ಸ್ವಾದಿಯ ಅರಸುಮನೆತನವನ್ನು ಕುರಿತಂತೆ ಐತಿಹಾಸಿಕ ಅಂಶಗಳನ್ನು ಒಳಗೊಂಡ ಹಲವು ಕನ್ನಡಕೃತಿಗಳು ಲಭ್ಯವಾಗಿವೆ. ಅವುಗಳನ್ನು ವಿವರವಾಗಿ ಕೆಳಗಿನಂತೆ ಪಟ್ಟಿಮಾಡಬಹುದು.

೧. ಸ್ವಾದಿಯ ಸದಾಶಿವರಾಯನ ಕೃತಿಗಳು (ಕ್ರಿ. ಶ. ೧೬೨೪ ರಿಂದ ೧೬೯೭)

೧. ಸ್ವರ ವಚನಗಳು-ಸುಮಾರ ೧೬೦

೨. ಸಮಸ್ಯಾಪೂರ್ಣ

೩. ರಾಗಮಾಲಿಕೆ

೪. ಪಂಚವಿಂಶತೀ ರಗಳೆ

೫. ತ್ರಿವಿಧಿ

೬. ಉಳಿವೆಯ ಮಹಾತ್ಮೆ

೭. ಜೋಗಳ ಪದಗಳು

೮. ನವರಸ ಜಕ್ಕಣಿ

೯. ಪಂಚವಿಂಶತೀ ಮೂಲಪದ್ಯಗಳು

೧೦. ಜಾವಳಿ

೧೧. ಭಿಕ್ಷಾಟನೆ ಲೀಲೆಯ ಕಂದ

೧೨. ಖಡ್ಗಪ್ರಬಂಧ

೧೩. ಮಂಗಳಾಷ್ಟಕಗಳು

೧೪. ಪ್ರಭುಲಿಂಗಲೀಲೆಯ ಜಾವಳಿ

೧೫. ಮಹಾಚದುರಂಗ ಲಕ್ಷಣ

೧೬. ಕಲಹಕೇತಯ್ಯಗಳ ಲಕ್ಷಣ

೧೭. ಕಂದಪದ್ಯಗಳು

೧೮. ಸದಾಶಿವ ನೀತಿ

೨. ಶಾಂತಬಸವರಾಜೇಂದ್ರದೇವ (ಕ್ರಿ.ಶ ೧೬೯೦)
ಶ್ರೀ ಸೋದೆ ಬಸವಲಿಂಗರಾಜನ ಭಕ್ತಿಚಂದ್ರೋದಯ

೩. ಇಮ್ಮಡಿ ಮುರುಗೆಯ ಗುರುಸಿದ್ದ (ಕ್ರಿ. ಶ. ಸು. ೧೬೯೦)
ಮುರಿಗೆಯ ತಾರಾವಳಿ,
ಹಾಲಾಸ್ಯ ಪುರಾಣ.

೪. ಮರಿಶಾಂತ ಬಸವೇಶ್ವರ,
ಸ್ವರವಚನಗಳು.

೫. ಲಿಂಗಣ್ಣಕವಿ (ಸು. ೧೭೫೦)
ಕೆಳದಿನೃಪವಿಜಯ.

೬. ಬಿಳಿಗೆಯ ಅರಸರ ವಂಶಾವಳಿ (ಸು. ೧೭೦೦)

೭. ಕವಿ ಪರಮದೇವ (ಕ್ರಿ.ಶ. ೧೭೨೧-೧೮೦೫)
ಕೀರ್ತನೆಗಳು

೮. ಮಹಾದೇವ (ಸು.೧೮೭೦)
ಮಹಲಿಂಗೇಂದ್ರ ವಿಜಯ.

ಈ ಮೇಲೆ ತಿಳಿಸಿದ ಕೃತಿಕಾರರಲ್ಲಿ ಸೋದೆಯ ಅರಸು ಮನೆತನದ ಬಗ್ಗೆ ದಾಖಲೆಗಳನ್ನೊದಗಿಸುವ ಪ್ರಥಮವ್ಯಕ್ತಿ ಆ ಅರಸು ಮನೆತನದವನೇ ಆದ ಸದಾಶಿವರಾಯ. ಈತ ಕ್ರಿ. ಶ. ೧೬೭೪ ರಿಂದ ೧೭೯೭ ರವರೆಗೆ ಈ ಸೋದೆಯ ರಾಜ್ಯ ಆಳುತ್ತಿದ್ದ. ಈತನ ಕೃತಿ ಸದಾಶಿವನೀತಿ ಪ್ರಕಟಗೊಂಡು ಹೆಚ್ಚು ಪ್ರಚಲಿತವಾಗಿದ್ದುದರಿಂದ ಹಿಂದೆಯೇ ಅದರ ಪರಿಚಯವಾಗಿತ್ತು. ಇತ್ತೀಚೆಗೆ ಈತನು ರಚಿಸಿದ ಸದಾಶಿವ ನೀತಿಯನ್ನೊಳಗೊಂಡ ಹದಿನೆಂಟು ಕೃತಿಗಳ ಕಟ್ಟೊಂದು ಡಾ || ಬಿ.ಆರ್. ಹಿರೇಮಠ ಅವರಿಗೆ ದೊರೆತುದು ತುಂಬ ಮಹತ್ವದ ಸಂಗತಿ. ಅವನ್ನು ಮೇಲೆ ಪಟ್ಟಿಮಾಡಿದೆ. ಈ ಹದಿನೆಂಟು ಕೃತಿಗಳಲ್ಲದೆ ವರ್ಣಕವಾಗಿ ಹಾಲಾಸ್ಯಪುರಾಣವನ್ನು ಕೂಡ ಈತ ರಚಿಸಿದ್ದಾಗಿ ಚಿತ್ರದುರ್ಗದ ಇಮ್ಮಡಿ ಮುರಿಗೆಯ ಗುರುಸಿದ್ದರು ತಮ್ಮ ಹಾಲಾಸ್ಯಪುರಾಣದಲ್ಲಿ (೧-೧೦) ಹೇಳಿದ್ದಾರೆ. ಶ್ರೀ.ಎಸ್. ಶಿವಣ್ಣ ಬೆಂಗಳೂರು ವಿ.ವಿ. ಅವರು “ಸದಾಶಿವರಾಜೀಯ” ಎಂಬ ಇನ್ನೊಂದು ಕೃತಿ ಇದೀಗ ಪತ್ತೆಯಾಗಿರುವುದಾಗಿ ತಿಳಿಸುತ್ತಾರೆ. ಅಲ್ಲದೆ, ಶ್ರೀ ಶಿವಣ್ಣನವರು ಸಂಪಾದಿಸಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಸ್ತಪ್ರತಿ ಸೂಚಿ ಸಂಪುಟ-೧ರಲ್ಲಿ ಸೋದೆಯ ಸದಾಶಿವರಾಯ ವೃಷಭಪುರಾಣಕ್ಕೆ ಕನ್ನಡದಲ್ಲಿ ಟೀಕೆ ಬರೆದಿರುವುದಾಗಿ ದಾಖಲೆಯಾಗಿದೆ. ಇದರಿಂದ ಈತನ ಕೃತಿಗಳ ಸಂಖ್ಯೆ ಈಗ ೨೧ ಕ್ಕೇರಿದ್ದು ಇವುಗಳಲ್ಲಿ ಈ ಮನೆತನ ಸಂಬಂಧಿಯಾದ ಹಲವು ಐತಿಹಾಸಿಕ ಸಂಗತಿಗಳು ಉಲ್ಲೇಖಗೊಂಡಿವೆ. ಈತನ ಸ್ವರವಚನಗಳಲ್ಲಿ ಈ ಮನೆತನದ ಮೂಲವನ್ನು ಕುರಿತಂತೆ ಬಹುಮುಖ್ಯವಾದ ಚಾರಿತ್ರಿಕ ಅಂಶಗಳ ಉಲ್ಲೇಖ ಬಂದಿದೆ ಇವರು ಸೋಮವಂಶೀಯರು, ಆಪಸ್ತಂಭ ಸೂತ್ರ ಮತ್ತು ಕೌಶಿಕ ಗೋತ್ರದ ಯಜುರ್ವೇದಿಗಳೆಂಬ ಅಪೂರ್ವವಾದ ಸಂಗತಿಯನ್ನು ಇಲ್ಲಿ ಹೇಳಲಾಗಿದೆ. ಇನ್ನೊಂದು ಸ್ವರವಚನದಲ್ಲಿ ಈ ಸದಾಶಿವರಾಯ ತನ್ನ ವಂಶದ ಮೂಲವನ್ನು ಹೇಳುತ್ತ ತೊಂಡಮಾನ್ ಚಕ್ರವರ್ತಿಯ ವಂಶಸ್ಥರಾದ ಇವರು ಚಂದ್ರವಂಶೀಯರು, ಆ ವಂಶದಲ್ಲಿ ವೆಂಕಟಪತಿರಾಜ, ರಾಮರಾಜ, ಇವನ ಸಹೋದರ ವಜ್ರಒಡೆಯ, ಇವನ ಮಗ ದೇವರಾಜ, ಇವನ ತರುವಾಯ ಬೈರಸಶೂರ? ಎಂದು ವಂಶಾವಳಿಯನ್ನು ಇತ್ತಿದ್ದಾನೆ. ಬಹುಶಃ ಇವರೆಲ್ಲ ಅರಸಪ್ಪನಾಯಕನ ಪೂರ್ವದವರೆಂದು ತಿಳಿಯಬಹುದು. ಜೊತೆಗೆ ಇವರು ಮೂಲತಃ ಪೂರ್ವ ತಮಿಳು ಆಂಧ್ರದೇಶದ ಕರಾವಳಿ ಪ್ರದೇಶದವರಾಗಿದ್ದು ವಿಜಯನಗರದ ಅಳಿಯ ರಾಮರಾಯನ ವಂಶದವರೆಂದು ಕಂಡುಬರುತ್ತದೆ. ಬಹುಶಃ ವಿಜಯನಗರ ಸಾಮ್ರಾಜ್ಯದ ಕೊನೆಯ ಹಂತದಲ್ಲಿ, ಇವರನ್ನು ಕರ್ನಾಟಕದ ಪಶ್ಚಿಮಭಾಗದಲ್ಲಿ ಬನವಾಸಿ ಕಡೆಗೆ ನೆಲೆಗೊಳಿಸಲಾಯಿತೆಂದು ಸದ್ಯದ ಮಟ್ಟಿಗೆ ಭಾವಿಸಬಹುದು ಪ್ರಸ್ತುತ ಇದೇ ಸ್ವರವಚನದಲ್ಲಿ ಈ ವಂಶದ ಮಧುಲಿಂಗರಾಜ, ಅವನ ಮಗ ಸವಾಯಿ ರಾಮಚಂದ್ರರಾಯ, ಮುಮ್ಮಡಿಯರಸು, ವಜ್ರರಾಜ, ಇಮ್ಮಡಿ ಮಧುಲಿಂಗರಾಯ ಸದಾಶಿವರಾಯ, ಶಾಂತಲಿಂಗ[1] ಇವರು ರಾಜ್ಯವಾಳುತ್ತಿದ್ದರೆಂದು ಹೇಳಿದೆ. ಎಂದರೆ ಮಧುಲಿಂಗನಾಯಕನ ಮಗ ಸದಾಶಿವರಾಯನ ಕೆಲವು ಸಹೋದರರ ಹೆಸರುಗಳು ಇಲ್ಲಿ ಬಂದಿವೆ. ಇಲ್ಲಿನ ಮುಮ್ಮುಡಿಯರಸು, ವಜ್ರರಾಜ ಎಂದಿರುವುದು ಒಂದೇ ಹೆಸರೋ ಅಥವಾ ಇಬ್ಬರ ಹೆಸರುಗಳೊ ತಿಳಿಯದು ಮತ್ತೊಂದು ಸ್ವರವಚನದಲ್ಲಿ ಸದಾಶಿವರಾಯ, ಬಸವಲಿಂಗರಾಜ, ಇಮ್ಮಡಿ ರಘುನಾಥ,ಶಾಂತವೀರ, ಇಮ್ಮಡಿ ಸದಾಶಿವೇಂದ್ರ, ಚನ್ನಬಸವಲಿಂಗ ಮುಂತಾದ ಸುತರು ತನಗಿದ್ದರೆಂದು ಹೇಳಿದ್ದಾನೆ.

ಸದಾಶಿವರಾಯ ತನ್ನ ಸ್ವರವಚನವೊಂದರಲ್ಲಿ ತಂದೆ ಮಧುಲಿಂಗರಾಜನು ಎದುರಿಸಿದ ಒಂದು ದುರ್ಭರ ಪ್ರಸಂಗವನ್ನು ಉಲ್ಲೇಖಿಸಿದ್ದಾನೆ, ಅದೆಂದರೆ ಕೆಳದಿಯ ವೀರಭದ್ರನಾಯಕನು (ಕ್ರಿ.ಶ. ೧೬೨೬-೧೬೪೫) ತನ್ನ ಮನೆತನದ ಸದಾಶಿವ ನಾಯಕನಿಗೆ ಆಶ್ರಯವಿತ್ತುದಕ್ಕಾಗಿ ಸ್ವಾದಿಯವರ ಮೇಲೆ ಏರಿ ಹೋಗಿ ಅವರನ್ನು ಸೋಲಿಸಿದನು ಹಾಗೂ ಅವರ ರಾಜ್ಯವನ್ನು ಹಿಡಿದುಕೊಂಡನು. ಸ್ವಾದಿಯ ಅರಸು ಮಧುಲಿಂಗರಾಜ ಆಗ ವಿಜಾಪುರದವರ ಮೊರೆ ಹೋಗಲು, ಅವರು ಸೈನ್ಯ ಸಮೇತ ಕೆಳದಿಯ ಮೇಲೆ ಏರಿಬಂದು ವೀರಭದ್ರನಾಯಕನನ್ನು ಮಣಿಸಿ ಮಧುಲಿಂಗ ರಾಜನಿಗೆ ಅವನ ರಾಜ್ಯ ಮರಳುವಂತೆ ಮಾಡಿದರು. ಈ ಸಂಧರ್ಭದಲ್ಲಿ ವಿಜಾಪುರದ ಸೇನಾಪತಿ ಶರಜಾಖಾನನೆಂಬವನು ಆದಿಲಶಾಹೆ ಪಡೆಯ ಮುಖ್ಯಸ್ಥನಾಗಿದ್ದನೆಂಬ ಐತಿಹಾಸಿಕ ಅಂಶ ಇಲ್ಲಿ ದಾಖಲೆಗೊಂಡಿದೆ. ಈ ಘಟನೆಯನ್ನು ಸ್ವತಃ ಸದಾಶಿವ ರಾಯನೇ ಹೇಳಿಕೊಂಡಿದ್ದಾನೆ. ಅದೇ ಸ್ವರವಚನದಲ್ಲಿ ಕೆಳದಿಯವರು ಪುನಃ ಕಾಲು ಕೆದರಿ ಯುದ್ದಕ್ಕೆ ಬರಲು ಮಧುಲಿಂಗರಾಯ ಅವರನ್ನು ಸೋಲಿಸಿ ಬೆನ್ನೆಟ್ಟಿ ಕವಲೆದುರ್ಗವನ್ನು ಮುತ್ತಿ, ಅಲ್ಲಿ ಧರ್ಮಕಹಳೆ ಹಿಡಿಸಿ ಕೀರ್ತಿಪತಾಕೆ ಹಾರಿಸಿದನೆಂದು ಸದಾಶಿವರಾಯ ಹೇಳಿದ್ದಾನೆ. ನಮ್ಮ ಮಧ್ಯಕಾಲೀನ ರಾಜ್ಯಡಳಿತದಲ್ಲಿ ಬಾಹತ್ತರ (೭೨ ಜನ) ನಿಯೋಗಿಗಳು ಎಂದರೆ ಅಧಿಕಾರ ವರ್ಗದವರು ಇರುತ್ತಿದ್ದಾರೆಂಬುದು. ಪರಂಪರಾಗತ ಕಲ್ಪನೆ. ಆದರೆ ಸದಾಶಿವರಾಯನ ಸ್ವರವಚನವೊಂದರಲ್ಲಿ ಇವರ ಸಂಖ್ಯೆ ೧೦೮ ಆಗಿತ್ತೆಂದು ತಿಳಿದುಬರುತ್ತದೆ. ತಳವಾರ, ಹರಕೆಕಾರ ಮುಂತಾದ ಕೆಲವೇ ಹೆಸರುಗಳು ಅದರಲ್ಲಿ ಉಲ್ಲೇಖಗೊಂಡಿವೆ, ಒಟ್ಟಿನಲ್ಲಿ ಮಧುಲಿಂ‌ಗರಾಯ ಇವರಲ್ಲಿ ತುಂಬ ಸಮರ್ಥನಾದ ರಾಜನಾಗಿದ್ದನೆಂದು ಇದರಿಂದ ತಿಳಿದುಬರುತ್ತದೆ.

ಯಾಕೆ ಬರೆದೆಯೊ ಶಿವನೆ ಎನ್ನ ಪಣೆಯಲಿ ನೀನು
ಲೋಕದೊಳು ಕಿರಿದಾದ ರಾಜತನ ಮಾಳ್ಪುದನು || ||

ಎಂಬ ಪಲ್ಲವಿಯಿಂದ ಪ್ರಾರಂಭವಾಗುವ ಸ್ವರವಚನವೊಂದರಲ್ಲಿ ತನ್ನದು ಮಧ್ಯಮಗಾತ್ರದ ಸಂಪತ್ತು, ಸೇನೆಗಳುಳ್ಳ ರಾಜ್ಯ. ಇತ್ತ ಪ್ರಬಲವಾದ ವೈರಿಗಳೊಡನೆ ಹೋರಾಡಲೂ ಆಗದು, ಅತ್ತ ಅವರಿಗೆ ಕಪ್ಪು ಕಾಣಿಕೆಯಿತ್ತು. ಸಾಗ ಹಾಕಲೂ ಸಂಪತ್ತು ಸಾಲದು; ಕಾಲ ಕಾಲಕೆ ಬಹಳ ಕರಕರೆ (ಕಿರಿಕಿರಿ) ಯುಂಟಾಗಿ ಬಹುತಾಪ ಪಡುವಂತಾಗಿದೆ-ಎಂದು ತನ್ನ ನಿಜದುಃಖ ತೋಡಿಕೊಂಡಿದ್ದಾನೆ. ಸ್ವಾದಿಯಃರು ಉದ್ದಕ್ಕೂ ಅನುಭವಿಸುತ್ತ ಬಂದ ರಾಜಕೀಯ ಸ್ಥಿತಿಗೆ ಇದು ಕನ್ನಡಿ ಹಿಡಿದಂತಿದೆ.

ಸದಾಶಿವರಾಯನು ರಚಿಸಿದ ರಾಗಮಾಲಿಕೆ, ನವರಸ ಜಕ್ಕಣಿ ಜಾವಡಿ ಮತ್ತು ಖಡ್ಗಪ್ರಬಂಧಗಳು ಸಂಗೀತಶಾಸ್ತಕ್ಕೆ ಸಂಬಂಧಪಟ್ಟಿವೆ. ಇವುಗಳನ್ನು ಸಂಗೀತ ವಿದ್ವಾಂಸರು ಅಧ್ಯಯನಮಾಡಿ ಇವುಗಳ ಮಹತ್ವವೇನೆಂಬುದನ್ನು ಪ್ರಕಟಪಡಿಸುವುದು ತುಂಬ ಅವಶ್ಯವಾಗಿದೆ. ಇದರಿಂದ ಮಧ್ಯಕಾಲೀನ ಕರ್ನಾಟಕದ ಸಂಗೀತ ಪರಂಪರೆಯ ಮೇಲೆ ಹೊಸಬೆಳಕು ಬೀಳುವ ಸಾಧ್ಯತೆ ತುಂಬಾ ಇದೆ. ಜೊತೆಗೆ ಸಂಗೀತಕ್ಷೇತ್ರಕ್ಕೆ ಸ್ವಾದಿಯ ಅರಸರ ಕಾಣಿಕೆಯ ಸ್ವರೂಪ ಕೂಡ ಅಭಿವ್ಯಕ್ತಗೊಳ್ಳುತ್ತದೆ.

ಈ ರೀತಿ ಸದಾಶಿವರಾಯನ ಸ್ವರವಚನದಲ್ಲಿ ಹಲವಾರು ಐತಿಹಾಸಿಕ ಮಹತ್ವದ ವಿವರಗಳು ಅಡಗಿದ್ದು ಆತನ ಎಲ್ಲ ಕೃತಿಗಳು ಲಭ್ಯವಾಗಿ ಪ್ರಕಟವಾದಲ್ಲಿ ಇನ್ನೂ ಹಲವಾರು ಮಹತ್ವದ ಸಂಗತಿಗಳು ಬೆಳಕಿಗೆ ಬರಬಹುದು.

ಪ್ರಸ್ತುತ ಸದಾಶಿವರಾಯ ಕ್ರಿ.ಶ. ೧೬೯೭ ರಲ್ಲಿ ಮರಣಹೊಂದಿದ. ಅವನ ಮಗ ಬಸವಲಿಂಗರಾಯ ತನ್ನ ತಂದೆಯ ಅಂತ್ಯಕ್ರಿಯೆಯನ್ನು ವೈಭವಪೂರ್ಣವಾಗಿ ಸಾಂಗಗೊಳಿಸಿದನು. ಇದರ ವಿವರಗಳನ್ನೊದಗಿಸಲೋಸುಗವೇ ಸೋದೆಯ ಶಾಂತ ಬಸವ ರಾಜೇಂದ್ರನು ‘ಶ್ರೀ ಸೋದೆಯ ಬಸವಲಿಂಗರಾಜನ ಭಕ್ತಿಚಂದ್ರೋದಯ’ ವೆಂಬ ಹೆಸರಿನ ೧೫ ವಾರ್ಧಕಪದ್ಯಗಳ ಲಘುಕೃತಿ ರಚಿಸಿದರು. ಇದರಲ್ಲಿ ಮಧ್ಯಕಾಲೀನ ಕರ್ನಾಟಕದಲ್ಲಿ ಪ್ರಚಲಿತವಾಗಿದ್ದ (ವೀರಶೈವ) ಅಂತ್ಯಸಂಸ್ಕಾರದ ವಿವರಗಳಲ್ಲದೆ ಅಂದಿನ ಹಲವಾರು ಖಾದ್ಯಾನ್ನಗಳು ಇಲ್ಲಿ ಉಲ್ಲೇಖಿತವಾಗಿವೆ.

ಶ್ರೀ ಎಸ್. ಶಿವಣ್ಣವರು ಪ್ರಕಟಿಸಿದ (೧೯೯೧) ‘ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ’ (ಚಿತ್ರದುರ್ಗ) ಹಸ್ತಪ್ರತಿಸೂಚಿ ಸಂಪುಟ ಒಂದರಲ್ಲಿ (ಪು:೩೬೦) ಸದಾಶಿರಾಯನ ಮಗ ಬಸವಲಿಂಗರಾಜನು ಗುರುಸಿದ್ದೇಶ್ವರ ಸ್ತೋತ್ರ ಮತ್ತು ಒಂದೆರಡು ಹಾಡುಗಳನ್ನು ಬರೆದಿರುವುದಾಗಿ ದಾಖಲೆಯಿದೆ. ಗುರುಸಿದ್ದೇಶ್ವರ ಸ್ತೋತ್ರವು ಒಂಬತ್ತು ಕಂದಗಳುಳ್ಳ ಕೃತಿ. ಇವು ಅಪ್ರಕಟತವಾಗಿರುವುದರಿಂದ ಹೆಚ್ಚಿನ ವಿವರಗಳು ನಮಗೆ ಲಭ್ಯವಿಲ್ಲ.

ತರುವಾಯದಲ್ಲಿ ಮರಿಶಾಂತ ಬಸವದೇವ ( ಕ್ರಿ.ಶ. ೧೬೯೭) ಬರೆದ ಸ್ವರವಚನಗಳಲ್ಲಿ ಈ ಮನೆತನ ಕುರಿತಾದ ಕೆಲವು ಉಲ್ಲೇಖಗಳು ಬಂದಿದೆ. ಈ ಮರಿಶಾಂತ ಬಸವನು ಬನವಾಸಿಯ ಮಳೆಯ ಮಠದ ಸಂಪ್ರದಾಯದವನು. ಈತನ ಸ್ವರವಚನ ೫೬ರಲ್ಲಿ ಸೋದೆಯ ಬಸವಲಿಂಗರಾಜನ ತಂದೆ ಸದಾಶಿವರಾಯ ಮತ್ತು ತಾಯಿ ಶಾಂತಮ್ಮಾಜಿಯ ಉಲ್ಲೇಖ ಬಂದಿದೆ. ಜತೆಗೆ ಬಸವಲಿಂಗರಾಯನ ಅಂತ್ಯದ ಉಲ್ಲೇಖ ಕೂಡ ಇದೇ ಸ್ವರವಚನದಲ್ಲಿದೆ.

೬೩, ೭೨ ಮುಂತಾದ ಪದ್ಯಗಳಲ್ಲಿ ಪರಮತೀಯರು ರಾಜನಲ್ಲಿ ಚಾಡಿಹೇಳಿದ್ದು. ರಾಜ ಅದನ್ನು ನಂಬಿದ್ದ. ತತ್ಕಾರಣ ಮಳೆಯ ಮಠದವರನ್ನು ಪರಮತೀಯರು ಪೀಡಿಸಿದ್ದು, ತಮ್ಮ ಏನೇನೂ ತಪ್ಪಿಲ್ಲದಿರುವುದು ಮೊದಲಾದ ಕೆಲವು ವಿಶಿಷ್ಟ ಸಂಗತಿಗಳನ್ನು ಇಲ್ಲಿ ತೋಡಿಕೊಂಡಿರುವುದು ಕಂಡುಬರುತ್ತದೆ.

ಮೇಲಿನ ನಾಲ್ವರ ಕೃತಿಗಳ ತರುವಾಯ ಉಲ್ಲೇಖಿಸಬೇಕಾದ ಗ್ರಂಥ ‘ಬಿಳಿಗೆಯ ಅರಸರ ವಂಶಾವಳಿ’ ಇದರ ರಚನಾ ಕಾಲ ಕ್ರಿ.ಶ. ಸು ೧೭೦೦ ಎಂದು ಕವಿಚರಿತೆಯಲ್ಲಿ ಹೇಳಿದೆ. ಇದರ ಪ್ರಥಮಾಶ್ವಾಸ ಪದ್ಯ ೧೨೫ರಲ್ಲಿ ಸೋದೆಯ ಅರಸಪ್ಪನಾಯಕನು ಬಿಳಿಗೆಯ ಸಂತತಿಯಲ್ಲಿ (೭ನೆಯವನಾದ) ಇಮ್ಮಡಿ ಘಂಟೇಂದ್ರನಿಗೆ ತನ್ನ ಮಗಳು ವೀರಮಾಂಬೆಯನ್ನು ಕೊಟ್ಟು ಲಗ್ನ ಮಾಡಿದನೆಂದೂ, ಇವರಿಗೆ ಜನಿಸಿದ ತ (ತಿ?) ಮ್ಮರಸ ಒಡೆಯ ಬಿಳಿಗಿಗೆ ಅಧಿಪತಿಯಾದನೆಂದೂ ಹೇಳಲಾಗಿದೆ. (ಈ ವಿವಾಹ ಸು. ೧೫೫೦ರ ಪೂರ್ವದಲ್ಲಿ ನಡೆದ ಘಟನೆಯಾಗಿದೆ) ಇದೇ ಕೃತಿಯಲ್ಲಿ ಮೇಲೆ ತಿಳಿಸಿದ ಇಮ್ಮಡಿ ಘಂಟೇಂದ್ರನಿಗೆ ವಿಜಯನಗರದ ವೆಂಕಟಪತಿರಾಯನ ಮಗಳು ರಾಮಾಂಬೆಯನ್ನೂ ಕೊಡಲಾಗಿತ್ತೆಂದು ಹೇಳಿದೆ. ಈಗಾಗಲೇ ನೋಡಿರುವಂತೆ ಸೋದೆಯವರು ಮೂಲತಃ ವಿಜಯನಗರದವರ ರಕ್ತಸಂಬಧಿಗಳು. ಇದರಿಂದ ಬಿಳಿಗೆ ಮತ್ತು ಸೋದೆಯ ಮನೆತನಗಳು ತಮ್ಮ ಹಳೆಯ ಸಂಬಂಧಗಳನ್ನು ಬಹುಕಾಲ ಸೌಹಾರ್ದಯುತವಾಗಿ ಉಳಿಸಿಕೊಂಡು ಬಂದುದು ವಿದಿತವಾಗುತ್ತದೆ. ಇದನ್ನು ಪೋಷಿಸುವಂತೆ ಮುಂದೆ ಪದ್ಯ ೧೨೯ರಲ್ಲಿ ಮುಮ್ಮಡಿ ಘಂಟೇಂದ್ರನು ‘ಸೋದೆಯ ಧಾರುಣಿಪ ರಘುನಾಥರಾಜನು ಆಮಂತ್ರಿಸಿದ್ದರಿಂದ ಬನವಾಸಿಗೆ ಹೋಗಿ ಮಧುಕೇಶ್ವರನ ತೇರಿನ ಉತ್ಸವ ನೋಡಿ ಆನಂದ ಪಟ್ಟಿ’ ನೆಂದು ಹೇಳಲಾಗಿದೆ. ಈ ಅನ್ಯೋನ್ಯತೆಯ ಜತೆಗೆ ಅಂದಿನ ದಾಖಲೆಗಳನ್ನು ಪರಶೀಲಿಸಿದರೆ ಕೆಳದಿಯವರ ಕಾಟ ಇವರಿಬ್ಬರಿಗೂ ಸರಿಸುಮಾರು ಒಂದೇ ತೆರನಾಗಿದ್ದುದು ಮತ್ತು ಹಲವು ಬಾರಿ ಸಂಯುಕ್ತವಾಗಿ ಕೆಳದಿಯವರನ್ನು ಇವರು ಎದುರಿಸಿದ್ದಿ, ಸಹಜವಾಗಿ ಕಂಡು ಬರುತ್ತದೆ.

ಇನ್ನು ಮುಂದಿನ ಕೃತಿ, ಲಿಂಗಣ್ಣಕವಿಯ ಕೆಳದಿನೃಪವಿಜಯ (ಕಾಲ ಕ್ರಿ.ಶ. ೧೭೫೦) ಇದು ಸೋದೆಯ ಅರಸರನ್ನು ಕುರಿತಂತೆ ಹಲವಾರು ಮಹತ್ವದ ವಿವರಗಳನ್ನು ಕೊಡುತ್ತದೆ. ಉದಾಹರಣೆಗೆ ಆಶ್ವಾಸ-೫ರಲ್ಲಿ ದೊಡ್ಡ ಸಂಕಣ್ಣ ನಾಯಕನ ಮಗ ವೆಂಕಟಪ್ಪ ನಾಯಕನು ಶಾ.ಶ. ೧೫೦೫ ನೆಯ ಚಿತ್ರಭಾನು ಸಂವತ್ಸರ ಮಾರ್ಗ ಶು. ೫ ರಂದು ಇಕ್ಕೇರಿಯಲ್ಲಿ ಪಟ್ಟವೇರಿದನು. ಇವನು ಗೋರಾಷ್ಟ್ರದ ನಾಲ್ಕೂ ಭಾಗಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದನಂತೆ (ಪು. ೧೨೫) ಸೋದೆಯ ರಾಜ್ಯ ಕ್ರಿ.ಶ. ೧೫೮೭ ರ ಸುಮಾರಿನಲ್ಲಿ ಕೆಳದಿಯಲ್ಲಿ ಸಮಾವಿಷ್ಟಗೊಂಡಿರುವ ಸಾಧ್ಯತೆಯನ್ನು ಇದು ತೋರಿಸುತ್ತದೆ ಆಗ ಸೋದೆಯ ರಾಜನಾಗಿದ್ದ ಇಮ್ಮಡಿ ಅರಸಪ್ಪನಾಯಕನನ್ನು ವೆಂಟಪ್ಪನಾಯಕ ಸೋಲಿಸಿರಬಹುದಾಗಿದೆ. ಆದರೆ ಇಲ್ಲಿ ಸೋದೆಯವರ ನೇರ ಉಲ್ಲೇಖವಿಲ್ಲದಿರುವುದನ್ನು ನಾವು ಮರೆಯಲಾಗದು. ಮುಂದೆ ಪುಟ ೧೨೯ ರಲ್ಲಿ ಕೆಳದಿಯ ವೆಂಕಟಪ್ಪನಾಯಕನು ”ಸೋದೆ, ಬಿಳಿಗೆ ತರೀಕೆರೆ ಮುಂತಾದ ಮನ್ನೆಯರ್ಕಳೊಳ್ ತಾನತ್ಯಂತ ಪ್ರಖ್ಯಾತಿಯಂ, ಪಡೆದು” ಎಂಬ ಮಾತು ಬಂದಿರುವುದರಿಂದ ವೆಂಕಟಪ್ಪನಾಯಕನು ಸೋದೆಯವರನ್ನು ಸಂಪೂರ್ಣ ಸೋಲಿಸಿರಲಿಲ್ಲವೆಂದು ತಿಳಿಯಬಹುದಾಗಿದೆ.

ಆಶ್ವಾಸ ೬ರಲ್ಲಿ ಕೆಳದಿಯ ವೀರ ಒಡೆಯರು ತೀರಿ ಹೋಗಲು (ಅವರ) ಮೈದುನನಾದ ಸದಾಶಿವನಾಯಕನು ವೀರ ಒಡೆಯನ ಮಗ ಬಸವಲಿಂಗನಾಯಕನನ್ನು ಅಂಗಹೀನಗೊಳಿಸಿ ತನಗೇ ರಾಜ್ಯಾಭಿಷೇಕ ಮಾಡಿಕೊಂಡನು. ಆದರೆ ವೀರಭದ್ರನಾಯಕನ ಕಾಟಕ್ಕೆ ಹೆದರಿ ಸದಾಶಿವನಾಯಕನು ಓಡಿ ಹೋಗಿ ಬಿಳಿಗೆ-ಸ್ವಾದಿಯವರ ಮೊರೆಹೊಕ್ಕನು. ಬಿಳಿಗೆ-ಸೋದೆಯವರು ಒಂದಾಗಿ ನಾಯಕನಿಗೆ ಆಶ್ರಯವಿತ್ತರು. ಇದರಿಂದ ಕುಪಿತನಾದ ವೀರಭದ್ರನಾಯಕನು ಸದಾಶಿವನಾಯಕನು ತೀರಿಹೋದರೂ ಬಿಡದೆ ಬಿಳಿಗೆ ಸೋದೆಗಳ ಮೇಲೆ ಏರಿ ಹೋಗಿ ಅವರ ರಾಜ್ಯಗಳನ್ನು ಆಕ್ರಮಿಸಿದನು. ಅವರು ವಿಜಾಪುರದವರ ಮೊರೆ ಹೋಗಲು, ಆ ಆದಿಲಶಾಹಿಗಳು ಕೆಳದಿಯ ಮೇಲೆ ದಂಡೆತ್ತಿ ಬರುವ ಸಿದ್ದತೆ ನಡೆಸಿದರು. ಇದನ್ನರಿತ ವೀರಭದ್ರನಾಯಕನು ತನ್ನ ರಾಯಸದ ಶಂಕರನಾರಾಯಣನೆಂಬ ನಿಯೋಗಿಯನ್ನು ಕಳುಹಿಸಿ, ಎಲ್ಲ ವೃತ್ತಾಂತವನ್ನು ತಿಳಿಸಿದ್ದರಿಂದ ವಿಜಾಪುರದ ಸೈನ್ಯ ಕೆಳದಿಯ ಮೇಲೆ ಬರಲಿಲ್ಲ. (ಪು.೧೪೪-೪೫)

ಈ ಹಿಂದೆ ನಾವು ನೋಡಿದಂತೆ ಈ ಘಟನೆ ನಡೆದುದು ಸೋದೆಯ ದೊರೆ ಮಧುಲಿಂಗರಾಜ (ಕ್ರಿ. ಶ. ೧೬೬೨-೭೪) ನ ಕಾಲಾವಧಿಯಲ್ಲಿ ಇಲ್ಲಿನ ಮಧುಲಿಂಗ ನಾಯಕ ಮತ್ತು ಕೆಳದಿಯ ವೀರಭದ್ರನಾಯಕರ ಕಾಲಗಣೆಯಲ್ಲಿ ಎಲ್ಲಿಯೋ ತಪ್ಪಿರುವ ಹಾಗಿದೆ. ಸದಾಶಿವರಾಯನ ಒಂದು ಸ್ವರವಚನದಲ್ಲಿ ಇದರ ಸ್ಪಷ್ಟ ಉಲ್ಲೇಖವಿದ್ದು, ವಿಜಾಪುರದವರ ಪರವಾಗಿ ಶರಜಾಖಾನನೆಂಬ ಸರದಾರನು ಈ ಜಗಳದಲ್ಲಿ ಭಾಗವಹಿಸಿ ಶಮನಗೊಳಿಸಿದ ಅಂಶ ಅಲ್ಲಿ ಖಚಿತವಾದಿದೆ. ಈ ಸಂದರ್ಭದಲ್ಲಿ ಸ್ವಾದಿ-ಬಿಳಿಗೆಯವರು ಪ್ರಾರ್ಥಿಸಿಕೊಂಡದ್ದರಿಂದ ವೀರಭದ್ರನಾಯಕನು ಅವರ ರಾಜ್ಯಗಳನ್ನು ಅವರಿಗೆ ಮರಳಿ ಕೊಟ್ಟನೆಂದಿರುವುದು ಆಸ್ಥಾನಕವಿಯ ನಯದ ಹೇಳಿಕೆ ಎಂಬುದು ಸ್ಪಷ್ಟ.

ಇದೇ ಆಶ್ವಾಸದ ಪುಟ ೧೪೮ ರಲ್ಲಿ ಕೆಳದಿಯವರಿಗೂ ಸೋದೆಯವರಿಗೂ ಕೆಂಗೆರೆಯಲ್ಲಿ ದೊಡ್ಡ ಯುದ್ಧವೊಂದು ಜರುಗಿದ್ದರ ಉಲ್ಲೇಖ ಬಂದಿದೆ.

ಮೇದಿನಿಗತಿ ಬಲನೆನಿಸಿದ |
ಸೋದೆಯ ರಘನಾಥರಾಜನಂ ಕೆಂಗೆರೆಯೊಳ್ |
ಕಾದಿ ಪಿಂದೆಗಿಸಿ ಪೋಗಲಾ |
ಮೋದರೆ ಸಂಧಿಯೊಳ್ ಮೈತ್ರಿಯಂ ಮನ್ನಿಸಿದಂ ||

ಎಂದು ಹೇಳಿರುವುದರಿಂದ ಈ ಯುದ್ದದಲ್ಲಿ ಸೋದೆಯವರ ಕೈಮೇಲಾಗಿರುವಂತೆ ಕಾಣುತ್ತದೆ. ವೀರಭದ್ರನಾಯಕನು ಇಲ್ಲಿ (ಆ) ಮೋದರೆ ಎಂಬಲ್ಲಿ ಸಂಧಿ ಮಾಡಿ ಕೊಂಡಿರುವುದನ್ನೂ ಮೇದಿನಿಗತಿ ಬಲನೆನಿಸಿಕೊಂಡಿದ್ದ ರಘನಾಥರಾಜನೆಂಬ ಉಲ್ಲೇಖ ಬಂದಿರುವುದನ್ನೂ ಗಮನಿಸಿದರೆ, ಸೋದೆಯ ರಘನಾಥ ರಾಜ ತುಂಬ ಬಲಶಾಲಿಯೂವೀರನೂ ಆಗಿದ್ದನೆನ್ನ ಬೇಕಾಗುತ್ತದೆ.

ಇಲ್ಲಿ ಈ ಘಟನೆಯ ಕಾಲವನ್ನು ಕುರಿತಂತೆ ಒಂದಿಷ್ಟು ಚಿಂತನೆ ಮಾಡಬೇಕಾಗಿದೆ. ಸೋದೆಯ ಮೊದಲನೆಯ ರಘುನಾಥರಾಯನ ಕಾಲ ಕ್ರಿ.ಶ. ೧೬೧೮ ರಿಂದ ೧೬೩೮ ಎಂದು ತಿಳಿಯಲಾಗಿದೆ ಮತ್ತು ಕೆಳದಿಯ ಪ್ರಸ್ತುತ ವೀರಭದ್ರನಾಯಕನ ಕಾಲ ಕ್ರಿ.ಶ ೧೬೨೯ ರಿಂದ ೧೬೪೫ ಎಂದಾಗಿದೆ. ಕ್ರಿ.ಶ ೧೬೩೮ ರಿಂದ ಸೋದೆಯ ಮಧುಲಿಂಗನಾಯಕನು ರಾಜ್ಯಭಾರ ಮಾಡುತ್ತಿದ್ದ ಹಾಗೂ ಅವನ ಕಾಲಾವಧಿಯಲ್ಲಿಯೇ ಸೋದೆಯವರು ಕವಲೆದುರ್ಗವನ್ನು ಮುತ್ತಿ ಅದನ್ನು ವಶಪಡಿಸಿಕೊಂಡು ಅಲ್ಲಿ ಧರ್ಮಗಹಳೆ ಹಿಡಿಸಿದ ಸಂಗತಿಯನ್ನು ಈಗಾಗಲೇ ಗಮನಿದ್ದೇವೆ. ಇವೆರಡು ಸಂಗತಿಗಳು ಬಹುಶ: ಬೇರೆಬೇರೆಯಾಗಿರದೆ ಒಂದೇ ಸಂದರ್ಭದಲ್ಲಿ ಜರುಗಿದವೆನ್ನಬೇಕಾಗಿದೆ. ಹೀಗಾದಲ್ಲಿ ಕೆಳದಿನೃಪವಿಜಯದಲ್ಲಿ ಉಲ್ಲೇಖಿತನಾದ ರಘುನಾಥರಾಜ ಮಧುಲಿಂಗನಾಯಕನ ತಂದೆ ಒಂದನೆಯ ರಘುನಾಥರಾಯನಾಗಿರದೆ ಸದಾಶಿವರಾಯನ ಮಗ ಇಮ್ಮಡಿ ರಘುನಾಥರಾಯನಾಗಿರುವ ಸಾಧ್ಯತೆಯೂ ಇದೆ. ಇಮ್ಮಡಿ ರಘುನಾಥರಾಯ ಆಗ ಒಳ್ಳೆಯ ತರುಣನಾಗಿದ್ದು, ಈ ಯುದ್ದದಲ್ಲಿ ಮುಂದಾಳುತನ ವಹಿಸಿರುವನೆಂದು ಹೇಳಬಹುದಾಗಿದೆ. ಮಧುಲಿಂಗನಾಯಕನ ಜೊತೆಗೆ ಕಳದಿಯವರು ಮಾಡಿಕೊಂಡ ಸಂಧಿಯ ಉಲ್ಲೇಖದ ತರುವಾಯವೇ ಕೆಳದಿನೃಪವಿಜಯದಲ್ಲಿ ಈ ಉಲ್ಲೇಖ ಬಂದಿರುವುದು ಹೀಗೆ ಊಹಿಸಲು ಪ್ರಬಲ ಕಾರಣ.

ಸಪ್ತಮ ಆಶ್ವಾಸ-ಪುಟ ೧೬೨ ರಲ್ಲಿ ಕೆಳಗಿನ ವಿವರವಿದೆ: ಕೆಳದಿಯ ಶಿವಪ್ಪನಾಯಕನು ಪಟ್ಟವೇರಿ ಕ್ರಿ.ಶ. ೧೬೪೫ ರಿಂದ ೧೬೬೧ ರ ವರೆಗೆ ರಾಜ್ಯವಾಳುತ್ತದ್ದನು. ಈ ಕಾಲಾವಧಿಯಲ್ಲಿ ಸೋದೆಯ ಪಟ್ಟದ ಮೇಲೆ ಮಧುಲಿಂಗರಾಯನೇ (ಕ್ರಿ.ಶ. ೧೬೩೮ ರಿಂದ ೧೬೭೪) ಇನ್ನೂ ಆಸೀನನಾಗಿದ್ದ. ಈ ಮಧ್ಯಂತರ ಅವಧಿಯ ದುರ್ಮುಖಿ ಸಂವತ್ಸರದಲ್ಲಿ (ಕ್ರಿ. ಶ. ೧೬೫೭) ವಿಜಾಪುರದ ಸುಲ್ತಾನನು ತೀರಿ ಹೋದನು. ಈ ಸಂದರ್ಭದಲ್ಲಿ ಶಿವಪ್ಪನಾಯಕ ಸೋದೆಯ ಮೇಲೆ ಏರಿಹೋಗಿ, ಅವರ ರಾಜ್ಯದ ಶಿರಸೆ, ಹೆರೂರ, ಬೋಳೂರು, ಪುಲಿಯ ಕಣ್, ಕರೂರು, ಬನವಾಸೆ ಬದನಗೋಡು ಮುಂತಾದ ಪಟ್ಟಣಗಳನ್ನು ಹಿಡಿದುಕೊಂಡನು. ಶಿರಸೆಯ ಕೋಟೆಯನ್ನು ವಶಪಡಿಸಿಕೊಂಡು ಮಧುಲಿಂಗನಾಯಕನನ್ನು ಸೆರೆಹಿಡಿದನು. ಆದರೆ ಅವನು ದೈನ್ಯದಿಂದ ಬೇಡಿಕೊಂಡದ್ದರಿಂದ ಅವನಿಗೆ ಅವನ ರಾಜ್ಯವನ್ನು ಮರಳಿ ಕೊಟ್ಟು ಅವನನ್ನು ಬಂಧಮುಕ್ತಗೊಳಿಸಿದನು. ಸೋದೆಯವರಿಗೆ ಇದು ಕೆಳದಿಯವರಿಂದ ಸುಮಾರು ೨೫ ವರ್ಷಗಳ ಕಾಲಾವಧಿಯಲ್ಲಿ ಒದಗಿದ ಎರಡನೆಯ ವಿಪತ್ತು ಆದರೆ ವಿಜಾಪುರದವರ ಹಸ್ತಕ್ಷೇಪವಿಲ್ಲದೆ ಇದು ಬಗೆ ಹರಿದಿರುವ ಲಕ್ಷಣವಿರುವುದರಿಂದ (?) ಅಷ್ಟೇನೂ ತೀವ್ರತರದ್ದಾಗಿರುವಂತೆ ಕಾಣದು ಇದೇ ಆಶ್ವಾಸದ ಪುಟ ೧೬೭ ರಲ್ಲಿ ಶಿವಪ್ಪನಾಯಕನು ರಾಯರ ಸಂಸ್ಥಾನವನ್ನು ಶ್ರೀರಂಗಪಟ್ಟಣದಲ್ಲಿ ನೆಲೆಸಿದ್ದ (ಶ್ರೀರಂಗರಾಜನ ರಾಜ್ಯವನ್ನು) ಉದ್ದರಿಸಬೇಕೆಂದು ಇಚ್ಚೆಪಟ್ಟು ವಿಕಾರಿ ಸವತ್ಸರದಲ್ಲಿ ಎಂದರೆ ಕ್ರಿ, ಶ. ೧೬೬೦ ರಲದಲಿ ಸೋದೆ, ಬಿಳಿಗೆ, ತರೀಕೆರೆ, ಹರಪುರ ಮುಂತಾದ ನಾಡದೊರೆಗಳ ಸೈನ್ಯವನ್ನು ಕೂಡಿಸಿಕೊಂಡು ಬೇಲೂರನ್ನು ಮುತ್ತಿವಶಪಡಿಸಿಕೊಂಡನು ಮತ್ತು ಅದನ್ನೆಲ್ಲ ಶ್ರೀರಂಗರಾಜನಿಗೆ ಅರ್ಪಿಸಿದನು. ಇದರಿಂದ ಕೆಳದಿಯವರಂತೆ ಸೋದೆಯ ಮಧುಲಿಂಗರಾಯನೂ ಈ ಪ್ರಸಂಗದಲ್ಲಿ ಶ್ರೀರಂಗರಾಜನ ಪರವಾಗಿದ್ದನೆಂದು ತಿಳಿದು ಬರುತ್ತದೆ.

ಶಿವಪ್ಪನಾಯಕನ ತರುವಾಯ ಅವನ ಮಗ ಇಮ್ಮಡಿ ವೆಂಕಟಪ್ಪನಾಯಕ (ಕ್ರಿ.ಶ.೧೬೬೧ ರಿಂದ ೧೬೬೨) ಮತ್ತು ಅವನ ತಮ್ಮ (ಶಿವಪ್ಪನಾಯಕನ ಮಗ) ಭದ್ರಪ್ಪನಾಯಕ (ಕ್ರಿ.ಶ. ೧೬೬೨ ರಿಂದ ೧೬೬೪) ಕೆಳದಿಯ ರಾಜ್ಯವಾಳಿದರು. ಭದ್ರಪ್ಪನಾಯಕನ ಕಾಲಾವಧಿಯಲ್ಲಿ ಅಳಿಯ ಶಿವಲಿಂಗನಾಯಕನು ಮೈಸೂರಿನವರೊಡನೆ ನಡೆದ ಕಣಗಾಲದ ಯುದ್ದದಲ್ಲಿ ಹತನಾದನು. ಆದರೆ ಭದ್ರಪ್ಪನಾಯಕನು ಮೈಸೂರು ಸೀಮೆಯ ಹೊನ್ನವಳ್ಳಿ, ಚಿಕ್ಕನಾಯಕನ ಹಳ್ಳಿ ಮೊದಲಾದುವನ್ನು ಗೆದ್ದು, ತರುವಾಯ ಸೋದೆಯವರನ್ನು ಸೋಲಿಸಿದ್ದಾಗಿ ಲಿಂಗಣ್ಣಕವಿ ಹೇಳಿದ್ದಾನೆ. (ಆ.೭. ಪು. ೧೭೦). ಈ ಸಂದರ್ಭದಲ್ಲಿ ವಿಜಾಪುರದವರು ಸೋದೆಯವರ ಪಕ್ಷವಹಿಸಿ ಕೆಳದಿಯ ಮೇಲೆ ದಂಡೆತ್ತಿ ಹೋದರು. ಬಿಜಾಪುರದ ಏದುಲಶಾಹನು (ಆದಿಲಶಾಹ) ಸ್ವತಃ ಶಾಜಿ, ಬಲೂಲಖಾನ, ಸೈಯದ ವಿಲಾಸ, ಶರಜಾಖಾನ ಸಹಿತ ಯುದ್ಧಮಾಡಿದನು. ಇವರೆಲ್ಲ ಸೇರಿ ಬಿಲುಸಾಗರ ಕಣಿವೆಯಲ್ಲಿ ಜಾತಪ್ಪನ ಮಗ ಭದ್ರಪ್ಪ ಎಂಬ ಕೆಳದಿಯ ಸೇನಾನಿಯನ್ನು ಸೋಲಿಸಿ, ಬಿದಿರೂರಿಗೆ ಮುತ್ತಿಗೆ ಹಾಕಿದರು. ತರುವಾಯ ಕೌಲೆದುರ್ಗದಲ್ಲಿ ಅಡಗಿದ್ದ ಭದ್ರಪ್ಪನಾಯಕನನ್ನು ಮುತ್ತಿದರು. ಭದ್ರಪ್ಪನಾಯಕನು ಪರಾಕ್ರಮದಿಂದ ಹೋರಾಡಿ ವಿಜಾಪುರ ಸೋದೆಯ ಸಂಯುಕ್ತ ಸೈನ್ಯವನ್ನು ಸೋಲಿಸಿದನು(?). ಆದರೆ ತರುವಾಯ ಹೂವಯ್ಯ ಮುಂತಾದ ನಿಯೋಗಿಗಳನ್ನು ಸಂಧಾನಕ್ಕೆ ಕಳುಹಿಸಿ ಅವರೊಡನೆ ಒಪ್ಪಂದ ಮಾಡಿಕೊಂಡನಂತೆ !

ಸೋಮಶೇಖರನಾಯಕನ ಮರಣಾನಂತರ ಅವನ ಹೆಂಡತಿ ಚೆನ್ನಮ್ಮಾಜಿ ಕ್ರಿ.ಶ. ೧೬೭೨ರಲ್ಲಿ ಕೆಲದಿಯ ಪಟ್ಟವೇರಿದಳು. ಇವಳ ಕಾಲಾವಧಿಯಲ್ಲಿ ಸೋದೆಯವರ ಮೇಲಿನ ಕೆಳದಿಯವರ ದ್ವೇಷ ಹಾಗೇ ಮುಂದುವರಿಯಿತು (ಈಕೆ ಪಟ್ಟಕ್ಕೆ ಬರುವ ಪೂರ್ವದಲ್ಲಿ) ಸೋದೆಯವರು ಪಂಚಮಹಲಿನಲ್ಲಿದ್ದ ಮಿಡಿಜೆಯ ಕೋಟೆಯನ್ನು ಹಿಡಿದುಕೊಂಡಿದ್ದರು. ಎಂದರೆ ಈ ಅವಧಿಯಲ್ಲಿ ಸೋದೆ ಸಿಂಹಾಸನದ ಮೇಲೆ ಸದಶಿವರಾಯನು ಕುಳಿತಿದ್ದನು. ಚೆನ್ನಮ್ಮ ಸೋದೆಯವರಿಂದ ಆ ಕೋಟೆಯನ್ನು ಪುನಃ ವಶಪಡಿಸಿಕೊಂಡು ಅಲ್ಲಿ ನೆಲೆಯೂರಿದ್ದ ಸೋದೆಯ ಸೇನಾಪತಿ ಹನುಮನಾಯಕ ನೆಂಬವನನ್ನು ಓಡಿಸಿಬಿಟ್ಟಳು (ಪುಟ-೧೮೯). ಕೆಳದಿನೃಪವಿಜಯದ ಪುಟ ೧೯೧ ರಲ್ಲಿ ಸೋದೆಯ ರಾಮಚಂದ್ರನಾಯಕನು ಮಿಡಿಜೆಯ ಕೋಟೆಯನ್ನು ಹಿಡಿದುಕೊಂಡು ಗರ್ವದಿಂದ ಮೆರೆಯುತ್ತಿದ್ದನೆಂದು ಹೇಳಿದೆ. ಈ ಅವಧಿಯಲ್ಲಿದ್ದ ಸೋದೆಯ ರಾಮಚಂದ್ರರಾಯನೆಂದರೆ ಮಧುಲಿಂಗನಾಯಕನ ಮಗ ಸವಾಯಿ ರಾಮಚಂದ್ರ ನಾಯಕನೇ ಸೈ. ಈತ ಸದಾಶಿವರಾಯನ ಅಣ್ಣನೆಂದು ಸದಾಶಿವರಾಯನೇ ತನ್ನ ಸ್ವರವಚನದಲ್ಲಿ ಕೊಟ್ಟಿರುವ ವಿವರಗಳಿಮದ ತಿಳಿಯಬಹುದಾಗಿದೆ. ಸಬ್ಬುನೀಸ ಕೃಷ್ಣಪ್ಪಯ್ಯನೆಂಬ ಕೆಳದಿಯ ಸೇನಾಪತಿಯು ಯುದ್ಧಕ್ಕೆ ಬಂಧು, ಸ್ವಾದಿಯ ಈ ಅರಸನನ್ನು ಸೋಲಿಸಿದನು. ಅಲ್ಲದೆ ಚೆನ್ನಮ್ಮಾಜಿ ಸಿರಿಸಿ ಮತ್ತು ಸೋದೆಗಳನ್ನು ಸ್ವಾಧೀನಪಡಿಸಿಕೊಂಡು ರಾಮಚಂದ್ರ ನಾಯಕನನ್ನು ಹೊಡೆದೋಡಿಸಿ ಸೋದೆಯಲ್ಲಿಯೇ ಬೀಡುಬಿಟ್ಟಳು. ಅವರ ಬಿರುದು ಬಾವಲಿಗಳನ್ನೆಲ್ಲ ಕಸಿದುಕೊಂಡು, ಅವರಿಗೆ ಸೇರಿದ್ದ ಬನವಾಸಿ, ಬದನಗೋಡು, ಬಾಳೂರು, ಪುಲಿಯಕಣ್, ಕರವೂರು ಮುಂತಾದವನ್ನು ವಶಪಡಿಸಿಕೊಂಡದ್ದಲ್ಲದೆ ಅವರ ನೀಲಿ ಕೊಡೆಯನ್ನು ಅಪಹರಿಸಿ ಅದನ್ನು ಕೆಳದಿಯ ವೀರಭದ್ರದೇವರಿಗೆ ಕಾಣಿಕೆಯಾಗಿ ಇತ್ತಳು. ತರುವಾಯ, ಸೋದೆಯವರ ವಿನಂತಿಯನ್ನು ಮನ್ನಿಸಿ, (ಬಹುಶಃ ಅವರಿಂದ ಕಪ್ಪು-ಕಾಣಿಕೆ ಪಡೆದು) ಅವರ ರಾಜ್ಯವನ್ನು ಅವರಿಗೆ ಹಿಂದಿರುಗಿಸಿದಳು. ಇದರಿಂದ ಸೋದೆಯವರ ರಾಜ್ಯದಲ್ಲಿ ಸೋದೆ, ಸಿರಸಿ, ಬನವಾಸಿ ಬದನಗೋಡು, ಬಾಳೂರು, ಪುಲಿಕಣ್ ಮತ್ತು ಕರವೂರು ಇವು ತುಂಬಾ ಪ್ರಸಿದ್ಧ ಪಟ್ಟಣಗಳಾಗಿದ್ದವೆಂಬಂಶ ಖಚಿತವಾಗುತ್ತದೆ. ಜತೆಗೆ ಸೋದೆಯವರ ರಾಜಛತ್ರ ನೀಲಿಬಣ್ಣದ್ದಾಗಿತ್ತೆಂಬ ವಿಷಯ ಇಲ್ಲಿ ಸ್ಪಷ್ಟಪಡುತ್ತದೆ.

ಮುಂದೆ ಕೆಳದಿನೃಪವಿಜಯದ ೧೦ ನೆಯ ಆಶ್ವಾಸ ಪುಟ ೨೫೫-೫೬ ರಲ್ಲಿ ಸೋದೆಗೆ ಸಂಬಂಧಿಸಿದ್ದ ಇನ್ನೆರಡು ಉಲ್ಲೇಖ ಕಂಡುಬರುತ್ತವೆ. ಅದರಲ್ಲಿ ಕೆಳದಿಯ ಬಸವಪ್ಪನಾಯಕನು (ಕ್ರಿ.ಶ. ೧೬೯೭-೧೭೧೪) ಜಡೆ ಗ್ರಾಮಕ್ಕೆ ಭೆಟ್ಟಿಕೊಟ್ಟಾಗ ಸೋದೆಯ ಸದಾಶಿವನಾಯಕನು ಅವನನ್ನು ಪರಿವಾರ ಸಮೇತ ಗುಡ್ಡಣಾಪುರದ ಕೆರೆಯ ಬಯಲಿನಲ್ಲಿ ಭೆಟ್ಟಿಯಾದನು. ತರುವಾಯ ಇಬ್ಬರೂ ಸೇರಿ ಬನವಾಸಿಗೆ ಭೆಟ್ಟಿಯಿತ್ತರೆಂದಿದೆ. ಬಹುಶಃ ಬನವಾಸಿಯ ಮಧುಕೇಶ್ವರನ ದರ್ಶನಾಪೇಕ್ಷೆಯೇ ಕೆಳದಿಯ ಬಸವಪ್ಪನಾಯಕನ ಭೆಟ್ಟಿಯ ಉದ್ದೇಶವೆಂದು ತಿಳಿಯಬಹುದಾಗಿದೆ. ಪ್ರಸ್ತುತ ಕೃತಿಯಲ್ಲಿನ ಸೋದೆಯವರನ್ನು ಕುರಿತ ಕೊನೆಯ ಉಲ್ಲೇಖ ಇದೇ ಎಂದು ಕಾಣುತ್ತದೆ. ಜತೆಗೆ ಸೋದೆಯ ಸದಾಶಿವರಾಯನ ಕೊನೆಯ ವರ್ಷ ಇದಾಗಿರುವುದು ಗಮನಾರ್ಹವಾಗಿದೆ.

ಕೆಳದಿನೃಪವಿಜಯದ ತರುವಾಯ ಸೋದೆಯ ಅರಸರನ್ನು ಉಲ್ಲೆಖಿಸುವ ಇನ್ನೊಂದು ಕೃತಿ ಮಹಾದೇವಕವಿಯ ಮಹಲಿಂಗೇಂದ್ರವಿಜಯ (ಸು. ೧೮೭೦). ಇದರ ಅಧ್ಯಾಯ ೧೮ರಲ್ಲಿ ಸ್ವಾದಿಯನ್ನು ಕುರಿತು ಒಂದೆರಡು ವಿಶಿಷ್ಟ ಉಲ್ಲೇಖಗಳು ಕಂಡು ಬರುತ್ತವೆ. ಸ್ವಾದಿಯಲ್ಲಿದ್ದ ಕುಮಾರಸ್ವಾಮಿ ಎಂಬವರು ಚಿತ್ರದುರ್ಗದ ಇಮ್ಮಡಿ ಗುರುಸಿದ್ಧಸ್ವಾಮಿಗಳ ವಿರುದ್ಧ ಸ್ವಾದಿಯ ಸದಾಶಿವರಾಯನಲ್ಲಿ ಯಾವುದೋ ವಿಷಯಕ್ಕೆ ಚಾಡಿಹೇಳಿದರಂತೆ. ಆಗ ಗುರುಸಿದ್ಧಸ್ವಾಮಿಗಳು ಸ್ವೆತಃ ಸ್ವಾದಿಗೆ ಹೋಗಿ ಸದಾಶಿವರಾಯನನ್ನು ಭೆಟ್ಟಿಯಾದರಲ್ಲದೆ, ರಾಜರಿಗಾಗಿದ್ದ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದರು. ಸ್ವಾದಿಯ ಅರಸರಿಂದ ಗೌರವಾದರಗಳನ್ನು ಪಡೆದು ಸನ್ಮಾನಿತರಾದರು. ಇದೇ ಗ್ರಂಥದಲ್ಲಿ ಮುಂದೆ ಬಂದಿರುವ ಇನ್ನೊಂದು ಉಲ್ಲೇಖದಿಂದ ಚಿತ್ರದುರ್ಗ ಮಠದ ೧೦ ನೆಯ ಸ್ವಾಮಿಗಳು ಸ್ವಾದಿಯಿಂದಲೇ ಬಂದವರೆಂದು ತಿಳಿದುಬರುತ್ತದೆ. ಅವರ ಹೆಸರು ಸ್ವಾದಿಯ ಚೆನ್ನಬಸವಸ್ವಾಮಿಗಳೆಂದೇ ಪ್ರಸ್ತುತ ಕೃತಿ (ಪದ್ಯ-೩೯) ಯಲ್ಲಿ ಹೇಳಿದೆ.

ಸ್ವಾದಿಯಿಂದ ಹೊರದೂಡಲ್ಪಟ್ಟ ಕುಮಾರಸ್ವಾಮಿ ಎಂಬವರು ಹುಬ್ಬಳ್ಳಿಗೆ ಹೋಗಿ ಅಲ್ಲಿಯ ಶೆಟ್ಟರ ಸಹಾಯದಿಂದ ಮಠ ಸ್ಥಾಪಿಸಿದರೆಂದು ಅಲ್ಲಿ ಉಲ್ಲೇಖ ಬಂದಿದೆ. ಬಹುಶಃ ಈ ಕುಮಾರಸ್ವಾಮಿಗಳಿಂದಲೇ ಕುಮಾರಸಂಪ್ರದಾಯ ಪ್ರಾರಂಭವಾದಂತೆ ಕಾಣುತ್ತದೆ.

ಈ ಮೇಲಿನ ಕೆಲವು ಕೃತಿಗಳಲ್ಲದೆ ಅಪ್ರಕಟಿತವಾಗಿರುವ ಸೋದೆಯ ಬಸವಲಿಂಗ ರಾಜನ ಗುರುಸಿದ್ಧೇಶ್ವರಸ್ತೋತ್ರ ಮತ್ತು ಹಾಡುಗಳು, ಇಮ್ಮಡಿ ಮುರಿಗೆಯ ಗುರುಸಿದ್ಧರ ಮುರಿಗೆಯ ತಾರಾವಳಿ, ಹೊಸದಾಗಿ ಪತ್ತೆಯಾಗಿರುವ ಸದಾಶಿವರಾಜೀಯ, ಕವಿ ಪರಮದೇವ ರಚಿಸಿರುವ ಕೀರ್ತನೆಗಳು, ಕೆಲವು ಕೈಫಿಯತ್ತುಗಳು ಮತ್ತು ಬಖೈರುಗಳು ಮೊದಲಾದ ಸಾಹಿತ್ಯಕೃತಿಗಳಲ್ಲಿ ಈ ಮನೆತನವನ್ನು ಕುರಿತಾಗಿರುವ ಉಲ್ಲೇಖಗಳನ್ನು ಹೆಕ್ಕಿ ತೆಗೆಯುವುದು ಅವಶ್ಯಕವಾಗಿದೆ. ಇಲ್ಲಿನ ಅಪ್ರಕಟಿತ ಕೃತಿಗಳೆಲ್ಲ ಪ್ರಕಟವಾದಾಗ ಸ್ವಾದಿಯ ಅರಸುಮನೆತನಕ್ಕೆ ಸಂಬಂಧಪಟ್ಟ ಹಲವಾರು ಚಾರಿತ್ರಿಕ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

ಸಂದರ್ಭ ಸೂಚಿ

೧. ಸದಾಶಿವ ನೀತಿ-ಸೋದೆಯ ಸದಾಶಿವರಾಯ

೨. ಸೋದೆಯ ಬಸವಲಿಂಗರಾಜನ ಭಕ್ತಿಚಂದ್ರೋದಯ

೩. ಸ್ವರವಚನಗಳು-ಮರಿಶಾಂತ ಬಸವೇಶ್ವರ

೪. ಬಿಳಿಗೆಯ ಅರಸರ ವಂಶಾವಳಿ

೫. ಕೆಳದಿನೃಪವಿಜಯ-ಲಿಂಗಣ್ಣ ಕವಿ

೬. ಮಹಲಿಂಗೇಂದ್ರ ವಿಜಯ

೭. ನಿರಂಜನವಂಶರತ್ನಾಕರ

೮. ನಿರಂಜನ ಜಂಗಮವಂಶದರ್ಪಣ

೯. ಕರ್ನಾಟಕ ಇತಿಹಾಸ ದರ್ಶನ. (೧೯೯೨), ಸಂ. ೭. ಕರ್ನಾಟಕ ಇತಿಹಾಸ ಅಕಾಡಮಿ, ಬೆಂಗಳೂರು

೧೦. ಸ್ವಾದಿ ಅರಸರ ಮನೆತನ-ಪ್ರೊ.ಸ.ಸ. ಮಾಳವಾಡ

೧೧. ಕರ್ನಾಟಕ ಕವಿಚರಿತೆ-ಸಂ. ೨ ಮತ್ತು ೩

೧೨. ದೇವಚಂದ್ರನ ರಾಜಾವಳೀಕಥೆ

೧೩. ಹಾಲಾಸ್ಯಪುರಾಣ- (ಇಮ್ಮಡಿ ಮುರುಗೆಯ ಗುರುಸಿದ್ಧ)

೧೪. ಜಯಂತಿ ಪತ್ರಿಕೆ- ಸಂಪುಟ ೧೧ ಮತ್ತು ೧೮

೧೫. ಶಿವಾನುಭವ-ಸಂಪುಟ ೧, ೨, ೭, ೯, ೧೧ ಮತ್ತು ೨೯

೧೬. ಕನ್ನಡ ವಿಷಯ ವಿಶ್ವಕೋಶ-ಮೈಸೂರು, ವಿಶ್ವವಿದ್ಯಾಲಯ

 

[1]ಇದೇ ಗ್ರಂಥದಲ್ಲಿನ ಡಾ.ಬಿ.ಆರ್. ಹೀರೆಮಠದ ಲೇಖನದಿಂದ ಇಲ್ಲಿನ ಸದಾಶಿವರಾಯನ ಕೃತಿಗಳ ಹೆಸರುಗಳನ್ನು ಮತ್ತು ಉಲ್ಲೇಖಗಳನ್ನು ಸ್ವೀಕರಿಸಲಾಗಿದೆ.