ಅಂತಿರ್ಬರುಮೋರೊರ್ವನೊಱಲ್ದು ನೋಡುತ್ತುಮಿರ್ದು –

ಕನಸಿನೊಳೆ ಕಂಡ ರೂಪಂ
ಮನದೊಳ್
 ಮಗುಳ್ದಾದಮಱಸುವಂತಿರೆಯುಂ ಭೋಂ
ಕನೆ
 ಮೂರ್ಛೆವೋದರೇಕೆಯೊ
ಮನಸಂದೊಂದಿದರ
 ಸುಖಮ ನಜನೆಡೆಗಡಿವಂ        ೫೧

ಪೂವಿಂ ಪೊಯೆ ಹಮ್ಮೈಸುವು
ದಾವುದೊ
 ಸುಕುಮಾರವೃತ್ತಿ ಪೆಣ್ಣೆಂದಾ ಲೀ
ಲಾವತಿ
 ನಲ್ಲಂ ನಯನೇಂ
ದೀವರದಿಂ
 ಮೋದೆ ಸೇದೆವಟ್ಟಂತಿರ್ದಳ್     ೫೨

ಅದಲ್ಲದೆಯುಂ –

ಬಲ್ವಲನಲ್ಲದೀಯಲೆಯುತಿರ್ದುದು ತೆಂಕಣ ಗಾಳಿ ಕಾಮನೀ
ಕೊಲ್ವನೆ
 ಚಂದ್ರನೀ ಕೊಱೆದು ತಿಂಬನೆ ನಿನ್ನೊಡಗೂಡವೇೞ್ದು ನೀ
ನೊಲ್ವುದು
 ಮೊಗ್ಗೆ ಕಾಡುವುದು ಕಾವುದನಾಥೆಯನೆನ್ನನೆಂದವಳ್
ಕಾಲ್ವಿಡಿವಂತೆ
 ಮುಂದೊಱಗಿದಳ್ ಸುಖದಿಂ ಕವಿತಾವಿಳಾಸನಾ ೫೩

ಕನಸಿನೊಳೆ ಸುೞಿವಳಂ ನಾಂ
ನೆನಸಿಂದಂ
 ನಂಬೆನೆಂದು ಸಱೆಯಿರಿಸಲ್ ಲೋ
ಚನದಿಂದೆ
 ಕಟ್ಟಿ ತುಂಗ
ಸ್ತನಿಯಂ
 ಬರೆ ತೆಗೆಯಲಾಱದಂತೆ ಬೞಲ್ದಂ   ೫೪

ಎನ್ನದಿದಾದೊಡೆ ನೆಱೆಯಲ್
ನಿನ್ನೊಳ್
 ಕರಗುಗುಮೆ ಎನುತುಮುಂದೊರ್ವರ್ಗಂ
ನನ್ನಿ
 ನಿನತೆಂದು ಜೀವನ
ಮುನ್ನುಡಿದಂತಿರ್ವರೊಡನೆ
 ಮೂರ್ಛೆಗೆ ಸಂದರ್       ೫೫

ನೆರೆವೊಡೆ ಲಜ್ಜೆಯನಡ್ಡಂ
ಬರಿಸುವುದೆಮುಗಿಂತಿದೆಂದು
 ಚೈತನ್ಯಮನ
ತ್ತಿರಿಸಿ
 ಬೆರಸುವಮೊಲೋರೊ
ರ್ವರ
 ಮೇಲೆ ಮಲಂಗಿ ಮೆಲ್ಲನೊಱಗಿದರಾಗಳ್         ೫೬

ತಡೆದಿರದಿಂದೀ ಜೊನ್ನಂ
ಕಡುವಿಸಿಲವೊಲಪ್ಪುದೆವಗೆ
 ನಿಜವಿರಹದೊಳೆಂ
ದೆಡೆಯುಡುಗದೆ
 ತೋಱುವವೋಲ್
ಬಿಡುತಂದುವು
 ಬೆಮರ್ಗಳವರ ಮೆಯ್ಗಳಿನಾಗಳ್       ೫೭

ನಡನಡ ನಡುಗುವಿನಂ ತಮ
ಮಿಡುಮಿಡು
 ಮಿಡುಕುವಿನಮೆರ್ದೆಯುಮಿಂತು ಮನೋಜಂ
ಕೆಡೆಯಿಸುವನೆಂದು
 ತೋರ್ಪವೊ
ಲೊಡನುಡುಗಿದುವಂಗವಗಿದುವೆರ್ದೆಮುಗುಳವರಾ
     ೫೮

ಅರಮೆ ಮುಗಿದಿರ್ದುಮೋರೊ
ರ್ವರನೆರ್ದೆಯೊಳೆ
 ಪುಗಿಸಿ ಮುಚ್ಚಿದಂತಲರ್ಗಣ್ಗಳ್
ಕರಮೆ
 ಬೆಮರ್ತುವು ಬೆರಸಲ್
ಕರಗುವವೋಲ್
 ಕೋಮಲಾಂಗಲತಿಕೆಗಳವರಾ        ೫೯

ತೞ್ತೇನೆಸೆದರೊ ನುಣ್ದೊಡೆ
ಯೊಳ್ತೊಡೆ
 ಮೆಲ್ಲೆರ್ದೆಯೊಳೆರ್ದೆ ತೊಡಂಕಿರೆ ನಳಿತೋ
ಳೊಳ್ತೋಳ್
 ನಗೆಮೊಗದೊಳ್ ಮೊಗ
ಮೇೞ್ತಂದಿರೆ
 ಮೋಹದಿಂದಮಾ ಸ್ತ್ರೀಪುರುಷರ್ ೬೦

ಕುರುಳಿಂ ಕೋದವರೆರ್ದೆಗಳ
ನರಿವಂತಿರೆ
ನಿಟ್ಟನಿಡಿಯನನೆವಿಲ್ವಿಡಿದಿ
ರ್ವರುಮನಿರದೊಂದೆ
ಸರಲಿಂ
ದುರುಳೆಚ್ಚನೊ
ಮದನನಿನಿಸು ಮೋಹದಿನಾಗಳ್      ೬೧

ಮಱೆದೊಱಗಿದ ನಲ್ಲರ ಬಾ
ಯ್ದೆಱೆಯಿಂ
ಪೊಱಮಡುವ ಪುಗುವ ನಱುಸುಯ್ಯಿಂದಂ
ಕಱೆಯುತ್ತೊರ್ಬರಮೇಯ್
ಮೆ
ಯ್ಯೊಱೆಯಿಂ
ಪೊಱಮಡುವ ಪುಗುವ ಹರಣಮನಿೞಿಕಂ ೬೨

ಕಾಮಿನಿಯ ಶಿಥಿಲ ಕಚಕಬ
ರೀಮೇಘದಿನುದಿರ್ದ
ತೋರಮಲ್ಲಿಗೆಮುಗುಳ್ಗಳ್
ಕಾಮಪ್ರಳಯಂ
ಕವಿತರೆ
ಪೂಮೞೆ
ಸುರಿವಂತೆ ಸುರಿದುವಂಗದೊಳವರಾ        ೬೩

ಅರಸನ ಕೊರಲೊಳ್ ತೊಡರ್ದಂ
ಬುರುಹಾಕ್ಷಿಯ
ಕೇಶಪಾಶಮೇಂ ಪೋಲ್ತುದೊ ಚೆ
ಚ್ಚರಮಂತು
ಮುಚ್ಚೆವೋಪಂ
ತಿರೆ
ಕಡುಪಿಂ ಕೊಂಡ ಕಾಮಕಾಳೋರಗನಂ ೬೪

ಸ್ಮರನಿಟ್ಟ ಸಿದಿಗೆಯಂತಿರೆ
ಸಿರಿಮಂಚಂ
ಸ್ಮರಮಹಾಗ್ನಿಯಿಂ ಬೇವರನಾ
ಸ್ಮರಮೋಹಮೃತರನಿರಿದಂ

ಕರದಂಡದಿನಿರಿದು
ಸುಡುವವೊಲ್ ಸಸಿಪೊಲೆಯಂ     ೬೫

ಅರಸನುರದಲ್ಲಿ ನಾಂಟಿದ
ತರುಣಿಯ
ಮಲಯಜದ ಕುಂಕುಮಾಂಕಿತಕುಚಮೇಂ
ಪರಿಭವಿಸಿತೋ
ಕೆಡೆವಿನಮಿರಿ
ದು
ರಕ್ತದೊಳ್ ತೋಯ್ದ ಮದನರದನಿಯ ಕೊಂಬಂ    ೬೬

ಅನ್ನೆಗಮಿತ್ತಲವಲೋಕಿತತ್ರಿಲೋಕಪತಿಪೂಜೆಯರುಂ ನೀರಾಜಿತ ಜಿನತಪಿಚರಣೆಯರುಂ ಜಿನಸ್ನಾನಸುರಭಿಸಲಿಲಸಿಕ್ತಕುಂತಳಲತಿಕೆಯರುಂ ವಿಶುದ್ಧಸಿದ್ಧ ಶೇಷಾಕ್ಷತಕುಸಂ ಮಸಂಕಾಶಿತ ಕೇಶಕಳಾಪೆಯರುಮಾಗಿ ಮಗುಳ್ದು ಬಂದಾ ವಿದ್ಯಾಧರಿಯರಾ ವಿದ್ಯೆಯಿಂ ವಿಮುಗ್ಧನಾಗಿರ್ದ ಕುಮಾರನನಡರ್ದೆಳಲತೆಯಂ ಬಿಡಿಸಿ ಬಾಳಚೂತಮಂ ತರಿಸುವಂತಿರಾ ತರುಣಿಯ ತೊಡರ್ದಂಗಲತೆಯಂ ಬಿಡಿಸಿ ತರಿಸಿ ತುರಿತದಿಂ ಪೋಗಿ ಪೂಗೊಯ್ವಂತೆ ಅರಸನುಮಂ ಖೇಚರಿಯರುಮನಾ ಚಕ್ರೇಶ್ವರಿಯ ನಿಳಯದೊಳ್ ಕಾಣದೆ ಮಗುಳೆ ಕೊಳನ ತಡಿಗೆವಂದಾಕುಳನಾಗಿ ದಿಗವಳೋಕನಂಗೆಯ್ಯುತಿರ್ದ ಮಕರಂದನ ಮುಂದಣ ಚಂದ್ರಕಾಂತದ ಶಿಲಾತಲದೊಳೀಡಾಡಿ ನಿಜನಿವಾಸಕ್ಕೆ ಪೋದರನ್ನೆಗಮಿತ್ತಲ್ –

ಎಲರಿಂದೞ್ಚತ್ತು ಲೀಲಾವತಿ ನಿಜಪತಿಯಂ ಮಂಚದೊಳ್ ಕಾಣದಾಗಳ್
ಚಲೆಯಾದಳ್
ಮೂರ್ಛೆವೋದಳ್ ಮಱೆದಳೊಱಗಿದಳ್ ಕಂದಿದಳ್ ಕೋ
ಟಲೆಗೊಂಡಳ್
ಸಾವುಗಂಡಳ್ ಕಳವಳಸಿದಳಾಸತ್ತಳೞ್ತಳ್ ಬೆಮರ್ತಳ್
ನೆಲೆಯಿಂದಂ
ಬಿರ್ದಳೆರ್ದಳ್ ವಿರಹದುರಿಯ ಸಂತಾಪದಿಂ ಕಾಂತೆಯಾಗಳ್       ೬೭

ಅಚ್ಚನೆ ಬರ್ಪೆಲರ್ ಕುರುಳ ಕುಂಕುಮಧೂಳಿಯನೆತ್ತಿ ಸುತ್ತಲುಂ
ಕೆಚ್ಚನೆಯಾದ
ಕೌಮುದಿಯದೇನೆಸೆದಿರ್ದುದೊ ಬಾಲೆ ಬೇಸಱಿಂ
ಬೆಚ್ಚನೆ
ಸುಯ್ದ ಬೆಂಕೆಯೊಳೆ ಬೆಂದಪುದೆಂಬಿನಮಾಗಳಾಕೆಗಾ
ದಚ್ಚಿಗಮಂತೆನಲ್
ತನುವನುರ್ಬಿಸದಿರ್ಕುಮೆ ಕಂತುಗಾದೊಡಂ ೬೮

ಬಿಸಿಲೆಂಬಂತಚ್ಚಬೆಳ್ದಿಂಗಳೆ ತರುಣಿಯ ಮೆಯ್ವೆಂಕೆಯಿಂ ಕಾಯೆ ಪತ್ತುಂ
ದೆಸೆಯೆಲ್ಲಂ
ಪೊತ್ತಿದತ್ತಿಂಗಡಲಿೞಿದು ಧರಿತ್ರೀತಳಂ ಕಾಯ್ದುದಾಗಳ್
ಬೆಸನಕ್ಕೇೞ್ತರ್ಪ
ತನ್ವಂಗಿಯರಡಿದಳಿರ್ಗಳ್ ಬೇಯೆ ಬಾಯ್ಬತ್ತೆ ಮೆಯ್ ತಾ
ಪಿಸೆ
ಪೊಕ್ಕರ್ ಪಂದರಂ ಪಂದಳಿರೊಳೊಱಗಿದರ್ ಮೇಲುದಂ ಬೀಸಿಕೊಂಡರ್     ೬೯

ಕುದಿದುಕ್ಕುವ ಕಣ್ಣೀರೆಸ
ಲೊದವಿಂ
ಸೈಗರೆದು ಬಿಡುವ ಬೆಮರಿಂ ನಡುಕಂ
ಪದೆದಾ
ಪಂಕಜಮುಖಿ ಕೂ
ೞ್ಕುದಿಗೊಳ್ವಂತಿರ್ದಳತನುತಾಪಾನಳನಿಂ
    ೭೦

ಕಾಂತಸರೋರುಹವದನೆ
ತಾಂತಶರಂ
ಮುನ್ನಮೆಚ್ಚುದೆಯ್ದದವೊಲ್ ಪೆ
ರ್ಚಿಂ
ತೆಗೆ ನೆಱೆದಿಸುತಿರಲೆರ್ದೆ
ಯಂ
ತಪ್ಪಿಸುವಂತೆ ಕವಿದು ಕೆಡೆದೆಸೆದಿರ್ದಳ್ ೭೧

ಅಂತಾ ಬಾಲೆ ನೀರಿಂ ಪೊಱಗಿಕ್ಕಿದ ಬಾಳೆಯಂತೆ ಮಮ್ಮಲ ಮಱುಗಿ, ದೂವೆಯೊಳ್ ಪೊಕ್ಕ ಪಾವಿನಂತೆ, ಬೆದಬೆದ ಬೆಂದಟ್ಟು ಪಟ್ಟ ಪುಲ್ಲೆಯಂತಿರೆರ್ದೆ ಪಡಪಡ ಪಾಯೆ ಬೇಸಗೆಯ ಬಿಸಿಲ್ ಪತ್ತೆ ಬಸವೞಿದೆಳವಕ್ಕಿಯಂತೆ ಗಂಟಲ್ ಮಿಡುಮಿಡುಮಿಡುಕೆ; ನೂರ್ಮಡಿ ಸುಡುವ ವಿರಹಪರಿತಾಪಕ್ಕೆ ಕಣ್ಗಳೆಡೆನಾಳ್ಕಡಿವೋದಂತೆಯುಂ, ಪ್ರಾಣಂಗಳ್ ಪಳ್ಳಿವೋದಂತೆಯುಂ, ಜೀವಂ ಜೀವಿತೇಶ್ವರನನಱಸಲ್ ಪೋದಂತೆಯುಂ ಇಚ್ಚೆಯೞಿದು ಮುಚ್ಚೆವೋಗಿರ್ಪುದುಂ – ಕಳಾವತಿ ಮೊದಲಾದ ಕೆಳದಿಯರ್ ದೇವತಾ ಪ್ರಭಾವನೀತ ಪ್ರಿಯಸಮಾಗಮಸುಖದಿಂದಿರ್ವ ಸಖಿಯಂ ನೋಡಲುತ್ಸುಕೆಯರಾಗಿ ರಾಗದಿಂ ಬರುತ್ತುಂ ಮುಂತಿರ್ದಳಂ ಕಂಡು ಸತ್ತಳೆಂದೇ ಬಗೆದು ಸುತ್ತಿ ಮುತ್ತಿ ಕಣ್ಬನಿಗಳಿಂ ಮುಂದುಗಾಣದೆ –

ಈಕೆಯ ಪುಣ್ಯಮೇಕೆ ಕಡೆಗಂಡುದೊ ಕರ್ಮಮೆ! “ಎಮ್ಮ ಚಿತ್ತದೊಳ್
ಶೋಕದ
ಕಿಚ್ಚನೇಕೆಯೊ ತಗುೞ್ಚಿದೆಯೞ್ಕಱನೊಕ್ಕು ದೇವಿಯಿಂ
ತೇಕೆಯೊ
ಮಾಡಿದಳ್ ಕರುಣದಿಂ ಕುಲದೇವಿಯರೇಕೆ ಕಾದರಿ
ಲ್ಲೀ
ಕುಳರತ್ನಮಂ ಯುವತಿರತ್ನಮನೀ ಭುವನೈಕರತ್ನಮಂ      ೭೨

ಅಲರ್ಗಣ್ಣಿಂ ಪೂವಿನಂಬಂ ಸಮೆದನೊ ಮದನಂ ಕೊಂಡು ಮೇಣ್ ಪ್ರಾಣಮಂ ಕೋ
ಗಿಲೆಯಲ್ಲಂ
ಕೊಂದು ಕೈಕೊಂಡುವೊ ಕಳರವಮಂ ವಕ್ತ್ರಚಂದ್ರಾಂಶುವಂ ಹೆಂ
ಗೊಲೆಯಿಂದಂ
ಚಂದ್ರಮಂ ಕೊಂಡನೊ ಖಳನುೞಿದಂತೇಕೆ ಪೇೞ್ ನೋಡಳೇಕಿಂ
ತೆಲೆಗೇ
ಮಾತಾಡಳೇಕೆಮ್ಮಯ ಸಖೀಮುಖದಿಂ ಹಾಸಮಂ ಸೂಸಳೆಮ್ಮೊಳ್       ೭೩

ಎಂದು ನೊಂದು ಶೋಕಂಗೆಯ್ದುರಮಂ ಮೋದಿಕೊಳ್ವ ಕೆಳದಿಯರಂ ಕಳಾವತಿಯಿಂತೆಂದಳ್ –

ಈದಯಿತೆ ಕಣ್ಣ ಮೊದಲಿಂ
ಪೋದುದು
ಸಾಲದುದೆ ನೊಂದ ನಿಮ್ಮೆರ್ದೆಯಿಂದಂ
ಪೋದಪಳುರಮಂ
ಕರದಿಂ
ಮೋದದಿರಿಂ
ನೋೞ್ಪಮಿನ್ನುಮುಸಿರಂ ಸಖಿಯಾ       ೭೪

ಎಂಬುದುಮೆಲ್ಲರುಂ ನೀಡುಂ ನೋಡಿ ಜೀವಮಿನ್ನುಮುಂಟು, ಮನ್ಯುಮಿಕ್ಕೇಕೆ ಶೋಕಿಸುವಿರೆಂಬಂತೆ ಮಿಡಿದು ಪಾಯ್ವ ಮೆಲ್ಲೆರ್ದೆಯಂ ಕಂಡೞಲನಳವಡಿಸಿ ಹೃದಯಮಂ ಪದುಳಂಗೆಯ್ದು ನೆಲದೊಳಿರ್ದಳನೆತ್ತಿ ಪಾಸಿನೊಳ್ ಪಟ್ಟಿರಿಸಿ ತುಱಿಪದಿಂ ತಣ್ಗಳಸದಾಲಿ ನೀರುಮನಲರ ಬಿಜ್ಜಣಿಗೆಯುಮಂ ಕೊಂಡು ಕಣ್ಬನಿಗಳ್ ಕೂಡುಗುಮೆಂದು ಬಿಸುಸುಯ್ ಬೆರಸುಗುಮೆಂದು ದುಕ್ಕದಿನಾನನಮನೋಸರಿಸಿ ಮೇಲೆ ಸೂಸುತ್ತುಮೊಲೆದು ಬೀಸುತ್ತುಂ ತಮ್ಮೊಳಿಂತೆಂದರ್ –

ಸುರತಶ್ರಮಕೆಂದಿರಿಸಿದ
ಕರಗದ
ತಣ್ಣೀರುಮಲರ ಬಿಜ್ಜಣಿಗೆಯುಮೀ
ತರುಣಿಯ
ಮೋಹನಹತಿಪರಿ
ಕರಮಾದುದು
ಬಿದಿಯ ಬಗೆಯನಾವನೊ ಮಿಗುವಂ    ೭೫

ಎಂದು –

ಎಲೆ ಮುಗ್ಧೆ ನಿನ್ನ ನೋಟಂ
ತೊಲಗಿದ
ಕತದಿಂದೆ ಕರ್ಣಪೂರದ ಪೊಸನೆ
ಯ್ದಿಲನಿಂದು
ಕಂಡೆವಲ್ಲದೊ
ಡಲರ್ಗಣ್ಗಳ
ಕೆಯ್ಯೊಳಾರುಮೇಂ ಕಂಡಪರೇ  ೭೬

ಲೀಳಾವತಿ ಲೀಳಾವತಿ
ಬಾಳೆಯೆ
ಬಂಧುಪ್ರಿಯೇ ನಿಜಪ್ರಿಯಸಖಿಯರ್
ಕೇಳ
ಕಳವಳದೊೞಿದಪ
ರಾಳೋಕಿಸು
ತಂಗೆಯೆಂದು ಕರೆದರ್ ಕಿವಿಯೊಳ್      ೭೭

ಹರಕಲಿಸಿತಂಗಲತೆಯೊಳ್
ಹರಣಂ
ಸುಯ್ ನಿಮಿರ್ದು ನಡೆದುದಱಿಯಮೆ ಕಿಱಿದೋ
ಸರಿಸಿದುದು
ಪುರ್ವು ಕಿಱಿದೊ
ತ್ತರಿಸಿದುದೆಮೆದುಱಗಲಲರ್ದುವವಳರ್ಗಣ್ಗಳ್
೭೮

ಅಂತು ಕಣ್ಗಳಂ ತೆಱೆದು ಕೆಳದಿಯರ ಮೊಗಮನಡರೆ ನೋಡುವುದುಮಾಕೆಯಾ ಕಳಾವತಿ ಕಣ್ಗಳಮ ತೊಡೆದು ತಲೆಯಂ ಮೇಲೆ ತೆಗೆದು ತೊಡೆಯ ಮೇಲಿರಿಸಿಕೊಂಡು ನೀರಂ ಕುಡಿತೆಕುಡಿತೆಯಿಂ ಕುಡಿಯಿಸಿ ಕುದಿವೆರ್ದೆಯೊಳ್ ಮಲಯಜಮನೊತ್ತಿ ತಳಿರ ಬಿಜ್ಜಣಿಗೆಯಿಂ ಬೀಸಿ ಬೞಲ್ಕೆಯಂ ಕಳೆದು ಮೆಯ್ವೞಿಯಿಂ ತದ್ವೃತ್ತಾಂತಮಂ ಬೆಸಗೊಳ್ವುದುಮಾಕೆಯಿಂತೆಂದಳ್ –

ಇನಿಯನನನುಪಮನಂ ನೂ
ತನಚಂಪಕದಾಮಲಲಿತವಕ್ಷಃಸ್ಸ್ಥಲನಂ

ಮನಸಂದು
ಸೋಂಕಿ ಕುಳ್ಳಿ
ರ್ದನನಿಂದಾಂ
ಕನಸಿನಲ್ಲ ಕಂಡೆಂ ಕೆಳದೀ    ೭೯

ಎಂಬುದುಮಾರಿಕೆಯಾಕೆಯ ಕೊರಲ ಚಂಪಕಮಾಲೆಯುಮಂ ಮುನ್ನಮಿಕ್ಕಿದ ಮುತ್ತಿನ ಸರಮಿಲ್ಲದುದುಮಂ ಕಂಡು, ಅನುಮಾನಿಸಿ, ಕನಸಲ್ಲೆಂದಱಿದು ಮಂದಸ್ಮಿತ ವದನೆಯಾಗಿ –

ಬಳೆಯೆ ಮುದಂ ನಿನ್ನ ಸಖೀ
ಕಳಾಪಿಗಳ್ಗೊಗೆದ
ನಿಜಪಯೋಧರದೊಳ್
ಳ್ತೆಳಮಿಂಚಿನಂತೆ
ತೊಳಪು
ಜ್ವಳ
ಮೌಕ್ತಿ ಕದಾಯಮಮೆತ್ತವೋಯ್ತು ಮೃಗಾಕ್ಷೀ      ೮೦

ಏಂಬುದುಮಾಕೆಯಗಿದು ತಳವೆಳಗಾಗಿ ತುಂಬಿದ ಪೆಱೆಯಿನೊಱಗಿದನೆಯ್ದಿಲಂತೆ ಎಮೆದುಱುಗಲೆಱಗೆ ಕೆಳೆವರಿದ ಕಣ್ಗಳೆಸೆಯೆ ಕುಚಕಲಶದ ಚಂಪಕಮಾಲೆಯೊಳ್ ಮಲ್ಲಿಗೆಯ ಮುಗುಳ ಸರಮಂ ಬೆರಸುವಂತೆ ಕಣ್ಣನೀರಿಕ್ಕಿ ನೀಡುಂ ಭಾವಿಸಿ ನೋಡಿ –

ಮೊನಸಿದ ಮೆಯ್ನವಿರಿಂದಾ
ನನಾಬ್ಜವಿಕಸನವಿಶೇಷದಿಂದದು
ನಿಜನಾ
ಥನ
ಕೊರಲ ಮಾಲೆಯೆಂಬುದ
ನನಿಬರ್ಗಂ
ಪೇೞ್ದಳುಸಿರಲಳವಲ್ಲದವೋಲ್   ೮೧

ಕೊರಗಿದಪುದೆಂದು ತಳಿವಂ
ತಿರೆ
ನೆಯ್ದಿಲಿನಮೃತರಸಮನಾ ಸಕಳಸುಧಾ
ಕರಮುಖಿ
ಪೂವಿನ ಸರದೊಳ್
ಸುರಿದಳ್
ಬಾಷ್ಪಾಂಬುವಂ ವಿಲೋಲಾಕ್ಷಿಗಳಿಂ         ೮೨

ಏವಣ್ಣಿಪೆನಾ ಸಂಪಗೆ
ವೂವಿನ
ಮಾಲೆಯೊಳೆ ಪಾಯ್ದು ಬಿರ್ದಿರ್ದುವು ಮೂ
ರ್ಛಾವೇಗಮನಾಳ್ದಂತೆವೊ

ಲಾ
ವನಿತೆಯ ಮುಗ್ಧನಯನಭೃಂಗಯುಗಂಗಳ್       ೮೩

ಅಂತು ನೋಡುವಳಂ ಕಂಡು ಮನಂಗೊಂಡು ಕಳಾವತಿ ಮತ್ತಮಿಂತೆಂದಳ್: ಇಂದು ಪದ್ಮಾವತಿಯ ವರಮುಂ ನಿಜಪತಿಯ ಬರವುಂ ಬಲ್ಲವರ್ ಬರೆದಂತೆ ತಪ್ಪಿದುದಿಲ್ಲೆಂತಪ್ಪೊಡಮಾದುದುಮಲ್ಲದಲ್ಲಿ ಮನಂ ಪಸಲ್ವೇಡ ನೀನತಿಸ್ನಿಗ್ಧೆಯುಂ ಮುಗ್ಧೆಯುಮಪ್ಪುದಱಿಂ ನಿಜಪತಿಸ್ಪರ್ಶದತ್ತಮೂರ್ಚ್ಛೆಯಿಂ ಮೆಯ್ಮಱೆದು ಕನಸೆಂದೇ ಬಗೆದೆಯಾನಿನ್ನುಮೊಂದು ತೆಱದಿಂ ತೋಱಿದಪ್ಪೆನೆಂದಾಕೆಯನೆತ್ತಿ ಪಾಸಿನ ಪಚ್ಚವಡಿಕೆಯಂ ನೋಡಿದಾಗಳ್ –

ಕುದಿಯೆ ಬೆಮರ್ತು ಪಚ್ಚಡದೊಳಚ್ಚಿಱಿದಂತಿರೆ ಪತ್ತಿ ತೋಱುವೊ
ಳ್ಗದಪಿನ
ನೀಳ್ದ ತೋಳ ನತಪಾರ್ಶ್ವದ ಪರ್ಬುಗೆವೆತ್ತ ಬೆನ್ನ ಕೊ
ರ್ಬಿದ
ಪೊಱವಾಱ ಪೆರ್ದೊಡೆಯ ಜಂಘೆಯ ಪಾದದ ಪಜ್ಜೆಯೆಯ್ದೆ ಮು
ಟ್ಟದ
ಕೃಶಮಧ್ಯದೊಂದೆಡೆಯಿನೇನೆಸೆದಿರ್ದುದೊ ರಾಜಪುತ್ರನಾ ೮೪

ಅದಂ ಕಂಡಾಕೆ ಪರಮಪಂಡಿತೆಯಪ್ಪುದಱಿಂದಾತನುಮತನುತಾಪತಪ್ತನಪ್ಪುದನನು ಮಾನದಿಂದಱಿದು ಮೆಯ್ವೆಂಕೆಯಿಂದೊಳಗು ಕಂದೆ ಕತ್ತುರಿಯ ಪಳಿಕಿನಂತೆ ಪುಳಿಚೆರ್ದ ಚಂದನದಣ್ಪುವೆರಸು ಪತ್ತಿದ ಪರಿಮಳಮಂ ಪರಪುವೀ ಬೆಮರ ಪಜ್ಜಳಿಸುವ ಪಜ್ಜೆ ನಿಜಮನಃ ಪ್ರಿಯನ ಪಜ್ಜೆಯಿದು ನಿನ್ನ ಮೆಯ್ವಜ್ಜೆಯೆ ಮಲ್ಲಿಗೆಯ ಮರುಗದ ಬೆರಕೆವಾಸಿಗಂ ನಿನ್ನಿನಿಯನ ತುಱುಂಬಿನ ಬಾಸಿಗಮಿವು ನಿನ್ನ ಮುಡಿಯ ಪೂಮಾಲೆಗಳೆಂದು ಬೇಱೆವೇಱೆ ತೋಱಿ ನಿನ್ನ ಕೊರಲ ಪೂಮಾಲೆಯುಮೆಂತಕ್ಕೆ ತಡವಾಗಿ ತಡೆಯದೆ ಕೂಡುವುದನಱಿಪಿದಪ್ಪುದೆಂದು –

ನಿನ್ನಸು ಕೊರಲ್ಗೆ ವಂದೊಡ
ಮಿನ್ನೆಗಮಚ್ಚಿಗಮದೇನೊ
ಕೆಳದಿ ನಿಜೇಶಂ
ನಿನ್ನಯ
ಕೊರಲೊಳ್ ಕೋದೀ
ಪೊನ್ನಂತಪ್ಪರಲ
ಮಾಲೆ ಕಾದಪುದಲ್ತೇ        ೮೫

ಜಳಸೇಕಂ ಪೊಗೆ ಜೊನ್ನಂ ಕೊರಗಿದ ಸಸಿಗಾಂದೋಳನಂ ರೋದಿಸುತ್ತಿ
ರ್ಪೆಳಗೂಸಿಂಗಾರ್ದ್ರವಾತಂ
ಪಗಲ ಕುಮುದಿನೀಕಾನನಕ್ಕಂದುಮಿಂದುಂ
ಕಳಗೀತಂ
ದುಃಖಿತಾತ್ಮಂಗತನುತರುತಲಚ್ಛಾಯೆ ಮಾರ್ಗಶ್ರಮವ್ಯಾ
ಕುಳಿತಂಗಾಶಾನುಬಂಧಂ
ವಿರಹಿಗೆ ಪಿರಿದುಂ ಜೀವನಾಧಾರಮಲ್ತೇ       ೮೬

ಎಂಬುದುಂ ಕೆಳದಿಯರವಳ ಮನಮನಾಱೆ ನುಡಿದು ಶಯನಸದನಕೊಡಗೊಂಡು ಪೋದರನ್ನೆಗಮಿತ್ತಲ್ –

ಕುಮುದಾಮೋದಮೆ ತೀಡೆ ಕೋಡುವೆಲರಿಂ ಮೆಲ್ಪಿಂ ವಯಸ್ಯಂ ವಿಷ
ಣ್ಣಮುಖಂ
ಮಾಡುವ ತಣ್ಪಿನಿಂ ತೊಲಗೆ ಮೂರ್ಛಾವೇಗಮಾಗಳ್ ಮಹೀ
ರಮಣಂ
ಕಾಣದೆ ಮುಂದೆ ಮುಗ್ಧಮುಖಿಯಂ ಬೇಸತ್ತು ದುಸ್ಸ್ವಪ್ನಮೆಂ
ದು
ಮನಂಗುಂದಿದನಾರ್ಗೆ ಮಾಡದೊ ಮಹಾವ್ಯಾಮೋಹಮಜ್ಞಾನಮಂ  ೮೭

ಅಳುರ್ವ ಸುಧಾಕರಂಗಗಿವ ಮೆಯ್ಯೞಲಪ್ಪ ಬಿಸುರ್ಪನಾಳ್ವ ನೀ
ರ್ದಳಿವ
ಬಿಗುರ್ತು ಬಾಯೞಿವ ಸಂತಯಿಪಗ್ಗಳಮಾಗೆ ಸುಯ್ವ ಸು
ಯ್ಯೊಳಗಸು
ಪೋದುದೆಂದೆರ್ದೆಯ ನಣ್ಪ ವಿಷಾದವಿನೋದದಿಂದ
ಣ್ಗೊಳೆ
ಬೆಳಗಾದುದಂದು ನೃಪಸೂನುಗಮಾ ಸಚಿವಾಗ್ರಸೂನುಗಂ        ೮೮

ಬೆಳಗಪ್ಪುದುಮಾಗಳ್ ತಾಂ
ಬೆಳಗಾಗಿಸಿದಂತೆ
ತೊಳಗಿ ಬೆಳಗುವ ಮುಕ್ತಾ
ಫಳಹಾರಮನರಸನ
ಕೊರ
ಲೊಳೆಸೆವುದಂ
ಚತುರಸಚಿವತನಯಂ ಕಂಡಂ         ೮೯

ನವಲತೆಯಂ ಸುಧಾಕರಮರೀಚಿಗಳಾ ಮಣಿಹಾರಮಾಲೆಯಂ
ಧವಳಿಸಿ
ನೀಳ್ದ ಬೆಳ್ವೆಳಗಿನಿಂ ಬಿರಿಯಲ್ ಸರಸೀರುಹಂಗಳೊ
ಲ್ಲವೆ
ಮುಗಿಯಲ್ ಸರೋವರದ ಕೈರವಮೊಲ್ಲವೆ ನೋಡ ಕೂಡಲೊ
ಲ್ಲವೆ
ಪೊಣರ್ವಕ್ಕಿಗಳ್ ಪರೆಯಲೊಲ್ಲವೆ ಬಾಳಚಕೋರಮಾಲೆಗಳ್        ೯೦

ಇನನುದಯಭೀತಿಯಿಂದ
ಸ್ತನಗಮನೆಯ್ದಲ್ಕೆ
ಪಡೆಯದುಡುಗಣಮುಂ ಚಂ
ದ್ರನುಮಾ
ಗಿರಿಗವತರಿಸಿದು
ದೆನಿಸಿದುವಾ
ಹಾರಮುಂ ನೃಪೇಂದ್ರಾನನಮಂ        ೯೦

ಅದಲ್ಲದೆಯುಂ –

ನೀಱನುರದೊಳ್ ಮನೋಜನ
ಪಾಱುಂಬಳೆಯೆನಿಸಿ
ಮಲಯರುಹಪರಿಮಳಮಂ
ಬೀಱುವ
ಪುಳಕಾಂಕುರದ
ಳ್ಳೇಱಿಂ
ನಸು ಕಱಕಱಾದ ಮೊಲೆವಜ್ಜೆಯುಮಂ        ೯೨

ಅಂತು ಕಂಡು ಮನಂಗೊಂಡು ಸಮುತ್ಸಾಹಿತಹೃದಯನುಂ ವಿಶದಾನಂದನುಂ ವಿಗತವಿಷಾದನುಂ ದರಹಾಸವಿಸರ್ಜಿತವದನವೈರಸ್ಯನುಮಾಗಿ ಮಕರಂ ದನಿಂತೆಂದಂ –

ಉಡುಗುತಿರ್ದಪನಂಶುವನಿಂದುವೀ
ಯುಡುಗಳೞ್ಲುವು
ಕಂಡಿದಱಂದಮಂ
ಬಿಡದೆ
ನಾಣ್ಚಿದವೋಲ್ ನಿಜಕಂಠದೊಳ್
ತೊಡರ್ದ
ಹಾರಮಿದೆತ್ತಣದೂರ್ಜಿತಾ         ೯೩

ಸ್ಮರನುಂಡಿಗೆಯೊತ್ತಿದವೋಲ್
ನಿರಂತರಂ
ಸ್ಮರಣಭೂತಭಕ್ತ್ಯತಿಶಯದಿಂ
ಗುರುಕುಚಲಿಂಗಂ
ಪಿರಿದುಂ
ಪರಿಣಮಿಸಿದುದೆರ್ದಯೊಳೆಂಬುದಂ
ಪ್ರಕಟಿಪವೋಲ್  ೯೪

ಹಾರದ ಗಡಣದೊಳಂ ಕುಚ
ಭಾರಂ
ಬೞಿಸಂದು ಬಂದವೋಲ್ ನಿನ್ನ ನಿಶಾ
ಲೋರಸ್ಥಳದೊಳ್
ತೊಳಗುವ
ನಾರೀಕುಚಚಂದನಾಂಕಮೆತ್ತಣಿನಾಯ್ತೋ
     ೯೫

ಎಂಬುದುಮಾನುಡಿಯೆ ಕೆಯ್ವಿಡಿದು ನೆಗಪಿದಂತೆಯುಂ ವಿರಹದಹನದಾಹದಿಂ ಸಮಾಕೃಷ್ಣಶಿರೋನಿಚಯನಾದಂತೆಯುಂ ಜೀವಂಬೊಯ್ದಂತೆಯುಂ ಮುಂ ಪಟು ಪ್ರಾಯಪ್ರಾಣನಾಗಿರ್ದ ಮಾನವಮದನನಾ ಶಿಲಾತಳದಿಂ ಭೋಂಕನೆರ್ದುಕುಳ್ಳಿರ್ದು ನಳಿನ ನಾಳ ಕೋಮಳಮುಂ ಕಂಠಾಶ್ಲೇಷಕಮನೀಯ ಪ್ರಾಣಮುಮಪ್ಪುದಱಿಂದಾ ಹಾರಮಂ ಮನೋಹರಿಯ ಬಾಹುಲತಿಕೆಯಂ ಬಗೆವಂತೆ ಬಗೆದಾಕೆಯ ಮನಂಬುಗುವಾಗಲತಿಸ್ಥೂಲತೆಯಿಂ ಪುಗಲಱಿಯದೆ ಪೆಱಗುೞಿದ ವಿರಹ ಪಾಂಡು ಪಯೋಧರದಂತೆ ಪೇರುರದೊಳ್ ಪೊಳೆವ ಮಳಯಜದವಳಕುಚಕಲಶಲಾಂಛನಮುಮಂ ಪುಲಕಪ್ರಸ್ವೇದಪ್ರಸಾದಿತಶರೀರಂ ಹರ್ಷ ವಿಶೇಷವಿಕಸಿತ ವಿಲೋಚನಂ ಪ್ರತ್ಯಕ್ಷಾಭಿಜ್ಞಾನದಂತೆ ನೀಡುಂ ಭಾವಿಸಿ ನೋಡಿ –

ಮಳಯಜಲಿಪ್ತಾಂಗಿಯನು
ಜ್ವಳಹಾರೆಯನಿಂದು
ಕನಸಿನೊಳ್ ಸಿತಶಯ್ಯಾ
ತಳಗತೆಯಂ
ಕಂಡಂತಿರೆ
ಪೊಳೆದಪುದೆನ್ನಯ
ಮನಕ್ಕೆ ಮತ್ಕಾಮಿನಿಯಂ         ೯೬

ಎಂದರಸಂಗೆ ಮಕರಂದನೆಂದಂ ಇಂದುಮಿನ್ನುಂ ಮೂರ್ಛೆದಿಳಿಪಲೆಂದು ನೀರ್ವೂಗಳಂ ಕೊಳಲೀ ಕೊಳಕ್ಕೆ ಆಂ ಬಂದ ಪೆಱಗೆ ಪೊಱೆಯಾಗಿರ್ದ ನಿನ್ನನಾ ಖೇಚರಿಯರೆತ್ತಿಕೊಂಡು ಎತ್ತಲಕ್ಕೆ ಪೋದರಲ್ಲಿ ವಲ್ಲಭೆಯೊಳೆರಡಿಲ್ಲದೆ ನೆರೆದುದನೀ ಲಚ್ಚಣಮೆ ಪೇೞ್ಗುಮಿಲ್ಲಿ ಸಂದೆಗಮೇವುದು? ಮಕರಂದಗಂಧಮನನುಭವಿಸಿಯುಂ ಕುಸುಮದೊಳ್ ಸಂದೆಗಂಬಡುವಂತಕ್ಕುಂ ಆಕೆ ನಿನಗೊಲ್ದುದನೀ ವಿಪುಳಪುಳಕೋದ್ಬೇದಸ್ಫುಟಿತಮಪ್ಪ ಕುಚಚಂದನಾಂಕಮಱಿಪುಗುಂ ಆಕೆ ಪದ್ಮಿನಿಯೆಂಬುದನೀ ನಿಜಾಂಗಲಗ್ನ ತತ್ಸುಂದರೀಸುರಭೀಸ್ವೇದಮೆ ಪೇೞ್ಗು ಮೆಂದಾಱೆ ನುಡಿದು –

ಕೊಳದೊಳ್ ನೀರ್ವೂಗಳೆಲ್ಲಂ ಸಮೆದುವು ನಳಿನೀನಾಳಮಿನ್ನೊಂದುಮಿಲ್ಲೊ
ಳ್ದಳಿರುಂ
ಮೆಲ್ವೂವನಿನ್ನಾಂಪಡೆಯೆನಱಸಿಯುಂ ಕಾಣೆನಂತೀ ವನಾಂತಂ
ಗಳೊಳಿಂ
ತತ್ಯುಕ್ಕಟಂ ನಿನ್ನಯ ವಿರಹಮುಮಾ ತೋರ್ಪುದಲ್ಲಿಂ ಘನಶ್ಯಾ
ಮಳಸಾಂದ್ರೋದ್ಯಾನದಿಂದಲ್ಲಿಗೆ
ತಡೆದಿರವೇಂ ಪೋಪಮೇೞ್ ರಾಜಪುತ್ರಾ        ೯೭

ಎಂದಲ್ಲಿಂದಮೆತ್ತಿ ಮುತ್ತಿನ ಸರಮಂ ತನ್ನ ಕೊರಲೊಳ್ ಕೋದರಸಂಗೆ ಪೂವಿನಂಗಿಕೆಯಂ ತುಡಿಸಿ ಬಾಳಮೃಣಾಳಮುಮಂ ಬಾೞೆಯ ತಿರುಳೆಲೆಯುಮಂ ಸುತ್ತಿ ಮುಂದಲೆಯೊಳ್ ಚಂದನದ ಚಿಗುರಂ ಸೆರ್ಕಿ ತಳಿರೆಕ್ಕವಡಮಂ ಮಡಮೇಱಿಸಿ ಕೈಗೊಟ್ಟು ಮಯೂಖನಿರ್ಝರ ಗಿರಿಯಿಂದಮಿೞಿಪಿ ವಿರಹವಹ್ನಿಗೆ ನೆರಮಾಗಿ ಮಾರ್ತಂಡನುದ ಯಂಗೆಯ್ದಳುರದ ಮುನ್ನಮೆ ಮೆಲ್ಲಮೆಲ್ಲನೆ ನಡೆಯಿಸಿ ಕುಸುಮಪುರದ ಪೊಱವೊಳಲೊಳ್ ಪದ್ಮಾವತೀನಿಳಯಮಪ್ಪ ಕುಸುಮಾಕರೋದ್ಯಾನಮಂ ಪುಗಿಸಿ –

ತಳಿರೊಳ್ ವಲ್ಲೀಚಯಂ ಚೆಲ್ಲುವ ಕುಸುಮರಜೋರಾಜಿ ಪಿಷ್ಟಾತಕಂ ನೀ
ರ್ದಳಿಪಂ
ಪುಷ್ಪದ್ರವಂ ಪೂವನಿಲಿಪತಿತಪುಷ್ಪೋತ್ಕರಂ ಪೂರ್ಣಕುಂಭಂ
ಫಳಜಾಳಂ
ದರ್ಪಣಂ ಪೂಗೊನೆ ನಿಡುನನೆ ಸಾಮೋದಶೇಷಾಕ್ಷತಂ ಮಂ
ಗಳಗೀತಂ
ಭೃಂಗನಾದಂ ತನಗೆನೆ ನಡೆದಂ ರೂಪಕಂದರ್ಪದೇವಂ       ೯೮

ಇದು ವಿದಿತವಿವಿಧಪ್ರಬಂಧವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಲೋಚ್ಚಲಿತ ನಖಮಯೂಖಮಂದಾಕಿನೀಮಜ್ಜನಾಸಕ್ತ ಸಂತತೋತ್ಸಿಕ್ತದಾನಾಮೋದಮುದಿತಬುಧ ಮಧುಕರಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತಿಯೊಳ್ ನಾಯಿಕಾದರ್ಶನ ವರ್ಣನಂ

ದಸಮಾಶ್ವಾಸಂ