ಸ್ಥಳವಾಚಕಗಳ ಅಂತ್ಯದಲ್ಲಿ ಬರುವ – ವರ ಮತ್ತು – ವಾರಗಳು – ಪುರ – ಎಂಬುದರಿಂದ ಬಂದುವೆಂದು ಡಾ.ಎಂ.ಚಿದಾನಂದ ಮೂರ್ತಿಯವರು ತಮ್ಮ ಒಂದು ಲೇಖನ (ಸಾಧನೆ.೭-೧ ಮಂಥನ)ದಲ್ಲಿ ಸೂಚಿಸಿದ್ದಾರೆ. ಈ ಸೂಚನೆಗಳನ್ನು ವಿರೋಧಿಸುವ ಡಾ.ಎಂ.ಎಂ.ಕಲಬುರ್ಗಿಯವರು, -ವರ-ವಾರಗಳು ಸಂಸ್ಕೃತದ ‘ಆಹಾರ’ ಎಂಬುದರಿಂದ ಬಂದವುಗಳೆಂದು (ಸಾಧನೆ. ೯-೧ ಮಂಥನ) ಹೇಳಿದ್ದಾರೆ. ಕರ್ನಾಟಕದ ಗ್ರಾಮವಾಚಕಗಳ ಬಗೆಗೆ ವ್ಯಾಪಕವಾದ ಅಧ್ಯಯನ ಇನ್ನೂ ನಡೆಯದೇ ಇರುವುದರಿಂದ ಮತ್ತು ಖಚಿತವಾದ ನಿಯಮಗಳು ಈ ದಿಶೆಯಲ್ಲಿ ಇನ್ನೂ ರೂಪಿಸಲ್ಪಡದಿರುವುದರಿಂದ ಈ ಎರಡು ಅಭಿಪ್ರಾಯಗಳು ಇನ್ನೂ ಹೆಚ್ಚಿನ ‘ಮಂಥನಕ್ಕೆ’ ಒಳಪಡಬೇಕಾದುದು ಅವಶ್ಯಕ ಮತ್ತು ಅನಿವಾರ್ಯ.

-ವರ, -ವಾರಗಳು ಡಾ.ಚಿದಾನಂದ ಮೂರ್ತಿಯವರು ಅಭಿಪ್ರಾಯ ಪಡುವಂತೆ -ಪುರದಿಂದ ಬಂದವೆಂದು ಹೇಳಲು ಅವರಿತ್ತ ಶಾಸನಾಧಾರ ಗಂಗಪುರ ಎಂಬುದು. (E.C. ix ದೇವನಹಳ್ಳಿ – ೭೮೦ A.D.) ಇದು ಶಾಸನಕಾರನ ಕಲ್ಪಿತ-ರೂಪವೆಂದು ಡಾ.ಕಲಬುರ್ಗಿಯವರು ಹೇಳಿದ್ದಾರೆ. ಸಂಸ್ಕೃತ ಮೂಲವಲ್ಲದ ಪದಗಳನ್ನು ಈ ರೀತಿ ಸಂಸ್ಕೃತೀಕರಣಗೊಳಿಸುವುದು ನಮ್ಮನಾಡಿನಲ್ಲಿ ವಿಪರೀತವಾಗಿದೆ. ಆದುದರಿಂದ ಗಂಗಪುರದಂಥ ಅನೇಕ ರೂಪಗಳು ಕಲ್ಪಿತವಾದವುಗಳೆಂದು ಹೇಳುವುದನ್ನು ಒಪ್ಪಬಹುದು. ಆದರೆ ಎಲ್ಲವೂ ಹೀಗೆ ಕಲ್ಪಿತವಾದವುಗಳೇ ಎಂದು ಹೇಳಲಾಗುವುದಿಲ್ಲ. ಉದಾಹರಣೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ‘ಉದಯಾವರ’ ಎಂಬ ಸ್ಥಳವಾಚಕವನ್ನು ನೋಡಬಹುದು. ಕ್ರಿ.ಶ. ೭ನೆಯ ಶತಮಾನದಿಂದ ಕ್ರಿ.ಶ. 9ನೆಯ ಶತಮಾನದ ವರೆಗಿನ ಶಾಸನಗಳಲ್ಲೆಲ್ಲ ಇದು ‘ಉದಯಪುರ’ (S.I.I. No. ೨೮೪ ಸು. ೭-೮ ನೆಯ ಶ.) ‘ಉದಯಾಪುರ’ (E.I.ix ಪು. 17-18 A.D. 675-720) ‘ಉದಯಾಪುರ’ (E.I.ix. ಪು ೧೯ ಸು. ೯ನೆಯ ಶ.) ಎಂಬ ರೂಪಾಂತರಗಳಲ್ಲಿ ತೋರಿಬರುತ್ತದೆ. ಇಲ್ಲಿಯ ಪೂರ್ವ ಪದವಾದ ‘ಉದಯ’ ಎಂಬುದು ನಿರ್ವಿವಾದವಾಗಿ ಸಂಸ್ಕೃತದ್ದು. ಅದೇ ರೀತಿ ಇಡೀ ಸಮಸ್ತಪದವೂ ಸಂಸ್ಕೃತದ್ದೆ. ಕಾರಣ ಇಲ್ಲಿ ಇಂದಿನ ರೂಪದ ‘ಉದಯಾವರ’ ಎಂಬುದರಲ್ಲಿಯ ಅಂತ್ಯ – ವರ ಎಂಬುದು ಪುರದಿಂದಲೇ ಬಂದುದೆಂಬುದು ನಿಶ್ಚಿತ. ಇದೇ ರೀತಿ ವಾರ ಎಂಬುದೂ ಪುರದಿಂದಲೇ ಬಂದುದೆಂದು ಹೇಳಲು ಹೆಚ್ಚಿನ ಶಾಸನಾಧಾರಗಳು ಬೇಕು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಇಂಥ ಬದಲಾವಣೆ ಕೇವಲ ಕರ್ನಾಟಕಕ್ಕಷ್ಟೇ ಸೀಮತವಾಗಿಲ್ಲವೆಂಬುದು. ತಮಿಳುನಾಡಿನ ಪ್ರಾಚೀನ ಪಟ್ಟಣವೆನ್ನಿಸಿದ್ದ ‘ಕಾಂಚೀಪುರಂ’ ಇಂದು ‘ಕಾಂಜೀವರಂ’ ಎಂದಾಗಿರುವುದು ಸುಪ್ರಸಿದ್ಧ ವಿಷಯ. ಅದೇ ರೀತಿ ಧರ್ಮಾವರಂ ಕೂಡ ಅಂಥ ಬದಲಾವಣೆ ಗೊಳಪಟ್ಟ ಮತ್ತೊಂದು ಹೆಸರು. ಇವೆರಡೂ ಪುರದಿಂದಲೇ ಬಂದಿರುವುದು ನಿಸ್ಸಂಶಯ.

ಇನ್ನು – ವಾರ ಎಂಬುದು ‘ಆಹಾರ’ ಎಂಬುದರಿಂದ ಬಂದುದೆಂದು ಡಾ. ಕಲಬುರ್ಗಿಯವರು ಅಭಿಪ್ರಾಯ ಪಟ್ಟಿರುವುದರಲ್ಲಿಯೂ ಸತ್ಯಾಂಶವಿರುವಂತೆ ಕಾಣುತ್ತದೆ. ಅವರು ಎತ್ತಿ ತೋರಿಸಿರುವಂತೆ ಕ್ರಿ.ಶ. ೫ ರಿಂದ ೮ನೆಯ ಶತಮಾನದ ಕಾಲಾವಧಿಯಲ್ಲಿ ಆಹಾರದಿಂದ ಅಂತ್ಯವಾಗುವ ಹಲವಾರು ಸ್ಥಳವಾಚಕಗಳು ಸಂಸ್ಕೃತ ಶಾಸನಗಳಲ್ಲಿ ತೋರಿಬಂದಿವೆ. ಆಹಾರವು ಸವೆದು ಆದ -ವಾರ ಎಂಬುದರಿಂದ ಮುಗಿಯುವ ಕೆಲವಾದರೂ ಊರಹೆಸರುಗಳು ಅಂಥ ಮಾದರಿಯಾಗಿರುವುದೇ ಸಾಧ್ಯ. ಉದಾಹರಣೆಗಾಗಿ ಡಾ.ಕಲಬುರ್ಗಿಯವರ ಗಣೆಹಾರ, ಕೊಲ್ಹಾರ, ಭೂಯಾರ, ಮೈಲಾರ ಎಂಬವನ್ನು ಎತ್ತಿ ತೋರಿಸಿದ್ದಾರೆ. ಈ ಪಟ್ಟಿಯನ್ನು ಉಗಾರ, ಶೇಲಾರ, ಕೊಲ್ಲಾರ ಇತ್ಯಾದಿಯಾಗಿ ಬೆಳಸಬಹುದೆಂದು ಕಾಣುತ್ತದೆ.

-ಆಹಾರ ಎಂಬುದು ಗ್ರಾಮ – ಪಟ್ಟಣಗಳಿಗಿಂತ ಹೆಚ್ಚಾಗಿ ಪ್ರದೇಶ, ಪ್ರಾಂತ ಮುಂತಾದ ಜನಪದಗಳ ಅಂತ್ಯದಲ್ಲಿ ಸೇರುತ್ತಿತ್ತಂಬುದಕ್ಕೆ ಹೆಚ್ಚಿನ ಪ್ರಮಾಣಗಳಿವೆ. ಡಾ. ಕಲಬುರ್ಗಿಯವರು ಹೆಸರಿಸುವ ತ್ರೇಯಣಾಹಾರ. (ಕರ್ನಾಟಕದ ಅರಸು ಮನೆತನಗಳು ಪು.೫೦) ಕಾರ್ಮಣೇಯಾಹಾರ. (ಪು.೮೫) ಚರಣಗಾಹಾರ (ಪು.೭೭) ತಾಲಿತಟಾಹಾರ (ಪು.೮೭) ಮೃಗಥಣಿಕಾಹಾರ (ಪು.೯೪) ಕೋಟಾಹಾರ (ಪು. ೯೯) ಮುಂತಾದವು ವಿಷಯಗಳು ಅಥವಾ ನಾಡುಗಳ ಹೆಸರುಗಳಾಗಿದ್ದು ಪ್ರದೇಶ ವಾಚಕವಾಗಿವೆ. ತರಕಾಗಾಹಾರ ಮಾತ್ರ ಗ್ರಾಮವಾಚಕವಾಗಿವೆ. ಇವೆಲ್ಲವೂ ಇಂದಿನ ಕರ್ನಾಟಕದ ವ್ಯಾಪ್ತಿಯಿಂದ ಹೊರಗಿದ್ದವುಗಳೆಂಬುದು ಆಯಾ ಶಾಸನಗಳಿಂದ ವ್ಯಕ್ತವಾಗಿದೆ.

ಆಹಾರವೆಂಬುದರ ಬದಲು ಕರ್ನಾಟಕದ ಒಂದು ಪ್ರಾಕೃತ ಶಾಸನದಲ್ಲಿ

[1] ಬರೀಹಾರ ಎಂಬ ರೂಪದ ಪ್ರದೇಶವಾಚಕ ಕಂಡುಬರುತ್ತದೆ. ಉದಾ ಸಾತವ -ನಿ-ಹಾರ ಅದೇ ರೀತಿ ಮಳವಳ್ಳಿಯ ಪ್ರಾಕೃತ ಶಾಸನದಲ್ಲಿ ಎಕ್ಕದ್ಧಾಹಾರ (E.C.VII. ಶಿಕಾರಿಪುರ. ೨೬೪ ಸು. ೪ನೆಯ ಶ.) ಎಂಬ ಗ್ರಾಮವಾಚಕವೂ ಇದೆ. ಹಕಾರವು ಕನ್ನಡ ಭಾಷೆಗೆ ಪರಕೀಯವಾದ ಧ್ವನಿ. ಕ್ರಿ.ಶ. ೯ನೆಯ ಶತಮಾನ ದವರೆಗಿನ ಉಲ್ಲೇಖಗಳಲ್ಲಿ ಅದು ಎರಡು ಮೂರು ರೀತಿಯಲ್ಲಿ ಪರಿವರ್ತಿಸುತ್ತಿದ್ದುದು ಕಂಡುಬರುತ್ತದೆ. ಮೊದಲನೆಯದಾಗಿ ಅದು ಶೂನ್ಯಗೊಳ್ಳುತಿತ್ತು. ಉದಾ : ಹನುಮ (-ತ್) ಸಂ.> ಹುಣುಮ (-ಂತ್ ಪ್ರಾ > ಅಣುಮ[2] > ಅಣುವ. (ಕವಿರಾಜಮಾರ್ಗ -II-೩೮). ಇನ್ನು ಕೆಲವೆಡೆಯಲ್ಲಿ ಹಿಂದಿನ ಸ್ವರಕ್ಕೆ ತಕ್ಕಂತೆ ವ ಅಥವಯ ಎಂದು ಪರಿವರ್ತಿತವಾಗುತ್ತಿತ್ತು. ಅದುದರಿಂದ (ಆ) ಹಾರದಲ್ಲಿಯ ಹಕಾರವು ಬದಲಿಸಿ -ಆರ,-ವಾರ,-ಯಾರ ಎಂದು ತೋರಿಬರ ದಾಗಿದೆ. ಮತ್ತು ಆಕಾರ‍ವು ಹ್ರಸ್ವಗೊಳ್ಳಬಹುದು.

ಕರ್ನಾಟಕ ಮತ್ತು ಇತರ ಪ್ರದೇಶಗಳಲ್ಲಿ ವಾಡ-ವಾಡಿಯಿಂದ ಅಂತ್ಯವಾಗುವ ಅನೇಕ ಗ್ರಾಮವಾಚಕ, ಪ್ರದೇಶ ವಾಚಕಗಳು ತೋರಿಬರುತ್ತವೆ. ಇವುಗಳಿಂದ ಕೆಲವಾದರೂ-ವಾರ,-ವರ,-ವಾರಿಗಳೆಂದು ಅಂತ್ಯವಾಗುವ ಹೆಸರುಗಳು ಬಂದಿರುವ ಸಾಧ್ಯತೆಯಿದೆ. ಉದಾಹರಣೆಗೆ ಇಂದಿನ ‘ಕಾರವಾರ’ (ಉ.ಕ.ಜಿಲ್ಲೆಯ ಕೇಂದ್ರರ ಪಟ್ಟಣ) ವು ‘ಕಡವಾಡ’ ಎಂಬುದರ ರೂಪಾಂತರ ಎಂದು ಹೇಳುತ್ತಾರೆ. ಡ-ರ ವ್ಯತ್ಯಾಸವು ನಮ್ಮಲ್ಲಿ ಸಾಧ್ಯವೆಂದು ಬೇರೆ ಹೇಳಬೇಕಾಗಿಲ್ಲ. ಆದುದರಿಂದ -ವರ,-ವಾರಗಳು, -ವುರ, ಅಥವಾ (ಆ)ಹಾರಗಳಲ್ಲಿ ಒಂದರಿಂದ ಮಾತ್ರವೇ ಬಂದಿವೆಯೆಂದು ಹೇಳುವ ಬದಲು ಈ ಮೂರು ರೂಪಗಳಿಂದ ಬಂದಿವೆಯೆಂದು ಹೇಳಬಹುದು.

ಇನ್ನು (ವ್-ಆರ ಎಂಬ ರೂಪದಿಂದ ಇನ್ನೂ ಒಂದೆರಡು ಉಪಾಕೃತಿಗಳು ಹುಟ್ಟಿದಂತೆ ತೋರುತ್ತದೆ. ಕೆಲವೆಡೆಗಳಲ್ಲಿ ಅಂತ್ಯ ರಕಾರವು ಲಕಾರವಾಗಿದೆ. ಉದಾ: ನಂದಿಯಾಲ,[3] (ನಂದ್ಯಾಲ,) ಸೀಪಾಲ,[4] ಮೇತ್ಯಾಲ, ಎಡಾಲ, ಮದವಾಲ, ಕೊವಳಾಲ ಮುಂತಾದ ಉದಾಹರಣೆಗಳನ್ನು ನೋಡಬಹುದು.

ಸದ್ಯಕ್ಕೆ ಈ – ಆಲ ದಿಂದ ಅಂತ್ಯವಾಗುವ ಊರುಗಳಲ ಹೆಸರುಗಳಲ್ಲಿ ಕಾಲ, ಗಾಲ, ಕಲ್/ಗಲ್, ಕಲ್ಲು/ಗಲ್ಲು/, -ಆಲಿ, -ಅಲಿ, – ಬಾಳ, – ಪಾಳ,- ಹಾಳ ಇತ್ಯಾದಿಗಳನ್ನು ಸಮಾವೇಶಗೊಳಿಸಬಾರದೆಂದು ಹೇಳಬಹುದು. ಕೊಳ್ಳೇಗಾಲ, ಸತ್ಯಗಾಲ, ಮುಂತಾದವುಗಳಲ್ಲಿಯ ಸ್ವರಮಧ್ಯ – ಗ-ಕಾರವು ಕೆಲವೊಮ್ಮೆ ಶೂನ್ಯವಾಗಬಹುದಾದರೂ ಶಾಸನ ಮುಂತಾದವುಗಳಲ್ಲಿ ಆಧಾರಗಳು ದೊರೆತಾಗ ಅಂಥವುಗಳಿಗೆ ಮಹತ್ವ ಕೊಡಬಹುದು. ಅದೇ ರೀತಿ, (ಆ)ಹಾರ ದಿಂದ – ಆರ, ವಾರ,-ವರ ಮತ್ತು – ಆಲ,-ವಾಲ, ಪಾಲ, ಮುಂತಾದ ರೂಪಗಳು ಬಂದುದಕ್ಕೆ ಖಚಿತವಾದ ಆಧಾರಗಳು ಇನ್ನೂ ದೊರೆಯಬೇಕಾಗಿದೆ.

-ಪುರ, ದಲ್ಲಿಯ ಉ ಸ್ವರವು ಸ್ವರಸಮರೂಪಧಾರಣೆಯಿಂದ ಅ ಎಂದಾಗ ಬಹುದು. ಅದೇ ರೀತಿ ಪರಿಹಾರ ದೀರ್ಘಿಕರಣ ಮುಂತಾದ ಭಾಷಿಕ ಪ್ರಕ್ರಿಯೆ ಗಳಿಂದಲೂ ಆ > ಅ, ಆ>ಇ, ಮುಂತಾದ ಪರಿವರ್ತನೆಗಳಿಂದಲೂ ಧ್ವನಿ ವ್ಯತ್ಯಾಸಗಳನ್ನು ವಿವರಿಸಬಹುದು. ಒಟ್ಟಿನಲ್ಲಿ ಕೆಳಗಿನಂತೆ ಈ ರೂಪಾವಳಿಗಳನ್ನು ಸೂಚಿಸಬಹುದು.

೧. ಆ-ಹಾರ > ಆರ, ಆರಿ, ಆಲ, ವಾರ, ವರ, ಯಾಲ
ವಾಡ-ವಾಡಿ
೨. ಪುರ > ವುರ, ಹುರ, ವರ, ವಾರ


 

[1] E.I.Vol. XIV ಪು.೧೫೩ ಮ್ಯಾಕದೋನಿ ಶಾಸನ. ಸು. ೨ನೆಯ ಶ.

[2]ಅಣುಮ ಪ್ರರಾಕ್ರಮನ್, EC X ಶ್ರೀನಿವಾಸಪುರ-೬

[3] E.C.VI ಚಿಕ್ಕಮಗಳೂರು, ೫/೬ನೆಯ ಶ.

[4] M.A.R. 1925 No. 106.