ತಂದೆ ತಪಕ್ಕೆ ಪೋದೊಡೊಳಗಂ ಪೊಱಗಂ ಸುಡುತಿರ್ಪ ತಾಪಮಂ
ನಂದಿಸುತಿರ್ದುದಿನ್ನೆವರಮೆನ್ನ
ಮನಂಗೊಳುತಿರ್ಪ ತದ್ವಚ
ಶ್ಚಂದನದಣ್ಪುಮೆನ್ನ
ತನುವಾರ್ವಿನಮಿಕ್ಕೆಮ ತತ್ಪದಾರ್ಚನಾ
ಚಂದನದಣ್ಪುಮಿನ್ನೆನಗೆ
ಸಾಯದೆ ಸೈರಿಸುವಾಸೆ ಯಾವುದೋ  ೫೧

ಪೂಜ್ಯರುಮೇಕೆ ಪೇೞ್ಪಸುಗೆದಪ್ಪುವರಾ ಪುರುಷಾರ್ಥಸಂಗ್ರಹಂ
ಪ್ರಾಜ್ಯಮಿದೆನ್ನದಾಂ
ಪಿರಿದುಮೊಲ್ಲದೊಡಂಬಡೆ ಬೇಡಿಕೊಂಡು ಸಾ
ಮ್ರಾಜ್ಯಮನಿತ್ತವೋಲೆನಗೆ
ತನ್ನ ಜಗತ್ಪ್ರಯ ಪೂಜ್ಯಮಂ ತಪೋ
ರಾಜ್ಯಮನೋವುದಂ
ಕುಡದೆ ಪೋಪುದು ಮಜ್ಜನಕಂಗೆ ಮಾರ್ಗಮೇ       ೫೨

ಬಿರವೇೞ್ಪತ್ತಿಯನೆಯ್ದೆ ಪೂಡಿ ತರವೇೞ್ತೇರೆಲ್ಲಮಂ ಪಲ್ಲವೇೞ್
ಕರಿಯಂ
ಭೋಂಕನೆ ಕಟ್ಟವೇೞ್ಕುದುರೆಯಂ ಸೂಳೈಸವೇೞ್ಭೇರಿಯಂ
ಭರದಿಂದಾಂ
ನಡೆದಿಂದೆ ಧಾತ್ರಿ ಬಿಡುವಂತೀ ಸ್ಥೈರ್ಯಮಂ ಶೌರ್ಯಮಂ
ಸುರರಾಜಂ
ಬಿಡುವಂತು ಬೀಡುವಿಡುವೆಂ ದೇವಾಚಳಪ್ರಸ್ಥದೊಳ್         ೫೩

ವ|| ಎಂದಾಸ್ಥಾನದನೆರ್ದು ಎನ್ನ ಪೆತ್ತ ತಂದೆಯುಮಂ ಜಾಣಂ ಪೆತ್ತ ತಂದೆಯುಮಂ ಕಂಡು ಪರಕೆಗೊಂಡಲ್ಲದಾಹಾರಂಗೊಳ್ಳೆನೆಂದಪರಾಜಿತನಮರಗಿರಿಗೆತ್ತಿ ನಡೆಯೆ ಪಡೆಯ ಪದಘಟ್ಟಣೆಯಿಂ ಪೊಡವಿಯಿಂ ನೆಗೆದ ಕುಂಕುಮದ ಪುಡಿಯಂತಪ್ಪ ಪುಡಿ ಕಣ್ಣಂ ಪುಗೆ ಪುರಂದರಂ ಪರಿನಿಮೀಲಿತ ನಯನನಾಗಿ ಬೆರ್ಚಿ ಬೆಗಡುಗೊಂಡಿದೇನೆಂದು ಬಗೆದು ನೋಡಿ ನಸುನಕ್ಕು ಕುಬೇರನಂ ಬರಿಸಿ ಬೆಸಸೆ

ನಂಬಿಸಲೆಂದು ಮಾಗಿಯೊಳೆ ಮಾಟದ ಮಲ್ಲಿಗೆವೂಗಳಂ ಮರು
ಳ್ದುಂಬಿಗೆ
ತೋರ್ಪವೋಲ್ವಿಕಳನಾದಪರಾಜಿತ ರಾಜಶೇಖರಂ
ಗಂಬರದೊಳ್
ಸಭಾಸಹಿತಮಾ ಜಿನರಾಜ ಮಹರ್ಷಿರಾಜರಂ
ಶಂಬರನಂತೆ
ಮಾಯೆಯೊಳೆ ತೋಱಿದನಾ ಧನದೈಂದ್ರಜಾಲಿಕಂ        ೫೪

ವ|| ಅಪರಾಜಿತಂ ಕಂಡು ಕೃತಾರ್ಥನಾದೆನೆಂದು ಬಂದಿಸಿ ಬಂದು ಪರಿಣಾಮದಿಂ ಪಾರಿಸಿ ತನ್ನ ಗುರುಗಳ ರೂಪನೆ ಕರುವಿಡಿಸುವ ಕಡೆಯಿಸುವ ಕಂಡರಿಸುವೆ ಬೆಸನೆ ಬಸನಮಾಗಿ

ಜಿನನ ಮತವೆನ್ನ ಮನವದು
ಜಿನನಾಕೃತಿಯೆನ್ನ
ನಯನವದು ಪರಮಾರ್ಥಂ
ಜಿನನ
ನುಡಿಯೆನ್ನ ಕಿವಿಯದು
ಜಿನನಡಿಗಳಿವೆನ್ನ
ನೊಸಲದೇಂ ವಿಸ್ಮಯಮೋ         ೫೫

ವ|| ಎಂದು ತನ್ನಯ ತರ್ನ್ಮ ನೋರೂಪನಾಗಿ ಸುಖದಿನಿರೆ

ನನೆಯಂ ಷಟ್ಪದ ಧೂಪಧೂಮಲತೆಯಂ ಚೂತಂ ಫಲವ್ರಾತಮಂ
ಪನಸಂ
ಕುಟ್ಮಲ ದೀಪಿಕಾ ಪ್ರಕರಮಂ ಚಾಂಪೇಯಮಂ ಪೊತ್ತುತ
ಣ್ಬನಿಯಂ
ಚಂದನ ಗಂಧಮಂ ಮಲೆಯೆರಲ್ತಂದೀಯೆ ಬಂದತ್ತುಫಾ
ಲ್ಗುನ
ನಂದೀಶ್ವರಮರ್ಹದೀಶ್ವರನ ಪೂಜೋತ್ಸಾಹದಿಂ ಬರ್ಪವೋಲ್     ೫೬

ಪಿಡಿಗಿಕ್ಕಿತ್ತು ಮೃಣಾಳಮಂ ವನಗಜಂ ಪೊಕ್ಕತ್ತು ತುಮಡಾಗ್ರದಿಂ
ದೊಡೆದಂಭೋಜದ
ಮೊಗ್ಗೆಯಂ ಮಧುಕರಂ ಧಾರಾಗೃಹಕ್ಕಾಗಿ
ಯ್ತಡಿಯೆತ್ತಿತ್ತು
ನವಿಲ್ ಮರಾಳಿ ಪರಿಕಾಲೊಳ್ ಕಾಲನಿಟ್ಟಿತ್ತು ನೀ
ರ್ಗುಡಿಯಲ್ಬೇಡಿದುದಂದು
ಪಂಜರಶುಕಂ ಶುಷ್ಕೀಭವತ್ತಾಲುಕಂ ೫೭

ವ|| ಆ ಪರ್ವತಕ್ಕಪೂರ್ವ ಪುರಂದರನತಿಪ್ರೀತಿಮತಿ ಪ್ರಮುಖಾಂತಃಪುರಪರೀತನಾಗಿ ಪೋಗಿ ಮನೋಹರೋದ್ಯಾನದೊಳಗೆ ನಿಜಜನಕಂ ಮಾಡಿಸಿದ ತ್ರಿಭುವನ ತಿಳಕಮೆಂಬ ಪೊನ್ನ ಬಸದಿಯಂ ಬಳವಿರೋಧಿ ಪೊಂಬೆಟ್ಟಮಂ ಬಲಗೊಳ್ವಂತೆ ಬಲಗೊಳುತ್ತುಮಿರ್ಪಾಗಳ್

ಇದು ಬಾನಿಂ ಬರ್ಪ ಪೊಮ್ಮೀಂಬೊಣರ ತೆಱನಿದಲ್ತೊಂದಮಳ್ಮಿಂಚು ಮಿಂಚ
ಲ್ಲದಿವರ್ಚಂದ್ರಾರ್ಕರೇನೀ
ಯುಗಳಮಿೞಿವ ಚಂದ್ರಾರ್ಕರೇ ಖೇಚರದ್ವಂ
ದ್ವದ
ಕೆಯ್ತಂ ಖೇಚರದ್ವಂದ್ವಮೆ ಪುಸಿ ಪೊಸತೀ ಚಾರಣದ್ವಂದ್ವಮೆಂದು
ರ್ವಿದಲಂಪಿಂ
ನೋಡೆ ಭೂಪಂ ಗಗನದಿನಿೞಿದರ್ಚಾರಣರ್ಚಾರುರೂಪರ್  ೫೮

ದೊರೆಗೆಡೆ ತಮ್ಮವಿಯೋಗದೊ
ಳರಸಂಗಾದೞಲನಾಱಿಸಲ್ಮುಕ್ತಿಯಿನಾ

ಗುರುಯುಗಳಮಿೞಿದು
ಬಂದಂ
ತಿರೆ
ನಭದಿಂದಿೞಿದು ಬರ್ಪ ಚಾರಣಯುಗಳಂ          ೫೯

ವ|| ವಿನಮಿತ ಮೌಳಿಮರೀಚಿ ಮಂಜರೀ ನೀರಾಜನದಿನಪರಾಜಿತನಿದಿರ್ಗೊಂಡು ಮನೋಮಣಿಪೀಠದೊಳಂ ಮೇಣಾಂಕಮಣಿಪೀಠದೊಳಂ ಮೋಹವ್ಯಕ್ತ ಭಕ್ತಿಯಿಂಕುಳ್ಳಿರೆ ಕುಳ್ಳಿರಿಸಿದಾಗಳ್

ಎಲೆಯೊಳ್ಸುತ್ತಿದ ಮಲ್ಲಿಗೆ
ಯಲರಂ
ಕಂಪಿಂದಮಳಿಯ ಮೂಗಱಿವವೊಲಾ
ಲಲಿತನ
ಮನಮಱಿದುದು
ಣ್ಮಲರಱಿಯದೆ
ಮೋಹವಶದಿನಾ ಚಾರಣರಂ ೬೦

ವ|| ಅಂತು ಕೞ್ತಲೆಯೊಳ್ ಕಣ್ಣಱಿಯದೆ ಪೋದೊಡಮಿನಿಯರಂ ಮನಕ್ಕೆ ಸೋಂಕಱಿಪು ವಂತೆ ಮೋಹಮಱಿಪಿದ ಮನದ ಬಚ್ಚ ಬಱಿಯಱಿವು ಬಱಿಯ ಬೆಱಗನೆ ನೋಟದೊಳ್ ನಾಟಿಸೆ ಕಿಱಿದುಬೇಗಂ ಬೆಱಗಾಗಿರ್ದುಮಿರಲಾಱದೆ ಭಾವಕಮುಕುರಂ ಮುಕುಳಿತಕರಕಮಳನಾಗಿ ನಿಮ್ಮಡಿಗಳಂ ಕಾಣಲೊಡನೆ ಎನ್ನ ಮನಮನಾಳ್ದಲಂಪುಮೞ್ಕಱುಂ ನಿಮ್ಮನೆಲ್ಲಿಯಾನುಂ ಕಂಡೞಿವಂತಾಡಿಪುದೆಲ್ಲಿ ಕಂಡೆಂ ಬೆಸಸಿಮೆನೆ ಮನಂಗೊಂಡಾ ಮುನಿಗಳೊಳಗೆ ಮುಖ್ಯರಪ್ಪ ಮುನಿಗಳ್ ಕಯ್ಗಳೊಳಗೆ ಬಲಗಯ್ ಬೆಸಕ್ಕೆವರ್ಪಂತೆ ಬೆಸಸಲ್ತಗುಳ್ದರದೆಂತೆನೆ

ಸೊಡರವೊಲಿರ್ಕ್ಕುಂಕಾಡಿಗೆ
ಗುಡಿಯೆನೆ
ಮುಗಿಲೆಳಸಿ ಬಳಸಿ ಬೀೞೆ ಪತಂಗಂ
ಕಡುಬೆಳಗಿ
ಪುಷ್ಕರಾರ್ಧದ
ಪಡುವಣ
ದೆಸೆ ಮುಂದುಗೊಂಡ ಮಂದರಶೈಲಂ       ೬೧

ಮಂದರಶೈಲದ ಪಡುವಲ್
ನಂದನವಳಕಾಳಿ
ಕೊಳನೆ ಪೊಕ್ಕುೞ್‌ತೆರೆ ಕಣ್
ಕುಂದಂ
ಕುಚಮೆನೆ ವಸುಧಾ
ಸುಂದರಿಯ
ಸುದೇಹಮೆನಿಪುದಪರವದೇಹಂ ೬೨

ಅಪರವಿದೇಹೋದ್ಭವೆ ನೀ
ಳಪರ್ವತಂ
ಘನಗುಹೋದಶಾಸ್ಯಂ ಸೆಱೆಗೆ
ಯ್ಯೆ
ಪಯೋನಿಧಿಯಂ ಪುಯ್ಯ
ಲ್ಚಿ
ಪಾಯ್ದ ಸೀತೋದೆ ಸೀತೆಯಂತೆವೊಲೆಸೆಗುಂ       ೬೩

ಭಯದಾಯಿ ವಜ್ರಿಯೇಂ
ಜ್ರಿಯ
ಮುತ್ತನುಮಕ್ಕೆ ಬರ್ಕ್ಕೆ ಕಾದಪೆನೆಂದ
ದ್ರಿಯ
ತಲೆಯೊಳಿಟ್ಟ ವಾರಾ
ಸಿಯ
ಕಯ್ಯೆನೆ ರಯ್ಯಮಾದುದಾ ನದಿ ನೀಳ್ಪಿಂ         ೬೪

ತೊಱೆಯ ಬಡಗದಡಿಯೊಳ್
ಪೂತೊಱಗಿದ
ಗಿಡುಗಳಿಂದೆ ಕಾಯ್ತೆಱಗಿದ ಭೂ
ಜಾತದೊದವಿಂದೆ
ಸಿರಿ ಕರ
ಮೋತೆಱಗದ
ವಿಷಯಮುಂಟು ಗಂಧಿಲವಿಷಯಂ      ೬೫

ಕೆಳೆಗೊಂಡಿರ್ಪುವು ಕೇಳಿಯಾ ವಿಷಯದೊಳ್ ಕಾಮಾಗ್ನಿಯುಂ ನಂದನಾ
ವಳಿಯುಂ
ಕಾಮಕರೇಣುವುಂ ಕಮಳಮಂ ಕಾಮಾಂಧಕಾರಂಗಳುಂ
ತೊಳಗುತ್ತಿರ್ಪ
ಸುಧಾಂಶುಬಿಂಬರುಚಿಯುಂ ಕಾಮಾಹಿಯುಂ ಶೀತಳಾ
ನಿಳನುಂ
ಕಾಮನಿಕಾಮರಾಗರಸಮುಂ ತೃಷ್ಣಾಗ್ನಿಯುದ್ರೇಕಮುಂ          ೬೬

ನುಡಿವಂತಿರ್ಪುವು ಕೀರ ಕೋಕಿಲಕಲಧ್ವಾನಂಗಳಿಂ ಕಣ್ಗಳಂ
ಬಿಡುವಂತಿರ್ಪುವರಲ್ವರಲ್ತುಱುಗಲಿಂದಲ್ಲೊಕ್ಕ
ಪೂವಿಂದೆ ಕಾ
ಲಿಡಲಿಂಬಿಲ್ಲದೆ
ಮೆಟ್ಟಲಾಗದಿನವೆಂಬಂತಘ್ರಿಪವ್ರಾತಮುಂ
ನಡೆಯಂ
ನೀಗಿಯೆ ನಿಂದುವೇಂ ಪ್ರಚುರಮೋ ಜೈನವ್ರತಂ ದೇಶದೊಳ್  ೬೭

ಎನಿಸಿದ ನಾಡ ನಟ್ಟನಡುವಿರ್ಪುದು ಪುಣ್ಯದ ಪುಂಜದಂತೆ ಪೂ
ವಿನ
ಕೊಳನೆಂದು ನಟ್ಟನಡುವಿರ್ಪಸಿತಸ್ಮಿತಪದ್ಮದಂತೆ ಬೆಳ್ಳ
ನೆ
ನಭದೊಂದು ನಟ್ಟನಡುವಿರ್ಪ ಸುಧಾಕರಬಿಂಬದಂತೆ ಸಂ
ಜನಿತ
ಸಮಸ್ತ ಪರ್ವತ ಯಶೋವಿಜಯಂ ವಿಜಯಾರ್ಧಪರ್ವತಂ         ೬೮

ಅರವಿಂದಾಕರರೇಣು ಪಿಂಜರತೆಯಂ ಪೆಣ್ಣಂಚೆಗಳ್ ಬೇಗದೊಳ್
ಪೊರೆದಂಭೋಜದ
ಕರ್ಪ್ಪನುದ್ಗತ ನಖಾನೀಕಂ ಚರತ್ಖೇಚರೀ
ಚರಣಾಲಕ್ತಕರಾಗಮಂ
ತೊಡೆಯಲೆಮ್ಮೊಳ್ ಪಾಯ್ದುವೋ ತಾರಕಾಂ
ಕುರ
ತಾರಾಧಿಪತಾರಳಪ್ರಭೆಗಳಿಂ ತಾರಾಚಳಪ್ರಸ್ಥದೊಳ್      ೬೯

ಗಂಗೆ ಬೞಲ್ದವೋಲ್ನೆಲಕೆ ಬೆಳ್ಳಿಯ ಬೆಟ್ಟದ ಬಳ್ಳಿವೆಳ್ಪು ಬೆ
ಳ್ಳಂಗೆಡೆದೊಪ್ಪೆ
ತೞ್ಪಲ ಫಲಾರುಣದರ್ಧತಟಾಕ ಸಂಕುಳಂ
ತಿಂಗಳ
ತೋಟದಂತೆ ಬಳೆದೊಪ್ಪುವ ನೇರೆಯ ಕೆಯ್ಗಳಚ್ಚವೆ
ಳ್ದಿಂಗಳ
ಕೆಯ್ಗಳಂತೆ ನಡೆನೋೞ್ಪರ ಕಣ್ಗೆ ಕರಂ ಮನೋಹರಂ    ೭೦

ಪನಸಾಮ್ರಾತಕ ಮಾತುಳುಂಗ ಕದಳೀ ಖರ್ಜೂರ ನಾರಂಗ ಪೀ
ತನ
ಜಂಬೂ ಸಹಕಾರ ದಾಡಿಮ ಫಲವ್ರಾತಂಗಳಿಂದಾಗಳುಂ
ತನಗಂಪಂ
ಮೊಗೆದೆತ್ತಿ ತೀಡುವೆಲರೊಂದಿಂಪಿಂಗೆ ಪೊಂಗೂರ್ತು ಮೆ
ಲ್ಲನೆ
ಬಾಯಂ ಪೊಳಕುತ್ತೆ ನೋೞ್ಪರಮರರ್ ತಾರಾಚಳೋಧ್ಯಾನದೊಳ್ ೭೧

ಎರಲಿಂದೆ ಪಾಱಿದಾ ವನ
ತರುನಿಕರದ
ಕುಸುಮರೇಣು ಪರಮಾಣುಗಳಿಂ
ಸುರಲೋಕದ
ವನವಾಯ್ತೆಂ
ದರಗಿಳಿಯೋದುವುವುನಗದ
ವನವರ್ಣನಮಂ          ೭೨

ಸಲ್ಗೆಯೊಳಲ್ಲಿಯ ಕೋಡುಮ
ಗಲ್ಗಳೆ
ಖೇಚರತೆವಡೆದು ಪಾಱುವ ತೆಱದಿಂ
ಮೆಲ್ಗಾಳಿಯಲೆಯೆ
ಬಿಳಿಯು ಮು
ಗಿಲ್ಗಳ್
ಪಾಱುವುವು ಖಚರಗಿರಿವನತಟದೊಳ್         ೭೩

ನಡೆವುವು ನಭಕ್ಕೆ ಮಿಂಚುವ
ನಿಡುಮುಗಿಲಮರಿಯರ
ಕಣ್ಗೆಕುಡಲೆಂದಗದೊಳ್
ಬಿಡದೋದುವ
ಖೇಚರಿಯರ
ಕಡೆಗಣ್ಗಳ
ಬೆಳಗನೇಱಿ ಪೇಱಿದ ತೆಱದಿಂ     ೭೪

ಕಡುನೆರೆದ ಖಚರಿಯರ್ ನೀ
ರಡಸಲೊಡಂ
ಕರಿಯ ಕಿಱಿಯ ಮುಗಿಲಂ ಖಚರರ್
ಪಿಡಿದು
ಪೊರೆಯೆತ್ತಿ ಮಿಂಚಿನ
ಪುಡಿಕೆಗಳಂ
ತೆಱೆದ ತೆಱದೆ ತೋರ್ಪುವು ನಗದೊಳ್   ೭೫

ಜಿನಬಾಲಕನೆನೆ ಮಧ್ಯಂ
ದಿನದಿನನವ್ಯಕ್ತಗಣ
ನಯನಸಹಸ್ರಂ
ಜಿನನ
ಸವನಕ್ಕೆ ಗಗನೇಂ
ದ್ರನೇಱಿದೈರಾವತಂಬೊಲಿರ್ದುದಗೇಂದ್ರಂ
   ೭೬

ಜಿನರಾಜಂ ಕಾಮನಂ ಮರ್ದಿಸಿದ ಬಿರುದಿನೊಳ್ ವಿಕ್ರಮಂದಪ್ಪದಿಂಪುಂ
ದನಿಯುಂ
ಕೈಕೊಳ್ವಿನಂ ಬೀಣೆಯ ಕಳರವಮುಂ ತತ್ಕಥಾ ನಾಟಕಾಲೋ
ಕನ
ಸುಪ್ರಸ್ಥಾನದೊಳ್ ಪಾಡುವ ಖಚರಿಯ ರಂಗಸ್ಥಿತಂ ಕೇಳ್ದು ಕೇಳ್ದೊ
ಯ್ಯನೆ
ಲಜ್ಜಾಭಾರದಿಂ ಕುತ್ತಿದ ತಲೆಯನಣಂ ಕುತ್ತುವಂತೆತ್ತಲಾಱಂ       ೭೭

ಸ್ಮರರಾಗಮೃತಮಂ ತುಳುಂಕಿ ಖಚರೀನೇತ್ರತ್ರಿಭಾಗೇಕ್ಷಣಂ
ಪರಮಾನಂದಮನೆಂದುಮೀಯೆ
ಜಿನಪೂಜಾಲೋಕನಂ ಪುಣ್ಯದಿಂ
ದೆರಡುಂ
ನಾಕದ ಮೋಕ್ಷದೇವಸುಖಮೊಂದಾದಂತೆ ತಾರಾದ್ರಿಗಾ
ದೆರಡುಂ
ಪಕ್ಕದೊಳೊಪ್ಪಿ ತೋರ್ಪುವೆರಡುಂ ವಿದ್ಯಾಧರಶ್ರೇಣಿಗಳ್       ೭೮

ವ|| ಅವಱೊಳುತ್ತರ ಶ್ರೇಣಿಗಲಂಕಾರಮಾಗಿ

ದೀಪ್ರಸುವರ್ಣ ವಪ್ರವಿಪುಳಪ್ರಭೆಗಳ್ ಬಳೆದುಂಟುಮಾಡೆ ಸೂ
ರ್ಯಪ್ರಭೆಯುಕ್ಕಿದುಕ್ಕನಿರುಳುಂ
ಪಗಲುಂ ಶರದಭ್ರಶು ಭ್ರಸೌ
ಧಪ್ರಭೆಗಳ್
ಶಶಿಪ್ರಭೆಯ ಮಾಡಿದ ಮಾಟಮನುಂಟುಮಾಡೆ ಸೂ
ರ್ಯಪ್ರಭಮೆಂಬುದೊಂದು
ಪೊೞಲುಂಟು ಪೊೞಲ್ ಕೃತಕೌತುಕಂಗಳಿಂ  ೭೯

ಗಿರಿಶಿಖರದೊಳಾಡುವ ಖೇ
ಚರಿಯರ್
ಪುರವರದ ಪೊನ್ನಕೋಂಟೆಯನಿರದ
ಚ್ಚರಿವಟ್ಟು
ಸೂರ್ಯಬಿಂಬದ
ಪರಿವೇಷಮೆಗೆತ್ತು
ನೋಡುವರ್ ನಡುವಗಲೊಳ್       ೮೦

ಬಿಳಿಯ ಮನೆಯೆನಿಸಿ ತಮ್ಮಯ
ಬೆಳಗಿಂ
ಪೊೞಲುೞಿದ ಮನೆ ಸಮುಜ್ವಳ ರಜತಾ
ಚಳಮಿಕ್ಕಿದ
ತತ್ತಿಗಳೆನೆ
ತೊಳತೊಳ
ತೊಳಗುವುವು ಸೌಧ ಸದನಾವಳಿಗಳ್   ೮೧

ಅದನಾಳ್ವಂ ಸದನಂ ಜಸಕ್ಕೆ ಮದನಂ ಕಾಂತಾಜನಕ್ಕುಲ್ಲಸ
ದ್ವದನಂ
ನೀತಿವಿಲೋಚನಕ್ಕೆ ಮದಮುದ್ಯದ್ವಿಕ್ರಮೇಭಕ್ಕಿರ
ಮ್ಮದಮುಗ್ರಾರಿಗೆ
ಸಂಮದಂ ಗಿರಿಗೆ ಸಂಸ್ತುತ್ಯೋದಯಂ ವಾಗ್ವಧೂ
ಹೃದಯಂ
ಜಾತದಯಾ ಖಗಾದ್ರಿಶರಭಂ ಸೂರ್ಯಪ್ರಭಂ ಸುಪ್ರಭಂ       ೮೨

ಜಗಳಂಬೊಕ್ಕವರೊಳ್ ಕೆಲರ್ ಪೆವರಾಗಿರ್ದರ್ ಜವಂಗೆಟ್ಟು ಪಾ
ಱುಗಳನ್ಯಾದ್ರಿಗೆ
ಪಾಱಿ ಪೋಗಿ ಕೆಲಬರ್ ಬೆಳ್ದಿಂಗಳಂ ಪೀರ್ವ
ಕ್ಕಿಗಳಂತಿರ್ಪರುಳರ್ಕೆಗೆಟ್ಟು
ಕೆಲಬರ್ ಸೂರ್ಯಪ್ರಭಂಗಳ್ಕಿ ಗೂ
ಗೆಗಳಂತಿರ್ಪರದಭ್ರಗಹ್ವರ
ತಮೋಮಗ್ನರ್ ಖಗಾಧೀಶ್ವರರ್     ೮೩

ಅಪ್ರತಿರಥ ತೇಜಕ್ಕೆ
ಗಪ್ರಭುಗಳ
ಕಣ್ಗಳೆಂದುಮೇನಳ್ಕುಮೆ ಸೂ
ರ್ಯಪ್ರಭನ
ತೊಳಪ ಕರವಾ
ಳಪ್ರಭೆಗಳ್ಕುವುವು
ಕಣ್ಗಳಂ ಖಗಕಿರಣಂ       ೮೪

ಗಗನಚರನ ಜಗದೊಳ್
ಮೇಗಿಲ್ಲದೆ
ವಿಕ್ರಮಕ್ಕೆ ರಿಪುಖಗಪತಿಗಳ್
ಕೂಗಡಗಿ
ಬೀತ ಮಾವಿನ
ಕೋಗಿಲೆಯೊಲ್
ಕೊಂಬುಗೊಂಡು ಕುಂಬುತ್ತಿರ್ಪರ್    ೮೫

ವ|| ಆ ಮಹಾರಾಜನೆಂಬ ಮಹಾವರಾಹನ ದೋರ್ದಂಡಮೆಂಬ ದಾಡೆಯುಂ ನೆಮ್ಮಿ

ಕುಂತಳಪಙ್ತಿ ಬಂದ ಬನದಂತಿರೆ ಪೆರ್ಮೊಲೆ ಪರ್ವತಂಗಳೆಂ
ಬಂತಿರೆ
ವಕ್ತ್ರಮಬ್ಜವನದಂತಿರೆ ತನ್ನುಡೆ ವಾರ್ಧಿ ಸುತ್ತಿಕೊಂ
ಡಂತಿರೆ
ಕಾಮನಾಳ್ವರಸನಂತಿರೆ ಮೆಯ್ವೆಳಗಾತನೊಂದು ತೇ
ಜಂ
ತೊಳಪಂತಿರೀಕ್ಷಣಕಿ ಧಾರಿಣಿ ಧಾರಿಣಿಯಂತಿರೊಪ್ಪುಗುಂ   ೮೬

ತಲ್ಲಲನೆಯ ಲುಳಿತಾಳಕ
ಮೆಲ್ಲಂ
ನಿಜಕಾಂತಿಯಿಂದಮದಟಲೆಯೆ ಕರಂ
ತಲ್ಲಣಿಸಿ
ಸೋಲ್ತು ನೀಲಂ
ಪುಲ್ಲಂ
ಕರ್ಚಿದುದು ಭೀತಿ ಬಾೞಿಸದಾರಂ     ೮೭

ಅಂತೆನಿಸಿದ ಸೂರ್ಯಪ್ರಭ
ಕಾಂತಂಗಂ
ನೆಗೞ್ದ ಧಾರಿಣೀಕಾಂತೆಗಮಾ
ದಂ
ತನಯನಚಿಂತ್ಯಗುಣಂ
ಚಿಂತಾಗತಿಯೆಂಬೊನಖಿಳ
ವಿದ್ಯಾಳಂಬಂ    ೮೮

ಅಮೃತಾಂಶುಗೆ ಕಳೆ ಸಿರ್ಪಿಂ
ಗೆ
ಮೌಕ್ತಿಕಂ ಪುಟ್ಟಿತೆನಿಸದೆಸೆದಿರೆ ಪುಟ್ಟಿ
ತ್ತಮೃತಾರ್ಣವಕ್ಕೆ
ಕಲ್ಪ
ದ್ರುಮವೆನಿಸಿದರಾ
ಖಗೇಂದ್ರನುಂ ತತ್ಸುತನುಂ         ೮೯

ಮೇಗೆನಿಸಿ ಜಗನ್ಮಂಗಳ
ನಾಗಲೊಡಂ
ಧಾರಿಣೀಸುತಂ ನೆಗೞ್ದಾಚಿಂ
ತಾಗತಿಗೆ
ತೇಜದಿಂ ಮುಂ
ತಾಗಿರಲಾದಿತ್ಯ
ಸೋಮರನುಚರರಾದರ್    ೯೦

ಅಭಿನವ ಜಲಧರ ತತಿಗಳ್
ನಭಕ್ಕೆ
ನೆಗೆವುವು ಖಗಾದ್ರಿಯಣೆಯಿಂ ಸೂರ್ಯ
ಪ್ರಭತನಯನತುಳ
ಭುಜಬಲ
ವಿಭವಂ
ಪೊಡೆಸೆಂಡುವೊಯ್ದ ಬೆಟ್ಟಂಗಳವೋಲ್       ೯೧

ಕರುಣಿಸುವುದೆನ್ನ ತೇಜ
ಸ್ಫುರಣೆಗೆ
ನೀನೆಂದು ಬೆರ್ಚಿ ಬೆಸಕೆಯ್ವವೊಲೇಂ
ಕರುಮಾಡಕ್ಕೋಲಗಿಪನೊ

ಖರಕರನಾ
ಖಚರ ಚಕ್ರವರ್ತಿಯ ಸುತನಂ    ೯೨

ಸಂತಸಮಂ ಕೀರ್ತಿಯ ಬೆಳ
ಗಂ
ತೃಪ್ತಿಯನಮರ ಫಣಿ ನರಾಳಿಗೆ ಕುಡುವೀ
ಚಿಂತಾಗತಿಯೆ
ಜಗತ್ರಯ
ಚಿಂತಾಮಣಿಯೆನ್ನದೆಂಬನಿನ್ನೇನೆಂಬಂ
        ೯೩

ಘನಕೇಶಂ ದರಹಾಸವರ್ಷವದನಂ ತಾಮ್ರಾಧರಂ ಲೋಳಲೋ
ಚನವಾಜಾನುವಿಳಂಬಿ
ಬಾಹು ಸುವಿಶಾಳೋರಸ್ಥಳಂ ತಪ್ತಕಾಂ
ಚನವರ್ಣಂ
ತನುಮಧ್ಯನಾತನತನುಪ್ರಾಯಂ ನವಾರೂಢಯೌ
ವನವೇಂ
ನೋಡಿಸಿದತ್ತೊ ಮುಗ್ಧಖಚರೀನೇತ್ರತ್ರಿಭಾಗಂಗಳಂ   ೯೪

ಮಿಂಚಿನ ತಟ್ಟಿಯಂ ಬಳಸಿದಂತಿರೆ ಕಣ್ಗಳ ಮಿಂಚು ಮೇಗೆ ಪೂ
ಗೊಂಚಲ
ಪಂದರಂ ಪಡೆಯೆ ಪೆಂಡಿರ ವಕ್ತ್ರಸಹಸ್ರಕಾಂತಿ
ಲ್ಲಂ
ಚಳೆಯಂಗುಡುತ್ತುಮಿರೆ ರಾಗರಸಾಮೃತದಿಂ ವಿನೋದಮಂ
ವಂಚಿಸದೋಲಗಂಗುಡುವನಂಬರದೊಳ್
ಖಚರೇಂದ್ರನಂದನಂ          ೯೫

ರಸಮಂ ಸೂಸೆ ಮುಖೇಂದು ಕೈ ಮದನನಂ ಕೈವೀಸೆ ಬೆಳ್ದಿಂಗಳಂ
ಪೊಸತಂ
ಪುಟ್ಟಿಸೆ ದೃಷ್ಟಿ ಮೈ ಪೊಳೆವ ಮಿಂಚಂ ಪೋಲೆ ಚೆಲ್ವಾಗೆ
ಣ್ಣಸರಂ
ಕಾೞ್ಪುರವೇೞೆ ಕಾಕಳಿ ನಭೋರಂಗಾಗ್ರದೊಳ್ನಿಚ್ಚಲಾ
ಡಿಸುವಂ
ಪಾಡಿಸುವಂ ವಿಯಚ್ಚರಿಯರಂ ವಾಗ್ಗೇಯ ವಿದ್ಯಾಧರಂ          ೯೬

ಇವನೆಮ್ಮಾಳ್ದನನಿಕ್ಕಿ ಸಾಧುವಿನವೋಲ್ ತಾನಲ್ಲದಂತಿಲ್ಲಿ ಪೋ
ಕವಿದಿರ್ಪಂ
ಜಿನನೆಂದು ಪೊಂಬಸದಿಯಮ ಪುಷ್ಪಾಸ್ತ್ರಸೇನಾಳಿ ಮು
ತ್ತುವವೋಲ್
ಪೆಂಡಿರ ತಂಡಮೊಪ್ಪೆ ಬಲಗೊಂಡಷ್ಟಾಹ್ನಿಕಾರ್ಚಾ ಮಹೋ
ತ್ಸವಮಂ
ಮಾಡುವನಿಂದ್ರನಾಗಿ ಮುದದಿಂ ವಿದ್ಯಾವಧೂವಲ್ಲಭಂ          ೯೭

ಇದು ಮೃದುಪದಬಂಧುರ ಸರಸ್ವತೀ ಸೌಭಾಗ್ಯವ್ಯಂಗ್ಯಭಂಗಿ ನಿಧಾನ ದೀಪವರ್ತಿ ಚತುರ್ಭಾಷಾ ಕವಿ ಚಕ್ರವರ್ತಿ ನೇಮಿಚಂದ್ರಕೃತಮುಂ ಶ್ರೀಮತ್ಪ್ರತಾಪ ಚಕ್ರವರ್ತಿ ವೀರಬಲ್ಲಾಳದೇವ ಪ್ರಸಾದಾಸಾದಿತ ಮಹಾಪ್ರಧಾನ ಸೆಜ್ಜೆವಳ್ಳ ಪದ್ಮನಾಭದೇವ ಕಾರಿತಮುಮಪ್ಪ ನೇಮಿನಾಥಪುರಾಣದೊಳ್

ದ್ವಿತೀಯಾಶ್ವಾಸಂ

ಸಮಾಪ್ತಂ