ಜಿನಪತಿಯ ಪೆರ್ಮೆಗವನೊ
ರ್ವನೆ
ದಾಸನೆ ದಾಸನಲ್ಲದವರಾರ್ ಜಗದೊಳ್
ಜಿನನುಂಡೊಲ್ಲದೆ
ಬಿಸುಟಿಂ
ದ್ರ
ನರೇಂದ್ರಾದ್ಯಖಿಳ ರಾಜ್ಯ ಸುಖಮುಣ್ಬವರೊಳ್     ೭೧

ನಿರಹಾಸಂ ಕುಚಕಂಜಕುಟ್ಮಲಯುಗಂ ಮುಗ್ಧಾನನಂ ವರ್ಜಿತಾಂ
ತರಹಾಸಂ
ಕುಸುಮಚ್ಯುತಂ ಕಚಭರಂ ಕರ್ಣಂ ಕನತ್ಕರ್ಣಿಕಾಂ
ಬುರುಹಂ
ಭ್ರಷ್ಟಮೆನಲ್ಕೆ ಶೋಕತಪಮಂ ನಿಷ್ಕೋಶ ನಿಗ್ರಂಥಮಿ
ರ್ದರುಹದ್ದಾಸನ
ಖಡ್ಗಮೀವುದು ರಿಪುಸ್ತ್ರೀಯರ್ಗೆ ಕಾರುಣ್ಯದೊಳ್          ೭೨

ಜಿನದತ್ತೆಯೆಂಬಳಾ ಭೂ
ಪನ
ಕುಲವಧು ತನ್ನ ದಾಸನೆಂದೊಸೆದು ಕರಂ
ಜಿನನಿತ್ತ
ಪುಣ್ಯಲಕ್ಷ್ಮಿಯ
ನನುಕರಿಸುವಳೆಸೆಯೆ
ಸಿರಿಯೊಳಂ ಶೀಲದೊಳಂ      ೭೩

ಮೊಲೆಬಿಣ್ಪಿಂ ಮುಱಿದಪುದೀ
ಲಲನೆಯ
ಬಡನಡುವಿದೆಂದು ಕುಸುಮಶರಂ ಕೈ
ವಲದಾಂಕೆಗೊಟ್ಟ
ನೀಲದ
ಸಲಿಗೆಯಿದೆನೆ
ರೋಮನಾಜಿ ರಾಜಿಸಿ ತೋರ್ಕುಂ      ೭೪

ಅಲರಾಗಿ ನಿರೀಕ್ಷಿಸಿ ಕಾ
ದಲನಂ
ಮುಗುಳಾಗಿ ಸೋಂಕಿದೆಡೆಯೊಳ್ ಕಾಮಂ
ಗಲಸದೆ
ಸರಳಾಗಿ ಪೞಂ
ಚಲೆವುದು
ತೊಳವವಳಪಾಂಗಲವಲರ್ಗಳಪಾಂಗಂ    ೭೫

ಪೋ ವ್ರತಮಾವಪೆಂಡಿರೊಳಮಿರ್ದೊಡಮೇನೊ ವಿಳಾಸವಾಂತ ನಿ
ತ್ಯವ್ರತಮಾಕೆಯೊಳ್
ಸೊಬಗುವೆತ್ತ ಗುಣವ್ರತಮಂ ಜಗಂ ವಿಳಾ
ಸವ್ರತಿ
ಕೊಂಡದೇ ಸವಿರತಿವ್ರತಮಾ ನೃಪನೆತ್ತಿದೇಕಪ
ತ್ನೀವ್ರತಮೆಯ್ದೆ
ಸೂಚಿಸುವೆ ಕಾಂತೆಯ ರೂಪಿನ ಪೆಂಪಿನೊಲ್ಮೆಯಂ       ೭೬

ಮಂದಾರಮೊಂದು ಪುಟ್ಟುವ
ಮಂದರಮುಂ
ವಾರ್ಧಿವೇಲೆಯುಂ ಮಾಣಿಕಮೊ
ಲ್ದೊಂದೊಗೆವ
ರೋಹಾಣದ್ರಿಯ
ಮುಂ
ಧರೆಯುಂ ದೊರೆಗೆ ವಂದ ಪತಿಯುಂ ಸತಿಯುಂ ೭೭

ವ|| ಅಂತಿಷ್ಟವಿಷಯಕಾಮಭೋಗಂಗಳನನುಭಿಸುತ್ತುಮಿರ್ಪಿನಮೊಂದು ದಿವಸಂ

ಮುನಿಚರ್ಯಾಕಾಲಮೀ ಧಾರ್ಮಿಕ ಜಿನಗೃಹಮಂ ಪುಣ್ಯಮೆಯ್ತರ್ಪ ಕಾಲಂ
ಜಿನದತ್ತಾದೇವಿ
ದಾನಂಗುಡುವ ಬವಸೆಯೊಳ್ಗಾಲಮೀ ಕಾಲಮಾರುಂ
ಮನೆಯೊಳ್
ಸೂನಂಗಳಂ ಸಂಧಿಸಿಡೆ ತಿಮಿರೆಮಾಚಾರದಿಂದೆಂದು ಪೃಥ್ವೀ
ಜನಕೆಲ್ಲಂ
ಸಾಱುವಂತೇನೊಗೆದುದೊ ಮಿಗೆ ಮಧ್ನಾಹ್ನ ಶಂಖಪ್ರಣಾದಂ   ೭೮

ಸದಮಳ ಪಾತ್ರಕ್ಷೇತ್ರದೊ
ಳಿದು
ಬಿತ್ತುವ ಪದದ ಪೊೞ್ತು ಗೃಹಮೇಧಿಗದೇ
ವುದೊ
ಮಧಾಹ್ನದ ಪೊೞ್ತ
ಲ್ಲದ
ಪೊೞ್ತೂ ಬಂಜೆವೊೞ್ತು ತಾನದು ಪೊೞ್ತೇ  ೭೯

ವ|| ಅದಂ ಕೇಳ್ದು ಕಾರ ಮೊೞಗಂ ಕೇಳ್ದ ನವಿಲಂತೆ ನಲಿದು ಯತಿಗಳ ಪಾವನ ಪದಪದ್ಮಂಗಳಂಗಣಮಂ ಮೆಟ್ಟಿ ಪವಿತ್ರಂ ಮಾೞ್ಪ ಪೊೞ್ತೂದುದೆಂದು ಬೇಗಮಬ್ಬೆಗಳಂ ಬಂದಿಸಿ ಬಸದಿಯಂ ಪೊಱಮಟ್ಟರಮನೆಯ ಬಾಗಿಲ್ವಾಡದೊಳ್ ವಿಭವಂ ಬೆರಸು ಬಂದಿರ್ವಳನ್ನೆಗಂ

ಹರಿಯುಂ ಕರಿಯುಂ ಪುಲಿಯುಮ
ಹರಿಣಿಯುಮೊಂದಾಗಿ
ಮಚ್ಚಿ ಬೆಚ್ಚದೆ ಬೆನ್ನೊಳ್
ಬರೆ
ಗಡಣದೊಳಾ ನಗರ
ಕ್ಕರಣ್ಯದಿಂ
ಚರಿಗೆಗೊಟ್ಟನಂಗಜಮಲ್ಲಂ       ೮೦

ಪೆಗಲೊಳ್ ದಕ್ಷಿಣಹಸ್ತಮೊಪ್ಪೆ ಸಸಿನಂ ವಾಮಂ ಕರಂ ತಾಗೆ ಗುಂ
ಡಿಗೆಯಂ
ದೃಷ್ಟಿಯುಗ ಪ್ರಮಾಣ ಪರದೊಳ್ ಮತ್ತೆತ್ತಲುಂ ಸೂಸದೊ
ಳ್ಪುಗೆ
ನಿಷ್ಪಂದಮೆನಲ್ಕೆ ಪೂರ್ವತಮ ಕಣ್ಣಂ ಮುಟ್ಟುವಂತೊಯ್ಯಗೊ
ಯ್ಯಗೆ
ಕಾಲ್ಗಳ್ ನೆಲಮುಟ್ಟೆ ಚಂದ್ರಗತಿಯಿಂ ಬಂದಂ ಮುನೀಂದ್ರೋತ್ತಮಂ         ೮೧

ಒಂದುಂ ಪ್ರಾಣಿಗೆ ಭಯಮುಂ
ದಂದುಗಮುಂ
ನೋವುಮೆಯ್ದೆ ಬಾರದ ತೆಱದಿಂ
ಬಂದಂ
ಚರಿಗೆಗೆ ಬನದಿಂ
ಮಂದಾನಿಲನಂತೆ
ಕುಕ್ಕುಟಾಸನದೇವಂ     ೮೩

ಬೞಿಸಂದು ಮುಂದೆ ಕಂಪಿಂ
ಗೆೞಲೆ
ಮನಂ ಮೇಲೆ ನೆಗೆದ ಮಲಧಾರಿಗೆ ಮೆಯ್
ನೆೞದಾದಳಿಪತಿ
ಪೀಲಿಯ
ತೞೆಯಂಬರದಲ್ಲಿ
ಬರ್ಪತೆಱನಾಯ್ತಾಗಳ್    ೮೩

ಅಡಿಗೆಱಪ ಜನಕ್ಕಾಗಳೆ
ಕುಡಲೆ
ಸಹಸ್ರಾಕ್ಷಪದವಿಯಂ ಮುನಿ ಕಯ್ಯೊಳ್
ಪಿಡಿದರ್ಪಂತೆವೊಲೆಸೆದ

ತ್ತಿಡಿದೊಪ್ಪುವ
ಪಲವು ಕಣ್ಣಪೀಲಿಯ ಕುಂಚಂ  ೮೪

ಕಾಣಲ್ಬಾರದ ಸೂಕ್ಷ್ಮ
ಪ್ರಾಣಿಗಳಂ
ನೋಡಿ ನಡೆಯಲೆಂದಾ ಜೀವ
ತ್ರಾಣನ
ಕಾಲ್ಗಂ ಕಣ್ಗಳೆ
ಮಾಣಿಕದಂತಾದುವೆನಿಸಿ
ತೊಳಗಿದುವುಗುರ್ಗಳ್      ೮೫

ಮುನಿಪತಿಯ ತೋರ್ಪ ಬರಿಯೆ
ಲ್ವಿನ
ಪುದುವಿಂ ಬೂದಿವಾಱುತಿರ್ಪಿರವಿಂ ಕಾ
ಮನ
ಸುಟ್ಟ ಕಾಡಿದೆನೆ
ರ್ಗನೆ
ಗನಿತುದು ಮಲದ ಮಸಿಯ ಮಸಕದಿನಂಗಂ    ೮೬

ಉಲಿವ ದಯಾತರಂಗಿಣಿಯ ಪಾವಸೆ ಕರ್ಬುರ ಕಾಯದೀಪ
ಜ್ಜಲಮಮರ್ದಪ್ಪಿಕೊಂಡಸಮಲಲಕ್ಷ್ಮಿ
ಯಮಯ್ಯ ಮೃಗೋದ್ಭವಂ ತಪೋ
ನಲ
ನವಧೂಮಲೇಖೆ ಧೃತಿಪರ್ವತ ಲಗ್ನಘನಾಳಿ ಪಾಱಿಪೋ
ಗೆಲೆ
ಪೊಱಮಟ್ಟ ಪಾಪಮೆನಿಸಿತ್ತು ಮಲಂ ಮಲಧಾರಿದೇವನಾ   ೮೭

ವ|| ಅಂತು ತನ್ನ ಪುಣ್ಯಮೆ ಬರ್ಪಂತೆ ಬರ್ಪ ಪರಮರ್ಷಿಯರಂ ಕಂಡೇೞ್ತರ್ಪ ನಿಧಾನಮಂ ಕಂಡಂತೆ ಕೃತಾರ್ಥೆಯಾಗಿ

ನಡೆಮಡಿ ಗಂಧವಕ್ಷತೆ ಫಲಾವಲಿ ಪೂವಿನಮಾಳೆ ಮುತ್ತು
ನ್ನಡಿ
ಕಳಸಂ ವಿಲಾಸಿನಿಯರರ್ಚನೆ ಮಂಗಳಗೀತ ಭೇರಿ ಬೆ
ಳ್ಗೊಡೆ
ಗುಡಿ ತೋರಣಂ ತೊಡಿಗೆ ಸೀಗುರಿ ಚಾಮರಮೆಂಬಿವೊಪ್ಪಮಂ
ಕುಡೆ
ಜಿನದತ್ತೆಯೇಂ ನಡೆದಳೋ ನಿಲಿಸಲ್ ಮಲಧಾರಿದೇವನುಂ         ೮೮

ವ || ಆ ಪ್ರಸ್ತಾವದೊಳ್

ಮಱೆದುಮದೊರ್ಮೆ ಲೌಕಿಕದ ವಾರ್ತೆಯನಾಡದೆ ಕೆತ್ತ ಬಾಗಿಲಂ
ತೆಱೆಯದೆ
ಭಾನುವಸ್ತಮಿತನಾದೊಡೆ ಪೋಗದೆ ಮೆಯ್ಯನೊರ್ಮೆಯುಂ
ತುಱಿಸದೆ
ಕುಕ್ಕುಟಾಸನಕೆ ಸೋಲದ ಗಂಡವಿಮುಕ್ತವೃತ್ತಿಯಂ
ಮೆಱೆಯದ
ಘೋರ ದುರ್ಧರ ತಪಶ್ಚರಣಂ ಮಲಧಾರಿದೇವನಾ  ೮೯

ಮುನಿಪಂ ಚರ್ಯೆಗೆ ಪೋಗುತಿರ್ಪ ಪದದೊಳ್ ಮೆಯ್ಯಲ್ಲಿ ಪತ್ತಿರ್ದ ಪು
ತ್ತಿನ
ಪೋರಿಂ ಪೊಱಮಟ್ಟು ಪೋದ ಮಧುಪಂ ತನ್ನಿಂದೆ ತಾನಾಗಿ
ರ್ಪಿನಮೇೞೆಂಟು
ದಿನಂಬರಂ ಕರುಣದಿಂ ಕೈಯಿಕ್ಕಿಕೊಂಡಿರ್ದ ಯೋ
ಗನಿಯೋಗಂ
ಮಲಧಾರಿದೇವ ಮುನಿಪಂಗಕ್ಕುಂ ಪೆಱರ್ಗಕ್ಕುಮೇ         ೯೦

ವ|| ಎಂದೋದುವ ಮಂಗಳಪಾಠಕರ್ಗೆ ಮಂಗಳಭೂಷಣಂಗಳಂ ಮಚ್ಚುಗೊಟ್ಟು ತಚ್ಚರಣ ಕಮಲಂಗಳಂ ವಿಮಲವಿಲೋಚನಮರೀಚಿಚ್ಛಟಾ ಚಂದನ ಚರ್ಚೆಗಳಿನರ್ಚಿಸುತ್ತು ಮಿದಿರ್ವಂದು

ಅಱಿಯದೆ ಗೆಯ್ದನೆನ್ನಿನಿಯನಾತನ ಮಾಡಿದ ದುರ್ವಿನೀತಿಯಂ
ಮಱೆದೆನಗೞ್ಕಱಿಂ
ಪುರಷಭೈಕ್ಷಮನಿಕ್ಕು ದಯಾಪರತ್ವಮಂ
ಮೆಱೆ
ಮಱುಮಾತು ಬೇಡ ಗಡಮೆಂದು ಮನೋಜನ ಕಾಂತೆ ಬೆರ್ಚಿ ಬಂ
ದೆಱಗುವ
ಪಾಂಗಿನಿಂದೆಱಗಿದಳ್ ಮಲಧಾರಿಯ ಪಾದಪದ್ಮದೊಳ್        ೯೧

ವ|| ಅಂತು ನಿಧಾನಕ್ಕೆಱಗುವ ದೀಪವರ್ತಿಯಂತೆಱಗಿ ತುಱುಗಿದರ್ಚನೆಗಳಂದರ್ಚಿಸಿ ಗುರುಭಕ್ತಿಪೂರ್ವಕಂ ಬಂದಿಸಿ ನಿರ್ಮಲವಪ್ಪ ನಿಮ್ಮಡಿಗಳೆಂಬರುಣಾಂಬುಜಗಳೆನ್ನ ಸದನಸರೋವರದೊಳೊಂದು ಸಿರಿಯಂ ನಿಲಿಸಲ್ವೇೞ್ಕುಮೆಂದು ದರಹಸಿತ ವದನಾರವಿಂದೆಯಾಗಿ

ನಿಲಿಸುವೊಡೆ ನಿನ್ನ ಪುರುಷಂ
ನಿಲಿಸುಗೆ
ಮೇಣ್ ನಿನ್ನ ಪುತ್ರರುಳ್ಳೊಡವರ್ ಮೇಣ್
ನಿಲಿಸುಗೆ
ಪೆಂಡಿರ ಕಯ್ಯೊಳ್
ನಿಲಲಱಿವರೆ
ಪೇೞಿಮಬ್ಬೆಗಂಡವಿಮುಕ್ತರ್    ೯೨

ವ|| ಎಂದು ಪರಮ ಋಷಿಯರ್ ಪರಸಿ ಪೋಪುದುಮಾ ಮಹಾಭಾಗೈಗೆ ಭೋಗಾಂತರಾಯಂ ಮಾಡಿದ ನೋವುಂ ಮಕ್ಕಳ್ವಡೆಯದ ನೋವುಂ ಅೞಲನೊದವಿಸೆ ಮನಮಿಕ್ಕಿ ಮನ್ನುಮಿಕ್ಕು ಮಗುಳ್ದು ಬರ್ಪಾಗಳ್ ಮೊಗಂಮುರಿದು ಮೊಲೆಯೂಡಲಡ್ಡಸಾರ್ಚಿದ ಪುಲ್ಲೆಯಿಂರ್ದಂತೆ ಪರಿಚಯಕ್ಕೆ ಪರಿತಂದು ಕಡೆವಾಯ ಪಾಲಂ ತೊಡೆಯೊಳ್ ತಡಗಾಲ್ಪೊಡೆದು ಕೊಣಕಿಡುವ ಕೊಣಸುಗಳಂ ಪಿಡಿದು ಮುದ್ದಾಡಿಸುತ್ತುಂ ತಾಯ ಬಾಯ ಕುಡುಕಂ ಕೊಂಡು ನೇವುರದ ನುಣ್ಚರಕ್ಕೆ ಮರಳ್ವ ಮರಾಳಬಾಳಕಂಗಳ ಮೊಗದೊಳ್ ಮುಗುಳ್ನಗೆವಾಲಂ ಚೆಲ್ಲಿ ಚೆಲ್ಲವಾಡುತ್ತುಂ ನವಿಲ್ವಾಣತಿಯ ಬೆನ್ನನೇೞಿ ಮಂಡೆಯ ಚಂಡಿಕೆಯಂ ಕರ್ಚಿ ಸೆಳೆವ ಸೋಗೆಯ ಮಱಿಯ ಮುದ್ದುತನಮಂ ಮುದ್ದುಗಣ್ಗಳ ಬೆಳಗೆಂಬೆಳಮಿಂಚಿನ ಗೊಂಚಲಿಂ ಮುಂಡಾಡುತ್ತುಂ ಮುನಿಯಾಡಿದ ಮಾತಿಂ ಮೊಳೆತುದೆನಿಪ ಪುತ್ರದೋಹಳದಿಂ ಸಮನಿಸಿದುದ್ದೀಪನ ಭಾರವೆಂಬಮರ್ದಿನ ಮೞೆಯಿಂ ಮಡಲ್ತು ನನೆಕೊನೆವೋಗಿ ರಾಜಾಂಗಣದ ಕೆಲದ ಕುಲಚೈತ್ಯಾಲಯಮಂ ಬಳಸಿದ ಬನದೊಳಗಣ ಮಲ್ಲಿಕಾ ಮಂಡಪದ ಮುಂದಣ ತವಂಗದ ಲೋವೆಯ ಮುತ್ತಿನ ಮತ್ತವಾರಣದೊಳ್ ಕುಳ್ಳಿರ್ದು ಕಳಾಧರೆಯೆಂಬ ಕೆಳದಿಗಿಂತೆಂದಳ್

ಇವೆ ಬಾಯ್ದೆಱೆಯಿಂ ಮುತ್ತುಂ
ಪವಳಮುಮೀಯಸಿಯ
ನುಡಿಯೆ ಸುರಿದಪುವೆಂಬಂ
ತೆವೊಲಬಲೆ
ನುಡಿಯೆ ಪಲ್ಗಳ
ಚವಿ
ಯುಂ ತುಟಿದಳಿರೆ ಕೆಂಪುಮೇಂ ಕೆದಱಿದುದೋ    ೯೩

ಒಡನೆಯ ಚಕ್ರವಾಕಿ ಪೊಸವಾಣತಿ ಕೋಗಿಲೆಯೀಱಿಲಿಂದು ಕೇ
ಳ್ಗಡ
ಗಿಳಿವೆಣ್ಗೆ ಪೊತ್ತಿನೊಳಗೆಯ್ದೆ ನವಿಲ್ ಮನೆದೀವಿ ಮಕ್ಕಳಂ
ಪಡೆದುದು
ನೋಡ ಶಾರಿಕೆಯ ಚೊಚ್ಚಲ ಶಾಬಕಮೋದಿದಪ್ಪುದೀ
ನಡೆದುದೆ
ತಾಯ ಬೆನ್ನೊಳೆ ತಳರ್ನಡೆಯಿಂ ಕಳಹಂಸಪೋತಕಂ         ೯೪

ಎನ್ನೋರಗೆಯಂಗನೆಯರ್
ಕನ್ನಡಿಯಂ
ನೋಡುವಂದದಿಂ ನೋಡಿದಪರ್
ಪೊನ್ನ
ಸಸಿಯಂತೆ ಮಿಸುಗುವ
ರನ್ನದ
ಮೊಳೆಯಂತೆ ತೊಳಪ ಮಕ್ಕಳ ಮೊಗಮಂ     ೯೫

ಮರ್ವಿನ ಭಾಗ್ಯದಿಂ ಹಿಮಕರಾಭ್ಯದಯಂ ತಡವಾದ ಕೇಡಿನಾ
ಶಾರ್ವರಿ
ಲೋಕಮಂ ಪೊರೆವ ಸಸ್ಯಸಮುದ್ಭವದೊಳ್ ವಿಳಂಬಮಾ
ದುರ್ವರೆ
ಮಿಕ್ಕ ಮೌಕ್ತಿಕಭವಂ ವ್ಯವಧಾನಮನಾಳ್ದು ಶುಕ್ತಿಯೆ
ನ್ನೊರ್ವಳೆ
ಕಾಲದೊಳ್ ಫಲಕೆ ಬಾರದ ವಲ್ಲರಿಯಾದೆನೇಕೆಯೋ ೯೬

ಪರಿಕಿಪೊಡಿದೆನ್ನ ತನುವ
ಲ್ಲರಿ
ವಲ್ಲರಿಯಂತೆ ಪುಷ್ಪವತಿಯಾಗಿಯುಮೊ
ಪ್ಪಿರೆ
ಫಲಕೆ ಬಾರದಂತಿದು
ಸುರಗಿಯೊ
ಸಂಪಗೆಯೊ ಮೊಲ್ಲೆಯೋ ಮಲ್ಲಿಗೆಯೋ    ೯೭

ಕಾಳಿಗನಾಗನಂತೆ ಮುಡಿ ಬಂದುದು ತುಂಗಕಟೀತಟಂಬರಂ
ಬಾಳೆಗಳಂತೆ
ಕಣ್ಪರಿದು ಬಂದುದು ಕೆನ್ನೆವರಂ ತೊಳಪ್ಪಿನಂ
ತೋಳ
ಮೊದಲ್ವರಂ ಮಸಕದಿಂ ಮೊಲೆ ಬಂದುವಿದೆನ್ನ ಬೆಂಬರಂ
ಬಾಳಕಗರ್ಭಮಪ್ಪ
ಬಸಿಱೇಕೆಯೊ ಬಾರದು ವಾರಿಜಾನನೇ      ೯೮

ಪನಿತ ಮೊಲವಾಲ ಬಂಬ
ಲ್ವನಿಗಳೊ
ನಸುನಗೆಯೊ ಮೊಳೆಗಳೋ ಪೊಳೆದಪುವೆಂ
ಬಿನಮೊಗೆದ
ಪಲ್ಲಿನೊಪ್ಪುವ
ತನಯನ
ನಗೆಮೊಗಮನೆಂದು ಪೇೞ್ ಕಂಡಪೆನೋ   ೯೯

ನಿಱಿಯ ಸೆಱಂಗನೋಸರಿಸಿ ಕೆಂದಳದಿಂದಮೆ ಕರ್ಚಿಕೊಂಡು ತೂ
ಪಿಱಿದೊಗೆದೞ್ಕಱಿಂದೊಗೆದ
ಪೆರ್ಮೊಲೆಯಂ ಬೆರಲಿಂದವುಂಕಿ ಬಾ
ಯ್ದೆಱೆಗಿದಿರೇಯೆ
ಪಾಲ್ವೊರೆದ ನುಣ್ಬೆರಲಂ ಮೊಲೆಗಿತ್ತು ಪೀರ್ದು
ಣ್ದೆಱೆಯದ
ಕಂದನೆಂದೆನಗೆ ಕಣ್ದೆಱೆಯಿಪ್ಪನೊ ಮಂದಹಾಸಮಂ  ೧೦೦

ಬಱಿದಿರ್ದು ಮೊಲೆಯನೊಲ್ಲದೆ
ಸೆಱೆವಿಡಿದೆನ್ನೊಂದು
ಮೊಲೆಯ ಮೇಲೆ ನೆಱಲ್ದೆ
ನ್ನೆಱೆಯನ
ಕರಕಿಸಲಯಮಂ
ಕಿಱುಮಗನೆಂದೞ್ತು
ನೂಂಕಿ ಮೊಲೆಯುಂಡಪನೋ     ೧೦೧

ಜಕ್ಕುಲಿಸಿ ನೂಂಕಿ ನಗುತೆ ಕೆ
ಲಕ್ಕಾರಮನುಣುತೆ
ಮೊಲೆಯನುಣುತೆನ್ನ ಕುಚಾ
ಗ್ರಕ್ಕೆ
ತಳತಳಿಸಿ ತೊಳಗುವ
ಮಕ್ಕಳ
ಮಾಣಿಕವದೆಂದು ತೊಡವಾದಪುದೋ         ೧೦೨

ಇದಿರ್ವರೆ ಗೆಜ್ಜೆಗಳುಲಿಗೊದ
ವಿದ
ಕಂಕಣದುಲಿಗಳೆಸೆಯೆ ಬರ್ಪಾತ್ಮಜನಂ
ಮದಧಿಪನೆನ್ನಂ
ತರ್ಕೈ
ಸಿದ
ತೋಳಂ ತೆಗೆದದೆಂದು ತೞ್ಕೈಸುಗುಮೋ         ೧೦೩

ನಮಗೋದಲಿಟ್ಟ ದಿವಸಮೆ
ಕುಮರಂ
ತೋರ್ಪಂತೆ ತನ್ನ ಮತಿಯಂ ಸಿದ್ಧಂ
ನಮ
ಸಿದ್ಧಂ ನಮ ಸಿದ್ಧಂ
ನಮ
ಎಂದೆಂದೆನ್ನ ಮುಂದೆ ಬರೆದೋದುಗುಮೋ       ೧೦೪

ಪೊಲೆವೆಣ್ಣೆನಿಪೆನಗೆಂದುಂ
ನಿಲಲೊಲ್ಲದೆ
ತೊಲಗಿ ಪೋಪ ಗಂಡವಿಮುಕ್ತರ್
ಮಲಧಾರಿ
ಸ್ವಾಮಿಗಳಂ
ನಿಲಿಸುವ
ಸತ್ಪುತ್ರನೆನಗದೆಂದಾದಪನೋ    ೧೦೫

ವ|| ಗರ್ಭದ ಬಯಕೆಯಂತಿರ್ಕೆ ಗರ್ಭವನೆ ಬಯಸುವಂತಾದುದೆಂದ ಜಿನದತ್ತೆಗೆ ಕಳಾಧರೆಯಿಂತೆಂದಳ್

ನಂದನರೆನ್ನಯ ಹರಯದ
ಸೌಂದರಿಯರ್ಗಾದರಾಗರೆನಗೆನ್ನದಿರಿ

ನ್ನೊಂದಿರುಳೊಳ್
ತಡೆದುದಯಿಪ
ನೊಂದಿರುಳೊಳ್
ತಡೆಯದುದಯಿಪಂ ತುಹಿನಕರಂ   ೧೦೬

ವ|| ಇದನಾಚಾರ್ಯರಂ ಬೆಸಗೊಳ್ವಂ ಬಿಜಯಂಗೆಯ್ಯಿಮೆನೆ ಬಸದಿಗೆ ಪೋಗಿ ದೇವರುಮನಾಚಾರ್ಯರುಮಂ ಬಂದಿಸಿ ಬೞಿಯಂ ನಿಮಿತ್ತ ಜ್ಯೋತಿಗಳ್ಗೆ ಕೈಗಳಂ ಮುಗಿದು

ಎಮ್ಮ ಕುಲಕ್ಕೆ ವೀರವೃಜಿನಂ ಜಿನರಾಜನೆ ದೈವಮಾಗಿಯುಂ
ನಿಮ್ಮಡಿಯನ್ನರುಂ
ಗುರುಗಳಾಗಿಯುಮುತ್ತಮಪಾತ್ರದಾನದೊಳ್
ಸಮ್ಮದಶೀಲನಪ್ಪ
ಜಿನಶಾಸನದೀಪಕನಪ್ಪ ಲಕ್ಷ್ಮಿಯೊಳ್
ಸಮ್ಮತನಪ್ಪ
ಪುತ್ರನೆನಗಾಗದ ಕಾರಣಮೇಂ ಮುನೀಶ್ವರಾ      ೧೦೭

ವ|| ಎಂದ ಜಿನದತ್ತೆಗೆ ಮುಗುಳ್ನಗೆ ನಗುತ್ತುಮವರಿಂತೆಂದರ್

ತಪದಿಂ ಗುಣದಿಂ ಪುಣ್ಯಮ
ನುಪಾರ್ಜಿಪರ್
ಪಲಬರಾದರವರ್ಗೆಂದೀ ಭೂ
ಮಿಪ
ದಿವಿಜಭವನಮವರ
ಲ್ಲಿ
ಪುಟ್ಟದಿನ್ನೆಲ್ಲಿ ಪುಟ್ಟುಗುಂ ಪುತ್ರವತೀ         ೧೦೮

ಇನಿತೇಕೆ ನಿಮ್ಮ ಮಱುಕಂ
ತನಯಂ
ನಿನಗಾಗಲೆಂದು ತಪಂ ಮಾೞ್ಪಾ
ತನ
ಮಱುಕಮೆ ಸಾಲದೆ ತೇ
ಱಿನನಂ
ಪೂರ್ವಾಶೆ ಪಡೆಯಲೇಂ ಮಱುಗುಗುಮೇ    ೧೦೯

ವ|| ಇದನೀಗಳಿಂತೆ ನಿನ್ನರಸನರುಹದ್ದಾಸನುಂ ಬೆಸಗೊಂಡೊಡೆ ಪೇೞ್ದೆವು, ಪೋಗಿ ಬೆಸಗೊಳ್ಳೆಂಬುದುಂ ಮಹಾಪ್ರಸಾದಮೆಂದು ಪೊಡೆಮಟ್ಟು ಪೋಗುತ್ತಮೆ ಕಳಾಧರೆಯಂ ದೇವನನೊಡಗೊಂಡು ಬಾ ಎಂದು ಕಳಿಪಿ ತಾನಂತವುರಮಂ ಪೊಕ್ಕು ವಿಳಾಸ ನಿಳಯದೊಳಗಣ ಮಣಿಮಂಚದ ಕೆಲದ ಕಾಂಚನವಿಷ್ಟರದೊಳ್ ಪರಿವಿಷ್ಟೆಯಾಗಿರ್ದಳನ್ನೆಗಂ

ಪ್ರಿಯನ ಬರವುಂತೆ ಚಿತ್ತ
ಪ್ರಿಯನಾತನೆ
ಬಂದಪಂ ಮನಸ್ತಾಪಮನತಿ
ಶಯದಿಂ
ಬಂದಾಱಿಪವೊಲ್
ನಯವೇಱಿ
ಬೆಮರ್ತ ಮೈಗೆ ದಕ್ಷಿಣಪವನಂ   ೧೧೦

ವ|| ಎಂಬಿನಮಿನಿಯಳ ಮೊಗಮತ್ತಲೆ ಕಣ್ಣಾಗಿ ಬರುತ್ತುಮರಸಂ ತನ್ನೊಳಿಂತೆಂದಂ

ಕಿಱಿದನುರಾಗಮಂ ಕಿಱಿದು ದುಮ್ಮನಮಂ ಕಿಱಿದೊಂದು ಹಾಸಮಂ
ಕಿಱಿಯೞಿಯೞ್ಕೆಯಂ
ಕಿಱಿದು ಸಂತಸಮಂ ಕಿಱಿದೊಂದು ಖೇದಮಂ
ಸೆಱೆವಿಡಿದೆನ್ನ
ವಲ್ಲಭೆಯ ಮುದ್ದುಮೊಗಂ ವ್ಯಭಿಚಾರವಿಶ್ರಮಂ
ಮೆಱೆದಪುದೋ
ದಿನಾಗಮದ ರಾತ್ರಿವಿರಾಮದ ಪದ್ಮದಂದಂದಿಂ ೧೧೧

ವ|| ಎಂದು ಬಗೆಯುತ್ತುಂ ಬಂದರಸಂ ಸಿರಿಮಂಚಮನಳಂಕರಿಸಿ ಕುಳ್ಳಿರ್ಪುದುಂ ಕಳಾಧರೆ ಮಣಿಮಯವಾದ ಪೀಠಂ ಬೆಟ್ಟಿತ್ತೆಂಬಂತಿರಗಲೆ ನೂಂಕಿ ಮೆಲ್ಲಿದುವಪ್ಪ ತನ್ನ ನುಣ್ದೊಡೆಗಳರಸನ ಪಾದಪಲ್ಲವಕ್ಕೆ ಸಾರ್ಚಿ ಪಾಣಿಪಲ್ಲವಂಗಳಿಂ ಪಿಡಿಕೈಸುತ್ತುಮಿರ್ಪುದುಮರಸನಿಂತೆಂದಂ

ಅರಸನ ನುಡಿ ಮುನ್ನಮೆ
ರ್ಣರಸಾಯನಮದಱ
ಮೇಲೆ ಸುತಲಾಭಕಥಾಂ
ತರಮೆನೆ
ಸರಸೀಜಾಸೈಗೆ
ಮರುಗಂ
ಪೂತತ್ತು ಕರ್ವು ಪಣ್ತುದು ಪೆಱತೇಂ ೧೧೨

ಅರಸಿಯ ವಕ್ತ್ರಪದ್ಮಮಿನಿತೇಕೆಯೊ ಮಾಗಿಯ ಪದ್ಮದಂದದಿಂ
ಕೊರಗಿದುದಿಂತಿದೇಕೆ
ಮಧುವಂ ನೆಱೆ ಕಾಱಿದ ನೈದಿಲಂದದಿಂ
ನೆರೆದುವು
ನೀಳ್ದ ಕೆಣ್ಬೊಣರ್ಗಳೊಲ್ಲದೆ ತಂಬುಲಮಂ ಪ್ರವಾಳದಂ
ತಿರೆ
ಪೊಳೆದಪ್ಪುದೊಪ್ಪುವರುಣಾಧರಮೇಕೆಯೊ ಪೇೞ್ ಕಳಾಧರೇ         ೧೧೩

ಬಾಡಿದ ದೇವಿಯ ತನುಲತೆ
ಬಾಡಿಸಿದುದು
ನೋಡಿ ಬಾಡುವೆನ್ನಯ ಮೊಗಮಂ
ಬಾಡಿ
ಬಸವೞಿದು ಸಸಿಯಮ
ಬಾಡಿಸಿದುತ್ಪಳಿನಿಯಂತೆ
ಮುನ್ನೇಸಱಿನೊಳ್          ೧೧೪

ನೀರ್ವಡಿಸಿ ಪಿಡಿದ ಕರಿಯಳಿ
ನೀರ್ವೂವಂ
ಚುಂಬಿಸುತ್ತೆ ನಾರಿಯ ನಾಣಿಂ
ಸಾರ್ವ
ಮೊಗಂ ಕೞ್ತಲೆಯಂ
ಪೀರ್ವಮೃತಕರಂಬೊಲೋಪನಂ
ನುಡಿಯಲೊಡಂ    ೧೧೫

ವ|| ಎಂಧರಸಂಗೆ ಕಳಾಧರೆಯಿಂತೆಂದಳ್

ಮಲಧಾರಿಸ್ವಾಮಿಗಳಂ
ನಿಲಿಸಲ್ಫೋದಲ್ಲಿ
ದೇವಿಗವರಿಂತೆಂದರ್
ನಿಲಿಸುಗೆ
ನಿನ್ನಯ ಪುರುಷಂ
ನಿಲಿಸುಗೆ
ಮೇಣ್ ನಿನಗೆ ಪುತ್ರರುಳ್ಳೊಡೆ ಸಾಲ್ವೆಂ       ೧೧೬

ವ|| ಎಂದಾ ಮುನಿವೃಂದಾರಕನ ವಚನದಿನಾದ ಪುತ್ರದೋಹಳದಾಹಂ ದೇಹಮಂ ಕರಗಿಸೆ ಕರಮೞಲ್ದೞುತ್ತುಂ ಕರೆಯುತ್ತುಮುಣ್ಣದೆ ಕುಡಿಯದಾರ್ ಸಂತೈಸಿದೊಡಂ ಸಂತಮಿರದಿರ್ದಪಳದೇಕೆನೆ

ಮುನಿಭಾಸ್ಕರನಿಂದಮೆ ಬು
ದ್ಧಿನಿಯಮನಸ್ಸೂರ್ಯಕಾಂತದೊಳ್
ಪುಟ್ಟಿದ ನಂ
ದನದೋಹಳದಹನಂ
ದೇ
ವನ
ವಾಕ್ ಚಂದ್ರಿಕೆಯಿನಲ್ಲದೇನಾಱುಗುಮೇ ೧೧೭

ವ|| ಎಂಬುದುಮರಸನರಸಿಗಿಂತೆಂದಂ

ಎನ್ನ ವಿಷಾದವಲ್ಲದೆ ವಿಚಾರಿಸೆ ನಿನ್ನ ವಿಷಾದವಲ್ಲಿದೇ
ಕೆನ್ನತಿ
ಭಿನ್ನವಾಯ್ತು ಮಹಿಭಾರದಿನೆನ್ನ ಭುಜಂ ತನೂಜನೊ
ರ್ವನ್ನಿನಗಾದೊಡಾ
ಪೊಱೆಯನೆತ್ತಿ ಸುತಾದ್ರಿಗೆ ಬರ್ದೆನೆಂದು ತೋ
ಳನ್ನಿಮಿರ್ದಪ್ಪೆನುಬ್ಬೆಗಮಿದೆನ್ನದೊ
ನಿನ್ನದೊ ಪೇೞ್ ಮನಃಪ್ರಿಯೇ         ೧೧೮

ಅರ್ಣವವೃತ ಭೂಭರಮಂ
ನಿರ್ಣಯಿಸುವ
ಪುತ್ರನಲ್ಲಿ ಗತಿವಡೆಯದೆ ಪೋ
ಪರ್ಣರಪರ
ಪುತ್ರಸ್ಯಗ
ತಿರ್ಣಾಸ್ತಿಯೆನಿಪ್ಪ
ವಾಕ್ಯವಾಯ್ತಾದುದಱಿಂ    ೧೧೯

ವ|| ಸದ್ಧರ್ಮಲಾಭಮುಂ ಸತ್ಪುತ್ರಲಾಭಮುಮಭಯಭವಹಿತಕರಮನೆರಡುಮಂ ಪಡೆಯದಾನೆರಡಱಿಂ ಕೆಟ್ಟೆನೆಂದರಡಿಲ್ಲದಾನುಮಿದನೆ ಚಿಂತಿಸಿ ಸೊಡರಿರ್ದಂತೆ ಕೞ್ತಲೆಯಂ ತೊಡುವುದು ಮೂರ್ಖಂಗಮೊಳಗಾಗಿಲೆಂದು ಪೋಗಿ ನಮ್ಮ ಕಲಗುರುಗಳಪ್ಪ ನಿಮಿತ್ಯಜ್ಯೋತಿಗಳ ಚರಣನಖಜ್ಯೋತಿಗಳ್ಗೆ ಕೞ್ತಲೆಯಂ ಕಳೆಯೆಂದೆಱಗುವಂತೆಱಗಿ ಬೆಸಸಿಮೆಂದು ಬೆಸಗೊಂಡೊಡೆ ದತ್ತಾವಧಾನರಾಗಿ ನಮೋಸ್ತುಗಳ್ ನಿಮಿತ್ತಮಂ ನಿಶ್ಚಯಿಸಿ ನೋಡಿ

ಹರಿವಂಶೋದಿತವಿಕ್ರಮಂ ವಿವಿಧ ವಿದ್ಯಾತೀರ್ಥಹಂಸಂ ಸುಧಾ
ಕರಶೀಲಂ
ವಸುದೇವ ಕೇಳಿ ನಿಳಯಂ ನಾನಾ ನಯೋಪಾಯ ಭಾ
ಸುರ
ಭಾಗ್ಯೋದಯ ಪದ್ಮನಾಭನಿಭರಾಮಾಕಾರಮಂತ್ರಂ ನಿಜಾ
ಚರಿತೋಚ್ಚಾರಿತೆ
ನೇಮಿನಾಥಚರಿತಂ ಸೌಜನ್ಯಜನ್ಮವ್ರತಂ     ೧೨೦

ಇದು ಮೃದುಪದಬಂಧುರ ಸರಸ್ವತೀ ಸೌಭಾಗ್ಯವ್ಯಂಗ್ಯಭಂಗಿ ನಿಧಾನ ದೀಪವರ್ತಿ
ಚತುರ್ಭಾಷಾ
ಕವಿಚಕ್ರವರ್ತಿ ನೇಮಿಚಂದ್ರ ಕೃತಮುಂ ಶ್ರೀಮತ್ಪ್ರತಾಪ ಚಕ್ರವರ್ತಿ ವೀರಬಲ್ಲಾಳದೇವ ಪ್ರಸಾದಾಸಾದಿತ ಮಹಾಪ್ರಧಾನ ಸೆಜ್ಜೆವಳ್ಳ ಪದ್ಮನಾಭದೇವ ಕಾರಿತಮುಮಪ್ಪ ನೇಮಿನಾಥಪುರಾಣದೊಳ್

ಪ್ರಥಮಾಶ್ವಾಸಂ

ಸಮಾಪ್ತಂ