ಕಣ್ಬಡೆದ ಕುರುಡನಂತಿರೆ
ಪಣ್ಬಡೆದೆಳವಕ್ಕಿಯಂತೆ
ಪುಣ್ಯದ ಫಲದಿಂ
ಪೆಣ್ಬಡೆದ
ಸೂಳೆಯಂತಿರೆ
ಜಾಣ್ಬಡೆದೊಕ್ಕಲಿಗನಂತೆ
ನಲಿದಂ ನಂದಂ   ೫೧

ವ|| ಇಂತಾದೊಡೆ ನೀನೆ ದೇವತೆಯೆಂದು ಪೊಡೆವಟ್ಟು ಪೋಗಿ ಯಶೋದೆಗೆ ಕೊಟ್ಟನಿತ್ತಲಾ, ಬಾಲಕಿಯಂ ದೇವಕಿಯ ಮುಂದೆ ತಂದಿಕ್ಕಿ ತಂದರ್ವರುಂ ತಾಮಱಿಯದಂತಿರೆ ಕಂಸಂ ತನ್ನ ತಂಗೆ ಬೆಸಲೆಯಾದುದನಱಿದಾ ಬೈಗಿರುಳೆ ಬಂದನುಜೆಯ ಮುಂದಣ ತನುಜೆಯಂ ಕಂಡು ಕೊಲಲೊಲ್ಲದೆ ಇವಳೊರ್ವಳಣ್ಮಳಾಣ್ಮನೆತ್ತಾನುಮಪ್ಪೊನಾದೊಡಾತನೆನಗೆ ಮಾರಿಯಪ್ಪ ನೆಂದಾಕೆಯ ಮೂಗನಡಂಗೊತ್ತಿ ಪೋದನಾಕೆಯುಂ ತನ್ನಂ ತಾನಱಿದಿಂ ಬೞಿಕ್ಕೆ ಮೊಗಮಂ ನೋೞ್ಪರ ಮೊಗಕ್ಕೆ ನಾಣ್ಚಿ ವಿಂಧ್ಯಮಂ ಪೊಕ್ಕು ವಿಂಧ್ಯಮಾನಸೆಯೆಂಬ ದೇವತೆ ಯಾದಳಿತ್ತಲಂದಾನಂದನ ಮಂದಿರದೊಳ್ ಮಹೋತ್ಸವಂ ಮಾಡಿ

ಕುೞಿಯೊಳು ನಾಟಿಸಿ ನೀರಂ
ಗೞಗೞನೆಱೆವಂತೆ
ಫಲಿತ ಲತೆಗಚ್ಯುತನಂ
ಕುೞಿವೊಕ್ಕು
ಕೊಂಡ ಜಸೆದೆಗೆ
ನೆೞಲೊಳ್ಗೋಪಿಯರೆ
ಮೀಯಲೊಲವಿಂದೆಱೆದರ್      ೫೨

ಅರಿಸಿನದಂಚೆಯನಿನಿಸೋ
ಸರಿಸಲುಮೀಯದೆ
ಯಶೋದೆಯೀತಂ ಪೀತಾಂ
ಬರನೆಂದು
ಧರೆಗೆ ಪೇೞ್ವಂ
ತಿರೆ
ಪೊಕ್ಕುೞೊಳಿಕ್ಕಿದಳ್ ಪಯೋಜೋದರನಂ        ೫೩

ನಲಿದೊಡವುಟ್ಟಿದ ಮುಂಗೈ
ವಲಮೆಂಬೆಳಗೂಸು
ಕೂಡೆ ಕಣ್ದೆಱೆದವೊಲಾ
ಜಲಜಾಕ್ಷನ
ಮುಂಗಯ್ಯೊಳೆ
ಜಲಜಲಿಸೆ
ಯಶೋದೆ ಕಟ್ಟಿದಳ್ಕವಡಿಕೆಯಂ   ೫೪

ನಳಿನಿಯ ಬಿರಿಮುಗುಳೊಳ್ಪಾ
ಯ್ದಳಿಕಳಭಂ
ಬೆಂಡುನೆಗೆದು ಬಂಡುಣ್ಪವೊಲಂ
ದಲೆದಲವಲಿಸಿ
ಯಶೋದೆಯ
ಮೊಲೆಯುಂಡಂ
ನವತಮಾಲಕೃಷ್ಣಂ ಕೃಷ್ಣಂ  ೫೫

ಮೃಗದಂತಿರೆ ಮಗಮಗಿಸುವ
ಸುಗಂಧ
ವರತೈಲತೃಣದ ಮೇಪಿನ ಸೊಡರ್ವ
ಕ್ಕುಗಳಿಂದ
ಬೊಟ್ಟನಿಟ್ಟಳ್
ಮೊಗದೊಳ್ಕತ್ತುರಿಯ
ತಿಲಕದಂತಿರೆ ಹರಿಯಾ          ೫೬

ಪಿಡಿದಡಿಸಿ ಕಂಸನಿದಿರೊಡ
ಲೊಡೆವಿನಮೊದೆದೊದೆದು
ಗುದ್ದಿಗುದ್ದಿಯೆ ಕೊಲಲೆಂ
ದಡಹಡಿಸುವಂತಿರಿರ್ದುವು

ಪಿಡಿಕಯಿಸಿದ
ಕಯ್ಯುಮೊದೆವ ಕಾಲುಂ ಹರಿಯಾ       ೫೭

ಅರಗಿಳಿಯಂ ಮಾಣಿಕವಂ
ಜರದೊಳಗಿರಿಸುವೊಲಿರಿಸಿ
ಮಣಿದೊಟ್ಟಿಲೊಳಾ
ಮರಕತವರ್ಣನನುತ್ಸವ

ಭರದಿಂದೆ
ಯಶೋದೆ ಪಾಡಿದಳ್ ಜೋಗುಳಮಂ      ೫೮

ಜೋ! ನಳಿನಾಕ್ಷ ಜೋ! ಭುವನನವಲ್ಲಭ ಜೋ! ನಯನಾಭಿರಾಮ ಜೋ!
ಜಾನಕಿಯಾಣ್ಮ
ಜೋ! ಜನಮನೋಹರ ಜೋ! ಜಗದೀಶ ಕೃಷ್ಣ ಜೋ!
ಜೋ
ನರಸಿಂಹ ಬೇಡೞದಿರಾ ಮೊಲೆಯಂಪಿಡಿ ಹೋಯಿಯೆಂದು ಚಂ
ದ್ರಾನನೆ
ತೊಟ್ಟಿಲಂ ತೊನೆದು ತೂಗುತುಮಾಡಿ ಯಶೋದೆ ಪಾಡಿದಳ್   ೫೯

ಎಳವೆಯ ಮುದ್ದುಂ ರೂಪುಂ
ಬಳೆಯಿಸೆ
ಮೋಹನಮನವರ ಮನದೊಳ್ ಮದನಂ
ಬಳೆದಂತೆ
ಬಳೆದು ಕೃಷ್ಣಂ
ಬಳೆದಂ
ಗೋಪಿಯರ ತೋಳೊಳಂ ತೊಟ್ಟಿಲೊಳಂ    ೬೦

ಚಿಣ್ಣಂ ಪೊಸವೆಂಡಿರ ಕಡೆ
ಗಣ್ಣಲಸದೆ
ತೊಡರ್ದ ತಮ್ಮ ಕಡಗಳ ಕರ್ಪಿಂ
ನುಣ್ಣನಿರೆ
ಕರಿಯ ನೆಯ್ದಿಲ
ಬಣ್ಣಂಬೊಯ್ದಂತೆ
ಕರಿಯ ರೂಪಿನೊಳೆಸೆದಂ ೬೧

ಯುವತಿಯರನೊಲಿಸಿದಂ ಶೈ
ಶವದೊಳ್
ಕೇಶವನದೊಂದೆ ಪೂಗಣೆಯಪ್ಪ
ನ್ನೆವರಂ
ನಿಂದುದು ಬಗೆ ಬೆದ
ಱುವಿನಂ
ನನೆಗಣೆಯೆ ತಾಗಿ ತಾನಱಲಿಸದೇ  ೬೨

ವ|| ಮತ್ತಿತ್ತ ಮಧುರಾಪುರದೊಳ್

ಪಗಲುಳ್ಕಂ ಬಿರ್ದುದುರ್ವೀರುಹಮೊಳಱಿದುವೞ್ಕಾಡಿದತ್ತದ್ರಿಜಾಲಂ
ಪೊಗೆದತ್ತಾಶಾಮುಕಂ
ಮೇದಿನಿ ಮೊೞಗಿದುದಾಕಸ್ಮಿಕಂ ಭಸ್ಮಮಾಯ್ತಾ
ವಗ
ವಹ್ನಿ ಬ್ರಾತಮೆರ್ದಾರ್ದುದು ಮರುಳಿರುಳೋರಂತಿರಿಕ್ಕಿತ್ತು ಬಾಷ್ಪಾಂ
ಬುಗಳಂ
ಭೋರೆಂದು ದೇವಪ್ರತಿಮೆಗಳ ಪರಿಶ್ರಾಂತ ನೇತ್ರಪ್ರತಾನಂ     ೬೩

ಉಡಿದತ್ತುಗ್ರಾಸಿ ಬೆಂದತ್ತರಮನೆಯುರಿದತ್ತಾತಪತ್ರಂ ತದಶ್ವಂ
ಮಡಿದತ್ತೊವೋವೊಬಿೞ್ದತ್ತವನ
ಕರಿಯುರುಳ್ದತ್ತು ಸಿಂಹಾಸನಂ ಗೋ
ೞ್ಗೆಡೆದತ್ತಾನಮುಕ್ಕಿತ್ತೆಸೆವ
ಕಸವರಂ ಕಂಸನಿಟ್ಟುಂಬ ತಟ್ಟೋ
ರ್ಗುಡಿಸಿತ್ತೞ್ಗಿತ್ತು
ಮಂಚಂ ನಡನಡನಡುಗಿತ್ತಾತನೇಱಿರ್ದ ಮಾಡಂ       ೬೪

ಅೞ್ತುವು ಗೃಹದೇವತೆಗಳ್
ಮುೞ್ತುವು
ಕಿವಿಯೋಲೆ ಬಱಿದೆ ಬಾಷ್ಪಾಂಜಲಿಗಳ್
ಬೀೞ್ತಂದುವು
ಕಣ್ಗೆಯ್ವುದು
ವೇೞ್ತಂದುವು
ಪೊಲ್ಲಗನಸು ಜೀವಂಜಸೆಯಾ  ೬೫

ಪೇೞಲ್ಬಾರದ ಮನದೊಳ್
ಪೂೞಲ್ಬಾರದ
ಬರುಂಟಿ ಕೇಳ್ದವರಾರುಂ
ಬಾೞಲ್ಬಾರದ
ಕನಸಂ
ಬೀೞಲ್ಬಳೆವಂತೆ
ಬಳೆಯೆ ಕಂಸಂ ಕಂಡಂ     ೬೬

ವ|| ಕಂಡೇವಯಿಸಿ ವರುಣನೆಂಬ ನೈಮಿತ್ತಕನಂ ಕರೆದು ಬೆಸಗೊಳ್ವುದುಮಾತಂ ಕಿವಿಗೆ ಮಾತಿಕ್ಕದ ಮುನ್ನಮೆ ಕಣ್ಬನಿಯನಿಕ್ಕಿ ದೇವಕಿಯ ಮಗನೊರ್ವಂ ಪೆಱವುಳಿ ಬಳೆದಪನೆಂದು ಬಗೆಯೊಳ್ ಪಗೆಯನಿಕ್ಕಿ ಪೋಗೆ ಪೊಯಿಲ್ವಡೆದಂತಾಗಿ ತನ್ನೊಳಿಂತೆಂದಂ

ನರನೆಚ್ಚಂಬುಂ ಕವಿಶೇ
ಖರದೇವಂ
ಪೇೞ್ದ ಕಬ್ಬಮುಂ ಬಿದಿ ನೊಸಲೊಳ್
ಬರೆದಕ್ಕರಮುಂ
ಪರಿಕಿಸೆ
ಪರಮ
ತಪೋಧನರ ವಾಕ್ಯಮುಂ ತಪ್ಪುವುದೇ          ೬೭

ಆವೊಂಗೆಮಾದೊದಂ
ತ್ತಾವುದುಮಂ
ಕೞಿವುಪಾಯಮುಂಟೀ ಜಗದೊಳ್
ದೇವಂಗಂ
ದೈತ್ಯಂಗಂ
ಸಾವಂ
ತಪ್ಪಿಸುವುಪಾಯಮಾವುದುಮುಂಟೇ ೬೮

ವ|| ಅಶೌಚಮುಂ ಗೋವಧೆಯುಮುೞಿದುದೆಂಬಂತೆಮಗೆ ಪಾಪಮುಂ ಪೈಶೂನ್ಯಮು ಮುೞಿದುದಿಲ್ಲೆಂದುಮ್ಮಳಿಸಿ ಪಟ್ಟಿರೆ ಪೂರ್ವಭವದೆಣ್ಬರ್ ದೇವತೆಯರ್ ಬೇಱೆವೇಱೆ ಬಂದು

ಆರಂ ಬಾರಿಪ್ಪೆನಾರಂ ನಿನಗೆಱಗಿಪೆನಾರಂ ಕೊಲಲ್ಕಾಯ್ವೆನಾರಂ
ಬೇರಿಂದಂ
ಕೀೞ್ವೆನಾರಂ ತಿಱಿದು ನೊಣೆವೆನಾರಂ ತಿನಲ್ಪೋಪೆನಾಟಂ
ದಾರಂ
ಪೊಯ್ದಾರ್ವೆನಾರಂ ಪಿಡಿದು ಪೊಸೆವೆನಾರಂ ಕರಂ ಪೋೞ್ವೆನಾರಂ
ನಾರಂ
ಸೀೞ್ವಂತೆ ಸೀೞ್ವೆಂ ಬೆಸಸು ಬೆಸಸಲೇ ಕಂಸ ರಾಜಾವತಂಸಾ    ೬೯

ವ|| ನೀನುಮ್ಮಳಿಸುವಲ್ಲಿವರಮೇನೆನೆ ಕಂಸಂ ದೇವಕಿಯ ಮಗನೊರ್ವನೆಲ್ಲಿರ್ದಪ ನೆಂಬುದಂ ಭೇದಿಸಿ ಕೊಲ್ಲಿಮೆಂಬುದುಮವರವನಿರ್ದ ಭಂಗಿಯಂ ವಿಭಂಗಭೋಧದಿ ನಱಿದು ರಾಕ್ಷಸಪ್ರಕೃತಿಯಪ್ಪ ದೇವತೆ ನಂದಗೋಪಿ ನಂದನನಂ ತೊಟ್ಟಿಲೊಳಿರಿಸಿ ನೀರಂ ತರಲ್ಪೋದ ಪೆಱಗೆ

ಪೆಱೆನೊಸಲಾಗೆ ನೆಕ್ಕ ನೊಸಲೊಳ್ನಿಲೆಯಪ್ಪೊಡಲಾಗೆ ನಿಟ್ಟೊಡ
ಲ್ನಿಱಿದಲೆಯಾಗೆಯೊಪ್ಪುದಲೆ
ತೋಳ್ ತನಗಾಗೆ ಪೊಲ್ಲದೋಳ್
ತುಱುಗೆವೆಗಣ್ಗಳಾಗೆ
ಬಿಡುಗಣ್ಗಳೆ ತೆಳ್ವಸಿಱಾಗೆ ಪಾೞ್ವಸಿಱ್
ಸಱಿಮೊಲೆಯಾಗಿ
ಬಿರ್ದಮೊಲೆ ಪೂತನಿ ಗೋಪಿವೊಲಗೆ ಬೇಗದಿಂ        ೭೦

ವ|| ಬಂದು ನೀರನಿೞಿಸಿ ಎತ್ತುವರಿಲ್ಲದೆ ಮಾಯದ ಮಗಳಾಂ ತಳ್ವಿದೆನೆನ್ನ ಹೋರಿ ಹಸಿದನೆ ಬಾಬಾಯೆಂದು ಪಾಪಿಯ ಕೂಸನೆತ್ತಿಕೊಳ್ವಂತೞುವ ಕೂಸನೆತ್ತಿಕೊಂಡು

ಮುನಿಸಿಂ ನಂಜೂಡಿ ತಾಯೂಡಿದ ಮೊಲೆಗಳನಾ ನಂಜಿನಂತಪ್ಪ ನೀಳಾಂ
ಜನವರ್ಣಂ
ಮುನ್ನೆ ಕನ್ನೆತ್ತರನೆ ಜಿಗುೞೆ ಪೀರ್ವಂದದಿಂ ಪೀರ್ದು ಹಾಹಾ
ಯೆನುತುಂ
ಪುಯ್ಯಲ್ಚಿ ಬಾಯಂ ಬಿಡಿಸಿ ಬಿಡದೆ ಭಲ್ಲೂಕ ಬಾಲಂಬೊಲಾಪೂ
ತಿನಿಯಂ
ಕಾಳಾಹಿ ಪೀರ್ವಂತಸುವನಸದಳಂ ಪೀರ್ದು ಕೊಂದಂ ಮುಕುಂದಂ      ೭೧

ವ|| ಮತ್ತಮೊರ್ವಳತಿ ಪ್ರಚಂಡೆ ಚಾಂಡಾಳ ಪ್ರಕೃತಿಯಪ್ಪ ದೇವತೆ ಕಾಕಾಕೃತಿಯ ನಪ್ಪುಕೆಯ್ದು

ಕಾಕಂ ಪಂಜರದೊಳಗಣ
ಕೋಕಿಳಮಂ
ನೋಡಲೆಂದು ಬರ್ಪಂತಿರೆ ಬಂ
ದಾ
ಕೃಷ್ಣನ ಮಣಿದೊಟ್ಟಿಲ
ನೇಕಾಕಿಯ
ಕಣ್ಣನಿಱಿವೆನೆಂದೆಱಗಲೊಡಂ    ೭೨

ಅಡರ್ದು ಕಮಂಡಲುಜಳಮಂ
ತುಡುಂಕೆ
ಕಂಡೊಳಗಣೆಸಡಿ ಕಾಗೆಯ ಮೂಗಂ
ಪಿಡಿದುಱದಿಱಿಂಕಿ
ಮುಱಿದವೊ
ಲೆಡಗೆಯ್ವಿಡಿದೊತ್ತಿ
ಮುಱಿಯೆ ಮೂಗಂ ಬೇಗಂ         ೭೩

ಪೊಡೆದಗ್ರಾಂಗುಳಿ ಪಕ್ಷದಿಂದುಡಿವಿನಂ ಪಕ್ಷದ್ವಯಂ ಕುತ್ತಿ
ಣ್ಣೊಡೆವನ್ನಂ
ನಖಚಂಚುವಿಂದೆಱಗೆ ಮತ್ತಂ ಪೊಯ್ದು ಪಂಗಾಗೆವೊಂ
ದೊಡಲಂದೊಂದಡಗಾಗೆ
ಮೇಗೆ ಕರೆಯುತ್ತಾ ಕಾಗೆ ಬೀೞ್ತರ್ಪಿನಂ
ಗಿಡುಗಂ
ಕೊಳ್ವಪೊಲೞ್ವಿ ಕೊಂದುದು ಕರಂ ವಾಮೇತರಂ ಕೃಷ್ಣನಾ       ೭೪

ವ|| ಅಂತಾ ಕಾಗೆಯಂತಕನ ಬೋನಕ್ಕೆರೆಯಾಗೆ ಮತ್ತೆ ಕೆಲವಾನುಂ ದಿವಸದೊಳ್

ಇಱಿದುದು ನೆಲನಂ ಹಸ್ತದ
ತೆಱದಿಂ
ಮುಂದಲೆಯ ನಿಡಿಯ ಜಡೆ ನುಣ್ಗರ್ಪಿಂ
ಮಿಱುಗಿದುದು
ಬಣ್ಣಮಾನೆಯ
ಮಱಿಯಂತೆವೊಲಂಬೆಗಲಸಿ
ನಡೆದಂ ಕೃಷ್ಣಂ ೭೫

ಮೊಳೆದಂತೆವೊಲೆಳೆಯ ಮುಗಿ
ಲ್ಗೆ
ಳಮುತ್ತುಗಳಂತೆ ಬಳೆವ ಕೃಷ್ಣಂಗೆ ತಳ
ತ್ತಳಿಸಿ
ಬೆಳಗಿದುವು ಪನೆಗಳ್
ಮೊಳೆಗಳಿವೆನೆ
ಮಂದಹಾಸ ಬಿಸವಲ್ಲರಿಯಾ ೭೬

ವ|| ಆ ಪ್ರಾಯದೊಳ್ ಮತ್ತೊರ್ವ ದೇವತೆ ಲೋಯಿಸರದ ಮೇಲೆ ಬ ಬಂಡಿಪರಿದಂತು ಮಾೞ್ಪೆನೆಂದಂಗಣದೊಳ್ ತೆಮೞ್ದಾಡುವ ಮಗನ ಮೇಲೆ ಶಕಟವಾಗಿ ಪರಿತರೆ ಪರಿವ ಬಂಡಿಯೊಳ್ಕಾಲ್ಗೋವ ಗೋವನೆನಿಸಿ

ಕುಣಿಕಿಲ್ಗಾಲಿ ನೊಗಂ
ಲ್ಗುಣಿಯಚ್ಚಿನಿಸೊಂದನೊಂದು
ತೆಱೆಯದ ತೆಱದಿಂ
ಗಣಕೆಯ
ಬಂಡಿಯನೊದೆವವೊ
ಲಣಿಯರಮೊದೆದಂ
ಪ್ರತಾಪಿ ಕೃಷ್ಣಕುಮಾರಂ ೭೭

ವ|| ಆ ರಥಮು ಕಂಸನ ಮನೋರಥಮುಂ ಭಗ್ನಮಾಗೆ ಮತ್ತೊರ್ವ ದೇವತೆ ಕಿಶೋರವಾಗಿ ಕೇಶವಂಗೆ ಕಿಳಿಱಿ ಕಿವಿಯಂ ಬಾಯುಮಂ ತೆಱೆದುಕೊಂಡು

ಬೆದಱದೆ ಬಂದು ಬಾಳಕನ ಕಯ್ಯನೆ ಕಾಯ್ದು ಕಡಂಗಿ ಕರ್ಚೆ ಕೊ
ರ್ವಿದ
ಕುಱ ಕೊಯ್ಯೆಯುಂ ಮಸಗಿ ಮೇವವೊಲಾತನುಮೇಱಿ ನೂಂಕಿ ಕು
ತ್ತಿದೊಡದು
ನೆತ್ತಿಯಿಂದೊಡೆದು ಮೂಡುವುದುಂ ತೊಳಗಿತ್ತು ಕೆಂದಳಿಂ
ಕುದುರೆಗೆ
ಮತ್ತಮೊಂದು ಕಿವಿ ಮೂಡಿದುದೆಂಬಿನಮಂಬುಜಾಕ್ಷನಾ         ೭೮

ವ|| ಅಂತಾ ಗೂಂಟಿನ ಬಾಯೊಳ್ಗೂಂಟಮಂ ಬೆಟ್ಟಿದಂತಿರ್ದ ಕೆಯ್ಯನುರ್ಚಿಕೊಂಡು ಕೊಂಡದ ಕಿಚ್ಚಿನಂತಿರ್ದ ಕೋಪದೊಳಾ ದುಷ್ಟಾಶ್ವಮನಿಕ್ಕಿ ಕೊಂದುಮಾದವನಶ್ವಮೇಧವಂ ಮಾಡಿ ತುಱುಪಟ್ಟಿಯ ಪಾಲುಂ ಮೊಸರುಂ ಬೆಣ್ಣೆಯುಮಂ ಸೂಱೆಗೊಂಡು ಸಹಪಾಂಸು ಕ್ರೀಡಿತರಪ್ಪ ಗೋಪಕುಮಾರರ್ಗೆ ದಕ್ಷಿಣೆಗುಡುವಂತೆ ಕೊಟ್ಟು ಪೊರೆಯುತ್ತುಮಿರೆ

ಆಡುವ ಮಕ್ಕಳನೊಳಕೊಂ
ಡೂಡಿಯುಮೊಳಗಿರ್ದ
ಬೆಣ್ಣೆಯಂ ಮತ್ತಮದಂ
ಬೇಡಿದಪಂ
ಕಾಡಿದಪಂ
ಬೇಡೆಂದು
ಯಶೋದೆ ನಿನ್ನ ಮಗನಂ ಕರೆಯಾ         ೭೯

ಸಲೆ ಕಾಯ್ದ ಪಾಲ್ ಬರ್ದುಂಕದು
ನೆಲಹಿನ
ಪಾಲುಂ ಬರ್ದುಂಕದೆಲೆ ಕಱೆವೀ ಕಂ
ದಲ
ಪಾಲಂ ಮುಂ ಬರ್ದುಕದು
ಮೊಲೆಯೂಡ
ಯಶೋದೆ ಕರೆದು ನಿನ್ನಯ ಮಗನಂ    ೮೦

ಕಱೆಯಲಣಮಣ್ಮದಿರ್ದೊಡ
ಮಿಱುಂಕಿ
ತೊಡೆಯಿಂದೆ ಕಾಲನಾಕಳನಾತಂ
ಕಱೆವವೊಲೆಲ್ಲರ
ಬಾಯೊಳ್
ಕಱೆದಪನೆಲೆ
ಕರೆ ಯಶೋದೆ ನಿನ್ನಾತ್ಮಜನಂ ೮೧

ವ|| ಆರ್ಗೆ ಪುಟ್ಟಿಯಾರ್ಗೆ ಮುದ್ದಾದನೆಂದು ಗೋಪಿಯರಿಕ್ಕುವರಕ್ಕ ರಕ್ಕಸಗಾಣಕ್ಕಿರಲಾಱದೆ ಯಶೋದೆ ಕರೆದು ಕಡೆವ ಕಂಭದೊಳ್ ಪಿಡಿದು ಕಟ್ಟಿದೊಡಾ ಕೆಚ್ಚಿನ ಕಂಭಮನಂಜನ ಗಜವಾಳಣೆಯಂ ಮುಱಿವಂತೆ ಮುಱಿದು ಪೊಱಮಟ್ಟು ಪೋಪ ಕೃಷ್ಣನಂ ಕಂಡು ಕಡುನುಡಿದು ಜಡಿದು

ದಾವಿನೊಳಡೆಸಿ ಯಶೋದಾ
ದೇವಿ
ಕರಂ ಕಟ್ಟಿದುದರದೊರಲುಡೆಗಿೞಿತಂ
ದೇವೇೞ್ವೆನೊ
ದಾಮೋದರ
ದೇವಂಗುಡೆವಣಿವೊಲಾಯ್ತು
ಬಿಣ್ಪಿನಿತಾಯ್ತೇ  ೮೨

ವ|| ಆನೆಯನೆತ್ತುವಂಗಾಡು ಚಿಕ್ಕಾಡೆಂಬಂತೆ ಗೋವರ್ಧನಾಚಲಮನೆತ್ತಿರ್ದಂಗುಲೂಖಲ ಮೆಂಬುದಾವ ಲೆಕ್ಕಮೆಂದಱಿವರೆಲ್ಲರುಮೊಂದೆ ಕೊರಲಿಂ ಪೊಗೞೆ ಪೇರೊರಳನೆೞೆದು ಪರಿದಾಡಿದಂ ಮತ್ತಮೊರ್ಮೆ ಮತ್ತಿಯ ಮರಂಗಳಾಗಿ ಮರುಳ್ದೇವತೆಗಳಾಡುತುಮಿರ್ದ ಕೃಷ್ಣನಂ ಕರಿಯ ಕುರುಳೆಂದು ಬಗೆದು ನೀಲಮಂ ಕತ್ತುರಿಯಿಱುಂಕುವಂತಿಱುಂಕಲೊಡನೆ

ಅಮಿತಬಳಂ ಕಿೞ್ತಿಕ್ಕಿದ
ನಮುಂಕಿ
ಮಾಂಕರಿಸಿ ಕಂಭಯುಗಮಂ ಪುರುಷೋ
ತ್ತಮನಾ
ಕಂಸನ ಭುಜಯುಗ
ಳಮನವಯದಿಂದೆ
ಕೀೞ್ವುದಂ ಗುಣಿಯಿಪವೋಲ್      ೮೩

ವ|| ಮತ್ತಮಾತನದಟಂ ಪೇೞ್ವೊಡೆ

ಅಡೆವಂ ಗೋಣ್ಮುಱಿಗೊಂಡು ಬೋೞದಲೆಯಂ ಮುಂಗೆಯ್ಗಳಿಂ ಮೂರಿಗೊಂ
ಡಿಡುವಂ
ಕೂಂಕಿ ಕೊಡಂಕೆಯಂ ಮುಱಿವನುಗ್ಗುತ್ತಳ್ಳೆಯಂ ಗಲ್ಲಮಂ
ಮಿಡಿವಂ
ಮಿಂಡದ ಮೀಸೆಯಂ ಸೆಳೆದು ಮೂಗಿಟ್ಟೇಱುವಂ ಮಕ್ಕಳ
ೞ್ತೊಡೆ
ಬಾಯ್ವಾಯನೆ ಪೊಯ್ವನೇಂ ಸಿತಗನೋ ಕಾಳಾಹಿಕೋಳಾಹಳಂ ೮೪

ಇಡುವಂ ಗುರ್ದುವನುರ್ದುವಂ ಕೆಡಪುವಂ ಮೇಲಿಕ್ಕುವಂ ಕುಕ್ಕುವಂ
ಬಡಿವಂ
ಬಯ್ದು ಚಿವುಂಟುವಂ ಕಿನಿಸುವಂ ಪಾಯ್ದೊತ್ತುವಂ ಕುತ್ತುವಂ
ಜಡಿವಂ
ಜತ್ತಕುಱೂಡುವಂ ಬಳಸುವಂ ಬೆನ್ನಟ್ಟುವಂ ಮುಟ್ಟುವಂ
ಪಿಡಿವಂ
ಮಕ್ಕಳನೇಂ ಕರಂ ವಿಕರಿಯೋ ಕೂಸಾಟದೊಳ್ ಕೇಶವಂ       ೮೫

ವ|| ಅಂತಾ ತುಱುಪಟ್ಟಿಯ ಕಿಱುಮಕ್ಕಳಂ ಮಿಂಡಮಕ್ಕಳುಮನೊಂದೆ ಕೋಲೊಳ್ ತಂದು ಪುಯ್ಯಲಿಡಿಸುವ ಕೃಷ್ಣನಂ ತುಱುಕಾರ್ತಿಯರೆಲ್ಲರೞುತ್ತುಂ ಕರೆಯುತ್ತುಂ ಬಂದ ತಂತಮ್ಮ ಮಕ್ಕಳ ತಱಿದ ಮೆಯ್ಯುಮಂ ಮುಱಿದ ಕೆಯ್ಯುಮಂ ಪಱಿದ ಕಿವಿಯುಮಂ ಒಡೆದ ಮೂಗುಮಂ ಅಡೆದ ನೆತ್ತಿಯಂ ಬುಗುಟು ಮಂಡೆಯುಮಂ ಯಶೋದೆಗೆ ತೋಱಿ ದೂಱಿ ಗೋಪಿಯಿಂತೆಂದಳ್

ಏಗೆಯ್ವೆಂ ಕೊಂದೊಡಮೆನ
ಗಾಗಂ
ಬಸಮಲ್ಲನೆನಗೆ ಕಿಚ್ಚಿಲ್ಲದೆ ತಾ
ನೇಗಂಡುರಿದಪನಱಿಯೆಂ

ಪೋಗಿಂ
ನೀಂ ಮೆಚ್ಚೆ ಮೆಚ್ಚುಕಯ್ಯಿಂ ಪೊಯ್ಯಿಂ         ೮೬

ವ|| ಎನೆ ಗೋಪಿಯರ್ದೂಱಲೆವೇೞ್ಕುಮೆಂದು ದೂಱಿದೆವಲ್ಲದೆ ತರುವಲಿಗೆ ನೆಱೆಯಲಾಱದೆ ಬಂದೆವಲ್ಲೆವು ನೋಡಿನ್ನು ನಿನ್ನ ಮಗನ ಕೇಡನೆಂದು ಪೋಗಿ ಮಕ್ಕಳೋಪಾದಿಯ ಮಗುವೆಂದೇ ಬಗೆದು ಸೆಳೆಯಂ ಕೊಂಡು ಕಿಱುಮುಗಿಲ ಬೆನ್ನುಱಟ್ಟುವ ಕುಡುಮಿಂಚುಗಳಂತೆ ಗೋಪಿಯರೆಲ್ಲಮೊಲ್ಲನುಲಿದು ಮಲೆದು ಬೆನ್ನಟ್ಟೆ ಕೃಷ್ಣನುಂ ಕಿಱುನಗೆ ನಗುತ್ತುಂ ಕಿಱಿದೆಡೆಯನೋಡಿಯೋಡಲಾಱದಂತೆ ಮಗುೞ್ದು

ಬಡಿಯಿಂ ಮಕ್ಕಳೊಳಿನ್ನೊಡ
ನುಡಿದೊಡವೆಂದಂಜಿದಂತೆ
ಕಂಜಾಕ್ಷಂ ಕಾ
ಲ್ವಿಡಿದೆತ್ತಿ
ಕೆಡಪಿ ಕಾಲಂ
ಪಿಡಿದೆೞೆದೆೞೆದೞಿಸಿ
ಬಿಟ್ಟನಾ ಗೋಪಿಯರಂ ೮೭

ವ|| ಮತ್ತಮೊರ್ಮೆ ದೇವತಾವತಾರಮಪ್ಪ

ತಾಳತರು ಪಣ್ಗಳಂ ಬೇ
ತಾಳಂ
ಕಲ್ಗೊಂಡು ಕಱೆವೊಲ್ಕಱೆದುದು ಗೋ
ಪಾಳರ
ತಲೆಯೊಡೆವಿನಯಾ
ತಾಳಂ
ಬಳೆಗಳೆದನೊಂದೆ ಪೊಯ್ಲಿಂ ಕೃಷ್ಣಂ  ೮೮

ವ|| ಇವಂ ಮನೆಯೊಳಿರ್ದೊಡೆಲ್ಲಿಲ್ಲದ ದೂಱಂ ದುರ್ಯಶಮುಮಂ ತಂದಪನೆಂದು ನಂದಗೋಪಂ ಗೋವಳರಂ ಪಸದನಂಗೊಳಿಸಿ ಗೋವಿಂದನಂ ಗೋಕುಳಮಂ ಕಾಯವೇೞ್ದು ಕಾಡನೋಡಿ ಕಾಡೆಱೆಯಂಗೆಱಗಿ ಗೋಪಾಳ ವೃಂದದೊಡನೆ ವೃಂದಾರಕವನಕ್ಕೆ ಕಳಿಪೆ

ಉರಗಾನೀಕಮನೆತ್ತಿ ತರ್ಪನಿದು ಬಲ್ನೇಣೆಂದು ತನ್ನಂದಸುಂ
ದರಿಯೋವೋವೆನು
ತೋಡೆ ಕಾಡ ಪುಲಿಯಂ ಬೆಕ್ಕೆಂದು ತರ್ಪಂ ಮಹಾ
ಕರಿಯಂ
ಕೊರ್ವಿದ ದಂಷ್ಟ್ರಿಯೆಂದು ಪಿಡಿತರ್ಪಂ ನೋಡ ನಾಯೆಂದು ಕೇ
ಸರಿಯಂ
ಪಾಸದೊಳಿಕ್ಕಿ ತರ್ಪನಿದು ಬಾಲಕ್ರೀಡೆ ಗೋಪಾಳನಾ ೮೯

ವ|| ಮತ್ತಮೊಂದು ದಿವಸಂ

ಬಸನಕ್ಕೆತ್ತಿದ ಬಾಲಮೊತ್ತಿದ ರವಂ ಬಳ್ಕಿರ್ದ ಬೆನ್ ಬಿಟ್ಟ
ಕ್ಕಸಗಣ್ಬಾಯ್ದೆಱೆದಂತೆ
ತೋರ್ಪ ಕಿವಿಗಳ್ಗೋವೃಂದಮಂ ಕೂಡೆ ಬೆ
ರ್ಚಿಸೆ
ಕುದ್ದಾಳ ವಿಶಾಳ ದೀರ್ಘದಶನಂ ವ್ಯಾದಾನವಕ್ತ್ರಂ ಮಳೀ
ಮಸವರ್ಣಂ
ಪರಿತಂದುದೊಂದು ನವದೂರ್ವಾಕರ್ದಭಂ ಗರ್ದಭಂ       ೯೦

ಪೇಱಿಕ್ಕಿದಂತೆ ಬೆನ್ನೊ
ಳ್ತಾಱೆಯ
ಪಣು ಕೞ್ತೆ ಕರ್ಚಿ ಬಿಟ್ಟುದು ಪೆಱಗ
ಣ್ಗೇಱೆ
ಪಿತೃಪತಿಗೆ ಪೆಣನಂ
ಪೇಱುವ
ಪೆರ್ಗತ್ತೆಯಂತೆ ಖರಸಂಕುಳಮಂ   ೯೧

ವ|| ಅಂತು ಪೆಂಟೆಗಳಂ ದಾಂಟಿ ಕೆಡಪುತ್ತುಂ ಕಡವಂಗಳಂ ಕರ್ಚಿಕೆಡಪುತ್ತುಂ ಬೆಗಡುಗೊಂಡೋಡುವ ಗುಂಡನುರುಳೆವಾಯ್ದು ಕೆಡಪುತ್ತುಂ ತಾನೆ ತನ್ನ ಬೀರಕ್ಕೆೞ್ಚಱೞಿದ ಕೞ್ತೆಯಂತೆ ಬೆಬ್ಬಸಬೆಸೆದು ಬ್ರಹ್ಮನಂ ಕೂರಿಸಿದ ಕತ್ತೆಯಂತಾರುಮಂ ಕೈಕೊಳ್ಳದಿದಱ ಬಾಯ್ಗೆ ಬ್ರಹ್ಮಾಂಡಮೆಯ್ದದೆಂಬಂತೆ ಬಾಯಂ ತೆಱೆದು ಕೇಳ್ದರೆರ್ದೆ ತೆಱೆವಿನಮೊಳಱೆ ಪೆಂಟೆಯ ಪೊಟ್ಟೆಯಂ ಕರ್ಚಿ ಸೆಳೆಯೆ ಬಾಯೊಳೆೞಲ್ವ ಕರುಳಿಂ ಕಪ್ಪೆಯ ನೇಣಂ ಕರ್ಚಿ ಪರಿವ ಕುದುರೆಯಂತೆ ಬೀದಿವರಿದು ಮಾಮಸಕಂ ಮಸಗಿ ತುಱುಪಳ್ಳಿಯೆಲ್ಲ ಮುಮನೊಕ್ಕಲಿಕ್ಕಿ ಕೊಲ್ವ ಕೞ್ತೆಯ ಕೋಳಾಹಳಕ್ಕುಂತೆ ಕುಣಿವಂಗೆಱೆಯಪ್ಪನಾದಂತೆ ಗೋವಳರ್ಗಾವಳಿಗೊಂಡು ಗೋವಳಗೋಲ ನೆತ್ತಿಕೊಂಡೊದಱೆ ಧೀರನದಿರದೆ ಬರ್ಪುದಬ್ಬೆಯ ಬೇೞ್ಪುದವರೆವಿಟ್ಟೆಂ ಬಂತೆನ್ನ ಬೇೞ್ಪಾ ತನುಮೀತನೆಂದು ಕೞ್ತೆ ಮೇಲ್ವಾಯಲೊಡನೆ

ಹರಿ ಹರ್ಯಕ್ಷನ ಬಾಯಂ
ತಿರೆ
ಕೞ್ತೆಯ ತೆಱೆದ ಬಾಯನೊರಹಾಯ್ತೆನಗೆಂ
ದೆರಡುಂ
ಕಯ್ಯಂ ಪಿಡಿದಾ
ಸುರಮಾಗಿರೆ
ಸೀೞ್ದು ಬಿಸುಟನೆರಡುಂ ದೆಸೆಗಂ         ೯೨

ವ|| ಆಗಳ್ ಕೃಷ್ಣನ ಕಯ್ಯಕೋಲಿಂದುದಿರ್ದ ಪಲ್ಗಳಾ ಕೞ್ತೆಯ ನೆಗೞ್ತೆಯಂ ಕೞ್ತೆಯೊಳುೞ್ತು ಕವಡಿಕೆಯಂ ಬಿತ್ತಿದಂತೆಸೆಯೆ ಮುರಾರಿಯ ವೀರವೃತ್ತಿ ದೆಸೆಗೆ ಬೆಸೆಯೆ ಮೂಗಿನ ಮೇಲೆ ಕಯ್ಯನಿಟ್ಟು ಜನಮೆಲ್ಲಂ ಚೋದ್ಯಂಬಡೆ ತಾಯುಂ ತಂದೆಯುಂ ಸಂತೋಷಂಬಡೆ

ನಿಯತಾಹಂಕೃತಿ ಪೂತನಾಪ್ರತಿಭಯಂ ಲೋಲಾತ್ಮಕಾಕಾಂತಕಂ
ಲಯಶಂಕಾಶಕಟಾಪಹಾರಿ
ಖರತಾ ಚಕ್ರೀವ ಜೀವಾಪಹಂ
ಭಯ
ಲೋಭಾರ್ಜುನ ಭಂಜನಂ ನುತ ಯಶೋದಾನಪ್ರಿಯಾತ್ಮೋದ್ಭವಂ
ಜಯಮಂ
ತಾಳ್ದಿದುದಾತ್ಮಸನ್ನಿಭಗುಣಂ ಶ್ರೀಗಂಧಗೋಪಾಳನಾ          ೯೩

ಇದು ಮೃದುಪದಬಂಧ ಬಂಧುರ ಸರಸ್ವತೀ ಸೌಭಾಗ್ಯ ವ್ಯಂಗ್ಯಭಂಗಿನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇಮಿಚಂದ್ರಕೃತಮುಂ ಶ್ರೀಮತ್ಪ್ರತಾಪ ಚಕ್ರವರ್ತಿ ವೀರಬಲ್ಲಾಳದೇವ ಪ್ರಸಾದಾಸಾದಿತ ಮಹಾಪ್ರಧಾನ ಪದವೀವಿರಾಜಿತ ಸೆಜ್ಜೆವಳ್ಳ ಪದ್ಮನಾಭದೇವ ಕಾರಿತಮುಮಪ್ಪ ನೇಮಿನಾಥಪುರಾಣದೊಳ್

ಸಪ್ತಮಾಶ್ವಾಸಂ

ಸಮಾಪ್ತಂ