ಡಾ || ಎಂ. ಎಚ್. ಕೃಷ್ಣರು ೧೯೩೬ ರಲ್ಲಿ ಹಲ್ಮಿಡಿ ಶಾಸನವನ್ನು ಸಂಶೋಧಿಸಿ ಅದರ ಐತಿಹಾಸಿಕ ಮಹತ್ವದೊಂದಿಗೆ ಅರ್ಥವಿವೇಚನೆ ಮಾಡಿ ಪ್ರಕಟಿಸಿದರು. ಆ ತರುವಾಯ ಬಹುದಿನಗಳವರೆಗೆ ಅದರ ಅಮೂಲಾಗ್ರವಾದ ಚರ್ಚೆ ನಡೆದಿರಲಿಲ್ಲ. ಇತ್ತೀಚೆಗೆ ೧೯೭೯ ರಲ್ಲಿ ಡಾ || ಟಿ. ವಿ. ವೆಂಕಟಾಚಲ ಶಾಸ್ತ್ರಿ ಅವರು ತಮ್ಮ ‘ಶಬ್ದಾರ್ಥ ವಿಹಾರ’ದಲ್ಲಿ ಶಾಸನದ ಸಮಗ್ರವಾದ ಅರ್ಥ ವಿವೇಚನೆ ಮಾಡಿದ್ದಾರೆ. ಅದನ್ನು ಓದಿದಾಗ ಶಾಸನವನ್ನು ಕುರಿತಂತೆ, ನನ್ನ ಕೆಲವು ವಿಚಾರಗಳನ್ನು ವ್ಯಕ್ತಪಡಿಸುವುದು ಅವಶ್ಯಕವೆಂದು ತೋರಿತು. ಆದ್ದರಿಂದ ಹಲ್ಮಿಡಿ ಶಾಸನವನ್ನು ಇಲ್ಲಿ ಪುನಃ ಪರಿಶೀಲನೆಗೆ ಒಳಪಡಿಸಿದೆ.

ಈ ಶಾಸನದ ಲಿಪಿ ಕ್ರಿ.ಶ. ಐದನೆಯ ಶತಮಾನಕ್ಕೆ ಸಂಗತವಾಗಿದೆ ಎಂದು ಸಾಮಾನ್ಯವಾಗಿ ಒಪ್ಪಲಾಗಿದೆ. ಆದರೆ ಡಿ. ಸಿ. ಸರ್ಕಾರರಂಥ ಒಬ್ಬಿಬ್ಬರು ವಿದ್ವಾಂಸರು ಲಿಪಿಸ್ವರೂಪದ ಮೇಲಿಂದ ಇದನ್ನು ಬಾದಾಮಿ ಚಾಲುಕ್ಯ ಮಂಗಲೇಶನ ಕನ್ನಡ ಶಾಸನದ ತರುವಾಯದ್ದೆಂದು ಹೇಳಿದ್ದಾರೆ. ಶಾಸನವು ಕದಂಬಪನೂ ತ್ಯಾಗಸಂಪನ್ನನೂ ಕಲಭೋರನ ವೈರಿಯೂ ಆದ ಕ(ಕಾ)ಕುಸ್ಥದೊರೆಯ ಆಳ್ವಿಕೆಯನ್ನು ಸ್ಪಷ್ಟವಾಗಿ ನಿರ್ದೇಶಿಸಿದೆ. ಈ ಕದಂಬಪನಾದ ಕಾಕುಸ್ಥನೆಂದರೆ ಭಗೀರಥನ ಮಗನೂ ರಘುವರ್ಮನ ತಮ್ಮನೂ ಶಾಂತಿವರ್ಮನಿಗೆ ತಂದೆಯೂ ಆದ ಪ್ರಸಿದ್ಧ ದೊರೆ ಕಾಕುಸ್ಥ್ಯವರ್ಮನೇ ಹೊರತು ಬೇರೆ ಯಾರೂ ಅಲ್ಲ. ಕದಂಬರಲ್ಲಿ ಈ ಹೆಸರಿನ ಬೇರೊಬ್ಬ ರಾಜನು ಈ ಕಾಲಾವಧಿಯ ಸುಮಾರಿನಲ್ಲಿ ಇದ್ದನೆಂದು ತಿಳಿದು ಬರುವವರೆಗೆ ಇದರ ಕಾಲವನ್ನು ಮುಂದೆ ಹಾಕಲು ಸಾಧ್ಯವಿಲ್ಲ. ಈ ಕಾರಣದಿಂದ ಇದು ಕ್ರಿ.ಶ. ಐದನೆಯ ಶತಮಾನದ ಪೂರ್ವಾರ್ಧದ ಶಾಸನವೆಂದು ಗ್ರಹಿಸಬೇಕು. ತಾಮ್ರ ಶಾಸನಗಳ ಹೋಲಿಕೆಯಲ್ಲಿ ಇದರ ಲಿಪಿ ಅಷ್ಟೊಂದು ಪರಿಶುದ್ಧವಾಗಿಯಾಗಲೀ ಅಚ್ಚುಕಟ್ಟಾಗಿಯಾಗಲೀ ಇಲ್ಲ. ಜತೆಗೆ ಆ ಮತ್ತು ಆ ಸ್ವರಗಳ ಕಾಗುಣಿತ- ಸಂಜ್ಞೆಯಲ್ಲಿ ವಿಶೇಷ ತಪ್ಪುಗಳಾಗಿರುವುದು ಕಂಡುಬರುತ್ತದೆ. ಉದಾಹರಣೆಗೆ ಕಕುಷ್ಥ, ಬಟರಿಕುಲ, ಅಳಪಗಣ, ಭಟರಿ, ಬಣೋಭಯ, ವೀರಾಪುರುಷ ಮುಂತಾದವನ್ನು ನೋಡಬಹುದು. ಇದು ಹಲ್ಮಿಡಿ ಶಾಸನ ಕಾಲಕ್ಕಿಂತ ಸ್ವಲ್ಪ ಮುಂಚಿನ ಪ್ರಾಕೃತ ಶಾಸನಗಳಲ್ಲಿಯೂ ಇದ್ದ ಪ್ರವೃತ್ತಿ.[1] ಈ ಶಾಸನದ ಲಿಪಿಕಾರನಿಗೆ ಲಿಪಿಯು ಸುಂದರವಾಗಿರಬೇಕೆಂಬ ಅಪೇಕ್ಷೆ ಇದ್ದಂತೆ ತೋರುವುದಿಲ್ಲ. ಶಾಸನದಲ್ಲಿಯ ಅಕ್ಷರಗಳ ತಳ, ತಲೆಕಟ್ಟು ಮತ್ತು ಆಕಾರಗಳು ಅಷ್ಟೊಂದು ವ್ಯವಸ್ಥಿತವಾಗಿಲ್ಲದಿರುವುದು ಕಂಡುಬರುತ್ತದೆ. ಅದರಿಂದಾಗಿ ಲಿಪಿಕಾರ ಅಥವಾ ಕಂಡರಣೆಕಾರನ ಕೆಲವೊಂದು ತಪ್ಪುಗಳು ಇದರಲ್ಲಿ ನುಸುಳಿರುವುದು ತೀರ ಸಂಭವನೀಯವೆನ್ನಿಸುತ್ತದೆ. ಶಾಸನ ಸಂಪಾದಕರಾದ ಡಾ || ಎಂ. ಎಚ್. ಕೃಷ್ಣರು ಗದ್ಯ ಭಾಗಕ್ಕೆ ಸಂಬಂಧಿಸಿದಂತೆ ನಾಲ್ಕು ಕಡೆಗೆ ಊಹಾಪಾಠ ಬೇರೆ ಕೊಟ್ಟಿದ್ದಾರೆ. ಅಷ್ಟಲ್ಲದೆ, ಮೈ.ಆ.ರಿ. ೧೯೩೬ ರಲ್ಲಿ ಮತ್ತು ಪ್ರಬುದ್ಧ ಕರ್ಣಾಟಕ ೨೦-೩ ರಲ್ಲಿ ಅವರಿತ್ತ ಪಾಠಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳೂ ಇವೆ. ಆರನೆಯ ಸಾಲಿನಲ್ಲಿ ‘ಪಶುಪತಿ ಮಾದಕ್ಷಿಣಾಪಥ’ ಎಂದು ಮೈ.ಆ.ರಿ.[2] ಯಲ್ಲಿದ್ದರೆ ‘ಪಶುಪತಿಯಾ ದಕ್ಷಿಣಾಪಥ’ವೆಂದು ಪ್ರ.ಕ.[3] ದಲ್ಲಿದೆ. ಮುಂದೆ ಹದಿನೈದನೆಯ ಸಾಲಿನಲ್ಲಿ ‘ಅದಾನಳಿವೊಗ್ನೆ’ ಎಂದು ಎರಡೂ ಕಡೆ ಪಾಠ ಇದೆ. ಆದರೆ ಶಾಸನದ ಪಡಿಯಚ್ಚುಗಳನ್ನು ಪರೀಕ್ಷಿಸದರೆ ಅಲ್ಲಿ ‘ಅದಾನೞೆವೊನ್ಗೆ’ ಎಂದು ಱೞಯುಕ್ತವಾಗಿರುವುದನ್ನು ಕಾಣಬಹುದು.

ಈ ಎಲ್ಲ ಕಾರಣಗಳಿಂದಾಗಿ ಶಾಸನದ ಅರ್ಥ ಹೇಳುವಲ್ಲಿ ಕೆಲವು ತೊಂದರೆಗಳಿವೆ ಎಂಬುದನ್ನು ಮನಗಾಣಬಹುದು. ಈ ಮತ್ತು ಇಂಥ ಬೇರೆ ಕೆಲವು ಪರಿಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಶಾಸನದ ಅರ್ಥವಿವೇಚನೆಗೆ ತೊಡಗಬಹುದು.

ಶಾಸನ ಪಾಠ

೧. ಜಯತಿ ಶ್ರೀ ಪರಿಷ್ವಙ್ಗಧ್ಯಾರ್ಙ್ಗ [ಮ್ಯಾನತಿ]ರಚ್ಯುತಃ ದಾನವಾಕ್ಷ್ಣೋರ್ಯುಗಾನ್ತಾಗ್ನಿಃ [ಶಿಷ್ಟಾನಾನ್ತು] ಸುದರ್ಶನಃ

೨. ನಮಃ ಶ್ರೀಮತ್ಕದಂಬಪನ್ತ್ಯಾಗ ಸಂಪನ್ನನ್ಕಲಭೋರ [ನಾ] ಅರಿ ಕ-

೩. ಕುಸ್ಥಭಟ್ಟೋರನಾಳೆ ನರಿದಾವಿ[ಳೆ೦ ನಾಡುಳ್ ಮೃಗೇಶನಾ-

೪. ಗೇನ್ದ್ರಾಬೀಳರ್ಭ್ಭಟಹರಪ್ಪೊರ್ ಶ್ರೀ ಮೃಗೇಶನಾಗಾಹ್ವಯ-

೫. ರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪ

೬. ಗಣಪಶುಪತಿ ಮಾದಕ್ಷಿಣಾಪಥಬಹುಶತಹವನಾ-

೭. ಹವದು [ಳ್] ಪಶುಪ್ರದಾನ ಶೌರ್ಯ್ಯೋದ್ಯಮಭರಿತೋ [ನ್ದಾನ]ಪ-

೮. ಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ

೯. ನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ

೧೦. ಸುತನ್ಗೆ ಸೇನ್ದ್ರ ಕಬಣೋಭಯದೇಶದಾ ವೀರಾಪುರುಷ ಸಮಕ್ಷ-

೧೧. ದೆ ಕೇಕಯಪಲ್ಲವರಂ ಕಾದೆಱೆದು ಪೆತ್ತಜಯನಾ ವಿಜ

೧೨. ಅರಸನ್ಗೆ ಬಾಳ್ಗೞ್ಚು ಪಲ್ಮಡಿಉಂ ಮೂೞೆವಳ್ಳಿ ಉಂ ಕೊ-

೧೩. ಟ್ಟಾರ್ ಬಟಾರಿಕುಲದೊನಳುಕದಮ್ಬನ್ಕಳ್ದೋನ್ ಮಹಾಪಾತಕನ್

೧೪.ಇರ್ವ್ವರುಂ ಸೞ್ಬಿಙ್ಗದರ್ ವಿಜಾರಸರುಂ ಪಲ್ಮಡಿಗೆ ಕುಱು-

೧೫. ಮ್ಬಿಡಿವಿಟ್ಟಾರ್ ಅದಾನಳಿ (ೞೆ) ವೊನ್ಗೆ ಮಹಾಪಾತಕಮ್‌ ಸ್ವಸ್ತಿ (ಇದೇ ಕಲ್ಲಿನ ಎಡಪಕ್ಕದಲ್ಲಿ ಬರೆದಿರುವುದು)

೧೬. ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆಪತ್ತೊನ್ದಿವಿಟ್ಟಾರಕರ

ಈ ಶಾಸನವನ್ನು ಕೆಳಗಿನಂತೆ ಬಿಡಿಸಿಡಬಹುದು:

೧. ಶ್ರೀಮತ್ ಕದಂಬಪನ್-ತ್ಯಾಗ ಸಂಪನ್ನನ್‌-ಕಲಭೋರನಾ ಅರಿ, ಕಕುಸ್ಥ ಭಟ್ಟೋರನ್-ಆಳೆ, ನರಿದಾವಿಳೆ ನಾಡುಳ್ ಮೃಗೇಶ ನಾಗೇನ್ದ್ರಾ ಭೀಳರ್-ಭಟಹರ್-ಅಪ್ಪೊರ್

೨. ಅ) | ಶ್ರೀ ಮೃಗೇಶ-ನಾಗಾಹ್ವಯರಿರ್ವ್ವರಾ, || ಬಟರಿ ಕುಲಾಮಲ ವ್ಯೋಮ ತಾರಾಧಿನಾಥನ್-, ನ್-ಅಳಪಗಣ ಪಶುಪತಿಯಾ [ಮಾ] ದಕ್ಷಿಣಾಪಥ ಬಹುಶತಹವನಾಹಮದುಳ್ ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋನ್-, ದಾನಪಶುಪತಿಯೆನ್ದುಪೊಗೞೆಪ್ಪೊಟ್ಟಣ, ಪಶುಪತಿ ನಾಮಧೇಯನಾ [ನ್-ಆ)

ಬ) ಸರಕ್ಕೆಲ್ಲ ಭಟರಿಯಾ ಪ್ರೇಮಾಲಯ ಸುತನ್ಗೆ-, ಸೇನ್ದ್ರಕ-ಬಣೋ ಭಯ ದೇಶದಾ ವೀರಾಪುರುಷ ಸಮಕ್ಷದೆ ಕೇಕಯ ಪಲ್ಲವರಂ ಕಾದೆಱೆದು ಪೆತ್ತಜಯನ್ –ಆ ವಿಜ ಅರಸನ್ಗೆ,

ಕ) ಬಾಳ್ಗೞ್ಚು ಪಲ್ಮಡಿಉಂ ಮೂೞಿವಳ್ಳಿ ಉಂ(ಡ) ಕೊಟ್ಟಾರ್

೩. ಬಟಾರಿಕುಲದೋನ್-ಅಳುಕದಮ್ಬನ್

೪. ಕಳ್ದೋನ್-ಮಹಾಪಾತಕನ್

೫. ಇರ್ವ್ವರುಂ ಸೞ್ಬಙ್ಗದರ್ ವಿಜಾರಸರುಂ ಪಲ್ಮಡಿಗೆ ಕುಱುಮ್ಬಿಡಿವಿಟ್ಟಾರ್ ಸ್ವಸ್ತಿ.

೬. ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರ್-ಅಕರ.

ಈ ರೀತಿ ಇದರಲ್ಲಿ ಒಟ್ಟು ಆರು ವಾಕ್ಯಗಳಿವೆ. ಮೊದಲ ವಾಕ್ಯವು ಕದಂಬಪನಾದ ಕಾಕುಸ್ಥನನ್ನು ಮತ್ತು ನರಿದಾವಿಳೆನಾಡಿನ ಅಧಿಕಾರಿಗಳಾದ ಮೃಗೇಶನಾಗರನ್ನು ಹೆಸರಿಸಿದೆ.

ಎರಡನೆಯ ವಾಕ್ಯವು ಶಾಸನದ ಪ್ರಧಾನ ಭಾಗವಾಗಿದ್ದು ಬಹು ದೀರ್ಘವಾಗಿದೆ. (ನರಿದಾವಿಳೆನಾಡಿನ) ಮೃಗೇಶ-ನಾಗರೂ ಭಟಾರಿ ಮತ್ತು ಅಳಪವಂಶದವನಾದ ಪಶುಪತಿಯೂ ಕೂಡಿ ವಿಜ ಅರಸನಿಗೆ ಪಲ್ಮಡಿ ಮತ್ತು ಮೂೞಿವಳ್ಳಿಗಳನ್ನು ಬಾಳ್ಗೞ್ಚೌಗಿಕೊಟ್ಟರೆಂದು ತಿಳಿಸುತ್ತದೆ.

ಮೂರನೆಯ ವಾಕ್ಯವು (ಭಟಾರಿ-) ಅಳುಪ-ಕದಂಬ ವಂಶದ ಪಶುಪತಿಯ ಅಂಕಿತವಾಗಿದೆ.

ನಾಲ್ಕನೆಯದು ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಫಲಶ್ರುತಿಯಾಗಿದೆ.

ಆಯ್ದನೆಯದು ಮೃಗೇಶ-ನಾಗರು ಮತ್ತು ನಿಜ ಅರಸ ಕೂಡಿ ಪಲ್ಮಡಿಗೆ ಕುಱುಮ್ಬಿಡಿ (ಎಂಬ ಕರ ವಿಶೇಷವನ್ನು) ಬಿಟ್ಟರೆಂದು ತಿಳಿಸುತ್ತದೆ.

ಆರನೆಯ ಮತ್ತು ಕೊನೆಯ ವಾಕ್ಯವು ಶಾಸನದ ಮುಖ್ಯ ವಿಷಯಕ್ಕೆ ಯಾವ ರೀತಿಯಿಂದಲೂ ಸಂಬಂಧಿಸಿಲ್ಲ. ಭಟ್ಟರಿಗೆ ಈ ಗದ್ದೆಯ ಒಡ್ಡಿನಲ್ಲಿ (=ಒಟ್ಟು ಉತ್ಪತ್ತಿಯಲ್ಲಿ) ಪತ್ತೊನ್ದಿ ಎಂಬ ತೆರಿಗೆಯನ್ನು ಬಿಟ್ಟರೆಂದು ಅದು ತಿಳಿಸುತ್ತದೆ.

ಹೀಗೆ ಈ ಆರು ವಾಕ್ಯಗಳನ್ನು ವಿಭಜಿಸಿ ಅವುಗಳ ಮುಖ್ಯ ಆಶಯವನ್ನು ಗ್ರಹಿಸಿದ ಮೇಲೆ ಇದರ ಅರ್ಥವಿವೇಚನೆ ಸುಲಭವಾಗುತ್ತದೆ.

ಈ ಶಾಸನದ ಕದಂಬ ಕಾಕುಸ್ಥನು ಅಧಿರಾಜನಾಗಿದ್ದು ಆತನ ಕೈ ಕೆಳಗೆ ಅಧಿಕಾರಿಗಳಾಗಿ ಮೃಗೇಶ ಮತ್ತು ನಾಗರು ‘ನರಿದಾವಿಳೆ’ ಎಂಬ ನಾಡನ್ನು ಆಳುತ್ತಿದ್ದರು. ಆದ್ದರಿಂದ ಈ ನರಿದಾವಿಳೆನಾಡಿನಲ್ಲಿಯೇ ಪ್ರಸ್ತುತ ಶಾಸನವಿರುವ ಹಲ್ಮಿಡಿ ಊರು ಇದ್ದದ್ದು ಸ್ಪಷ್ಟ. ಈ ಇಬ್ಬರೂ ಅಧಿಕಾರಿಗಳು ಬಾಳ್ಗೞ್ಚದಾನದ ಕಾರ್ಯದಲ್ಲಿ ಭಾಗವಹಿಸಿರುವುದರಿಂದ ಅವರಿಬ್ಬರೂ ನೇರವಾಗಿ ಅದರ ಆಡಳಿತಕ್ಕೆ ಸಂಬಂಧಪಟ್ಟರೆಂಬುದುತಿಳಿದುಬರುತ್ತದೆ. ಒಂದೇ ನಾಡಿಗೆ ಇಬ್ಬರು ಅಧಿಕಾರಿಗಳು ಏಕೋ ತಿಳಿಯದು. ಮತ್ತು ಇವರಿಬ್ಬರ ಅಧಿಕಾರ ಕಕ್ಷೆಯ ಮಿತಿ ಏನು ಎಂಬ ಪ್ರಶ್ನೆ ಏಳುತ್ತದೆ. ಶಾಸನದಿಂದ ಇಂಥ ಪ್ರಶ್ನೆಗಳಿಗೆ ಉತ್ತರ ತಿಳಿದುಬರುವುದಿಲ್ಲ.

ಮುಂದಿನ ಎರಡನೆಯ ವಾಕ್ಯದಲ್ಲಿ ಪಶುಪತಿಯ ವರ್ಣನೆ ಬಂದಿದೆ. ವರ್ಣನೆಯ ಧಾಟಿಯನ್ನು ನೋಡಿದರೆ ಮೃಗೇಶ-ನಾಗರಿಗಿಂತಲೂ ಈತ ಉಚ್ಚಾಧಿಕಾರಿಯಾಗಿದ್ದನೆಂಬುದು ಸ್ಪಷ್ಟವಿದೆ. ಆತನ ಅಧಿಕಾರದ ಸ್ವರೂಪವೂ ಶಾಸನದಿಂದ ಸ್ಪಷ್ಟವಾಗಿ ತಿಳಿದುಬರುವುದಿಲ್ಲ. ತಾಳಗುಂದದ ಪ್ರಣವೇಶ್ವರ ದೇವಾಲಯದಲ್ಲಿರುವ ಸಂಸ್ಕೃತ ಶಾಸನದಲ್ಲಿ[4] ಈತನನ್ನು ಕುರಿತಂತೆ “ದಶಮಣ್ಡಲಿಕೇಷು ನಾಯಕತ್ವಂ” ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಈತ ಹತ್ತು ಮಾಂಡಲಿಕರ ಮೇಲೆ ಮಹಾಮಂಡಳೇಶ್ವರನಾಗಿ ಕದಂಬ ರಾಜ್ಯದಲ್ಲಿ ಆಢ್ಯತೆಯಿಂದ ಮೆರೆಯುತ್ತಿದ್ದವನೆಂದು ತಿಳಿದು ಬರುತ್ತದೆ. ಕಾರಣ ಪಶುಪತಿ, ಮೃಗೇಶ-ನಾಗರ ಮೇಲಿನ ಅಧಿಕಾರಿಯಾಗಿ ಕಾಕುಸ್ಥವರ್ಮನ ರಾಜ್ಯದ ಆಗು ಹೋಗುಗಳಲ್ಲಿ ಪ್ರಧಾನ ಪಾತ್ರವಹಿಸುತ್ತಿದ್ದನೆಂದು ತಿಳಿಯಬಹುದು. ಆದ್ದರಿಂದ ಮೂರನೆಯ ವಾಕ್ಯದಲ್ಲಿ ಬರುವ ಬಟಾರಿ ಕುಲದೋನ್‌-ಅಳುಕದಂಬನ್ ಎಂಬುದು ಈತನದೇ ಅಂಕಿತವೆಂಬುದು ಸ್ಪಷ್ಟಪಡುತ್ತದೆ.

ಇನ್ನು ಶಾಸನದ ಪ್ರಮುಖ ಭಾಗವಾದ ಎರಡನೆಯ ವಾಕ್ಯವನ್ನು ವಿಶ್ಲೇಷಿಸಬಹುದು.

“ನರಿದಾವಿಳೆ ನಾಡುಳ್ ಮೃಗೇಶ್ ನಾಗೇನ್ದ್ರಾಭೀಳರ್ ಭಟಹರ್ ಅಪ್ಪೊರ್‌ ಶ್ರೀ ಮೃಗೇಶ-ನಾಗಾಹ್ವಯರ್” ಎಂದು ಶಾಸನ ಭಾಗವನ್ನು ಎತ್ತಿಕೊಂಡು ಅದಕ್ಕೆ “who were terrible as the lord of beasts (the lion or Shiva) and the lord of elephants or serpents (Airavata or Ananta)” ಎಂದಾಗಲೀ ‘ಮೃಗೇಶ ನಾಗೇನ್ದ್ರರಂತೆ (ಸಹಿ ಮತ್ತು ಶಿವ, ಆನೆ ಅಥವಾ ಸರ್ಪ) ಭಯಂಕರರಾದ’ ಎಂದಾಗಲೀ ಅರ್ಥ ಹೇಳುವುದು ಅಷ್ಟು ಸಮಂಜಸವೆಂದು ತೋರುವುದಿಲ್ಲ.[5]“ಮೃಗೇಶ-ನಾಗೇನ್ದ್ರಾಭೀಳರ್ ಭಟಹರ್-ಅಪ್ಪೊರ್” ಎಂಬಲ್ಲಿಗೆ ಮೊದಲ ವಾಕ್ಯವು ನಿಂತಿರುವುದು ಸ್ಪಷ್ಟವಿದೆ. ಹಾಗೂ ‘ಶ್ರೀ ಮೃಗೇಶ-ನಾಗಾಹ್ವಯ ರಿರ್ವ್ವರಾ’ ಎಂಬುದು ಮುಂದಿನ ವಾಕ್ಯಕ್ಕೆ ಸಂಬಂಧಿಸಿರುವುದೂ ಅಷ್ಟೇ ಸ್ಪಷ್ಟವಿದೆ. ಆದ್ದರಿಂದ ‘ಮೃಗೇಶ-ನಾಗೇನ್ದ್ರರಂತೆ’ ಎಂದು ಉಪಮೆಯನ್ನು ಕಲ್ಪಿಸಲು ಇಲ್ಲಿ ಅವಕಾಶವಿಲ್ಲ. ಶಾಸನ ರಚಕನ ಮನಸ್ಸಿನಲ್ಲಿ ಮೃಗೇಶ ಮತ್ತು ನಾಗೇಂದ್ರ ಶಬ್ದಗಳಿಂದ ಹೊರಡುವ ಧ್ವನಿಯ ಪ್ರಜ್ಞೆ ಇದೆಯೆಂದು ಒಪ್ಪಬಹುದು. ಆದರೆ ಶಬ್ದಾನ್ವಯದ ದೃಷ್ಟಿಯಿಂದ ಈ ಭಾಗಕ್ಕೆ ‘ಮೃಗೇಶ (ಮತ್ತು) ನಾಗರೆಂಬ (ಹೆಸರಿನ) ಆಭೀಳರು (=ಭಯಂಕರರು) ಭಟಹರಾಗಿದ್ದಾರೆ (=ಅಧಿಕಾರಿಗಳಾಗಿದ್ದಾರೆ)’ ಎಂಬುದಷ್ಟೆ ನೇರವಾದ ಅರ್ಥ.

ಮುಂದಿನ ವಾಕ್ಯ ಭಾಗ:

೨. ಅ) | ಶ್ರೀ ಮೃಗೇಶ ನಾಗಾಹ್ವಯರಿರ್ವ್ವರಾ (-ಇರ್ವ್ವರ್-ಆ)||
೧. ಬಟರಿಕುಲಾಮಲ ವ್ಯೋಮತಾರಾಧಿನಾಥನ್ –(-ನ್-)
೨. ಆಳಪಗಣಪಶುಪತಿಯಾ
೩. (ಮಾ) ದಕ್ಷಿಣಾಪಥ ಬಹುಶತಹವನಾಹಮದುಳ್- ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋನ್
೪. ದಾನ ಪಶುಪತಿಯೆನ್ದು ಪೊಗೞೆಪ್ಪೊಟ್ಟಣ
೫. ಪಶುಪತಿ ನಾಮಧೇಯನಾ

ಬ)- ಸರಕ್ಕೆಲ್ಲ ಭಟರಿಯಾ ಪ್ರೇಮಾಲಯ ಸುತನ್ಗೆ- ಸೇನ್ದ್ರಕ ಬಣೋಭಯ ದೇಶದಾ ವೀರಪುರುಷ-ಸಮಕ್ಷದೆ ಕೇಕಯ ಪಲ್ಲವರಂ ಕಾದೆಱೆದು ಪತ್ತೆಜಯನ್-ಆ ವಿಜ ಅರಸನ್ಗೆ-

ಕ) ಬಾಳ್ಗೞ್ಚು ಪಲ್ಮಡಿಉಂ ಮೂೞೆವಳ್ಳಿಉಂ

ಡ) ಕೊಟ್ಟಾರ್

ಈ ವಾಕ್ಯದ (ಅ) ೧ನ್ನು ಶ್ರೀ ಮೃಗೇಶ ನಾಗಾಹ್ವಾಯರ್-ಇರ್ವ್ವರ್-ಆ ಎಂದು ಬಿಡಿಸಬಹುದು. ಅಥವಾ ಶ್ರೀ ಮೃಗೇಶ ನಾಗ್ವಾಯರ್-ಇರ್ವ್ವರಾ-ಎಂದೂ ಬಿಡಿಸಬಹುದು. ಮೊದಲಿನ ವಿಗ್ರಹದಿಂದ ‘ಆ’ ಎಂಬುದು ‘ಬಟರಿ ಕುಲಾಮಲ ವ್ಯೋಮತಾರಾಧಿನಾಥನ್’ ‘….ಪಶುಪತಿ ನಾಮಧೇಯನಾ’ ಎಂಬುದಕ್ಕೆ ಸರ್ವ ನಾಮದಿಗ್ವಾಚಿಯಾಗುತ್ತದೆ. ಎರಡನೆಯ ರೀತಿಯ ವಿಗ್ರಹದಿಂದ ‘ಇರ್ವ್ವರಾ ಎಂಬ ಷಷ್ಠ್ಯಂತವು ಸಿದ್ಧಿಸುತ್ತದೆ. ಸದ್ಯಕ್ಕೆ ಇದನ್ನು ಬದಿಗಿಟ್ಟು ಪಶುಪತಿಗೆ ಸಂಬಂಧಿಸಿದ ಮುಂದಿನ ವಿಶೇಷಣಗಳನ್ನು ನೋಡೋಣ.

ಇಲ್ಲಿ ಒಟ್ಟು ನಾಲ್ಕು ವಿಶೇಷಣಗಳು ಪ್ರಯುಕ್ತವಾಗಿವೆ. ಮೊದಲನೆಯ ‘ಬಟರಿ ಕುಲಾಮಲ ವ್ಯೋಮತಾರಾಧಿನಾಥನ್’ ಎಂಬುದು ಪ್ರಥಮಾ ವಿಭಕ್ತಿಯಲ್ಲಿರುವುದು ಸ್ಪಷ್ಟ. ಎರಡನೆಯ ‘ಅಳಪಗಣಪಶುಪತಿಯಾ’ ಎಂಬುದು ಷಷ್ಠ್ಯಂತವಾಗಿದೆ. ಡಾ || ಕೃಷ್ಣರ ಮೈ. ಆ.ರಿ. ಯ ಪಾಠದಂತೆ ‘ಮಾ’ ಎಂದಿಟ್ಟುಕೊಂಡರೆ ಅರ್ಥದ ದೃಷ್ಟಿಯಿಂದ ಅದು ಸರಿಯಾಗಿರದು. ಕಾರಣ ಪ್ರ. ಕ. ದಲ್ಲಿಯ ಪಾಠದಂತೆ ‘ಅಳಪಗಣಪಶು ಪತಿಯಾ’ ಎಂದಿಟ್ಟುಕೊಳ್ಳುವುದೇ ಮೇಲು. ಮೂರನೆಯದು ‘ದಕ್ಷಿಣಾಪಥ ಬಹು ಶತಹವನಾಹವದುಳ್ ಪಶುಪ್ರದಾನ ಶೌರ್ಯೋದ್ಯಮ ಭರಿತೋನ್’ ಎಂಬುದು ಪ್ರಥಮಾ ವಿಭಕ್ತಿಯಲ್ಲಿರುವುದು ಸ್ಪಷ್ಟವಾಗಿದೆ. ನಾಲ್ಕನೆಯದಾದ ‘….ಪೊಗೞೆಪ್ಪೊಟ್ಟಣ’ ಎಂಬುದು ಮತ್ತೆ ಷಷ್ಠೀವಿಭಕ್ತಿಯಿಂದ ಕೂಡಿದೆ. ಹೀಗೆ ಒಂದು ಮತ್ತು ಮೂರನೆಯದು ಪ್ರಥಮೆಯಲ್ಲಿದ್ದು ಎರಡನೆಯದು ಸ್ಪಷ್ಟವಿಲ್ಲವಾದರೂ ಷಷ್ಠಿಯಲ್ಲಿದೆಯೆಂದು ಹೇಳಬಹುದು. ನಾಲ್ಕನೆಯದು ಷಷ್ಠೀವಿಭಕ್ತಿಯಲ್ಲಿರುವುದು ಖಚಿತ. ಈ ರೀತಿ ಎರಡು ಪ್ರಥಮಾಂತ ಮತ್ತು ಎರಡು ಷಷ್ಠ್ಯಂತ ವಿಶೇಷಣಗಳ ತರುವಾಯ ‘ಪಶುಪತಿ ನಾಮಧೇಯನಾ’ ಎಂಬ ವಿಶೇಷ್ಯವು ಬಂದಿದೆ. ವಿಶೇಷಣಗಳೆಲ್ಲ ಒಂದೇ ವಿಭಕ್ತಿಯಲ್ಲಿದ್ದು ಕೊನೆಯಲ್ಲಿ ವಿಶೇಷ್ಯವು ಇಷ್ಟವಾದ ವಿಭಕ್ತಿಯಿಂದ ಕೂಡಿರುವುದು ಸಾಧ್ಯ. ಹಾಗಿಲ್ಲದೆ ಎರಡು ಹಾಗೆ ಎರಡು ಹೀಗೆ ಬಂದಿರುವುದು ಗೊಂದಲದಾಯಕವೆನ್ನಿಸುತ್ತದೆ. ವಿಶೇಷ್ಯವನ್ನು ಪಶುಪತಿ- ನಾಮಧೇಯನ್-ಆ ಎಂದು ಮಾಡಿಕೊಂಡರೆ ಅದು ಪ್ರಥಮಾ ವಿಭಕ್ತ್ಯಂತವಾಗಿ ಆ ಎಂಬುದು ಮುಂದಿನ ‘ಸರಕ್ಕೆಲ್ಲ ಭಟರಿಯಾ’ ಎಂಬುದಕ್ಕೆ ಸಂಬಂಧಪಡುತ್ತದೆ. ಡಾ || ಕೃಷ್ಣರು ಇಲ್ಲಿ ಇಲ್ಲ ವಿಶೇಷಣಗಳನ್ನು ಷಷ್ಠ್ಯಂತವೆಂದು ತಿಳಿದುಕೊಂಡಿದ್ದರೆ ಡಾ || ಶಾಸ್ತ್ರಿಗಳು ಮೂರನ್ನು ಪ್ರಥಮೆಯಲ್ಲಿಟ್ಟು ಕೊನೆಯ ಪೊಗೞೆಪ್ಪೊಟ್ಟಣ ಎಂಬುದನ್ನು ಮಾತ್ರ ಷಷ್ಠ್ಯಂತವೆಂದು ತಿಳಿಯಬೇಕೆಂದು ಹೇಳಿದ್ದಾರೆ. ಡಾ || ಕೃಷ್ಣರವರ ಅನ್ವಯವು ಮೇಲುನೋಟಕ್ಕೆ ಅಸ್ಪಷ್ಟವಾಗಿ ತೋರುವುದರಿಂದ ಅಗ್ರಾಹ್ಯವೆನಿಸಬಹುದು. ಡಾ || ಶಾಸ್ತ್ರಿಗಳ ಅನ್ವಯ ಸರಳವೆಂದು ತೋರಬಹುದು. ಆದರೆ, ವಾಸ್ತವವಾಗಿ ಡಾ || ಕೃಷ್ಣರವರ ಅನ್ವಯವೇ ಹೆಚ್ಚು ಸಮಂಜಸವಾಗಿದೆ. ಶಾಸನವನ್ನು ಸೂಕ್ಷ್ಮವಾಗಿ ಪರಾಮರ್ಶಿಸಿದರೆ….. ಪಶು ಪತಿಯಾ,…. ಪೊಗೞೆಪ್ಪೊಟ್ಟಣ, ಪಶು ಪತಿ ನಾಮಧೇಯನಾ ಎಂದು ಇರುವಲ್ಲಿ ಷಷ್ಠೀವಿಭಕ್ತಿ ಸ್ಪಷ್ಟವಾಗಿದ್ದರೂ ಅವು ಪ್ರಥಮಾರ್ಥದಲ್ಲಿಯೇ ಪ್ರಯೋಗವಾಗಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ವಿಭಕ್ತಿ ಪಲ್ಲಟವು ಪ್ರಸಿದ್ಧವಾದ ಪ್ರಕ್ರಿಯೆ. ಪೂರ್ವದ ಹಳಗನ್ನಡದ ಶಾಸನಗಳಲ್ಲಿ ಇಂಥ ಪ್ರಥಮಾರ್ಥದ ಷಷ್ಠಿ ಪ್ರಯೋಗವು ಅನೇಕ ಶಾಸನಗಳಲ್ಲಿ ಕಂಡುಬರುತ್ತದೆ. ಹಳಗನ್ನಡದಲ್ಲಿ ತೋರುವ ಈ ಪಲ್ಲಟದ ಉದಾಹರಣೆಗಳಿಗೂ ಪೂರ್ವದ ಹಳಗನ್ನಡದ ಶಾಸನಗಳಲ್ಲಿ ತೋರುವ ಉದಾಹರಣೆಗಳಿಗೂ ಅಂತರವಿದೆ.[6]

ಉದಾ:

ನನ್ದಿಯಾಲರಾ ವಿಟ್ಟದು, ಕ್ರಿ.ಶ. ಆರನೆಯ ಶ. E.C.XI, Cd. ೪೩
ಮಂಗ ಲೀಸನಾ ಕಲ್ಮನೆಗೆ ಇತ್ತೊದುಲಂಜಿಗೇಸರಂ “I. A. X. p. ೬೦
ಶ್ರೀ ವಾಣಸತ್ತಿ ಅರಸರಾ ಮೂಳುಙ್ಗುನ್ದಾಳೆ “S.I.I. XVIII, No., ೭
ಅನ್ತವರ್ಮ್ಮಕ್ಕಳಾ ಸಿರಿಗುಪ್ಪೆ ಆಳೆ                ”           ”
ಅಡಿಗಳಾ ಪ್ರಸಾದಂಗೆಯ್ದನ್ತೆಸಲ್ಗೆನ್ದರ್, ಏಳನೆಯ ಶ. S.I.I. IX-I, No. ೪

ಈ ರೀತಿ ಪ್ರಥಮಾರ್ಥದ ಷಷ್ಠಿ ಪೂರ್ವದ ಹಳಗನ್ನಡದ ವೈಶಿಷ್ಟ್ಯವಾದುದರಿಂದ ಡಾ || ಕೃಷ್ಣರು ಇಲ್ಲಿ ಎಲ್ಲವನ್ನೂ ಷಷ್ಠೀ ವಿಭಕ್ತಿಯಾಗಿ ತೆಗೆದುಕೊಂಡದ್ದು ಸರಿ ಎನ್ನಿಸುತ್ತದೆ. ಎರಡು ವಿಶೇಷಣಗಳು ಪ್ರಥಮೆಯಲ್ಲಿದ್ದು ಇನ್ನೆರಡು ಷಷ್ಠಿಯಲ್ಲಿದ್ದರೂ ಅವೆಲ್ಲ ಪ್ರಥಮಾರ್ಥಕಗಳೇ ಎಂದು ತಿಳಿಯಬೇಕು. ಇದೇ ರೀತಿ ‘ಪಶುಪತಿ ನಾಮದೇಯನಾ’ ಎಂಬಲ್ಲಿ ಪ್ರಥಮಾರ್ಧದ ಷಷ್ಠಿಯನ್ನು ಗ್ರಹಿಸಿದರೆ ‘ಬಾಳ್ಗೞ್ಚು….ಕೊಟ್ಟಾರ್’ ಎಂಬಲ್ಲಿ ಕ್ರಿಯಾಪದಕ್ಕೆ ಅದು ಸರಿಯಾದ ಕರ್ತೃಪದ ಆಗುತ್ತದೆ. ಮತ್ತು ಇದೇ ಕಾರಣಕ್ಕಾಗಿ ಆರಂಭದ ೨ (ಅ) | ‘ಶ್ರೀ ಮೃಗೇಶ ನಾಗಾಹ್ವಯರಿ ರ್ವ್ವರಾ’ ಮತ್ತು ‘ಪಶುಪತಿ ನಾಮಧೇಯನಾ’ ಎಂಬ ಎರಡೂ ಪದಗಳು ಕೊನೆಯ ‘ಕೊಟ್ಟಾರ್’ ಎಂಬ ಕ್ರಿಯಾಪದಕ್ಕೆ ಸಂಯುಕ್ತದಲ್ಲಿ ಕರ್ತೃಗಳಾಗುತ್ತವೆ. ಎಂದರೆ ವಿಜ ಅರಸನಿಗೆ ಬಾಳ್ಗೞ್ಚು ಕೊಟ್ಟವರು ಮಹಾಮಂಡಲಾಧಿಪತಿಯಾದ ಪಶುಪತಿ ಮತ್ತು ಅವನ ಅಧೀನದಲ್ಲಿದ್ದ ನರಿದಾವಿಳೆ ನಾಡಿನ ಮೃಗೇಶ ಮತ್ತು ನಾಗರು ಎಂಬುದು ನಿರ್ದುಷ್ಟವಾಗಿ ಸಿದ್ಧಿಸುತ್ತದೆ.

ಇದೇ ವಾಕ್ಯದ ‘ತಾರಾಧಿನಾಥನ್ನಳಪಗಣ ಪಶುಪತಿ’ ಎಂಬ ಭಾಗ ವಿಚಾರಣೀಯವಾಗಿದೆ ಎಂದು ಡಾ || ಶಾಸ್ತ್ರಿಗಳು ಹೇಳಿದ್ದಾರೆ. ಡಾ || ಎಂ. ಎಚ್. ಕೃಷ್ಠರು ಇದನ್ನು ‘ತಾರಾಧಿನಾಥನ್ + ಅಳಪಗಣ ಪಶುಪತಿ’ ಎಂದು ವಿಭಾಗಿಸಿಕೊಳ್ಳಲು ಪಶು ಪತಿಯ ಐತಿಹಾಸಿಕತೆಯ ಕಾರಣ ಎಂದು ಅವರು ಭಾವಿಸಿದ್ದಾರೆ. ನ್ನಕಾರವು ತಪ್ಪಾಗಿ ಲಿಖೀತವಾಗಿರಬೇಕೆಂದು ಹೇಳಿ “ನಳರೆಂಬ ರಾಜಮನೆತನದವರಿಗೂ ಪ್ರಸ್ತುತ ಶಾಸನಕ್ಕೂ ಸಂಬಂಧವಿರಲಾರದಷ್ಟೆ” ಎಂದು ಡಾ || ಶಾಸ್ತ್ರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಡಾ || ಶಾಸ್ತ್ರಿಗಳು ಊಹಿಸುವಂತೆ ಇದು ತಪ್ಪಾಗಲೀ ನಳರಿಗೆ ಸಂಬಂಧಿಸಿದ್ದಾಗಲೀ ಅಲ್ಲ. ಡಾ || ಕೃಷ್ಠ ಅವರು ಹೇಳುವಂತೆ ತಾರಾಧಿನಾಥನ್ + ಅಳಪಗಣ ಪಶುಪತಿ ಎಂಬ ಅನ್ವಯವೇ ಇಲ್ಲಿ ಸರಿಯಾದದ್ದು. ಪೂರ್ವದ ಹಳಗನ್ನಡದ ತಿಳಿವಳಿಕೆಗೆ ಸರಿಯಾದ ಸಾಮಗ್ರಿ ಸದ್ಯ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಹಳಗನ್ನಡದಲ್ಲಿ ಹ್ರಸ್ವಸ್ವರದ ಏಕಾಕ್ಷರಿಗಳ ಅಂತ್ಯದಲ್ಲಿನ್, ಣ್, ಳ್, ಲ್, ಯ್ ಗಳು ಇದ್ದಾಗ ಸ್ವರಪರವಾದರೆ ಅವು ದ್ವಿತ್ವವಾಗುವುದು ಪ್ರಸಿದ್ಧ ವಿಷಯ. ಕೇಶಿರಾಜನು ಇದನ್ನು ವಿವರಿಸಿದ್ದಾನೆ. ಅವನ ಅಭಿಪ್ರಾಯದಲ್ಲಿ ಇಂಥ ದ್ವಿತ್ವವು ಅವ್ಯಯಗಳಲ್ಲಿ ಸಿದ್ಧಿಸುವುದಿಲ್ಲ. ಅದರ ವಿವರವಾದ ಚರ್ಚೆ ಇಲ್ಲಿ ಅಪ್ರಸ್ತುತ. ಅವ್ಯಯಗಳಲ್ಲಿಯೂ ಇದು ಸಿದ್ಧಿಸಬಹುದು ಎಂಬುದಕ್ಕೆ ಅವನಲ್ಲಿಯೇ ಆಧಾರವಿದೆ.[7] ಪ್ರಸ್ತುತದಲ್ಲಿ, ಪ್ರಥಮಾ, ದ್ವಿತೀಯಾ ವಿಭಕ್ತಿಗಳ ಪ್ರತ್ಯಯಾಂಶವಾದ ನಕಾರ ಮತ್ತು ಅವ್ಯಯಾಂಯ ನಕಾರದ ಮುಂದೆ ಸ್ವರಪರವಾದಾಗ ದ್ವಿತ್ವವಾಗುವುದು ಪೂರ್ವದ ಹಳಗನ್ನಡ ಶಾಸನಗಳಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲ, ಅಂಥ ನಕಾರದ ಹಿಂದೆ ಹ್ರಸ್ವಸ್ವರ ಮಾತ್ರವೇ ಇರದೆ ದೀರ್ಘಸ್ವರ ಕೂಡ ಇರಬಹುದಾಗಿದೆ. ಇಂಥ ಉದಾಹರಣೆಗಳು ಶಾಸನಗಳಲ್ಲಿ ಕಂಡುಬರುತ್ತವೆ. ಆದರೆ ಇದು ವಿಕಲ್ಪವಾಗಿತ್ತೆಂಬುದನ್ನು ನೆನಪಿಡಬೇಕು.

ಉದಾ:

(ತಪದಿನ್‌+ ಅಧಿಕನ್>) ತಪಧಿನ್ನಧಿಕನ್ E.C.II, ೪೮, ೭ನೆಯ ಶ.

(ನಿರವದ್ಯನ್ + ಏಱೆ>) ನಿರವದ್ಯನ್ನೇಱೆ E.C.II, ೪೮, ೭ನೆಯ ಶ.

(ಇನ್‌+ಎನಗೆನ್ದು>) ಇನ್ನೇನಗೆನ್ದು E.C.II, ೯೩, ಸು. ೭ನೆಯ ಶ.

(ರಣವಿಕ್ರಮನಾನ್ + ಎಱೆಯತಿಯಡಿಗಾಳ್>) ರಣವಿಕ್ರಮನಾನ್ನೆಱೆಯತಿಯಡಿಗಾಳ್ S.I.I.IX,-I-೪೬, ೭ನೆಯ ಶ.

(ಈ ಧರ್ಮ್ಮನಾನ್ + ಅೞಿದೋನ್>) ಧರ್ಮ್ಮಮಾನ್ನೞಿದೋನ್ E.C.X., ಕೋಲಾರ-೬, ೮ನೆಯ ಶ.

(ಇ ದತ್ಥಿಯಾನ್ + ಅೞಿದೋನ್>) ದತ್ಥಿಯಾನ್ನೞಿದೋನ್ S.I.I. XVIII-೩, ೮ನೆಯ ಶ.

ಆದ್ದರಿಂದ ಇದು ತಪ್ಪು ಅಥವಾ ನಳರಿಗೆ ಸಂಬಂಧಿಸಿದ್ದಲ್ಲ. ಡಾ || ಕೃಷ್ಣರ ಅನ್ವಯವು ಇಲ್ಲಿ ಸರಿಯಾಗಿಯೇ ಇದೆ.

ಇನ್ನು ವಿಜ ಅರಸನಿಗೆ ಸಂಬಂಧಿಸಿದ ಭಾಗ. ಪಶುಪತಿನಾಮಧೇಯನ + ಅ + ಸರಕ್ಕೆ, ಪಶುಪತಿನಾಮಧೇಯನಾ + ಸರಕ್ಕೆ, ಪಶುಪತಿನಾಮಧೇಯನ + ಆಸರಕ್ಕೆ ಎಂದು ಮುಂತಾಗಿ ಬಿಡಿಸಬಹುದೆಂದು ಹೇಳಿ, ಇದರಲ್ಲಿ ‘ಸರ’ ಅಥವಾ ‘ಅಸರ’ ಎಂಬ ಶಬ್ದ ಕಲ್ಪಿಸಲಾಗಿದೆ. ಸರಕ್ಕೆ ಎಂದರೆ ಆಹ್ವಾನಕ್ಕೆ (ಅರ್ಥಾತ್ ಪಶುಪತಿ ಎಂಬಹೆಸರಿನವನ ಆಹ್ವಾನಕ್ಕೆ) ಎಂದು ಮುಂತಾಗಿ ಅರ್ಥ ವಿವೇಚನೆ ಮಾಡಲಾಗಿದೆ. ಆ ಕಾರಣ ಮುಂದಿನ ಭಾಗವನ್ನು ಎಲ್ಲ ಭಟರಿಯಾ ಎಂದು ವಿಘಟಿಸಿ ‘ಎಲ್ಲ’ ಎಂಬ ಭಟಾರಿವಂಶದ ವ್ಯಕ್ತಿನಾಮವನ್ನು ನಿರ್ಮಿಸಿಕೊಂಡಿದೆ. ಇದರಲ್ಲಿಯೇ ‘ಆ ಸಾರಃ’ ಎಂಬ ಪದವಿರಬಹುದೆಂದು ಡಾ || ಶಾಸ್ತ್ರಿಗಳು ಊಹಿಸಿದ್ದಾರೆ. “ಅದಕ್ಕೆ ಧಾರಾವೃಷ್ಟಿ, ಎಂಬುದರ ಜತೆಗೆ ಶತ್ರುಪಕ್ಷವನ್ನು ಸುತ್ತುಗಟ್ಟುವುದು, ಮಿತ್ರ ಪಕ್ಷಕ್ಕೆ ಸೇರಿದ ರಾಜನ ಅಥವಾ ರಾಜ್ಯದ ಸೈನ್ಯ, ದಾಳಿ, ಮುತ್ತಿಗೆ ಎಂಬ ಅರ್ಥಗಳನ್ನೂ ಸಂಸ್ಕೃತ ನಿಘಂಟುಗಳಲ್ಲಿ ಕೊಟ್ಟಿದೆ” ಎಂದು ಹೇಳಿದ್ದಾರೆ. ಆದ್ದರಿಂದ “ಆಸಾರಃ’ದ ಅಪಭ್ರಂಶವೋ ಲಿಪಿ ಸ್ಖಾಲಿತ್ಯವೋ ಆಗಿ ‘ಆಸರ’ ಶಬ್ದವು ಪ್ರಸ್ತುತ ಸಂದರ್ಭಗಳಲ್ಲಿ ಏಕೆ ಬಂದಿರಬಾರದು?” ಎಂಬ ಪ್ರಶ್ನೆ ಎತ್ತಿದ್ದಾರೆ. ಹಾಗೂ ಪಶುಪತಿಯು ಕೈಕೊಂಡ ಶತ್ರುಪಕ್ಷದ ಮೇಲಿನ ದಾಳಿಗಾಗಿ (ದಾಳಿಗೆ ಒದಗಿದ್ದಕ್ಕಾಗಿ) ಎಂದು ‘ಪಶುಪತಿ ನಾಮಧೇಯನಾ ಸರಕ್ಕೆ’ ಎಂಬ ಮಾತಿಗೆ ಅರ್ಥ ಮಾಡಬಹುದು” ಎಂದು ಮುಂತಾಗಿ ವಾದ ಮುಂದೆ ಮಾಡಿದ್ದಾರೆ. ಡಾ || ಕೃಷ್ಣ ಅವರಾಗಲೀ, ಡಾ || ಶಾಸ್ತ್ರಿಗಳಾಗಲೀ ಇಷ್ಟೆಲ್ಲಸುತ್ತಿಬಳಸಿ ಅರ್ಥ ಹೇಳುತ್ತಿರುವುದು ಈ ಭಾಗಕ್ಕೆ ಸರಿಯಾದ ಹಾಗೂ ಸಮಾಧಾನಕರವಾದ ಅರ್ಥ ಹೇಳುವುದು ಸಾಧ್ಯವಿಲ್ಲ ಎಂಬ ಕಾರಣದಿಂದಲೇ. ನಿಜವಾಗಿ ಇಲ್ಲಿರುವುದು ‘ಸರ’ ‘ಆಸರ’ ‘ಎಲ್ಲ’ ಎಂಬ ಯಾವ ಶಬ್ದಗಳೂ ಇಲ್ಲ. ಇಲ್ಲಿರುವುದು ‘ಸರಕ್ಕೆಲ್ಲ’ ಎಂಬ ಸಮಾಸರೂಪದ ವಂಶವಾಚಕ ಮಾತ್ರ. ಕರ್ನಾಟಕದ ಶಾಸನಗಳಲ್ಲಿ ಕೆಲ್ಲ, ಮಹಾ ಕೆಲ್ಲ, ಮುರಸಕೆಲ್ಲ ಎಂಬ ವಂಶನಾಮಗಳು ಕಂಡುಬರುತ್ತವೆ.[8]

ಉದಾ:

ಮುರಸಕೆಲ್ಲ M.A.R. ೧೯೧೫, ಪು-೩೯, ಸಾಲು-೨೫.೬, ೫ನೆಯ ಶ.

ಮಹಾಕೆಲ್ಲ E.I.XXVII, ಪುಟ ೩೭

ಕೆಲ್ಲ ಚಿತ್ರಸೇನ E.I. XXXVII, ಪುಟ, ೩೭

ಸಿಯಗೆಲ್ಲರ್ ಮಱುಗಱೆ ನಾಡು ಮನೂಱುಮಾಳೆ E.C.XVI, ತುಮಕೂರು, ೮೬, ೮ನೆಯ ಶ.

ಸಿಯಕೆಲ್ಲ ಕೆಸುಮಣ್ಣು ನಾಡಾಳೆ E.C.XVI, ತುಮಕೂರು, ೯೫, ೮ನೆಯ ಶ.

ಈ ಮೇಲಿನ ಉದಾಹರಣೆಗಳಲ್ಲಿ ಕೆಲ್ಲವೆಂಬುದು ವಂಶನಾಮವಾಗಿ ಬಂದಿದೆ. ಮತ್ತು ೫-೬ನೆಯ ಶತಮಾನಕ್ಕಾಗಲೇ ಅದರಲ್ಲಿ ಒಳಭೇದಗಳಾಗಿದ್ದವೆಂದು ತಿಳಿದು ಬರುತ್ತದೆ. ಆದ್ದರಿಂದ ಈ ಶಾಸನದ ‘ಸರಕ್ಕೆಲ್ಲ’ ಎಂಬುದೂ ವಂಶನಾಮವಾಗಿದೆ ಎಂದು ಹೇಳಬಹುದು. ಪೊಗೞೆಪ್ಪೊಟ್ಟಣ, ತಲೆಪ್ಪೊಱೆ, ಮನೆತ್ತನ ಕೆಱೆಕ್ಕಾಲು ಮುಂತಾದ ಉದಾಹರಣೆಗಳಂತೆ ಇಲ್ಲಿ ‘ಸರ + ಕೆಲ್ಲ’ ಎಂದು ಸಂಧಿಯಾಗಿರುವುದರಿಂದ ‘ಸರಕ್ಕೆಲ್ಲ’ ಎಂದು ದ್ವಿತ್ವ ಸಹಿತವಾದ ರೂಪ ಸಿದ್ಧಿಸಿವೆ. ಉತ್ತರ ಪದಾದಿಯ ಕತಪಗಳು ದ್ವಿತ್ವಗೊಳ್ಳುತ್ತಿದ್ದುದು ಪೂರ್ವದ ಹಳಗನ್ನಡದ ಒಂದು ಸಂಧಿ ನಿಯಮ. ಆದ್ದರಿಂದ ಇಲ್ಲಿ ಪಶುಪತಿ ‘ನಾಮಧೇಯನಾ ಸರಕ್ಕೆ- ಎಲ್ಲಭಟರಿಯಾ’ ಎಂಬ ವಿಗ್ರಹ ಸಲ್ಲದು. ಪಶುಪತಿ ನಾಮಧೇಯನಾ + ಸರಕ್ಕೆಲ್ಲಭಟರಿಯಾ- ಪ್ರೇಮಾಲಯ ಸುತನ್ಗೆ ಎಂದು ಇಲ್ಲಿ ಅನ್ವಯ ಸುಲಭವಾದುದು. ಪಶುಪತಿಯು ಭಟಾರಿ ಕುಲದವನೂ ಅಳುಪ (ಆಳುಪ)ನೂ ಕದಂಬನೂ ಆಗಿರುವಂತೆ ವಿಜ ಅರಸನು ಸರಕ್ಕೆಲ್ಲ ಭಟಾರಿಯ ಪ್ರೀತಿಯ ಮಗ ಎಂದಿರುವುದರಿಂದ, ‘ಸರಕ್ಕೆಲ್ಲ ಭಟರಿಯಾ’ ಎಂಬುದರಲ್ಲಿ ಆತನ ವಂಶ ಸೂಚನೆಯ ಜತೆಗೆ ಅವನ ತಂದೆ ಅಥವಾ ತಾಯಿಯ ಸೂಚನೆಯೂ ಇದೆ.

ಇಷ್ಟಾದರೆ ಶಾಸನದ ಉಳಿದ ಭಾಗಕ್ಕೆ ಅರ್ಥ ಹೇಳಲು ಹೆಚ್ಚು ಶ್ರಮಪಡಬೇಕಾಗಿಲ್ಲ “….. ಭಟರಿಯಾ ಪ್ರೇಮಾಲಯ ಸುತನ್ಗೆ ಕೇಕಯ ಪಲ್ಲವರಂ ಕಾದೆಱಿದು ಪೆತ್ತಜಯನಾ ವಿಜ ಅರಸನ್ಗೆ ಸೇನ್ದ್ರಕ ಬಣೋಭಯ ದೇಶದಾ ವೀರಾಪುರುಷ ಸಮಕ್ಷದೆ ಬಾಳ್ಗೞ್ಚು ಪಲ್ಮಡಿಉಂ ಮೂೞಿವಳ್ಳಿಉಂ ಕೊಟ್ಟಾರ್’ ಎಂಬುದಕ್ಕೆ ಡಾ || ಕೃಷ್ಮರು ಹೇಳಿರುವ ‘ಸೇಂದ್ರಕ ಮತ್ತು ಬಾಣ ಎಂಬ ದೇಶಗಳ ವೀರಪುರುಷರ ಎದುರಿಗೆ ಪಲ್ಲವರನ್ನೂ ಕೇಕಯರನ್ನೂ ಯುದ್ಧದಲ್ಲಿ ಕೊಂದು ಜಯವನ್ನು ಪಡೆದ’ ಎಂದು ಅರ್ಥ ಹೇಳಿದ್ದಾರೆ. ಡಾ || ಶಾಸ್ತ್ರಿಗಳು ಅದನ್ನು ಒಪ್ಪದೆ “….. ಭಟಾರಿಯ ಪ್ರೀತಿಯ ಪಾತ್ರನಾದ ಮಗನಿಗೆ ಕೇಕಯರನ್ನೂ ಪಲ್ಲವರನ್ನೂ ಕಾದಾಡಿ ಹೊಯ್ದು ಜಯಶಾಲಿಯಾದ ಆ ವಿಜ ಅರಸನಿಗೆ ಸೇಂದ್ರಕ ಮತ್ತು ಬಾಣ ಈ ಎರಡು ದೇಶಗಳ ವೀರಪುರುಷರ ಎದುರಿನಲ್ಲಿ ಪಲ್ಮಡಿಯನ್ನೂ ಮೂೞಿವಳ್ಳಿಯನ್ನೂ ಬಾಳ್ಗೞ್ವುವಾಗಿ ಕೊಟ್ಟರು” ಎಂದು ಅರ್ಥವಿಟ್ಟುಕೊಳ್ಳಬೇಕೆಂದಿದ್ದಾರೆ. ಸೇಂದ್ರಕ-ಬಾಣರು ದಾನಕಾಲದ ಸಾಕ್ಷಿಗಳೇ ಹೊರತು ವಿಜ ಅರಸನ ಪರಾಕ್ರಮಕ್ಕೆ ಸಾಕ್ಷಿಗಳಲ್ಲ ಎಂದು ಡಾ || ಶಾಸ್ತ್ರಿಗಳ ಅಭಿಪ್ರಾಯ. ‘ಸೇಂದ್ರಕ ಬಣೋಭಯ ದೇಶದ ವೀರಾಪುರುಷ ಸಮಕ್ಷದೆ’ ಎಂದಿರುವಲ್ಲಿಯ ‘ವೀರಾಪುರುಷ’ ಎಂಬ ಮಾತನ್ನು ಗಮನಿಸಿದರೆ, ಅಂಥ ವೀರರಾದ ಸೇಂದ್ರಕ ಬಾಣರೇ ವಿಜ ಅರಸನ ಪರಾಕ್ರಮಕ್ಕೆ ಸಾಕ್ಷಿಗಳಾಗಿದ್ದರೆಂಬ ಸಂಗತಿ ಖಚಿತಪಡುತ್ತದೆ. ಇದರಿಂದ ಡಾ || ಕೃಷ್ಣರ ಅಭಿಪ್ರಾಯವೇ ಇಲ್ಲಿ ಮಾನ್ಯವೆನಿಸುತ್ತದೆ. ಬಾಳ್ಗೞ್ಚುದಾನಕ್ಕೆ ಅವರು ಸಾಕ್ಷಿಗಳಾಗಿ ಇರಬಹುದು ಅಥವಾ ಇಲ್ಲದೇ ಇರಬಹುದು; ಎರಡೂ ಸಾಧ್ಯ.

ಪಲ್ಮಡಿಗೆ ಕುಱುಮ್ಬಿಡಿ ದಾನವೀಯುವ ಸಂದರ್ಭದಲ್ಲಿ ‘ಇರ್ವ್ವರುಂ, ಸೞ್ಬಙ್ಗದರ್ ವಿಜಾರಸುರುಂ’ ಎಂದು ಡಾ || ಶಾಸ್ತ್ರಿಗಳು ಮಾಡಿಕೊಳ್ಳಬಯಸುವ ಅನ್ವಯವು ಸಾಧಾರವಾಗಿಲ್ಲದಿದ್ದರೂ ಸಂಭಾವವಾಗಿದೆ ಎಂದು ಹೇಳಬಹುದು ಕುಱುಮ್ಬುಡಿ ಎಂಬುದಕ್ಕೆ ಊಹಿಸಿದ ಅರ್ಥ ಸಾಂದರ್ಭಿಕವಾಗಿರುವುದು ಸರಿ. ಆದರೆ ‘ಒಡ್ಡಲಿ’ ಎಂಬುದು ಹಾಗಲ್ಲ. ಒಡ್ಡೆಂಬುದಕ್ಕೆ ‘ಅಲಿ’ ಎಂಬ ಸಪ್ತಮೀ ವಿಭಕ್ತಿ ಪ್ರತ್ಯಯ ಸೇರಿದೆ. ಒಡ್ಡು ಅಥವಾ ಒಟ್ಟು ಎಂದರೆ ಸೈನ್ಯ, ವ್ಯೂಹ ಎಂಬ ಅರ್ಥಗಳ ಜತೆಗೆ ಮೊತ್ತ ಸಮುದಾಯ, ರಾಶಿ ಎಂಬ ಅರ್ಥಗಳು ಸಂಭಾವ್ಯವಾಗಿವೆ. ಆದ್ದರಿಂದ ಈ ‘ಗೞ್ದೆ ಒಡ್ಡಲಿ’ ಎಂದರೆ ‘ಈ ಗದ್ದೆಯ (ಧಾನ್ಯದ) ಉತ್ಪತ್ತಿಯಲ್ಲಿ ಅಥವಾ ರಾಶಿಯಲ್ಲಿ; ಎಂದು ಅರ್ಥ ಹೇಳಬಹುದು. ಕೊನೆಯ ಅಕರ ಎಂಬುದು ಅನಾವಶ್ಯಕವಾಗಿ ಬಂದಿರುವಂತೆ ಕಾಣುತ್ತದೆ. ಅಥವಾ ಪತ್ತೊಂದಿ[9] ಯಷ್ಟೆಯಲ್ಲದೆ ಬೇರೆ ಯಾವ ಕರಗಳೂ ಅದಕ್ಕಿಲ್ಲ ಎಂಬ ಅಭಿಪ್ರಾಯ ಇರಬಹುದು.

ಇನ್ನೂ ಕಲಭೋರ, ನರಿದಾವಿಳೆ, ಕುಱುಮ್ಬಿಡಿ ಸೞ್ಬಙ್ಗದರ್ ಇವು ಈ ಶಾಸನದ ಹೊರತು ಬೇರೆಡೆ ಎಲ್ಲಿಯೂ ಕಂಡುಬಂದಿಲ್ಲ. ಕಾರಣ ಇವುಗಳಲ್ಲಿ ನರಿದಾವಿಳೆ ಮತ್ತು ಕುಱುಮ್ಬಿಡಿ ಎಂಬೆರಡು ಶಬ್ದಗಳ ಹೊರತು ಉಳಿದವುಗಳಿಗೆ ಖಚಿತವಾದ ಅರ್ಥ ಹೇಳುವುದು ಸದ್ಯ ಸಾಧ್ಯವಿಲ್ಲ.

ಶಾಸನದ ಅನ್ವಯ

ನಮಃ ಶ್ರೀಮತ್‌ ಕದಂಬಪನ್ ತ್ಯಾಗಸಂಪನ್ನನ್,
ಕಲಭೋರನಾ ಅರಿ, ಕಕುಸ್ಥ ಭಟ್ಟೋರನ್ –ಆಳೆ-
ನರಿದಾವಿಳೆನಾಡುಳ್‌ ಮೃಗೇಶ-ನಾಗೇನ್ದ್ರಾಭೀಳರ್‌ ಭಟಹರ್ ಅಪ್ಪೋ()ರ್‌

ಶ್ರೀ ಮೃಗೇಶನಾಗಾಹ್ವಯರಿರ್ವ್ವರಾ,-
ಬಟರಿಕುಲಾಮಲ ವ್ಯೋಮತಾರಾಧಿನಾಥನ್,
ಅಳಪಗಣ ಪಶಪತಿಯಾ
ದಕ್ಷಿಣಾಪಥ ಬಹುಶತಹವನಾಹವದುಳ್ ಪ್ರಶುಪ್ರದಾನ ಶೌರ್ಯ್ಯದ್ಯಮ
ಭರಿತೋನ್,
ದಾನಪಶುಪತಿಯೆನ್ದು ಪೊಗೞೆಪ್ಪೊಟ್ಟಣ,
ಪಶುಪತಿ ನಾಮಧೇಯನಾ-
ಸರಕ್ಕೆಲ್ಲ ಭಟರಿಯಾ ಪ್ರೇಮಾಲಯ ಸುತನ್ಗೆ,
ಸೇನ್ದ್ರಕಬಣೋಭಯ ದೇಶದಾ ವೀರಾಪುರುಷ ಸಮಕ್ಷದೆ ಕೇಕಯ ಪಲ್ಲವರಂ
ಕಾದೆಱಿದು ಪೆತ್ತಜಯನ್-
ಆ ವಿಜ ಅರಸನ್ಗೆ,
ಬಾಳ್ಗೞ್ವು ಪಲ್ಮಡಿಉಂ ಮೂೞಿವಳ್ಳಿಉಂ ಕೊಟ್ಟಾರ್.
ಬಟಾರಿ ಕುಲದೋನ್‌ – ಅಳುಕದಂಬನ್.

ಇರ್ವ್ವರುಂ ಸೞ್ಬಙ್ಗದರ್ ವಿಜಾರಸರುಂ
ಪಲ್ಮಡಿಗೆ ಕುಱುಮ್ಬಿಡಿ ವಿಟ್ಟಾರ್
ಸ್ವಸ್ತಿ ಭಟ್ಟರ್ಗ್ಗೆ-ಈಗೞ್ದೆ ಒಡ್ಡಲಿ ಆ ಪತ್ತೊನ್ದಿ ಅಕರಂ (೦) ವಿಟ್ಟಾರ್.

ಅರ್ಥ:

ನಮಸ್ಕಾರ, ಶ್ರೀಮತ್ ಕದಂಬರ ಅಧಿರಾಜನು ತ್ಯಾಗಸಂಪನ್ನನೂ ಕಲಭೋರನ ವೈರಿಯೂ (ಆದ) ಕಾಕುಸ್ಥ ಭಟ್ಟಾರಕನು ಆಳುತ್ತಿರಲು ನರಿದಾವಿಳೆ ನಾಡಿನಲ್ಲಿ ಮೃಗೇಶ ಮತ್ತು ನಾಗರೆಂಬ (ವೈರಿ) ಭಯಂಕರರು ಭಟಹರಾಗಿದ್ದಾರೆ (=ಅಧಿಕಾರಿಗಳಾಗಿದ್ದಾರೆ.) (ಆ) ಮೃಗೇಶ ಮತ್ತು ನಾಗರೆಂಬ ಹೆಸರಿನವರಿಬ್ಬರು (ಮತ್ತು) ಭಟಾರಿ ವಂಶವೆಂಬ ನಿರ್ಮಲವಾದ ಆಕಾಶಕ್ಕೆ ಚಂದ್ರನು, ಆಳುಪರೆಂಬ ಗಣಕ್ಕೆ ಶಿವನು (=ಆಳುಪರ ಒಡೆಯನು), ದಕ್ಷಿಣಾಪಥದಲ್ಲಿ ಪ್ರಸಿದ್ಧವಾದ ನೂರಾರು ಯುದ್ಧಗಳೆಂಬ ಯಜ್ಞಗಳಲ್ಲಿ (ವೈರಿಗಳೆಂಬ) ಪಶುಗಳನ್ನು ಬಲಿಗೊಡುವ ಸಾಹಸ ಕಾರ್ಯಗಳಿಂದ ತುಂಬಿರುವವನು, ದಾನ ಕೊಡುವಲ್ಲಿ (ವರವೀಯುವ ಶಿವನೆಂದು ಹೊಗಳಲ್ಪಟ್ಟವನು (ಮತ್ತು) ಪಶುಪತಿಯೆಂದು ಹೆಸರುಳ್ಳವನು, ಸರಕ್ಕೆಲ್ಲಭಟಾರಿಯ ಪ್ರೀತಿಯ ಮಗನಿಗೆ ಸೇಂದ್ರಕ ಮತ್ತು ಬಾಣರೆಂಬ ಉಭಯ ದೇಶಗಳ ವೀರಪುರುಚರ ಸಮಕ್ಷಮದಲ್ಲಿ ಕೇಕಯ (ಮತ್ತು) ಪಲ್ಲವರನ್ನು ಹೋರಾಡಿ ಇರಿದು ಜಯ ಸಂಪಾದಿಸಿದ ವಿಜ ಅರಸನಿಗೆ, ಬಾಳ್ಗೞ್ಚು (ಎಂದು) ಪಮ್ಮಡಿ ಮತ್ತು ಮೂೞಿವಳ್ಳಿಗಳನ್ನು ಕೊಟ್ಟರು. ಭಟಾರಿ ಕುಲದವನಾದ ಆಳು ಕದಂಬನು (=ಪಶುಪತಿಯು) (ಈ ದಾನವನ್ನು) ಅಪಹರಿಸಿದವನು ಮಹಾಪಾತಕನು. (ಈ) ಇಬ್ಬರು ಸೞ್ಬಙ್ಗದವರೂ ವಿಜ ಅರಸರೂ ಪಲ್ಮಡಿಗೆ ಕುಱುಮ್ಬಿಡಿಯನ್ನು ಬಿಟ್ಟರು. ಅದನ್ನು ನಾಶಪಡಿಸುವವನಿಗೆ ಮಹಾಪಾತಕ (ತಟ್ಟುತ್ತದೆ.) ಒಳಿತಾಗಲಿ, ಭಟ್ಟರಿಗೆ (ಬ್ರಾಹ್ಮಣರಿಗೆ) ಈ ಗದ್ದೆಯ ಉತ್ಪತ್ತಿಯ (ಮೇಲಿನ) ಪತ್ತೊಂದಿ ಎಂಬ ತೆರಿಗೆಯನ್ನು (ಮುಕ್ತಗೊಳಿಸಿ) ಬಿಟ್ಟರು.

 

[1]ನೋಡಿ: ಎಂ.ಎ. ಮೆಹಂದಳೆ, Historical Grammar of Inscriptional Prakrts- Introduction, P. xvii

[2] MAR, ೧೯೩೬, ಪು. ೭೨-೭೩.

[3]ಪ್ರಬುದ್ಧ ಕರ್ಣಾಟಕ-೨೦,೩,ಪು. ೩೮

[4] MAR, ೧೯೧೧, ಪು. ೩೩

[5]ಶಬ್ದಾರ್ಥ ವಿಹಾರ, ಪು. ೩-೪.

[6]ದರ್ಪಣಸೂತ್ರ, ೧೪೫, ಪು. ೧. “ನಿಶ್ಶಂಕೆಯಿಂ ನೃಪನ ಪೇೞೆ” ಎಂದಿರುವುದನ್ನು ಶಾಸನದ ಉದಾಹರಣೆಗಳೊಂದಿಗೆ ಹೋಲಿಸಿ ನೋಡಬಹುದು.

[7]ದರ್ಪಣಸೂತ್ರ, ೭೫, ಪುಟ ೨೫ರಲ್ಲಿ “ಇನ್ನಾವುದು ಕಜ್ಜಂ” ಎಂಬ ಉದಾಹರಣೆ ಇದೆ.

[8]ಇಲ್ಲಿಯ ‘ಸರಕ್ಕೆಲ್ಲ’ ಪದವು ಮುಂದಿನ ಕಾಲದ ಶಾಸನದಲ್ಲಿ ‘ಅರಕೆಲ್ಲ’ ಎಂದಾಗಿರುವ ವಿಷಯ, ಜತೆಗೆ ಕನ್ನಡದಲ್ಲಿಯ ಆದಿತಾಲವ್ಯಲೋಪ ಸಂಧಿಯಾಗುವಾಗ ಉತ್ತರ ಪಾದದಿಯ ಕತಪಗಳು ಕ್ಕತ್ತಪ್ಪ ಎಂದು ದ್ವಿತ್ವಗೊಳ್ಳುತ್ತಿದ್ದ ಸಂಧಿನಿಯಮ ಮೊದಲಾದ ವಿಷಯಗಳನ್ನು ನಾನು ಬೇರೊಂದೆಡೆ ವಿಸ್ತಾರವಾಗಿ ಪ್ರತಿಪಾದಿಸಿದ್ದೇನೆ. ಆದ್ದರಿಂದ ಅವನ್ನಿಲ್ಲಿ ಮತ್ತೆ ವಿವರಿಸಿಲ್ಲ.

[9]‘ಪತ್ತೊನ್ದಿ’ ಎಂಬುದು ಒಂದು ಕರ ವಿಶೇಷವೆಂಬ ಸಂಗತಿ ಈಗಾಗಲೇ ಮಾನ್ಯವಾಗಿದೆ. ನೋಡಿ: ಶಾಸನಸಂಪದ, ಕ.ವಿ.ವಿ. ಧಾರವಾಡ, ೧೯೭೪, ಪು. ೧೩೯.