ಹಿರೇಮೈಲಾರ ಕರ್ನಾಟಕದ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು. ಅಲ್ಲಿರುವ ಮೈಲಾರದೇವರ ಪ್ರಾಚೀನ ದೇವಾಲಯ ಈ ಪ್ರಸಿದ್ಧಿಗೆ ಕಾರಣ. ಪ್ರತಿ ವರ್ಷ ಭಾರತ ಹುಣ್ಣಿಮೆ (ಮಾಘ ಶು. ೧೫) ಗೆ ನಡೆಯುವ ಮೈಲಾರದೇವರ ಕಾರ್ಣಿಕೋತ್ಸವಕ್ಕೆ ೪-೫ ಲಕ್ಷ ಜನ ಸೇರುತ್ತಾರೆ. ಬಹು ಅದ್ಧೂರಿಯಿಂದ ಜರಗುವ ಈ ಜಾತ್ರೆ ನಾಡಿನಾದ್ಯಂತ ಜನಮನದ ಲಕ್ಷ್ಯ ಸೆಳೆಯುತ್ತಿರುವುದು ಸ್ವಾಭಾವಿಕವಾಗಿದೆ.

ಹೂವಿನ ಹಡಗಲಿ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ತುಂಗಭದ್ರಾನದಿ ಪಶ್ಚಿಮವಾಹಿನಿಯಾಗಿ ಹರಿದು ಪುನಃ ಪೂರ್ವಾಭಿಮುಖವಾಗಿ ಹಾವನೂರನಿಂದ ಮುಂದುವರಿಯುತ್ತದೆ. ಎಂದರೆ ಮೈಲಾರ ಕ್ಷೇತ್ರವನ್ನದು ಉಂಗುರದಂತೆ ಸುತ್ತುವರಿದಿದೆ. ಇದರ ಸುತ್ತಲಿನ ತಡದ ಮೇಲೆ ಕುರುವತ್ತಿ, ಐರಣಿ, ಚೌಡದಾನಪುರ, ಗುತ್ತಲ, ಹಾವನೂರು, ಹೊಳಲ ಮೊದಲಾದ ಇತಿಹಾಸ ಪ್ರಸಿದ್ಧ ಊರುಗಳಿವೆ. ಪೂರ್ವ ಬದಿಯಲ್ಲಿ ಮಾತ್ರ ಕಪ್ಪತಗುಡ್ಡದ ಸಾಲು ಗೋಡೆಯಂತೆ ಎದ್ದು ನಿಂತಿದೆ.

ಇಲ್ಲಿರುವ ಒಟ್ಟು ನಾಲ್ಕು ಶಾಸನಗಳು ಈವರೆಗೆ ಸಂಶೋಧಿಸಲ್ಪಟ್ಟು ‘ಇನ್‌ಸ್ಕ್ರಿಪ್ಯನ್ಸ್ ಆಫ್ ಮದ್ರಾಸ್ ಪ್ರೆಸಿಡೆನ್ಸಿ’ ಸಂ.೧ ದಲ್ಲಿ ನಮೂದಾಗಿವೆ. ಆದರೆ ದಕ್ಷಿಣ ಭಾರತದ ಶಾಸನಗಳು ಸಂಪುಟ xi ರಲ್ಲಿ ಮೂರು ಶಾಸನಗಳ ಪೂರ್ಣಪಾಠ ಮಾತ್ರ ಕ್ರಕಟವಾಗಿವೆ. (ನಂ. ೧೦೨, ೧೦೩ ಮತ್ತು ೩೮೨).

ಇಲ್ಲಿ ಮೈಲಾರಲಿಂಗ ದೇವಾಲಯದ ಪರಿಸರರಲ್ಲಿ ಹಲವಾರು ಸಣ್ಣ ದೊಡ್ಡ ಗುಡಿಗಳಿವೆ. ಮುಖ್ಯ ದೇವರಾದ ಮೈಲಾರ ದೇವಾಲಯ, ಕಲ್ಮೇಶ್ವರ ದೇವಾಲಯ ಮತ್ತು ಹೆಗ್ಗಪ್ಪನ ದೇವಾಲಯಗಳು ಪ್ರಾಚೀನ ಕಾಲದ ವಾಸ್ತುಗಳಾಗಿವೆ. ಸದ್ಯಕ್ಕಿರುವ ಮೈಲಾರ ಊರಿನ ಆಗ್ನೇಯದಲ್ಲಿ ಸು. ಅರ್ಧ ಕಿ.ಮೀ. ಅಂತರದ ಮೇಲೆ ಬೇಚಿರಾಕ್ ಹಳ್ಳಿಯೊಂದರ ಅವಶೇಷಗಳು ಕಂಡುಬರುತ್ತವೆ. ಇಲ್ಲಿ ಪ್ರಾಚೀನ ಕಾಲದ ಸೋಮಲಿಂಗೇಶ್ವರ ದೇವಾಲಯ, ಹನುಮಂತದೇವರ ಗುಡಿ ಮುಂತಾದ ಹಲವು ಅವಶೇಷಗಳು ಈಗಲೂ ಸುಸ್ಥಿತಿಯಲ್ಲಿವೆ. ಮೈಲಾರದ ಅತಿ ಪ್ರಾಚೀನ ಶಾಸನದ ಕಾಲ ಕ್ರಿ.ಶ. ೧೦೪೭. ಇದು ಪ್ರಸ್ತುತ ಬೇಚಿರಾಕ್ ಪ್ರದೇಶದಲ್ಲಿಯೇ ದೊರೆಯುತ್ತದೆ. ಈ ಪಾಳು ಪ್ರದೇಶವನ್ನು ಇಲ್ಲಿನ ಜನ ಮೂಲ ಮೈಲಾರವೆಂದು ಹೇಳುತ್ತಾರೆ. ಆದರೆ ಮೇಲೆ ತಿಳಿಸಿದ ಈ ಪಾಳೂರಿನಲ್ಲಿರುವ ಕ್ರಿ.ಶ. ೧೦೪೭ರ ಶಾಸನದಲ್ಲಿ ಮೈಲಾರ ಊರಿನ ಹೆಸರಿಲ್ಲ. ಬದಲು ಕುರುವತ್ತಿಯ ಉಲ್ಲೇಖ ಬಂದಿದೆ. ಸದ್ಯ ಪ್ರಸಿದ್ಧಿಯಲ್ಲಿರುವ ಮೈಲಾರ ದೇವಾಲಯದ ಪ್ರದೇಶದಲ್ಲಿ ಮುಂಚೆ ಸೀಗೆಯ ಮೆಳೆ ಹಬ್ಬಿತ್ತೆಂದೂ ಅದರ ನಡುವೆ ಇದ್ದ ಹುತ್ತಿನೊಳಗೆ ಲಿಂಗ ರೂಪದಲ್ಲಿ ಮೈಲಾರ ದೇವರು ಪ್ರಕಟವಾದನೆಂದೂ ಮೈಲಾರದ ಜನ ಪರಂಪರೆಯಿಂದ ಬಂದ ವದಂತಿಯನ್ನು ಹೇಳುತ್ತಾರೆ.

ಸದ್ಯದ ಮೈಲಾರಲಿಂಗ ದೇವಾಲಯದ ರಂಗಮಂಟಪದಲ್ಲಿನ ಉತ್ತರ ಕಂಬದ ಮೇಲೆ ಕೆತ್ತಲಾಗಿರುವ ಕ್ರಿ.ಶ. ೧೪೩೬ ರ ಕನ್ನಡ ಶಾಸನದಲ್ಲಿ ‘ಉಂಗುಲಾಲದ ಶ್ರೀ ಮನ್ಮಹಾಮಯಿಲಾರ ದೇವರು’ ಎಂಬ ಉಲ್ಲೇಖ ಬಂದಿರುವುದು ಇಲ್ಲಿ ತುಂಬ ಗಮನಾರ್ಹ. ಎಂದರೆ ಸದ್ಯ ಮೈಲಾರ ಎಂದು ಕರೆಯಲಾಗುವ ಊರು ಮುಂಚೆ ಉಂಗುಲಾಲ ಎಂದಿದ್ದಿತೆಂಬ ಅಂಶ ಸ್ಪಷ್ಟವಾಗುತ್ತದೆ. ಈ ಮಾತನ್ನು ಅಲ್ಲಿನ ಸ್ಥಾನಿಕರಾದ ಒಡೆಯರ ಮನೆತನದವರು ಬಳಸುವ ಶ್ರೀಮುಖ ಅಥವಾ ಬಿರುದಾವಳಿಯಲ್ಲಿ ಕೂಡ ಕಾಣಬಹುದಾಗಿದೆ. ಉದಾಹರಣೆಗೆ ಈ ಶ್ರೀಮುಖವನ್ನಿಲ್ಲಿ ನೋಡಬಹುದು:

ಶ್ರೀಮನ್ಮಹಾಕಪಿಲಮುನಿ ಕಲಿ ಮೈಲಾರ ಸಿಂಹಾಸನಕ್ಕಧಿಪತಿಗಳಾದ, ಕರಿಯೆಳಿ ಭಂಡಾರಕ್ಕೆ ಕಾರಣಕರ್ತರಾದ, ಆಚಾರ-ವಿಚಾರಕ್ಕೆ ಅಗ್ರಗಣ್ಯರಾದ ಆದಿಮೀನಗೊಂದಿ ಪುರವರಾಧೀಶ್ವರರಾದ ಗುರುಗೋಮುನಿ ಸಾಂಪ್ರದಾಯಕ ರಾದ, ವುಂಗ್ಲಾರಕ್ಷೇತ್ರ ತುಂಗಭದ್ರಾ ತೀರವಾಸಿಗಳಾದ ನಿತ್ಯ ಕರ್ಮಾನುಷ್ಠಾನ ಹರಿಹರ ಧ್ಯಾನ ಪರಾಯಣರಾದ ವ್ರತನೇಮ ನಿತ್ಯಾಚರಿತರಾದ ಗೋಭ್ರಾಹ್ಮಣ ಪ್ರತಿಪಾಲಕರಾದನಯ ವಿನಯ ದಯಾದಾಕ್ಷಿಣ್ಯ ಪರೋಪಕಾರಿಗಳಾದ ವಿಭೂತಿರುದ್ರಾಕ್ಷ ಮಾಲಿಕಾಭರಣ ಭೋಷಿತರಾದ ತ್ರಿಕಾಲ ಶಿವಪೂಜಾ ಧುರಂಧರರಾದ ನೀತಿ ಕಾರ್ಯಪ್ರವೀಣರಾದ ನಿತ್ಯಾನ್ನದಾನವಿನೋದಿಗಳಾದ ಏಕವಾಕ್ಯ ಪ್ರತಿಪಾಲಕರಾದ ಸತ್ಯ ಸದಾಚಾರ ನಿತ್ಯಪರಿಪೂರ್ಣರಾದ ಅಖಂಡಿತ ಲಕ್ಷ್ಮೀ ಸದಾ ಪ್ರಸನ್ನರಾದ ಮಹಾರಾಜಾಧಿಕಾರಪೂಜಿತ ರಾಜಮಾನ್ಯ ರಾಜಶ್ರೀ ಹಿರೇಮೈಲಾರದ……. ಒಡೆಯರ್ ಸ್ವಾಮಿಗಳವರ………

ಇದರಲ್ಲಿ ‘ತುಂಗಭದ್ರಾತೀರ ಉಗ್ಲಾರಕ್ಷೇತ್ರ’ವೆಂದಿರುವುದು ಶಾಸನೋಕ್ತ ಉಂಗುಲಾಲವೆಂಬುದರ ತರುವಾಯದ ರೂಪ, ಎಂದರೆ ಈಗಿನ ಹಳೆಯ ಮೈಲಾರ ಊರಿನ ಜಾಗವೆಂದು ಭಾವಿಸಲಾಗುವ ಊರೇ ಪ್ರಾಚೀನ ಕುರುವತ್ತಿಯಾಗಿದ್ದು ಮೈಲಾರಲಿಂಗನ ದೇವಾಲಯದಂತೆಯೇ ಈಗಿನ ನದೀ ದಂಡೆಯ ಕುರುವತ್ತಿಯಲ್ಲಿ ಚಾಲುಕ್ಯರ ಪ್ರಸಿದ್ಧ ದೇವಾಲಯ ‘ಆಹವ ಮಲ್ಲೇಶ್ವರ’ವನ್ನು ಕಟ್ಟಿದ್ದರಿಂದಾಗಿ ಅಲ್ಲಿಯೂ ಜನವಸತಿ ಬೆಳೆದು ಅದೇ ಪ್ರತ್ಯೇಕ ಊರಾಯಿತು ಮತ್ತು ಮೈಲಾರ ಅಥವಾ ಉಂಗ್ಲಾರವೇ ಪ್ರತ್ಯೇಕ ಊರಾಗಿ ಕಾಲಾಂತರದಲ್ಲಿ ರೂಪಗೊಂಡವೆಂದು ಹೇಳಬಹುದು.

ಹೀಗೆ ಉಂಗ್ಲಾಲ ಅಥವಾ ಉಂಗ್ಲಾರ ಎಂಬ ಗ್ರಾಮನಾಮ ಹಿಂದೆ ಬಿದ್ದು ದೇವತಾವಾಚಕವಾದ ಮೈಲಾರ ಎಂಬ ಹೆಸರು ಕಾಲಾಂತರದಲ್ಲಿ ಗ್ರಾಮವಾಚಕ ವಾಗಿ ಗಟ್ಟಿಗೊಂಡಿತು. ದೇವರ ಹೆಸರೇ ಪ್ರಸಿದ್ಧಿ ಗೆ ಬಂದು ತರುವಾಯದಲ್ಲಿ ಅದೇ ಊರ ಹೆಸರಾಗಿರುವ ಉದಾಹರಣೆಗಳು ಕರ್ನಾಟಕದಲ್ಲಿ ಬೇಕಾದಷ್ಟಿವೆ. ಪೊರಿಗೆಱೆ>[ಪೊಲಿಗೆಱೆ]>ಪುಲಿಗೆರೆ>ಹುಲಿಗೆರೆ ಇಂದು ಲಕ್ಷ್ಮೇಶ್ವರ ಎಂದಾಗಿ ಮಾರ್ಪಡಲು ಅಲ್ಲಿನ ಲಕ್ಷ್ಮೇಶ್ವರ ದೇವಾಲಯವೇ ಕಾರಣ. ಅದೇ ರೀತಿ ಕೊಡಲ್-ಕೂಡಲೂರು ಇಂದು ಹರಿಹರವೆಂದು ಪ್ರಸಿದ್ಧವಾಗಲು ಅಲ್ಲಿರುವ ಹರಿಹರ ದೇವಾಲಯವೇ ಕಾರಣ.

ಮೈಲಾರ ಊರ ಹೆಸರನ್ನು ಕುರಿತಂತೆ ಇಲ್ಲಿ ಇನ್ನೊಂದು ಅಂಶವನ್ನು ಕೂಡ ಗಮನಿಸಬೇಕಾಗಿದೆ. ಪ್ರಸ್ತುತ ಮೈಲಾರಲಿಂಗ ದೇವಾಲಯದ ಪೌಳಿಯ ಹೊರ ಬದಿಯಲ್ಲಿರುವ ಕಲ್ಲೇಶ್ವರ ಅಥವಾ ಕಲ್ಮೇಶ್ವರ ದೇವಾಲಯದಲ್ಲಿನ ಕ್ರಿ.ಶ. ೧೨೮೩ನೆಯ ವರ್ಷದ ಶಾಸನದಲ್ಲಿ ಅಲ್ಲಿನ ದೇವರನ್ನು ‘ಗುಂಗುಱೌಚಂದ ಸ್ವಯಂ ಭೂಕಲಿನಾಥ’ ಎಂದು ಕರೆದುದು ಕಂಡುಬರುತ್ತದೆ. ಇಲ್ಲಿನ ‘ಗುಂಗುಱೌಚಂದ’ ಎಂಬುದನ್ನು ಸ್ಥಳವಾಚಕವೆಂದು ಪರಿಗಣಿಸಿದರೆ ಪ್ರಸ್ತುತ ಕ್ಷೇತ್ರಕ್ಕೆ ಕ್ರಿ.ಶ. ೧೪೩೬ರ ಪೂರ್ವದಲ್ಲಿ ಎಂದರೆ ಮೇಲಿನ ಶಾಸನ ಕಾಲಾವಧಿಯಲ್ಲಿ ಬೇರೊಂದು ಹೆಸರಿತ್ತೆಂದು ಹೇಳಬೇಕಾಗುತ್ತದೆ. ‘ಗುಂಗುಱೌ’ ಎಂದಿರುವ ಶಾಸನ ಭಾಗವನ್ನು ‘ಇನ್‌ಸ್ಕ್ರಿಪ್ಶನ್ ಆಫ್ ಮದ್ರಾಸ್ ಪ್ರೆಸಿಡೆನ್ಸಿ’ ಸಂ.೧ ರಲ್ಲಿ ‘ಗುಂಗೂರು’ ಎಂದು ಕೊಡಲಾಗಿದೆ. (ಪು. ೨೮೬, ನಂ. ೨೧೩) ಈ ಹೆಸರು (ದ.ಭಾ.ಶಾಸನ, ಸಂ.IX-i ರ ಸಂಪಾದಕರು ಓದಿರುವಂತೆ) ಗುಂಗುಱಾ ಎಂಬುದು ಗುಂಗೂರು ಎಂದಿರುವುದು ನಿಜವಾದರೆ ‘ಚಂದ’ ಎಂದಿರುವ ಭಾಗ ಮುಂದಿನ ‘ಸ್ವಯಂಭೂಕಲಿನಾಥ’ ಎಂಬುದಕ್ಕೆ ಸಂಬಂಧಪಡುವಂತಾಗುತ್ತದೆ. ಆಗ ‘ಗುಂಗೂರ ಚಂದ (ಚಂಡ?) ಸ್ವಯಂಭೂಕಲಿ ನಾಥ’ ಎಂದು ಪ್ರಸ್ತುತ ಭಾಗವನ್ನು ಓದಬೇಕಾಗುತ್ತದೆ. ಒಟ್ಟಿನಲ್ಲಿ ಗುಂಗೂರು ಅಥವಾ ಗುಂಗುಱಾ ಎಂಬುದನ್ನು ಗ್ರಾಮವಾಚಕವೆಂದು ಗ್ರಹಿಸಿದ್ದಾದರೆ ಉಂಗುಲಾಲ ಮತ್ತು ಗುಂಗೂರು ಗುಂಗುಱಾ ಇವು ಒಂದೇ ಊರಿನ ಎರಡು ಬೇರೆ ಬೇರೆ ಹೆಸರುಗಳಾಗುತ್ತವೆ. ಆದರೆ ಭಾಷಾ ವೈಜ್ಞಾನಿಕವಾಗಿ ಇವು ಒಂದೇ ಎಂದು ಸ್ಥಾಪಿಸುವುದು ತುಂಬಾ ದುಸ್ತರ. ಗುಂಗುಱೌಚಂದ ಅಥವಾ ಗುಂಗುಱ ಎಂಬುದು ಒಂದು ಗ್ರಾಮವಾಚಕವೇ ಆಗಿದ್ದಲ್ಲಿ ಅದೊಂದು ಬಹು ವಿಚಿತ್ರವಾದ ಮತ್ತು ಅನ್ಯತ್ರ ಹೋಲಿಕೆಯೇ ಇಲ್ಲದ ಸ್ಥಳವಾಚಕವಾಗುತ್ತದೆ. ಸದ್ಯ ಇದರ ಬಗ್ಗೆ ಹೆಚ್ಚಿಗೆ ಹೇಳಲು ಅವಕಾಶವಿಲ್ಲವೆಂದು ಭಾವಿಸಿ ಉಂಗುಲಾಲ> ಉಂಗ್ಲಾರ ಎಂಬುದಕ್ಕೆ ೫೦೦ ವರ್ಷಗಳ ಪರಂಪರೆಯಿರುವುದರಿಂದ ಪ್ರಸ್ತುತ ಕ್ಷೇತ್ರದ ಹೆಸರು ಮೂಲತಃ ಉಂಗುಲಾಲವಾಗಿತ್ತೆಂದು ಇಟ್ಟುಕೊಳ್ಳಬಹುದು.

ಕ್ರಿ.ಶ. ೧೦೪೭ರ ಶಾಸನದಲ್ಲಿ ಮೂಲಸ್ಥಾನ ದೇವರು ಮತ್ತು ಸ್ವಯಂ ಭೂದೇವರು ಎಂಬ ಹೆಸರುಗಳು ಮಾತ್ರ ಕಂಡುಬರುತ್ತವೆ. ಇವುಗಳಲ್ಲಿ ಮೂಲಸ್ಥಾನ ದೇವರೆಂಬುದು ಬಹುಶಃ ಈಗಿನ ಬೇಚಿರಾಕ್ ಪ್ರದೇಶದಲ್ಲಿ ನಿಂತಿರುವ ಸೋಮಲಿಂಗ ದೇವಾಲಯವೇ ಅದೇ ರೀತಿ ಸ್ವಯಂ ಭೂ ಎಂಬುದು ಈ ಮೈಲಾರ ಲಿಂಗ ದೇವರೆಂದು ಪ್ರಖ್ಯಾತವಾಗಿರುವ ದೇವರೇ ಎಂದು ತಿಳಿಯಲವಕಾಶವಿದೆ. ಶ್ರೀ ಜಿ. ಎಚ್. ಖರೆ ಎಂಬ ಮರಾಠಿ ವಿದ್ವಾಂಸರು ಸುಮಾರು ಇದೇ ರೀತಿಯಾಗಿ ಊಹಿಸಿದ್ದಾರೆ (ಮಹಾರಾಷ್ಟ್ರಾಂಚಿ ಚಾರದೈವತೆ, ಪು. ೧೩೬). ಇವೆರಡು ದೇವಾಲಯಗಳು ವಾಸ್ತು ಶೈಲಿಯಲ್ಲಿ ಒಂದನ್ನೊಂದು ತದ್ವತ್ತಾಗಿ ಹೋಲುತ್ತವೆ. ಆದರ ವಿವರಗಳು ಇಲ್ಲಿ ಅನಾವಶ್ಯಕ.

ಬೇಚಿರಾಕ್ ಪ್ರದೇಶದಲ್ಲಿ ಮೇಲೆ ತಿಳಿಸಿದ ಕ್ರಿ.ಶ. ೧೦೪೭ ರ ಶಾಸನವಲ್ಲದೆ ಸೋಮಲಿಂಗ ದೇವಾಲಯದ ಮುಂದಿನ ದೀಪಸ್ತಂಭದ ಮೇಲೆ ಇನ್ನೊಂದು ಚಿಕ್ಕ ಶಾಸನ ಕೆತ್ತಲಾಗಿದೆ. ಇದರ ಕಾಲ ಸ್ಪಷ್ಟವಿಲ್ಲ. ಬಹುಶಃ ಶಾಸನ ಕೆತ್ತಿರುವ ದೀಪಸ್ತಂಭವನ್ನು ದೇವಾಲಯಕ್ಕೆ ಕಾಣಿಕೆಯಾಗಿ ನೀಡಿರುವ ಸಂಗತಿ ಕುರಿತು ಇದು ಹೇಳುತ್ತದೆ.

ಕಲ್ಮೇಶ್ವರ ದೇವಾಲಯದಲ್ಲಿರುವ ಶಾಸನದಲ್ಲಿ ಸ್ವಯಂ ಭೂ ಕಲಿನಾಥನಿಗೆ ನಂದಿಯನ್ನು ಸ್ಥಾಪಿಸಲಾದ ಸಂಗತಿ ಉಕ್ತವಾಗಿದೆ. ಈ ದೇವಾಲಯ ಚಿಕ್ಕದು. ಆದರೆ ಅದು ಕ್ರಿ.ಶ. ೧೨೮೩ ಕ್ಕೆ ಪೂರ್ವದಿಂದಲೇ. ಅಸ್ತಿತ್ವದಲ್ಲಿತ್ತೆಂದು ಹೇಳಲು ಪ್ರಸ್ತುತ ಶಾಸನ ಆಧಾರವೀಯುತ್ತದೆ.

ತರುವಾಯ ನಮಗೆ ಇಲ್ಲಿನ ಪರಿಸರದಲ್ಲಿ ದೊರೆಯುವ ಮತ್ತು ಸ್ಪಷ್ಟ ಕಾಲ ನಿರ್ದೇಶನವುಳ್ಳ ಶಾಸನವೆಂದರೆ ಶಕ ವರ್ಷ ೧೩೩೪ ದುಂದುಭಿ ಸಂವತ್ಸರ ಮಾರ್ಗ ಶೀರ್ಷ ಶುದ್ಧ ೬ ರವಿವಾರದಂದು ಹುಟ್ಟಿದ ಶಾಸನ. ಎಂದರೆ ಕ್ರಿ.ಶ. ೧೪೧೨ರ ಛಟ್ಟಿ ಹಬ್ಬದ ಭಂಡಾರ ಪೂಜೆಯ ಮಿತಿಯನ್ನು ಇದು ಸೂಚಿಸುತ್ತದೆ. ಗೌತಮ ಗೋತ್ರದ ಋಕ್ ಶಾಖೆಯ ತ್ರಿಕಾಂಡೆಯ ನಾಗಣ್ಣನ ಮಗ ಗಂಗರಸ ಎಂಬವನು ಶ್ರೀ ಮಾಳಲದೇವಿಗೆ ಲೀಲಾ ಸುಖನಾಸಿ ನಚಗ್ರುಹ (ನಾಟ್ಯಗೃಹ) ಮತ್ತು ರಂಗಮಂಟಪಗಳನ್ನು ನಿರ್ಮಿಸಿದನೆಂದು ಈ ಶಾಸನ ದಾಖಲಿಸಿದೆ. ಈ ಶಾಸನ ಕಾಲಕ್ಕಾಗಲೇ ಈ ದೇವರ ಆರಾಧನೆಯಲ್ಲಿ ಭಂಟಾರ ಛಟ್ಟಿ (ಮಾರ್ಗ ಶು. ಛಟ್ಟಿ) ಯ ಹಬ್ಬ ಪ್ರಾಮುಖ್ಯ ಪಡೆದಿತ್ತೆಂದು ಕೂಡ ತಿಳಿಯುವಂತಾಗುತ್ತದೆ. ಇದೇ ಮಿತಿಯ ಉಲ್ಲೇಖ ಮುಂದಿನ ರುಧಿರೋದ್ಗಾರಿ ಸಂವತ್ಸರದಲ್ಲಿ (ಕ್ರಿ.ಶ. ೧೪೪೩) ಹುಟ್ಟಿದ ಹೆಗ್ಗಪ್ಪನ ಗುಡಿಯ ಶಾಸನದಲ್ಲೂ ಬಂದಿದೆ. ಈ ಹೆಗ್ಗಪ್ಪನ ಗುಡಿಯ ಶಾಸನ ಕೂಡ ಮೇಲ್ಕಾಣಿಸಿದ ಶಾಸನದಲ್ಲಿ ಉಲ್ಲೇಖಿತನಾದ ಗಂಗರಸ ಅಥವಾ ಗಂಗಯ್ಯನೆ ಹಾಕಿಸಿದ್ದೆಂದು ಕಂಡುಬರುತ್ತದೆ. ಹೆಗ್ಗಪ್ಪದೇವರ ರಂಗಮಂಟಪ ನಿರ್ಮಿಸಿದ ಉಲ್ಲೇಖ ಅದರಲ್ಲಿದೆ.

ಇನ್ನುಳಿದ ಶಾಸನಗಳಲ್ಲಿ ಎರಡು ಸಂಸ್ಕೃತ ಭಾಷೆ ಮತ್ತು ಕನ್ನಡ ಲಿಪಿಯಲ್ಲಿವೆ. ಮೈಲಾರದೇವರ ರಂಗಮಂಟಪದ ದಕ್ಷಿಣ ಬದಿಯ ಕಂಬದ ಪೂರ್ವ ಮತ್ತು ಉತ್ತರ ಬದಿಗಳಲ್ಲಿ ಇವನ್ನು ಕೆತ್ತಲಾಗಿದೆ. ಎರಡೂ ಪದ್ಯಮಯವಾಗಿದ್ದು ಪೂರ್ವಬದಿಯ ಶಾಸನದಲ್ಲಿ ಕಂಡ ರಣೆಕಾರನು ಮಾಡಿರುವ ತಪ್ಪುಗಳು ಬಹಳವಾಗಿವೆ. ಇದರಲ್ಲಿ ಮೈಲಾರಾಖ್ಯ ಶಿವಸ್ಯ, ಮೈಲಾರಾಖ್ಯ ಗಿರೀಶಸ್ಯ ಎಂದು ಎರಡು ಬಾರಿ ದೇವರ ಉಲ್ಲೇಖ ಬಂದಿದೆ. ಉತ್ತರ ಬದಿಯ ಶಾಸನ ಪಾಠ ಹೆಚ್ಚು ಶುದ್ಧವಾಗಿ ಕೆತ್ತಲ್ಪಟ್ಟಿದ್ದು ಕಂಡುಬರುತ್ತದೆ. ಇದರಲ್ಲಿ ದೇವರನ್ನು “ಮಾಲಚೀ ಪತಿಃ ಈಶ್ವರ ಮೈಲಾರೇತಿ ಪ್ರಸಿದ್ಧಃ” ಎಂದು ಕರೆದಿದೆ. ಗಂಗಣ್ಣ ಅಥವಾ ಗಂಗರಸ ಮಾಡಿಸಿದ ಶಿಲಾ ಮಂಟಪವನ್ನು ‘ಚಿತ್ರತೋರಣ ಸಂಯುಕ್ತಂ, ಚತುಸ್ತಂಭವಿರಾಜಿತಃ’ ವಾತಾಯ ನೇನ ರಚಿತಂ, ನಾನಾರತ್ನ ಪ್ರತೀಕಾಶಂ’ ಎಂದು ಮುಂತಾಗಿ ವರ್ಣಿಸಲಾಗಿದೆ.

ಉತ್ತರ ಕಂಬದ ಮೇಲಿರುವ ಶಾಸನ ತಕ್ಕಷ್ಟು ದೀರ್ಘವಾಗಿದ್ದು ಕನ್ನಡ ಭಾಷೆಯಲ್ಲಿದೆ. ಇದರಲ್ಲಿ ಶಕವರುಷ ೧೩೫೮ನೆಯ ನಳಸಂವತ್ಸರದ ವೈಶಾಖ ಬ. ೧೧ ಎಂದು ಮಿತಿ ನಿರ್ದೇಶನವಿದೆ. ಪ್ರೌಢದೇವರಾಯನ ಆಳ್ವಿಕೆಯಲ್ಲಿ ಹುಟ್ಟಿರುವ ಈ ಶಾಸನ ‘ಶ್ರೀ ಮದ್ರಾಜಾಧಿರಾಜ ಪರಮೇಶ್ವರ ಪೂರ್ವ ದಕ್ಷಿಣ ಪಶ್ಚಿಮ ಸಮುದ್ರಾಧೀಶ್ವರಂ ಅರಿರಾಯವಿಭಾಡ ಗಜವೇಂಟೆಕಾಱ’ ಎಂಬ ಅವನ ಬಿರುದನ್ನು ಪ್ರಯೋಗಿಸಿದೆ. ಪ್ರೌಢದೇವರಾಯನ ಮಹಾಪ್ರಧಾನ ಸಿಂಗಣ್ಣ ದಂಡನಾಯಕನ ನಿರೋಪದಿಂದ ಗೌತಮ ಗೋತ್ರದ ಋಕ್ ಶಾಖೆಯ ತ್ರಿಕಾಂಡೆಯ ನಾಗಪಯ್ಯನ ಮಗನೂ ಹೆಗ್ಗಡೆ ದೇವರಸನ ತಮ್ಮನೂ ಆದ ಗಂಗರಸನು ಪ್ರಸ್ತುತ ಮೈಲಾರ ದೇವರ ಶಿಲಾಮಂಟಪ ರಚಿಸಿದನೆಂದು ಹೇಳುತ್ತದೆ. ಈಗಾಗಲೇ ತಿಳಿಸಿರುವಂತೆ ‘ಶ್ರೀಮದ್ದೇವತಾ ಚಕ್ರವರ್ತಿ ಉಂಗುಲಾಲದ ಶ್ರೀ ಮನ್ಮಹಾ ಮಯಿಲಾರ ದೇವರು’ ಎಂಬ ನಿರ್ದಿಷ್ಟ ಉಲ್ಲೇಖ ಕೂಡ ಇದರಲ್ಲಿದೆ. ಒಟ್ಟುನಲ್ಲಿ ಗಂಗಿಮಾಳವ್ವ ಅಥವಾ ಮಾಳಲದೇವಿಯ ಲೀಲಾಸುಖನಾಸಿ, ನಾಟ್ಯ ಗೃಹ ಮತ್ತು ರಂಗಮಂಟಪ, ಹೆಗ್ಗಪ್ಪನ ದೇವಾಲಯದ ಮುಖಮಂಟಪ ಹಾಗೂ ಮುಖ್ಯ ದೇವಾಲಯದ ರಂಗಮಂಟಪ ಇವೆಲ್ಲ ಒಬ್ಬನೇ ವ್ಯಕ್ತಿಯಿಂದ ಎಂದರೆ ಗಂಗಣ್ಣ ಅಥವಾ ಗಂಗರಸನಿಂದ ಕ್ರಿ.ಶ. ೧೪೧೨, ೧೪೩೬ ಮತ್ತು ೧೪೪೩ ನೆಯ ವರ್ಷಗಳಲ್ಲಿ ನಿರ್ಮಾಣಗೊಂಡಿರುವ ವಿಷಯ ಸ್ಪಷ್ಟಪಡುತ್ತದೆ.

ದೇವರ ಲಗ್ನ ಸಂದರ್ಭದಲ್ಲಿ ಉಪಯೋಗಿಸಲ್ಪಡುವ ಮೈಲಾರದೇವರು ಮತ್ತು ಗಂಗಿಮಾಳಮ್ಮನ ಸಂಯುಕ್ತ ಮೂರ್ತಿಯೊಂದು ದೇವಸ್ಥಾನದ ಕಾರ್ಯಾಲಯದಲ್ಲಿದೆ. ಇದರ ಪೀಠದ ಮೇಲೆ ಕ್ರಿ.ಶ. ೧೫೧೮ ನೆಯ ವರ್ಷದ ಚಿಕ್ಕ ಶಾಸನವೊಂದಿದೆ. ಇದರಲ್ಲಿ ‘ಹಿರಿಯ ಮೈಲಾರದೇವರು’ ಎಂದು ಬಂದಿರುವ ಉಲ್ಲೇಖ ಗಮನಾರ್ಹವಾದುದು. ಈಗ ಪ್ರಸ್ತುತ ದೇವಸ್ಥಾನವನ್ನು ಎಲ್ಲೆಡೆ ಹಿರೇಮೈಲಾರ ಎಂದೇ ಕರೆಯಲಾಗುತ್ತಿದೆ. ಈ ಪದ್ಧತಿ ೧೫ನೆಯ ಶತಮಾನದಷ್ಟು ಮುಂಚಿನಿಂದಲೇ ಇತ್ತೆಂದು ಶಾಸನದ ಈ ಮಾತಿನಿಂದ ಸ್ಪಷ್ಟಪಡುತ್ತದೆ. ಈ ಕಾಲಕ್ಕಾಗಲೇ ಈ ದೇವರ ಹಲವಾರು ದೇವಾಲಯಗಳು ಪ್ರಸಿದ್ಧವಾಗಿದ್ದವೆಂದು ಇದರಿಂದ ಊಹಿಸಲವಕಾಶವಾಗುತ್ತದೆ.

ಈಗ್ಗೆ ಸು. ಎಂಟು ವರ್ಷಗಳ ಹಿಂದೆ ನಾನು ಈ ಲೇಖವನ್ನು ನೋಡಿದಾಗ ಅದು ಈಗಿನಷ್ಟು ಮಸುಳಿಸಿರಲಿಲ್ಲ. ಇದು ಬಹುಶಃ ಪ್ರಕಟವಾಗಿರಬಹುದೆಂದು ಭಾವಿಸಿ ಅದರ ಪ್ರತಿ ಮಾಡಿಕೊಂಡಿರಲಿಲ್ಲ. ಈಗ ನೋಡಿದರೆ ‘…… ಸೆಟ್ಟಿಯ ಮಗ ನಕರಸಯ್ಯ ಮತ್ತು ಅವನ ಹೆಂಡತಿ ಬಸವಮ್ಮ ಇವರು ಈ ಮೂರ್ತಿಯನ್ನು ಮಾಡಿಸಿಕೊಟ್ಟರೆಂದು ಹೇಳುವ ಅಕ್ಷರಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಈ ದಂಪತಿಗಳು ಹಂಪಡೆಯವರು ಎಂದು ತಿಳಿಸುವ ಉಲ್ಲೇಖ ಆಗ ಸ್ಪಷ್ಟವಾಗಿತ್ತೆಂದು ನನ್ನ ನೆನಪು.

ಮುಖ್ಯ ದೇವಾಲಯದ ಮುಂಬದಿಯ ಪೌಳಿಯಲ್ಲಿ ವೀರಭದ್ರನ ಗುಡಿಯಿದ್ದು ಅದರ ಎದುರುಗಡೆ ಅರಳೆಯ ಕಟ್ಟಿಯೊಂದಿದೆ. ಅದರ ಮೇಲಿನ ಶಿಲಾಲೇಖ ಈಗ ತೀರ ಸವೆದು ಹೋಗಿದೆ (ಅದರ ನಡುವೆ ಕೈಯೆತ್ತಿನಿಂತು ದೇವರಿಗೆ ಭಕ್ತಿ ತೋರಿಸುವ ವ್ಯಕ್ತಿಯೊಬ್ಬನನ್ನು ತೋಡಿಸಲಾಗಿದೆ). ಕೇವಲ ‘ಶ್ರೀಮುಖ ಸಂವತ್ಸರ’ ಎಂಬ ಭಾಗ ಮಾತ್ರ ಈಗ ಗೋಚರಿಸುತ್ತದೆ. ಇನ್‌ಸ್ಕ್ರಿಪ್ಶನ್ ಆಫ್ ಮದ್ರಾಸ್ ಪ್ರೆಸಿಡೆನ್ಸಿ ಸಂ. ೧ ರ ಪ್ರಕಾರ ಈ ಪೌಳಿಯಲ್ಲಿ ಇನ್ನೊಂದು ಶಾಸನವಿತ್ತು. ಅದರಲ್ಲಿ ಹೊನ್ನರಸನೆಂಬುವನು ಶ್ರೀಮುಖ ಸಂವತ್ಸರದಂದು ಮೈಲಾರದೇವರೊಡನೆ ಐಕ್ಯನಾದನೆಂದು ತಿಳಿಸುವ ಬರಹವಿತ್ತೆಂದು ಮೇಲಿನ ಸಂಪುಟ ೧ ರಲ್ಲಿ ಹೇಳಿದೆ (ಬಳ್ಳಾರಿ ಜಿ. ನಂ. ೨೧೩). ಈ ಹೊನ್ನರಸನೆಂಬುವನು ಮೈಲಾರದೇವರ ಭಕ್ತನಾಗಿದ್ದು ಸಹಜವಾದ ಮರಣವನ್ನಪ್ಪಿದನೋ ಅಥವಾ ಆತ್ಮ ಬಲಿದಾನ ಮಾಡಿದನೋ ತಿಳಿಯದು. ಪ್ರಸ್ತುತ ಸಂಪುಟದಲ್ಲಿ ಹೇಳಿದ ಶಾಸನ ಬಹುಶಃ ಇದೇ ಸವಕಲು ಬರಹ ಆಗಿರುವ ಸಾಧ್ಯತೆ ಹೆಚ್ಚಾಗಿದೆ.

ಈ ರೀತಿ ಹಿರೇಮೈಲಾರದಲ್ಲಿ ಈ ವರೆಗೆ ಒಟ್ಟು ನಾಲ್ಕು ಶಾಸನಗಳು ಸಿಕ್ಕು ಪ್ರಕಟವಾಗಿದ್ದು ಇದೀಗ ಮತ್ತೆ ೬ ಶಾಸನಗಳು ಹೊಸದಾಗಿ ಪ್ರಕಟವಾಗುತ್ತಿವೆ. ಅವುಗಳ ಪಾಠವನ್ನು ಕೆಳಗೆ ಕೊಡಲಾಗುತ್ತಿದೆ.*

ಹಿರೇಮೈಲಾರದ ಶಾಸನಗಳು (ತಾ || ಹೂವಿನ ಹಡಗಲಿ, ಜಿ || ಬಳ್ಳಾರಿ)
(ಮೈಲಾರದೇವರ ದೇವಾಲಯದ ಪರಿಸರ)

ಮುಖ್ಯ ದೇವಸ್ಥಾನದ ಪೌಳಿಯ ಈಶಾನ್ಯದಿಕ್ಕಿನಲ್ಲಿ ಬಿದ್ದಿರುವ ಕಲ್ಲು ಕ್ರಿ.ಶ. ೧೪೧೨.

೧. ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ ೧೩೩೪

೨. ನೆಯ ದುಂದುಭಿ ಸಂವತ್ಸರದ ಮಾರ್ಗಸಿರ

೩. ಶುದ್ಧ ೬ ಅ. ವಾರದಲ್ಲು ಶ್ರೀಮತು ಗಉತಮಗೋ

೪. [ತ್ರ]ದ ರುಕು ಶಾಖೆಯ ತ್ರಿಕಾಂಡೆಯ ನಾಗಂ

೫. ಣಗಳ ಮಕ್ಕಳು ಶ್ರೀ ಮಯಿಲಾರದೇವರ ಭಂಡಾ

೬. ರದ ಅಧಿಕಾರ ಗಂಗರಸರು ಮಾಡಿಸಿದ ಶ್ರೀ ಮಾ

೭. ಳಲದೇವಿಯರ ಲೀಲಾಸುಖನಾಸಿ ನಚಗ್ರುಹ ರಂಗ

೮. ಮಂಟಪಕ್ಕೆ ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ

ಮುಖ್ಯ ದೇವಾಲಯದ ರಂಗಮಂಟಪದ ಮುಂಬದಿಯಲ್ಲಿನ ದಕ್ಷಿಣ ಕಂಬ ಪೂರ್ವಮುಖದ ಶಾಸನ, ಕ್ರಿ.ಶ. ೧೪೩೬.

೧. ಶ್ರೀ ಗಣಾಧಿಪತಯೇ ನಮಃ ಶುಭಮಸ್ತು…. .

೨. ಯೇಣ ಕಾರಿತ ಮಹಾಪ್ರಭಾವ ವಿಧೀನಾ ನಿತ್ಯ…. . ಶಿ

೩. ಲಾ ಮಂಡಪಃ ಮೈಲಾರಾಖ್ಯ ಶಿವಸ್ಯ ಸಾ . . . .

೪. ತೀನಾ ಭಕ್ತ್ಯಾ ತದ್ರೇಗ್ರಯಾ | ಶಾಕೆಬ್ದಿ ನಳ ಸ ಗೇತ್ಯ

೫. ವಸುಶ್ವರಸ್ಪಾ… ಶಭೂ ಸಂಮಿತೇಣ ಯ… . ೦ತ

೬. ಸಂಪದಾ ವಿಜಯತಾಂ ಶ್ರೀ ಗಂಗಣಾಖ್ಯೋ

೭. ಮೈಲಾರಾಖ್ಯ ಗಿರೀಶಸ್ಯ ಗಂಗಣ ಪ್ರಭುಣಾ

೮. ಚಂದ್ರಾರ್ಕ್ಕಂ ಸ್ಥಿರಾ ಭೂಯಾನ್ಮಹಾ ಪ . . . . . .

೯. ಶಿಲಾಬಿಮ್ಮಂ ಪಾನಿತ್ಯಂ ಪ್ರೀತೌ ಮಲ್ಲಾರಿ

೧೦. ರತಃ | ಗಂಗಣಾಮಾತ್ಯೇ ಭದ್ರಂ . . . . .ಧ್ಯಾಧೀಶ್ವ . . . . .

೧೧. ಸಂಪದಂ || ಮಂಗಳ ಮಹಾ ಶ್ರೀ ಶ್ರೀ ಶ್ರೀ

ಅದೇ ರಂಗಮಂಟಪದ ಅದೇ ಕಂಬ, ಉತ್ತರ ಮುಖ, ಸು. ಕ್ರಿ.ಶ. ೧೪೩೬

೧. ಶ್ರೀ ಶಾರದಾಯೈ ನಮಃ ಆದೀಪ್ನುಮಸ್ತುಃ | ತುಂಗಭದ್ರಾ

೨. ಸಮೀಪಸ್ಯ ಮೈಲಾರ ಪಳ(ತ?) ಮೇಶಿತುಃ ಪುರತೋಗಂಗಣ್ಣಾ

೩. ಖ್ಯೇನೇ …. ರಂಗಮಂಟಪಯಾ? ಚಿತ್ರ ತೋರಣ ಸಂ

೪. ಯುಕ್ತಂ ಚತುಸ್ತಂಭ ವಿರಾಜಿತಂ || ವಾತಾಯನೇನ ರಚಿ

೫. ತಂ ಪಂಟಪಂ ಗುಣಶೋಭಿತಂ || ನಾನಾ ರತ್ನ ಪ್ರತೀಕಾ

೬. ಶಂ ನಾನಾ ಶೋಭಾಭಿರಂಜಿತಂ || ನಾನಾ ವರ್ಣತೌ ರಾಮಾ

೭. ದ್ಯಂ ಮಂಡಪಂ ಭುವಿವಿಸ್ತರಂ || ನಾನಾ ಚಿತ್ರವಿಭೂ

೮. ಶಿತ್ಯಂ | ದೀಪಿತಂ ಮಣಿರಶ್ಮಯಾ | ಸರ್ಸ್ವಾಲಂಕಾ

೯. . . .. ತಂ ಮಂಡಪಂ ಧರಣೀ ತಳೇ || ತಚ್ಚಿತ್ರಕರ್ಮ

೧೦. ಣೌತು ಸ್ವೋ ಮಾಲಚೀಪತಿರೀಶ್ವರ ಮೈಲಾರೇತಿ ಪ್ರಸಿ

೧೧. ದ್ಧೋಯಂ ಪಾತುವಃಶ್ಚಂದ್ರಸೇಖರಃ || ಶ್ರೀ ಶ್ರೀ

ಅದೇ ದೇವಾಲಯದ ರಂಗಮಂಟಪದ ಉತ್ತರ ಬದಿಯ ಕಂಬದ ಮೇಲಿರುವ ಶಾಸನ, ಕ್ರಿ.ಶ. ೧೪೩೬.

೧. ಸ್ವಸ್ತಿ ಶ್ರೀ ಜಯಾಭ್ಯುದಯ ಶಕವರುಶ

೨. ೧೩೫೮ನೆಯ ನಳಸಂವತ್ಸರದ ವಯಿಶಾ

೩. ಖ(ಖಿ)೧೧ದಲ್ಲು ಶ್ರೀಮದ್ದೇವತಾ ಚಕ್ರವರ್ತ್ತಿ ಉಂಗು

೪. ಲಾಲದ ಶ್ರೀಮನ್ಮಹಾಮಯಿಲಾರ ದೇವರ ರಂಗಮ

೫. ೦ಟಪವನ್ನು ಶ್ರೀಮದ್ರಾಜಾಧಿರಾಜ ಪರಮೇಶ್ವರ

೬. ಪೂರ್ವ ದಕ್ಷಿಣ ಪಶ್ವಿಮ ಸಮುದ್ರಾಧೀಶ್ವರಂ ಅರಿರಾಯ

೭. ವಿಭಾಡ ಗಜವೇಂಟೆಕಾಱ ಶ್ರೀ ವೀರ ಪ್ರತಾಪ ಪ್ರಉಢದೇವ

೮. ರಾಯ ಮಹಾರಾಯರ ಶ್ರೀಮನ್ಮಹಾಪ್ರಧಾನಂ

೯. ಸಿಂಗಣ್ಣ ದಂಣ್ನಾಯಕಂ ಒಡೆಯ ನಿರೋಪದಿಂ

೧೦. [ಗೌ]ತಮ ಗೋತ್ರ ರುಕು ಶಾಖೆಯ ತ್ರಿಕಾಂಡಿಯ ನಾಗ

೧೧. ಪಯ್ಯನ ಮಕ್ಕಳು ಹೆಗ್ಗಡೆದೇವರಸರ ತಮ್ಮಂದಿರು ಶ್ರೀ

೧೨. ಮೆಯಿಲಾರ ದೇವರ ನಿಜ ಭಕ್ತರಾದ ಅಧಿಕಾರಿ ಗಂಗರ್ರ್ಸ

೧೩. ರು ಮಾಡ್ಸಿದ ಶಿಲಾರಂಗಮಂಟಪಕ್ಕೆ ಮಂಗಳ ಮಹಾಶ್ರೀ

೧೪. ಶ್ರೀ ಶ್ರೀ ……. . .

ಕೆಳಗೆ ಮುಂದುವರಿದ ಭಾಗ

೧೫. ಮೈಲಾರಪುರದ ಶ್ರೀ ಮನ್ಗಂಗಣ್ಣನಾಗ

೧೬. ಶ್ವ . . . . .ತಮಾರ್ಸಯಃ

೧೭. ಶಿವಂ? ತತ್ಪ್ರುಣ್ಯ ಸುಫಲಾತ್ರ್ಸಸಿ

೧೮. ಗ್ಯ . . . . . . .ಪಿತಾಂ ಭಾ

೧೯. ಯಾದ್ದೇವಣಾನುಜಃ

ಮುಖ್ಯ ದೇವಾಲಯದ ಪೌಳಿಯ ಹೊರಗಡೆ ಹೆಗ್ಗಪ್ಪದೇವರ ಗುಡಿಯ ರಂಗ ಮಂಟಪದ ಪೂರ್ವ ತೊಲೆಯ ಮೇಲಿನ ಶಾಸನ, ಕ್ರಿ.ಶ. ೧೪೪೩.

೧. ಸ್ವಸ್ತಿಶ್ರೀ ಜಯಾಭ್ಯುದಯ ಶಕವರುಷ ೧೩೬೫ನೆಯ ರುಧಿ

೨. ರೋದ್ಗಾರಿ ಸಂವತ್ಸರ ಮಾರ್ಗಸುದ್ಧ ೬ ಬು. ದಲು ಗಉತಮ

೩. ಗೋತ್ರದ ರುಕುಶಾಖೆಯ ತ್ರಿಕಾಂಡೆಯ ನಾಗಂಣಗಳ ಮಕ್ಕಳು

೪. ಶ್ರೀ ಮಯಿಲಾರ ದೇವರ ಭಂಡಾರದ ಅಧಿಕಾರಿ ಗಂಗಯ್ಯ

೫. ನು ಮಾಡಿಸಿದ ಶ್ರೀ ಹೆಗ್ಗಡೆ ದೇವರ ಶಿಲಾಮಂಟಪ ಮಂಗಳ

೬. ಮಹಾ ಶ್ರೀ ಶ್ರೀ ಶ್ರೀ

ಮುಖ್ಯ ದೇವಾಲಯದ ಪೌಳಿಯಲ್ಲಿಯ ಕಲ್ಯಾಣಮಂಟಪದಲ್ಲಿ ಇಟ್ಟಿರುವ ಮೈಲಾರ-ಮಾಳಮ್ಮ ವಿಗ್ರಹದ ಅಡಿಯಲ್ಲಿರುವ ಶಾಸನ, ಕ್ರಿ.ಶ. ೧೫೧೫.

೧. ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕವರುಷ ೧೪೪೦ ನೆಯ
ಬಹುಧಾನ್ಯ ಸಂವತ್ಸರದ ಮಾರ್ಗಶೀರ್ಷಶು . . . . . . . . . .

೨. ಶ್ರೀಮತು ಹಿರಿಯ ಮೈಲಾರ ದೇವರಿಗೆ ವುತ್ಸವ | . . . . .
. . . . . . . .ಮಂ ನ ಚಿಂನದ . . . . . ದಿಕ ಭೂಷಣ ವಿಜಯಯಾದ ಪಹ?

೩. (ಮೂರ್ತಿಯ ಹಿಮ್ಮಗ್ಗಲು)
. . . . . . . .ಸೆಟ್ಟಿಯ ಮಗ ನಕರಸಯ್ಯ ಆತನ
ಹೆಂಡತಿ ಬಸವಮ್ಮಗಳು ಯಿಬ್ಬರು ಮಾಡಿಸಿದ | ಶ್ರೀ ಶ್ರೀ ಶ್ರೀ

ಪೌಳಿಯ ಪರ್ವ ಭಾಗದಲ್ಲಿರುವ ವೀರಭದ್ರದೇವರ ಗುಡಿಯ ಮುಂದಿರುವ ಕಲ್ಲು (ಬಹಳ ಸವೆದಿದೆ).

…………………..
…………………..
…………………..
…………………..
…………………..
…………………..
…………………..
ಶ್ರೀ ಮುಖ
ಸಂವತ್ಸರದ …….

 

*೧೯೮೭ರ ಮೇ ತಿಂಗಳಲ್ಲಿ ಆಯಾ ಮೂಲಗಳಿಂದ ನೇರವಾಗಿ ನಕಲು ಮಾಡಿಕೊಂಡದ್ದು. –ಲೇ