರಿ ಶಾಸನದಲ್ಲಿ (ಅದೇ ನಂ.೫)ಮಾ ರಕ್ಕೆ ಅರಸನ ಹೆಸರೂ ಖಂಡೆ ಬಾಗೂರ (ಅದೇ ನಂ೮) ಶಾಸನದಲ್ಲಿ ಎರೆಯಮ್ಮನ ಹೆಸರೂ ಉಲ್ಲೇಖಗೊಂಡಿರುವುದರಿಂದ ಇವೆರಡು ಕನ್ನಡ ಶಾಸನಗಳೂ ಇಮ್ಮಡಿ ಗೋವಿಂದನ ಕಾಲಾವಧಿಗೆ ಸೇರಬೇಕು. ಎಂದರೆ ಇಮ್ಮಡಿ ಗೋವಿಂದನ ಕಾಲದ ಕನ್ನಡ ಶಾಸನಗಳೆ ಸಂಖ್ಯೆ ಕನಿಷ್ಠ ಆಯ್ದು ಎಂದಾಗುತ್ತದೆ. ಈ ಕಾರಣ SII ಸಂ. XVIII ಮತ್ತು KRI-Progress Report 1953-57 ರಲ್ಲಿನ ರಾಷ್ಟ್ರಕೂಟ ಶಾಸನಗಳ ಅನುಪೂರ್ವಿಯನ್ನು ಬದಲಿಸಬೇಕಾದ ಅನಿವಾರ್ಯತೆ ಈಗ ಒದಗಿ ಬಂದಿದೆ.

 

*ಆರನೆಯ ಶತಮಾನದ ಕಂಪ್ಲಿಯ ಕದಂಬ ಅಜವರ್ಮನ ಶಾಸನದಲ್ಲೂ ಇವರ ಉಲ್ಲೇಖ ಕಂಡು ಬಂದಿದೆ.

[1] Mysore and Coorg from Inscriptions. pp.148-149.

[2]ಧಾರವಾಡ ಜಿಲ್ಲೆಯ ಶಾಸನ ಸೂಚಿ, ಪು. ೫೦, ನಂ. ೪೦

[3] E.I. Vol. VI p. 251; SII, XVIII, No. 317

[4] SII, XVIII, No. 278

[5] The Dynasties of Canarese Districts p. 377

[6]ಸತ್ಯಶುದ್ಧ ಕಾಯಕ, ಸಂ.೩, ಸಂಚಿಕೆ ೩-೪, ಪುಟ. ೧೧೯

[7] SII, XVIII, No. 311

[8]ಅ.ಚಿ. ೭ರಲ್ಲಿದ್ದುದು ಮತ್ತು ಸಾಧನೆ ಸಂ. ೨೨, ಸಂ. ೩-೪

[9]ಇವನ ಬದಲು ಕಂಡುಬರುವ ಎಱೆಯರಸ ಎಂಬುದು ಎಱೆಯಮ್ಮರಸ ಎಂದಾಗಿರುವುದು ಹೆಚ್ಚು ಸಮಂಜಸ

[10]ಅ.ಟಿ. ೧ ನೋಡಿ.

[11]ಅದೇ,

[12]ಬಂಗಾಲದ ಪ್ರಸಿದ್ಧ ಮನೆತನ ಸೇನರು ಇವರ ಸಂಬಂಧಿಗಳಾಗಿರಬಹುದೆಂಬುದು ಡಾ || ಜಿ.ಎಸ್. ದೀಕ್ಷಿತ ಅವರ ಒಂದು ಸೂಚನೆ.