ಶ್ರೀಪತಿಪಾದಂ ಗಗನಾ
ಕೂಪಾರದ
ಮುತ್ತು ಬೆಟ್ಟಮಾದಮೊಲೆಸೆದಿ
ರ್ಪಾ
ಪರ್ವತಕ್ಕೆ ಕೃತಿಕುಳ
ದೀಪಂ
ಕವಿತಾವಸಂತನವನೀ ಕಾಂತಂ      ೧

ತುಱುಗಿದ ಕಡಲಂ ಸೂಸುವ
ನಿಱಿಮುಗಿಲೊಳ್
ಪರಿವ ಗಗನಯಾನದೊಳರಸಂ
ನೆಱೆಪೋಲ್ತಂ
ಸ್ತ್ರೀರತ್ನಮ
ನಱಸಲ್
ತಾಂ ಪಾಱಿಪೋಪ ಸಾಂಯಾತ್ರಿಕನುಂ      ೨

ಕುಲಗಿರಿಸಂಕುಳಂ ಸುಕವಿಶೇಖರನುನ್ನತಿಗಂಡು ಲಜ್ಜೆಯ
ಗ್ಗಲಿಸೆ
ಕುನುಂಗುವಂತೆಸೆದು ತೋಱಿದುವಂದು ಮಿಸುರ್ಪ ಸರ್ಪ ಸಂ
ಕುಲಮನೆ
ಕೂಡಿ ಕೊಂಕಿ ಪರಿಗೊಳ್ವ ನದೀನದಜಾಳದಿಂ ಮಹೀ
ತಳಮಹಿಲೋಕದಂತೆಸೆದುದಾ
ಜಗತೀಪತಿಗೂರ್ಧ್ವಯಾನದೊಳ್        ೩

ವ|| ಅಂತುಮಲ್ಲದೆ

ಸಾಗರಮೊಂದು ಕಂಕಣದಿನುರ್ವರೆ ಕಾವಲಿಯಿಂ ಕುಳಾದ್ರಿಗಳ್
ಪಾಗಲ
ಕಾಯ್ಗಳಿಂ ಮದಗಜಾವಳಿ ಪಂದಿಗಳಿಂ ನದೀವ್ರಜಂ
ಭೋಗಿಗಳಿಂತಡಾಗತತಿ
ಕಣ್ಗಳಿನುನ್ನಪಾದಪೋತ್ಕರಂ
ಸೀಗುರಿಯಿಂ
ಕರಂ ಕಿಱಿಯವಾದುವು ಕಣ್ಗೆ ಗುಣಾವಲೋಕನಾ   ೪

ಮಾಲಿನೀ|| ಪರಿಗತ ಬಹುವರ್ಣಂ ತತ್ಸಮೀಭೂತ ಪದ್ಮಾ
ಕರಸಲಿಲದಚಲಾರಣ್ಯ
ನಿಮ್ನೋನ್ನತ ಶ್ರೀ
ಕರಮೆಸೆದುದು
ಜಂಬೂದ್ವೀಪಮಾದಂ ಬೆಡಂಗಂ
ಬೆರಸಿ
ಬರೆದ ಜಂಬೂದ್ವೀಪದಂತೀಕ್ಷಣೀಯಂ

ವ|| ಅಂತು ಕಿನ್ನರಗೀತಕ್ಕೆ ಪೋಗಿ ಶಾಲ್ಮಲಿದತ್ತೆಯೊಳ್ಮದುವೆ ನಿಲೆ

ತುದಿ ಮೊದಲಪ್ಪುದಿಂಪಡರೆ ಕೂಡುವ ಕೂಟದೊಳೀಕ್ಷಣಕ್ಕೆ ರೂ
ಪದೆ
ಪೊಸತಪ್ಪುದೊಲ್ದೆಳಸಿ ನೋಡುವ ನೋಟದೊಳೇನನಿತ್ತನಿ
ತ್ತುದೆ
ಬೆಲೆಯಪ್ಪುದೆನ್ನಸುಗೆ ಬೇಡುವ ಬೇಟದೊಳೆನ್ನ ನಲ್ಲನಂ
ಮದನವಿಕಾರಸಾರಸುಖದಿಂದಮೆ
ಮಾಡದೆ ಮಾಣನಬ್ಜಜಂ     ೬

ಬಾಯ್ವಸವೋಡದಂತಡರೆ ಚುಂಬಿಸೆಯುಂ ಬಗೆದೆಂತು ತಳ್ತೊಡಂ
ಮೆಯ್ವಸಮೋಡದಪ್ಪು
ಗಡ ಕಣ್ಬಸವೋಡದಿದೆಂತು ನೋಡಯುಂ
ಕಯ್ವಸದಂತವಂ
ನೆರೆದೊಡಂ ಮನಮಾಱದದರ್ಕೆ ಸಕ್ಕಿಯಿಂ
ಸಯ್ವೆಱಗಾದ
ಮೆಯ್ನವಿರ್ಗಳೆಂಬವೊಲಂಗನೆ ಕೂರ್ತು ಕೂಡಿದಳ್         ೭

ಸುರಯಿಯ ಮುಗುಳ್ಗಳೊಳುರುವಳಿದಳಿಪತಿ
ಬಿರಯಿಸೆ
ಬೆರಸುವ ಬಸದನ ಬೆಸನಿರೆ
ಸುರತ
ಸುರಭಿರಸ ಪರಿಮಳಮಿೞಿತರೆ
ಬೆರಸಿದನರಮಗನರಸಿಯೊಳೆಸೆದಿರೆ
          ೮

ವ|| ಅಂತು ಬಂದ ಬಸಂತದೊಳ್ ವನಜಲಕೇಳಿಯಾಡಿ ಬೞಲ್ದು ಬಂದು ಮಲ್ಲದೆ ಸುರತಶ್ರಾಂತರಾಗಿ ಶಾಲ್ಮಲಿದತ್ತೆಯುಂ ವಸುದೇವನುಂ ದೇವದಂಪತಿಯಂತೆ ಸೌಧಾಗ್ರತಲದೊಳ್ ತಳ್ತು ಪವಡಿಸುತ್ತುಮಿರೆ

ಬಿಡಿಸಿ ಭುಜಂಗಿಯ ತೞ್ಪಂ
ಪಿಡಿದುಯ್ವಂತೆಳೆಯ
ಮಲಯಜಾತಮನಳಿಪಂ
ತೊಡರ್ದಾ
ಖಚರಿಯ ತೞ್ಪಂ
ಬಿಡಿಸಿ
ನೃಪಾತ್ಮಜನನೊರ್ವನುಯ್ದಂ ಖಚರಂ          ೯

ವ|| ಆಗಳಾ ಶಾಲ್ಮಲಿದತ್ತೆಯುಮೆಚ್ಚತ್ತು ಚಂದನಗ್ರಾಹಿಯ ಬೆನ್ನಟ್ಟುವ ಭುಜಂಗಿಯಂತೆ

ಒಕ್ಕ ಸೆಱಂಗಿನಿಂ ಮೊಲೆಯ ಗಾಳಿಸಿ ಗಂಡುಡೆಯುಟ್ಟು ಪಚ್ಚುಗಂ
ಟಿಕ್ಕಿ
ಬೞಲ್ದ ಬಲ್ಪಿಣಿಲನೊತ್ತಿದಱಂಕೆವೊಲೆತ್ತಿಕೊಂಡೆರೞ್
ಪಕ್ಕದ
ಬಾಳು ಮತ್ತಪರಮುಂ ಪೊಳೆಯುತ್ತಿರೆ ಪಾಱಿದಳ್ ನಭೋ
ಗ್ರಕ್ಕತಿವೇಗದಿಂ
ಖಚರಕಾಮಿನಿ ಕಾಮನ ವೀರಲಕ್ಷ್ಮಿವೊಲ್       ೧೦

ಅತ್ತಪರಂ ಸಹಸ್ರಕಿರಣಂ ಪೊಣರ್ವಕ್ಕಿಯನಪ್ಪಿದಂತೆ ಪೊ
ನ್ನತ್ತಪರಂ
ತಳತ್ತಳಿಸೆ ಪೆರ್ಮೊಲೆಯೊಳ್ ಪೊಳೆಪಿಂ ತೊಡಂಕೆ
ಣ್ಗತ್ತಿಗೆಗೊಂಬಿನೊಳ್
ನಲಿದು ನರ್ತಿಸುವೊಂದೆಳಮಿಂಚಿನಂತೆ ಮಿಂ
ಚುತ್ತಿರೆ
ತೋಳ ಬಾಳನೊಲೆಯುತ್ತುಮೆ ಶಾಲ್ಮಲಿದತ್ತೆ ತೂಗಿದಳ್         ೧೧

ವ|| ಅಂತು ಪಾಱಿಪೋಗಿ ಕಿಱಿದಂತರದೊಳ್ ಕುಮಾರನಂ ಕೌಂಕುೞೊಳವುಂಕಿಕೊಂಡು ಪೋಪ ಖಚರನಂ ಕಂಡು ಕಡುಮುಳಿದೆಲೆಲೆ ಸತ್ತೆಯಿನ್ನೆತ್ತವೋದಪೆಯೆಂದು ಮಧುಮತ್ತಕೋಕಿಲಕುಮಾರಿಯಂತೆ ಖಚರಕುಮಾರಿ ಗಜಱಿ ಗರ್ಜನಂ ಗೆಯ್ದು

ಬಿಡು ಬಿಡು ಮನ್ಮನಃಪ್ರಿಯನನಲ್ಲದೊಡಣ್ಮೆನುತಾಕೆ ಖಡ್ಗಮಂ
ಜಡಿದೊಡನಾಲಿಯುಂ
ಜಲಮುಮೊಕ್ಕುವಿನಂ ಶತಕಂಡಮಪ್ಪಿನಂ
ಸಿಡಿಲೆಳಮಿಂಚು
ನುಚ್ಚುನುಱಿಯಪ್ಪಿನೆಗಂ ಕಡಿಖಂಡಮಪ್ಪಿನಂ
ಪೊಡೆದಳದೊಂದು
ನೀಲಘನಮಂ ಪೊಡೆವಂತಿರೆ ಮತ್ತದಂತಿಯಂ       ೧೨

ಸೋಗೆಯ ಕಲರುತಿಗಳ್ಕಿದ
ನಾಗರವೊಲ್
ಗಜಱುವವಳ ದನಿಗಳ್ಕಿ ಖಗಂ
ಪೋಗಲ್
ಪಡೆಯದೆ ಖಚರಿಯ
ಮೇಗನೀಡಾಡಿ
ಪೋದನರಸರ ಮಗನಂ      ೧೩

ವ|| ಈಡಾಡೆ ಬೀೞ್ವ ಬಾಲಭೂಪಾಲಚಂದ್ರನಂ ಪೆರ್ಮೊಲೆಯೊಳಾಂತು ಪಿಡಿದು ಪುಳಕದಿಂ ಕೀಲಿಸಿಕೊಂಡು ಕುಸುಮಸ್ತಬಕಮಂ ಕುಂಭಸ್ಥದೊಳೊಟ್ಟಿಕೊಂಡ ಕಾಮಕರಿಣಿಯಂತೆ ಪೋಪ ಶಾಲ್ಮಲಿದತ್ತೆಯನೊಂದು ದಿವ್ಯಧ್ವನಿ

ಎಲೆ ಖಚರಿ ಕೊಮರನಂ ನೀಂ
ನೆಲಕಿೞಿಪಳಿಪಿಂದಮುಯ್ಯದಿರು
ಬಂದೀ ಭೂ
ತಲಮಂ
ತೊೞಲ್ದು ನಿಮ್ಮಯ
ಕುಲಪತಿಯ
ಮನೋರಥಕ್ಕೆ ಸಾರಥಿಯಕ್ಕುಂ ೧೪

ವ|| ಎನೆ ನಾಲ್ಕುಂ ದೆಸೆಯಮಂ ನೋಡಿ ಇದು ದೇವತಾ ವಚನಮಲಂಘ್ಯವೆಂದು ವಸುದೇವನಂ ವಿದ್ಯಾಧರಿ ಪರ್ಣಲಘು ವಿದ್ಯೆಯ ಕಯ್ಯೊಳ್ ಕೊಟ್ಟೊಡದು ಚಂಪಾಪುರದ ಪೊಱಮೊೞಲ ಪದ್ಮಷಂಡದ ನಡುವಣ ಪುಳಿನತಲದೊಳಿರಿಸಿ ಪೋಗೆ ಬೞಿಯಮಿನಿಸಾನುಂ ಬೇಗಕ್ಕೆ ನಿಶಾವಸಾನಮಾಗೆ ಕೊಳರ್ವಕ್ಕಿಗಳ ಕಳಕಳಕ್ಕೆ ಬೆರ್ಚಿದಂತೆಚ್ಚತ್ತು ಬೆಕ್ಕಸಂಬಟ್ಟಿದೇನೆಂದು ನಿರವಿಸಿ ನೀರಜವನದ ರಮಣೀಯತೆಗೆ ಮನಮೆಳದುವರಿಯೆ ಮಜ್ಜನಂಬೊಕ್ಕು ಜಿನಪತಿಯಂ ಚಿತ್ತಚೈತ್ಯಾಲಯಾಳಂಕಾರನಂ ಕಾಣಲುತ್ಸುಕನಾಗಿ ಮೋಹಮೆಂಬ ಮುಖವಸ್ತ್ರಮಂ ಕಳೆದು ಶುದ್ಧಧ್ಯಾನಮೆಂಬ ಸುಧಾಸಾರದಿಂ ಸ್ನಪನಂಗೆಯ್ದು ಸತ್ಸಲಿಲದಿನಾರಾಧಿಸಿ ಸಹಜಾನಂದ ಚಂದನ ದಿನಣ್ಪಿಕ್ಕಿ ನಿರೀಕ್ಷಿತಾಕ್ಷಂಗಳಿನರ್ಚಿಸಿ ವಿಕಸಿತ ವಾಕ್ಷುಷ್ಪದಿಂ ಪೂಜಿಸಿ ಪರಮ ಭಕ್ತಿ ಪರಾನ್ನಮಂ ಮುಂದಿಟ್ಟು ವಿಮಲಜ್ಞಾನ ಮಣಿದೀಪದಿಂ ನಿವಾಳಿಸಿ ದಶಧರ್ಮದಶಾಂಗಧೂಪಮಂ ಸಮರ್ಪಿಸಿ ಪುಣ್ಯಫಲ ನಿಚಯದಿನರ್ಚಿಸಿ ಕೃತಕೃತ್ಯನಾಗಿ ಕಣ್ದೆಱೆದು ಕಯ್ಯೆತ್ತಿಕೊಂಡು ಕೊಳದ ತಡಿಯೊಳ್ ಕಾಲ್ಮೊಗಂದೊಳೆವ ಮಾನಸರಂ ಸರೋವರಮಂ ಪಾಯ್ವ ಪೊೞೆಯಾವುದೆನೆ ಕಳಕಳಿಸಿ ನಗುತ್ತುಮವರೀಯಣ್ಣನಾಗಸದಿನೊಡೆದು ಬಿದ್ದಂತೆ ನುಡಿದಪನೆಂದೊಡರಸಂ ನಿಮ್ಮ ಮಾತು ಮತ್ತೆನಿಸದೆಂದು ಹನುಮನ ಮತದಿಂ ದಾಂಟಿ ಸಂಸಾರಮಂ ದಾಂಟಿದಂ ಸಿದ್ಧಾಲಯಮಂ ಕಾಣ್ಬಂತೆ ವಾಸುಪೂಜ್ಯಭಟ್ಟಾರಕರ ನಿರ್ವಾಣಭೂಮಿಯೊಳ್ ವಾಸನಾದೇಶದಿಂ ಧನಪತಿ ಸಮೆದ ಚಿತ್ರಚೈತ್ಯಾಲಯಮಂ ಕಂಡು ಬಲಗೊಂಡು ಸರ್ವಜ್ಞಬಿಂಬಕ್ಕಭಿಮುಖನಾಗಿ ಮುಗಿದ ಕಯ್ಯಂ ಮಸ್ತಕಕ್ಕುಯ್ದು

ಶ್ಲೋಕ|| ಜಯತ್ಯಮಲತಾವಾಸೋ ವಾಸುಪೂಜ್ಯೋ ಜಿನೇಶ್ವರಃ
ಯದ್ಬುದ್ಧಿಕಾಮಿನೀ
ಮಧ್ಯೇ ತ್ರಿಲೋಕೀ ತ್ರಿವಲೀಯತೇ||

ವ|| ಎಂದಭಿಸ್ತುತಿಗೆಯ್ದಲ್ಲಿರ್ದ ಬೋಧಸಿಂಧುಭಟ್ಟಾರಕರಂ ವಂದಿಸಿ ಧರ್ಮಮುಮಂ ಕೇಳ್ದು ವಿದ್ಯಾಧರಲೋಕದಿಂದಿಲ್ಲಿಗೆ ಬಂದ ವೃತ್ತಾಂತಮುಮಂ ಕೇಳ್ದು ಪೊಡೆಮಟ್ಟು ಬಸದಿಯಂ ಪೊಱಮಡಲೊಡನೆ

ಇದು ವಾಣೀಮತ್ತಹಂಸೀಸ್ವನಮಿದು ಮದನಜ್ಯಾಲತಾಸಿಂಜಿತಂ
ತ್ತಿದು
ನೃತ್ಯದ್ಭಾರತೀ ನೂಪುರ ರುತಮಿದು ಪುಷ್ಪಾಯುಧಾಮೋದಮುದ್ಯ
ನ್ಮದ
ಭೃಂಗೀರಂಜಿತಂ ತಾನೆನೆ ನನೆಗಣೆಯಂ ತೋಱಿಬಂದಿಂಪು ನುಣ್ಪಿಂ
ದುದಿರ್ವಂತಾ
ರಾಜಪುತ್ರಶ್ರುತಿಗತಿಥಿಯದೊಂದಾಯ್ತು ವೀಣಾ ಪ್ರಣಾದಂ ೧೫

ವ|| ಆ ವೀಣಾರವಂ ಬಂದ ಬಟ್ಟೆವಿಡಿದು ಪೋಗಿ ಬಸದಿಯೆಂಬಸಿಯಳುಟ್ಟ ಪಸಿಯ ನೇತ್ರಮನಸಕೞಿವಂತಿರ್ದುಪವನದ ನಡುವೆ ಪೂವಿನ ಪುಡಿಯೊಳೊಟ್ಟಿ ಬೆಟ್ಟದಂತಿರ್ದೊಂದು ಪೊಂಬಸದಿಯ ಮತ್ತವಾರಣದ ಮೇಲೆ

ಅಳಕಾಸಕ್ತೈಕಹಸ್ತಂ ಪ್ರಿಯಶುಕಪರಿಹಾಸಪ್ರಫುಲ್ಲೈ ಕಗಂಡ
ಸ್ಥಳಮಾ
ದರ್ಶಾರ್ಪಿತೈಕೇಕ್ಷಣಮುಚಿತಸಖೀವಾಗ್ವಿತೀರ್ಣೈಕಕರ್ಣಂ
ಕಳವೀಣಾಲಿಂಗಿತೈಸಕ್ತನಮೆಸೆದುದು
ಕಾಂತಜನಂ ರತ್ನಪೀಠಂ
ಗಳೊಳೇಕೈಕಾಂಗಲೀಲಾಬಲಮನೆ
ರತಿನಾಥಂಗೆ ತೋರ್ಪಂದದಿಂದಂ   ೧೬

ವ|| ಮತ್ತಮಾ ಬಸದಿಯೊಳಗೆ ಬಿದಿ ಬಯ್ತ ಭುವನಭಾಗ್ಯ ದೇವತೆಯಂತಿರ್ದ ಪದ್ಮಾವತಿಯ ಮುಂದೆ ಚಂದ್ರಬಿಂಬಮಂ ತುಂಬಿಮಾಡಿ ಬಿಸತಂತು ಸಿಂಜಿನಿಯಂ ತಂತಿಮಾಡಿ ಇಕ್ಷುಚಾಪದಂಡಮಂ ದಂಡಿಗೆಮಾಡಿ ಪಂಚಶರಂಗಳಂ ಸಪ್ತಸ್ವರಂಗಳಂ ಮಾಡಿ ಜಿನಪತಿಯುಮನೆನ್ನ ಗಂಡನೊಳೆ ಪಡೆದು ಕುಡುವುದೆಂದು ದೇವಿಯನಾರಾಧಿಸಿ ಬೀಣೆಯಂ ಬಾಜಿಸುವ ರತಿಯಂತಿರ್ದಳನೊರ್ವಳಂ ಸೌಂದರ್ಯಸುಕುಮಾರಿಯಂ ಕುಮಾರಿಯಂ ಕಂಡು ಆಕೆಯ ವೀಣಾವಾದನ ವೈದಗ್ಧತೆಗಂ ಸಕಲ ತ್ರಿಭುವನಾತಿಶಯ ರೂಪಾಕೃತಿಗಂ ಕುಮಾರಂ ಮೆಚ್ಚಿ ಮೆಯ್ಮಱೆದು ಕಂಬದ ಮಱೆಯಂ ಸಾರ್ದು ಕೇಳುತ್ತುಮಿರ್ಪುದನಾಕೆಯ ಗುರು ಮನೋಹರನೆಂಬ ಗಂಧರ್ವಾಚಾರ್ಯಂ ಕಂಡು ವಸುದೇವನಂ ದೇವನೆಂದೇ ಬಗೆದು ಕುಳ್ಳಿರಲ್ಕುಡಿಸಿ ಕುಮಾರನಾಕಾರಮನೇಱೆಯಮಿೞಿಯುಂ ನೀಡುಂ ಭಾವಿಸಿ ನೋಡಿ

ಶ್ರೀಯಂ ತಾಳ್ದಿರ್ದ ವಕ್ಷಂ ಕಿಸುಸೆರೆವರಿದಿರ್ದಕ್ಷಿಯುಗ್ಮಂ ಪಯೋಜ
ಪ್ರಾಯಂ
ತಾಮ್ರಾಧರೋಷ್ಠಂ ವಡನಮಿಭಕರಸ್ಪರ್ಧಿಗಳ್ ತೋಳ್ಗಳಂಗ
ಯ್ಯಾಯೂರೇಖಾಭಿರಾಮಂ
ಪೊಱ ಅಡಿ ಕಮಠಾಕಾರಮಾಖಾರಮತ್ಯಾ
ದೇಯಂ
ಸಾಮಾನ್ಯನಲ್ಲಂ ತ್ರಿಭುವನಜನತಾ ಮಾನ್ಯನೀತಂ ವಿನೀತಂ    ೧೭

ವೆ|| ಎಂದು ಮನದೊಳ್ ಮಚ್ಚುತ್ತುಮಿರ್ಪನ್ನೆಗಂ ಪನ್ನಗಪೂಜಿತೆ ವೀಣಾವಾದನ ಪ್ರವೀಣತೆಗೆ ಮೆಚ್ಚಿ ಮನಮೊಸೆದು ಪಸಾಯಮಿತ್ತ ಮಕುಟದ ಮುಕುಳಮನಾ ಕುಮಾರಿ ಮೂಡಿಯೊಳಿಟ್ಟು ಭಟ್ಟತ್ತಿಗೆ ಪೊಡೆಮಟ್ಟು ಬಂದುಪಾಧ್ಯಾಯಂಗೆಱಗಿ ದೇವಿಯೆನಗೆಂದು ಮೀಯದ ವರಪ್ರಸಾದಮನಿಂದು ಗುರುಚರಣಪ್ರಸಾದದಿನಿತ್ತಳೆಂದು ಪೋಪುದುಮುಪಾಧ್ಯಾಯನೀ ಮಹಾನುಭಾಗನ ಬರವುಮೀ ದೇವತೆಯ ಬರವುಮೀಯಿಂದುವದನೆಗಿಂದು ಸಮನಿಸಿದ ಕಾರಣದಿನೀ ಕಾರಣಪುರುಷನೀ ವರಾಂಗನೆಗೆ ವರನಾಲ್ವೇೞ್ಕುಮೆಂದು ಮಂದಸ್ಮಿತವದನನಾಗೆ ವಸುದೇವನಱಿದೀ ಕುಮಾರಿ ಯಾರ ಮಗಳಾರ್ಗೆ ಕುಡಲಿರ್ದಪಳೀ ಪರಮೇಶ್ವರಿಯ ಪರಿಜನಮೇಕೆ ಬಾಳಕರನೆತ್ತಿದಂತೆ ವೀಣೇಯಂ ಕೌಂಕುೞೊಳೌಂಕಿಕೊಂಡಿರ್ದ ಪಳೆಂಬುದುಮೋಜ ನೆಂದನೀಕೆಯೀ ಪುರಮನಾಳ್ವಂ ಚಾರುಚರಿತಂ ಚಾರುದತ್ತನೆಂಬ ಪರದನ ಮಗಳೀ ವಾಣಿಗೀ ವೀಣೆಯೊಳ್ ವಾಣಿಯಿಂ ಬಲ್ಲಳ್ ವೀಣಾವಾದನದಿಂ ತನ್ನನಾವಂ ಗೆಲ್ವನವಂಗಲ್ಲದೆ ಪೆಂಡತಿಯಾಗೆನೆಂದು ಪ್ರತಿಜ್ಞೆಯಂ ಮಾಡಿದಳಿವರಯ್ಯನುಂ ರಯ್ಯಮಾಗಿ ತಿಂಗಳ್ಗೊಮ್ಮೆ ವೀಣಾಸ್ವಯಂವರಮಂ ಮಾೞ್ಪಮೆನ್ನರಪ್ಪ ಕಿನ್ನರರುಮೀ ಕನ್ನೆಗೆ ಸೋಲ್ತು ಕನ್ನೆಗೆ ವಂದ ರವಿಯಂತೆ ನಿಃಪ್ರಭರಾಗಿ ಪೋಪರಿದು ವಿಪಂಚೀಪ್ರಪಂಚಮೆನೆ ಕುಮಾರನೊಸೆದು ತನ್ನೊಳಿಂತೆಂದಂ

ಪರದರ ಸುತೆಗಿನಿತು ಕಳಾ
ಪರಿಣತೆಯುಂ
ರೂಪುಮಾಗದೆಳಗೊಸಗಿನ ಪೂ
ಮರದಡಿಯೊಳಿರ್ದ
ಸಂಪಗೆ
ಯರಲಿರ್ಪವೊಲಿರ್ದಳೀಕೆ
ಯಾವನ ಮಗಳೋ         ೧೮

ವ|| ಎಂದು ಮನದೊಡನೆ ಮಾತಾಡುವ ಕುಮಾರಂಗೆ ನಿನ್ನನುಮಾನಮನಱಿದೆನೆಂದು ಮನೋಹರನೆಂದನೀ ಪರದನ ಪರಮಮಿತ್ರನಮಿತಗತಿಯೆಂಬನಂಬರಚರನಾತನ ಮಗಳೀಕೆ ಗಂಧರ್ವದತ್ತೆಯೆಂಬಳೀ ಚಾರುದತ್ತನ ಚಾರಿತ್ರಕ್ಕಂ ಚತುರತೆಗಮಲಲಾಱದಮಿತಗತಿ ವಿದ್ಯಾಧರ ಲೋಕಕ್ಕೊಡಗೊಂಡು ಪೋಗಿ ತನ್ನ ರಾಜ್ಯಮಂ ಕುಡೆ ಕಡೆಗಣಿಸಿ ಗಂಧರ್ವದತ್ತೆಯ ಗಾಂಧರ್ವ ಗಂಧಿಯಪ್ಪ ಕಳಾಕೇಳಿಗಂ ವಲ್ಲಕೀವಲ್ಲಭತೆಗಂ ಬೆಡಂಗಿಂಗೆಡೆಗೊಂಡ ಗಾಡಿಗಂ ಬಯಸಿ ಕೊಳ್ಮಗಳ್ಗೊಂಡನಿದೀಕೆಯ ವೃತ್ತಕಮೆಂದು ವಸುದೇವನಂ ತನ್ನ ಮನೆಗೊಡಗೊಂಡು ಪೋಗಿ ಮಜ್ಜನ ಭೋಜನಾದಿಗಳಿಂ ಮನ್ನಿಸಿ ಮನೋಹರಂಗೆ ಮನೋಹರನಾಗೆ ಮಱುದಿವಸಂ ವೀಣಾ ಸ್ವಯಂಬರಮಾಗೆ ವೀಣೋಪಾಧ್ಯಾಯನೊಡಗೂಡಿ ಸ್ವಯಂವರ ಮಂಟಪದೊಳ್ ಕುಳ್ಳಿರ್ದ ನನ್ನೆಗಂ ನೆರೆದ ಕಿಂಪುರುಷ ಗರುಡ ಗಾಂಧರ್ವ ಸಿದ್ಧ ವಿದ್ಯಾಧರರಂ ಕರ್ವಿನ ಬಿಲ್ಲನೇಱಿಸುವಂತೆ ಕಳೆಯನೇಱಿಸಿ ಜೇವೊಡೆವಂತೆ ಮಿಡಿದು ನನೆಗಣೆಯಂ ಕೊಳ್ವಂತೆ ಕೋಣಮಂ ಕೊಂಡು ಮಗಮಗಿಸುವಂತೆ ಬಾಜಿಸಿ ಮನೋಜವಿಜಯಾಧಿದೇವತೆಯಂತೆ ಗಂಧರ್ವದತ್ತೆ ಸೋಲಿಸೆ ವಸುದೇವಂ ಕಂಡು ಮನೋಹರನನುಮತದಿಂ ಕಳನೇಱುವಂತೆ ವಿದ್ಯಾಪೀಠಮನೇಱಿ ಬೀಣೆಯಂ ಬೇಡುವುದುಮುಪಾಧ್ಯಾಯನೊಳ್ಳಿದುವೆಂದಾಯ್ದು ತಂದಿತ್ತ ಬೀಣೆಯಂ ಮಿಡಿದು ನೋಡಿ ತಂತಿಯೊಳ್ ತನುರೋಮಮಂ ಸೋರೆಯೊಳ್ ಶಲ್ಯಮಂ ಪ್ರವಾಳದೊಳ್ ಪಾಷಾಣಮಂ ತೋಱಿಕುಡುವೊಡೆ ನಿರ್ದೋಷಮಪ್ಪ ವೀಣೆಯಂ ಕುಡಿಮೆನೆ ಮನೋಹರನೆಂದವೀ ಲೋಕದೊಳಿವಲ್ಲದಿಲ್ಲ ನಿಮ್ಮ ಮೆಚ್ಚುವ ಬೀಣೆ ಯಾವ ಲೋಕದೊಳುಂಟೆನೆ ವಸುದೇವನೊಂ ದಾಖ್ಯಾನಮಂ ಪೇೞಲ್ ತಗುಳ್ದನದೆಂತೆನೆ

ನುತಹಸ್ತಿನಾಖ್ಯಪುರದಧಿ
ಪತಿ
ಮೆಘರಥಂಗಮೆಸೆದ ಪದ್ಮಾವತಿಗಂ
ಸುತರಾದರ್
ಜಗತೀ ವಿ
ಶ್ರುತ
ವಿಷ್ಣುಕುಮಾರ ಪದ್ಮರಥರತಿಸೇವ್ಯರ್   ೧೯

ವ|| ಮೇಘರಥಂ ಮೇಘೇಕ್ಷಣ ದರ್ಶನದಿಂ ವೈರಾಗ್ಯಪರನಾಗಿ ವಿಷ್ಣುಕುಮಾರಂ ಬೆರಸು ತಪಂಬಟ್ಟಂ ಪೆಱಗೆ ರಾಜ್ಯದೊಳ್ ನಿಂದ ಪದ್ಮರಥನ ಮೇಲೆ ಮೆಲೆದೆತ್ತಿ ಬಂದ ಪ್ರತ್ಯಂತ ಭೂಪಾಲರ ಬಲಮಂ ಬಲಿಯೆಂಬ ಮಂತ್ರಿಯುಂ ಮಂತ್ರಬಲದಿಂ ಬಾರದಂತು ಬಾರಿಸೆ ಪದ್ಮರಥಂ ಮೆಚ್ಚಿ ಮೆಚ್ಚಿತಂ ಬೇಡಿಕೊಳ್ಳೆನೆ ಬಲಿ ಜೋಕೋರನಂತಿರೇೞು ದಿವಸದರಸುತನಮಂ ಬೇಡಿ ಪಡೆದನನ್ನೆಗಮಾ ಪುರದ ಪೊಱವೊೞಲ ಸೌಮ್ಯಗಿರಿಯೊಳ್

ಧೃತಿಯಿಂ ಮಚ್ಚರಿಸುವ
ರ್ವತಮಂ
ತಾನಿಕ್ಕಿ ಮೆಟ್ಟಿದಂತಿರೆ ಯತಿಸಂ
ತತಿವೆರಸಕಂಪನವ್ರತಿ

ಪತಿಯಿರ್ದಂ
ಯೋಗರ್ಧುರ್ಯನಚಲಿತ ಧೈರ್ಯಂ     ||೨೦||

ವ|| ಅದು ಕಾರಣದಿಂದಕಂಪನ ಮುನೀಶ್ವರಂಗೆ ಬಲಿಯುಪಸರ್ಗಮಂ ಮಾೞ್ಪ ಮನಮನೆತ್ತಿಕೊಂಡು ಕೋಟಿಹೋಮಮುಮಂ ಬ್ರಾಹ್ಮಣ ಭೋಜನಮುಮಂ ಸೌಮ್ಯ ಗಿರಿಗುಹಾಗೇಹಂಗಳೊಳ್ ಮಂತ್ರಿ ಮಾಡಿದಪನಲ್ಲಿ ಯಲ್ಲದೊಡೆಯುಮ ಗರಗರಿಕೆಯುಮಿಲ್ಲೆಂದು ಡಂಗುರಮಂ ಪೊಯ್ಸೆ ಬಾಯ ಸವಿಗೆ ಪಾರ್ವರೆಲ್ಲಂ ಪರ್ವತಕ್ಕೆ ಮೂಷೆಯಿಡುವಂತೆ ಸುತ್ತಿ ಮುತ್ತಿ ಬೇಳ್ವೆಯುಮನಡುಗೆಯುಮಂ ಎಡೆಯುಡುಗದೊಡರಿಸೆ

ಮುಗಿಲಗಶೃಂಗಮಂ ಮುಸುಱಿ ಮೇವವೊಲುರ್ವಿ ಪೊದೞ್ದು ಪರ್ವೆ ಪೆ
ರ್ವೊಗೆ
ಭಗಣಂಗಳಂ ಬಳಸಿದಿಂದುವಿನಂತೆ ಮಯೂಖಮಾಲೆಯೋ
ಲಗಿಸುವ
ಸೂರ್ಯನಂತೆಸೆಯೆ ಸುತ್ತಿಱಿದಗ್ನಿ ಭಟಾರನಂತೆ ಯೋ
ಗಿಗಣಪರೀತನಸ್ಖಲಿತನಿರ್ದನಕಂಪನಯೋಗಿ
ಯೋಗದೊಳ್    ೨೧

ವ|| ಆ ಮುನಿಜನೋಪಸರ್ಗಮಂ ಮಾೞ್ಪುದುಗಂಡಿಂತೇಕೆಂದು ವಿಷ್ನು ಕುಮಾರನಱಿದು ಪದ್ಮರಥನದಲ್ಲಿಗೆ ವಂದು ಪೊಡೆವಟ್ಟೊಡಂ ಪರಸದೆ ವೀತರಾಗಾಸನಮನಿಕ್ಕಿಕೊಂಡು ಕುಳ್ಳಿರದೆ ಕನಲ್ದಿಂತೆಂದಂ

ಮಂತ್ರಿ ಮುನಿದೀ ಮಹಾಮುನಿ
ಸಂತತಿಗೆ
ಮಹೋಪಸರ್ಗಮಂ ಮಾೞ್ಪದುಗಂ
ಡಿಂತೇಕೆಯಣ್ಣ
ಮಂತುವಿ
ನಂತಿರ್ದಪೆಯರಸನಾದುದರ್ಕಿದು
ಫಲಮೇ  ೨೨

ವ|| ಎನೆ ಪದ್ಮರಥಂ ನಡುಗಿ ಮೂಱುಂ ಲೋಕಮುಮನೆಱಗಿಸುವ ನಿಮ್ಮಡಿಯ ತಪೋರಾಜ್ಯಮೆ ಎಡೆಯ ಕಡೆಯ ಬಡವರುಮನೆಱಗಿಸಲಾಱದೆಮ್ಮ ರಾಜ್ಯಮೇತೆ ರಾಜ್ಯಮಿಂದ್ರೋಪೇಂದ್ರಾದಿಗಳ್ಗಾಸನಕಂಪಂ ಮಾೞ್ಪ ನಿಮ್ಮಡಿಯ ತಪಸ್ತೇಜದ ಪೊರೆಯೊಳ್ ಮನ್ನೆಯ ಮಂತ್ರಿಯುಮಂ ನಡುಗಿಸಲಾಱದೆಮ್ಮನ್ನರಪ್ಪ ನರಕೀಟಕಂಗಳ ತೇಜಮಾದಿತ್ಯನ ತೇಜದ ಪೊರೆಯ ಮೀಂಬುೞುವಿನ ತೇಜದಂತಕ್ಕುಮಲ್ಲದೆಯುಂ ಬೇಗೆ ಪರ್ವಿದ ಪರ್ವತಂಗಳ ತಾಪಮಂ ಕಳೆವೊಡವಱಿಂದುನ್ನತಮಪ್ಪ ಜಲಧರಂಗಳೆ ಕಳೆಗುಂ ಕೀೞಿದುವಪ್ಪ ತೊಱೆಯುಂ ಬಾವಿಯುಂ ಬಗರಗೆಯುಂ ಕಳೆಯಲಾಱವೀ ಮಹಾನುಭಾವರು ಪಸರ್ಗಮಂ ಪಿಂಗಿಸುವೊಡೆ ಸಾಮರ್ಥ್ಯವಂತರಪ್ಪ ನಿಮ್ಮಂದಿಗರೆ ಪಿಂಗಿಸುವರ್ ಮಂದರಪ್ಪೆಮ್ಮಂದಿಗರಿಂದೇನಪ್ಪುದೆನೆ ವಿಷ್ಣುಕುಮಾರನಂತದೊಡಾಮೆ ನಿಯಮಿಸಿದಪೆ ಮೆಂದು ಪೋಗಿ

ಒಗೆಯೆ ಕವಿಲ್ತ ಕಾಸೆ ಪೊಸಜನ್ನಿವರಂ ಶಿಖಿಕೋವಣಂ ಕರಂ
ಡಗೆ
ಕಿಸುವೊನ್ನ ಬಟ್ಟಗೂಡೆ ಬಾರಸನಾಮದ ಬೊಟ್ಟು ಕೊಪ್ಪಿನೊಳ್
ನೆಗೆದ
ಕುಶಾಂಕುರಂ ಮಿಸುಪ ಮುಂಜಿ ಪಲಾಶದ ದಂಡ ಕುಂಡಳಂ
ಬಗೆವುಗೆ
ಬಂದನಂದು ಬಲಿಯಲ್ಲಿಗೆ ವಾಮನನಾಗಿ ಕಾಮದಂ    ೨೩

ವ|| ಆ ಮಾಣಿಕದಂತಪ್ಪ ಮಾಣಿ ಮಂತ್ರಿಯ ಮುಂದೆ ನಿಂದು ಮಂತ್ರಮಂ ಪೇೞ್ದಕ್ಷತೆಯಂ ಕೊಟ್ಟು

ಶ್ಲೋಕ || ಬಲಿಂ ವಿಷ್ಣುರಯಂ ಕುರ್ಯಾದವಿಲಂಬಂ ಧನಂ ತವ
ಸಮಾಶ್ಲಿಷ್ಯತಿ
ಯತ್ಪಾದಂ ಪದ್ಮಾಭಾತ್ಯಾತಪತ್ವಿಷಾ

ವ|| ಎಂದುಪಶ್ಲೋಕಿಸಿದ ವಟುವಿನ ವಾಕ್ಪಟುತ್ವಕ್ಕಂ ಬ್ರಹ್ಮವರ್ಚಸ್ಸಿಗಂ ಬೆಕ್ಕಸಂಬಟ್ಟು ಬಲಿ ಬಲಗೊಂಡು ಪೊಡೆವಟ್ಟು ಬೇಡಿಮೆನೆ ವಾಮನನೆಮಗೆ ಕುಳ್ಳಿರ್ದನುಷ್ಠಾನಮಂ ಮಾಡಲ್ತಕ್ಕನಿತನೆಮ್ಮ ಕುತ್ತಡಿಯೊಳ್ ಮೂಱಡಿ ನೆಲನನೀವುದೆನೆ ಬಲಿ ಬೆಚ್ಚನೆ ಸುಯ್ದೆನಗದೃಷ್ಟಮೆಯ್ದದಿರ್ಕಂ ಕಿಱಿದಂ ಬೇಡಿದಿರ್ ಕೊಟ್ಟೆನಳೆದುಕೊಳ್ಳಿಮೆನೆ

ವಟು ಮರದುದ್ದವಾದನಿತಲ್ಲದೊಡಿತ್ತಲೆಯುದ್ದವಾದನ
ಕ್ಕಟ
ಮದಿಲುದ್ದವಾದನಿವನಾವನೊ ಪೆರ್ಮರದುದ್ದವಾದನಿಂ
ತುಟು
ಗಿರಿಯುದ್ದವಾದನಿದು ವಿಸ್ಮಯಮಾ ಮುಗಿಲುದ್ದವಾದನೋ
ವಟಮಟಿಗಂ
ದಿಟಕ್ಕೆನೆ ಕರಂ ಬಳೆದಂ ಮನದಂತೆ ವಾಮನಂ   ೨೪

ವ|| ಅಂತುಮಲ್ಲದೆ

ಮರನಂ ಮುಟ್ಟಿದನಿಲ್ಲ ಮೇಘಘಟೆಯೊಳ್ ಕಾಲ್ಕೋದನಿಲ್ಲಿಲ್ಲ ಭೂ
ಧರಮಂ
ದಾಂಟಿದನಿಲ್ಲ ಬಾಂದೊಱೆಯೊಳಿಟ್ಟಂ ಕಾಲನಿಲ್ಲಿಲ್ಲ ಭಾ
ಸ್ಕರನಂ
ಮಾಯದ ಮಾಣಿ ಸೆಂಡೆಡೆದನಾ ಇಲ್ಲೆಂಬಿನಂ ನೀಡಿದಂ
ತರದಿಂ
ಪಾದಮನುರ್ವಿ ಕೊರ್ವಿ ಬಲಿಯಂ ಗೆಲ್ವಾ ಮನಂ ವಾಮನಂ      ೨೫

ಅದೆ ಪೊಸಪೊನ್ನ ಸತ್ತಿಗೆಯದಲ್ಲದು ರತ್ನಹಟತ್ಕಿರೀಟದ
ಲ್ಲದು
ವರವಜ್ರ ಕುಂಡಳವದಲ್ಲದು ಕೌಸ್ತುಭ ರತ್ನಮಂತದ
ಲ್ಲದು
ಕರಚಕ್ರವಲ್ಲದದು ನಾಭಿಸರೋಜಮೆನಲ್ ದಿನೇಶಬಿಂ
ಬದ
ನೆಲೆ ಕರ್ಗಿತಪ್ಪಿನವನುಕ್ರಮದಿಂ ಬಳೆದಂ ತ್ರಿವಿಕ್ರಮಂ       ೨೬

ಇದು ಲೀಲಾಧೃತಭೂಕರೇಣುಕರಪುಲ್ತಭ್ರೋತ್ಪಟೀಕೇತುವ
ಲ್ತಿದು
ಸೂರ್ಯಾಂಬುಜನಾಳಮಲ್ತು ಶಶಿಲೋಕಾದೀಪಿಕಾಸ್ತಂಭಮ
ಲ್ತಿದು
ತಾರಾಕುಸುಮಾವಳೀ ವಿಟಪಮಲ್ತಭ್ರಾವನೀ ಶೇಷಮ
ಲ್ತಿದೆನಲ್
ತಾಂ ಬಳೆಯಿತ್ತನುಕ್ರಮದಿನಾ ಪಾದಂ ಪಯೋಜಾಕ್ಷನಾ        ೨೭

ತರುವಿಂದತ್ತತ್ತ ನೀಳ್ದಂ ಘನಪಟಲದಿನತ್ತತ್ತ ಮಿಕ್ಕಂ ಹಿಮೋರ್ವೀ
ಧರದಿಂದತ್ತತ್ತ
ಪೋದಂ ರವಿಯ ರಥದಿನತ್ತತ್ತ ಮೆಯ್ವೆರ್ಚಿದಂ ಸು
ಟ್ಟುರೆಯಿಂದತತ್ತಮತ್ತಂ
ನಿಮಿರದಿರನಿದೇನೆಂದು ಜಾತಾದ್ಭುತಂ ನೋ
ೞ್ಪರ
ಕಣ್ಣುಂ ಚೇತಮುಂ ಕಾಲ್ಗಿಡೆ ಕಡುಜವದಿಂ ವಿಷ್ಣು ವರ್ಧಿಷ್ಣುವಾದಂ     ೨೮

ವ|| ಅಂತುಮಲ್ಲದೆ

ಬಲಗೊಂಡತ್ತಮರಾದ್ರಿಗೆತ್ತೆಡೆಯೊಳಾ ಜ್ಯೋತಿರ್ಗಣಂ ಬಂದಿರುಳ್
ತಲೆದೋಱಿತ್ತಳ
ಮೀಂಗಳೊಂದು ದೆಸೆಯೊಳ್ ಮೆಯ್ದೋರ್ಪಿನಂ ತಪ್ತಕಂ
ದಳಿತಂ
ಸಂದಣಿಗೊಂಡುದೊಂದು ದೆಸೆಯೊಳ್ ಸೂರ್ಯಾತಪಂ ವಿಕ್ರಿಯಾ
ಬಳದಿಂ
ತಾಂ ಬಳೆಯಲ್ಕೆ ಭಂಜಿತ ಮಹಾ ಮಂತ್ರಿಕ್ರಮಂ ತ್ರಿಕ್ರಮಂ       ೨೯

ರವಿಯಶ್ವಂ ದೆಸೆವಾಯ್ದು ಪಾಯ್ದೆಱೆವಿನಂ ತೇರಂ ನಯಂ ಪೆರ್ಚಿ ಬೆ
ರ್ಚುವಿನಂ
ಚಂದ್ರನ ಬೆಳ್ಮೊಗಂ ಬೆದಱಿದಾತ್ಮಸ್ತ್ರೀಯರಂ ಪೇಱಿ ಪಾ
ಱುವಿನಂ
ತಾಂ ಪೊಲಗೆಟ್ಟು ಖೇಚರಚಯಂ ದಿಕ್ಪಾಲಕರ್ ಭೋಂಕೆನಂ
ಜುವಿನಿಂ
ವಿಷ್ಣುಕುಮಾರನೇಂ ಬಳೆದನೋ ಬ್ರಹ್ಮಾಂಡಮಂ ತಾಪಿನಂ     ೩೦

ವಟುವಿಂಗೆ ಮಿಂಚುವೆಳಮಿಂಚಿನ ವಾರಿದಲೇಖೆ ಮೌಂಜಿಯುಂ
ಕೋವಣಮಾಯ್ತು
ಮುಟ್ಟಿ ರವಿಗರ್ಘ್ಯಮನೀವ ಪೊಡರ್ಪು ಮಾಯ್ದ ಮಾ
ಯಾವಿಗ
ತನ್ನ ಗುಂಡಿಗೆಯಿನಾಗಸಗಂಗೆಯ ದಿವ್ಯತೋಯಮಂ
ತೀವುವ
ಬುದ್ಧಿಯೊಳ್ ಬಗೆದನಕ್ಕಟ ಮಾಣನವ ಪ್ರಮಾಣಮಂ   ೩೧

ಇಂತಪ್ಪ ಸಿತಗನೀ ವಟು
ಮಿಂತಪ್ಪತಿವರ್ತಿ
ಮಾಣಿಯುಂ ಕೋಡಗಮುಂ
ಸಂತಮಿಡಲಾರ್ಕುಮೇ
ರವಿ
ಯಂತಪ್ಪನ
ಪರಿವ ಭಂಡಿಯೊಳ್ ಕಾಲ್ಗೋದಂ         ೩೨

ಅಂಬರತಳಕ್ಕೆ ಬಳೆದು ತೆ
ಱಂಬೊಳೆವಚ್ಯುತನ
ಚರಣದಂಡಂ ನಕ್ಷ
ತ್ರಂ
ಬಳಸಿ ದೀಪಮಾಲೆಯ
ಕಂಬದವೋಲ್
ತೊಳಗಿ ಬೆಳಗುತಿರ್ದತ್ತಾಗಳ್         ೩೩

ಬಲಿಹರನ ಚರಣದಂಡದ
ತಲೆಯೊಳ್
ಕಿಱಿಗೊಂಡೆೞಲ್ವ ಬಾಂದೊಱೆಯೆಲರಿಂ
ದೊಲೆದುದು
ವಿಷ್ಣುಕುಮಾರನ
ಗೆಲವಂ
ಕಂಡಮರರೊಸೆದು ಕಟ್ಟಿದ ಗುಡಿವೋಲ್      ೩೪

ವಾಮನ ಪದಹತ ವಿಗಳಿತ
ಜೀಮೂತ
ವಿಮುಕ್ತ ಬಹಳ ಜಲಧಾರೆಗಳಿಂ
ದಾ
ಮುನಿಜನಾಪಕಾರಕ
ಧೂಮಧ್ವಜನೆಯ್ದೆ
ನಂದಿ ಪೋದತ್ತಾಗಳ್      ೩೫

ವ||ಅಂತಾ ಮಹಾಮುನಿ ಜನೋಪಸರ್ಗಮಂ ಮಾಣಿಸಲೆಂದು ವೈಕುರ್ವಣ ಋದ್ಧಿಯಿಂ ಬ್ರಹ್ಮಾಂಡಮನೊದೆದು ಬಳೆದಾ ತ್ರಿವಿಕ್ರಮನುತ್ಕ್ರಮಾಂಗುಷ್ಠಘಾತದಿಂ ತ್ರಿದಿವಮುದಿರ್ಗುಮೆಂಬ ಭಯಮಾಗೆ ಬಲವಿರೋಧಿ ಬೆಸಸಿದ ಗಂಧರ್ವದೇವರ್ ಬಂದು ಗಾಂಧಾರಗ್ರಾಮ ಮನಾಳಾಪಿಸಲೆಂದು ಧಾರಾವಿಯುಂ ಸಾರಿರಿಯುಮೆಂಬೆರಡುಂ ಬೀಣೆಗಳುಮನಳವಡಿಸಿ

ಕಳೆಯಂ ಪತ್ತಿಸಿ ಜೀವೆಯಂ ನಿಱಿಸಿ ಮೆಲ್ಪಿಂ ತಂತಿಯಂ ತೀಡಿ ಕಾ
ಕಳಿಯೊಳ್
ಬೀಣೆಯನಾಗುಮಾಡಿ ಮಿಡಿಯುತ್ತಾಳೆರ್ದ ನುಣ್ಗಾವರ
ಕ್ಕಳಿ
ಪೂವಂ ಗಿಳಿ ಪಣ್ಣನಾಲಿಸಿ ಲಸಚ್ಚೂತಾಂಕುರಾಸ್ವಾದಮಂ
ಕಳಕಂಠಂ
ಬಿಡೆ ದೇವರಾಲಪಿಸಿದರ್ ತ್ರಿಸ್ಥಾನಸಂಶುದ್ಧಿಯಿಂ     ೩೬

ವ|| ಆ ಗಂಧರ್ವವಾದನಕ್ಕೆ ವಿಷ್ಣುಗಂಧಿಯಪ್ಪ ವಿಷ್ಣುಕುಮಾರನತಿ ಪ್ರಸ್ನನನಾಗಿ ನಿಜೋದ್ರೇಕಮುಮಂ ವೈಕುರ್ವಣಮುಮನುಪಸಂಹರಿಸಿ ಬಲಿಯಂ ಬಂಧನದೊಳಿರಿಸಿದನಾ ವೀಣೆಯ ವಂಶದ ವೀಣೆಯುಂಟಕ್ಕುಮಪ್ಪೊಡೆ ತನ್ನಿಮೆಂದ ವಸುದೇವನಾ ವಿಪಂಚೀ ಪ್ರಪಂಚವಾಚಾಕ್ವಣಿತಾಕಾರಕ್ಕಮತಿ ಮನೋಹರಾಕಾರಕ್ಕಮತ್ಯಂ ತಮಾಸಕ್ತೆಯಾಗಿ

ಅತಿಮುಗ್ಧಾಪಾಂಗಭೃಂಗಂ ಮುಖಸರಸಿಜದೊಳ್ ತನ್ನ ಬಾಹಾಭುಜಂಗಂ
ಸುತನು
ಶ್ರೀಖಂಡ ಶಾಖಾಂತರದೊಳದರ ಸದ್ವಿದ್ರುಮಂ ದಂತಮುಕ್ತಾ
ವಳಿಯೊಳ್
ಪಾಣಿ ಪ್ರವಾಳಂ ಕುಚಕಲಶದೊಳಿಂಬಾಗೆ ತಳ್ತಿರ್ದನಿಂದ್ರ
ಪ್ರತಿಮಂ
ಗಾಂಧರ್ವದತ್ತಾ ಮೃದು ಹೃದಯದೊಳಾ ರೂಪ ಕಂದರ್ಪದೇವಂ        ೩೭

ವ|| ಇರ್ದೊಂದು ದಿವಸಂ ವಸುದೇವಕುಮಾರಂ ವಿದ್ಯಾಮಂಡನಮಂಡನೀಭೂತ ಜಗತ್ಯಾಸಿಂಹಾಸನದೊಳ್ ಸಿಂಹಕಟೀತಟಮನುಪಮೆಗೆ ತರ್ಪಂತುವೇಷದಿನಳಂಕರಿಸಿರ್ಪುದುಮಾ ಪ್ರಸ್ತಾವದೊಳ್ ಕುಂಕುಮನುಂ ಕುಚಕಳಸನುಮೆಂಬರಿರ್ವರಕ್ಕರಿಗರ್ ಬಂದು ಶುಭೋದಯಮೆಂದು

ಸಂಸ್ಕೃತ|| ಕೀರ್ತಾವಾಜತಿ ಸೆಜ್ಜೆವಳ್ಳ ಸಚಿವ ಶ್ರೀಪದ್ಮನಾಭ ಪ್ರಭೋಃ
ತ್ರೈಲೋಕ್ಯಾಶ್ವಪರ್ತಿ
ವಿಜೇಯ ಸುಚಿರಂ ದೃಷ್ಟ್ಯಾಸತೀಭೀಸ್ಫುಟಂ
ಕಸ್ತೂರೀತಿಲಕೇನ
ಲಕ್ಷಣಕೃತೇ ಚಂದ್ರಸ್ಸಲಕ್ಷ್ಮಾಭತೇ
ಕಂಠೇ
ಕಾಳಯತಿ ಪ್ರಸಿದ್ಧಮಗಮತ್ ಶೇಷೋಹಿ ಭೂಷೋಪಿಚ  ೩೮

ಪಾಕೃತ|| ಸಿರಿಯ ಸಯಿಯೆ ವಿರಲಂ
ತಿಯವಚ್ಚೋಚ
ಮುಹುಮಿಹಭಯದಂಡೋ
ಸಂಜೀಯಾಯ
ಜಿಣಾಸೆಂ ಜಾಜೈಪವು ಮಹಣಾಹೋ
ವೀರಬಲ್ಲಾಳದೇವಂ
ಪುತಿಯಪುದು ವಿಣಾಹೋ ಸಂಜಳೋ ಸೆಜ್ಜೆವಳ್ಳೋ  ೩೯

ವ|| ಎಂದೋದಿದ ಭಟ್ಟರ್ಗೆ ತುಡಲಾರ್ಪನಿತು ಮಣಿಭೂಷಣಂಗಳಮನುಡಲಾರ್ಪನಿತು ಪಟ್ಟಾಂಬರಂಗಳುಮುಂ ಮೊಟ್ಟೆಗಟ್ಟಿ ಪೊತ್ತುಕೊಂಡು ಪೋಗಲಾರ್ಪನಿತು ಪೊನ್ನುಮನಿತ್ತು ನೀಮೆತ್ತೆಣಿಂ ಬಂದಿರೆಲ್ಲಿಗೆ ಪೋದಪಿರೆಂಬುದುಂ ಕುಚಕಲಶನೆಂದಂ ವಂಶವಿಷದೊಳ್ ಮಾಗಧಿಯೆಂಬ ಪೊೞಲನಾಳ್ವ ರಕ್ತಾಕ್ಷನೆಂಬರಸಂಗಂ ಸುಮಿತ್ರೆಯೆಂಬರಸಿಗಂ ರೋಹಿಣಿಯೆಂಬ ಮಗಳಾದಳಾ ತ್ರಿಭುವನ ಸೌಂದರ್ಯ ಸಂಕೇತ ಭೂಮಿಯಪ್ಪ ಭಾಮಿನಿಯ ಶೃಂಗಾರಸ್ವಯಂವರಕ್ಕೆ ಜರಾಸಂಧ ಚಕ್ರವರ್ತಿಯುಂ ಸಮುದ್ರವಿಜಯಂ ಮೊದಲಾದ ಮಂಡಳಿಕರುಂ ನೆರೆದರಿವರಂ ಬೇಡುವೆವೆಂಬ ಬಗೆಯಿಂ ಬಂದೆವೀ ಭವಕ್ಕೆ ನಾಮಾರುಮಂ ಬೇಡದಂತುಮಾರ್ಬೇಡಿದೊಡಂ ಬೇಡಿದನಿತನಾಮೆ ಕುಡುವಂತುಂ ಕೊಟ್ಟೆ ನೀನೇ ದಾನಿಯೆಂದು ಪೊಗೞ್ದು ಪೋದರಿತ್ತ ವಸುದೇವನಾ ಪೊೞ್ತೆಪೊೞ್ತಾಗಿ ಪರ್ಣಲಘುವಿದ್ಯೆಯಿಂ ಸುರ್ಪಣನಿಂ ಬೇಗಮಾಗಿ ಮಾಗಧಿಗೆ ಪೋಗಿ ಪ್ರಾಕೃತ ಕಾವ್ಯದಂತೆ ಸಹಜಸೌಭಾಗ್ಯ ಭಂಗಿ ಭಾವಾಲಂಕಾರದಿನಲಂಕೃತನಾಗಿ ಸ್ವಯಂವರ ಮಂಟಪಮಂ ಪುರುವುದುಂ ಆಗಳಾ ಸ್ವಯಂವರ ಸಭೆಯಾದ ವಾದಕಸಂಪ್ರದಾಯದೊಳೊರ್ವ ಪಾಣವಿಕನ ಪೆಗಲ ಪಣವಮಂ ತನ್ನ ಪೆಗಲೊಳ್ ತಗುಳ್ಚಿಕೊಂಡು ಮೂಱುಂತೆಱದ ಲಯದೊಳಮನಿತೆ ಜತಿಯೊಳಂ ವಿವಿಧ ವಾದ್ಯವಿಧಿಯೊಳಂ ಮಧುರಾತಿಮಧುರಮುಂ ಚಿತ್ರಾತಿಚಿತ್ರಮುಮಾಗೆ ಬಾಜಿಸುವ ವಾದ್ಯವಿದ್ಯಾಧರನ ವಾದನವವೈದಗ್ಧೆಗಂ ಮರುಳ್ಗೊಂಡು ಗಂಡಗಾಡಿ ಗಂಡು ವೇಟಂಗೊಂಡು ಸ್ವಯಂವರ ಸಂಭ್ರಮುಮಂ ರಾಜಪುತ್ರಿಯ ಕೈಗೆ ಮಾಲೆಯೊಂದು ಬಂದ ಬರವುಮಂ ಮಱೆದು ಮೈಮಱೆದು ನೆರೆದ ರಾಜಲೋಕಮೆಲ್ಲಂ ರಾಜಸುತೆಯನೀಡಾಡಿ ಬಂದು ದೊಮ್ಮಳಿಸಿ ಮುಮ್ಮೞಿಗೊಂಡು ನೋಡುತ್ತುಮಿರ್ಪುದುಮಲ್ಲಿಗೆ ಕಾತರಚಿತ್ತೆಯಾಗಿ ಕಿವಿಯೆಳದುವರಿಯೆ ಕೇಳ್ದು ಮನವೆಳದುವರಿಯೆ ಬಂದು ಕಣ್ಣೆಳದುವರಿಯೆ ನೋಡಿ