ಸುತ್ತುಂ ನವಪಲ್ಲವಮೆೞ
ಲುತ್ತಿರೆ
ಮುತ್ತಿದ ಮದಾಳಿಕುಳದಿಂ ಮದನಂ
ಗೆತ್ತಿದ
ಪೊಸಗಣ್ಬೀಲಿಯ
ಸತ್ತಿಗೆಯೆನಿಸಿದುದು
ಬಂದ ಚೂತಕುಜಾತಂ  ೫೬

ವ|| ಆ ಮಾವಿನಡಿಯೊಳಡಿವಾಸಿ ಪೂವಿನ ಪುಡಿಯ ಪುಳಿಲಂ ಜಗಲಿಗಟ್ಟಿ ಪೊಸದಳಿರ ಪಾಸಂ ಕುಸುಮದೆಸಳಿಂ ಪಚ್ಚೆವಡಿಸಿ ಪೊಚ್ಚ ಪೊಸ ಪಚ್ಚೆಲೆಯಂ ತಲೆಗಿಂಬುಮಾಡಿ ಬಾಳವಿಸ ವಿಸರದಿಂ ಬಿತ್ತರಿಸಿದ ಬಿತ್ತರಿಗೆಯಂ ಕಾಲದೆಸೆಗೆ ಪೋಗೆ ನೂಂಕಿ ಪರಿಶ್ರಮಮಂ ಕಳೆಯಲೆಂದು ಪವಡಿಸಿ ಕರ್ಪೂರದ ಪರಲಂ ಬಾಯೊಳ್ಪೊಯ್ದು ತಂಬುಲಮಂ ಕಳೆದುಕೊಂಡು

ಅರಸಂ ಶೃಂಗಾರವೃತ್ತಂಗಳನೆ ಗಿಳಿಗಳೊಳ್ ರಾಗದಿಂದೋದುತುಂ ಗಾ
ವರಿಸುತ್ತುಂ
ತುಂಬಿಯೊಳ್ ನುಣ್ಪುಡರ್ದ ಶಿಖಿ ಪಿಕಾರಾವದೊಳ್ ಲೀಲೆಯಿಂದಂ
ಬೆರಸುತ್ತುಂ
ಷಡ್ಜಮಂ ಪಂಚಮುಮನೆಲರದೋರಂದದಿಂ ತತ್ಸ್ವರಸ್ಸೀ
ಕರಮಂ
ಮೇಲೊಟ್ಟಿ ಮೆಲ್ಪಿಂದಲೆಯ ಮುಕುಳಿತ ಸ್ವಾಂತನೇತ್ರಾಜ್ಜನಾದಂ         ೫೭

ಪ್ರಚ್ಛಾಯಾ ಸುಪ್ತಂ ಮೃದು
ಳಚ್ಛದನ
ಪ್ರಸರಶಯನ ಪೋಷಿತಮನಿಳ
ಸ್ವೇಚ್ಛಾಸುಖಿತಂ
ನಿದ್ರೆಯ
ತುಚ್ಛಶ್ರಮ
ಭರಮನಾಳ್ದುದೊಂದರೆಜಾವಂ    ೫೮

ವ|| ಅಂತು ಸುಖನಿದ್ರಾಸಕ್ತನಾಗಿ

ಕೊಡೆಮಾವಿಂ ಪಾರಿಜಾತಂ ಕುಸುಮಶಯನದಿಂ ಶೇಷಶಯ್ಯಾತಳಂ ಕೀ
ೞ್ಪಡೆ
ಪಂಕೇಜಾಕ್ಷನಂತಾ ಯುವತಿಯಮಳ ನೇತ್ರಪ್ರಭಾಪೂರಮಾ ಪಾ
ಲ್ಗಡಗಂ
ಪೋಲ್ತೊಪ್ಪೆ ಲಕ್ಷ್ಮೀಲಲನೆಯ ತೆಱದಿಂ ಲೀಲೆಯಿಂ ತನ್ನ ಕಾಲಂ
ಪಿಡಿಕೈಸುತ್ತಿರ್ದಳಂ
ಕನ್ನೆಯನೆ ಕನಸಿನೊಳ್ ಕಂಡನಾ ರಾಜಪುತ್ರಂ      ೫೯

ವ|| ಕಂಡು ನಿದ್ರೆದಿಳೆಯೆ ತಳವೆಳಗಾಗದೆ

ವನಿತೆಯ ನಯನಜ್ಯೋ
ತ್ಸ್ನಾವಿಲಸಿತದಿಂದಲಮರ್ದು
ಮಿಗೆ ಮುಗಿದ ನವೇಂ
ದೀವರಮಲರ್ದಪುದೆನೆ
ವಸು
ದೇವಂ
ಕಣ್ದೆಱೆದು ನೋಡಿ ವಿಸ್ಮಯದಿಂದಂ   ೬೦

ನಿಜನಿದ್ರಾಮುದ್ರಿತಾಸ್ಯಾಂಬುಜಮನಱಿಕೆಯಿಂ ನೋಡಿ ನಿಶ್ಯಂಕ ನೇತ್ರಾಂ
ಬುಜನಾಗಳ್
ಲಜ್ಜೆಯಿಂದಂ ತೆಗೆಯೆ ನೆಗೆಯೆ ರೋಮಾಂಕುರಂ ಪೊತ್ತವೋಲ್
ರ್ಮಜಳಂ
ಕುಳ್ಳಿರ್ದು ತೋಳ್ಬಿತ್ತರಿಗೆಯ ಕೆಲದೊಳ್ ಕಾಲನೊತ್ತುತ್ತುಮಿರ್ದಳ್
ವಿಜಯಶ್ರೀಯಂತಿರೊರ್ವಳ್
ಬಿಸಜವದನೆ ಬೇಱೊಂದವಷ್ಟಂಭದಿಂದಂ   ೬೧

ಅವಳಾಂ ಮೆಲ್ಲನೆ ತೊಡೆಯಂ
ತಿವಿದಪನೆಚ್ಚಱದೆ
ತೆಱದೆಕಣ್ಗಳ ಪಸವೋ
ಡುವಿನಂ
ನೋೞ್ಪಿನಮೇಕು
ಪ್ಪವಡಿಸಿದನೊ
ಕುವರನೆಂದು ಬೆಚ್ಚನೆ ಸುಯ್ದಳ್        ೬೨

ಮೊಲೆಮೇಲಿಂ ಮೇಲುದಂ ತಂದೆಡದ ಮುಡುಪಿನೊಳ್ನೀಡುತಂ ವಾಮ ಹಸ್ತೋ
ತ್ಪಲಮಂ
ನೈತಂಬ ಬಿಂಬ ಸ್ಥಳದೊಳಿೞಿಪುತುಂ ಬಳ್ಕೆ ಮಧ್ಯಂ ಕಚಂ ಬಿ
ಟ್ಟಳಿಗಿಣ್ಪಂ
ಸಾರೆ ಬೆನ್ನೊಳ್ನಸು ಮುರಿಯೆ ಮೊಗಂ ಕೊಂಕಿನಿಂದಿರ್ದು ಚೆಲ್ವಿಂ
ಬಲಗೆಯ್ಯಿಂ
ಬೀಸುತಿರ್ದಳ್ಬಿಸರುಹದಳದಿಂ ಕಾಂತೆ ಮತ್ತೊರ್ವಳಾಗಳ್   ೬೩

ವ|| ಅಂತು ತನ್ನ ಬೞಿಯನೆ ಬಂದ ಭಾಗ್ಯದೇವತೆಯಂತಿರ್ದಳಂ ಕಂಡು ಕನಸೆ ನನಸಾದು ದೆಂದು ಪೆಂಡಿರ್ಕಾರಣಮೆನ್ನ ಬೀಡುಂ ನಾಡುಮಂ ಬಿಟ್ಟೋಡಿಬಂದೊಡಮವಳ್ದಿರೆನ್ನ ಬೆನ್ನನೇಕೆ ತಗುಳ್ದಪರಿನ್ನೇವೆನೆಂದೇವೈಸಿದಂತೆ

ಮೊಗದೊಳ್ನಾಂಟಿದ ಕಣ್ಣಂ
ತೆಗೆಯೆನೆ
ಕಣ್ಣೊಡನೆ ಪರಿದು ನಾಂಟಿದ ಮನಮಂ
ತೆಗೆಯೆನೆ
ಭೋಂಕನೆ ಕಾಲಂ
ತೆಗೆದಂ
ವಸುದೇವನಂಕದಿಂದಂಗನೆಯಾ    ೬೪

ವ|| ಆದಂ ಕಂಡಾ ಚಿತ್ರಲೇಖೆಯೆಂಬಾಕೆಯ ಕೆಳದಿ ಬೀಸುವ ಬಿಸರುಹದೆಲೆಯ ಬಿಜ್ಜಣಿಗೆಯಂ ಮುಗುಳ್ನಗೆಯಿಂ ಪೊದಯಿಸೆ ಪೂವಿನ ಬಿಜ್ಜಣಿಗೆಯಂ ಮಾಡಿ

ಬಿಡಿಸುವೆಯೇಂ ಕಾಲಂ ಕೈ
ವಿಡಿದಪಳೀಗಳ್ಕುಮಾರಿ
ನೀನೀಕೆಯ ಕಾ
ಲ್ವಿಡಿವಂತಾದಪುದಿನ್ನೇಂ

ತೊಡರ್ದೈ
ಕಡುಗೆಲ್ಲಕಾರ್ತಿಯೀ ಕಾಂತೆ ಗಡಾ         ೬೫

ವ|| ಅರಸನಂತೆಂಬುದೇನೆನೆ ಮತ್ತಮಾಕೆ

ಮಾವೀಕೆಗೆ ಕಾಮನರ್ಚಿಸಿದಮಾವೈತಂದೊಡಂ ಭಾನುವೀ
ಭೂಮೀಜಾತದ
ತಣ್ಣೆೞಲ್ತೊಲಗದಾವಂ ಬಂದು ಸಾರ್ದಿರ್ದೊಡು
ದ್ದಾಮಂ
ಬಲ್ಲಿದರಾಣೆಯಿಟ್ಟ ತೆಱದಿಂದರ್ದಪ್ಪುದಾಶ್ರೀ ಮಹಾ
ರಾಮಂ
ವಲ್ಲಭನೀ ಕುಮಾರಿಗಿದುಸಿರ್ದಾವೇಶಮುರ್ವೀಶ್ವರಾ    ೬೬

ವ|| ಈ ಪುಣ್ಯವತಿಯುಮೀ ಪೊೞಲನಾಳ್ವ ಮಗಧಾಧಪತಿಯ ಮಗಳ್ ಶ್ಯಾಮಳೆಯೆಂಬೊಳೀ ಕೋಮಳೆಯಿಂದು ನಿನಗಿದಿರ್ವರ್ಪಂತೆ ಬಂದೀ ಬನದೊಳಗೆ ಬಿನದದಿನಾಡುತ್ತುಮಿರ್ದು ನೀಮೀ ಮಾಮರದಡಿಯೊಳ್ ಬಂದಿರ್ದುದುಮನೀ ತರುಣ ತರುಚ್ಛಾಯೆ ಪ್ರತಿಚ್ಛಾಯೆಯಂತೆಯುಂ ನೆಲದೊಳ್ನಾಂಟಿ ಬೇರೂಱಿದಂತೆಯುಮೆತ್ತಲುಂ ತೊಲಗದಿರ್ದುದುಮಂ ಕಂಡು ಆದೇಶ ಪುರುಷನೆಂದಱಿದು ಪರಿತಂದು ಪೇೞ್ದ ವನಪಲಾಕಂಗೆ ಪಸಾಯಮನಿತ್ತು ಮತ್ತಮಿದಂ ತಮ್ಮ ಬೊಪ್ಪಂಗಱಿಪಲ್ ಕಳುಪಿ ಕೆಳದಿಯರ ನೂಪುರಕ್ವಣಿತಮೆ ಬದ್ದವಣಮಾಗೆ ರಾಗದಿಂ ಬಂದಿಲ್ಲಿ ಬಸಂತನ ಮನೆಗೆ ಬಿರ್ದು ಬಂದ ಕಾಮದೇವನಂತೆ ಬೞಲ್ದು ಬೆಂದು ಬೆಱಗಾಗಿ ವಿಶ್ರಮಿಸೆ ಮಿಸುಗುತ್ತಿರ್ದ ನಿನ್ನ ಪದಪ್ರಚಾರಾತ್ಯರುಣ ಸರಸಿಜನ ಸಿರಿಯೆ ಸನ್ನಿದಮಾದಂತೆ ಸಮ್ಮದಮನಪ್ಪುಕೆಯ್ದು

ಚಾಮರವಿಕ್ಕುವಂತೆ ತನು ಚಂಪಕಮಾಳಿಕೆಯಂ ಮುಸುಂಕುತುಂ
ಪ್ರೇಮ
ವಿಳೋಕಮೆಂಬ ಪೊಸಪೂವಿನ ಪಚ್ಚಡದಿಂ ಕರಾಬ್ಜ
ರ್ಮಾಮೃತದಿಂದೆ
ನಿನ್ನಡಿಗಳಂ ನಯದಿಂದಮೆ ಪೂಸುತಿರ್ದಪಳ್
ಶ್ಯಾಮಳೆ
ಪುಷ್ಪಕೋಮಳೆಯಿದೀಕೆಯ ವೃತ್ತಕಮೇಕೆ ಬೆರ್ಚುವೈ  ೬೭

ಕೀರಕುಳ ಸ್ವಯಂ ಮಧುರ ಮಂಗಳಪಾಠಕನಾದಮಾಗೆ ಝೇಂ
ಕಾರಿಸುತಿರ್ಪ
ತುಂಬಿಗಳ ಗಾವರಮೊಪ್ಪುವ ಗೇಯಮಾಗೆ ಕೈ
ವಾರದಿನೀಕೆಯಂ
ನಿನಗೆ ಚಿತ್ತಭವಾಗ್ನಿಯೆ ಸಾಕ್ಷಿಯಾಗೆ ಕೈ
ನೀರೆಱೆವಂದದಿಂ
ಸೊನೆಯ ನೀರ್ಸುರಿದಪ್ಪುದು ನೋಡೆ ಕೋಕಿಳಂ       ೬೮

ವ|| ಅನ್ನೆಗಂ

ಹರಿಸೈನ್ಯಂ ಹಸ್ತಿಸೈನ್ಯಂ ಪಱೆ ಪೞಯಿಗೆ ಪಿಂಛಾತಪತ್ರೋತ್ಕರಂ ಚಾ
ಮರಮೆಯ್ತಪ್ಪೋಜರಂ
ಕನ್ನಡಿ ತಳಿರ್ಗಳಸಂ ಬರ್ಪವರ್ಬರ್ಪ ಸತ್ಪೆಂ
ಡಿರ
ಪೆಂಡವಾಸಂ ಪಡಿಯಱರಣುಗಳ್ ಮಂತ್ರಿಗಳ್ಮಂತ್ರಪಾಳರ್
ಬೆರಸಿಂದ್ರಂ
ಬರ್ಪವೋಲ್ಮಾ ಗಧನಧಿಕಬಳಂ ಬಂದನಾನಂದದಿಂದಂ     ೬೯

ವ|| ಬಂದು ಪೊಸಮಾವೆ ಪಸುರ್ವಂದರಾಗೆ ಮದುವೆಮಾಡಿ ತನ್ನ ಮಗಳು ಮನಳಿಯನುಮನೊಡಗೊಂಡು ಪೋಗಿಯರ್ಧರಾಜ್ಯಮಂ ಬೞಿವೞಿಗೊಟ್ಟು ಸುಖದಿನಿರೆ

ಅಲಸಿಕೆ ನೋಟದೊಳ್ ತಣಿವು ಕೂಟದೊಳುಕ್ಕೆವಮೞ್ಕಱೊಳ್ ಚಲಂ
ಗೆಲವಿನೊಪ್ಪಿನೊಳ್ಧರವುರುಂಟಿಮಕಂ
ಬೆಸಕೈವ ಭಂಗಿಯೊಳ್
ಪೊಲೆಗೆಳೆಸೋಲದೊಳ್
ಪದಿರೊಳೊತ್ತಿದಿರೊಳ್ ಪಲಮಾತು ಮಾನದೊಳ್
ಕಲಿತನಮಾಗದಂತಬಲೆ
ವರ್ತಿಸಿದಳ್ ಕವಿತಾವಸಂತನೊಳ್   ೭೦

ಚುಂಬನಮಪ್ಪು ಚಪ್ಪರಣೆ ಬೇಡುವ ಬಕ್ಕುಡಿ ಕಾಯ್ದು ಕೂಡುವ
ಟ್ಟುಂಬರಿಯೆಂಬಿವಾಗೆ
ಸಲೆ ತನ್ನವು ನಲ್ಲನ ಬಾಯ ತಂಬುಲಂ
ತಂಬುಲಮಿಕ್ಕಿದಣ್ಪು
ತನಗಣ್ಪು ತುಱುಂಬಿದ ಪೂವೆ ಪೂವುಮು
ಟ್ಟಂಬರಮಂಬರಂ
ನಿರುತಮಾಗಿರೆ ಕೊಂಡಳನಂಗ ಸೌಖ್ಯಮಂ ೭೧

ವ|| ಅಂತಪ್ಪುಕೆಯ್ದೊಂದುದಿವಸಂ ವಿಷಮನೃತ್ಯಶ್ರಮಶ್ರಾಂತೆಯಾಗಿ

ಉಟ್ಟದುಕೂಲಮುಟ್ಟವೊಲತಿಸ್ಫುಟಮಾಗಿರೆ ತೊಟ್ಟಕುಪ್ಪಸಂ
ತೊಟ್ಟವೊಲಿಟ್ಟದಿಟ್ಟವೊಲಣಲ್
ನಱುದಂಬುಲದಿಂದೆ ಬೀಗೆ ಸುಯ್
ಸುಟ್ಟಿದಿರಲ್ಕೆ
ಸಾರ್ತರೆ ಕಚಂ ಮೊಗದೊಳ್ತೆಱದಿಂದೆ ತನ್ನ
ಮೇಲಿಟ್ಟೆಡದೋಳನತ್ತ
ಮೊಗಮಾಗಿಯೆ ನಿದ್ರೆಯೊಳಿರ್ದ ನಲ್ಲಳಂ          ೭೨

ವ|| ಕಂಡು ತಾನ್ನೆವಕಾಱನಪ್ಪ ಕಾರಣಮೇವಯಸಿ

ಶ್ರವದಿಂ ಭಾಳಕ್ಕೆ ಬಾನಲ್ವರಿದ ಕುರುಳ ಕಸ್ತೂರಿಕಾರೇಣುಜಾಳ
ದ್ರವಮಂ
ಕಂಡರ್ದಿಕೊಂಡೊಳ್ನನೆಯ ಮೊನೆಯೊಳಾಂ ಬಂದಪೆಂ ಪೋಗಿತಾನ
ನ್ನೆವರಂ
ನಿಶ್ಚಿಂತಮರ್ಕ್ಕೆನಲಸಳಿನೆಲಸಿರ್ಪಾಗಳೆಂದಾ ಸುಕೇಶಿ
ಶ್ರವಣಶ್ರೀಪತ್ರದೊಳ್
ತಾಂ ಬರೆದಱಿಯದವೋಲ್ ಪೋದನಲ್ಲಿಂಕುಮಾರಂ        ೭೩

ವ|| ಅಂತು ಶರೀರದಿಂ ಜೀವಂ ಪೊಱಮಟ್ಟು ಪೋಪಂತಾರುಮಱಿಯಲೀಯದೆ ಪೊಱಮಟ್ಟು ಪೋಗೆವೋಗೆ

ಸ್ರವದಂಭೋಧಾರ ಧಾರಾಗೃಹಮಚಳಘನಸಾರನಾ ನೀರ ಜಂಝಾ
ಪವನವ್ಯಾಧೂತ
ಭೂಜವ್ಯಜನಮತುಳತಾಪಿಚ್ಛಪಿಂಛಾತಪತ್ರಂ
ಪ್ಲವಗಪ್ಲತ್ಯುತ್ವತ
ದ್ವಿಃ ಕಿರಕರಗರುತಚ್ಛನ್ನಶಾಖಾಂತರಾಳಂ
ರವಿರುಕ್ಸಂಧುಕ್ಷಿತಾಂಗ
ಕ್ಷಿತಿಪತಿತನಯಂಗಾಯ್ತರಣ್ಯಂ ಶರಣ್ಯಂ ೭೪

ಮಳಯಜಮಂ ಬಳಸಿದ ಫಣಿ
ಕುಳಮಂ
ಕೇಕಿಗಳ ಕಲರವಂ ಸೋದುದು ಭೂ
ತಳನಾಥರನೋಲಗಿಸುವ

ಖಳರಂ
ಸೋವಂತೆ ಸುಕವಿಸೂಕ್ತಿಕಳಾಪಂ   ೭೫

ಸೋಗೆಯ ಸೊಗಯಿಪ ದನಿಗಂ
ತಾಗುವ
ಕೀಚಕದ ರುತಿಗಮೊಡಸೋಲ್ತು ಕರಂ
ಬಾಗಿ
ಕುಲಮೊಲೆದು ತಲೆಯಂ
ತೂಗಿದುದರಿಮಿತ್ರವರ್ಜಿತಂ
ಗುಣಮಲ್ತೇ      ೭೬

ಬಯಸಿ ರಸೆಯಹಿಗಳಂ ಮನ
ಮುಯೆ
ನೆಲದೊಳ್ಪೊಕ್ಕು ಬರ್ಹಿಣಾವಳಿಯ ಶಿಖಾ
ವಯವಮಿವೆ
ತೋಱಿದಪುವೆನೆ
ಮಯೂರಶಿಖಿನಿಕರಮೆಸೆದುವಾ
ಕಾನನದೊಳ್        ೭೭

ಅಹಿತಬಹುಬದರದಳ
ವ್ಯೂಹ
ತಿರೋಹಿತ ಬುಭೂಕ್ಷಿತೋತ್ತಾನ ಮುಖೋ
ಗ್ರಾಹಿ
ಶಿರೋರುಣಮಣಿಯಂ
ಹಾಹಾ
ಪಣ್ಗೆತ್ತು ಪಾಯ್ದುದೊಂದು ವಿಹಂಗಂ   ೭೮

ಅಡಗೆಂದೆಲವದ ಪೂವಿಂ
ಗಡಹಡಿಸಿಯೆ
ಪಾಯ್ದು ಕಾಯ್ದು ಕಾದಿದುವೊಡಲಂ
ದಡಗಡಗಪುನಮೆಱಕೆಗೆ

ಳುಡಿವಿನೆಗಂ
ಕಣ್ಗಳೊಡೆವಿನಂ ಕಾಕಂಗಳ್    ೭೯

ಅಡವಿಯ ಖಗನಿಕರದ ಬೞಿ
ವಿಡಿದುಱಿದಱೆಯಟ್ಟಿ
ಪಿಡಿಯಲಾಱದೆ ಕಡುಪಿಂ
ಗುಡುಗುಡು
ಗುಡೆಂದು ಗಿಡಗಂ
ಕೆಡೆದುದು
ಗಱಿಯುಡಿಯೆ ಪೊಡೆದು ತನ್ನಯ ನೆೞಲಂ  ೮೦

ಅರ್ಕಾಂಶುಗೆ ಹುಗಲಿಲ್ಲದೆ
ಸೀರ್ಕರಡಿಯ
ಕಡುಪಿನಂದದಡವಿಯ ತಮಮಂ
ಮಾರ್ಕೊಂಡು
ಸುೞಿವ ಕಾಡೆಳ
ವೆರ್ಕಿನ
ಕಣ್ ನಡೆವ ಸೊಡರ್ಗಳೆನೆ ಜಲಜಲಿಕುಂ       ೮೧

ಪೊರೆವಿಡಿದು ಪೊಕ್ಕು ಪಾವಿನ
ಪೆರೆಯಂ
ಪೊತ್ತೊಂತಿಯೊಂದು ಪರಿತರೆ ತಿರಿದೇಂ
ಸರಟಶತಮೋಡಿ
ಪೊಕ್ಕುವು
ಸುರನಹಿಗೆತ್ತುದಿರ್ದ
ಖದಿರ ಬದರೋದರಮಂ          ೮೨

ಗಿಡು ಪಿಡಿಯೆ ತನ್ನ ಬಾಲಂ
ತೊಡರ್ದೊಡೆ
ಪರಿತರ್ಪ ಬೇಗೆಗಾಡುವ ಚಮರಂ
ಬಿಡಿಸಿದಪೆನೆಂದು
ನಿಂದುದು
ಕಡುಲೋಭಂ
ಜವನ ಬಂದಿಯೋ ಬಂಧನಮೋ        ೮೩

ಅಡಸಿ ಬರೆ ಶಬರನುಡುಗಿದು
ದುಡು
ಕಣ್ಣಂ ಮುಚ್ಚಿ ಪರಿಯನಾಗಡೆ ಗಡ
ರ್ದಡಿಗನ
ಕಣ್ಣೊಳ್ಪೂವಿನ
ಪುಡಿ
ಪೊಕ್ಕುದು ಮಾಱುತೇಱುತಂ ಕಾನನದೊಳ್      ೮೪

ಅಹಿಯ ವಿಷವಹ್ನಿಗೆಂದಹಿ
ಗ್ರಹಮಂ
ಪೀರ್ದುರ್ಚುವತ್ಸಭಲ್ಲನ ಬಾಯಮ
ದಹಿಯಿಸಿ
ಪಾಪಿ ಪಾಪೇ
ಹನ್ಯತೇಯೆಂಬ ನುಡಿಯನೇಂ ನಡೆಯಿಸಿತೋ      ೮೫

ಮಾವಿನ ತಳಿರೊಳಗೆ ಮುಗು
ಳ್ಮಾವಿನ
ಮೊಗಮುಳಿಯೆ ಮಿಸುಪ ತೊಡೆ ನಡು ಜಘನಂ
ತೀವಿದ
ಮೊಲೆಯೆಂಬಿವು ವಸು
ದೇವನ
ಕಣ್ಗಿತ್ತುವತುನುರಾಗೋದಯಮಂ    ೮೬

ಮಗಮಗಿಸಿ ಕವಿವ ಮದಗಂ
ಪುಗಳನೆ
ಪೊಗೞ್ವಂತೆ ಮೊಱೆದು ಮುಸುಱುವ ಮಱಿದುಂ
ಬಿಗಳಿಂ
ಕೊರ್ವಿದ ಕತ್ತುರಿ
ಮಿಗಮಿರ್ಪವೊಲಿರ್ದುದೊಂದು
ಗಂಧಗಜೇಂದ್ರಂ      ೮೭

ತದುಕಿನ ಸರಳದ ಸಪ್ತ
ಚ್ಛದದಾಮ್ರದ
ತಳಿರನುಡಿದು ಮೇಯದೆ ಕರಿ ಮೇ
ದುದು
ವಿರಹಿಯಱಸಿ ಪೊಸವೇ
ಟದ
ಪಿಡಿ ನಸುಮೇದು ಬಿಸುಟು ಪೋದೊಣದಳಿರಂ    ೮೮

ಮಧುಪರಿಮಳಮಂ ಕಾದುದು
ಸುಧೇನು
ಪೇಚಮನೊಂದು ಮದಗಜಹಸ್ತಂ
ಮಧುಸಖನ
ಬಯ್ತರತಿಧನ
ನಿಧಾನಮಂ
ಕಾವ ಕಾಳಸರ್ಪನ ತೆಱದಿಂ     ೮೯

ತಾಳಸ್ಥೂಳಕರಂ ತಮಾಳವಿಸರಚ್ಛಾಯಂ ಸುರೂಪಂ ಸುವ
ಕ್ತ್ರಾಳೋಕಂ
ಶುಭಬಿಂದು ಶುಭ್ರರದನಂ ದಾನಾರ್ದ್ರಗಂಡಸ್ಥಳಂ
ಲೀಳಾಯಾನನುದಗ್ರ
ಪಲ್ಲವನದಿಂ ತಾನಾಯ್ತೊ ನೂತಕ್ಷಮಾ
ಶೀಳಂ
ಕೇಸರಿಗಂ ನಿರೀಕ್ಷಣ ಸುಖಶ್ರೀಪಂಜರಂ ಕುಂಜರಂ       ೯೦

ಗಜಮೊಂದಿರ್ದುರು ರೋಹಣಾಚಲದವೊಲ್ ತತ್ಪದ್ಮರಾಗಪ್ರಭಾ
ರಜಮಿರ್ಪಂತಿರೆ
ತೋರ್ಪ ಪದ್ಮಪಟಲಂ ತಳ್ಪೊಯ್ಯೆ ನೀಳೋತ್ಪಳ
ವ್ರಜಮಿರ್ಪಂತಿರೆ
ಮತ್ತಭೃಂಗಮಿಳಿತಂ ದಾನದ್ರವಂ ವಾಳವಾ
ಯಜಮಿರ್ಪಂತಿರೆ
ಕಣ್ಣ ಪೆರ್ಮಳೆಯೊಳಂ ಮೇಲ್ವಾಯ್ದಪಾಂಗಾಂಶುವಿಂ   ೯೧

ನೇಱಿಲ ಪಣ್ತ ಕೊಂಬುಡಿದು ಬಿರ್ದವೊಲೊಟ್ಟಿದ ಸೀವರಕ್ಕೆ ಪಾ
ಯ್ದಾಱಡಿವಿಂಡಿನಿಂ
ಮುಱಿದು ಪೂಸಿದ ಮಾವಿನ ಕೊಂಬು ಮೇಲ್ಮದಂ
ಗಾಱೆ
ಕಟಂಗಳುಣ್ಮಿವಿಡೆ ಕಾಯ ಬಲಂ ಮಿಗೆ ಬೇಗೆಯಿಂದೆ ಬೆಂ
ದಾಱಿದ
ಬೆಟ್ಟಿನಂತೆ ವನವಾರಣಮಿರ್ದುದದೊಂದು ತಾಣದೊಳ್         ೯೨

ಚೂತಾಮೋದಕ್ಕೆ ಮೂಗಂ ತದುಕಿನ ತಳಿರ್ಗಾಸ್ವಾದಮಂ ತತ್‌ಪುಳಿಂದೀ
ಗೀತಕ್ಕುತ್ಕರ್ಣಮಂ
ಕುಟ್ಮಳಿತನಯನಮಂ ಕೇಕಿಲಾಸ್ಯಕ್ಕೆ ಮೆಯ್ಯಂ
ಸ್ರೋತಶ್ಶೀತಾನಳಂಗೊಪ್ಪಿಸಿ
ಸುಖಮಯನಾಗಿರ್ದುದಸ್ಪಂದಮಂದೀ
ಭೂತಂ
ಕರ್ವೆಟ್ಟಮಂ ಕಂಡರಸಿ ಸಮೆದವೋಲ್ ನೀರದಾಭಂ ಮದೇಭಂ ೯೩

ನನೆವೆರಸು ಗುಜ್ಜಮಾವಿನ
ಕೊನರ್ಗಳನುಡಿದುಡಿದು
ನೀಡೆ ಬೇಟದ ಪಿಡಿಯೇಂ
ಮನಮೊಸೆದು
ಮೇವುತಿರ್ದುದೊ
ವನಕರಿ
ಪರಿದಂತೆ ದತ್ತ ಹಸಿತಕಟಾಕ್ಷಂ       ೯೪

ಕಡೆವಾಯಿಂ ಪ್ರತಿಹಸ್ತದೊ
ಳಡಸಿದ
ತಳಿರುದಿರೆ ತಳ್ತ ಕೆಯ್ಯೊಳೆ ಕೆಯ್ಯಂ
ಪಿಡಿದು
ಪಿಡಿ ತುಱಿಸುತಿರ್ದುದು
ಕಡೆಗಣ್ಣಂ
ಸಮೆದ ಕರಿಯ ಕೊಂಬಿನ ಕೊನೆಯೊಳ್     ೯೫

ಅನುಸಿಂಚತ್ಸಲ್ಲಕೀ ಶೀಕರ ಪರಿಚಯದಿಂ ಶೀತಶೀತಂ ಲತಾಲಿಂ
ಗನದಿಂದಂ
ಮಂದಮಂದಂ ಫಣಿ ಗಣವಿಷದಿಂ ಭೀತಭೀತಂ ಚಳಚ್ಚಂ
ದನಶಾಖಾಂದೋಳದಿಂದಂ
ಚಕಿತಚಕಿತಮಾಯ್ತುಚ್ಚರತ್ಕೀಚಕ ಪ್ರ
ಸ್ವನಿತಂ
ವಾನೇಯನಾಗಸ್ಫುಟಿತಕಟ ಮದಾಮೋದಭಾರಂ ಸಮೀರಂ    ೯೬

ತಳಿರಂ ತೂಗಿ ಪರಾಗಮಂ ಪೊರೆದು ಪೂನೀರಂ ತಡಂಗೂಡಿ ಗು
ಗ್ಗುಳನಿರ್ಯಾಸಮನಾಂತು
ಚಂದನರಸಕ್ಷೋದಂಗಳಂ ಪೊತ್ತು ಶೀ
ತಳಕರ್ಪೂರಮೃಗೋದ್ಭವಾಗುರುಕುಮುಸ್ತಾಗ್ರಂಥಿಗಂಧಂಗಳಂ

ತಳೆದೇಂ
ಗಂದಿಗರಂತೆ ಬಂದೊಲೆದುದೋ ಮತ್ತೊಂದು ಮಂದಾನಿಳಂ  ೯೭

ವನಜಮನೊಕ್ಕಲಿಕ್ಕಿ ಮಱಿದುಂಬಿಯನಾಳ್ದು ತರಂಗಮೆಂಬ
ಕ್ಕಿನ
ಪರಿಕಾಱರಂ ತುೞಿದು ಸೀಕರಮಂ ತಳೆದೊಟ್ಟಿಕೊಂಡು ಪೂ
ವಿನ
ಪುಡಿಯಂ ಮೃಗೇಂದ್ರ ಭಯದಿಂದ ತಿರೋಹಿತನಾಗಿ ಬರ್ಪ ಕಾ
ನನ
ಕರಿಯಂತೆ ಬಂದುದೆಲರೊಯ್ಯನೆ ರಯ್ಯನೆ ವಾರಿದೇಶದಿಂ ೯೮

ಗಾಳಿವೆಸಗಿನಿಂದಮೆ
ಪೋಗಿ
ಪರಶ್ರಮವಶಾತುರಂ ವಸುದೇವಂ
ನಾಗೇಂದ್ರನಂತೆ
ಮದಲೀ
ಲಾಗಮನಂ
ಕಂಡುನೊಂದು ಕಮಳಾಕರಮಂ         ೯೯

ಗಂಗೆಯ ಗೋತ್ರಮೋ ಸೊದೆಯ ಸಾರಮೊ ಬೆಳ್ನಗೆಯೊಂದು ಬಿತ್ತೊ
ತ್ತಿಂಗಡಲಿರ್ದ
ಬೇರೊ ಪೊಸಮುತ್ತಿನ ಪುಟ್ಟುವ ನೀರೊ ತೋರ್ಪ ಬೆ
ಳ್ದಿಂಗಳ
ಬೈಕೆಯೋ ಬನದ ದೀವರೆಯರ್ಕಳ ಕಣ್ಣ ಬೆಳ್ಪು ಬೆ
ಳ್ಳಂಗೆಡೆದತ್ತೊ
ಪೇೞಿಮೆನೆ ನಿರ್ಮಲಮಾದುದು ನೀರಜಾಕರಂ  ೧೦೦

ತೆರೆಯಿಂ ಕಯ್ನಿಱಿದಾಡುವಂತಿರೆ ಚಳನ್ಮೀನಂಗಳಿಂ ನೋಡುವಂ
ತಿರೆ
ನಾನಾ ಮಧುಪಾನಮತ್ತಮಧುಲಿಟ್ ಝೇಂಕಾರದಿಂ ಪಾಱುವಂ
ತಿರೆ
ಮೇಲ್ಪಾಱುವ ಕುಂಕುಮಾರುಣ ರಥಾಂಗದ್ವಂದ್ವದಿಂ ತತ್ಪಯೋ
ಧರೆ
ಸೆಂಡಂ ಪೊಡೆದಾಡುವಂತಿರೆ ಸರಶ್ರೀಕಾಂತೆ ಕಣ್ಗೊಪ್ಪಿದಳ್ ೧೦೧

ನೆಱೆ ಜಳಕೇಳಿಯಾಡಿ ಪೊಱಮಟ್ಟ ವನೇಚರಿಯರ್ಕಳೆಂಬಿನಂ
ತುಱುಗಿರೆ
ತೀರದೊಳ್ ನವತಮಾಳ ಲತಾವಳಿಯಬ್ಜಷಂಡದೊಳ್
ಪೊಱಮಡದಿರ್ದುವಾಕೆಗಳ
ಕಣ್ಮಲರುಂ ಮೊಲೆವಿಂಡುಮೆಂಬಿನಂ
ಮಿಱುಗಿದುವೊರ್ಮೆಯುಂ
ಪೊಳೆವ ಮೀಂಗುಲಮುಂ ಪೊಣರ್ವಕ್ಕಿಯೊಕ್ಕಲುಂ      ೧೦೨

ಹರಿಯ ನಳಿನಾಭಿನಳಿನಂ
ವಿರಂಚಿಯಂ
ಪಡೆದುದರ್ಕೆ ಪುರುಡಿಸಿ ತಾನಾ
ಹರಿಯನೆ
ಪಡೆದವೊಲೆಸೆದುದು
ಸರೋವರಾವರ್ತ
ನಳಿನಮೊಂದಳಿಗರ್ಭಂ   ೧೦೩

ತರುಣ ಬಿಸಸದನಮಬ್ಜಾ
ಕರ
ಕರಿ ಮೇಗೊಟ್ಟಿಕೊಂಡುದದು ನೀರ್ವೂವಂ
ಸರಸಿರುಹಪತ್ರಕರ್ಣಂ

ತರಂಗತರಮುಚ್ಯಮಾನ
ಶೀಕರನಿಕರಂ      ೧೦೪

ವನರುಹ ಸಹಸ್ರನೇತ್ರನ
ನನಿಮಿಷ
ಸೇವಿತದಿನಾ ಸರೋವರಸುರನಾ
ಥನನಾಂತ
ಕರಿವೊಲೆಸೆದುದು
ವನಕರಿ
ಯುನ್ಮಗ್ನಪೂರ್ವಕಾಯಂ ಕ್ಷಣದಿಂ    ೧೦೫

ಸೊಗಯಿಸಿದುದು ಕನಕಾಬ್ಜದ
ಮುಗುಳ್ನನೆಯಿಂ
ಕರಿಯ ಬಿಳಿಯ ಕೆಂಪಿನ ನೀರ್ವೂ
ವುಗಳಿಂದೆ
ಪಂಚರತ್ನದ
ಪಗವಂ
ತೆಱೆದಂತೆ ಸರಸಿ ಸರಸಿಜದೆಲೆಯಂ ೧೦೬

ನೀಲದ ಪೊಳೆದ ಪರಲ್ಗಳ
ಕೀಲಣೆಯಿಂ
ಜಲಕನಾದ ಜಲದೇವಿಯ ಪೊ
ನ್ನೋಲೆಯೆನಿಸಿದುದು
ಪತ್ರ
ಪೋಲಗತಂ
ಕನಕನಳಿನಮೊಂದಳಿ ಮಳಿನಂ ೧೦೭

ಕೊಳದೊಳೆ ಮೈಗರೆದ ಬ್ಯಾ
ಕುಳಮಿರ್ಪವೊಲಿಂದು
ಕೂಡಿದುದು ಕುಮುದಿನಿಯೊಳ್
ಜಳರುಹಮಂ
ಕಡಿದುದು ಸೈ
ವಳತರುವಂ
ಕೊಂಬುಗೊಂಡುದೊಂದು ಮರಾಳಂ     ೧೦೮

ಗಲ್ಗಲನೆ ಕರಗುವಾಲಿಯ
ಕಲ್ಗಳವೋಲ್
ಕರಗಿ ಪರಿವ ಜೊನ್ನದ ತಿಂಗ
ಳ್ಗಲ್ಗಳೊಸರದೆನೆ
ಕೞಲ್ದೈ
ಕಿಲ್ಗೊಳನೆನೆ
ಕುಳಿರ್ದುದಾ ಜಳಂ ತಿಳಿಗೊಳದಾ        ೧೦೯

ಊದೆ ಕರಿಗಳ್ ಸರಸ್ಸ್ವ
ಚ್ಛೋದಕಮಂ
ನೆತ್ತಿಗಡರ್ದ ಪನಿಗಳೆ ಪೊಸಮು
ತ್ತಾದುವದಲ್ಲದೊಡಡವಿಯ

ವೇದಂಡನ
ನೆತ್ತಿಯಲ್ಲಿ ಮುತ್ತುಗಳೊಳವೇ    ೧೧೦

ತರುಣತರಂಗೋತ್ಥಿತ ಸೀ
ಕರಹಿಮದಿಂ
ಸೇದೆಗೊಂಡಮೊಲ್ಪೊಕ್ಕು ಸರೋ
ರಜಃಪರಗುಂಠಿತಮೆನ
ಲರಳಿದುದದು
ಕುಮುದ ಮುಕುಳ ಕೋಟರ ಕುಟಿಯೊಳ್         ೧೧೧

ವ|| ಆ ಕುಸುಮಾಕರಮೆಂಬ ಕಮಳಾಕರಮಂ ಕುಮಾರಂ ಪೊಕ್ಕು ಪ್ರಕ್ಷಾಲಿತ ಪಾದ ಮುಖಕಮಳನುಂ ಪೀತ ಶೀತಜಳನುಮಾಗಿ ನೀರಜನಜದ ನೀರ್ಗುಂಕುಮಮಂ ತೊಡೆದು ತಡಿಯೊಳಿ ಕ್ಕಿರ್ದ ಗಜಮದದಿಂ ತಿಳಕವಿಕ್ಕಿ ಸೆಂದುರದ ಬಿರಿಮುಗುಳಂ ತುಱುಂಬಿ ಕಮಳಪತ್ರಮಂ ರಾಗವಟ್ಟಿಕಟ್ಟಿ ಕಾವುವೆರಸಿರ್ದ ಕರಿಯ ನೆಯ್ದಲನಂಕುಶಂ ಮಾಡಿ ಪಿಡಿದು ವಿನೋದದಿನಾನೆವ ಸದನಂಗೊಂಡು ಆ ಕೊಳನ ತಡಿಯೊಳ್ ಸಮವಸರಣದಶೋಕೆಯಂತಿರ್ದ ಅಶೋಕೆಯ ನೆೞಲೊಳ್ ಬೆಸದ ಮೆಯ್ಯಂ ಮುಱಿದು ಕಾಯ್ತೊಱಗಿದ ಬಳ್ಳಿಗವುಂಗಂ ಮಲಂಗಿ ಕುಮಾರಂ ಕುಳ್ಳಿರ್ದನನ್ನೆಗಂ

ಕೊನೆಗೊಂಬಲ್ತು ಬಿಸಾಂಕುರಂ ಸಿರಮದಲ್ತುತ್ಕಚ್ಛಪಂ ನೇತ್ರಮ
ಲ್ತನಿಮೇಷಂ
ಮದಮಲ್ತು ವಾರಿ ಕಿವಿಯಲ್ತಬ್ಜಚ್ಛದಂ ಪದ್ಮಕಾ
ನನಮಲ್ತಂಬುಜಮಾನೆಯಲ್ತು
ಸರದೊಳ್ ಲೀಲಾಸರಂ ಪುಟ್ಟಿದ
ತ್ತೆನೆ
ಮೂಡಿತ್ತವಗಾಹಮಿರ್ದು ಕೊಳದಿಂ ಕಾಯ್ದೊಂದು ದಂತಾವಳಂ      ೧೧೨

ತೋರದೆರೆ ಮುಱಿಯೆ ಮೂಡುವ
ವಾರಣಮಂ
ಪೋಲ್ತುದಡಸಿ ನಿಡುಗಯ್ಯ ಭಂ
ಡಾರಿಸಿ
ಮೆಡಱಿದ ತಳಿಯಂ
ಬಾರಿಯುಮಂ
ಮುಱಿಯೆ ಪೊಯ್ದು ಪೊಱಮಡುವಿಭಮಂ        ೧೧೩

ವ|| ಅಂತು ಮಕರಾಕರದಿಂ ಪೊಱಮಡುವ ಕರಿ ಮಕರದಂತೆ ಕಮಳಾಕರದಿಂ ಪೊಱಮಟ್ಟು ದಡಂಗೊಳ್ವಲ್ಲಿ ಕಿೞ್ತು ಕೆಡೆದು ಕಾಲೊಳ್ತೊಡರ್ದು ಬಂದ ಬಿಸವಲ್ಲಿಗಳ್ ನೆಲನನೊಡೆದು ನಾಗಲೋಕಮಂ ಪುಗವೇಡೆಂದು ಗರುಡನ ಕಾಲಂ ಪತ್ತಿ ಬಿಡದ ಪಾವುಗಳಂತಿರ್ದುವದಱ ಗಾಳಿಗೆ ವನಗಜಘಟೆಗಳೆಲ್ಲಂ ಘನಘಟೆಗಳಂತಿರೊಡೆದೋಡಿದುವು ಮೇಲ್ಪಾಯ್ದ ಸಿಂಗಂಗಳೆಲ್ಲ ಮಾದಿಯ ಪಂದಿಯಂ ಪೇಱಿದ ಗ್ರಾಮ ಸಿಂಹಂಗಳಂತಿರ್ದುವು ಪೆಳಱಿ ಬೆಂಗುಡುವ ಬಟ್ಟಾನೆಗಳಿಂ ಮಣಿಯೇಱಿಂದಿಱಿದೆತ್ತಿದಲ್ಲಿ ಮದದ ಮಸಿಯಿಂ ಮಳೀಮಸಮಾದ ಮುಸುಂಬು ಮುಸುವಿನ ಮುಸುಂಬಿನಂತೆ ಕಡಲಂ ಕಟ್ಟಲೆಂದು ಬೆಟ್ಟಮಂ ಕಿೞ್ತೆತ್ತಿದ ಸುಗ್ರೀವನಂತಿರ್ದುದು ವನಮಂ ಪೊಕ್ಕು ಮರಮಸದಿಂ ಮರವಾಯ್ದು ಮರದುಱುಗಲಂ ಕಿೞ್ತೀಡಾಡುವಲ್ಲಿ ದಶಗ್ರೀವನ ವನಮಂ ಕಿೞ್ತೀಡಾಡುವಣುವನಂತಿರ್ದುದು ಪಲ್ಲವಮನುಡಿದು ಸೂಸುವಲ್ಲಿ ದೆಸೆಯಾನೆಗಾಳೆಗಕ್ಕೆ ಪುಲ್ಲಂ ಸೂಸುವಂತಿರ್ದುದು ಅಂತು ಮಾಮಸಕಂ ಮಸಗಿ ಬಿಸಟಂಬರಿವ ಮದಕರಿಯಂ ಕುಮಾರಂ ಕಂಡೀ ಕಟ್ಟಾನೆಯನೇಱಿದೊಡಾನೆ ಯಾನೆ ವಿ‌ನ್ನಾಣಿಯೆಂದು ಸರಂದೋಱಿದ ಸರದ ಬೞಿಯನೆ ಗೞೆವೞಿಯ ಪಾವಿನಂತೆ ಮೊಗದ ಬಿಗಿಪುಂ ಕಣ್ಣ ಬೀಡುಂ ಬೆರಸು ಗಾಳಿಗೆ ಗೞಿಮೂಡಿದಂತೆ ಗಿಱ್ರನೆಯ್ತರ್ಪಾನೆಯಂ ಚಪ್ಪರಿಸಿ ಪಿಡಿದಾಸೆಗೊಟ್ಟು ಪುಷ್ಕರಣದೊಳ್ ಕೆಂದಳಂ ಕೆಂದಳಿರಂತೆ ತೊಳಗೆ ದೀರ್ಘಾಂಗುಳಿಯಿಂ ಪಿಡಿದು ಗರುಡನೊಪ್ಪಮಂ ಗಾಳಿಯ ನುಸುಳುಮಂ ಕೈಕೊಂಡು ಕೊಂಡಾಡಿ ಮನಮೆ ಮಾನಸನಾದಂತೆ ಪರಿದುಪರಿಯೊಳ್ ಗಾಳಿಯ ನುಸುಳುಮಂ ಕೈಕೊಂಡು ಕೊಂಡಾಡಿ ಮನಮೆ ಮಾನಸನಾದಂತೆ ಪರಿದುಪರಿಯೊಳ್ ಬಳಲ್ಚಿ ಕುಡೆಂಬ ತಿಂಕುಮೊಳಗಿಂ ಬೆಂಗೆಬಾ ಎಂಬಂತೆ ಬೂತಾಟನಂಗೆಯ್ದು ಗಜದ ಬೆಂಗೆ ಸಿಂಗದಂತೆ ಲಂಘಿಸಿಯಾನೆಯೆ ಪೊರಜೆಯಾಗೆ ಪೂರ್ವಾಸನದೊಳ್ ಪದುಳಮಿರ್ದುಮಬ್ಬ ಬಾಪ್ಪು ಬಾಪ್ಪೆಂದು ಕುಂಭಸ್ಥಳಮ ನಾಸ್ಫಾಳಿಸಿ ಬೀರಸಿರಿಯ ಗುರುಕುಚಮನುಗುರೊಳುಗಿದು ಕೋಡಗಂಗಳೆ ಱೋಡಗವಾಗೆ ಹರಿಣಂಗಳೆ ಹರಿಕಾಱರಾಗೆ ಪರ್ವತಂಗಳೆ ಪ್ರತಿಗಜಂಗಳಾಗುರುಳೆ ನೂಂಕಿಯ ಸುರುಳೆ ನೂಂಕಿಯುಮಡ್ಡವಿಕ್ಕಿಯುಂಪೊಕ್ಕು ಪರಿಯಿಸಿಯುಮಂತಪ್ಪ ಕಟ್ಟಾನೆಯಂ ಕೆಪ್ಪನಳವಡಿಸುವಂತೆ ಮಡದೊಳಮುಂಗುಟದೊಳಳವಡಿಸಿದ ರಾಜಪುತ್ರನ ಬಲ್ಪಿಂಗಂ ಬಿನ್ನಣಕ್ಕಂ ಬೆಕ್ಕಸಂಬಟ್ಟು

ಪ್ರಸ್ತಾವದೊಳಿರ್ವರ
ತಿಪ್ರೌಢರ್ಖಚರರಚಿರರುಚಿ
ದಿವಿಸಧನು
ರ್ದೀಪ್ರಮಣಿ
ಮಕುಟ ವಿಕಟ
ಟುಪ್ರಭೆಯಿಂ
ಭೂಪಭಾನುಗರ್ಘ್ಯಮನಿತ್ತರ್   ||೧೧೪||

ಮದಪುರುಷರಗಿದು ರದನಿಯ
ಮದವಿೞಿದೞಿದಪುದೆಂದೆನೆ
ಮೆಯ್ಯಿಕ್ಕಿದವೊಲ್
ವಿದಳಿತ
ವದನ ಪಯೋಜರ್
ಪದೆದಚಿರಂ
ಖಚರರಿರ್ವರವನತರಾದರ್     ||೧೧೫||

ವ|| ಆಗಿ ಕಯ್ಗಳಂ ಮುಗಿದು ದೇವ ಬಿನ್ನಪಮೀಯಾನೆಯನೇಱುವೆನೆಂಬನ ನಸುನೆತ್ತಿಗೇಱುಗಂ ಮುನಿವನ ಮುನಿಗುಂ ಪರಿಯಿಸುವೆನೆಂಬನ ಪಸಿರ್ಪ್ಪರೆಗುಯೀ ಯತಿವರ್ತಿ ಯಂ ವಶವರ್ತಿಮಾಡಲುಮಂಕುಶಮಿಲ್ಲದಂಕಿಸಲುಂ ನಿನಗೆ ತೀರ್ವುದು ನೀನಲ್ಲದದೇವನು ಮೇತಱ ದೇವನೆಂದು ಗಳಗರ್ಜರಂತೆ ಪೊಗೞ್ದು ಬೇಗಮೀ ಗಜದಿನಿೞಿದೆಮ್ಮಧಿವಾಸದೇಶಭಾಗಮನಿೞಿಪುವುದೆನೆ ವಸುದೇವನಿೞಿದು ನೀಮಾರ್ಗದೇನೆಂಬುದೆನೆ ವಿದ್ಯಾಧರರಿಂ ತೆಂದರ್

ಮಾಣಿಸಿ ನಿದ್ದೆಯಂ ಜಿನಪತಿಸ್ನಪನೋತ್ಸವ ಮಂಗಳಾನಕ
ಕ್ವಾಣಮದೊಮ್ಮೆಯುಂ
ಜಿನಮಹಾಮಹಮಂ ನಲವಿಂದೆ ನೋೞ್ಪಕ
ಣ್ಜಾಣೆಮೆಯಿಕ್ಕಲೀಯದಿರೆ
ತಾನೆ ನಗೇಂದ್ರದ ದಕ್ಷಿಣೋತ್ತರ
ಶ್ರೇಣಿಗೆ
ತಂದು ಮುಂದಿಡುವುದಾರುಹತಂ ಸುರಲೋಕಶೋಭೆಯಂ      ೧೧೬

ವ|| ಆ ವಿಜಯಾರ್ಧಪರ್ವತದ ದಕ್ಷಿಣಶ್ರೇಣಿಯ ನಿಳಿಪ್ಪ ಕಿನ್ನರಗೀತಮೆಂಬ ಪೊೞಲನಾಳ್ವೊಂ ಮಹಾಭಾಗನಶನಿವೇಗನೆಂಬನಂಬರಚರನಾತನ ಮಗಳ್ ಪರ ಪುರುಷ ಶುಕಶಾಲ್ಮಲಿ ಶಾಲ್ಮಲಿಯೆಂಬಳಾಕೆಗನುರೂಪನಪ್ಪ ಪುರುಷನಂ ಖಚರಕುಲದೊಳಂ ಭೂಚರಕುಲದೊಳಂ ಕಾಣದೆ ಖಿನ್ನವಾಗಿರ್ಪುದುಮಾದೇಶ ಪುರುಷನುಮೀ ಮದಗಜಮನೇಱಿದನೆ ನಿಜಾತ್ಮಜೆಗೆ ಮದವನಿಗನೆಂದೊಡಾನಂದದಿನೆಮ್ಮಾಳ್ದನೆಮ್ಮಿರ್ವರುಮನೀ ಕರಿಪತಿಗೆ ಕಾಪಂ ಪೇೞ್ದನಂದಿಂದಿತ್ತಲೀಯಡವಿಯೊಳಡಿಮಿಡುಕದೆ ಮೃಗಂಗಳಾಗಿರ್ದೆವಿಂದೆಮ್ಮ ಪುಣ್ಯಂಬರ್ಪಂತೆ ಬಂದು ಸಾಹಸಪುರುಷನುಮಾದೇಶಪುರುಷನುಮಾಗೆ ಎಮ್ಮ ತಪಮುಂ ಶಾಲ್ಮಲಿದತ್ತೆಯ ಕಾಮತಾಪಮುಂ ಸಫಲ ಮಾದುದೆಂದು

ಇದು ದಿವ್ಯಶ್ರೀವಿಮಾನಂ ಮನಮೊಸೆದಿದ ನೀನೇಱು ಬಾ ಪೋಪಮಾ ತೋ
ರ್ಪುದೆ
ಕಂಡೈ ಖಂಡಿತಾರಿಸ್ಮಯ ಜಯವಿಜಯಾರ್ಧಾಚಲಂ ನಿನ್ನನೆಯ್ತಂ
ದಿದಿರ್ಗೊಳ್ವಂದಿತ್ತ
ಬರ್ಪುಜ್ವಳ ಜಳಧರದಿಂ ನಿನ್ನ ಬರ್ಪುತ್ಸವಕ್ಕೆ
ತ್ತಿದವೊಲ್
ಕೂಟಾಗ್ರದೊಳ್ ನಿರ್ಝರಪಟಳ ಪತಾಕಾಳಿಯಂ ಲೀಲೆಯಿಂದಂ      ೧೧೭

ಆನೆಯನೇಱಿದೆಯೇಱು ವಿ
ಮಾನವಮನೇಱಿದಪೆಯಚಳಪತಿಚೂಳಿಕೆಯಂ

ತಾನೆ
ಕುಡುಗಂ ಮಹೋನ್ನತ
ಮಾನೋನ್ನತಿಯಂ
ನತೋನ್ನತಾರೋಹಣಮಂ       ೧೧೮

ವ|| ಎಂದಾ ಖಚರಯುಗಳಮವಟ್ಟೈಸಿದ ಮಣಿಮಯ ವಿಮಾನಮನೇಱಿ

ಪವನಪ್ರೇಂಖಾನಳ ಪ್ರೋಚ್ಚಳಿತ ಮರಕತ ಸ್ಥೂಲ ರತ್ನಾವಳೀ
ಲ್ಲವಮಾಳಾ
ತೋರಣಂಗಳ್ಪಸುರ್ಗುದುರೆಳಂ ಪೂಡಿದಂತೊಪ್ಪೆ ಕಯ್ಯೊಳ್
ನವಲೀಲಾ
ನೀರಜಂ ರಂಜಿಸೆ ನಿಜರಥಮಂ ಬಂದು ಮಾರ್ತಂಡನೊಲ್ದೇ
ಱುವವೊಲ್ತಾನೇೞಿದಂ
ಕಾಂಚನಖಗರಥಮಂ ಮೂರ್ತಿ ಮಾರ್ತಂಡದೇವಂ        ೧೧೯

ಇದು ಮೃದುಪದಬಂಧಬಂಧುರ ಸರಸ್ವತೀ ಸೌಭಾಗ್ಯವ್ಯಂಗ್ಯ ಭಂಗಿನಿಧಾನ ದೀಪವರ್ತಿ ಚತುರ್ಭಾಷಾ ಕವಿಚಕ್ರವರ್ತಿ ನೇಮಿಚಂದ್ರ ಕೃತಮುಂ ಶ್ರೀಮತ್ಪ್ರತಾಪ ಚಕ್ರವರ್ತಿ ವೀರಬಲ್ಲಾಳನದೇವ ಪ್ರಸಾದಾಸಾದಿತ ಮಹಾಪ್ರಧಾನ ಸೆಜ್ಜೆವಳ್ಳ ಪದ್ಮನಾಭದೇವ ಕಾರಿತಮುಮಪ್ಪ ನೇಮಿನಾಥ ಪುರಾಣದೊಳ್

ಪಂಚಮಾಶ್ವಾಸಂ

ಸಮಾಪ್ತಂ