ಪಾದರಿಯ ಸಿಂಧುವಾರದ
ಜಾದಿಯ
ಮಲ್ಲಿಗೆಯ ಸಂಪಗೆಯ ಸುರಯಿಯ ಪೊಂ
ಗೇದಗೆಯಿರುವಂತಿಯ
ಚೆ
ಲ್ವಾದಲರಿಂ
ಸಮೆದ ಕುಸುಮಮಂಡಪಮೆಸೆಗುಂ       ೫೩

ಮನಸಿಜನ ರತಿಯ ಮದುವೆಗೆ
ಮನಮೊಸೆದು
ವಸಂತನೆಂತು ಮಾಡಿದೊಡಂ ತಾ
ನಿನಿತೆಸೆಯದೆಂಬೆನಿನ್ನಱಿ

ಯೆನಿದಂ
ಪಸುರ್ವಂದರಂದಮಂ ಮಿಗೆ ಪೊಗೞಲ್     ೫೪

ಎಂಬಿನಮೆಸೆಯೆ ಸಮೆದುದನೆಡೆಯಾಡುವ ಕೆಳದಿಯರಿಂ ಕೇಳ್ದು ಮಾಧವೀಮಂಡ ಪದಿಂ ಮಾನಿನಿಯ ಮುಖಮಂಡನಮೆ ಪೊಱಮಟ್ಟು ಪದ್ಮಾವತೀ ನಿಳಯಮಂ ಬಲಗೊಂಡು ಬರ್ಪ ವಿಭ್ರಮೋರ್ವಸಿಗೆ ಪತ್ತುಸಾಸಿರ್ವರ್ ಕನ್ನೆಯರುಮಿದಿರ್ವೋಗಿ, ಕೆಲಬರ್ ಪಲ್ಲವಸತ್ತಿಗೆಗಳಂತೆ ಪೊಳೆವ ಪಲ್ಲವಸತ್ತಿಗೆಗಳನೆತ್ತಿಯುಂ, ಕೆಲಬರ್ ಮಱಿದುಂಬಿ ಮುಸುಱೆ ಪೀಲಿದಳೆಗಳಂತೆ ಪೂವಿನ ತಳೆಗಳಂ ತಳೆದುಂ, ಕೆಲಬರ್ ಮುತ್ತಿನ ಕೊಡೆಗಳಂತೆ ಮಿಸುಪ ಮಲ್ಲಿಗೆಯ ಮುಗುಳ ಬೆಳ್ಗೊಡೆಗಳಂ ಪಿಡಿದುಂ, ಕೆಲಬರಿಕ್ಕುವ ಕುಸುಮಚಾಮರಂಗಳೆಯ್ದದಂತೆ ಸೆಳ್ಳುಗರ ಬಳ್ಳಿವೆಳಗಂ ಬೆರಸುತುಂ, ಕೆಲಬರ್ ಬೀಸುವ ಪಾದರಿಯ ಪೂಗೊಂಚಲ ಸೀಗುರಿಗಳ್ ನೆರೆಯವೆಂಬಂತೆಡಗೆಯ್ಯಿಂ ಬಿಡುಮುಡಿಯ ನೊತ್ತುತುಂ, ಕೆಲಬರ್ ಸೂಸುವ ಕುಸುಮಾಕ್ಷತಂಗಳ್ ಕೆಲವೆಂಬಂತೆ ಶುದ್ಧಸ್ಮಿತಂಗಳಂ ಸೂಸುತುಂ, ಕೆಲಬರ್ ನಡೆವೆಡೆಯೊಳ್ ಪಾಸುವ ಪೂವಿನ ಮಡಿಯುಂ ಪಲ್ಲವಮುಂ ಕೊಱತೆಯೆಂಬಂತೆ ಕಾಲುಗುರ ಬೆಳಗಂ ತಳದ ಕೆಂಪುಮಂ ಪಾಸುತುಂ, ಕೆಲಬರ್ ಕೋಕಿಳಕಳಂ ಕಿಱಿದೆಂಬಂತೆ ಗಳರವಮಂ ಕೆದಱುತುಂ, ಕೆಲಬರ್ ಬಾಳಭೃಂಗೀಮಂಗಳಗೀತ ಮಧುರಝಂಕಾರಂ ಸಾಲದೆಂಬಂತೆ ನೂಪುರರವಮಂ ಪರಪುತುಂ ಬಳಸಿವರೆ – ಕಳಾವತಿಯುಂ ತಮಾಳಿಕೆಯುಮಿರ್ಕೆಲದೊಳ್ ಕೈಗೊಟ್ಟು ಬರೆ – ಮಹೇಂದ್ರ ಮನೋಹರಿ ಮನೋಹರವಿಳಾಸದಿನಾ ವಿಳಾಸವತಿ ಬರ್ಪಾಗಳ್ –

ಅಗಿದಪುದೀಗಳಾಂ ಪಿಡಿದ ಕೆಂದಳಮೀಯೆಡದೋಳ್ಗೆ ಕೆತ್ತುಗಳ್
ತಗುಳ್ದಪುವೆತ್ತುವೀ
ಮಿಡುಕೆ ಮಾಣದೆ ಪಾಯ್ದುದೆ ಪೊಟ್ಟೆವಾಯ್ವ
ಕ್ಷುಗೆ
ಪಿರಿದಾದುದಕ್ಕುಮೆ ಪರಿಸ್ಫುರಿತಂ ಪೆಱತೇನೊ ದೇವಿಯಾ
ಕೆಗೆ
ವರನಂ ಮನೋಹರನನಿಂದು ಕುಡಲ್ ಕಡುಗೂರ್ತಾಳಾಗಳೇ       ೫೫

ಅದಲ್ಲದೆಯುಮಳ್ಳೆಗೊಂಬಿನೊಳ್ ತೆಱಂದಿಱಿದು ತಾಱುಂಗೊಟ್ಟು ನಿಡುಸರಮನಿಟ್ಟು ಪೂಗೊಂಬಿಂಗೆ ಪಾಯ್ವಲರ್ವಟ್ಟಲೊಳ್ ತುಂಬಿ ತಿಳಿದು ಬಳೆದ ಬಂಡಂಗಂಡು ದುಂಬಿಯುಂ ತಾನುಮುಂಡು ಮುಂಡಾಡಿ ಪತಿಯ ಮೇಲೆ ಪತಿತಾಂಗಿಯಪ್ಪ ಭಂಗಿಯುಂ, ತಳಿರ್ವನೆಯೊಳಿರ್ದು ಕರೆವಿಂಚರಕ್ಕೆ ಬಂಜೆಗೊಂಬಂ ಬಿಟ್ಟುವಂದು ಬಿಂದುವಿಡುವ ಕಳಿಕೆಯುಮಂ, ಕಳಕಂಠಿಕೆಯ ಕದಂಪಂ ಕರ್ಚಿ ಕಳರವದಿನದಱೊಡನೆ ಕಳಕಳಿಸುವ ಕೋಕಿಳಕುಮಾರನುಂ, ಬರವಂ ಕಂಡು ಪುರುಡಿಸಿ ಪೆಱಗುಗೆಯ್ದು ಕಣ್ಣನೀರಂ ಗೞಗೞನೆ ಸರಿವ ಗಿಳಿವೆಣ್ಣ ಕಾಲಂ ಪಿಡಿದು ಪಣ್ಣ ಪಣ್ಣನೆ ಪೊರ್ದಿ ಪಣ್ಣಂ ಬಾಯ್ವಾಯೊಳ್ ಕುಡುವ ನೆವದಿಂದಂ ಬಿಡಿಸಿ ಚುಂಬಿಸುವ ಕೀರಕಾಮುಕನುಮಂ, ಮುಗಿಲ್ಗಡಲಿನ ಗಿಡುವಿಂಗೆ ನಡೆದು ನರ್ತಿಸುವ ಮಯೂರಮಿಥುನಮಂ ಬಯಸಿ ಬಂದು ಬಯಲ್ದಾವರೆಯ ಕುಸುಮದ ಕುಸುಂಕುಱಂ ನೂಂಕಿ ಪೊಕ್ಕು ಕೂಡಿ ಕುಣಿಕುಣಿವ ಪೊಣರ್ವಕ್ಕಿಗಳಂ, ಬೇಡಿದ ವರವನೀತಿವಂತಿರ್ಪ ಚಪ್ಪರದ ಪಿರಿಯ ಸಿರಿಯುಮಿಂದೀ ಮಂದಗಮನೆ ಮನೋವಲ್ಲಭನೊಳ್ ನೆರೆವುದನೆರಡಿಲ್ಲದೆ ನಿರೂಪಿಸಿದಪ್ಪುವೆಂದಾನಂದದಿಂ ಕಳಾವತಿಯಂತರ್ಗತದೊಳೆ ಬಗೆಯುತುಂ ಬರೆವರೆ –

ವಿಸ್ಮಯರಸದಿಂದಲ್ಲದೆ
ಕುಸ್ಮಸರಾದಿಗಳಿನಾಱದೀವನಿತೆಯ
ತೀ
ವ್ರಸ್ಮರಶಿಖಿಯೆಂದಾ
ಮಧು
ರಸ್ಮಿತೆಯರ್
ಸಮೆದರೆನಿ ಕುಮಾತಳಿರ್ವನೆಯಂ       ೫೬

ಅಂತು ಬಂದು ಪುಗುವಾಗಳ್ ತೋರಣಸ್ತಂಭಂಗಳಾಗಿ ಪೊಱೆಗಟ್ಟಿ ನಿಱಿಸಿದ ಜೊಂಡೆಗರ್ಬಿನ ತೆನೆಗಳಮಲ್ಲಿ ನೇಱಿದ ನೇಱಿದ ಪಣ್ಗೊನೆಯ ಸೀಗುರಿಗಳಮವಱೊಳ್ ತಡಂಗಲಿಸಿ ತೂಗುವ ಪೊಂಬಾೞೆಯ ಪೊಸಚಾಮರಂಗಳುಂ ಪಾಯ್ದ ಗಿಳಿವಿಂಡಿನಂತೆ ಪವಣಿಸಿ ಪವಣಿಗೆಗೆಯ್ದಲರ್ವಲರ ಸೂಸಕದಿನೆಸೆವ ಸಹಕಾರದ ಪಸುರೆಲೆಯ ಪೊಸತೋರಣಂಗಳಂ ತದ್ವಾರದೇಶದೊಳ್ ನಿರ್ಮಿಸಿದ ಪೂವಿನಂದಣಂಗಳುಮಂ ಪಲ್ಲವಚ್ಛತ್ರಂಗಳುಮನವಲೋಕಿಸತ್ತುಂ ಒಳಪುಗುವಾಗಳ್ – ಇರ್ಕೆಲದೊಳಾ ಕರ್ಕೇತನದ ಜೀರ್ಕೊೞವಿಗಳಿಂ ಕುಳಿರ್ವ ಮಳಯಜದ ರಸಮಂ ಸಿಂಪಿಸುವೀ ಸಾಲಭಂಜಿಕೆಗಳ ನಗೆಮೊಗದೊಳ್ ಬೆಳಗುಗಣ್ಣ ಬೆಳ್ವೆಳಗಂ ಸಿಂಪಿಸಿಯುಮಲ್ಲಿಂ ನಡೆದು ಪರಕಲಿಸಿ ಪರಿವ ಕರ್ಪೂರರಸದ ಪರಿಕಾಲೊಳ್ ಕಾಲಂ ನೀಡಿ ನೇವುರದ ಮರಕತಮಣಿ ಕಿರಣದೂರ್ವಾಂಕುರಂಗಳಿನಳಂಕರಿಸಿಯುಂ ಅಲ್ಲಿಂ ನಡೆದಿದಿರಂ ನಡೆತಂದಪ್ಪಿಕೊಂಡು ಪೆಱಮೆಟ್ಟಿ ಹಿಮೋಪಲಪುತ್ರಿಕೆಗಳ್ಗೆ ನಿಜಚ್ಪಾಯೆಯನಪ್ಪಿ ಚೆಲ್ವನೊಪ್ಪಿಸಿಯುಮಲ್ಲಿಂ ನಡೆದು ಮೆಲ್ಲನೆ ಬಂದು ಬಿಡುನನೆಯ ಲಾಜೆಯಂ ಸೂಸುವ ಲತಾಪ್ರತಿಮೆಗಳ್ಗೆ ದರಹಾಸಕುಸುಮಮಂ ಸೂಸಿಯುಮಲ್ಲಿಂ ನಡೆದು ಮೆಲ್ಲೆಲರಲೆಪದಿಂ ಪರಿತಂದು ಮೊಲ್ಲೆಯ ಮುಗುಳಾಲಿ ಕಲ್ಲುಮಂ ಬಂದಗೆಯರಲಿಂದ್ರಗೋಪಂಗಳುಮಂ ತುಷಾರಸುರಭೀಸಲಿಲಾಸಾರಮುಮಂ ಸುರಿವ ಜಂತ್ರದ ಮುಗಿಲ್ಗ ಪಾಂಗಭ್ರಮೆಯೆಂಬೆಳ ಮಿಂಚನೋಲಗಿಸಿಯುಮಲ್ಲಿಂ ನಡೆದು ಮುತ್ತಿನ ಸರಮನೆೞಲೆವಿಟ್ಟಂತಡಿಗಡಿಗೆ ಬಿಂದುಮಾಲೆಯಂ ಬಿಡುವ ಮೃಣಾಳನಾಳಂಗಳ ಧಾರಾಗೃಹಂಗಳ ಸುತ್ತಲುಂ ನಿಂದು ನಾಂದು ಮುಡಿನವಿಲನಾಡಿಸಿಯುಮಲ್ಲಿಂ ನಡೆದನವರತ ಮೇಳಾರಸದೊಳ್ದೊಡೆಯೊಳ್ ಪೊಳಂಕಿದಂತೆ ಪೊಳೆದು ಪಸುರ್ಗದಿರನಾಳ್ದು ನೀಳ್ದ ಪಸುರೆಲೆಯೆಂಬ ಪಸಿಯ ನೇತದ ಮೇಲುದನೀಡಾಡಿ ಬೆಡಂಗನಾರಂಭಿಸುವ ರಂಭಾಸ್ತಂಭದೊಳ್ ತನುಲತೆಯಂ ಪರ್ಬಿಸಿಯುಮಲ್ಲಿಂ ನಡೆದು ಕ್ರೀಡನಶೀಲೆಯರಪ್ಪ ಬಾಲೆಯರಂ ನಾಲಗೆಗಳಿಂ ನೀರಂ ನೀಡಿಯೂಡಿದ ತಂಬುಲದ ರಸದಿಂ ತಾಮ್ರತುಂಡಂಗಳಾಗಿ ಪಸುರೆಲೆಯಿಂ ಪಸುರ್ಪು ಪಸಲೆಗವಿದ ಪಕ್ಕಂಗಳಿಂ ಗಿಳಿಗಳಂತೆ ತೋಱುವ ಕೋಗಿಲೆಗಳುಮಂ ಮೃಗಮದ ಕರ್ದಮದೊಳರ್ದಿ ಕೋಗಿಲೆಗಳಂತೆ ಮಾಡಿದ ಗಿಳಿಗಳುಮಂ ಗಳಪಿ ಗಿಳಿಗೆಡೆದು ವಿಸ್ಮಯಮನಾಗಿಸಿ ನಾಗಸಂಪಗೆಯ ಪೂಗೊಂಚಲ್ಗಳಳುಮನಸುಕೆಯ ಪೊಸದಳಿರ್ಗಳುಮಂ ಭೇದಿಸಲ್ಬಾರದಂತು ಕೊಂಬುಗಳೊಳಿಂ ಬಱಿದೆೞಲೆವಿಡೆ ಕೌತುಕರಸಮುಮಂ ಕೊನೆಯ ಸೊನೆಯುಮಂ ಸುರಿವ ಬಾಳಚೂತದಾಳವಾಳದೊಳ್ ಚರಣನಖಕಿರಣಜಾಳಮಂ ತೀವಿಯುಮಲ್ಲಿಂ ನಡೆದು ನವಪಲ್ಲವಂಗಳಂ ಗಂಧಾಂಜನರಸದಿಂ ಪೊರೆದಶೋಕೆಗಳುಮಂ ಬಾಳ ಪ್ರವಾಳಂಗಳನಲತಗೆಯ ಬಣ್ಣಮನೂಡಿದ ತಮಾಲಂಗಳುಮಂ, ಮಲ್ಲಿಕಾಕುಸುಮಮಂಜರಿಯಂ ಮುಡಿಸಿದ ನವಮಾಲಿಕೆಗಳುಮಂ ನೋಡಿ ಮುಗುಳ್ನಗೆಯ ಮುಗುಳಿಂ ಪೂೞುತುಮಲ್ಲಿಂ ತಳರ್ದು –

ತಳಿರುಯ್ಯಲ್ ಕಣ್ಗೆವಂದತ್ತೆಳ ಅಡಕೆಯ ಕಂಭಂಗಳಿಂ ಕಂಜಸೂತ್ರೋ
ಜ್ವಳರಜ್ಜುಭ್ರಾಜಿತಂ
ಚಂದನದ ಮಣೆಯಿನುನ್ಮತ್ತಭೃಂಗಾಂಗನಾ ಮಂ
ಗಳಗೀತೋನ್ಮಾದಿಮೇಗೇಱಿದ
ಕೃತಕನೃತ್ಯನ್ಮಯೂರಂಗಳಿಂ ನಿ
ರ್ಮಳಮಾಳಾಚಾಮರಂ
ಚಂಪಕಮುಕುಳಚಲದ್ಘಂಟಿಕಾ ಜಾಳದಿಂದಂ   ೫೭

ಅದಂ ನೋಡಿ ಸಖೀಜನಕೆ ಸಂತಸದ ಸೋಲ್ವಾಯಿನಮುಮಂ, ತುಂಬಿಗಾಣತಿಯರ್ಗೆ ಬಾಯ್ಗಂಪಿನ ಬಾಯಿನಮಂ ಬೀಱುತ್ತುಮಲ್ಲಿಂ ತಳರ್ದು, ಕೊಡಗೊಡದೊಳ್ ಪಿೞಿದು ತಂದು ತೀವಿದ ಚಂದನಪಲ್ಲವರಸದಿಂ ಕೞ್ತು ತಂದಿಕ್ಕಿದ ಕಮಳಕುಮುದಕಲ್ಹಾರಂಗಳಿಂದೆಸೆದು ತೆರೆವಿಜ್ಜಣಿಗೆಯಿಂ ತುಂತುರ್ವನಿಯ ತುಱುಂಗಲಂ ತೂಱುವ ತಣ್ಗೊಳಂಗಳೊಳ್ ತಾಂ ಪೊಕ್ಕೊಡೆ ಮೆಯ್ವೆಂಕೆಯಿಂ ನಿಳ್ಕುಗುಮೆಂಬಂತೆ ಮೆಯ್ನೆೞಲನೋಡಾಡಿಸಿಯುಮದಱ ಕುಮುದಂಗಳ್ ಮುಗಿಯದಂತು ಮೇಲೆಸಮೆದ ತಮಾಳದ ತಳಿರ ಗಗನತಲದೊಳ್ ನೀರ್ವೂಗಳೆಂಬ ನಕ್ಷತ್ರಂಗಳ ನಡುವೆ ಕತ್ತುರಿಯಿಂ ಕಱೆಯಂ ಬರೆದು ಕೀಲಿಸಿದ ಶಶಿಮಣಿಶಶಾಂಕನಂ ದೃಕ್ಚಕೋರನಿಂ ಚಲ್ಲಮಾಡಿಸಿಯುಮಾ ಕೊಳದ ಕುಳಿರ್ವ ಜನಮನೂದಿಯೂದಿ ಸಿಂಪಿಸುವ ಜಂತ್ರದಾನೆಯ ಕೆಯ್ಗೆ ಕರತಳದ ಕೆಂಪಿನ ಕೆಂದಳಿರಂ ನೀಡಿಯುಮಲ್ಲಿಂ ತಳರ್ದು ಸಿರಿಸದೆಸೞ ಪಸಲೆಯಂ ಕಾಲುಗುರ್ಗಳೆಂಬ ಮಿಂಚುವೆಳಗಿನ ಮುಱಿಗಳೆಂಬ ಪನಿಪುಲ್ಲ ಮಸಗಿಸಿಯುಮದಱ ನಡುವಣ ಪುಷ್ಪರಜದ ಪುಲಿನಮಂ ಪ್ರಸಾದನ ಪ್ರಸೂನಪರಾಗಪಟಳದಿನಿರ್ಮಡಿಸಿಯುಮಲ್ಲಿಂ ತಳರ್ದು ಕರ್ಪೂರದ ರಜದ ಜಗುಲಿಯೊಳ್ ಜಗುೞ್ದು ಮುಡಿಯ ಮುಗುಳ್ಗಳಿಂ ಕಡೆಯಿಕ್ಕಿ ಯುಮದಱ ಕೆಲದೊಳ್ ಕೆಳಗೆ ಪುೞಿಲ್ಗಟ್ಟಿದ ಮುತ್ತಿನ ಪುಡಿಯ ನುಣ್ಮೞಲೊಳ್ ಮೇಗೆ ಮಂದಾನಿಲನಲೆಪದಿನಲೆವಂತಾಗಿ ತಳಿದು ನೇಱಿದ ನೇಱಿದ ತಳಿರ ಬಾಳದ ಬಾೞೆಲೆಯ ಬಿಜ್ಜಣಿಗೆಗಳ ಗಾಳಿಯಿಂ ಕುಳಿಕೋೞ್ಪಹರಿಚಂದನರಸದಿಂ ನಾಂದಿ ಕೆಂದಳಿರಿಂ ಮುಸುಂಕಿದ ಪಸುರ್ಮಾಣಿಕದ ಕಳಸಂಗಳುಮನುಶೀರರಸದಿಂ ತೋಯ್ದು ಸುಗಂಧಧವಳ ಪಿಪ್ಪಲದಳಂಗಳಂ ಪೊದೆಯಿಸಿದ ನೀಳಕಳಶಂಗಳುಮಂ ಲವಂಗರಸದೊಳೋತಲೆದು ತಮಾಳದ ತಳಿರಂ ಕವಿದ ಪವಳದ ಕಲಶಂಗಳುಮಂ ಬಗೆಯ ಪಲ್ಲಟಮಂ ಕಳೆವಂತೆ ಪಲ್ಲವಂಗಳಂ ಕಳೆದು ಪುಷ್ಪವಾಸನೆಗೆ ಪೂವನಿಕ್ಕುವಂತೆ ತೀವಿದ ತಿಳಿನೀರ್ಗಳೊಳ್ ಕರ್ನೆಯ್ದಿಲ ನೆೞಲನೀಡಾಡಿಯುಮದಱ ಕಡೆಯೊಳ್ ಕುಮುದಮಧುವಿನಂದದಿ ವಾಸಿಸಿದ ಬಿಸಜಬಾಳದಳದಳದಿಂ ಬಾಸಣಿಸಿದ ಚಂದ್ರಕಾಂತದ್ರವದಿಂ ತೀವಿದ ತಿಂಗಳಂತೆ ಕಣ್ಗೊಳಿಪುದನೊಳಗಿಕ್ಕಿದ ಕರ್ನೆಯ್ದಿಲ ನೆೞಲ್ಗೆ ಪಾಯ್ದು ಪೊಱಗಂ ಪೀರ್ದು ಬಱಿದೆ ಬೞಲ್ವ ಬಾಳಮಧುಕರಂಗಳಂ ಮಧುರಮಧುವನಿತ್ತು ಮಾಣಿಸುವಂತೆ ಮಧುಬಿಂದುವಂ ಬಿಡುವ ಲೀಲಾಕಮಲದಿಂ ಸೋದು ಕಳೆದೆತ್ತಿ ಕೆಂದಳದೊಳ್ ತಳೆದಿರುಳುಂ ಪಗಲುಂ ಇನಿಯನನಱಸಿ ಪರಿವ ಮನದೊಡನೆ ಪರಿದು ಪಿರಿದುಂ ನೀರಡಸಿದ ನೇತ್ರಪುತ್ರಿಕೆಗಳಂ ನೀರ್ಗುಡಿಯಿಸುವಂತೆ ತಳಿರಂ ತಿಱಿದು ನೀಡುಂ ಭಾವಿಸಿ ನೋಡಿ –

ಮುಸುಱುವ ಪಱಮೆಗಳಣಿವಿಣ
ನುಸಿರ್ವೋಗದೆ
ಮಾಣದೆಂದದೇಂ ಬಗೆದಳೊ
ನ್ನೆಸೆವೀಕ್ಷಣಚಂದ್ರಿಕೆಯಿಂ

ದೊಸರ್ವಿಂದೂಪಳದ
ಪೊಳೆವ ಕಲಶಮನಾಗಳ್      ೫೮

ಮತ್ತಮಲ್ಲಿಂ ನಡೆದೆಳ ಅಡಕೆಯ ದೋಣಿಗಳೊಳ್ ಪಾಯ್ದು ಪುಡಿಗತ್ತುರಿಯೊಳ್ ಪುದಿದ ಸುರಭಿಸಲಿಲದಿಂ ಬೆದೆವಡೆದು ಬಿತ್ತೆ ಪರಿಮಳದ ಗಿಡುಗಳೆಂಬ ಪಿರಿಯ ಪೆಸರ್ಗೆ ಕೆಯ್ನೀಡುವಂತೆ ನಿಡುಗುಡಿಯಂ ನೀಡಿ ಬಳೆದುದ್ದಮಾದ ದವನದ ಬಾಳ್ಗೇಡಬಳಗಮುಮನವಱೆಡೆಗೆಡೆಗೆ ಬೆಳ್ಳಿಯ ಮೊಳೆಗಳಂತೆಸೆವ ಬಾೞೆಯಂಕುರದ ಖೇರನೊರೆದು ನೆಲವಡಲಿಗೆಗಳೊಳ್ ನೆಲೆವಡೆದೆಳದಳಿಸುವೆಳವಚ್ಚೆಯ ಬೆಳಗೈಯಂತೆ ಬೆಳ್ವೆಳಗಾಗಿ ಬಳ್ವಳಂ ಬಳೆದು ಪೊಸದಳಿರ ಪೊಸಸಿರಿಯ ಭಾರದಿಂ ಜೋಗಂಬೋದಂತೆ ಮಲಂಗಿದ ಜಾಗಂಗಳುಮನವಱೊಳ್ ಬೆರಸಿಯಗೆವೊಯ್ದ ಕುಂಕುಮದಂಕುರಕ್ಕಂ ಮರುಗದ ಮೋಳೆಗಂ ಮಿಳಿರ್ದು ಮಱಿದುಂಬಿಗಳ್ ಪಾಯ್ದು ಮಱುಗುಗುಮೆಂದು ಕಾಪಂ ಕೊಟ್ಟಂತೆ ಬಳಸಿಗಮೆೞಲೆಬಿಟ್ಟ ಚಂಪಕಮಾಲೆಗಳ ನವನೊಂದೆವಸಿಯಿಂ ಬಳಯಿಸುವ ಪೊಕ್ಕಳವರ್ಪೆಳವಿದಿರ ಪೋೞ್ಗಳೊಳ್ ಪರಿವ ಪರಿಮಳಜಳದೊಳ್ ಮುನ್ನಮೆ ಮುಟ್ಟಿದೊಡೆ ಕೆಯ್ವೆಂಕೆಯಿಂ ಕೊರಗುಗುಮೆಂಬಂತೆ ಕರತಳಮನರ್ದಿ ತದ್ದಮನಕನಿಕಾ ಯಮುಮನಾ ಸುರಭಿಸಸ್ಯಂಗಳುಮನೆಳವಿಯಾಘ್ರಾಹಿಸುತ್ತುಂ ಸುತ್ತಲುಮಿರ್ದ ಪರಿಸ್ಪೃಶ್ಯ ದೃಶ್ಯಸಮಾಘ್ರೇಯ ಶಿಶಿರ ಸುರೂಪ ಸುರಭಿಮಂಗಳ ದ್ರವ್ಯಂಗಳುಮನೀಕ್ಷಿಸುತ್ತುಂ ನಡೆದು –

ನನೆಕೇರಿಂ ಕಂಪಿನಣ್ಪಿಂ ಕುಸುಮಿತಲತಿಕಾದಂಡಸಂದೋಹದಿಂ
ರ್ಬಿನ
ನಾಲ್ಕುಂ ಕಂಭದಿಂ ತಾವರೆಯ ಮುಕುಳದಿಂ ಮಾಲಿಕಾಬಂಧದಿಂ ಚಂ
ದನದಣ್ಪಿಂ
ತೊಯ್ದ ಪೂಗೊಂಚಲ ಪೊದಕೆಗಳಿಂ ಸಾರಕರ್ಪೂರವೇದೀ
ಜನಿತಾಲಂಕಾರದಿಂದೊಪ್ಪುವ
ನವಸುಮನೋಮಂಡಪಕ್ಕೆಯ್ದೆವಂದಳ್   ೫೯

ಅಂತು ಬಂದು –

ಶ್ರೀಶುಭ್ರಾಂಭೋಜದೊಳ್ ಭಾರತಿ ಕವಿಧವಳಾಸ್ಯೇಂದುವೊಳ್ ಗಂಗೆ ಹರ್ಮ್ಯಾ
ದ್ರೀಶಾಗ್ರ
ಗ್ರಾವದೊಳ್ ಭೂವಧು ಫಣಿಪಫಾಣಾಪೀಠದೊಳ್ ಪೊರ್ದಿ ನಿಲ್ವಂ
ತಾ
ಶೋಭಾಭೂಷೇ ವಿದ್ಯಾಧರೆ ಮಧುರಮೃದುಚ್ಛಾಯೆ ಸಾಮೋದಶೋಭಾ
ವೈಶದ್ಯೋತ್ತುಂಗದೊಳ್
ತಂದಣಿಪಿದ ಪಸೆಯೊಳ್ ದೇವಿ ಕುಳ್ಳಿರ್ದಳಾಗಳ್        ೬೦

ಅಲ್ಲಿ –

ನಗೆಮೊಗಮಬ್ಜಮಾಗೆ ಮಿಗೆ ಬಾಯ್ದೆಱೆ ಬಂದುಗೆಯಾಗೆ ಮೂಗು ಸಂ
ಪಗೆಮುಗುಳಾಗೆ
ಕಣ್ಣಲರ್ದ ನೆಯ್ದಿಲ ನಿಟ್ಟೆಸೞಾಗೆ ಮಿಕ್ಕ ಮೆಯ್
ಸೊಗಯಿಸಿ
ಬೆಳ್ವೆಳಪ್ಪಲರ ಗೊಂಚಲನಾಂತ ಲತಾಳಿಯಾಗೆ ಚೆ
ಲ್ವೊಗೆವಿನೆಗಂ
ವಿನಿರ್ಮಿಸಿದ ಪೆಂಡಿರ ಜಾತಿ ಕರಂ ಮನೋಹರಂ         ೬೧

ಅಂತುಮಲ್ಲದೆಯುಂ ಪೆಱವುಮಱಿಕೆಯ ಕುಸುಮಂಗಳಿಂ ಸಮೆದ ವಿಚಿತ್ರಪುತ್ರಿ ಕೆಗಳೊಳಗೆ –

ಬೀಣೆಯನಮರ್ಚಿ ಕರದೊಳ್
ಗೋಣಿರಿಯುತ್ತಂಕೆ
ಕುಮುದಕಂಠಗತಾಳಿ
ಕ್ವಾಣದಿನೇಂ
ಕರಮೆಸೆದುದೊ
ಮಾಣದ
ಮೃದುಮಧುರನಾದದಿಂ ಪಾಡುವವೋಲ್    ೬೨

ಆಳಿಸಿ ಕುಚಾಗ್ರದೊಳ್ ಪಿಡಿ
ದಾಳವಿಣೆಯ
ವನಜಸೂತ್ರತಂತ್ರಿಯದೆನಿಸುಂ
ಗಾಳಿಯ
ಕೋಳಿಂ ದನಿವಿಡೆ
ಬಾಳಾರೂಪಕಮೆ
ಬಾಜಿಪಂತೆವೊಲೆಸೆಗುಂ  ೬೩

ಮುರಜದ ಮೊೞಗಿನ ಪೞಹದ
ಕರಡೆಯ
ಬೊಂಬುಳಿಯ ಪಕ್ಕವಾದ್ಯಮುಮಂ ಕಂ
ಕರಿಯ
ವಿಪಂಚಿಯ ಬಂಚದ
ಪರಿಕರಮುಮನಾಂತ
ರೂಪುಗಳ್ ರಂಜಿಸುಗುಂ       ೬೪

ಅಳತೆಗೆ ಜೋಲ್ದ ಬಲ್ಮಗುಳ ಬೋಳೆಯಮಿಟ್ಟ ತಿಪುಂಡ್ರ ಮಬ್ಜಿನೀ
ದಳದಳವಟ್ಟ
ಕಂಚುಳಿಕೆ ಕೆಂದಳಿರ್ಗೊಂಚಲ ಚೆಲ್ಲಣಂ ಪ್ರವಾ
ಳಳತೆಯ
ಬಾಲಗಚ್ಚೆ ಬಲಕಿಕ್ಕಿದ ಚಂಪಕಮಾಲೆ ಶೋಭೆಯಂ
ಬಳೆಯಿಸೆ
ನಿಂದ ನಚ್ಚಣಿಯ ಭಾವಮನಾವನೊಱಲ್ದು ನೋಡಿದಂ         ೬೫

ಮತ್ತಂದು ಮಿಸುಪ ಪೂವಿನ
ಪುತ್ತಳಿಕೆಯ
ತೊಳಪ ಸಂಪಗೆಯ ನಾಸಿಕೆಯಿಂ
ದೊತ್ತರಿಸಿದ
ಮಧುವಿನ ಪನಿ
ಮುತ್ತಿನ
ಮೂಗುತಿಯಿನಿಕ್ಕಿದಂತೆವೊಲೆಸೆಗುಂ         ೬೬

ಮಾಂಗಾಯ ಗೊಲೆಯನಂದಾ
ತಂಗೈಗೆ
ಮರಲ್ದು ಪಾಯ್ದ ಗಿಳಿಪಾಯಿಸಿದ
ತ್ತಂಗನೆಯ
ರೂಪಕಕ್ಕೆ ಬೆ
ಡಂಗಂ
ಗಿಳಿಯೋದಿಪಂಗನಾರೂಪಕದಾ     ೬೭

ನರನಾರೀಪರಿಚುಂಬಿ ರೂಪಕಮದೇನಿಂಬಾಯ್ತೊ ಬಂಧೂಕಬಂ
ಧುರಪುಷ್ಪಾಧರದಿಂದಮೞ್ದ
ಮಧುಗಳ್ ಪದ್ಮಾಕ್ಷಿನಿಸ್ಯಂದಿ
ಕ್ಷರಸಂ
ಕೌಸುಮಕಾಯಮುಕ್ತಮಕರಂದಂ ತತ್ಸುಧಾಸಾರಮಂ
ಸ್ಮರರಾಗಶ್ರುತಿಯಂ
ವಿಡಂಬಿಸೆ ಲಸತ್ಸ್ವೇದಾಂಬುಸಂದೋಹಮಂ        ೬೮

ಮಾಲೆಯಂ ನೆಗಪಿ ಕನ್ನಡಿಯಂ ಪಿಡಿದಚ್ಚ
ಚ್ಚೋಲೆಯಂ
ತಳೆದು ಚಾಮರಮಂ ಮುರಿದೆತ್ತಿ ತಾಂ
ಬೂಲಮಂ
ತಳದೊಳಾಂತು ಮನೋಹರಮಪ್ಪಿನಂ
ಸಾಲಭಂಜಿಕೆಗಳೇನೆಸೆದಿರ್ದುವೊ
ಸುತ್ತಲುಂ ೬೯

ಅರೆವೆಸನಾಗಲಿತ್ತಪುವೆ ಪೂವಿನ ಪುತ್ತಳಿಗಳ್ಗೆ ನೋಟದಂ
ತಿರೆ
ನಗೆಗಣ್ಗಳಿಲ್ಲಿ ಕುರುಳಂತಿರೆ ಮುಂದಲೆಯಲ್ಲಿ ಬಾಸೆಯಂ
ತಿರೆ
ತನುಮಧ್ಯದಲ್ಲಿ ಕಱೆಯಂತಿರೆ ಕೆಂದುಟಿಯಲ್ಲಿ ಪುರ್ಬಿನಂ
ತಿರೆ
ನೊಸಲಲ್ಲಿ ಪೋಲೆನೆರೆದುಂಬಿ ನಿಲಂಬಿದ ನೀಱದುಂಬಿಗಳ್ ೭೦

ಎಂಬಿನಮೆಸೆವ ವಿಚಿತ್ರಪುತ್ರಿಕೆಗಳ ಬಳಸಿನಿಂ ಮಿಸುವ ಕುಸುಮ ಮಂಡಪದೊಳ್ –

ವಿದ್ಯುಲ್ಲೇಖಾನಿಕಾಯಂ ನವಘನಸಮಯಶ್ರೀಗೆ ಮಲ್ಲೀಚಯಂ ಚೈ
ತ್ರೋದ್ಯಾನಶ್ರೀಗೆ
ದೀಪ್ತಿಪ್ರತತಿ ಶಶಿಕಲಾಶ್ರೀಗೆ ಹಂಸೀಸಮೂಹಂ
ಪ್ರೋದ್ಯತ್ಪಂಕೇಜಿನೀಶ್ರೀಗೊದವಿಸುವವೋಲಂದೊಪ್ಪಮಂ
ಶೋಭೆಯಿಂಬಂ
ಮಾದ್ಯತ್ಕಾಂತಾಕಾದಂಬಂ
ಬಳಸಿ ಬಳೆಯಿಸಿತ್ತಾ ಮಹಾಭಾಗೆಗಾಗಳ್||  ೭೧

ಅಂತು ಪುಷ್ಪಪತ್ರಿಕಾದ್ವಿಗುಣಿತಗಣಿಕಾಸಹಸ್ರೆಯಾಗಿ ಲೀಲಾವತಿ ರತಿ ವಿಲಾಸ ದಿಂದೊಡ್ಡೋಲಗಂಗೊಟ್ಟರೆ –

ಪದಪಂಕೇಜಾತದಿಂ ಕೆಂಪರುಣತರುಣರೇಣುಪ್ರಭಂ ಸೂಸೆ ತಳ್ತೆ
ತ್ತಿದ
ಕುಂಚಂ ತಾನೆನಲ್ ಪೂಮುಡಿಗೆ ಮುಸುಱಿರಲ್ ಮೇಲೆ ಭೃಂಗಾಳಿಗಳ್ ಮು
ತ್ತಿದ
ಬಾಯಿಂಬಾಗೆ ಭಾಳಂ ಶ್ರಮಸಲಿಲಸರಂಗಳ್ ಬೆಡಂಗಾಗೆ ಬಂದಳ್
ಮದನಕ್ಷ್ಮಾ
ಪಾಲಗುಪ್ತೋಚಿತಚತುರಚರೀಲೀಲೆಯಿಂ ಬಾಲೆಯೊರ್ವಳ್   ೭೨

ಅಂತು ಪರಿತಂದು ಮಹೀತಳನಿಹಿತಕರತಳಪಲ್ಲವೆ ದುಕೂಲಪಲ್ಲವಮನಧರ ಪಲ್ಲವಕೆ ತೆಗೆದಂತೆ ದಂತದೀಪ್ತಿಧವಳಿತದಶನವಸನೆಯಾಗಿ ದೇವಿ ಬಿನ್ನಪಮೆಂದಿಂತೆಂದಳ್ –

ನಿನಗೇನಂ ಪೇೞ್ವೆನಾ ಕಾಮನ ಕಲಿತನಮಂ ವೀರನಾದಂಗೆ ಸೋಲ್ತಂ
ದಿನ
ಬನ್ನಂ ತನ್ನ ಬೆನ್ನಂ ಬಿಡದುದನಱಿಯಂ ಪಂದೆಯೇನೆಂದು ಮುಯ್ವಾಂ
ಪನೊ
ವಿ‌ಕ್ರಾಂತಕ್ಕೆ ತಕ್ಕುಂ ವಿದಿತಮತನುವೆಂಬಂತೆ ತನ್ನಲ್ಲಿ ತಾನೋ
ರ್ವನೆ
ಬಿಲ್ಲಾಳಂತೆ ನೀನೋರ್ವೆಯೆ ಗುಱಿತನಗೆಂಬಂತೆ ಸೌರಂಭದಿಂದಂ          ೭೩

ಎಲರಂ ಮೂದಲಿಪಿಂದುವಿಂಗೆ ಬೆಸನಂ ಸಾಕ್ಷೇಪದಿಂ ಪೇೞ್ವ ಕೋ
ಗಿಲೆಗಂ
ತುಂಬಿಗಮೆಯ್ದೆ ಜೀವಿತಮನೀವಂತಾ ವಸಂತಂಗೆ ತೋ
ಳ್ವಲಮಂ
ಬಣ್ಣಿಸುವೊಂದು ಪೌರುಷಮದೊಂದತ್ಯಾಸುರೋತ್ಸೇಕಮೊಂ
ದಲಘುಪ್ರಾಭವಮೊಂದಹಂಕೃತಮಿದೇಂ
ಕಾಮಂಗೆ ಮೆಯ್ವೆತ್ತುದೋ       ೭೪

ಸುರಭಿಸರಂಗಳಂ ಮುಗುಳದೇಕೆಗ ಪೊತ್ತನೊ ತಾಳ್ದಿರಲ್ಕೆ ಮುಂ
ಬರಿಸಿದನಕ್ಕುಮಿಕ್ಷುಧನುವಂ
ಶಶಿಬಿಂಬದ ಪಂಗದೇಕೆ
ಪ್ಪರಿಕೆಯೊಳಪ್ಪುದೇಂ
ತನಗೆ ಪೇೞ್ ಮಧುವಿಂ ಪುರುಳುಂಟೆ ತನ್ನ ಸೌಂ
ದರತೆಯೊ
ಸೋಲಿಸಲ್ ನೆಱೆಯದೈ ಜಗಮಂ ಸಖಿ ಕಾಮದೇವನಾ      ೭೫

ಕಂಡೊಡೆ ತನ್ನಂ ಲೋಕದ
ಗಂಡರನಾರೊಲ್ವರೆಂದು
ಮೇಣೊರ್ವನೆ ತಾಂ
ಪೆಂಡಿರ್
ಪಲರೆಂದು ಮಹೀ
ಮಂಡನೆಕರೆದಿರ್ಪನಾಗನೇ
ಕಂದರ್ಪಂ       ೭೬

ನನೆಗಳ್ ತೀರ್ವನ್ನಮೆಚ್ಚಂ ನಿನಗಿನಿವಿರಿದಾತಂಕಮಂ ತಂದುಮಾಪಾ
ಪನಕೋಪಂ
ಪೋದುದೇ ಪೇೞ್ ತನಗಬಲೆಯೊಳೇಂ ವಿಕ್ರಮಂ ನಿನ್ನೊಳೊಳ್ಗ
ರ್ಬಿನ
ಬಿಲ್ಲಂ ಪೂಡುತಂ ಕೆಂದಳಿರ ದೊಣೆಗಳೊಳ್ ಮಾದವಂ ಕೊಯ್ದ ಬಲ್ಪೂ
ವಿನ
ಕೋಲಂ ತೀವುತಾಯಿರ್ದನೆ ಲಿಕುಚಕುಜಚ್ಛಾಯೆಯೊಳ್ ಪುಷ್ಪಚಾಪಂ         ೭೭

ಎಂಬುದುಮಭೂತಪೂರ್ವ ಭೀತಿಕೃತಕಂಪನೆಯುಮನುಭೂತಕಾತರ ತರಳಿ ತಾಧರೆಯುಮತಾನವಸಾಧ್ವಸೋದಿತ ಬಿಂದುಮಂಜರೀಮಂಡಳೆಯುಮಾಗಿಯನ ವರತವಿಗಳಿತಬಹಳ ಬಾಷ್ಪಪ್ರವಾಹವಿಹಿತಲೋಹಿತಲೇಖಾಲುಳಿತಲೋಚನೆ ಲೀಲಾವತಿ ಭೋಂಕನೆರ್ದು ಕುಳ್ಳಿರ್ಪುದುಂ ಕಾಮದೇವಂಗೆ ಕನಲ್ದು ಕಿಡಿಕಿಡಿವೋಗಿ ಸಿಡಿಲೇೞ್ಗೆಯಿ ನೇೞ್ಗಳೆಂದೇ ಬಗೆದು –

ಸ್ಫುರಿತಸ್ಫೀತಾಧರಂ ಭ್ರೂಲಟಹಲಲಿತಭಾಳಸ್ಥಳಂ ಭ್ರಾಂತತಾರೋ
ದರದೂರಸ್ಫಾರನೇತ್ರಸ್ಖಲಿತಕಳರವೋದಾರಮುತ್ತಾನನೃತ್ಯ

ತ್ಕರಶಾಖಂ
ಕಂಪಮಾನಸ್ತನಮತಿವಿಶದಸ್ವೇದಿವಕ್ತ್ರಂ ರತಾಂತಾ
ತುರಸಂರಂಭೋಪಮಂ
ಶೋಭಿಸಿದುದು ಸಕಳಸ್ತ್ರೀಸಭಾಕ್ಷೋಭಮಾಗಳ್          ೭೮

ಅಲ್ಲಿಯೊರ್ವಳಪೂರ್ವಯೌವನಗರ್ವಪರ್ವತಾಧಿರೊಢೆ –

ಅವನೇ ಗಾನಂ ಸ್ಮರಂ ನೀಂ ಮುನಿವನಿತುವರಂ ಬೇೞ್ಪುದೇ ದರ್ಪಕಂ
ಚ್ಚುವ
ಪುಷ್ಪಾಸ್ತ್ರಂಗಳಂ ಕಾಮನ ಪೊರೆದ ಪಿಕಾನೀಕಮಂ ಕಂತು ಕೊಂಡಾ
ಡುವ
ಚಂಚಚ್ಚಂದ್ರನಂ ಮಾರ್ಮಲೆಯ ಗೆಲಲಿವೇ ಸಾಲವೇ ದೇವಿಯೆನ್ನೀ
ಧವಳಾಪಾಂಗಂಗಳೆನ್ನೀ
ಮೃದುಕಳರವಮೆನ್ನೀ ಲಸದ್ವಕ್ತ್ರಚಂದ್ರಂ         ೭೯

ಎನೆ; ಮತ್ತೊರ್ವಳಭಿನವಲೇಪಿತರತಿವಿಳಾಸವಿಭ್ರಮೆ –

ಮದನಂ ಪೋಗದೆ ನಿಂದನಪ್ಪೊಡಿದಿರೊಳ್ ಭ್ರೂಪಾಚದಿಂದೆಯ್ದೆ ಪೊ
ಯ್ಯದೊಡಂ
ತೀಕ್ಷ್ಣಕಟಾಕ್ಷಶಾತಶರದಿಂ ಪಾದಾಗ್ರದೊಳ್ ಬೀೞೆ ಕು
ತ್ತದೊಡಂ
ಮೆಯ್ಯೞಲಾಱುವನ್ನ ಮವನಂ ತೋಳ್ವಾಸದೊಳ್ ಕಟ್ಟಿ ತೂ
ಗದೊಡಂ
ಪೇೞ್ ಮೊಲೆವೊತ್ತೆನೇ ಅವನ ವೇಷಂಬೊತ್ತೆನಬ್ಜಾನನೇ       ೮೧

ಎನೆ ; ಮತ್ತೊರ್ವಳತಿಶಯಶೌರ್ಯಸೌಂದರ್ಯಲಸದವಯವಲಾವಣ್ಯಲಲಿತಗಾತ್ರೆ –

ದೇವಿ ಪಿರಿದಱಿಯೆನೆನ್ನೀ
ಭ್ರೂವಿಕ್ಷೇಪದೊಳೆ
ರೂಪುಗಾಣ್ಬುದು ತಡಮಾ
ಕಾವನೆನೆ
ಮತ್ತಮೊರ್ವಂ
ಕಾವನೆ
ಕುಸುಮೇಷುವಿಂಗೆ ಗುಱಿಯಂ ಮಾೞ್ಪೆಂ       ೮೧

ಎನೆ ; ಮತ್ತೊರ್ವಳಸಮಶರನಾರಾಚನಿಶಿತಶ್ಯಾಮನಿಸ್ಸೀಮಸರಳತರುಣ ವಿದ್ಯುತ್ತರಂಗ ತರಳಾಪಾಂಗೆ –

ನಡೆ ನೋಟದಿಂದೆ ಬೆಮರಂ
ಪಡೆದು
ಮನೋಭವನ ಮನಮುಮಂ ನನೆವಿಲ್ಲಂ
ಪಿಡಿದಿಸುವ
ಕೆಯ್ಯುಮಂ ಕೇಳ್
ನಡುಗಿಸದೊಡೆ
ನಿನ್ನ ಕೆಳದಿಯಲ್ಲೆಂ ಕೆಳದೀ   ೮೨

ಎನೆ; ಮತ್ತೊರ್ವಳ್ ಸರಳಶಿರೀಷಸುಕುಮಾರಕುಸುಮ ದುರ್ಲಲಿತ ದೋರ್ಲತಾ ಲಲಿತೆ –

ಬಿಲ್ಲುಂಬೆಱಗುಂ ಮಾಱ್ಪೆಂ
ಫುಲ್ಲಶರನನವನಪೂವಿನಂಬಂ
ನಿಜಧ
ಮ್ಮಿಲ್ಲಕ್ಕೆನಿಸನೆ
ರ್ಬಿನ
ಬಿಲ್ಲಂ
ಪಿಡಿದಾಡಲೀವೆನೀವುದು ಬೆಸನಂ      ೮೩

ಎನೆ ; ಮತ್ತೊರ್ವಳ್ ಸಹಜಸೌಭಾಗ್ಯಭೋಗಭವನೆ –

ಪಲವಾಳಾಪದೊಳೇನೊ! ನೋಡಲೊಡಮೆನ್ನಾಕಾರಮಂ ಕಂತು
ನ್ನಲರ್ವಿಲ್ಲುಂ
ಸರಲುಂ ಸ್ಮರೋಗ್ರಶಿಖಿಯುಂ ಸೀವಂತು ತನ್ನಿಂದುಮಂ
ಡಲಕಂ
ತಾಂ ಮುಳಿವಂತು ತನ್ನ ಗಿಳಿಗಂ ಪೆಣ್ದುಂಬಿಗಂ ಗಂಡುಗೋ
ಗಿಲೆಗಂ
ಸೈರಿಸದಂತು ತನ್ನ ಮಧುಗಂ ಕಾಯ್ವಂತು ಮಾೞ್ಪೆಂಸಖೀ       ೮೪

ಎನೆ; ಮತ್ತೊರ್ವಳುಪಹಸಿತಸುರಾಂಗನಾವಿಳಾಸರಂಗರಮಣೀಯಮುಖ ಮಣಿಮುಕುರೆ –

ಕೆಯ್ವಿಡಿದರಡಿಯನಪ್ಪಲ್
ಮೆಯ್ವಾರದವೊಲ್
ಸರಂಗವಿರಹಿಗಳನಿಸಲ್
ಕೆಯ್ವಾರದವೊಲ್
ಮಾೞ್ಪವೆಂ
ಬಾಯ್ವೆನೆಗೆಯ್ಯಲ್ಕೆ
ಗಳಪಲಱಿಯೆಂ ಕೆಳದೀ  ೮೫

ಅಂತು ಮಧುಮತ್ತಕೋಕಿಳಕುಳದಂತೆ ಗಜಱಿ ಗರ್ಜಿಸಿ ಬೆಸನಂ ಬೇೞ್ವುದುಂ ; ಬೆಱಗುಂ ಸೆರಗುಮಾಗಿರ್ಕುಮುರ್ಕಿದರ್ಕುಂದಲೆವಾಯ್ದ ಪಂಚಶರನಂ ಮಂಚದ ಕಾಲೊಳ್ ತಂದು ಕಟ್ಟಿ ನಿನ್ನ ಪಗೆಯಂ ಬಗೆದಂತೆ ತೀರ್ಚಿ ತೋಱುವೆನೆಂದು ಬಂದು ಪೇೞ್ದ ಬಂಧೂಕಬಂಧುರಾಧರೆಯ ನೆಲ್ಲಿರ್ದಂ ತೋಱು ತೋಱು ನಡೆ ನಡೆಯೆಂದು ಮುಂದಿಟ್ಟು ಮಂದೇತರಗಮನದಿಂ ಪೊಱಮಟ್ಟು ಕೆಲರುತ್ತುಂಗಕಠಿನಕುಚಕುಂಭೆಯರ್ ಮದನ ಮದಕರಿ ಕರಿ ಕರೇಣುನಿಕುರುಂಬದಂತೆಯುಂ, ಕೆಲರತಿಲಲಿತ ವಲ್ಗನವಿಲಸದಲಸಯನೆಯರನಂಗವಲ್ಲಭವಾಹವಾಹಿನಿಯಂತೆಯುಂ, ಕೆಲರುಚಿತ ಚೀತ್ಕಾರಚಕ್ರಚಾರುವಾಚಾಲಕಾಂಚೀಕಮನೀಯನಿತಂಬಿಯನಿಯರ್ ಮನ್ಮಥಮನೋರಥ ವ್ಯೂಹದಂತೆಯುಂ ಕೆಲರ್ ಕಟಾಕ್ಷ ಕುಂತಕಾಂತಭ್ರುಕುಟಿ ಕುಟಿಲಕಾರ್ಮುಕ ವಿಕಾರ ಖಚಿತವಿಕ್ರಾಂತೆಯರ್ ಕಂತುನೃಪತಿಪತ್ತಿಪತಾಕಿನಿಯಂತೆಯುಮೆಸೆದು ಕೈವೀಸಿದ ಕಾಮನೊಡ್ಡಣ ದಂತೆ ನಡೆವಾಗಳ್ –

ದೆಸೆಯಂತಂ ತಾಗೆ ಮಂಜೀರಕಪಟಹಪಟುಧ್ವಾನಸಂತಾನಮುನ್ನ
ರ್ತಿಸೆ
ಚಂಚಚ್ಚಿತ್ರಚೀನಾಂಚಳಭೂಜಲತಿಕಾಕೇತನಂ ವ್ಯೋಮಮಂ ಚುಂ
ಬಿಸೆ
ವೇಣೀವ್ಯಸ್ತಹಸ್ತಭ್ರಮಿತಕುಸುಮಮಾಳಾರಜೋರಾಜಿದೃಷ್ಟಿ
ಪ್ರಸರಪ್ರದ್ಯೋತಶಸ್ತ್ರಂ
ನಡೆದುದು ವನಿತಾಸೈನ್ಯಮಾಲೋಕಶೂನ್ಯಂ    ೮೬

ಅವಲೀಲೋನ್ಮೂಲತಾಂಭೋರುಹಕುಮುದಕುಳಂ ಭಂಜಿತೋನ್ಮಂಜರೀ
ಲ್ಲವಜಾಳಂ
ಪೀತಶೀತೋದಕಮೆನಿಸಿದ ತತ್ಕಾಮಿನೀಸೈನ್ಯಯಾತ್ರೋ
ತ್ಸವದೊಳ್
ತಾನಾಯ್ತು ಕಂಜೋತ್ಪಲವನತತಿ ಕಂದಾವಶೇಷಂ ಚಳಚ್ಚೂ
ತವನಂ
ಶಾಖಾವಶೇಷಂ ಮಿಳಿತರಸಸರಃಪಙ್ತಿ ಪಂಕಾವಶೇಷಂ          ೮೭

ಮುಡಿಗಳ ಬಿಣ್ಪಿನಿಂ ಪದಕೊರಲ್ ಕುಚಕುಂಭದ ಭಾರದಿಂದಮೊ
ಳ್ನಡು
ಪೊಱವಾಱ ಬಿಣ್ಪೊಱೆಯಿನೊಳ್ದೊಡೆ ಬಳ್ಕುವುದೆಂದುಮಲ್ತೆ ಪೆ
ಣ್ಬಡೆ
ನಡೆಗೊಂಡೊಡಾ ಮುಡಿಗಳ ಕುಚದಾ ಪೊಱವಾಱ ಬಿಣ್ಪಿನಿಂ
ಪೊಡವಿಯನಾಂತ
ವಾಸುಕಿಯ ಮೂಱೆಡೆ ಬಳ್ಕಿದುದೇಂ ವಿಚಿತ್ರಮೋ     ೮೮

ಅಂತು ನಡೆದು ವನವಿಹಾರಪರಿಶ್ರಾಂತನಾಗಿ ನಾಗಸಂಪಗೆಯ ನೆೞಲಂ ಸಾರ್ದು ಲೀಲೇಕ್ಷು ದಂಡಮನುಂಗುಟದ ಮೊದಲೊಳಱಿ ಮಕರಂದಂ ಮಕರಂದರುದ್ಧಕೋಶ ಸುಕುಸುಮಂಗಳನಾಯ್ದು ನೀಡೆ ನಿಡುಗುಡಿತೆಯಿಂ ಕೊಂಡು ಪಲ್ಲವಪುಟಿಯೊಳ್ ತೀವುತ್ತುಮಿರ್ಪ ಕಂದರ್ಪದೇವನಂ ಕಂಡು ಪರಿಮುತ್ತುಗೊಂಡು ಪೊಡರ್ವ ಕುಡುವುರ್ವಿನಿಂ ಜಡಿದು ಕಡೆಗಣ್ಣ ಬಾಸಿಗದಿಂ ಬಾಸುಳಾದಂತೆ ಬಡಿದು ಕೆಯ್ಯಪೂಗಳನೆಳೆದು ಕೊಂಡು ಕರ್ಬಿನ ಕೋಲಂ ಸೆಳೆದುಕೊಂಡು ತಳವೆಳಗಾದುದುಮಂ ಬೞಲ್ದು ಬೆಂಡಾಗಿರ್ದುದುಮಂ ಕಂಡು ಕರುಣಿಸು –

ಸ್ಮರ ನಡೆ ನಡೆ ನಡೆಯದೊಡೆ
ಮ್ಮರಸಿಯ
ಮುಂದಣ್ಗೆ ಪೂವಿನಿಂ ಪೆಡಗೈಗ
ಟ್ಟಿರದುಯ್ವೆವೆಂದು
ತತ್ಸುಂ
ದರಿಯರ್
ಬಿಡೆ ಜಡಿದು ನುಡಿದು ಪಿಡಿದೆಳೆದುಯ್ದರ್    ೮೯

ಆಗಳುತ್ಸುಕೆಯರಪ್ಪ ಸಖಿಯರ್ವೆರಸು ಭರವಶದಿಂ ತಮಾಳಿಕೆ ಮುಂದೆ ಪರಿತಂದವನ ಧವಳೇಕ್ಷುದಂಡಮುಮಂ ನವಕುಸುಮಮುಮಂ ನಿನ್ನ ಬಲ್ಲಾಳ ಬಿಲ್ಲುಮಂಬುಮಿವೆ ಕೊಳ್ಳೆಂದು ಮುಂದೀಡಾಡುವುದುಂ –

ಸ್ಮರನಂ ತಂದಿರೆ ತನ್ನಿಮೆಲ್ಲಿದನವಂ ಮಾಯಾವಿ ನೋಟಕ್ಕೆ ನಿ
ಷ್ಠುರನೋ
ಸೌಮ್ಯನೊ ನೋಡಿದಪ್ಪೆನಿಳೆಯೊಳಾ ಕಾಮಂ ಕರಂ ಚೆಲ್ವನೆಂ
ಬರ
ಮಾತಲ್ಲದೆ ಕಂಡೆವಿಲ್ಲೆಲೆಗೆ ಪೇೞೆಂತೆಂತವಂ ಸಿಲ್ಕಿದಂ
ಪಿರಿದುಂ
ಪೆಣ್ಗೊಲೆವೋಗಲೀಗುಮೆ ದಿಟಕ್ಕೆನ್ನಾಣೆ ಎನ್ನಂ ಸ್ಮರಂ  ೯೦

ಅವನ ನವಮಧುರಭಾವಮ
ನವನ
ಗಂಭೀರತೆಯನವನ ಪೊಸದೇಸೆಯನೆ
ನ್ನವನ
ಸುಲಲಿತವಿಳಾಸಮ
ನವಗೈಸಿದೊಡವನೆ
ಭಾವಭವನೀ ಜಗದೊಳ್‌          ೯೧

ಎಂದ ಲೀಲಾವತಿಯ ಮಾತಿಂಗೆ ತಮಾಳಿಕೆಯಿಂತೆಂದಳ್ –

ಎಲೆಗೀ ದಾಕ್ಷಿಣ್ಯದಿಂದೇನವನ ನವವಯೋವಿಭ್ರಮಂ ಕೇಳಲುಂ ಪೇ
ೞಲುಮಾರ್ಗಂ
ಬಾರದಾ ಕಾಮನ ಲಲಿತಗುಣಂ ಕಣ್ಗಳಂ ಲಂಚಗೋಳ್ಗುಂ
ಚಲಮಂ
ಕಿೞ್ತೆತ್ತಿಕೊಳ್ಗುಂ ಧೃತಿಯನೆೞೆದುಕೊಳ್ಗುಂ ಕಳಾಪ್ರೌಢಿಯಂ ಬಾ
ೞ್ದಲೆಗೊಳ್ಗುಂ
ಚಿತ್ರದೊಳ್ ನೀಂ ಬರೆದರಸನವೋಲ್ ಚಿತ್ತಮಂ ಸೂಱೆಗೊಳ್ಗುಂ     ೯೨

ಅದೆಂತೆನೆ –

ಅಲರ್ಗಣ್ಣಂಭೋಜದಂದಂ ಮೊಗಸಿರಿ ಮಿಗುಗುಂ ಚಂದ್ರನಂ ಚಂದಮಾಟಂ
ದಲೆಗುಂ
ಕಂಜಾಕ್ಷನಂ ಬಟ್ಟಿದುವು ಭುಜಮುರಂ ನಾಡೆ ವಿಸ್ತಾರಿ ಕರ್ನೆ
ಯ್ದಿಲ
ಬಣ್ಣಂ ಮೆಯ್ಯ ಬಣ್ಣ ಕಿಱುವರೆಯಮೊಡಂಬಟ್ಟ ಲಾವಣ್ಯಮಿಂತ
ಗ್ಗಲಿಪನ್ನಂ
ಪನ್ನತಂ ಕಣ್ಗೆಸೆದಪನಧಿಕಂ ದೇವಿ ಕಂದರ್ಪದೇವಂ   ೯೩

ನೀಂ ನೆನೆದಾವನಂ ಬರೆವೆಯಾವನ ಚಿತ್ರದ ರೂಪನೆನ್ನುಮಂ
ನೀಂ
ನೆಱೆ ನೋಡಲೀಯದೆ ಮಡಂಗಿದೆಯಾವಳನಾಕಟಾಕ್ಷದಿಂ
ದಂ
ನಡೆನೋಡಿ ಮೆಚ್ಚಿದಳವಳ್ಗೆ ಕರಂ ಹುರುಡಿಂ ಕನಲ್ದು ನೀಂ
ಮನ್ನಿಸೆಯಾತನಂ
ಪಱಿದು ಪತ್ತಿಸಿದಂತಿರೆ ಪೋಲ್ವನಂಗಜಂ    ೯೪

ಎಂಬುದುಮರಸಿ ಸಕಂಪೆಯುಂ ಸೋತ್ಕಂಠೆಯುಂ ಸಕೌತುಕೆಯುಂ ಸೋತ್ಸುಕೆಯುಂ ಸಸಂಭ್ರಮೆಯುಮಾಗಿ ತನ್ಮಾರ್ಗದತ್ತದೃಷ್ಟಿಯಾಗಿರ್ಪುದುಮನ್ನೆಗಂ –

ರತಿಗಳ್ ಶೃಂಗಾರಮಂ ಶೋಭೆಗಳತಿಶಯಮಂ ಜಾತಿಗಳ್ ರಾಗಮಂ ದೇ
ವತೆಗಳ್
ಕಾಮ್ಯಾರ್ಥಮಂ ನೀತಿಗಳುದಯಮನಾಕ್ಷೇಪದಿಂ ತರ್ಪವೋಲು
ದ್ಧತೆಯರ್
ತತ್ಕಾಂತೆಯರ್ಕಳ್ ತರೆ ಮಧುಸಹಿತಂ ಕಂತು ಬರ್ಪಂತೆ ಬಂದಂ
ಚತುರಾಮಾತ್ಯಪ್ರಯುಕ್ತಂ
ಸರಸಕೃತಿಕಳಾನರ್ತಕೀನೃತ್ಯರಂಗಂ         ೯೫

ಇದು ವಿದಿತ ವಿವಿಧ ಪ್ರಬಂಧ ವನವಿಹಾರಪರಿಣತ ಪರಮಜಿನಚರಣರಮ್ಯ ಹೈಮಾಚಳೋಚ್ಚಳಿತ ನಖಮಯೂಖ ಮಂದಾಕಿನೀ ಮಜ್ಜನಾಸಕ್ತ ಸಂತತೋತ್ಸಿಕ್ತ ದಾನಾಮೋದಮುದಿತ ಬುಧಮಧುಕರ ಪ್ರಕರ ಕವಿರಾಜಕುಂಜರ ನೇಮಿಚಂದ್ರ ವಿರಚಿತಮಪ್ಪ ಲೀಲಾವತೀಪ್ರಬಂಧದೊಳ್ ನಾಯಿಕಾವಿರಹವರ್ಣನಂ

ಏಕಾದಶಾಶ್ವಾಸಂ