“ನಾವು ಸ್ವಾತಂತ್ರ್ಯಕ್ಕಾಗಿ ಯುದ್ಧ ಮಾಡುತ್ತೇವೆ. ಸ್ವರಾಜ್ಯ ಕಟ್ಟುತ್ತೇವೆ. ದೇಹದಲ್ಲಿ ಪ್ರಾಣ ಇರುವವರೆಗೂ ಮಾತೃಭೂಮಿಗೆ ಸೇವೆ ಸಲ್ಲಿಸುತ್ತೇವೆ.”

ಇದ್ದಕ್ಕಿದ್ದಂತೆ ಕಾಡಿನಲ್ಲಿ ಮನುಷ್ಯರ ಧ್ವನಿ ಗುಡುಗಿತು.

ಅದು ದಟ್ಟವಾದ ಹಸಿರು ಕಾಡು. ಅದರ ಹೆಸರು ರೋಹಿರಾ ಕಣಿವೆ. ಅಲ್ಲೊಂದು ಹಳೆಯ ಕಲ್ಲುಮಂಟಪ. ಅದೇ ರೋಹಿರೇಶ್ವರ ಗುಡಿ. ಅದರೊಳಗೆ ೧೫-೨೦ ಬಾಲಕರು ನಿಂತಿದ್ದರು. ಎಲ್ಲರೂ ಈಶ್ವರಲಿಂಗದ ಮೇಲೆ ತಮ್ಮ ಬಲಗೈ ಇಟ್ಟಿದ್ದರು. ದಿಟ್ಟ ಸ್ವರದಲ್ಲಿ ಪ್ರತಿಜ್ಞೆ ಮಾಡಿದರು. ಪ್ರತಿಜ್ಞೆ ಹೇಳಿಕೊಟ್ಟ ತೇಜಸ್ವಿ ಬಾಲಕನೇ ಶಿವಾಜಿ. ಛತ್ರಪತಿ ಶಿವಾಜಿಯ ಹೆಸರು ಯಾರು ತಾನೆ  ಕೇಳಿಲ್ಲ?

ಶಿವಾಜಿಯ ಬಲಗೈ

ಪ್ರತಿಜ್ಞೆ ಮಾಡಿದವರ ಪೈಕಿ ಒಬ್ಬನ ರಟ್ಟೆ ತುಂಬ ಬಲವಾಗಿತ್ತು. ಅವನ ಸ್ವರ ಉಳಿದೆಲ್ಲರ ಸ್ವರಕ್ಕಿಂತ ಗಟ್ಟಿಯಾಗಿತ್ತು. ಅವನಿಗೆ ಸದಾ ಹೋರಾಟದ ಮನಸ್ಸು. ಧೈರ್ಯ ಶೌರ್ಯಗಳೇ ಮೈತಾಳಿ ಬಂದಂತೆ ಇದ್ದ ರೂಪ. ಶಿವಾಜಿಗೆ ಅವನು ಅಚ್ಚುಮೆಚ್ಚಿನ ಗೆಳೆಯ. 

 

"ಪ್ರಾಣ ಇರುವವರೆಗೂ ಮಾತೃಭೂಮಿಗೆ ಸೇವೆ ಸಲ್ಲಿಸುತ್ತೇವೆ."

ಅವನ ಮನೆ ಎಲ್ಲಿ? ಊರು ಕೇರಿ ಯಾವುದು? ತಂದೆ ತಾಯಿ ಯಾರು? ಯಾರಿಗೂ ತಿಳಿಯದು. ಅವನಿಗೂ ನೆನಪಿಲ್ಲ. ಅದನ್ನೆಲ್ಲಾ ಕಟ್ಟಿಕೊಂಡು ಏನಾಗಬೇಕು? ಸ್ವದೇಶ-ಸ್ವಧರ್ಮದ ಕೆಲಸಕ್ಕೆ ಹೊರಟವನು ಅವನು. ಶಿವಾಜಿಯ ಪ್ರೀತಿಯ ಸಹವಾಸದಲ್ಲಿ ಹಿಂದಿನದೆಲ್ಲ ಮರೆತುಬಿಟ್ಟಿದ್ದ. ದೇವಿ ಭವಾನಿಯ ಭಕ್ತಿಯಲ್ಲೆ ಮೈಮರೆತುಬಿಟ್ಟಿದ್ದ. ಅವನ ಹೆಸರು ಎಲ್ಲರಿಗೂ ಗೊತ್ತು-ನೇತಾಜಿ ಪಾಲಕರ್‌. ತಾನಾಜಿ, ಸೂರ‍್ಯಾಜಿ, ಯೇಸಾಜಿ ಮುಂತಾದ ಗೆಳೆಯರೇ ನೇತಾಜಿಯ ಬಂಧು ಬಳಗ. ಸಾಹಸ -ಪರಾಕ್ರಮಗಳೇ ಅವನ ಕುಲಗೋತ್ರಗಳು. ಕತ್ತಿ-ಢಾಲು-ಭಲ್ಲೆ ಅವನ ಆಟದ ಸಾಮಾನುಗಳು. ಕುದುರೆಯ ಬೆನ್ನು ಅವನ ನಿತ್ಯಾಸನ. ಕಾಳಗವೇ ಅವನ ಹಬ್ಬ. ಗಿರಿದುರ್ಗಗಳಲ್ಲಿ, ಕಾಡುಮೇಡುಗಳಲ್ಲಿ ಅವನ ಸಂಚಾರ-ವಿಹಾರ.

ತೋರಣಗಡ, ಚಾಕಣಗಡ, ರಾಯಗಡ ಹೀಗೆ ಅನೇಕ ಕೋಟೆಗಳನ್ನು ಶಿವಾಜಿ ಗೆದ್ದುಕೊಂಡ. ಅಲ್ಲಿ ನಡೆದ ಯುದ್ಧಗಳಲ್ಲೆಲ್ಲ ಶಿವಾಜಿಯ ಬಲಗೈ ನೇತಾಜಿ. ಯಾವ ಕೆಲಸಕ್ಕೇ ಹೊರಡಲಿ, ಶಿವಾಜಿಯ ಪಕ್ಕದಲ್ಲಿ ಅವನು ಸದಾ ಸಿದ್ಧ. ಅವನ ಮೇಲೆ ಶಿವಾಜಿಗೆ ವಿಶೇಷ ಅಬಿಮಾನ, ನಂಬಿಕೆ, ಜನರು ನೇತಾಜಿಯನ್ನು “ಎರಡನೆಯ ಶಿವಾಜಿ” ಎಂದೇ ಕರೆಯತೊಡಗಿದರು.

ಪುರಂದರದ ಹೊಸ ಕಿಲ್ಲೇದಾರ

ಪುಣೆ ಪ್ರಾಂತದಲ್ಲಿ ಪುರಂದರಗಡ ಒಂದು ದೊಡ್ಡ ಕೋಟೆ, ಬಹು ಆಯಕಟ್ಟಿನ ಜಾಗದಲ್ಲಿ ಇತ್ತು ಅದರ ಕಿಲ್ಲೇದಾರ ಮಹದಾಜಿ ಸರನಾಯಕ್‌. ವೃದ್ಧನಾದ ಅವನು ೧೬೫೪ರಲ್ಲಿ ತೀರಿಕೊಂಡ. ಅಗ ಅವನ ಹಿರಿಯ ಮಗ ನೀಲಕಂಠರಾವ್‌ತಂದೆಯ ಅಧಿಕಾರಕ್ಕೆ ಬಂದ. ಅವನು ಬಿಜಾಪುರದ ಸುಲ್ತಾನನ ಅಡಿಯಾಳು. ಅವನಿಗೆ ಮೂವರು ತಮ್ಮಂದಿರು. ಅಧಿಕಾರಕ್ಕಾಗಿ ಅಣ್ಣ ತಮ್ಮಂದಿರಲ್ಲಿ ಜಗಳ ಪ್ರಾರಂಭವಾಯಿತು.

ಪುರಂದರದಂತಹ ಮಹತ್ವದ ಕೋಟೆಯ ಮೇಲೆ ಮೊದಲೇ ಶಿವಾಜಿಯ ಕಣ್ಣು ಬಿದ್ದಿತ್ತು. ಒಂದು ದಿನ ತನ್ನ ಸ್ನೇಹಿತರೊಡನೆ ಅತಿಥಿಯಾಗಿ ದುರ್ಗದ ಒಳಕ್ಕೆ ಹೋದ. ರಾತ್ರಿ ನಾಲ್ವರು ಸೋದರರನ್ನೂ ಬಂಧಿಸಿದ. ಆಗ “ಸ್ವರಾಜ್ಯದ ಸೇವೆ ಮಾಡುತ್ತೇವೆ” ಎಂದು ಅವರು ಮಾತು ಕೊಟ್ಟರು. ಆಮೇಲೆ ಅವನ ಬಿಡುಗಡೆ ಆಯಿತು. ಆದರೆ ಶಿವಾಜಿ ಅವರಿಗೆ ಅಧಿಕಾರ ಕೊಡಲಿಲ್ಲ.

ಈಗ ಶಿವಾಜಿಯ ಜವಾಬ್ದಾರಿ ಇನ್ನಷ್ಟು ಹೆಚ್ಚಿತು. ಆ ನಾಲ್ವರು ಅಣ್ಣತಮ್ಮಂದಿರನ್ನು ಹದ್ದಿನಲ್ಲಿಡಬೇಕು; ಪುರಂದರಗಡವನ್ನು ಬಲಪಡಿಸಬೆಕು; ಅಲ್ಲಿನ ಆಡಳಿತ ನಡೆಸಬೇಕು; ಅಲ್ಲದೆ, ಬಿಜಾಪುರದ ಸುಲ್ತಾನನ ಸೈನ್ಯ ಜಗಳಕ್ಕೆ ಬಂದರೆ, ಗಡವನ್ನು ರಕ್ಷಿಸಬೆಕು; ಶತ್ರುವಿಗೆ ಚೆನ್ನಾಗಿ ಬುದ್ಧಿ ಕಲಿಸಬೆಕು. ಅಂಥ ಛಾತಿವಂತ ಯಾರು? ಕಿಲ್ಲೇದಾರ ಆಗಲು ಯಾರು ಸಮರ್ಥರು? ಶಿವಾಜಿ ಬಹಳ ಆಲೋಚಿಸಿದ. ಕೊನೆಗೆ ಅವನಿಗೆ ಹೊಳೆದದ್ದು ಒಂದೇ ಒಂದು ಹೆಸರು-ನೇತಾಜಿ ಪಾಲಕರ್. ಶಿವಾಜಿ ಅವನನ್ನು ಕರೆಸಿದ.

ನರವೀರ ನೇತಾಜಿ ಬಂದ. ಮಹಾರಾಜರಿಗೆ ವಂದನೆ ಸಲ್ಲಿಸಿದ. “ಏನು ಆಜ್ಞೆ?” ಎಂದ.

“ಇವತ್ತಿನಿಂದ ನೀನು ಇಲ್ಲಿನ ಕಿಲ್ಲೇದಾರ. ಇದರ ಆಡಳಿತದ ಹೊಣೆ ನಿನಗೆ ಸೇರಿದ್ದು.”

“ನಿಮಗಿನ್ನು ಇದರ ಚಿಂತೆ ಬೇಡ; ನಾನು ನೋಡಿಕೊಳ್ಳುತ್ತೇನೆ.” ಎಂದು ಧೈರ್ಯವಾಗಿ ಹೇಳಿದ ನೇತಾಜಿ.

ನೇತಾಜಿ ಆಡಳಿತ ವಹಿಸಿಕೊಳ್ಳುತ್ತಲೇ ಪುರಂದರಗಡಕ್ಕೆ ಹೊಸ ಚೈತನ್ಯ ಬಂತು. ಮದ್ದುಗುಂಡಿನ ಸಂಗ್ರಹ, ಧವಸಧಾನ್ಯದ ಸಂಗ್ರಹ, ಮುರಿದುಬಿದ್ದ ಭಾಗಗಳನ್ನು ಸರಿಪಡಿಸುವುದು, ಹೆಬ್ಬಾಗಿಲಲ್ಲಿ ಮತ್ತು ಕೊತ್ತಳಗಳ ಮೆಲೆ ಹಗಲಿರುಳು ಸೈನಿಕರ ಕಾವಲು, ಲೆಕ್ಕಪತ್ರಗಳ ಯೋಗ್ಯ ವ್ಯವಸ್ಥೆ- ಎಲ್ಲ ಆರಂಭವಾಯಿತು. ದಿನವೂ ಆ ಕೋಟೆಗೆ ಸ್ವರಾಜ್ಯದ ಅಂಚೆ ಸವಾರರು ಬಂದು ಹೋಗತೊಡಗಿದರು.

ಮೊದಲೇ ನೈಸರ್ಗಿಕವಾಗಿ ಭವ್ಯ ದುರ್ಗ ಅದು. ಈಗಂತೂ ಅದರೊಡನೆ ನೇತಾಜಿಯ ಆಡಳಿತ ದಕ್ಷತೆಯೂ ಸೈನಿಕ ಶಿಸ್ತೂ ಸೇರಿಕೊಂಡವು. ಯಾವುದೆ ಮೊಕದ್ದಮೆ ಬಂದರೂ ಅವನು ಕೂಡಲೇ ವಿಚಾರಣೆ ನಡೆಸುತ್ತಿದ್ದ. ನ್ಯಾಯ ರೀತಿಯಲ್ಲಿ ತೀರ್ಪು ನೀಡುತ್ತಿದ್ದ. ನೇತಾಜಿ ಬಂದುದರಿಂದ ಪ್ರಜೆಗಳಿಗೆಲ್ಲ ಹೆಮ್ಮೆ, ಆನಂದ. ಶುತ್ರುಗಳಿಗೆ ಆ ದಿಕ್ಕಿನಲ್ಲಿ ತಲೆಯಿಡುವುದಕ್ಕೂ ಧೈರ್ಯವಾಗಲಿಲ್ಲ. ನೇತಾಜಿ ತಮ್ಮ ತಂಟೆಗೆ ಬಾರದಿದ್ದರೆ ಸಾಕು ಎಂದುಕೊಂಡು ತೆಪ್ಪಗಿದ್ದರು.

ದಿಗ್ವಿಜಯದ ದಾಹ

ಒಂದು ವರ್ಷ ಕಳೆಯಿತು. “ನೇತಾಜಿಗೆ ಸದಾ ಇನ್ನೂ ಹೆಚ್ಚು ಸಾಹಸ ತೋರಿಸಬೇಕೆಂಬ ಹಂಬಲ. “ಈಗ ಯಾರಾದರು ಯುದ್ಧಕ್ಕೆ ಬರಲಿ, ಸರಿಯಾಗಿ ಪಾಠ ಕಲಿಸುತ್ತೇನೆ” ಎಂದು ಕಾಯುತ್ತಿದ್ದ. ಆದರೆ ಅತ್ತಕಡೆ ಒಬ್ಬರೂ ಸುಳಿಯಲಿಲ್ಲ. ಇನ್ನು ಪರಾಕ್ರಮ ತೋರಿಸುವುದು ಹೇಗೆ ನೇತಾಜಿ ಚಡಪಡಿಸತೊಡಗಿದ. ಕಿಲ್ಲೇದಾರ ಆದದ್ದು ಅವನ ಕೈಕಾಲು ಕಟ್ಟಿದಂತಾಗಿತ್ತು.

ಮೇಲಿಂದ ಮೇಲೆ ನೇತಾಜಿಗೆ ಸುದ್ದಿ ಬರುತ್ತಿತ್ತು. ಶಿವಾಜಿ ಮಹಾರಾಜರು ಜಾವಳಿ ಗೆದ್ದರು, ಕಲ್ಯಾಣ-ಭಿವಂಡಿ ವಶಪಡಿಸಕೊಂಡರು, ಜುನ್ನರ್ ಪೇಟೆ ಲೂಟಿ ಮಾಡಿದರು. ಇತ್ಯಾದಿ. ಅದನ್ನು ಕೇಳಿದಂತೆಲ್ಲ ನೇತಾಜಿಗೆ ಸಂತೋಷದ ಜೊತೆಗೆ ಸಂತಾಪವೂ ಏರುತ್ತಿತ್ತು. ತಾನೂ ಮಹರಾಜರ ಜೊತೆ ಇರಬೆಕು, ಯುದ್ಧದಲ್ಲಿ ಭಾಗವಹಿಸಬೇಕು ಎಂಬುದೊಂದೇ ಯೋಚನೆ. ತನ್ನ ಸಾಹಸ ತೋರಿಸುವ ಅವಕಾಶ ಕಳೆದು ಹೋಗುತ್ತಿದೆಯಲ್ಲ ಎಂಬ ಚಿಂತೆ. ಅವನಾದರೋ ಶಿಸ್ತಿನ ಸಿಪಾಯಿ. ಆದ್ದರಿಂದ ರಾಜಾಜ್ಞೆ ಮೀರಬಾರದೆಂದು ತನಗೆ ತಾನೇ ಸಮಧಾನ ಹೇಳಿಕೊಳ್ಳುತ್ತಿದ್ದ.

ಒಮ್ಮೊಮ್ಮೆ ವಿವೇಚನೆ ಕೊನೆಮುಟ್ಟುತ್ತಿತ್ತು. “ಇನ್ನು ಸಮ್ಮನಿರಲು ನನ್ನಿಂದ ಸಾಧ್ಯವಿಲ್ಲ. ಮಹರಾಜರಿಗೆ ಸ್ಪಷ್ಟವಾಗಿ ಹೇಳಿಬಿಡಬೇಕು. ನಾನು ಹುಟ್ಟಿರುವುದು ಈ ಜಡ್ಡು ಕಿಲ್ಲೇದಾರಿಕೆಗಲ್ಲ. ನಾನೇನು ವೀರನಲ್ಲವೆ? ತಾರುಣ್ಯದಲ್ಲಿ ಸಾಹಸ ತೋರಿಸದಿದ್ದರೆ ಇನ್ನು ಯಾವಾಗ? ತಲೆಯ ಕೆಲಸ ಸಾಕು, ಇನ್ನು ಕತ್ತಿಯ ಕೆಲಸ ಕೊಡಿ. ಒಮ್ಮೆ ಕೊಟ್ಟು ನೋಡಿ ಎಂದು ಹೇಳಿಬಿಡಬೇಕು” ಅಂದುಕೊಳ್ಳುತ್ತಿದ್ದ. ಆದರೆ ಮಹಾರಾಜರ ಭೇಟಿಯೇ ಆಗಲೊಲ್ಲದು. ಶಿವಾಜಿಗೆ ಇತ್ತ ನಿಶ್ಚಿಂತೆ ಮತ್ತು ಹೊರಗೆ ಬಿಡುವಿಲ್ಲದಷ್ಟು ಹೋರಾಟಗಳು.

ಆಸೆ-ನಿರಾಸೆ

ರಾಜಪತ್ನಿ ಸಯೀಬಾಯಿ ಗರ್ಭಿಣಿಯಾದಳು. ಬಾಣಂತಿತನಕ್ಕೆ ಆಕೆಯನ್ನು ಶಿವಾಜಿಯು ಪುರಂರದರಗಡಕ್ಕೆ ಕಳುಹಿಸಿಕೊಟ್ಟ. ಅದರಿಂದ ನೇತಾಜಿಯ ಬೇಸರ ಸ್ವಲ್ಪ ದೂರವಾಯಿತು. ಶಿವಾಜಿಗೆ ತನ್ನಲ್ಲಿದ್ದ ವಿಶ್ವಾಸ, ಭರವಸೆ ಕಂಡು ತಾನೇ ಧನ್ಯ ಎಂದುಕೊಂಡ. ಅಲ್ಲದೆ, ಆಗ ಸ್ವರಾಜ್ಯದಲ್ಲಿ ಪೂರ್ತಿ ಸುರಕ್ಷಿತವಾಗಿದ್ದ ಕೋಟೆ ಪುರಂದರಗಡವೊಂದೇ.

ಸಯೀಬಾಯಿ ಗಂಡುಮಗು ಹೆತ್ತಳು. ಸ್ವರಾಜ್ಯಕ್ಕೆ ಯುವರಾಜ ಹುಟ್ಟಿದ. ಶಿವಾಜಿಗೆ ನೇತಾಜಿ ಶುಭ ಸಮಾಚಾರ ಕಳುಹಿಸಿದ. ಎಲ್ಲರಿಗೂ ಆನಂದವೋ ಆನಂದ. ನೇತಾಜಿಗೆ ಎಲ್ಲರಿಗಿಂತ ಹೆಚ್ಚಿನ ಆನಂದ. ಏಕೆಂದರೆ, ಮಗನನ್ನು ನೋಡಲು ಮಹಾರಾಜರು ಬರುತ್ತಾರೆ. ಆಗ ತನ್ನ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಬಹುದು ಎಂದು.

ದಿನಗಳು ಉರುಳಿದವು. ವಾರಗಳು ಕಳೆದವು, ಮಹಾರಾಜ ಸುಳಿವೇ ಇಲ್ಲ. “ಅವರು ಮಾಹುಲಿ ಕಿಲ್ಲೆ, ಪ್ರಧಾನಗಡ ಗೆಲ್ಲಲು ಸೆಣಸುತ್ತಿದ್ದರು. ಅಷ್ಟರಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿತು. ಸ್ವರಾಜ್ಯದ ಸರಸೇನಾಪತಿ (ಪ್ರಧಾನ ದಂಡನಾಯಕ) ಮಾಣಕೋಜಿ ದಹಾತೋಂಡೆ ಮೃತನಾದ. ಅಂಥ ವಿಪತ್ತಿನ ಸನ್ನಿವೇಶದಲ್ಲೂ ಶಿವಾಜಿ ಎದೆಗೆಡಲಿಲ್ಲ. ಲೋಹಗಡ, ರಾಜಮಾಚಿ ದುರ್ಗಗಳನ್ನು ವಶಪಡಿಸಿಕೊಂಡ. ಬಳಿಕ ಕಲ್ಯಾಣ ಪ್ರಾಂತದ ಆಡಳಿತವನ್ನು ನೋಡಿಕೊಳ್ಳಲು ಆಬಾಜಿ ಸೋನದೇವನನ್ನು ನೇಮಿಸಿದ.

ಇನ್ನಾದರೂ ಮಹಾರಾಜರು ಪುರಂದರಗಡಕ್ಕೆ ಬಂದರೆಂದು ನೇತಾಜಿ ನಿರೀಕ್ಷಿಸಿದ. ಆದರೆ ಶಿವಾಜಿ ನೇರವಾಗಿ ರಾಯಗಡಕ್ಕೆ ಹೋದ. ನೇತಾಜಿ ಪುನಃ ಬೇಸರದಿಂದ ಚಡಪಡಿಸಬೇಕಾಯಿತು. ತಾನೇ ರಾಯಗಡಕ್ಕೆ ಹೋಗಬೇಕು ಅಂದುಕೊಂಡ. ಆದರೆ, ಅವರಿಂದ ಕರ್ತವ್ಯಚ್ಯುತಿ ಆಗಬಹುದೆಂದು ಮನಸ್ಸು ಹಿಂಜರಿಯಿತು.

ಸ್ವರಾಜ್ಯದ ಸರಸೇನಾಪತಿ

ಇದ್ದಕ್ಕಿಂದ್ದಂತೆ ಒಂದು ದಿನ ದೂತನೊಬ್ಬ ಪರಂದರಗಡಕ್ಕೆ ಬಂದ. ಅವನು ಬಂದದ್ದು ರಾಯಗಡದಿಂದ. ಜೊತೆಗೊಂದು ಲಕೋಟೆ ತಂದಿದ್ದ. ಅದನ್ನು ಕಿಲ್ಲೇದಾರನಾದ ನೇತಾಜಿಯ ಮುಂದಿಟ್ಟ. ಹೀಗೇ ಯಾವುದೋ ಮಾಮೂಲು ವಾರ್ತೆ ಇರಬಹುದೆಂದು  ನಿರಾಸಕ್ತಿಯಿಂದ ಅದನ್ನು ತೆರೆದ. ಆದರೆ ಕಾಗದ ನೋಡುತ್ತಲೇ ಅವನು ಬೆಕ್ಕಸಬೆರಗಾದ. ಅದರಲ್ಲಿ ರಾಜಮುದ್ರೆ ಹಾಗೂ ಮಹಾರಾಜರ ಹಸ್ತಾಕ್ಷರ ಇತ್ತು. ನೇತಾಜಿ ಪುನಃ ಪುನಃ ಕಾಗದ ಓದಿಕೊಂಡ. ಅದರಲ್ಲಿ ಬರೆದಿತ್ತು: “ನಾವು ನಿಮ್ಮನ್ನು ಸ್ವರಾಜ್ಯದ ಸರಸೇನಾಪತಿಯಾಗಿ ನೇಮಿಸಿದ್ದೇವೆ.”

ಸರಸೇನಾಪತಿ ಆಗುತ್ತಲೇ ನೇತಾಜಿ ಪಾಲಕರ್ ರಣರಂಗಕ್ಕೆ ಧುಮುಕಿದ. ಅನೇಕ ದಿನಗಳಿಂದ ಅವನ ಕತ್ತಿ ಒರೆಯೊಳಗೇ ಕೊರಗುತ್ತಿತು. ಈಗ ಅದನ್ನು ಹಿರಿದು ಶತ್ರುಗಳ ರಕ್ತ ಕುಡಿಸುವ ಅವಕಾಶ ಬಂದಿತು. ಅದರ ಫಲವಾಗಿ ೧೬೫೯ರ ವೇಳೆಗೆ ಸ್ವರಾಜ್ಯ ವಿಸ್ತಾರವಾಗಿ ಬೆಳೆಯಿತು. ಅದರ ಸೈನ್ಯಬಲ, ಶಸ್ತ್ರಬಲಗಳೂ ಹೆಚ್ಚಿದವು. ಅದರಿಂದ ಬಿಜಾಪುರದ ಸುಲ್ತಾನನ ಕಣ್ಣು ಚುಚ್ಚಿದಂತಾಯಿತು. ಅವನ ಹೊಟ್ಟೆಗೆ ಕಿಚ್ಚಿಟ್ಟಂತೆ ಆಯಿತು. ಶಿವಾಜಿಯನ್ನೂ ಸ್ವರಾಜ್ಯವನ್ನೂ ನಿರ್ನಾಮ ಮಾಡಲು ಅವನು ನಿಶ್ಚಯಿಸಿದ.

ಅಫಜಲಖಾನನು ಬಿಜಾಪುರದ ಮುಖ್ಯ ಸರದಾರ, ಏಳು ಅಡಿ ಎತ್ತರದ ರಾಕ್ಷಸಾಕಾರದ ವ್ಯಕ್ತಿ ಅವನು, ಮಹಾಶೂರ; ಜೊತೆಗೆ ಮಹಾಕ್ರೂರಿ ಮತ್ತು ಧೂರ್ತ. ಅವನು ಶಿವಾಜಿಯನ್ನು ಹೊಸಗಿಹಾಕುವ ಪ್ರತಿಜ್ಞೆ ಮಾಡಿದ. ಇಪ್ಪತ್ತೈದು ಸಾವಿರ ಸೈನಿಕರ ಭಾರಿ ಸೇನೆಯೊಡನೆ ಬಿಜಾಪುರದಿಂದ ಹೊರಟ.

ಶಿವಾಜಿಯು ಸರಸೇನಾಪತಿ ನೇತಾಜಿಯೊಡನೆ ಆಲೋಚಿಸಿದ. ಅವನ ಬಳಿ ಅಷ್ಟು ಸೈನ್ಯ ಇರಲಿಲ್ಲ. ಆದ್ದರಿಂದ ಬೆಟ್ಟ, ಕಾಡುಗಳಲ್ಲಿ ಸೇರಿಕೊಂಡು ಕಿರುಕುಳ ಯುದ್ಧ (ಗೆರಿಲ್ಲಾ ಯುದ್ಧ) ಮಾಡಬೇಕು ಎಂದು ನಿಶ್ಚಯಿಸಿದರು. ಸೈನ್ಯ ಸಮೇತ ಪ್ರತಾಪಗಡಕ್ಕೆ ಹೊರಟರು. ಅದು ಹೊಸದಾಗಿ ಕಟ್ಟಿದ ದುರ್ಗಮ ಕೋಟೆ. ಅದರ ಸುತ್ತಲೂ ಘೋರ ಅರಣ್ಯ.

ಅಫಲಖಾನ್‌ಮೊದಲು ತುಳಜಾಪುರದ ಭವಾನಿಯ ವಿಗ್ರಹ ಒಡೆದು ಹಾಕಿದ. ಪಂಢರಪುರದ ದೇವಾಲಯ ಹಾಳುಗೆಡವಿದ. ಆಮೇಲೆ ಶಿಖರ ಶಿಂಗಣಾಪುರದ ಮಹದೇವ ಮಂದಿರ ಬೀಳಿಸಿದ. ಸ್ವರಾಜ್ಯಕ್ಕೆ ಸೇರಿದ ಊರುಗಳಲ್ಲಿ ಹಿಂಸಾಚಾರ ನಡೆಸಿದ. ಶಿವಾಜಿ ಬಯಲು ಪ್ರದೇಶಕ್ಕೆ ಇಳಿದು ಬರುವಂತೆ ಮಾಡಲು ಈ ತಂತ್ರ. ನೇರ ಯುದ್ಧದಲ್ಲಿ ಶಿವಾಜಿಯನ್ನು ಸೋಲಿಸಬೇಕೆಂಬುದು ಖಾನನ ಉದ್ದೇಶ.

ಶೌರ್ಯದ ಹೂಂಕಾರ

ಶಿವಾಜಿಯೂ ಅವನ ಸರದಾರರು ಪ್ರತಾಪಗಡದಲ್ಲಿ ಸೇರಿದರು. ಮುಂದೆ ಏನು ಮಾಡಬೇಕು ಎಂಬುದೇ ಪ್ರಶ್ನೆ.

“ಈಗ ಯುದ್ಧ ಬೇಡ. ಒಪ್ಪಂದ ಮಾಡಿಕೊಳ್ಳುವುದು ಲೇಸು” ಎಂದ ಒಬ್ಬ ಸರದಾರ.

“ಒಪ್ಪಂದವೇ? ಯಾರೊಡನೆ? ಆ ಕಪಟ ಖಾನನೊಡನೆ? ಅದೆಲ್ಲ ಸಾಧ್ಯವಿಲ್ಲ. ಕತ್ತಿ ತೋರಿಸುವುದೇ ಶೂರರ ಲಕ್ಷಣ. ಖಾನನು ನಮ್ಮ ನಾಶಕ್ಕೆ ನಡುಕಟ್ಟಿ ಬಂದಿರಬಹುದು. ಆದರೆ ಗೋರಿ ಕಟ್ಟುವ ಜನ ನಾವು ಇಲ್ಲಿದ್ದೇವೆ.” ಎಂದು ಗರ್ಜಿಸಿದ ಸರಸೇನಾಪತಿ ನೇತಾಜಿ. ಸಂಧಾನ ನಡೆದರೆ ತನ್ನ ಸಾಹಸ ತೋರಿಸುವ ಸದಾವಕಾಶ ಎಲ್ಲಿ ತಪ್ಪಿ ಹೋಗುತ್ತದೋ ಎಂದು ತಳಮಳ ಅವನಿಗೆ.

ಕೊನೆಗೆ ಶಿವಾಜಿ ಹೇಳಿದ: “ನಾನು ಖಾನನನ್ನು ಪ್ರತಾಪಗಡದ ಬುಡದಲ್ಲಿ ಭೇಟಿಯಾಗುತ್ತೇನೆ. ಅವನೇನಾದರೂ ಮೋಸಕ್ಕೆ ಹೊರಟರೆ, ಅವನನ್ನು ಹೊಡೆದು ಹಾಕುತ್ತೇನೆ.”

ಇದನ್ನು ಕೇಳಿ ನೇತಾಜಿಗೆ ಆಕಾಶವೇ ಕಳಚಿ ಬಿದ್ದಂತೆ ಆಯಿತು. “ನಾವೆಲ್ಲ ಹೆಂಗಸರಂತೆ ಬಳೆತೊಟ್ಟು ಕುಳಿತು ಕೊಳ್ಳಬೇಕೆ?” ಎಂದು ಸಿಡಿದು ಕೇಳಿದ.

ಶಿವಾಜಿ ನಕ್ಕು ಹೇಳಿದ: “ನಿನ್ನ ಮನಸ್ಸು ನನಗೆ ಗೊತ್ತು. ನಿನ್ನ ಪರಾಕ್ರಮ ತೋರಿಸಲು ಬೇಕಾದಷ್ಟು ಅವಕಾಶ ಇದೆ. ಖಾನನು ವಾಯಿಯಿಂದ ಜಾವಳಿ ಕಾಡಿಗೆ ಬರುವವರೆಗೆ ಅವನ ಸೈನ್ಯಕ್ಕೆ ಯಾವ ತೊಂದರೆಯೂ ಆಗದಂತೆ ನೀನು ನೋಡಿಕೊಳ್ಳಬೇಕು…….”

“ಇದೇ ಎನು ಪರಾಕ್ರಮದ ಕೆಲಸ?” ಎಂದು ನೇತಾಜಿ ಕೆರಳಿ ನುಡಿದ.

“ಸ್ವಲ್ಪ ನಿಧಾನಿಸು. ಇನ್ನೂ ಹೇಳುವುದಿದೆ. ಒಮ್ಮೆ ಖಾನನ ಸೈನ್ಯ ಕಣಿವೆಯೊಳಕ್ಕೆ ಬಂದನಂತರ ಒಂದು ನರಪಿಳ್ಳೆಯನ್ನೂ ಹೊರಕ್ಕೆ ಹೋಗಲು ಬಿಡಬಾರದು. ನನಗೆ ಅವನ ಭೇಟಿ ಆದ ಕೂಡಲೇ ಕೋಟೆಯ ಮೇಲಿಂದ ತೋಪು ಹಾರಿಸುತ್ತೇನೆ. ಅದೇ ಸಂಕೇತ. ಆಗ ತೋರಿಸು ನಿನ್ನ ಪೌರುಷ.”

ನೇತಾಜಿಗೆ ಸಮಾಧಾನವಾಯಿತು. ಕಾನೋಜಿ, ಬಾಜಿಪ್ರಭು, ತಾನಾಜಿ, ಸಿಲೀಮಕರ್ ಮುಂತಾದ ವೀರರಿಗೂ ಶಿವಾಜಿ ಯೋಗ್ಯ ಕೆಲಸ ಒಪ್ಪಿಸಿದ. ಬಳಿಕ ನೇತಾಜಿ ಒಬ್ಬನನ್ನೇ ಗುಟ್ಟಾಗಿ ಕರೆದು ಹೇಳಿದ: “ಸರ ಸೇನಾಪತಿ! ಅಕಸ್ಮಾತ್‌ಖಾನನ ಭೇಟಿಯಲ್ಲಿ ನನಗೆ ಅಪಾಯ ಆದರೆ ಗಾಬರಿ ಆಗಬೇಡ. ನನ್ನ ಮಗ ಸಂಭಾಜಿಯನ್ನು ಸಿಂಹಾಸನದ ಮೇಲೆ ಕೂರಿಸು. ಇಡೀ ರಾಜ್ಯದ ಹೊಣೆ ನಿನ್ನದು, ಮರೆಯಬೇಡ. ಶತ್ರುವನ್ನು ಹೊಡೆದಟ್ಟಿ ಸ್ವರಾಜ್ಯ ರಕ್ಷಿಸು.”

ಶಿವಾಜಿ ತನ್ನಲ್ಲಿಟ್ಟಿದ್ದ ನಂಬಿಕೆಯನ್ನು ಕಂಡು ನೇತಾಜಿಗೆ, “ನನ್ನ ಜೀವನ ಸಾರ್ಥಕ” ಅನಿಸಿತು. “ತಾಯಿ ಅಂಬಾ ಭವಾನಿ ನಮ್ಮ ಮಹಾರಾಜರನ್ನು ಸುರಕ್ಷಿತವಾಗಿಡು” ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದ. ಬಾಬಾಜಿ ಭೋಸಲೆ, ರಘುನಾಥ ಬಲ್ಲಾಳ ಮುಂತಾದ ಸೇನಾಧಿಕಾರಿಗಳೊಡನೆ ಸೈನ್ಯ ಸಮೇತ ಜಾವಳಿಯ ಅರಣ್ಯದಲ್ಲಿ ಅದೃಶ್ಯನಾದ.

ರಣಚಂಡಿಯ ಕುಣಿತ

೧೬೫೯ರ ನವೆಂಬರ್ ೧೦ ರಂದು ಪ್ರತಾಪಗಡದ ಬುಡದಲ್ಲಿ ಶಿವಾಜಿ-ಅಫಜಲಖಾನರ ಭೇಟಿ ಆಯಿತು. ಆಗ ಧೂರ್ತ ಖಾನನು ಶಿವಾಜಿಯನ್ನು ಕೊಲ್ಲಲು ಪ್ರಯತ್ನಿಸಿದ. ಆದರೆ ಚಾಣಾಕ್ಷನಾದ ಶಿವಾಜಿ ತಪ್ಪಿಸಿಕೊಂಡ. ತನ್ನ ಚೂರಿಯಿಂದ ಖಾನನನ್ನು ವಧಿಸಿದ. ಪ್ರತಾಪಗಡದ ಮೇಲಿಂದ ತೋಪು ಹಾರಿತು. ಆ ಸದ್ದು ಕೇಳುತ್ತಲೇ ನೇತಾಜಿ ಪಾಲಕರ್ ತನ್ನ ಕುದುರೆಯ ಲಗಾಮು ಎಳೆದು, ಕತ್ತಿ ಹಿರಿದು ಘೋಷಿಸಿದ: “ಹರಹರ ಮಹದೇವ್‌!”

ಖಾನನ ಸೈನಿಕರಿಗೆ ಗೊತ್ತಿದ್ದುದು ಒಂದೇ ದಾರಿ-ಪಲಾಯನ ! ಆ ಪಲಾಯನಕ್ಕೂ ಅವರಿಗೆ ತಿಳಿದಿದ್ದುದು ಒಂದೇ ದಾರಿ- ತಾವು ಬಂದ ದಾರಿ. ಅದರ ಹೆಸರು “ರಣತೋಂಡಿ” ಕಣಿವೆ. ಎಲ್ಲರಿಗೂ ಬೇಗ ಒಮ್ಮೆಗೇ ತಪ್ಪಿಸಿಕೊಳ್ಳುವ ಆತುರ. ತಟ್ಟನೆ ಅತ್ತ ಕಡೆ ನುಗ್ಗ ತೊಡಗಿದರು. ಆದರೆ ಅಲ್ಲಿ ಕಾದಿತ್ತು ನೇತಾಜಿಯ ಸೈನ್ಯ. ಅನೇಕ ದಿನಗಳಿಂದ ಯುದ್ಧದ ಅವಕಾಶ ಸಿಕ್ಕದೆ ನೇತಾಜಿ ಹಸಿದ ಹೆಬ್ಬುಲಿಯಾಗಿದ್ದ. ಅವನ ಪ್ರಳಯ ತಾಂಡವ ಪ್ರಾರಂಭವಾಯಿತು. ಒಂದೊಂದು ಹೊಡೆತಕ್ಕು ಒಂದೊಂದು ಮಾತು ಹೇಳುತ್ತಿದ್ದ.

“ನಿಮಗೆ ಶಿವಾಜಿ ಬೇಕೆ? ಇಗೋ ತೆಗೆದುಕೊಳ್ಳಿ!”
“ಇದು ತುಳಜಾಭವಾನಿಯ ಪ್ರಸಾದ!”
“ಇದು ಪಂಢರಪುರ ಹಾಳು ಮಾಡಿದ್ದಕ್ಕೆ !”

ಹೊಡೆತ, ಕಡಿತ, ರಕ್ತಪಾತ. ಅವರವರ ರುಮಾಲಿನಿಂದಲೇ ಶರಣಾಗತರ ಕೈ ಕಟ್ಟಿದರು. ಅವರ ಪೈಕಿ ಅಫಜಲಖಾನನ ಇಬ್ಬರು ಮಕ್ಕಳೂ ಸಿಕ್ಕಿದರು. ಆದರೆ ಇನ್ನೊಬ್ಬ, ಫಾಜಲಖಾನ್‌ಹೇಗೋ ತಪ್ಪಿಸಿಕೊಂಡಿದ್ದ. ಅವನೇ ದೊಡ್ಡ ಅಪರಾಧಿ. ಅವನನ್ನು ಜೀವ ಸಹಿತ ಬಿಡುವುದೇ? ನೇತಾಜಿಗೆ ಅವಮಾನವೆನಿಸಿತು. ಕೂಡಲೇ ವಾಯಿಯ ಕಡೆಗೆ ತನ್ನ ಕುದುರೆ ತಿರುಗಿಸಿದ. ಅವನ ಸೈನ್ಯವೂ ಹಿಂಬಾಲಿಸಿತು. ಎಲ್ಲಿ ನೋಡಿದರೂ ಎಷ್ಟು ಓಡಿದರೂ ಫಾಜಲಖಾನ್‌ಸಿಕ್ಕಲಿಲ್ಲ. ಪರಾರಿಯಾಗಿದ್ದ; ಜೀವಸಹಿತ ಪರಾರಿಯಾಗಿದ್ದ; ನೇತಾಜಿಯ ಕುದುರೆಗಿಂತಲೂ ವೇಗವಾಗಿ ಪಾರಾಗಿದ್ದ. ಇಂಥ ಪಲಾಯನದ ಕಲೆ ಎಲ್ಲಿ ಕಲಿತಿದ್ದನೋ ದೇವರೇ ಬಲ್ಲ!

ವಾಯಿಯಲ್ಲಿ ಸುಲ್ತಾನನ ಸೈನ್ಯಕ್ಕೆ ಸೇರಿದ ಅಪಾರ ದವಸ-ಧಾನ್ಯ, ಶಸ್ತ್ರಾಸ್ತ್ರ, ಆನೆ, ಕುದುರೆ ಎಲ್ಲವನ್ನೂ ನೇತಾಜಿ ವಶಪಡಿಸಕೊಂಡ. ಅನಂತರ ಶಿವಾಜಿ ಮತ್ತು ನೇತಾಜಿ ಇತರ ಸರದಾರರೊಡಗೂಡಿ ಒಂದೊಂದೆ ಊರನ್ನು ಗೆಲ್ಲುತ್ತಾ ಹೊರಟರು.

ಅತ್ತ ಫಾಜಲಖಾನ್‌ಹೇಗೋ ಜೀವ ಉಳಿಸಿಕೊಂಡು ಬಿಜಾಪುರ ಸೇರಿದ. ಅವನಿಗೆ ತಂದೆಯ ಸಾವಿನ ದುಃಖ; ಜೊತೆಗೆ ತನ್ನನ್ನು ಹಿಂದಿರುಗಿ ನೋಡದಂತೆ ಓಡಿಸಿದ ನೇತಾಜಿಯ ಮೇಲೆ ಕೋಪ. ರುಸ್ತುಂ ಜಮಾನನೆಂಬ ಇನ್ನೊಬ್ಬ ಬಿಜಾಪುರದ ಸರದಾರ ಇದ್ದ. ಅವನ ಜಹಗೀರಿಗೆ ಸೇರಿದ ಪನ್ನಾಲಗಡ ಮತ್ತು ಕೊಲ್ಲಾಪುರ ಶಿವಾಜಿಯ ವಶವಾಗಿತ್ತು. ಅದರಿಂದ ಅವನಿಗೂ ವಿಪರೀತ ಸಿಟ್ಟು ಬಂದಿತ್ತು. ಫಾಜಲನೂ ರುಸ್ತುಮನೂ ಪುನಃ ದೊಡ್ಡ ಸೈನ್ಯ ಕಟ್ಟಿಕೊಂಡು ಯುದ್ಧಕ್ಕೆ ಬಂದರು. ಪನ್ನಾಳಗಡದ ಬಳಿ ಹೋರಾಟವಾಯಿತು. ನೇತಾಜಿ ಅವರ ಸೇನೆಯನ್ನು ಪುನಃ ಚೆನ್ನಾಗಿ ಸದೆಬಡಿದು ಸೋಲಿಸಿದ. ಆದರೆ ಫಾಜಲಖಾನ್‌ಮಾತ್ರ ನೇತಾಜಿಯ ಕೈಗೆ ಸಿಕ್ಕಲಿಲ್ಲ. ಎಷ್ಟೇ ಆಗಲಿ, ಅವನು ಪಲಾಯನದಲ್ಲಿ ಪ್ರವೀಣ ತಾನೆ!

ಕಾಳಗವೇ ಕೈಲಾಸ

ಸರಸೇನಾಪತಿ ನೇತಾಜಿ ಪಾಲಕರ್ ಸದಾ ಸ್ಫೂರ್ತಿಯ ಮೂರ್ತಿ. ಸ್ವರಾಜ್ಯದ ಚೈತನ್ಯ. ಹೋರಾಟಕ್ಕಾಗಿಯೇ ಹುಟ್ಟಿ ಬಂದ ಜೀವ. ಅವನಿಗೆ ಕಾಳಗವೇ ಕೈಲಾಸ! ಶಿವಾಜಿ ಅವನಿಗೆ ಆಜ್ಞೆಯಿತ್ತ: “ನೀನು ಸಾಹಸ ತೋರಿಸಬೇಕು ಅಂದಿದ್ದೆಯಲ್ಲವೆ? ಬಿಜಾಪುರ ರಾಜ್ಯಕ್ಕೆ ನುಗ್ಗು ಈಗ. ನಿನ್ನ ಕತ್ತಿಯ ಗುಣ ತೋರಿಸೀಗ.”

"ಇಡೀ ರಾಜ್ಯದ ಹೊಣೆ ನಿನ್ನದು, ಮರೆಯಬೇಡ."

ನೇತಾಜಿ ಬಾಣದ ಹಾಗೆ ಪನ್ನಾಳಗಡದಿಂದ ಕೆಳಗಿಳಿದ. ತನ್ನ ಸೇನಾಪಡೆಗಳನ್ನು ಒತ್ತಟ್ಟಿಗೆ ಸೇರಿಸಿ ಹೇಳಿದ: “ಶತಮಾನಗಳ ಕಾಲ ನೆನಪುಳಿಯುವಂಥ ಪರಾಕ್ರಮ ತೋರಿಸೋಣ. ಮಹಾರಾಜರ ಪುಣ್ಯವೇ ನಮಗೆ ಪ್ರೇರಣೆ. ಭವಾನಿಯ ಹರಕೆಯೇ ರಕ್ಷಣೆ. ಇನ್ನು ಹೊರಡೋಣ.”

ಸರಸೇನಾಪತಿ ಬಿಜಾಪುರದ ದಿಕ್ಕಿಗೆ ತನ್ನ ಖಡ್ಗದ ಮೊನೆ ತೋರಿಸಿದ. ಇಡೀ ಸೈನ್ಯ ಒಕ್ಕೊರಲಿನಿಂದ “ಹರಹರ ಮಹದೇವ್‌” ಘೋಷಿಸಿತು. ನೇತಾಜಿಯ ಕುದುರೆ ಮುಂಗಾಲು ಮೇಲೆತ್ತಿ ನಿಂತು ಹೇಶಾರವ ಮಾಡಿತು. ನೇತಾಜಿ ತಲೆಯೆತ್ತಿ ದುರ್ಗದ ತುದಿಯತ್ತ ತಿರುಗಿದ. ಮೆಚ್ಚುಗೆಯಿಂದ ನಸುಬಾಗಿ ನೋಡುತ್ತಿದ್ದ ಶಿವಾಜಿಯ ದೃಷ್ಟಿ ಕಂಡಿತು. ಅಶ್ವಸೈನ್ಯ ಧೂಳೆಬ್ಬಿಸುತ್ತಾ ಮುಂದೆ ಸಾಗಿತು.

ಬಿಜಾಪುರದ ದಾಸ್ಯದಲ್ಲಿದ್ದ ಊರುಗಳಿಗೆ ನೇತಾಜಿ ಬಿರುಗಾಳಿಯಂತೆ ದಾಳಿಯಿಟ್ಟ. ಕವಠೆ, ಬೋರಗಾವ್‌, ಘೋಗಾವ್‌ಅವನ ವಶವಾದವು. ಇನ್ನೂ ಮುನ್ನುಗ್ಗಿದ. ಗೋಕಾಕ್‌, ದೊಡ್ಡವಾಡ, ಮುರವಾಡ, ಅಥಣಿ, ಹುಕ್ಕೇರಿ, ಕೆರೂರ್ – ಎಲ್ಲೆಲ್ಲೂ ಅವನಿಗೆ ವಿಜಯವೇ ವಿಜಯ.

ಅಲ್ಲಿದ್ದ ಸುಲ್ತಾನನ ಅಧಿಕಾರಿಗಳಿಂದ ದಂಡ ವಸೂಲು ಮಾಡಿದ. ಕೊನೆಗೆ ರಾಯಬಾಗ್‌ತಲುಪಿದ. ಆದಿಲಶಾಹಿಗೆ ಸೇರಿದ ಸಮೃದ್ಧ ವ್ಯಾಪಾರ ಕೇಂದ್ರ ಅದು. ಅದರ ರಕ್ಷಣೆಗಿದ್ದ ಸುಲ್ತಾನನ ಸೈನ್ಯ ನೆಲಸಮವಾಯಿತು. ನೇತಾಜಿಯನ್ನು ಎದುರಿಸಿದ ಖಾನರು, ರುಸ್ತುಮರೆಲ್ಲ ಧೂಳೀಪಟವಾದರು. ಆದರೆ, ಒಂದು ಮಸೀದಿಗೂ ಹಾನಿ ಆಗಲಿಲ್ಲ. ಒಬ್ಬ ಮಹಿಳೆಗೂ ಅಪಮಾನ ಆಗಲಿಲ್ಲ, ಕುರಾನಿನ ಒಂದು ಪ್ರತಿಯೂ ಸುಡಲಿಲ್ಲ.

ವಸಂತಗಡ, ಪಾವನಗಡ, ರಾಂಗಣಾ ಮುಂತಾದವು ಸ್ವರಾಜ್ಯಕ್ಕೆ ಸೇರದವು. ಒಂದು ಕಡೆ ಆಯಕಟ್ಟಿನ ನೆಲೆಯಾಗಿದ್ದ ಪ್ರಚಂಡ ಕೋಟೆ ಪನ್ನಾಳಗಡ ಬಿಜಾಪುರದ ಕೈಬಿಟ್ಟು ಹೋಯಿತು; ಇನ್ನೊಂದು ಕಡೆ ವ್ಯಾಪಾರ ಕೇಂದ್ರವಾಗಿದ್ದ ರಾಯಬಾಗಿನ ಸಂಪತ್ತು ಸೂರೆಯಾಯಿತು. ನೇತಾಜಿ ಎಲ್ಲಿ ಬಿಜಾಪುರಕ್ಕೇ ಮುತ್ತಿಗೆ ಹಾಕುವನೋ ಎಂಬ ಭೀತಿ ಕವಿಯಿತು. ಅಂಥ ಕಷ್ಟ ಕಾಲದಲ್ಲಿ ಸುಲ್ತಾನರ ಮಾನ ಉಳಿಸಲು ಯಾರು ಮುಂದೆ ಬರಲಿಲ್ಲ. ಕಡೆಗೆ ಸಿದ್ದಿ ಜೌಹಾರ್ ಎಂಬಾತ ಧೈರ್ಯ ಮಾಡಿದ. ಅವನು ಕರ್ನೂಲ್‌ಪ್ರಾಂತದ ಸುಬೇದಾರ; ಮಹಾಶೂರ. ಐವತ್ತು ಸಾವಿರಕ್ಕೂ ಮೀರಿದ ಸೇನೆ ಕೂಡಿಸಿಕೊಂಡು ಅವನು ಬಂದ. ಶಿವಾಜಿಯು ತಂಗಿದ್ದ ಪನ್ನಾಳಗಡಕ್ಕೆ ಬಲವಾದ ಮುತ್ತಿಗೆ ಹಾಕಿದ. ಏನೇ ಆಗಲಿ, ಶಿವಾಜಿಯನ್ನು ಹಿಡಿದೇ ತೀರುವೆನೆಂದು ಶಪಥ ಮಾಡಿದ.

ಬಿಜಾಪುರದ ಬಾಗಿಲಲ್ಲಿ

ಇತ್ತ ನೇತಾಜಿ ಬಿಜಾಪುರಕ್ಕೆ ಸೇರಿದ ಪ್ರದೇಶಗಳನ್ನೆಲ್ಲ ಧೂಳೆಬ್ಬಿಸುತ್ತಿದ್ದ. ಅಷ್ಟರಲ್ಲಿ ಪನ್ನಾಲದಲ್ಲಿ ಶಿವಾಜಿ ಬಿಗಿಮುತ್ತಿಗೆಗೆ ಸಿಕ್ಕಿದ್ದಾನೆಂದು ಅವನಿಗೆ ತಿಳಿಯಿತು. ನೇತಾಜಿಯ ಬಳಿ ಇದ್ದ ಸೈನಿಕರು ಕೇವಲ ಐದು ಸಾವಿರದಷ್ಟು. ಅಷ್ಟರಿಂದಲೇ ಸಿದ್ದಿ ಜೌಹರನ ಪ್ರಚಂಡ ಸೈನ್ಯವನ್ನು ಸೋಲಿಸುವುದು ಸಾಧ್ಯವಿರಲಿಲ್ಲ. ಅಕಸ್ಮಾತ್‌ಮುತ್ತಿಗೆ ಭೇದಿಸಿ ಒಳನುಗ್ಗಿದಲ್ಲಿ, ತಾನು ಸಹ ಸೈನ್ಯ ಸಮೇತ ಸಿಕ್ಕಿಹಾಕಿಕೊಳ್ಳುವ ಸಂಭವವಿತ್ತು. ಆದ್ದರಿಂದ ನೇತಾಜಿ ಬೇರೆ ತಂತ್ರ ಹೂಡಿದ. ಅವನು ನೇರವಾಗಿ ಬಿಜಾಪುರದತ್ತ ತನ್ನ ಸೈನ್ಯ ದೌಡಾಯಿಸಿದ. ಅವನ ಮನಸ್ಸಿನಲ್ಲಿ ಒಂದು ವಿಚಾರವಿತ್ತು. ಬಿಜಾಪುರ ಪಟ್ಟಣವನ್ನೆ ವಶಪಡಿಸಿಕೊಳ್ಳುವ ಬೆದರಿಕೆ ಹಾಕುವುದು, ಅದರಿಂದ ಪನ್ನಾಲದಲ್ಲಿ ಸಿದ್ದ ಜೌಹರನ ಮುತ್ತಿಗೆ ಸಡಿಲವಾಗುತ್ತದೆ ಎಂದು ಭಾವಿಸಿದ.

ನೇತಾಜಿ ಬರುತ್ತಿದ್ದಾನೆ ಎಂದು ಕೇಳಿ ಬಿಜಾಪುರದ ಸುಲ್ತಾನನಿಗೆ ನಡುಕ ಹುಟ್ಟಿತು. ಸಿದ್ದಿ ಜೌಹರನಿಗೆ ರಕ್ಷಿಸುವಂತೆ ಹೇಳಿಕಳಿಸಬೆಕು ಎಂದುಕೊಂಡ. ಅಷ್ಟರಲ್ಲೇ ಅಲ್ಲಿದ್ದ ಖವಾಸಖಾನನೆಂಬ ದಳಪತಿ ಧೈರ್ಯ ಹೇಳಿದ. ಕೋಟೆ ಬಾಗಿಲು ಮುಚ್ಚಿಸಿದ. ರಾಜಧಾನಿಯ ರಕ್ಷಣೆಗಾಗಿ ಮೀಸಲಾಗಿದ್ದ ಐದು ಸಾವಿರ ಸೈನಿಕರನ್ನು ಸುಸಜ್ಜಿತಗೊಳಿಸಿದ. ಬಿಜಾಪುರದ ಅಳಿವು ಉಳಿವಿನ ಪ್ರಶ್ನೆ ಎದುರಾಗಿತ್ತು. ಅದಕ್ಕಾಗಿ ಪ್ರಾಣಪಣದಿಂದ ಹೋರಾಡುವ ಸಿದ್ಧತೆ ನಡೆಯಿತು.

ನೇತಾಜಿ ಬಿಜಾಪುರ ಸಮೀಪಿಸಿದ. ಅವನ ಉತ್ಸಾಹ ಚಿಮ್ಮುತ್ತಿದ್ದರೂ ಅವನ ಸೈನ್ಯ ದಣಿದಿತ್ತು. ಬಿಜಾಪುರ ಬಡಪೆಟ್ಟಿಗೆ ಜಗ್ಗುವಂತಿರಲಿಲ್ಲ. ಆಹಾರ ಸಾಮಗ್ರಿಗಳಿಗೂ ಕೊರತೆ ಬಂತು. ಶತ್ರುವಿನ ಪ್ರದೇಶದಲ್ಲಿ ಹೆಚ್ಚು ಕಾಲ ನಿಲ್ಲುವುದು ಯೋಗ್ಯವಾಗಿ ಕಾಣಲಿಲ್ಲ. ಆದರೆ ಬಂದ ದಾರಿಗೆ ಸುಂಕ ಇಲ್ಲದಂತೆ ಹಿಂದಿರುವುದು ಹೇಗೆ? ಬಿಜಾಪುರದ ಪಕ್ಕದಲ್ಲಿದ್ದ ಶಹಾಪುರದ ಮೇಲೆ ನೇತಾಜಿಯ ಕಣ್ಣು ಬಿತ್ತು ಅವನ ಮೊದಲ ದಾಳಿಯ ರಭಸಕ್ಕೇ ಅಲ್ಲಿನ ಕಾವಲು ಸೇನೆ ತತ್ತರಿಸಿತು. ಅಲ್ಲಿದ್ದ ಒಟ್ಟು ಎರಡು ಸಾವಿರ ಸೈನಿಕರು ಸದ್ದಿಲ್ಲದೆ ಶರಣಾಗತರಾದರು. ಶಹಾಪುರ ಬಿಜಾಪುರದ ಉಪನಗರ; ಶ್ರೀಮಂತ ವಸತಿಯಿದ್ದ ಸಂಪತ್ತಿನ ಕೇಂದ್ರ. ನೇತಾಜಿ ಅಲ್ಲಿಂದಲೇ ತನ್ನ ಸೈನ್ಯದ ವೆಚ್ಚಗಳನ್ನೆಲ್ಲ ಸಂಪಾದಿಸಿದ. ಅನಂತರ ಆ ಊರನ್ನು ಭಸ್ಮಗೊಳಿಸಿದ.

ಕಿರುಕುಳ ಯುದ್ಧದ ವೈಖರಿ

ಅಷ್ಟರಲ್ಲಿ ಶಿವಾಜಿಯಿಂದ ರಹಸ್ಯ ಸೂಚನೆ ಬಂತು. ಅದರಂತೆ ಸ್ವರಾಜ್ಯದ ಗಡಿಯೊಳಕ್ಕೆ ನೇತಾಜಿ ಹಿಂದಿರುಗಿದ. ಪನ್ನಾಲಗಡ ಮುತ್ತಿದ್ದ ಸಿದ್ದ ಜೌಹರನ ಸೈನ್ಯದೊಡನೆ ಕಿರುಕುಳ ಯುದ್ಧ ಆರಂಭಿಸಿದ. ಅವನಿಗೆ ಸಿದ್ಧಿ ಹಿಲಾಲ, ಕಡತೋಜಿ ಗುಜರ್, ರಘೋ ಬಲ್ಲಾಳ್‌ಬೆಂಬಲ್‌ವಾದರು. ಆದರೆ ಜೌಹರ್ ಅವರಿಗೆ ದೂರದಲ್ಲೆ ತಡೆಹಾಕಲು ಬಲವಾದ ವ್ಯವಸ್ಥೆ ಮಾಡಿದ್ದ. ಒಂದು ಹೋರಾಟದಲ್ಲಿ ಸಿದ್ಧಿ ಹಿಲಾಲನ ಮಗ ಸತ್ತು ಬಿದ್ದ. ಅದರಿಂದ ನೇತಾಜಿಯ ಪ್ರಯತ್ನಗಳು ಫಲಿಸಲಿಲ್ಲ. ವಾಸೋಟಾ ಎಂಬ ಸಣ್ಣದೊಂದು ಕಿಲ್ಲೆ ಮಾತ್ರ ಅವನಿಗೆ ದಕ್ಕಿತು, ಅಷ್ಟೇ.

ಕೊನೆಗೆ ಶಿವಾಜಿ ಅದ್ಭುತ ತಂತ್ರದಿಂದ ಪನ್ನಾಲಗಡದಿಂದ ಪಾರಾದ. ಆ ಸಾಹಸದಲ್ಲಿ ಅವನಿಗೆ ನೆರವಾದ ವೀರ ಬಾಜಿಪ್ರಭು ದೇಶಪಾಂಡೆ, ಗಜಾಪುರದ ಕಣಿವೆಯಲ್ಲಿ ಬಾಜಿಪ್ರಭು ಶತ್ರುವನ್ನು ತಡೆಗಟ್ಟಿ ಹೋರಾಡುತ್ತಾ ಪ್ರಾಣ ಅರ್ಪಿಸಿದ.

ಶಿವಾಜಿ ಪನ್ನಾಳಗಡದಲ್ಲಿ ಸಿಕ್ಕಿಬಿದ್ದಿದ್ದಾಗಲೇ ಸ್ವರಾಜ್ಯಕ್ಕೆ ಇನ್ನೊಂದು ಭೀಕರ ವಿಪತ್ತು ಒದಗಿತ್ತು. ಔರಂಗಜೇಬನು ತನ್ನ ಸೋದರಮಾವ ಮತ್ತು ಖ್ಯಾತ ಸೇನಾಧಿಪತಿಯಾದ ಶಾಯಿಸ್ತೆಖಾನನನ್ನು ಸ್ವರಾಜ್ಯದ ನಾಶಕ್ಕೆ ಕಳುಹಿಸಿದ. ಶಾಯಿಸ್ತೆಖಾನನ ಸೇನೆಯ ಸಂಖ್ಯಾಬಲ ಸುಮಾರು ಒಂದು ಲಕ್ಷ. ಖಾನನು ಊರೂರುಗಳಿಗೆ ಬೆಂಕಿಯಿಟ್ಟು ಕೊಲೆ ಸುಲಿಗೆ ಮಾಡಿದ. ಚಾಲ್‌ಎಂಬಲ್ಲಿ ಹನ್ನೆರಡು ಸಾವಿರ ಮತ್ತು ರಹಮತ್‌ಪುರದಲ್ಲಿ ಎಂಟು ಸಾವಿರ ಸೈನಿಕರನ್ನು ಮೀಸಲು ಪಡೆಯಾಗಿ ಇಟ್ಟ. ತಾನು ಉಳಿದ ಸೈನ್ಯದೊಂದಿಗೆ ಪುಣೆ ವಶಪಡಿಸಿಕೊಂಡು ಅಲ್ಲಿನ ಲಾಲ್‌ಮಹಲಿನಲ್ಲಿ ತಂಗಿದ.

ಈಗ ನೇತಾಜಿಯ ದೃಷ್ಟಿ ಶಾಯಿಸ್ತೆಖಾನನ ಮೇಲೆ ಬಿತ್ತು. ಕಿರುಕುಳ ಯುದ್ಧಕ್ಕೆ ನೇತಾಜಿ ಎತ್ತಿದ ಕೈ. ಅವನು ಖಾನನ ಮೊಗಲ ಸೈನ್ಯದ ಮೆಲೆ ದಿನವೂ ದಾಳಿ ಮಾಡತೊಡಗಿದ. ಒಂದಲ್ಲ ಒಂದು ದಿಕ್ಕಿನಿಂದ ಶತ್ರುಗಳಿಗೆ ಪೆಟ್ಟು ಬೀಳುತ್ತಿತ್ತು. ನೇತಾಜಿ ಸರಬರಾಜಿನ ಮಾರ್ಗಗಳನ್ನು ತಡೆಗಟ್ಟಿದ. ಒಮ್ಮೆಯಂತೂ ಒಂದು ವೈರಿಪಾಳಯಕ್ಕೆ ಪ್ರಬಲವಾಗಿ ಎರಗಿದ. ರೊಚ್ಚಿಗೆದ್ದ ಆ ಸೈನ್ಯ ನೇತಾಜಿಯ ಬೆನ್ನಟ್ಟಿ ಮೈಲಿಗಟ್ಟಲೆ ಧಾವಿಸಿತು. ಅವನು ತನ್ನ ದಾಳಿಗೆ ಮೊದಲೇ ಎರಡು ಸಾವಿರ ಮರಾಠಾ ಸೈನಿಕರನ್ನು ಶತ್ರು ಶಿಬಿರದ ಬಳಿ ಮರೆಯಾಗಿ ನಿಲ್ಲಿಸಿದ್ದ. ಅವರು ಪಾಳಯಕ್ಕೆ ನುಗ್ಗಿ ಕಾವಲುಗಾರರನ್ನು ಕೊಂದರು. ಅಲ್ಲಿದ್ದ ಅಪಾರ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡರು. ನೇತಾಜಿಯನ್ನು ಬೆನ್ನಟ್ಟಿ ಹೋಗಿದ್ದ ಸೈನ್ಯಕ್ಕೆ ಅತ್ತ ಅವನಂತೂ ಸಿಕ್ಕಲಿಲ್ಲ, ಇತ್ತ ಶಿಬಿರವು ಪೂರ್ತಿಯಾಗಿ ಲೂಟಿಯಾಗಿತ್ತು.

೧೬೬೩ರ ಏಪ್ರಿಲ್‌ನಲ್ಲಿ ಒಂದು ಪ್ರಚಂಡ ಸಾಹಸ ನಡೆಯಿಸಿತು. ಒಂದು ರಾತ್ರಿ ನೇತಾಜಿ ಮೋರೋಪಂತ ಪಿಂಗಳೆಯೊಡನೆ ಸೈನ್ಯಸಮೇತ ಪುಣೆ ಬಳಿ ಹಾಜರಾದ. ಶಿವಾಜಿ ವೇಷ ಮರೆಸಿಕೊಂಡು ಕೆಲವು ಸಂಗಡಿಗರೊಡನೆ ಪುಣೆ ಪಟ್ಟಣದೊಳಗೆ ಪ್ರವೇಶಿಸಿದ. ಆಗ ಒಂದು ಲಕ್ಷ ಮೊಗಲ್‌ಸೈನ್ಯ ಪುಣೆ ಪಟ್ಟಣಕ್ಕೆ ಕಾವಲಿತ್ತು. ಆದರೆ ಶಿವಾಜಿ ಒಳಗೆ ಹೋದುದು ಯಾರಿಗೂ ಗೊತ್ತಾಗಲಿಲ್ಲ. ಶಿವಾಜಿಯ ಪಡೆ ರಹಸ್ಯವಾಗಿ ಲಾಲ್‌ಮಹಲಿಗೆ ನುಗ್ಗಿತು. ಶಿವಾಜಿ ಶಾಯಿಸ್ತೆಖಾನನ ಅಂತಃಪುರಕ್ಕೆ ನುಗ್ಗಿ ಅವನ ಮೂರು ಬೆರಳು ಕತ್ತರಿಸಿ ಹಾಕಿದ. ಖಾನನ ಅದೃಷ್ಟದಿಂದ ಅವನ ಕೊರಳು ಶಿವಾಜಿಯ ಕಡ್ಗಕ್ಕೆ ಸಿಕ್ಕಲಿಲ್ಲ. ಪುಣೆ ನಗರದ ತುಂಬ ದೊಡ್ಡ ಕೋಲಾಹಲ ಎದ್ದಿತು. ಆ ಗಲಭೆಯ ನಡುವೆ ನುಸುಳಿಕೊಂಡು ಶಿವಾಜಿ ಊರಿನಿಂದ ಹೊರಗೆ ಬಂದ. ಅಲ್ಲಿ ಕಾದಿದ್ದ ನೇತಾಜಿ ಶಿವಾಜಿಯನ್ನು ಮಿಂಚಿನ ವೇಗದಲ್ಲಿ ರಾಜಗಡಕ್ಕೆ ಕರೆದುಕೊಂಡು ಹೋದ. ಈ ಎಲ್ಲ ಕಿರುಕುಳಗಳಿಂದ ಶಾಯಿಸ್ತೆಖಾನನನ್ನು ಶಿವಾಜಿಯ ಭಯ ಕಾಡತೊಡಗಿತು. ಅವನಿಗೆ ಆಹಾರ, ನಿದ್ರೆಯೂ ಬೇಡವಾಯಿತು. ಹೆದರಿ ಕಂಗಾಲಾಗಿ ಅವನು ಸೈನ್ಯ ಸಮೇತ ಔರಂಗಾಬಾದಿಗೆ ಹೊರಟುಬಿಟ್ಟ.

ಬಾಕಿ ವಸೂಲಿ!

ಶಿವಾಜಿಯೂ ನೇತಾಜಿಯೂ ಈಗ ಒಂದು ಹೊಸ ಯೋಜನೆ ಹಾಕಿದರು. ಸ್ವರಾಜ್ಯಕ್ಕೆ ಶಾಯಿಸ್ತೆಖಾನನು ಅಪಾರ ಧನಹಾನಿ ಮಾಡಿದ್ದ. ಅದನ್ನು ಒಂದಕ್ಕೆ ಹತ್ತಾಗಿ ವಸೂಲು ಮಾಡಬೇಕಲ್ಲ? ಎಂಟು ಸಾವಿರ ಕುದುರೆ ಸವಾರರೊಡನೆ ರಾಜಗಡದಿಂದ ಹೊರಟರು. ಎಲ್ಲಿಗೆ? ಮುನ್ನೂರು ಮೈಲಿಗಳಾಚೆ ಮೊಗಲ್‌ರಾಜ್ಯದಲ್ಲಿದ್ದ ಸೂರತ್ತಿಗೆ, ಏಕೆ? ಆಗ ಸೂರತ್‌ಬಹಳ ಸಮೃದ್ಧವಾದ ಪಟ್ಟಣ ಆಗಿತ್ತು. ಅದಕ್ಕೆ! ಬಹಿರಜಿ ನಾಯಕ್‌ಎಂಬ ಶಿವಾಜಿಯ ಗೂಢಚಾರ ಅಲ್ಲಿನ ವಿವರ ತಿಳಿದುಬಂದಿದ್ದ. ಯಾರಯಾರ ಬಳಿ ಎಷ್ಟೆಷ್ಟು ಹಣ ಇದೆ ಎಂಬುದೆಲ್ಲ ಅವನಿಗೆ ತಿಳಿದಿತ್ತು. ಶಿವಾಜಿಯ ಸೈನ್ಯ ಭರದಿಂದ ಹೋಗಿ ಸೂರತ್ತಿನ ಹೊರಭಾಗದಲ್ಲಿ ಠಾಣೆ ಹೂಡಿತು. ದೇಶ ವಿದೇಶಗಳ ವ್ಯಾಪಾರ ಕೇಂದ್ರ ಆ ಊರು. ನೇತಾಜಿ ಅಲ್ಲಿನ ಅಪಾರ ಸಂಪತ್ತು ವಶಪಡಿಸಿಕೊಂಡು ಶಿವಾಜಿಗೆ ಅರ್ಪಿಸಿದ. ಮೂರು ಸಾವಿರ ಗಂಟುಮೂಟೆಗಳ ಸಹಿತ ಇಡೀ ಸೈನ್ಯ ಸ್ವರಾಜ್ಯ ತಲುಪಿತು.

ದಿಲ್ಲಿಯ ಔರಂಗಜೇಬನಿಗೆ ಧನಹಾನಿ, ಮಾನಹಾನಿ ಎರಡೂ ಆಗಿದ್ದವು. ಇನ್ನು ಅವನಿಗೆ ಸಹಿಸಲಾಗಲಿಲ್ಲ. ಶಿವಾಜಿಯ ಹುಟ್ಟಡಗಿಸಲು ದೃಢ ನಿರ್ಧಾರ ಕೈಗೊಂಡ. ಅದಕ್ಕಾಗಿ ತನ್ನ ಸೇನಾಧಿಪತಿ ಮಿರ್ಝಾರಾಜ ಜಯಸಿಂಹನನ್ನು ನೇಮಿಸಿದ, ಜಯಸಿಂಹನು ಬಹು ಪರಾಕ್ರಮಿ. ದಕ್ಷತೆ, ಬುದ್ಧಿವಂತಿಕೆ, ಅನುಭವ ಎಲ್ಲ ಅವನಿಗಿತ್ತು. ಎಂಬತ್ತು ಸಾವಿರ ಸವಾರರೊಂದಿಗೆ ದಿಲ್ಲಿಯಿಂದ ಅವನು ಬಂದ. ಒಂದೊಂದಾಗಿ ಸ್ವರಾಜ್ಯದ ಕೋಟೆಗಳನ್ನು ವಶಪಡಿಸಿಕೊಳ್ಳತೊಡಗಿದ. ಅವನನ್ನು ಬಹಿರಂಗ ಯುದ್ಧದಲ್ಲಿ ಎದುರಿಸುವುದು ಅಸಾಧ್ಯವಾಯಿತು. ಶಿವಾಜಿ ಸ್ವರಾಜ್ಯದ ಹಿತದೃಷ್ಟಿಯಿಂದ ಸಂಧಿಗೆ ಒಪ್ಪಿದ. ಅಷ್ಟರಲ್ಲಿ ಜಯಸಿಂಹನು ಬಿಜಾಪುರವನ್ನೂ ಗೆಲ್ಲಲು ಹಂಚಿಕೆ ಹೂಡಿದ. ಶಿವಾಜಿಯೂ ನೇತಾಜಿಯೂ ತನ್ನ ಸಹಾಯಕ್ಕೆ ಬರಬೇಕೆಂದು ಆಜ್ಞೆ ಮಾಡಿದ. ಅದರಿಂದ ಸ್ವಾಭಿಮಾನಿಯಾದ ನೇತಾಜಿಯ ಸಿಟ್ಟು ನೆತ್ತಿಗೇರಿತು. ನೇರವಾಗಿ ಶಿವಾಜಿಯ ಬಳಿಗೆ ಹೋದ. “ಮಹಾರಾಜರೆ, ಏನಿದು?” ಎಂದು ಹೂಂಕರಿಸಿದ.

ಶಿವಾಜಿ ಶಾಂತವಾಗಿ ಹೇಳಿದ: “ಸರಸೇನಾಪತಿ! ನಿನ್ನ ಮನಸ್ಸಿನ ಭಾವನೆ ನನಗೆ ಗೊತ್ತು. ಆದರೆ ಈಗ ಪರಿಸ್ಥಿತಿ ಬಹಳ ನಾಜೂಕಾಗಿದೆ. ಆದ್ದರಿಂದ ನಾವು ಎಚ್ಚರದಿಂದ ನಡೆದುಕೊಳ್ಳಬೇಕು. ದೊಡ್ಡ ಕಾರ್ಯ ಸಾಧಿಸುವುದಕ್ಕಾಗಿ ಸದ್ಯಕ್ಕೆ ಸಣ್ಣ ಸೋಲು ಒಪ್ಪಿಕೊಳ್ಳಬೇಕು. ಇದು ಕೇವಲ ನಮಗಾಗಿ ಅಲ್ಲ, ಸ್ವರಾಜ್ಯವನ್ನು ಉಳಿಸಿಕೊಳ್ಳುವದಕ್ಕಾಗಿ.”

“ನಾನು ಇದುವರೆಗೆ ಸೇವೆ ಮಾಡಿದ್ದು ಒಬ್ಬ ಮಹಾರಾಜರಿಗೆ. ಆಜ್ಞೆ ಪಾಲಿಸಿದ್ದು ಒಬ್ಬ ರಾಜರದೇ, ಅಂದರೆ ನಿಮ್ಮದು. ಇನ್ನು ಯಾರಿಗೂ ನಾನು ತಲೆಬಾಗುವವನಲ್ಲ.”

:”ಹಾಗಾದರೆ ಈಗಲೂ ನಾನೇ ಹೇಳುತ್ತೇನೆ. ಜಯಸಿಂಹನ ಕಡೆ ಸೇರಿ ನಾವು ಯುದ್ಧ ಮಾಡಲೇಬೇಕು.”

ಉದ್ಧಟ ವೀರ

ನೇತಾಜಿ ಇನ್ನಷ್ಟು ಕೆರಳಿದ. ಅವನಿಗೆ ಮಹಾರಾಜನ ದೂರದೃಷ್ಟಿ. ಸೂಕ್ಷ್ಮ ಯೋಜನೆಗಳು ಅರಿವಾಗಲಿಲ್ಲ. ಅವರ ಮೇಲೆ, ಸ್ವತಃ ತನ್ನ ಮೇಲೆ, ಇಡೀ ಜಗತ್ತಿನ ಮೇಲೆ ಸಿಟ್ಟು ಬಂತು. ಏನೂ ಮಾತನಾಡದೆ ತಟ್ಟನೆ ಹೊರಟುಬಿಟ್ಟ. ಹುಚ್ಚು ಆವೇಶದಿಂದ ಸೈನ್ಯ ತೆಗೆದುಕೊಂಡು ಹೊರಟ. ಮೂರೇ ದಿನಗಳಲ್ಲಿ ಪಲಟಣದ ಕೋಟೆ ಗೆದ್ದ. ಆಮೇಲೆ ಜಯಸಿಂಹನ ಆಜ್ಞೆಯಂತೆ ಮಂಗಳವೇಡವನ್ನೂ ವಶಪಡಿಸಿಕೊಂಡ.

 

"ಇನ್ನು ಯಾರಿಗೂ ನಾನು ತಲೆ ಬಾಗುವವನಲ್ಲ"

ಅ ವೇಳೆಗೆ ಪನ್ನಾಳಗಡ ಶಿವಾಜಿಯ ಕೈಸೇರಿತ್ತು. ಅದನ್ನು ಗೆಲ್ಲಲು ಜಯಸಿಂಹನು ಶಿವಾಜಿಗೂ ನೇತಾಜಿಗೂ ಆಜ್ಞೆ ಕೊಟ್ಟ. ಶಿವಾಜಿಯೇನೋ ಸೈನ್ಯ ಸಮೇತ ಹೋಗಿ ಪನ್ನಾಳಗಡದ ಮೇಲೆ ದಾಳಿ ಆರಂಭಿಸಿದ. ಆದರೆ ಏನಾಶ್ಚರ್ಯ! ಎಷ್ಟು ಹೊತ್ತಾದರೂ ನೇತಾಜಿ ಬರಲೇ ಇಲ್ಲ. ಆ ಯುದ್ಧದಲ್ಲಿ ಶಿವಾಜಿಗೆ ಸೋಲೊದಗಿತು. ಸ್ವರಾಜ್ಯದ ಸರಸೇನಾಪತಿಯೇ ಅಕ್ಷಮ್ಯ ಶಿಸ್ತುಭಂಗ ಮಾಡಿದ್ದ! ಎಷ್ಟೇ ಆಪ್ತನಾದರೂ ಏನಂತೆ? ಶಿವಾಜಿ ನೇತಾಜಿಯನ್ನು ಕೂಡಲೇ ಸರಸೇನಾಪತಿ ಪದವಿಯಿಂದ ತೆಗೆದುಹಾಕಿದ. ಪ್ರತಾಪರಾವ್‌ಗುಜರ್‌ನನ್ನು ಆ ಸ್ಥಾನಕ್ಕೆ ನೇಮಿಸಿದ.

ನೇತಾಜಿ ಪತ್ತೆಯೇ ಇಲ್ಲ. ಎಲ್ಲಿ ಹೋದ ಎಂಬುದು ಯಾರಿಗೂ ತಿಳಿಯದು. ಒಂದು ದಿನ ಇದ್ದಕ್ಕಿದ್ದಂತೆ ಶಿವಾಜಿಗೆ ಒಂದುಪತ್ರ ಬಂತು. ಬೇಹಿನವರ ವರದಿ ಅದು. ಶಿವಾಜಿ ಅದನ್ನು ಬಿಚ್ಚಿ ಓದತೊಡಗಿದ. ಮುಖ ಗಂಭೀರವಾಯಿತು. ಪತ್ರವನ್ನು ನೆಟ್ಟ ದೃಷ್ಟಿಯಿಂದ ನೋಡುತ್ತಲೇ ಇದ್ದ. ಕಣ್ಣಿಂದ ಎರಡು ಹನಿ ನೀರು ತೊಟ್ಟಕ್ಕಿತು.

ಮಹಾರಾಜರ ಕಣ್ಣಲ್ಲಿ ನೀರು!
ಆ ಧೀರಾಧಿಧೀರನಿಗೆ ದುಃಖ!

ಸುತ್ತ ಇದ್ದ ಸರದಾರರಿಗೆಲ್ಲ ಸೋಜಿಗ. ಏನೋ ದೊಡ್ಡ ಅನಾಹುತ ಆಗಿರಬೇಕೆಂದು ಗಾಬರಿಗೊಂಡರು.

“ಪೇಶ್ವೆ!”ಎಂದು ಶಿವಾಜಿ ಕರೆದ.

“ಆಜ್ಞೆ ತಿಳಿಸಿ” ಎನ್ನುತ್ತಾ ಮೊರೋಪಂತರು ಹತ್ತಿರ ಬಂದು ನಿಂತರು.

ಶಿವಾಜಿಯ ಕಣ್ಣಿನ ತೇವ ಆರಿಹೋಯಿತು.

ಗಂಭೀರ ಸ್ವರದಲ್ಲಿ ಹೇಳಿದ: “ಸಮಸ್ತ ಕಿಲ್ಲೇದಾರರಿಗೂ ಠಾಣೆದಾರರಿಗೂ ಆಜ್ಞೆ ಕಳುಹಿಸಿ, ನೇತಾಜಿ ಪಾಲಕರನ್ನು ಇಂದಿನಿಂದ ಸ್ವರಾಜ್ಯದ ಶತ್ರುವೆಂದು ಪರಿಗಣಿಸಬೇಕು.”

ಇಷ್ಟು ಹೇಳಿ ಶಿವಾಜಿ ಮೌನ ತಾಳಿದ. ಆಮೇಲೆ ಒಮ್ಮೆಯೂ ನೇತಾಜಿಯ ಹೆಸರೆತ್ತಲಿಲ್ಲ. ಶಿವಾಜಿಗೆ ಬಂದ ವರದಿಯಲ್ಲಿದ್ದ ವಿಚಾರ: “ನೇತಾಜಿ ಪಾಲಕರ್ ಬಿಜಾಪುರದ ಕಡೆ ಸೇರಿಕೊಂಡಿದ್ದಾನೆ.

ಪತನದ ಹಾದಿ

ಶಿವಾಜಿ ಮತ್ತು ನೇತಾಜಿ -ಅದ್ವಿತೀಯ ಜೋಡಿ! “ದ್ವಿತೀಯ ಶಿವಾಜಿ” ಎಂದೇ ನೇತಾಜಿ ಖ್ಯಾತಿ ಪಡೆದಿದ್ದ. ರಾಮ ಲಕ್ಷ್ಮಣರಂತೆ ಸದಾ ಒಂದುಗೂಡಿ ಇದ್ದವರು ಅವರು. ಆದರೆ ನೇತಾಜಿ ಸ್ವಲ್ಪ ವಿವೇಕ ತಪ್ಪಿದ್ದಕ್ಕೆ ಎಂಥ ಅನಾಹುತ ಆಯಿತು! ಶಿವಾಜಿಯ ಬಾಲ್ಯ ಕಾಲದ ಸ್ನೇಹಸರಸ, ಅನಂತರದ ಆದರಾಭಿಮಾನ, ಜೀಜಾಮಾತೆಯ ಪ್ರೀತಿ, ತುಳಜಾಭವಾನಿಯ ಬಗ್ಗೆ ಭಕ್ತಿ ಎಲ್ಲವನ್ನೂ ಅವನು ಮರೆತುಹೋದ. ರೋಹಿರೇಶ್ವರ ಲಿಂಗದ ಮೇಲೆ ಬಲಹಸ್ತ ಇಟ್ಟು ತಾವೆಲ್ಲರೂ ಮಾಡಿದ ವೀರ ಪ್ರತಿಜ್ಞೆಯನ್ನು ಮರೆತುಬಿಟ್ಟ. ಶಿವಾಜಿಯನ್ನು ಬಿಟ್ಟು ಇನ್ನಾರಿಗೂ ತಲೆ ತಗ್ಗಿಸುವುದಿಲ್ಲವೆಂದು ಹೇಳುತ್ತಿದ್ದವನು ಈಗ ಬಿಜಾಪುರಕ್ಕೆ ಹೋಗಿ ಸುಲ್ತಾನನಿಗೆ ಸೊಂಟ ಬಗ್ಗಿಸಿ ಸಲಾಮು ಹೊಡೆದ.

“ಶಹಬಾಸ್‌ಬಹಾದ್ದೂರ್‌! ಈ ದರಬಾರಿನಲ್ಲಿ ನಿನಗೆ ಗೌರವದ ಸ್ಥಾನ ಕೊಡುತ್ತೇವೆ. ಖುದಾ ನಿನಗೆ ಒಳ್ಳೆಯದನ್ನು ಮಾಡಲಿ” ಎಂದ ಸುಲ್ತಾನ.

ನೇತಾಜಿ ಬಿಜಾಪುರದ ಸರದಾರನಾದ. ಅವನಿಗೆ ಬಿಜಾಪುರ ರಾಜ್ಯದ ಗಡಿಯಲ್ಲಿ ದೊಡ್ಡ ಜಹಗೀರ ಸಿಕ್ಕಿತು. ಅದರ ಆದಾಯ ವರ್ಷಕ್ಕೆ ಮೂರು ಲಕ್ಷ ಹೊನ್ನು. ಈಗ ನೇತಾಜಿ ಮೊಗಲರ ವಿರದ್ಧ ಭೀಕರವಾಗಿ ಹೋರಾಡಲು ಆರಂಭಿಸಿದ. ಅವನನ್ನು ಯುದ್ಧದಲ್ಲಿ ಗೆಲ್ಲುವುದು ಜಯಸಿಂಹನಿಗೂ ಅವನ ಜೊತೆಯಲ್ಲಿದ್ದ ದಿಲೇರಖಾನನಿಗೂ ಅಸಾಧ್ಯವಾಯಿತು.

ಅತ್ತ ಜಯಸಿಂಹ ಶಿವಾಜಿಯನ್ನು ಔರಂಗಜೇಬನ ಭೇಟಿಗೆ ಒಪ್ಪಿಸಿದ. ಆಗ್ರಾಕ್ಕೆ ಕಳುಹಿಸಿದ. ಒಂದು ದೊಡ್ಡ ಕಂಟಕ ಕಳೆಯಿತೆಂದು ನಿಟ್ಟುಸಿರು ಬಿಟ್ಟ. ಇತ್ತ ಸ್ವಪ್ರತಿಷ್ಠೆಯಲ್ಲಿ ತೇಲುತ್ತಿದ್ದ ನೇತಾಜಿಗೆ ಬಿಜಾಪುರದ ಸುಲ್ತಾನನ ಸೇವೆಯೂ ಸರಿಯಾಗಿ ಒಗ್ಗಲಿಲ್ಲ. ಜಾಣಾಕ್ಷನಾದ ಜಯಸಿಂಹನಿಗೆ ಇದು ಗೊತ್ತಾಯಿತು. ಅವನು ತನ್ನ ಕಡೆಗೆ ಬರುವಂತೆ ನೇತಾಜಿಗೆ ಗುಟ್ಟಾಗಿ ಪತ್ರ ಬರೆದ. ಇನ್ನೂ ಹೆಚ್ಚಿನ ಸ್ಥಾನಮಾನ ಕೊಡುವುದಾಗಿ ಪುಸಲಾಯಿಸಿದ. ಸರಿ, ಇದ್ದಕ್ಕಿದ್ದಂತೆ ನೇತಾಜಿ ಮೊಗಲರ ಕಡೆ ಹೋಗಿ ಸೇರಿಕೊಂಡ. ಒಮ್ಮೆ ಸ್ವಲ್ಪ ಕಾಲುಜಾರಿದರೂ ಸರಿಯೆ, ಪೂರಾ ಪತನಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ನೇತಾಜಿಯ ವಿಷಯದಲ್ಲಿ ಈ ಮಾತು ನಿಜವಾಯಿತು.

ಔರಂಗಜೇಬನ ದರಬಾರಿನಲ್ಲಿ ಶಿವಾಜಿಗೆ ಯೋಗ್ಯ ಗೌರವ ಸಿಕ್ಕಲಿಲ್ಲ. ಅದನ್ನು ಪ್ರತಿಭಟಿಸಿ ಶಿವಾಜಿ ಸಭಾತ್ಯಾಗ ಮಾಡಿದ. ಆಗ ಅವನನ್ನು ಔರಂಗಜೇಬನು ಸೆರೆಯಲ್ಲಿಟ್ಟ. ಸೆರೆಯಲ್ಲಿದ್ದ ಶಿವಾಜಿಯನ್ನು ಕೊಲ್ಲಬೇಕೆಂದು ಹಂಚಿಕೆ ಹಾಕುತ್ತಿದ್ದ. ಅದು ತಿಳಿದು ಶಿವಾಜಿ ಉಪಾಯ ಹೂಡಿ ತಪ್ಪಿಸಿಕೊಂಡ. ಚತುರ ಔರಂಗಜೇಬನಿಗೆ ಚಳ್ಳೆಹಣ್ಣು ತಿನ್ನಿಸಿ ಮಾಯವಾದ. ಅದರಿಂದ ಔರಂಗಜೇಬ ಕೆರಳಿ ಕೆಂಡವಾದ, ಆದರೆ ಏನು ತಾನೆ ಮಾಡಬಲ್ಲ? ಅವನಿಗೆ ಕೂಡಲೇ ತನ್ನ ಸೈನ್ಯಕ್ಕೆ ಸೇರಿದ್ದ ನೇತಾಜಿಯ ನೆನಪಾಯಿತು. ಗಾಬರಿಯೂ ಆಯಿತು. ನೇತಾಜಿಯೂ ಶಿವಾಜಿಯ ಹಾಗೆ ಮೋಸಮಾಡಿದರೆ? ಅತ್ತೆಯ ಮೇಲಿನ ಕೋಪ ಕತ್ತಿಯ ಮೇಲೆ ಎಂಬಂತೆ ಶಿವಾಜಿಯ ಮೇಲಿನ ಕೋಪ ನೇತಾಜಿಯ ಮೇಲೆ ತಿರುಗಿತು. ಒಡನೆಯೇ ನೇತಾಜಿಯನ್ನು ಬಂಧಿಸಿ ಎಳೆದು ತರುವಂತೆ ದಕ್ಷಿಣದಲ್ಲಿದ್ದ ದಿಲೇರಖಾನನಿಗೆ ತುರ್ತು ಆಜ್ಞೆ ಕಳುಹಿಸಿದ.

ಮಹಮ್ಮದ್‌ಕುಲೀಖಾನ್

ಮೊಗಲ್‌ಸರದಾರ ನೇತಾಜಿ ಒಂದು ರಾತ್ರಿ ತನ್ನ ಗುಡಾರದಲ್ಲಿ ನಿಶ್ಚಿಂತೆಯಾಗಿ ಮಲಗಿದ್ದ. ಆಗ ಇದ್ದಕ್ಕಿದ್ದಂತೆ ದಿಲೇರಖಾನನ ಪಠಾಣ ಸೈನಿಕರು ಒಳನುಗ್ಗಿದರು. ನೇತಾಜಿಯ ಕೈಕಾಲು ಕಟ್ಟಿ ಬೇಡಿ ತೊಡಿಸಿದರು. ಎಂಥ ದುರವಸ್ಥೆ! ಅತ್ತ ಶಿವಾಜಿ ಬಂಧನದಿಂದ ಬಿಡಿಸಿಕೊಂಡು ಉತ್ತರದಿಂದ ದಕ್ಷಿಣಕ್ಕೆ ಬರುತ್ತಿದ್ದರೆ, ಇತ್ತ ನೇತಾಜಿ ಬಂಧನಕ್ಕೆ ಸಿಲುಕಿ ದಕ್ಷಿಣದಿಂದ ಉತ್ತರಕ್ಕೆ ಹೋಗುತ್ತಿದ್ದ! ನೇತಾಜಿಗೆ ಔರಂಗಜೇಬನು ಚಿತ್ರಹಿಂಸೆ ಕೊಟ್ಟ. ಅವನನ್ನು ಇಸ್ಲಾಮಿಗೆ ಮತಾಂತರ ಮಾಡಿ ಮಹಮ್ಮದ್‌ಕುಲೀಖಾನ್‌ಎಂದು ಹೆಸರಿಟ್ಟ. ನೇತಾಜಿಯ ಹೆಂಡತಿ ಮಕ್ಕಳನ್ನು ಹಿಡಿದು ತರಿಸಿ ಅವರನ್ನೂ ಇಸ್ಲಾಮಿಗೆ ಸೇರಿಸಿಬಿಟ್ಟ.

ಪಟ್ಟಾಭಿಷೇಕದಲ್ಲಿ ಕಣ್ಣೀರು

ಆಗ್ರಾದಿಂದ ಮಾಯವಾದ ಶಿವಾಜಿ ಬೈರಾಗಿಯ ವೇಷ ಧರಿಸಿದ. ರಹಸ್ಯವಾಗಿ ಯಾತ್ರೆ ಮಾಡುತ್ತಾ ಸ್ವರಾಜ್ಯಕ್ಕೆ ಬಂದು ಸೇರಿದ. ಅವನು ಮೊದಲು ಹೋದದ್ದು ರಾಜಗಡಕ್ಕೆ. ಅಲ್ಲಿ ತನಗಾಗಿ ಕೊರಗುತ್ತಿದ್ದ ತಾಯಿ ಜೀಜಾಬಾಯಿಯ ಬಳಿಗೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿದ. ತಮ್ಮ ರಾಜ ಬಂದದ್ದು ತಿಳಿದು ಪ್ರಜೆಗಳಿಗೆಲ್ಲ ಆನಂದವೋ ಆನಂದ. ಶಿವಾಜಿ ಪುನಃ ಸೈನ್ಯವನ್ನು ಸಜ್ಜುಗೊಳಿಸಿ ಮೊಗಲರನ್ನು ಹೊಡೆದೋಡಿಸಿದ. ಬಳಿಕ ಬಿಜಾಪುರ ಸೇನೆಯನ್ನು ಸೋಲಿಸಿ ಮೂಲೆಗೆ ಕೂರಿಸಿದ. ೧೬೭೪ರಲ್ಲಿ ರಾಯಗಡದಲ್ಲಿ ಶಿವಾಜಿಯ ಪಟ್ಟಾಭಿಷೇಕ ವೈಭವದಿಂದ ನೆರವೇರಿತು. ಆ ಶುಭ ಸಂದರ್ಭದಲ್ಲಿ ಸ್ವರಾಜ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರರೆಲ್ಲರನ್ನು ಶಿವಾಜಿ ಜ್ಞಾಪಿಸಿಕೊಂಡ: ಅವರೆಲ್ಲರಿಗೂ ಮನಸ್ಸಿನಲ್ಲೆ ಕೃತಜ್ಞತೆ ಅರ್ಪಿಸಿದ. ನೇತಾಜಿಯ ನೆನಪು ಸಹ ಆಯಿತು; ತುಂಬ ದುಃಖವಾಯಿತು.

ಕುಲೀಖಾನ್‌ಶಿವಾಜಿಯ ವಿರುದ್ಧ

ಅತ್ತ ಮಹಮ್ಮದ್ ಕುಲೀಖಾನನ ಕಥೆ ಏನಾಯಿತು ನೋಡೋಣ. ಅವನನ್ನು ಹಿಂದುಸ್ಥಾನದಲ್ಲಿ ಇಟ್ಟುಕೊಂಡರೆ, ಪುನಃ ಹಳೆಯ ಹಿಂದುತ್ವದ ಘಾಟು ಹೊಡೆದು, ಅವನ ಮನಸ್ಸು ಬದಲಾಗಬಹುದು. ಅದ್ದರಿಂದ ಅವನನ್ನು ದೇಶಾಂತರ ಕಳುಹಿಸಬೇಕೆಂದು ಔರಂಗಜೇಬ್‌ನಿರ್ಧರಿಸಿದ. ಅಫ್‌ಘಾನಿಸ್ತಾನದಲ್ಲಿ ಯುದ್ಧ ಮಾಡಲು ಒಂದು ದೊಡ್ಡ ಮೊಗಲ್‌ಸೈನ್ಯ ಹೊರಟಿತ್ತು. ಅದರಲ್ಲೇ ದೊಡ್ಡ ಅಧಿಕಾರ ಕೊಟ್ಟು ಕಲೀಖಾನನನ್ನೂ ಆಫ್‌ಘಾನಿಸ್ತಾನಕ್ಕೆ ಔರಂಗಜೇಬ್‌ಸಾಗಿಹಾಕಿದ. ಅಲ್ಲಿ ಕುಲೀಖಾನ್‌ಕಾಬೂಲ್‌, ಕಂದಹಾರ್ ಮುಂತಾದ ಕಡೆಗಳಲ್ಲಿ ತನ್ನ ಪರಾಕ್ರಮ ತೋರಿಸುತ್ತಾ ಮೆರೆದ. ಹೀಗೆ ಏಳೆಂಟು ವರ್ಷಗಳು ಕಳೆದವು.

ಇತ್ತ ದಕ್ಷಿಣ ಭಾರತದಲ್ಲಿ ಶಿವಾಜಿಯ ಪ್ರಾಬಲ್ಯ ಅಗಾಧವಾಗಿ ಬೆಳೆಯಿತು. ಅವನನ್ನು ಹೇಗೆ ಹಿಮ್ಮೆಟಿಸಬೇಕೆಂಬುದು ತಿಳಿಯದೆ ಔರಂಗಜೇಬ್‌ಪೇಚಾಡುತ್ತಿದ್ದ. ಆಗ ಅವನಿಗೆ ತಟ್ಟನೆ ಒಂದು ಉಪಾಯ ಹೊಳೆಯಿತು. ಶಿವಾಜಿಗೆ ಸರಿಸಮನಾದ ಪರಾಕ್ರಮಿ ಎಂದರೆ ಮಹಮ್ಮದ್‌ಕುಲೀಖಾನ್‌. ಅವನಿಗೆ ಶಿವಾಜಿಯ ರಾಜ್ಯದ ರಹಸ್ಯಗಳೆಲ್ಲ ಚೆನ್ನಾಗಿ ಗೊತ್ತು. ಈಗ ಅವನು ಪಕ್ಕಾ ಮುಸಲ್ಮಾನನಾಗಿದ್ದಾನೆ. ಅದ್ದರಿಂದ ದಕ್ಷಿಣದ ರಣರಂಗಕ್ಕೆ ಅವನನ್ನೇ ಕಳುಹಿಸುವುದು ಯೋಗ್ಯ. ಹೀಗೆ ಆಲೋಚಿಸಿದ ಮೊಗಲ್‌ದೊರೆ. ಕುಲೀಖಾನನನ್ನು ಕಾಬೂಲಿನಿಂದ ವಾಪಸು ಕರೆಸಿದ. ಈಗ ದಿಲೇರಖಾನನನ್ನೂ ಕುಲೀಖಾನನ್ನೂ ಒಟ್ಟಾಗಿ ಸೈನ್ಯ ಸಮೇತ ದಕ್ಷಿಣಕ್ಕೆ ಕಳುಹಿಸಿಕೊಟ್ಟ. ಶಿವಾಜಿಯನ್ನು ಪೂರ್ತಿ ಮಟ್ಟಹಾಕಿ ಬನ್ನಿ ಎಂದು ಹರಸಿ ಬೀಳ್ಕೊಟ್ಟ.

ಮಹಮ್ಮದ್‌ಕುಲೀಖಾನ್‌ಸ್ವರಾಜ್ಯದ ಮೇಲೆ ದಂಡೆತ್ತಿ ಬರುತ್ತಿದ್ದಾನೆಂಬ ವಾರ್ತೆ ಶಿವಾಜಿಗೆ ಮುಟ್ಟಿತು. ಬಾಲ್ಯದ ಗೆಳೆಯ, ಯೌವನದ ನಿಕಟ ಸಹಕಾರಿ, ಸ್ವರಾಜ್ಯದ ಹಿಂದಿನ ಸರಸೇನಾಪತಿಯೇ ಈಗ ಶತ್ರುವಾಗಿ ಬರುತ್ತಿದ್ದಾನೆ! “ನೇತಾಜಿಯನ್ನು ಸ್ವರಾಜ್ಯದ ಶತ್ರುವೆಂದು ಪರಿಗಣಿಸಬೇಕು” ಎಂಬ ಶಿವಾಜಿಯ ನಿರ್ಧಾರ ಅಚಲವಾಗಿತ್ತು.

ಪುನರ್ಜನ್ಮ

ಇದ್ದಕ್ಕಿದ್ದಂತೆ ರಾಯಗಡಕ್ಕೆ ಒಂದು ದಿನ ಒಬ್ಬ ಹೊಸಬ ಬಂದ. ಕಾವಲುಗಾರರು ಅವನನ್ನು ಎಳೆದುಕೊಂಡು ಹೋಗಿ ಶಿವಾಜಿ ಮಹಾರಾಜರ ಎದುರು ನಿಲ್ಲಿಸಿದರು. ಆ ಹೊಸಬ ಶಿವಾಜಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ.

“ಮಹಾಪ್ರಭು, ಕ್ಷಮಿಸಬೇಕು” ಎಂದು ಅಂಗಲಾಚಿದ.

“ನಾನು ….. ನಾನು ಕುಲೀಖಾನ್‌ಅಲ್ಲ, ಅಲ್ಲ- ನೇತಾಜಿ ಪಾಲಕರ್‌” ಎನ್ನುತ್ತಾ ಅವನು ಬಿಕ್ಕಳಿಸತೊಡಗಿದ. ಮತಾಂತರ ಹೊಂದಿದ ಕೆಲ ದಿನಗಳ ಮೆಲೆ ನೇತಾಜಿಗೆ ಪಶ್ಚಾತ್ತಾಪ ಆಗಿತ್ತು. ಅವನಿಗೆ ಬಾಲ್ಯದ ಪ್ರತಿಜ್ಞೆ ನೆನಪಾಗುತ್ತಿತ್ತು. ತುಳಜಾಭವಾನಿಯ ನೆನಪಾಗುತ್ತಿತ್ತು. ಅಂತರಂಗದಲ್ಲಿದ್ದ ಹಿಂದುತ್ವ ಜೇವತಾಳಿ ಮೇಲೆ ಏಳಲು ಯತ್ನಿಸುತ್ತಿತ್ತು. ಹೀಗಾಗಿ ಅವನ ಮನಸ್ಸು ಅಶಾಂತಿಯಿಂದ ತೊಳಲಾಡುತ್ತಿತ್ತು. ಆದರೆ ಅವನಿಗೆ ಹಿಂದಿರುಗಿ ಬರುವ ಧೈರ್ಯ ಆಗಿರಲಿಲ್ಲ. ಔರಂಗಜೇಬನು ಅದಕ್ಕೆ ಅವಕಾಶವಾಗದಂತೆ ಕಣ್ಣಿಟ್ಟಿದ್ದ. ಆದರೆ ಈಗ ಆ ಅವಕಾಶ ತಾನಾಗಿ ಸಿಕ್ಕಿತ್ತು. ದಿಲೇರಖಾನನಿಗೆ ತಿಳಿಯದಂತೆ ಕುಲೀಖಾನ್‌ಮೊಗಲ್‌ಸೇನೆಯಿಂದ ಪಾರಾಗಿ ಬಂದಿದ್ದ. ಶಿವಾಜಿ ಮಹಾರಾಜರು ತನ್ನನ್ನು ಉಳಿಸಲಿ, ಬಿಡಲಿ ತಾನಂತೂ ಕ್ಷಮಾಯಾಚನೆ ಮಾಡಲೇಬೇಕು ಎಂದು ನಿರ್ಧರಿಸಿ ಬಂದಿದ್ದ.

ಪಶ್ಚಾತ್ತಾಪ- ಪಾಪಪರಿಹಾರ

ನೇತಾಜಿ ತಾನು ಧರಿಸಿದ್ದ ಪೇಟವನ್ನು ಶಿವಾಜಿಯ ಕಾಲಬುಡಕ್ಕೆ ತಾನೇ ಕಿತ್ತೆಸೆದ. ಶಿವಾಜಿ ಅವನನ್ನು ಆಲಂಗಿಸಿಕೊಂಡ. ಪುನಃ ಹಿಂದು ಧರ್ಮಕ್ಕೆ ಶಾಸ್ತ್ರೋಕ್ತವಾಗಿ ಅವನನ್ನು ಸೇರಿಸಿಕೊಂಡ. ಎಲ್ಲರೂ ನೇತಾಜಿಯನ್ನು ಇನ್ನು ಮುಂದೆ ಆದರದಿಂದ ಕಾಣಬೇಕು ಎಂಬುದು ಶಿವಾಜಿಯ ಇಷ್ಟ. ಅದಕ್ಕಾಗಿ ನೇತಾಜಿಯ ನೆಂಟನಾದ ಜಾನೋಜಿ ಪಾಲಕರನಿಗೆ ತನ್ನ ಸ್ವಂತ ಮಗಳನ್ನು ಕೊಟ್ಟು ಮದುವೆ ಮಾಡಿದ.

ನೇತಾಜಿ ಸ್ವರಾಜ್ಯದ ಮುಕ್ತ ಗಾಳಿಯನ್ನು ಉಸಿರಾಡಿದ. ಮಹಾರಾಜರ ಸ್ನೇಹ ಔದಾರ್ಯಗಳನ್ನು ಸವಿದು ಸಂತಸಗೊಂಡ. ಅವನ ಕೊನೆಯ ದಿನಗಳು ಹಾಗೆಯೇ ಕಳೆದವು. ಅವನ ಹುಟ್ಟಿನಂತೆ ಸಾವಿನ ಘಟನೆಯೂ ಚರಿತ್ರೆಯ ಪುಟಗಳಿಂದ ಕಣ್ಮರೆಯಾಗಿಯೇ ಉಳಿದುಹೋಗಿದೆ.

ಆದರೆ –

ಅವನು ಶೌರ್ಯವೇ ಮೂರ್ತಿವೆತ್ತಂತೆ ಬಾಳಿದ. ಲೆಕ್ಕವಿಲ್ಲದಷ್ಟು ರಣಾಂಗಣಗಳಲ್ಲಿ ಶತ್ರುಗಳ ಹೃದಯ ಗದಗುಟ್ಟಿಸಿ, ಅವರನ್ನು ಯಮಪುರಿಗಟ್ಟಿದ. ಹದಿನೇಳನೆ ಶತಮಾನದ ಅಪ್ರತಿಮ ಗಂಡುಗಲಿಯಾಗಿ ಮೆರೆದ. ಅಂಥ ನರವೀರ ನೇಥಾಜಿ ಪಾಲಕರನ ನೆನಪು ಮಾತ್ರ ಶಾಶ್ವತವಾಗಿ ಉಳಿದಿದೆ.