ಶ್ರೀವೆರಸು ಬಂದ ಚಂದ್ರಮ
ನೀವಮೃತವನೀಯೆ ತನಗೆ ಮಧಾರಾಧರದಿಂ
ದೇವಕಿಯ ನಗೆಮೊಗಂ ವಸು
ದೇವಂ ದೇವಂಬೊಲಿರ್ದನಪ್ರತಿಮಲ್ಲಂ ೧
ವ|| ಒಂದು ದಿನಂ ಮಧ್ಯಂದಿನ ಸಮಯದೊಳ್ ಮಧುರಾಪುರಕ್ಕೆ
ಬರಿಯೆಲ್ ಬೇಱೆರ್ದ ಕಂಕಾಳಿಕೆ ಪೆಡತಲೆಯಂ ಪೊಕ್ಕಕಣ್ ತೋರ್ಪಕೆಯ್ಯಾ
ಲ್ಸೆರೆ ಪಾತಾಳಕ್ಕೆ ಪೊಕ್ಕಿರ್ದೊಣವಸಿಱುಡುಗಿರ್ದೊಂದುರಂ ಪೂೞ್ದಬಾಯ್ ಬೇ
ಕರಿಯೋದಂತಿರ್ಧ ಬಾನಂಗುೞಿ ಗಿಟಿಗಿಟಿ ಜಂತ್ರಂಬೊಲಾಗಿರ್ದ ಮೈ ಮೆ
ಯ್ಸಿರಿ ಚಿದ್ರೂಪಕ್ಕೆ ಪಕ್ಕಾಗಿರೆ ಚರಿಗೆಗೊಡಲ್ಪಂದನೊರ್ವ ಮುನೀಂದ್ರಂ ೨
ಬಿಸಿಲಿಂದಳುರ್ದೊಡೆದೊಡಲಂ
ಪಸಿವೆಂಬ ಸದರ್ಥಿ ಶಾಂತರಸದಿಂ ಮಸಿಯಾ
ಯ್ತಸದಳಮನೆ ಮೆಯ್ಯ ಮಲಂ
ಮಿಸುಗಿದುದಾ ಮದನ ಕರಟಿಕಂಠೀರವನಾ ೩
ಕೆಳರ್ದುಮಿಳಿರ್ದುರಿದು ಗಗನಮ
ನಳುರ್ದು ತಪೋಧನನ ತಪದೆ ಸೆಗಳಿ ಕನಲ್ದ
ವ್ವಳಿಸೆ ತನಗೋಡಿ ಕಾಡುವ
ಜಳಧರಮಂಡಳದ ಮಱಿಯನರ್ಕಂ ಪೊಕ್ಕಂ ೪
ವ|| ಅಂತುಮಲ್ಲದೆ
ಅಡವಿಯ ಕಿರ್ಚು ಕರ್ಚಿದುದು ಪುಲ್ಗಳನುರ್ಚುವ ನೀರ ಕಿರ್ಚು ಪೆ
ರ್ಗಡಲೊಳಡಂಗಿ ಪೋದುದು ಪುರಾಂತಕನಗ್ಗಳಗಣ್ಣ ಕಿಚ್ಚು ಕೆಂ
ಜೆಡೆಯೊಳಗಿರ್ಪ ಗಂಗೆಯೊಳಗಿರ್ದುದು ತನ್ನುರಿಪಕ್ಕೆನೆಲ್ ಕರಂ
ಕಡಿಕಿಡಿತಾಗುತಿರ್ದುದು ಮಹೋಗ್ರತಪಂ ತಪದಂಕಕಾಱನಾ ೫
ವ|| ಅಂತಪ್ಪ ತಪೋಧನನತಿಮುಕ್ತಕನೆಂಬೊನುಗ್ರಸೇನನಗ್ರಜನಪ್ಪ ದೇವಸೇನನ ಸೂನು ದೇವಕೀಯಗ್ರಜಾತಂ ಕಂಸಂ ತನ್ನ ತಂಗೆಯಂ ಸೆಱೆಗೆ ತಂದುದೆ ತನಗೆ ನಿರ್ವೇಗಮಂ ತರೆ ತಪಂಗೆಯ್ಯುತಿರ್ದ ಮಾಸೋಪವಾಸದ ಪಾರಣೆಯೊಳ್ ಪಾರಿಸಲೆಂದು ಕಂಸನರಮನೆಯ ಮುಂದಣಿಂ ಚರಿಗೆಗುಡುವುದುಮಾ ಪ್ರಸ್ತಾವದೊಳ್ ಪೊಸತಳಿಂ ಪಿಡಿದಾಡುವೆಳಲತೆಯಂತೆ ದೇವಕಿಯಾನಂದವಸ್ತ್ರಮಂ ಪಡಲಗೆಯೊಳ್ ಪಿಡಿದೊಸಗೆ ಮರುಳ್ಗೊಂಡಾಡುವ ಜೀವಂಜಸೆ ಬಿಸಿಲ್ ಪತ್ತಿದತಿಮುಕ್ತಕದಂತೆ ಬಂಬಳ ಬಾಡಿಬರ್ಪತಿ ಮುಕ್ತಕನಂ ಕಂಡು ಬೇಗದಿಂದಿರ್ವರೆ ತಮ್ಮಂ ನಿಲಿಸಲ್ಬಂದಪಳೆಂದು ಮುನಿ ಮನದೆಗೊಂಡು ಬರ್ಪನ್ನೆಗಂ
ಭಾವಾ ನಮೋಸ್ತು ನಿಮ್ಮಡಿ
ದೇವಕಿ ಮೆಯ್ನೆಱೆದಳೆಂದು ಬಂದಿರೆ ಲೇಸಾ
ಯ್ತಾವುದನುಡತಂದಿರೆನು
ತ್ತಾವಧು ಮೆಯ್ದುನಿಸಿ ನಗುತಮಡ್ಡಂ ಬಂದಳಂ ೬
ಬತ್ತಲೆ ಬಂದಿರ್ ಪಿಡಿಯಿಂ
ಸುತ್ತಿಮಿದಂ ನಿಮ್ಮ ತಂಗೆಯುಡಲಟ್ಟಿದಳೆಂ
ದೆತ್ತಿದಳವಂಗೆ ಮೊಗಮುರಿ
ದತ್ತಾತ್ತಾನಂದ ವಸ್ತ್ರಮಂ ದೇವಕಿಯಾ ೭
ವ|| ಅಂತು ತನ್ನ ಕುಲವಲ್ಲರಿಯಂ ಬೇರ್ವೆರಸು ಕಿತ್ತೆತ್ತುವಂತೆ ವಿರಕ್ತರ ಮೊಗಕ್ಕೆ ರಕ್ತವಸ್ತ್ರಮನೆತ್ತೆ ನಾಣ್ಚಿದರುಂ ನಾಣ್ಚಿ ನೆಲನನೋಡಿ ಪುಗುವನಿತಾಗೆ ಕೀಱಿ ಕೊಱಚಾಡಿ ಕಾಡಿದ ಜೀವಂಜಸೆಯ ವಚನಮೆ ವಾಚಾಸಮಿತಿಗೆ ಮಿೞ್ತುಗಾಗಿ ಭಿಕ್ಷುವಿನ ಬಭುಕ್ಷಾನಳನೆ ರೋಷಾನಳನಾದಂತೆ ಮುನಿ ಮುನಿಯದೊಡಂ ಮುನಿಯದೆ ಮುನಿದಿಂತೆಂದಂ
ಅತ್ತಿಗೆ ಕೇಳ್ಪೇೞರೆ ನೈ
ಮಿತ್ತಕರೆನವೇಡ ಪೇೞ್ವೆಮೀ ಬದ್ದಮಣ
ಕ್ಕೆತ್ತಿದ ಕಯ್ಯೆನೆ ಬಸಿಱಿಂ
ಗೆತ್ತುವೆಯಿದು ಕೂಡದಂದು ಕಾಡೆಲೆ ಕುಲಟೇ ೮
ತೋಱಿಸುಗುಮೆಮಗೆ ತೋರ್ಪೀ
ಕೂಱೆಯ ದೇವಕಿಯ ತನಯನಿದಂ ನೆತ್ತ
ರ್ಗಾಱುವ ಕಂಸನ ನೆತ್ತರ
ಕೂಱೆಯನಿದು ತಪ್ಪಿದಂದು ನಿನಗುಂ ಮಗಳೇ ೯
ವ|| ಎಂದೊಡಾಕೆ ಕೆಕ್ಕಳಗೆಳರ್ದಿಟ್ಟರ್ಗಾಱದೆ ಪೆಟ್ಟೆಯಂ ಕಚ್ಚುವಂತೆ ಪುಟ್ಟಿದ ಮನೆ ಪೊಕ್ಕಮನೆಯೆರಡುಂ ಕೇಡನಾಡಿ ತೋರ್ಪಂತಾ ಕಪ್ಪಡಮನೆರೞ್ಕಡಿಯಾಗೆ ಸಱ್ರನೆ ಸೀಳ್ದೀಡಾಡುವುದುಮವರ್ಮತ್ತಮಿಂತೆಂದರ್
ಜೀವಂಜಸೆ ದುರ್ಧರ ಯು
ದ್ಧಾವನಿಯೊಳ್ ನಿನ್ನ ಗಂಡನಂ ತಂದೆಯುಮಂ
ದೇವಕಿಗೆ ಪುಟ್ಟಿದಾತನೆ
ದೇವರ್ಕಾದೊಡಮಡುರ್ತು ಕೊಲ್ಲದೆ ಮಾಣಂ ೧೦
ವ|| ಎನೆ ತನ್ನ ಕಿವಿಗೆ ಮಹಾಪ್ರಳಯಂ ಕವಿದಂತಾಗೆ ಕಾಲಮೇಲೆ ಬಿರ್ದಱಿಯದೆ ಗೆಯ್ದೆಂ ಕ್ಷಮಿಯಿಸುವುದೆಂದ ಜೀವಂಜಸೆಗವರಿಂತೆದರೆಮ್ಮ ಪರಕೆಗೆ ತೆಱೆವ ಬಾಯಂ ಬಯ್ಗುಳಿಂಗೆ ತೆಱೆಯಿಸಿದೆ ಕ್ಷಮೆಗೆ ಬಂದ ಮನಮಂ ಮುನಿಸಿಂಗೆ ಬರಿಯಿಸಿದ ಇನ್ನು ಕ್ಷಮಿಯಿಸುವುದೆಂದೊಡಮಿದು ನಿನ್ನ ನಸು ನಗೆ ನಗುವ ಮೊಗಮನೞಿಸಿದಲ್ಲದೆ ಮಾಣದು
ದೇವಕಿಗಪ್ಪ ತನೂಜಂ
ಭೂವಳಯಮನೆಱಗಿಪಂ ನಿಜಾಂಘ್ರಿ ಸರೋಜ
ಕ್ಕೀ ವಿಧದಿಂದಮಿದಾತನ
ಭಾವಿ ಶಿಲಾಲಿಖಿತಮೆಂದು ಮುನಿಪತಿ ಪೋದಂ ೧೧
ಎಂಬುದುಮಂಬು ಕೊಂಡ ಮಱಿವುಲ್ಲೆವೊಲಾಕೆ ನೆಲಕ್ಕೆ ಬಿರ್ದು ಬಾ
ಯಂ ಬಸಿಱೆಂಬಿವಂ ತದೆದುಕೊಂಡು ಪೊದಳ್ದೞೆ ನಂಬಿ ತೊಟ್ಟ ಹಾ
ರಂಬೆರಸಿಟ್ಟ ಕಯ್ಯ ಕಡಗಂ ಬೆರಸಿಕ್ಕಿದ ಕರ್ಣತಾಳದ ಪ
ತ್ರಂಬೆರಸಶ್ರುಗಳ್ಕೆಡೆದುವಾಕೆಯ ಗಂಡನ ಸಾವುಗಂಡವೋಲ್ ೧೨
ವ|| ಅಂತಾಬಾಲೆ ನೀರ್ಪೊಱಗಿೞಿದ ಬಾಳೆಯಂತೆ ಮಿಡುಮಿಡುಮಿಡುಕಿಪುಡಿಯೊಳ್ ಪೊರಳ್ದು ಮೂರ್ಛೆವೋಗಿ ಪರಿಚಾರಕಿಯರ್ ಪರಿತಂದೆತ್ತಿಕೊಂಡು ಪೋಗಿ ಪಾಸಿನೊಳ್ ಪವಡಿಸಿ ಬಿಜ್ಜಣಿಗೆಯೊಳ್ಬೀಸಿಯುಂ ಕಣ್ಬನಿಯುಂ ಸೂಸಿಯುಮೆಂತಾನುಮೆೞ್ಚಿಱಿಸಿ ಮೂರ್ಛೆದಿಳಿಯೆ ತಾನುಂ ತಿಳಿದು ಪೞುಗೞಿದೞಲ ಕಿರ್ಚು ಪೋೞ್ಮರದ ಕಿರ್ಚಿನಂತೊಳಗೊಳಗಳುರೆ ಕನ್ನದೊಳ್ಸತ್ತ ಕಳ್ಳನ ತಾಯಂ ತೊಳಗೊಳಗೞುತೆ ತನ್ನಗೆಯ್ದ ಪಾತಕಮನಂತಾರ್ಗಮುಸಿರಲಣ್ಮದೆ ತನ್ನೊಳಿಂತೆಂದಳ್
ಕಂಜದಳಾಕ್ಷಿ ಮೆಯ್ನಱೆವುದೇಕೆ ಮಹಾವ್ರತಿ ಬರ್ಪುದೇಕೆ ಬಂ
ದಂಜದೆ ಮೂರ್ಖನಂ ಮಿಗೆ ಕೆರಳ್ಚಿದೆನೇಕೆನಗಾ ತಪೋಧನಂ
ನಂಜಿಡಲೇಕೆ ಭಾವಿಪೊಡಿದೆನ್ನ ವಿಷಾದದೊಳಿರ್ದಳಿರ್ಪಿನಂ ೧೩
ವ||ಕಂಸನಾಕೆಯಿರ್ದವಸ್ಥಾಂತರಮಂ ಬಂದು ಕಂಡು ಬೆರ್ಚಿ ಬೆಗಡುಗೊಂಡು
ಮೊಗಮಿನಿತಾದುದೇಕೆ ನಗೆ ಪೋಗಲಿದೇಕೆ ಕಡಂಗಿ ಕಣ್ಣನೀರ್
ನೆಗೆದಪುವೇಕೆ ಸುಯ್ ಬಿಸಿಯವಾದುವಿದೇಕೆ ಕದಂಪು ಕೆಂಪನಾ
ಳ್ದುಗೞ್ದಪುದೇಕೆ ಗಗ್ಗರಿಕೆಯಗ್ಗಳವಾದುದಿದೇಕೆ ನೀಂ ಕರಂ
ಪೊಗೆದಪೆಯೇಕೆ ಪೇೞೆನಗೆ ಪಂಕಜಪತ್ರವಿಶಾಲಲೋಚನೇ ೧೪
ವ|| ಎಂಬುದುಂ
ನಿಡುಸುಯ್ಗೆ ಮೋಗದ ಕಂಪಂ
ಕುಡಿವಳಿ ಪಾಱಿವುದು ಮೊಗದೊಳುಳ್ಳಕ್ಕರಮಾ
ಗಡೆ ಪಾಱಿದಂತಿರಿವು ಪೋದೊಡೆ
ನುಡಿಯಲ್ಕಱಿಯದಂತೆ ಮೋನದೊಳಿರ್ದಳ್ ೧೫
ವ|| ಅಂತಾಕೆ ಮೂಗರ್ ಕಂಡು ಕನಸಿನಂತೇನುಮನೆನಲಱಿಯದೆ ಕಿಱಿದು ಬೇಗಮಿರ್ದಿದು ನಿನಗೆ ನುಡಿಯಲ್ತಕ್ಕ ಮಾತಲ್ಲೆಂದು ತಲೆವೀಸಿಯುಮವನನಿವ್ಕಿರಲಾಱದಿದೆಂದು ಬಾರದುದಂ ಬಂದನೆಂದು ಮೆಯ್ದುನಿಸಿ ದೇವಕಿಯಾನಂದ ವಸ್ತ್ರಮಂ ತೋಱಿ ತಱಕಟವಾಡಿದೊಡೆನಗೆ ನಗೆಯೆಂದಱಿಯದತಿಮುಕ್ತಕಮುನಿ ಮುನಿದಿಂತೆಂದರ್ಧೋಕ್ತಿಗಯೊಳೆ ಮೋನಂಗೊಂಡೆಡೆಗೆಡೆಗೆ ಗುಡುಗುಡನೆ ಕವಿವ ಕಣ್ಬನಿಗಳಂ ಸೆಳ್ಳುಗುರಿಂ ಸಿಡಿದು ಸಿಡಿದು
ತನ್ನನುಜೆಗೆ ನಂದನನ
ತ್ಯುನ್ನತನಪ್ಪಂ ಗಡಾಗಿ ಸೀಂಟಿದವೀ ಮಾ
ತೆನ್ನದಿರೆನ್ನಯ ತಾಯುವ
ನೆನ್ನುಮನವನೋಲೆಗಳಸುವಂ ಗಡೆ ಕೇಳಾ ೧೬
ವ|| ಎನೆ ಕೇಳ್ದ ಕಂಸಂ ಮೊೞಗಂ ಕೇಳ್ದ ಹಂಸನಂತೆ ಕುತ್ತುವಡೆದಂತಾಗಿ
ಕದಡೆ ಕಲಂಕದಿರ್ಕುಮೆ ಮರುನ್ನದಿಯುಂ ಪೊಸದಿಕ್ಕೆ ಕಂದು ನಾ
ಱದೆ ಪೊಸಪೂವುಮೇನಱಿಯೆ ಚಂದನದೊಳ್ ಕಿಡಿಪುಟ್ಟದೇ ಸುರರ್
ಸೊದೆಗಡಲಂ ಕರಂ ಕಡೆಯೆ ಪೇೞ್ ವಿಷಮೇೞದೆ ಶಾಂತರಪ್ಪರಂ
ಮದಮುದಿತಾತ್ಮರೇಳಿಸೆ ವಿಕಾರಮನೆಯ್ದದದೇಕೆ ಸೈರಿಪರ್ ೧೭
ಮರುಳೆ ಕಡುಪೊಲ್ಲಕೆಯ್ದೈ
ಪಿರಿಯಂಗಂ ಮರ್ಮವೇದಿಗಂ ಮೂರ್ಖಂಗಂ
ನರಪತಿಗಂ ಧನಪತಿಗಂ
ಗುರುಗಂ ದೈವಕ್ಕಮಂಜವೇೞ್ದಕುಮಮೋಘಂ ೧೮
ವ|| ಇದರ್ಕೊವಜರೇಕೆ ಜನಮೆಲ್ಲಮೆಱಗುವರ್ಗೆಱಗದವರುರದರನುರದಿರ್ಪುದನೀ ಮೊಲೆಯುಣ್ಬ ಮಕ್ಕಳೊಳಗಾಗಿ ಬಲ್ಲರ್ “ಸಮಣೋ ಅಮೋಘ ವಯಣೋ” ಎಂಬುದು ನಗುತೆಂದೊಡಂ ಸವಣರ ಮಾತು ಸತ್ಯಮಾದೊಡಮೇನಾಯಿತ್ತಿದರ್ಕೊಂದುಪಾಯಮಂ ನೆನೆದೆಂ ಕಾರಣಮಿಲ್ಲದೆ ಕಾರ್ಯಮೆಂತಾದಪುದಿದರ್ಕೆ ಕಾರಣಭೂತಮಪ್ಪ ದೇವಕಿಯನೆ ಕೊಲ್ವೆನೆಂದು ಮನದೊಳೆತ್ತಿಕೊಳ್ವುದಮೊಂದು ದಿವ್ಯಧ್ವನಿಯಾಗದಾಗದೆನೆ ಕೇಳ್ದವಧರಿಸಿ ದಿವ್ಯಕ್ಕೆ ಪಲ್ದಿನುತ್ತು ಮಾಗಳೆ ವಸುದೇವಸ್ವಾಮಿಯ ಸಮೀಪಕ್ಕೆ ಪೋಗಿ “ವಿನೀತರ್ಧೂರ್ತ ಲಕ್ಷಣ” ಮೆಂಬಂತೆ ಭಯಸ್ಥನಾಗಿ ತುೞಿಲ್ಗೆಯ್ದು ಕಾಲ ಕೆಳಗೆ ಕುಳ್ಳಿರ್ದು ಕಯ್ಗಳಂ ಮುಗಿದು ಕಂಸ ನಿಂತೆಂದಂ
ತವರಂ ಪೊಕ್ಕಿಲುಮಾಗಿ ಮದ್ಗೃಹಮಿವಳ್ಗೀ ಸಂತಸಕ್ಕಿಲ್ಲದು
ಕ್ಕೆವ ಸೌಧರ್ಮಿಕೆಯಿಂದಮೇಂ ಭಗಿನಿಯರ್ಪೆತ್ತುತ್ಸವಕ್ಕಾದ ಬ
ದ್ದವಣಂ ಪೆರ್ಮನೆಗುದ್ಭವಂ ಪಡೆಗೆ ಸಾಸಿರ್ಮಕ್ಕಳಂ ಪೊತ್ತು ತೀ
ವುವುದುಂ ಪೋ ಕಳಿಸಿಂ ಮದೀಯಭವನಕ್ಕೀ ದೇವಕೀದೇವಿಯಂ ೧೯
ಎಂದು ಪಯೋಮುಖವಿಷಕಂ
ಭಂ ದೈನ್ಯಂಬಟ್ಟು ಬೇಡಿಕೊಂಡೆಂ ದಯೆಗೆ
ಯ್ಯೆಂದೊಡೆ ಮನಮಲ್ಲದ ಮನ
ದಿಂದಾ ವಸುದೇವನಿತ್ತನಾತಂ ಪೆತ್ತಂ ೨೦
ಸಿರಿವಂತರ್ ತಂಗೆವಿರಂ
ತರಿಸಿ ತವರ್ಮನೆಗೆ ಪಿಂಗಲುಂ ಪೆೞಲುಂ ಬಿ
ತ್ತರಿಪುದೆನೆ ಬಲ್ಲರೆರ್ದೆ ಕ
ತ್ತರಿ ನಾಲಗೆ ಬೆಲ್ಲಮೆಂದು ಬಲ್ಲವರೊಳರೇ ೨೧
ವಿನಯಮೆ ಸಾಧುಚಿಂತೆ ಕರಮರ್ಥಮೆ ತಾನಪಕೀರ್ತಿಹೇತು ದು
ರ್ಜನನತಿವಾಕ್ಪಟುತ್ವಮೆ ಲಸದ್ಗುಣ ದೂಷಣದಾಯಿ ರೂಪು ಯೌ
ವನಮೆ ಪರಾಂಗನಾಪಹರದಿಂ ಬೆಱಗಾದಪೆನಾತನಿಂದಮಾ
ತನ ಗುಣದೊಂದು ದುರ್ಜನಿಕೆ ಮಿಕ್ಕುದು ಲೋಕದ ಪಾಪವಲ್ಲವೇ ೨೨
ಖಲನೇಂ ಕಾಣ್ಗುಮೆ ಗುಣಮಂ
ಕಲಂಕಮಂ ಕಾಣದಂತೆ ಸುಜನನುಲೂಕಾ
ವಲಿ ಬಿಸಿಲಂ ಸೂರ್ಯಂ ಕ
ೞ್ತಲೆಯಂ ಮದ್ದಿಂಗಮಱಸಿ ಕಂಡೆಡೆಯುಂಟೇ ೨೩
ಜನಪರ ಕಿವಿಯೊಳ್ ಪಿಸುಣನೆ
ಜಿನುಗುಗುಮದು ಕುಡುವ ಭೀತಿಯಂ ದಿಕ್ಕರಿ ಕ
ರ್ಣನಿಕಾಯಾಸ್ಫೋಟನಪಟು
ಘನಕಂಠೀರವ ರವಂಗಳುಂ ಕೊಟ್ಟಪುದೇ ೨೪
ಚಿಂತಿಸಿದಂ ಕಿಱುದಂಗೆಯ
ಸಂತತಿಯಂ ಕೊಂದು ಕೂಗಲಿರುಳುಂ ಪಗಲುಂ
ಚಿಂತಿಸನೇ ಕೊಳ್ಳಿತುಪರ
ಚಿಂತಾಗತಿ ಏಹಿಯೆಂಬ ನುಡಿಯಂ ಕಂಸಂ ೨೫
ತಂಗೆಯ ಮಕ್ಕಳನೆ ಕೊಲ
ಲ್ಕುಂಗುರವಿಕ್ಕನೆ ಕನಲ್ದು ತಂದೆಯುಮಂ ತಾಂ
ನುಂಗಲ್ಬಗೆವಂ ಪಶುದಿಂ
ಬಂಗಾಡಂ ತಿಂಬುದೆಂಬುದೇಂ ಪಾತಕಮೇ ೨೬
ವ|| ಅಂತಾತನತಿ ಕುಪಿತ ಕ್ರೂರ ಕರಾಳ ಕಾಳಾಹಿ ತನ್ನ ತತ್ತಿಯಂ ತಾನೆ ತಿನಲಿರ್ಪಂತೆ ಯುಮತಿ ಪ್ರಕಟ ವಿಕಟ ಭೀಕರ ಭ್ರುಕುಟಿಯಾಗಿ ಮನದ ಮುನಿಸೊರ್ಮೆಯುಮಡಂಗದೊಳ ಗೊಳಗೆ ಕಿನಿಸಿ ಕಿಂಕಿನಿವೋಗಿ ಕೆಳರ್ದ ಮಹಾಕಾಳನೆನ್ನವರ್ತನ್ನವರೆನನದುಗಿದುಕೊಂದು ಸರ್ವ ಗ್ರಾಸಂಗೊಳಲಿರ್ಪಂತೆಯುಂ ತನಗೆ ತೋರ್ಪರಿಷ್ಟ ಚಿಹ್ನದಂತಪ್ಪ ದೇವಕೀದೇವಿಯ ಗರ್ಭ ಚಿಹ್ನದತ್ತಾವಧಾನನಾಗಿ ಕಂಸಂ ಕಿಲುಂಬೇಱಿದ ಕಾಂಸ್ಯದಂತೆ ಕಲುಷ ವೇಱಿರ್ದುದನಱಿದು
ಪೂವಂ ತೋಱದೆ ಪನಸು ಫ
ಲಾವಳಿಯಂ ಪಡೆವ ತೆಱದೆ ಪಡೆಗಾತ್ಮಜರಂ
ತೀವಿದ ಬಸಿಱಂ ತೋಱದೆ
ದೇವಕಿಯೆಂದೊಸೆದು ಪರಸೆ ಕುಲದೇವತೆಗಳ್ ೨೭
ಮೊಲೆಯುಂ ಮೊಗಮುಂ ಚಂದ್ರನ
ನಿಲವಂ ಕೊಂಡೆಯ್ದೆ ಪರ್ಚುಕೊಂಡಂತಿರೆ ಪೆ
ರ್ಮೊಲೆ ಕರ್ಪಂ ನಗೆಯಿಂ ಜಲ
ಜಲಿಪ ಮೊಗಂ ಬೆಳ್ಪನಾಳ್ದುದಾ ದೇವಕಿಯಾ ೨೮
ವ|| ನವಮಾಸಂ ನೆಱೆವುದಂ ಕಂಡು ಕಂಸನವಸ್ತುಭೂತನುಂ ಭೀತನುಮಪ್ಪುದಱಿಂ ಜನರಂಜನಾರ್ಥವಾಗೆಂದನೇಕ ಮಾಣಿಕ್ಯಮಯಮಾಗೆ ಮಾಡಿಸಿದ ಸೂತಿಕಾಸದನದೊಳ್ ಸಿರಿಯನಿರಿಸುವಂತೆ ದೇವಕಿಯಂ ತರಿಸಿ ಕಾಪುವೇೞ್ದಿರಿಸಿ ಹಿತರುಮಹಿತರುಮಪ್ಪ ಪರಿಚಾರಕಿಯರಂ ಪರುಠವಿಸಿ ಪುಲಿಯಂತೆ ಪಾರ್ದಿರ್ಪಿನಮೊಂದರ್ಧರಾತ್ರದೊಳ್
ದೇವಕಿಯಮಳಂ ಪೆತ್ತಳ್
ಜೀವಂಜಸೆ ಪೆಱಿಸೆ ಹರಿಯ ಬೆಸದಿಂದಂ ಮಾ
ಯಾವಿ ಪರಿತಂದು ನೈಗಮ
ದೇವಂ ತಂದಿಕ್ಕೆ ಮುಂದೆ ಮಾಯಾಶಿಶುವಂ ೨೯
ವ|| ರಾಹುಮುಖದಿನಮಳ್ವೆಱೆಯಂ ತಪ್ಪಿಸಿಕೊಂಡುಯ್ವಂತಮಳರಂ ಮಳಯಾಚಳಕ್ಕೆ ಕೊಂಡುಯ್ದನಿತ್ತ ಕಂಸನಾ ಕೂಸುಗಳ ಕಾಳ್ಕಾಳೆಂಬ ದನಿಗೇಳ್ದಿಲಿಯುಲಿಪುಗೇಳ್ವ ಬೆಕ್ಕಿನಂತೆ ಬೊಕ್ಕೆನೆ ಪಾಱಿಪಾಯ್ದು
ಪಸಿದುಗ್ರವ್ಯಾಘ್ರನೇಣೀ ಶಿಶುಗಳನೆ ಗಡಂ ಕೊಂಡು ಕೊಲ್ವಂತೆ ಪಲ್ಲಂ
ಮಸೆದತ್ಯುದ್ರೇಕದಿಂ ತನ್ನಯ ಸಿರಿವನೆಯೊಳ್ಪೊಕ್ಕ ಪೆರ್ಮಾರಿಯಂ ಪೂ
ಜಿಸಿ ಬಾೞ್ವೊಂದಂದಮಂ ದಿಗ್ಬಲಿಗೆದಱಿದವೊಲ್ ಸೂಸೆ ಮಾಂಸಾಸ್ಥಿ ಮಾಯಾ
ಶಿಶುವಂ ಕೊಂಡಿಕ್ಕಿದಂ ಪಾಸಱೆಯೊಳಸಗನೋಲ್ ಪೊಯ್ದು ಕಂಸಂ ನೃಶಂಸಂ ೩೦
ವ|| ಮತ್ತಮೊರ್ಮೆ
ಆಸುರದೊಳಿಂದ್ರಜಾಲದ
ಕೂಸುಗಳಂ ಕಂಸನೊಗೆದನಱೆಯೊಳ್ ನೆತ್ತರ್
ಸೂಸೆ ದೆಸೆದೆಸೆಗೆ ಕೆಂಪಿನ
ಪಾಸಂ ಪಿಡಿದೊಗೆವ ಪಟ್ಟಕಾಱನ ತೆಱದಿಂ ೩೧
ವ|| ಮತ್ತಮೊರ್ಮೆ
ದೆಸೆದೇವತೆಯೆ ಕುಸುಂಬೆಯ
ಕುಸುಮಂಗಳಿನಿಂಡೆಯಾಡುವಂತಿರೆ ಕೆಂಗ
ಲ್ಮಸಗಿ ಪರಿತಂದು ಮಾಯದ
ಸಿಸುಗಳನೆೞೆದೞೆಯೊಳೊಗೆದನಱಗುಲಿ ಕಂಸಂ ೩೨
ಮನೆವಱೆಯೊಳ್ಮಾಡಿದ ಕಂ
ಸನ ಪೊಲ್ಲಮೆ ಮುಟ್ಟಿದತ್ತು ಮುಗಿಲಂ ಪೊಗೆ ಭೋಂ
ಕನೆ ಪೊಱಮಡುವವೊಲಡುಗೆಯ
ಮನೆಯಂ ಲೇಸಾಗಿ ಬೆಳಗಿನಂತೊಳಗಿರ್ಕುಂ ೩೩
ಪುರುಷರ್ ಮಾಡಿದ ಪುಣ್ಯಂ
ಪರೆಯದು ನೀರೊಳಗೆ ಬಿಟ್ಟ ಘೃತಬಿಂದುವಿನಂ
ತಿರೆ ತೋರ್ಕು ನೀರ ಪೊಯ್ಯಲ್
ಪರೆಗುಂ ಬಿಟ್ಟಂತೆ ತೈಲಬಿಂದುವನದಱೊಳ್ ೩೪
ವ|| ಅಂತು ಮೂಱುಗೆಯ್ದು ಋತುಗಳಂ ಪಡೆವ ಪೃಥ್ವಿಯಂತೆ ಋತುಮತಿಯಾಗಿ ದೇವಕಿ ಪೆತ್ತ ಮಕ್ಕಳನತ್ತ ನೈಗಮದೇವನೆತ್ತಿಕೊಂಡುಯ್ದಂ ಇತ್ತ ನಿಷ್ಕರುಣನಾ ದೇವನಿಕ್ಕಿದ ಮಾಯದ ಮಕ್ಕಳನೆ ಮೊಕ್ಕಳಂ ಮುಳಿದು ಶಿಲೆಯೊಳೊಗೆದಾರಿ ಪರಪಿ ಕಯ್ಯಂ ತೊಡೆದುಕೊಂಡು ಮುನಿಯ ಮಾತಂ ತೊಡೆದೆನೆಂದು ಕೊಲೆ ಪುಸಿಯೆನ್ನದತಿಮುಕ್ತಕನಾದೇಶಮೆ ಪುಸಿಯಾದುದೆಂದವು ತನಗೆ ತಪ್ಪದಪಮೃತ್ಯುಗಳೆಂದಱಿಯದೆಯುಂ ಕಂಸನತ್ಯಧಿಕಾಂಸನಾಗಿ ನಿಶ್ಚಿಂತಮಿರ್ದಂ, ಇತ್ತ ಕೃತಕಾಕ್ರಂದಕಂದಳಿತಶುಷ್ಕ ಶೋಕಾಕ್ರಾಂತ ಜೀವದ್ಯಶೋವ್ರೀಡಾ ವಿಷಾದ ಸಚಿವ ಸೂಚಿತ ಪ್ರಸೂತಸಮಯ ಸಮುದ್ಭೂತ ಪುತ್ರಾ ವಿದ್ಯಾವರೇಣ್ಯೆಯುಮಶರಣ್ಯೆಯುಮಂತರ್ನಿಗೂಢಗಾಢ ಶೋಕಾಪಾವಕಿಯಪ್ಪ ದೇವಕಿ ತದ್ವೃತ್ತಾಂತಮೆಲ್ಲಮಂ ಜಲಕ್ಕನಱಿದು
ಅಸಕೞಿದೞಲುಂ ಬಸಿೞೊಳ್
ಕುಸುಂಬೆವುರಿಯುರಿಯೆ ಸತ್ತಳತ್ತಳ್ ಬಸಿಱಂ
ಪೊಸೆದಳ್ ಜಿಗಿದಳ್ ನೀಡುಂ
ಬಿಸುಸುಯ್ದಳ್ ನುಡಿದು ಕೆಡೆದು ಬಿದಿಯಂ ಬಯ್ದಳ್ ೩೫
ವ|| ಬಯ್ದಾರುಮಿಲ್ಲದ ಪೊೞ್ತು ಪೊಯ್ದುಕೊಂಡ ಬಸಿಱ ಬಾಸುೞ್ಗಳ್ ತಗಡಂ ಪತ್ತಿಸಿದಂತಾಗೆ ಮಾಣದೊಳಗೊಳಗೆ ಮೂಗಿೞ್ಕೆಯೞ್ತೞ್ತು ಮಕ್ಕಳ ಮೊಗಂ ನೋಡದೆಯುಂ ಸತ್ತ ಕೂಸನಾದೊಡಮೆತ್ತಿಕೊಳ್ಳದೆಯುಂ ಬಳಗಂ ಬಳಸಿ ಸುತ್ತಿಕೊಳ್ಳದೆಯುಂ ಮೇಲೆ ಪೊರಳ್ದೞದೆಯುಂ ಕರೆಯದೆಯುಂ ಪೂೞಲ್ಕೊಂಡು ಪೋಗದೆಯುಂ ಎಂತು ಬಾೞ್ವೆಂ ಮಕ್ಕಳ್ವಡೆದುಮೞ್ತಿವಡೆಯದಿನ್ನುಂ ಮನೆಯೊಳಿರ್ಪದಱಿಂ ಬಂಜೆಯಪ್ಪುದುಂ ಬಿಂಜದೊಳಿರ್ಪುದುಮೊಳ್ಳಿತ್ತೆಂದಿರುಳ್ ನಿದ್ರೆಯುಂ ಪಗಲ್ ಪಸಿವುಮಿಲ್ಲದೆ ಮಮ್ಮಲಂ ಮಱುಗಿ ಮನ್ಯುಮಿಕ್ಕು ಗದ್ಗದಕಂಠೆಯಾಗಿರ್ದೊಂದು ದಿವಸಂ ಅತಿಮುಕ್ತಕ ಮುನಿಯಂ ನಿಲಿಸಿ ಕಣ್ಣನೀರೊಳ್ಕಾಲಂ ತೊಳೆದು ನೀರಂ ಕೈಯೊಳಿಕ್ಕಿ ಮುನಿದಂತೆ ಕಾಲಮೇಲೆ ಬಿರ್ದು ಕಾಪರೆ ಕಣೆಗೊಳ್ವರ್ ತಾಯೆ ರಕ್ಕಸಿಯಾದಳ್ ಕರುಳೆ ಪಾವಾಗಿ ಕೊಱೆದು ತಿಂದಪುದುಣ್ಬ ಕೂೞ್ ಕೊಂದಪುದು ಕುಡಿವ ನೀರ್ನಂಜಾದುದು ಮುಂಜೂರೊಳ್ಕಿರ್ಚೆರ್ದುದು ಕರ್ಣಣ ನೀರ್ಕತ್ತರಿವಾಣಿಯಾದುದು ಬಸಿರ್ಬಱಿದಾಗೆ ಪೆತ್ತು ಪುತ್ರಮುಖಂಗಾಣದೆ ಪೋದೆನೊಂಭತ್ತು ತಿಂಗಳ್ ಬತ್ತಿ ಬಾಳುಕಮಾಗಿ ಪೊತ್ತ ಬೇನೆಯಂ ಸತ್ತ ಬೇನೆಯುಮಂ ನೀಗಲಾಱೆಂ ನೀವೆನ್ನೀ ದುಃಖಮಂ ಪಱಿವಡೆ ತಲೆಯಂ ಪಱಿಯಿಮೆಂದು ಪಱಿದ ತಲೆಯುಮಾಱಿದ ಬಾಯುಂ ಬೆರಸೞಲ್ ಮರುಳ್ಗೊಂಡು ಬಾಯೞಿದೞ್ವಿ ದೇವಕಿ ದೇವಿಯನೇೞೇೞದೇನುಮಿಲ್ಲ ಶಾಂತಂ ಪಾಪಂ ಪ್ರತಿಹತಮಮಂಗಳಮದೆಂತೆನೆ ನೀಂ ಬೆಸಲೆಯಾಗಲೊಡನೆ ಮುಂದೆ ಮಾಯಾಶಿಶುವನಿಕ್ಕಿ ಪಲ್ಲಟಿಸಿ ಪೆತ್ತ ಮೂಱು ಮಕ್ಕಳುಮನೆತ್ತಿಕೊಂಡು ಪೋಗಿ ನೈಗಮದೇವಂ ದಾದಿಯಾಗಮರ್ದನೂಡಿ ನಡಪೆ ಮಂದಮಾರುತಾಂದೋಳಿತ ಚಂದನಚಾಮರ ಪ್ರಸೂತ ಶಿಲಾತಳಾಮೋದಮಗ್ನಮಪ್ಪ
ಗಿರಿಕೂಟೋನ್ನತಮಪ್ಪ ಸೌಧತಳದೊಳ್ ವಿಶ್ವಂಭರಾಖಂಡದಂ
ತಿರೆ ನಿನ್ನಾತ್ಮಜರಿನುಮೊರ್ವನದಟಂ ಚಾಣೂರ ದರ್ಪಾಪಹಂ
ಮುರಶೈಲಾಶನಿ ಕಂಸಕೇಳಿ ಮಥನಂ ಮಾದ್ಯಬ್ಜರಾಸಂಧಸಿಂ
ಧುರಸಿಂಹಂ ನಿನಗಾದಪಂ ಮಗನಿದಕ್ಕೇಕಬ್ಬ ನಿಮ್ಮುಬ್ಬೆಗಂ ೩೬
ವ|| ಆತನುಂ ತ್ರಿಖಡ ಮಂಡಳಾಧಿಪತಿಯಾದಪನೆಂದು ದೇವಕಿಯ ದುಃಖದಹನದ ಮೇಲೆ ದಯಾರಸಮುಮಂ ವಚನವಾರಿಯುಮನತಿಮುಕ್ತಕಂ ಪೊಯ್ದು ಪೋದನತ್ತಮಿತ್ತ ಕೆಲವಾನುಂ ವಾಸರಕ್ಕೆ
ಒದವಿದ ಲತೆಗಂಕುರಗ
ರ್ಭದ ಚಿಹ್ನಂ ಮೂಡುವಂದದಿಂ ದೇವಕಿಗು
ರ್ವಿದ ಗರ್ಭದ ಚಿಹ್ನಂ ಮೂ
ಡಿದುದಾ ಕಂಸಂಗೆ ಮಿೞ್ತು ಮೂಡುವ ತೆಱದಿಂ ೩೭
ಅಸುರರ ಮೊಗದೊಳಗಸಿಯಳ
ಮಿಸುಪ ಕುಚದ್ವಯ ಮುಖಂ ಕಱಂಗಿದುದವಳೊ
ಳ್ವಸಿಱ ವಳಿರೇಖೆಗೆಟ್ಟುವು
ನೊಸಲಕ್ಕರ ರೇಖೆಯೊಡನೆ ಮಧುರಾಧಿಪನಾ ೩೮
ದಿಕ್ಕರಿವೋಲ್ ಕೃಷ್ಣಂ ಮುಱಿ
ದಿಕ್ಕಿ ನೆಲಕ್ಕಾರ್ದು ಬಿರ್ದು ಕಂಸಂ ಮಣ್ಣಂ
ಮುಕ್ಕಿದಪನೆಂದು ಪೇೞ್ದಪ
ಳಕ್ಕುಮೆ ವಸುದೇವನರಸಿ ಮಣ್ಣಂ ಮೆಲ್ದಳ್ ೩೯
ತವಕದೆ ಕಂಸಂ ಕೈನೀ
ಡುವನಾದೊಡೆ ನುಂಗಲೆಂದು ಗುರುಗರ್ಭನಿಧಾ
ನವವೇಱಿ ಕಾವ ಕಾಳಾ
ಹಿವೊಲಿರ್ದುದು ರೋಮರಾಜಿ ರಾಜಾತ್ಮಜೆಯಾ ೪೦
ಸಿಂಧುಪರೀತ ಭೂತಳಮನೀೞ್ದು ಕೊಳಲ್ಕರಚಕ್ರದಿಂ ಜರಾ
ಸಂಧನ ಕಂಠಮಂ ಕೆಡೆಯೆ ಕೇಶವನಿಟ್ಟಪನೆಂದು ತೋರ್ಪವೋಲ್
ಗಂಧಗಜೇಂದ್ರಯಾನೆ ಕಡುಮೇಳದ ಕುಬ್ಜಕಿರಾತರಾನಮ
ತ್ಕಂಧರಮಂ ಕರಂ ತಿರಿಪಿ ಕಂಕಣದಿಂದಿಡುವಳ್ ವಿನೋದದೊಳ್ ೪೧
ವ|| ಆ ಗರ್ಭಶಾಂತಿಕಕ್ಕೆ ಶಾಂತ್ಯುದಕಮಂ ತಳಿವಂತೆ
ಅಲರ್ವರ್ಗೊಂಚಲಂತಲುಗೆ ಮಿಂಚು ಪಿಕಂ ನಲಿವಂತೆ ಚಾತಕಂ
ಜಲಕಣಯಷ್ಟಿಯೊಳ್ ಕಳಿಕೆಗರ್ಚಿ ಕರಂ ಸೊನೆಸೋರ್ವ ಭಂಗಿಯಿಂ
ಬಲವರೆ ಸೋನೆ ಗೊಂದಣಿಸಿ ಕೆಂದಳಿರೊಳ್ಗಿಳಿವಿಂಡು ಪಾಯ್ದುದಂ
ಸಲಿಸೆ ಸುರೇಂದ್ರಚಾಪಲತೆ ಬಂದುದು ಕಾರೆಳಮಾವಿನಂದದಿಂ ೪೨
ವ|| ಆ ಮೞೆಗಾಲದೊಳಭಿಷೇಕದೊಳಭಿಮತಮಂ ದಾನದೊಳ್ ಧನಮಂ ಪೂಜೆಯೊಳ್ ಪೊೞ್ತಂ ಕೞಿಯುತ್ತುಮಿರ್ದಾ ಪುಣ್ಯಸತಿಯ ಪುಣ್ಯದಂತೆ ಪುಣ್ಯಯತಿಗಳಂ ಕೇಳೆ ತಿಂಗಳ್ ತೀವೆ ಕಂಸಭಯದಿಂ ಗರ್ಭಂ ಕಲಂಕಿದಂತೆ ಬಸಿರ್ಮಸಗೆ ತನ್ನ ತನಯಂ ಭದ್ರಪದನ್ಕುಮೆಂಬುದಂ ಪೇೞ್ವಂತೆ ಭಾದ್ರಪದದೊಳ್ ಮುಳಿಯಿಸಿದರ್ಗೆ ವಿಳಯಕಾಳನಕ್ಕುಮೆಂಬುದನಱಿಪುವಂತೆ ಕಾಳದೊಳ್ ದುಷ್ಟಚತುಷ್ಟಯಕ್ಕಷ್ಟಮಚಂದ್ರಮನಕ್ಕುಮೆಂಬುದಂ ನಿವೇದಿಸುವಂತಷ್ಟಮಿ ಯೊಳರ್ಧ ಚಕ್ರವರ್ತಿಯಕ್ಕುಮೆಂಬುದಂ ಸೂಚಿಸುವಂತರ್ಧರಾತ್ರದೊಳ್
ಅಳಿಯಂ ಪದ್ಮಿನಿ ವಾರ್ಧಿವೇಳೆ ವಿಷಮಂ ಕಸ್ತೂರಿಯಂ ಪುಲ್ಲೆ ಕ
ಜ್ಜಳಮಂ ದೀಪಿಕೆ ಕಾಳರಾತ್ರಿ ತಮಮಂ ನೀಲಾಶ್ಮಮಂ ರೋಹಣ
ಸ್ಥಳಿ ಭೂದೇವಿ ತಮಾಳಮಂ ಪಡೆದವೋಲ್ ನಾನಾಹಿತಾಂಕೂರಕಂ
ದಳನಂ ದೇವಕಿ ಲೀಲೆಯಿಂದೆ ಪಡೆದಳ್ ಕಂಸೋಷ್ಣನಂ ಕೃಷ್ಣನಂ ೪೩
ವ|| ಆ ಪ್ರಸ್ತಾವದೊಳ್ ಕಂಸನಱಿಗುಮೇಂ ಬದ್ದೆವೆಂದು ಬದ್ದವಣಂ ಬಾಜಿಸುವ ದೇವದುಂದುಭಿಧ್ವನಿಗಳೊಳ್ ಘನಾಘನಧ್ವನಿಗಳ್ತಡಂಗಲಿಸೆ ದೇವಕಾಂತೆಯರ್ ನಿವಳಿಸುವ ಮಂಗಳದೀಪ ಮಂಜರೀಮರೀಚಿಗಳೊಳ್ಮಿಂಚಿನ ಗೊಂಚಲ್ಗಳೊಡಗಲಿಸೆ ಸೂಸುವ ಮುತ್ತಿನ ಸೇಸೆಗಳೊಳಾಲಿಕಲ್ಗಳ್ಕಾರೆಗಲಸಿಕೊಳ್ವಮೞೆಯೊಳಾನಂದಬಾಷ್ಪವರ್ಷವಡಂಗಿ ಪೋಗೆ ಸಮಸ್ತ ತ್ರೈಲೋಕ್ಯಕ್ಕಮಧಿಕೋತ್ಸವಂ ಪುಟ್ಟೆ
ಸೊಡರ್ವೆಳಗಂ ಮುಸುಕಿದನಾ
ಗಡೆ ತನ್ನಯ ತನು ತಮಾಳರುಚಿಯಿಂದಂ ಮೇ
ಲ್ಗೆಡೆದೆತ್ತಾನುಮವೇೞ್ತಂ
ದೊಡೆ ಕಂಸಂ ಕಾಣ್ಗುಮೆಂಬ ತೆಱದಿಂ ಕೃಷ್ಣಮ ೪೪
ವ|| ಆತಂ ಕಾರಣಪುರುಷನಪ್ಪ ಕಾರಣದಿಂ ಸಹಜ ಘನಸಂಹನನಾಗಿ ಸಾಮಾನ್ಯ ಶಿಶುವಿನಂತೆ ಕಲಲಚ್ಛಾಯನಾಗದೆ ಪರಿಣತಚ್ಛಾಯೆ ನಟ್ಟು ನಿಲೆ ನೀಲ ಶಲಾಕೆಗೆ ಜೀವಂಬೊಯ್ದಂತಿರ್ದ ಕೃಷ್ಣನ ಮೂರ್ತಿಯಂ ಕಣ್ತೀವಿ ಕಾಣಲ್ಪಡೆದು ಕುರುಡಂ ಕಣ್ಬಡೆದಂತಾಗಿ ನಿಧಾನವನೆತ್ತಿಕೊಳ್ವ ವೋಲಿರುಳುಮೆಯ್ಯೊಳ್ ಬೇಗಮೆತ್ತಿಕೊಂಡು ಕಯ್ಯಿಂ ಪಿಡಿವಂತೆ ಪದುಳಮಾಗಿ ಪಿಡಿದು ವಸುದೇವಂ ವಾಸುದೇವನಂ ಪೊಱಮಡಿಸಿ ಕಾಳಿಂದಿಯೊಳೋಲಾಡಲ್ ಕಲಿಸುವಂತೆ ಕಾಳದ ಕೞ್ತಲೆಯೊಳ್ ತಳಂಗಳೊಳ್ ತಳೆದು ತಳರ್ವಾಗಳ್ ಮುಕುಂದನ ಮೇಲೆ ನಾಗಂ ಸಹಜಸ್ನೇಹ ಸಂಭ್ರಮದಿನೆೞ್ತಂದು ನೀಲವಸನಮಂ ಮುಸುಂಕಿಕೊಂಡೇಕಕುಂಡಲನೋಲೆಯ ಕೊಡೆವಿಡಿದು ತಾಳಧ್ವಜನಾಗಿ ತೋಱಿ ಪುರುಷೋತ್ತಮನ ಪುಣ್ಯಪ್ರೇರಣೆಯಿಂ ತನ್ನ ಮೇಲೆ ಕಾಲೂಱಲಂಜಿದಂತೆ ಜೀಮೂತವ್ರಾತ ವಾಸಾರಮನುಡುಗಿ ಕಟ್ಟಿ ಕುಡುಮಿಂಚಿನ ಕೆಯ್ದೀವಿಗೆವಿಡಿದು ಮುಗಿಲ್ಗಳೆ ಮುಂದುಱುವರಿಯೆ ಪರಿವ ಪೊನಲ್ಗಳೆ ಪಡಿಯಱರಾಗೆ ಮಾರ್ಗಂಬಿಡಿದು ನಡೆಯಿಸೆ ತಮ್ಮೊಡವೆಗೆ ತಾವೇ ಕಳ್ಳರಾಗಿ ಗೞಗೞಿಸಿ ಪೋಗಿ ಪೆರ್ವಾಗಿಲಂ ತಾಗೆ ಒಂದು ಬಿಯ್ಯಗವಿಕ್ಕಿ ಚಿಕ್ಕುಟುಂ ನುಸುಳಲ್ಬಾರದಂತಾಗಿ ಬಿಗಿಯೆ ಕೆತ್ತಿದ ಕರ್ಬುನದ ಪಡಿಗಳಂ ಕಂಡಿರ್ವರು ಮಿನ್ನೇವೆವೆಂದುಮ್ಮಳಿಸಿ ಮಮ್ಮೞಿಗೊಳುತ್ತುಮಿರ್ಪನ್ನೆಗಂ ಸ್ವರ್ಗೌಕಸರ ಸೈಪಿನಿಂ ಸಗ್ಗದ ಪಡಿಗಳ್ ತೆಱೆವ ತೆಱದಿನಾ ಶಕಟಘರಟ್ಟನುಂಗುಷ್ಠಂ ಮುಟ್ಟಲೊಡನೆ ಕೆತ್ತ ಪಡಿಗಳ್ ತಮಗೆ ತಾವೆ ತೆಱೆಯೆ ಬೆಱಗಾದಂತೆ ಬಾಗಿಲ್ಗಾಪಿನ ಜಾವದುಕ್ಕಡದ ಗಠವಟಿಗೆಯ ಠಾಣಾಂತರ ದವರೆಲ್ಲಮೆರಡು ಕಯ್ಯನೆತ್ತಿ ಪುಂಡರೀಕಾಕ್ಷಂಗೆ ಪೊಡೆವಟ್ಟು ಮಾಟದ ಮಾನಸರಂತೆ ಮಿಳಮಿಳನೆ ನೋಡುತ್ತಿರೆ ಮಾರಿಯ ಬಾಯಂ ಪೊಱಮಡುವಂತೆ ಮಧುರೆಯ ಬಾಗಿಲಂ ಪೊಱಮಟ್ಟು ಬಟ್ಟೆಗಾಣದೆ ದಿಗ್ಮೂಢರಾಗಿ ನಿಲಲುಂ ಸರಸರಿಸಿ ಪೋಗಲುಮಱಿಯದ ಕುಱುಕುಱು ಮೆಟ್ಟುತ್ತುಮಿರ್ಪಿನಂ
ಪೆಡೆವಣಿಯ ಫಣಿಗಳಂತಿರೆ
ಸೊಡರಂ ಪೊತ್ತೆರಡು ಕೋಡು ಕಲೆದೇಂ ಮುಂದಂ
ನಡೆದುದು ಧವಳವೃಷಂ ಮಾ
ರ್ಗಡೆಯಂತಿರೆ ನಾಲ್ಕುಕಾಲಫಣಿಭೀಷಣಮಂ ೪೫
ವ|| ಆ ಜಲದುಜ್ಜ್ವಲದೀಪಕಳಿಕಾಂಕುರಿತ ವಿಷಾಣನಪ್ಪ ವೃಷಭನ ಬೆನ್ನನೆ ಪತ್ತಿ ಪೋಗೆವೋಗೆ
ಇದು ನೀಲಾಂಭೋದಜಾಳಂ ಕರೆದಪುದೊ ಮಹೀಭಾಗದೊಳ್ ವಾಮನೋದ್ಯ
ನ್ಮದಪೂರಂ ಧಾತ್ರಿಗೆೞ್ತಂದುದೊ ಕವಿದು ವಿಹಾಯೋಮೃಗಂ ಭೂಮಿಗೇನಿ
ಕ್ಕದುದೋ ಕಸ್ತೂರಿಕಾಸ್ರೋತಮನೆನಗೆ ತೊಡಂಕಾಯ್ತು ಪೇೞೆಂಬಿನಂ ಬಂ
ದುದು ಭೋರೆಂದುದು ಕಾಳೋರಗ ತರಳ ತರಂಗಾಳಿ ಕಾಳಿಂದಿ ಮುಂದಂ ೪೬
ಓಲೆಗಱಿವೊಯ್ದು ಜಲಕ
ಲ್ಲೋಲಂಗಳಿನಬ್ಧಿಯೆಂಬ ಬಾಸಿಗದತ್ತಲ್
ಕಾಲಿಂದಿ ಮೊರೆವ ತುಂಬಿಯ
ಮಾಲೆಯವೋಲ್ ಮೊರೆದು ಪರಿಯುತ್ತಿರ್ದತ್ತಾಗಳ್ ೪೭
ವ|| ಅದಂ ಕಂಡಹೋ ವಿಘ್ನಪರಂಪರಾ ಎನುತ್ತುಮೀರ್ವರುಮುಬ್ಬೆಗಂಬಡುತ್ತೆಯ್ದೆವರೆ ಮುಂದಾ ಬಸವಂ ಪಸಲೆಯಂ ಪುಗುವಂತೆ ಜಗುನೆಯಂ ಪೊಕ್ಕುಪಾಯ್ದು
ಬಾಲಕನ ಮಹಿಮೆಯಿಂದಂ
ಕಾಲಿಂದಿಯ ನೀರ ಮೇಲೆ ನಡೆವುದು ಮುದದಿಂ
ನೀಲದ ಪೊಸನೆಲೆಗಟ್ಟಿನ
ಮೇಲೊಯ್ಯನೆ ನಡೆವ ತೆಱದೆ ಹರಿಕುಲತಿಲಕಂ ೪೮
ತರಳತರಂಗಮುಂ ತರಳದಂತೆವೊಲಿಬ್ಬಗೆಯಾಗೆ ಬೇಗದಿಂ
ಪರಿಯುಡುಗಿರ್ದ ಪೂರ್ಣಯಮುನಾನದಿಯಂ ಪವನಾಭಿಘಾತದಿಂ
ಪರಿವ ಪಯೋದಮಾಲೆ ಪರಿದೊಂದೆಡೆಯಿಂದಡಿವಿಟ್ಟು ಪೋಪ ಖೇ
ಚರರೆನೆ ಪಾಯ್ದು ಪೋದರೊ ಹಲಾಯುಧನುಂ ವಸುದೇವಭೂಪನುಂ ೪೯
ವ|| ಎಂಬಿನಮಂತಕ್ಕೆ ಪಾಯ್ವುದುಮಾ ತೊಱೆದ ತಡಿಯ ತುಱುಪಟ್ಟಿಯಂ ತೋಱಿ ಗೋಪತಿ ಗೋಕುಲಮಂ ತೋಱುವುದುಚಿತಮೆನಿಸಿ ಬಸವನ ದೃಶ್ಯಮಪ್ಪುದುಮವರ ಪುಣ್ಯದೇವತಾಯತನದಂತೆ ಮುಂದೊಂದು ದೇವಾಯತನಮಿರ್ದುದದನವರ್ಪೊಕ್ಕು ಪೊಱಗಂ ನೋೞ್ಪಾಗಳಲ್ಲಿಗೆ ಮತ್ತೊರ್ವಂ ದೀವಿಗೆವೆರಸು ತೇರೈಸಿ ಬರ್ಪುದಂ ಕಂಡು ತಮ್ಮ ಪಜ್ಜೆವಿಡಿದು ಬೆನ್ನಟ್ಟಿಬಂದ ಕಂಸನೆಂದೇ ಬಗೆದು ಭಯಂಗೊಂಡು ಮೆಯ್ಗರೆದಿರ್ಪಿನಮಾತನಾ ತುಱುಮಟ್ಟಿಗೆಱೆಯನಪ್ಪ ನಂದನಾದವನುಂ ತಮ್ಮ ತೆಱದಿನಾಗಳೆ ಪುಟ್ಟಿದೊಂದು ಪೆಣ್ಗೂಸಂ ಪಿಡಿದು ಬಂದು ದೇವತೆಗಿಂತೆಂದಂ
ಕಿತಕಂ ದೇವತೆಗೇಕೆ ಪೇೞ್ ಪರಸಿ ಗಂಡಂ ಬೇಡಿಕೊಂಡೆನ್ನ ಪೆಂ
ಡತಿಗಿತ್ತೈ ಪುೞಿತೊಂದು ಪೆಣ್ಣನಿದನೊಲ್ಲಳ್ನೀನೆ ಕೊಳ್ಳಾದ ದಾ
ವತಿಯಕ್ಕುಂ ತುಱುಗಾಱರೇಂ ಪಡಸಿ ಕೊಂಡಂಡಪ್ಪರೇ ಒಳ್ಳಿತೊ
ಳ್ಳಿತು ಪೆಣ್ಗೂಸಿದು ಕಾಯಲೋ ಕಱಿಯಲೋ ಬೆನ್ನಟ್ಟಲೋ ಕಟ್ಟಲೋ ||೫೦||
ವ|| ನಚ್ಟಿನೆಮ್ಮೆ ಕೋಣನನೀದಂತಾದುದು ನೀನುಂ ಪೆಣ್ಣಪ್ಪುದಱಿಂ ಪೆಣ್ಣನೀವೆಯಲ್ಲದೆ ಗಂಡಂ ಕುರ್ದ ತಪ್ಪಾ ನಿನ್ನ ಪೆಣ್ಣಂ ನೀನೆ ಕೊಳ್ಳೆನ್ನ ಪೆಂಡತಿನೋಂತುಂ ಪಸಿದುಂ ಪಾೞಂ ಬಟ್ಟು ಕೊಟ್ಟ ಪರಕೆಯಂ ಮಗುಳೆ ಕುಡು ಕುಡದಂದು ನಿನ್ನನೀ ಮನೆಯೊಳಗೆ ದಿಟದ ದೇವತೆಯಂತೆ ಮಲಗಿ ಮಲ್ಲಂತಿಗಿಱಿದು ಕುಳ್ಳಿರಲೀಯೆಂ ವಿಷ್ಣುಗುಪ್ತಂ ಲಿಂಗದ ನೆತ್ತಿಯೊಳಿಕ್ಕಿದಂತೆ ಪಿರಿಯ ಕರಿಯ ಕಲ್ಲನೆತ್ತಿತಂದು ನಿನ್ನ ನೆತ್ತಿಯೊಳಿಕ್ಕಿ ತುಱುಕಾರ್ತಿಯರನಾಳಿಗೊಂಡು ನುಣ್ಣನೆ ನುಂಗಿದುದೆಲ್ಲಮಂ ಮೂಗಿಂ ಬಾಯಿಂ ಕಾಱಿಸುವೆನೆಂದು ಮೀಸೆಯಂ ಕಡಿದು ಕೂಸನೀಡಾಡಿ ನಂದಂ ಮಗುೞ್ದು ಪೋಪುದುಮವರ್ಕಂಡಱಸುವ ಬಳ್ಳಿ ಕಾಲ್ತೊಡರ್ದುದೆಂದು ದೇವತೆಯ ಮುಂದೆ ಕಾಲ್ವಿಡಿದನೆಂಬಂತೆ ಕಾಲ್ವಿಡಿದೇಂ ಕನಲ್ದಪೋಗದೆ ಬಾ ಗಂಡುಗೂಸಂ ಕೊಟ್ಟಪೆನೆಂದು ಕರೆಯೆ ತನಗಂಜಿ ದೇವತೆ ಕರೆದಳೆಗೆತ್ತು ಮತ್ತೆ ಬಂದು ನಂದನಾನಂದದಿಂ ಕಂಡಳೆಗೆ ಮಾಣಿಕಮಂ ಕೊಳ್ವಂತೆ ಕಳೆದುಕೊಂಡು
Leave A Comment